ಭಾರತದಲ್ಲಿ ಜಾತಿ ವಿನಾಶವಾಗಬೇಕಾದರೆ ಬ್ರಾಹ್ಮಣ ಜಾತಿಯ ಪಾವಿತ್ರ್ಯ ನಾಶವಾಗಬೇಕು ಎಂಬುದಾಗಿ ನಮ್ಮ ಬುದ್ಧಿಜೀವಿಗಳು ನಂಬಿದ್ದಾರೆ. ಭಾರತೀಯ ಸಮಾಜದಲ್ಲಿ ಹುಟ್ಟಿ ಬೆಳೆದ ಸಾಮಾನ್ಯರ ಅನುಭವಕ್ಕೆ ಈ ಹೇಳಿಕೆಯು ಅರ್ಥವಾಗುವುದಿಲ್ಲ. ಅಷ್ಟೇಕೆ ಹಾಗೆ ಹೇಳುವವರಿಗೂ ಕೂಡ ಅರ್ಥವಾಗಿಲ್ಲ ಎಂಬುದು ಈ ಲೇಖನದಿಂದ ಸ್ಪಷ್ಟವಾಗಬಹುದು.
ಭಾರತದಲ್ಲಿ ಜಾತಿಗಳು ವಿನಾಶವಾದ ಹೊರತೂ ಇಲ್ಲಿನ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದೊಂದು ಪ್ರತಿಪಾದನೆಯಿದೆ. ಅದನ್ನು ನಂಬುವವರು ಸಾಮಾನ್ಯವಾಗಿ ಹೇಳುವುದೆಂದರೆ ’ಬ್ರಾಹ್ಮಣರ ಮಡಿವಂತಿಕೆ ನಾಶವಾಗಬೇಕು.’ ಈ ಹೇಳಿಕೆಯನ್ನು ಭಾಷಣದಲ್ಲೂ ಹೇಳುತ್ತಿರುತ್ತಾರೆ, ಬರವಣಿಗೆಯಲ್ಲೂ ಕಾಣಿಸುತ್ತಾರೆ. ಅವರ ಪ್ರಕಾರ ಜಾತಿ ವ್ಯವಸ್ಥೆ ಇರುವುದೇ ಬ್ರಾಹ್ಮಣರ ಪಾವಿತ್ರ್ಯದಲ್ಲಿ. ಬ್ರಾಹ್ಮಣರು ಮಡಿ ಮೈಲಿಗೆಗಳ ಮಾನದಂಡವನ್ನಿಟ್ಟುಕೊಂಡು ಈ ಜಾತಿ ವ್ಯವಸ್ಥೆಯನ್ನು ಮಾಡಿದ್ದಾರೆ. ಉಳಿದ ಜಾತಿಗಳು ಬ್ರಾಹ್ಮಣರು ಅತ್ಯಂತ ಪವಿತ್ರ ಹಾಗೂ ತಾವು ಕಡಿಮೆ ಪವಿತ್ರ, ತಮಗಿಂತಲೂ ಕೆಳಜಾತಿಗಳು ಇನ್ನೂ ಅಪವಿತ್ರ ಎಂಬುದಾಗಿ ಭಾವಿಸುತ್ತಾರೆ. ಆ ಪ್ರಕಾರವಾಗಿ ಜಾತಿಗಳು ತಾವು ಮೇಲು-ಕೀಳು ಎಂಬ ತಿಳಿವಳಿಕೆ ಯನ್ನು ಪಡೆಯುತ್ತವೆ. ಈ ತಿಳಿವಳಿಕೆಯೇ ಅಸ್ಪೃಶ್ಯತೆಗೂ ಕಾರಣವಾಗಿದೆ. ಭಾರತದಲ್ಲಿ ಯಾವುದೇ ಜಾತಿಯಲ್ಲಿ ಇಂಥ ಆಚರಣೆಗಳಿದ್ದರೂ ಅದಕ್ಕೆ ಬ್ರಾಹ್ಮಣರದೇ ನಿರ್ದೇಶನವಿದೆ. ಇದನ್ನು ಮೀರಿದರೆ ತಮಗೇನೋ ಕೇಡಾಗುತ್ತದೆ ಎಂಬುದಾಗಿ ಅವರೆಲ್ಲ ಹೆದರಿಕೊಳ್ಳುತ್ತಾರೆ. ಬ್ರಾಹ್ಮಣರ ಜಾತಿ ನಾಶವಾದರೆ ಮಾತ್ರ ಈ ವ್ಯವಸ್ಥೆ ನಾಶವಾಗುತ್ತದೆ ಎಂಬುದು ಅಂಥವರ ನಿರ್ಣಯ.
ಈ ಮೇಲಿನ ಕಥೆಯನ್ನು ಒಪ್ಪಿಕೊಂಡವರ ಪ್ರಕಾರ ಜಾತಿ ವ್ಯವಸ್ಥೆಯನ್ನು ಟೀಕಿಸುವುದೂ, ಬ್ರಾಹ್ಮಣರನ್ನು ಟೀಕಿಸುವುದೂ ಒಂದೇ. ಹಾಗಾಗಿಯೇ ಮೇಲ್ನೋಟಕ್ಕೆ ಒಂದು ಜಾತಿಯ ಟೀಕೆಯಂತೇ ತೋರುವ ಇಂಥ ಹೇಳಿಕೆಗಳನ್ನು ಸಾರ್ವಜನಿಕವಾಗಿ ಬ್ರಾಹ್ಮಣರಾದಿಯಾಗಿ ಎಲ್ಲರೂ ಮಾಡುತ್ತಲೇ ಬಂದಿದ್ದಾರೆ. ಆದರೆ ಇದಕ್ಕೆ ಇತರ ಬ್ರಾಹ್ಮಣರ ಪ್ರತಿಕ್ರಿಯೆ ಏನು? ತಾವು ಬ್ರಾಹ್ಮಣ ಜಾತಿ, ಉಳಿದೆಲ್ಲರಿಗಿಂತ ತಾವು ಕಟ್ಟು ನಿಟ್ಟು ಎಂಬ ಅಹಮಿಕೆ ಇದ್ದವರಿಗೂ ಕೂಡ ಅದರಿಂದ ತಮ್ಮ ಆಚರಣೆಯಿಂದ ಜಾತಿಗೇ ಪಾವಿತ್ರ್ಯತೆ ಹೆಚ್ಚುತ್ತದೆ ಎಂಬ ಮಾತು ಅರ್ಥವಾಗಲು ಸಾಧ್ಯವಿಲ್ಲ. ಹಾಗಾಗಿ ತಮ್ಮ ಜಾತಿಯ ಪಾವಿತ್ರ್ಯತೆ ಹಾಳಾಗಬೇಕು, ಅದರ ಪಾವಿತ್ರ್ಯತೆಯನ್ನು ಹಾಳುಮಾಡುವುದು ದೇಶಕ್ಕೆ ಒಳ್ಳೆಯದು ಎಂಬುದು ಅವರಿಗೆ ನ್ಯಾಯದ ಮಾತಾಗಿ ಕಾಣಿಸುವುದು ಹೋಗಲಿ ಅರ್ಥವೇ ಆಗುವುದಿಲ್ಲ. ಹಾಗೂ ಆಧುನಿಕ ಬುದ್ಧಿಜೀವಿಗಳ ಭಾಷಣ, ಮತ್ತು ಬರವಣಿಗೆಗಳಲ್ಲಿ ತಮಗೆ ಅರ್ಥವಾಗದ ಅನೇಕ ಮಾತುಗಳಲ್ಲಿ ಇದೂ ಒಂದು ಎಂದು ಪರಿಗಣಿಸುತ್ತಾರೆ. ಕೆಲವರು ’ಇವರಿಗೆ ಬ್ರಾಹ್ಮಣರನ್ನು ಕಂಡರೆ ಆಗಲ್ಲ’ ’ಬ್ರಹ್ಮದ್ವೇಷಿಗಳು’ ಎಂಬುದಾಗಿ ಪರಿಗಣಿಸುತ್ತಾರೆ, ಹಾಗೂ ಅದು ಅವರಿಗೆ ಅರ್ಥವಾಗುವ ಮಾತು.
ಒಟ್ಟಿನಲ್ಲಿ ಜಾತಿ ವ್ಯವಸ್ಥೆಯು ಕಳಚಿ ಬೀಳಬೇಕಾದರೆ ಬ್ರಾಹ್ಮಣ ಜಾತಿಯ ಪಾವಿತ್ರ್ಯ ಹಾಳಾಗುವುದು ನಿರ್ಣಾಯಕ ಎಂಬುದು ಜಾತಿ ವಿರೋಧಿಗಳ ನಿರ್ಣಯ. ಆದರೆ ಈ ನಿರ್ಣಯವು ನಿಜವಾಗಿಯೂ ನಮ್ಮ ಅನುಭವವನ್ನಾಧರಿಸಿ ಇದೆಯೆ ಎಂಬುದನ್ನು ಮರುಪರಿಶೀಲಿಸುವುದು ಅಗತ್ಯ. ಭಾರತದಲ್ಲಿ ಬೇರೆ ಬೇರೆ ಜಾತಿಗಳಲ್ಲಿ ಹುಟ್ಟಿದವರೆಲ್ಲ ಪರಸ್ಪರರನ್ನು ಸಂಧಿಸಿದಾಗ ಅವರಿಗಿಂತ ನಾನು ಪವಿತ್ರ, ಇವರಿಗಿಂತ ನಾನು ಅಪವಿತ್ರ ಎಂಬ ಅನುಭವವನ್ನು ಹೊಂದುತ್ತಾರೆಯೆ? ಉದಾಹರಣೆಗೆ ಅಸ್ಪೃಶ್ಯತೆಯ ಆಚರಣೆಯಲ್ಲಿ ಮೇಲು ಜಾತಿಯವನೊಬ್ಬನು ನಾನು ಜಾತಿ ವ್ಯವಸ್ಥೆಯ ಪ್ರಕಾರ ಹೆಚ್ಚು ಪವಿತ್ರ ಹಾಗಾಗಿ ಮುಟ್ಟಬಾರದು ಎಂದುಕೊಳ್ಳುತ್ತಿದ್ದರೆ, ಅಸ್ಪೃಶ್ಯನೊಬ್ಬನು ನಾನು ಕಡಿಮೆ ಪವಿತ್ರ ಹಾಗಾಗಿ ಮುಟ್ಟಿಸಿಕೊಳ್ಳಬಾರದು ಎಂಬ ಅನುಭವವನ್ನು ಹೊಂದಬೇಕು. ಆದರೆ ಜನರನ್ನು ಕೇಳಿ ನೋಡಿ, ’ಹಿಂದಿನಿಂದ ಹಾಗೇ ಬಂದಿದ್ದು’ ಎನ್ನುತ್ತಾರೆ ಅಷ್ಟೆ. ಅಲ್ಲಿ ಅವರಿಗಿರುವ ತಿಳಿವಳಿಕೆಯೆಂದರೆ ತಮ್ಮ ಜಾತಿಯವರು ಆ ಜಾತಿಯವನನ್ನು ಮುಟ್ಟಿಸಿಕೊಳ್ಳಬಾರದು ಅಂತ ಅಷ್ಟೇ. ಏಕೆ? ಎಂದರೆ ಯಾವ ಯಾವ ಆಚರಣೆಯನ್ನು ಮಾಡಬೇಕು ಇಲ್ಲ ಮಾಡಬಾರದು ಎಂಬುದನ್ನು ಅವರವರ ಹಿರಿಯರನ್ನು ನೋಡಿ ಕಲಿತಿರುತ್ತಾರೆ. ಇಂಥ ಆಚರಣೆಗಳ ಹಿಂದೆ ಅವನ್ನು ಏಕೆ ಮಾಡಬೇಕು ಅಥವಾ ಮಾಡಬಾರದು ಎಂಬ ಕಾರಣಗಳು ಇವೆ ಎಂಬುದಾಗಿ ಅವರಿಗೆ ಗೊತ್ತಿಲ್ಲ. ಹಿರಿಯರು ಅದನ್ನು ಹೇಳಿಲ್ಲ. ಹಾಗಾಗಿ ಈ ಆಚರಣೆಯಲ್ಲಿ ಅಂಥದ್ದೊಂದು ಅನುಭವ ಇದೆ ಎನ್ನುವುದು ನಮ್ಮ ಸಹಜ ಜ್ಞಾನಕ್ಕೆ ವಿರುದ್ಧವಾದ ವಿಚಾರ.
ಇಂಥ ಆಚರಣೆಗಳು ಪ್ರಚಲಿತದಲ್ಲಿರುವ ರೀತಿಗಳನ್ನೇ ನೋಡಿ. ಎಲ್ಲಾ ಜಾತಿಯವರೂ ಮಡಿ ಮೈಲಿಗೆಗಳ ಆಚರಣೆಗಳನ್ನು ಹೊಂದಿರುತ್ತಾರೆ. ಮಡಿ, ಮೈಲಿಗೆ, ಮುಟ್ಟು ಚಿಟ್ಟು. ಸೂತಕಗಳನ್ನೆಲ್ಲ ಈ ಮೇಲಿನ ಎಲ್ಲಾ ಜಾತಿಯವರೂ ತಂತಮ್ಮ ಜಾತಿಯ ಹಾಗೂ ಕುಟುಂಬದ ಒಳಗೆ ಅಥವಾ ಅನ್ಯ ಜಾತಿಗಳೊಡನೆ ಅಷ್ಟೇ ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಹಾಗೂ ಇಂಥ ಆಚರಣೆಗಳು ಆಯಾ ಜಾತಿಯ ಆಚರಣೆಗಳ ಪ್ರಕಾರವೇ ನಡೆಯುತ್ತವೆ. ಅವನ್ನು ಅವರ ಜಾತಿಯವರು ಹಾಗೂ ಹಿರಿಯರೇ ನಿರ್ಬಂಧಿಸುತ್ತಾರೆಯೇ ಹೊರತೂ ಬೇರೆ ಯಾವ ಜಾತಿಗೂ ಅಲ್ಲಿ ಪ್ರವೇಶವಿಲ್ಲ. ಅವನ್ನು ಪಾಲಿಸದಿದ್ದರೆ ತಮ್ಮ ಜಾತಿಗೆ ಒಳ್ಳೆಯದಾಗುವುದಿಲ್ಲ, ಯಾವುದೋ ದೈವಕ್ಕೆ ಸಿಟ್ಟು ಬರುತ್ತದೆ, ಎಂಬುದಾಗಿ ಹೆದರುತ್ತಾರೆ. ಅಂದರೆ ಬೇರೆಯವರು ಆ ಆಚರಣೆಯನ್ನು ಬಲಾತ್ಕಾರವಾಗಿ ಆ ಜಾತಿಯ ಮೇಲೆ ಹೇರಿದ್ದಾರೆ, ಅದು ಬ್ರಾಹ್ಮಣರ ಯೋಜನೆ, ಬ್ರಾಹ್ಮಣರ ಮಡಿ ಮೈಲಿಗೆಗಳೇ ಅವರಿಗೆಲ್ಲ ನಿರ್ದೇಶನವನ್ನು ನೀಡುತ್ತವೆ ಎಂದು ನಿರೂಪಿಸುವ ಸಾಧ್ಯತೆಯಿಲ್ಲ. ಹಾಗೆ ಬ್ರಾಹ್ಮಣರು ಅವರ ಮೇಲೆ ಹೇರಿದ್ದಾರೆ ಎನ್ನುವುದು ನಮ್ಮ ಅನುಭವಕ್ಕೆ ವಿರುದ್ಧವಾದ ವಿಚಾರ.
ಈ ಮೇಲಿನ ಸಂದರ್ಭಗಳನ್ನು ಗಮನಿಸಿದಾಗ, ಜಾತಿಯ ಮೇಲು ಕೀಳುಗಳನ್ನು ಕೂಡ ಬ್ರಾಹ್ಮಣರೇ ಮಾಡಿದ್ದು ಎಂಬ ಹೇಳಿಕೆ ಭಾರತೀಯರ ಅನುಭವಕ್ಕೆ ವಿರುದ್ಧವಾಗುತ್ತದೆ. ಒಂದು ಊರಿನಲ್ಲಿ ನಾಲ್ಕಾರು ಬ್ರಾಹ್ಮಣ ಕುಟುಂಬಗಳಿದ್ದರೆ ಹೆಚ್ಚು. ಬಹಳಷ್ಟು ಊರುಗಳಲ್ಲಿ ಅವೂ ಇರುವುದಿಲ್ಲ. ಅವರಲ್ಲಿ ಕೆಲವು ಕರ್ಮಠರು ಹತ್ತಿರ ಬಂದವರನ್ನೆಲ್ಲ ಹಚಾ ಹುಚಾ ಅನ್ನುತ್ತಿರುತ್ತಾರೆ. ಅಂದಾಕ್ಷಣ ಅವರೇ ಆ ಊರಿನ ಆಚರಣೆಗಳನ್ನೆಲ್ಲ ಹುಟ್ಟುಹಾಕಿ ನಿಗ್ರಹಿಸುತ್ತಿದ್ದಾರೆ ಎಂಬುದಾಗಿ ಹೇಗೆ ನಿರ್ಣಯಿಸುತ್ತೀರಿ? ಬದಲಾಗಿ ನಮ್ಮ ಸಂಪ್ರದಾಯಗಳ ಪರಿಚಯವಿರುವವರಿಗೆ ಆ ಬ್ರಾಹ್ಮಣರು ತಮ್ಮ ಜಾತಿಯ ಆಚರಣೆಗಳನ್ನು ಅತಿಯಾಗಿ ಆಚರಿಸುತ್ತಿದ್ದಾರೆ ಎನ್ನಿಸಲಿಕ್ಕೆ ಮಾತ್ರವೇ ಸಾಧ್ಯ. ಅಂಥ ಬ್ರಾಹ್ಮಣರ ಮನೆಯೊಳಗೆ ಮನೆಯ ಸದಸ್ಯರೊಳಗೇ ಯಾರು ಯಾರನ್ನು ಯಾವಾಗ ಮುಟ್ಟಬಹುದು, ಮುಟ್ಟಬಾರದು, ಯಾವಾಗ ಎಲ್ಲಿ ಪ್ರವೇಶಿಸಬಾರದು, ಎಂಬ ದೊಡ್ಡ ಕವಾಯಿತು ದಿನನಿತ್ಯ ನಡೆಯುತ್ತಿರುತ್ತದೆ. ಇಂಥ ಮಡಿವಂತ ಬ್ರಾಹ್ಮಣರು ಉಳಿದ ಜಾತಿಯ ಜನರ ಜೊತೆಗೆ ವ್ಯವಹರಿಸುತ್ತಿರುವಾಗ ತಮ್ಮ ಇಂಥ ಆಚರಣೆಗಳನ್ನು ಅಲ್ಲೂ ಪಾಲಿಸುತ್ತಾರೆ. ಬ್ರಾಹ್ಮಣರ ಇಂಥ ಜಾತಿ ಆಚರಣೆಗಳನ್ನೇ ಉದಾಹರಿಸಿ ಅದು ಸಾಮಾಜಿಕ ವ್ಯವಸ್ಥೆ ಎನ್ನಲಾಗುತ್ತದೆ. ಒಂದು ಸಮಾಜವೆಂದರೆ ಇಷ್ಟೇ ಅಲ್ಲವಲ್ಲ? ಇಂಥ ಆಚರಣೆಗಳಿಂದಾಗಿ ಉಳಿದ ಜಾತಿಗಳ ಜನರು ಬ್ರಾಹ್ಮಣರಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆಯೇ ವಿನಃ ಆ ಕಾರಣಕ್ಕೇ ಅವರ ಆಧೀನತೆಗೆ ಬಂದು ಬಿಡುವುದಿಲ್ಲ.
ತಾವು ಬ್ರಾಹ್ಮಣರಾಗಿರುವುದರಿಂದ ಈ ಆಚರಣೆಗಳನ್ನು ಸರಿಯಾಗಿ ಪಾಲಿಸಬೇಕೆನ್ನುವ ಒತ್ತಡ ಕೂಡ ಬ್ರಾಹ್ಮಣರಿಗಿರುತ್ತದೆ. ಅವರಲ್ಲೇ ಯಾರಾದರೂ ಅಂಥ ಆಚರಣೆಗಳನ್ನು ಮಾಡದಿದ್ದರೆ ’ಬ್ರಾಹ್ಮಣ ಅಂತಾರಾ ನಿನ್ನ?’ ಎಂದು ಬೈಯುವುದು ಸಾಮಾನ್ಯ. ಬ್ರಾಹ್ಮಣರಾಗಿರುವುದರಿಂದ ಮಡಿ ಮೈಲಿಗೆಗಳನ್ನು ಸರಿಯಾಗಿ ಪಾಲಿಸದಿದ್ದರೆ ಜನರು ತಮ್ಮನ್ನು ನೋಡಿ ನಗಬಹುದು ಎಂಬ ಕುರಿತೂ ಅವರ ಗಮನವಿರುತ್ತದೆ. ಬ್ರಾಹ್ಮಣರೊಳಗೇ ಇರುವ ಬೇರೆ ಬೇರೆ ಜಾತಿಗಳಲ್ಲಿ ತಾವೇ ಇಂಥ ಆಚರಣೆಗಳನ್ನು ಇತರ ಬ್ರಾಹ್ಮಣರಿಗಿಂತ ಚೆನ್ನಾಗಿ ಪಾಲಿಸುತ್ತಿದ್ದೇವೆ ಎಂಬ ಅಹಮಿಕೆ ಇರುತ್ತದೆ. ಬ್ರಾಹ್ಮಣರೇ ಅಂತಲ್ಲ, ಎಲ್ಲ ಜಾತಿಯವರಲ್ಲೂ ಕೂಡ ಇತರ ಜಾತಿಗಳಿಗಿಂತ ತಾವೇ ಜಾತಿಯ ಆಚರಣೆಗಳನ್ನು ತೀರಾ ಕಟ್ಟುನಿಟ್ಟಾಗಿ ಮಾಡುವವರು ಎಂಬ ಅಹಮಿಕೆ ಇರುತ್ತದೆ. ಆಧುನೀಕರಣದ ಪ್ರಕ್ರಿಯೆಯಲ್ಲಿ ಇಂದು ಬ್ರಾಹ್ಮಣರು ತಮ್ಮ ಅನೇಕ ಆಚರಣೆಗಳನ್ನು ಬಿಟ್ಟುಕೊಟ್ಟು ಬದಲಾಗಿ ಹೋಗಿದ್ದಾರೆ, ಆದರೆ ಅವೇ ಊರಿನ ಇತರ ಜಾತಿಗಳು ಅವನ್ನು ಇನ್ನೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿವೆ. ಬ್ರಾಹ್ಮಣರು ಅವನ್ನು ಬಿಟ್ಟರು ಎಂದು ಇತರ ಜಾತಿಗಳೇನೂ ಅವನ್ನು ಬಿಟ್ಟುಹಾಕುವುದಿಲ್ಲ. ಅವರಿಗೆ ತಮ್ಮ ಆಚರಣೆಗಳನ್ನು ಬಿಡಲಿಕ್ಕೆ ತಮ್ಮದೇ ಕಾರಣಗಳಿದ್ದರೆ ಮಾತ್ರ ಬಿಡುತ್ತಾರೆ.
ಪರಿಸ್ಥಿತಿ ಹೀಗಿರುವಾಗ ಬ್ರಾಹ್ಮಣರ ಮಡಿ ಹಾಳಾಗಿ ಹೋದರೆ ಎಲ್ಲಾ ಜಾತಿಗಳೂ ಬದಲಾಗಿ ಬಿಡುತ್ತವೆ ಎಂಬ ತರ್ಕ ಎಲ್ಲಿಂದ ಹುಟ್ಟಿಕೊಂಡಿತು? ಈ ಸಮಾಜದ ಅಧ್ಯಯನದಿಂದಂತೂ ಅಲ್ಲ. ಅದು ಬ್ರಿಟಿಷರ ಕಾಲದ ಜಾತಿ ವ್ಯವಸ್ಥೆಯ ಕಥೆಯಿಂದ ಮಾತ್ರವೇ ಹುಟ್ಟಲು ಸಾಧ್ಯ. ಬ್ರಾಹ್ಮಣರು ಹಿಂದೂಯಿಸಂನ ಪುರೋಹಿತರು ಹಾಗೂ ಅವರೇ ಹಿಂದೂಗಳಿಗೆ ಈ ವ್ಯವಸ್ಥೆಯನ್ನು ಹುಟ್ಟುಹಾಕಿದ್ದಾರೆ ಎಂಬುದೇ ಆ ಕಥೆ. ಈ ವ್ಯವಸ್ಥೆಯು ಯಾವ ಆಧಾರದ ಮೇಲೆ ನಿಂತಿದೆ ಎಂದರೆ ಮಡಿ-ಮೈಲಿಗೆಯ ಆಧಾರದ ಮೇಲೆ. ಕಳೆದ ಶತಮಾನದ ಆದಿ ಭಾಗದಲ್ಲಿ ಬೂಗ್ಲೆ ಎಂಬ ವಿದ್ವಾಂಸನಿಂದ ಹಿಡಿದು ಅದೇ ಶತಮಾನದ ಮಧ್ಯಭಾಗದಲ್ಲಿ ಬರೆದ ಡ್ಯೂಮೋ ಎಂಬವನ ವರೆಗೆ ಈ ಮಡಿ-ಮೈಲಿಗೆಯ ಸಾಮಾಜಿಕ ನಿರೂಪಣೆಗಳು ಬೆಳೆದವು. ಬೂಗ್ಲೆಯ ಪ್ರಕಾರ ಜಾತಿ ವ್ಯವಸ್ಥೆಯ ಮೇಲು-ಕೀಳುಗಳು ಶುದ್ಧತೆ ಅಶುದ್ಧತೆಯ ಕಲ್ಪನೆಯನ್ನು ಆಧರಿಸಿವೆ. ಬ್ರಾಹ್ಮಣರು ಶುದ್ಧತೆಗೆ ತಾವೇ ಮಾನದಂಡ ಎಂಬದಾಗಿ ಸ್ಥಾಪಿಸಿಕೊಂಡಿದ್ದಾರೆ. ಉಳಿದವರು ಅವರನ್ನು ಎಷ್ಟೆಷ್ಟು ಅನುಕರಿಸುತ್ತಾರೋ ಅಷ್ಟಷ್ಟು ಜಾತಿ ಶ್ರೇಣಿಯಲ್ಲಿ ಮೇಲಿನ ಸ್ಥಾನ ಪಡೆಯುತ್ತಾರೆ. ಡ್ಯೂಮೊ ಈ ಹೇಳಿಕೆಗಳನ್ನು ಒಂದು ಸುವ್ಯವಸ್ಥಿತವಾದ ಸಿದ್ಧಾಂತವನ್ನಾಗಿ ರೂಪಿಸಿದನು.
ಶುದ್ಧತೆ-ಅಶುದ್ಧತೆ ಏಕೆ ಪಾಶ್ಚಾತ್ಯರ ಸಿದ್ಧಾಂತಗಳಲ್ಲಿ ಪ್ರಾಧಾನ್ಯತೆ ಪಡೆಯುತ್ತದೆಯೆಂದರೆ ಅವರು ಹಿಂದೂಯಿಸಂ ಕೂಡ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿಯಂತೆ ಒಂದು ರಿಲಿಜನ್ನು ಅಂದುಕೊಳ್ಳುತ್ತಾರೆ. ಕ್ಯಾಥೋಲಿಕ್ ರಿಲಿಜನ್ನಿನಲ್ಲಿ ಪುರೋಹಿತರ ಸ್ಥಾನಮಾನವು ಅತ್ಯುಚ್ಚವಾದುದು. ಏಕೆಂದರೆ ಚರ್ಚಿನಲ್ಲಿ ಅವರು ಅತ್ಯಂತ ಪವಿತ್ರರು ಎಂದು ಪರಿಗಣಿಸಲಾಗಿದೆ. ಬ್ರಾಹ್ಮಣರು ಹಿಂದೂಯಿಸಂನ ಪುರೋಹಿತಶಾಹಿಯಾಗಿದ್ದಾರೆ, ಅವರು ಯಜ್ಞ-ಯಾಗಾದಿ ಹಿಂದೂ ವಿಧಿ ಆಚರಣೆಗಳನ್ನು ರೂಪಿಸಿ ಅದರಲ್ಲಿ ಬೇರೆ ಬೇರೆ ಜಾತಿಗಳನ್ನು ತರತಮದಲ್ಲಿ ಒಳಗೊಳ್ಳುತ್ತಾರೆ. ಈ ಹಿಂದೂ ವಿಧಿ ಆಚರಣೆಗಳಲ್ಲಿ ಬ್ರಾಹ್ಮಣರು ಅತ್ಯುಚ್ಚ ಸ್ಥಾನಮಾನವನ್ನು ಹೊಂದುತ್ತಾರೆ, ಹಾಗಾಗಿ ಅವರು ಇತರರಿಗಿಂತ ಪವಿತ್ರರಾಗಿದ್ದಾರೆ ಎಂದು ಹಿಂದೂಗಳು ಭಾವಿಸುತ್ತಾರೆ ಹಾಗೂ ಅದೇ ಅವರ ಜಾತಿ ಸ್ಥಾನಮಾನವನ್ನು ನಿರ್ಧರಿಸುತ್ತದೆ ಎಂಬುದು ಇಂಥವರ ಒಟ್ಟಾರೆ ತರ್ಕ.
ಒಟ್ಟಿನಲ್ಲಿ ಬ್ರಾಹ್ಮಣರು ಹಿಂದೂಯಿಸಂನ ಪುರೋಹಿತಶಾಹಿಯಾಗಿದ್ದಾರೆ ಎಂಬ ತಪ್ಪು ಗ್ರಹಿಕೆಯಿಂದ ಅವರು ಎಲ್ಲ ಜಾತಿಗಳನ್ನೂ ತಮ್ಮ ಮಡಿ ಮೈಲಿಗೆಯ ಮೂಲಕ ನಿಯಂತ್ರಿಸುತ್ತಾರೆ ಎಂಬ ನಿರ್ಣಯ ಹೊರಟಿದೆ ಎಂಬುದು ಸ್ಪಷ್ಟ.