Home ಪುಸ್ತಕದ ಕುರಿತು ಪಶ್ಚಿಮಾಯನ – ಭಾರತೀಯ ಸಂಪ್ರದಾಯದ ಕಥೆಗಳ ಹಿಸ್ಟರೀಕರಣದ ಪರಿಣಾಮಗಳು

ಪಶ್ಚಿಮಾಯನ – ಭಾರತೀಯ ಸಂಪ್ರದಾಯದ ಕಥೆಗಳ ಹಿಸ್ಟರೀಕರಣದ ಪರಿಣಾಮಗಳು

98 views

ಯಾವ ಸಂಪ್ರದಾಯದ ಯಾವ ಕಥೆಯ ಯಾವ ಭಾಗವು ಹಿಸ್ಟರಿಯಾಗುತ್ತದೆ ಹಾಗೂ ಯಾವುದು ಮಿಥ್ ಆಗುತ್ತದೆ ಎನ್ನುವುದು ಸಂಪೂರ್ಣ ಆರ್ಬಿಟ್ರರಿ. ಇಂದು ನಾವು ಓದುವ ಹಿಸ್ಟರಿಯು ಭಾರತೀಯ ಸಂಪ್ರದಾಯಗಳಲ್ಲೇ ಬೆಳೆದು ಬಂದ ಕಥೆಗಳ ವಿರೂಪಿತ ಕಥಾನಕವಾಗಿದೆ.

ಶಂಕರಾಚಾರ್ಯರ ಅದ್ವೈತ ಮತವನ್ನು ಅನುಸರಿಸುವ ಅನೇಕ ಸಂಪ್ರದಾಯಗಳು ಹಾಗೂ ಶಂಕರ ಮಠಗಳು ಭಾರತದಲ್ಲಿವೆ. ಶಂಕರಾಚಾರ್ಯರ ಕುರಿತ ಅನೇಕ ಚರಿತ್ರೆಗಳು, ಜೀವನ ವೃತ್ತಾಂತಗಳು, ಸ್ಥಳೀಯ ಕಥೆಗಳು ಈ ಸಂಪ್ರದಾಯಗಳಲ್ಲಿ ಕಂಡು ಬರುತ್ತವೆ. ಉದಾಹರಣೆಗೆ ಶಂಕರಾಚಾರ್ಯರು ಷಣ್ಮತಗಳನ್ನು ಒಗ್ಗೂಡಿಸಿ, ಪಂಚಾಯತನ ಪೂಜೆಯನ್ನು ಆರಂಭಿಸಿದರು ಎಂದು ಅನೇಕರು ಹೇಳುತ್ತಾರೆ. ಹಲವಾರು ಶಂಕರವಿಜಯಗಳು ಆಚಾರ್ಯರ ಜೀವನಚರಿತ್ರೆಗಳನ್ನು ತಿಳಿಸುತ್ತವೆ. ಶಕ್ತಿಪೀಠಗಳು ಹಾಗೂ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಅವರ ಹಲವಾರು ಸ್ಥಳಪುರಾಣಗಳು ಕೇಳಸಿಗುತ್ತವೆ. ಭಾಷ್ಯಗಳ ಜೊತೆ ಸಹಸ್ರಾರು ಸ್ತೋತ್ರಗಳನ್ನು ಶಂಕರಾಚಾರ್ಯವಿರಚಿತವೆಂದು ನಂಬಿ ಪ್ರತಿನಿತ್ಯ ಪಠಿಸುವ ಕೋಟ್ಯಂತರ ಭಕ್ತರು ಈ ಸಂಪ್ರದಾಯಗಳಲ್ಲಿದ್ದಾರೆ. ಆದರೆ ಆಧುನಿಕ ಶಿಕ್ಷಣವು ಮತ್ತು ಅದು ಕಲಿಸುವ ಹಿಸ್ಟರಿಯ ವಿಧಾನವು ಈ ಸಂಪ್ರದಾಯಗಳ ನಡುವೆ ಇಲ್ಲದ ಹೊಸ ಹೊಸ ವಿವಾದಗಳನ್ನು ಸೃಷ್ಟಿಸುತ್ತಿದೆ. ಶಂಕರ ಮಠಗಳ ನಡುವೆ ಇಲ್ಲದ ಹೊಸ ಹೊಸ ಕಂದಕಗಳನ್ನು ಸೃಷ್ಟಿಸಿದೆ. ಈ ಸಂಗತಿಗಳನ್ನು ಅಧ್ಯಯನ ಮಾಡುವದರ ಮೂಲಕ ಭಾರತೀಯ ಸಮಾಜದಲ್ಲಿ ಇಂದು ಯಾವೆಲ್ಲ ಹೊಸ ವಿವಾದಗಳು ಸೃಷ್ಟಿಯಾಗಿವೆ ಹಾಗೂ ಇವು ನಮ್ಮ ಸಹಬಾಳ್ವೆಗೆ ಹೇಗೆ ಸಮಸ್ಯೆಗಳನ್ನು ತಂದೊಡ್ಡಲಿವೆ ಎನ್ನುವುದನ್ನು ತಿಳಿಯಲು ಅನುಕೂಲವಾಗಬಹುದು.

ಉದಾಹರಣೆಗೆ ಸಂಪ್ರದಾಯದಲ್ಲಿ ಬೆಳೆದವರಿಗೆ ಶಂಕರಾಚಾರ್ಯರು ವಾಸ್ತವವಾಗಿ ಯಾವಾಗ ಹುಟ್ಟಿದರು, ಇಂಥಿಂಥ ಕ್ಷೇತ್ರಗಳಲ್ಲಿ ನಿಜವಾಗಿಯೂ ಬಂದಿದ್ದರೇ ಅಥವಾ ಇಂಥಿಂಥ ಸ್ತೋತ್ರಗಳು ನಿಜವಾಗಿಯೂ ಶಂಕರಾಚಾರ್ಯರಿಂದಲೇ ಬರೆಯಲ್ಪಟ್ಟಿದ್ದೇ ಎಂಬ ಪ್ರಶ್ನೆಗಳು ಎಂದೂ ಮೂಡಿರಲೇ ಇಲ್ಲ. ಆದರೆ ಆಧುನಿಕ ಶಿಕ್ಷಣ ಆರಂಭವಾದ ನಂತರ, ಶಂಕರಾಚಾರ್ಯರ ಕುರಿತು ಇರುವ ಸಹಸ್ರಾರು ಕಥೆಗಳಲ್ಲಿ ಯಾವುದು ಹಿಸ್ಟರಿ ಹಾಗೂ ಯಾವದು ಮಿಥ್ ಎಂಬ ಜಿಜ್ಞಾಸೆಯು ಆರಂಭವಾಯಿತು. ಆಗ ಮಾಧವೀಯ ಶಂಕರವಿಜಯದ ಹಲವಾರು ವೃತ್ತಾಂತಗಳು ಹಿಸ್ಟರಿಯ ಸ್ವರೂಪವನ್ನು ಪಡೆಯಿತು ಹಾಗೂ ಇದು ಉಳಿದ ಸಂಪ್ರದಾಯಗಳ ಕಥೆಗಳನ್ನು ಸಹಜವಾಗಿಯೇ ಮಿಥ್ ಎಂದು ವರ್ಗೀಕರಿಸಿತು. ಹೀಗೊಬ್ಬ ಹಿಸ್ಟಾರಿಕಲ್ ಶಂಕರಾಚಾರ್ಯರನ್ನು ಒಂದು ಕಾಲಕ್ಕೆ (ಎಂಟನೇ ಶತಮಾನ) ಸೀಮಿತವಾಗಿರಿಸಿದ ನಂತರ, ಶಂಕರಾಚಾರ್ಯರಿಂದ ಸ್ಥಾಪಿತವಾಗಿವೆ ಎನ್ನಲಾಗುವ ಎಲ್ಲ ಮಠಗಳೂ, ದೇವಸ್ಥಾನಗಳೂ ವಾಸ್ತವವಾಗಿ ಅವರಿಂದಲೇ ಆಗಿವೆಯೇ ಎಂಬ ಜಿಜ್ಞಾಸೆಯು ಆರಂಭವಾಯಿತು. ಈ ಹಿಸ್ಚಾರಿಕಲ್ ಶಂಕರಾಚಾರ್ಯರು ವಾಸ್ತವವಾಗಿ ರಚಿಸಿದ ಕೃತಿಗಳು ಯಾವವು ಎಂಬೆಲ್ಲ ಚರ್ಚೆಗಳು ಆಧುನಿಕ ಅದ್ವೈತ ಪಂಡಿತರಿಗೆ ಮುಖ್ಯವಾಗಿಬಿಟ್ಟಿತು.

ಉಳಿದ ಅದ್ವೈತ ಸಂಪ್ರದಾಯಗಳು ಹಾಗೂ ಬೇರೆ ಬೇರೆ ಐತಿಹ್ಯವನ್ನು ಹೊಂದಿರುವ ಶಂಕರ ಮಠಗಳು ಸಹಜವಾಗಿಯೇ ಈ ಹಿಸ್ಟಾರಿಕಲ್ ಚಿತ್ರಣವನ್ನು ತಿರಸ್ಕರಿಸಿದವು ಹಾಗೂ ತಮ್ಮ ಕಥೆಗಳನ್ನು ನಿಜವಾದ ಹಿಸ್ಟರಿಯನ್ನಾಗಿಸುವ ಪ್ರಯತ್ನವನ್ನೂ ಮಾಡಿದವು. ಇಂದಿಗೂ ಯಾವ ಮಠ ಅತ್ಯಂತ ಪ್ರಾಚೀನವಾಗಿದೆ, ಕಂಚಿಯ ಕಾಮಕೋಟಿ ಮಠವು ನಿಜವಾಗಿಯೂ ಶಂಕರಾಚಾರ್ಯರಿಂದ ಸ್ಥಾಪಿತವೇ, ಸೌಂದರ್ಯಲಹರಿಯು ವಾಸ್ತವವಾಗಿ ಶಂಕರಾಚಾರ್ಯರಿಂದ ರಚಿತವೇ ಎಂಬೆಲ್ಲ ಸಮಸ್ಯೆಗಳು ವಸಾಹತು ಹಿಸ್ಟರಿ ಅಧ್ಯಯನದಿಂದ ಹುಟ್ಟಿರುವ ಪ್ರಹಸನಗಳು. ಶಂಕರಾಚಾರ್ಯರು ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಬಂದು ಶ್ರೀಚಕ್ರದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ, ಅವಳನ್ನು ಶಾಂತ ಮಾಡಿದ ಕಥೆಯನ್ನು ಈಗಿನ ಹಿಸ್ಟಾರಿಯನ್ನರು ಮೂಲನಿವಾಸಿಗಳ ದೇವತೆಯಾದ ಮಾರಿಕಾಳನ್ನು ಬ್ರಾಹ್ಮಣ ಪುರೋಹಿತಶಾಹೀ ವರ್ಗವು ಹೈಜಾಕ್ ಮಾಡಿದ್ದಾರೆ ಎಂದು ಅದನ್ನು ಒಂದು ಹಿಸ್ಟಾರಿಕಲ್ ಘಟನೆಯನ್ನಾಗಿ ಚಿತ್ರಿಸುತ್ತಾರೆ. ಈ ಹಿಸ್ಟಾರಿಕಲ್ ಚಿತ್ರಣವನ್ನು ಹಿಂದೂ ಬಲಪಂಥೀಯರು ಸಮಾಜದ ಸುಧಾರಣೆ ಎಂದು ವಿವರಿಸಿದರೆ, ಎಡಪಂಥೀಯ ಚಿಂತಕರು ಇದನ್ನು ಬ್ರಾಹ್ಮಣೀಕರಣ ಅಥವಾ ಶೋಷಣೆ ಎಂದು ವಿವರಿಸುತ್ತಾರೆ. ಈ ಬೆಳವಣಿಗೆಗಳು ಮಾರಿಕಾಂಬೆಯ ದೇವಸ್ಥಾನಕ್ಕೆ ಬಂದು ತಮ್ಮ ಆಚರಣೆಗಳನ್ನು ಮಾಡಿಕೊಂಡಿರುವ ಜಾತಿಗಳ ಮಧ್ಯೆ ವಿಷಬೀಜವನ್ನು ಬಿತ್ತುತ್ತಿವೆ.

ಭಾರತೀಯ ಸಮಾಜದಲ್ಲಿರುವ ಸಹಸ್ರಾರು ಕಥೆಗಳು, ಬೇರೆ ಬೇರೆ ಸಂಪ್ರದಾಯಗಳ ತತ್ತ್ವಗಳು ಹಾಗೂ ಸಾಹಿತ್ಯಗಳು, ಈ ಹಿಸ್ಟರೀಕರಣದ ಪ್ರಕ್ರಿಯೆಗೆ ಒಳಗಾದಾಗ ಕೆಲವು ಹಿಸ್ಟರಿಗಳಾದವು ಮತ್ತು ಉಳಿದವು ಮಿಥ್ ಗಳಾಗಿ ಉಳಿದವು. ಈ ಪ್ರಕ್ರಿಯೆಗಳು ಹೇಗೆ ನಮ್ಮ ಸಂಪ್ರದಾಯಗಳನ್ನು ನೋಡುವ ಪರಂಪರಾಗತ ದೃಷ್ಟಿಕೋನವನ್ನು ವಿರೂಪಗೊಳಿಸಿತು ಎನ್ನುವದನ್ನು ರಾಜಾರಾಮ ಹೆಗಡೆಯವರ ಇತ್ತೀಚಿನ ಪುಸ್ತಕ “ಪಶ್ಚಿಮಾಯನ” ತುಂಬ ಮನೋಜ್ಞವಾಗಿ ಚಿತ್ರಿಸುತ್ತದೆ. ದೇವಚಂದ್ರನ ರಾಜಾವಳೀ ಕಥಾಸಾರವನ್ನು ವಿಮರ್ಶಿಸುವ ಈ ಕೃತಿಯ ಮೊದಲ ಅಧ್ಯಾಯವು ಭಾರತೀಯ ಸಂಪ್ರದಾಯಗಳ ಕಥೆಗಳನ್ನು ಹಿಸ್ಟರಿಯನ್ನಾಗಿಸುವಾಗ ಹೇಗೆ ಆ ಕಥೆಗಳನ್ನು ವಿರೂಪಗೊಳಿಸಿತು ಮತ್ತು ಆ ಇಡೀ ಕೃತಿಯು ಭಾರತದ ಹಿಸ್ಟರಿಯಾಗುವಲ್ಲಿ ಏಕೆ ಸೋತಿತು ಎನ್ನುವದನ್ನು ತಿಳಿಸುತ್ತದೆ. ಸಂಪ್ರದಾಯದ ಕಥೆಗಳನ್ನು ಹಿಸ್ಟರೀಕರಣದ ಪ್ರಕ್ರಿಯೆಗೆ ಒಳಪಡಿಸುವದರ ಮೂಲಕ ಹೇಗೆ ವಸಾಹತವು ಪ್ರತಿಪಾದಿಸಿದ್ದ ಜಾತಿವ್ಯವಸ್ಥೆಯ ಚಿತ್ರಣಕ್ಕೆ ಸರಿಹೊಂದುವಂತೆ ಸಾಕ್ಷಿಗಳನ್ನು ಸಿದ್ಧ ಮಾಡಲಾಯಿತು, ವಚನಗಳು ಹಾಗೂ ಭಕ್ತಿಪಂಥಗಳು ಪರೋಹಿತಶಾಹೀ ವಿರುದ್ಧದ ಚಳುವಳಿಗಳಾಗಿ ಬದಲಾದವು ಎನ್ನುವದನ್ನು ಬಹಳ ಸ್ಪಷ್ಟವಾಗಿ ಈ ಪುಸ್ತಕವು ತೋರಿಸಿಕೊಡುತ್ತವೆ. ಜೈನ ಸಾಹಿತ್ಯವನ್ನು ಅರ್ಥೈಸುವ ರೀತಿಯು ವಸಾಹತುವಿನಿಂದ ಹೇಗೆ ಬದಲಾಯಿತು ಎನ್ನುವದನ್ನು ನಿರೂಪಿಸುತ್ತದೆ.

ಈ ಪುಸ್ತಕದಲ್ಲಿರುವ ಒಂದು ಉದಾಹರಣೆಯನ್ನೇ ತೆಗೆದುಕೊಳ್ಳುವದಾದರೆ, ಕನಕದಾಸರು ಉಡುಪಿಗೆ ಬಂದ ವೃತ್ತಾಂತವು ಮಾಧ್ವ ಸಂಪ್ರದಾಯಗಳಲ್ಲಿ ಜನಜನಿತವಾಗಿರುವ ಕಥೆಯಾಗಿದೆ. ಆ ಇಡೀ ಕಥೆಯನ್ನಷ್ಟೇ ಅಲ್ಲದೇ “ಕುಲ ಕುಲವೆಂದು” ಮುಂತಾದ ಕನಕದಾಸರ ಕೃತಿಗಳನ್ನು ತಲೆತಲಾಂತರದಿಂದ ದಾಟಿಸಿ ಅದನ್ನು ಉಳಿಸಿದ್ದು ಮಾಧ್ವಸಂಪ್ರದಾಯಗಳೇ ಆಗಿವೆ. ಆದರೆ ಏಕಾಏಕೀ ಆಧುನಿಕ ವಿದ್ವಾಂಸರಿಗೆ ಈ ಕಥೆಯು ಜಾತಿವ್ಯವಸ್ಥೆಯಲ್ಲಿ ಬ್ರಾಹ್ಮಣರು ಉಳಿದ ಜಾತಿಗಳನ್ನು ಶೋಷಿಸುವ ಹಿಸ್ಟಾರಿಕಲ್ ಘಟನೆಯ ಸೂಚಕವಾಗಿ ಕಾಣತೊಡಗುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕೆಲವು ಆಧುನಿಕ ಮಾಧ್ವವಿದ್ವಾಂಸರು ಕನಕದಾಸರು ಉಡುಪಿಗೆ ಬಂದಾಗ ನಡೆದಿದೆಯೆನ್ನಲಾದ ಪ್ರಕರಣವೇ ಸುಳ್ಳು ಎಂದು ಹೇಳುತ್ತಾರೆ ಹಾಗೂ ಮಧ್ವಾಚಾರ್ಯರು ಕೃಷ್ಣನನ್ನು ಪಶ್ಚಿಮಾಭಿಮುಖವಾಗಿಯೇ ಸ್ಥಾಪಿಸಿದ್ದು ಎಂದು ವಾದಿಸುತ್ತಾರೆ. ಹೀಗೆ ತಮ್ಮದೇ ಸಂಪ್ರದಾಯದ ಕಥೆಯನ್ನೇ ಮಿಥ್ ಎಂದು ಪರೋಕ್ಷವಾಗಿ ಸಾರಿಬಿಡುತ್ತಾರೆ. ಹೀಗೆ ನಮ್ಮದೇ ಸಂಪ್ರದಾಯದ ಕಥೆಗಳು ಇಲ್ಲಿಯ ತನಕ ಸಮಸ್ಯೆಯಾಗದಿದ್ದರೂ ಇದ್ದಕ್ಕಿದ್ದ ಹಾಗೆ ಸಮಸ್ಯಾತ್ಮಕವಾಗಿಬಿಡುತ್ತವೆ. ಇದು ಆ ಕಥೆಗಳನ್ನು ಯಾವ ದೃಷ್ಟಿಕೋನದಿಂದ ನೋಡಬೇಕಿತ್ತೋ ಆ ದೃಷ್ಟಿಕೋನವನ್ನೇ ವಿರೂಪಗೊಳಿಸುತ್ತದೆ. ಈ ಕಥೆಗಳು ಅತ್ತ ಸಂಪ್ರದಾಯದ ಕಥೆಗಳಾಗೂ ಉಳಿಯದೇ ಇತ್ತ ಹಿಸ್ಟಾರಿಕಲ್ ವಿವರಣೆಗಳೂ ಆಗದೇ ವಿರೂಪವಾಗಿ ಉಳಿದುಬಿಡುತ್ತವೆ.

ಶಂಭೂಕ ವಧೆಯ ಕಥೆಯನ್ನು ಜಾತಿವ್ಯವಸ್ಥೆಯು ಪ್ರತಿಪಾದಿಸುವ ತಾರತಮ್ಯದ ಉದಾಹರಣೆಯೆಂದು ಎಡಪಂಥೀಯರು ಹಾಗೂ ಪ್ರಗತಿಪರರು ವಾದಿಸಿದರೆ, ಬಲಪಂಥೀಯರು ಇಡೀ ಕಥೆಯೇ ಪ್ರಕ್ಷಿಪ್ತವೆಂದೋ, ಉತ್ತರಕಾಂಡವೇ ಸೇರಿಸಲಾದ ಭಾಗವೆಂದೋ ವಾದಿಸುತ್ತಾರೆ. ಹೀಗೆ ಪರೋಕ್ಷವಾಗಿ ರಾಮಾಯಣದ ಉತ್ತರಕಾಂಡವನ್ನು ಮಿಥ್ ಎಂದು ಒಪ್ಪಿಕೊಂಡು ಬಿಡುತ್ತಾರೆ. ಈ ಬುದ್ಧಿಜೀವಿಗಳ ಪಾಲಿಗೆ ಮಹಾಭಾರತವು ಪುರೋಹಿತರು ಸೃಷ್ಟಿಸಿದ ಮಿಥ್ ಆದರೂ, ಏಕಲವ್ಯನ ಕಥೆಯು ಶೋಷಣೆಯ ಹಿಸ್ಟಾರಿಕಲ್ ಸಾಕ್ಷಿಯಾಗುತ್ತದೆ. ವೈದಿಕ ಸಂಪ್ರದಾಯಗಳಲ್ಲಿ ಕೃಷ್ಣನ ಕಥೆಯಿದೆ ಹಾಗೂ ಬೌದ್ಧ ಸಂಪ್ರದಾಯಗಳಲ್ಲಿ ಬುದ್ಧನ ಸಾವಿರಾರು ಕಥೆಗಳಿವೆ. ಶುದ್ಧೋಧನನ ಮಗನಾಗಿ ಸಿದ್ಧಾರ್ಥ ಹುಟ್ಟಿ ಆದ ಗೌತಮ ಬುದ್ಧನಾಗುವ ಕಥೆಯು ಹಿಸ್ಟಾರಿಕಲ್ ಪಟ್ಟಕ್ಕೇರಿದರೆ ಕೃಷ್ಣನ ಕಥೆಯು ಮಿಥಿಕಲ್ ಪಟ್ಟಕ್ಕೆ ಸೇರಿದೆ. ಅಲ್ಲದೇ ಅದೇ ಬೌದ್ಧಮತದ ಅವಲೋಕಿತೇಶ್ವರ ಬುದ್ಧನ ಕಥೆಗಳು ಮಿಥ್ ಆಗಿ ಪರಿಣಮಿಸಿವೆ. ಮೊದಲನೇ ತೀರ್ಥಂಕರನಾದ ಋಷಭದೇವನು ಮಿಥ್ ಆದರೆ ಕೊನೆಯ ತೀರ್ಥಂಕರನಾದ ಮಹಾವೀರನು ಹಿಸ್ಟರಿಯ ಭಾಗ. ಪುಷ್ಯಮಿತ್ರಶುಂಗನ ಕುರಿತಾದ ಕಥೆಗಳನ್ನಿಟ್ಟುಕೊಂಡು ಬೌದ್ಧಮತವು ಭಾರತದಲ್ಲಿ ಅವನತಿಯಾಗಿದ್ದಕ್ಕೆ ಹಿಸ್ಟಾರಿಕಲ್ ಕಾರಣಗಳನ್ನು ಹಿಸ್ಟಾರಿಯನ್ನರು ಹುಡುಕುತ್ತಾರೆ.

ಯಾವ ಸಂಪ್ರದಾಯದ ಯಾವ ಕಥೆಯ ಯಾವ ಭಾಗವು ಹಿಸ್ಟರಿಯಾಗುತ್ತದೆ ಹಾಗೂ ಯಾವುದು ಮಿಥ್ ಆಗುತ್ತದೆ ಎನ್ನುವುದು ಸಂಪೂರ್ಣ ಆರ್ಬಿಟ್ರರಿ. ಇಂದು ನಾವು ಓದುವ ಹಿಸ್ಟರಿಯು ಭಾರತೀಯ ಸಂಪ್ರದಾಯಗಳಲ್ಲೇ ಬೆಳೆದು ಬಂದ ಕಥೆಗಳ ವಿರೂಪಿತ ಕಥಾನಕವಾಗಿದೆ. ಈ ವಿರೂಪವು ಆ ಸಂಪ್ರದಾಯಗಳನ್ನು ಅವುಗಳಿದ್ದ ಹಾಗೆಯೇ ಗ್ರಹಿಸುವಲ್ಲಿ ದೊಡ್ಡ ತೊಡಕಾಗಿ ಪರಿಣಮಿಸುತ್ತವೆ, ನಮ್ಮ ಸಂಪ್ರದಾಯಗಳನ್ನೇ ನಮಗೆ ಅಪರಿಚಿತವನ್ನಾಗಿಸುತ್ತವೆ ಹಾಗೂ ಅವುಗಳ ಕುರಿತು ಮಿಥ್ಯಾಜ್ಞಾನವನ್ನು ಸೃಷ್ಟಿಸುತ್ತವೆ. ಹೀಗಾಗಿ ನಮ್ಮ ಸಂಪ್ರದಾಯಗಳಲ್ಲಿ ಬರುವ ಕಥೆಗಳ ಸ್ವರೂಪದ ಕುರಿತು ನಾವು ಇಂದು ಜಿಜ್ಞಾಸೆ ಮಾಡಬೇಕಾದ ಅಗತ್ಯತೆಯಿದೆ. ನಾವು ಪರಂಪರಾಗತವಾಗಿ ಕಲಿತು ಬಂದ ಇತಿಹಾಸ, ಪುರಾಣ, ವೇದಗಳ ಕಥೆಗಳು, ಸ್ಥಳಪುರಾಣಗಳು ನಮ್ಮ ಸಂಪ್ರದಾಯಗಳಲ್ಲಿ ಯಾವ ಪಾತ್ರವನ್ನು ನಿರ್ವಹಿಸುತ್ತವೆ ಎನ್ನುವದನ್ನು ತಿಳಿಯಲು ಪಶ್ಚಿಮಾಯನವು ಸಹಕಾರಿಯಾಗಿದೆ. ಈ ಕಥೆಗಳನ್ನು ಹಿಸ್ಟರಿ ಅಥವಾ ಮಿಥ್ ಎಂದು ವಿಭಾಗಿಸುವುದು ಯಾವ ರೀತಿಯ ದೋಷವಾಗಿದೆ ಎನ್ನುವದನ್ನು ಎಸ್. ಎನ್. ಬಾಲಗಂಗಾಧರರ ಸಂಶೋಧನೆಗಳ ಆಧಾರದ ಮೇಲೆ ವಿವರಿಸಲು ಯತ್ನಿಸುತ್ತದೆ. ನಮ್ಮ ಸಂಪ್ರದಾಯದ ಕಥೆಗಳ ಕುರಿತು ವೈಜ್ಞಾನಿಕ ಚಿತ್ರಣವೊಂದನ್ನು ಪಡೆಯುವದು ಹೇಗೆ ಎಂಬ ಹೊಸ ಸಂಶೋಧನೆಗೆ ಈ ಪುಸ್ತಕವು ಉತ್ತಮ ಅಡಿಪಾಯವನ್ನು ಹಾಕಿಕೊಡುತ್ತದೆ.

ವಿನಾಯಕ ಹಂಪಿಹೊಳಿ

ವಿನಾಯಕ ಹಂಪಿಹೊಳಿ ಅವರು ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯದಲ್ಲಿ ಎಂ.ಸಿ.ಎ. ಪದವಿಯನ್ನು ಮುಗಿಸಿ ಐಟಿ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಮಾಜವಿಜ್ಞಾನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಇವರು, ಸಾಮಾಜಿಕ ಮಾಧ್ಯಮ ಹಾಗೂ ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಲೇಖನಗಳನ್ನು ಪ್ರಕಟಿಸುತ್ತಿರುತ್ತಾರೆ.

You may also like

Leave a Comment

Message Us on WhatsApp