Home ವಸಾಹತು ಪ್ರಜ್ಞೆದಾರಿ ತಪ್ಪಿದ ಸಂಸ್ಕೃತಿ ಚಿಂತನೆ ಬೌದ್ಧ ಮತ: ಸಂಘ ಮತ್ತು ಸಂಸಾರ

ಬೌದ್ಧ ಮತ: ಸಂಘ ಮತ್ತು ಸಂಸಾರ

by Rajaram Hegde
69 views

ನಾವು ಇಂದು ಓದುತ್ತಿರುವ ಬೌದ್ಧ ಮತದ ಜನಪ್ರಿಯ ಇತಿಹಾಸದಲ್ಲಿ ಒಂದು ಸಮಸ್ಯೆಯಿದೆ. ಅದೆಂದರೆ ನಾವು ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಮಿನ ಮಾದರಿಗಳನ್ನಿಟ್ಟುಕೊಂಡು ಅವುಗಳ ಲಕ್ಷಣಗಳನ್ನು ಆರೋಪಿಸಿಕೊಂಡು ಬೌದ್ಧ ಮತ ಎಂಬುದನ್ನು ಊಹಿಸಿಕೊಳ್ಳುತ್ತಿರುತ್ತೇವೆ. ಅಂದರೆ ಬೌದ್ಧ ಮತವನ್ನು ಒಂದು ರಿಲಿಜನ್ನು ಎಂಬುದಾಗಿ ಭಾವಿಸಿಕೊಂಡು ಪಾಶ್ಚಾತ್ಯ ವಿದ್ವಾಂಸರು ಮೊತ್ತಮೊದಲು ಅದನ್ನು ಅಧ್ಯಯನಕ್ಕೊಳಪಡಿಸಿದರು ಹಾಗೂ ಅವರನ್ನನುಸರಿಸಿ ಭಾರತೀಯರೂ ಇಂಥ ಅಧ್ಯಯನಗಳನ್ನು ಮುಂದುವರಿಸಿದರು.

ಬೌದ್ಧ ಮತದ ಕುರಿತು ನಮ್ಮ ಜನಪ್ರಿಯ ಇತಿಹಾಸದ ಪ್ರಕಾರ ಬುದ್ಧನು ಬುದ್ಧಿಸಂ ಎಂಬ ಒಂದು ಹೊಸ ಜಾತ್ಯತೀತ ಸಮಾಜದ ಹುಟ್ಟಿಗೆ ಕಾರಣನಾದನು. ಅವನು ಮಾಡಿದ ಉಪದೇಶಗಳು ಅವನ ಅನುಯಾಯಿಗಳ ಜೀವನವನ್ನು ನಿರ್ದೇಶಿಸುವ ನಿಯಮಗಳಾದವು. ಇಂಥ ನಿಯಮಗಳನ್ನು ತಿಳಿಸುವ ಬೌದ್ಧರ ಪವಿತ್ರ ಗ್ರಂಥವೇ ಪಾಳಿ ತ್ರಿಪಿಟಕಗಳು, ಇಂಥ ನಿಯಮಗಳಾದರೂ ಯಾವವು? ನಮಗೆ ಸದ್ಯಕ್ಕೆ ಗೊತ್ತಿರುವುದು ಒಂದೇ ಒಂದು ನಿಯಮ: ಅದೆಂದರೆ ಜಾತಿ ಭೇದವನ್ನು ನಿರಾಕರಿಸಿದ್ದು, ಅಂದರೆ ಬೌದ್ಧರ ಆಚರಣೆಗಳಲ್ಲಿ ಜಾತಿಯನ್ನಾಧರಿಸಿ ತರತಮಗಳನ್ನಾಗಲೀ, ವ್ಯತ್ಯಾಸವನ್ನಾಗಲೀ ಮಾಡುವಂತಿಲ್ಲ. ಬೌದ್ಧ ಸಂಘಗಳೆಂದರೆ ಚರ್ಚುಗಳಂತೇ. ಅವುಗಳ ಕೆಲಸ ಬೌದ್ಧರಲ್ಲದವರನ್ನು ಬೌದ್ಧ ಮತಕ್ಕೆ ಪರಿವರ್ತನೆ ಮಾಡುವುದು. ಬೌದ್ಧ ಮತದ ಜಾತ್ಯತೀತತೆಗೆ ಮನಸೋತು ವರ್ಣ ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನಗಳನ್ನು ಕಳೆದುಕೊಂಡ ಜಾತಿಗಳೆಲ್ಲವೂ ಬೌದ್ಧರಾಗಿ ಸಮಾನತೆಯನ್ನು ಪಡೆದರು. ಈ ರೀತಿಯಲ್ಲಿ ಬೌದ್ಧ ಮತವು ಭಾರತ ಹಾಗೂ ಪೂರ್ವ ಏಶಿಯಾದಲ್ಲೆಲ್ಲ ಜನಪ್ರಿಯತೆಯನ್ನು ಪಡೆದು ವ್ಯಾಪಿಸಿಕೊಂಡಿತು. ಆದರೆ ಮಧ್ಯಕಾಲದಲ್ಲಿ ಭಾರತೀಯರೆಲ್ಲರೂ ಮತ್ತೆ ಬೌದ್ಧ ಮತವನ್ನು ಬಿಟ್ಟು ಹಿಂದೂಯಿಸಂಗೇ ಸೇರಿಕೊಂಡರು. ಬೌದ್ಧ ಮತವು ಭಾರತದಲ್ಲಿ ಅವನತಿ ಹೊಂದಿತು. ಆದರೆ ಉಳಿದೆಡೆ ಉಳಿದುಕೊಂಡಿತು. ಇದು ನಮ್ಮ ಪಠ್ಯ ಪುಸ್ತಕಗಳು, ಸಮಾಜ ಶಾಸ್ತ್ರಜ್ಞರು ನಮಗೆ ತಿಳಿಸುವ ಕಥೆ.

ಈ ಕಥೆಯು ತನ್ನದೇ ಆದ ಮತ್ತೊಂದು ಆಯಾಮವನ್ನು ಕೂಡ ಹೊಂದಿದೆ. ಆ ಆಯಾಮವೆಂದರೆ ಬೌದ್ಧ ಮತವು ಹುಟ್ಟಿದ್ದೇ ವೈದಿಕ ಮತದ ವರ್ಣವ್ಯವಸ್ಥೆಯ ವಿರುದ್ಧ ಪ್ರತಿಭಟನೆಯಾಗಿ. ಆದರೆ ಅದು ಕೊನೆಗೂ ವೈದಿಕ ಮತದ ಮೇಲಾಟಕ್ಕೆ ಸೋತುಹೋಯಿತು. ಅಂದರೆ ವೈದಿಕರ ಜಾತಿ ವ್ಯವಸ್ಥೆ ಎಂಬುದು ಬೌದ್ಧರ ಜಾತ್ಯತೀತ ಚಳವಳಿಯನ್ನು ಕೊನೆಗೂ ನುಂಗಿ ನೀರು ಕುಡಿಯಿತು. ಇಂಥ ಇತಿಹಾಸವು ಭಾರತದಲ್ಲಿ ಒಂದಷ್ಟು ವಿದ್ಯಾವಂತರಿಗೆ ಬೌದ್ಧ ಮತದ ಕುರಿತು ಒಂದು ವಿಷಾದವನ್ನೂ ಹಾಗೂ ಕನಿಕರವನ್ನೂ, ವೈದಿಕ ಮತದ ಕುರಿತು ಕಹಿಭಾವನೆಯನ್ನೂ ಹಾಗೂ ರೋಷವನ್ನೂ ಹುಟ್ಟಿಸುವ ಶಕ್ತಿಯನ್ನು ಪಡೆದಿದೆ. ಇಂದು ಬುದ್ಧನ ಕುರಿತು ನಮ್ಮ ತಲೆಮಾರಿನ ಬಹುತೇಕರಿಗೆ ಏನಾದರೂ ಆಸಕ್ತಿ ಹಾಗೂ ತಿಳಿವಳಿಕೆ ಇದ್ದರೆ ಅದು ಇಲ್ಲಿಗೇ ನಿಲ್ಲುತ್ತದೆ. ಅವನ ಜೀವನವು ಯಾವುದರ ಕುರಿತ ಹುಡುಕಾಟವಾಗಿತ್ತು ಹಾಗೂ ಅವನು ಏನನ್ನು ಪಡೆದ ಎಂಬ ಕುರಿತು ಇಂಥ ಇತಿಹಾಸವನ್ನು ಕಥಿಸುವ ಯಾರೂ ಸೊಲ್ಲೆತ್ತಿದ್ದನ್ನು ಕಂಡಿಲ್ಲ. ಅಂದರೆ ಈ ಜನಪ್ರಿಯ ಇತಿಹಾಸವು ಬೌದ್ಧ ಮತಕ್ಕೆ ಸಂಬಂಧಿಸಿದಂತೆ ಈ ಮೇಲೆ ತಿಳಿಸಿದ ತಿಳಿವಳಿಕೆಯನ್ನು ಮಾತ್ರ ಗಟ್ಟಿ ಮಾಡುತ್ತಿದೆ. ಇದು ಈ ಕೆಳಗಿನ ಅಂಶಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ.

ಬೌದ್ಧಮತದಲ್ಲಿ ಎರಡು ವಿಭಿನ್ನ ಪ್ರಕಾರದ ಸಮುದಾಯಗಳಿದ್ದವು. ಮೊದಲನೆಯದು ಭಿಕ್ಷು ಸಂಘ. ಭಿಕ್ಷು ಸಂಘವು ಭಿಕ್ಷಾಟನೆ ಮಾಡಿ ಜೀವಿಸುವ ಶ್ರಮಣರದ್ದು. ಬುದ್ಧನ ಶ್ರಮಣ ಸಂಘವನ್ನು ಸೇರಿ ಮೋಕ್ಷ ಸಾಧನೆಯನ್ನು ಮಾಡಲು ಬರುವವರು ಬೇರೆ ಬೇರೆ ವರ್ಣ ಹಾಗೂ ಜಾತಿಗಳ ಹಿನ್ನೆಲೆಯನ್ನು ತ್ಯಜಿಸಿ ಬಂದಿದ್ದರು. ಏಕೆಂದರೆ ಸಂಸಾರವನ್ನು ಪರಿತ್ಯಜಿಸಿದವರಿಗೆ ಮಾತ್ರವೇ ಸಂಘದ ಬಾಗಿಲು ತೆರೆದಿತ್ತು. ಸಂಸಾರವನ್ನು ಪರಿತ್ಯಜಿಸುವುದೆಂದರೆ ಅವರವರ ಪೂರ್ವಾಶ್ರಮದ ಜಾತಿ ಕುಲಗಳೊಂದೇ ಅಲ್ಲದೇ ಸಾಂಸಾರಿಕ ಸಂಬಂಧಗಳು, ಸುಖೋಪಭೋಗ, ಅಧಿಕಾರ, ಆಸ್ತಿ, ಧನ ಕನಕ, ಇತ್ಯಾದಿಗಳೆಲ್ಲವನ್ನೂ ತ್ಯಜಿಸಬೇಕಾಗಿತ್ತು. ಭಿಕ್ಷುಗಳದ್ದು ಅಕ್ಷರಶಃ ಸನ್ಯಾಸ ಆಶ್ರಮವಾಗಿತ್ತು. ಬುದ್ಧನ ಮಾರ್ಗದಲ್ಲಿ ಸಾಗಲು ಇದು ಅತ್ಯಗತ್ಯ ಪೂರ್ವಸಿದ್ಧತೆ. ಬುದ್ಧನು ಒಬ್ಬ ಭಿಕ್ಷುವಾಗಿ ಜಾತಿ ಪದ್ಧತಿಯನ್ನೊಂದೇ ಅಲ್ಲ. ಸಂಸಾರ ಬಂಧನವನ್ನೇ ತಿರಸ್ಕರಿಸಿದ. ಜಾತಿಯನ್ನೊಂದು ಬಿಟ್ಟು ಉಳಿದ ಸಾಂಸಾರಿಕ ಪ್ರಲೋಭನೆಗಳನ್ನು, ಪ್ರಭೇದಗಳನ್ನು ಉಳಿಸಿಕೊಳ್ಳುತ್ತೇನೆ ಎಂದರೆ ಅವನು ಬೌದ್ಧ ಭಿಕ್ಷುವಾಗಲಾರ. ವಿನಯ ಪಿಟಕದ ಚುಲ್ಲವಗ್ಗ ಹಾಗೂ ಮಹಾವಗ್ಗಗಳನ್ನು ಓದಿದಲ್ಲಿ ಬೌದ್ಧ ಭಿಕ್ಷುಗಳಿಗೆ ವಿಧಿಸಿದ ಕಟ್ಟು ನಿಟ್ಟಿನ ಜೀವನದ ಪರಿಚಯವಾಗುತ್ತದೆ. ಬೌದ್ಧ ಮತದಲ್ಲಿ ಮತ್ತೊಂದೆಡೆ ಸಂಸಾರಸ್ಥ ಉಪಾಸಕರೂ ಕೂಡ ಇದ್ದರು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಅವರು ಈ ಭಿಕ್ಷು ಸಂಘಗಳಿಗೆ ದಾನ ಹಾಗೂ ಆಶ್ರಯವನ್ನು ನೀಡಿ ಅವುಗಳನ್ನು ಪೋಷಣೆ ಮಾಡುತ್ತಿದ್ದರು. ಇಂಥವರಲ್ಲಿ ರಾಜರು, ವರ್ತಕರು, ವಿಭಿನ್ನ ಕುಶಲಕರ್ಮಿಗಳು, ಬ್ರಾಹ್ಮಣರು, ವಿದೇಶೀಯರು ಇತ್ಯಾದಿ ನಾನಾ ಪ್ರಕಾರದ ಸಾಮಾಜಿಕ ಹಿನ್ನೆಲೆಯವರಿದ್ದರು. ಇವರು ಬೌದ್ಧ ಉಪಾಸಕರು ಎಂಬುದಾಗಿ ಕರೆಸಿಕೊಂಡಿದ್ದರು. ಇವರಲ್ಲಿ ಯಾರೂ ತಮ್ಮ ಜಾತಿ ಕುಲಗಳನ್ನಾಗಲೀ, ಸಾಮಾಜಿಕ ಅಂತಸ್ತು ಅಧಿಕಾರಗಳನ್ನಾಗಲೀ, ಆಸ್ತಿ ಪಾಸ್ತಿಗಳನ್ನಾಗಲೀ, ಹೆಂಡತಿ ಮಕ್ಕಳನ್ನಾಗಲೀ ಬಿಟ್ಟಿರಲಿಲ್ಲ ಹಾಗೂ ಬಿಡಬೇಕಾದ ಷರತ್ತೂ ಇರಲಿಲ್ಲ. ಅಂದರೆ ಬೌದ್ಧ ಉಪಾಸಕರು ಬ್ರಾಹ್ಮಣರಾದಿಯಾಗಿ ಎಲ್ಲ ಪ್ರಕಾರದ ಸಮುದಾಗಳಲ್ಲೂ ಇದ್ದರು. ಇಂಥ ಸಂಸಾರಸ್ಥರು ಇಲ್ಲದೇ ಬೌದ್ಧ ಸಂಘಗಳು ಅಸ್ತಿತ್ವವನ್ನು ಇಟ್ಟುಕೊಳ್ಳುವುದು ಸಾಧ್ಯವೇ ಇರಲಿಲ್ಲ. ಭಿಕ್ಷೆಯನ್ನು ಹಾಕುವವರಿಲ್ಲದೇ ಭಿಕ್ಷುಗಳು ಇರಲಿಕ್ಕೆ ಹೇಗೆ ಸಾಧ್ಯ? ಅಂದರೆ ಇಂಥ ಸಂಸಾರಸ್ಥರು ಹಾಗೂ ಅವರ ಜಗತ್ತನ್ನು ನಿರಾಕರಿಸುವುದು ಬೌದ್ಧ ಮತಕ್ಕೆ ತನ್ನ ಅಸ್ತಿತ್ವವನ್ನೇ ನಿರಾಕರಿಸಿದಂತೆ.

