Home ಲೇಖನ ರಾಷ್ಟ್ರಗೀತೆಯ ಅಪಮಾನ ಮತ್ತು ಪ್ರಗತಿಶೀಲ ರಾಜಕಾರಣ

ರಾಷ್ಟ್ರಗೀತೆಯ ಅಪಮಾನ ಮತ್ತು ಪ್ರಗತಿಶೀಲ ರಾಜಕಾರಣ

1044 views

ಭಾರತದ ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸುವ ಗುಂಪುಗಳು ಅನೇಕ. ಅವುಗಳಲ್ಲಿ ಭಾರತದ ಪರ ಅಥವಾ ಹಿಂದು ಪರವೆಂದು ಗುರುತಿಸಲ್ಪಡುವುದು ಒಂದು ಗುಂಪು. ಮತ್ತೊಂದು ಗುಂಪಿನ ಸ್ವಘೋಷಿತ ನಾಮಧೇಯ ಪ್ರಗತಿಶೀಲ. ತಮ್ಮ ಆದ್ಯತೆ, ಧೋರಣೆಗಳು ಎರಡು ಗುಂಪುಗಳಿಗೂ ಸುಸ್ಪಷ್ಟ. ಆದರೆ ಕಳೆದ ಕೆಲ ವರ್ಷಗಳಲ್ಲಿ ಸಮಸ್ಯೆಗಳ ಸುಳಿಗೆ ಹೆಚ್ಚಾಗಿ ಸಿಲುಕಿದ್ದು ಪ್ರಗತಿಶೀಲರ ಗುಂಪು. ನೈತಿಕತೆಯ ಚರ್ಚೆ ಇವರು ಬೌದ್ಧಿಕವೆಂದು ಕರೆದುಕೊಳ್ಳುವ ಪ್ರತಿಯೊಂದು ಕಾರ್ಯದ ಬುನಾದಿ. ಆಶ್ಚರ್ಯವೆಂದರೆ ನೈತಿಕ ಚರ್ಚೆಯಲ್ಲಿನ ಪ್ರಗತಿಶೀಲರ ನಿಲುವುಗಳು ವಿಚಿತ್ರ.  ಅನೇಕ ಬಾರಿ ಪ್ರಗತಿಶೀಲರ ನಿಲುವುಗಳು ಅವರನ್ನೇ ಅನೈತಿಕರಾಗಿ ತೋರುವುಂತೆ ಮಾಡುವುದು ಒಂದು ಸೋಜಿಗ. ಸೂಕ್ಷ್ಮವಾಗಿ ಗಮನಿಸಿದರೆ, ವೈಚಾರಿಕತೆಯ ರಾಜಕಾರಣವು ಪ್ರಗತಿಶೀಲರದ್ದೇ ಎಂಬ ಗುಮಾನಿಯು ಉಂಟಾಗುವುದು ನಿಜ. ಈ ಗುಮಾನಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ರೋಹಿತ್ ಚಕ್ರತೀರ್ಥ ಮತ್ತು ಬರಗೂರು ರಾಮಚಂದ್ರಪ್ಪನವರ ಸುತ್ತ ನಡೆದ ಸಾರ್ವಜನಿಕ ಚರ್ಚೆಯೇ ಉತ್ತಮ ಉದಾಹರಣೆ.  

ಅಪಮಾನದ ಮಹಾಜ್ವಾಲೆ  

ಯಾವಾಗಲೋ ರೋಹಿತ್ ಚಕ್ರತೀರ್ಥರು ನಾಡಗೀತೆಯ ಲಯವನ್ನು ಬಳಸಿ ಬರೆದ ಕವನವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಕವನ ಅನೇಕ ವರ್ಷಗಳ ನಂತರ ಪ್ರಗತಿಶೀಲರಿಗೆ ಸಮಸ್ಯಾತ್ಮಕವಾಗಿ ಕಂಡಿತು. ಇದು ಕುವೆಂಪುರವರಿಗೆ, ಕನ್ನಡಕ್ಕೆ, ನಾಡಗೀತೆಗೆ ಮಾಡಿದ ಅಪಮಾನ ಎಂದು ಹೇಳಲಾಯಿತು. ಸಾರ್ವಜನಿಕ ಚರ್ಚೆಗಳಲ್ಲಿ ಅಪಮಾನದ ಮಹಾಜ್ವಾಲೆಯು ಬೀಜಾಂಕುರಿಸಲು ಕಾರಣ ಈ ಘಟನೆಯೂ ಒಂದು. ಇದೇ ರೀತಿಯ ಇನ್ನೊಂದು ಘಟನೆಗೆ ಬಲಿಪಶುವಾದ ಮತ್ತೊಬ್ಬ ವ್ಯಕ್ತಿ ಬರಗೂರು ರಾಮಚಂದ್ರಪ್ಪನವರು. ಬರಗೂರರ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅಪಮಾನ ಮಾಡಲಾಗಿದೆಯೆಂದು ಹಿಂದೂಪರರ ಆಕ್ಷೇಪ. ಅಂದು ನಾಡಗೀತೆ, ಇಂದು ರಾಷ್ಟ್ರಗೀತೆ, ಒಂದು ಅಪಮಾನವಾದರೆ ಮತ್ತೊಂದೂ ಅಪಮಾನವೇ. ಆದರೆ ಈ ಚರ್ಚೆಗಳಲ್ಲಿ ಆದದ್ದೇ ಬೇರೆ. ಇದನ್ನು ಸರಿಯಾಗಿ ಗ್ರಹಿಸಬೇಕೆಂದರೆ ಈ ಚರ್ಚೆಯಲ್ಲಿ ಬಂದ ಪ್ರತಿಕ್ರಿಯೆಗಳನ್ನು ಗಮನಿಸಬೇಕು.   

ತಮಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯ

ಈ ಚರ್ಚೆಯಲ್ಲಿ ಸ್ವತಃ ಬರಗೂರರ ಪ್ರತಿಕ್ರಿಯೆಯು ಹೀಗಿತ್ತು -   

“ನಲವತ್ತು ವರ್ಷಗಳ ಹಿಂದೆ ನನ್ನ ಕಾದಂಬರಿಯ ಪಾತ್ರವೊಂದು ಕಟ್ಟಿದನಗರಿಗೀತೆಗೆ ಈಗ ಆಕ್ಷೇಪ ಕೇಳಿಬಂದಿರುವುದು ಆಶ್ಚರ್ಯ ತಂದಿದೆ. ಇದು ತೀರ ಆಕಸ್ಮಿಕವೋ, ಹುನ್ನಾರವೋ, ತಿಳಿಯದು. ಆದರೂ ನನ್ನ ಸ್ಪಷ್ಟನೆ ಕೊಡುತ್ತಿದ್ದೇನೆನಾನು ರಾಷ್ಟ್ರಗೀತೆಯನ್ನು ಅವಮಾನ ಮಾಡಿಲ್ಲ ಕಾದಂಬರಿಯಲ್ಲಿ ಬರುವ ಒಂದು ಪಾತ್ರ ಲಯವನ್ನು ಬಳಸಿಕೊಳ್ಳುತ್ತದೆ……ಕೃತಿಕಾರನಾದ ನಾನು ಕಾದಂಬರಿಯ ಎಲ್ಲಾ ಪಾತ್ರಗಳನ್ನೂ ಆಯಾ ಪಾತ್ರಗಳ ಗುಣಧರ್ಮ, ಸ್ವಭಾವಕ್ಕೆ ತಕ್ಕಂತೆ ಚಿತ್ರಿಸಬೇಕಾಗುತ್ತದೆ. ಪಾತ್ರಗಳ ಮಾತು ಮತ್ತು ನಡವಳಿಕೆ ಕೃತಿಕಾರರದಾಗುವುದಿಲ್ಲ. ಅದು ಪಾತ್ರದ ಅಭಿಪ್ರಾಯವೇ ಹೊರತು ನನ್ನದಲ್ಲ  

ಒಟ್ಟಾರೆಯಾಗಿ ಬರಗೂರರ ಪ್ರಕಾರ ಇಲ್ಲಿ ರಾಷ್ಟ್ರಗೀತೆಗೆ ಯಾವುದೇ ಅವಮಾನವಾಗಿಲ್ಲ. ಏಕೆಂದರೆ ಅದೊಂದು ಕಾದಂಬರಿಯ ತುಣುಕು. ರೋಹಿತ್ ಚಕ್ರತೀರ್ಥ ಮಾಡಿದ್ದು ಅಕ್ಷಮ್ಯ ಅಪರಾಧವೇನೋ ಸರಿ, ಆದರೆ ಬರಗೂರರು ಮಾಡಿದ್ದು ಅಪರಾಧವಾಗಲು ಸಾಧ್ಯವೇ ಇಲ್ಲ! ಏಕೆಂದರೆ ಅವರೇ ಹೇಳುವಂತೆ  ಕಾದಂಬರಿಯ ಒಳಗೆ ಆಯಾ ಪಾತ್ರಗಳು ಮಾಡುವ ವಿಡಂಬನೆಗೆ, ಕುಣಿತಕ್ಕೆ, ಗಾನಕ್ಕೆ ಪಾತ್ರಗಳು ಹೊಣೆ, ಬರಗೂರರಲ್ಲ. ಕಾದಂಬರಿಯಲ್ಲಿ ಪಾತ್ರವೊಂದು ಮಾಡುವ ವಿಡಂಬನೆಗೆ ಬರಗೂರರು ತಲೆಗೊಡಲಾದೀತೆ? ಇದು ಬರಗೂರರ ತರ್ಕ.

ಪ್ರಗತಿಶೀಲರ ತರ್ಕ ಮತ್ತು ವೈಚಾರಿಕತೆಯೆಂಬ ಪ್ರಹಸನ   

ರಾಷ್ಟ್ರಗೀತೆ, ನಾಡಗೀತೆ ಅಥವಾ ಯಾವುದೇ ಪ್ರಸಿದ್ಧವಾದ ಹಾಡಿನ ಲಯವನ್ನು ಬಳಸಿಕೊಂಡು ಹೊಸ ಹಾಡುಗಳನ್ನು ಸೃಷ್ಟಿಸುವುದು ನಮ್ಮ ದೈನಂದಿನ ಅನುಭವಕ್ಕೆ ಹೊರತಲ್ಲ. ಇದು ಸೃಜನಶೀಲತೆಗೆ ಉದಾಹರಣೆ. ಈ ರೀತಿಯ ಸೃಜನಶೀಲತೆಗೆ ಸಾಮಾಜಿಕ ಜಾಲತಾಣಗಳು ಉತ್ತಮ ಆಶ್ರಯತಾಣ.   

 ಹಾಗಾಗಿ ರಾಷ್ಟ್ರಗೀತೆಯ ಲಯದಲ್ಲಿ ಕಾದಂಬರಿಯಲ್ಲಿ ಹೊಸ ಹಾಡೊಂದರ ಸೃಷ್ಟಿ ಅಸಹಜವೆನಿಸದು. ಈ ನಿಟ್ಟಿನಲ್ಲಿ ನೋಡಿದಾಗ ಬರಗೂರರು ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅಪಮಾನ ಮಾಡಿದಂತೆ ಕಾಣದು. ಆದರೆ ಇದೇ ತರ್ಕದ ಪ್ರಕಾರ, ಚಕ್ರತೀರ್ಥರು ಕೂಡ ನಾಡಗೀತೆಗೆ ಅಪಮಾನ ಮಾಡಿಲ್ಲವೆನ್ನಬೇಕು. ಆದರೆ ಚಕ್ರತೀರ್ಥರನ್ನು ಆಕ್ಷೇಪದಿಂದ ಕೈಬಿಡುವುದು ಪ್ರಗತಿಶೀಲರಿಗೆ ಅಸಾಧ್ಯ. ಚಕ್ರತೀರ್ಥರನ್ನು ಅಪರಾಧಿಯಾಗಿಸುವ, ಬರಗೂರರನ್ನು ಅಪರಾಧದಿಂದ ಮುಕ್ತವಾಗಿಸುವ ತರ್ಕವೊಂದು ಪ್ರಗತಿಶೀಲರಿಗೆ ಬೇಕಿತ್ತು. ಹಾಗಾಗಿ ಪ್ರಗತಿಶೀಲರಿಗೆ ಬೇರೊಂದು ಹಾದಿಯನ್ನು ತುಳಿಯುವುದು ಅನಿವಾರ್ಯವಾಗಿತ್ತು. ಸ್ವತಃ ತನ್ನದೇ ಕಾದಂಬರಿಯಲ್ಲಿನ ವಿಡಂಬನೆಗೆ ತಾನು ಜವಾಬ್ದಾರನಲ್ಲ ಎನ್ನುವ ಬರಗೂರರ ತರ್ಕದ ಹಿನ್ನೆಲೆ ಇದು.  

ಬರಗೂರರು ವಾದಿಸುವಂತೆ ಕಾದಂಬರಿಯಲ್ಲಿನ ಪಾತ್ರಗಳೇ ಸ್ವತಂತ್ರವಾಗಿ ಅಭಿಪ್ರಾಯವನ್ನು ಹೇಳುತ್ತವೆ. ಈ ಮಾತು ಪ್ರಚಲಿತ ಸಾಹಿತ್ಯಲೋಕದ ಸವಕಲು ನಾಣ್ಯವಿದ್ದಂತೆ. ಆದರೆ ಇಲ್ಲಿ ಸೋಜಿಗವೆನಿಸುವುದು, ಈ ತರ್ಕವು  ವೈಚಾರಿಕತೆಗೆ ಹೆಸರುವಾಸಿಯಾದ ಬರಗೂರರದ್ದು ಎನ್ನುವುದರಿಂದ. ಬರಗೂರರು ‘ಭರತನಗರಿ’ ಎಂಬ ಕಾದಂಬರಿಯ ಕರ್ತೃ. ಅಲ್ಲಿನ ಪಾತ್ರಗಳು ಸ್ವರಚಿತ ಕಾದಂಬರಿಯ ಭಾಗ. ಪಾತ್ರಗಳ ಸೃಷ್ಟಿಕರ್ತರು ಬರಗೂರರು. ಬರಗೂರರನ್ನು ಹೊರತುಪಡಿಸಿ ಈ ಪಾತ್ರಗಳಿಗೆ ಸ್ವತಂತ್ರವಾದ ಅಸ್ತಿತ್ವವಿರಲು ಸಾಧ್ಯವೇ?  ಸಾಧ್ಯವಿಲ್ಲವೆನ್ನಲು ನಮಗಿರುವ ಸಾಮಾನ್ಯ ಜ್ಞಾನ ಸಾಕು. ಆದರೆ ಬರಗೂರರ ತರ್ಕ ಬೇರೆಯದೇ ದಿಕ್ಕಿನಲ್ಲಿದೆ.  

ಬರಗೂರರ ತರ್ಕದ ಪ್ರಕಾರ ಲೇಖಕ ಕೇವಲ ಲಿಪಿಕಾರ. ಕಾದಂಬರಿಯ ಆಚೆಗೆ ಸ್ವತಂತ್ರ ಅಸ್ತಿತ್ವವಿರುವ ಪಾತ್ರಗಳೇ ಕಥೆಯನ್ನು ಬರೆಸುತ್ತವೆ. ಪಾತ್ರ ಪ್ರಪಂಚ ಲೇಖಕನ ಸೃಜನಶೀಲತೆಯಲ್ಲ. (ಅಷ್ಟಾದರೂ ಸೃಜನಶೀಲತೆಗೆ ಲೇಖಕನೇ ಬಹುಮಾನವನ್ನು ಪಡೆದುಕೊಳ್ಳುವುದು ಯಾವ ನೈತಿಕತೆಯೋ?). ಕಥೆಯಾಚೆಗೆ ಸ್ವತಂತ್ರ ಅಸ್ತಿತ್ವವಿರುವ ಪಾತ್ರಗಳಿದ್ದರೆ, ಆ ಪಾತ್ರಗಳ ಆಶ್ರಯತಾಣವಾದ ಕಥೆ ನೈಜ ಪ್ರಪಂಚವೊಂದು ಇರಬೇಕು.  ಪಾತ್ರಗಳ ಜಗತ್ತಿನ ಈ ಪಾತ್ರಗಳು ನಮ್ಮ ಜಗತ್ತಿಗೆ ಲಿಪಿಕಾರನ ಮೂಲಕ ತಮ್ಮ ಸಂದೇಶವನ್ನು ಕೊಡಬಯಸಿದಾಗ ಕಾದಂಬರಿಯು ಮೂಡುತ್ತದೆ. ಪಾತ್ರಗಳ ಈ ಪವಿತ್ರ ಕಾರ್ಯಕ್ಕೆ ಬರಗೂರರು ಪ್ರವಾದಿ. ಇದು ನಿಜವಾದರೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಬರಗೂರರಿಗೆ ಸಂದೇಶ ನೀಡುವ ಈ ಪಾತ್ರಗಳ ಜಗತ್ತು ಎಲ್ಲಿದೆ? ಅಲ್ಲಿನ ಪಾತ್ರಗಳ ರಚನೆ ಮತ್ತು ಸ್ವರೂಪವೇನು? ಪಾತ್ರಗಳ ಜಗತ್ತಿನ ಪಾತ್ರಗಳು ಬರಗೂರರನ್ನೇ ಏಕೆ ಹಿಡಿದುಕೊಂಡವು? ವಿಡಂಬನೆಗೆ ಸೋಬಾನೆ ಪದವನ್ನೋ, ಯಕ್ಷಗಾನ ಪದವನ್ನೋ, ಮಂಟೆ ಸ್ವಾಮಿಯ ಕಾವ್ಯವನ್ನೋ ಆಯ್ದುಕೊಳ್ಳದೇ ಬರಗೂರರನ್ನು ಆವರಿಸಿಕೊಂಡಿದ್ದ ಈ ಪಾತ್ರಗಳು ಜನಗಣಮನವನ್ನೇ ಆಯ್ದುಕೊಳ್ಳಲು ಕಾರಣಗಳೇನು?  ಪಾತ್ರಗಳ ಲೋಕದಲ್ಲಿಯೂ ಜನಗಣಮನವಿದೆಯೇ? ಇದ್ದರೆ ಅದನ್ನು ರಚಿಸಿದವರಾರು? ಪಾತ್ರಗಳ ಲೋಕದಲ್ಲೂ ಠಾಗೂರರು ಇದ್ದಾರೆಯೇ? ಪಾತ್ರಗಳ ಲೋಕಕ್ಕೂ ಭಾಷೆಗಳಿವೆಯೇ? ಈ ಪಾತ್ರಗಳ ಲೋಕವೂ ಮನುಷ್ಯರ ಲೋಕದಂತೆ ಬದಲಾಗುತ್ತದೆಯೇ? ಬರಗೂರರ ಗಂಭೀರ ತರ್ಕಕ್ಕಿರುವ ಅಸಂಖ್ಯಾತ ಸಮಸ್ಯೆಗಳು ಮತ್ತು ಉತ್ತರವಿಲ್ಲದ ಪ್ರಶ್ನೆಗಳಿವು.

 ಇವಲ್ಲದೇ, ಬರಗೂರರ ತರ್ಕ ಸಾಹಿತ್ಯ ಕ್ಷೇತ್ರದ ಪ್ರಮುಖ ವಾದವನ್ನು ತಿರಸ್ಕರಿಸುತ್ತದೆ. ಕಥೆ-ಕಾದಂಬರಿಗಳು ಆಯಾ ಕಾಲಘಟ್ಟದ ಸಾಮಾಜಿಕ ಸಾಂಸ್ಕೃತಿಕ ಮತ್ತು ರಾಜಕೀಯ ಜಗತ್ತಿಗೆ ಹಿಡಿದ ಕೈಗನ್ನಡಿಯೆನ್ನುವುದು ಸಾಹಿತ್ಯ ಕ್ಷೇತ್ರದ ಪ್ರಮುಖವಾದ ವಾದ. ಆದ್ದರಿಂದ ಬೌದ್ಧಿಕವಾಗಿ, ವೈಜ್ಞಾನಿಕವಾಗಿ ಮತ್ತು ತಾರ್ಕಿಕವಾಗಿಯೂ ಕಥೆಯಾಚೆಗೆ ಪಾತ್ರಗಳ ಸ್ವತಂತ್ರವಾದ ಅಸ್ತಿತ್ವ ಅಸಮರ್ಥನೀಯ. ಹಾಗಾಗಿ ತಮ್ಮ ಕಾದಂಬರಿಯಲ್ಲಿನ ಪಾತ್ರಗಳ ಸೃಷ್ಟಿಕರ್ತರು ಸ್ವತಃ ಬರಗೂರರೇ. ಪಾತ್ರಗಳು ಮಾಡಿದ ವಿಡಂಬನೆಗೆ ಬರಗೂರರೇ ಜವಾಬ್ದಾರರು. ಇನ್ನೊಂದೆಡೆ ಇದನ್ನು ಸ್ವತಃ ಬರಗೂರರೇ ಒಪ್ಪುತ್ತಾರೆ. ಅವರೇ ಹೇಳುವಂತೆ -  

ನಾನು ಕಾಲದ ಕಾಂಗ್ರೆಸ್ ಆಡಳಿತ ವ್ಯವಸ್ಥೆಯನ್ನು

ವಿಡಂಬನೆಗೆ ಒಡ್ಡಿ, ಒಟ್ಟು ಬದಲಾವಣೆಗೆ ಆಶಿಸಿದ್ದೇನೆ

ಕಾದಂಬರಿಯಲ್ಲಿ ಆ ಕಾಲದ ಕಾಂಗ್ರೆಸ್ ಆಡಳಿತ ವ್ಯವಸ್ಥೆಯನ್ನು ತಾವೇ ವಿಡಂಬನೆಗೆ ಒಡ್ಡಿದ್ದೇನೆ ಎನ್ನುವುದು ಬರಗೂರರ ಹೇಳಿಕೆ. ಹಾಗಿದ್ದರೆ ಪಾತ್ರಗಳು ಬರಗೂರರ ಕಲ್ಪನೆ, ಅನುಭವಗಳ ಮೂಸೆಯಿಂದ ಸೃಷ್ಟಿಸಲ್ಪಟ್ಟಂತಹವು. ಲೇಖಕನ ಸೃಷ್ಟಿ ಅಥವಾ ಸ್ವತಂತ್ರ ಅಸ್ತಿತ್ವ, ಇವೆರಡರಲ್ಲಿ ಒಂದನ್ನು ಮಾತ್ರ ನಾವು ಪಾತ್ರಪ್ರಪಂಚಗಳಿಗೆ ಏಕಕಾಲದಲ್ಲಿ ಆರೋಪಿಸಲು ಸಾಧ್ಯ. ಏಕಕಾಲದಲ್ಲಿ ಪಾತ್ರಪ್ರಪಂಚಕ್ಕೆ ಸ್ವತಂತ್ರ ಅಸ್ತಿತ್ವವಿರುವುದು ಮತ್ತು ಸ್ವತಂತ್ರ ಅಸ್ತಿತ್ವವಿಲ್ಲದೇ ಲೇಖಕನ ಸೃಷ್ಟಿಯ ಪರತಂತ್ರದಲ್ಲಿರುವುದು ಎರಡೂ ಸತ್ಯವಾಗಲು ಸಾಧ್ಯವೇ ಇಲ್ಲ. ಒಂದೊಮ್ಮೆ ಇವೆರಡೂ ಏಕಕಾಲದಲ್ಲಿ ಸತ್ಯವಾದರೆ ಅದು ತಾರ್ಕಿಕ ಅಸಂಬದ್ಧತೆಯಾಗುತ್ತದೆ (logical inconsistency). ಆದ್ದರಿಂದ ಈ ಅಸಂಬದ್ಧ ಹೇಳಿಕೆಗಳು ಬರಗೂರರು ರಾಷ್ಟ್ರಗೀತೆಯನ್ನು ಅವಮಾನಿಸಿದ್ದಾರೋ ಇಲ್ಲವೋ ಎಂಬದನ್ನು ತೀರ್ಮಾನಿಸವು. ಹಾಗಾಗಿ ಕಾಂಗ್ರೆಸ್ಸಿನ ಪ್ರಭಾವ, ಪಾತ್ರಗಳ ಲೋಕಕ್ಕೂ ಹಬ್ಬಿ ಪಾತ್ರಗಳ ಲೋಕವೇ ಕಾಂಗ್ರೆಸ್ ಸರ್ಕಾರವನ್ನು ವಿಡಂಬಿಸಿತೋ? ಅಥವಾ ಸ್ವಯಂ ಬರಗೂರರೇ ಕಾಂಗ್ರೆಸ್ ಸರ್ಕಾರವನ್ನು ವಿಡಂಬಿಸಿದರೋ? ಬರಗೂರರೇ ಸ್ಪಷ್ಟಪಡಿಸಬೇಕು. 

ವೈಚಾರಿಕತೆಯೋ ಅಥವಾ ಅವೈಚಾರಿಕತೆಯೋ?   

ಈಗಾಗಲೆ ಗುರುತಿಸಿದಂತೆ ಗೀತೆಯೊಂದರ ಲಯಬದ್ಧ ಅನುಕರಣೆ ನಾಡಗೀತೆಯ ಅಥವಾ ರಾಷ್ಟ್ರಗೀತೆಯ ಅವಮಾನವಲ್ಲ. ಇಷ್ಟು ಸರಳ ವಿಚಾರವನ್ನು ಹೇಳಲು ಪ್ರಗತಿಶೀಲರಿಗೆ ತಮ್ಮ ರಾಜಕೀಯವೇ ಅಡ್ಡಿ ಎನ್ನುವದನ್ನು ನೋಡಿದ್ದಾಯಿತು. ಆದರೆ ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ.  ಈ ಚರ್ಚೆಯಲ್ಲಿ ಬರಗೂರರು ನಮ್ಮ ಮುಂದಿಟ್ಟ ಇನ್ನೊಂದು ವಿಚಿತ್ರ ಸಮರ್ಥನೆಯಿದೆ. ಅದು ಕಲ್ಪನೆ ಮಾಡಲಾರದಷ್ಟು ದೊಡ್ಡ ದೊಡ್ಡ ಸಮಸ್ಯೆಗಳನ್ನು ಧುತ್ತನೆ ಬೌದ್ಧಿಕ ಜಗತ್ತಿನ ಮುಂದಿಡುತ್ತದೆ. ಹಿಂದೂಪರರ ಪ್ರಕಾರ, ಈ ಚರ್ಚೆಯಲ್ಲಿ ಸಮಸ್ಯೆ ಬರಗೂರರ ಜನಗಣಮನದ ವಿಡಂಬನೆ. ಆದರೆ ಬರಗೂರರ ಮರುಮುದ್ರಣದಲ್ಲಿ ವಿಡಂಬನೆಯಿಲ್ಲ. ನಲವತ್ತು ವರ್ಷಗಳ ಹಿಂದಿನ ಬರಹ ಇಂದಿನ ರಾಜಕಾರಣಕ್ಕೆ ಸೂಕ್ತವಲ್ಲವೆಂಬುದು ಬರಗೂರರ ಸಮರ್ಥನೆ. ಬರಗೂರರ ಈ ವಾದವನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ.   

ಹಿಂದಿನವರು ಇಂದು ಅಪ್ರಸ್ತುತರೇ?

ಕೇವಲ ನಲವತ್ತು ವರ್ಷಗಳ ಹಿಂದಿನ ಬರಗೂರರ ಬರಹವನ್ನು ಗಂಭೀರವಾಗಿ ಪರಿಗಣಿಸಬಾರದೇ? ಹಾಗಿದ್ದರೆ ಈ ನಿಯಮವು ಬೇರೆಯವರಿಗೂ ಅನ್ವಯಿಸಬೇಕು. ಅಂದರೆ ಹಲವಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಬರೆದದ್ದು ಈಗ ಅಪ್ರಸ್ತುತವೆಂಬುದು  ಬರಗೂರರ ಆಶಯವೇ? ಇಡೀ ಆಧುನಿಕ ನೈಸರ್ಗಿಕ ವಿಜ್ಞಾನದ ಬೆಳವಣಿಗೆಗೆ ಕಾರಣವಾದ ಪೂರ್ವಜರು ನ್ಯೂಟನ್, ಡಾರ್ವಿನ್, ಐನ್-ಸ್ಟೀನ್ ಮೊದಲಾದವರು. ಇವರನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲವೇ? ತೆಗೆದುಕೊಳ್ಳಬಾರದೆಂಬುದು ಆಶಯವಾದರೆ, ಸಾವಿರಾರು ವರ್ಷಗಳ ಹಿಂದಿನ ಮನುಸ್ಮೃತಿ ಇತ್ಯಾದಿ ಪಠ್ಯಗಳ ಕುರಿತು ಬೆಳಗು-ಬೈಗೂ ಬಿಡದಂತೆ ಪ್ರಗತಿಪರರು ಶಂಖ ಊದುವುದೇಕೆ? ಸಾವಿರಾರು ವರ್ಷಗಳ ಹಿಂದಿನ ಮನುಸ್ಮೃತಿ, ವೇದ ಇತ್ಯಾದಿಗಳು ಇಂದು ಚರ್ಚಾರ್ಹವೇ? ಚರ್ಚಾರ್ಹವಾದರೆ ಇತ್ತೀಚಿನ ನಲವತ್ತು ವರ್ಷಗಳ ಹಿಂದಿನ ಬರಗೂರರ ಬರಹವನ್ನೇಕೆ ಚರ್ಚಿಸಬಾರದು? ಯಾಕೆಂದರೆ ಬರಗೂರರು ಮನು ಇತ್ಯಾದಿಗಳಿಗಿಂತ ಮಿಗಿಲಾದ ಪಾತ್ರಲೋಕದ ಪ್ರಶ್ನಾತೀತ ಪ್ರವಾದಿಯೆಂದು ಅಭಿಪ್ರಾಯವೇ? ಅಥವಾ ಸಮಯಕ್ಕನುಗುಣವಾಗಿ ಹೀಗೆ ಪ್ರಶ್ನಾತೀತ ವ್ಯಕ್ತಿಯಾಗಿ ಬದಲಾಗುವುದು ಪ್ರಗತೀಶೀಲರ ಪ್ರಖರವಾದ ವೈಚಾರಿಕತೆಯ ಗುಣಲಕ್ಷಣವೇ? ಸ್ವತಃ  ಬರಗೂರರು ರಾಮಚಂದ್ರಪ್ಪನವರೇ ಇದನ್ನು  ಸ್ಪಷ್ಟಪಡಿಸಬೇಕು.    

ಹಿಂದಿನವರ ಬರಹಗಳು ಇಂದು ಅಪ್ರಸ್ತುತ. ಅವನ್ನು ಇಂದು ಚರ್ಚಿಸಬಾರದು ಎಂಬುದು ಬರಗೂರರ ತರ್ಕವಾದರೆ ನಮ್ಮ ಪೂರ್ವಜರಾದ ಮನು, ವೇದವ್ಯಾಸ, ಮಾರ್ಕ್ಸ್, ಗಾಂಧಿ, ಕುವೆಂಪು, ಬೇಂದ್ರೆ, ಬರಗೂರರು ಈ ಕಾಲಕ್ಕೆ ಅಪ್ರಸ್ತುತರೇ? ಅಂದರೆ ಹಿಂದಿನ ಬರಹ, ವಿಚಾರಗಳಿಂದಾಗಿ ಸ್ವತಃ ಬರಗೂರರನ್ನು ಪ್ರಗತಿಶೀಲರು, ಬುದ್ದಿಜೀವಿಗಳು ಎನ್ನುವುದು ಅಪ್ರಸ್ತುತವಾಗುತ್ತದೆಯಲ್ಲವೇ? ಹಾಗಿದ್ದಾಗ ಬೌದ್ಧಿಕ ಕ್ಷೇತ್ರದಲ್ಲಿ ಬರಗೂರರ ಗುರುತು-ಪರಿಚಯಗಳ ಸ್ಥಾನ-ಮಾನಗಳ ಪ್ರಶ್ನೆಯೂ ಎದುರಾಗಿಬಿಡುತ್ತದೆ.  

ಮರುಮುದ್ರಣದ ನೈತಿಕ ಪ್ರಶ್ನೆ  

ಬರಗೂರರ ತರ್ಕಕ್ಕಿರುವ ಸಮಸ್ಯೆಗಳು ಹನುಮನ ಬಾಲದಂತೆ ಎಂದೂ ಮುಗಿಯದವು. ಮರುಮುದ್ರಣದಲ್ಲಿ ಜನಗಣಮನದ ವಿಡಂಬನೆಯನ್ನು ಬರಗೂರರು ಕೈಬಿಟ್ಟಿದ್ದಾರೆ. ಅವರೇ ಹೇಳುವಂತೆ ಜನಗಣಮನದ ವಿಡಂಬನೆಯನ್ನು ಮಾಡಿದ್ದು ಪಾತ್ರಲೋಕದ ಪಾತ್ರಗಳು. ಪಾತ್ರಗಳು ಮಾಡಿದ ವಿಡಂಬನೆಯನ್ನು ಕೈಬಿಡಲು ಪಾತ್ರಗಳ ಅನುಮತಿ ಬೇಕೆಲ್ಲವೇ? ಪಾತ್ರಗಳೇ ಸ್ವಯಂ ಬರೆಸಿದ ಕಾದಂಬರಿಯ ಭಾಗ. ಅವುಗಳ ಅನುಮತಿಯಿಲ್ಲದೆ ಬರಗೂರರು ಕೈಬಿಟ್ಟಿದ್ದು ಸರಿಯೇ ಎಂಬ ನೈತಿಕ ಪ್ರಶ್ನೆಯು ಮನಸ್ಸಿನಲ್ಲಿ ಸುಳಿಯುವುದು ಸುಳ್ಳಲ್ಲ. ಬರಗೂರರ ಈ ಕೃತ್ಯಕ್ಕೆ ಪಾತ್ರಗಳ ಲೋಕದ ಪರವಾಗಿ, ನ್ಯಾಯಕ್ಕಾಗಿ ದಾವೆ ಹೂಡುವ ಸಾಕ್ಷಿಪ್ರಜ್ಞೆಯುಳ್ಳವರು ಏನು ಮಾಡಬೇಕು? ಅಥವಾ ಪಾತ್ರಗಳ ಲೋಕಕ್ಕೆ ಮುಂದಿನ ಮುದ್ರಣದ ಸಂದರ್ಭದಲ್ಲಿ ದೇಶಭಕ್ತಿಯು ಬಂದಿತೆ? ಮರುಮುದ್ರಣದಲ್ಲಿ ರಾಷ್ಟ್ರಗೀತೆಯ ವಿಡಂಬನೆಯನ್ನು ಕೈಬಿಡಬೇಕೆಂದು ಸಕಾರಣವಾಗಿ ವಿವರಿಸಿ ರಹಸ್ಯವಾಗಿ ಬರಗೂರರಿಗೆ ಪಾತ್ರಗಳು ಸಂದೇಶ ರವಾನಿಸಿದವೇ? ಪಾತ್ರಗಳ ಲೋಕ ವಿಡಂಬನೆಯನ್ನು ಕೈಬಿಡಲು ಕೊಟ್ಟ ಕಾರಣಗಳನ್ನಾಗಲಿ, ಸೂಚನೆಗಳನ್ನು ರವಾನಿಸಿದ ಕುರಿತಾಗಲಿ, ಮರುಮುದ್ರಣದಲ್ಲಿ ಬರಗೂರರು ಯಾವ ಉಲ್ಲೇಖವನ್ನೂ ಮಾಡುವುದಿಲ್ಲ.   

ಮೂರು-ನಾಲ್ಕು ವರ್ಷಗಳ ಹಿಂದಿನ ಸಾಮಾಜಿಕ ಜಾಲತಾಣದ ಬರಹವೊಂದನ್ನು ಇಟ್ಟುಕೊಂಡು ಈಗ ಗದ್ದಲ ಬೇಡವೆಂದು ಚಕ್ರತೀರ್ಥರು ಹೇಳಿದಾಗ ಎಲ್ಲರೂ ಕಿವಿಯಿಲ್ಲದ ಗೋಡೆಗಳು. ಆದರೆ ಅದೇ ಕಾರ್ಯತಂತ್ರ ತಿರುಗು ಬಾಣವಾಗಿ ತಮ್ಮ ಬುಡಕ್ಕೆ ಬಂದಾಗ ಹಿಂದಿನದ್ದೆಲ್ಲವನ್ನು ಬಿಟ್ಟು ಬಿಡಿ ಎನ್ನುವುದು ಯಾವ ರೀತಿಯ ತರ್ಕ? ತಮ್ಮ ಅನುಯಾಯಿಗಳಿಗೆ, ತಮ್ಮ ಸಮರ್ಥಕರಿಗೆ ಒಂದು ಮಾನದಂಡ. ತಮಗಾಗದವರಿಗೆ ಇನ್ನೊಂದು ಮಾನದಂಡ. ಇದು ಪ್ರಗತಿಶೀಲರ ರಾಜಕಾರಣ. ಇದನ್ನು ಬಿಟ್ಟು ಇಲ್ಲಿ ಯಾವುದೇ ಬೌದ್ಧಿಕ ನೆಲೆಗಟ್ಟಿಲ್ಲ. ಇಲ್ಲಿ ಅಗೋಚರವಾದ ತಾರ್ಕಿಕ ಸುಸಂಬದ್ಧ ವೈಚಾರಿಕತೆಯು ಪ್ರಗತಿಶೀಲರಿಗೆ ಕಾಣುತ್ತದೆಯಾದರೆ, ಅದು ‘ಹೀಗೂ ಉಂಟೆ’ ಎಂಬ ಯಕ್ಷಪ್ರಶ್ನೆಯಾಗಿ ನಮ್ಮನ್ನು ಕಾಡುತ್ತದೆ.  

ಬೌದ್ಧಿಕತೆಯೋ? ರಾಜಕಾರಣವೋ?  

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಅನೇಕ ದಿನಗಳವರೆಗೆ ರೋಹಿತ್ ಚಕ್ರತೀರ್ಥ ಮತ್ತು ಬರಗೂರು ರಾಮಚಂದ್ರಪ್ಪನವರು ವಿಷಯವಾದರು. ಈ ಚರ್ಚೆಯ ಕೇಂದ್ರದಲ್ಲಿದ್ದ ರಾಷ್ಟ್ರಗೀತೆ, ನಾಡಗೀತೆಯ ಅಪಮಾನ ಹೊಸ ಸ್ವರೂಪಕ್ಕೆ ತಿರುಗಿತ್ತು. ಆದರೆ ರಾಷ್ಟ್ರಗೀತೆ, ನಾಡಗೀತೆ ಹಾಗೂ ಇನ್ನಿತರ ಹಲವು ಹಾಡುಗಳ ಲಯಗಳನ್ನು ಬಳಸಿಕೊಂಡು ಅನೇಕ ಹೊಸ ಹಾಡುಗಳನ್ನು ಸೃಷ್ಟಿಸುವುದು ನಮ್ಮೆಲ್ಲರ ಸಹಜ ಅನುಭವ. ಹಾಗಾಗಿ ಬರಗೂರರಾಗಲಿ, ಚಕ್ರತೀರ್ಥರಾಗಲಿ ರಾಷ್ಟ್ರಗೀತೆ, ನಾಡಗೀತೆಗಳ ಲಯಗಳನ್ನು ಬಳಸಿಕೊಂಡಲ್ಲಿ ಅದು ರಾಷ್ಟ್ರಗೀತೆ, ನಾಡಗೀತೆಗಳಿಗೆ ಮಾಡಿದ ಅಪಮಾನವೆನಿಸದು. ರಾಷ್ಟ್ರಗೀತೆ ಮತ್ತು ನಾಡಗೀತೆಗಳ ಲಯವನ್ನು ಇನ್ನೊಂದೆಡೆ ಬಳಸಬಾರದೆಂಬ ಕಾನೂನೇನು ಇಲ್ಲ.

ಬರಗೂರರು ಸ್ವತಂತ್ರ ಭಾರತದ ಕಾನೂನುಗಳ ಪರಿಧಿಯೊಳಗೆ ಮಾಡಿದ ರಾಷ್ಟ್ರಗೀತೆಯ ವಿಡಂಬನೆ ಅಪಮಾನದ ವ್ಯಾಪ್ತಿಯೊಳಗೆ ಬಾರದು, ಇದು ದೇಶದ ಸಮಕಾಲೀನ ಪರಿಸ್ಥಿತಿಯ ಕಟು ವಿಮರ್ಶೆಯೆಂಬುದು ಪ್ರಗತಿಶೀಲರು ಮಾಡಬಹುದಾಗಿದ್ದ ಉತ್ತಮ ಪ್ರತಿಕ್ರಿಯೆ. ಇದೇ ಪ್ರತಿಕ್ರಿಯೆಯ ಸರಣಿಯಲ್ಲಿ ಚಕ್ರತೀರ್ಥರನ್ನೂ ಅಪರಾಧಿ ಸ್ಥಾನದಿಂದ ಮುಕ್ತವಾಗಿಸಿ ಚರ್ಚೆಯ ದಿಕ್ಕನ್ನು ಬದಲಿಸುವ ಸದವಕಾಶ ಪ್ರತಗಿಶೀಲರಿಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರು ಪ್ರಗತಿಶೀಲರು. ಅವರೇ ಅಭಿವ್ಯಕ್ತಿ ಸ್ವಾತಂತ್ರ್ಯದ ಉಸಿರುಗಟ್ಟಿಸಬಹುದೇ? ಒಂದು ಹಾಡಿನ ಲಯದ ಅನುಕರಣೆಯು ಯಾವುದೋ ಸಮುದಾಯ, ರಾಷ್ಟ್ರ, ನಾಡುಗಳಿಗೆ ಅಪಮಾನವಾಗುತ್ತದೆ ಎಂಬ ಗದ್ದಲವೆಬ್ಬಿಸಿ, ಮುಕ್ತವಾಗಿ ಮಾತನಾಡಲಾಗದ ವಾತಾವರಣವನ್ನು ನಿರ್ಮಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಿಲಾಂಜಲಿ ಇಟ್ಟವರಾರು? ರಾಷ್ಟ್ರಗೀತೆ, ನಾಡಗೀತೆಗಳ ಲಯವನ್ನು ಬಳಸುವುದು ಯಾವುದೇ ಅಪರಾಧವಲ್ಲ. ಸುಖಾಸುಮ್ಮನೆ ವಿಷಯವನ್ನು ಬೆಳೆಸಿ ದೊಡ್ಡದು ಮಾಡುವ ಅವಶ್ಯಕತೆಯಿಲ್ಲವೆಂದು ಪ್ರಗತಿಶೀಲರು ಚರ್ಚೆಗೆ ಇತಿಶ್ರಿ ಹಾಡಬಹುದಿತ್ತು.

ಆದರೆ ಇಷ್ಟು ಸರಳ ಸಜ್ಜನಿಕೆಯ ಮಾರ್ಗ ಪ್ರಗತಿಶೀಲರಿಗೆ ರುಚಿಸಲಿಲ್ಲ. ನಾವು ವಿವರಿಸಿರುವ ಮೇಲಿನ ತರ್ಕ ಪ್ರಗತಿಶೀಲರಾದ ಬರಗೂರರನ್ನು ಅಪರಾಧಿ ಸ್ಥಾನದಿಂದ ಮುಕ್ತರಾಗಿಸುವುದು ನಿಜ. ಆದರೆ ನಮ್ಮ ಸರಳ ತರ್ಕ ಪ್ರಗತಿಶೀಲರಿಗೆ ಸರಿಹೊಂದದಿರಲು ಕಾರಣವೆಂದರೆ, ನಮ್ಮ ತರ್ಕದ ಪರಿಣಾಮ ಚಕ್ರತೀರ್ಥರೂ ಅಪರಾಧಿ ಸ್ಥಾನದಿಂದ ಮುಕ್ತರಾಗಿಬಿಡುತ್ತಾರೆ. ಒಂದು ನಿರ್ದಿಷ್ಟ ವೈಚಾರಿಕ ತರ್ಕದ ಹಿನ್ನೆಲೆಯಲ್ಲಿ ಯಾರೇ ಮುಕ್ತರಾದರೂ ಅದು ಸಮಸ್ಯೆ ಏಕಾಗಬೇಕು? ಸಾಧಾರಣವಾಗಿ ಅದು ವೈಚಾರಿಕ ಚಿಂತನೆ, ನ್ಯಾಯಾನ್ಯಾಯ ವಿವೇಚನೆಯ ವಿಷಯವಾದರೆ ಸಮಸ್ಯೆಯಾಗಬಾರದು. ಆದರೆ ಇಲ್ಲಿ ಪ್ರಗತಿಶೀಲರಿಗೆ ಅದು ಸಮಸ್ಯಾತ್ಮಕ. ಈ ಕಾರಣಕ್ಕಾಗಿಯೇ, ಅಂದರೆ ತಮ್ಮ ವೈಚಾರಿಕ ವಿಶ್ಲೇಷಣೆ ಬರಗೂರರಿಗೆ ನಿರಪರಾಧಿ ಸ್ಥಾನವನ್ನು ಕೊಟ್ಟರೂ ಅದು ರೋಹಿತ ಚಕ್ರತೀರ್ಥರನ್ನು ಅಪರಾಧಿ ಸ್ಥಾನದಿಂದ ಬಿಡುಗಡೆ ಮಾಡುವುದು ಅವರಿಗೆ ಬೇಕಾಗಿಲ್ಲ. ಅಂದರೆ ಇಲ್ಲಿ ಯಾವುದೇ ಕ್ರಿಯೆಯ ವಿಶ್ಲೇಷಣೆಯ ಪೂರ್ವದಲ್ಲೇ ಯಾರು ಅಪರಾಧಿ ಯಾರು ಅಪರಾಧಿಯಲ್ಲ ಅನ್ನುವಷ್ಟು ತೀರ್ಮಾನವಿದೆ. ಕಣ್ಣಮುಂದಿರುವ ಸರಳ ಮಾರ್ಗೋಪಾಯವನ್ನು ಬಿಟ್ಟು ತಮ್ಮನ್ನು ಮಾತ್ರ ಸಮರ್ಥಿಸಿಕೊಳ್ಳುವ ಮತ್ತು ಬೇರೆಯವರನ್ನು ಸರಿಯಾದ ಕಾರಣವಿಲ್ಲದಿದ್ದರೂ ಹಣಿಯಲು ಹೊರಡುವ ಪ್ರಗತಿಶೀಲರ ಈ ನಡವಳಿಕೆಗಳು ಸಾಕಷ್ಟು ವಿವರಣೆಗಳನ್ನು ಬೇಡುತ್ತವೆ.

ಪ್ರಗತಿಶೀಲ ರಾಜಕಾರಣ ಮತ್ತು ವೈಚಾರಿಕ ಜಗತ್ತು 

ಪ್ರಗತಿಶೀಲರೆಂದು ಇಂದು ಕರೆದುಕೊಳ್ಳುವ ಅನೇಕರು ಪರಸ್ಪರ ಸಂಬಂಧವಿರದ ಅನೇಕ, ವಿಭಿನ್ನ ಐಡಿಯಾಲಜಿಕಲ್ ಗುಂಪುಗಳಿಗೆ ಸೇರಿದವರಾಗಿದ್ದಾರೆ. ಅವರು ಜಗದೋದ್ಧಾರ, ಸಾಮಾಜಿಕ ಪರಿವರ್ತನೆ ಇತ್ಯಾದಿಗಳ ಕುರಿತು ಕೆಲವು ಅಸ್ಪಷ್ಟವೂ, ಅಮೂರ್ತವೂ ಹಾಗೂ ಅನೇಕ ಬಾರಿ ನಮ್ಮ ಗ್ರಹಿಕೆಗೆ ಬಾರದ ಹಲವು ಗುರಿಗಳನ್ನು ಹೊಂದಿರುವ ರಾಜಕಾರಣದ ಗುಂಪುಗಳ ಭಾಗವಾಗಿದ್ದಾರೆ. ಈ ರಾಜಕಾರಣದಲ್ಲಿ ಯಾರು ತಮ್ಮವರು ಮತ್ತು ಯಾರು ತಮ್ಮ ವಿರೋಧಿಗಳು ಎಂದು ಗುರುತಿಸುವುದು ಅತ್ಯಂತ ಕೇಂದ್ರ ಸಂಗತಿಯಾಗಿರುತ್ತದೆ. ಇಲ್ಲಿ ಒಮ್ಮೆ ಯಾರಾದರೂ ಪ್ರಗತಿಶೀಲ ರಾಜಕಾರಣದ ಭಾಗವಾದರೆ ಅವರು ಮಾಡಿದ್ದೆಲ್ಲ ನೈತಿಕವೂ ಹಾಗೂ ಅವರು ಹೇಳಿದ್ದಲ್ಲ ವೈಚಾರಿಕವೂ ಆಗಿಬಿಡುತ್ತದೆ. ಈ ರಾಜಕಾರಣದ ಇನ್ನೊಂದು ಪ್ರಮುಖ ಭಾಗವೆಂದರೆ ತಮ್ಮ ವಿರೋಧಿಗಳನ್ನು ಹಣಿಯುವುದು. ಅದಕ್ಕಾಗಿ ತಮ್ಮ ವಿರೋಧಿಗಳನ್ನು ನೈತಿಕ ಹಾಗೂ ವೈಯಕ್ತಿಕ ನಿಂದನೆಗೆ ಒಳಪಡಿಸುವಂತೆ ಈ ರಾಜಕಾರಣ ಪ್ರೇರೇಪಿಸುತ್ತದೆ.  

ತಮ್ಮ ವಿರೋಧಿಗಳನ್ನು ಹಣಿಯಲು ಪ್ರಗತಿಪರರು ನಿರ್ದಿಷ್ಟ ಮಾರ್ಗವನ್ನು ಬಳಸುತ್ತಾರೆ. ತಮ್ಮ ವಿರೋಧಿಗಳನ್ನು ಈಗಾಗಲೇ ಅವರುಗಳೇ ಘೋಷಿಸಿರುವ ಅನೈತಿಕ ಅಥವಾ ದುಷ್ಟರ ಕೂಟದ ಭಾಗವನ್ನಾಗಿ ಮಾಡಿಬಿಡುವುದು ಸಾಮಾನ್ಯ ಕ್ರಮ. ಉದಾಹರಣೆಗೆ ತಮ್ಮ ವಿರೋಧಿಗಳನ್ನು ಬ್ರಾಹ್ಮಣ್ಯಪರ, ಹಿಂದುತ್ವಪರ ಇತ್ಯಾದಿಗಳಾಗಿ ಒಮ್ಮೆ ಪರಿವರ್ತಿಸಿದರೆ, ನಿರ್ದಿಷ್ಟವಾಗಿ ಈ ಗುಂಪುಗಳನ್ನು ಅನೈತಿಕ, ಫ್ಯಾಸಿಸ್ಟ್, ಪ್ರತಿಗಾಮಿ ಎಂದೆಲ್ಲಾ ಬಣ್ಣಿಸಲು ಬೇಕಾದಷ್ಟು ವಾದ ಸರಣಿಗಳಿವೆ. ಹಾಗಾಗಿ ತಮ್ಮ ವಿರೋಧಿಗಳನ್ನು ಈ ರೀತಿಯ ಯಾವುದಾದರೂ ಒಂದು ಗುಂಪಿನ ಭಾಗವನ್ನಾಗಿಸುವುದು ಮತ್ತು ಅವುಗಳೆಲ್ಲವನ್ನೂ ಆರೋಪಿಸಿ ವಿರೋಧಿಗಳನ್ನು ಹಣಿಯುವುದು ಒಂದು ಮುಖ್ಯ ಕಾರ್ಯತಂತ್ರ. 

ಯಾವ ಸಂಗತಿಯನ್ನು ತಮ್ಮ ವಿರೋಧಿಗಳ ಮೇಲೆ ಆರೋಪಿಸಿದ್ದಾರೋ, ಆ ತೆರನಾದ ಆರೋಪಗಳೇನಾದರೂ ತಮ್ಮ ಸಮರ್ಥಕರ ಮೇಲೆ ಆರೋಪಿಸಲ್ಪಟ್ಟರೆ ಆಗ ಪ್ರಗತಿಶೀಲರು ಬೌದ್ಧಿಕತೆಯ ಮೊರೆ ಹೋಗುತ್ತಾರೆ. ಈ ಹಿಂದೆ ಪ್ರಗತಿಪರರಿಗೆ ರೋಹಿತ್ ಚಕ್ರತೀರ್ಥರನ್ನು ಹಣಿಯಬೇಕಿತ್ತು. ಆಗ ಅಪಮಾನದ ಹೊಸ ವ್ಯಾಖ್ಯಾನಗಳೇ ನಡೆದವು. ಈಗ ಪ್ರಗತಿಪರ ಚಿಂತಕರ ಕೂಟದ ಹಿರಿಯ ನಾಯಕರು ಅದೇ ಸಮಸ್ಯೆಯಲ್ಲಿದ್ದಾರೆ. ಹಾಗಾದರೆ ಏನು ಮಾಡಬೇಕು? ಸಹಜವಾಗಿಯೇ ಪ್ರಗತಿಶೀಲರು ಮಾಡಿದ್ದೆಲ್ಲವೂ ಸರಿ ಎನ್ನುವುದು ಅವರ ವಾದ. ಅದನ್ನು ಅವರು ತಮ್ಮ ಚರ್ಚೆಯಲ್ಲಿ ತೋರಿದ್ದಾರೆ.  ಅಷ್ಟೇ ಅಲ್ಲ, ತಮ್ಮ ವಿರೋಧಿ ಚಕ್ರತೀರ್ಥರನ್ನು ನಿರಪರಾಧಿ ಎಂದು ಹೇಳಲು ಹೇಗೆ ಸಾಧ್ಯ? 

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪ್ರಗತಿಶೀಲರಿಗೆ ತಮ್ಮ ರಾಜಕಾರಣದ ಒಳಗಿರುವವರ ಹಾಗೂ ಹೊರಗಿರುವವರ ನಡುವೆ ವ್ಯತ್ಯಾಸ ಮಾಡುವುದೇ ಅತಿಮುಖ್ಯ ಸಂಗತಿಯಂತೆ ತೋರುತ್ತದೆ. ಇಲ್ಲಿ ಪ್ರಗತಿಶೀಲರ ವಿರುದ್ಧವಿರುವವರ ಜೀವನವೇ ಅನೈತಿಕ ಮತ್ತು ದುರ್ಮಾರ್ಗವಾಗಿರುತ್ತದೆ. ಹಾಗಾಗಿಯೇ ಪ್ರಗತಿಪರರಿಗೆ ಹಿಂದೂಪರ ಚಿಂತಕರು ದುರ್ಮಾರ್ಗಿಗಳು ಮತ್ತು ಅನೈತಿಕರು ಆಗಿರುತ್ತಾರೆ. ಅಂದರೆ ಪ್ರಗತಿಪರರಿಗೆ ಹಿಂದೂಪರ ಚಿಂತಕರು ಏನು ಮಾಡಿದರೂ, ಏನೇ ಮಾಡದಿದ್ದರೂ ದುಷ್ಟರೇ. ಅಷ್ಟೇ ಅಲ್ಲ ಪ್ರಗತಿಪರರು ಏನೇ ಮಾಡಿದರೂ ಸಮರ್ಥನೀಯವೇ ಆಗಿಬಿಡುತ್ತದೆ. ಪ್ರಗತಿಪರರ ಈ ತರ್ಕ ಹೊಸತೇನಲ್ಲ. ಮೀ ಟೂ ಚಳುವಳಿ, ಕಲ್ಬುರ್ಗಿ ಹತ್ಯೆ ಇತ್ಯಾದಿ ಪರಿಸ್ಥಿತಿಗಳಲ್ಲಿ ಇವರ ನಡವಳಿಕೆ, ಮೇಲಿನ ವಿನ್ಯಾಸವನ್ನೇ ಹೋಲುತ್ತದೆ. 

ಒಟ್ಟಾರೆಯಾಗಿ ಹೇಳಬೇಕೆಂದರೆ ಪ್ರಗತಿಶೀಲರ ಈ ಚರ್ಚೆಗಳಲ್ಲಿ ಯಾವುದೇ ಬೌದ್ಧಿಕ ಪ್ರಶ್ನೆ ಇದ್ದಂತೆ ಕಾಣುವುದಿಲ್ಲ. ಇದೊಂದು ರಾಜಕಾರಣ. ಸರಳವಾಗಿ ಹೇಳಬೇಕೆಂದರೆ ಪ್ರಗತಿಶೀಲರು ಹೇಳಿದ್ದು ಮಾತ್ರ ಬೌದ್ಧಿಕತೆ, ಅವರು ಹೇಳಿದ್ದು ಮಾತ್ರ ಶ್ರೇಷ್ಠ. ತಮ್ಮ ವಿರೋಧಿಗಳು ಏನನ್ನೇ ಹೇಳಿರಲಿ ಅವೆಲ್ಲವು ಅನೈತಿಕ, ಅವೈಚಾರಿಕವೆನ್ನುವ ರಾಜಕಾರಣವು ಇಲ್ಲಿ ಕಂಡು ಬರುತ್ತದೆ. ಅಂದರೆ ಒಂದೊಮ್ಮೆ ಚಿಂತಕನೋರ್ವ ಪ್ರಗತಿಪರರಿಗೆ ಪೂರಕವಾಗಿದ್ದರೆ ಅವನು ಹೇಳಿದ್ದೆಲ್ಲವೂ ನೈತಿಕ-ವೈಚಾರಿಕ. ಚಿಂತಕನೋರ್ವ ಪ್ರಗತಿಪರರಿಗೆ ಪೂರಕನಾಗದಿದ್ದರೆ, ಅವನೇ ಅನೈತಿಕ ಮತ್ತು ಪ್ರತಿಗಾಮಿ. ಈ ತರ್ಕದಿಂದ ಪ್ರಗತಿಪರರು ಮಾಡಿದ್ದೆಲ್ಲಾ ಸರಿಯಾದದ್ದೇ. ಅವರ ವಿರೋಧಿಗಳು ಏನನ್ನೇ ಮಾಡಿದರೂ ಅದು ಅನೈತಿಕವೇ. 

ಹಾಗಾಗಿ ಇಂದು ನಾವು ಕೇಳಿಕೊಳ್ಳುವ ಪ್ರಮುಖ ಪ್ರಶ್ನೆಯೆಂದರೆ ಈ ವೈಚಾರಿಕತೆಯ ಸೋಗಿನಲ್ಲಿ ನಡೆಯುವ ಚರ್ಚೆಗಳಲ್ಲಿ ವಿಚಾರ, ಸತ್ಯ, ಜ್ಞಾನ ಇತ್ಯಾದಿಗಳಿಗೆ ಜಾಗವಿದೆಯೇ ಎಂಬುದಾಗಿದೆ. ಈ ಕುರಿತು ನಾವು ಇಂದು ಚಿಂತಿಸದಿದ್ದಲ್ಲಿ ನಮ್ಮ ಮುಂದಿನ ತಲೆಮಾರುಗಳಿಗೆ ಒಂದು ಉತ್ತಮ ಸಮಾಜವನ್ನು ದೊರಕಿಸಿಕೊಡುವಲ್ಲಿ ನಾವು ವಿಫಲರಾಗುತ್ತೇವೆ ಎಂಬುದನ್ನು ನಾವೆಲ್ಲರೂ ಗಮನಿಸಬೇಕಾಗಿದೆ. 

Authors

ರಾಮಕೃಷ್ಣ ವಿ. ಭಟ್ಟ

ಸಂಶೋಧಕರು, ಚಾಣಕ್ಯ ವಿಶ್ವವಿದ್ಯಾಲಯ, ಬೆಂಗಳೂರು

You may also like

2 comments

Ganesh k October 22, 2022 - 8:14 pm

We need more this type of writings…. Thank you more great information

Reply
Shankarappa October 23, 2022 - 8:36 pm

ಈ ಲೇಖನ ತಾರ್ಕಿಕವಾಗಿ ಇದೆ ಮತ್ತು ಉತ್ತಮ ಲೇಖನ. ಆದರೆ ಪ್ರಗತಿಪರ ವಾದದಲ್ಲಿರುವ ಸಮಸ್ಯೆಗಳನ್ನು ಗುರುತಿಸಿರುವಂತೆಯೇ ರೋಹಿತ್ ಚಕ್ರತೀರ್ಥ ಹಾಗೂ ಅವರ ಪರವಾದ ವಾದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ತಾರ್ಕಿಕವಾಗಿಯೇ ವಿಶ್ಲೇಷಣೆ ಮಾಡುವ ಅವಶ್ಯಕತೆ ಇದೆ ಮತ್ತು “ಪ್ರಗತಿಪರ” ಹಾಗೂ “ಸಾಂಪ್ರದಾಯವಾದಿ” ಈ ಎರಡೂ ಗುಂಪುಗಳು ನಿರ್ದಿಷ್ಟ ರೀತಿಯಲ್ಲಿ ವಿಶ್ಲೇಷಣೆ ಮಾಡುವುದಕ್ಕೆ ಇರುವ ಸಮಂಜಸ ಕಾರಣಗಳನ್ನು ವಿವರಿಸುವ ಜರೂರು ಇದೆ

Reply

Leave a Comment

Message Us on WhatsApp