Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಮನುಷ್ಯನು ನಿಸರ್ಗದ ಭಯದಿಂದ ಪಾರಾಗಲು ದೇವರನ್ನು ಅರಸಿದನೆ?

ಮನುಷ್ಯನು ನಿಸರ್ಗದ ಭಯದಿಂದ ಪಾರಾಗಲು ದೇವರನ್ನು ಅರಸಿದನೆ?

by Rajaram Hegde
134 views

ಪಾಶ್ಚಾತ್ಯ ವಿದ್ವಾಂಸರು ಮನುಷ್ಯನೇಕೆ ಗಾಡ್ ಅಥವಾ ರಿಲಿಜನ್ನನ್ನು ಸೃಷ್ಟಿಸಿದ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ ರಿಲಿಜನ್ನಿನ ಹುಟ್ಟಿಗೆ ನಿಸರ್ಗದ ಕುರಿತ ಭಯವೇ ಕಾರಣ ಎಂಬ ಸಿದ್ಧಾಂತವನ್ನು ಮಂಡಿಸಿದ್ದಾರೆ. ಆದರೆ ಇದು ಮೂಲತಃ ಕ್ರೈಸ್ತರ ಪ್ರತಿಪಾದನೆಯಾಗಿದೆ. ಈ ಹೇಳಿಕೆಯು ಎಷ್ಟು ವೈಜ್ಞಾನಿಕ?

ದೇವರು ಮನುಷ್ಯನ ಸೃಷ್ಟಿ ಎಂಬ ಹೇಳಿಕೆ ಇಂದು ಪ್ರಚಲಿತದಲ್ಲಿದೆ. ಮನುಷ್ಯನು ದೇವರನ್ನು ಹಾಗೂ ಪರಲೋಕವನ್ನು ಏಕೆ ಸೃಷ್ಟಿಸಿಕೊಂಡ? ಅದು ನಿಸರ್ಗದ ಕುರಿತ ಭಯದಿಂದ ಎನ್ನುವುದು ಒಂದು ಜನಜನಿತವಾದ ಅಭಿಪ್ರಾಯ. ಈ ನಿಸರ್ಗವು ನಿಗೂಢವಾಗಿದೆ. ಅದು ಮನುಷ್ಯನಿಗೆ ಅರ್ಥವಾಗುವುದಿಲ್ಲ. ಮನುಷ್ಯನ ಜೀವನದಲ್ಲಿ ಹುಟ್ಟು ಸಾವುಗಳೆಂಬ ಅನಿವಾರ್ಯಗಳಿವೆ. ಅನೇಕ ವಿಪತ್ತುಗಳು ಸಂಭವಿಸುತ್ತಿರುತ್ತವೆ. ಇವುಗಳನ್ನೆಲ್ಲ ಹೇಗೆ  ವಿವರಿಸಬೇಕು? ಹೇಗೆ ಎದುರಿಸಬೇಕು? ಎಂಬುದೇ ಆತನಿಗೆ ಬೃಹದಾಕಾರದ ಪ್ರಶ್ನೆಯಾಗಿದೆ. ಇಂಥ ಪ್ರಶ್ನೆಗಳು ಆತನ ಮನದಲ್ಲಿ ಆತಂಕವನ್ನು ಅಸ್ಥಿರತೆಯನ್ನು ಹುಟ್ಟುಹಾಕುತ್ತವೆ. ಇದಕ್ಕೆ ಉತ್ತರವಾಗಿ ಆತನು ದೇವರು, ಧರ್ಮ, ಪರಲೋಕಗಳನ್ನೆಲ್ಲ ಸೃಷ್ಟಿಸಿಕೊಂಡನು. ಇದನ್ನು ನಾನು ಭಯ ಸಿದ್ಧಾಂತ ಎಂಬುದಾಗಿ ಇನ್ನು ಮುಂದೆ ಸೂಚಿಸುತ್ತೇನೆ.