ಪ್ರಾಚೀನ ಕಾಲದಲ್ಲಿ ಮಗಧ, ಕಾಶಿ ಹಾಗೂ ಕೋಸಲಗಳ ರಾಜರು, ಗಣ ಪ್ರಮುಖರು, ಶ್ರೇಷ್ಠಿಗಳು ಹಾಗೂ ಇನ್ನುಳಿದ ಸಂಸಾರಸ್ಥರು ಬುದ್ಧನೊಡನೆ ಒಡನಾಡಿದ್ದರು. ಅವರೆಲ್ಲ ಬುದ್ದನ ಜೊತೆ ಸಂವಾದ ನಡೆಸಿ ಮನಸ್ಸಿನ ಸಮಾಧಾನವನ್ನು ಹೊಂದುತ್ತಿದ್ದರು. ಅಂದರೆ ಬುದ್ಧನು ತನ್ನ ಸಂಘದ ಭಿಕ್ಷುಗಳನ್ನು ಸಂಘದ ಮಾರ್ಗದಲ್ಲಿ ಮುನ್ನಡೆಸಿದರೆ ಇಂಥ ಸಂಸಾರಸ್ಥರನ್ನು ಮತ್ತೊಂದು ಮಾರ್ಗದ ಮೂಲಕ ಮುನ್ನಡೆಸಿದ್ದನು. ಇಂಥ ಸಂಸಾರಸ್ಥರಿಗೆ ಅವರ ಸಂಸಾರದ ಬಂಧನವನ್ನು ಹಾಗೂ ಭೇದಗಳನ್ನು ತ್ಯಜಿಸುವ ಷರತ್ತನ್ನು ಹಾಕಲಿಲ್ಲ. ಸಾಮ್ರಾಟ್ ಅಶೋಕನು ಬೌದ್ಧ ಮತದ ಪೋಷಣೆಗಾಗಿ ಕೈಗೊಂಡ ಕಾರ್ಯಗಳನ್ನು ಆತನ ಶಾಸನಗಳೇ ದಾಖಲಿಸುತ್ತವೆ. ಆತನು ಯುದ್ಧವನ್ನು ತ್ಯಜಿಸಿ ಧರ್ಮವನ್ನು ಪಾಲಿಸಿದರೂ ಕೂಡ ಸೈನ್ಯವನ್ನಾಗಲೀ, ಅಧಿಕಾರವನ್ನಾಗಲೀ ತ್ಯಜಿಸಲಿಲ್ಲ. ಬೌದ್ಧರನ್ನು ಪೋಷಿಸಿದ ಇನ್ನುಳಿದ ರಾಜರಂತೂ ಯುದ್ಧವನ್ನು ಕೂಡ ಬಿಟ್ಟದ್ದು ಕಾಣುವುದಿಲ್ಲ. ಬುದ್ಧನು ಗಂಗಾ ಬಯಲಿನ ಸುಪ್ರಸಿದ್ಧ ನಗರಗಳಲ್ಲೆಲ್ಲ ಸಂಚರಿಸುತ್ತಿದ್ದಾಗ ಅಲ್ಲಿನ ಕೋಟ್ಯಾಧೀಶ ಶ್ರೇಷ್ಠಿಗಳೆಲ್ಲ ನಾ ಮುಂದು ತಾ ಮುಂದು ಎಂದು ಆತನಿಗೆ ವಿಹಾರಗಳನ್ನು, ಆರಾಮಗಳನ್ನು ಕಟ್ಟಿಸಿದರು. ಶ್ರಾವಸ್ತಿಯಲ್ಲಿ ಅನಾಥ ಪಿಂಡಕ ಎನ್ನುವ ಶ್ರೇಷ್ಠಿಯು ಜೇಟ ಎಂಬ ರಾಜನಿಗೆ ಸೇರಿದ ವನವನ್ನು ಅವನ ಷರತ್ತಿನಂತೆ ನೆಲಕ್ಕೆಲ್ಲ ಹಣವನ್ನು ಹಾಸಿ ಖರೀದಿಸಿದನು. ಇವರೆಲ್ಲರೂ ಬುದ್ಧನಲ್ಲಿ ಅಂಥದ್ದೇನನ್ನೋ ಕಂಡಿದ್ದರು. ಇವರೆಲ್ಲ ಜಾತಿವ್ಯವಸ್ಥೆಯ ತುಳಿತಕ್ಕೊಳಗಾದವರಂತೂ ಅಲ್ಲವೇ ಅಲ್ಲ. ಅವರ ಜಾತಿ ಅವರು ಕೋಟ್ಯಾಧೀಶರಾಗುವುದನ್ನು, ರಾಜರಾಗುವುದನ್ನು ತಡೆದಿರಲಿಲ್ಲ. ಅಷ್ಟಾಗಿಯೂ ಐಹಿಕ ಭೋಗ ಭಾಗ್ಯವೆಲ್ಲವೂ ಸಿಕ್ಕರೂ ಅವರು ಮತ್ತೇನನ್ನೋ ಹುಡುಕುತ್ತಿದ್ದರು. ಅವರಲ್ಲೇ ಕೆಲವರು ಭೋಗಭಾಗ್ಯಗಳನ್ನೆಲ್ಲ ತ್ಯಾಗಮಾಡಿ, ಸಂಘವನ್ನು ಸೇರಿದರು. ಅಂದರೆ ಅವರು ಭೋಗಭಾಗ್ಯಗಳಿಂದ, ಸ್ಥಾನಮಾನಗಳಿಂದ ವಂಚಿತರಾದ ಕಾರಣದಿಂದ ಸಂಘವನ್ನು ಸೇರಿದ್ದಲ್ಲ. ಬೌದ್ಧ ಭಿಕ್ಷು ಸಂಘದ ನಿಜ ಮಹತ್ವವನ್ನು ಅರಿಯಬೇಕಾದರೆ ಈ ಅಂಶಗಳನ್ನು ಗಮನಿಸಬೇಕಾದ ಅಗತ್ಯವಿದೆ. 

ಬುದ್ಧನ ಉಪಾಸಕ ವರ್ಗದವರು ಆಯಾ ಜಾತಿಯವರೇ ಆಗಿ ಬೌದ್ಧ ಸಂಘಗಳನ್ನು ಪೋಷಿಸಿದರು. ಪ್ರಾಚೀನ ಬೌದ್ಧ ಸ್ಮಾರಕಗಳಾದ ಸಾಂಚಿ, ಪಶ್ಚಿಮ ಮಹಾರಾಷ್ಟ್ರದ ಗುಹಾಲಯಗಳು, ಸನ್ನತಿ ಹಾಗೂ ಆಂಧ್ರದ ಬೌದ್ಧ ಸ್ಮಾರಕಗಳಲ್ಲಿ ಇಂಥ ಉಪಾಸಕ ಸಮುದಾಯದ ದಾನಗಳನ್ನು ದಾಖಲಿಸುವ ಸಾವಿರಾರು ಶಾಸನಗಳು ಸಿಗುತ್ತವೆ. ಅವರಲ್ಲಿ ಬ್ರಾಹ್ಮಣರು ಬ್ರಾಹ್ಮಣರಾಗಿಯೇ ದಾನ ನೀಡಿದ್ದಾರೆ. ಸೆಟ್ಟಿಗಳು ಸೆಟ್ಟಿಗಳಾಗಿ, ತೈಲಿಗರು ತೈಲಿಗರಾಗಿಯೇ ದಾನ ನೀಡಿದ್ದಾರೆ. ಆದರೆ ಅದನ್ನು ಸ್ವೀಕರಿಸಿದ ಭಿಕ್ಷುಗಳಿಗೆ ಮಾತ್ರ ಯಾವ ಜಾತಿಯೂ ಇರಲಿಲ್ಲ ಹಾಗೂ ಅವರಿಗೆ ಎಲ್ಲರೂ ಒಂದೇ ಆಗಿ ಕಾಣಿಸಿದ್ದರು. ಅಂದರೆ ಈ ಶಾಸನಗಳಲ್ಲಿ ಜಾತಿ ವೈವಿಧ್ಯತೆಯ ಸಮಾಜವು ಜಾತ್ಯತೀತ ಶ್ರಮಣರ ಸಮೂಹವನ್ನು ಪೋಷಿಸುವ ಅದ್ಭುತಕ್ಕೆ ನಾವು ಸಾಕ್ಷಿಗಳಾಗುತ್ತೇವೆಯೇ ಹೊರತೂ ಜಾತಿಯೇ ಇಲ್ಲದ ಸಮಾಜವನ್ನು ಕಾಣುವುದಿಲ್ಲ. ಜಾತಿಯನ್ನು ವಿರೋಧಿಸಿದ ಸಮಾಜವನ್ನೂ ಕಾಣುವುದಿಲ್ಲ. ಅಂದರೆ ಬೌದ್ಧ ಮತವನ್ನು ಅರ್ಥಮಾಡಿಕೊಳ್ಳಲಿಕ್ಕೆ ಕ್ರಿಶ್ಚಿಯಾನಿಟಿ ಅಥವಾ ಇಸ್ಲಾಂ ಮತಗಳ ಕುರಿತ ಜ್ಞಾನವು ಸಹಕರಿಸಲಾರದು.

Author

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp