Home ಲೇಖನ ತತ್ತ್ವ-ಸಿದ್ಧಾಂತ, ಜಾತಿ ರಾಜಕಾರಣ ಮತ್ತು ಮತದಾನ – ವಾಸ್ತವವೋ, ಅಸಂಬದ್ಧ ಪ್ರಲಾಪವೋ? 

ತತ್ತ್ವ-ಸಿದ್ಧಾಂತ, ಜಾತಿ ರಾಜಕಾರಣ ಮತ್ತು ಮತದಾನ – ವಾಸ್ತವವೋ, ಅಸಂಬದ್ಧ ಪ್ರಲಾಪವೋ? 

by Chaitra M.S.
125 views

ಭಾರತದ ರಾಜಕೀಯ ವ್ಯವಸ್ಥೆಯ ಕುರಿತು ಚಿಂತಕರ ಚಾವಡಿಯಲ್ಲಿ, ಒಂದೆಡೆ ಭಾರತವು ಅಪ್ರತಿಮ ಪ್ರಜಾತಂತ್ರವೆಂತಲೂ ಮತ್ತೊಂದೆಡೆ ಭಾರತವು ಫ್ಯಾಸಿಸ್ಟ್, ಕೋಮುವಾದಿ ಹಾಗೂ ಪ್ರಜಾತಂತ್ರ ವಿರೋಧಿ ಸರ್ಕಾರವನ್ನು ಹೊಂದಿದೆ ಎಂದು ಇಂದು ಚರ್ಚಿಸುತ್ತಾರೆ. ಈ ವೈರುದ್ಧ್ಯಪೂರ್ಣ ರಾಜಕೀಯ ವಿಚಾರ-ವಿಮರ್ಶೆಗಳು ನಮಗೆ ಭಾರತದ ರಾಜಕೀಯದ ಕುರಿತು ಏನನ್ನು ತಿಳಿಸಿಕೊಡಬಲ್ಲವು ಎನ್ನುವ ಪ್ರಶ್ನೆಯು ಸಹಜವಾಗಿಯೇ ಮೂಡುತ್ತದೆ. ಅಂತಹ ಪ್ರಶ್ನೆಯೊಂದಕ್ಕೆ ಉತ್ತರ ಕಂಡುಕೊಳ್ಳುವುದು ಅತ್ಯಂತ ಕಷ್ಟಕರವಾದರೂ ಕೆಲವು ಚರ್ಚೆಗಳನ್ನು ಗಮನಿಸಿದರೆ ನಮಗೆ ಭಾರತದ ರಾಜಕೀಯದ ಕುರಿತು ಏನು ತಿಳಿವಳಿಕೆ ಹುಟ್ಟಬಹುದು ಎಂಬುದನ್ನು ಯೋಚಿಸುವುದು ಸೂಕ್ತ.

ತತ್ತ್ವ-ಸಿದ್ಧಾಂತದ(ಐಡಿಯಾಲಜಿ) ರಾಜಕಾರಣವೆಂಬ ಪ್ರಹಸನ

ಭಾರತಕ್ಕೆ ಈಗ ಚುನಾವಣೆಯ ಹಬ್ಬ. ಈ ಸಂದರ್ಭದಲ್ಲಿ ಸುದ್ಧಿ ಮಾಧ್ಯಮಗಳು, ಅಂತರ್ಜಾಲ ತಾಣಗಳು, ಬುದ್ಧಿಜೀವಿಗಳು, ರಾಜಕೀಯತಜ್ಞರು ಮೊದಲಾದವರು ರಾಜಕೀಯದ ಬಗ್ಗೆ ತಮ್ಮ ವಿಚಾರ ವಿಮರ್ಶೆಯನ್ನು ಮುಂದಿಡುತ್ತಾರೆ. ಭಾರತದ ರಾಜಕೀಯದ ಕುರಿತಂತೆ ಇವರೆಲ್ಲರ ಕೆಲ ಒಮ್ಮತಗಳಿವೆ. ಅವುಗಳಲ್ಲಿ ಒಂದು ತತ್ತ್ವ-ಸಿದ್ಧಾಂತದ ರಾಜಕಾರಣ. ಭಾರತದಲ್ಲಿ ರಾಜಕಾರಣಿಗಳು ಒಂದೆಲ್ಲ ಒಂದು ತತ್ತ್ವ-ಸಿದ್ಧಾಂತಕ್ಕೆ ಅಥವಾ ಐಡಿಯಾಲಜಿಗೆ ಬದ್ಧರಾಗಿರುತ್ತಾರೆ ಎಂಬುದು ಇವರೆಲ್ಲರ ಅಭಿಪ್ರಾಯ. ಉದಾಹರಣೆಗೆ – ಬಿಜೆಪಿಯ ರಾಜಕಾರಣಿಗಳು ಹಿಂದುತ್ವದ ಸಿದ್ಧಾಂತಕ್ಕೆ ಬದ್ಧರಾಗಿದ್ದು, ಮುಸಲ್ಮಾನರ, ದಲಿತರ, ಬಡವರ ಮತ್ತು ಶ್ರಮಿಕರ ವಿರೋಧಿಗಳಾಗಿರುತ್ತಾರೆ. ಕಾಂಗ್ರೆಸ್ಸಿನ ರಾಜಕಾರಣವು ಹಿಂದುತ್ವದ ವಿರೋಧಿಯಾಗಿದೆ ಹಾಗೂ ನಿಜವಾದ ಸೆಕ್ಯುಲರ್ ಪಕ್ಷವಾಗಿದೆ. ಈ ರೀತಿಯಾಗಿ ಒಂದೊಂದು ಪಕ್ಷದ ರಾಜಕಾರಣಿಗಳು ಒಂದೊಂದು ನಿರ್ದಿಷ್ಟ ತತ್ತ್ವ-ಸಿದ್ಧಾಂತಗಳನ್ನು ಇಟ್ಟುಕೊಂಡು ರಾಜಕಾರಣವನ್ನು ಮಾಡುತ್ತಾರೆ ಎನ್ನುವುದು ವಿಮರ್ಶಕರ ಅಭಿಪ್ರಾಯ. ಕರ್ನಾಟಕದ ಇತ್ತೀಚನ ಕೆಲ ರಾಜಕೀಯ ಬೆಳವಣಿಗೆಯ ಆಧಾರದ ಮೇಲೆ ಈ ವಿಮರ್ಶೆಯ ಸತ್ತ್ವವನ್ನು ಗ್ರಹಿಸಲು ಪ್ರಯತ್ನಿಸೋಣ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರಿದೆ. ಕರ್ನಾಟಕದ ಕೆಲ ಪ್ರತಿಷ್ಠಿತ ರಾಜಕೀಯ ನಾಯಕರು ಟಿಕೆಟಿನಿಂದ ವಂಚಿತರಾಗಿದ್ದಾರೆ. ಹಾಗಾಗಿ ಪಕ್ಷಾಂತರ ಪರ್ವವೇ ನಡೆಯುತ್ತಿದೆ. ಟಿಕೆಟ್ ಸಿಗದ ರಾಜಕೀಯ ನಾಯಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುತ್ತಿದ್ದಾರೆ. ಕೆಲವರು ಬಿಜೆಪಿಯಿಂದ ಕಾಂಗ್ರೆಸ್ಸಿಗೂ, ಇನ್ನು ಕೆಲವರು ಕಾಂಗ್ರೆಸ್ಸಿನಿಂದ ಬಿಜೆಪಿಗೂ, ಇವೆರಡನ್ನೂ ಬಿಟ್ಟು ಆಮ್ ಆದ್ಮಿ ಪಕ್ಷಕ್ಕೆ ಹೋಗುವುದು ಇತ್ಯಾದಿಯಾಗಿ ಪಕ್ಷಾಂತರವು ನಡೆಯುತ್ತಿದೆ. ಇತ್ತೀಚೆಗೆ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಇಬ್ಬರೂ ಸಹ ಬಿಜೆಪಿ ಪಕ್ಷದಲ್ಲಿ ಟಿಕೆಟಿನಿಂದ ವಂಚಿತರಾದರು.  ಬಿಜೆಪಿ ಪಕ್ಷದ ಸಿದ್ಧಾಂತಕ್ಕೆ ಕಟಿಬದ್ದರಾಗಿದ್ದು, ಪಕ್ಷಕ್ಕಾಗಿ ದುಡಿದು ಪ್ರಬಲ ನಾಯಕರಾಗಿ ಬೆಳೆದಾಗಲೂ ಸಹ ಟಿಕೆಟ್ ಕೊಡದಿರುವುದು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯನ್ನು ತಂದಿದೆ ಎಂಬುದು ಈ ನಾಯಕರುಗಳ ಆಕ್ಷೇಪ. ಆದ್ದರಿಂದ ಇವರೀರ್ವರು, ಇಲ್ಲಿಯ ತನಕವು ತಮಗೆ ಶತ್ರುವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು. ತಮಗೆ ಅನ್ಯಾಯ ಮಾಡಿದ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಪಣವನ್ನು ಸಹ ತೊಟ್ಟಿದ್ದಾರೆ.

ಇಲ್ಲಿ ಪಕ್ಷಾಂತರ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷದ ಚಿನ್ಹೆಯ ಬದಲಾವಣೆಯಲ್ಲ, ಬದಲಿಗೆ ಅದು ತತ್ತ್ವ-ಸಿದ್ಧಾಂತಗಳ ಪರ-ವಿರೋಧದ ರಾಜಕಾರಣವಾಗಿ ರಾಜಕಾರಣಿಯು ತೆಗೆದುಕೊಳ್ಳುವ ನಿಲುವು ಎಂದು ವಾದಿಸಲಾಗುತ್ತದೆ. ಒಂದು ರಾಜಕೀಯ ಪಕ್ಷವನ್ನು ನಮ್ಮ ತಾಯಿ, ನಾವು ಈ ಸಿದ್ಧಾಂತಗಳಿಗೆ ಕಟಿಬದ್ದರಾಗಿದ್ದೇವೆ ಎಂದು ದಶಕಗಳ ಕಾಲ ಹೆಳಿಕೊಂಡಿದ್ದ ಬಿಜೆಪಿಯ ಇಬ್ಬರು ನಾಯಕರುಗಳು ತಮಗೆ ಟಿಕೆಟ್ ಸಿಗದ ಕಾರಣಕ್ಕಾಗಿ ರಾತ್ರೋರಾತ್ರಿ ಪಕ್ಷಾಂತರವನ್ನು ಮಾಡುತ್ತಾರೆ. ಈ ಘಟನೆಯನ್ನು ನೋಡುತ್ತಿದ್ದರೆ ಭಾರತೀಯ ರಾಜಕೀಯದಲ್ಲಿ ತತ್ತ್ವ-ಸಿದ್ಧಾಂತದ ಸ್ಥಾನಮಾನಗಳೇನು ಎನ್ನುವ ಪ್ರಶ್ನೆಯು ಬರುತ್ತದೆ. ಯಾಕೆಂದರೆ ತಾವು ಯಾರನ್ನು ವಿರೋಧಿಗಳು ಎನ್ನುತ್ತಿದ್ದರೋ ಅದೇ ಕಾಂಗ್ರೆಸ್ ಪಕ್ಷವನ್ನು ಇಂದು ಈ ಇಬ್ಬರು ನಾಯಕರೂ ಸಹ ಗೆಲ್ಲಿಸಲು ಹೊರಟಿದ್ದಾರೆ. ಇಲ್ಲಿ ವಿರೋಧವಿರುವುದು ತತ್ತ್ವ-ಸಿದ್ಧಾಂತಗಳಿಗೆ ವಯಕ್ತಿಕವಾಗಿ ಅಲ್ಲ. ಹಾಗಾದರೆ ಈ ತರಹದ ವಯಕ್ತಿಕ ಪಕ್ಷಾಂತರದ ಅರ್ಥವೇನು? ಮೇಲಿನ ಉದಾಹರಣೆಯಲ್ಲಿ ಇಬ್ಬರ ರಾಜಕಾರಣ ಬಹಳ ತತ್ತ್ವ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ ಕಾಣುವುದಿಲ್ಲ. ಬಿಜೆಪಿಯಲ್ಲಿ ಈ ಇಬ್ಬರೂ ನಾಯಕರಿಗೆ ಟಿಕೆಟ್ ಸಿಗದಿರುವುದು ಅವರ ಈ ನಿರ್ಧಾರಕ್ಕೆ ಕಾರಣ. ಅಂದರೆ ಒಬ್ಬ ವ್ಯಕ್ತಿ ಯಾವುದೇ ತತ್ತ್ವ-ಸಿದ್ಧಾಂತಗಳ ಜೊತೆಗಿರುವುದು ತನಗೆ ರಾಜಕೀಯ ಅಧಿಕಾರ ದೊರೆಯುತ್ತದೆ ಎನ್ನುವ ಕಾರಣಕ್ಕಾಗಿ ಮಾತ್ರವೇ. ತಮಗೆ ರಾಜಕೀಯ ಅಧಿಕಾರ ಲಾಭಗಳನ್ನು ದೊರಕಿಸದ ತತ್ತ್ವ-ಸಿದ್ಧಾಂತಗಳನ್ನು ಬಿಟ್ಟು, ಅಧಿಕಾರವನ್ನು ಕೊಡಿಸುವ ಹೊಸ ತತ್ತ್ವ-ಸಿದ್ಧಾಂತಗಳನ್ನು ಅಪ್ಪಿಕೊಳ್ಳುತ್ತಾನೆ. ಅಂದರೆ ಇಲ್ಲಿ ರಾಜಕಾರಣಿಗಳು ಯಾವುದೇ ತತ್ತ್ವ-ಸಿದ್ಧಾಂತದ ಆಧಾರದ ಮೇಲೆ ರಾಜಕಾರಣವನ್ನು ಮಾಡುತ್ತಿಲ್ಲ. ಬದಲಾಗಿ ತಮಗೆ ಲಾಭದಾಯಕವಾದ ರಾಜಕಾರಣವನ್ನು ಅಪ್ಪಿಕೊಳ್ಳುತ್ತಾರಷ್ಟೇ. ಅಂದರೆ ಒಂದೊಂದು ಪಕ್ಷದ ರಾಜಕಾರಣಿಯು ಒಂದೊಂದು ತತ್ತ್ವ-ಸಿದ್ಧಾಂತದ ಆಧಾರದ ಮೇಲೆ ಕೆಲಸ ಮಾಡುತ್ತಾನೆ ಎಂದುಕೊಂಡರೆ ಕಣ್ಮುಂದೆ ಕಾಣುತ್ತಿರುವ ಈ ರಾಜಕೀಯ ವಿದ್ಯಮಾನಗಳನ್ನು ವಿವರಿಸಿಕೊಳ್ಳಲಾಗದು. ತಮ್ಮ ರಾಜಕೀಯ ಲಾಭ, ಅಧಿಕಾರಕ್ಕಾಗಿ ಈ  ರಾಜಕಾರಣಿಗಳು ಯಾವ ತತ್ತ್ವ-ಸಿದ್ಧಾಂತಗಳಗನ್ನು ಬೇಕಾದರು ತಮ್ಮದಾಗಿಸಿಕೊಳ್ಳುತ್ತಾರೆ. ಲಾಭದಾಯಕವಾಗಿಲ್ಲವೆಂದರೆ ಆ ತತ್ತ್ವ-ಸಿದ್ಧಾಂತಗಳನ್ನು ತೊರೆಯುತ್ತಾರೆ. ಈ ಸಂದರ್ಭಗಳನ್ನು ನೋಡುತ್ತಿದ್ದರೆ ಯಾವುದೇ ಭಾರತದ ವಿವಿಧ ರಾಜಕೀಯ ಪಕ್ಷದ ರಾಜಕಾರಣಿಯು ಯಾವುದೇ ಒಂದು ತತ್ತ್ವ-ಸಿದ್ಧಾಂತದ ಆಧಾರದ ಮೇಲೆ ರಾಜಕಾರಣವನ್ನು ನಡೆಸುತ್ತಿರುವಂತೆ ತೋರುವುದಿಲ್ಲ. ಹಾಗಾದರೆ ಈ ಪಕ್ಷ ರಾಜಕಾರಣದಲ್ಲಿ ತತ್ತ್ವ ಸಿದ್ಧಾಂತಗಳ ಚರ್ಚೆಯು ಒಂದು ಪ್ರಹಸನವಷ್ಟೇ.

ವ್ಯಕ್ತಿಗಳ ಪಕ್ಷಾಂತರದ ಜೊತೆಗೆ ವಾಸ್ತವದಲ್ಲಿ ಪಕ್ಷ-ರಾಜಕಾರಣವೂ ಕೂಡ ಬೇರೆಯದೇ ರೀತಿಯಲ್ಲಿ ಇರುವಂತೆ ತೋರುತ್ತದೆ. ಚುನಾವಣೆಯ ಈ ಸಂದರ್ಭಗಳಲ್ಲಂತೂ ಈ ವಿಮರ್ಶೆಗಳ ವಾಸ್ತವಕ್ಕೆ ಎಷ್ಟು ವಿಪರೀತವಾಗಿವೆ ಎನ್ನುವುದು ಸ್ಪಷ್ಟವಾಗಿ ತೋರುತ್ತದೆ. ಚುನಾವಣೆಯ ಪೂರ್ವದಲ್ಲಿ ಈ ಪಕ್ಷಗಳಿಗೆ ಆಯಾ ಕ್ಷೇತ್ರಕ್ಕೆ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಬೇಕಾಗುತ್ತದೆ. ಪ್ರಚಲಿತ ವಿಮರ್ಶೆಗಳ ಪ್ರಕಾರ ತತ್ತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಹಲವಾರು ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿ ದುಡಿದ ವ್ಯಕ್ತಿಯೊಬ್ಬನನ್ನು ಪಕ್ಷಗಳು ತಮ್ಮ ಅಭ್ಯರ್ಥಿಯನ್ನಾಗಿ ಆರಿಸಬೇಕು ಎಂದು ನಿರೀಕ್ಷಿಸಬೇಕಾಗುತ್ತದೆ. ಆದರೆ ಪಕ್ಷಗಳು ತಮ್ಮ ಅಭ್ಯರ್ಥಿಯ ಆಯ್ಕೆಯಲ್ಲಿ ಈ ವಿಮರ್ಶೆಗಳ ನಿರೀಕ್ಷೆಯನ್ನು ಹುಸಿ ಮಾಡುತ್ತವೆ. ಪಕ್ಷದ ತತ್ತ್ವ-ಸಿದ್ಧಾಂತಗಳನ್ನು ಒಪ್ಪಿಕೊಂಡು ಹಲವಾರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ವ್ಯಕ್ತಿಗೆ ಪಕ್ಷವು ಟಿಕೆಟನ್ನು ಕೊಡುವುದೇ ಇಲ್ಲ, ಇನ್ನಾರಿಗೋ ಟಿಕೆಟನ್ನು ಕೊಟ್ಟುಬಿಡುತ್ತದೆ. ಪ್ರತಿಯೊಂದು ಪಕ್ಷವೂ ಸಹ ತಾನು ಈ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವುದನ್ನು ಗುರಿಯಾಗಿಸಿಕೊಂಡಿರುತ್ತದೆ. ಹಾಗೆ ಗೆಲ್ಲಬೇಕಾದರೆ ಯಾವ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಆರಿಸಿದಲ್ಲಿ ತಮ್ಮ ಪಕ್ಷ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂಬುದಷ್ಟೇ ಪಕ್ಷಕ್ಕೆ ಮುಖ್ಯವಾಗುತ್ತದೆ. ಪ್ರಾಮಾಣಿಕನಾಗಿ ಪ್ರಜಾಂತತ್ರದ ಆಶಯ, ಪಕ್ಷದ ತತ್ತ್ವ-ಸಿದ್ಧಾಂತಗಳಿಗೆ ಬದ್ಧನಾಗಿ ನಡೆದ ವ್ಯಕ್ತಿ ಚುನಾವಣೆಯಲ್ಲ ಗೆಲ್ಲಲಾರ ಎಂದು ಪಕ್ಷಗಳು ಭಾವಿಸಿರುವಂತೆ ತೋರುತ್ತದೆ. ಅಂದರೆ ಇಂದಿನ ರಾಜಕೀಯ ವಿಮರ್ಶೆಗಳು ಪ್ರಜಾಂತಂತ್ರ, ತತ್ತ್ವ-ಸಿದ್ಧಾಂತದಗಳ ಆಶಯದ ಹಿನ್ನೆಲೆಯಲ್ಲಿ ಯಾವ ವ್ಯಕ್ತಿಗೆ ಪಕ್ಷವು ಟಿಕೆಟನ್ನು ಕೊಡುತ್ತದೆಂದು ಅಥವಾ ಈ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಆರಿಸಿದರೆ ಚುನಾವಣೆಯಲ್ಲಿ ಗೆಲ್ಲುತ್ತಾನೆಂದು  ಊಹಿಸತ್ತದೆಯೋ, ಅದಕ್ಕೆ ತದ್ವಿರುದ್ಧವಾಗಿ ಪಕ್ಷಗಳು ಆ ರೀತಿಯ ವ್ಯಕ್ತಿಯನ್ನು ಆತನು ಚುನಾವಣೆಯಲ್ಲಿ ಗೆಲ್ಲಲಾರ ಎಂದು ಗುರುತಿಸಿಕೊಂಡು ಟಿಕೆಟನ್ನು ಕೊಡುವುದಿಲ್ಲ. ಅಂದರೆ ಜನರ ಮತದಾನಕ್ಕೂ, ಪಕ್ಷಗಳು ತಮ್ಮ ಅಭ್ಯರ್ಥಿಯ ಆಯ್ಕೆಗೂ ಮತ್ತು ತತ್ತ್ವ-ಸಿದ್ಧಾಂತಗಳ ಚರ್ಚೆಗೂ ಸಂಬಂಧವಿದ್ಧಂತೆ ತೋರುವುದಿಲ್ಲ. ಆದರೂ ಕೂಡ ಭಾರತೀಯ ರಾಜಕಾರಣದ ಚರ್ಚೆಗಳಲ್ಲಿ ಪ್ರಜಾತಂತ್ರ ಮತ್ತು ಪಕ್ಷಗಳು ತಮ್ಮ ತತ್ತ್ವ-ಸಿದ್ಧಾಂತದ ಆಧಾರಿತವಾಗಿ ಜನರಿಂದ ಆಯ್ಕೆಗೊಳ್ಳುವುದರ ಕುರಿತು ವಿಶೇಷ ಚರ್ಚೆಮಾಡಲಾಗುತ್ತದೆ.

ಇಲ್ಲಿ ಇನ್ನೊಂದು ಸೋಜಿಗದ ಸಂಗತಿಯಿದೆ. ಶೆಟ್ಟರ್ ಮತ್ತು ಸವದಿಯವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದನ್ನು ಪ್ರಗತಿಪರರು ಅಭಿನಂದಿಸಿದರು. ಅದಲ್ಲದೆ ಈ ಇಬ್ಬರು ಪ್ರಬಲ ಲಿಂಗಾಯತ ನಾಯಕರ ಈ ನಡೆ ಫ್ಯಾಸಿಸ್ಟ್ ಪಕ್ಷವಾದ ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟಿದೆ. ಆದ್ದರಿಂದ ಇನ್ಮುಂದೆ ಫ್ಯಾಸಿಸ್ಟ್ ಸರ್ಕಾರವಾದ ಬಿಜೆಪಿಯನ್ನು ಸದೆಬಡೆದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಈ ನಾಯಕರುಗಳು ಎತ್ತಿ ಹಿಡಿಯುತ್ತಾರೆಂಬುದು ಪ್ರಗತಿಪರರ ಅಭಿಪ್ರಾಯ. ಆದರೆ ಇದೇ ಪ್ರಗತಿಪರರ ಪ್ರಕಾರ ಶೆಟ್ಟರ್ ಮತ್ತು ಸವದಿಯವರು ಬಿಜೆಪಿ ಪಕ್ಷದಲ್ಲಿ ಇರುವಾಗ ಫ್ಯಾಸಿಸ್ಟ್ ನಾಯಕರಗಳಾಗಿದ್ದರು. ಆದರೆ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ ತಕ್ಷಣಕ್ಕೆ ಪ್ರಜಾಪ್ರಭುತ್ವದ ಮೌಲ್ಯದ ಪ್ರತಿಪಾದಕರಾದರು. ಅಂದರೆ ಪ್ರಗತಿಪರರಿಗೆ ಒಪ್ಪಿತವಾದ ಒಂದು ಪಕ್ಷವಿದೆ. ಆ ಪಕ್ಷದ ಜೊತೆ ಕಾಣಿಸಿಕೊಂಡವರು ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷರು. ಪ್ರಗತಿಪರರಿಗೆ ಒಪ್ಪಿತವಲ್ಲದ ಪಕ್ಷದ ಜೊತೆ ಕಾಣಿಸಿಕೊಂಡವರು ಫ್ಯಾಸಿಸ್ಟ್ ಗಳು, ಕೋಮುವಾದಿಗಳೂ ಆಗುತ್ತಾರೆ. ಅಂದರೆ ತಮ್ಮವರು ಇತರರು ಎಂದು ಗುರಿತಿಸುವ ಕಪ್ಪು ಬಿಳುಪಿನ ರಾಜಕಾರಣ ಪ್ರಗತಿಪರರದ್ದು. ಈ ಸಮಸ್ಯೆ ಕೇವಲ ಪ್ರಗತಿಪರರದ್ದು ಮಾತ್ರವಲ್ಲ, ಹಿಂದುತ್ವದ ಗುಂಪಿನವರಿಗೂ ಪ್ರಸ್ತುತವೇ.

ಜಾತಿರಾಜಕಾರಣವೆಂಬ ಅರ್ಥವಾಗದ ಮಾತು

ಶೆಟ್ಟರ್ ಮತ್ತು ಸವದಿಯವರು ಬಿಜೆಪಿಯನ್ನು ತೊರೆದ ಮೇಲೆ ಲಿಂಗಾಯತರ ಅವಮಾನದ ಕೂಗು ಕೇಳಿಬರುತ್ತಿದೆ. ಯಾಕೆಂದರೆ ಶೆಟ್ಟರ್ ಮತ್ತು ಸವದಿಯವರು ಪ್ರಬಲವಾದ ಲಿಂಗಾಯತ ನಾಯಕರು. ಲಿಂಗಾಯತರನ್ನು ಅವಮಾನಿಸುವ ಉದ್ದೇಶದಿಂದಲೇ ಬಿಜೆಪಿಯು ಈ ಇಬ್ಬರು ನಾಯಕರುಗಳಿಗೆ ಟಿಕೆಟನ್ನು ಕೊಟ್ಟಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲೇ ರಾಜಕೀಯ ವಿಮರ್ಶೆಯು ಜಾತಿರಾಜಕಾರಣದತ್ತ ಸಾಗಿದೆ. ಜಾತಿಯ ಆಧಾರದ ಮೇಲೆ ಭಾರತದ ಮತದಾನವು ನಿರ್ಧರಿಸಲ್ಪಡುತ್ತದೆ ಎನ್ನುವುದು ರಾಜಕೀಯ ವಿಮರ್ಶಕರ ಮತ್ತು ಹಲವು ಚಿಂತಕರ ಅಭಿಪ್ರಾಯವಾಗಿದೆ. ಆದ್ದರಿಂದ ಈಗಿನ ಚುನಾವಣೆಯಲ್ಲಿ, ಜಾತಿ ರಾಜಕಾರಣದ ನಿರೂಪಣೆಯ ಪ್ರಕಾರ, ಲಿಂಗಾಯತರ ಮತಗಳು ಬಿಜೆಪಿಗೆ ದಕ್ಕುವುದಿಲ್ಲ ಎನ್ನಲಾಗುತ್ತಿದೆ.

ಈ  ವಿಮರ್ಶೆಯು ಇನ್ನೂ ಮುಂದಕ್ಕೆ ಸಾಗಿದೆ.  ಹುಬ್ಬಳ್ಳಿ  ಸೆಂಟ್ರಲ್ನಲ್ಲಿ ಶೆಟ್ಟರ್ ಅವರಿಗೆ  ಟಿಕೆಟ್ ಸಿಕ್ಕಿಲ್ಲ ಹಾಗೂ ಯಡಿಯೂರಪ್ಪನವರನ್ನು ಚುನಾವಣೆಯಿಂದ ಹೊರಗಿಡಲಾಗಿದೆ, ಆದ್ದರಿಂದ ಎಲ್ಲ ಲಿಂಗಾಯತರ ಮತಗಳು ಈ ಸಾರಿ ಕಾಂಗ್ರೆಸ್ಸಿಗೆ ಬರುತ್ತವೆ  ಅನ್ನುವ ಚರ್ಚೆ ಒಂದು ಕಡೆ. ಇನ್ನೊಂದೆಡೆ ಈ ಬಾರಿ ಬಿಜೆಪಿಯಲ್ಲಿ ಲಿಂಗಾಯತರಿಗೆ ಅತಿ ಹೆಚ್ಚು  ಟಿಕೆಟ್ ಗಳನ್ನು ಕೊಟ್ಟಿದ್ದಾರೆ, ಹಾಗಾಗಿ ಲಿಂಗಾಯತರ ಮತಗಳು ಬಿಜೆಪಿಗೆ ಬರದೆ ಕಾಂಗ್ರೆಸ್ಸಿಗೆ ಬರುತ್ತವೆ ಎನ್ನುವುದು ಸರಿಯಲ್ಲ ಎಂದು ವಾದಿಸಲಾಗುತ್ತಿದೆ. ರಾಜಕೀಯ ವಿಶ್ಲೇಷಣೆಕಾರರ ವಿಶ್ಲೇಷಣೆಗಳು ಇಷ್ಟಕ್ಕೆ ಮುಗಿಯುವುದಿಲ್ಲ.  ಹುಬ್ಬಳ್ಳಿ ಸೆಂಟ್ರಲ್ ವಿಚಾರಕ್ಕೆ ಬಂದಾಗ ಇದು ಇನ್ನೂ ಒಂದು ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಈ ಕ್ಷೇತ್ರದಲ್ಲಿ ಯಾವ ಸಮುದಾಯದವರು ಎಷ್ಟಿದ್ದಾರೆ ಎಂಬ ಲೆಕ್ಕಾಚಾರ ಹಾಕಿ ವಿಶ್ಲೇಷಣೆ ನಡೆಸಲಾಗುತ್ತದೆ. ಹುಬ್ಬಳ್ಳಿ ಸೆಂಟ್ರಲ್-ನಲ್ಲಿ ಬಣಜಿಗರು ಮತ್ತು ಪಂಚಮಸಾಲಿ ಲಿಂಗಾಯತರು ಜಾಸ್ತಿ ಇದ್ದಾರೆ. ಬಿಜೆಪಿಯವರು ಪಂಚಮಸಾಲಿಗೆ ಮೀಸಲಾತಿ ಕೊಟ್ಟಿದ್ದಾರೆ. ಹಾಗಾಗಿ ಜಗದೀಶ್ ಶೆಟ್ಟರ್ ಬಣಜಿಗರಾಗಿವುದರಿಂದ  ಅವರಿಗೆ ಪೂರಕವಾಗುತ್ತೋ ಮಾರಕವಾಗುತ್ತೋ ಅನ್ನುವ ಲೆಕ್ಕಾಚಾರ ನಡೆಯುತ್ತಿದೆ.  ಕೆಲ ರಾಜಕೀಯ ವಿಶ್ಲೇಷಕರು ಶೆಟ್ಟರ್ ವಿರುದ್ಧ ನಿಂತಿರುವ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ, ಇವರ ತಾಯಿ ಬಣಜಿಗ ಮತ್ತು ತಂದೆ ಪಂಚಮಸಾಲಿ, ಹಾಗಾಗಿ ಈ ಎರಡೂ ಸಮುದಾಯದ ಮತಗಳು ಮಹೇಶರಿಗೆ ಬರುತ್ತವೆ ಎನ್ನುವ ವಿಶ್ಲೇಷಣೆಗಳು  ನಡೆಯುತ್ತಿವೆ. ಇದಲ್ಲದೇ ಈ ಜಾತಿರಾಜಕಾರಣದ ವಿಮರ್ಶೆಯಲ್ಲಿ ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡಗಳ(ST) ಮತದಾನದ ಚರ್ಚೆಯೂ ಸಹ ನಡೆಯುತ್ತದೆ. 

ಈ ವಿಮರ್ಶೆಗಳನ್ನು ಇಟ್ಟುಕೊಂಡು ರಾಜಕೀಯವನ್ನು ಗ್ರಹಿಸುವುದಕ್ಕೆ ಸಾಧ್ಯವಿದೆಯೇ? ಈ ವಿಮರ್ಶೆಗಳ ಮೂಲಕ ಯಾವ ರಾಜಕಾರಣಿಯು ಗೆಲ್ಲುತ್ತಾನೆಂದು ಊಹಿಸಬಹುದಾಗಿದೆಯೇ? ಈ ವಿಮರ್ಶೆಗಳು ನಮ್ಮ ರಾಜಕೀಯವು ಹೇಗೆ ನಡೆಯುತ್ತದೆ ಎಂಬುದನ್ನಾಗಲಿ ಯಾವ ರಾಜಕಾರಣಿ ಗೆಲ್ಲುತ್ತಾನೆ ಎಂಬುದನ್ನಾಗಲಿ ವಿವರಿಸುವುದಿಲ್ಲ. ಕೇವಲ ಲಿಂಗಾಯತರ ಮತಗಳ ಆಧಾರದ ಮೇಲೆ ಯಾರು ಗೆಲ್ಲುತ್ತಾರೆ ಎನ್ನಲು ಸಾಧ್ಯವಿಲ್ಲ. ಇತರ ಜಾತಿಗಳ ಲೆಕ್ಕಾಚಾರ ಇಟ್ಟುಕೊಂಡು ರಾಜಕೀಯವನ್ನು ವಿವರಿಸಲು ಸಾಧ್ಯವೇ? ಅದೂ ಸಾಧ್ಯವಿಲ್ಲ. ಯಾಕೆಂದರೆ ಕೆಲವೇ ಬ್ರಾಹ್ಮಣರ ಮತಗಳಿರುವ ಯಾವುದೋ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಅಭ್ಯರ್ಥಿ ಗೆದ್ದು ಬರುತ್ತಾನೆ. ಜಾತಿರಾಜಕಾರಣದ ವಿಮರ್ಶೆಯು ಈ ರೀತಿಯ ವಿದ್ಯಮಾನಗಳನ್ನು ವಿವರಿಸಲು ಸೋಲುತ್ತದೆ. ಇಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಲಿಂಗಾಯತರೆಲ್ಲ ಶೆಟ್ಟರಿಗೆ ಮತ್ತು ಸವದಿಯವರಿಗೆ  ಮತದಾನ ಮಾಡುತ್ತಾರೆ ಎನ್ನಲು ಸಾಧ್ಯವೇ? ಶೆಟ್ಟರ್ ಬಣಜಿಗರು ಮತ್ತು ಸವದಿಯವರು ಗಾಣಿಗರಾಗಿರುವ ಕಾರಣಕ್ಕೆ ಎಲ್ಲ ಬಣಜಿಗರು ಮತ್ತು ಗಾಣಿಗರ ಮತಗಳು ಇವರಿಗೆ ಬರುತ್ತವೆಯೇ? ಶೆಟ್ಟರಿಗೆ ಮತ್ತು ಸವದಿಯವರಿಗೆ ಟಿಕೆಟ್ ಕೊಡದ ಕಾರಣಕ್ಕೆ  ಬಣಜಿಗ ಮತ್ತು ಗಾಣಿಗ ಲಿಂಗಾಯತರು  ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದಾದರೆ, ಮೀಸಲಾತಿ ಸೌಕರ್ಯವನ್ನು ಒದಗಿಸಿದ್ದಕ್ಕೆ  ಪಂಚಮಸಾಲಿ ಲಿಂಗಾಯತರು ಮತ್ತು ಸಾದರ ಲಿಂಗಾಯತರು  ಬಿಜೆಪಿ ಪರವಾಗಿದ್ದಾರೆ ಎಂದು ಹೇಳಬೇಕಾಗುತ್ತದೆ. ಈ ರಾಜಕೀಯ ವಿಮರ್ಶೆಯಲ್ಲಿ ಯಾರೂ ಏನನ್ನು ಬೇಕಾದರೂ ಹೇಳಬಹುದು. ಜಗದೀಶ್ ಶೆಟ್ಟರ್ ಅಥವಾ ಮಹೇಶ್ ಟೆಂಗಿನಕಾಯಿ ಇಬ್ಬರಲ್ಲಿ ಒಬ್ಬರು ಗೆಲ್ಲುತ್ತಾರೆ ಅಂದುಕೊಳ್ಳೋಣ. ಶೆಟ್ಟರ್ ಗೆದ್ದರೆ ಅಲ್ಲಿ ಬಣಜಿಗರ ಮತಗಳು ಜಾಸ್ತಿ ಇದ್ದವು ಹಾಗಾಗಿ ಗೆದ್ದರು ಎನ್ನುವುದು. ಅದೇ ಮಹೇಶರು  ಗೆದ್ದರೆ ಅವರ ತಾಯಿ ಬಣಜಿಗರು, ತಂದೆ ಪಂಚಮಸಾಲಿ ಹೀಗಾಗಿ ಗೆದ್ದರು ಎನ್ನುವುದು. ಒಟ್ಟಾರೆಯಾಗಿ  ಜಾತಿ ಎಂದರೇನು ಎಂಬುದರ ಅರಿವೇ ಇಲ್ಲದೆ ಜಾತಿರಾಜಕಾರಣದ ಸುತ್ತ ಚರ್ಚೆ ನಡೆಯುತ್ತಿದೆ. 

ಜಾತಿರಾಜಕಾರಣದ ಈ ಚರ್ಚೆಯಲ್ಲಿ ಲಿಂಗಾಯತ ಜಾತಿಯೋ? ಬಣಜಿಗ, ಗಾಣಿಗ, ಪಂಚಮಸಾಲಿ ಇವುಗಳು ಜಾತಿಗಳೋ ಎನ್ನುವುದು ಗೊತ್ತಾಗುವುದಿಲ್ಲ.  ಅಥವಾ ಲಿಂಗಾಯತ ಜಾತಿಯಲ್ಲಿ ಬಣಜಿಗ, ಗಾಣಿಗ, ಪಂಚಮಸಾಲಿ ಇವುಗಳು ಉಪಜಾತಿಗಳೋ?  ಇವು ಉಪಜಾತಿಗಳಾದರೆ ಇದು ಜಾತಿರಾಜಕಾರಣವು ಹೇಗಾಗುತ್ತದೆ?  ಇದನ್ನು ಉಪಜಾತಿ ರಾಜಕಾರಣ ಎಂದು ಕರೆಯಬೇಕಾಗುತ್ತದೆ.  ಜಾತಿ ರಾಜಕಾರಣದ ಈ ರಾಜಕೀಯ ವಿಮರ್ಶೆಗಳನ್ನು ಗಮನಿಸಿದರೆ ಜಾತಿ ಎಂದು ಚರ್ಚಿಸುವಾಗ ಯಾವ ರೀತಿಯ ಗುಂಪುಗಳ ಕುರಿತು ಚರ್ಚಿಸಲಗುತ್ತಿದೆ ಎಂದು ತಿಳಿಯುವುದಿಲ್ಲ. ಇಲ್ಲಿ ಲಿಂಗಾಯತ  ಜಾತಿಯೇ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಲಿಂಗಾಯತ ಯಾಕೆ ಜಾತಿಯಾಗಬೇಕು?  ಬಣಜಿಗ, ಗಾಣಿಗ, ಪಂಚಮಸಾಲಿ ಇವುಗಳು ಯಾಕೆ  ಜಾತಿಗಳಾಗಬಾರದು? ಇವುಗಳೆಲ್ಲ ಉಪಜಾತಿಗಳಾದರೆ ಯಾಕಿವು ಉಪಜಾತಿಗಳು?  ಇವು ಈ ಜಗತ್ತಿನ ಯಾವ ರೀತಿಯ  ವಿದ್ಯಮಾನಗಳು ಎನ್ನುವುದರ ಬಗ್ಗೆ ನಮಗಿಂದು ತಿಳಿವಳಿಕೆ ಇದ್ದಂತಿಲ್ಲ.  ಅಂದರೆ ಭಾರತದಲ್ಲಿ ಚುನಾವಣೆಯ  ರಾಜಕಾರಣ ಜಾತಿಯ ಮೇಲೆ ನಿರ್ಧಾರಿತವಾಗುತ್ತದೆ ಎನ್ನುವವರಿಗೆ ತಾವು ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದರ ಸ್ಪಷ್ಟತೆಯಿಲ್ಲ. ಚುನಾವಣೆಯ ಫಲಿತಾಂಶಗಳನ್ನು ಯಾವುದೋ ಒಂದು ಚೌಕಟ್ಟಿನಲ್ಲಿ ಇರಿಸುವ ಪ್ರಯತ್ನವು ರಾಜಕೀಯ ವಿಮರ್ಶಕರದ್ದು. ಹೊರತಾಗಿ ತಮ್ಮ ಚೌಕಟ್ಟಿನಿಂದ ಇವರು ಗೆಲ್ಲುತ್ತಾರೆ, ಈ ರೀತಿಯ ರಾಜಕಾರಣವು ನಡೆಯುತ್ತಿದೆ, ಈ ರೀತಿಯ ಫಲಿತಾಂಶವು ಬರುತ್ತದೆ ಎನ್ನುವುದನ್ನು ವಿವರಿಸಲು ಸಾಧ್ಯವಿಲ್ಲ. ಹಾಗಾಗಿ ಜಾತಿರಾಜಕಾರಣದ ಚರ್ಚೆಯು ವಿಮರ್ಶೆಯು ಒಂದು ಅರ್ಥಹೀನ ಮಾತಿನಂತೆ ಭಾಸವಾಗುತ್ತದೆ.

ಎತ್ತು ಏರಿಗೆ ಕೋಣ ನೀರಿಗೆ

ಈಗಾಗಲೇ ನೋಡಿದಂತೆ ಇಂದಿನ ರಾಜಕೀಯ ವಿಮರ್ಶೆಗಳು, ರಾಜಕಾರಣವು ತತ್ತ್ವ-ಸಿದ್ಧಾಂತ, ಐಡಿಯಾಲಜಿಗಳ ಮೇಲೆ ನಿಂತಿದೆ ಎಂದು ವಿವರಿಸಲು ಯತ್ನಿಸುತ್ತವೆ. ಜಾತಿಗಳ ಆಧಾರದ ಮೇಲೆ ರಾಜಕಾರಣವು ನಿಂತಿದೆಯೆಂದು ಬಿಂಬಿಸಲು ಯತ್ನಿಸುತ್ತವೆ. ಆದರೆ ವಿಮರ್ಶೆಗಳಾಚೆಗಿನ ರಾಜಕೀಯ ಪಕ್ಷದ ಮತ್ತು ರಾಜಕಾರಣಿಗಳ ನಡೆ, ನಿಲುವುಗಳು ಈ ವಿಮರ್ಶೆಯನ್ನು ತಲೆಕೆಳಗೆ ಮಾಡುತ್ತವೆ. ಈ ವಿಮರ್ಶೆಗಳ ವಿಫಲತೆಯನ್ನು ಎತ್ತಿ ತೋರಿಸುತ್ತವೆ.

ಭಾರತದ ಪ್ರಜಾತಂತ್ರದ ರಾಜಕಾರಣದ ಚರ್ಚೆಯ ಬಹುಮುಖ್ಯ ವಿಷಯವೆಂದರೆ ಜನ ಪ್ರತಿನಿಧಿಗಳ ಆಯ್ಕೆ. ಕೆಲವು ರಾಜಕಾರಣಿಗಳು ಚುನಾವಣೆಯ ಮೂಲಕ ಜನರನ್ನು ಪ್ರತಿನಿಧಿಸುವ ಅಧಿಕಾರವನ್ನು ಪಡೆದುಕೊಳ್ಳುವ ಪ್ರಕ್ರಿಯೆ ಇಲ್ಲಿ ಅತ್ಯಂತ ಮುಖ್ಯವೂ ಹಾಗೂ ಪ್ರಜಾತಂತ್ರದ ಹೃದಯವೂ ಆಗಿದೆಯೆಂದು ವಿವರಿಸಲಾಗುತ್ತದೆ. ಇಲ್ಲಿ ನಮಗಿರುವ ಮುಖ್ಯ ಪ್ರಶ್ನೆಯೆಂದರೆ  ಜನರ ಪರವಾಗಿ ಒಬ್ಬ ರಾಜಕಾರಣಿಯು ಭಾರತದಲ್ಲಿ ಏನನ್ನು ಪ್ರತಿನಿಧಿಸುತ್ತಾನೆ? ಜನರು ಯಾವ ಜನ-ಪ್ರಾತಿನಿಧ್ಯಕ್ಕೆ ತಮ್ಮ ಮತದಾನವನ್ನು ಮಾಡುತ್ತಾರೆ ಎನ್ನುವುದಾಗಿದೆ. ಇಲ್ಲಿ ಒಬ್ಬ ರಾಜಕಾರಣಿಯು ಯಾವುದೇ ತತ್ತ್ವ-ಸಿದ್ಧಾಂತವನ್ನು ಪ್ರತಿನಿಧಿಸುತ್ತಾನೆ ಎನ್ನಲು ಬಾರದು. ಯಾಕೆಂದರೆ ಈಗ ಫ್ಯಾಸಿಸ್ಟ್ ಮತ್ತು ಕೋಮುವಾದಿಯಾಗಿರುವ ರಾಜಕಾರಣಿಯು ಗಂಟೆಯೊಳಗಾಗಿ ಸೆಕ್ಯುಲರ್ ಆಗಬಲ್ಲ. ಎಸ್.ವಿ.ದತ್ತರಂತಹ ಕೆಲ ರಾಜಕಾರಣಿಗಳು ಸರಾಗವಾಗಿ ಜೆಡಿಎಸ್, ಕಾಂಗ್ರೆಸ್ ಅಥವಾ ಇನ್ನು ಯಾವುದೇ ಪಕ್ಷಕ್ಕೆ ಬೇಕಾದರೂ, ಯಾವಾಗ ಬೇಕಾದರೂ ಹೋಗಿ ಬರಬಲ್ಲರು. ಹಾರ್ದಿಕ್ ಪಟೇಲ್,  ಅಲ್ಪೇಶ್ ಠಾಕೂರ್ ಹಿಂದೆ  ಬಿಜೆಪಿಯನ್ನು ಫ್ಯಾಸಿಸ್ಟ್, ಕೋಮುವಾದಿಯೆಂದು ಬಯ್ಯುತ್ತಿದ್ದರು.  ಇವತ್ತು ಅವರೆಲ್ಲ ಅದೇ ಬಿಜೆಪಿಯ  ನಾಯಕರು,  ಹಿಂದುತ್ವವಾದಿಗಳು ಆಗಿರುವರು.  ಹಿಂದಿನ ಸೆಕ್ಯುಲರ್ ನಾಯಕರುಗಳು ಇಂದು  ಬಿಜೆಪಿಯ ಹಿಂದುತ್ವವಾದಿಗಳು.  ಹಾಗೆಯೇ  ನಿನ್ನೆಯ ತನಕ ಪ್ರಖರ ಹಿಂದುತ್ವವಾದಿಯಾಗಿದ್ದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ  ರಾತ್ರೋರಾತ್ರಿ ಸೆಕ್ಯುಲರ್-ಗಳಾಗಿದ್ದಾರೆ. ಹಾಗಿದ್ದರೆ ರಾಜಕಾರಣಿಯೊಬ್ಬನನ್ನು ಮತದಾರ ತನ್ನ ಪರವಾಗಿ ಯಾವುದೋ ಒಂದು ತತ್ತ್ವ-ಸಿದ್ಧಾಂತವನ್ನು ಪ್ರತಿನಿಧಿಸಲು ಚುನಾಯಿಸಿದ್ದಾನೆ ಎನ್ನುವುದು ಕಷ್ಟ.

ಅಂತೆಯೇ ಈ ಜನಪ್ರತಿನಿಧಿಯನ್ನು ಜನರು ಯಾವುದೋ ಜಾತಿಯನ್ನು ಪ್ರತಿನಿಧಿಸಲು ಚುನಾಯಿಸಿದ್ದಾರೆ ಎನ್ನಲಾಗದು. ಅಷ್ಟೇ ಅಲ್ಲದೇ ಯಾವ ರಾಜಕೀಯ ವಿಮರ್ಶೆಗಳಿಗೂ ಸಹ ಜಾತಿ ಎಂದರೇನು ಎಂಬುದೇ ಸ್ಪಷ್ಟವಿಲ್ಲದಿರುವಾಗ ಒಬ್ಬ ರಾಜಕಾರಣಿಯು ಜಾತಿಯನ್ನು ಪ್ರತಿನಿಧಿಸುತ್ತಾನೆ ಎನ್ನುವುದು ಅರ್ಥಹೀನ ಮಾತು. ಹಾಗಿರುವಾಗ ರಾಜಕಾರಣಿಯೊಬ್ಬ ಏನನ್ನು ಪ್ರತಿನಿಧಿಸುತ್ತಿದ್ದಾನೆ ಮತ್ತು ಜನರು ಯಾವ ಜನ-ಪ್ರಾತಿನಿಧ್ಯಕ್ಕೆ ತಮ್ಮ ಮತದಾನ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯು ಬರುತ್ತದೆ.   ಈ ಎಲ್ಲ ಘಟನೆಗಳನ್ನು ನೋಡಿದಾಗ ಭಾರತೀಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾತಿನಿಧ್ಯ ಮತ್ತು ಮತದಾನಗಳ ಕುರಿತು ಪ್ರಶ್ನೆಯು ಮೂಡುತ್ತದೆ. ಭಾರತದ ರಾಜಕೀಯದ ಕುರಿತ ನಮ್ಮ ಅರಿವಿಗೆ ಈ ಘಟನಾವಳಿಗಳು ಸವಾಲನ್ನು ಒಡ್ಡುತ್ತವೆ. ನಮಗೆ ಸಂಬಂಧವೇ ಇಲ್ಲದ ಪ್ರಭುತ್ವದ ಒಂದು ಮಾದರಿಯನ್ನು ನಾವು ತಂದುಕೊಂಡಿದ್ದೇವೆ. ಅದನ್ನು ನಾವು ‘ಉದಾರವಾದಿ ಪ್ರಜಾಪ್ರಭುತ್ವ ವ್ಯವಸ್ಥೆ’ ಎಂದು ಕರೆಯುತ್ತೇವೆ.  ಅಂದರೆ ಅದು ಪ್ರಾತಿನಿಧ್ಯದ ಒಂದು ವ್ಯವಸ್ಥೆ. ನನ್ನ ಮತದಿಂದ ನನ್ನ ಪ್ರತಿನಿಧಿಯನ್ನು ಚುನಾಯಿಸುವುದು ಎನ್ನುವುದು ಇದರ ಅರ್ಥವಿದೆ.  ಇದು ಸಂವಿಧಾನದ ಅಡಿಯಲ್ಲಿ ನಾವು ಸಾಂಸ್ಥಿಕವಾಗಿ ಕಟ್ಟಿಕೊಂಡಿರುವ ಒಂದು ವ್ಯವಸ್ಥೆ.  ಆದರೆ ಇದರ ಜೊತೆಗೆ ನಾವು ವ್ಯವಹಾರ ಮಾಡುತ್ತಿರುವುದು ಹೇಗೆ?  ಮತದಾರರು ಮತ ಹಾಕುತ್ತಿರುವುದು ಯಾವ ಕಾರಣಕ್ಕಾಗಿ ಎನ್ನುವುದು ಇನ್ನೂ ನಮಗೆ ಗೊತ್ತಿಲ್ಲ. ಪಶ್ಚಿಮದಿಂದ ಆಮದು ಮಾಡಿಕೊಂಡ ಈ ಪ್ರಜಾಪ್ರಭುತ್ವದ ವ್ಯವಸ್ಥೆಯೊಡನೆ ಭಾರತೀಯರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಇಲ್ಲಿ ಅರ್ಥವಾಗುತ್ತಿಲ್ಲ. ರಾಜಕೀಯ ವಿಮರ್ಶೆಗಳು ಪಶ್ಚಿಮದಲ್ಲಿ ಬೆಳೆದ ರಾಜಕೀಯ ಸಿದ್ಧಾಂತಗಳ ಆಧಾರದ ಹಿನ್ನೆಲೆಯಲ್ಲಿ ಭಾರತದ ರಾಜಕೀಯವನ್ನು ಗ್ರಹಿಸಿಕೊಳ್ಳಲು ಯತ್ನಿಸುತ್ತಿವೆ. ಆದರೆ ಪ್ರತಿಬಾರಿಯೂ ಈ ರಾಜಕೀಯ ವಿಮರ್ಶೆಗಳೂ ಸಹ ಭಾರತದ ರಾಜಕೀಯವನ್ನು ಗ್ರಹಿಸಿಕೊಳ್ಳಲು ಮತ್ತು ವಿವರಿಸಲು ಸೋಲುತ್ತವೆ. ಎತ್ತು ಏರಿಗೆ, ಕೋಣ ನೀರಿಗೆ ಎನ್ನುವ ಮಾತಿನಂತೆ ರಾಜಕೀಯ ವಿಮರ್ಶೆಗಳು ಒಂದೆಡೆಯಾದರೆ, ಈ ವಿಮರ್ಶೆಗಳಾಚೆಗೆ ರಾಜಕೀಯವು ಇನ್ನೊಂದು ದಿಕ್ಕಿನಲ್ಲಿ ನಡೆಯುತ್ತ ಸಾಗಿದೆ. ರಾಜಕೀಯ ವಿಮರ್ಶೆಗೂ ಭಾರತದಲ್ಲಿ ನಡೆಯುವ ರಾಜಕೀಯಕ್ಕೂ ಏನೂ ಸಂಬಂಧವಿದ್ಧಂತೆ ತೋರುವುದಿಲ್ಲ. ರಾಜಕೀಯ ಸಿದ್ಧಾಂತಗಳು ಪಶ್ಚಿಮದ್ದು ಎನ್ನುವ ಕಾರಣಕ್ಕೆ ಈ ಮೇಲಿನ ಸಮಸ್ಯೆಗಳಿವೆ ಎಂಬುದು ನಮ್ಮ ವಾದವಲ್ಲ. ಈ ರಾಜಕೀಯ ಸಿದ್ಧಾಂತಗಳು ಪಶ್ಚಿಮಕ್ಕಿಂತ ವಿಭಿನ್ನವಾಗಿ ಭಿನ್ನವಾಗಿರುವ ಭಾರತೀಯ ಸಂಸ್ಕೃತಿಯ ರಾಜಕೀಯ ವಿದ್ಯಮಾನಗಳನ್ನು ವಿವರಿಸಲು ಅಸಫಲವಾಗುತ್ತಿರುವುದು ಸಮಸ್ಯೆ. ಆದ್ದರಿಂದ ಭಾರತದ ರಾಜಕೀಯವನ್ನು ಗ್ರಹಿಸುವಂತಹ ಪರ್ಯಾಯ ರಾಜಕೀಯ ಚಿಂತನೆ ಮತ್ತು ಸಿದ್ಧಾಂತಗಳನ್ನು ಬೆಳೆಸುವ ಅವಶ್ಯಕತೆಯು ಅನಿವಾರ್ಯತೆಯೂ ಇದೆ. ಆ ರೀತಿಯ ಚಿಂತನೆಗಳನ್ನು ಗ್ರಹಿಸದಿದ್ದರೆ ಪ್ರಜಾತಂತ್ರದ ಹೆಸರಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ.

Authors

Chaitra M.S.

Chaitra M.S. is Associate Professor at Chanakya University and Director of Aarohi Research Foundation, Bengaluru. He is a Biologist by training and currently, his work revolves around understanding cultural differences, colonialism, and the study of Indian traditions.

You may also like

Leave a Comment

Message Us on WhatsApp