Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ದೇವತೆಗಳನ್ನು ಹಾಗೂ ಆಚರಣೆಗಳನ್ನು ಬದಲಾಯಿಸುವುದು ಮತಾಂತರವೆ?

ದೇವತೆಗಳನ್ನು ಹಾಗೂ ಆಚರಣೆಗಳನ್ನು ಬದಲಾಯಿಸುವುದು ಮತಾಂತರವೆ?

by Rajaram Hegde
158 views

ಸತ್ಯವಾದ ರಿಲಿಜನ್ನು ಮಾತ್ರವೇ ಮನುಷ್ಯನ ಉದ್ಧಾರಕ್ಕೆ ಮಾರ್ಗವಾಗಬಲ್ಲದು. ಕನ್ವರ್ಶನ್ ಎಂದರೆ ಸುಳ್ಳು ರಿಲಿಜನ್ನಿನಿಂದ ಸತ್ಯವಾದ ರಿಲಿಜನ್ನಿಗೆ ಪರಿವರ್ತನೆಯಾಗುವುದು. ಮನುಷ್ಯನಿಗೆ ಈ ಹಕ್ಕನ್ನು ನೀಡುವುದು ರಿಲಿಜನ್ನುಗಳ ಹಿನ್ನೆಲೆಯಿಂದ ಅತ್ಯಗತ್ಯ. ಆದರೆ ಭಾರತೀಯ ಸಂಪ್ರದಾಯಗಳಲ್ಲಿ ಈ ಪರಿಕಲ್ಪನೆ ಇಲ್ಲ.

ರಿಲಿಜನ್ ಎಂಬ ಶಬ್ದವನ್ನು ಕೇವಲ ಧರ್ಮ ಎಂಬುದಾಗಿ ಮಾತ್ರವೇ ನಾವು ಭಾಷಾಂತರಿಸಿಲ್ಲ. ಅದಕ್ಕೆ ’ಮತ’ ಎಂಬ ಮತ್ತೊಂದು ಶಬ್ದವನ್ನು ಕೂಡ ಬಳಸಿಕೊಂಡಿದ್ದೇವೆ. ’ಮತಾಂತರ’ ಎಂಬ ಶಬ್ದವು ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಒಂದು ರಿಲಿಜನ್ನಿನಿಂದ ಮತ್ತೊಂದು ರಿಲಿಜನ್ನಿಗೆ ಬದಲಾವಣೆ ಹೊಂದುವುದನ್ನು ಆಂಗ್ಲ  ಭಾಷೆಯಲ್ಲಿ ಕನ್ವರ್ಶನ್ ಎನ್ನುತ್ತಾರೆ. ಅದನ್ನು ಕನ್ನಡದಲ್ಲಿ ನಾವು ಮತಾಂತರ ಎಂಬುದಾಗಿ ತರ್ಜುಮೆ ಮಾಡಿಕೊಂಡಿದ್ದೇವೆ. ರಿಲಿಜನ್ನನ್ನು ಧರ್ಮ ಎಂದಮೇಲೆ ಕನ್ವರ್ಶನ್ ಧರ್ಮಾಂತರ ಆಗದೇ ಮತಾಂತರ ಏಕಾಯಿತು ಎಂಬುದು ನನಗಿನ್ನೂ ರಹಸ್ಯವಾಗಿಯೇ ಉಳಿದಿದೆ. ಅದೇನೇ ಇರಲಿ, ಮತಾಂತರವನ್ನು ಕನ್ವರ್ಶನ್ ಶಬ್ದಕ್ಕೆ ಪ್ರತಿಯಾಗಿ ಬಳಸಿದರೆ ಏನೇನು ಸಮಸ್ಯೆಗಳು ಏಳುತ್ತವೆ ಎಂಬುದನ್ನು ನೋಡೋಣ.

          ಸೆಕ್ಯುಲರ್ ಪ್ರಭುತ್ವದಲ್ಲಿ ವ್ಯಕ್ತಿಯೊಬ್ಬನಿಗೆ ತನ್ನ ರಿಲಿಜನ್ನನ್ನು ಆಯ್ಕೆ ಮಾಡಿಕೊಳ್ಳುವ ಹಾಗೂ ಬದಲಾಯಿಸುವ ಹಕ್ಕನ್ನು ನೀಡಲಾಗುತ್ತದೆ. ಹಾಗೂ ಪ್ರಜಾ ಪ್ರಭುತ್ವಕ್ಕೂ ಅದು ಒಂದು ಮೌಲ್ಯ. ಆದರೆ ಇಂಥ ಉತ್ತಮ ಮೌಲ್ಯವೇಕೆ ಭಾರತದಲ್ಲಿ ಇಷ್ಟು ಸೂಕ್ಷ್ಮ ಹಾಗೂ ಅಪಾಯಕಾರಿಯಾದ ವಿಚಾರವಾಗಿ  ಪರಿಣಮಿಸಿದೆ ಎಂಬುದು ಕುತೂಹಲಕಾರಿಯಾಗಿದೆ. ಪ್ರಜೆಗಳು ತಮ್ಮ ಹಕ್ಕಿಗಾಗಿ ಪ್ರಭುತ್ವದ ವಿರುದ್ಧ ಹೋರಾಡುವುದನ್ನು ಇತಿಹಾಸದ ಪುಟಗಳಲ್ಲಿ ನೋಡಿದ್ದೀರಿ. ಆದರೆ ಪ್ರಭುತ್ವವೇ  ಹಕ್ಕನ್ನು ನೀಡುತ್ತೇನೆ ಎಂದರೂ ಅದನ್ನು ಪಡೆಯಲು ಪ್ರಜೆಗಳೇ ತಕರಾರು ಎತ್ತುತ್ತಿರುವ ಈ ಇತಿಹಾಸವನ್ನು ಹೇಗೆ ಅರ್ಥೈಸುವುದು? ಹಿಂದೂ ಮೂಲಭೂತವಾದಿಗಳು ಇದಕ್ಕೆಲ್ಲ ಕಾರಣ ಎಂಬುದು ಸೆಕ್ಯುಲರ್‌ವಾದಿಗಳ ತತ್‌ಕ್ಷಣದ ಪ್ರತಿಕ್ರಿಯೆ. ಆದರೆ ಇಷ್ಟು ಸರಳವಾಗಿ ಈ ಸಮಸ್ಯೆಯನ್ನು ಮೂಲೆಗೊತ್ತುವಂತಿಲ್ಲ.

          ಮತಾಂತರದ ಕುರಿತು ಹಿಂದೂ ನೇತಾರರು ಎಂದೂ ಸಂತೋಷ ಪಟ್ಟಿದ್ದು ಕಾಣುವುದಿಲ್ಲ. ಗಾಂಧೀಜಿಯವರು ಕೂಡ ಮತಾಂತರವನ್ನು ಒಪ್ಪಿರಲಿಲ್ಲ, ಆಮಿಷಗಳನ್ನು ತೋರಿಸಿ ಮತಾಂತರಿಸುವುದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದರು. ಇಂದೂ ಕೂಡ ಆಮಿಷವನ್ನು ತೋರಿಸಿಯಾಗಲೀ ಬಲಾತ್ಕಾರವಾಗಿಯಾಗಲೀ ಮತಾಂತರ ನಡೆಸುವುದು ಸರಿಯಲ್ಲ ಎಂದೇ ಎಲ್ಲರೂ ಹೇಳುತ್ತಾರೆ.  ಹಿಂದುತ್ವವಾದಿಗಳ ಪ್ರಕಾರ ಕ್ರೈಸ್ತ ಹಾಗೂ ಮುಸ್ಲಿಮರು ಮೋಸ ಹಾಗೂ ಬಲಾತ್ಕಾರದಿಂದ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಅದನ್ನು ನಡೆಸುತ್ತಾರೆ. ಅದರಿಂದ ಹಿಂದೂಗಳ ಸಂಖ್ಯೆ ಇಳಿಯುತ್ತದೆ. ಹಾಗಾಗಿ ಅದನ್ನು ನಿಲ್ಲಿಸಬೇಕು ಎಂಬುದಾಗಿ ಅವರು ಹೋರಾಟವನ್ನು ಮಾಡುತ್ತಿದ್ದಾರೆ.  ಹಾಗೆ ಮತಾಂತರವಾದ ಹಿಂದೂಗಳು ವಾಪಸು ಹಿಂದೂ ಧರ್ಮದ ತೆಕ್ಕೆಗೆ ಬರಲು ಇಚ್ಛಿಸಿದರೆ   ಶುದ್ಧಿ ಎಂಬ ವಿಧಾನವನ್ನು ಕೂಡ ಕಂಡುಹಿಡಿಯಲಾಗಿದೆ.

          ನಮ್ಮಲ್ಲಿ ಎಷ್ಟೋ ರಾಜ್ಯಗಳಲ್ಲಿ ಮತಾಂತರವನ್ನು ನಿಷೇಧಿಸುವ ಕಾಯ್ದೆಯನ್ನು ವಿಭಿನ್ನ ಸಂದರ್ಭಗಳಿಗೆ ಅನ್ವಯವಾಗುವಂತೆ ತರಲಾಗಿದೆ. ಮೋಸ, ಬಲಾತ್ಕಾರಗಳು ಮತಾಂತರವೊಂದೇ ಅಲ್ಲ, ಎಲ್ಲೇ ಇದ್ದರೂ ಖಂಡನಾರ್ಹವೇ. ಆದರೆ ಯಾರೋ ಒಂದಿಷ್ಟು ಜನರು ಟಿಕೆಟ್ಟಿಲ್ಲದೇ ಪ್ರಯಾಣಮಾಡಿ ಮೋಸಮಾಡಿದರು ಅಂದಾಕ್ಷಣ ರೇಲ್ವೆ ವ್ಯವಸ್ಥೆಯನ್ನೇ ರದ್ದುಮಾಡಿದ ಹಾಗಾಗುವುದಿಲ್ಲವೆ ಇದು? ಭಾರತೀಯರೇಕೆ ಇಷ್ಟು ಸುಲಭವಾದ ತರ್ಕವನ್ನು ತಿಳಿದುಕೊಳ್ಳುವ ಬದಲು ತಕರಾರು ತೆಗೆಯುತ್ತಿದ್ದಾರೆ?  ಹಾಗೂ ಏಕೆ ಈ ಸೆಕ್ಯುಲರ್ ಮೌಲ್ಯದ ಅನುಷ್ಠಾನವು ನಮ್ಮ ಪ್ರಭುತ್ವಕ್ಕೆ ಸಮಸ್ಯೆಯಾಗಿ ಕಾಡುತ್ತಿದೆ? ಏಕೆ ರಿಲಿಜನ್ನಿನ ಪರಿವರ್ತನೆಯ  ಜೊತೆಗೆ ಆಮಿಷ ಹಾಗೂ ಒತ್ತಾಯಗಳ ಪ್ರಶ್ನೆಯೂ  ಏಳುತ್ತದೆ? ಇದರ ಉತ್ತರವು ಈ ಒಂದು ಅಂಕಣದಲ್ಲಿ ಬಿಡಿಸಿ ಇಡಲು ಸಾಧ್ಯವಾಗದ ವಿಚಾರ. ಆದರೆ ಮತಾಂತರದ ಕಲ್ಪನೆಯು ಭಾರತೀಯ ಸಂಪ್ರದಾಯಗಳಲ್ಲಿಲ್ಲ ಹಾಗೂ ಅದು ನಮಗೆ ಅರ್ಥವಾಗದ ಸಂಗತಿಯಾಗಿರುವುದರಿಂದ ಸಮಸ್ಯೆಗಳು ಹುಟ್ಟುತ್ತಿವೆ ಎಂಬುದನ್ನಷ್ಟೇ ಸದ್ಯಕ್ಕೆ ಸ್ಪಷ್ಟೀಕರಿಸಬಹುದು.

            ಹಿಂದೂ ಧರ್ಮದಲ್ಲೂ ಮತಾಂತರ ಪದ್ಧತಿ ಇದೆ ಎಂಬುದು ಚಾಲ್ತಿಯಲ್ಲಿರುವ ಒಂದು ಅಭಿಪ್ರಾಯ. ಶಂಕರಾಚಾರ್ಯರು ಹಿಂದೂ ಧರ್ಮವನ್ನು ಭಾರತದಾದ್ಯಂತ ಪ್ರಚಾರ ಮಾಡಿ ಬೌದ್ಧಧರ್ಮವನ್ನು ಹೊಡೆದೋಡಿಸಿದರು ಎನ್ನುತ್ತಾರೆ.  ಬಸವಣ್ಣ ಕೆಳಜಾತಿಗಳನ್ನು ಮತಾಂತರ ಮಾಡುವ ಮೂಲಕ ಅವರಿಗೆ ಸಮಾನತೆಯನ್ನು ನೀಡಿದ ಎಂಬುದು ನಮಗಿಂದು ಸಾಮಾನ್ಯ ಜ್ಞಾನವಾಗಿದೆ. ಆದರೆ ಇಂತಹ ಹೇಳಿಕೆಗಳಲ್ಲಿ ಬಗೆಹರಿಯದ ಸಮಸ್ಯೆಗಳಿವೆ. ಮತಾಂತರ ಎಂಬುದು ಎರಡು ರಿಲಿಜನ್ನುಗಳ ನಡುವೆ ನಡೆಯಬೇಕಾದದ್ದು. ಆದರೆ ವೀರಶೈವ/ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮವೊ ಇಲ್ಲ ಹಿಂದೂ ಧರ್ಮವೊ ಎಂಬುದೇ ಬಗೆಹರಿಯದ ವಿಷಯವೆಂಬುದು ನಮಗೆಲ್ಲ ಗೊತ್ತು.  ಒಂದೊಮ್ಮೆ ವೈಷ್ಣವರು, ಶೈವರು ಎಲ್ಲರೂ  ಹಿಂದೂ ಧರ್ಮವೇ ಆಗಿದ್ದಲ್ಲಿ ಹೊಸ ಜಾತಿಗಳಿಗೆ ಲಿಂಗವನ್ನು ಕಟ್ಟುವ, ನಾಮ ಹಾಕುವ  ಪದ್ಧತಿಯು ಮತಾಂತರ ಹೇಗಾಗುತ್ತದೆ? ದೀಕ್ಷೆಯನ್ನು ನೀಡುವುದು ಮತಾಂತರ ಹೇಗಾಗುತ್ತದೆ?

          ನಮಗೇಕೆ ಇಂಥ ಪ್ರಶ್ನೆಗಳು ಎದ್ದಿಲ್ಲವೆಂದರೆ ಮತಾಂತರ ಎಂದರೆ ದೇವತೆಗಳನ್ನು ಅಥವಾ ಆಚರಣೆಗಳನ್ನು ಬದಲಿಸುವುದು ಎಂದು ಭಾವಿಸಿಕೊಂಡಿದ್ದೇವೆ. ಅಥವಾ ಮತವನ್ನು ಅಂತರಿಸುವುದು, ಅಂದರೆ ಒಂದನ್ನು ಬಿಟ್ಟು ಮತ್ತೊಂದಕ್ಕೆ ಹಾರುವುದು. ಪಕ್ಷಾಂತರ ಇದ್ದಂತೆ. ಆದರೆ ಕನ್ವರ್ಶನ್ ಎಂಬ ಪದದ ಅರ್ಥ ಇದಲ್ಲ. ಅದರ ಶಬ್ದಶಃ ಅರ್ಥವು ’ಪರಿವರ್ತನೆ’ ಎಂಬುದಕ್ಕೆ ಸಮೀಪವಾಗಿದೆ. ಅದು ಸುಳ್ಳು ಮಾರ್ಗಗಳನ್ನು ಬಿಟ್ಟು ಸತ್ಯವಾದ ಮಾರ್ಗಕ್ಕೆ ಬದಲಾಗುವುದು. ಒಂದು ರಿಲಿಜನ್ನಿನವರು ತಮ್ಮದೇ ಸತ್ಯವಾದ ಮಾರ್ಗ ಎಂಬುದಾಗಿ ವಿಶ್ವಾಸ ಹೊಂದಿರುತ್ತಾರೆ. ಯಾರೋ ಒಬ್ಬನು ತಪ್ಪು ದಾರಿಯಲ್ಲಿ ಸಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದೂ ನೀವು ಗಮನಿಸದವರಂತೆ ಇದ್ದರೆ ಸರಿಯೆ? ಈ ರಕ್ಷಣಾ ಕಾರ್ಯವೇ ಪರಿವರ್ತನೆ. ಪರಿವರ್ತನೆಗೊಳಗಾದವನು ನಿಧಾನವಾಗಿ ಆಯಾ ರಿಲಿಜನ್ನಿನ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುತ್ತ ಸಾಗಬೇಕು. ಅಂದರೆ ಹಳೆಯ ರಿಲಿಜನ್ನನ್ನು ಸುಳ್ಳು ಎಂಬುದಾಗಿ ಅರಿಯುವುದು ನಿರ್ಣಾಯಕ. ಅವು ಸುಳ್ಳೆಂದು ಅರಿತ ಮೇಲೆ ಅವನ್ನು ಮುಂದುವರಿಸುವಂತೆಯೇ ಇಲ್ಲ. 

          ಏಕೆ ಒಂದು ರಿಲಿಜನ್ನಿನವರಿಗೆ ಉಳಿದವರು ತಪ್ಪು ದಾರಿಯಲ್ಲಿದ್ದಾರೆ ಎನ್ನಿಸುತ್ತದೆ? ರಿಲಿಜನ್ನುಗಳ ಪ್ರಕಾರ ಈ ಸೃಷ್ಟಿಯನ್ನು ಅವರವರ ಸತ್ಯದೇವನೇ ನಿಜವಾಗಿಯೂ ಮಾಡಿದ್ದಾನೆ. ಅಂದಮೇಲೆ ಎಲ್ಲಾ ಮನುಷ್ಯರೂ ಅವನದೇ ಸೃಷ್ಟಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಮಾನವರ ಹೃದಯದಲ್ಲಿ ಅವನು ತನ್ನ ಹೆಸರನ್ನು ಅಚ್ಚೊತ್ತಿದ್ದಾನೆ. ಹಾಗಾಗಿ ಮಾನವರಿಗೆಲ್ಲಾ ಅವನನ್ನು ಆರಾಧಿಸಬೇಕೆಂದ ತುಡಿತವಿರುತ್ತದೆ. ಆದರೆ  ಡೆವಿಲ್ ಅಥವಾ ಸೈತಾನ ಬಿಡಬೇಕಲ್ಲ. ಅವರನ್ನು ದಾರಿ ತಪ್ಪಿಸುತ್ತಾನೆ. ಆದರೂ ಅವರ ತುಡಿತವೇ ಅವರನ್ನು ತಪ್ಪುದಾರಿಯಲ್ಲಿ ಮುಂದುವರಿಯುವಂತೆ ಮಾಡುತ್ತದೆ. ಅಂದರೆ ಪ್ರತೀ ಸುಳ್ಳು ದೇವತೆಯ ಪೂಜೆಯ ಹಿಂದೂ ಸತ್ಯದೇವನ ಕುರಿತು   ಮಾನವನಿಗೆ ಇರಬಹುದಾದ ತುಡಿತವನ್ನು ರಿಲಿಜನ್ನುಗಳು ಕಾಣುತ್ತವೆ. ಇಂಥ ಮಾನವರನ್ನು ಸತ್ಯಮಾರ್ಗಕ್ಕೆ, (ಅಂದರೆ ತಾವು ಸತ್ಯವೆಂಬುದಾಗಿ ನಂಬಿದ ತಮ್ಮ ಮಾರ್ಗಕ್ಕೆ) ಪರಿವರ್ತಿಸುವ ಕೆಲಸವು  ಆಯಾ ರಿಲಿಜ್ನನಿಗೆ ಸೇರಿದವರ ಕರ್ತವ್ಯ. ಇದನ್ನು ಒಪ್ಪಿಕೊಂಡಾಗ ಬಲಾತ್ಕಾರ ನಡೆಸಿಯಾದರೂ, ಆಮಿಷ ತೋರಿಸಿಯಾದರೂ ತಪ್ಪುದಾರಿಯಲ್ಲಿರುವ ಮನುಷ್ಯರನ್ನು ಸರಿದಾರಿಗೆ ಹಚ್ಚುವುದರಲ್ಲಿ ತಪ್ಪೇನಿದೆ ಎಂಬ ತರ್ಕ ಹುಟ್ಟುತ್ತದೆ.

          ಇದು ರಿಲಿಜನ್ನುಗಳ ಕಥೆಯಾಯಿತು. ಪರಿವರ್ತನೆ ಪ್ರತಿಯೊಬ್ಬ ಮಾನವನ ಹಕ್ಕು, ಅದರಲ್ಲಿ ಬಲಾತ್ಕಾರ ಮತ್ತು ಆಮಿಷಗಳು ಪ್ರಯೋಗವಾದರೆ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂಬ ಪ್ರತಿಪಾದನೆ ಎಲ್ಲಿಂದ ಹುಟ್ಟಿಕೊಂಡಿತು ಎಂಬುದನ್ನು ನೋಡೋಣ. ಅದು ಹುಟ್ಟಿದ್ದು ಯುರೋಪಿನ  ಸೆಕ್ಯುಲರ್ ಪ್ರಭುತ್ವಗಳಲ್ಲಿ. ಸೆಕ್ಯುಲರ್ ಚಿಂತನೆಗೆ ನೆಲಗಟ್ಟಾಗಿದ್ದಪ್ರೊಟೆಸ್ಟಾಂಟ್ ರಿಲಿಜನ್ನು ಗಾಡ್ ಮತ್ತು ಮನುಷ್ಯನ ನಡುವೆ ಹೊಸ ರೀತಿಯ ಮುಕ್ತ ಸಂಬಂಧವನ್ನು ಪ್ರತಿಪಾದಿಸಿತು. ಪ್ರತೀ ಮನುಷ್ಯನ ಅಂತರಾಳದಲ್ಲೂ ಸೋಲ್(ಆತ್ಮ ಎಂದು ತಪ್ಪಾಗಿ ಭಾಷಾಂತರಿಸುತ್ತೇವೆ) ಎಂಬ ಅಂಗವಿರುತ್ತದೆ. ಅದು ಗಾಡ್‌ನ ಉದ್ದೇಶಕ್ಕೆ ಅನುಗುಣವಾಗಿ ರಚನೆಯಾಗಿದೆ ಹಾಗೂ  ಅಭಿವ್ಯಕ್ತಗೊಳ್ಳುತ್ತದೆ. ಹಾಗಾಗಿ ಯಾವ ವ್ಯಕ್ತಿಯ ಮೇಲೂ ರಿಲಿಜನ್ನಿನ ಆಚರಣೆಯನ್ನು ಬಲವಂತದಿಂದ ಹೇರಿ ರಿಲಿಜನ್ನನ್ನು ಸಂಸ್ಥೀಕರಿಸುವ ಅಧಿಕಾರವು ಯಾರಿಗೂ ಇಲ್ಲ. ಇಂಥ ಚಿಂತನೆಯನ್ನು ಆಧರಿಸಿ ಬೆಳೆದ ಲಿಬರಲ್ ಚಿಂತನೆಗಳು ರಿಲಿಜನ್ನಿನ ಸ್ವಾತಂತ್ರ್ಯವನ್ನು ಕಲ್ಪಿಸಿದವು.

          ಇಂಥ ಸ್ವಾತಂತ್ರ್ಯವನ್ನು ಕಲ್ಪಿಸಿಕೊಂಡ ಸೆಕ್ಯುಲರ್ ಪ್ರಭುತ್ವದಲ್ಲಿ ಅನೇಕ ರಿಲಿಜನ್ನುಗಳು ಸತ್ಯ ಪ್ರತಿಪಾದನೆಗಾಗಿ ಪೈಪೋಟಿ ನಡೆಸುತ್ತಿರುತ್ತವೆ. ಹಾಗೂ ಪ್ರಭುತ್ವವು ಯಾವ ಪಕ್ಷವನ್ನೂ ವಹಿಸದೇ ತಟಸ್ಥವಾಗಿರಬೇಕು. ಕಾರಣವೆಂದರೆ ಸತ್ಯ ಯಾವುದೆಂಬುದು ರಿಲಿಜನ್ನುಗಳ ಹುಡುಕಾಟವೇ ಹೊರತೂ ಪ್ರಭುತ್ವಗಳದ್ದಲ್ಲ. ಯಾವ ರಿಲಿಜನ್ನಿನ ಪ್ರತಿಪಾದನೆ ಸತ್ಯವೆಂಬುದನ್ನು ಪ್ರಭುತ್ವವು ನಿರ್ಧರಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲಾ ರಿಲಿಜನ್ನುಗಳಿಗೂ  ಪರಿವರ್ತನೆ ನಡೆಸಲು ಬಿಡಬೇಕು. ಹಾಗಾದ ಪಕ್ಷದಲ್ಲಿ ಅವುಗಳನ್ನು ಒಪ್ಪಿಕೊಳ್ಳುವ ಬಿಡುವ ಸ್ವಾತಂತ್ರ್ಯವನ್ನೂ ವ್ಯಕ್ತಿಗಳಿಗೇ ಬಿಡಬೇಕಾಗುತ್ತದೆ. ಹಾಗೂ ಬಲವಂತದ ಪರಿವರ್ತನೆಯನ್ನು ತಡೆಯುವುದೂ ಅಷ್ಟೇ ಮಹತ್ವದ ನೀತಿಯಾಗುತ್ತದೆ. ಅಂದರೆ  ಇಂಥ ಪ್ರಭುತ್ವಗಳಿಗೆ ತಾವು ಸೆಕ್ಯುಲರ್ ಆಗಿ ಉಳಿಯಬೇಕಾದರೆ ರಿಲಿಜನ್ನಿನ ಪರಿವರ್ತನೆಗೆ ಮುಕ್ತ ಅವಕಾಶ ಕಲ್ಪಿಸಲೇಬೇಕಾಗುತ್ತದೆ.

            ಭಾರತೀಯ ಸಂಪ್ರದಾಯಗಳಲ್ಲಿ ಸತ್ಯ ಪ್ರತಿಪಾದನೆಯ ಪೈಪೋಟಿಯಾಗಲೀ,  ಪರಿವರ್ತನೆಯ ಕಲ್ಪನೆಯಾಗಲೀ ಇಲ್ಲ. ಶೃಂಗೇರಿ ಮಠದ ಚಂದ್ರಶೇಖರ ಭಾರತಿ ಸ್ವಾಮಿಗಳ ಬಳಿ ಕ್ರೈಸ್ತನೊಬ್ಬ ಬಂದು ತಾನು ಹಿಂದೂ ಧರ್ಮಕ್ಕೆ ಪರಿವರ್ತನೆಯಾಗುತ್ತೇನೆಂಬ ಇಚ್ಛೆ ವ್ಯಕ್ತಪಡಿಸುತ್ತಾನಂತೆ. ಆಗ ಅವರು ಅವನಿಗೆ ಕ್ರೈಸ್ತ ಧರ್ಮವನ್ನು ಸರಿಯಾಗಿ ಅನುಸರಿಸಿಕೊಂಡು ಹೋದರೆ ಸಾಕು, ಅವನು ಒಳ್ಳೆಯ ಹಿಂದೂ ಕೂಡ ಆಗುತ್ತಾನೆ  ಎಂಬುದಾಗಿ ಉಪದೇಶಿಸಿ ಅವನನ್ನು ವಾಪಸು ಕಳುಹಿಸುತ್ತಾರೆ. ಇಂಥ ವಾಸ್ತವದಲ್ಲಿ ಬೆಳೆದವರಿಗೆ ಅನ್ಯರನ್ನು ಪರಿವರ್ತಿಸುವ ಕಾರ್ಯಕ್ರಮವೇ ಅನೈತಿಕವಾಗಿ, ಮತಾಂಧತೆಯಾಗಿ ಕಾಣುವುದಲ್ಲದೇ ಅದು ಅನ್ಯ ಮತಗಳನ್ನು ದುರ್ಬಲಗೊಳಿಸುವ ಹುನ್ನಾರವಾಗಿ ಕಂಡರೆ ಆಶ್ಚರ್ಯವಿಲ್ಲ.

          ಇಂಥ ಸಂಪ್ರದಾಯಗಳ ಹಿನ್ನೆಲೆಯಿಂದ ಬಂದು ಪರಿವರ್ತನೆಯ ಸ್ವಾತಂತ್ರ್ಯದ ಪರವಾಗಿ ವಾದಿಸುತ್ತಿರುವವರು ಕೂಡ ಪರಿವರ್ತನೆ ಎಂದರೆ ದೇವತೆಗಳನ್ನು ಹಾಗೂ ಆಧ್ಯಾತ್ಮಿಕ ಮಾರ್ಗವನ್ನು ಬದಲಾಯಿಸುವುದು ಎಂದು ತಪ್ಪಾಗಿ ಕಲ್ಪಿಸಿಕೊಳ್ಳುತ್ತಾರೆ. ( ಭಾರತದಲ್ಲಿ ಪರಿವರ್ತನೆಗೆ ಒಳಗಾದವರೂ ಕೂಡ ಹಾಗೇ ಅಂದುಕೊಂಡಿರುತ್ತಾರೆನ್ನಿ.) ಒಂದೊಮ್ಮೆ ಪರಿವರ್ತನೆಯ ಕಲ್ಪನೆ ನಮ್ಮಲ್ಲಿದ್ದಿದ್ದರೆ ಏಕೆ ನಮ್ಮ ಸಂಪ್ರದಾಯಗಳು ಆಮಿಷವನ್ನು ತೋರಿಸಿ, ಒತ್ತಾಯಪೂರ್ವಕವಾಗಿ ಉಳಿದವರನ್ನು ಸೆಳೆದುಕೊಳ್ಳುವ ವಿಧಾನವನ್ನು ಬೆಳೆಸಲಿಲ್ಲ ಅಥವಾ ಹಳೆಯದನ್ನು ಬಿಟ್ಟುಬಿಡಬೇಕೆಂದು ನಿರ್ಬಂಧ ಹಕುವುದಿಲ್ಲ ಎಂಬ ಪ್ರಶ್ನೆಯನ್ನು ಅವರು ಕೇಳಿಕೊಳ್ಳುವುದಿಲ್ಲ.

          ಆಂದರೆ, ಇಂದಿನ ಭಾರತದಲ್ಲಿ ರಿಲಿಜನ್ನುಗಳು ಹಾಗೂ ಸಂಪ್ರದಾಯಗಳೆಂಬ ಎರಡು ಪರಸ್ಪರ ಭಿನ್ನವಾದ ಸಂಗತಿಗಳಿವೆ ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ. ಅದನ್ನು ಗುರುತಿಸಿ ಒಪ್ಪಿಕೊಂಡ ಹೊರತೂ ಮತಾಂತರದ  ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಪರಿಹರಿಸಲು ನಮ್ಮಿಂದ ಸಾಧ್ಯವಿಲ್ಲ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp