Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಬುದ್ಧನು ವರ್ಣಧರ್ಮವನ್ನು ಅಲ್ಲಗಳೆದಿದ್ದನೆ?

ಬುದ್ಧನು ವರ್ಣಧರ್ಮವನ್ನು ಅಲ್ಲಗಳೆದಿದ್ದನೆ?

by Rajaram Hegde
400 views

ಇಂದಿನ ಪಠ್ಯಪುಸ್ತಕಗಳ ಇತಿಹಾಸವು ಬುದ್ಧನು ಬ್ರಾಹ್ಮಣ ಪುರೋಹಿತಶಾಹಿ ಹಾಗೂ ಜಾತಿವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲಿಕ್ಕೆ   ಬೌಧ್ಧ ಧರ್ಮವನ್ನು ಸ್ಥಾಪಿಸಿದ ಎನ್ನುತ್ತದೆ. ಆದರೆ ಬೌದ್ಧ ಗ್ರಂಥಗಳು ತಿಳಿಸುವ ಪ್ರಕಾರ ಬುದ್ಧನು ಬ್ರಾಹ್ಮಣರು ಹಾಗೂ ವರ್ಣಗಳನ್ನು ಅಲ್ಲಗಳೆದಿರಲಿಲ್ಲ. ಇಂಥ ನಿರೂಪಣೆಗಳು ಬೆಳೆದು ಬರುವುದಕ್ಕೆ ವಸಾಹತು ಕಾಲದ ಕೆಲವು ಐತಿಹಾಸಿಕ ಸನ್ನಿವೇಶಗಳು ಕಾರಣವಾದವು. ಅಂಥ ಸನ್ನಿವೇಶಗಳು ಯಾವವು ಹಾಗೂ ಅಂಥ ನಿರೂಪಣೆಗಳ ಸಮಸ್ಯೆಗಳೇನು ಎಂಬುದನ್ನು ಮುಂದೆ ನೋಡಿ.

ನಮ್ಮ ಇಂದಿನ ಸಾಮಾನ್ಯಜ್ಞಾನದ ಪ್ರಕಾರ ಬುದ್ಧನು ವೈದಿಕ ಯಜ್ಞಯಾಗಾದಿಗಳನ್ನು ಹಾಗೂ ಪುರೋಹಿತಶಾಹಿಯನ್ನು ವಿರೋಧಿಸಿದನು ಹಾಗೂ ವರ್ಣ ವ್ಯವಸ್ಥೆಯನ್ನು ಅಲ್ಲಗಳೆದನು. ಹಾಗೂ ವರ್ಣರಹಿತವಾದ ಸಮಾಜವನ್ನು ಸ್ಥಾಪಿಸಿದನು. ಬೌದ್ಧ ಸಂಘವು ಇಂಥ ವರ್ಣರಹಿತ ಸಮಾಜವಾಗಿದೆ. ಇಂಥ ಬೌದ್ಧ ಧರ್ಮವನ್ನು ಬ್ರಾಹ್ಮಣ ಪುರೋಹಿತಶಾಹಿಯು ಭಾರತದಿಂದ ಓಡಿಸಿ ಮತ್ತೆ ತನ್ನ ಅಧಿಪತ್ಯವನ್ನು ಸ್ಥಾಪಿಸಿ ವರ್ಣವ್ಯವಸ್ಥೆಯನ್ನು ಗಟ್ಟಿಮಾಡಿತು. ಈ ಕಥೆಯು ಒಂದೆಡೆ ಬ್ರಾಹ್ಮಣರನ್ನೂ ಮತ್ತೊಂದೆಡೆ ಬೌದ್ಧರನ್ನೂ ವಿರೋಧಿ ಪಕ್ಷದಲ್ಲಿ ನಿಲ್ಲಿಸಿ ಪ್ರಾಚೀನ ಭಾರತದ ಇತಿಹಾಸವೆಂದರೆ ಇವರಿಬ್ಬರ ನಡುವಿನ ಘೋರ ಯುದ್ಧ ಎಂಬಂತೇ ಚಿತ್ರಿಸುತ್ತದೆ. ಆದರೆ ಈ ಕಥೆಯೇ ಹೇಳುವಂತೆ ಅಂತಿಮ ವಿಜಯವು ಬ್ರಾಹ್ಮಣರದೇ ಆಯಿತು. ಬುದ್ಧನದು ಒಂದು ವಿಫಲವಾದ ಪ್ರತಿಭಟನೆಯಾಯಿತು.

               ಒಂದೊಮ್ಮೆ ಈ ಕಥೆಯು ನಿಜವೇ ಆಗಿದ್ದಲ್ಲಿ ಈ ಕಥೆಯನ್ನು ನಂಬಲಿಕ್ಕೆ ಆಧಾರಗಳು ಇರಬೇಕಾಗುತ್ತವೆ. ಅಂದರೆ ಬುದ್ಧನ ಕುರಿತ ಸಾಹಿತ್ಯದಲ್ಲಿ, ಅಂದರೆ ತ್ರಿಪಿಟಕಗಳಲ್ಲಿ, ಬುದ್ಧನೇ ಹೇಳಿದ್ದಾನೆನ್ನಲಾದ ಹೇಳಿಕೆಗಳಲ್ಲಿ ವರ್ಣವ್ಯವಸ್ಥೆಯ ಕುರಿತಾದ ವಿರೋಧವು ಕಂಡುಬರಬೇಕು. ಆದರೆ ಬೌದ್ಧ ಸಾಹಿತ್ಯದಲ್ಲಿ ನಮಗೆ ಇದಕ್ಕೆ ವ್ಯತಿರಿಕ್ತವಾದ ಆಧಾರಗಳೇ ಸಿಗುತ್ತವೆ. ಉದಾಹರಣೆಗೆ ಸೋನದಂಡ ಸುತ್ತ ಎಂಬ ಭಾಗದಲ್ಲಿ ಬುದ್ಧನು ಸೋನದಂಡನೆಂಬ ಬ್ರಾಹ್ಮಣನಿಗೆ ನಿಜವಾದ ಬ್ರಾಹ್ಮಣ ಎಂದರೆ ಯಾರು ಎಂಬ ಕುರಿತು ತಿಳಿವಳಿಕೆ  ನೀಡಿದ್ದು ಕಂಡುಬರುತ್ತದೆ. ಅವನ ಪ್ರಕಾರ ಹುಟ್ಟು, ವೇದಾಧ್ಯಯನ, ಕುಲ ಹಾಗೂ ರೂಪಗಳು ಬ್ರಾಹ್ಮಣನಾಗಲಿಕ್ಕೆ ಮುಖ್ಯವಲ್ಲ. ಜ್ಞಾನ ಹಾಗೂ ಸದಾಚಾರಗಳನ್ನು ಹೊಂದಿದವನೇ ನಿಜವಾದ ಬ್ರಾಹ್ಮಣ. ಇಂಥದ್ದೇ ಅಭಿಪ್ರಾಯವು ಧಮ್ಮಪದದ ಕೊನೆಯ ಅಧ್ಯಾಯದಲ್ಲಿ ಬರುತ್ತದೆ. ಬಹುಶಃ ಈ ಚರ್ಚೆಗೆ ಹಿನ್ನೆಲೆಯಾಗಿ ಆ ಕಾಲದಲ್ಲಿ ಈ ಮೇಲಿನ ಆರೂ ಲಕ್ಷಣಗಳನ್ನೂ ಬ್ರಾಹ್ಮಣನಿಗೆ ಆರೋಪಿಸುವ ಪದ್ಧತಿ ಇತ್ತು ಹಾಗೂ ಬುದ್ಧನು  ಆ ಕುರಿತು ತನ್ನ ನಿರೂಪಣೆಯನ್ನು ನೀಡುತ್ತಿದ್ದಾನೆ. ಪ್ರಾಚೀನ ಕಾಲದ ಉಪನಿಷತ್ತುಗಳು, ಮಹಾಭಾರತ ಇತ್ಯಾದಿ ಕೃತಿಗಳೂ ನಿಜವಾದ ಬ್ರಾಹ್ಮಣ ಯಾರು ಎಂಬ ಕುರಿತು ಇಂಥದ್ದೇ ಜಿಜ್ಞಾಸೆ ನಡೆಸಿವೆ ಎಂಬುದು ಗಮನಾರ್ಹ. ಅಂದರೆ ಬುದ್ಧನಲ್ಲಿ ನಿಜವಾದ ಬ್ರಾಹ್ಮಣ ಯಾರು ಎಂಬ ಜಿಜ್ಞಾಸೆ ಅಸ್ತಿತ್ವದಲ್ಲಿತ್ತೇ ವಿನಃ ಬ್ರಾಹ್ಮಣರ ಕುರಿತು ದ್ವೇಷವಾಗಲೀ, ವರ್ಣಧರ್ಮದ ಕುರಿತ ವಿರೋಧವಾಗಲೀ ಇರಲಿಲ್ಲ.

               ಈ ಮೇಲಿನ ಅಂಶವು ತ್ರಿಪಿಟಕಗಳ ಇನ್ನೂ ಕೆಲವು ಭಾಗಗಳನ್ನು ನೋಡಿದಾಗ ಧೃಡಪಡುತ್ತದೆ. ಅಗ್ಗನ್ನ ಸುತ್ತ ಎಂಬ ಭಾಗದಲ್ಲಿ ಬುದ್ಧನು ನಾಲ್ಕೂ ವರ್ಣಗಳೂ ಧರ್ಮಪ್ರಕಾರವೇ ರಚಿತವಾಗಿವೆ ಎಂಬುದಕ್ಕೆ ಕಥೆಯ ಮೂಲಕ ದೃಷ್ಟಾಂತಗಳನ್ನು ನೀಡುತ್ತಾನೆ. ಅವುಗಳಲ್ಲಿ ಕ್ಷತ್ರಿಯ ವರ್ಣಕ್ಕೆ ಎಲ್ಲರಿಗಿಂತಲೂ ಮೊದಲ ಸ್ಥಾನವನ್ನು ನೀಡುತ್ತಾನೆ. ಆದರೆ ಜ್ಞಾನ ಮತ್ತು ಸದ್ಗುಣನ್ನು ಹೊಂದಿದವನು ಎಲ್ಲರಿಗಿಂತಲೂ ಶ್ರೇಷ್ಠತಮ ಎಂಬ ಬ್ರಹ್ಮನ ಹೇಳಿಕೆಯನ್ನು ತಾನು ಒಪ್ಪುವುದಾಗಿ ತಿಳಿಸುತ್ತಾನೆ. ಇದು ವರ್ಣವ್ಯವಸ್ಥೆಯ ವಿರೋಧವೆಂಬುದಾಗಿ ಯಾರೂ ಹೇಳಲಾರರು. ಹಾಗಾಗಿ ಈಗಿರುವ ಸ್ವೀಕೃತ ವಿವರಣೆಗಳು ನಿರಾಧಾರವಾಗಿವೆ ಎಂಬುದಂತೂ ಸ್ಪಷ್ಟ. ಬುದ್ಧನ ಹೇಳಿಕೆಯ ಸಂದರ್ಭವನ್ನು ಪ್ರಾಚೀನ ಕಾಲದಲ್ಲಿಟ್ಟು ಬೇರೊಂದು ಯಥಾರ್ಥವಾದ ವಿವರಣೆಯನ್ನು ನೀಡಬೇಕಾದ ಅಗತ್ಯವಂತೂ ಇದೆ. ಅದಕ್ಕೆ ಸೂಕ್ತ ತಯಾರಿ ನನ್ನಲ್ಲಿಲ್ಲ. ಆದರೂ ಸದ್ಯಕ್ಕೆ ವಿದ್ವಾಂಸರು ಈಗಾಗಲೇ ಗಮನಿಸಿದ ಕೆಲವು ವಿಷಯಗಳನ್ನು ತಿಳಿಸಬಹುದು. 

               ಬುದ್ಧನ ಮಾರ್ಗವು ಶ್ರಮಣ ಪರಂಪರೆಯಾಗಿತ್ತು. ಅವನ ಸಂಘಗಳ ಸದಸ್ಯರು ಭಿಕ್ಷುಗಳಾಗಿದ್ದರು. ಈ ಭಿಕ್ಷುಗಳಲ್ಲಿ ಬ್ರಾಹ್ಮಣರಾದಿಯಾಗಿ ಎಲ್ಲಾ ವರ್ಣದವರೂ ತಮ್ಮ ವರ್ಣ, ಅಧಿಕಾರ, ಅಂತಸ್ತುಗಳ ಜೊತೆಗೇ ತಮ್ಮ ಆಸ್ತಿ, ಬಂಧುತ್ವಗಳನ್ನೂ ತೊರೆದು ಬಂದವರಾಗಿದ್ದರು ಹಾಗೂ ಅಷ್ಟಾಂಗ ಮಾರ್ಗದ ಮೂಲಕ ಸಂನ್ಯಾಸವನ್ನು ಆಚರಿಸುವವರಾಗಿದ್ದರು. ಇಂದು ನಾವು ಈ ಸಂಘವನ್ನೇ ಬುದ್ಧಿಸಂ ಎಂಬುದಾಗಿ ಗ್ರಹಿಸುತ್ತೇವೆ. ಭಿಕ್ಷುಗಳು ನಿರಂತರವಾಗಿ ಪರ್ಯಟನೆ ಮಾಡುತ್ತಾ ಸಂಸಾರಸ್ಥರ ಮನೆಗಳಲ್ಲಿ ಸಂಗ್ರಹಿಸಿದ ಭಿಕ್ಷೆಯಿಂದ ಜೀವಿಸಬೇಕಿತ್ತು. ಅಂಥ ಸಂಸಾರಸ್ಥರಲ್ಲೇ ಅನೇಕರು ಸಂಸಾರದೊಳಗೆ ಇದ್ದುಕೊಂಡೇ ಬೌದ್ಧ ಉಪಾಸಕರಾಗಿ ಬದಲಾಗಿದ್ದರು. ಹಾಗೂ ಬೌದ್ಧ ಸಂಘಗಳು ಕೂಡ ಇಂಥ ಸಂಸಾರಸ್ಥ ಉಪಾಸಕರನ್ನೇ ತಮ್ಮ ಐಹಿಕ ನಿರ್ವಹಣೆಗಾಗಿ ಆಧರಿಸಿದ್ದವು. ವರ್ಣಧರ್ಮವು ಈ ಸಂಸಾರಸ್ಥ ಉಪಾಸಕರ ಭಾಗವೇ ಆಗಿತ್ತು. ಭಿಕ್ಷುಗಳು ಸಂಸಾರವನ್ನು ತೊರೆದವರಾಗಿದ್ದರೂ ಕೂಡ ಇಂಥ ಸಂಸಾರದ ಅಸ್ತಿತ್ವವನ್ನು ನಿರಾಕರಿಸುವ ಪ್ರಶ್ನೆಯೇ ಇರಲಿಲ್ಲ.

               ಬುದ್ಧನ ಹೇಳಿಕೆಗಳು ಸಂಸಾರವನ್ನು ತೊರೆದು ಬಂದ ಸಂಘದ ಸದಸ್ಯರಿಗೆ ಮಾತ್ರವೇ ಅನ್ವಯವಾಗುತ್ತವೆ. ಬುದ್ಧನು ವಿಭಿನ್ನ ವರ್ಣಗಳಿಂದ ಬಂದ ಭಿಕ್ಷುಗಳ ಜೊತೆಗೆ ಸಂವಾದ ನಡೆಸುತ್ತಿದ್ದನು. ಇಂಥ ಸಂದರ್ಭದಲ್ಲಿ ಬುದ್ಧನು ಬ್ರಾಹ್ಮಣಾದಿ ವರ್ಣಗಳ ಅಸ್ತಿತ್ವವನ್ನು ಒಪ್ಪಿಕೊಂಡೇ ಅದರ ಕುರಿತು ತನ್ನದೇ ಶ್ರಮಣ ನಿರೂಪಣೆಯೊಂದನ್ನು ಬೆಳೆಸುತ್ತಾನೆ ಹಾಗೂ ಈ ನಿರೂಪಣೆಯನ್ನು ಆ ಕಾಲದ ಶ್ರಮಣ ಅಥವಾ ಸನ್ಯಾಸ ಪಂಥದ ಸಂದರ್ಭದಲ್ಲಿಟ್ಟೇ ನೋಡಬೇಕಾಗುತ್ತದೆ. ಹಾಗಾಗಿ ಬ್ರಾಹ್ಮಣರ ಕುರಿತು ಶ್ರಮಣ ನಿರೂಪಣೆಯೊಂದನ್ನು ನಾವು ಇಂಥ ಸಂವಾದಗಳಲ್ಲಿ ಕಾಣುತ್ತೇವೆ. ಸಂಸಾರದ ಪ್ರಭೇದಗಳನ್ನೇ ನಾಶಮಾಡುವುದು ಶ್ರಮಣ ಪರಂಪರೆಯ ಉದ್ದೇಶವಾಗಿರಲಿಲ್ಲ. 

               ಬುದ್ಧನು ವರ್ಣಧರ್ಮವನ್ನು ನಿರಾಕರಿಸಿರಲಿಲ್ಲವೆಂಬುದಕ್ಕೆ ಸಾಕಷ್ಟು ಉಲ್ಲೇಖಗಳು ತ್ರಿಪಿಟಕಗಳಲ್ಲಿವೆ ಹಾಗೂ ಬೌದ್ಧರ ಕುರಿತು ಅಧ್ಯಯನ ನಡೆಸಿದ ಅನೇಕ ಪಾಶ್ಚಾತ್ಯ ವಿದ್ವಾಂಸರು ಕೂಡ ಅವುಗಳನ್ನು ಗಮನಿಸಿ  ಬುದ್ಧನು ವರ್ಣವ್ಯವಸ್ಥೆಯನ್ನು ವಿರೋಧಿಸಿರಲಿಲ್ಲ ಎಂದೇ ಹೇಳಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವಾದ ನಂಬಿಕೆಯೇ ಏಕೆ ಸಾಮಾನ್ಯಜ್ಞಾನದ ರೂಪದಲ್ಲಿ ಇಂದು ಪ್ರಚಲಿತದಲ್ಲಿದೆ? ಅಂದರೆ, ಇಂದೇಕೆ ಇಂಥ ಆಧಾರಗಳಿಗೂ ಹೊರತಾಗಿ ಬುದ್ಧನನ್ನು ಬ್ರಾಹ್ಮಣ ಹಾಗೂ ವರ್ಣವ್ಯವಸ್ಥೆಯ ವಿರೋಧಿ ಎಂಬುದೇ ಸತ್ಯ ಎಂಬುದಾಗಿ ನಾವೆಲ್ಲ ನಂಬಿಕೊಂಡಿದ್ದೇವೆ? ಅಷ್ಟೇ ಅಲ್ಲದೇ ಈ ಮೇಲಿನ ಸಂಗತಿಯತ್ತ ಗಮನಸೆಳೆಯುವವರು ನಮಗೇಕೆ ಅಪಾಯಕಾರಿಯಾಗಿ ಕಾಣಿಸುತ್ತಾರೆ? 

               ಈ ಪ್ರಶ್ನೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಆಧುನಿಕ ಕಾಲದಲ್ಲಿ ಬೌಧ್ದರ ಕುರಿತ ಅಧ್ಯಯನಗಳು ಐರೋಪ್ಯ ಸಂಸ್ಕೃತಿಯಲ್ಲಿ ಹುಟ್ಟಿಕೊಂಡ ಒಂದು ನಿರ್ದಿಷ್ಟವಾದ ಐತಿಹಾಸಿಕ ಸಂದರ್ಭಕ್ಕೆ ಬೌದ್ಧಿಕ ಪ್ರತಿಕ್ರಿಯೆಗಳಾಗಿವೆ. ಹಾಗಾಗಿ ಬುದ್ಧನನ್ನು ಒಂದು ನಿರ್ದಿಷ್ಟ ರೀತಿಯ ನಿರೂಪಣೆಗೊಳಪಡಿಸುವ ಒಲವು ಅಂಥ ಅಧ್ಯಯನಗಳಲ್ಲಿ ಪ್ರಬಲವಾಗಿದೆ. ಇಂಥ ನಿರೂಪಣೆಗಳ ಅಬ್ಬರದಲ್ಲಿ ನಿಜವನ್ನು ನೋಡಿ ದಾಖಲಿಸಿದವರ ಧ್ವನಿಗಳೂ ಮೂಲೆಗುಂಪಾಗಿವೆ. ಈ ನಿರ್ದಿಷ್ಟ ಸಂದರ್ಭ ಯಾವುದು?  ಯುರೋಪಿನಲ್ಲಿ  ಅದು ಮಾರ್ಟಿನ್ ಲೂಥರ್ ಎಂಬವನು ಪ್ರಾರಂಭಿಸಿದ ಪ್ರೊಟೆಸ್ಟಾಂಟ್ ಚಳವಳಿ ಹಾಗೂ ಅದರಿಂದ ರೂಪಿತವಾದ ಸೆಕ್ಯುಲರ್ ಚಿಂತನೆಗಳು. ಅಂದರೆ, ರಿಲಿಜನ್ನಿನ ಸಾರ್ವತ್ರಿಕ ಇತಿಹಾಸವೊಂದನ್ನು ಸೆಕ್ಯುಲರ್ ಚಿಂತಕರು ರೂಪಿಸಿದಾಗ ಅದರಲ್ಲಿ ನಿಜವಾಗಿಯೂ ಇದ್ದದ್ದು ಪ್ರೊಟೆಸ್ಟಾಂಟ್ ಗ್ರಹಿಕೆಗಳು. ಅಂದರೆ ರಿಲಿಜನ್ನು ಎಲ್ಲೆಡೆಯಲ್ಲೂ ಇದೆ, ಅದನ್ನು ಮನುಷ್ಯನು ಒಂದು ನಿರ್ದಿಷ್ಟ ಅಗತ್ಯಕ್ಕಾಗಿ ಹುಟ್ಟುಹಾಕಿಕೊಂಡನು, ಆದರೆ ಕಾಲಾಂತರದಲ್ಲಿ ಅದು ಸ್ವಾರ್ಥಸಾಧಕರಿಂದ (ಪುರೋಹಿತಶಾಹಿಗಳಿಂದ) ಹಾಳಾಗಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ, ಹಾಗೂ ಅದನ್ನು ಸುಧಾರಿಸಲು ಒಬ್ಬ ನಾಯಕ ಹುಟ್ಟಿಬರುತ್ತಾನೆ ಎಂಬುದೇ ಆ ಗ್ರಹಿಕೆಯಾಗಿದೆ. ಅಂದರೆ ಪ್ರೊಟೆಸ್ಟಾಂಟಿಸಂ ಎಂಬುದು ರಿಲಿಜನ್ನು ಇದ್ದೆಡೆಯಲ್ಲೆಲ್ಲ ಇರುವ ಹಾಗೂ ಇರಲೇಬೇಕಾದ ಸಂಗತಿಯಾಗಿದೆ ಎಂಬುದು ಇವರ ನಂಬಿಕೆ. ಭಾರತದಲ್ಲೂ ರಿಲಿಜನ್ನಿದೆ ಎಂಬುದು ಹೌದೇ ಆದರೆ ಅಲ್ಲೂ ರಿಲಿಜನ್ನು ಭ್ರಷ್ಟವಾಗುವುದು ಸ್ವಾಭಾವಿಕ ಹಾಗೂ ಪ್ರತಿಭಟನೆ ಹುಟ್ಟಿಕೊಳ್ಳುವುದೂ ಸ್ವಾಭಾವಿಕ. ಈ ಇತಿಹಾಸವು ಸತ್ಯವಾಗಿದ್ದೇ ಹೌದಾದರೆ ಬರೀ ಯುರೋಪಿನಲ್ಲೊಂದೇ ಅಲ್ಲ, ಬೇರೆಡೆಯಲ್ಲೂ ಅದು ಕಾಣಸಿಗಲೇಬೇಕು. ಯುರೋಪಿನ ಸೆಕ್ಯುಲರ್ ವಿದ್ವಾಂಸರಿಗೆ ಈ ಪ್ರೊಟೆಸ್ಟಾಂಟ್ ಸತ್ಯದ ಕುರಿತು ಧೃಡ ನಂಬಿಕೆಯಿತ್ತು. 

               ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನವನ್ನು ಪ್ರಾರಂಭಿಸಿದಾಗ ಮೊದಮೊದಲು ಹಿಂದೂಯಿಸಂ ಕುರಿತಾಗಿಯೇ ಅಧ್ಯಯನಗಳು ನಡೆದವು. ಪ್ರೊಟೆಸ್ಟಾಂಟ್ ದೃಷ್ಟಿಕೋನದ ಪ್ರಭಾವದಿಂದ ಈ ಅಧ್ಯಯನಗಳಲ್ಲಿ ಪೇಗನಿಸಂ ಹಾಗೂ ಭ್ರಷ್ಟ ರಿಲಿಜನ್ನಿನ ಕುರಿತ ಪೂರ್ವಗ್ರಹೀತಗಳು ನಿರ್ಣಾಯಕವಾದವು.  ಹಾಗಾಗಿ ಹಿಂದೂಗಳ ಪಠ್ಯಗಳು, ಡಾಕ್ಟ್ರಿನ್ನುಗಳು, ನಂಬಿಕೆಗಳು ಇತ್ಯಾದಿಗಳ ಕುರಿತು ಶೋಧನೆಗಳು ನಡೆಯುವಾಗ ಬ್ರಾಹ್ಮಣರು ಮುಖ್ಯವಾಗಿ ಕಂಡರು. ಅವರೇ ಹಿಂದೂಗಳ ಪ್ರೀಸ್ಟ್‌ಗಳು, ವರ್ಣವ್ಯವಸ್ಥೆಯು ಹಿಂದೂಯಿಸಂ ರಚಿಸಿಕೊಂಡ ರಿಲಿಜನ್ನಿನ ತರತಮಗಳ ಶ್ರೇಣೀಕರಣವಾಗಿದೆ, ಇತ್ಯಾದಿ ಸತ್ಯಗಳು ಪಾಶ್ಚಾತ್ಯರಿಗೆ ನಿದರ್ಶಿತವಾದವು. ಅಂದರೆ ಇಲ್ಲೊಂದು ಕ್ಯಾಥೋಲಿಕ್ ರಿಲಿಜನ್ನಿನ ಮಾದರಿಯಲ್ಲೇ ಭ್ರಷ್ಟವಾದ ಹೀದನ್ ರಿಲಿಜನ್ನಿರುವುದು ಕಂಡುಬಂದಿತು. ೧೯ನೆಯ ಶತಮಾನದ ಪೂರ್ವಾರ್ಧದಲ್ಲಿ ಪಾಶ್ಚಾತ್ಯರಿಗೆ ತಾವು ರಚಿಸಿಕೊಂಡ ಹಿಂದೂಯಿಸಂನ ಚೌಕಟ್ಟಿಗೆ ಹೊರತಾದ ಮತ್ತೊಂದು ಆಚರಣೆಗಳ ಲೋಕವು ಟಿಬೇಟ್, ಚೀನಾ, ಆಗ್ನೇಯ ಏಶಿಯಾಗಳಲ್ಲಿ ಕಾಣಿಸಿತು. ಅವುಗಳು ಬುದ್ಧನೆಂಬ ವ್ಯಕ್ತಿಗೆ ಸಂಬಂಧಿಸಿದ್ದವು. ಅದರಲ್ಲೂ ಕೂಡ ಇಂಥವೇ ಹೀದನ್ ಆಚರಣೆಗಳು ಮನೆಮಾಡಿದ್ದವು. ಆದರೆ ಈ ರಿಲಿಜನ್ನಿನ ಪ್ರಾಚೀನ ಪಠ್ಯಗಳನ್ನು ಶೋಧಿಸಿ ಭಾಷಾಂತರಿಸಿದಾಗ ಅವತರಿಸಿದ್ದೇ ಬುದ್ಧಿಸಂ ಎಂಬ ಮತ್ತೊಂದು ರಿಲಿಜನ್ನು.

               ೧೯ನೆಯ ಶತಮಾನದಲ್ಲಿ ಬುದ್ಧಿಸಂನ ಹುಟ್ಟಿಗೆ ಭಾರತೀಯ ವಸಾಹತು ಕೂಡಾ ಮತ್ತೊಂದು ಸಂದರ್ಭವನ್ನು ಸೃಷ್ಟಿಸಿತ್ತು. ಅದೆಂದರೆ ಪಾಶ್ಚಾತ್ಯರ ರಾಜ್ಯವಾದ ಭಾರತದಲ್ಲಿ ಕ್ರೈಸ್ತ ರಿಲಿಜನ್ನಿಗೆ ಎಷ್ಟರ ಮಟ್ಟಿಗಿನ ಪ್ರಸ್ತುತತೆ ಇದೆ? ಎಂಬ ಚರ್ಚೆ. ಸೆಕ್ಯುಲರಿಸಂನ ತತ್ವಗಳನ್ನಾಧರಿಸಿ ರೂಪುಗೊಂಡ ವಸಾಹತು ಆಳ್ವಿಕೆಯಲ್ಲಿ ಎದ್ದ ಈ ಚರ್ಚೆಯು ಸಾಕಷ್ಟು ಗಹನವಾಗಿಯೇ ಇತ್ತು. ಕ್ರಿಶ್ಚಿಯಾನಿಟಿಯು ಮನುಕುಲದ ರಿಲಿಜನ್ನುಗಳಲ್ಲೇ ಒಂದು ಅತ್ಯುಚ್ಚ ಹಂತವೆಂಬುದರಲ್ಲಿ ಬ್ರಿಟನ್ನಿನ ಮಿಶನರಿಗಳಿಗಷ್ಟೇ ಅಲ್ಲ, ಯಾವ ಸೆಕ್ಯುಲರ್ ವಿದ್ವಾಂಸರಿಗೂ, ಆಡಳಿತಗಾರರಿಗೂ ಸಂದೇಹವಿರಲಿಲ್ಲ ಎಂಬುದೇನೋ ನಿಜ. ಆದರೆ ಭಾರತದಲ್ಲಿರುವ ರಿಲಿಜನ್ನುಗಳ ಸತ್ಯ ಪ್ರತಿಪಾದನೆಯ ಕುರಿತು ತಟಸ್ಥವಾಗಿರುವ ನೀತಿಯನ್ನು ಅಳವಡಿಸಿಕೊಂಡ ವಸಾಹತು ಸರ್ಕಾರವು ಕ್ರೈಸ್ತ ಮಿಶನರಿಗಳ ಉತ್ಸಾಹಕ್ಕೆ ತಣ್ಣೀರೆರಚಿತು. ಆ ಮೂಲಕ ಭಾರತದಲ್ಲಿ ಕ್ರಿಶ್ಚಿಯಾನಿಟಿಯ ಪ್ರಸಾರಕ್ಕೂ, ಅದರ ಸಾರ್ವತ್ರಿಕ ಮಹತ್ವಕ್ಕೂ ಹಿನ್ನಡೆಯಾಯಿತು ಎಂದಂತೇ.

               ಅದರಲ್ಲೂ ೧೮೫೭ರಲ್ಲಿ ಭಾರತೀಯ ಸಿಪಾಯಿಗಳು, ಆಳರಸು ಬ್ರಿಟಿಷರ ವಿರುದ್ಧ ದಂಗೆಯೆದ್ದರು. ಈ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೂ ಬಣ್ಣಿಸಲಾಗಿದೆ. ಅದು ಬ್ರಿಟಿಷರಿಗೆ ದೊಡ್ಡ ಆಘಾತವನ್ನು ಉಂಟುಮಾಡಿತು ಹಾಗೂ ಭಾರತದಲ್ಲಿ ತಮ್ಮ ಆಳ್ವಿಕೆಯ ಸ್ವರೂಪ ಹೇಗರಬೇಕು ಎಂಬ ಜಿಜ್ಞಾಸೆಗೆ ಎಡೆಮಾಡಿಕೊಟ್ಟಿತು. ಆ ಸಂದರ್ಭದಲ್ಲಿ ವಸಾಹತು ಸರ್ಕಾರವು ಎದುರಿಸಿದ ಪ್ರಮುಖ ಆರೋಪವೆಂದರೆ   ಅದು ತನ್ನ ಸೆಕ್ಯುಲರ್ ನೀತಿಯಿಂದ ಚ್ಯುತವಾಗಿ ಹಿಂದೂಯಿಸಂನ ಆಚರಣೆಗಳಲ್ಲಿ ಸುಧಾರಣೆಯ ಹೆಸರಿನಲ್ಲಿ ಹಸ್ತಕ್ಷೇಪವನ್ನು ಮಾಡಿದೆ ಎಂಬುದು. ಆದ್ದರಿಂದಲೇ ಹಿಂದೂಗಳು ದಂಗೆಯೆದ್ದರು ಎಂಬ ಆರೋಪವನ್ನು ಕೂಡ ಮಾಡಲಾಯಿತು. ಹಾಗೂ ತದನಂತರ ಭಾರತದಲ್ಲಿ ಖಳನಾಯಕನಾಗಿ ಚಿತ್ರಿತವಾಗಿದ್ದ ಕಂಪೆನಿಯ ಆಡಳಿತವನ್ನು ಕಿತ್ತುಹಾಕಿ, ಬ್ರಿಟಿಷ್ ರಾಣಿಯ ನೇರವಾದ ಆಳ್ವಿಕೆಯನ್ನು ಸ್ಥಾಪಿಸಲಾಯಿತು. ಮತ್ತು ರಿಲಿಜನ್ನಿನ ತಟಸ್ಥತೆಯನ್ನು ಒಂದು ಪ್ರಧಾನ ನೀತಿಯನ್ನಾಗಿ ರಾಣಿಯು ಘೋಷಿಸಿದಳು. ಆ ಮೂಲಕ ವಸಾಹತು ಭಾರತದಲ್ಲಿ ಕ್ರಿಶ್ಚಿಯಾನಿಟಿಯೆಂಬ ಮನುಕುಲದ ಅತ್ಯುಚ್ಚ ರಿಲಿಜನ್ನಿನ ಪ್ರಸ್ತುತತೆಯೇ ಪ್ರಶ್ನಾರ್ಹವಾಯಿತು.

                ಆ ಸಂದರ್ಭದಲ್ಲಿ ವಸಾಹತು ಸರ್ಕಾರವು ಸುಧಾರಣೆಗೆ ಒಳಪಡಿಸಿದ ಆಚರಣೆಗಳು ಹಿಂದೂಯಿಸಂನ ಶುದ್ಧ ಆಚರಣೆಗಳಲ್ಲ, ಅವು ಕಾಲಾಂತರದಲ್ಲಿ ಪುರೋಹಿತಶಾಹಿಗಳಿಂದ ಭ್ರಷ್ಟಗೊಂಡ ಆಚರಣೆಗಳಾಗಿವೆ ಎಂಬ ವಾದಕ್ಕೆ ವಿಶೇಷ ಪ್ರಸ್ತುತತೆ ಒದಗಿದ್ದು ಕಂಡುಬರುತ್ತದೆ. ಈ ವಾದವು ವಸಾಹತು ಸರ್ಕಾರದ ಸೆಕ್ಯುಲರ್ ನೀತಿಯ ಸಮರ್ಥನೆಗೆ ಒಂದು ಅಸ್ತ್ರವಾಯಿತು. ಈ ವಾದವು ಮೂಲತಃ ರಿಲಿಜನ್ನುಗಳ ಅವನತಿಯ ಕುರಿತ ಪ್ರೊಟೆಸ್ಟಾಂಟ್ ಕಥೆಯ ಭಾರತೀಯ ಆವೃತ್ತಿ ಅಷ್ಟೆ. ವೈದಿಕ ಕಾಲದಲ್ಲಿ ಹಿಂದೂಗಳ ಮೂಲ ರಿಲಿಜನ್ನು ಶುದ್ಧವಾಗಿಯೇ (ಪ್ರೊಟೆಸ್ಟಾಂಟಿಸಂ ಇದ್ದ ಹಾಗೇ) ಇತ್ತು, ಜಾತಿ ವ್ಯವಸ್ಥೆಯು ಹಿಂದೂಯಿಸಂನ ಮೂಲ ಆಚರಣೆಯಲ್ಲ, ಪುರೋಹಿತಶಾಹಿಯ ಸೃಷ್ಟಿ ಎಂಬ ವಾದವು ಜನಪ್ರಿಯತೆ ಗಳಿಸಿದ್ದು ಈ ಕಾಲದಲ್ಲೇ. ಭಾರತೀಯ ಇತಿಹಾಸದ ಈ ಅಧ್ಯಾಯಕ್ಕೆ ಅರ್ಥಪೂರ್ಣವಾಗಿ ಒದಗಿದ ಮುಂದಿನ ಅಧ್ಯಾಯವೇ ಬುದ್ಧಿಸಂನ ಕಲ್ಪನೆ. ಪ್ರೊಟೆಸ್ಟಾಂಟರ ಕಥೆಯು ಮನುಕುಲದ ಐತಿಹಾಸಿಕ ಸತ್ಯ ಎಂಬುದು ಬುದ್ಧಿಸಂ ಮೂಲಕ ನಿದರ್ಶನವಾಯಿತು.  ಆ ಪ್ರಾಚೀನ ಬುದ್ಧಿಸಂ ಕೂಡ ಇಂದು ತನ್ನ ಆಚರಣೆಗಳಲ್ಲಿ ಭ್ರಷ್ಟವಾಗಿಹೋಗಿದೆ ಎಂಬ ಸತ್ಯವು ಪ್ರೊಟೆಸ್ಟಾಂಟ್ ಇತಿಹಾಸವನ್ನು ಮತ್ತೂ ಗಟ್ಟಿಮಾಡಿತು. ಅಂದರೆ ಬ್ರಿಟಿಷ್ ವಸಾಹತುಶಾಹಿಯ ಸುಧಾರಣೆಗಳು ಭಾರತದಲ್ಲೇ ಇದ್ದ ಪ್ರೊಟೆಸ್ಟಾಂಟ್ ಚಳವಳಿಗಳ ಮುಂದುವರಿದ ರೂಪ ಅಷ್ಟೆ.

               ಈ ಕಥೆಯ ತರ್ಕದ ಪ್ರಕಾರವೇ ಪಾಶ್ಚಾತ್ಯ ವಿದ್ವಾಂಸರು ಪೂರ್ವದೇಶಗಳಲ್ಲಿ ಎರಡು ಪ್ರತ್ಯೇಕ ಬುದ್ಧಿಸಂಗಳನ್ನು ಕಲ್ಪಿಸುವುದು ಅನಿವಾರ್ಯವಾಯಿತು. ಅದರ ಪ್ರಕಾರ ತಾವು ಮಾನವಶಾಸ್ತ್ರೀಯ ಕ್ಷೇತ್ರಕಾರ್ಯಗಳ ಮೂಲಕ ಕಂಡುಕೊಂಡ ಜನಪ್ರಿಯ ಬುದ್ಧಿಸಂ ಇಂದಿನ ಹಿಂದೂಯಿಸಂನಂತೆಯೇ ಆಚರಣೆಯಲ್ಲಿ ಭ್ರಷ್ಟವಾಗಿರುವ ಬುದ್ಧಿಸಂ ಆಗಿದೆ. ಗ್ರಂಥಗಳಲ್ಲಿ ಕಾಣುವ ಬುದ್ಧಿಸಂ ಮೂಲ (ಪ್ರೊಟೆಸ್ಟಾಂಟ್) ಆದರ್ಶಗಳನ್ನು ಬಿಂಬಿಸುವ ಚಳವಳಿಯಾಗಿದೆ. ನಂತರ ಪುರೋಹಿತಶಾಹಿಯ ಕುತಂತ್ರದಿಂದಾಗಿ ಅದು ಭ್ರಷ್ಟವಾಯಿತು. ಇತ್ಯಾದಿ. ಅಂದರೆ ಹಿಂದೂಯಿಸಂ, ಬುದ್ಧಿಸಂ ಎಂಬ ಹೆಸರುಗಳು ಮುಖ್ಯವಲ್ಲ, ಅವುಗಳಲ್ಲಿ ನಿದರ್ಶಿತವಾಗುತ್ತಿರುವ ರಿಲಿಜನ್ನಿನ ಇತಿಹಾಸವು ಮುಖ್ಯ. ಇಂದು ಎಲ್ಲ ರಿಲಿಜನ್ನುಗಳೂ ಭಾರತದಲ್ಲಿ ಭ್ರಷ್ಟವಾಗಿವೆ ಹಾಗೂ ಈ ಸಮಾಜ ಮತ್ತು ಇಲ್ಲಿನ ರಿಲಿಜನ್ನು ಸುಧಾರಣೆಗೆ ಕಾದಿದೆ ಎನ್ನುವುದು ವಸಾಹತು ಶಾಹಿಗೆ ಹಾಗೂ ಅದರ ಬಳುವಳಿಯನ್ನು ಹೊತ್ತವರಿಗೆ ಹೆಚ್ಚು ಅರ್ಥಪೂರ್ಣವಾಗಿ ಕಂಡಿತು. ಹಾಗಾಗಿ ಬುದ್ಧಿಸಂನ ಈ ಇತಿಹಾಸವೇ ಗಟ್ಟಿಯಾಯಿತು.

               ಈ ಹಿನ್ನೆಲೆಯಲ್ಲಿ ಐರೋಪ್ಯ ವಿದ್ವಾಂಸರು ಬುದ್ಧನನ್ನು ಪೌರ್ವಾತ್ಯ ಮಾರ್ಟಿನ್ ಲೂಥರ್ ಎಂದೇ ಏಕೆ ಕರೆದಿದ್ದರು ಎನ್ನುವುದು ಬಹಳ ಮುಖ್ಯ. ಅವನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಬ್ರಾಹ್ಮಿನಿಸಂ ಎಂಬ ಭ್ರಷ್ಟ ರಿಲಿಜನ್ನು ಕ್ಯಾಥಲಿಕ್ ಮತದ ಪಡಿಯಚ್ಚಿನಂತೇ ಅವರಿಗೆ ಕಂಡದ್ದೂ ಕಾಕತಾಳೀಯವೇನಲ್ಲ.  ಬ್ರಾಹ್ಮಿನಿಸಂನಲ್ಲಿ ಅವರೆತ್ತಿದ ಸಮಸ್ಯೆಗಳು ನಿರ್ದಿಷ್ಟವಾಗಿ ಪ್ರೊಟೆಸ್ಟಾಂಟರು ಕ್ಯಾಥೋಲಿಕರ ಕುರಿತು ಎತ್ತಿದ ಸಮಸ್ಯೆಗಳೇ ಆಗಿದ್ದವು. ಅವೆಂದರೆ ಕ್ಯಾಥೋಲಿಕ್ ಪುರೋಹಿತಶಾಹಿ, ರಿಲಿಜನ್ನಿನ ಆಚರಣೆಗಳ ಮೇಲಿನ ಅದರ ಏಕಸ್ವಾಮ್ಯತೆ ಹಾಗೂ ಅದು ರಚಿಸಿದ ಶ್ರೇಣೀಕರಣ. ಭಾರತದಲ್ಲಿ ಅದು ಬ್ರಾಹ್ಮಣರು ಹಾಗೂ ವರ್ಣವ್ಯವಸ್ಥೆಯಾಗಿ ತರ್ಜುಮೆಗೊಂಡವು. ಬುದ್ಧನು ಈ ಪುರೋಹಿತಶಾಹಿಯ ಮೂಲೋತ್ಪಾಟನೆ ಮಾಡಲು ಅವತಾರವೆತ್ತಿರುವುದರಿಂದ ಸ್ವಾಭಾವಿಕವಾಗಿಯೇ ಅವನು ಬ್ರಾಹ್ಮಣರನ್ನು ಹಾಗೂ ವರ್ಣಧರ್ಮವನ್ನು ವಿರೋಧಿಸಿದನೆನ್ನುವುದು ಅವರ ನಿರೀಕ್ಷೆಯಾಗುತ್ತದೆ. ಆದರೆ ಬುದ್ಧನನ್ನು ಮಾರ್ಟಿನ್ ಲೂಥರ್ ಎಂಬುದಾಗಿ ಕರೆಯುವಾಗ ಹಾಗೂ ರಿಲಿಜನ್ನಿನ ಕುರಿತ ಪ್ರೊಟೆಸ್ಟಾಂಟ್ ಇತಿಹಾಸವನ್ನು ಸಮಸ್ತ ಮನುಕುಲಕ್ಕೇ ವಿಸ್ತರಿಸಿದಾಗ ಹುಟ್ಟುವ ನಿರೀಕ್ಷೆಗಳೇ ಬೇರೆ, ಇಲ್ಲಿನ ಗ್ರಂಥಗಳು ಏನನ್ನು ಹೇಳುತ್ತವೆ ಎನ್ನುವುದೇ ಬೇರೆ. ಗ್ರಂಥಗಳ ವಿವರಗಳು ಆ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಕಾಣಿಸುತ್ತವೆ. ಬುದ್ಧನು ಬ್ರಾಹ್ಮಣರ ಕುರಿತು ಏನು ಹೇಳಿದ್ದಾನೆಂಬುದು ಅದಕ್ಕೊಂದು ದೃಷ್ಟಾಂತ.

               ಅಷ್ಟೇ ಅಲ್ಲ ಈ ಪ್ರೊಟೆಸ್ಟಾಂಟ್ ಕಥೆಯ ಪ್ರಕಾರ ಬುದ್ಧನು ಮೂಲದಲ್ಲಿ ಶುದ್ಧವಾಗಿದ್ದು ಅವನ ಕಾಲದಲ್ಲಿ ಭ್ರಷ್ಟವಾದ ರಿಲಿಜನ್ನನ್ನೇ ಸುಧಾರಿಸುವವನಾಗಿರಬೇಕು. ನಾವೆಲ್ಲ ಅವನು ಹಿಂದೂಯಿಸಂನ ಪುರೋಹಿತರಾದ ಬ್ರಾಹ್ಮಣರ ಆಚರಣೆಯಲ್ಲಿ ಪ್ರಾಣಿಹಿಂಸೆಯನ್ನು ನಿಲ್ಲಿಸಿದ, ಹಿಂದೂಯಿಸಂನ ಜಾತಿ ವ್ಯವಸ್ಥೆಯನ್ನು ತೊಡೆದ ಇತ್ಯಾದಿಗಳನ್ನೇ ಹೇಳುತ್ತೇವೆ.  ಹಾಗಿದ್ದ ಪಕ್ಷದಲ್ಲಿ ಬುದ್ಧಿಸಂ ಎಂಬುದು ಹಿಂದೂಯಿಸಂನ ಶುದ್ಧ ರೂಪವೇ ಆಗಿರಬೇಕಲ್ಲ? ವಿದ್ವಾಂಸರು ಅದೇ ನಿಜವಾದ ಹಿಂದೂಯಿಸಂ ಎಂದೇಕೆ ಕರೆಯಲಿಲ್ಲ? ಪ್ರೊಟೆಸ್ಟಾಂಟರು ತಾವೇ ಕ್ರಿಶ್ಚಿಯಾನಿಟಿಯ ಶುದ್ಧ ರೂಪ ಎನ್ನುತ್ತಾರೆ. ಆದರೆ ನಾವು ಬುದ್ಧಿಸಂ ಹಿಂದೂಯಿಸಂಗಿಂತ ಬೇರೆ ಎಂದೇ ಏಕೆ ತಿಳಿಯುತ್ತೇವೆ? ಈ ಒಂದು ಸಾಮಾನ್ಯ ಪ್ರಶ್ನೆಗೆ ಭಾರತೀಯರಲ್ಲಿ ಉತ್ತರವಿಲ್ಲ. ಕ್ರಿಶ್ಚಿಯನ್ನರು ಬುದ್ಧನನ್ನು ಮಾರ್ಟಿನ್ ಲೂಥರನಿಗೆ ಹೋಲಿಸುವಾಗ ಕ್ರಿಶ್ಚಿಯನ್ ಗಾಡ್ ಮಾನವನಿಗೆ ನೀಡಿದ ಶುದ್ಧ ರಿಲಿಜನ್ನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು. ಹಾಗಾಗಿ ಅವರಿಗೆ ಬುದ್ಧನು ಪ್ರೊಟೆಸ್ಟಾಂಟ್ ಸುಧಾರಕನಾಗಿ ಕಾಣಿಸಿದನು. ರಿಲಿಜನ್ನೆಂದರೆ ಏನೆಂಬುದೇ ಗೊತ್ತಿರದ ಭಾರತೀಯರಿಗೆ ಬುದ್ಧನು ಸುಧಾರಿಸಿದ್ದು ಏನನ್ನು ಎಂಬುದು ತಿಳಿಯುವುದಾದರೂ ಹೇಗೆ ಸಾಧ್ಯ?

               ಪ್ರೊಟೆಸ್ಟಾಂಟ್ ಇತಿಹಾಸವೇ ಮನುಕುಲದ ಇತಿಹಾಸ ಎಂದು ಒಪ್ಪಿಕೊಂಡವರಿಗೆ ಇದೊಂದು ಸಮಸ್ಯೆಯೇ ಅಲ್ಲದಿರಬಹುದು. ಬುದ್ಧನ ಕುರಿತು ಯಾರು ಏನನ್ನೇ ತರ್ಕಿಸುವುದಾದರೂ ಕೂಡ ಬೌದ್ಧರ ಗ್ರಂಥಗಳನ್ನು ಆಧರಿಸಿಯೇ ಅದನ್ನು ನಡೆಸಬೇಕು ಎಂಬ ನಿರ್ಬಂಧವನ್ನು ಒಪ್ಪಿಕೊಳ್ಳುವುದಾದರೆ ಇಲ್ಲೊಂದು ಸಮಸ್ಯೆ ಇದೆ ಎಂದೇ ಪರಿಗಣಿಸಬೇಕಾಗುತ್ತದೆ. ಇಲ್ಲ, ಇದನ್ನು ಉಪೇಕ್ಷಿಸಿ ಬೌದ್ಧ ಗ್ರಂಥಗಳು ಪಾಶ್ಚಾತ್ಯರ ನಿರೀಕ್ಷೆಗೆ ತದ್ವತ್ತಾಗಿವೆ ಎಂದು ವಾದಿಸುವುದೆಂದರೆ ಪ್ರೊಟೆಸ್ಟಾಂಟ್ ಇತಿಹಾಸವೇ ಮನುಕುಲದ ಇತಿಹಾಸ ಎಂದು ಒಪ್ಪಿಕೊಂಡ ಹಾಗೆಯೇ. ಆದರೆ ಪ್ರೊಟೆಸ್ಟಾಂಟ್ ಇತಿಹಾಸದಿಂದಲೇ ಬುದ್ಧನ ಕುರಿತು ಹುಟ್ಟಿರುವ ಗೊಂದಲಗಳು, ತಪ್ಪು ತಿಳಿವಳಿಕೆಗಳು ಮಾತ್ರ ಅನೂಚಾನವಾಗಿ ಮುಂದುವರೆಯುತ್ತವೆ ಅಷ್ಟೆ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp