Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ರಿಲಿಜನ್ನು ಮತ್ತು ಪಾಶ್ಚಾತ್ಯ ವಿಜ್ಞಾನಗಳ ಸಂಬಂಧ

ರಿಲಿಜನ್ನು ಮತ್ತು ಪಾಶ್ಚಾತ್ಯ ವಿಜ್ಞಾನಗಳ ಸಂಬಂಧ

by Rajaram Hegde
203 views

ರಿಲಿಜನ್ನು ಮತ್ತು ವಿಜ್ಞಾನಗಳು ಪರಸ್ಪರ ವಿರುದ್ಧವಾದ ಸಂಗತಿಗಳು ಎಂಬುದಾಗಿ ನಾವೆಲ್ಲ ಗ್ರಹಿಸುತ್ತೇವೆ. ಆದರೆ ರಿಲಿಜನ್ನು ಪಾಶ್ಚಾತ್ಯ ವಿಜ್ಞಾನದ ಮೂಲ ಮಾದರಿಯಾಗಿದೆ. ರಿಲಿಜನ್ನು ಇಲ್ಲದಿದ್ದರೆ ಪಾಶ್ಚಾತ್ಯ ವಿಜ್ಞಾನವು ಕೂಡ ಬೆಳೆಯುತ್ತಿರಲಿಲ್ಲ. ಹೇಗೆ ಎಂಬುದಕ್ಕೆ ಮುಂದೆ ನೋಡಿ.

ಕನ್ನಡದಲ್ಲಿ ನಾವು ’ಧರ್ಮ ಹಾಗೂ ವಿಜ್ಞಾನ’ಗಳ ಸಂಬಂಧದ ಕುರಿತು ಸಾಕಷ್ಟು ಚರ್ಚೆಯನ್ನು ನೋಡಿದ್ದೇವೆ. ಒಮ್ಮೆ ವಿಜ್ಞಾನವು ಧರ್ಮಕ್ಕೆ ವಿರುದ್ಧ ಎಂಬುದಾಗಿಯೂ, ಮತ್ತೊಮ್ಮೆ ಪೂರಕ ಎಂಬುದಾಗಿಯೂ ಪರಸ್ಪರ ವಿರುದ್ಧ ವಾದಗಳನ್ನು ಕೇಳಿದ್ದೇವೆ. ಈ ಚರ್ಚೆಯು ಮೂಲತಃ ರಿಲಿಜನ್ ಮತ್ತು ಸೈನ್ಸ್‌ಗಳ ಸಂಬಂಧದ ಕುರಿತ ಚರ್ಚೆಯಾಗಿ ಪಶ್ಚಿಮದಲ್ಲಿ  ಹುಟ್ಟಿಕೊಂಡದ್ದಾಗಿದೆ. ನಾವು ಈ ಚರ್ಚೆಯನ್ನೇ ಬಳುವಳಿಯಾಗಿ ಪಡೆದು ಕನ್ನಡದಲ್ಲಿ ಧರ್ಮ ಮತ್ತು ವಿಜ್ಞಾನ ಎಂಬುದಾಗಿ ಭಾಷಾಂತರಿಸಿಕೊಂಡಿದ್ದೇವೆ. ಆದರೆ ರಿಲಿಜನ್ ಎಂಬ ಶಬ್ದವನ್ನು ಧರ್ಮ ಎಂಬುದಾಗಿ ಭಾಷಾಂತರಿಸಿದಾಗ ಏನೇನು ಸಮಸ್ಯೆಗಳೇಳುತ್ತವೆಯೆಂಬುದನ್ನು ಈಗಾಗಲೇ ಸಾಕಷ್ಟು ಉದಾಹರಣೆಗಳಲ್ಲಿ ಮನಗಂಡಿದ್ದೇವೆ. ಹಾಗೆಯೇ ವಿಜ್ಞಾನ ಎಂಬ ಶಬ್ದವು ನಮ್ಮದೇ ಆದರೂ ಕೂಡ ಅದು ಸೈನ್ಸ್ ಎಂಬ ಪರಿಭಾಷೆಯ ಯಥಾವತ್ತಾದ ಭಾಷಾಂತರ ಅಲ್ಲ. ಹಾಗಾಗಿ ಸೈನ್ಸನ್ನು ಪಾಶ್ಚಾತ್ಯ ವಿಜ್ಞಾನ ಎಂಬ ವಿಶೇಷಣವನ್ನಿಟ್ಟು ಕರೆಯುವುದೇ ಉಚಿತ. ಏಕೆ ಎಂಬುದನ್ನು ಮುಂದಿನ ಭಾಗದಲ್ಲಿ ವಿವರಿಸಲಾಗುವುದು.

