Home ವಸಾಹತು ಪ್ರಜ್ಞೆದಾರಿ ತಪ್ಪಿದ ಸಂಸ್ಕೃತಿ ಚಿಂತನೆ ಉಳ್ಳವರು ಶಿವಾಲಯವ ಮಾಡುವರಯ್ಯ…

ಉಳ್ಳವರು ಶಿವಾಲಯವ ಮಾಡುವರಯ್ಯ…

by Rajaram Hegde
162 views

ಭಾರತೀಯ ದೇವಾಲಯಗಳನ್ನು ಕ್ಯಾಥೋಲಿಕ್ ಚರ್ಚುಗಳಿಗೆ ಸಮೀಕರಿಸಿ ಅವುಗಳನ್ನು ಅನೈತಿಕ ಆಚರಣೆಗಳ ಕೇಂದ್ರಗಳು ಎಂದು ಪಾಶ್ಚಾತ್ಯರು ಭಾವಿಸಿಕೊಂಡರು. ಹೀಗೆ ಭಾವಿಸಿಕೊಳ್ಳುವವರು ಕ್ಯಾಥೋಲಿಕ್ ಚರ್ಚುಗಳ ವಿರುದ್ಧ ಹೋರಾಡಿದ ಪ್ರೊಟಿಸ್ಟಾಂಟ್ ಚಿಂತನೆಗಳು ಹಾಗೂ ರಿಲಿಜನ್ನಿನ ವಿರುದ್ಧವೇ ಹೋರಾಡಿದ ಅಥೇಯಿಸ್ಟ್ ಚಿಂತಕರಿಂದ ಪ್ರಭಾವಿತರಾಗಿದ್ದರು. ಇದನ್ನನುಸರಿಸಿ ಭಾರತದಲ್ಲೂ ದೇವಾಲಯಕ್ಕೂ, ಪುರೋಹಿತಶಾಹಿಗೂ, ಜಾತಿ ತರತಮಗಳಿಗೂ, ಮೌಢ್ಯಕ್ಕೂ, ಶೋಷಣೆಗೂ ತಾಳೆಹಾಕಿಯೇ ಅವುಗಳನ್ನು ನೋಡುವ ಧೋರಣೆ ಪ್ರಗತಿಪರರಲ್ಲಿ ಹುಟ್ಟಿಕೊಂಡಿತು. ಆದರೆ ಭಾರತದ ಸಂದರ್ಭದಲ್ಲಿ ಈ ಧೋರಣೆಯು ವಿರೋಧಾಭಾಸಗಳಿಂದ ಕೂಡಿದೆ ಎನ್ನುವುದು ಕೂಡ ನಿದರ್ಶಿತವಾದ ವಿಚಾರ. ಇತ್ತೀಚೆಗೆ ಶನಿ ಸಿಂಗ್ಣಾಪೂರ ಹಾಗೂ ಶಬರಿಮಲೆಯಲ್ಲಿ ಸ್ತ್ರೀಯರಿಗೆ ನಿಷೇಧಿತ ಸ್ಥಳದಲ್ಲಿ ಪ್ರವೇಶ ನೀಡಬೇಕೆಂದು ಆಗ್ರಹಿಸಿ ಹೋರಾಟಗಳು ನಡೆಯುತ್ತಿವೆ. ಹಿಂದೂ ಸ್ತ್ರೀಯರನ್ನು ಪುರುಷರಂತೆ ದೇವಾಲಯಗಳ ಆಚರಣೆಗಳಲ್ಲಿ ಒಳಗೊಳ್ಳುವುದು ಅವರ ಸಮಾನತೆಯ ಸಾಧನೆಗಾಗಿ ಅತ್ಯವಶ್ಯ ಎಂಬುದು ಇದರ ಹಿಂದಿರುವ ನಂಬಿಕೆ. ಅದೇ ಸಮಯದಲ್ಲಿ ಹಿಂದೂ ಸ್ತ್ರೀಯರು ನಮ್ಮ ಸಾಂಪ್ರದಾಯಿಕ ಆಚರಣೆಗಳಿಂದಾಗಿ ದಾಸ್ಯಕ್ಕೆ ತಳ್ಳಲ್ಪಟ್ಟಿದ್ದಾರೆ. ಅವುಗಳಿಂದ ಸ್ತ್ರೀಯರು ಬಿಡುಗಡೆ ಹೊಂದಬೇಕು ಎಂದೂ ಒಂದು ಗುಂಪಿನ ಸ್ತ್ರೀವಾದಿಗಳು ನಂಬುತ್ತಾರೆ. ಇದು ಸ್ತ್ರೀವಾದಿಗಳದೊಂದೇ ಸಮಸ್ಯೆಯಲ್ಲ, ದೇವಾಲಯಗಳಂಥ ಸಾಂಪ್ರದಾಯಿಕ ಸಂಸ್ಥೆಗಳ ಕುರಿತು ಪರಸ್ಪರ ವಿರುದ್ಧವಾದ ಅಭಿಪ್ರಾಯಗಳನ್ನು ನಮ್ಮ ವಿದ್ಯಾವಂತರು ಬಳುವಳಿಯಾಗಿ ಪಡೆದಂತಿದೆ. ಅಂದರೆ ಸಮಾನತೆಗಾಗಿ ಹೋರಾಡುವ ಚಿಂತಕರು ಒಂದೆಡೆ ದೇವಾಲಯಗಳಲ್ಲಿ ಎಲ್ಲರಿಗೂ ಪ್ರವೇಶ ಬೇಕು ಎನ್ನುತ್ತಾರೆ ಮತ್ತೊಂದೆಡೆ ದೇವಾಲಯಗಳನ್ನೇ ನಿರಾಕರಿಸಬೇಕೆಂಬ ನಿಲುವನ್ನು ಕೂಡ ಹೊಂದಿರುತ್ತಾರೆ.

ಇದೊಂದು ವಿಚಿತ್ರ ಆದರೂ ಸತ್ಯ. ದೇವಾಲಯದ ಕುರಿತ ಪ್ರಗತಿಪರರ ಧೋರಣೆಯನ್ನು ರೂಪಿಸಿದ ಪ್ರೊಟೆಸ್ಟಾಂಟರು ಅಥವಾ ಪಾಶ್ಚಾತ್ಯ ಸೆಕ್ಯುಲರ್ ಚಿಂತಕರು ಈ ಥರದ ಇಬ್ಬಂದಿತನವನ್ನು ಪ್ರದರ್ಶಿಸುವುದನ್ನು ಊಹಿಸಿಕೊಳ್ಳಲು ಸಾಧ್ಯವೆ? ಅಂದರೆ ಒಂದೆಡೆ ಕ್ಯಾಥೋಲಿಕ್ ಚರ್ಚುಗಳನ್ನು ಶೋಷಣೆಯ ರಚನೆಗಳು ಎಂದು ತಿರಸ್ಕರಿಸಿ ಹೋರಾಡುತ್ತ ಮತ್ತೊಂದೆಡೆ ಅವೇ ಚರ್ಚುಗಳ ಆಚರಣೆಗಳಲ್ಲಿ ತಮಗೂ ಸಮಾನ ಅವಕಾಶವಿರಬೇಕೆಂದು ಹೋರಾಡುವ ಕೆಲಸವನ್ನು ಅವರು ಮಾಡುವುದನ್ನು ಊಹಿಸಿಕೊಳ್ಳಿ. ಆದರೆ ಭಾರತೀಯ ಸಂದರ್ಭದಲ್ಲಿ ಈ ಮೇಲಿನ ವಿರೋಧಾಭಾಸವು ಹುಟ್ಟಿಕೊಳ್ಳುತ್ತದೆ. ಏಕೆಂದರೆ, ಒಂದೆಡೆ ಎಲ್ಲ ಕ್ರಿಶ್ಚಿಯನ್ನರಿಗೂ ಚರ್ಚಿನಲ್ಲಿ ಪ್ರವೇಶ ನೀಡದಿದ್ದರೆ ಅವರಿಗೆ ರಿಲಿಜನ್ನಿನ ಸಮಾನತೆಯ ಸ್ಥಾನಮಾನವನ್ನು ನಿರಾಕರಿಸಿದಂತಾಗುತ್ತದೆ ಎಂಬ ರಿಲಿಜನ್ನಿನ ವಾದ, ಮತ್ತೊಂದೆಡೆ ರಿಲಿಜನ್ ಎಂಬುದೇ ಶೋಷಣಾತ್ಮಕ ವ್ಯವಸ್ಥೆ ಎಂಬ ಪ್ರಗತಿಪರ ವಾದ ಇವೆರಡನ್ನೂ ಇಂಥವರು ತಮ್ಮದಾಗಿ ಮಾಡಿಕೊಂಡಿದ್ದಾರೆ. ಆದರೆ ಭಾರತೀಯ ದೇವಾಲಯಗಳಿಗೂ ಈ ವಿಭಿನ್ನ ಧೋರಣೆಗಳಿಗೂ ಅರ್ಥಾರ್ಥ ಸಂಬಂಧವಿಲ್ಲ.

ಇಂಥವರು ಬಸವಣ್ಣನವರ ‘ಉಳ್ಳವರು ಶಿವಾಲಯವ ಮಾಡುವರಯ್ಯ’ ಎಂಬ ವಚನವನ್ನು ಇದೇ ಧೋರಣೆಗೆ ಸಾಕ್ಷಿಯಾಗಿ ಎಳೆತರುವುದನ್ನೂ ನೋಡುತ್ತೇವೆ. ಈ ವಚನವು ದೇವಾಲಯಗಳನ್ನು ಕಟ್ಟುವುದನ್ನು ವಿರೋಧಿಸುತ್ತದೆ. ಹಾಗಾಗಿ ಬಸವಣ್ಣನವರು ಹಿಂದೂ ದೇವಾಲಯ ಸಂಸ್ಥೆಯ ವಿರುದ್ಧ ಹೋರಾಡಿದರು ಎಂಬುದಾಗಿ ಹೇಳಲಾಗುತ್ತದೆ. ಹಾಗೆಯೇ ಈ ವಚನದ ಮೂಲಕ ಬಸವಣ್ಣನವರು ಉಳ್ಳವರ ವರ್ಗದ ವಿರುದ್ಧ ಪ್ರತಿಭಟನೆ ನಡೆಸಿದರು ಎಂದು ಕೂಡ ಪ್ರತಿಪಾದಿಸಲಾಗುತ್ತದೆ. ಅದಕ್ಕೆ ‘ನಾನೇನ ಮಾಡಲಿ ಬಡವನಯ್ಯಾ’ ಎಂಬ ಸಾಲು ಪ್ರಮುಖ ಆಧಾರ. ಆದರೆ ‘ಎನ್ನ ಕಾಲೇ ಕಂಭ’ ಇತ್ಯಾದಿ ವಿವರಗಳು ತಿಳಿಸುವಂತೆ ಬಸವಣ್ಣನವರು ದೇಹವನ್ನೇ ದೇವಾಲಯ ಎನ್ನುತ್ತಿದ್ದಾರೆ. ಇದೂ ಕೂಡ ಮನುಷ್ಯ ದೇಹವೇ ಚರ್ಚು ಎಂಬ ಪ್ರೊಟೆಸ್ಟಾಂಟ್ ವಾದವನ್ನು ಹೋಲುತ್ತದೆ ಎಂದು ವಾದಿಸಬಹುದು. ಆದರೆ ಈ ವಚನದಲ್ಲೊಂದೇ ಅಲ್ಲ, ದೇವಾಲಯ ಪೂಜೆಯನ್ನು ಪ್ರತಿಪಾದಿಸುವ ಸಂಸ್ಕೃತ ಆಗಮ ಶಾಸ್ತ್ರಗಳಲ್ಲೂ ಕೂಡ ಇಂಥ ವಾಕ್ಯಗಳು ಸಿಗುತ್ತವೆ. ಹಾಗಾಗಿ ಈ ಹೇಳಿಕೆಯು ದೇವಾಲಯಗಳ ನಿರಾಕರಣೆ ಮಾಡುವ ಸಾಧ್ಯತೆಯಿಲ್ಲ. ಏಕೆಂದರೆ ಆಗಮಶಾಸ್ತ್ರಗಳಿರುವುದೇ ದೇವಾಲಯ ಪೂಜೆಗಳನ್ನು ಶಾಸ್ತ್ರಬದ್ಧಗೊಳಿಸಲಿಕ್ಕೆ. ಭಾರತೀಯ ಭಕ್ತಿ ಸಂಪ್ರದಾಯಗಳಲ್ಲಿ ಭಕ್ತನು ಪರಮಾತ್ಮನನ್ನು ಕಂಡುಕೊಳ್ಳಲು ಸಾಕಾರೋಪಾಸನೆಯ ಮಾರ್ಗದಿಂದ ಹೊರಡುತ್ತಾನೆ. ಹಾಗೂ ಮೂರ್ತಿಗಳನ್ನು ಹಾಗೂ ಲಿಂಗಗಳನ್ನು ಇಟ್ಟು ಪೂಜಿಸಲು ದೇವಾಲಯಗಳನ್ನು ಕಟ್ಟಲಾಗುತ್ತದೆ. ಇದು ಮೊದಲನೆಯ ಹಂತ ಅಷ್ಟೆ, ಆಗಮ ಶಾಸ್ತ್ರಗಳಲ್ಲಿ ಪ್ರತಿಮಾ ಲಕ್ಷಣ ಎಂಬ ಭಾಗವು ಮೂರ್ತಿಗಳನ್ನು ಹೇಗೆ ರಚಿಸಬೇಕು ಎಂಬುದನ್ನು ವಿಧಿಸುತ್ತದೆ. ಆದರೆ ಅದರ ಜೊತೆಗೇ ಮೂರ್ತಿ ಪೂಜೆಯು ಅಜ್ಞಾನಿಗಳಿಗೆ, ಅಲ್ಪ ಮತಿಗಳಿಗೆ ಪರಮಾತ್ಮನನ್ನು ಅರಿಯಲಿಕ್ಕೆ ಮೊದಲನೆಯ ಹೆಜ್ಜೆ ಎಂದು ಅವು ತಿಳಿಸುತ್ತವೆ. ಅದನ್ನಿಟ್ಟುಕೊಂಡು ಆಗಮ ಶಾಸ್ತ್ರಗಳು ಮೂರ್ತಿಪೂಜೆಯನ್ನು, ದೇವಾಲಯಗಳನ್ನು ವಿರೋಧಿಸುತ್ತಿವೆ ಎನ್ನಲು ಸಾಧ್ಯವೆ? ವಿರೋಧಿಸುವುದೇ ಆದಲ್ಲಿ ಅವು ಮತ್ತೇಕೆ ಪ್ರತಿಮೆಗಳನ್ನು ಯಾವ ಯಾವ ಮಾನಗಳಲ್ಲಿ, ಪ್ರಮಾಣಗಳಲ್ಲಿ ರಚಿಸಬೇಕೆಂದು ವಿವರಿಸಿ ತಲೆಚಿಟ್ಟುಹಿಡಿಸಬೇಕು? ಅಂದರೆ ಆಗಮಗಳ ಪ್ರಕಾರ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಪರಮಾತ್ಮನನ್ನು ಅರಿಯುವ ಮಾರ್ಗದಲ್ಲಿ ಅಜ್ಞಾನಿಗಳಿಗೆ ಮೊದಲನೆಯ ಹೆಜ್ಜೆ. ಅದರ ಅಂತಿಮ ಗುರಿಯೆಂದರೆ ಪರಮಾತ್ಮನ ಜ್ಞಾನ. ಹಾಗೂ ಅದನ್ನು ಪಡೆದವನು ಜ್ಞಾನಿ. ಅವನಿಗಾಗುವ ಜ್ಞಾನವೆಂದರೆ ಪರಮಾತ್ಮ ನನ್ನೊಳಗೇ ಇದ್ದಾನೆ ಅಥವಾ ನಾನೇ ಪರಮಾತ್ಮ ಎಂಬ ಸತ್ಯ. ಈ ಸತ್ಯದ ಸಾಕ್ಷಾತ್ಕಾರವಾದವನಿಗೆ ಮೂರ್ತಿ ಹಾಗೂ ದೇವಾಲಯಗಳು ಅರ್ಥಹೀನವಾಗುತ್ತವೆ. ಈ ಅರಿವು ತೀರಾ ಕೆಲವರಿಗೆ ಆಗುವಂಥದ್ದು.

ಈ ವಚನದಲ್ಲಿ ಬರುವ ಉಳ್ಳವರು ಹಾಗೂ ಬಡವ ಎಂಬ ಎರಡು ಪ್ರಯೋಗಗಳು ಕುತೂಹಲಕಾರಿಯಾಗಿ ಕಾಣಿಸುತ್ತವೆ. ಇದು ಬಸವಣ್ಣನವರ ಕಾಲದ ಶಿವಭಕ್ತಿಯ ಒಂದು ಮಾರ್ಗದ ಚಿತ್ರಣ. ಶಿವಾಲಯಗಳನ್ನು ಮಾಡುತ್ತಿದ್ದವರು ಉಳ್ಳವರು. ಅವರು ತಮ್ಮ ಪೂಜೆಗಾಗಿ ಹಾಗೂ ಸದ್ಗತಿಗಾಗಿ ಅವನ್ನು ಕಟ್ಟುತ್ತಿದ್ದರು ಎಂಬುದು ಶಾಸನಗಳಿಂದ ವಿದಿತವಾಗುತ್ತದೆ. ವೃತ್ತಿ ಗುಂಪುಗಳು, ಜಾತಿಗಳು, ಊರುಗಳು, ಇತ್ಯಾದಿಗಳೂ ಒಟ್ಟಿಗೆ ಸೇರಿ ಆಯಾ ಸಮೂಹಗಳ ಸದಸ್ಯರಿಗಾಗಿ ದೇವಾಲಯಗಳನ್ನು ಕಟ್ಟಿಸುತ್ತಿದ್ದರು. ರಾಜರು ಹಾಗೂ ಅಧಿಕಾರಿಗಳು ಅವುಗಳ ಪೋಷಣೆಗಾಗಿ ದಾನ ದತ್ತಿಗಳನ್ನು ಬಿಡುತ್ತಿದ್ದರೂ ಅವು ಸಾರ್ವಜನಿಕರ ಸೊತ್ತಾಗಿರಲಿಲ್ಲ. ಅವು ಉಳ್ಳವರು ಶಿವನಿಗೆ ತಮ್ಮ ಭಕ್ತಿಯನ್ನು ಸಲ್ಲಿಸುವ ವಿಧಾನಗಳು. ಇಂಥ ಕೆಲವು ದೇವಾಲಯಗಳು ಭಕ್ತಾದಿಗಳನ್ನು ಆಕರ್ಷಿಸಿ ಸುಪ್ರಸಿದ್ಧ ಕ್ಷೇತ್ರಗಳಾಗಿ ಬೆಳೆದರೆ ಕೆಲವು ಅವುಗಳ ದಾತರು ಗತಿಸಿದ ನಂತರ ಆಶ್ರಯವಿಲ್ಲದೇ ಹಾಳುಬಿದ್ದು ‘ಶಯನಕೆ ಪಾಳು ದೇಗುಲ’ಗಳಾಗಿ ಮಾರ್ಪಟ್ಟವು. ಈ ಸಾಲಿನ ಮತ್ತೊಂದು ಭಾಗ ‘ನಾನೇನ ಮಾಡಲಿ ಬಡವನಯ್ಯಾ’ ಎಂಬುದನ್ನು ಕೂಡ ಇಂದಿನ ಚಿಂತಕರು ತರ್ಕಿಸುವಂತೆ ವರ್ಗ ಪ್ರಜ್ಞೆಯಿಂದ ಹೇಳಿದ್ದಲ್ಲ. ಅಷ್ಟಕ್ಕೂ ಬಸವಣ್ಣನವರು ತಮಗೆ ದೇವಾಲಯ ಕಟ್ಟುವ ಶಕ್ತಿಯಿಲ್ಲ ಎಂದು ತಿಳಿಸುತ್ತಿದ್ದಾರೆಯೆ? ಎಂತೆಂಥವರೋ ಕಟ್ಟಿರುವಾಗ ಬಸವಣ್ಣನವರಿಗೆ ಅದು ಸಾಧ್ಯವಾಗಿರಲಿಲ್ಲ ಎಂದು ಭಾವಿಸುವುದು ಯಥಾರ್ಥವಾಗುವುದಿಲ್ಲ. ಅಥವಾ ಹಾಗೆಯೇ ಕಟ್ಟಲಾರದ ಬಡವರ ಗೋಳನ್ನು ಪ್ರತಿನಿಧಿಸುತ್ತಿದ್ದಾರೆಯೆ? ಕೇವಲ ದೇವಾಲಯದಿಂದಲೇ ಅರ್ಥ ಸಾಧನೆಯಾಗಲಾರದು ಎಂದು ತಮ್ಮ ಅನುಭವದಲ್ಲಿ ಕಂಡುಕೊಂಡವರು ಅದನ್ನು ಕಟ್ಟಲಾರದವರಿಗೆ ಅನ್ಯಾಯವಾಗಿದೆ ಎಂದು ಭಾವಿಸುವುದು ಕೂಡ ಸಾಧ್ಯವಿಲ್ಲ. ಅಂದರೆ ಇದು ಭಕ್ತಿ ಸಾಹಿತ್ಯದಲ್ಲಿ ಭಕ್ತರು ಪರಮಾತ್ಮನಲ್ಲಿ ನಿವೇದಿಸಿಕೊಳ್ಳುವ ಒಂದು ಸಾಮಾನ್ಯ ಕ್ರಮವಾಗಿದೆ. ಅದು ಪರಮಾತ್ಮನ ನಿಜ ತತ್ವವನ್ನು ಅರಿತವರು ಭಕ್ತಿಯ ಉನ್ನತ ಹಂತದಲ್ಲಿ ಕಂಡುಕೊಂಡ ಸತ್ಯ. ಈ ಸತ್ಯವನ್ನು ತಲುಪದವರು ಆಡಂಬರದಲ್ಲೇ ಮುಳುಗಿರುತ್ತಾರೆ. ಬಸವಣ್ಣನವರು ಅವರ ಕಾಲದ ವಾಸ್ತವಿಕ ಉದಾಹರಣೆಯೊಂದನ್ನು ಬಳಸಿಕೊಂಡು ಅಧ್ಯಾತ್ಮದ ಈ ಮೇಲಿನ ಸತ್ಯವನ್ನು ತಿಳಿಸುತ್ತಿದ್ದಾರೆ.

ನಾವು ಹನ್ನೆರಡನೆಯ ಶತಮಾನದ ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದಾಗ ಕಣ್ಣಿಗೆ ರಾಚುವಂತೆ ಕಂಡುಬರುವ ಒಂದು ಸಂಗತಿ ಎಂದರೆ ದೇವಾಲಯಗಳ ನಿರ್ಮಾಣ. ದೇವಾಲಯ ನಿರ್ಮಾಣದ ಉತ್ತುಂಗಾವಸ್ಥೆಗೆ ಸಾಕ್ಷಿಯಾಗಿ ಅಂದಿನ ವಾಸ್ತು ಶೈಲಿಗಳು, ಅವುಗಳ ಕಲಾತ್ಮಕತೆ, ವೆಚ್ಚ, ವೈಭವ, ಅವುಗಳಿಗೆ ಸಿಕ್ಕ ದಾನಗಳು, ಶಾಸನಗಳು, ಪ್ರಶಸ್ತಿಗಳು, ಇತ್ಯಾದಿಗಳು ಇವೆ. ಇವೆಲ್ಲ ಇಲ್ಲದವರ ಸೃಷ್ಟಿಯಾಗುವುದು ಸಾಧ್ಯವೇ ಇಲ್ಲ. ಅದರಲ್ಲೂ ವಿಶೇಷವಾಗಿ ವಚನಕಾರರ ನಾಡಾದ ಉತ್ತರ ಕರ್ನಾಟಕದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಸ್ಥಾವರ ಲಿಂಗಗಳಿಗೆ ಕಟ್ಟಿದ ಶೈವ ದೇವಾಲಯ ಸಂಸ್ಥೆಗಳು ತಲೆಯೆತ್ತಿದವು. ಈ ದೇವಾಲಯಗಳ ಜೊತೆಜೊತೆಗೇ ಶಿವ ಶರಣರೂ ಕಾಣಿಸಿಕೊಳ್ಳುತ್ತಾರೆ. ಹಾಗಂತ ಶರಣರಿಗೂ ದೇವಾಲಯ ಸಂಸ್ಥೆಗಳಿಗೂ ವೈರತ್ವವಿರಲಿಲ್ಲ. ಕೆಲವು ಶರಣರು ತಾವೇ ಸ್ವತಃ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಈ ದೇವಾಲಯಗಳಲ್ಲಿ ಆಗಮೋಕ್ತ ಪೂಜೆಗೆ ಕಾಳಾಮುಖ ಮುನಿಗಳು, ಶೈವ ಆಚಾರ್ಯರು ಇದ್ದರು. ಆದರೆ ಶಾಸನಗಳು ತಿಳಿಸುವಂತೆ ಈ ದೇವಾಲಯಗಳು ಜಂಗಮ ಶರಣರಿಗೆ ಅನ್ನ ಸತ್ರಗಳೂ, ತಂಗುದಾಣಗಳೂ ಆಗಿದ್ದವು. ಇವುಗಳನ್ನು ಕಟ್ಟಿ ನಿರ್ವಹಿಸುತ್ತಿದ್ದ ಕೆಲವು ಕಾಳಾಮುಖ ಆಚಾರ್ಯರನ್ನು ‘ಜಂಗಮರ ಕಲ್ಪಭೂಜರು’ ಎಂದು ವರ್ಣಿಸಲಾಗಿದೆ. ಅಂದರೆ ಹನ್ನೆರಡನೆಯ ಶತಮಾನದಲ್ಲಿ ಮನೆಮಠಗಳನ್ನು ತೊರೆದು ಅಲೆದಾಡುತ್ತಿದ್ದ ಜಂಗಮ ಶರಣರ ಪೋಷಣೆಯನ್ನು ಮಾಡುವಲ್ಲಿ ಈ ದೇವಾಲಯಗಳ ಪಾತ್ರವೂ ಹಿರಿದಾಗಿದೆ. ಶೈವ ಪರಂಪರೆಯಲ್ಲಿ ಒಂದೇ ಶಿವಯೋಗಮಾರ್ಗದ ಎರಡು ಬಿಂದುಗಳಾಗಿ ದೇವಾಲಯವೆಂಬ ಸ್ಥಾವರವೂ ಶರಣರೆಂಬ ಜಂಗಮವೂ ಇದ್ದವು ಹಾಗೂ ಅವು ಸಹಬಾಳ್ವೆ ನಡೆಸಿದ್ದವು. ಅಂದರೆ ಭಾರತೀಯ ಸಂಪ್ರದಾಯವೊಂದು ದೇವಾಲಯವನ್ನು ಹೇಗೆ ಭಾವಿಸಿತ್ತು ಎಂಬುದರ ಕುರಿತು ಒಂದು ಕಲ್ಪನೆಯನ್ನು ಇಟ್ಟುಕೊಂಡು ಬಸವಣ್ಣನವರ ವಚನವನ್ನು ಪ್ರವೇಶಿಸಿದರೆ ಅದರ ಅರ್ಥ ಸಿಗುವ ಸಂಭಾವ್ಯತೆಯಿದೆ.

ಪ್ರಸ್ತುತ ವಚನವು ದೇವಾಲಯಗಳ ವಿರುದ್ಧ ಪ್ರತಿಭಟನೆ ಎಂದು ಭಾವಿಸುವವರು ‘ಸ್ಥಾವರಕ್ಕಳಿವುಂಟು’ ಎಂಬುದನ್ನು ಎತ್ತಿ ಹೇಳುತ್ತಾರೆ ಆದರೆ ‘ಜಂಗಮಕ್ಕಳಿವಿಲ್ಲ’ ಎಂದರೇನು ಎಂಬುದರ ಕುರಿತು ಬೆಳಕು ಚೆಲ್ಲುವುದಿಲ್ಲ. ಜಂಗಮ ಎಂದರೆ ದೇಹವಂತೂ ಅಲ್ಲ. ದೇಹವೂ ಅಳಿಯುತ್ತದೆ. ಹಾಗಿರುವಾಗ ಅಳಿವಿಲ್ಲದ ಜಂಗಮ ಯಾವುದು? ಪ್ರಸ್ತುತ ವಚನವು ಸ್ಥಾವರವೆಂದರೆ ದೇವಾಲಯವನ್ನೊಂದೇ ಸೂಚಿಸುತ್ತದೆ ಎಂದು ತಿಳಿಯಬೇಕಿಲ್ಲ. ಸಾಧಾರಣವಾಗಿ ಈ ವಚನವನ್ನು ಹಾಗೇ ಅರ್ಥೈಸಲಾಗಿದೆ. ಕಲ್ಲಿನ ರೂಪದ ಇಷ್ಟ ಲಿಂಗವೂ ಸ್ಥಾವರವೇ ಆಗಿರಬಹುದು. ಅದು ದೇಹವೂ ಆಗಿರಬಹುದು. ಏಕೆಂದರೆ ಈ ವಚನವು ದೇಹವೇ ದೇವಾಲಯ ಅನ್ನುತ್ತದೆ. ಅಂದರೆ ಜಂಗಮ ಎಂಬುದಾಗಿ ಅದು ದೇಹವನ್ನು, ದೇಹಕ್ಕೆ ಕಟ್ಟಿಕೊಂಡ ಲಿಂಗವನ್ನು ಸೂಚಿಸುತ್ತಿಲ್ಲ. ಬದಲಾಗಿ ದೇಹದೊಳಗೆ ಮನೆಮಾಡಿ ದೇಹದ ಜೊತೆ ಜಂಗಮವಾಗಿರುವ ಅವಿನಾಶೀ ತತ್ವವನ್ನು ಕುರಿತು ಹೇಳುತ್ತಿದೆ. ವೀರಶೈವರ ಸ್ಥಲ ಪರಿಕಲ್ಪನೆಯಲ್ಲಿ ಶಿವಭಕ್ತನೊಬ್ಬನ ಸಾಧನೆಯು ವಸ್ತುರೂಪದ ಲಿಂಗದ ಉಪಾಸನೆಯಿಂದ ಪ್ರಾರಂಭವಾಗುತ್ತದೆ. ನಂತರ ಅವನಿಗೆ ನನ್ನ ಪ್ರಾಣವೇ ಲಿಂಗ ಎಂಬ ಜ್ಞಾನ ಸಾಧ್ಯವಾದಾಗ ಅವನಲ್ಲಿರುವ ಸ್ಥಾವರ ಲಿಂಗವೆಂಬ ಅಜ್ಞಾನವು ಅಳಿಯುತ್ತದೆ. ಅದು ಒಂದರ್ಥದಲ್ಲಿ ಸ್ಥಾವರದ ನಿಜವಾದ ಅಳಿವು ಕೂಡಾ. ಶರಣನು ಅಂಥವನು. ಇದನ್ನು ಗಮನಿಸಿದರೆ ಈ ವಚನದಲ್ಲಿ ದೇವಾಲಯವನ್ನು ನಿರಾಕರಿಸುವ ಪ್ರಸ್ತಾಪವಿಲ್ಲ, ಆ ಶಬ್ದ ಹಾಗೂ ಕ್ರಿಯೆಯ ನಿಜ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

Author

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp