ಸೆಕ್ಯುಲರಿಸಂ ಎಂಬ ಶಬ್ದಕ್ಕೆ ‘ಸರ್ವಧರ್ಮಸಮಭಾವ’ ಎಂಬ ಭಾಷಾಂತರವೂ ಇದೆ. ಇಲ್ಲಿ ಧರ್ಮ ಎಂದರೆ ರಿಲಿಜನ್ನು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಂದುಕೊಂಡಿದ್ದೇನೆ. ಸೆಕ್ಯುಲರಿಸಂಗೆ ‘ಧರ್ಮ ನಿರಪೇಕ್ಷತೆ’ ಎಂಬ ಮತ್ತೊಂದು ಭಾಷಾಂತರವೂ ಇದೆ. ಸಾಂಪ್ರದಾಯಿಕ ಅರ್ಥದಲ್ಲಿ ಧರ್ಮ ಎಂದರೆ ಒಳ್ಳೆಯ ಕೆಲಸ ಎಂಬರ್ಥ ಬರುತ್ತದೆ, ಎಲ್ಲಾ ಒಳ್ಳೆಯ ಕೆಲಸಗಳನ್ನೂ ಸಮಾನವಾಗಿ ನೋಡಬೇಕೆಂಬುದಾಗಿ, ಅಥವಾ ಯಾವ ಒಳ್ಳೆಯ ಕೆಲಸಗಳಿಗೂ ಅಂಟಿಸಿಕೊಳ್ಳಬಾರದೆಂಬುದಾಗಿ ಹೇಳುವುದು ಅಂಥ ವಾಕ್ಯಗಳ ಅರ್ಥವಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಇತ್ಯಾದಿ ಪಂಗಡಗಳನ್ನು ಸಮಾನವಾಗಿ ನೋಡುವುದು ಅಥವಾ ಅವುಗಳಿಗೆ ನಿರ್ಲಿಪ್ತವಾಗಿರುವುದು ಎಂಬುದು ಅವುಗಳ ಬಳಕೆಯ ಅರ್ಥವಾಗಿದೆ. ಏಕೆಂದರೆ ಇವೆಲ್ಲ ರಿಲಿಜನ್ನುಗಳಾಗಿವೆ ಹಾಗೂ ರಿಲಿಜನ್ನಿನ ಭಾಷಾಂತರವಾಗಿ ಧರ್ಮ ಎಂಬ ಶಬ್ದವನ್ನು ನಾವು ಬಳಸುತ್ತಿದ್ದೇವೆ.
ಸೆಕ್ಯುಲರ್ ನೀತಿಯ ಪ್ರಕಾರ ಒಂದು ಸೆಕ್ಯುಲರ್ ಸರ್ಕಾರವು ಎಲ್ಲಾ ರಿಲಿಜನ್ನುಗಳನ್ನೂ ಸಮಭಾವದಿಂದ ನೋಡಬೇಕು. ಆದರೆ ವಾಸ್ತವದಲ್ಲಿ ಈ ನೀತಿಗೆ ಒಂದು ನಿರ್ದಿಷ್ಟ ಸ್ವರೂಪವಿದೆ ಎಂಬುದನ್ನು ಗಮನಿಸದೇ ಇರಲು ಸಾಧ್ಯವಿಲ್ಲ. ಅದೆಂದರೆ ಸರ್ವಧರ್ಮಸಮಭಾವ ಎಂಬುದು ನಮ್ಮ ದೇಶದ ಮುಸ್ಲಿಂ ಹಾಗೂ ಕ್ರೈಸ್ತ ರಿಲಿಜನ್ನುಗಳ ರಕ್ಷಣೆಗೆ ಅಗತ್ಯವಾಗಿದೆ ಎಂಬ ಧೋರಣೆಯಿದೆ. ಬಹುಸಂಖ್ಯಾತ ಹಿಂದೂಗಳಿಂದ ಅವರನ್ನು ರಕ್ಷಿಸುವುದು ನಮ್ಮ ಸೆಕ್ಯುಲರ್ ನೀತಿಯ ಹೊಣೆ ಎಂಬುದಾಗಿ ಒಂದು ಗುಂಪು ಪ್ರತಿಪಾದಿಸುತ್ತದೆ. ಹಾಗೂ ಅದೇ ಅಧಿಕೃತವಾದ ಸೆಕ್ಯುಲರಿಸಂ ಎಂಬುದಾಗಿ ಬಿಂಬಿಸಲಾಗಿದೆ. ಈ ನೀತಿಯಿಂದ ಅಲ್ಪಸಂಖ್ಯಾತರನ್ನು ಓಲೈಸಲಾಗುತ್ತಿದೆ, ಬಹುಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ, ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ, ಇದು ತಾರತಮ್ಯ, ಸರ್ವಧರ್ಮಸಮಭಾವವಲ್ಲ ಎಂಬುದಾಗಿ ಮತ್ತೊಂದು ಗುಂಪು ತಕರಾರು ಮಾಡುತ್ತಿದೆ. ಈ ಎರಡನೆಯ ಗುಂಪನ್ನು ಕೋಮುವಾದಿ ಎಂಬುದಾಗಿ ಬಿಂಬಿಸಲಾಗಿದೆ. ವಾಸ್ತವದಲ್ಲಿ ಈ ಎರಡೂ ತಕರಾರುಗಳೂ ಸೆಕ್ಯುಲರಿಸಂ ಎಂಬ ನೀತಿಯಿಂದ ಹುಟ್ಟಿಕೊಂಡಿವೆ.
ಈ ತಕರಾರುಗಳನ್ನು ಕೇಳಿದ ಯಾರಿಗಾದರೂ ಸೆಕ್ಯುಲರ್ ನೀತಿಯಲ್ಲಿ ಮುಸ್ಲಿಂ, ಕ್ರೈಸ್ತ ಇತ್ಯಾದಿ ಹಣೆಪಟ್ಟಿಗಳಿಗೆ ಮಾತ್ರವೇ ಏಕಿಷ್ಟು ಮಹತ್ವ ನೀಡಬೇಕು ಎಂಬ ಕುತೂಹಲ ಏಳಬಹುದು. ಏಕೆಂದರೆ ನಮ್ಮಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಎಂಬುದಾಗಿ ಕರೆಯಬಹುದಾದ ಈ ಮೇಲಿನ ಎರಡೇ ಗುಂಪುಗಳು ಮಾತ್ರ ಇಲ್ಲ. ಇನ್ನೂ ಎಷ್ಟೆಷ್ಟೋ ಇವೆ. ಸಿಖ್ಖರು, ಬೌದ್ಧರು, ಜೈನರು, ಫಾರಸಿಗಳು, ಯೆಹೂದಿಗಳು, ಇತ್ಯಾದಿ. ಆದರೆ ಹಿಂದೂ ಎಂಬುದು ಪ್ರದೇಶವಾಚಕ ಎಂಬುದಾಗಿ ನಾವಿಂದು ಕಂಡುಕೊಂಡಿದ್ದೇವೆ. ಹಾಗಿದ್ದಲ್ಲಿ ಇದೇ ಪ್ರದೇಶದಲ್ಲೇ ರೂಪುತಳೆದ ಸಿಖ್ಖರು, ಜೈನರು, ಬೌದ್ಧರು ಏಕೆ ಹಿಂದೂಗಳಲ್ಲ, ಎಂಬ ಪ್ರಶ್ನೆ ಏಳುತ್ತದೆ. ಇವರನ್ನೆಲ್ಲ ಅಲ್ಪಸಂಖ್ಯಾತ ರಿಲಿಜನ್ನುಗಳು ಎನ್ನುವುದಾದರೆ ಇದೇ ಪ್ರದೇಶದಲ್ಲೇ ರೂಪುಗೊಂಡ ಲಿಂಗಾಯತರು, ಶ್ರೀವೈಷ್ಣವರು, ಮಾಧ್ವರು, ವಾರ್ಕರಿಗಳು, ಚೈತನ್ಯ ಪಂಥ, ಕಬೀರ ಪಂಥ, ಹೀಗೆ ಇಂಥವೇ ಅಸಂಖ್ಯಾತ ಗುಂಪುಗಳು ಕೂಡಾ ಅಲ್ಪಸಂಖ್ಯಾತ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು ಏಕೆ ಯೋಗ್ಯವಲ್ಲ ಎಂಬ ಪ್ರಶ್ನೆ ಏಳುತ್ತದೆ. ಭಾರತ ಸರ್ಕಾರವು ಅಲ್ಪಸಂಖ್ಯಾತ ರಿಲಿಜನ್ನುಗಳಿಗೆ ಕೆಲವು ವಿಶೇಷ ಸವಲತ್ತುಗಳನ್ನು ಘೋಷಿಸಿರುವುದರಿಂದ ಇಂಥ ಪ್ರಶ್ನೆಗಳಿಗೆ ದಿನಕಳೆದಂತೇ ವಿಶೇಷ ಮಹತ್ವವು ಪ್ರಾಪ್ತವಾಗುತ್ತಿದೆ. ಲಿಂಗಾಯತರನ್ನು ಪ್ರತ್ಯೇಕ ಧರ್ಮ(ರಿಲಿಜನ್) ಎಂಬುದಾಗಿ ಘೋಷಿಸಬೇಕೆಂದು ಒತ್ತಾಯ ಬರುತ್ತಿದೆ. ರಾಮಕೃಷ್ಣ ಮಿಶನ್ ಒಮ್ಮೆ ಇಂಥದ್ದೊಂದು ಪ್ರತಿಪಾದನೆ ಮಾಡಿ ಕಲ್ಕತ್ತಾ ನ್ಯಾಯಾಲಯದಲ್ಲಿ ಜಯ ಪಡೆದಿತ್ತು.
ಅಂದರೆ ನಮ್ಮಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಯಾರು ಎಂಬ ಪ್ರಶ್ನೆಗೆ ಉತ್ತರಗಳಿಲ್ಲ. ಹಾಗಾಗಿ ನ್ಯಾಯಾಲಯಗಳಿಗೂ ಇಂಥ ವಾದಗಳು ತರ್ಕಬದ್ಧವಾಗಿ, ನ್ಯಾಯಯುತವಾಗಿ ಕಾಣಿಸುತ್ತವೆ. ಪರಿಸ್ಥಿತಿ ಹೀಗಿರುವಾಗ ಯಾವುದು ರಿಲಿಜನ್ ಯಾವುದು ಅಲ್ಲ ಎಂಬ ತಿಳುವಳಿಕೆಯೇ ಸಾಧ್ಯವಿಲ್ಲದ ನಾಡಲ್ಲಿ ಸರ್ವಧರ್ಮಸಮಭಾವ ಎಂಬ ಕಲ್ಪನೆ ಕೂಡ ಅಷ್ಟೇ ಅರ್ಥಹೀನವಾಗಿ ಅಥವಾ ಅನರ್ಥಕಾರಿಯಾಗಿ ಪರಿಣಮಿಸಬಹುದು. ಎಲ್ಲವನ್ನೂ ಸಮಭಾವದಿಂದ ನೋಡಬೇಕೆಂದರೆ ಆ ಎಲ್ಲವೂ ಯಾವವು ಎಂಬುದೇ ನಮಗೆ ಗೊತ್ತಿಲ್ಲ. ಅಂಥ ಸಂದರ್ಭದಲ್ಲಿ ಕೆಲವನ್ನು ಆ ಎಲ್ಲವೂ ಎಂದು ಸೀಮಿತಗೊಳಿಸಿಕೊಂಡರೆ, ಉಳಿದ ಎಲ್ಲವಕ್ಕೂ ತಾರತಮ್ಯವನ್ನು ಮಾಡಿದಂತಾಗುವುದಿಲ್ಲವೆ?
ಸಮಸ್ಯೆ ಈ ಮೇಲಿನಂತೆ ಕಾಣಿಸಿದರೂ ಅದರ ನಿಜಸ್ವರೂಪವು ಬೇರೆಯೇ ಇದೆ. ನಮ್ಮ ಭಾರತ ಸರ್ಕಾರಕ್ಕೆ ಸರ್ವಧರ್ಮಸಮಭಾವದ ಅನುಷ್ಠಾನವು ಸಾಧ್ಯವಿಲ್ಲ. ಏಕೆಂದರೆ ಈ ಶಬ್ದಗುಚ್ಛದಲ್ಲಿ ಬರುವ ಧರ್ಮ ಎಂಬುದು ರಿಲಿಜನ್ ಎಂಬ ಗುಂಪನ್ನು ಸೂಚಿಸುತ್ತದೆ. ಎಲ್ಲ ರಿಲಿಜನ್ನುಗಳನ್ನೂ ಸಮನಾಗಿ ನೋಡಬೇಕೆಂದರೆ ಭಾರತದಲ್ಲಿ ಇರುವವು ಮೂರೇ ರಿಲಿಜನ್ನುಗಳು: ಕ್ರೈಸ್ತ, ಇಸ್ಲಾಂ ಹಾಗೂ ಯೆಹೂದಿ. ಭಾರತದಲ್ಲೊಂದೇ ಅಲ್ಲ, ಪ್ರಪಂಚದಲ್ಲೇ ಈ ಮೂರೇ ರಿಲಿಜನ್ನುಗಳಿರುವುದು. ಭಾರತದಲ್ಲಿ ಇರುವ ಮತಪಂಥಗಳನ್ನೆಲ್ಲ ಹಿಂದೂಯಿಸಂ ಎಂದು ಕರೆಯಲಾಗಿದೆ. ಅಂದರೆ ಹಿಂದೂ ರಿಲಿಜನ್ನು ಎಂದರ್ಥ. ವಾಸ್ತವದಲ್ಲಿ ಅದು ರಿಲಿಜನ್ನೇ ಅಲ್ಲ. ಪರಿಣಾಮವೆಂದರೆ ಅದರಲ್ಲಿ ಗುರುತಿಸಲಾದ ಮತ ಪಂಥಗಳು, ಈ ಸೆಕ್ಯುಲರ್ ಘೋಷಣೆಯ ಫಲಾನುಭವಿಗಳಾಗುವುದು ಸಾಧ್ಯವಿಲ್ಲ. ಫಲಾನುಭವಿಗಳಾಗಬೇಕೆಂದರೆ ಅವು ರಿಲಿಜನ್ ಎಂಬ ಹಣೆಪಟ್ಟಿಯನ್ನು ಹಚ್ಚಿಕೊಳ್ಳಬೇಕು.
ನನ್ನ ಪ್ರಕಾರ ಹಿಂದೂಯಿಸಂ ರಿಲಿಜನ್ನಲ್ಲ. ಇದನ್ನು ಪರಿಗಣಿಸಿದಾಗ ಭಾರತ ಸರ್ಕಾರಕ್ಕೆ ಸರ್ವಧರ್ಮಸಮಭಾವ ಸಾಧ್ಯವಿಲ್ಲ, ಅಷ್ಟೇ ಅಲ್ಲ ಅದು ಸೆಮೆಟಿಕ್ ರಿಲಿಜನ್ನುಗಳ ಪಕ್ಷಪಾತಿಯಾಗುವುದು ಅನಿವಾರ್ಯ. ಏಕೆಂದರೆ ಇಲ್ಲಿ ಸಮನಾಗಿ ನೋಡಬೇಕಾದದ್ದು ರಿಲಿಜನ್ನುಗಳನ್ನು, ಮತಸಂಪ್ರದಾಯಗಳನ್ನಲ್ಲ. ನಾನು ಹೀಗೆ ಹೇಳಿದಾಗ ನೀವು ಕೇಳಬಹುದು, ’ಈ ಮತಸಂಪ್ರದಾಯಗಳನ್ನೇ ರಿಲಿಜನ್ನುಗಳ ಜೊತೆಗೆ ಸಮನಾಗಿ ನೋಡಬಹುದಲ್ಲ?’. ಹಾಗೆ ನೋಡಲಿಕ್ಕೆ ಸೆಕ್ಯುಲರ್ ನೀತಿಗೆ ಸಾಧ್ಯವಿಲ್ಲ ಎಂಬುದೇ ನನ್ನ ವಾದ. ಏಕೆಂದರೆ ರಿಲಿಜನ್ನುಗಳು ಹಾಗೂ ಈ ದೇಶೀ ಸಂಪ್ರದಾಯಗಳ ನಡುವೆ ಕೆಲವು ಮೂಲಭೂತ ವ್ಯತ್ಯಾಸಗಳಿವೆಯೊಂದೇ ಅಲ್ಲ ಅವು ಪರಸ್ಪರ ವಿರುದ್ಧವಾಗಿಯೂ ಇವೆ. ಸೆಕ್ಯುಲರ್ ನೀತಿಗಳನ್ನು ರಿಲಿಜನ್ನುಗಳ ಸಹಬಾಳ್ವೆಗಾಗಿ ರೂಪಿಸಲಾಗಿದೆ. ಹಾಗೆ ರೂಪಿಸುವಾಗ ರಿಲಿಜನ್ನುಗಳ ವೈಶಿಷ್ಟ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಹಾಗಾಗಿ ಅದು ಸೆಮೆಟಿಕ್ ರಿಲಿಜನ್ನುಗಳಿಗೆ ನ್ಯಾಯ ಒದಗಿಸುವ ಉಪಾಯಗಳನ್ನು ಮಾತ್ರವೇ ನೀಡಬಲ್ಲದು.
ಭಾರತೀಯ ಸೆಕ್ಯುಲರ್ ನೀತಿಯನ್ನು ರೂಪಿಸುವಾಗ ಈ ಮುಂದಿನ ನಾಲ್ಕು ಸಂಗತಿಗಳನ್ನು ಭಾವಿಸಿಕೊಳ್ಳಲಾಗಿದೆ: ೧. ಸೆಮೆಟಿಕ್ ರಿಲಿಜನ್ನುಗಳು ಹಾಗೂ ಭಾರತೀಯ ಸಂಪ್ರದಾಯಗಳು ಒಂದೇ ಥರದ ಸಂಗತಿಗಳು. ೨. ರಿಲಿಜನ್ನುಗಳು ಸತ್ಯ ಪ್ರತಿಪಾದನೆಗಳು, ಅಂದರೆ ತಮ್ಮದು ಸತ್ಯ, ಉಳಿದವರದು ಸುಳ್ಳು ಎಂಬ ಪ್ರತಿಪಾದನೆಗಳಾಗಿವೆ. ೨. ಹಾಗಾಗಿ ರಿಲಿಜನ್ನುಗಳ ನಡುವೆ ವೈರತ್ವ, ಪೈಪೋಟಿ ಇದ್ದೇ ಇರುತ್ತದೆ. ೩. ವ್ಯಕ್ತಿಗಳಿಗೆ ಸತ್ಯ ಪಥದಲ್ಲಿ ಸಾಗುವ ಹಕ್ಕು ಇರುವುದರಿಂದ ರಿಲಿಜನ್ನುಗಳಲ್ಲಿ ಅನ್ಯರನ್ನು ಪರಿವರ್ತನೆ ಮಾಡುವ ಅವಕಾಶ ಇರಬೇಕು.
ಆದರೆ. ಭಾರತೀಯ ಮತ ಸಂಪ್ರದಾಯಗಳ ಸಂದರ್ಭದಲ್ಲಿ ಈ ಮೇಲಿನ ನಾಲ್ಕೂ ಸಂಗತಿಗಳೂ ಯಥಾರ್ಥವಲ್ಲ. ಅವು ರಿಲಿಜನ್ನುಗಳ ಸಂದರ್ಭದಲ್ಲಿ ಮಾತ್ರವೇ ಯಥಾರ್ಥವಾಗುತ್ತವೆ. ಸೆಮೆಟಿಕ್ ರಿಲಿಜನ್ನುಗಳು ಹಾಗೂ ಹಿಂದೂಯಿಸಂ ಒಂದೇ ಥರದ ಸಂಗತಿಗಳಲ್ಲ. ಹಿಂದೂಯಿಸಂಗೆ ಏಕದೇವತೆ, ಪ್ರವಾದಿ, ಪವಿತ್ರಗ್ರಂಥ, ಏಕೈಕ ಥಿಯಾಲಜಿ, ನೈತಿಕ ನಿಯಮ, ಡಾಕ್ಟ್ರಿನ್ನುಗಳು, ಏಕೈಕ ನಂಬಿಕೆ ಇತ್ಯಾದಿಗಳಿಲ್ಲ. ಅದು ವಿಭಿನ್ನ ಮತ ಪಂಥ ಸಂಪ್ರದಾಯಗಳ ಸಡಿಲ ಒಕ್ಕೂಟವಾಗಿದೆ. ಈ ಮತಪಂಥಗಳು ಕೂಡ ರಿಲಿಜನ್ನುಗಳಲ್ಲ. ಏಕೆಂದರೆ ಅವುಗಳಿಗೂ ಈ ಮೇಲಿನ ಲಕ್ಷಣಗಳು ಇಲ್ಲ. ಅದು ಹೌದೇ ಆದಲ್ಲಿ ರಿಲಿಜನ್ನುಗಳ ಸಂದರ್ಭದಲ್ಲಿ ಭಾವಿಸಿಕೊಂಡ ಉಳಿದ ಮೂರು ಸತ್ಯಗಳು ಕೂಡ ಹಿಂದೂಗಳಿಗೆ ಅನ್ವಯವಾಗಲಾರವು.
ಭಾರತೀಯ ಮತ ಸಂಪ್ರದಾಯಗಳಲ್ಲಿ ಯಾವವೂ ತಾವೇ ಸತ್ಯ, ಉಳಿದವು ಸುಳ್ಳು ಎನ್ನುವುದಿಲ್ಲ. ಸತ್ಯಕ್ಕೆ ಹಲವಾರು ಮಾರ್ಗಗಳು ಇರಬಹುದು ಎಂಬುದಾಗಿ ಬಹುತ್ವವನ್ನು ಈ ಸಂಪ್ರದಾಯಗಳು ಒಪ್ಪಿಕೊಂಡಿವೆ. ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂ ಕೂಡ ಭಗವಂತನನ್ನು ಸೇರಲು ತಮ್ಮಂಥದ್ದೇ ಮಾರ್ಗಗಳು ಎಂದೇ ಅವು ಭಾವಿಸುತ್ತವೆ ಹಾಗೂ ಅಲ್ಲಾಹು, ಗಾಡ್ ಎಲ್ಲರೂ ಒಂದೇ ಪರಮಾತ್ಮನ ಬೇರೆ ಬೇರೆ ಕಲ್ಪನೆಗಳು ಎನ್ನುತ್ತಾರೆ. ಹಾಗಾಗಿ ಅವರು ತಮ್ಮದೊಂದೇ ಸತ್ಯವಾದ ಮಾರ್ಗ ಎಂಬುದಾಗಿ ಭಾವಿಸುವುದಿಲ್ಲ. ಅವರು ಎಲ್ಲರ ದೇವತೆಗಳನ್ನೂ ಅಷ್ಟೇ ಗೌರವಯುತವಾಗಿ ಕಾಣಬಲ್ಲರು ಹಾಗೂ ಪೂಜಿಸಬಲ್ಲರು. ಆದರೆ ಸೆಮೆಟಿಕ್ ರಿಲಿಜನ್ನುಗಳು ತಮ್ಮದೊಂದೇ ಸತ್ಯವಾದ ಮಾರ್ಗ, ಉಳಿದವರದು ಸುಳ್ಳು ಮಾರ್ಗ ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತವೆ. ಮತ್ತೊಂದು ಮಾರ್ಗವನ್ನು ತುಳಿದು ಸದ್ಗತಿಯನ್ನು ಪಡೆಯಲು ಸಾಧ್ಯವೇ ಇಲ್ಲ, ಬದಲಾಗಿ ಅವರು ನರಕಕ್ಕೇ ಹೋಗುತ್ತಾರೆ ಎಂದು ಆ ಮಾರ್ಗಗಳು ತಿಳಿಸುತ್ತವೆ.
ಬಹುತ್ವವನ್ನು ಒಪ್ಪಿಕೊಂಡ ಕಾರಣದಿಂದ ಭಾರತೀಯ ಮತ ಸಂಪ್ರದಾಯಗಳ ನಡುವೆ ವೈರತ್ವವು ಅನಿವಾರ್ಯವಲ್ಲ. ಅಂದರೆ ಅವರವರದು ಅವರವರಿಗೆ ಎಂಬ ಭಾವನೆಯು ಇವರಿಗೆ ಸಹಜವಾಗಿದೆ. ಕ್ರೈಸ್ತ ಪಾದ್ರಿಗಳು ಭಾರತೀಯರನ್ನು ಸಂಧಿಸಿದಾಗ ಅವರನ್ನು ಮತಾಂತರ ಮಾಡುವ ಸಲುವಾಗಿ ಹಿಂದೂ ಆಚರಣೆ ಹಾಗೂ ದೇವತೆಗಳ ನ್ಯೂನತೆಗಳನ್ನು ಅವರ ಗಮನಕ್ಕೆ ತಂದರು. ಅದಕ್ಕೆ ಹಿಂದೂಗಳು ತಮ್ಮ ದಾರಿ ಬೇರೆ, ಕ್ರೈಸ್ತರದು ಬೇರೆ. ಅವರಿಗೆ ಅದೇ ಯೋಗ್ಯ ತಮಗೆ ಇದೇ ಯೋಗ್ಯ ಎಂಬುದಾಗಿ ಪ್ರತಿಕ್ರಿಯಿಸಿದರು. ಈ ಧೋರಣೆಯಿಂದಾಗಿ ಭಾರತೀಯ ಸಂಪ್ರದಾಯಗಳು ಅನ್ಯ ಸಂಪ್ರದಾಯಗಳ ಕುರಿತು ನಿರ್ಲಿಪ್ತವಾಗಿ ಇರಬಲ್ಲವು. ಹಾಗೂ ಅವರವರ ಸಂಪ್ರದಾಯಗಳು ಅವರವರಿಗೆ ಯೋಗ್ಯ ಎಂಬುದಾಗಿ ಒಪ್ಪಿಕೊಂಡ ಮೇಲೆ ಒಬ್ಬರು ಮತ್ತೊಬ್ಬರ ಆಚರಣೆಗೆ ಭಂಗ ತರುವುದನ್ನು ಪಾಪ ಅಥವಾ ಅಧರ್ಮ ಎಂಬುದಾಗಿ ಈ ಸಂಪ್ರದಾಯಗಳು ಭಾವಿಸುತ್ತವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸೆಮೆಟಿಕ್ ರಿಲಿಜನ್ನುಗಳು ತಮ್ಮದೇ ಸತ್ಯವಾದ ಮಾರ್ಗ ಎಂದು ಧೃಡವಾಗಿ ನಂಬಿರುವುದರಿಂದ ಉಳಿದವರ ಆಚರಣೆ ತಪ್ಪು ಎಂದು ತಿಳಿಯುತ್ತವೆ. ಆ ಕಾರಣದಿಂದ ಅಂಥವರನ್ನು ತಮ್ಮ ರಿಲಿಜನ್ನಿಗೆ ಪರಿವರ್ತಿಸುವುದು ತಮ್ಮ ಪವಿತ್ರ ಕರ್ತವ್ಯ ಎಂದು ತಿಳಿಯುತ್ತವೆ.
ಪರಿವರ್ತನೆಯ ಕಲ್ಪನೆ ರಿಲಿಜನ್ನುಗಳಿಗೆ ಮೂಲಭೂತವಾದುದು. ಅದು ಅವುಗಳಿಗೆ ಪವಿತ್ರ ಕರ್ತವ್ಯ. ರಿಲಿಜನ್ನುಗಳ ಈ ನಂಬಿಕೆಯನ್ನು ಆಧರಿಸಿ ಪಾಶ್ಚಾತ್ಯ ಪ್ರಭುತ್ವಗಳು ರಿಲಿಜನ್ನಿನ ಹಕ್ಕಿನ ಕಲ್ಪನೆಯನ್ನು ಬೆಳೆಸಿವೆ. ಅಂದರೆ ಒಬ್ಬ ಪ್ರಜೆಗೆ ತನಗೆ ಬೇಕಾದ ರಿಲಿಜನ್ನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮೂಲಭೂತವಾದುದು, ಕಾರಣವೆಂದರೆ ಯಾವುದಾದರೂ ಒಂದು ಮಾರ್ಗವನ್ನು ಹಿಡಿದರೆ ಮಾತ್ರ ಸದ್ಗತಿ ಸಿಗುತ್ತದೆ. ತಾನು ಹಿಡಿದ ಮಾರ್ಗವು ತಪ್ಪು ಎಂದು ತಿಳಿದ ನಂತರ ಸರಿ ಮಾರ್ಗವನ್ನು ಹಿಡಿಯಲು ಒಬ್ಬನಿಗೆ ಅವಕಾಶವನ್ನು ನೀಡದಿದ್ದರೆ ಅವನ ನಂಬಿಕೆಯನ್ನು ನಿರಾಕರಿಸಿದಂತೇ ಆಗುತ್ತದೆ. ಸೆಕ್ಯುಲರ್ ಪ್ರಭುತ್ವವು ಯಾವ ಮಾರ್ಗವು ಸತ್ಯ ಎಂಬ ಚರ್ಚೆಯಿಂದ ತಟಸ್ಥವಾಗಿರಬಯಸುತ್ತದೆ. ಅದನ್ನು ಅಯಾ ಪ್ರಜೆಯ ನಂಬಿಕೆಗೇ ಬಿಡುವುದು ಸೆಕ್ಯುಲರ್ ನೀತಿಯಾಗುತ್ತದೆ. ಹಾಗಾಗಿ ರಿಲಿಜನ್ನಿನ ಪರಿವರ್ತನೆಗೆ ಅದು ಅವಕಾಶ ನೀಡುವ ಮೂಲಕ ಪ್ರಜೆಯೊಬ್ಬನ ಈ ಹಕ್ಕನ್ನು ಮಾನ್ಯಮಾಡುತ್ತದೆ, ಆ ಮೂಲಕ ಸೆಕ್ಯುಲರ್ ಆಗಿ ಉಳಿಯುತ್ತದೆ.
ಈ ಮೇಲಿನ ಸೆಕ್ಯುಲರ್ ನೀತಿಯು ನಿಷ್ಪಕ್ಷಪಾತಿಯಾಗಿ ಜಾರಿಯಲ್ಲಿ ಬರಬೇಕಾದರೆ ಆ ಪ್ರಭುತ್ವದಲ್ಲಿ ಸೆಮೆಟಿಕ್ ರಿಲಿಜನ್ನುಗಳು ಮಾತ್ರವೇ ಇರಬೇಕು. ಏಕೆಂದರೆ ಒಂದು ಪ್ರಭುತ್ವದೊಳಗಿನ ಎಲ್ಲಾ ರಿಲಿಜನ್ನುಗಳೂ ತಮ್ಮದೊಂದೇ ಸತ್ಯ ಎನ್ನಬೇಕು, ರಿಲಿಜನ್ನುಗಳ ನಡುವೆ ಪೈಪೋಟಿ ಇರಬೇಕು, ಹಾಗೂ ಅವುಗಳಲ್ಲಿ ರಿಲಿಜನ್ನಿನ ಪರಿವರ್ತನೆಯು ಪವಿತ್ರ ಕರ್ತವ್ಯವಾಗಿರಬೇಕು. ಭಾರತದಂತಹ ದೇಶದಲ್ಲಿ ಬಹುಸಂಖ್ಯಾತರಾಗಿರುವ ಭಾರತೀಯ ಮತ ಸಂಪ್ರದಾಯಗಳು ಈ ಮೇಲಿನ ಯಾವ ಲಕ್ಷಣವನ್ನೂ ಹೊಂದಿಲ್ಲ. ಬದಲಾಗಿ ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೇ ಅವುಗಳ ಸ್ವರೂಪವು ಸೆಮೆಟಿಕ್ ರಿಲಿಜನ್ನುಗಳಿಗೆ ತದ್ವಿರುದ್ಧವಾಗಿದೆ. ಅವುಗಳು ಅನ್ಯ ಸಂಪ್ರದಾಯಗಳನ್ನು ಅವುಗಳಷ್ಟಕ್ಕೇ ಬಿಡುವುದೇ ಧರ್ಮ ಎನ್ನುತ್ತವೆ. ಹಾಗಾಗಿ ಅವುಗಳಲ್ಲಿ ಪರಿವರ್ತನೆ ಎಂಬ ಕಲ್ಪನೆ ಇಲ್ಲವಷ್ಟೇ ಅಲ್ಲ, ಒಂದೊಮ್ಮೆ ಯಾರಾದರೂ ಅದಕ್ಕೆ ಮುಂದಾದರೆ ಅದು ಖಂಡನೀಯವಾಗುತ್ತದೆ.
ಈ ಮೇಲಿನ ಸಂಗತಿಯು ಭಾರತೀಯ ಸೆಕ್ಯುಲರ್ ಪ್ರಭುತ್ವಕ್ಕೆ ಒಂದು ಸವಾಲಾಗುತ್ತದೆ. ಅದು ಸೆಕ್ಯುಲರ್ ಹೌದಾದದ್ದೇ ಆದರೆ ರಿಲಿಜನ್ನಿನ ಸ್ವಾತಂತ್ರ್ಯವನ್ನು ನೀಡಲು ರಿಲಿಜನ್ನಿನ ಪರಿವರ್ತನೆಯನ್ನು ಮಾನ್ಯ ಮಾಡಬೇಕಾಗುತ್ತದೆ. ಆದರೆ ಅದರ ಬಹುಸಂಖ್ಯಾತ ಪ್ರಜೆಗಳ ಸಂಪ್ರದಾಯಗಳಲ್ಲಿ ಪರಿವರ್ತನೆಯ ಕಲ್ಪನೆಯೇ ಇಲ್ಲ. ಆಗ ಕೆಲವೇ ಅಲ್ಪಸಂಖ್ಯಾತ ರಿಲಿಜನ್ನುಗಳು ಮಾತ್ರವೇ ಈ ಪರಿವರ್ತನೆಯ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವ ಪರಿಸ್ಥಿತಿಯು ನಿರ್ಮಾಣವಾಗುತ್ತದೆ. ಅಂದರೆ ಈ ಅನ್ಯರನ್ನು ಪರಿವರ್ತಿಸುವ ಸ್ವಾತಂತ್ರ್ಯವು ತಟಸ್ಥ ನೀತಿಯಾಗುವುದಿಲ್ಲ. ಬಹುಸಂಖ್ಯಾತ ಸಂಪ್ರದಾಯಗಳಿಗೆ ಅಮಾನ್ಯವಾದ ನೀತಿಯನ್ನು ಕೆಲವೇ ಸಂಪ್ರದಾಯಗಳ ಅನುಕೂಲಕ್ಕಾಗಿ ಅಳವಡಿಸಿಕೊಂಡಂತಾಗುತ್ತದೆ. ಈ ರೀತಿಯಲ್ಲಿ ಒಂದು ಪ್ರಭುತ್ವದ ಕೆಲವು ರಿಲಿಜನ್ನುಗಳು ಉಳಿದವರನ್ನು ತಮ್ಮ ರಿಲಿಜನ್ನಿಗೆ ಸೇರಿಸಿಕೊಳ್ಳುತ್ತಿರುತ್ತಾರೆ, ಉಳಿದವರು ಹಾಗೆ ಮಾಡುವುದಿಲ್ಲ. ಇದು ಅಂಥ ಸಂಪ್ರದಾಯಗಳಲ್ಲಿ ಒಂದು ಥರದ ಅಸಮಾಧಾನವನ್ನು ಹಾಗೂ ಭಯವನ್ನು ಹುಟ್ಟುಹಾಕುತ್ತದೆ.
ಹಾಗಾದರೆ ನಮ್ಮ ಸೆಕ್ಯುಲರ್ ಪ್ರಭುತ್ವವು ರಿಲಿಜನ್ನಿನ ಪರಿವರ್ತನೆಯನ್ನೇ ನಿಷೇಧಿಸಬೇಕೆ? ಎಂಬುದಾಗಿ ನೀವು ಕೇಳಬಹುದು. ಹಾಗೆ ಮಾಡಿದಲ್ಲಿ ಮತ್ತೆ ಪಕ್ಷಪಾತವಾಗುತ್ತದೆ. ಸೆಮೆಟಿಕ್ ರಿಲಿಜನ್ನುಗಳ ಪ್ರಜೆಗಳಿಗೆ ಅವರ ಪವಿತ್ರ ಕರ್ತವ್ಯವನ್ನು ನಡೆಸಲು ಅಡ್ಡಿ ಮಾಡಿದಂತಾಗುತ್ತದೆ. ನಾನು ಹೇಳಬಯಸುವುದೆಂದರೆ ರಿಲಿಜನ್ನಿನ ಪರಿವರ್ತನೆಯ ಕುರಿತ ಅಸಮಾಧಾನವನ್ನು ಹಿಂದೂ ಮೂಲಭೂತವಾದವೆಂಬುದಾಗಿ ತಿರಸ್ಕರಿಸುವುದೂ, ರಿಲಿಜನ್ನಿನ ಸ್ವಾತಂತ್ರ್ಯದ ಕುರಿತು ನಮ್ಮ ಸಂಪ್ರದಾಯಗಳ ವಾಸ್ತವವನ್ನು ಅರಿಯದೇ ಘೋಷಣೆ ಕೂಗುವುದೂ ಈ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಬದಲಾಗಿ ಪ್ರಭುತ್ವವನ್ನು ಮತ್ತಷ್ಟು ಪಕ್ಷಪಾತಿಯನ್ನಾಗಿ ಮಾಡುತ್ತದೆ. ಭಾರತೀಯ ಪ್ರಭುತ್ವದಂಥ ವಿಲಕ್ಷಣ ಸಂದರ್ಭದಲ್ಲಿ ಸರ್ವಧರ್ಮಸಮಭಾವವನ್ನು ಆಚರಿಸುವಲ್ಲಿ ಏಳುವ ಸವಾಲುಗಳನ್ನು ಸ್ವಲ್ಪ ಗಂಭೀರವಾಗಿ ಅರ್ಥಮಾಡಿಕೊಳ್ಳುವ ಜರೂರಿದೆ. ಅದನ್ನು ಅರ್ಥಮಾಡಿಕೊಳ್ಳಬೇಕಾದರೆ ಭಾರತೀಯ ಸಂಪ್ರದಾಯಗಳ ವೈಶಿಷ್ಟ್ಯತೆಯ ಕುರಿತು ಹಾಗೂ ಪಾಶ್ಚಾತ್ಯ ಸಂಸ್ಕೃತಿಗೂ ಅದಕ್ಕೂ ಇರಬಹುದಾದ ಭಿನ್ನತೆಯ ಕುರಿತು ಗಂಭೀರವಾದ ಸಂಶೋಧನೆ ಅತ್ಯಗತ್ಯ. ಹಾಗಾಗಿ ನಾವಿನ್ನೂ ಈ ಸವಾಲುಗಳಿಗೆ ಉತ್ತರವನ್ನು ಕಂಡುಕೊಳ್ಳುವುದು ಹೋಗಲಿ, ಸಮಸ್ಯೆಯನ್ನು ಗುರುತಿಸಲಿಕ್ಕೂ ಸರಿಯಾಗಿ ಪ್ರಾರಂಭಿಸಿಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರುವುದಷ್ಟೇ ನನ್ನ ಉದ್ದೇಶ.