          ಏನೀ ಚರ್ಚೆ? ಸಾಧಾರಣವಾಗಿ ಎಲ್ಲರೂ ಗ್ರಹಿಸಿದಂತೆ ಅದು ಹೀಗಿದೆ: ಪಾಶ್ಚಾತ್ಯ ವಿಜ್ಞಾನ ಎಂಬುದು ಥಿಯರಿಗಳನ್ನು (ವಿವರಣೆಯ ಸಾಧನ- ಕನ್ನಡದಲ್ಲಿ ಸಿದ್ಧಾಂತ ಎಂಬ ಭಾಷಾಂತರವಿದೆ) ರಚಿಸಿಕೊಂಡು ಸೃಷ್ಟಿಯ ರಹಸ್ಯಗಳನ್ನು ವಿವರಿಸುವ ಸಾಧನ. ಅದು ತನ್ನ ವಿವರಣೆಯನ್ನು ತರ್ಕದ ಮೂಲಕ, ಸಾಕ್ಷ್ಯಾಧಾರಗಳ ಮೂಲಕ, ಪ್ರಯೋಗಗಳ ಮೂಲಕ ದೃಷ್ಟಾಂತಪಡಿಸಿ ಮನದಟ್ಟು ಮಾಡುತ್ತದೆ. ರಿಲಿಜನ್ ಕೂಡ ಸೃಷ್ಟಿಯ ರಹಸ್ಯಗಳನ್ನು ಕುರಿತು ತನ್ನದೇ ವಿವರಣೆಯನ್ನು ನೀಡುತ್ತದೆ. ಆದರೆ ಅದು ತನ್ನ ಕಥೆಯನ್ನು ಯಾವುದೇ ಕಾರಣಕ್ಕಾದರೂ ನಂಬಲೇಬೇಕು ಎನ್ನುತ್ತದೆಯೇ ವಿನಃ ದೃಷ್ಟಾಂತಪಡಿಸುವ ಗೋಜಿಗೆ ಹೋಗುವುದಿಲ್ಲ. ನೀವು ಪವಿತ್ರಗ್ರಂಥ ಹಾಗೂ ದೇವವಾಣಿಯ ಮೇಲೆ ವಿಶ್ವಾಸ ಇಡಬೇಕು ಅಷ್ಟೆ. ಪಾಶ್ಚಾತ್ಯ ಜೀವನದಲ್ಲಿ ೧೭ನೆಯ ಶತಮಾನದ ನಂತರ ವೈಜ್ಞಾನಿಕ ಕ್ರಾಂತಿಯಾಯಿತು. ಅಲ್ಲಿಯವರೆಗೆ ರಿಲಿಜನ್ನಿನ ವಿವರಣೆಗಳೇ ಲೋಕಜ್ಞಾನವಾಗಿ ಪ್ರಚಲಿತದಲ್ಲಿದ್ದವು. ಸೃಷ್ಟಿಯ ಕುರಿತು ವಿಜ್ಞಾನದ ವಿವರಣೆಗಳು ಬಂದಂತೆಲ್ಲ ರಿಲಿಜನ್ನಿನ ವಿವರಣೆಗಳು ಸುಳ್ಳೆಂಬ ಅಥವಾ ಆಧಾರರಹಿತವೆಂಬ ವಿಷಯವು ಜನರಿಗೆ ತಿಳಿಯತೊಡಗಿತು.

          ಈ ಹಂತದಲ್ಲಿ ರಿಲಿಜನ್ನಿನ ವಿವರಣೆಗಳನ್ನು ಸುಳ್ಳು ಮಾಡಲು ಹೊರಟ ವಿಜ್ಞಾನಿಗಳ ಬಾಯಿ ಮುಚ್ಚಿಸುವ ಪ್ರಯತ್ನವನ್ನೂ ಚರ್ಚು ಮಾಡಿತು. ಹೀಗೆ ಪಾಶ್ಚಾತ್ಯ ವಿಜ್ಞಾನಕ್ಕೂ ರಿಲಿಜನ್ನಿಗೂ ಸಂಘರ್ಷ ಹುಟ್ಟಿಕೊಂಡಿತು. ಈ ಸಂಬಂಧಿಸಿ ಗೆಲಿಲಿಯೋ ಹಾಗೂ ಚರ್ಚಿನ ನಡುವಿನ ಸಂಘರ್ಷದ ಉದಾಹರಣೆಯು ಜಗಜ್ಜಾಹಿರಾಗಿದೆ. ಕ್ರಮೇಣವಾಗಿ ಪಾಶ್ಚಾತ್ಯ ವಿಜ್ಞಾನವು ತನ್ನನ್ನು  ಅಧಿಕೃತ ಜ್ಞಾನವೆಂಬಂತೆ ಸ್ಥಾಪಿಸಿಕೊಂಡಿತು ಹಾಗೂ ಮನುಕುಲಕ್ಕೆ  ಅತ್ಯಗತ್ಯವಾದ ತಂತ್ರಜ್ಞಾನದ ಕ್ರಾಂತಿಯನ್ನೇ ಹುಟ್ಟುಹಾಕಿತು. ಅದರ ಮೂಲಕ ಪಾಶ್ಚಾತ್ಯ ನಾಗರೀಕತೆಯು ಜಗತ್ತಿನಲ್ಲೇ ಒಂದು ಪ್ರಬಲ ಶಕ್ತಿಯಾಗಿ ಬೆಳೆಯಿತು. ಅಷ್ಟಾದರೂ ಕೂಡ ಇಂದಿಗೂ ಚರ್ಚು ಹಾಗೂ ವೈಜ್ಞಾನಿಕ ಸಿದ್ಧಾಂತಗಳ ನಡುವೆ ಅನೇಕ ವಿರುದ್ಧಾಭಿಪ್ರಾಯಗಳಿದ್ದುದನ್ನು ನೋಡಬಹುದು. ಬೈಬಲ್ಲಿಗೆ ವಿರೋಧಿಯಾಗಿವೆ  ಎಂಬ ಕಾರಣಕ್ಕೆ ಕ್ಯಾಥೋಲಿಕ್ ಚರ್ಚು ಅನೇಕ ವೈಜ್ಞಾನಿಕ ಸಿದ್ಧಾಂತಗಳನ್ನು ಅಂಗೀಕರಿಸುವುದಿಲ್ಲ.  ಆದರೆ ಆ ಕಾರಣಕ್ಕೆ ವಿಜ್ಞಾನಿಗಳ ಜೊತೆಗೆ ಸಂಘರ್ಷಿಸುವುದಿಲ್ಲ. ಇಂದು ಅಂಥ ಸಿದ್ಧಾಂತಗಳ ಕುರಿತು ಈ ಎರಡೂ ವಲಯಗಳೂ ತಮ್ಮ ತಮ್ಮ ಸೀಮಾರೇಖೆಗಳನ್ನು ಎಳೆದುಕೊಂಡು ಪರಸ್ಪರ ಔದಾಸೀನ್ಯವನ್ನು ಬೆಳೆಸಿಕೊಂಡಿರುವುದನ್ನು ಕಲಿತಿವೆ.

          ಆದರೆ ಒಂದು ನಾಗರೀಕ ಚರ್ಚೆಯು ಸದಾ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಂತೆ ಕಾಣುತ್ತದೆ. ಅಂಥ  ಚರ್ಚೆಯಲ್ಲಿ ಇರುವ ಪೂರ್ವಗ್ರಹೀತವೆಂದರೆ ರಿಲಿಜನ್ನು ಹಾಗೂ ವಿಜ್ಞಾನಗಳು ಪರಸ್ಪರ ವಿರುದ್ಧ ಸಂಗತಿಗಳು ಎಂಬುದು. ವಿಜ್ಞಾನವು ವೈಚಾರಿಕತೆಯ ಮೇಲೆ ನಿಂತಿದೆ, ರಿಲಿಜನ್ನು ನಂಬಿಕೆಯ ಮೇಲೆ ನಿಂತಿದೆ. ಹೀಗೆ ಈ ಕುರಿತ ಚರ್ಚೆಯು ವೈಚಾರಿಕತೆ ಹಾಗೂ ನಂಬಿಕೆಗಳ ಇತಿ ಮಿತಿಗಳು ಹಾಗೂ ಮನುಕುಲಕ್ಕೆ ಅದರ ಸಾಧಕ-ಬಾಧಕಗಳ ಕುರಿತ ಚರ್ಚೆಯಾಗಿ ಮಾರ್ಪಟ್ಟಿದೆ.

          ಆದರೆ ರಿಲಿಜನ್ನಿಗೂ ಪಾಶ್ಚಾತ್ಯ ವಿಜ್ಞಾನಕ್ಕೂ ನಡುವಿನ ಸಂಬಂಧವು ಮೇಲ್ನೋಟಕ್ಕೆ ಕಾಣಿಸುವಂತೆ ಇಲ್ಲ. ಅವು ಪರಸ್ಪರ ವಿರುದ್ಧವಾದ ಸಂಗತಿಗಳಲ್ಲ. ನನ್ನ ಪ್ರಕಾರ  ’ರಿಲಿಜನ್ನೇ ಪಾಶ್ಚಾತ್ಯ ವಿಜ್ಞಾನಕ್ಕೆ ಮೂಲಮಾದರಿ’. ಅಂದರೆ ಇಂದು ಸೈನ್ಸ್ ಎಂಬುದಾಗಿ ಯಾವ ಪಾಶ್ಚಾತ್ಯ ವಿಜ್ಞಾನವನ್ನು ನಾವು ಉಲ್ಲೇಖಿಸಿ ಮಾತನಾಡುತ್ತೇವೆಯೋ ಅದು ರಿಲಿಜನ್ನಿಲ್ಲದ ಸಂಸ್ಕೃತಿಯಲ್ಲಿ ಹುಟ್ಟಿಬರಲಿಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ಅದು ಕ್ರಿಶ್ಚಿಯಾನಿಟಿಯಿಂದ ರೂಪಿತವಾದ ಪಾಶ್ಚಾತ್ಯ ಸಂಸ್ಕೃತಿಯಲ್ಲೇ ಹುಟ್ಟಿದೆ ಹಾಗೂ ಬೆಳೆದಿದೆ, ಬೇರೆಡೆಯಲ್ಲಲ್ಲ.

          ಈ ಮೇಲಿನ ಹೇಳಿಕೆಗೆ ಆಕ್ಷೇಪಣೆಯಾಗಿ ಕೆಲವು ಪ್ರಶ್ನೆಗಳು ಬಂದೇ ಬರುತ್ತವೆ. ಪ್ರಾಚೀನ ಭಾರತದಲ್ಲೂ ವಿಜ್ಞಾನದ ಬೆಳವಣಿಗೆ ಆಗಿದ್ದು ಸುಳ್ಳೆ? ನಮ್ಮಲ್ಲೂ ಖಗೋಲ ಶಾಸ್ತ್ರ, ಗಣಿತ ಶಾಸ್ತ್ರ, ಆಯುರ್ವೇದ, ಇತ್ಯಾದಿ ಅನೇಕ ವೈಜ್ಞಾನಿಕ ಶಾಖೆಗಳು ಬೆಳೆದಿದ್ದವಲ್ಲ? ಕೆಲವರು ಇನ್ನೂ ಮುಂದೆ ಹೋಗಿ ನಮ್ಮಲ್ಲೂ ಕ್ವಾಂಟಂ ಫಿಸಿಕ್ಸು, ರಾಕೆಟ್ ತಂತ್ರಜ್ಞಾನ ಇತ್ಯಾದಿಗಳು ಇದ್ದವು ಎನ್ನುತ್ತಾರೆ. ನಮ್ಮ ವಿಜ್ಞಾನಿಗಳ ಒಂದು ಪಟ್ಟಿಯನ್ನೇ ನಾವೀಗ ತಯಾರಿಸಿದ್ದೇವೆ. ಈ ಆಕ್ಷೇಪಣೆಗಳಿಗೆ ನನ್ನ ಸಮಜಾಯಷಿಯು ಮುಖ್ಯವಾಗಿ ಎರಡು ರೀತಿಯಲ್ಲಿದೆ: ೧) ಮೊದಲನೆಯದಾಗಿ ಇವನ್ನು ನಮ್ಮಲ್ಲಿ ವಿಜ್ಞಾನಗಳೆಂದು ಕರೆದಿಲ್ಲ. ಶಾಸ್ತ್ರಗಳೆಂದು, ಸಿದ್ಧಾಂತಗಳೆಂದು, ಕರೆದಿದ್ದಾರೆ. ನಾವು ಉಲ್ಲೇಖಿಸುವ ಭಾರತೀಯ ಶಾಸ್ತ್ರಗಳಿಗೂ ಪಾಶ್ಚಾತ್ಯ ವಿಜ್ಞಾನಕ್ಕೂ ಇರುವ ಮೂಲಭೂತ ವ್ಯತ್ಯಾಸವನ್ನು ಗಮನಿಸುವುದು ಅಗತ್ಯ. ೨) ಎರಡನೆಯದಾಗಿ ಪ್ರಾಚೀನ ಭಾರತದಲ್ಲೂ ವೈಜ್ಞಾನಿಕ ಸಿದ್ಧಾಂತಗಳಿದ್ದವು ಎನ್ನುವವರು ಇಂದಿನ ಪಾಶ್ಚಾತ್ಯ ವೈಜ್ಞಾನಿಕ ಸಿದ್ಧಾಂತಗಳನ್ನು ಹಿಮ್ಮುಖವಾಗಿ ನಡೆಸಿ ತೋರಿಸುತ್ತಾರಾದ್ದರಿಂದ ಅವುಗಳ ಅಭಾವದಲ್ಲಿ ಇಂಥ ತರ್ಕಕ್ಕೆ ಅವಕಾಶವೇ ಇಲ್ಲ ಎಂಬುದನ್ನೂ ನಿದರ್ಶಿಸುತ್ತಿರುತ್ತಾರೆ.

          ಮೊದಲನೆಯ ವಿಚಾರಕ್ಕೆ ಸಂಬಂಧಿಸಿ ಇಂದಿನ ವಿಜ್ಞಾನಿಗಳು ಗಮನಿಸಿದಂತೆ ಭಾರತೀಯರ ಶಾಸ್ತ್ರಗಳಿಗೆ ಒಂದು ವೈಶಿಷ್ಟ್ಯತೆಯಿದೆ. ಅದೆಂದರೆ ಇವರು ಉತ್ತರಗಳನ್ನು ಸಾಧಿಸಿ ತೋರಿಸುತ್ತಾರೆ. ಆದರೆ ಆ ಕುರಿತು ವಿವರಣೆಗಳನ್ನು ಬೆಳೆಸಿಲ್ಲ. ಉದಾಹರಣೆಗೆ, ಇವರು ಗ್ರಹಣವನ್ನು ಕರಾರುವಕ್ಕಾಗಿ ಲೆಕ್ಕ ಹಾಕುವುದನ್ನು ಸಾಧಿಸಿಕೊಂಡರೂ ಕೂಡ ಸೌರವ್ಯೂಹದ ಕುರಿತ, ಗ್ರಹಗಳ ಚಲನೆಯ ಕುರಿತ ವಿವರಣೆಗಳನ್ನು ಹಾಗೂ ಥಿಯರಿಗಳನ್ನು ಕಟ್ಟಿಕೊಂಡದ್ದು ಕಾಣುವುದಿಲ್ಲ. ಇವರು ಅನೇಕ ರೋಗಗಳಿಗೆ ಮದ್ದನ್ನು ಕಂಡುಕೊಂಡಿದ್ದರೂ ಕೂಡ ಒಂದು ಮದ್ದು ಒಂದು ನಿರ್ದಿಷ್ಟ ರೋಗವನ್ನು ಏಕೆ ಗುಣಪಡಿಸುತ್ತದೆ ಎಂಬುದನ್ನು ದೇಹ ಹಾಗೂ ನಿಸರ್ಗದ ಕುರಿತ ಥಿಯರಿಯನ್ನು ಬಳಸಿ ವಿವರಿಸುವುದು ಅವರಿಗೆ ಸಾಧ್ಯವಿಲ್ಲ. ಏಕೆಂದರೆ ಪ್ರಪಂಚದ ಕುರಿತು ಅಂಥ ವಿವರಣೆಗಳನ್ನು ಬೆಳೆಸುವುದಕ್ಕಿಂತ ರೋಗವನ್ನು ಗುಣಪಡಿಸುವುದಕ್ಕೇ ಇಲ್ಲಿ ಆದ್ಯತೆ ನೀಡಲಾಗಿದೆ.

          ಇದಕ್ಕೆ ಬದಲಾಗಿ ಪಾಶ್ಚಾತ್ಯ ವಿಜ್ಞಾನವು ಇಂದು ಶಾಖೋಪಶಾಖೆಯಾಗಿ ಬೆಳೆದಿದೆ, ಹಾಗೂ ನಿಸರ್ಗ ಮತ್ತು ಮಾನವ ಇವೆರಡರ ಕುರಿತು ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಥಿಯರಿಗಳು ಚಾಲ್ತಿಯಲ್ಲಿವೆ. ಈ ಥಿಯರಿಗಳು ಪ್ರಪಂಚ ಹಾಗೂ ಮಾನವನು ಹೇಗಿರಬಹುದೆಂಬ ಕುರಿತು ಒಂದು ವಿನ್ಯಾಸವನ್ನು ರಚಿಸಿ ಕೊಡುತ್ತವೆ. ಆ ವಿನ್ಯಾಸಗಳ ಸಹಾಯದಿಂದ ಆಯಾ ಕ್ಷೇತ್ರದಲ್ಲಿ ನಮಗೆ ಎದುರಾದ ಪ್ರಶ್ನೆಗಳಿಗೆ ವಿವರಣೆಯನ್ನು ನೀಡುತ್ತೇವೆ. ಉದಾಹರಣೆಗೆ ಒಂದು ಕಲ್ಲನ್ನು ಮೇಲೆಸೆದರೆ ಅದು ಕೆಳಕ್ಕೇ ಏಕೆ ಬೀಳುತ್ತದೆ? ಭೂಮಿಯು ಗೋಲವಾಗಿದ್ದರೂ ಕೂಡ ಅದು ತಿರುಗುವಾಗ ನಾವೇಕೆ ಬೀಳುವುದಿಲ್ಲ? ಸಮುದ್ರದಲ್ಲಿ ಭರತ-ಇಳಿತಗಳು ಏಕೆ ಆಗುತ್ತವೆ? ಇತ್ಯಾದಿಯಾದ ಅನೇಕ ಪ್ರಶ್ನೆಗಳನ್ನು ಉತ್ತರಿಸಲು ಗುರುತ್ವಾಕರ್ಷಣೆಯ ಸಿದ್ಧಾಂತವು ಸಹಕರಿಸುತ್ತದೆ. ಇಂಥ ಪ್ರಶ್ನೆಗಳನ್ನು ಉತ್ತರಿಸುವುದಕ್ಕೆ ಹೊರತಾಗಿಯೂ ಈ ಸಿದ್ಧಾಂತದ ಅಂತಿಮ ಗುರಿಯೆಂದರೆ ನಮ್ಮ ಪ್ರಪಂಚದ ಕುರಿತು ಒಂದು ಸತ್ಯವಾದ ಚಿತ್ರಣವನ್ನು ಕಟ್ಟಿಕೊಡುವುದು ಮಾತ್ರ. ಈ ಪ್ರಶ್ನೆಗಳು ಆ ಚಿತ್ರಣವನ್ನು ಕಟ್ಟಿಕೊಡಲಿಕ್ಕೆ ಪ್ರಯೋಜನಕಾರಿಯಾಗಿವೆ ಎಂಬುದಕ್ಕೇ ಅವುಗಳಿಗೆ ಇಲ್ಲಿ ಮಹತ್ವ ಬರುತ್ತದೆ. ಅಂದರೆ ಪ್ರಪಂಚದ ಕುರಿತ ಸತ್ಯ ಚಿತ್ರಣಗಳನ್ನು ರಚಿಸಿಕೊಂಡು ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಇಲ್ಲಿ ಆದ್ಯತೆಯಿದೆ.  ಹಾಗೂ ಪ್ರಪಂಚದ ಕುರಿತ ಇಂಥ ಸತ್ಯ ಚಿತ್ರಣಗಳನ್ನು ಸಾಧಿಸುವುದೇ ವೈಜ್ಞಾನಿಕ ಆವಿಷ್ಕಾರಗಳ ಅಂತಿಮ ಗುರಿಯಾಗಿದೆ. ಅಂದರೆ ಪಾಶ್ಚಾತ್ಯ ವಿಜ್ಞಾನವು ಮೂಲತಃ ’ಈ ಪ್ರಪಂಚವು ನಿಜವಾಗಿಯೂ ಹೇಗಿದೆ?’ ಎಂಬ ಶುದ್ಧ ಜ್ಞಾನಕುತೂಹಲ. ಇಲ್ಲಿಯೇ ಪಾಶ್ಚಾತ್ಯ ವಿಜ್ಞಾನವು ವಿಶಿಷ್ಟವಾಗಿ ಕಾಣಿಸುತ್ತದೆ.

          ಇಂದು ನಾವು ಪಾಶ್ಚಾತ್ಯ ವಿಜ್ಞಾನವನ್ನು ತಂತ್ರಜ್ಞಾನಕ್ಕೆ ಸಮೀಕರಿಸುತ್ತೇವಾದ್ದರಿಂದ ಈ ವ್ಯತ್ಯಾಸವು ಕಣ್ಣಿಗೆ ಎಸೆದು ಕಾಣುವುದಿಲ್ಲ. ನಮ್ಮಲ್ಲೂ ರಾಕೆಟ್ಟುಗಳಿದ್ದವು, ವೈದ್ಯರು ಆಪರೇಷನ್ ಮಾಡುತ್ತಿದ್ದರು ಎಂಬುದಾಗಿ ವಾದ ಮಾಡಿ  ಪಾಶ್ಚಾತ್ಯ ವಿಜ್ಞಾನವು ನಮ್ಮಲ್ಲೂ ಇತ್ತು ಎಂದು ಸಾಧಿಸಲಿಕ್ಕೆ ಬರುವುದಿಲ್ಲ. ಏಕೆಂದರೆ ತಂತ್ರಜ್ಞಾನವು ವಿಜ್ಞಾನವಲ್ಲ. ವಿಜ್ಞಾನದ ಮೂಲಕ ಪ್ರಪಂಚದ ಕುರಿತು ಕಟ್ಟಿಕೊಟ್ಟ ಸತ್ಯವಾದ ಚಿತ್ರಣಗಳ ಸಹಾಯದಿಂದ ತಂತ್ರಜ್ಞಾನವನ್ನು ಅಭಿವೃದ್ಧಿಪಡಸಲಾಗಿದೆ. ಅಂದರೆ ಈ ಪ್ರಪಂಚ ಹೀಗಿದೆ, ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬ ನಿಯಮಗಳು ತಿಳಿದ ನಂತರ ಅದನ್ನು ಪಳಗಿಸಿಕೊಳ್ಳುವ ಅನೇಕ ಸಾಧ್ಯತೆಗಳು ತೆರೆಯುತ್ತವೆ. ಪ್ರಪಂಚದಲ್ಲಿ ನಮಗೆ ಎದುರಾದ ಸಮಸ್ಯೆಗಳನ್ನು ಮಾತ್ರವೇ ಪರಿಹರಿಸಿಕೊಳ್ಳುತ್ತ ಸಾಗುವ ಸಂಸ್ಕೃತಿಗೆ ಅದರಾಚೆಗಿನ ಸಾಧ್ಯತೆಗಳು ಪ್ರಸ್ತುತವಾಗುವುದಿಲ್ಲ. ಹಾಗಾಗಿ ಅದರ ತಂತ್ರಜ್ಞಾನಗಳೂ ಸೀಮಿತವಾಗಿರುತ್ತವೆ. ಆದರೆ ಪ್ರಪಂಚವು ಸತ್ಯವಾಗಿಯೂ ಹೇಗಿದೆ ಎಂಬುದೇ ಅನ್ವೇಷಣೆಯಾಗಿರುವ ಸಂಸ್ಕೃತಿಯು ಈ ಪ್ರಪಂಚದ ಕುರಿತು ಕೊಟ್ಟ ಚಿತ್ರಣದಿಂದ ಊಹಿಸಲಾಗದ ಸಾಧ್ಯತೆಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಪಾಶ್ಚಾತ್ಯ ತಂತ್ರಜ್ಞಾನದ ಕ್ರಾಂತಿಯು ಸಾಧ್ಯತೆಗಳು ಅಲ್ಲಿನ ವೈಜ್ಞಾನಿಕ ಮನೋಭಾವದಲ್ಲೇ ಅಡಗಿವೆ. ಆದರೆ ಆ ಕಾರಣಕ್ಕಾಗಿ ವಿಜ್ಞಾನದ ಉದ್ದೇಶವೇ ತಂತ್ರಜ್ಞಾನ ಎಂಬುದು ತಪ್ಪು. ಅದೊಂದು ಪ್ರಪಂಚದ ಕುರಿತ ಶುದ್ಧ ಜ್ಞಾನ ಕುತೂಹಲ.

          ಅಂದರೆ ಪಾಶ್ಚಾತ್ಯ ವಿಜ್ಞಾನದ ಈ ಹುಡುಕಾಟವು ಪಾಶ್ಚಾತ್ಯ ಸಂಸ್ಕೃತಿಗೇ ವಿಶಿಷ್ಟವಾದುದು. ಸೈನ್ಸ್‌ನ ಹುಡುಕಾಟವು ಭೌತಿಕ ಸತ್ಯಗಳ ಯಥಾರ್ಥ ವರ್ಣನೆಯನ್ನು ಸಾಧಿಸುವುದಾಗಿದೆ. ಈ ಸತ್ಯಗಳು ಥಿಯರಿಗಳೆಂಬ ಶಾಬ್ದಿಕ ರಚನೆಗಳನ್ನಾಧರಿಸಿವೆ ಹಾಗೂ ಹೊರ ಜಗತ್ತಿನ ಅವಲೋಕನದಿಂದ ಪ್ರಮಾಣಿತವಾಗುತ್ತದೆ. ಭಾರತದಲ್ಲಿ ಇದಕ್ಕೆ ಹೋಲಿಕೆಯಾಗಬಲ್ಲ ಹುಡುಕಾಟವೊಂದಿದ್ದರೆ ಅದು ಅಧ್ಯಾತ್ಮ. ಅಧ್ಯಾತ್ಮವು ಬಾಹ್ಯ ಪ್ರಪಂಚದ ವರ್ಣನೆಯ ಮೂಲಕ ಸತ್ಯವನ್ನು ಅರಸುವುದಿಲ್ಲ. ಅದು ನಮ್ಮೊಳಗಿನ ಪ್ರಪಂಚದ ಹುಡುಕಾಟವಾಗಿದೆ ಹಾಗೂ ಅಲ್ಲಿನ ಸಿದ್ಧಾಂತಗಳಿಗೆ ಅನುಭವವೇ ಪ್ರಮಾಣ. ಆ ಕುರಿತು ಮತ್ತೊಂದು ಅಂಕಣದಲ್ಲಿ ಬರೆಯುತ್ತೇನೆ. ಆದರೆ ನಮ್ಮಿಂದ ಹೊರಗಿರುವ ಭೌತಿಕ ಪ್ರಪಂಚವನ್ನು ವಿವರಿಸುವುದನ್ನೇ ಧ್ಯೇಯವಾಗಿಟ್ಟುಕೊಂಡ ಪಾಶ್ಚಾತ್ಯ ವಿಜ್ಞಾನಕ್ಕೆ ಸರಿಸಾಟಿಯಾದುದು ನಮ್ಮಲ್ಲಿ ಬೆಳೆದಿಲ್ಲ ಎಂಬುದನ್ನಷ್ಟೇ ಗುರುತಿಸೋಣ.

          ಇಂಥ ಹುಡುಕಾಟವು ಯುರೋಪಿನಲ್ಲೇ ಪ್ರಾರಂಭವಾಗುವುದಕ್ಕೂ, ಆ ಸಂಸ್ಕೃತಿಯನ್ನು ರೂಪಿಸಿದ ಶಕ್ತಿಯು ಕ್ರಿಶ್ಚಿಯಾನಿಟಿಯಾಗಿರುವುದಕ್ಕೂ ಕಾರ್ಯಾ-ಕಾರಣ ಸಂಬಂಧವಿದೆ. ಕ್ರಿಶ್ಚಿಯಾನಿಟಿಯು ತನ್ನ ಅನುಯಾಯಿಗಳಿಗೆ ಈ ಭೌತಿಕ ಸೃಷ್ಟಿಯ ರಹಸ್ಯವನ್ನು ತಿಳಿಸುತ್ತದೆ. ಅದಕ್ಕೆ ಕಾರಣನೇ ಗಾಡ್. ಅಷ್ಟೇ ಅಲ್ಲ, ಅವನು ಯುಕ್ತಾಯುಕ್ತತೆಯನ್ನು ಲೆಕ್ಕಹಾಕಿ ಈ ಪ್ರಪಂಚವನ್ನು ಸೃಷ್ಟಿಸಿದ್ದಾನೆ. ಈ ಸೃಷ್ಟಿಯಲ್ಲಿರುವ ಪ್ರತಿಯೊಂದು ವಸ್ತುವಿಗೂ, ವಿದ್ಯಮಾನಕ್ಕೂ ಒಂದು ಸಕಾರಣವಿದೆ. ಈ ಸೃಷ್ಟಿಯಲ್ಲಿ ಹಿಂದೆ ಏನಿತ್ತೋ, ಇಂದು ಏನಿದೆಯೋ ಹಾಗೂ ಮುಂದೆ ಏನಿರುತ್ತದೆಯೋ ಇವೆಲ್ಲವುಗಳೂ ಗಾಡ್‌ನಿಂದ ಉದ್ದೇಶಪೂರ್ವಕವಾಗಿ ಯೋಜಿತವಾಗಿವೆ ಎಂಬ ವರ್ಣನೆಯನ್ನು ಪ್ರಾಪಂಚಿಕ ಸತ್ಯವೆಂಬುದಾಗಿ ರಿಲಿಜನ್ನಿನ ಅನುಯಾಯಿಗಳು ಸ್ವೀಕರಿಸಿರುತ್ತಾರೆ. ಹಾಗೂ ಈ ಸತ್ಯವನ್ನು ತಿಳಿದುಕೊಳ್ಳುವುದು ಮನುಷ್ಯನಾಗಿ ಜೀವಿಸುವುದಕ್ಕೆ ಅತ್ಯಗತ್ಯ. ಈ ಸತ್ಯವನ್ನು ತಿಳಿದುಕೊಂಡಾಗಲೇ ನಾವು ಹೇಗೆ ಜೀವಿಸಬೇಕು? ಏನನ್ನು ಮಾಡಬೇಕು? ಎಂಬ ಸರಿಯಾದ ವಿಧಾನ ಗೊತ್ತಾಗುತ್ತದೆ. ಅಂದರೆ ಪ್ರಾಪಂಚಿಕ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮೊದಲು ಈ ಪ್ರಪಂಚದ ಕಾರ್ಯಾ-ಕಾರಣಗಳ ಸತ್ಯವನ್ನು ತಿಳಿದುಕೊಳ್ಳುವುದಕ್ಕೆ  ರಿಲಿಜನ್ನು ಆದ್ಯತೆ ನೀಡುತ್ತದೆ. ರಿಲಿಜನ್ನು ನೀಡುವ ಕಾರಣ ವಿವರಣೆಯು ಈ ಪ್ರಪಂಚದ ಪ್ರತಿಯೊಂದು ವಿದ್ಯಮಾನದ ಕಾರಣವನ್ನೂ ಗಾಡ್‌ನ ಉದ್ದೇಶಕ್ಕೆ ಕಟ್ಟುವ ಮೂಲಕ ಆ ಪ್ರತಿಯೊಂದೂ ವಿದ್ಯಮಾನವನ್ನೂ ವಿವರಿಸುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ.

          ಯುರೋಪಿನಲ್ಲಿ ೧೭ನೆಯ ಶತಮಾನದ ನಂತರ ಎರಡು ಕಾರಣಗಳಿಂದ ಪ್ರಪಂಚದ ಕುರಿತ ವೈಜ್ಞಾನಿಕ ವಿವರಣೆಗಳು ಆಕಾರ ತಳೆದವು. ಮೊದಲನೆಯದಾಗಿ ಗಾಡ್ ಈ ಪ್ರಪಂಚವನ್ನು ಒಂದು ಉದ್ದೇಶವನ್ನಿಟ್ಟುಕೊಂಡು ಸೃಷ್ಟಿಸಿದ್ದಾನೆ ಎಂಬುದಾಗಿ ರಿಲಿಜನ್ನು ಹೇಳುತ್ತದೆಯೇ ವಿನಃ ಆ ಉದ್ದೇಶ ಯಾವುದು ಎಂಬುದನ್ನು ಹೇಳುವುದಿಲ್ಲ ಹಾಗೂ ಅವನು ಪ್ರಪಂಚವನ್ನು ಹೇಗೆ ನಿಯೋಜಿಸಿದ್ದಾನೆ ಎಂಬ ರಹಸ್ಯವನ್ನು ಪ್ರತ್ಯೇಕ ವಿದ್ಯಮಾನಗಳ ಸಂದರ್ಭದಲ್ಲಿ ವಿವರಿಸಿ ಹೇಳುವುದಿಲ್ಲ. ಸೃಷ್ಟಿಯ ಒಳಗೆ ಗಾಡ್ ಯೋಜಿಸಿದ ವಿನ್ಯಾಸಗಳನ್ನು ಹಾಗೂ ಅರ್ಥವನ್ನು ಮಾನವರೇ ಹುಡುಕಿ ವರ್ಣಿಸಬೇಕು.. ಇಂಥ ಹುಡುಕಾಟದ  ಒಂದು ಪರಿಯೇ ವೈಜ್ಞಾನಿಕ ಸಂಶೋಧನೆಯಾಗಿ ಬೆಳೆಯಿತು. ಹಾಗಾಗಿ ಅನೇಕ ಪಾಶ್ಚಾತ್ಯ ವಿಜ್ಞಾನಿಗಳು ಗಾಡ್ ಹಾಗೂ ರಿಲಿಜನ್ನುಗಳನ್ನು ಒಂದು ಉಚ್ಛಮಟ್ಟದ ಸತ್ಯಗಳು ಎಂಬುದಾಗಿ ಭಾವಿಸಿದ್ದರು.

          ಎರಡನೆಯದಾಗಿ ಸೆಕ್ಯುಲರೀಕರಣದ ಸೆಳೆತ ಪ್ರಬಲವಾದಂತೆಲ್ಲ ಈ ಪ್ರಪಂಚದ ಕುರಿತ ಇಂಥ ವಿವರಣೆಯನ್ನು ಸೃಷ್ಟಿಸುವ ಒತ್ತಡವು ಅಲ್ಲಿನ ಚಿಂತಕರ ಮೇಲೆ ಬಿದ್ದಿತು. ಈ ಪ್ರಪಂಚವು ಹೇಗೆ, ಯಾವ ಕಾರಣದಿಂದ ಹುಟ್ಟಿದೆ ಹಾಗೂ ನಡೆಯುತ್ತಿದೆ? ಅದರ ಅಂತ್ಯವೇನು? ಇತ್ಯಾದಿ ರಿಲಿಜನ್ನಿನ ಪ್ರಶ್ನೆಗಳು ಸೆಕ್ಯುಲರ್ ಪ್ರಶ್ನೆಗಳಾಗಿ ಮಾರ್ಪಟ್ಟವು. ಈ ಪ್ರಶ್ನೆಗಳನ್ನು ಉತ್ತರಿಸುತ್ತಲೇ ಪಾಶ್ಚಾತ್ಯ ವಿಜ್ಞಾನವು ಬೆಳವಣಿಗೆ ಹೊಂದಿತು.

          ಆದರೆ ಮಾನವನ ವಿಜ್ಞಾನವು ಕೊನೆಗೂ ವಿಶ್ವದ ಭಾಗಶಃ ವಿವರಣೆಯನ್ನು ಮಾತ್ರ ನೀಡುತ್ತದೆ. ವಿಶ್ವವನ್ನು ತುಣುಕುಗಳನ್ನಾಗಿ ವಿಂಗಡಿಸಿಕೊಂಡು ಅದು ತನ್ನ ವಿವರಣೆಯನ್ನು             ಮಂಡಿಸುತ್ತದೆ. ಗಾಡ್‌ನಿಂದ ನೀಡಲಾದ ರಿಲಿಜನ್ನು ವಿಶ್ವದ ಕುರಿತು ಇಡಿಯಾದ ವಿವರಣೆಯನ್ನು, ಅಥವಾ ಸಮಸ್ತ ವಿಶ್ವಾವಲೋಕನವನ್ನು ನೀಡುತ್ತದೆ. ಹಾಗಾಗಿ ಸೈನ್ಸ್ ಹಾಗೂ ರಿಲಿಜನ್ನುಗಳು ಪರಸ್ಪರರ ಸ್ಥಾನಗಳನ್ನು ಆಕ್ರಮಿಸುವ ಸಾಧ್ಯತೆ ಉದ್ಭವಿಸುವುದೇ ಇಲ್ಲ. ಅಂದರೆ ರಿಲಿಜನ್ನು ಪ್ರಪಂಚದ ಕುರಿತು ಸತ್ಯವಾದ ವಿವರಣೆಗೆ ಮೂಲ ಮಾದರಿಯಾಗಿದೆ. ಇಲ್ಲಿ ವಿಜ್ಞಾನವು ರಿಲಿಜನ್ನು ಈಗಾಗಲೇ ರೂಪಿಸಿದ ಪ್ರಶ್ನೆಗಳಿಗೆ ವಿವರಣೆಗಳನ್ನು ಒದಗಿಸುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವುದು ಕಂಡುಬರುತ್ತದೆ. ಅಂಥ ಪ್ರಶ್ನೆಗಳನ್ನು ಉತ್ತರಿಸುವ ಕೆಲಸವನ್ನು ಅದುವರೆಗೆ ರಿಲಿಜನ್ನು ಮಾಡುತ್ತಿತ್ತು. ಹಾಗೂ ಅದು ಹುಡುಕಾಟದ ಮಾದರಿಯೊಂದನ್ನು ರಚಿಸಿತು. ಆ ಮಾದರಿಯಲ್ಲೇ ವಿಜ್ಞಾನದ ಹುಡುಕಾಟವು ನಡೆಯಿತು. ಆದರೆ ವಿಜ್ಞಾನವು ಬೇರೆಯದೇ ಆದ ವಿಧಾನ ಶಾಸ್ತ್ರವನ್ನು ಬೆಳೆಸಿತು. ಈ ಪ್ರಪಂಚವು ನಿಜವಾಗಿಯೂ ಹೇಗಿದೆ ಎಂಬ ಕುರಿತು ಥಿಯರಿಗಳನ್ನು ಕಟ್ಟಿತು. ಅದಾಗಲೇ ರಿಲಿಜನ್ನು ಈ ಹುಡುಕಾಟದ ಸ್ವರೂಪವನ್ನು ನಿರ್ಧರಿಸಿಯಾಗಿತ್ತು.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp