Home ವಸಾಹತು ಪ್ರಜ್ಞೆದಾರಿ ತಪ್ಪಿದ ಸಂಸ್ಕೃತಿ ಚಿಂತನೆ ಸಿದ್ಧರಾಮ-ಅಲ್ಲಮರ ಸಂವಾದ: ಶಿವಶರಣರ ಗುರಿ ಯಾವುದು?

ಸಿದ್ಧರಾಮ-ಅಲ್ಲಮರ ಸಂವಾದ: ಶಿವಶರಣರ ಗುರಿ ಯಾವುದು?

by Rajaram Hegde
46 views

ವೀರಶೈವ ಪರಂಪರೆಯಲ್ಲಿ ನೂರಾರು ಶಿವಶರಣರು ಆಗಿಹೋಗಿದ್ದರೂ ಕೂಡ ಒಬ್ಬರ ಚರಿತ್ರೆಯಿದ್ದಂತೆ ಮತ್ತೊಬ್ಬರದಿಲ್ಲ ಎಂಬುದು ಗಮನಾರ್ಹ. ಪ್ರತೀ ಚರಿತ್ರೆಯೂ ಕೂಡ ಆ ಮಾರ್ಗದ ಸಾಧಕರಿಗೆ ಒಂದು ವಿಶಿಷ್ಟವಾದ ದೃಷ್ಟಾಂತವೋ ಎಂಬಂತೆ ಇದೆ. ಈ ಲೋಕದಲ್ಲಿ ಎಷ್ಟು ರೀತಿಯ ಮನುಷ್ಯರು ಇದ್ದಾರೋ ಅಷ್ಟು ರೀತಿಯ ವ್ಯಕ್ತಿತ್ವಗಳು ಇರುತ್ತವೆ. ಅವರವರ ವ್ಯಕ್ತಿ ವಿಶಿಷ್ಟತೆಗನುಗುಣವಾಗಿ ಅವರವರಿಗೆ ಹುಟ್ಟುವ ಸವಾಲುಗಳು ಇರುತ್ತವೆ. ಹಾಗಾಗಿ ಪ್ರತಿಯೊಬ್ಬನೂ ತನ್ನ ಮುಂದಿರುವ ಸವಾಲಿಗೆ ಅನ್ಯರ ಜೀವನದಿಂದ ಸಿದ್ಧ ಉತ್ತರವನ್ನು ಪಡೆಯುವುದು ಸಾಧ್ಯವಿಲ್ಲ. ತಮ್ಮ ತಮ್ಮ ಮಾರ್ಗಗಳನ್ನು ಅವರವರೇ ಕಂಡುಕೊಳ್ಳಬೇಕಾಗುತ್ತದೆ. ಇಂಥ ಮಾರ್ಗಗಳನ್ನು ಕಂಡುಕೊಂಡು ಸಾಯುಜ್ಯ ಪದವಿಗೆ ಏರಿದ ಮಹಾತ್ಮರುಗಳ ಜೀವನದಲ್ಲೂ ಇದು ದೃಷ್ಟಾಂತವಾಗಿದೆ. ಎಲ್ಲಿಯವರೆಗೆ ಈ ವೈವಿಧ್ಯತೆಯು ಮನುಷ್ಯ ವಾಸ್ತವವಾಗಿರುತ್ತದೆಯೋ ಅಲ್ಲಿಯವರೆಗೆ ಇಂಥ ಎಲ್ಲರ ಮಾರ್ಗಗಳನ್ನೂ ಕಥಿಸುವ ಚರಿತ್ರೆಗಳು ಒಂದು ಪರಂಪರೆಗೆ ಅತ್ಯಾವಶ್ಯಕ. ಅವರಲ್ಲಿ ಪ್ರತೀ ಮಹಾತ್ಮರ ಚರಿತ್ರೆಯೂ ಒಬ್ಬಿಲ್ಲೊಬ್ಬರಿಗೆ ದೃಷ್ಟಾಂತವಾಗಿರುತ್ತದೆ. ಜೊತೆಗೇ ಆತ್ಮಜ್ಞಾನದ ದಾರಿಯಲ್ಲಿ ತೊಡರಿಕೊಳ್ಳಬಹುದಾದ ವೈವಿಧ್ಯಪೂರ್ಣ ಅಜ್ಞಾನ ಪ್ರಕಾರಗಳನ್ನು ಅವು ಗುರುತಿಸಿ ತೋರಿಸುತ್ತಿರುತ್ತವೆ.

ವೀರಶೈವ ಸಾಹಿತ್ಯದಲ್ಲಿ ಸಿದ್ಧರಾಮ ಹಾಗೂ ಅಲ್ಲಮ ಪ್ರಭುಗಳ ಸಂವಾದವು ಸುಪ್ರಸಿದ್ಧವಾದುದು. ಸಿದ್ಧರಾಮನು ಅಪ್ರತಿಮ ಶಿವಭಕ್ತ. ಕರ್ಮಮಾರ್ಗದಲ್ಲಿ ಶಿವನನ್ನು ಅರಸುತ್ತಿರುತ್ತಾನೆ. ಸೊನ್ನಲಿಗೆಯಲ್ಲಿ ಮಠವನ್ನು ಕಟ್ಟಿಕೊಂಡು ಮಹಾ ಯೋಗಿಯಾಗಿ ಶಿಷ್ಯಗಣವನ್ನು ಸಂಪಾದಿಸಿ, ಪ್ರಾಣಿ ಪಕ್ಷಿಗಳಿಗಳಿಗೆ ನೀರು ಕುಡಿಯಲು ಒಂದು ಕೆರೆಯನ್ನು ಕಟ್ಟಿಸಿ ಅದರ ನಡುವೆ ತನ್ನ ಇಷ್ಟ ದೈವವಾದ ಮಲ್ಲಿಕಾರ್ಜುನನಿಗೆ ಒಂದು ದೇವಾಲಯವನ್ನು ಕಟ್ಟಿಸತೊಡಗುತ್ತಾನೆ. ಅವನ ಉದ್ದೇಶ ಸೊನ್ನಲಿಗೆಯನ್ನು ಅಭಿನವ ಶ್ರೀಶೈಲವನ್ನಾಗಿ ಮಾಡಬೇಕೆಂಬುದು. ಅಲ್ಲಿ ಸ್ವತಃ ಮಲ್ಲಿಕಾರ್ಜುನನೇ ಬಂದು ನೆಲೆಸಬೇಕು ಎಂಬುದು. ಪ್ರಾಣಿದಯೆಯೇ ಪರಬ್ರಹ್ಮ ಎಂಬ ನಂಬಿಕೆಯಲ್ಲಿ ಲೋಕೋಪಕಾರದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾನೆ. ಸಿದ್ಧರಾಮನು ಶೈವಾಗಮಗಳ ಆಚರಣೆ ಹಾಗೂ ಶಿವಭಕ್ತಿಗಳೆರಡೂ ಸಂಗಮಿಸಿದ ಒಬ್ಬ ಶರಣನಾಗಿದ್ದ. ಆದರೆ ಇಷ್ಟೆಲ್ಲ ಸಾಧಿಸಿದರೂ ಕೂಡ ಮುಕ್ತಿಯ ಸಾಧನೆ ಅವನಿಂದ ದೂರವೇ ಉಳಿಯಿತು. ಇದನ್ನು ಅಲ್ಲಮ ಪ್ರಭು ಗ್ರಹಿಸುತ್ತಾನೆ. ಅವನು ಯತಿಯಾಗಿ ಸಂಸಾರವನ್ನು ತ್ಯಜಿಸಿದರೂ ಕೂಡ ಸಾರ್ವಜನಿಕ ಕಾರ್ಯಗಳನ್ನು ಮೈಮೇಲೆ ಹೊತ್ತುಕೊಂಡು, ಕೀರ್ತಿಲಾಲಸೆಯಿಂದ, ತಾನು ತನ್ನದು ಎಂಬ ಅಹಂಕಾರವನ್ನು ಬೆಳೆಸಿಕೊಂಡು ಮತ್ತೆ ಅಜ್ಞಾನದಲ್ಲಿ ಸಿಕ್ಕುಬಿದ್ದಿದ್ದಾನೆ ಎಂದು ಅಲ್ಲಮನು ನಿರ್ಣಯಿಸಿದನು. ಅಂತಿಮವಾಗಿ ಅದು ಕಾಮ್ಯ ಕರ್ಮವೇ ಆಗಿರುವುದರಿಂದ ಅದರಿಂದ ಮಾಯೆಗೆ ಸಿಕ್ಕಿಕೊಳ್ಳುತ್ತಾನೆ. ಹಾಗಾಗಿ ಅವನಿಗೆ ಬುದ್ದಿ ಕಲಿಸುವ ಸಲುವಾಗಿ ಕೆರೆಯ ಕಾಮಗಾರಿ ನಡೆದಲ್ಲಿಗೆ ಹೋಗಿ ಅವನನ್ನು ಒಡ್ಡರಾಮನೆಂದು ಅಪಹಾಸ್ಯ ಮಾಡುತ್ತಾನೆ. ಆಗ ಸಿದ್ಧರಾಮನು ಕೋಪಾವೇಶದಿಂದ ಘರ್ಜಿಸುತ್ತ ಅಲ್ಲಮನಲ್ಲಿಗೆ ಬರುತ್ತಾನೆ.

ನಂತರ, ಸಾಯುಜ್ಯಕ್ಕೆ ನಿಜವಾದ ಮಾರ್ಗ ಯಾವುದು? ಕರ್ಮವೊ. ಜ್ಞಾನವೊ ಎಂಬ ಪ್ರಶ್ನೆಯ ಸುತ್ತ ಸಿದ್ದರಾಮ ಹಾಗೂ ಅಲ್ಲಮರು ದೀರ್ಘ ಚರ್ಚೆ ನಡೆಸುತ್ತಾರೆ. ಲಿಂಗ ಪ್ರತಿಷ್ಠೆ, ಪೂಜೆ, ಇವೆಲ್ಲ ಸಾಮಾನ್ಯ ಜನರ ಮಾರ್ಗ, ಯೋಗಿಯಾದವನು ಈ ಹಂತವನ್ನು ದಾಟಬೇಕು ‘ಲಿಂಗ ಪ್ರತಿಷ್ಠೆ ಮಾಡುವವರಿಗೆ ನಾಯಕ ನರಕ’ ಎಂಬುದಾಗಿ ಅಲ್ಲಮನು ಎಚ್ಚರಿಸಿದನು. ಅದಕ್ಕೆ ಸಿದ್ಧರಾಮನು ತನ್ನ ಈ ಸತ್ಕರ್ಮಗಳಿಗೆ ತನ್ನ ಇಷ್ಟದೈವವೇ ಪ್ರೇರಣೆ ನೀಡಿದ್ದು ಸುಳ್ಳೆ? ಹಾಗೂ ಸತ್ಕರ್ಮಾಚರಣೆಯಿಂದ ಮನಸ್ಸು ಪರಪಕ್ವವಾಗುವುದಿಲ್ಲವೆ? ಎಂದು ಕೇಳುತ್ತಾನೆ. ಆಗ ಅಲ್ಲಮನು ಪ್ರತಿಫಲಾಪೇಕ್ಷೆಯಿಂದ ಮಾಡಿದ ಕರ್ಮಗಳನ್ನು ನೆಚ್ಚಿಕೊಂಡರೆ ಮುಕ್ತಿ ಸಿಗದು. ಚಿತ್ರ ನಿರ್ಮಲವಾದರೆ ಸಾಲದು, ಜ್ಞಾನೋದಯವಾಗಬೇಕು, ಜ್ಞಾನಿಗೆ ಮಾತ್ರ ಕರ್ಮದ ಲೇಪವಿರುವುದಿಲ್ಲ ಎನ್ನುತ್ತಾನೆ. ಅಂದರೆ ಪೂಜೆ, ಧ್ಯಾನ ಎಲ್ಲವೂ ಕರ್ಮವೇ ಆಗಿರುತ್ತದೆ. ಆ ಕಾರಣದಿಂದಲೇ ನಿನ್ನ ಮನಸ್ಸು ವಿಕಲ್ಪವನ್ನು ಹೊಂದುತ್ತಿದೆ, ನೀನು ನನ್ನ ಮೇಲೆ ಸಿಟ್ಟಾದುದು ಅದಕ್ಕೆ ಸಾಕ್ಷಿ ಎಂಬುದಾಗಿ ಅಲ್ಲಮನು ಸಿದ್ಧರಾಮನಿಗೆ ಮನವರಿಕೆ ಮಾಡಿಕೊಡುತ್ತಾನೆ.

ಸಿದ್ಧರಾಮನು ತನ್ನಲ್ಲಿ ಭೇದಬುದ್ದಿ ಇನ್ನೂ ಜಾಗೃತವಾಗಿ ಇದೆ ಎಂಬುದನ್ನು ಕಂಡುಕೊಂಡು ಭಗವಂತನಲ್ಲಿ ತನ್ನ ಭೇದಬುದ್ದಿಯನ್ನು ಅಳಿಸಿ ಸಮತೆಯನ್ನು ಮೂಡಿಸುವಂತೆ ಮೊರೆ ಇಡುತ್ತಾನೆ. ಆಗ ಅಲ್ಲಮನು ಈ ಸಮತೆ ಎಂಬುದು ಯಾರ ಅನುಗ್ರಹದಿಂದ ಬರತಕ್ಕದ್ದಲ್ಲ. ಅದನ್ನು ನಾವೇ ಸಾಧಿಸಬೇಕು ಎಂಬುದಾಗಿ ತಿಳಿಸುತ್ತಾನೆ. ಆಗ ಸಿದ್ಧರಾಮನಿಗಿನ್ನೂ ಒಂದು ಸಂದೇಹ ಉಳಿದಿರುತ್ತದೆ. ತಾನು ತನ್ನಲ್ಲಿ ಆ ಪರವಸ್ತುವನ್ನು ಸಾಕ್ಷಾತ್ ಕಂಡಿದ್ದೇನಲ್ಲ? ಆಗ ಅಲ್ಲಮನು ಅದು ಪರವಸ್ತು ಎಂದು ಅನ್ನಿಸುವುದು ನಿನ್ನ ಮನಸ್ಸಿಗೆ, ನಾನೇ ಅದು ಎಂಬುದು ಅರಿವಾಗಬೇಕಾದರೆ ನಿನ್ನ ಮನಸ್ಸನ್ನೂ ಆಳಿಯಬೇಕು. ಆಗ ಮಾತ್ರ ಗುಹೇಶ್ವರನ ಅರಿವು ಆಗುತ್ತದೆ. ಮತ್ತೆ ಏನನ್ನು ಕಾಣುವ ಪ್ರಶ್ನೆಯೂ ಉಳಿಯುವುದಿಲ್ಲ ಎಂಬುದನ್ನು ಸಿದ್ಧರಾಮನಿಗೆ ತಿಳಿಸುತ್ತಾನೆ. ಸಿದ್ಧರಾಮನು ಆಗ ಆತಂಕಗೊಳ್ಳುತ್ತಾನೆ. ತಾನು ಭಕ್ತಿಯಿಂದ ಮಲ್ಲಿಕಾರ್ಜುನನನ್ನು ತನ್ನ ಮನಸ್ಸಿನಲ್ಲಿ ಭಾವಿಸಿಕೊಂಡು ಆನಂದ ಪಡುತ್ತಿದ್ದೆ, ಮನವೇ ಇಲ್ಲದಿದ್ದರೆ ತನ್ನ ದೈವವನ್ನು ಕಾಣುವುದು ಹೇಗೆ? ಆಗ ಅಲ್ಲಮನು ಅವನೇ ನೀನು ಎಂಬ ಅದೈತ ಸತ್ಯವನ್ನು ಬೋಧಿಸಿದನು.ಆಗ ಜ್ಞಾನೋದಯವನ್ನು ಹೊಂದಿದ ಸಿದ್ಧರಾಮನು ನಿರ್ವಿಕಲ್ಪ ಸಮಾಧಿಗೆ ಹೋದನು.

ಸಿದ್ಧರಾಮ ಮತ್ತು ಅಲ್ಲಮರ ನಡುವೆ ನಡೆದ ಸಂಭಾಷಣೆಯನ್ನು ವೀರಶೈವ ಪರಂಪರೆಯು ಏಕೆ ರಕ್ಷಿಸಿಕೊಂಡು ಬಂದಿದೆ ಎಂಬದು ಸ್ಪಷ್ಟ. ಈ ಸಂಭಾಷಣೆಯ ಮೂಲಕ ಆ ಪರಂಪರೆಯು ಶಿವಭಕ್ತನೊಬ್ಬನ ಅಂತಿಮ ಗುರಿ ಏನು ಎಂಬುದರ ಕುರಿತು ತಿಳಿವಳಿಕೆಯನ್ನು ದಾಟಿಸಿಕೊಂಡು ಬಂದಿದೆ. ಪ್ರಾಪಂಚಿಕವಾಗಿ ಶಿವಭಕ್ತಿ, ಪೂಜೆ, ಸತ್ಕರ್ಮ, ಇತ್ಯಾದಿಗಳಲ್ಲಿ ತೊಡಗಿಸಿಕೊಂಡವರು ಅದಕ್ಕೂ ಮುಂದೆ ಹೇಗೆ ಸಾಗಬೇಕು ಎಂಬುದನ್ನು ಈ ಸಂಭಾಷಣೆಯು ಸೂಚಿಸುತ್ತದೆ. ಅಂತಿಮವಾಗಿ ಅದು ಅದೈತ ಸ್ಥಿತಿಯಲ್ಲಿ ಪರ್ಯಾವಸಾನವಾಗುತ್ತದೆ. ಈ ಶಿವಯೋಗವು ಹಂತ ಹಂತವಾಗಿ ಸಿದ್ಧಿಸುತ್ತದೆ. ಯಾವುದಾದರೂ ಹಂತದಲ್ಲಿ ನಿಂತುಬಿಟ್ಟರೆ ಅಲ್ಲಿಗೆ ಈ ಪ್ರಯಾಣ ನಿಂತುಹೋಗುತ್ತದೆ ಹಾಗೂ ನಾವು ಅಜ್ಞಾನಕ್ಕೆ ವಶರಾಗುತ್ತೇವೆ ಎಂಬುದು ಅಲ್ಲಮನ ಸಂದೇಶ. ಇವುಗಳಲ್ಲಿ ಯಾವ ಹಂತವೂ ಕೂಡ ವರ್ಜ್ಯವಲ್ಲ, ಆದರೆ ಅದನ್ನು ಆಚರಿಸಿ ದಾಟಿ ಮುಂದೆ ಹೋಗುವುದು ಅತ್ಯವಶ್ಯ. ಮುಂದಿನ ಹಂತಕ್ಕೆ ಹಿಂದಿನ ಹಂತವು ಸೋಪಾನವಾಗುತ್ತದೆ. ಅಲ್ಲೇ ನಿಂತರೆ ಗುರಿ ಸಿಗದು. ಸಿದ್ಧರಾಮನು ಕರ್ಮ ಹಾಗೂ ಭಕ್ತಿಯ ಹಂತದಲ್ಲಿ ನಿಂತುಬಿಟ್ಟಿದ್ದನು. ಅವನನ್ನು ಎಚ್ಚರಿಸಲಿಕ್ಕೇ ಅಲ್ಲಮ ಹೋಗಿದ್ದು.

ಈ ಹಿನ್ನೆಲೆಯಲ್ಲಿ ಈ ಸಂಭಾಷಣೆಯು ಮತ್ತೊಂದು ಪ್ರಮುಖ ಚರ್ಚೆಯನ್ನೂ ಎತ್ತುತ್ತದೆ. ಶಿವಶರಣನಾದವನಿಗೆ ಪೂಜೆ, ಪರೋಪಕಾರ, ಜೀವದಯೆ, ಇವೆಲ್ಲ ಸತ್ಕರ್ಮಾಚರಣೆಯ ಭಾಗಗಳಾಗಿವೆ. ಈ ಸತ್ಕರ್ಮಗಳಿಂದ ನಿರ್ಮಲ ಚಿತ್ತವು ಸಿದ್ಧಿಸುತ್ತದೆ. ಆದರೆ ನಿರ್ಮಲ ಚಿತ್ತವೇ ಅವನ ಗುರಿಯಲ್ಲ. ಅದು ಆತ್ಮಜ್ಞಾನಕ್ಕೆ ದಾರಿಮಾಡಿಕೊಡಬೇಕು. ಈ ಎಲ್ಲಾ ಆಚರಣೆಗಳೂ ಆ ಗುರಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ರೂಪಿತವಾಗಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ವಚನಗಳ ಕುರಿತು ಎದ್ದ ಚರ್ಚೆಯು ಪ್ರಸ್ತುತವಾಗುತ್ತದೆ. ಸಮಾಜದಲ್ಲಿ ಇರುವ ಅನ್ಯಾಯಗಳನ್ನು ತೊಡೆಯುವ ಸಲುವಾಗಿ ಶಿವಭಕ್ತಿಯನ್ನು ಬಳಸಿಕೊಂಡು ಈ ಚಳವಳಿಯನ್ನು ನಡೆಸಲಾಯಿತು ಎನ್ನುವ ಕೆಲವು ವಿದ್ವಾಂಸರು ಸಮಾಜ ಸುಧಾರಣೆಯೇ ಈ ಚಳವಳಿಯ ಅಂತಿಮ ಗುರಿ ಎಂಬುದಾಗಿ ವಾದಿಸುತ್ತಾರೆ. ಹಾಗಾಗಿ ಈ ಮೇಲಿನ ಸಂಭಾಷಣೆಗೆ ಸೀಮಿತವಾಗಿ ಗ್ರಹಿಸುವುದಾದರೆ ಸತ್ಕರ್ಮಗಳು ಈ ಪರಂಪರೆಯ ಮಾರ್ಗವೇ ಹೊರತೂ ಗುರಿಯಲ್ಲ. ಭಕ್ತಿಯೂ ವೀರಶೈವ ಮಾರ್ಗದ ಅಂತಿಮ ಗುರಿಯಲ್ಲ ಎಂಬುದನ್ನು ಅದು ತಿಳಿಸುತ್ತಿದೆ. ಏಕೆಂದರೆ ಅದೂ ನಾನು ಬೇರೆ- ಪರಮಾತ್ಮ ಬೇರೆ ಎಂಬ ಭೇದದೃಷ್ಟಿಯನ್ನು ಒಳಗೊಂಡಿರುತ್ತದೆ. ಶಿವಶರಣನು ಭಕ್ತಿಯ ಈ ಭೇದವನ್ನು ಕೂಡ ದಾಟಬೇಕು.

Author

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp