ಇತ್ತೀಚೆಗೆ ಮೈಸೂರು ಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನು ನಿಯಮಿಸಿ ಪಟ್ಟಾಬಿಷೇಕವನ್ನು ನಡೆಸಿದ ಸಂದರ್ಭದಲ್ಲಿ ಕರ್ನಾಟಕದ ಮಾಧ್ಯಮಗಳ ತುಂಬೆಲ್ಲ ಪರ ವಿರೋಧ ಅಭಿಪ್ರಾಯಗಳ ಸುರಿಮಳೆಯಾಯಿತು. ಕೆಲವು ರಾಜಕಾರಣಿಗಳು ಆ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಲು ಹಿಂಜರಿದರು. ಮತ್ತೂ ಕೆಲವರು ತಾವು ಭಾಗವಹಿಸಿದ್ದನ್ನು ಜನರ ವಿಶೇಷ ಗಮನಕ್ಕೆ ತರಲು ಪ್ರಯತ್ನಿಸಿದರು. ಆ ಕಾರ್ಯಕ್ರಮವನ್ನು ಹಳೆಯ ಮೈಸೂರಿನ ಸಮಸ್ತ ಪ್ರಜಾ ಸಮುದಾಯವೂ ತುಂಬಾ ಸಂಭ್ರಮದಿಂದ ಸ್ವೀಕರಿಸಿತ್ತು. ಇದನ್ನು ಅರ್ಥ ಮಾಡಿಕೊಂಡ ನಮ್ಮ ಮಾಧ್ಯಮಗಳೂ ಕೂಡ ಅದಕ್ಕೆ ಸಾಕಷ್ಟು ಪ್ರಚಾರವನ್ನು ಕೊಟ್ಟವು. ಈ ಕಾರ್ಯಕ್ರಮವನ್ನು ಏಕೆ ವಿರೋಧಿಸಬೇಕೆಂಬುದು ಬಹುಶಃ ಇವರಿಗೆಲ್ಲ ಅರ್ಥವಾದಂತಿಲ್ಲ. ವಿರೋಧಿಸುವವರು ಪ್ರಗತಿಪರರು ಎಂಬುದು ಕೆಲವರಿಗೆ ಗೊತ್ತಾದರೂ ವಿರೋಧ ಏಕೆಂಬುದು ತಿಳಿದಂತಿಲ್ಲ. ಒಟ್ಟಿನಲ್ಲಿ ಒಂದು ಮಾಜಿ ರಾಜ ಕುಟುಂಬದ ಖಾಸಗಿ ವ್ಯವಹಾರವು ರಾಜ್ಯದ ಜನತೆಯ ತಲೆತಿನ್ನುವ ಸಮಸ್ಯೆಯಾಗಿದ್ದು ಕುತೂಹಲಕಾರಿಯಾಗಿದೆ.
ಇಂದು ಇದು ಅರಸು ಕುಟುಂಬದ ಖಾಸಗಿ ವ್ಯವಹಾರವೇ ಆದರೂ ಕೂಡ ಒಂದಾನೊಂದು ಕಾಲದಲ್ಲಿ ಈ ಪ್ರದೇಶವನ್ನು ಆಳಿದ ಕುಟುಂಬ ಅದು. ಆ ಕುಟುಂಬದ ಜೊತೆಗೆ ಹಳೆಯ ನೆನಪುಗಳನ್ನಿಟ್ಟುಕೊಂಡವರು, ಒಡನಾಡಿದವರು ಆ ಕೌಟುಂಬಿಕ ವ್ಯವಹಾರದಲ್ಲಿ ಭಾವನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಮೈಸೂರು ಸಂಸ್ಥಾನವು ಭಾರತೀಯ ಸರ್ಕಾರದಲ್ಲಿ ವಿಲೀನವಾದ ನಂತರವೂ ಹಳೆಯ ಮೈಸೂರಿನ ಜನತೆ ಈ ಕುಟುಂಬವನ್ನು ತಮ್ಮ ರಾಜರು ಎಂಬುದಾಗಿ ನೋಡುವುದನ್ನು ನಿಲ್ಲಿಸಿಲ್ಲ. ಅದಕ್ಕೆ ಇಂಬು ಕೊಡುವಂತೆ ಅರಸರ ಅಳ್ವಿಕೆ ಹಾಗು ಪಿಂಚಣಿಗಳನ್ನು ರದ್ದು ಮಾಡಿದರೂ ಕೂಡ ಅರಸೊತ್ತಿಗೆಯ ಪ್ರತೀಕವಾದ ಅರಮನೆಯು ಪ್ರವಾಸಿ ತಾಣವಾಗಿ ಸಾರ್ವಜನಿಕರಿಗೆ ಮುಕ್ತವಾಯಿತು. ಮೈಸೂರು ದಸರಾವನ್ನು ಪ್ರತೀ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮೈಸೂರು ಅರಸರು ಕೈಗೊಂಡ ಸಾರ್ವಜನಿಕ ಕೆಲಸಗಳು ಹಾಗೂ ನೀರಾವರಿ ಯೋಜನೆಗಳನ್ನು ಆಧರಿಸಿ ಈ ಭಾಗದ ಜನತೆ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಇವೆಲ್ಲವೂ ಅರಸೊತ್ತಿಗೆಯ ನೆನಪುಗಳನ್ನು ಜನಮನದಲ್ಲಿ ಬೇರೂರಿಸುವ ಕೆಲಸ ಮಾಡುತ್ತವೆಯೇ ವಿನಃ ಅದನ್ನು ನಿಜವಾಗಿಯೂ ಮುಂದುವರಿಸಿಕೊಂಡು ಬರುತ್ತಿರುವ ಇಂದಿನ ಸರ್ಕಾರವನ್ನಲ್ಲ, ಹಾಗಾಗಿ ಇಂದು ಆ ಕುಟುಂಬದಲ್ಲಿ ಪಟ್ಟಾಭಿಷೇಕ ನಡೆದರೆ ಅದು ಈ ಜನರಿಗೆಲ್ಲ ಸಂಬಂಧವೇ ಇಲ್ಲದ ಸಂಗತಿಯಾಗಿ ಉಳಿಯುವುದಿಲ್ಲ.
ಪ್ರಗತಿಪರರೇಕೆ ಪಟ್ಟಾಭಿಷೇಕವನ್ನು ವಿರೋಧಿಸುತ್ತಾರೆ? ಅರಸೊತ್ತಿಗೆಯೇ ಇಲ್ಲದ ಕಾಲದಲ್ಲಿ ಪಟ್ಟಾಭಿಷೇಕ ಎನ್ನುವುದು ತಮಾಷೆಯಾಗಿ ಕಾಣುತ್ತದೆ ಎನ್ನುವುದೇನೋ ಸರಿ. ಏಕೆಂದರೆ ಪಟ್ಟಾಭಿಷೇಕವು ರಾಜ ಕುಟುಂಬದ ಸದಸ್ಯನೊಬ್ಬನನ್ನು ರಾಜನನ್ನಾಗಿ ಮಾಡಿ ಅವನ ಆಳ್ವಿಕೆಯನ್ನು ಪ್ರಾರಂಭಿಸುವ ವಿಧಿ. ಈಗ ರಾಜ್ಯವೇ ಇಲ್ಲದಿರುವುದರಿಂದ ಇದೊಂದು ಮೌಡ್ಯವಾಗಿ ಅವರಿಗೆ ಕಾಣಿಸುತ್ತದೆ. ಇಷ್ಟೇ ಆಗಿದ್ದರೆ ಅವರೆಲ್ಲ ತಮಾಷೆ ಮಾಡಿಕೊಂಡು ಇರಬಹುದಾಗಿತ್ತು. ಆದರೆ ಪ್ರಗತಿಪರರಿಗೆ ಈ ಆಚರಣೆಯ ಕುರಿತು ಭಯ ಹಾಗೂ ಆತಂಕಗಳು ಕೂಡ ಇವೆ. ಅವರಿಗೆ ಅದೊಂದು ಅಪಾಯಕಾರಿ ಸೂಚನೆಯಾಗಿದೆ. ಭಾರತೀಯ ರಾಜಕೀಯವನ್ನು ಮತ್ತೆ ಬ್ರಿಟಿಷ್ ಪೂರ್ವ ಕಾಲಕ್ಕೆ ಒಯ್ಯುವ ಹುನ್ನಾರವಾಗಿ ಅವರಿಗೆ ಈ ಚಟುವಟಿಕೆಯು ಕಾಣಿಸುತ್ತಿದೆ. ಅಂದರೆ ವರ್ಣ ವ್ಯವಸ್ಥೆಯ ಸಮಾಜವನ್ನು ಮತ್ತೆ ಸ್ಥಾಪಿಸುವ ಶಕ್ತಿಗಳು ಇನ್ನೂ ನಾಶವಾಗಿಲ್ಲ ಎಂಬ ಕರೆಗಂಟೆ ಅವರಿಗೆ ಕೇಳಿಸುತ್ತಿದೆ.
ಬ್ರಿಟಿಷರು ಭಾರತದಲ್ಲಿ ತಮ್ಮ ಕಂಪನಿ ಆಳ್ವಿಕೆಯನ್ನು ಸ್ಥಾಪಿಸುವಾಗ ಮೊದಲ ಹಂತದಲ್ಲಿ ಅವರು ಭಾರತೀಯ ದೇಶೀ ರಾಜರೊಂದಿಗೆ ನೇರವಾಗಿ ಹಣಾಹಣಿ ಮಾಡಬೇಕಾಯಿತು. ಬ್ರಿಟಿಷರ ಆಳ್ವಿಕೆಯು ಪಾಶ್ಚಾತ್ಯ ಜ್ಞಾನೋದಿತ ರಾಜಕೀಯ ಚಿಂತನೆಗಳನ್ನಾಧರಿಸಿತ್ತು. ಆದರೆ ಇಲ್ಲಿ ಆಳವಾಗಿ ಬೇರು ಬಿಟ್ಟಿದ್ದ ರಾಜತ್ವವನ್ನು ಕಿತ್ತೊಗೆಯದೇ ಅವರ ಆಳ್ವಿಕೆ ಸಾಧ್ಯವಿರಲಿಲ್ಲ. ಹೊಸದಾಗಿ ಜಮೀನು ಮಾಡುವವರು ಅಲ್ಲಿರುವ ಮರಗಳನ್ನೆಲ್ಲ ಬೊಡ್ಡೆ ಸಮೇತ ಕೀಳಬೇಡವೆ? ಈ ಮರಗಳ ತಲೆಯನ್ನೊಂದೇ ಹೊಡೆದರೆ ಮತ್ತೆ ಚಿಗುರುತ್ತವೆ. ಇದು ಬ್ರಿಟಿಷರಿಗೆ ೧೮೫೭ರ ಸಂಗ್ರಾಮದಲ್ಲಿ ಅನುಭವವೇದ್ಯವಾಯಿತು. ೧೯ನೆಯ ಶತಮಾನದ ಮೊದಲಾರ್ಧ ಭಾಗದಲ್ಲಿ ಭಾರತದಾದ್ಯಂತ ದೇಶೀ ರಾಜರು ಹಾಗೂ ಅವರ ಬಂಟರಿಂದ ಪ್ರತಿರೋಧಗಳನ್ನು ಅವರು ಎದುರಿಸಿ ಉಸಿರು ಬಿಡುತ್ತಿರುವಷ್ಟರಲ್ಲಿ ೧೮೫೭ರ ಸಂಗ್ರಾಮವು ಸ್ಫೋಟದಂತೆ ಸಂಭವಿಸಿತು. ತದನಂತರ ಜನಮಾನಸದಲ್ಲಿರುವ ರಾಜತ್ವದ ಒಲವುಗಳನ್ನೇ ಬೇರುಸಮೇತ ಕೀಳುವ ಅಗತ್ಯವನ್ನು ಅವರು ಮನಗಂಡರು. ಈ ರಾಜತ್ವವೆಂಬುದು ನಿರುಪಯುಕ್ತ ಹಾಗೂ ಪ್ರಗತಿಗೆ ಅಪಾಯಕಾರಿ ಎಂಬ ತಿಳಿವಳಿಕೆಯನ್ನು ಭಾರತೀಯರಲ್ಲಿ ತಮ್ಮ ಶಿಕ್ಷಣದ ಮೂಲಕ ಬಿತ್ತತೊಡಗಿದರು.
ಭಾರತೀಯ ರಾಜರ ಕುರಿತ ವಸಾಹತು ನಿರೂಪಣೆ ಏನಿದೆ? ವಸಾಹತು ಪೂರ್ವ ಭಾರತೀಯ ಸಮಾಜವು ಬರ್ಬರ ವ್ಯವಸ್ಥೆಯಾಗಿದ್ದು ಅದನ್ನು ಪೋಷಿಸಿಕೊಂಡು ಬಂದವರೇ ಈ ಭಾರತೀಯ ಪ್ರಭುಗಳು. ಇವರ ಆಳ್ವಿಕೆಯು ಯಾವುದೇ ಜನಪರ ಕಾನೂನುಗಳನ್ನಾಧರಿಸದೇ ನಿರಂಕುಶವಾಗಿತ್ತು. ಈ ಆಳ್ವಿಕೆಗಳಲ್ಲಿ ಪ್ರಜಾ ಕಲ್ಯಾಣದ ಕಲ್ಪನೆಯೇ ಇರಲಿಲ್ಲ. ಇವರು ಬ್ರಾಹ್ಮಣರ ಕೈಗೊಂಬೆಗಳಾಗಿ ಸಾವಿರಾರು ವರ್ಷಗಳ ಆಳ್ವಿಕೆಯಲ್ಲಿ ಜಾತಿ ವ್ಯವಸ್ಥೆಯ ಶೋಷಣೆಗಳನ್ನು ಮುಂದುವರಿಸಿದರು. ಭಾರತೀಯ ಸಮಾಜವು ನಿಂತ ನೀರಿನಂತೆ ಬದಲಾವಣೆಯಿಲ್ಲದೇ ಉಳಿದುಕೊಂಡು ಬರಲು ಇಂಥ ರಾಜತ್ವವೇ ಕಾರಣ. ಹಾಗಾಗಿ ಭಾರತೀಯ ಸಮಾಜವು ಪ್ರಗತಿ ಹೊಂದಬೇಕಾದರೆ ಈ ಪ್ರಾಚೀನ ರಚನೆಗಳನ್ನು ನಾಶಮಾಡಬೇಕು. ಬ್ರಿಟಿಷ್ ಪ್ರಭುತ್ವವೇ ಭಾರತೀಯ ಸಮಾಜವನ್ನು ಪ್ರಗತಿಯತ್ತ ಒಯ್ಯುವ ಸಾಧನ. ಇತ್ಯಾದಿ, ಇತ್ಯಾದಿ.
ವಸಾಹತು ಕಾಲದಲ್ಲಿ ಬರೆದ ಭಾರತೀಯ ಇತಿಹಾಸದಲ್ಲಿ ದೇಶೀ ರಾಜರು ಚಿತ್ರಿತರಾಗುವುದು ಹೀಗೆ. ದೇಶೀ ರಾಜ್ಯಗಳನ್ನು ಆಕ್ರಮಿಸಿಕೊಳ್ಳುವಾಗ ಜಗತ್ತಿಗೆ ತಮ್ಮ ಕೃತ್ಯದ ಉದಾತ್ತತೆಯನ್ನು ಮನದಟ್ಟು ಮಾಡಲು ಬ್ರಿಟಿಷರಿಗೆ ಇಂಥದ್ದೊಂದು ಕಥೆ ಅತ್ಯಗತ್ಯವಾಗಿತ್ತು. ಇದಕ್ಕೆ ಜೀವಂತ ದೃಷ್ಟಾಂತಗಳಾಗಿ ಬ್ರಿಟಿಷ್ ಆಳ್ವಿಕೆಯಲ್ಲಿ ರೆಕ್ಕೆ ಪುಕ್ಕಗಳನ್ನು ಕಳೆದುಕೊಂಡ ದೇಶೀ ಸಂಸ್ಥಾನಿಕರ ತಿಕ್ಕಲುತನ, ಷೋಕಿಗಳ ಕಥೆಗಳೂ ಜನಜನಿತವಾದವು. ಇಂಥ ರಾಜತ್ವವು ಭಾರತಕ್ಕಂಟಿದ ಮಾರಕ ರೋಗ, ಅದರಿಂದ ಕಳಚಿಕೊಳ್ಳದೇ ನಮಗೆ ಉಳಿಗಾಲವಿಲ್ಲ ಎಂಬುದಾಗಿ ಭಾರತೀಯ ವಿದ್ಯಾವಂತರು ಯೋಚಿಸಿದ್ದರಲ್ಲಿ ಆಶ್ಚರ್ಯವೇ ಇಲ್ಲ. ಇಂಥ ಕೆಲಸಗಳಿಂದ ಬ್ರಿಟಿಷರು ಭಾರತದಲ್ಲಿ ಐತಿಹಾಸಿಕ ಉತ್ಕಾಂತಿಯೊಂದನ್ನು ನಡೆಸುತ್ತಿದ್ದಾರೆ ಎಂದು ಮಾರ್ಕ್ಸ್ನಂಥ ಐರೋಪ್ಯ ಚಿಂತಕರೇ ನಂಬಿದ್ದರಲ್ಲಿಯೂ ಆಶ್ಚರ್ಯವಿಲ್ಲ. ಬ್ರಿಟಿಷ್ ಧೋರಣೆಗಳನ್ನು ಕಣ್ಮುಚ್ಚಿ ಒಪ್ಪಿಕೊಂಡವರಿಗೆ ಸ್ವಾತಂತ್ರ್ಯಾನಂತರ ಈ ಹಳೆಯ ಪ್ರಭುತ್ವವು ನಾಶವಾದರೂ ಅದರ ಪಳೆಯುಳಿಕೆಗಳು ಭೂತಗಳಾಗಿ ಕಾಡುತ್ತಿವೆ. ಅವರಿಗೆ ಮೈಸೂರಿನ ಪಟ್ಟಾಭಿಷೇಕ ಪ್ರಸಂಗವು ಕೇವಲ ಒಂದು ಕೌಟುಂಬಿಕ ಸಮಾರಂಭವಾಗಿ ಉಳಿಯುವುದಿಲ್ಲ. ಅದಕ್ಕಿಂತಲೂ, ಜನಸಾಗರವೇ ಅದನ್ನು ವೀಕ್ಷಿಸಿ ಸಂಭ್ರಮಿಸುತ್ತದೆಯೆಂದರೆ ಮತ್ತೂ ಹೆದರಿಕೆಯಾಗುವುದು ಸಹಜ. ನಿಜವಾಗಿ ನೋಡಿದರೆ ಮೈಸೂರು ಅರಮನೆಯಲ್ಲಿ ನಡೆದದ್ದು ಇದ್ಯಾವುದೂ ಅಲ್ಲ. ಅದೊಂದು ಕೌಟುಂಬಿಕ ಆಸ್ತಿಯ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಸಮಾರಂಭ ಹಾಗೂ ಧಾರ್ಮಿಕ ವಿಧಿ. ಒಬ್ಬ ಭಾರತೀಯ ರಾಜನ ವಾರಸುದಾರನನ್ನು ನಿಯಮಿಸುವ ಶಾಸ್ರೋಕ್ತ ಕ್ರಮವನ್ನು ಇಲ್ಲಿ ಅನುಸರಿಸಲಾಗಿದೆ. ಅದು ಅವರ ಖಾಸಗಿ ಆಯ್ಕೆ. ಅದಕ್ಕೆ ಇಲ್ಲದ ಆಯಾಮಗಳನ್ನು ಆರೋಪಿಸಿಕೊಂಡವರಿಗೆ ಅದೊಂದು ದೊಡ್ಡ ಭೂತವಾಗಿ ಕಾಣಿಸುತ್ತಿದೆ.
ರಾಜತ್ವವೊಂದು ಕಳಚಿಕೊಳ್ಳಬೇಕಾದ ದುಃಸ್ವಪ್ನವಾಗಿದ್ದೇ ಹೌದಾಗಿದ್ದರೆ ಮೈಸೂರು ರಾಜರ ನೆನಪುಗಳು ಜನಮನದಲ್ಲಿ ಹೀಗೆ ಉಳಿದುಕೊಂಡು ಬರಬಾರದಿತ್ತು. ಈ ರಾಜರ ಜನಪರ ಕಾರ್ಯಗಳ ಹಿಂದೆ ಬ್ರಿಟಿಷ್ ಪ್ರಭುತ್ವದ ಪ್ರಭಾವ ಇತ್ತು ಎನ್ನುವವರೂ ಇದ್ದಾರೆ. ಆದರೆ ಬ್ರಿಟಿಷರು ನೇರವಾಗಿ ಆಳಿದ ಪ್ರದೇಶಗಳಿಗಿಂತ ಈ ರಾಜರ ಆಳ್ವಿಕೆಯೇ ಹೆಚ್ಚು ಪ್ರಗತಿಯನ್ನು ಸಾಧಿಸಿತ್ತು ಹಾಗೂ ಜನಪರವಾಗಿತ್ತು ಎಂಬುದು ಇತಿಹಾಸಕಾರರಿಗೂ ಗೊತ್ತಿರುವ ವಿಷಯ. ಬ್ರಿಟಿಷ್ ಭಾರತದಲ್ಲೇ ಮೊಟ್ಟಮೊದಲು ಪ್ರಜಾ ಪ್ರತಿನಿಧಿ ಸರ್ಕಾರವನ್ನು ಅಳವಡಿಸಿಕೊಂಡದ್ದು ಬ್ರಿಟಿಷ್ ಆಳ್ವಿಕೆಯ ಪ್ರದೇಶಗಳಲ್ಲ, ಮೈಸೂರು ಅರಸರದು. ಮೈಸೂರು ಅರಸರ ಕಾಲದಲ್ಲಿ ಈ ಪ್ರದೇಶದಲ್ಲಿ ನಡೆದ ಶಿಕ್ಷಣ, ನೀರಾವರಿ, ಸಾರಿಗೆ ಸಂಪರ್ಕ, ಕೈಗಾರಿಕೆ ಇತ್ಯಾದಿ ಪ್ರಜಾಹಿತ ಕಾರ್ಯಕ್ರಮಗಳು ಸಮಕಾಲೀನ ಬ್ರಿಟಿಷ್ ಆಳ್ವಿಕೆಯ ಪ್ರದೇಶಗಳಿಗೆ ಹೋಲಿಸಿದರೆ ಎಷ್ಟೋ ಮುಂದಿದ್ದವು. ಸಾವಿರಾರು ವರ್ಷಗಳ ವರೆಗೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದ ಈ ರಾಜತ್ವ ಎಂಬ ಸಂಗತಿಯನ್ನು ಇತಿಹಾಸಕಾರರಿನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಭಾರತೀಯ ರಾಜತ್ವದ ಕುರಿತ ಬ್ರಿಟಿಷರ ಕಥೆಗಳನ್ನೇ ನಂಬಿಕೊಂಡವರಿಗಂತೂ ಅದು ಅರ್ಥವಾಗುವ ಸಾಧ್ಯತೆಯೇ ಇಲ್ಲ.