          ಈ ರೀತಿಯ ವಿವರಣೆಗಳನ್ನು ನಾವು ಧಾರಾಳವಾಗಿ ನಮ್ಮ ವಿಶ್ವಕೋಶಗಳಲ್ಲಿಯೂ, ಪತ್ರಿಕೆಗಳ ಅಂಕಣಗಳಲ್ಲಿಯೂ, ದೇವರು, ಧರ್ಮದ ಕುರಿತ ಗ್ರಂಥಗಳಲ್ಲೂ, ವಿದ್ವಾಂಸರ ಸಂಶೋಧನೆಯಲ್ಲೂ, ಭಾಷಣಗಳಲ್ಲೂ ಕಾಣುತ್ತೇವೆ. ನಮ್ಮ  ಸಾಂಪ್ರದಾಯಿಕ ಚಿಂತಕರೂ  ಕೂಡ ಇಂಥ ನಿರೂಪಣೆಯನ್ನು ಪ್ರಶ್ನಿಸಿ, ಆಕ್ಷೇಪಿಸಿ  ತಕರಾರು ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಅದಲ್ಲದೇ ಅದು ಸತ್ಯವೆಂಬುದನ್ನು ಮನದಟ್ಟುಮಾಡಿಕೊಳ್ಳುವ ಸಲುವಾಗಿ ನಮ್ಮ ಪ್ರಾಚೀನ ಇತಿಹಾಸದಿಂದ, ಗ್ರಂಥಗಳ ಸಾಲುಗಳಿಂದ ಉದಾಹರಣೆಗಳನ್ನೂ ಅವರಲ್ಲಿ ಕೆಲವರು ಎತ್ತಿ ತೋರಿಸುತ್ತಿರುತ್ತಾರೆ. ಇತ್ತೀಚೆಗೆ ಬುದ್ಧನ ಕುರಿತ ವಿಚಾರ ಸಂಕಿರಣವೊಂದರಲ್ಲಿ ತಮ್ಮ ವಿಚಾರವನ್ನು ಪ್ರಸ್ತುತ ಪಡಿಸಿದ ವಿದ್ವಾಂಸರೊಬ್ಬರು ಬುದ್ಧ ಚರಿತವನ್ನು ಇಂಥ ನಿರೂಪಣೆಗೊಳಪಡಿಸಿದ್ದರು. ಅದೆಂದರೆ ಬುದ್ಧನು, ಮುದುಕ, ಶವ ಹಾಗೂ ರೋಗಿಗಳನ್ನು ನೋಡಿದಾಗ ಅವನಲ್ಲಿ ನಿಸರ್ಗದ ನಿಗೂಢದ ಕುರಿತು ಭಯ ಆವರಿಸಿತು, ಹಾಗಾಗಿ ಆತನು ರಾತೋರಾತ್ರಿಯೇ ಮನೆಬಿಟ್ಟು ಹೋಗಿ ತಪಸ್ಸು ಮಾಡಿ ಸತ್ಯವನ್ನು ಕಂಡುಕೊಂಡ. ಅವರು ಮಂಡಿಸಿದ ರೀತಿ ಹೇಗಿತ್ತೆಂದರೆ ಬುದ್ಧನು ಈ ಸಂಸಾರಕ್ಕೆ ಹೆದರಿ ಓಡಿಹೋಗಿದ್ದೇ ಅವನ ಜ್ಞಾನೋದಯಕ್ಕೆ ಕಾರಣವಾಯಿತು ಎಂಬಂತಿತ್ತು. ಅದಕ್ಕೆ ಪೂರಕವಾಗಿ ಅವರು ಭಯ ಸಿದ್ಧಾಂತದ ಕುರಿತ ಪಾಶ್ಚಾತ್ಯ ವಿದ್ವಾಂಸರೊಬ್ಬರ ಹೇಳಿಕೆಯನ್ನೂ ಉದ್ಧರಿಸಿದ್ದರು.

          ಭಾರತೀಯ ಅಧ್ಯಾತ್ಮವು ಮನುಷ್ಯನಿಗೆ ಸಾವು ಕಟ್ಟಿಟ್ಟದ್ದು,  ದೇಹವು ಕ್ಷಣಿಕ, ಸಂಸಾರವು ನೀರಮೇಲಣ ಗುಳ್ಳೆ ಇತ್ಯಾದಿಗಳನ್ನೇ ತನ್ನ ವಾದಗಳಿಗಾಗಿ ಆಶ್ರಯಿಸುವುದರಿಂದ ಆಧ್ಯಾತ್ಮಿಕ ಹುಡುಕಾಟದೊಳಗೂ ಈ ಸಿದ್ಧಾಂತಕ್ಕೆ ದೃಷ್ಟಾಂತವನ್ನು ಕಾಣುವುದು ಇಂಥವರಿಗೆ ಕಷ್ಟವಾಗಿಲ್ಲ.  ಭಾರತೀಯ ಭಕ್ತಿ ಪಂಥಗಳು ಸೃಷ್ಟಿಸಿದ ಸಾಹಿತ್ಯದಲ್ಲಿಯೂ ಕೂಡ ಇಂಥ ವಿಚಾರಗಳು ವಿಫುಲವಾಗಿ ಸಿಗುತ್ತವೆ. ಈ ಸಂಸಾರವು ಭಯಾನಕವಾಗಿದ್ದು ಇದರಿಂದ ಪಾರುಮಾಡಬೇಕೆಂಬುದಾಗಿ ಭಕ್ತರು/ಸಂತರು ದೇವರನ್ನು ಪ್ರಾರ್ಥಿಸಿಕೊಳ್ಳುವುದು ಸಾಮಾನ್ಯ. ಅಂದರೆ ಒಂದು ಭಯ ಮತ್ತು ಆತಂಕ ಅಲ್ಲಿ ಇದ್ದಂತೆ ಕಾಣುತ್ತದೆ. ಇಂಥ ದೃಷ್ಟಾಂತಗಳನ್ನು ತೋರಿಸಿ ಭಯ ಸಿದ್ಧಾಂತವು ಸತ್ಯ ಎಂಬುದನ್ನು ನಮಗೆ ಆಗಾಗ ಮನದಟ್ಟು ಮಾಡಲಾಗುತ್ತದೆ. ಇವರೆಲ್ಲ ಸಂಸಾರಕ್ಕೆ ಹೆದರಿ ಭಕ್ತಿಯತ್ತ ವಾಲಿದ್ದಾರೆ ಎಂಬ ಗ್ರಹಿಕೆಯನ್ನಿಟ್ಟುಕೊಂಡು ಅಧ್ಯಾತ್ಮ ಹಾಗೂ ಭಕ್ತಿ ಪಂಥಗಳನ್ನು ಪಲಾಯನವಾದ ಎಂಬುದಾಗಿಯೂ ಬಣ್ಣಿಸಿದ ಆಧುನಿಕ ವಿದ್ವಾಂಸರಿದ್ದಾರೆ.           

          ದೇವರು ಮನುಷ್ಯನ ಸೃಷ್ಟಿ ಹಾಗೂ ಅವನಿಗೆ ಸಂಬಂಧಿಸಿದ ಆಚರಣೆಗಳನ್ನು ಮೂಢ ನಂಬಿಕೆ ಎಂಬುದಾಗಿ ಗುರುತಿಸುವ ವಿಚಾರವಾದಿಗಳಿಗಂತೂ ಈ ಭಯ ಸಿದ್ಧಾಂತವೇ ತಾರ್ಕಿಕ ಆಧಾರ. ಆದಿಕಾಲದಲ್ಲಿ ಮನುಷ್ಯನಿಗೆ ನಿಸರ್ಗದ ಕುರಿತು ಯಥಾರ್ಥವಾದ ವೈಜ್ಞಾನಿಕ ತಿಳುವಳಿಕೆ ಇರಲಿಲ್ಲ. ಹಾಗಾಗಿ ಅವನು ನಿಸರ್ಗಕ್ಕೆ ಹೆದರಿದನು. ಆ ಕಾರಣದಿಂದ ತನ್ನ ರಕ್ಷಣೆಗಾಗಿ, ಧೈರ್ಯಕ್ಕಾಗಿ ದೇವತಾ ಕಲ್ಪನೆಯನ್ನು ಹುಟ್ಟುಹಾಕಿಕೊಂಡನು. ಅದೊಂದು ಅಜ್ಞಾನದ ಅವಸ್ಥೆಯಾಗಿತ್ತು. ಅಂದರೆ ಅಂಥ ಅಜ್ಞಾನಿಗಳಿಗೆ ದೇವರೇ ಗತಿ. ಆದರೆ ಇಂದು ನಮಗೆ ನಿಸರ್ಗದ ಕುರಿತು ವೈಜ್ಞಾನಿಕ ತಿಳುವಳಿಕೆ ಬಂದಿದೆ. ಇನ್ನೂ ಅದೇ ಅಜ್ಞಾನವನ್ನೇ ಮುಂದುವರೆಸುವುದು ಮೂರ್ಖತನವಾಗುತ್ತದೆ. ರಿಲಿಜನ್ನು ಜನಸಾಮಾನ್ಯರ ಆಫೀಮು ಎಂಬ ಹೇಳಿಕೆ ಇಂಥ ಗ್ರಹಿಕೆಯಿಂದ ಹುಟ್ಟಿದೆ. ಈ ವಾದದ ಪ್ರಕಾರ ಹೆಚ್ಚು ಹೆಚ್ಚು ವೈಜ್ಞಾನಿಕ ಸತ್ಯಗಳ ಆವಿಷ್ಕಾರವಾದಂತೆಲ್ಲ ದೇವರ ಕುರಿತ ನಂಬಿಕೆ ಕಡಿಮೆಯಾಗುವುದು ಅನಿವಾರ್ಯ. ಆದರೆ ಈ ತರ್ಕ ಸುಳ್ಳಾಗಿದೆ. ವಿಜ್ಞಾನದ ಬೆಳವಣಿಗೆಗೂ ಇಂಥ ಶ್ರದ್ಧೆಗಳಿಗೂ ಸಂಬಂಧ ಇದ್ದಂತೆ ಕಾಣುವುದಿಲ್ಲ. ಹಾಗಾಗಿ ಭಯ ಸಿದ್ಧಾಂತದಲ್ಲಿ ಎಲ್ಲೋ ಎಡವಟ್ಟಾಗುತ್ತಿದೆ ಎಂಬುದು ವಿಚಾರವಂತರ ಗಮನಕ್ಕೆ ಬಂದಿದೆ.

          ಇಷ್ಟೊಂದು ಸರ್ವವ್ಯಾಪಿಯಾಗಿ ಪ್ರಚಲಿತದಲ್ಲಿರುವ ಭಯ ಸಿದ್ಧಾಂತವು ಹುಟ್ಟಿದ್ದು ಪಶ್ಚಿಮದಲ್ಲಿ. ೧೮ನೆಯ ಶತಮಾನದಲ್ಲಿ ಯುರೋಪಿನಲ್ಲಿ ಸೆಕ್ಯುಲರ್ ಚಿಂತನೆಯ ಪ್ರಭಾವವು ಬಲಗೊಂಡಂತೆಲ್ಲ ವಿಭಿನ್ನ ಕ್ಷೇತ್ರಗಳಲ್ಲಿ ರಿಲಿಜನ್ನಿನ ವಿವರಣೆಗಳಿಗೆ ಪ್ರತಿಯಾಗಿ ವೈಜ್ಞಾನಿಕ ವಿವರಣೆಗಳು ಬರಲಾರಂಭಿಸಿದವು. ರಿಲಿಜನ್ನಿನ ಕುರಿತೇ ಅಂಥ ಸಿದ್ಧಾಂತಗಳೂ ಬಂದವು. ಅಂದರೆ ಮನುಷ್ಯನು ಗಾಡ್‌ನ ಸೃಷ್ಟಿ, ರಿಲಿಜನ್ನು ಮನುಷ್ಯನಿಗೆ ಗಾಡ್ ನೀಡಿದ ಕೊಡುಗೆ, ಆತನು ಪ್ರವಾದಿಗೆ ದೈವವಾಣಿಯ ಮೂಲಕ ಅದನ್ನು ತಿಳಿಸಿದ್ದಾನೆ ಎಂಬ ನಂಬಿಕೆಗಳಿಗೆ ಪ್ರತಿಯಾಗಿ ಅದು ಮಾನವರು ಸೃಷ್ಟಿಸಿಕೊಂಡ ಒಂದು ಸಂಸ್ಥೆ ಎಂಬ ವಾದವು ಹುಟ್ಟಿಕೊಂಡಿತು. ಅದೇ ವಾದದ ಭಾಗವಾಗಿ ಗಾಡ್ ಎಂಬವನು ಮನುಷ್ಯನ ಸೃಷ್ಟಿ ಎಂಬ ಪ್ರತಿಪಾದನೆ ಬಂದದ್ದು. ಅದರ ಅಂಗವಾಗಿ ಮನುಷ್ಯನೇ ರಿಲಿಜನ್ನನ್ನು ಸೃಷ್ಟಿಸಿಕೊಳ್ಳಲಿಕ್ಕೆ ಕಾರಣವೇನು? ಎಂಬುದನ್ನು ಗಾಡ್ ಕಲ್ಪನೆಯನ್ನು ಬಿಟ್ಟು ವಿವರಿಸುವ ಸವಾಲು ಇಂಥ ವಿದ್ವಾಂಸರಿಗೆದುರಾಯಿತು. ಈ ಸವಾಲಿಗೆ ಉತ್ತರವಾಗಿ ಅವರು ರಿಲಿಜನ್ನಿನ ಹುಟ್ಟಿಗೆ ನಿಸರ್ಗದಲ್ಲಿಯೇ ಕಾರಣಗಳನ್ನು ಹುಡುಕಿದರು. ಮನುಷ್ಯನು ನಿಸರ್ಗದ ಶಿಶುವಾಗಿರುವುದರಿಂದ ಅವನ ನಂಬಿಕೆಗಳಿಗೆ ನಿಸರ್ಗದಲ್ಲೇ ಉತ್ತರ ಇದೆಯೆಂಬ ಗ್ರಹಿಕೆಯಿಂದ ಈ ವಿವರಣೆಯು ಹೊರಡುತ್ತದೆ. ಈ ವಿವರಣೆಯ ಭಾಗವಾಗಿ ಭಯ ಸಿದ್ಧಾಂತವನ್ನು ಕಟ್ಟಲಾಯಿತು ಹಾಗೂ ಅದು ರಿಲಿಜನ್ನಿನ ಹುಟ್ಟಿಗೆ ಕಾರಣವಾದ ಸತ್ಯ ಘಟನೆಯಾಗಿ ಸ್ಥಾನ ಪಡೆಯಿತು.

          ರಿಲಿಜನ್ನಿನ ಕುರಿತ ವೈಜ್ಞಾನಿಕ ಅಧ್ಯಯನಗಳು ಕ್ರಮೇಣ ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಸಂಶೋಧನೆಗಳ ಮೂಲಕ ಪಸರಿಸಿದವು. ಪ್ರಪಂಚದ ಎಲ್ಲೆಡೆ ರಿಲಿಜನ್ನುಗಳಿವೆ ಎಂಬ ಗ್ರಹಿಕೆಯನ್ನಿಟ್ಟುಕೊಂಡ ಇಂಥ ಅಧ್ಯಯನಗಳು ಅನ್ಯ ಸಂಸ್ಕೃತಿಗಳಲ್ಲೂ ಹಿಂದೂಯಿಸಂ, ಬುದ್ಧಿಸಂ, ಶಿಂಟೋಯಿಸಂ, ವಿಭಿನ್ನ ಬುಡಕಟ್ಟುಗಳ ಆದಿಮ ರಿಲಿಜನ್ನುಗಳು, ಇತ್ಯಾದಿಗಳನ್ನು ಕಟ್ಟಿಕೊಟ್ಟವು. ಆಗ ವಿದ್ವಾಂಸರಿಗೆ ಎಲ್ಲಾ ಸಂಸ್ಕೃತಿಗಳಲ್ಲೂ ರಿಲಿಜನ್ನು ಸಾರ್ವತ್ರಿಕವಾಗಿದ್ದಂತೇ ಕಂಡುಬಂದಿತು. ಪ್ರಪಂಚದ ಎಲ್ಲಾ ಮಾನವರೂ ಪರಸ್ಪರರ ಸಂಸ್ಕೃತಿಗಳ ಪರಿಚಯ ಹಾಗೂ ಪ್ರಭಾವವೇ ಇಲ್ಲದೇ ಈ ಏಕರೂಪಿಯಾದ ಸಂಸ್ಥೆಯನ್ನು  ಹುಟ್ಟುಹಾಕಿಕೊಂಡಿರುವುದೇ ಅವರಿಗೆ ಒಂದು ಸೋಜಿಗವಾಯಿತು. ಇವರೆಲ್ಲರೂ ಏಕರೂಪಿಯಾದ ರಿಲಿಜನ್ನೆಂಬ ಸಂಸ್ಥೆಯನ್ನೇ ಏಕೆ ಹುಟ್ಟುಹಾಕಿದರು?  ಎಲ್ಲರಿಗೂ ನಿಸರ್ಗದಲ್ಲಿ ಸಾರ್ವತ್ರಿಕವಾದ ಕೆಲವು ಅನುಭವಗಳು ಆಗಿರಲೇಬೇಕು ಹಾಗೂ ಅವರೆಲ್ಲರೂ ಅಂಥ ಅನುಭವಗಳಿಗೆ ಏಕರೂಪಿಯಾಗಿ ಪ್ರತಿಕ್ರಿಯಿಸಿರಲೇ ಬೇಕು. ಆ ಏಕರೂಪೀ ಅನುಭವ  ಯಾವುದು ಎಂಬುದನ್ನು ಕಂಡುಹಿಡಿಯುತ್ತಾ ಭಯ ಸಿದ್ಧಾಂತವು ಹುಟ್ಟಿಕೊಂಡಿತು. ಮನುಷ್ಯನು ನಿಸರ್ಗದ ಕುರಿತ ಭಯ, ಆತಂಕ, ಅಸ್ಥಿರತೆಗಳಿಂದ ಹೊರಬರುವ ಸಲುವಾಗಿ ದೇವರನ್ನು ಸೃಷ್ಟಿಸಿಕೊಂಡನು. ಈ ನೈಸರ್ಗಿಕ ಅನುಭವಗಳು ಸಾರ್ವತ್ರಿಕವಾಗಿ ಎಲ್ಲಾ ಸಂಸ್ಕೃತಿಗಳ ಜನರಿಗೂ ಆಗುತ್ತವೆ ಎಂಬುದು ನಮ್ಮೆಲ್ಲರ ಅನುಭವಕ್ಕೂ ನಿಲುಕುವ ಸಂಗತಿಯಾದ್ದರಿಂದ ನಮಗೆಲ್ಲಾ ಈ ಸಿದ್ಧಾಂತವು ಸರಿಯೆನ್ನಿಸುತ್ತದೆ. ಹಾಗಾಗಿ ರಿಲಿಜನ್ನುಗಳ ಪ್ರತ್ಯೇಕತೆಗೂ ಹೊರತಾಗಿ ಇದೊಂದು ಸಮಾನ್ಯ ನೈಸರ್ಗಿಕ ಸತ್ಯ ಎಂಬುದಾಗಿ ಭಾವಿಸುತ್ತೇವೆ.

          ಆದರೆ ಒಂದು ಕ್ಷಣ ಯೋಚಿಸಿ. ನಿಸರ್ಗವು ನಿಗೂಢವಾಗಿದೆ ಎಂಬ ಭಾವನೆಯೂ, ನೈಸರ್ಗಿಕ ವಿಪತ್ತುಗಳ ಕುರಿತು ಭಯ ಆತಂಕ ಇವೆಲ್ಲವುಗಳೂ ಇಂದು ನಮ್ಮೆಲ್ಲರ ಸಾರ್ವತ್ರಿಕ ಅನುಭವಗಳಾಗಿರಬಹುದು. ರಿಲಿಜನ್ನಿನ ಉಗಮದ ವೈಜ್ಞಾನಿಕ ಸಿದ್ಧಾಂತವು ಅದನ್ನಷ್ಟೇ ಹೇಳುತ್ತಿಲ್ಲ ಹಾಗೂ ಇಷ್ಟನ್ನೇ ಹೇಳಿದಲ್ಲಿ ಅದು ರಿಲಿಜನ್ನಿಗೆ ಸಂಬಂಧಿಸಿದ ಸಿದ್ಧಾಂತವಾಗುವುದೂ ಸಾಧ್ಯವಿಲ್ಲ. ಈ ಸಾರ್ವತ್ರಿಕ ಅನುಭವಗಳಿಗೆ ಮನುಷ್ಯನು ರಿಲಿಜನ್ನನ್ನು ಹುಟ್ಟುಹಾಕಿಯೇ ಎಲ್ಲೆಡೆಯಲ್ಲೂ ಪ್ರತಿಕ್ರಿಯೆ ನೀಡಿದನು ಎಂಬುದಾಗಿ ಅವರು ಪ್ರತಿಪಾದಿಸುತ್ತಿದ್ದಾರೆ. ಅಲ್ಲೇ ದೊಡ್ಡ ಪ್ರಶ್ನೆಯೊಂದು ಏಳುತ್ತದೆ. ಅಂದಿನ ನಿಸರ್ಗವು ಇಂದಿನದೇ ಇರಬಹುದು, ಮನುಷ್ಯ ಪ್ರಕೃತಿಯೂ ಇಂದಿನದೇ ಇರಬಹುದು. ಆದರೆ ಆ ಕಾರಣದಿಂದ ನಮ್ಮ ಇಂದಿನ ಅನುಭವಗಳನ್ನು ಸಾವಿರಾರು ವರ್ಷಗಳ ಹಿಂದಿನ ಮನುಷ್ಯರು ಕೂಡಾ ಹಾಗೇ ಅನುಭವಿಸಿದ್ದರು ಎಂಬುದನ್ನು ಹೇಗೆ ಸಿದ್ಧಪಡಿಸುತ್ತೀರಿ? ಈ ಸಾವಿರಾರು ವರ್ಷಗಳ ಸಾಂಸ್ಕೃತಿಕ ಬದಲಾವಣೆಗಳು ಅವನು ಪ್ರಪಂಚವನ್ನು ಅನುಭವಿಸುವ ರೀತಿಯನ್ನು ಬದಲಾಯಿಸಿಲ್ಲ ಎಂದು ಹೇಗೆ ಸಿದ್ಧಪಡಿಸುತ್ತೀರಿ? ಈ ಕುರಿತು ವೈಜ್ಞಾನಿಕ ಸಿದ್ಧಾಂತಗಳನ್ನು  ಇನ್ನೂ ನಾವು ಬೆಳೆಸಿಕೊಂಡೇ ಇಲ್ಲ.

           ಅದೇ ರೀತಿಯಲ್ಲಿ ಮನುಷ್ಯನು ಸಾರ್ವತ್ರಿಕವಾಗಿ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸಿದನೆಂಬುದನ್ನು ಹೇಗೆ ಸಿದ್ಧಮಾಡುತ್ತೀರಿ? ಉದಾಹರಣೆಗೆ ಸುತ್ತಲಿನ ಜಗತ್ತು ನಿಗೂಢವಾಗಿದೆ ಹಾಗೂ ಅವ್ಯವಸ್ಥಿತವಾಗಿದೆ ಎಂದೇ ಆದಿಮಾನವನಿಗೆ ಏಕೆ ಅನ್ನಿಸಬೇಕು? ನಿಸರ್ಗವನ್ನು ಅವಲೋಕಿಸಿದಾಗ ಎಷ್ಟೋ ಸಂಗತಿಗಳು ನಿಯಮದ್ಧವಾಗಿ, ಪೂರ್ವನಿಶ್ಚಿತವಾಗಿ ನಡೆಯುತ್ತವೆ. ಅದನ್ನು ನೋಡಿ ಅದು ವ್ಯವಸ್ಥಿತವಾಗಿದೆ ಎಂದೇಕೆ ಅವನಿಗೆ ಅನ್ನಿಸಬಾರದು? ಒಂದೊಮ್ಮೆ ಅವ್ಯವಸ್ಥಿತವಾಗಿದೆ ಎಂದೇ ಅನ್ನಿಸಿದರೂ ಅವನಿಗೆ ಅದರಿಂದ ಆತಂಕ ಅಥವಾ ಭಯವೇ ಏಕಾಗಬೇಕು? ಆಶ್ಚರ್ಯವೇಕಾಗಬಾರದು? ಒಂದೊಮ್ಮೆ ಅವನು ಭಯಪಟ್ಟಿದ್ದೇ ಹೌದಾದರೂ ಅದನ್ನು ಹೋಗಲಾಡಿಸಿಕೊಳ್ಳಲು ದೇವರನ್ನೇ ಏಕೆ ಸೃಷ್ಟಿಸಿಕೊಳ್ಳಬೇಕು? ಏಕೆ ಒಂದು ಹೊಸ ನೃತ್ಯವನ್ನು ಕಂಡುಹಿಡಿದಿರಬಾರದು? ಮುಸುಕು ಹೊದ್ದು ಮಲಗಿರಬಾರದು? ಇಂಥ ಪ್ರಶ್ನೆಗಳನ್ನು ಉತ್ತರಿಸಲಿಕ್ಕೆ ಭಯ ಸಿದ್ಧಾಂತದಿಂದ ಸಾಧ್ಯವಿಲ್ಲ. ಏಕೆಂದರೆ ಭಯ ಸಿದ್ಧಾಂತವು ಮೂಲತಃ ಒಂದು ವೈಜ್ಞಾನಿಕ ಸಿದ್ಧಾಂತವೇ ಅಲ್ಲ. ಅದು ಒಂದು ವ್ಯವಸ್ಥಿತವಾದ ಹಾಗೂ ತರ್ಕಬದ್ಧವಾದ ಹೇಳಿಕೆಯೇ ಅಲ್ಲ.

          ಈ ಹೇಳಿಕೆಯು ಜಗತ್ತಿನೆಲ್ಲೆಡೆ ರಿಲಿಜನ್ನಿದೆ ಎಂಬ ಪೂರ್ವಾಗ್ರಹದಿಂದ ಹುಟ್ಟಿಕೊಂಡ ಒಂದು ಬೇಕಾಬಿಟ್ಟಿಯಾದ ಹೇಳಿಕೆಯಾಗಿದೆ. ಅಷ್ಟೇ ಅಲ್ಲ, ಈ ಹೇಳಿಕೆಯ ಬೇರು ಕ್ರೈಸ್ತ ಥಿಯಾಲಜಿಯಲ್ಲಿದೆ. ರಿಲಿಜನ್ನು ಹೇಗೆ ಹುಟ್ಟಿತು ಎಂಬುದಕ್ಕೆ ಕಾರಣವಾಗಿ ಕ್ರೈಸ್ತ ಗಾಡ್‌ನನ್ನು ಈ ಕಥೆ ಎಳೆದು ತರುವುದಿಲ್ಲವೇನೋ ಸರಿ. ಆದರೆ ಗಾಡ್ ತನ್ನ ಹೆಸರನ್ನು ಎಲ್ಲ ಮಾನವರ ಹೃದಯಗಳಲ್ಲೂ ಕೊರೆದಿದ್ದಾನೆ ಎಂಬ ಥಿಯಾಲಜಿಯ ಹೇಳಿಕೆಯನ್ನು ಈ ಸೆಕ್ಯುಲರ್ ವಿವರಣೆಯು ’ಎಲ್ಲ ಮಾನವರಿಗೂ ರಿಲಿಜನ್ ಇದೆ’ ಎಂಬುದಾಗಿ ರೂಪಾಂತರಿಸುತ್ತದೆ. ಹಾಗೂ ರಿಲಿಜನ್ನಿನಿಂದಾಗಿ ನಿಸರ್ಗದ ಹಿಂದಿರುವ ಅಗೋಚರ ವ್ಯವಸ್ಥೆಯ ಸತ್ಯ ಸ್ವರೂಪವು ಗೋಚರವಾಗುವುದರಿಂದ ಅದು ಮನುಷ್ಯನಿಗೆ ನಿಸರ್ಗದ ಕುರಿತ ಭಯ, ಆತಂಕಗಳನ್ನು ದೂರಮಾಡುತ್ತದೆ ಎಂಬುದು ನಿರ್ದಿಷ್ಟವಾಗಿ ಕ್ರೈಸ್ತ ಹೇಳಿಕೆಯಾಗಿದೆ. ಕ್ರೈಸ್ತ ಚರ್ಚುಗಳು ತಮ್ಮ ಇತಿಹಾಸದಲ್ಲಿ ತಮ್ಮ ರಿಲಿಜನ್ನು ನಿರ್ದಿಷ್ಟವಾಗಿ ಈ ಸಾಧನೆಯನ್ನೇ ಮಾಡಿದೆ ಎಂಬುದನ್ನು ಪ್ರಮಾಣೀಕರಿಸುತ್ತವೆ. ಅಂದರೆ ನಿಸರ್ಗದ ಶಕ್ತಿಗಳ ಕುರಿತು ತಪ್ಪು ತಪ್ಪಾದ ಕಲ್ಪನೆಗಳನ್ನು ಮಾಡಿಕೊಂಡು ಭೀತರಾಗಿದ್ದ ಮೂಲನಿವಾಸಿಗಳಿಗೆ ಕ್ರಿಶ್ಚಿಯಾನಿಟಿಯು ಶಾಂತಿಯನ್ನು ತಂದಿತು ಎಂಬುದಾಗಿ ಅದು ಹೇಳಿಕೊಳ್ಳುತ್ತದೆ. ಹಾಗಾಗಿ ಭಯ ಸಿದ್ಧಾಂತವು ಕ್ರೈಸ್ತರಿಗೇ ಸೀಮಿತವಾದ ಅನುಭವವೊಂದನ್ನು ಜಾಗತೀಕರಿಸುವ ಕೆಲಸವನ್ನು ಮಾಡುತ್ತದೆ. 

          ರಿಲಿಜನ್ನು ಈ ನಿಸರ್ಗದ ಕುರಿತು ಮಂಡಿಸುವ ವಾದವು ಈ ಮೂರು ಹಂತಗಳಲ್ಲಿ ಇರುತ್ತದೆ; ೧. ಆದಿ ಮಾನವರಲ್ಲಿ ನಿಸರ್ಗದ ನಿರೀಕ್ಷಿತ ಹಾಗೂ ಪರಿಚಿತ ಸಂಗತಿಗಳ  ಒಂದು ಮುಗ್ಧ ಅನುಭವವಿರುತ್ತದೆ. ೨. ಅನಿರೀಕ್ಷಿತ ಹಾಗೂ ಅಪರಿಚಿತ ಘಟನೆಗಳಿಂದ ಆ ಮುಗ್ಧತೆ ಒಡೆದಾಗ ಅವ್ಯವಸ್ಥೆಯ, ಭಯದ ಅನುಭವ ಹುಟ್ಟುತ್ತದೆ. ೩. ರಿಲಿಜನ್ನನ್ನು ಹುಟ್ಟುಹಾಕುವುದರಿಂದ ಅವ್ಯವಸ್ಥೆಯ ಹಿಂದೆ ಅದೃಶ್ಯವಾಗಿರುವ ನಿಜವಾದ ವ್ಯವಸ್ಥೆ ಕಾಣತೊಡಗುತ್ತದೆ ಹಾಗೂ ಆದಿಮಾನವನ ಭಯವು ನಿವಾರಣೆಯಾಗುತ್ತದೆ. ಇದು ರಿಲಿಜನ್ನಿನ ಹುಟ್ಟಿನ ಪ್ರಕ್ರಿಯೆಯ ಸೆಕ್ಯುಲರ್ ವಿವರಣೆ ಅಥವಾ ವೈಜ್ಞಾನಿಕ ವಿವರಣೆ.

          ರಿಲಿಜನ್ನಿನ ಅಧ್ಯಯನವು ಪ್ರಪಂಚದೆಲ್ಲೆಡೆ ರಿಲಿಜನ್ನುಗಳನ್ನು ಸೃಷ್ಟಿಸುತ್ತ ತನ್ನ ಸಿದ್ಧಾಂತಗಳನ್ನು ಅಲ್ಲೆಲ್ಲ ಅನ್ವಯ ಮಾಡಿತು. ಅದರ ಭಾಷೆಯನ್ನು ಹಾಗೂ ಪ್ರಭೇದಗಳನ್ನು ಬಳಸಿಕೊಳ್ಳುತ್ತಾ ಭಯ ಸಿದ್ಧಾಂತವೂ ನಮ್ಮಲ್ಲಿ ಪ್ರಚಲಿತದಲ್ಲಿ ಬಂದಿದೆ. ಅಷ್ಟೇ ಅಲ್ಲದೇ, ಈ ಪ್ರಭೇದಗಳು ನಮ್ಮ ಸಂಸ್ಕೃತಿಯನ್ನೂ ಚಿತ್ರಿಸುತ್ತವೆ ಎಂಬುದಾಗಿ ನಾವು ಭಾವಿಸಿದ್ದೇವೆ. ಹಾಗಾಗಿ ನಮ್ಮ ಸಂಸ್ಕೃತಿಯ ಕುರಿತು ಮಾತನಾಡುವಾಗ ಅವನ್ನು ಧಾರಾಳವಾಗಿ ಬಳಸುತ್ತೇವೆ. ಆದರೆ ನಮ್ಮ ಸಂಪ್ರದಾಯಗಳು ಉಲ್ಲೇಖಿಸುವ ಭಯ ಸಂಸಾರಕ್ಕೆ ಸಂಬಂಧಿಸಿದ್ದು, ನಿಸರ್ಗದ ಕುರಿತ ಭಯವಲ್ಲ. ನಮ್ಮಲ್ಲಿ ಯಾರೂ ಭೂಕಂಪಕ್ಕೆ, ಬಿರುಗಾಳಿಗೆ ಹೆದರಿ ದೇವರನ್ನು ಕಾಣಲು ಹೋಗಲಿಲ್ಲ. ಹಾಗಾಗಿ ಭಯ ಸಿದ್ಧಾಂತ ಭಾರತೀಯ ಪರಂಪರೆಗೆ ಅನ್ವಯವಾಗಲು ಸಾಧ್ಯವೇ ಇಲ್ಲ. ಭಾರತೀಯ ಕಥೆ, ಪುರಾಣಗಳೆಲ್ಲವೂ ನಮಗೆ ತಿಳಿಸುವ ಪ್ರಕಾರ ನಿಸರ್ಗವೇ ಮಾನವನಿಂದ ಭೀತವಾಗಿದೆ. ಬುದ್ಧನ ಕಥೆ ಏನು ಹೇಳುತ್ತದೆಯೆಂದರೆ ಅವನ ಗರ್ಭಾವತರಣವಾದಾಗ ಕಾಡುಪ್ರಾಣಿಗಳು ಮನುಷ್ಯನಿಂದ ಭಯವಿಮುಕ್ತವಾದವಂತೆ!

          ಹಾಗೆಯೇ ನಮ್ಮ ಭಕ್ತಿ, ಅಧ್ಯಾತ್ಮ ಸಾಹಿತ್ಯದಲ್ಲಿ ಬರುವ ಸಂಸಾರ ಭಯದ ವರ್ಣನೆಗಳನ್ನು ಭಯ ಸಿದ್ಧಾಂತದಿಂದ ಅರ್ಥೈಸುವ ಪ್ರಯತ್ನವು ಕೂಡ ಸರಿಯಲ್ಲ. ಭಯ ಸಿದ್ಧಾಂತವು ನಿಸರ್ಗ ಭಯದ ಕುರಿತು ಹೇಳುತ್ತದೆಯೇ ಹೊರತೂ ಸಂಸಾರ ಭಯದ ಕುರಿತಲ್ಲ. ಹಾಗೂ ಸಂಸಾರಕ್ಕೆ ಭಯಪಟ್ಟಾಕ್ಷಣ ಯಾರೂ ಪರಮಾತ್ಮನನ್ನು ಅರಸಿ ಹೋಗಲಿಲ್ಲ, ಸಂಸಾರದ ಮೇಲೆ ವಿರಕ್ತಿ ಹುಟ್ಟಿದಾಗ ಪರಮಾತ್ಮನನ್ನು ಅರಸಿದರು. ಈ ಸಂಪ್ರದಾಯಗಳು ಯಾವುದನ್ನು ವಿರಕ್ತಿ ಎನ್ನುತ್ತವೆಯೋ ಅದನ್ನು ಭಯ ಎಂಬುದಾಗಿ ತಪ್ಪಾಗಿ ಗುರುತಿಸಲಾಗಿದೆ ಎಂಬುದು ಸ್ಪಷ್ಟ. ನಮ್ಮ ದೇವತೆಗಳಿಗೆ ಅಭಯ ಹಸ್ತವಿರುತ್ತದೆ. ಅಂದರೆ ಅವರು ನಮ್ಮನ್ನು ಸಂಸಾರ ಭಯದಿಂದ ರಕ್ಷಿಸುತ್ತಾರೆ ಎಂಬ ನಿರೂಪಣೆಯೂ ಸಾಧ್ಯ. ಹಾಗು ಕೆಲವರು ಅವರಿಗೆ ಶರಣಾಗಿ ಸಂಸಾರ ಭಯದಿಂದ ವಿಮುಕ್ತಿಯನ್ನೂ ಹೊಂದಿರಬಹುದು. ಆದರೆ ಆ ಕಾರಣದಿಂದ ಆ ಕೆಲಸಕ್ಕಾಗಿಯೇ ಅವನನ್ನು ಸೃಷ್ಟಿಸಲಾಗಿದೆ ಎಂದರೆ ತರ್ಕಬದ್ಧವೆನಿಸುವುದಿಲ್ಲ. ಅದಕ್ಕೂ ಮುಖ್ಯವಾಗಿ ದೇವರು ಎಂಬವನು ಸತ್ಯವಾಗಿಯೂ ಭಯದಿಂದ ರಕ್ಷಿಸುತ್ತಾನೆಯೆ ಎಂಬುದು ನಮ್ಮ ಸಂಪ್ರದಾಯಗಳಿಗೊಂದು ವಾದ ವಿಷಯವಲ್ಲ. ದೇವ-ಅಸುರ ಇವೆಲ್ಲ ಮನುಷ್ಯ ಕಲ್ಪನೆಗಳು, ಹಾಗೂ ಮನುಷ್ಯನು ತನ್ನ ಮನಸ್ಸಿನಲ್ಲಿ ದೇವರನ್ನು ಏಕೆ ಭಾವಿಸಿಕೊಳ್ಳಬೇಕು ಎಂಬ ಕುರಿತೇ ನಮ್ಮಲ್ಲಿ ಅಧ್ಯಾತ್ಮದ ನೆಲೆಯಿಂದ ಸತಾರ್ಕಿಕವಾದ ವಿವರಣೆಗಳೂ ಇವೆ. ಹಾಗಾಗಿ ಈ ಸಂಪ್ರದಾಯಗಳ ಸಂದರ್ಭದಲ್ಲಿ ಭಯ ಸಿದ್ಧಾಂತವು ತೀರಾ ಅಪ್ರಸ್ತುತವಾದುದು.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp