ಅಂದರೆ ಸಂಸ್ಕೃತ ಪರಂಪರೆಗಳು ವಸಾಹತುಶಾಹಿ ಅಥವಾ ಯುರೋಪಿನ ಪ್ರಭಾವಕ್ಕೆ ಸಿಲುಕಿಲ್ಲವೆಂಬ ಪ್ರಬಲವಾದ ನಂಬಿಕೆಯೊಂದು ಇಲ್ಲಿ ಪ್ರಶ್ನಾರ್ಹವಾಗಿ ಬಿಡುತ್ತದೆ. ಅಲ್ಲದೇ ಯುರೋಪಿನ ನಿರೂಪಣೆಗಳಿಗೂ ನಮ್ಮ ಅನುಭವಗಳಿಗೂ ಸಂಬಂಧವಿಲ್ಲ ಎಂಬುದನ್ನು ತಿಳಿಯದೇ, ಯುರೋಪಿನ ನಿರೂಪಣೆಯ ಚೌಕಟ್ಟೇ ಸರಿಯಾದದ್ದು ಎಂದು ಭಾವಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ವಿವರಿಸಹೊರಟಾಗ ಈ ಪುಸ್ತಕದಲ್ಲಿ ಇರುವಂತೆ ಅನೇಕ ಗೊಂದಲಗಳು ಹುಟ್ಟುತ್ತವೆ. ಈ ಪುಸ್ತಕದಲ್ಲಿ ಯುರೋಪಿಯನ್ನರ ವಿವರಣೆಗಳನ್ನು ನಮ್ಮ ಬಗೆಗಿನ ಯಥಾರ್ಥವಾದ ವಿವರಣೆಗಳು ಎಂದು ಭಾವಿಸಿಕೊಳ್ಳಲಾಗಿದೆ.
ಪೀಠಿಕೆ
ಕಳೆದು ಸುಮಾರು ಮುನ್ನೂರು ವರ್ಷಗಳಿಂದ ಹಿಂದೂ ಸಮಾಜ[1]ದ ಬಗೆಗಿನ ಚರ್ಚೆಯಲ್ಲಿ ’ಜಾತಿವ್ಯವಸ್ಥೆ’ ಎಂಬುದು ಕೇಂದ್ರಸ್ಥಾನವನ್ನು ಅಲಂಕರಿಸಿದೆ. ಇಲ್ಲಿರುವ ಜಾತಿಗಳು ಒಂದು ಶ್ರೇಣೀಕೃತ ರಚನೆಯುಳ್ಳ ವ್ಯವಸ್ಥೆಯ ಭಾಗವಾಗಿವೆ. ಜಾತಿವ್ಯವಸ್ಥೆಯನ್ನು ಅರಿತುಕೊಳ್ಳಲು ಬೇಕಾದ ಚೌಕಟ್ಟು ಧರ್ಮಶಾಸ್ತ್ರಗಳಲ್ಲಿನ ಚತುರ್ವರ್ಣಗಳ ಚರ್ಚೆಯಲ್ಲಿದೆ ಎನ್ನುವುದು ಸಿದ್ಧ ಮಾದರಿಯ ನಿರೂಪಣೆಯಾಗಿದೆ. ಅಲ್ಲದೇ ಬ್ರಾಹ್ಮಣರಿಂದ ಧರ್ಮಶಾಸ್ತ್ರಗಳ ಮೂಲಕ ರೂಪಿತವಾದ ಈ ವ್ಯವಸ್ಥೆ ಶತಮಾನಗಳು ಕಳೆದರೂ ಬದಲಾಗಿಲ್ಲ, ಹಾಗು ’ಜಾತಿಪದ್ಧತಿ’ಯು ’ಹಿಂದೂ ರಿಲಿಜನ್’ನೊಂದಿಗೆ ಬಿಡಿಸಲಾಗದಂತೆ ಹೊಸೆದುಕೊಂಡಿದ್ದು, ’ಹಿಂದೂ ರಿಲಿಜನ್’ನ ಎಲ್ಲಾ ಸಮಸ್ಯೆಗಳ ಮೂಲ ಈ ’ಜಾತಿಪದ್ಧತಿ’ಯಲ್ಲಿದೆ. ಆ ಕಾರಣಕ್ಕಾಗಿಯೇ ’ಹಿಂದೂ ರಿಲಿಜನ್’ನಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಹಲವರು ವಾದಿಸುತ್ತಾರೆ. ಇನ್ನು ಕೆಲವರು ಮೂಲಭೂತವಾಗಿ ’ವರ್ಣವ್ಯವಸ್ಥೆ’ಯು ಶ್ರೇಷ್ಠವಾಗಿದ್ದರೂ ಕಾಲಾಂತರದಲ್ಲಿ ಭ್ರಷ್ಟಗೊಂಡಿದ್ದು, ಮೂಲವ್ಯವಸ್ಥೆಗೆ ಹಿಂತಿರುಗುವುದು ವ್ಯವಸ್ಥೆಯನ್ನು ಸರಿಪಡಿಸುವ ಕ್ರಮವಾಗಿದೆ ಎನ್ನುತ್ತಾರೆ. ಅಂದರೆ ಜಾತಿವ್ಯವಸ್ಥೆ ಎಂಬುದು ಭ್ರಷ್ಟಗೊಂಡ ವರ್ಣವ್ಯವಸ್ಥೆಯಾಗಿದ್ದು, ಮೂಲದಲ್ಲಿನ ವರ್ಣವ್ಯವಸ್ಥೆಯು ಸರಿಯಾದದ್ದು ಎಂಬುದು ಅವರ ವಾದವಾಗಿದೆ.
ಹೀಗೆ ಭಾರತದಲ್ಲಿನ ಜಾತಿಯ ಬಗೆಗಿನ ಚರ್ಚೆಗಳಲ್ಲಿ ಧರ್ಮಶಾಸ್ತ್ರಗಳಲ್ಲಿನ ವರ್ಣವಿಚಾರವು ಸಣ್ಣಪುಟ್ಟ ವ್ಯತ್ಯಾಸಗಳೊಂದಿಗೆ ಇಂಡಾಲಜಿ, ಸಮಾಜಶಾಸ್ತ್ರ ಇತ್ಯಾದಿ ವಿಭಿನ್ನ ಸಮಾಜ ವಿಜ್ಞಾನ ಹಾಗೂ ಮಾನವಿಕ ಅಧ್ಯಯನಗಳಲ್ಲಿ ಕಂಡುಬರುತ್ತದೆ. ಚಾತುರ್ವರ್ಣ್ಯ ಭಾರತ ಸಮೀಕ್ಷಾ ಎಂಬ ಈ ಪುಸ್ತಕವೂ ಈ ಚರ್ಚೆಯ ಹಿನ್ನೆಲೆಯಿಂದಲೇ ಬಂದದ್ದಾಗಿದೆ. ಹಾಗಾಗಿ ಮೇಲೆ ಹೇಳಿದ ಸಿದ್ಧ ಮಾದರಿಯ ನಿರೂಪಣೆಯ ಸ್ವರೂಪವನ್ನು ಸ್ಪಷ್ಟವಾಗಿ ಗ್ರಹಿಸಿದಲ್ಲಿ ಈ ಪುಸ್ತಕವು ಯಾವ ರೀತಿಯ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಪ್ರಯತ್ನಿಸಿದೆ ಎನ್ನುವುದನ್ನು ಅರಿತುಕೊಳ್ಳಲು ಸುಲಭವಾಗುತ್ತದೆ. ಆದ್ದರಿಂದ ಆರಂಭದಲ್ಲಿ ’ಜಾತಿವ್ಯವಸ್ಥೆ’ಯ ಸಿದ್ಧ ಮಾದರಿಯ ನಿರೂಪಣೆಯ ಸ್ವರೂಪವನ್ನು ಸಂಕ್ಷಿಪ್ತವಾಗಿ ವಿವರಿಸಿಕೊಳ್ಳಲಾಗುತ್ತದೆ. ಪಿ.ವಿ. ಕಾಣೆಯವರು ಬರೆದಿರುವ ಹಿಸ್ಟರಿ ಆಫ್ ಧರ್ಮಶಾಸ್ತ್ರ, ಪ್ಯಾಟ್ರಿಕ್ ಒಲಿವಲ್ ಸಂಪಾದಿಸಿರುವ ಎ ನ್ಯೂ ಹಿಸ್ಟರಿ ಆಫ್ ಧರ್ಮಶಾಸ್ತ್ರ ಮುಂತಾದ ಆಕರಗಳು ನಮಗೆ ಈ ಸಿದ್ಧ ಮಾದರಿಯ ನಿರೂಪಣೆಯನ್ನು ಗ್ರಹಿಸಲು ಅತ್ಯಂತ ಉಪಯುಕ್ತವಾಗಿವೆ.
ಸಿದ್ಧ ಮಾದರಿಯ ನಿರೂಪಣೆ
ಸಿದ್ಧ ಮಾದರಿ[2]ಯ (ಮೈಕೆಲ್ ಅಕ್ತರರ ಲೇಖನ[3]) ಪ್ರಕಾರ ಪ್ರಚಲಿತದಲ್ಲಿರುವ ನಿರೂಪಣೆಗಳಂತೆ ವರ್ಣಗಳು ಸಾಮಾಜಿಕ ವರ್ಗಗಳಾಗಿವೆ (Social class)[4]. ಜಾತಿಗಳು ಚಾತುರ್ವರ್ಣ್ಯ ವ್ಯವಸ್ಥೆಯ ಭ್ರಷ್ಟರೂಪವಾಗಿದ್ದು, ಜಾತಿಗಳನ್ನು ಗ್ರಹಿಸಲು ಚಾತುರ್ವರ್ಣ್ಯದ ಚೌಕಟ್ಟು ಅತ್ಯಂತ ಪ್ರಮುಖವಾಗಿದೆ. ವರ್ಣವ್ಯವಸ್ಥೆಯು ಭೇದಭಾವವನ್ನು ಉಂಟುಮಾಡುವ, ಜಾತಿಗಳನ್ನು ಮೇಲುಕೀಳೆಂದು ಪ್ರತ್ಯೇಕಿಸುವ ಅಥವಾ ಶ್ರೇಣೀಕರಿಸುವ ಕ್ರಮವಾಗಿದ್ದು, ಈ ವ್ಯವಸ್ಥೆಯಿಂದ ಎರಡು ರೀತಿಯಲ್ಲಿ ಶ್ರೇಣೀಕರಣವು ಉಂಟಾಗುತ್ತದೆ. ಮೊದಲನೆಯದಾಗಿ ವರ್ಣಗಳು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಈ ರೀತಿಯಾಗಿ ನಾಲ್ಕು ಆಗಿದ್ದರೂ, ಈ ನಾಲ್ಕು ವರ್ಣಗಳು ಸಮಾನವಾದ ಸ್ತರವನ್ನು ಹೊಂದಿಲ್ಲ. ಮೊದಲ ಮೂರು ವರ್ಣಗಳನ್ನು ದ್ವಿಜರು ಎಂದು ಕರೆಯಲಾಗಿದ್ದು, ಶೂದ್ರವರ್ಣವನ್ನು ಏಕಜಾತಿ ಎಂದು ವ್ಯವಹರಿಸಲಾಗಿದೆ. ಹೀಗೆ ಮೊದಲ ಮೂರು ವರ್ಗದಿಂದ ಕೊನೆಯ ವರ್ಗವನ್ನು ಬೇರೆಯಾಗಿಸಿದ್ದು, ಶೂದ್ರವರ್ಗವನ್ನು ವೈದಿಕಕರ್ಮಗಳು ಮತ್ತು ಅದಕ್ಕೆ ಪೂರಕವಾದ ವೇದಾಧ್ಯಯನ ಮುಂತಾದ ಅನೇಕ ವಿಷಯಗಳಿಂದ ವಂಚಿತರನ್ನಾಗಿ ಮಾಡಲಾಗಿತ್ತು. ದ್ವಿಜರಲ್ಲಿಯೂ ಬ್ರಾಹ್ಮಣನು ಶ್ರೇಷ್ಠನಾಗಿದ್ದು, ಉಳಿದ ವರ್ಣಗಳು ಬ್ರಾಹ್ಮಣವರ್ಣಕ್ಕಿಂತ ಕೆಳಗಿನ ಸ್ತರದಲ್ಲಿವೆ.
ಈ ಶ್ರೇಣೀಕರಣ ವ್ಯವಸ್ಥೆಯು ಕೇವಲ ನಾಲ್ಕು ವರ್ಣಗಳಿಗೆ ಮಾತ್ರ ಸಂಬಂಧಿಸಿದ್ದು ಆಗಿರದೇ, ವರ್ಣಗಳ ಸಂಬಂಧದಿಂದ ಹುಟ್ಟುವ ಗುಂಪುಗಳಾದ ಅಂತರಜರಲ್ಲಿ ಅಥವಾ ವರ್ಣಸಂಕರರಲ್ಲಿ ಕೂಡ ಮುಂದುವರೆಯುತ್ತದೆ. ಅಂದರೆ ವಿಭಿನ್ನ ವರ್ಣಗಳಿಗೆ ಸೇರಿದ ಸ್ತ್ರೀಪುರುಷರ ನಡುವಣ ಮೈಥುನದಿಂದ ಹುಟ್ಟುವ ವಿಭಿನ್ನ ಜಾತಿಗಳನ್ನೂ ಶ್ರೇಣೀಕರಿಸಲಾಗಿದೆ. ಈ ಮೈಥುನ ಸಂಬಂಧವು ಎರಡು ರೀತಿಯದ್ದಾಗಿದ್ದು ಒಂದು ಅನುಲೋಮ ಸಂಬಂಧ ಮತ್ತೊಂದು ಪ್ರತಿಲೋಮ ಸಂಬಂಧ. ಅನುಲೋಮ ಸಂಬಂಧವೆಂದರೆ ಬ್ರಾಹ್ಮಣಾದಿ ಮೇಲ್ವರ್ಗಗಳ ಪುರುಷರು ಕೆಳವರ್ಗದ ಸ್ತ್ರೀಯರನ್ನು ಕೂಡುವುದು. ಉದಾಹರಣೆಗೆ ಬ್ರಾಹ್ಮಣ ಪುರುಷನು, ಕ್ಷತ್ರಿಯ ಸ್ತ್ರೀಯನ್ನು ಅಥವಾ ವೈಶ್ಯ ಸ್ತ್ರೀಯನ್ನು ಕೂಡಿದಲ್ಲಿ ಅದನ್ನು ಅನುಲೋಮ ಸಂಬಂಧವೆಂದು ಹೇಳಲಾಗುತ್ತದೆ. ಪ್ರತಿಲೋಮ ಸಂಬಂಧವೆಂದರೆ ಕೆಳವರ್ಗಗಳ ಪುರುಷರು, ಮೇಲ್ವರ್ಗದ ಸ್ತ್ರೀಯರನ್ನು ಕೂಡುವುದು. ಉದಾಹರಣೆಗೆ ಕ್ಷತ್ರಿಯ ಪುರುಷನು, ಬ್ರಾಹ್ಮಣ ಸ್ತ್ರೀಯನ್ನು ಕೂಡುವುದು ಅಥವಾ ವೈಶ್ಯ ಪುರುಷನು, ಕ್ಷತ್ರಿಯ ಸ್ತ್ರೀಯನ್ನು ಕೂಡುವುದು. ಈ ಎರಡು ರೀತಿಯ ಸಂಬಂಧಗಳಲ್ಲಿ ಅನುಲೋಮ ಸಂಬಂಧವನ್ನು ಧರ್ಮಶಾಸ್ತ್ರಗಳು ಒಪ್ಪಿಕೊಂಡಿದ್ದು ಪ್ರತಿಲೋಮ ಸಂಬಂಧವನ್ನು ಪುರಸ್ಕರಿಸಿಲ್ಲ. ಅಲ್ಲದೇ ಅನುಲೋಮ ಸಂಬಂಧದಲ್ಲಿಯೂ ಮೇಲಿನ ವರ್ಣಗಳ ಸ್ತ್ರೀಪುರುಷರ ಮೈಥುನದಿಂದ ಹುಟ್ಟುವ ಸಂತತಿಯು, ಕೆಳವರ್ಣಗಳ ಮೈಥುನದಿಂದ ಹುಟ್ಟುವ ಸಂತತಿಗಿಂತ ಶ್ರೇಷ್ಠವಾಗಿದೆ. ಉದಾಹರಣೆಗೆ ಬ್ರಾಹ್ಮಣ ಪುರುಷ ಮತ್ತು ಕ್ಷತ್ರಿಯ ಸ್ತ್ರೀಯೊಂದಿಗಿನ ಸಂಬಂಧದಿಂದ ಹುಟ್ಟುವವನು, ಬ್ರಾಹ್ಮಣ ಪುರುಷ ಮತ್ತು ವೈಶ್ಯ ಸ್ತ್ರೀಯೊಂದಿಗಿನ ಸಂಬಂಧದಿಂದ ಹುಟ್ಟುವವನಿಗಿಂತ ಶ್ರೇಷ್ಠನಾಗಿದ್ದಾನೆ. ಹೀಗೆ ಅನುಲೋಮ ಸಂಬಂಧವನ್ನು ಧರ್ಮಶಾಸ್ತ್ರಗಳು ಪುರಸ್ಕರಿಸಿರುವುದರಿಂದ ಎರಡನೆಯ ರೀತಿಯ ಶ್ರೇಣೀಕರಣವೂ ಉಂಟಾಗುತ್ತದೆ. ಅಂದರೆ ಮೇಲ್ವರ್ಗದ ಪುರುಷರು ಕೆಳವರ್ಗದ ಸ್ತ್ರೀಯರೊಂದಿಗೆ ಮೈಥುನ ಹೊಂದುವುದನ್ನು ಮಾತ್ರ ಒಪ್ಪಿಕೊಳ್ಳುವ ಮೂಲಕ ಪುರುಷರನ್ನು ಸ್ತ್ರೀಯರಿಗಿಂತ ಶ್ರೇಷ್ಠರೆಂದು ನೋಡಲಾಗಿದೆ.
ಹೀಗೆ ವರ್ಣಗಳಲ್ಲಿ ಮತ್ತು ಅವುಗಳಿಂದ ಹುಟ್ಟುವ ವಿಭಿನ್ನ ಗುಂಪುಗಳಲ್ಲಿ ಒಂದಕ್ಕಿಂತ ಇನ್ನೊಂದು ಶ್ರೇಷ್ಠ ಮತ್ತು ಕನಿಷ್ಠ ಎಂಬ ಶ್ರೇಣೀಕರಣವಿದೆ. ಅಲ್ಲದೇ ಒಂದೇ ವರ್ಣದ ಸ್ತ್ರೀಪುರುಷರಲ್ಲಿಯೂ ಸ್ತ್ರೀಯರಿಗಿಂತ ಪುರುಷರು ಶ್ರೇಷ್ಠ ಎಂಬ ಶ್ರೇಣೀಕರಣವಿದೆ. ಅಷ್ಟೇ ಅಲ್ಲದೇ ನಿಷಿದ್ಧವಾದ ಪ್ರತಿಲೋಮ ಸಂಬಂಧದ ಮೂಲಕ ಶೂದ್ರ ಪುರುಷನಿಂದ ಬ್ರಾಹ್ಮಣ ಸ್ತ್ರೀಯಲ್ಲಿ ಹುಟ್ಟುವ ಸಂತತಿಯನ್ನು ಚಾಂಡಾಲ ಎಂದು ಕರೆಯಲಾಗಿದ್ದು, ಶ್ರೇಣೀಕೃತ ಹಿಂದೂ ಸಮಾಜದ ಅತ್ಯಂತ ಕೊನೆಯ ನಿಕೃಷ್ಟ ಸ್ಥಾನವನ್ನು ಚಾಂಡಾಲನಿಗೆ ನೀಡಿ ಅಸ್ಪೃಶ್ಯನನ್ನಾಗಿ ಪರಿಗಣಿಸಲಾಗಿದೆ. ಅಸ್ಪಶ್ಯತೆ ಇಲ್ಲಿರುವ ಸಮಸ್ಯೆ ಅಲ್ಲ, ಆದರೆ ಅಸ್ಪಶ್ಯತೆಗೂ ಹುಟ್ಟಿಗೂ ಸಂಬಂಧವನ್ನು ಕಲ್ಪಿಸಿ, ಅದನ್ನು ಬದಲಾಯಿಸಲು ಸಾಧ್ಯವಿಲ್ಲದ್ದು ಎಂದು ನಿರೂಪಿಸಿರುವುದು ಇಲ್ಲಿರುವ ಸಮಸ್ಯೆ. ಅಲ್ಲದೇ ಚಾಂಡಾಲನನ್ನು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸೀಮೆಯಾಗಿ ನೋಡಲಾಗಿದೆ. ಹೀಗೆ ಧರ್ಮಶಾಸ್ತ್ರಗಳನ್ನು ಅವಲೋಕಿಸಿದಲ್ಲಿ, ಬ್ರಾಹ್ಮಣನು ಶ್ರೇಣೀಕೃತ ವ್ಯವಸ್ಥೆಯ ತುತ್ತತುದಿಯಲ್ಲಿ ಇದ್ದು, ಚಾಂಡಾಲನು ಈ ವ್ಯವಸ್ಥೆಯ ಅಂತಿಮ ಸೀಮೆಯಾಗಿದ್ದನು. ಬ್ರಾಹ್ಮಣ ಮತ್ತು ಚಾಂಡಾಲರ ನಡುವೆ ಅನೇಕ ಶ್ರೇಣೀಕೃತ ವರ್ಗಗಳು ಮತ್ತು ಜಾತಿಗಳು ಇವೆ. ಯಾರು ಈ ಶ್ರೇಣೀಕೃತ ವ್ಯವಸ್ಥೆಯ ಹೊರಗಿನವರೋ ಅವರನ್ನು ಮ್ಲೇಚ್ಛರು ಎಂದು ಕರೆಯಲಾಗುತ್ತಿತ್ತು. ಬ್ರಾಹ್ಮಣಾದಿ ಪ್ರತಿಯೊಂದು ವರ್ಣವೂ ಅನೇಕ ಜಾತಿಗಳನ್ನು ಹೊಂದಿದ್ದು, ಇವುಗಳನ್ನೂ ಕೂಡ ಹೀಗೆಯೇ ಶ್ರೇಣೀಕರಿಸಬಹುದಾಗಿದೆ. ಹೀಗೆ ಧರ್ಮಶಾಸ್ತ್ರಗಳ ಆಧಾರದಲ್ಲಿ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಎರಡು ಸ್ತರದಲ್ಲಿ ವಿಭಾಗಿಸಬಹುದು. ಒಂದು ವರ್ಣಗಳು ಮತ್ತು ಎರಡನೆಯದು ಅಂತರಜರು ಅಥವಾ ವರ್ಣಸಂಕರರು.
ಈ ವ್ಯವಸ್ಥೆಯು ಬ್ರಾಹ್ಮಣವರ್ಗದ ಹಿತಾಸಕ್ತಿಯ ಉದ್ದೇಶದಿಂದ ಬ್ರಾಹ್ಮಣರಿಂದ ಸ್ಮೃತಿಗಳಲ್ಲಿ ನಿರೂಪಿತವಾಗಿದೆ. ಹಿಂದೂ ಆಳ್ವಿಕೆಯು ವೈದಿಕ ಯಜ್ಞಗಳನ್ನು ಕೇಂದ್ರವಾಗಿರಿಸಿಕೊಂಡಿತ್ತು ಮತ್ತು ವೈದಿಕಯಜ್ಞಗಳನ್ನು ಮಾಡಿಸುವ ಅಧಿಕಾರವನ್ನು ಬ್ರಾಹ್ಮಣವರ್ಗ ಮಾತ್ರವೇ ಹೊಂದಿತ್ತು. ಅಲ್ಲದೇ ವರ್ಣವ್ಯವಸ್ಥೆ ಎಂಬುದು ಹಿಂದೂ ಆಳ್ವಿಕೆಯ ಅವಿಭಾಜ್ಯ ಅಂಗವಾಗಿತ್ತು. ಹಾಗಾಗಿ ಒಬ್ಬ ರಾಜನು ಹೊಸದಾಗಿ ಭೂಮಿಯನ್ನು ಆಕ್ರಮಿಸಿಕೊಂಡಲ್ಲಿ, ಅಲ್ಲಿ ವರ್ಣವ್ಯವಸ್ಥೆಯನ್ನು ಜಾರಿಗೊಳಿಸುವುದು ಆತನ ಮೊದಲ ಆದ್ಯತೆಯಾಗಿರುತ್ತಿತ್ತು. ಹೀಗೆ ವರ್ಣವ್ಯವಸ್ಥೆ ಎಂಬುದು ಬ್ರಾಹ್ಮಣ ವರ್ಗ ಮತ್ತು ಕ್ಷತ್ರಿಯವರ್ಗಗಳ ನಡುವೆ ವಿಶೇಷ ಸಂಬಂಧವನ್ನು ಉಂಟುಮಾಡುತ್ತಿತ್ತು ಮತ್ತು ಈ ಕಾರಣದಿಂದಾಗಿ ಸಹಜವಾಗಿಯೇ ಅನೇಕ ಸವಲತ್ತುಗಳನ್ನು ಈ ಎರಡು ವರ್ಗಗಳು ಪಡೆಯುತ್ತಿದ್ದವು.
ಕೆಳವರ್ಣಗಳಿಗೆ ಮತ್ತು ಜಾತಿಗಳಿಗೆ ಮೇಲಿನ ಸ್ಥಾನಗಳನ್ನು ಹೊಂದುವ ಅವಕಾಶವನ್ನು ಧರ್ಮಶಾಸ್ತ್ರಗಳು ನಿರಾಕರಿಸಿದ್ದವು ಮಾತ್ರವಲ್ಲ, ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಜನರನ್ನು ವ್ಯವಸ್ಥಿತವಾಗಿ ಅನೇಕ ಅವಕಾಶಗಳಿಂದ ವಂಚಿಸಲಾಗಿತ್ತು. ಮನುವು ವರ್ಣವ್ಯವಸ್ಥೆಯು ಭಗವಂತನಿಂದ ರೂಪಿತವಾಗಿದ್ದು ಎಂದು ಹೇಳುತ್ತಾ, ಇದು ಪ್ರಾಣಿಗಳ ಸೃಷ್ಟಿಯಂತೆ ಸಹಜವಾದದ್ದು ಎಂದು ನಿರೂಪಿಸುತ್ತಾನೆ. ಹಾಗಾಗಿ ವರ್ಣವ್ಯವಸ್ಥೆ ಎಂಬುದು ಯಾವುದೇ ಯುಕ್ತಿಯನ್ನು ಅಥವಾ ಸಾಮಾಜಿಕ ಒಪ್ಪಿಗೆಯನ್ನು ಪಡೆದು ಸೃಷ್ಟಿಯಾದ ವ್ಯವಸ್ಥೆಯಾಗಿರದೇ ಭಗವಂತನ ಸೃಷ್ಟಿಮಾತ್ರವಾಗಿದೆ. ಅಲ್ಲದೇ ಧರ್ಮಶಾಸ್ತ್ರಗಳಿಂದ ಸಾಮಾನ್ಯವಾಗಿ ತಿಳಿದು ಬರುವ ಅಂಶವೆಂದರೆ ವರ್ಣಗಳ ನಿರ್ಣಯವು ಹುಟ್ಟನ್ನು ಆಧರಿಸಿ ಆಗುತ್ತದೆ. ಅಲ್ಲದೇ ಹುಟ್ಟನ್ನು ಆಧರಿಸಿಯೇ, ಸ್ವಧರ್ಮ ಮತ್ತು ಸ್ವಕರ್ಮಗಳಿಗೆ ಸಂಬಂಧವನ್ನು ಹೇಳಲಾಗಿದೆ. ವರ್ಣವು ಹುಟ್ಟನ್ನು ಆಧರಿಸಿರುವುದರಿಂದಲೇ ಮಹಾಭಾರತದಲ್ಲಿ ಯುಧಿಷ್ಠಿರನು ಭೀಷ್ಮರ ಬಳಿ, ಶೂದ್ರಾದಿ ಕೆಳಗಿನ ವರ್ಣದವರು ಬ್ರಾಹ್ಮಣನಾಗುವುದು ಹೇಗೆ? ಎಂದು ಪ್ರಶ್ನಿಸಿದಾಗ ಭೀಷ್ಮರು ಬ್ರಾಹ್ಮಣ್ಯವನ್ನು ವಿವಿಧ ಜನ್ಮಗಳಲ್ಲಿ ಪಡೆಯಬಹುದೇ ಹೊರತು, ಒಂದೇ ಜನ್ಮದಲ್ಲಿ ಪಡೆಯಲು ಸಾಧ್ಯವಿಲ್ಲ ಎಂದು ವಿವರಿಸುತ್ತಾರೆ. ಈ ರೀತಿಯ ಬಲವಾದ ಕಟ್ಟುಪಾಡುಗಳಿಂದಾಗಿ ಕೆಳಗಿನ ವರ್ಣದವರು ಮತ್ತು ಜಾತಿಗಳು ಮೇಲಿನ ವರ್ಣಗಳ ಸ್ತರವನ್ನು ತಲುಪಲು ಅವಕಾಶವಿರಲಿಲ್ಲ.
ಬ್ರಾಹ್ಮಣವರ್ಣವು ಮೂರು ವರ್ಣಗಳಿಗೆ ಯಜ್ಞ ಇತ್ಯಾದಿಗಳನ್ನು ಮಾಡಿಸುವ ಅಧಿಕಾರವನ್ನು ಹೊಂದಿದ್ದರಿಂದ ಆರ್ಥಿಕವಾಗಿ ಸಬಲವಾಗಿತ್ತು. ಆರಂಭದಲ್ಲಿ ಶೂದ್ರರು ಆರ್ಥಿಕವಾಗಿ ಸಬಲರಾಗಿರಲಿಲ್ಲ. ಆದ್ದರಿಂದಾಗಿ ಅವರಿಂದ ದಕ್ಷಿಣೆಯನ್ನು ಪಡೆಯುತ್ತಿರಲಿಲ್ಲ. ಆದರೆ ಕಾಲಕ್ರಮೇಣ ಬದಲಾದ ಪರಿಸ್ಥಿತಿಯಲ್ಲಿ ಶೂದ್ರವರ್ಣವು ಆರ್ಥಿಕವಾಗಿ ಸಬಲವಾದಂತೆ ಶೂದ್ರವರ್ಣದವರಿಗೆ ಶ್ರಾದ್ಧ ಇತ್ಯಾದಿಗಳನ್ನು ಮಾಡುವ ಅಧಿಕಾರವನ್ನು ನೀಡಲಾಯಿತು. ಅದನ್ನು ಮಾಡಿಸುವ ಅಧಿಕಾರವು ಬ್ರಾಹ್ಮಣರಿಗೆ ಇತ್ತು. ಆದ್ದರಿಂದಾಗಿ ಬ್ರಾಹ್ಮಣರು ಅವರಿಂದಲೂ ದಕ್ಷಿಣೆಯನ್ನು ಪಡೆಯಲು ಆರಂಭಿಸಿದರು. ಹೀಗೆ ಒಟ್ಟಾರೆ ಹಿಂದೂ ಸಮಾಜದ, ಸಾಮಾಜಿಕ ವ್ಯವಸ್ಥೆಯನ್ನು ಪಿರಮಿಡ್ ನ ರೀತಿಯಲ್ಲಿ ನೋಡಬಹುದು. ಕೆಲವೇ ಸಂಖ್ಯೆಯಲ್ಲಿ ಇದ್ದ ಬ್ರಾಹ್ಮಣರು ಮತ್ತು ಕ್ಷತ್ರಿಯರು, ಈ ಪಿರಮಿಡ್ನ ಉನ್ನತ ಸ್ಥಾನದಲ್ಲಿದ್ದರು. ಸಂಪತ್ತನ್ನು ಸೃಷ್ಟಿಸುತ್ತಿದ್ದ ವೈಶ್ಯರು ಮತ್ತು ಸಾಮಾನ್ಯ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿದ್ದ ಶೂದ್ರರು ದೊಡ್ಡ ಸಂಖ್ಯೆಯಲ್ಲಿ ಇದ್ದರೂ ಸಾಮಾಜಿಕವಾಗಿ ಕೆಳಗಿನ ಸ್ತರದಲ್ಲಿದ್ದರು. ಬ್ರಾಹ್ಮಣವರ್ಣವು ಆರ್ಥಿಕವಾಗಿ ಯಜ್ಞಾದಿಗಳನ್ನು ಮಾಡಿಸುವ ವರ್ಣದ ಮೇಲೆ ಅಂದರೆ ಮುಖ್ಯವಾಗಿ ಕ್ಷತ್ರಿಯವರ್ಣದ ಮೇಲೆ ಅವಲಂಬಿತವಾಗಿತ್ತು. ಕ್ಷತ್ರಿಯವರ್ಣದ ಆರ್ಥಿಕ ಸಹಕಾರಕ್ಕೆ ಪ್ರತಿಫಲವಾಗಿ, ಬ್ರಾಹ್ಮಣವರ್ಣವು ಕ್ಷತ್ರಿಯವರ್ಣಕ್ಕೆ ಬೇಕಾದ ನೈತಿಕ ಸಹಕಾರವನ್ನು ನೀಡುತ್ತಿತ್ತು. ಬ್ರಾಹ್ಮಣ ಕೇಂದ್ರಿತವಾದ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲೇರಲು ಅವಕಾಶವನ್ನು ನೀಡದ ಈ ವರ್ಣವ್ಯವಸ್ಥೆಯನ್ನು ಅನೇಕರು ವಿರೋಧಿಸಿದ್ದಾರೆ. ಬೌದ್ಧರಿಂದ ಆರಂಭವಾದ ಈ ಪ್ರಯತ್ನ, ಭಕ್ತಿಚಳುವಳಿ, ಸಿಕ್ಖರ ಆದಿಗ್ರಂಥ ಇತ್ಯಾದಿಗಳಿಂದ ನಿರಂತರವಾಗಿ ಮುಂದುವರೆದಿದೆ. ಇದು ಇಂದು ಪ್ರಚಲಿತದಲ್ಲಿರುವ ಸಿದ್ಧಮಾದರಿಯ ನಿರೂಪಣೆಯಾಗಿದೆ. ಈ ಮೇಲಿನ ಸಿದ್ಧಮಾದರಿಯಲ್ಲಿ ಕೆಲವು ಸಣ್ಣ ಪುಟ್ಟ ವ್ಯತ್ಯಾಸಗಳಿರಬಹುದು, ಆದರೆ ಇದು ಸಿದ್ಧಮಾದರಿಯನ್ನು ಅರ್ಥಮಾಡಿಕೊಳ್ಳಲು ಬೇಕಾದ ಚೌಕಟ್ಟನ್ನು ನೀಡುತ್ತದೆ.
ಕೇಂದ್ರ ಸಮಸ್ಯೆ ಮತ್ತು ಪ್ರಸಕ್ತ ಪುಸ್ತಕದ ಮಹತ್ವ
ಕಳೆದ ಸುಮಾರು ೨೦೦ ಕ್ಕೂ ಹೆಚ್ಚು ವರ್ಷಗಳಿಂದ ಬೆಳೆದು ಬಂದಿರುವ ಈ ವಾದವನ್ನು ಆಧರಿಸಿ ಸಮಾಜ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಹಿಂದೂ ರಿಲಿಜನ್ನಿನ ಕುರಿತ ಚರ್ಚೆಗಳು ಬೆಳೆದಿವೆ. ಆದರೆ ಈ ಸಿದ್ಧ ಮಾದರಿಯ ನಿರೂಪಣೆಯು ಭಾರತೀಯ ಸಂಸ್ಕೃತಿಯ ಸರಿಯಾದ ಚಿತ್ರಣವನ್ನು ಒದಗಿಸುವುದಿಲ್ಲ ಎಂಬ ಚರ್ಚೆಯನ್ನೂ ಆಗಾಗ ಕೇಳುತ್ತೇವೆ. ಅಲ್ಲದೇ ಈ ಮೇಲಿನ ಸಿದ್ಧ ಮಾದರಿಯ ನಿರೂಪಣೆಯು ಪಾಶ್ಚಾತ್ಯರ ವಿಚಾರಗಳಿಂದ ಪ್ರೇರಿತವಾಗಿದ್ದು, ವರ್ಣ ಮತ್ತು ಜಾತಿಗೆ ಸಂಬಂಧಿಸಿ ಈ ವಾದಕ್ಕಿಂತ ಭಿನ್ನವಾದ ಸಾಂಪ್ರದಾಯಿಕ ಮತವೊಂದಿದೆ ಎಂಬ ಮಾತನ್ನೂ ಈ ರೀತಿಯ ಚರ್ಚೆಗಳಲ್ಲಿ ಹೇಳಲಾಗುತ್ತದೆ. ಯಾರು ಪರಂಪರೆಯಿಂದ ಶಾಸ್ತ್ರಾಧ್ಯಯನವನ್ನು ಮಾಡಿದ್ದಾರೋ ಅವರು ಭಾರತೀಯ ಸಂಸ್ಕೃತಿಯನ್ನು ಮತ್ತು ಧರ್ಮಶಾಸ್ತ್ರಗಳನ್ನು ಹತ್ತಿರದಿಂದ ತಿಳಿದವರಾದ್ದರಿಂದ ಅವರು ’ಸಾಂಪ್ರದಾಯಿಕ ಮತ’ವನ್ನು ಅರಿತಿದ್ದಾರೆ ಎಂಬ ಅಭಿಪ್ರಾಯ ಸಂಸ್ಕೃತ ಪಂಡಿತರ ಮಾತುಗಳಲ್ಲಿ ವ್ಯಕ್ತವಾಗುತ್ತವೆ. ಇದರೊಂದಿಗೆ ಸಮಾಜ ವಿಜ್ಞಾನದವರು ಕೇಳುವ ಪ್ರಶ್ನೆಗಳು ಸಾಂಪ್ರದಾಯಿಕ ವಿದ್ವಾಂಸರಿಗೆ ಅರ್ಥವಾಗುವುದಿಲ್ಲ ಮತ್ತು ಸಾಂಪ್ರದಾಯಿಕರು ಹೇಳುವ ವಿಚಾರಗಳು ಸಮಾಜ ವಿಜ್ಞಾನದವರು ಗ್ರಹಿಸುವುದಿಲ್ಲ ಎಂಬ ಅಭಿಪ್ರಾಯವೂ ಆಗಾಗ ಕೇಳಿಬರುತ್ತದೆ.
ಇದೇನೇ ಇದ್ದರೂ, ಸಿದ್ಧ ಮಾದರಿಯ ನಿರೂಪಣೆಗಿಂತ ಭಿನ್ನವಾದ ಸಾಂಪ್ರದಾಯಿಕ ಮತವೊಂದಿದೆ ಎಂದಾದಲ್ಲಿ, ಆ ಮತವು ವರ್ಣ ಮತ್ತು ಜಾತಿಯನ್ನು ಕುರಿತು ಹೇಗೆ ಆಲೋಚಿಸುತ್ತದೆ? ಸಿದ್ಧ ಮಾದರಿಯ ನಿರೂಪಣೆಯು ಎತ್ತುವ ಪ್ರಶ್ನೆಗಳಿಗೆ ಸಾಂಪ್ರದಾಯಿಕ ಮತವು ಹೇಗೆ ಪ್ರತಿಕ್ರಿಯಿಸುತ್ತದೆ? ಇತ್ಯಾದಿ ಪ್ರಶ್ನೆಗಳು ಎಲ್ಲರಿಗೂ ಸಹಜವಾಗಿ ಹುಟ್ಟುವಂತಹದ್ದು. ಅಲ್ಲದೇ ಸಿದ್ಧ ಮಾದರಿಯ ನಿರೂಪಣೆಗಳನ್ನು ಅರ್ಥಮಾಡಿಕೊಳ್ಳಲು ಅನೇಕ ಪುಸ್ತಕಗಳು ಉಪಲಬ್ಧವಿದ್ದರೂ, ಸಾಂಪ್ರದಾಯಿಕ ಮತವನ್ನು ತಿಳಿದುಕೊಳ್ಳಲು ಬಯಸುವವರಿಗೆ ದೊರಕುವ ಪುಸ್ತಕಗಳು ಅತಿವಿರಳ. ಅಲ್ಲದೇ ಉಪಲಬ್ಧ ಪುಸ್ತಕಗಳಲ್ಲಿಯೂ ಸಮಗ್ರವಾಗಿ ಒಂದೆಡೆ ಎಲ್ಲಾ ವಿಷಯಗಳು ದೊರಕುವುದಿಲ್ಲ ಮಾತ್ರವಲ್ಲ ಅಂತಹ ಉಪಲಬ್ದವಿರುವ ಕೆಲವೇ ಕೆಲವು ಪುಸ್ತಕಗಳು ಸಂಸ್ಕೃತದಲ್ಲಿವೆ. ಹಾಗಾಗಿ ಕನ್ನಡ ಭಾಷಿಕರು ಸಾಂಪ್ರದಾಯಿಕ ಮತವನ್ನು ಕನ್ನಡದಲ್ಲಿ ಅರಿಯಬೇಕು ಎಂಬ ಆಸಕ್ತಿಯನ್ನು ಹೊಂದಿದ್ದಲ್ಲಿ, ಸುಲಭದಲ್ಲಿ ಪುಸ್ತಕಗಳು ದೊರಕುವುದಿಲ್ಲ. ಆದ್ದರಿಂದ ಆ ರೀತಿಯ ಪುಸ್ತಕಗಳನ್ನು ಕನ್ನಡಕ್ಕೆ ತರಬೇಕು ಎಂಬ ಉದ್ದೇಶದಿಂದ ವರ್ಣಕ್ಕೆ ಸಂಬಂಧಿಸಿ ಶಾಸ್ತ್ರಜ್ಞರು ಬರೆದಿರುವ ಎರಡು ಪುಸ್ತಕಗಳನ್ನು ಭಾಷಾಂತರಕ್ಕೆ ಸ್ವೀಕರಿಸಿದ್ದೇವೆ. ಮಹಾಮಂಡಲಾಧೀಶ್ವರರಾಗಿದ್ದ ಮಹೇಶ್ವರಾನಂದ ಗಿರಿಯವರು ಬರೆದ ‘ಚಾತುರ್ವರ್ಣ್ಯ ಭಾರತ ಸಮೀಕ್ಷಾ’ ಎಂಬ ಪುಸ್ತಕ ಅವುಗಳಲ್ಲೊಂದು. ಶ್ರೀ ಹರಿಹರಾನಂದ ಸರಸ್ವತಿಗಳು ಎರಡು ಸಂಪುಟಗಳಲ್ಲಿ ಬರೆದಿರುವ ‘ಚಾತುರ್ವರ್ಣ್ಯ ಸಂಸ್ಕೃತಿ ವಿಮರ್ಶ’ ಎಂಬ ಪುಸ್ತಕವು ಇನ್ನೊಂದು. ಈ ಎರಡು ಪುಸ್ತಕಗಳಲ್ಲಿ ಚಾತುರ್ವರ್ಣ್ಯ ಭಾರತ ಸಮೀಕ್ಷಾ ಎಂಬ ಪುಸ್ತಕವು ಗುಣ ಮತ್ತು ಕರ್ಮಗಳನ್ನು ಅನುಸರಿಸಿ ವರ್ಣಗಳನ್ನು ನಿರ್ಣಯಿಸಲಾಗುತ್ತದೆ ಎಂದು ವಾದಿಸಿದರೆ, ಇನ್ನೊಂದು ಪುಸ್ತಕವು ಜನ್ಮದಿಂದ ವರ್ಣ ಎಂಬ ವಾದವನ್ನು ಮುಂದಿಡುತ್ತದೆ. ಈ ಎರಡು ವಾದಗಳಲ್ಲಿ ಯಾವುದು ಸರಿ, ಯಾವುದು ಹೆಚ್ಚು ಸಾಂಪ್ರದಾಯಿಕ ಇತ್ಯಾದಿ ಪ್ರಶ್ನೆಗಳನ್ನು ಕುರಿತು ಆಲೋಚಿಸುವುದು ಓದುಗರ ವಿವೇಚನೆಗೆ ಬಿಟ್ಟಿದ್ದು. ಸಾಂಪ್ರದಾಯಿಕ ಮತದ ಬಗ್ಗೆ ಆಲೋಚಿಸಲು ಸಂಸ್ಕೃತದಲ್ಲಿರುವ ಈ ಎರಡು ಕೃತಿಗಳನ್ನು ಕನ್ನಡಕ್ಕೆ ತರುವ ಯತ್ನವನ್ನು ಮಾತ್ರ ಈ ಮೂಲಕ ಮಾಡಲಾಗಿದೆ. ಪ್ರಸ್ತಕ ಸಂಪಾದಕೀಯವು ಚಾತುರ್ವರ್ಣ್ಯ ಭಾರತ ಸಮೀಕ್ಷಾ ಎಂಬ ಪುಸ್ತಕದ ಅನುವಾದದ ಹಿನ್ನೆಲೆಯಲ್ಲಿ ಕೆಲವು ವಿಷಯಗಳ ಕುರಿತು ಗಮನ ಸೆಳೆಯಲು ಪ್ರಯತ್ನಿಸುತ್ತದೆ.
ಪುಸ್ತಕ ಪರಿಚಯ
ಚಾತುರ್ವರ್ಣ್ಯ ಭಾರತ ಸಮೀಕ್ಷಾ ಎಂಬ ಪ್ರಸಕ್ತ ಪುಸ್ತಕವು ವರ್ಣಗಳಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಶಾಸ್ತ್ರಗಳ ಆಧಾರದಿಂದ ಚರ್ಚಿಸುತ್ತದೆ. ಈ ಮೇಲೆ ತಿಳಿಸಿದಂತೆ ಈ ಪುಸ್ತಕವು ಮುಖ್ಯವಾಗಿ ವರ್ಣಗಳು ಗುಣಕರ್ಮಗಳಿಂದ ನಿರ್ಣಯಿಸಲ್ಪಡುತ್ತವೆಯೇ ಅಥವಾ ಹುಟ್ಟಿನಿಂದ ವರ್ಣಗಳೇ ಎಂಬ ಪ್ರಶ್ನೆಯನ್ನು ಸ್ವೀಕರಿಸಿ ವರ್ಣಗಳು ಗುಣಕರ್ಮಗಳಿಂದ ನಿರ್ಣಯಿಸಲ್ಪಡುತ್ತವೆ ಎಂಬುದಾಗಿ ವಾದಿಸುತ್ತದೆ. ಗುಣಕರ್ಮವಾದವನ್ನು ನಿರೂಪಿಸುವುದಕ್ಕಿಂತ ಮುಂಚೆ ಹುಟ್ಟಿನಿಂದ ವರ್ಣಗಳು ಎಂಬ ವಾದವನ್ನು ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ತದನಂತರ ವರ್ಣಗಳು ಗುಣಕರ್ಮವನ್ನು ಆಶ್ರಯಿಸಿವೆ ಎಂದು ವಾದಿಸಲು ಕ್ಷತ್ರಿಯನಾದ ದೇವಾಪಿ, ಬ್ರಾಹ್ಮಣನಾದ ವೃತ್ತಾಂತ, ವಿಶ್ವಾಮಿತ್ರರು ಬ್ರಾಹ್ಮಣರಾದ ವೃತ್ತಾಂತ ಮತ್ತು ಭಗವದ್ಗೀತೆಯಲ್ಲಿ ಕೃಷ್ಣನು, ವರ್ಣಗಳನ್ನು ಗುಣಕರ್ಮವಿಭಾಗವನ್ನು ಆಶ್ರಯಿಸಿ ಸೃಷ್ಟಿಸಿದ್ದೇನೆ ಎಂದು ಹೇಳುವುದನ್ನು ನೀಡಲಾಗಿದೆ. ಅಲ್ಲದೇ ಅದರೊಂದಿಗೆ ಮಹಾಭಾರತದಲ್ಲಿನ ಗುಣಕರ್ಮವಾದಕ್ಕೆ ಪೂರಕವಾಗುವ ಅನೇಕ ಶ್ಲೋಕಗಳನ್ನು ಮತ್ತು ಕಥೆಗಳನ್ನು ಉಲ್ಲೇಖಿಸಲಾಗಿದೆ. ಹೀಗೆ ಗುಣಕರ್ಮಗಳನ್ನು ಆಧರಿಸಿ ವರ್ಣವೆಂದಾದಲ್ಲಿ, ಅಷ್ಟವರ್ಷೇ ಬ್ರಾಹ್ಮಣಂ ಉಪನಯೀತ (ಎಂಟು ವರ್ಷಕ್ಕೆ ಬ್ರಾಹ್ಮಣನ ಉಪನಯನವನ್ನು ಮಾಡಬೇಕು) ಇತ್ಯಾದಿ ವಿಧಿವಾಕ್ಯಗಳು ಹೇಗೆ ಸರಿಹೊಂದುತ್ತವೆ? ಅಷ್ಟು ಸಣ್ಣ ವಯಸ್ಸಿನ ಬಾಲಕನ ಗುಣಕರ್ಮಗಳ ಬಗ್ಗೆ ಸರಿಯಾದ ತಿಳಿವಳಿಕೆ ಸಾಧ್ಯವಿಲ್ಲವಲ್ಲವೇ? ಎಂಬ ಪ್ರಶ್ನೆಗಳನ್ನು ಕೇಳಿಕೊಂಡು ಆಚಾರ್ಯನು ಗುಣಕರ್ಮಸ್ವಭಾವಗಳ ಮರ್ಮವನ್ನು ಗ್ರಹಿಸಬಲ್ಲವನಾದ್ದರಿಂದ ಗುಣಕರ್ಮವಾದಕ್ಕೆ ಈ ರೀತಿಯ ವಿಧಿವಾಕ್ಯಗಳು ವಿರುದ್ಧವಾಗಿಲ್ಲ ಎಂದು ಉತ್ತರಿಸುತ್ತಾರೆ. ಅಲ್ಲದೇ ಗುಣಕರ್ಮಗಳ ಸಾಮ್ಯತೆ ಇದ್ದಲ್ಲಿ ವಿಭಿನ್ನ ವರ್ಣಗಳ ನಡುವಿನ ವಿವಾಹವೂ ಸಮ್ಮತವಾದದ್ದು ಎಂಬುದನ್ನು ಉದಾಹರಣೆಯೊಂದಿಗೆ ನಿರೂಪಿಸುತ್ತಾರೆ. ಗುಣಕರ್ಮವಾದಕ್ಕೆ ಪುರಾಣಗಳ ಸಮ್ಮತಿಯನ್ನೂ ಈ ಪುಸ್ತಕದಲ್ಲಿ ತೋರಿಸಲಾಗಿದೆ.
ಈ ಗ್ರಂಥದ ಮುಂದಿನ ಭಾಗದಲ್ಲಿ ಅನೇಕ ಬ್ರಾಹ್ಮಣ ಜಾತಿಗಳು ಮೂಲತಃ ಬ್ರಾಹ್ಮಣರಾಗಿರಲಿಲ್ಲ, ಅವರೆಲ್ಲರೂ ಗುಣಕರ್ಮಗಳಿಂದ ಬ್ರಾಹ್ಮಣರಾದರು ಎಂದು ವಾದಿಸಲು ಪೂರಕವಾಗಿ ಕೆಲವು ಕಥೆಗಳನ್ನು ಉಲ್ಲೇಖಿಸಲಾಗಿದೆ. ಆ ಭಾಗದಲ್ಲಿ ಬೆಸ್ತರು ಚಿತ್ಪಾವನ ಬ್ರಾಹ್ಮಣರಾದ ಕಥೆ, ಅಂಬಿಗರು ಆಭೀರ ಬ್ರಾಹ್ಮಣರಾದ ಕಥೆ, ಅಂಬಿಗರು ನಂಬೂದಿರಿ ಬ್ರಾಹ್ಮಣರಾದ ಕಥೆ ಇತ್ಯಾದಿಗಳನ್ನು ನೀಡಲಾಗಿದೆ. ಅಲ್ಲದೇ ಛಾಂದೋಗ್ಯೋಪನಿಷತ್ತಿನ ಸತ್ಯಕಾಮ ಜಾಬಾಲಿಯ ವೃತ್ತಾಂತ, ಐತರೇಯ ಬ್ರಾಹ್ಮಣದಲ್ಲಿ ಬರುವ ಹುಟ್ಟಿನಿಂದ ಶೂದ್ರನಾಗಿದ್ದ ಕವಷ ಐಲೂಷನು ತಪಸ್ಸನ್ನು ಆಚರಿಸಿ ಬ್ರಾಹ್ಮಣನಾದ ವೃತ್ತಾಂತ ಇತ್ಯಾದಿಗಳನ್ನು ನೀಡಿ ಋಷಿಮುನಿಗಳ ಮಹತ್ವವನ್ನು ಗುಣಕರ್ಮಾದಿ ಕಾರಣದಿಂದ ಒಪ್ಪಲಾಗಿದೆಯೇ ಹೊರತು ಜನ್ಮದಿಂದಲ್ಲ ಎಂದು ವಾದಿಸಲಾಗಿದೆ. ಅಲ್ಲದೇ ಶ್ರೀ ಶಂಕರರೂ ಜನರ ಗುಣಕರ್ಮಾನುಸಾರವಾಗಿ ವರ್ಣವ್ಯವಸ್ಥೆಯನ್ನು ಪುನಃ ಪ್ರತಿಷ್ಠಾಪಿಸಿದಾಗ ಬೌದ್ಧಮತಾನುಯಾಯಿಗಳೂ ಸಹ ಈ ಚಾತುರ್ವರ್ಣ್ಯ ವ್ಯವಸ್ಥೆಯಲ್ಲಿಯೇ ಸೇರಿ ಹೋದರು ಎಂದು ನಿರೂಪಿಸಲಾಗಿದೆ. ಮುಂದೆಯು ಕೂಡ ಈ ಪುಸ್ತಕದಲ್ಲಿ ಗುಣಕರ್ಮವಾದವನ್ನು ಸಮರ್ಥಿಸುತ್ತಾ ಅನೇಕಾನೇಕ ಬ್ರಾಹ್ಮಣವಂಶಗಳು ಮೂಲಭೂತವಾಗಿ ಬ್ರಾಹ್ಮಣರು ಆಗಿರಲಿಲ್ಲ ಎಂಬುದನ್ನು ಬೇರೆ ಗ್ರಂಥಗಳ ಆಧಾರದಿಂದ ಉಲ್ಲೇಖಿಸಲಾಗಿದೆ.
ಅಲ್ಲದೇ ವರ್ಣಭೇದ ಅಥವಾ ವರ್ಗಭೇದವೆಂಬುದು ಕೃತಯುಗದಲ್ಲಿ ಇರಲಿಲ್ಲ, ಅಲ್ಲಿ ಎಲ್ಲರೂ ಸಾತ್ವಿಕಗುಣದವರಾಗಿದ್ದರು. ನಂತರ ಕ್ರಮೇಣ ಗುಣಕರ್ಮಗಳನ್ನು ಆಧರಿಸಿ ವರ್ಣವ್ಯವಸ್ಥೆ ಹುಟ್ಟಿತು. ತದನಂತರ ಹುಟ್ಟಿನಿಂದ ವರ್ಣವೆಂಬ ಚರ್ಚೆ ಬೆಳೆದು ಸಮಾಜದಲ್ಲಿ ಅಶಾಂತಿಯು ತಲೆದೋರಲಾರಂಭಿಸಿತು. ವರ್ಣವೆಂಬುದು ಮೂಲಭೂತವಾಗಿ ಗುಣಕರ್ಮಗಳಿಗೆ ಸಂಬಂಧಿಸಿದ್ದೇ ಆಗಿದೆ ಎಂದು ವಾದಿಸುತ್ತಾರೆ. ಅಲ್ಲದೇ ವರ್ಣ ಎಂಬ ಪದವು ವೃಞ್ ಧಾತುವಿನಿಂದ ಬಂದಿದ್ದು, ಗುಣಕರ್ಮ ಸ್ವಭಾವಾದಿಗಳ ಕಾರಣದಿಂದ ಸಮಾಜವು ವ್ಯಕ್ತಿಯನ್ನು ಆಯಾ ವೃತ್ತಿಗೆ ಆಯ್ಕೆ ಮಾಡುತ್ತದೆ ಎಂಬ ಅರ್ಥ ಧಾತುವಿನಿಂದ ದೊರಕುತ್ತದೆ ಎಂದು ವ್ಯುತ್ಪತ್ತಿಯನ್ನು ಆಶ್ರಯಿಸಿ ತಮ್ಮ ವಾದವನ್ನು ಸಮರ್ಥಿಸಲಾಗಿದೆ. ಜಾತಿ ಮತ್ತು ವರ್ಣಗಳು ಬೇರೆ ಬೇರೆಯಾಗಿದ್ದು, ಅವುಗಳಲ್ಲಿ ವರ್ಣವೆಂಬುದು ಗುಣಕರ್ಮಗಳಿಗೆ ಸಂಬಂಧಿಸಿದ್ದಾಗಿದ್ದು, ಜಾತಿಯು ಹುಟ್ಟಿಗೆ ಸಂಬಂಧಿಸಿದ್ದಾಗಿದೆ. ಆದರೆ ಇವೆರಡು ಬೇರೆ ಬೇರೆ ಎಂಬ ವಿವೇಕವಿಲ್ಲದೇ ಅವೆರಡೂ ಒಂದೇ ಎಂದು ಕೆಲವರು ವಾದಿಸುತ್ತಾರೆ ಎಂಬುದನ್ನೂ ಇಲ್ಲಿ ಹೇಳಲಾಗಿದೆ. ವರ್ಣವು ಜನ್ಮದಿಂದ ಅಲ್ಲ ಎಂಬ ಕಾರಣದಿಂದಲೇ ವೀತಹವ್ಯಾದಿಗಳ ವರ್ಣಪರಿವರ್ತನೆಯ ಕಥೆ ಹೊಂದುತ್ತದೆ ಎಂದು ವಾದಿಸಿ, ಗುಣಕರ್ಮಾನುಸಾರವಾಗಿ ವರ್ಣವ್ಯವಸ್ಥೆ ಎಂದು ಸ್ವೀಕರಿಸಿದಾಗ, ಒಬ್ಬ ವ್ಯಕ್ತಿಯಲ್ಲೂ ನಾಲ್ಕು ವರ್ಣಗಳು ಇರಲು ಸಾಧ್ಯ ಎಂದು ನಿರೂಪಿಸುತ್ತಾರೆ. ಅಂದರೆ ಒಬ್ಬನೇ ವ್ಯಕ್ತಿ ಬ್ರಾಹ್ಮಣನೂ ಕ್ಷತ್ರಿಯನೂ ವೈಶ್ಯನೂ ಶೂದ್ರನೂ ಆಗಿರುತ್ತಾನೆ ಎಂದು ಹೇಳಿ ಅದಕ್ಕೆ ಕೃಷ್ಣನ ಜೀವನವನ್ನು ಉದಾಹರಣೆಯಾಗಿ ಕೊಡುತ್ತಾರೆ.
ಈ ಪುಸ್ತಕದ ಕೊನೆಯ ಭಾಗದಲ್ಲಿ ಹಿಂದೂ ಸಮಾಜದಲ್ಲಿ ಬದಲಾವಣೆಯ ಆವಶ್ಯಕತೆ ಇದೆ ಎಂಬುದನ್ನು ಪ್ರತಿಪಾದಿಸುತ್ತಾ ಆ ಬದಲಾವಣೆಗಳ ಬಗ್ಗೆ ಹೀಗೆ ಹೇಳುತ್ತಾರೆ – ಪ್ರತಿಯೊಬ್ಬನಿಗೂ ತನಗೆ ಅನುಕೂಲವಾದ ರೀತಿಯಲ್ಲಿ ಕೆಲಸವನ್ನು ಮಾಡುವ ಅರ್ಹತೆಯನ್ನು ಗಳಿಸುವುದಕ್ಕೆ ಅವಕಾಶ ದೊರೆಯಬೇಕು. ಅದಕ್ಕಾಗಿ ವರ್ಣವ್ಯವಸ್ಥೆಯು ಕಣ್ಮರೆಯಾದರೂ ತೊಂದರೆ ಇಲ್ಲ. ಮೇಲು ಕೀಳೆಂಬ ಭೇದಭಾವನೆಯನ್ನು ಪೋಷಿಸುವ ವರ್ಣವ್ಯವಸ್ಥೆಯ ಪರಿಷ್ಕಾರ ಆಗಬೇಕಾಗಿದೆ. ಹಿಂದೂ ಸಮಾಜದ ಸಂಘಟನೆಗೆ ತರತಮ ಭಾವನೆಯೇ ಅಡ್ಡವಾಗಿದೆ. ಜಾತಿಭೇದವು ಸಮಾಜದ ಎಲ್ಲಾ ರೀತಿಯ ಅಭ್ಯುದಯವನ್ನು ಕುಂಠಿತಗೊಳಿಸುತ್ತದೆ. ಜಾತಿಭೇದದ ಕಾರಣದಿಂದಾಗಿ ವಿದೇಶಿಗರ ಆಕ್ರಮಣದ ಸಂದರ್ಭದಲ್ಲಿ ಎಲ್ಲರೂ ತಮ್ಮ ಸ್ವಾರ್ಥದಲ್ಲಿಯೇ ಮುಳುಗಿದ್ದರೇ ಹೊರತು ರಾಷ್ಟ್ರದ ಅಭ್ಯುದಯದ ಬಗ್ಗೆ ಚಿಂತಿಸಲಿಲ್ಲ. ಹಿಂದೂಗಳಲ್ಲಿ ಸಂಘಟನೆ ಇಲ್ಲದೇ ಇದ್ದುದ್ದರಿಂದ ಬಡವರೇ ಮೊದಲಾದವರು ಮತಾಂತರವನ್ನು ಹೊಂದಿದರು. ಆದ್ದರಿಂದ ಈ ತರತಮಭಾವವನ್ನು ಹೋಗಲಾಡಿಸಿ ಒಂದು ಜಾತಿ, ಒಂದು ಧರ್ಮ, ಒಂದು ದೇವರು, ಒಂದು ಸಂಪ್ರದಾಯ ಹೀಗೆ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಏಕಮೇವಾದ್ವಿತೀಯ ತತ್ತ್ವವು ನೆಲೆಗೊಳ್ಳಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಸ್ವಾರ್ಥಪರತೆ ಕಡಿಮೆಯಾಗಿ ರಾಷ್ಟ್ರಾಭಿಮಾನವು ಜಾಗೃತವಾಗಬೇಕು. ಹಿಂದೂಗಳು ಸಂಘಟಿತರಾಗದೇ ಇದ್ದುದ್ದರಿಂದ ದೊಡ್ಡ ಸಂಖ್ಯೆಯಲ್ಲಿದ್ದರೂ ವಿದೇಶಿಗರ ಆಕ್ರಮಣಕ್ಕೆ ಒಳಗಾಗಬೇಕಾಯಿತು ಎಂದು ವಿವರಿಸುತ್ತಾರೆ.
ವರ್ಣಸಾಂಕರ್ಯವು ಘಟಿಸಿ ಹೋಗಿರುವುದರಿಂದ ಮನುಷ್ಯರಲ್ಲಿ ಯಾರು ಯಾವ ಜಾತಿಯವರೆಂದು ಗೊತ್ತಾಗುವುದಿಲ್ಲ. ವಿದೇಶಗಳಲ್ಲಿ ವೃತ್ತಿನಿಮಿತ್ತವಾದ ವರ್ಗವಿಂಗಡನೆ ಇದೆ, ಅದೇ ರೀತಿ ಗುಣಕರ್ಮನಿಮಿತ್ತಕವಾಗಿ ಚಾತುರ್ವರ್ಣ್ಯ ವ್ಯವಹಾರವು ಸೂಕ್ತವೆಂದೆನಿಸುತ್ತದೆ. ಜಪಾನ್ ದೇಶದಲ್ಲಿ ಹಿಂದೆ ಜಾತಿ ಭೇದ ಹಾಗೂ ಮೂಢನಂಬಿಕೆಗಳಿದ್ದವು. ಇದರಿಂದಾಗಿ ಸಮಾಜದಲ್ಲಿ ಸಂಘಟನೆ ಇರಲಿಲ್ಲ. ಕ್ರಮೇಣ ಜಪಾನೀಯರಲ್ಲಿ ಜಾಗೃತಿ ಮೂಡಿತು. ಇಂದು ಅವರು ಒಂದು ಒಂದೇ ಜಾತಿ ಒಂದೇ ಧರ್ಮದ ಅನುಯಾಯಿಗಳಾಗಿದ್ದಾರೆ. ಹಾಗಾಗಿ ಜಪಾನ್ ದೇಶ ಪ್ರಗತಿಯನ್ನು ಸಾಧಿಸಿದೆ. ಆದರೆ ಭಾರತ ಪ್ರಾಚೀನ ಕಾಲದಿಂದಲೂ ಮುಂದುವರೆದಿಲ್ಲ. ಮೇಲು ಕೀಳೆಂಬ ಭಾವ ಸಮಾಜದಿಂದ ದೂರವಾಗಲಿಲ್ಲ. ಅಸ್ಪೃಶ್ಯತೆಯ ಕಾರಣದಿಂದ ಲಕ್ಷ ಲಕ್ಷ ಹಿಂದೂಗಳು ಇಸ್ಲಾಂಗೆ ಮತಾಂತರ ಹೊಂದಿದರು. ಮತಾಂತರ ಹೊಂದಿದವರನ್ನು ಹಿಂದೂಗಳನ್ನಾಗಿಸುವ ಪ್ರಯತ್ನವನ್ನು ಮಾಡಲಿಲ್ಲ. ಅಸ್ಪೃಶ್ಯ ಜನರಿಗೆ ದೇವಸ್ಥಾನಗಳಿಗೆ ಪ್ರವೇಶವಿಲ್ಲದೇ ಇದ್ದುದ್ದರಿಂದ ಮತ್ತು ದೇವರನ್ನು ಕಾಣಬೇಕೆಂಬ ಮಾನಸಿಕ ಹಂಬಲದಿಂದಾಗಿ ಮುಸಲ್ಮಾನರ ಪೀರಗದ್ದಿಗೆ ಹೋಗುತ್ತಾರೆ. ವಿಧವಾ ವಿವಾಹದ ಬಗ್ಗೆ ಇದ್ದ ಕಟ್ಟುಪಾಡಿನಿಂದಾಗಿ ಅನೇಕ ವಿಧವೆಯರು ಮುಸಲ್ಮಾನರನ್ನು ವಿವಾಹವಾದರು.
ಹೀಗೆ ಇಂದು ಹಿಂದೂ ಸಮಾಜದಲ್ಲಿ ಆಗಬೇಕಾದ ಬದಲಾವಣೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಲೇಖಕರು, ಈ ಪುಸ್ತಕವನ್ನು ಪಕ್ಷ ವಿಪಕ್ಷಗಳಿಂದ ಪರ್ಯಾಲೋಚಿಸಿ ಇದರಲ್ಲಿರುವ ಸಮುಚಿತವೂ ಉಪಾದೇಯವೂ ಆದ ವಿಚಾರಗಳನ್ನು ಸ್ವೀಕರಿಸಬೇಕು ಎಂದು ಹೇಳಿ ಈ ಪುಸ್ತಕವನ್ನು ಕೊನೆಗೊಳಿಸುತ್ತಾರೆ.
ಪುಸ್ತಕದಲ್ಲಿರುವ ನಿರೂಪಣೆಯು ಸಿದ್ಧ ಮಾದರಿಯ ನಿರೂಪಣೆಗೆ ಪರ್ಯಾಯವೇ?
ಈ ಪುಸ್ತಕದ ಪರಿಶೀಲನೆಯಿಂದ, ಪ್ರಸಕ್ತ ಪುಸ್ತಕವು ಅಭಿಜಾತ ನಿರೂಪಣೆಗೆ ಪ್ರತಿಕ್ರಿಯಾತ್ಮಕವಾಗಿ ಹೊರಟಿರುವುದು ಎಂದು ತೋರುತ್ತದೆ. ಆದರೆ ಈ ಪುಸ್ತಕದಲ್ಲಿರುವ ಮೂಲಭೂತ ನಿಲುವುಗಳು ಸಿದ್ಧ ಮಾದರಿಯ ನಿರೂಪಣೆಗಿಂತ ಬಹಳ ಭಿನ್ನವಾಗಿರುವಂತೆ ಕಾಣುವುದಿಲ್ಲ. ಉದಾಹರಣೆಗೆ ಇಂದು ಪ್ರಚಲಿತದಲ್ಲಿರುವ ವಾದದ ಕೇಂದ್ರ ವಿಷಯವೆಂದರೆ ವರ್ಣಗಳು ಸಾಮಾಜಿಕ ವರ್ಗಗಳು ಹಾಗೂ ಇಂದಿನ ಜಾತಿವ್ಯವಸ್ಥೆಯನ್ನು ಅರಿತುಕೊಳ್ಳಲು ಬೇಕಾದ ಸೈದ್ಧಾಂತಿಕ ಚೌಕಟ್ಟು ಧರ್ಮಶಾಸ್ತ್ರಾದಿಗಳಿಂದ ದೊರಕುತ್ತದೆ ಎಂಬುದು. ಪ್ರಸಕ್ತ ಪುಸ್ತಕವೂ ವರ್ಣಗಳು ಗುಣಾಧಾರಿತವಾಗಿದ್ದವು ಎಂದು ವಾದಿಸಿದರೂ ಅವು ಸಾಮಾಜಿಕ ವರ್ಗವೆಂಬುದರ ಬಗ್ಗೆ ಮತ್ತು ಅವುಗಳಿಗೂ ಜಾತಿಗಳಿಗೂ ಸಂಬಂಧವಿದೆ ಎಂಬುದರ ಬಗ್ಗೆ ಭಿನ್ನಾಭಿಪ್ರಾಯವೇನೂ ಕಾಣುವುದಿಲ್ಲ. ಜಾತಿವ್ಯವಸ್ಥೆಯು ಶ್ರೇಣೀಕೃತವಾಗಿದ್ದು ಹಿಂದೂಸಮಾಜದ ಎಲ್ಲಾ ಸಮಸ್ಯೆಗಳಿಗೆ ಶ್ರೇಣೀಕೃತ ಜಾತಿವ್ಯವಸ್ಥೆಯೇ ಕಾರಣ ಎಂಬುದು ಪ್ರಚಲಿತವಾದವಾಗಿದ್ದರೆ, ಮೇಲು ಕೀಳೆಂಬ ಭೇದಭಾವನೆಯನ್ನು ಪೋಷಿಸುವ ವರ್ಣವ್ಯವಸ್ಥೆಯ ಪರಿಷ್ಕಾರ ಆಗಬೇಕಾಗಿದೆ ಎಂದು ಹೇಳುತ್ತಾ ಪ್ರಸಕ್ತ ಪುಸ್ತಕಕಾರರು ಅದನ್ನು ಸರಿ ಎಂದು ಒಪ್ಪಿಕೊಂಡಿರುವುದು ಪುಸ್ತಕದಿಂದ ಕಾಣುತ್ತದೆ. ವರ್ಣಸಂಕರವು ವಿಭಿನ್ನ ವರ್ಣಗಳ ನಡುವಿನ ಮೈಥುನಕ್ಕೆ ಸಂಬಂಧಿಸಿದ ವಿಷಯವೆಂದು ಸಿದ್ಧಮಾದರಿಯು ಒಪ್ಪಿಕೊಂಡರೆ, ಈ ಪುಸ್ತಕಕಾರರು ಕೂಡ ವರ್ಣಸಂಕರವು ಮೈಥುನಕ್ಕೆ ಸಂಬಂಧಿಸಿದ ವಿದ್ಯಮಾನವೆಂದೇ ನಿರೂಪಿಸುತ್ತಾರೆ. ಅಸ್ಪಶ್ಯತೆಯ ಕಥೆಯನ್ನು ಸಿದ್ಧ ಮಾದರಿಯ ರೀತಿಯಲ್ಲಿಯೇ ನಿರೂಪಿಸಿ, ಅದರ ನಿವಾರಣೆಗಾಗಿ ಸಿದ್ಧಮಾದರಿಯ ರೀತಿಯಲ್ಲಿಯೇ ಪರಿಹಾರವನ್ನು ಕೂಡ ಹೇಳಲಾಗಿದೆ. ಅಲ್ಲದೇ ವರ್ಣವು ಗುಣಕರ್ಮಾಧಾರಿತವಾಗಿದೆ ಎಂದು ವಾದಿಸುತ್ತಾ ಪುಸ್ತಕಕಾರರು ಮೂಲಭೂತವಾಗಿ ವರ್ಣವು ಗುಣಕರ್ಮಾಧಾರಿತವಾಗಿದ್ದರೂ ಕಾಲಕ್ರಮೇಣ ಜನ್ಮಾಧಾರಿತವಾಗಿದೆ ಮತ್ತು ಅದನ್ನು ಪರಿಷ್ಕರಿಸಬೇಕಾಗಿದೆ ಎಂಬ ನಿಲುವನ್ನು ತಾಳುತ್ತಾರೆ. ಹಾಗಾಗಿ ಸಿದ್ಧಮಾದರಿಯು ನಿರೂಪಿಸುವಂತೆ ಇಂದಿನ ಸಮಾಜದಲ್ಲಿ ಜಾತಿಗಳು ಜನ್ಮಾಧಾರಿತವಾಗಿವೆ ಮತ್ತು ಅವು ವರ್ಣವ್ಯವಸ್ಥೆಯಿಂದ ಬಂದಿವೆ ಎಂಬುದನ್ನು ಒಪ್ಪಿಕೊಂಡಿರುವಂತೆ ತೋರುತ್ತದೆ. ವರ್ಣ ಮತ್ತು ಜಾತಿಗಳು ಎರಡೂ ಬೇರೆ ಎಂದು ಉಲ್ಲೇಖಿಸಿದ್ದರೂ ವರ್ಣವ್ಯವಸ್ಥೆಯು ಮೇಲುಕೀಳು ಭಾವವನ್ನು ಪೋಷಿಸುತ್ತದೆ ಎಂದು ಹೇಳುತ್ತಾ ಜಾತಿ ಮತ್ತು ವರ್ಣಗಳ ನಡುವೆ ಇರುವ ವ್ಯತ್ಯಾಸವನ್ನು ಅಸ್ಪಷ್ಟವಾಗಿಸುತ್ತಾರೆ. ಹಾಗಾಗಿ ಪುಸ್ತಕದಲ್ಲಿರುವ ವಾದದ ಮತ್ತು ಸಿದ್ಧಮಾದರಿಯ ನಿರೂಪಣೆಯ ಮೂಲಭೂತ ಚೌಕಟ್ಟು ಬಹಳ ಭಿನ್ನವಾಗಿರುವಂತೆ ಕಾಣುವುದಿಲ್ಲ. ಮಾತ್ರವಲ್ಲ ಪ್ರಚಲಿತವಾದಕ್ಕಿಂತ ಭಿನ್ನವಾದ ಈ ಪುಸ್ತಕದಲ್ಲಿ ಹೇಳಲಾಗಿರುವ ’ಸಾಂಪ್ರದಾಯಿಕ ವಾದ’ವೇನು ಎಂಬುದೂ ಸ್ಪಷ್ಟವಾಗುವುದಿಲ್ಲ. ಅಂದರೆ ಪ್ರಚಲಿತದಲ್ಲಿರುವ ವಾದವು ಸರಿಯಾದದ್ದು ಎಂದು ಒಪ್ಪಿಕೊಂಡು ಅದರಲ್ಲಿ ಕೆಲವು ಸಣ್ಣ ಪುಟ್ಟ ಪರಿಷ್ಕಾರಗಳನ್ನು ಮಾತ್ರ ಹೇಳಿರುವಂತೆ ಈ ಪುಸ್ತಕದ ಅವಲೋಕನದಿಂದ ತೋರುತ್ತದೆ ಎಂದು ಅಂದುಕೊಂಡರೂ ಕೂಡ ಆ ಪರಿಷ್ಕಾರಗಳು ನಿರ್ದಿಷ್ಟವಾಗಿ ಯಾವ ರೀತಿಯದ್ದಾಗಿವೆ ಎಂಬುದು ಅರ್ಥವಾಗುವುದಿಲ್ಲ. ಹಾಗಾಗಿ ಮೂಲಭೂತವಾಗಿ ಸಿದ್ಧ ಮಾದರಿಗೂ ಮತ್ತು ಈ ಪುಸ್ತಕದಲ್ಲಿರುವ ವಾದಕ್ಕೂ ಇರುವ ಸೈದ್ಧಾಂತಿಕ ಚೌಕಟ್ಟು ಒಂದೇ ಆಗಿದೆ ಎಂದು ಕಾಣುತ್ತದೆ.
ಕೆಲವು ಗೋಜಲುಗಳು – ಪಠ್ಯ ಮತ್ತು ಹಿಂದೂ ಸಮಾಜ
ಈ ಪುಸ್ತಕದ ನಿರೂಪಣೆಯು ಓದುಗರಿಗೆ ಕೆಲವು ತೊಡಕುಗಳನ್ನು ಹಾಗೂ ಗೊಂದಲಗಳನ್ನು ಉಂಟುಮಾಡುತ್ತದೆ. ಈ ಪುಸ್ತಕದಲ್ಲಿ ಎದ್ದು ಕಾಣುವ ಒಂದು ಧೋರಣೆ ಎಂದರೆ ಪ್ರಾಚೀನ ಧರ್ಮಶಾಸ್ತ್ರಾದಿ ಪಠ್ಯಗಳಿಗೂ ಹಿಂದೂ ಸಮಾಜಕ್ಕೂ ನೇರವಾದ ಸಂಬಂಧವಿದೆ ಎಂಬುದು. ಈ ಕುರಿತು ಸ್ವಲ್ಪ ಗಂಭೀರವಾಗಿ ಆಲೋಚಿಸೋಣ. ನಾವು ಬೆಳೆಯುತ್ತಾ ಸಮಾಜದಲ್ಲಿ ಬೇರೆಯವರೊಂದಿಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಯುತ್ತೇವೆ. ಅಂದರೆ ಹಿರಿಯರು, ಕಿರಿಯರು, ಮಹಿಳೆಯರು ಮುಂತಾದವರೊಂದಿಗೆ ಹೇಗೆ ವ್ಯವಹರಿಸಬೇಕು ಇತ್ಯಾದಿಗಳು ಈ ಕಲಿಕೆಯ ಭಾಗವಾಗಿರುತ್ತವೆ. ಇಲ್ಲಿ ಯಾರು ಬೇರೆಯವರು ಮತ್ತು ಅವರೊಂದಿಗೆ ಬದುಕುವ ರೀತಿ ಯಾವುದು ಎಂಬ ಎರಡು ಅಂಶಗಳ ಕಲಿಕೆ ಇದೆ.[5] ನಮ್ಮ ಅನುಭವದಲ್ಲಿ ಇರುವಂತೆ ಸಮಾಜದಲ್ಲಿ ಎಲ್ಲರ ಬದುಕುವ ಕ್ರಮವೂ ಒಂದೇ ರೀತಿಯದ್ದಾಗಿರುವುದಿಲ್ಲ. ಅದನ್ನು ಕಲಿಯುವ ಮತ್ತು ಕಲಿಸುವ ವಿಭಿನ್ನ ಕ್ರಮವನ್ನು ರೂಢಿಸಿಕೊಂಡ ವಿಭಿನ್ನ ಗುಂಪುಗಳು ಸಮಾಜದಲ್ಲಿ ಇರುತ್ತವೆ. ಬದುಕುವ ರೀತಿಯಲ್ಲಿ ವೈವಿಧ್ಯತೆ ಇದ್ದರೂ ಅನೇಕ ಸಾಮ್ಯತೆಗಳೂ ಇರಬಹುದು. ಉದಾಹರಣೆಗೆ ಶಿವಪೂಜಕ ವಿಷ್ಣುಪೂಜಕ ಎಂಬ ವೈವಿಧ್ಯವಿದ್ದರೂ ಪೂಜೆ ಎಂಬ ಸಾಮ್ಯತೆಯೂ ಇದೆ. ಭಾರತೀಯ ಸಂಸ್ಕೃತಿಯನ್ನು ಈ ಹಿನ್ನೆಲೆಯಲ್ಲಿ ನೋಡಿದಲ್ಲಿ, ಬದುಕುವ ವಿವಿಧ ರೀತಿಯನ್ನು ರೂಢಿಸಿಕೊಂಡಿರುವ ಅನೇಕ ಗುಂಪುಗಳು ಈ ಸಮಾಜದಲ್ಲಿ ಇವೆ. ಅವುಗಳನ್ನು ಜಾತಿಗಳೆಂದು ಗುರುತಿಸಲಾಗುತ್ತದೆ.
ಹೀಗೆ ವೈವಿಧ್ಯಪೂರ್ಣವಾದ ಬದುಕುವ ರೀತಿಯನ್ನು ಹೊಂದಿರುವ ಭಾರತದಲ್ಲಿನ ಸಂಸ್ಕೃತಿಯನ್ನು ಹೇಗೆ ವಿವರಿಸಬೇಕು ಎಂಬ ಪ್ರಶ್ನೆ ಬಂದಾಗ, ಅದು ಇರುವ ರೀತಿಯನ್ನು ಅರಿತು ಅದಕ್ಕನುಗುಣವಾಗಿ ವಿವರಿಸುವುದು ಒಂದು ಕ್ರಮವಾದರೆ, ಒಂದು ಸಮಾಜ ಇರಬೇಕಾದ ರೀತಿಯನ್ನು ಯಾರೋ ಕೆಲವರು ರೂಪಿಸಿ ಅದರಂತೆ ಸಮಾಜವನ್ನು ಕಟ್ಟಿದ್ದಾರೆ ಎಂದು ವಿವರಿಸುವುದು ಇನ್ನೊಂದು ಕ್ರಮ. ಅಂದರೆ ಒಂದು ಹೊಸ ಮನೆಯನ್ನು ಕಟ್ಟುವಾಗ ಈಗಾಗಲೇ ಇರುವ ಕೆಲವು ಮನೆಗಳನ್ನು ನೋಡಿ ಅದನ್ನು ಅನುಕರಿಸಿ ಮನೆಯನ್ನು ಕಟ್ಟುವುದು ಒಂದು ಕ್ರಮವಾದರೆ, ಮೊದಲೇ ಮನೆಯ ಬಗ್ಗೆ ಮೂಲ ಯೋಜನೆಯನ್ನು ರೂಪಿಸಿ ಆ ಯೋಜನೆಗೆ ಅನುಸಾರವಾಗಿ ಮನೆಯನ್ನು ಕಟ್ಟುವುದು ಇನ್ನೊಂದು ಕ್ರಮ. ಎರಡನೆಯ ಕ್ರಮದಲ್ಲಿ ಕಟ್ಟುವ ಮನೆಯಲ್ಲಿ ಬದಲಾವಣೆಯನ್ನು ಮಾಡಬೇಕಾದರೆ ಮೊದಲು ಮೂಲ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಕಳೆದು ಮುನ್ನೂರು ವರ್ಷಗಳ ಚರ್ಚೆಗಳನ್ನು ಗಮನಿಸಿದಲ್ಲಿ ಹಿಂದೂ ಸಮಾಜವನ್ನು ವಿವರಿಸುವ ಸಂದರ್ಭಗಳು ಬಂದಾಗಲೆಲ್ಲಾ ಸಾಮಾನ್ಯವಾಗಿ ಈ ಎರಡನೆಯ ಕ್ರಮ ಮುನ್ನೆಲೆಗೆ ಬರುತ್ತದೆ. ಅಂದರೆ ಹಿಂದೂ ಸಮಾಜವು ಹೇಗಿರಬೇಕು ಎಂಬುದನ್ನು ಕೆಲವರು ಆಲೋಚಿಸಿ ಯೋಜನೆಯನ್ನು ರೂಪಿಸಿದ್ದಾರೆ. ಆ ಯೋಜನೆಯನ್ನು ಪಠ್ಯಗಳಲ್ಲಿ ಬರೆದಿದ್ದಾರೆ. ಆ ಪಠ್ಯಕ್ಕನುಗುಣವಾಗಿ ಸಮಾಜವನ್ನು ಕಟ್ಟುವ ಯತ್ನವು ಶತಮಾನಗಳ ಕಾಲ ನಡೆದಿದೆ ಮತ್ತು ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಆದರೆ ಇಂದು ನಾವು ನೋಡುವ ಸಮಾಜ ಸಂಪೂರ್ಣವಾಗಿ ಆ ಯೋಜನೆಯಂತೆ ಇಲ್ಲದಿರುವುದು, ಕಾಲಕ್ರಮೇಣ ಈ ವ್ಯವಸ್ಥೆಯಲ್ಲಿ ಉಂಟಾದ ಶಿಥಿಲತೆಯಿಂದಾಗಿದೆ. ಹಾಗಾಗಿ ಇಂದಿನ ಸಮಾಜವನ್ನು ಅರಿಯಲು ಮೂಲ ಯೋಜನೆಯೊಂದಿಗೆ ಹೋಲಿಸಿ ಅದರಲ್ಲಿ ಉಂಟಾದ ವ್ಯತ್ಯಾಸಗಳನ್ನು ಗುರುತಿಸಬೇಕಾಗುತ್ತದೆ. ಅಲ್ಲದೇ ಇಂದಿನ ಹಿಂದೂ ಸಮಾಜದಲ್ಲಿ ಬದಲಾವಣೆಯಾಗಬೇಕು ಎಂದಾದರೂ, ಹೊಸ ’ಧರ್ಮಶಾಸ್ತ್ರ’ಗಳನ್ನು ಬರೆಯುವುದರ ಮೂಲಕ, ಮೂಲ ಯೋಜನೆಯಲ್ಲಿಯೇ ಬದಲಾವಣೆಯನ್ನು ತರುವುದು ಒಂದು ಕ್ರಮವಾದರೆ, ಮೂಲ ಯೋಜನೆಯನ್ನು ಧಿಕ್ಕರಿಸಿ ಹೊಸ ರೀತಿಯಲ್ಲಿ ಬದುಕುವುದು ಇನ್ನೊಂದು ಕ್ರಮ. ಇನ್ನು ಮೂಲಯೋಜನೆಯು ದೋಷರಹಿತವಾದದ್ದು ಎಂದು ಭಾವಿಸಿಕೊಂಡು ಮೂಲ ಯೋಜನೆಗೆ ಹಿಂತಿರುಗುವ ಮೂಲಕ ಕಾಲಕ್ರಮದಲ್ಲಿ ಉಂಟಾದ ಭ್ರಷ್ಟತೆಯನ್ನು ಪರಿಹರಿಸಿಕೊಳ್ಳುವುದು ಮೂರನೆಯ ದಾರಿ. ಹೀಗೆ ಪಠ್ಯಕ್ಕೂ ಸಮಾಜಕ್ಕೂ ನೇರವಾದ ಸಂಬಂಧವನ್ನು ಕಲ್ಪಿಸಿಕೊಂಡು ಈ ಮೂರು ರೀತಿಯಲ್ಲಿ ’ಹಿಂದೂ ರಿಲಿಜನ್’ನ ಬಗ್ಗೆ ಸಾಮಾನ್ಯವಾಗಿ ಚರ್ಚಿಸಲಾಗುತ್ತದೆ.
ಈ ಪುಸ್ತಕದ ಚರ್ಚೆಯನ್ನು ಗಮನಿಸಿದಲ್ಲಿ ಹಿಂದೂ ಸಮಾಜವು ಪಠ್ಯಗಳ ಆಧಾರದಲ್ಲಿ ಕಟ್ಟಲ್ಪಟ್ಟಿದೆ ಎಂಬ ಧೋರಣೆ ಇದ್ದು, ಪಠ್ಯಗಳಲ್ಲಿ ಹೇಳಿರುವುದನ್ನು ತಪ್ಪಾಗಿ ಅಂದರೆ ಹುಟ್ಟಿನಿಂದ ವರ್ಣಗಳು ಎಂದು ತಿಳಿದುಕೊಂಡಿರುವುದರಿಂದ ಅನೇಕ ಸಮಸ್ಯೆಗಳು ಸಮಾಜದಲ್ಲಿ ಉಂಟಾಗಿವೆ ಮತ್ತು ಅದನ್ನು ಪರಿಹರಿಸಲು ಪಠ್ಯಗಳಲ್ಲಿ ಹೇಳಿರುವುದನ್ನು ಸರಿಯಾಗಿ ತಿಳಿದುಕೊಳ್ಳಬೇಕು ಹಾಗೂ ಅದಕ್ಕನುಗುಣವಾಗಿ ಸಮಾಜವನ್ನು ಪುನಃ ಪರಿಷ್ಕರಿಸಬೇಕು ಎಂಬ ಆಲೋಚನಾಕ್ರಮವು ಕಾಣುತ್ತದೆ. ಆದರೆ ಕೆಲವು ವ್ಯಕ್ತಿಗಳು ಮೂಲ ಯೋಜನೆಯೊಂದನ್ನು ರೂಪಿಸಿ ಹಿಂದೂ ಸಮಾಜವನ್ನು ಕಟ್ಟಿದ್ದಾರೆ ಎಂಬ ನಿರ್ಣಯ ಯಾಕೆ ಸರಿಯಾದದ್ದು ಎಂಬ ಮೂಲಭೂತ ಪ್ರಶ್ನೆಗೆ ಇಲ್ಲಿ ಉತ್ತರ ದೊರಕುವುದಿಲ್ಲ. ಅಲ್ಲದೇ ಹಿಂದೆ ಮನೆ ಕಟ್ಟುವ ಉದಾಹರಣೆಯಲ್ಲಿ ತೋರಿಸಿದಂತೆ ಹೊಸ ಮನೆಯನ್ನು ಕಟ್ಟಲು ಯಾವುದೇ ಮೂಲ ಮಾದರಿಯನ್ನು ರಚಿಸಿಕೊಳ್ಳದೇ, ಹಿಂದಿನ ಮನೆ ಕಟ್ಟುವ ಕ್ರಿಯೆಗಳೇ ಮುಂದಿನ ಹೊಸ ಮನೆ ಕಟ್ಟುವ ಕ್ರಿಯೆಯನ್ನು ನಿರ್ದೇಶಿಸಬಲ್ಲದು ಎಂಬ ಸಾಧ್ಯತೆಯೂ ಇದೆ. ಈ ಸಾಧ್ಯತೆಯೂ ಇದೆ ಎಂದಾದಲ್ಲಿ ಆಗ ಮೂಲ ಮಾದರಿಯನ್ನು ನಿರ್ಮಿಸಿಯೇ ಸಮಾಜವನ್ನು ಕಟ್ಟಲಾಗಿದೆ ಎಂಬ ಧೋರಣೆ ಎಷ್ಟರಮಟ್ಟಿಗೆ ಸರಿಯಾದದ್ದು ಎಂಬ ಪ್ರಶ್ನೆ ಹುಟ್ಟುತ್ತದೆ. ಅಲ್ಲದೇ ಮೂಲ ಮಾದರಿಯನ್ನು ರಚಿಸಿಕೊಳ್ಳದೇ ಭಾರತೀಯ ಸಂಸ್ಕೃತಿಯು ಬೆಳೆದು ಬಂದಿದೆ ಎಂಬ ಇನ್ನೊಂದು ಸಾಧ್ಯತೆಯೇ ನಿಜವಾದದ್ದು ಆಗಿದ್ದಲ್ಲಿ ಆಗ ಈ ಪುಸ್ತಕದ ಚರ್ಚೆಯೇ ಅಪ್ರಸ್ತುತವಾಗುತ್ತದೆ. ಆದರೆ ಪುಸ್ತಕದಲ್ಲಿ ಈ ಪ್ರಶ್ನೆಯನ್ನೇ ಕೇಳಿಕೊಳ್ಳದೇ ಹಿಂದೂಸಮಾಜವು ಒಂದು ಮೂಲ ಮಾದರಿಯ ಮೇಲೆ ನಿರ್ಮಿತವಾಗಿದೆ, ಆ ಮಾದರಿಯನ್ನು ಮನು ಇತ್ಯಾದಿ ಕೆಲವು ಚಿಂತಕರು ರಚಿಸಿದ್ದಾರೆ ಎಂಬ ಸಿದ್ಧಮಾದರಿಯನ್ನೇ ಸರಿ ಎಂದು ಒಪ್ಪಿ ಅದರ ಮೇಲೆ ಗುಣಕರ್ಮವಾದದ ಚರ್ಚೆಯನ್ನು ಕಟ್ಟಲಾಗಿದೆ.
ಕೆಲವು ಗೋಜಲುಗಳು – ಕಥೆಗಳು ಮತ್ತು historical truth
ಅನೇಕ ಜಾತಿಗಳು ತಮ್ಮ ಉಗಮ ವಿಕಾಸ ಇತ್ಯಾದಿಗಳ ಬಗ್ಗೆ ಮತ್ತು ಇತರ ಜಾತಿಗಳ ಬಗ್ಗೆ ಕಥೆಗಳನ್ನು ಹೊಂದಿರುವುದು ನಮ್ಮ ಅನುಭವದಲ್ಲಿ ಕಂಡುಬರುತ್ತದೆ. ಈ ಕಥೆಗಳನ್ನು ಅತ್ಯಂತ ಸಹಜವಾಗಿ ಆಯಾ ಜಾತಿಗಳು ಹೇಳುತ್ತಿರುತ್ತವೆ. ಈ ಪುಸ್ತಕದಲ್ಲಿ ಉಲ್ಲೇಖಿಸಿರುವ ರಾಮನು ಅಂಬಿಗರನ್ನು ಬ್ರಾಹ್ಮಣರನ್ನಾಗಿಸಿದ ಕಥೆ, ಪರಶುರಾಮನು ಅಂಬಿಗರನ್ನು ನಂಬೂದಿರಿ ಬ್ರಾಹ್ಮಣರನ್ನಾಗಿಸಿದ ಕಥೆ ಮುಂತಾದವುಗಳು ಈ ರೀತಿಯ ಕಥೆಗಳಾಗಿವೆ. ಪ್ರಸಕ್ತ ಪುಸ್ತಕದಲ್ಲಿ ಎದ್ದುಕಾಣುವ ಅಂಶವೆಂದರೆ ಈ ರೀತಿಯ ಕಥೆಗಳನ್ನು ಇಲ್ಲಿ historical truth ಎಂದು ಚರ್ಚಿಸಲಾಗಿದೆ. ಆದರೆ ಅವು historical truth ಆಗಿವೆಯೇ ಅಥವಾ ಕೇವಲ ಕಥೆಗಳೇ? ಎಲ್ಲಾ ಕಥೆಗಳು historical truth ಎಂದಾದಲ್ಲಿ, ಜಗತ್ತಿನಲ್ಲಿರುವ ಕಥೆಗಳೆಲ್ಲವೂ historical truth ಆಗಿವೆಯೇ? ಮತ್ತು ಕಥೆಗಳೆಲ್ಲವೂ ಹಿಸ್ಟರಿ ಎಂದಾದಲ್ಲಿ ಕಥೆಗೂ ಹಿಸ್ಟರಿಗೂ ನಡುವೆ ಯಾವುದೇ ವ್ಯತ್ಯಾಸವಿಲ್ಲವೇ ಇತ್ಯಾದಿ ಪ್ರಶ್ನೆಗಳು ಹುಟ್ಟುತ್ತವೆ. ಅಂದರೆ ಭಾರತದಲ್ಲಿ ವಿಭಿನ್ನ ಜಾತಿಗಳು ತಮ್ಮ ಬಗ್ಗೆ ಹಾಗು ಇತರರ ಬಗ್ಗೆ ಹೇಳುವ ಕಥೆಗಳಿಗೆ ಸಂಬಂಧಿಸಿದಂತೆ ಎರಡು ರೀತಿಯ ಪ್ರಶ್ನೆಗಳಿವೆ. ವಿಭಿನ್ನ ಜಾತಿಗಳು ಈ ರೀತಿಯ ಕಥೆಗಳನ್ನು ಯಾಕೆ ಹೇಳುತ್ತವೆ ಮತ್ತು ಆ ಜಾತಿಗಳು ಬದುಕುವ ಕ್ರಮಕ್ಕೂ ಈ ಕಥೆಗಳಿಗೂ ಏನು ಸಂಬಂಧ ಎಂಬುದು ಒಂದು ರೀತಿಯ ಪ್ರಶ್ನೆಯಾದರೆ, ಈ ಜಾತಿಗಳು ತಮ್ಮ ಜಾತಿಯ ಬಗ್ಗೆ ಹೇಳಿಕೊಳ್ಳುವ ಕಥೆಗಳನ್ನು ಹಿಸ್ಟರಿಯನ್ನಾಗಿಸುವ ಅಂಶ ಯಾವುದು ಎಂಬುದು ಇನ್ನೊಂದು ರೀತಿಯ ಪ್ರಶ್ನೆ. ಇಂತಹ ಕಥೆಗಳನ್ನು ಹಿಸ್ಟರಿಯನ್ನಾಗಿಸುವ ಕ್ರಮವನ್ನು ಹಿಸ್ಟರಿಯೋಗ್ರಫಿ ಎಂದು ಕರೆಯುತ್ತಾರೆ. ಆದರೆ ಅದರ ಪರಿಚಯವಿಲ್ಲದೇ ಕಥೆಗಳನ್ನು historical truth ಎಂಬಂತೆ ಇಲ್ಲಿ ಬಳಸಲಾಗಿದೆ. ಯಾವುದೋ ಒಂದು ಜಾತಿಯ ಜನ, ಇದು ನಮ್ಮ ಜಾತಿಯ ಕಥೆ ಎಂದು ಹೇಳಿದ ಮಾತ್ರಕ್ಕೆ ಅದು historical truth ಆಗಿರಬೇಕಾಗಿಲ್ಲ. ಅಲ್ಲದೇ, ಆ ಜಾತಿಯ ಜನ ಈ ಕಥೆಯನ್ನು ಹೇಳುವ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ ಎನ್ನುವುದನ್ನು ಸ್ಪಷ್ಟಗೊಳಿಸಿಕೊಳ್ಳದೇ, ಕಥೆಗಳನ್ನೇ ನೇರವಾಗಿ ಹಿಸ್ಟರಿ ಎಂದು ಬಳಸಿಕೊಳ್ಳುವುದು ಗಂಭೀರವಾದ ತೊಂದರೆಯನ್ನು ಉಂಟುಮಾಡುತ್ತದೆ.[6] ಆದರೆ ಈ ವ್ಯತ್ಯಾಸವನ್ನು ಮಾಡದೇ ಕಥೆಯನ್ನು ಬಳಸಿಕೊಂಡಿರುವುದರಿಂದ ಅನೇಕ ಗೊಂದಲಗಳಿಗೆ ಈ ಪುಸ್ತಕವು ಅವಕಾಶವನ್ನು ಮಾಡಿಕೊಡುತ್ತದೆ.
ಕೆಲವು ಗೋಜಲುಗಳು – ಗಂಭೀರವಲ್ಲದ ನಿಲುವುಗಳು
ಈ ಪುಸ್ತಕದ ಕೊನೆಯ ಭಾಗದಲ್ಲಿ ಭಾರತೀಯ ಸಮಾಜದ ಬಗ್ಗೆ ಒಪ್ಪಿಕೊಂಡಿರುವ ಅನೇಕ ನಿಲುವುಗಳು ಗಂಭೀರವಾದ ಆಲೋಚನೆಯಿಂದ ಬಂದಿರುವಂತೆ ಕಾಣುವುದಿಲ್ಲ. ಉದಾಹರಣೆಗೆ ಜಾತಿಭೇದವು ಸಮಾಜದ ಎಲ್ಲಾ ರೀತಿಯ ಅಭ್ಯುದಯವನ್ನು ಕುಂಠಿತಗೊಳಿಸುತ್ತದೆ ಎಂದು ಹೇಳುತ್ತಾರೆ. ಇದು ನಿಜವಾಗಿದ್ದಲ್ಲಿ ಹೇಗೆ ಅನೇಕ ಶತಮಾನಗಳ ಕಾಲ ಭಾರತವು ಸಂಪದ್ಭರಿತವಾಗಿರಲು ಸಾಧ್ಯ? ಜಾತಿಭೇದವು ಚಾರಿತ್ರಿಕವಾಗಿ ಆರ್ಥಿಕ ಅಭ್ಯುದಯವನ್ನು ಕುಂಠಿತಗೊಳಿಸಬೇಕಿತ್ತಲ್ಲವೇ?[7] ಇನ್ನು ಅಸ್ಪೃಶ್ಯತೆಯ ಕಾರಣದಿಂದ ಲಕ್ಷ ಲಕ್ಷ ಹಿಂದೂಗಳು ಮತಾಂತರವನ್ನು ಹೊಂದಿದರು, ವಿಧವಾ ವಿವಾಹವಿಲ್ಲದೇ ಇರುವುದರಿಂದ ಹಿಂದೂ ಸ್ತ್ರೀಯರು ಮುಸಲ್ಮಾನರನ್ನು ವಿವಾಹವಾದರು ಇತ್ಯಾದಿ ಮಾತುಗಳು ಗಂಭೀರವಾದ ಅಧ್ಯಯನದಿಂದ ದೊರಕಿದ ನಿರ್ಣಯವಾಗಿರದೇ[8] ಲೇಖಕರ ಅಭಿಪ್ರಾಯ ಮಾತ್ರವೇ ಆಗಿದೆ. ಇದೇ ರೀತಿ ಅಸ್ಪೃಶ್ಯರಿಗೆ ದೇವಸ್ಥಾನಗಳಿಗೆ ಪ್ರವೇಶವಿಲ್ಲದೇ ಇದ್ದುದ್ದರಿಂದ ಮತ್ತು ದೇವರನ್ನು ಕಾಣಬೇಕೆಂಬ ಮಾನಸಿಕ ಹಂಬಲದಿಂದಾಗಿ ಮುಸಲ್ಮಾನರ ಪೀರಗದ್ದಿಗೆ ಹೋಗುತ್ತಾರೆ ಎಂಬುದರ ಸತ್ಯತೆಯನ್ನೂ ನಿರ್ಣಯಿಸುವುದು ಸಾಧ್ಯವಿಲ್ಲ.[9] ಅದೇ ರೀತಿ ಪ್ರತಿಯೊಬ್ಬನಿಗೂ ತನಗೆ ಅನುಕೂಲವಾದ ರೀತಿಯಲ್ಲಿ ಕೆಲಸವನ್ನು ಮಾಡುವ ಅರ್ಹತೆಯನ್ನು ಗಳಿಸುವುದಕ್ಕೆ ಅವಕಾಶ ದೊರೆಯಬೇಕು, ಅದಕ್ಕಾಗಿ ವರ್ಣವ್ಯವಸ್ಥೆಯು ಕಣ್ಮರೆಯಾದರೂ ತೊಂದರೆ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಆದರೆ ಪುಸ್ತಕದಲ್ಲಿ ವಾದಿಸುವಂತೆ ವರ್ಣಗಳು ಗುಣಕರ್ಮಕ್ಕೆ ಸಂಬಂಧಿಸಿದವು ಎಂದಾದಲ್ಲಿ ವರ್ಣವ್ಯವಸ್ಥೆ ಕಣ್ಮರೆಯಾಗುವ ಆವಶ್ಯಕತೆಯಾದರೂ ಯಾಕೆ ತೋರುತ್ತಿದೆ ಎಂಬುದು ಸ್ಪಷ್ಟವಾಗುವುದಿಲ್ಲ. ಅಷ್ಟೇ ಅಲ್ಲದೇ ವರ್ಣವ್ಯವಸ್ಥೆಯು ಗುಣಕರ್ಮಾಧಾರಿತವಾಗಿದ್ದರೆ ಪ್ರತಿಯೊಬ್ಬನಿಗೂ ತನಗೆ ಬೇಕಾದ ಕೆಲಸವನ್ನು ಮಾಡುವ ಅವಕಾಶ ಏಕೆ ದೊರಕುವುದಿಲ್ಲ ಎನ್ನುವುದೂ ತಿಳಿಯುವುದಿಲ್ಲ. ಹಾಗೆ ನೋಡಿದರೆ ಅವರ ವಾದದಲ್ಲಿ ಗುಣಕರ್ಮ ಆಧಾರಿತವಾಗಿ ವರ್ಣಗಳು ಎಂದಾದಲ್ಲಿ ಇಂದು ಆ ವ್ಯವಸ್ಥೆ ಇಲ್ಲದಿರುವುದೋ ಅಥವಾ ಕಲುಷಿತಗೊಂಡಿರುವುದೋ ಕಾರಣವಾಗಿರಬೇಕಾಗುತ್ತದೆಯಲ್ಲವೇ? ಹಾಗಾಗಿ ಕೊನೆಗೂ ವರ್ಣವ್ಯವಸ್ಥೆ ಯಾಕೆ ಕಣ್ಮರೆಯಾಗಬೇಕು ಎಂಬುದು ಸ್ಪಷ್ಟವಾಗುವುದಿಲ್ಲ. ಹೀಗೆ ಕೆಲವು ಗೋಜಲುಗಳು ಈ ಪುಸ್ತಕದಲ್ಲಿ ಕಾಣುತ್ತವೆ.
ಸಾಂಪ್ರದಾಯಿಕ ಪಕ್ಷವೂ ಪಾಶ್ಚಾತ್ಯ ವಿವರಣೆಯೂ
ಈ ಸಾಂಪ್ರದಾಯಿಕ ಪುಸ್ತಕವನ್ನು ಬಿಟ್ಟು ಸ್ವಲ್ಪ ಹಿಂದಕ್ಕೆ ಹೋದಲ್ಲಿ, ಅನೇಕ ವರ್ಷಗಳ ಕಾಲ ಭಾರತದಲ್ಲಿದ್ದ ಅಬ್ಬೆ ಡ್ಯುಬುವಾ ಎಂಬ ಪ್ರೆಂಚ್ ಮಿಶನರಿಯ, ೧೮೦೬ರಲ್ಲಿ ಬರೆದು ೧೮೧೬ರಲ್ಲಿ ಆಂಗ್ಲಭಾಷೆಯಲ್ಲಿ ಮೊದಲು ಪ್ರಕಟವಾದ Hindu manners, Customs and Ceremonies[10] ಎಂಬ ಪುಸ್ತಕ ದೊರಕುತ್ತದೆ. ಹಿಂದೂಸಮಾಜದ ಬಗ್ಗೆ ತಿಳಿಯಲು ಈ ಪುಸ್ತಕವನ್ನು ಒಂದು ಅತ್ಯಂತ ಪ್ರಧಾನವಾದ ಆಕರ ಎಂದು ಪರಿಗಣಿಸಲಾಗಿತ್ತು. ಸಾಂಪ್ರದಾಯಿಕರು ಬರೆದ ಗ್ರಂಥದಲ್ಲಿ ಕಂಡುಬರುವಂತೆ ಅನೇಕ ಗೊಂದಲಗಳು ಈ ಪುಸ್ತಕದಲ್ಲಿಯೂ ಕಂಡುಬರುತ್ತದೆ. ಅದಕ್ಕೆ ಆ ಪುಸ್ತಕದಲ್ಲಿರುವ ವರ್ಣದ ಬಗೆಗಿನ ಚರ್ಚೆಯನ್ನೇ ಉದಾಹರಣೆಯಾಗಿ ಸ್ವೀಕರಿಸಬಹುದು.
ಈ ಪುಸ್ತಕದ ಆರಂಭದಲ್ಲಿ ಅಬ್ಬೆ ಡ್ಯುಬುವಾ ಹಿಂದೂಗಳನ್ನು ನಾಲ್ಕು casteಗಳಾಗಿ ವಿಂಗಡಿಸಬಹುದಾಗಿದ್ದು,[11] ಈ ನಾಲ್ಕರಲ್ಲಿ ಪುನಃ ಅನೇಕ ಉಪ ವಿಭಾಗಗಳಿದ್ದವು ಎಂದು ಹೇಳುತ್ತಾನೆ. ಮುಂದುವರೆದು “in southern India neither Kshatriyas nor Vaisyas are very numerous”[12] ಎಂದು ಬರೆಯುತ್ತಾನೆ. ಅಲ್ಲದೇ ಸಮಾಜದ ಹತ್ತರಲ್ಲಿ ಒಂಬತ್ತು ಭಾಗ ಜನರು ಶೂದ್ರರೇ ಆಗಿದ್ದರು ಎಂದು ಹೇಳುತ್ತಾನೆ. ಮುಂದೆ ಬ್ರಾಹ್ಮಣಾದಿ casteಗಳಲ್ಲಿ ಬ್ರಾಹ್ಮಣನು ಶ್ರೇಷ್ಠನಾಗಿದ್ದು ಕ್ಷತ್ರಿಯಾದಿಗಳು ಕ್ರಮೇಣ ಕೆಳಗಿನವರಾಗಿದ್ದಾರೆ ಎಂದು ಧರ್ಮಶಾಸ್ತ್ರಾದಿ ಪಠ್ಯದ ಆಧಾರದಿಂದ ನಿರೂಪಿಸಿ, ತದನಂತರ ವೈಶ್ಯರಿಗೆ ಹಿಂದೂ ಪಠ್ಯದಲ್ಲಿ ಮಾತ್ರ ಶೂದ್ರರಿಗಿಂತ ಮೇಲಿನ ಸ್ಥಾನವಿದೆಯೇ ಹೊರತು ಸಮಾಜದಲ್ಲಿ ವೈಶ್ಯರಿಗಿಂತ ಶೂದ್ರರೇ ಶ್ರೇಷ್ಠರಾಗಿದ್ದಾರೆ[13] ಎಂದು ಬರೆಯುತ್ತಾನೆ.
ಈ ಮೇಲಿನ ಅಬ್ಬೆ ಡ್ಯುಬುವಾನ ಮಾತುಗಳಿಂದ, ಧರ್ಮಶಾಸ್ತ್ರಾದಿ ಪ್ರಾಚೀನ ಪಠ್ಯಗಳು ಹಿಂದೂ ಸಮಾಜವನ್ನು ಅರಿಯಲು ಚೌಕಟ್ಟನ್ನು ಒದಗಿಸುತ್ತವೆಯಾದರೂ, ಆ ಪ್ರಾಚೀನ ಪಠ್ಯಗಳಲ್ಲಿ ಹೇಳಿರುವಂತೆ ಹಿಂದೂ ಸಮಾಜವಿಲ್ಲ ಎಂಬ ಅಭಿಪ್ರಾಯವು ತೋರುತ್ತದೆ. ಹಾಗಾಗಿಯೇ ಪಠ್ಯಗಳ ಪ್ರಕಾರ ಹಿಂದೂ ಸಮಾಜ ಬ್ರಾಹ್ಮಣಾದಿಗಳಾಗಿ ವಿಂಗಡಿತವಾಗಿದ್ದರೂ, ಕ್ಷತ್ರಿಯರನ್ನು ಮತ್ತು ವೈಶ್ಯರನ್ನು ಗುರುತಿಸುವುದು ಸುಲಭವಿಲ್ಲ ಎಂಬ ಅಂಶ ಅವನ ಮಾತುಗಳಲ್ಲಿದೆ. ಅಲ್ಲದೇ ಪಠ್ಯದಲ್ಲಿ ಶೂದ್ರರಿಗಿಂತ ವೈಶ್ಯರು ಮೇಲಿನ ಸ್ತರದಲ್ಲಿ ಇದ್ದರೂ, ವಸ್ತುತಃ ಸಮಾಜದಲ್ಲಿ ಆ ರೀತಿ ಇಲ್ಲ ಎಂಬುದು ಕೂಡ ಅವನ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲದೆ ಪಠ್ಯದಲ್ಲಿ ಬ್ರಾಹ್ಮಣರು ಶ್ರೇಷ್ಠರು ಎಂದು ಹೇಳಿದ್ದರೂ, ಬ್ರಾಹ್ಮಣರ ಶ್ರೇಷ್ಠತೆಯನ್ನೂ ಎಲ್ಲರೂ ಒಪ್ಪಿಕೊಂಡಿಲ್ಲ ಎಂದು ಹೇಳುತ್ತಾನೆ. ಅವನ ಮಾತನ್ನೇ ಉಲ್ಲೇಖಿಸುವುದಾದರೆ – “Even the Brahmins do not hold the highest social rank undisputed. The Panchalas, or five classes of artisans already mentioned, refuse, in some district to acknowledge Brahmin predominance”[14]
ಇದೇ ರೀತಿ ಪಠ್ಯದಲ್ಲಿ ಹೇಳಿರುವುದಕ್ಕೂ ಸಮಾಜ ಇರುವ ರೀತಿಗೂ ವ್ಯತ್ಯಾಸವಿದೆ ಎಂಬುದನ್ನು ಉಲ್ಲೇಖಿಸುತ್ತಾ ಬ್ರಾಹ್ಮಣಾದಿ ಮೂರು ಗುಂಪುಗಳನ್ನು ಅವರು ಧರಿಸುವ ಜನಿವಾರದಿಂದ ಗುರುತಿಸಬಹುದು ಎಂದು ಹೇಳಿ, “but this cord is also worn by the Jains and even by the Panchalas, or five castes of artisans, so one is apt to be deceived by it”[15] ಎಂದು ಉಲ್ಲೇಖಿಸುತ್ತಾನೆ. ಅಲ್ಲದೇ ಪಠ್ಯದಲ್ಲಿ ಕಂಡುಬರುವ ಬ್ರಾಹ್ಮಣಾದಿ ವಿಂಗಡಣೆಗಳಿಗಿಂತ, ಎಡಗೈ ಮತ್ತು ಬಲಗೈ ಎಂಬ ವಿಂಗಡಣೆ ಸಮಾಜದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ ಎಂದು ಹೇಳಿ, ಆದರೆ ಹಿಂದೂ ಸಮಾಜವನ್ನು ಅರಿಯಲು ಈ ಎಡಗೈ-ಬಲಗೈ ವಿಂಗಡನೆ ಹೆಚ್ಚು ಉಪಯುಕ್ತವಲ್ಲ ಎಂದು ನಿರ್ಣಯಿಸಿ ಅದಕ್ಕೆ ಈ ಕಾರಣವನ್ನು ಕೊಡುತ್ತಾನೆ – “this appears to be but a modern invention, since it is not mentioned in any of the ancient books of the country”[16]. ಅಂದರೆ ಎಡಗೈ-ಬಲಗೈ ವಿಂಗಡಣೆ ಸಮಾಜದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದರೂ ಅದು ಪಠ್ಯದಲ್ಲಿ ಇಲ್ಲದೇ ಇರುವುದರಿಂದ ಸಮಾಜದ ಬಗ್ಗೆ ಅರಿಯಲು ಉಪಯುಕ್ತವಲ್ಲ ಎಂಬುದು ಅವನ ಅಭಿಪ್ರಾಯವಾಗಿದೆ. ಅಲ್ಲದೇ ಬ್ರಾಹ್ಮಣಾದಿ ವಿಭಾಗವನ್ನು ಸಮಾಜದಲ್ಲಿ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಿಲ್ಲದಿದ್ದರೂ ಅದು ಪಠ್ಯದಲ್ಲಿ ಇರುವುದರಿಂದ ಆ ಕ್ರಮದ ಮೂಲಕವೇ ಸಮಾಜವನ್ನು ಅರಿಯಬೇಕು ಎಂಬ ನಿಲುವು ಕೂಡ ಅವನ ಮಾತುಗಳಲ್ಲಿ ಕಾಣುತ್ತದೆ. ಅಲ್ಲದೇ ಇನ್ನೂ ಮುಂದುವರೆದು “I do not believe that any idea of this baneful institution, as it exists at the present day, ever entered the heads of those wise lawgivers…”.[17] ಎಂದು ಹೇಳುತ್ತಾನೆ. ಅಂದರೆ ಸಮಾಜದಲ್ಲಿ ಕಾಣುತ್ತಿರುವುದಕ್ಕೂ ಪಠ್ಯಗಳಲ್ಲಿ ಇರುವುದಕ್ಕೂ ಸ್ಪಷ್ಟವಾದ ಸಂಬಂಧ ಅವನಿಗೆ ಕಾಣುತ್ತಿಲ್ಲ. ಹೀಗೆ ನೇರವಾದ ಸಂಬಂಧವು ಕಾಣದಿದ್ದರೂ ಭಾರತೀಯ ಸಮಾಜವು ವಾಸ್ತವವಾಗಿ ಹೇಗಿದೆಯೋ ಹಾಗೆ ಅರಿತುಕೊಳ್ಳುವ ಯತ್ನವನ್ನು ಮಾಡದೇ, ಭಾರತೀಯ ಸಮಾಜದ ಸ್ವರೂಪವನ್ನು ಅರಿಯಲು ಪಠ್ಯವೇ ನಿರ್ಣಾಯಕವಾಗಿದೆ ಎಂಬ ನಿಲುವು ಅಬ್ಬೆ ಡ್ಯುಬುವಾಗೆ ಬಲವಾಗಿದೆ. ಅಂದರೆ ಹಿಂದೆ ಚರ್ಚಿಸಿದಂತೆ ’ಹಿಂದೂಸಮಾಜ’ವನ್ನು ಪಠ್ಯದ ಆಧಾರದ ಮೇಲೆ ಕಟ್ಟಲಾಗಿದೆ ಮತ್ತು ಸಮಾಜದಲ್ಲಿ ಇಂದು ಕಾಣುವ ವ್ಯತ್ಯಾಸಗಳನ್ನು ಮೂಲ ಯೋಜನೆಗೆ (ಪಠ್ಯಗಳಿಗೆ) ಹೋಲಿಸಿ ಅರ್ಥೈಸಿಕೊಳ್ಳಬೇಕಾಗುತ್ತದೆ ಎಂಬ ಧೋರಣೆ ಇಲ್ಲದೇ ಮೇಲಿನ ರೀತಿಯ ಚರ್ಚೆ ಸಾಧ್ಯವಿಲ್ಲ.
ಪಾಶ್ಚಾತ್ಯ ನಿರೂಪಣೆಯ ಪುನರುತ್ಪಾದನೆ
ಈ ಉದಾಹರಣೆಯೊಂದಿಗೆ ಭಾರತ ಚಾತುರ್ವರ್ಣ್ಯ ಸಮೀಕ್ಷಾ ಗ್ರಂಥದ ಚರ್ಚೆಯನ್ನು ಹೋಲಿಸಿದಲ್ಲಿ ಪಠ್ಯಕ್ಕೂ ಸಮಾಜಕ್ಕೂ ಇರುವ ಸಂಬಂಧದ ಕುರಿತು ಇರುವ ಮೂಲಭೂತ ಧೋರಣೆಯಲ್ಲಿ ಭಾರತ ಚಾತುರ್ವರ್ಣ್ಯ ಸಮೀಕ್ಷಾ ಗ್ರಂಥದ ಲೇಖಕರಿಗೂ, ಕ್ರಿಶ್ಚಿಯನ್ ಮಿಶನರಿಯಾಗಿ ಭಾರತಕ್ಕೆ ಬಂದ ಅಬ್ಬೆ ಡ್ಯುಬುವಾನಿಗೂ ಮತ್ತು ಈ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿರುವ ಮೈಖಲ್ ಅಕ್ತರ್ ರವರ ವಿವರಣೆಗಳಿಗೂ ನೇರವಾದ ಸಂಬಂಧವಿರುವುದಷ್ಟೇ ಅಲ್ಲ, ಆಲೋಚನೆಗಳಲ್ಲಿ ಮತ್ತು ಸೈದ್ಧಾಂತಿಕ ಚೌಕಟ್ಟಿನಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಹಿಂದೆ ಚರ್ಚಿಸಿದಂತೆ ಸಮಾಜವು ಪಠ್ಯದಿಂದ ನಿರ್ದೇಶಿತವಾಗಿದೆ ಎಂಬ ಚೌಕಟ್ಟೇ ಈ ಗ್ರಂಥದ ಪ್ರಶ್ನೆಗಳ ಹುಟ್ಟಿಗೂ ಕಾರಣವಾಗಿದೆ. ಹಾಗಾದರೆ ಸಿದ್ಧ ಮಾದರಿಯ ನಿರೂಪಣೆಯಲ್ಲಿ ಸಮಸ್ಯೆ ಇದೆ, ಅದು ಸರಿಯಿಲ್ಲ, ಎಂದು ಚರ್ಚಿಸುವುದು ಸಂಸ್ಕೃತ ಜಗತ್ತಿನಲ್ಲಿ ಪ್ರಸಿದ್ಧವಾಗಿದ್ದರೂ ಮತ್ತು ಅದಕ್ಕಿಂತ ಭಿನ್ನವಾದ ಸಾಂಪ್ರದಾಯಿಕ ಪಕ್ಷವೊಂದಿದೆ ಎಂಬುದು ಆಗಾಗ ಹೇಳಲಾಗುತ್ತಿದ್ದರೂ, ನಿರ್ದಿಷ್ಟವಾಗಿ ಸಿದ್ಧ ಮಾದರಿಯ ನಿರೂಪಣೆಯಲ್ಲಿರುವ ಸಮಸ್ಯೆ ಏನು ಮತ್ತು ಅದಕ್ಕೆ ಪರ್ಯಾಯವೇನು ಎಂಬುದು ಈ ಪುಸ್ತಕದಿಂದ ನಮಗೆ ಸ್ಪಷ್ಟವಾಗುವುದಿಲ್ಲ. ಅಲ್ಲದೇ ಸಾಂಪ್ರದಾಯಿಕ ಮತವೊಂದಿದೆ ಎಂದು ಹೇಳಲಾಗುತ್ತಿದ್ದರೂ ಈ ಪುಸ್ತಕದಲ್ಲಿ ಆ ರೀತಿಯ ಯಾವುದೇ ಸಾಂಪ್ರದಾಯಿಕ ಮತವೂ ಕಾಣುವುದಿಲ್ಲ. ಈ ಪುಸ್ತಕದಲ್ಲಿ ಹೇಳಿರುವುದೇ ಸಾಂಪ್ರದಾಯಿಕ ಮತವಾದರೆ ಅದು ಸಿದ್ಧ ಮಾದರಿಯ ನಿರೂಪಣೆಗಳಿಗಿಂತ ಯಾವ ರೀತಿಯಲ್ಲಿಯೂ ಭಿನ್ನವಾಗಿಲ್ಲ.
ಇದು ನಮಗೆ ಇನ್ನೊಂದು ಅಂಶದೆಡೆಗೆ ಗಮನವನ್ನು ಸೆಳೆಯುತ್ತದೆ. ಕಳೆದು ಸುಮಾರು ೨೦೦ ಕ್ಕೂ ಹೆಚ್ಚು ವರ್ಷಗಳಿಂದ ಪಾಶ್ಚಾತ್ಯ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯನ್ನು ಕುರಿತು ಒಂದು ಕ್ರಮದಲ್ಲಿ ವಿವರಣೆಯನ್ನು ಕಟ್ಟಿದೆ. ಅದು ಪಾಶ್ಚಾತ್ಯ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯೊಂದಿಗೆ ಮುಖಾಮುಖಿಯಾದಾಗ ಭಾರತೀಯ ಸಂಸ್ಕೃತಿಯನ್ನು, ತನ್ನ ಸಾಂಸ್ಕೃತಿಕ ಅನುಭವದ ಹಿನ್ನೆಲೆಯಲ್ಲಿ ವಿವರಿಸಿದ ರೀತಿಯಾಗಿದೆ. ಆ ವಿವರಣೆಗಳೇ ಇಂದಿನ ಸಮಾಜ ವಿಜ್ಞಾನದ ಬುನಾದಿಯಾಗಿವೆ. ಈ ಬೌದ್ಧಿಕ ಚೌಕಟ್ಟಿನ ಮೂಲಕವೇ ಭಾರತೀಯ ಸಂಸ್ಕೃತಿಯ ಬಗೆಗಿನ ವಿವಿಧ ರೀತಿಯ ವಿವರಣೆಗಳು ಪುನರುತ್ಪಾದನೆಗೊಳ್ಳುತ್ತಿರುತ್ತವೆ. ಅದೇ ಚೌಕಟ್ಟು ಈ ಗ್ರಂಥದ ವಿವರಣೆಗಳನ್ನೂ ಪುನರುತ್ಪಾದಿಸುತ್ತಿರುವುದರಿಂದಲೇ, ಅಬ್ಬೆ ಡ್ಯುಬುವಾ ಹೇಳುತ್ತಿರುವುದಕ್ಕೂ ಈ ಪುಸ್ತಕದ ಲೇಖಕರು ಹೇಳುತ್ತಿರುವುದಕ್ಕೂ, ಹಾಗು ಪ್ರಾರಂಭದಲ್ಲಿ ಉಲ್ಲೇಖಿಸಿದ ಅಕ್ತರ್ ರವರ ಸಿದ್ಧಮಾದರಿಯ ವಿವರಣೆಗೂ ಸುಮಾರು ಎರಡು ಶತಮಾನಕ್ಕೂ ಹೆಚ್ಚು ಕಾಲ ನಿರಂತರ ಮುಂದುವರಿಕೆಯು ಕಾಣುತ್ತದೆ. ಅಂದರೆ ಈ ಪುಸ್ತಕದಲ್ಲಿರುವ ವಾದವೂ ಸಿದ್ಧ ಮಾದರಿಗಿಂತ ಮೂಲಭೂತವಾಗಿ ಭಿನ್ನವಾಗೇನೂ ಇಲ್ಲ.
ಇದುವರೆಗೆ ಚರ್ಚಿಸಿರುವ ವಿವರಗಳನ್ನು ಆಧರಿಸಿ ಆಲೋಚಿಸುವುದಾದರೆ ಅಬ್ಬೆ ಡ್ಯುಬಾವಾ ಅಥವಾ ಅಕ್ತರನ ತರಹದವರು ನೀಡುತ್ತಿರುವ ವಿವರಣೆಗಳು ಪಾಶ್ಚಾತ್ಯರು ತಮ್ಮ ಸಾಂಸ್ಕೃತಿಕ ಅನುಭವದ ಹಿನ್ನೆಲೆಯಲ್ಲಿ ಭಾರತದ ಸಂಸ್ಕೃತಿಯನ್ನು ಕುರಿತು ನೀಡಿದ ವಿವರಣೆಯಾಗಿವೆ ಎಂಬುದು ಇಂದು ನಮಗೆ ತಿಳಿದಿದೆ. ಈ ವಿವರಣೆಗಳಿಗೆ ಬೇಕಾದ ಚೌಕಟ್ಟು ಕ್ರಿಶ್ಚಿಯನ್ ಥಿಯಾಲಜಿಯಿಂದ ಬೆಳೆದು ಬಂದಿದ್ದು, ಅದು ಒಂದು ಸಂಸ್ಕೃತಿಯು ಇನ್ನೊಂದು ಸಂಸ್ಕೃತಿಯನ್ನು ಅನುಭವಿಸಿದ ರೀತಿಯೇ ಹೊರತು ಭಾರತೀಯ ಸಂಸ್ಕೃತಿಯ ಯಥಾರ್ಥ ನಿರೂಪಣೆಯಲ್ಲ ಹಾಗು ಈ ನಿರೂಪಣೆಯು ಶತಮಾನಗಳ ಕಾಲ ಯುರೋಪಿಯನ್ನರು ತಮ್ಮ ಸಂಸ್ಕೃತಿಯ ಬಗ್ಗೆ ಮತ್ತು ಆ ಹಿನ್ನೆಲೆಯಲ್ಲಿ ಇನ್ನೊಂದು ಸಂಸ್ಕೃತಿಯ ಬಗ್ಗೆ ನಡೆಸಿದ ಚಿಂತನೆಯ ಫಲವಾಗಿದೆ.[18] ಅಷ್ಟೇ ಅಲ್ಲ ಸಮಾಜವಿಜ್ಞಾನಗಳು ಈ ನಿರೂಪಣೆಗಳನ್ನೇ ಮುಂದುವರಿಸುತ್ತಿವೆ ಎನ್ನುವುದು ಕೂಡ ಇಂದು ಬೌದ್ಧಿಕವಲಯದಲ್ಲಿ ಚರ್ಚಿತ ವಿಷಯವಾಗಿದೆ.[19] ಆದರೆ ಇಂದು ಚಾಲ್ತಿಯಲ್ಲಿರುವ ಚರ್ಚೆಗಳಲ್ಲಿ ಸಂಸ್ಕೃತ ಪರಂಪರೆ ಈ ರೀತಿ ಯುರೋಪಿನ ಪ್ರಭಾವಕ್ಕೆ ಒಳಗಾಗಿಲ್ಲ ಹಾಗು ಈ ಪರಂಪರೆಯು ಸಮಾಜ ವಿಜ್ಞಾನಗಳ ನಿರೂಪಣೆಗಿಂತ ಭಿನ್ನವಾದ ಸಾಂಪ್ರದಾಯಿಕ ನಿರೂಪಣೆಯೊಂದನ್ನು ಕೊಡುತ್ತದೆ ಎಂಬ ಪ್ರಬಲವಾದ ವಾದವೊಂದಿದೆ. ಈ ವಾದವು ಸತ್ಯವೇ ಆಗಿದ್ದಲ್ಲಿ ನಾವು ಸಿದ್ಧಮಾದರಿಗಿಂತ ಭಿನ್ನವಾದ ಸಾಂಪ್ರದಾಯಿಕ ಮತವೊಂದನ್ನು ನಿರೀಕ್ಷಿಸುವುದು ಅತ್ಯಂತ ತಾರ್ಕಿಕವಾಗುತ್ತದೆ. ಆದರೆ ಪ್ರಸಕ್ತ ಪುಸ್ತಕವನ್ನು ಆಧರಿಸಿ ಸಾಂಪ್ರದಾಯಿಕ ಮತದ ಕುರಿತು ಈವರೆಗಿನ ಚರ್ಚೆಗಳಲ್ಲಿ ನಾವು ಗುರುತಿಸಿಕೊಂಡಂತೆ ಸಾಂಪ್ರದಾಯಿಕ ಮತ ಮತ್ತು ಸಿದ್ಧ ಮಾದರಿಗಳ ನಡುವೆ ಯಾವುದೇ ವ್ಯತ್ಯಾಸವೂ ಕಾಣಲಿಲ್ಲ, ಅಲ್ಲದೇ ಈ ಎರಡೂ ದಾರಿಗಳು ಪರಸ್ಪರ ಅತ್ಯಂತ ಭಿನ್ನವಾಗಿಲ್ಲ, ಬದಲಿಗೆ ಯುರೋಪಿಯನ್ ಅನುಭವದ ಮುಂದುವರಿಕೆಯೇ ಆಗಿವೆ ಎಂಬುದು ಕಾಣುತ್ತದೆ. ಹಾಗಾಗಿ ಜಾತಿವ್ಯವಸ್ಥೆ ಅಥವಾ ವರ್ಣಗಳ ಕುರಿತ ಚರ್ಚೆಗಳ ಸಂದರ್ಭದಲ್ಲಿ ಸಾಂಪ್ರದಾಯಿಕ ಮತವೊಂದರ ಅಸ್ತಿತ್ವವು ಸಂಸ್ಕೃತ ಪರಂಪರೆಯಲ್ಲಿದೆ ಎನ್ನುವುದು ಪ್ರಶ್ನಾರ್ಹವಾಗಿಯೇ ಉಳಿದು ಬಿಡುತ್ತದೆ.
ಈಗಾಗಲೇ ನಾವು ಉಲ್ಲೇಖಿಸಿರುವ ಸಂಶೋಧನೆಗಳ ಅನ್ವಯ, ಸಮಾಜ ವಿಜ್ಞಾನಗಳ ಇಂದಿನ ಜಾತಿವ್ಯವಸ್ಥೆಯ ಕುರಿತ ಉಪಲಬ್ಧ ನಿರೂಪಣೆಗಳು ಯುರೋಪಿನ ಅನುಭವವನ್ನೇ ತಿಳಿಸಿಕೊಡುತ್ತವೆಯೇ ಹೊರತು ಭಾರತದ ಕುರಿತು ಯಾವುದೇ ಜ್ಞಾನವನ್ನು ನೀಡುವುದಿಲ್ಲ ಎಂಬುದು ನಿಜವಾದಲ್ಲಿ ಉಳಿದ ಭಾರತೀಯರಂತೆ ಕನಿಷ್ಠತಮವಾಗಿ ಜಾತಿವ್ಯವಸ್ಥೆಯ ನಿರೂಪಣೆಗೆ ಸಂಬಂಧಪಟ್ಟಂತೆ ಸಂಸ್ಕೃತ ಪರಂಪರೆಯವರೂ ಕೂಡ ವಸಾಹತುಪ್ರಜ್ಞೆ (೧೬ನೇ ಅಡಿಟಿಪ್ಪಣಿಯನ್ನು ನೋಡಿ)ಯನ್ನು ಪುನರುತ್ಪಾದಿಸುತ್ತಿದ್ದಾರೆ. ಅಂದರೆ ಸಂಸ್ಕೃತ ಪರಂಪರೆಗಳು ವಸಾಹತುಶಾಹಿ ಅಥವಾ ಯುರೋಪಿನ ಪ್ರಭಾವಕ್ಕೆ ಸಿಲುಕಿಲ್ಲವೆಂಬ ಪ್ರಬಲವಾದ ನಂಬಿಕೆಯೊಂದು ಇಲ್ಲಿ ಪ್ರಶ್ನಾರ್ಹವಾಗಿ ಬಿಡುತ್ತದೆ. ಅಲ್ಲದೇ ಯುರೋಪಿನ ನಿರೂಪಣೆಗಳಿಗೂ ನಮ್ಮ ಅನುಭವಗಳಿಗೂ ಸಂಬಂಧವಿಲ್ಲ ಎಂಬುದನ್ನು ತಿಳಿಯದೇ, ಯುರೋಪಿನ ನಿರೂಪಣೆಯ ಚೌಕಟ್ಟೇ ಸರಿಯಾದದ್ದು ಎಂದು ಭಾವಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ವಿವರಿಸಹೊರಟಾಗ ಈ ಪುಸ್ತಕದಲ್ಲಿ ಇರುವಂತೆ ಅನೇಕ ಗೊಂದಲಗಳು ಹುಟ್ಟುತ್ತವೆ. ಈ ಪುಸ್ತಕದಲ್ಲಿ ಯುರೋಪಿಯನ್ನರ ವಿವರಣೆಗಳನ್ನು ನಮ್ಮ ಬಗೆಗಿನ ಯಥಾರ್ಥವಾದ ವಿವರಣೆಗಳು ಎಂದು ಭಾವಿಸಿಕೊಳ್ಳಲಾಗಿದೆ. ಆದರೆ ಅದಕ್ಕೂ ಮತ್ತು ನಮ್ಮವರು ಬಾಳಿದ ರೀತಿಗೂ ನಡುವೆ ಸಂಬಂಧವಿರದೇ ಇರುವುದರಿಂದ ವಿವರಣೆಗೂ ಅನುಭವಕ್ಕೂ ನಡುವೆ ಕಂದಕವುಂಟಾಗಿ ಅನೇಕ ಗೊಂದಲಗಳಿಗೆ ಈ ಪುಸ್ತಕವು ಅವಕಾಶವನ್ನಿತ್ತಿದೆ.
ಉಪಸಂಹಾರ
ಇದೇನೇ ಇದ್ದರೂ ಭಾರತದ ಬಗ್ಗೆ ಪಾಶ್ಚ್ಯಾತ್ಯರ ವಿವರಣೆಗಳನ್ನು ಕುರಿತು ಭಾರತೀಯ ಸಾಂಪ್ರದಾಯಿಕ ವಿದ್ವಾಂಸರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು ಎಂಬುದನ್ನು ಅರಿಯಲು ಇದು ಒಂದು ಉಪಯುಕ್ತ ಗ್ರಂಥವಾಗಿದೆ ಎಂಬುದು ನಿಸ್ಸಂದಿಗ್ಧ. ಇದು ಇಂದಿನ ಜನರ ಬುದ್ಧಿವಂತಿಕೆ ಚರ್ಚೆಯೋ ಅಥವಾ ಹಿಂದಿನವರು ದಡ್ಡರು ಎಂದು ತೋರಿಸುವ ಯತ್ನವೋ ಅಲ್ಲ. ತಮ್ಮ ಕಾಲಘಟ್ಟದಲ್ಲಿ ಉಪಲಬ್ಧವಿದ್ದ ಬೌದ್ಧಿಕ ಪರಿಕರಗಳನ್ನು ಬಳಸಿಕೊಂಡು ಭಾರತೀಯ ಸಮಾಜವನ್ನು ಕುರಿತು ಪ್ರಚಲಿತದಲ್ಲಿದ್ದ ವಾದಕ್ಕೆ ಪ್ರತಿಕ್ರಿಯಿಸುವ ಪ್ರಾಮಾಣಿಕ ಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಈ ಪುಸ್ತಕದ ಬಗ್ಗೆ ಇಂದು ಉಪಲಭ್ಯವಿರುವ ಬೌದ್ಧಿಕ ಪರಿಕರಗಳ ಹಿನ್ನೆಲೆಯಲ್ಲಿ ಆಲೋಚಿಸಿದಾಗ ಇದರಲ್ಲಿ ಕಾಣುವ ಸಮಸ್ಯೆಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಹಾಗಾಗಿಯೇ ಭಾರತೀಯ ಸಮಾಜದ ಬಗ್ಗೆ ೨೧ನೇ ಶತಮಾನದಲ್ಲಿ ನಮಗಿರುವ ಅನೇಕ ಪ್ರಶ್ನೆಗಳನ್ನು ಕುರಿತು ಆಲೋಚಿಸಲು ಈ ಪುಸ್ತಕವು ಒಂದು ಮುಖ್ಯ ಮೈಲುಗಲ್ಲಾಗುತ್ತದೆ. ಈ ಪುಸ್ತಕದಲ್ಲಿ ಅನೇಕ ವಿಷಯಗಳನ್ನು ಒಂದೆಡೆ ತಂದು ಚರ್ಚಿಸಲಾಗಿದೆ. ಈ ಮೂಲಕ ಮುಂದಿನ ಅಧ್ಯಯನಕ್ಕೆ ಬೇಕಾದ ಹೆಜ್ಜೆಯನ್ನಿಡಲು ಮಾರ್ಗವನ್ನು ಪ್ರಶಸ್ತವಾಗಿಸಿದ್ದಾರೆ. ಅಲ್ಲದೇ ಯಾವ ದಾರಿಯನ್ನು ಈ ಪುಸ್ತಕದಲ್ಲಿ ತೆಗೆದುಕೊಳ್ಳಲಾಗಿದೆಯೋ ಅದರಲ್ಲಿರುವ ಸಮಸ್ಯೆಯನ್ನು ಗುರುತಿಸಿ ಆ ದಾರಿಯನ್ನು ಬಿಟ್ಟು ಹೊಸ ದಾರಿಯನ್ನು ಹುಡುಕಲು ಈ ಕೆಲಸವೇ ಒಂದು ಪ್ರೇರಣೆಯಾಗಿದೆ. ಈ ರೀತಿಯ ಪುಸ್ತಕವನ್ನು ಬರೆಯದೇ ಇದ್ದಲ್ಲಿ ಇಂದು ನಾವು ಇದೇ ದಾರಿಯಲ್ಲಿ ಮುಂದುವರಿಯುವ ಸಾಧ್ಯತೆ ಇತ್ತು ಮತ್ತು ಆಗ ಮುಂದಿನ ಪ್ರಶ್ನೆಗಳನ್ನು ಕೇಳಿಕೊಳ್ಳುವ ಅವಕಾಶವೇ ದೊರಕುತ್ತಿರಲಿಲ್ಲ. ಆದರೆ ಪ್ರಸಕ್ತ ಪುಸ್ತಕವು, ಈ ರೀತಿಯ ಚರ್ಚೆಗಳಲ್ಲಿರುವ ಸಮಸ್ಯೆಗಳನ್ನು ಕುರಿತು ಆಲೋಚಿಸಲು ಮತ್ತು ಮುಂದಿನ ಪ್ರಶ್ನೆಗಳನ್ನು ಕೇಳಿಕೊಳ್ಳಲು ಬೇಕಾದ ಸಾಧ್ಯತೆಯನ್ನು ಸೃಷ್ಟಿಸಿದೆ. ಜ್ಞಾನದ ಹಾದಿಯಲ್ಲಿ ಈ ರೀತಿಯ ಪ್ರಯತ್ನಗಳನ್ನು ತಪ್ಪು ಎಂದು ಗುರುತಿಸಲಾಗುವುದಿಲ್ಲ. ಜ್ಞಾನದ ಮಾರ್ಗದಲ್ಲಿ ಇದೊಂದು ಸಹಜ ಪ್ರಕ್ರಿಯೆಯಾಗಿದೆ. ಆದ್ದರಿಂದಲೇ ಈ ರೀತಿಯ ಗ್ರಂಥಗಳಿಗೆ ಚಾರಿತ್ರಿಕವಾಗಿ ಒಂದು ಮಹತ್ವದ ಸ್ಥಾನವಿದೆ ಮತ್ತು ಈ ಪುಸ್ತಕದ ಲೇಖಕರೇ ಹೇಳುವಂತೆ ಪಕ್ಷ ಪ್ರತಿಪಕ್ಷಗಳಿಂದ ಪರ್ಯಾಲೋಚಿಸಬೇಕಾದ ಆವಶ್ಯಕತೆ ಮತ್ತು ಆ ಮೂಲಕ ಹೊಸ ಪ್ರಶ್ನೆಗಳನ್ನು ಕೇಳಿಕೊಳ್ಳುವ ಆವಶ್ಯಕತೆ ಇಂದು ನಮ್ಮ ಮುಂದೆಯೂ ಇದೆ. ಆದ್ದರಿಂದ ಸಾಂಪ್ರದಾಯಿಕ ವಿದ್ವಾಂಸರ ಈ ಪ್ರಯತ್ನವನ್ನು ಗೌರವಿಸುವುದರೊಂದಿಗೆ, ಇಂದು ಉಪಲಬ್ಧವಿರುವ ಬೌದ್ಧಿಕ ಪರಿಕರಗಳನ್ನು ಬಳಸಿಕೊಂಡು ಮುಂದುವರೆಯುವ ಆವಶ್ಯಕತೆಯೂ ಇಂದಿದೆ.
ಈ ಹಿನ್ನೆಲೆಯಲ್ಲಿ ಚಾತುರ್ವರ್ಣ್ಯ ಭಾರತ ಸಮೀಕ್ಷಾ ಎಂಬ ಪುಸ್ತಕವನ್ನು ಕನ್ನಡದಲ್ಲಿ ಭಾಷಾಂತರಿಸುವ ಯತ್ನವನ್ನು ಮಾಡಲಾಗಿದೆ. ಸಂಸ್ಕೃತದ ಮೂಲ ಪುಸ್ತಕವು ಕೂಡ ಇಂದು ದೊರಕುತ್ತಿಲ್ಲವಾದ್ದರಿಂದ, ಈ ಪುಸ್ತಕದಲ್ಲಿ ಕನ್ನಡ ಭಾಷಾಂತರದೊಂದಿಗೆ ಸಂಸ್ಕೃತದ ಮೂಲಪಠ್ಯವನ್ನು ಕೂಡ ನೀಡಲಾಗಿದೆ. ಈ ಲೇಖನವನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಸಲಹೆಗಳನ್ನು ನೀಡಿದ ರಾಜಾರಾಮ ಹೆಗಡೆ, ಷಣ್ಮುಖ ಎ., ಡಂಕಿನ್ ಝಳಕಿ, ಅಶ್ವಿನೀ ಬಿ. ದೇಸಾಯಿ, ಹರ್ಷಿತ್ ಜೋಸೆಫ್ರವರಿಗೆ, CESS ನ ಸಹೋದ್ಯೋಗಿಗಳಿಗೆ ಹಾಗೂ ºÁUÀÆ India Studies ವಿಭಾಗದ ವಿದ್ಯಾರ್ಥಿಗಳಿಗೆ, ಮುಖ್ಯವಾಗಿ ಕರಡು ಪ್ರತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ರವಿ ಭಟ್ಟ ಮತ್ತು ರಾಮಕೃಷ್ಣ ಭಟ್ಟರವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ಅಲ್ಲದೇ ಈ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನೆಗಳು.
“ಚಾತುರ್ವರ್ಣ್ಯ ಭಾರತ ಸಮೀಕ್ಷಾ” ಎಂಬ ಪುಸ್ತಕಕ್ಕೆ ಬರೆದ ಮುನ್ನುಡಿ.
ಪುಸ್ತಕವನ್ನು ಈ ಕೆಳಗಿನ ಕೊಂಡಿಯಲ್ಲಿ ಕೊಂಡುಕೊಳ್ಳಬಹುದು – https://www.kuvempubhashabharathi.org/books/?search=%E0%B2%9A%E0%B2%BE%E0%B2%A4%E0%B3%81%E0%B2%B0%E0%B3%8D%E0%B2%B5%E0%B2%B0%E0%B3%8D%E0%B2%A3%E0%B3%8D%E0%B2%AF+%E0%B2%AD%E0%B2%BE%E0%B2%B0%E0%B2%A4+%E0%B2%B8%E0%B2%AE%E0%B3%80%E0%B2%95%E0%B3%8D%E0%B2%B7%E0%B3%86
[1] ಈ ಲೇಖನದಲ್ಲಿ ಹಿಂದೂಸಮಾಜ ಎಂಬ ಪದವನ್ನು ಭಾರತದಲ್ಲಿನ ವಿವಿಧ ಸಂಪ್ರದಾಯಗಳನ್ನು ಮತ್ತು ಗುಂಪುಗಳನ್ನು ನಿರ್ದೇಶಿಸಲು ಪ್ರಚಲಿತದಲ್ಲಿ ಪ್ರಸಿದ್ಧವಿರುವಂತೆ ಬಳಸಲಾಗಿದೆ.
[2] ಜಾತಿವ್ಯವಸ್ಥೆಯ ಕುರಿತು ಅತ್ಯಂತ ಹೆಚ್ಚು ಪ್ರಚಲಿತದಲ್ಲಿರುವ ವಾದವನ್ನು ಸಿದ್ಧಮಾದರಿ ಎಂದು ಕರೆಯಲಾಗಿದೆ. ಹಾಗೆಂದ ಮಾತ್ರಕ್ಕೆ ಇದಕ್ಕಿಂತ ಭಿನ್ನವಾದ ಅಭಿಪ್ರಾಯಗಳು ಇಲ್ಲವೇನೆಂದಲ್ಲ. ಉದಾಹರಣೆಗೆ post-colonial ಚಿಂತಕರಾದ ನಿಕೋಲಸ್ ಡಿರ್ಕ್ಸ್ (Dirks, B. Nicholas. (2002). Castes of Mind Colonialism and the Making of Modern India. Princeton University Press.) ನ ನಂತರ ಜಾತಿವ್ಯವಸ್ಥೆಯು ಶತಶತಮಾನಗಳಿಂದ ಭಾರತದಲ್ಲಿ ಪ್ರಚಲಿತದಲ್ಲಿದೆ ಎಂದು ಹೇಳಲಾಗುವುದಿಲ್ಲ. ನಿಕೋಲಸ್ ಡಿರ್ಕ್ಸ್ ಇಂದು ಜಾತಿವ್ಯವಸ್ಥೆ ಎಂದು ಯಾವುದನ್ನು ಮಾತನಾಡುತ್ತಿದ್ದೇವೆಯೋ ಅದು ತೀರ ಆಧುನಿಕ ವಿದ್ಯಮಾನವಾಗಿದ್ದು, ಅದು ಬ್ರಿಟೀಷರು ಭಾರತದ ಕುರಿತು ಚರ್ಚಿಸಿದ ನಂತರ ಬಂದಿದ್ದು ಎಂದು ವಾದಿಸುತ್ತಾರೆ. ಅಲ್ಲದೇ ಎಸ್. ಎನ್. ಬಾಲಗಂಗಾಧರರವರ ಸಂಶೋಧನೆಯು ಜಾತಿವ್ಯವಸ್ಥೆಯ ಅಸ್ತಿತ್ವವನ್ನೇ ಪ್ರಶ್ನಿಸುತ್ತದೆ. ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ಈ ಎರಡು ಪುಸ್ತಕಗಳನ್ನು ನೋಡಬಹುದು – (1) Fárek M., Jalki D., Pathan S., Shah P. (Eds.). (2017). Western Foundations of the Caste System. Palgrave Macmillan. (೨) ಝಳಕಿ, ಡಂಕಿನ್. ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೇ? (ಸಂ.) (೨೦೧೨). ಆನಂದಕಂದ ಗ್ರಂಥಮಾಲೆ. ನಿಕೋಲಸ್ ಡಿರ್ಕ್ಸ್ ಆಗಲಿ ಅಥವಾ ಬಾಲಗಂಗಾಧರರ ಸಂಶೋಧನೆಗಳಾಗಲಿ ಜಾತಿಯ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ. ಅಷ್ಟೇ ಅಲ್ಲ ಅವು ಭಾರತೀಯ ಸಂಪ್ರದಾಯಗಳ ಭಾಗ ಎಂದು ಸ್ಪಷ್ಟವಾಗಿ ಗುರುತಿಸುತ್ತವೆ. ಆದರೆ ಸಮಸ್ಯೆ ಇರುವುದು ಜಾತಿಯ ಅಸ್ತಿತ್ವದಲ್ಲಲ್ಲ ಬದಲಿಗೆ ಜಾತಿ ಮತ್ತು ಜಾತಿವ್ಯವಸ್ಥೆಯ ಆಧುನಿಕ ನಿರೂಪಣೆಗಳಲ್ಲಿ. ಒಟ್ಟು ಜಾತಿವ್ಯವಸ್ಥೆಯ ಕುರಿತಾದ ಚರ್ಚೆಯ ವಿವಿಧ ಆಯಾಮಗಳು ಮತ್ತು ಅದರ ಸ್ವರೂಪಕ್ಕಾಗಿ ಈ ಪುಸ್ತಕವನ್ನು ನೋಡಬಹುದು – ಕೃಷ್ಣನ್, ಸಿ., ಸಿವರಾಮ. (೨೦೦೭). ಜಾತಿ : ಕೆಲವು ಟಿಪ್ಪಣಿಗಳು. ಅನುವಾದಕರು ಡಾ. ಮಹೇಶ ಕುಮಾರ್ ಸಿ. ಎಸ್. ಪರಸ್ವರ. ಬೆಂಗಳೂರು. ಇದೇನೇ ಇದ್ದರೂ ಈಗ ನಾವು ಸಿದ್ಧಮಾದರಿ ಎಂದು ಕರೆಯುತ್ತಿರುವುದು ಶ್ರೇಣೀಕೃತ ವ್ಯವಸ್ಥೆಯ ಆಧಾರದಲ್ಲಿ ಪ್ರಧಾನವಾಗಿ ಚರ್ಚಿಸಲ್ಪಡುವ ಜಾತಿವ್ಯವಸ್ಥೆಯ ಕಥಾನಕವನ್ನು ಕುರಿತು.
[3] ಇಲ್ಲಿ ಬರೆದಿರುವ ವಿಷಯಗಳನ್ನು ಮುಖ್ಯವಾಗಿ Olivelle, Patrick. & Davis, R., Donald. (Ed.). (2018). Hindu Law: A New History of Dharmaśāstra. Oxford University Press ಎಂಬ ಪುಸ್ತಕದಲ್ಲಿರುವ Mikael Aktor ಬರೆದ Social Classes:Varna ಎಂಬ ಲೇಖನದಿಂದ ಸಂಗ್ರಹಿಸಲಾಗಿದೆ. ಈ ಲೇಖನವು ಕಳೆದು ಎರಡು ಶತಮಾನಗಳಿಂದ ಯಾವುದನ್ನು ನಾವು ಜಾತಿವ್ಯವಸ್ಥೆಯ ಸಿದ್ಧಮಾದರಿ ಎಂದು ಕರೆಯುತ್ತೇವೆಯೋ ಅದರ ಸಾರರೂಪ ಸಂಗ್ರಹವಾಗಿದೆ.
[4] ಚಾತುರ್ವರ್ಣಗಳನ್ನು Social classಗಳೆಂದು ಕರೆಯುವುದು ಎಷ್ಟು ಸಮಸ್ಯಾತ್ಮಕ ಎಂಬುದಕ್ಕೆ ವಿವರಣೆಗಾಗಿ ಈ ಲೇಖನವನ್ನು ನೋಡಬಹುದು – Roover, De Jacob. & Rao, Sarika. (2022). The Indology and Sociology of Varna. In Cultures Differ Differently: Selected Essays of S.N. Balagangadhara. Routledge. 150-170. ಎಂಬ ಲೇಖನದಲ್ಲಿ ನೋಡಬಹುದು. ಅದೇನೇ ಇರಲಿ, ಸಿದ್ಧಮಾದರಿಯಲ್ಲಿ ಕಳೆದ ಎರಡು ಶತಮಾನಗಳಿಗಿಂತ ಹೆಚ್ಚು ಕಾಲದಿಂದಲೂ ಇವುಗಳನ್ನು Soಛಿiಚಿಟ ಛಿಟಚಿss ಎಂದು ಪರಿಗಣಿಸಲಾಗಿದೆ.
[5] ಈ ಬಗ್ಗೆ ಎಸ್. ಎನ್. ಬಾಲಗಂಗಾಧರರು ತಮ್ಮ ಶೋಧಲೇಖನಗಳಲ್ಲಿ ಚರ್ಚಿಸಿದ್ದು, ಹೆಚ್ಚಿನ ಅಧ್ಯಯನಕ್ಕಾಗಿ – – Balagangadhara, S.N. (2012). Culture and the Cultural: Problems, Pitfalls, and a Proposal. In Reconceptualizing India Studies.Oxford University Press. 13-33.
[6] ಈ ರೀತಿಯಾಗಿ ಕಥೆಗಳನ್ನು ಹಿಸ್ಟರಿಯನ್ನಾಗಿಸುವಾಗ ಉತ್ಪತ್ತಿಯಾಗುವ ಸಮಸ್ಯೆಗಳ ಕುರಿತು ವಿಸ್ತಾರವಾದ ಚರ್ಚೆಗೆ ಈ ಲೇಖನಗಳನ್ನು ಗಮನಿಸಿ – Balagangadhara, S. N. What do Indians Need, A History or the Past? A challenge or two to Indian historians. https://www.academia.edu/9462514/What_Do_Indians_Need_a_History_or_the_Past_A_challenge_or_two_to_Indian_historians_Parts_I_and_II, Retrieved on 07/01/2020. Hegde, Rajaram. (2016). From Tradition to History: Reflections on Rajavali Kathasara. Pragmata Journal of Human Science. 3(1). 1-24.
[7] ಆಂಗಸ್ ಮ್ಯಾಡಿಸನ್ರವರ ಜಗತ್ತಿನ ಜಿ.ಡಿ.ಪಿ ಬಗೆಗಿನ ಅಧ್ಯಯನದಿಂದ ಸುಮಾರು ೧೮ನೇ ಶತಮಾನದವರೆಗೆ ಭಾರತದ ಜಿ.ಡಿ.ಪಿ ಜಗತ್ತಿನ ಜಿ.ಡಿ.ಪಿಯ ಸುಮಾರು ೨೪% ಇತ್ತು ಎಂದು ತಿಳಿಯುತ್ತದೆ. ಹೆಚ್ಚಿನ ಅಧ್ಯಯನಕ್ಕಾಗಿ – Maddison, Angus. (2007). Contours of the World Economy 1-2030 AD: Essays in Macro-Economic History. Oxford University Press. ಎಂಬ ಪುಸ್ತಕವನ್ನು ನೋಡಬಹುದು. ಈ ಮುಂದಿನ ಸಂಗ್ರಹಲೇಖನವನ್ನೂ ಗಮನಿಸಬಹುದು – Kumara, Harish. B. K. (2012). Revisiting Indian economic history in the light of recent progress in global economic history. Working Paper 005. Development Foundation. Banglore.
[8] Raghu. S. And A. Shanmukha. (2016).ದಲಿತ ಸಮಸ್ಯೆ ಮತ್ತು ಮತಾಂತರ: ಒಂದು ವಿಮರ್ಶೆ. ಚಿಂತನ ಬಯಲು. ೫ (೨).
[9] ದರ್ಗಾಕ್ಕೆ ಸಂಬಂಧಿಸಿದ ಆಚರಣೆಗಳ ಬಗ್ಗೆ ಹೆಚ್ಚಿನ ತಿಳಿವಳಿಕೆಗಾಗಿ ಈ ಪುಸ್ತಕವನ್ನು ಗಮನಿಸಬಹುದು – ಕುಮಾರ್, ಸಿ. ಎಸ್. ಮಹೇಶ. (೨೦೧೪). ಈಶ್ವರ ಅಲ್ಲಾ ತೇರೋ ನಾಮ್ : ಬಾಬಾ ಬುಡನ್ಗಿರಿ ದರ್ಗಾದ ವಿವಾದ ಮತ್ತು ದರ್ಗಾದ ಸಂಪ್ರದಾಯಗಳು. ಪ್ರಗತಿ ಗ್ರಾಫಿಕ್ಸ್. ಬೆಂಗಳೂರು.
[10] Winternitz, M. (1898). Hindu Manners, Customs and Ceremonies. Nature. 59. 145–146.
[11] Each of the four main castes is subdivided into many others. Dubois, J.A. Abbe. (2006). Hindu manners, Customs and Ceremonies. Rupa Publications India Pvt. Ltd. p 15.
[12] ibid. 2006:16.
[13] The former (Between the Vaisyas and the Sudras) appear to have almost entirely lost their superiority except in the Hindu books, where they are invariably placed before the Sudras. In ordinary life the latter hold themselves to be superior to the Vaisyas, and consider themselves privileged to mark their superiority in many respects by treating them with contumely. ibid. 2006:24
[14] ibid. 2006:24
[15] ibid. 2006:26
[16] ibid. 2006:26
[17] ibid. 2006:27
[18] ಜಾತಿಗಳನ್ನು ಕುರಿತಾದ ಯುರೋಪಿಯನ್ನರ ವಿವರಣೆಗಳು ಹೇಗೆ ಅವರ ಸಾಂಸ್ಕೃತಿಕ ಅನುಭವದಿಂದ ಹುಟ್ಟಿದ್ದಾಗಿವೆ ಎಂಬುದನ್ನು Fárek M., Jalki D., Pathan S., & Shah P.ರವರು ಸಂಪಾದಿಸಿದ Western Foundations of the Caste System ಎಂಬ ಪುಸ್ತಕದಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಇದಕ್ಕೆ ಬೇಕಾದ ಸೈದ್ಧಾಂತಿಕ ಚೌಕಟ್ಟು ಎಸ್. ಎನ್. ಬಾಲಗಂಗಾಧರರವರ The Heathen in His Blindness… ಮತ್ತಿತರ ಕೃತಿಗಳಿಂದ ಬರುತ್ತದೆ. ಈ ಚೌಕಟ್ಟಿನ ಆಚೆಗೆ Edward Said£À orientalism ಮತ್ತು post-colonial ಚಿಂತನೆಯನ್ನು ಬಳಸಿದರೂ ಕೂಡ caste is a construction ಎಂದು (ಹೆಚ್ಚಿನ ಮಾಹಿತಿಗಾಗಿ Dirks, B. Nicholas. (2002). Castes of Mind Colonialism and the Making of Modern India. Princeton University Press. ಎಂಬ ಕೃತಿಯನ್ನು ನೋಡಬಹುದು) ಮಾತನಾಡಬೇಕಾಗುತ್ತದೆ. ಒಟ್ಟಾರೆಯಾಗಿ ಜಾತಿವ್ಯವಸ್ಥೆಯ ನಿರೂಪಣೆಗಳು ಪಶ್ಚಿಮದ ಅನುಭವವೆನ್ನುವುದನ್ನು post-colonial ಚಿಂತನೆಗಳೂ ನಿರಾಕರಿಸುವುದಿಲ್ಲ. ಅದೇನೇ ಇರಲಿ ಎಸ್.ಎನ್. ಬಾಲಗಂಗಾಧರರವರ ವಾದವನ್ನು ನಿಖರವಾಗಿ ಗ್ರಹಿಸಿದರೆ ಯುರೋಪಿಯನ್ನರ ಚಿಂತನೆ ಕ್ರಿಶ್ಚಿಯನ್ ಥಿಯಾಲಿಜಿಯ ಮೂಸೆಯಿಂದ ಹುಟ್ಟಿದ್ದು, ಭಾರತದ ಕುರಿತ ಅವರ ನಿರೂಪಣೆಗಳು ಯುರೋಪಿನ ಸಂಸ್ಕೃತಿಯ ಕುರಿತು ನಮಗೆ ತಿಳಿವಳಿಕೆಯನ್ನು ಕೊಡುತ್ತವೆಯೇ ಹೊರತು ಭಾರತದ ಕುರಿತಲ್ಲ ಎಂದು ಒಪ್ಪಬೇಕಾಗುತ್ತದೆ. ಭಾರತೀಯರು ಈ ಯುರೋಪಿಯನ್ನರ ಅನುಭವಗಳನ್ನು ತಮ್ಮ ಜಗತ್ತಿನ ಸತ್ಯವೆಂದು ಭಾವಿಸುವ ಪ್ರಕ್ರಿಯೆಯನ್ನು ಎಸ್.ಎನ್. ಬಾಲಗಂಗಾಧರರವರು ವಸಾಹತುಪ್ರಜ್ಞೆ ಎಂದು ಗುರುತಿಸುತ್ತಾರೆ.
[19] ಸಮಾಜ ವಿಜ್ಞಾನ, ಓರಿಯಂಟಲಿಸಮ್ ಮತ್ತು ಯುರೋಪಿನ ಅನುಭವಗಳ ನಡುವಿನ ಸಂಬಂಧದ ಕುರಿತು ಹೆಚ್ಚಿನ ವಿವರಣೆಗಾಗಿ ನೋಡಬಹುದು –
Balagangadhara, S.N. (2012). The Future of the Present: Rethinking the Post-colonial Project. In Reconceptualizing India Studies. Oxford University Press. 34-59. ಎಂಬ ಲೇಖನವನ್ನು ನೋಡಬಹುದು.