Home ಪುಸ್ತಕದ ಕುರಿತು ಭಾರತೀಯ ಸಂಸ್ಕೃತಿ ಅಧ್ಯಯನದ ಹೊಸ ಆಯಾಮಗಳ ಹುಡುಕಾಟ

ಭಾರತೀಯ ಸಂಸ್ಕೃತಿ ಅಧ್ಯಯನದ ಹೊಸ ಆಯಾಮಗಳ ಹುಡುಕಾಟ

by Harshith Joseph
97 views

 

’ಪೂರ್ವಾವಲೋಕನ’ ಕೃತಿಯು, ಪ್ರೊ.ಎಸ್.ಎನ್. ಬಾಲಗಂಗಾಧರ ಅವರ ಸಂಶೋಧನೆಯ ಆಯಾಮವನ್ನು ಪರಿಚಯ ಮಾಡಿಕೊಡುವ ಕೃತಿಯಾಗಿದೆ. ಇದು ಬಾಲಗಂಗಾಧರ ಅವರ ಸಂಶೋಧನೆಯನ್ನು ಕುರಿತು ಇಂಗ್ಲಿಷ್ ಲೇಖನಗಳ ಕನ್ನಡ ಅನುವಾದವನ್ನು ಒಳಗೊಂಡಿದೆ. ಇದರ ಮೊದಲನೇ ಆವೃತ್ತಿ 2010ರಲ್ಲಿ ಹೊರಬಂದಿತ್ತು. ಶಿವಮೊಗ್ಗದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿಗಳನ್ನು ಒಳಗೊಂಡು, ಪ್ರೊ. ರಾಜಾರಾಮ ಹೆಗಡೆ ಹಾಗೂ ಪ್ರೊ. ಸದಾನಂದ ಜೆ.ಎಸ್. ಕನ್ನಡ ಅನುವಾದ ಮಾಡಿದ್ದರು. ಕನ್ನಡ ಸಾಹಿತ್ಯ ವಲಯಕೆ ಬಾಲಗಂಗಾಧರ ಅವರ ಸಂಶೊಧನೆ ಪರಿಚಯ ಮಾಡಿಕೊಡುವ ಯತ್ನ ಇದಾಗಿತ್ತು. ಇದೀಗ, ಎರಡನೇ ಆವೃತ್ತಿ ಹೊರಬಂದಿದೆ.

ಬೌದ್ಧಿಕ ವಲಯದಲ್ಲಿ ಮೊದಲನೇ ಬಾರಿಗೆ ಬೇರೆ ಬೇರೆ ಸಂಸ್ಕೃತಿಗಳನ್ನು (ಹೆಚ್ಚಿನದಾಗಿ ಭಾರತೀಯ ಸಂಸ್ಕೃತಿಯನ್ನು), ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಸಾಧ್ಯತೆಯನ್ನು ಎತ್ತಿಹಿಡಿಯುವ ಕೃತಿ ಇದು. ಪಶ್ಚಿಮದ ಜಗತ್ತು ತನ್ನ ಮತ್ತು ಇತರೇ ಸಂಸ್ಕೃತಿಗಳನ್ನು ವಿವರಿಸುವ ಕೆಲಸಕ್ಕಿಳಿದು, ಇತರೇ ಸಂಸ್ಕೃತಿಗಳನ್ನೂ ತನ್ನ ಸಾಂಸ್ಕೃತಿಕ ಅನುಭವದ ಚೌಕಟ್ಟಿನೊಳಗಿಂದಲೇ ವಿವರಿಸಿದೆ. ಅಂದರೆ, ಕ್ರಿಶ್ಚಿಯನ್ ರಿಲೀಜನ್ನಿನ ಒಳಗಿನ ವಾದ-ವಿವಾದಗಳಿಂದ ಪ್ರಭಾವಿತ ಗೊಂಡಿರುವ ಪಶ್ಚಿಮದ ಸಂಸ್ಕೃತಿಯು, ಕ್ರಿಶ್ಚಿಯನ್ ವಿಚಾರಗಳ ಚೌಕಟ್ಟಿನೊಳಗಿಂದಲೇ ಭಾರತವನ್ನು ಅರ್ಥಮಾಡಿಕೊಳ್ಳುತ್ತಾ, ವಿವರಿಸುತ್ತಾ ಹೋಗಿದೆ. ಪಶ್ಚಿಮದ ಈ ವಿವರಣೆಗೆ ಒಂದು ಮಿತಿ ಇದೆ. ಅದೆಂದರ, ಪಶ್ಚಿಮದವರು ಭಾರತವನ್ನು ಕುರಿತ ತಮ್ಮ ಅನುಭವವನ್ನಷ್ಟೇ ಹೇಳುವ ಸಾಧ್ಯತೆಯನ್ನು ಬಿಟ್ಟರೆ, ತನ್ನ ಚೌಕಟ್ಟಿನಿಂದ ಆಚೆಗೆ, ಭಾರತೀಯ ಸಂಸ್ಕೃತಿ, ಇಲ್ಲಿನ ಜನ ಜೀವನದ ಅನುಭವಗಳೇನು ಎಂಬ ಪ್ರಶ್ನೆಯನ್ನು ನಿಜವಾದ ಅರ್ಥದಲ್ಲಿ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಭಾರತೀಯರ ನೈಜ ಅನುಭವಗಳನ್ನು ಪಶ್ಚಿಮದ ಅಧ್ಯಯನಗಳು ವಿವರಿಸುವುದೇ ಇಲ್ಲ. ಈ ಕಾರಣದಿಂದಾಗಿ ಇದು ವೈಜ್ಞಾನಿಕ ಅಧ್ಯಯನ ಅಲ್ಲ. ಪಶ್ಚಿಮದ ಈ ವಿವರಣೆಗಳನ್ನೇ ಇಂದಿನ ಸಮಾಜ ವಿಜ್ಞಾನವೂ ಒಪ್ಪಿಕೊಂಡು, ಭಾರತವನ್ನು ಕುರಿತು ಯುರೋಪಿನ ಈ ಕಥೆಯನ್ನೇ ’ವೈಜ್ಞಾನಿಕ’ ಎಂಬಂತೆ ತನ್ನ ಅಧ್ಯಯನವನ್ನು ನಡೆಸಿಕೊಂಡು ಹೋಗುತ್ತಿದೆ. ಇದಲ್ಲದೆ, ಈ ಅಧ್ಯಯನವನ್ನು ’ವೈಜ್ಞಾನಿಕ’ ಎಂಬಂತೆ ಓದಿಕೊಳ್ಳುವ ಭಾರತದ ಬೌದ್ಧಿಕ ವಲಯದವರಿಗೂ ತಮ್ಮ ಅನುಭವಗಳು ಅದರಲ್ಲಿ ಸಿಕ್ಕುವುದಿಲ್ಲ. ಅಷ್ಟೇ ಅಲ್ಲದೆ, ಅವುಗಳನ್ನು ’ವೈಜ್ಞಾನಿಕ’ ಎಂದು ಒಪ್ಪಿಕೊಂಡಿರುವುದರಿಂದ ಇಲ್ಲಿನ ಬೌದ್ಧಿಕ ವಲಯವು ಆ ವಿವರಣೆಗಳನ್ನೇ ಸತ್ಯ ಎಂದು ನಂಬಿಕೊಂಡಿದ್ದು, ತನ್ನ ದೈನಂದಿನ ಬದುಕಿನ ಅನುಭವಗಳಿಗೆ ಕುರುಡಾಗಿದೆ. ವಸಾಹತೋತ್ತರ ಚಿಂತನೆಯೂ ಇದೇ ಅವೈಜ್ಞಾನಿಕ ಅಧ್ಯಯನ ಕ್ರಮಕ್ಕೆ ಬಲಿಯಾಗಿದೆ – ಪಶ್ಚಿಮದ ವಿಷಯಗಳಾದ ’ಸೆಕ್ಯುಲರಿಸಂ’, ’ಹಿಸ್ಟರಿ’ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಭಾರತಕ್ಕೂ ಹಿಸ್ಟರಿ ಇದೆ, ಭಾರತದಲ್ಲೂ ತನ್ನದೇ ಅರ್ಥದ ಸೆಕ್ಯುಲರಿಸಂ ಇದೆ ಎಂದು ವಾದಿಸುತ್ತಾ, ಇವುಗಳಾವುವೂ ಇರದೇ ಇಲ್ಲಿಯ ಸಂಸ್ಕೃತಿಯು ಉಳಿಯುವ ಸಾಧ್ಯತೆ ಇದೆ ಎಂಬುದನ್ನು ನೋಡದೇ ಹೋಗುತ್ತದೆ. ಹೀಗೆ ನೋಡದೆ ಮರುಳಾಗುವುದಕ್ಕೆ (ಅ) ಯುರೋಪಿನ ಕ್ರಿಶ್ಚಿಯನ್ ವಿಷಯಗಳು ಸೆಕ್ಯುಲರೀಕರಣಕ್ಕೆ ಒಳಗಾಗಿ ’ಸಾರ್ವತ್ರಿಕ’, ’ ವೈಜ್ಞಾನಿಕ’ ಸತ್ಯ ಎಂಬಂತೆ ತೋರಿಸಿಕೊಳ್ಳುವುದು ಮತ್ತು (ಆ) ವಸಾಹತು ಪ್ರಜ್ಞೆಯು ಭಾರತೀಯರಿಗೆ ತಮ್ಮ ಅನುಭವಗಳು ತಮಗೇ ದಕ್ಕದಂತೆ ಮಾಡುವುದು ಕಾರಣಗಳಾಗಿವೆ. ಈ ಎಲ್ಲಾ ವಿಚಾರಗಳನ್ನು ಮತ್ತು ಇದಕ್ಕೆ ಸಂಬಂಧಿಸಿದ ಮತ್ತಷ್ಟು ವಿಚಾರಗಳನ್ನೂ ಈ ಕೃತಿಯು ವಿಶ್ಲೇಷಿಸುತ್ತದೆ.

ಎಡ್ವರ್ಡ್ ಸೈಯೀದ್ ತನ್ನ ’ಓರಿಯೆಂಟಲಿಸಂ’ ಕೃತಿಯಲ್ಲಿ, ಪಶ್ಚಿಮದವರು ಇತರೆ ಸಂಸ್ಕೃತಿಗಳನ್ನು ಬಣ್ಣಿಸುವ ಬಗೆಯಲ್ಲಿ ಇರುವ ಒಂದು ಸ್ಥಿರ ಕ್ರಮವನ್ನು ಗುರುತಿಸುತ್ತಾನೆ. ಇದನ್ನು ಬಾಲಗಂಗಾಧರ ರವರು ಗುರುತಿಸುತ್ತಾ, ಓರಿಯೆಂಟಲಿಸಂ ಎಲ್ಲಿ ಸೋಲುತ್ತದೆ ಎಂಬುದನ್ನೂ ತಿಳಿಸಿಕೊಡುತ್ತಾರೆ. ಪಶ್ಚಿಮದ ಆ ಸ್ಥಿರ ಕ್ರಮಕ್ಕೆ ಅವರ ಜನಾಂಗೀಯ ಮನೋಭಾವ, ಯುರೋ ಕೇಂದ್ರಿತ ಮನೋಭಾವ ಎಂದು ಓರಿಯೆಂಟಲಿಸಂ ಸಮರ್ಥಿಸಿಕೊಳ್ಳುತ್ತಿದೆ. ಈ ರೀತಿಯ ಸಮರ್ಥನೆಯೇ ಅದರ ಸೋಲು. ಏಕೆಂದರೆ ಒಂದು ಪೂರಾ ಸಂಸ್ಕೃತಿಯನ್ನೇ ಜನಾಂಗೀಯ ಮನೋಭಾವನೆ ಉಳ್ಳದ್ದು ಎನ್ನುವುದು ಸರಿಯಲ್ಲ ಮತ್ತು ಅಂಥ ವಾದಕ್ಕಿಳಿಯುವುದರಿಂದ ಪಶ್ಚಿಮ ಸಂಸ್ಕೃತಿಯನ್ನು ಭಾರತದ ಸಂಸ್ಕೃತಿಯೊಂದಿಗೆ ಇಟ್ಟು ತೌಲನಿಕ ಅಧ್ಯಯನ ಮಾಡಲೂ ಸಾಧ್ಯವಾಗುವುದಿಲ್ಲ ಎಂದು ಬಾಲಗಂಗಾಧರ ರವರು ಈ ಕೃತಿಯಲ್ಲಿ ವಾದಿಸುತ್ತಾರೆ. ಹೀಗಾಗಿ ಎಡ್ವರ್ಡ್ ಸೈಯಿದ್ ನ ಚಿಂತನೆಯಿಂದಲೂ ಸಂಸ್ಕೃತಿಯ ಅಧ್ಯಯನ ಸಾಧ್ಯವಾಗುವುದಿಲ್ಲ ಎಂಬುದನ್ನು ಬಹಳ ಸ್ಪಷ್ಟವಾಗಿ ನಿರೂಪಿಸುತ್ತಾರೆ.

ಹಾಗಾದರೆ, ಭಾರತೀಯ ಸಂಸ್ಕೃತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಈ ಕೃತಿಯು ಉತ್ತರಿಸುತ್ತದೆ. ಬಾಲಗಂಗಾಧರ ರವರು ಹೇಳುವ ಹಾಗೆ, ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕಾದರೆ, ಮೊದಲು ಅದನ್ನು ಕುರಿತು ಇರುವ ಪಶ್ಚಿಮದ ವಿವರಣೆಗಳಿಂದ ಬಿಡಿಸಿಕೊಳ್ಳಬೇಕು. ಹೀಗೆ ಬಿಡಿಸಿ ಕೊಳ್ಳಬೇಕೆಂದರೆ, ಪಶ್ಚಿಮದ ಸಂಸ್ಕೃತಿಯನ್ನು ಮೊದಲು ಅಧ್ಯಯನ ಮಾಡಿ ಆ ಸಂಸ್ಕೃತಿಯ ಯಾವ ಮತ್ತು ಎಷ್ಟು ಅಂಶಗಳನ್ನು ಭಾರತವನ್ನು ವಿವರಿಸಲು ಬಳಕೆಯಾಗಿರುವ ನೆಲೆಗಳಾಗಿವೆ ಎಂದು ತಿಳಿದುಕೊಳ್ಳಬೇಕು. ಜೊತೆಗೆ, ನಮ್ಮ ಅನುಭವಗಳನ್ನೂ ವಿವರಿಸುತ್ತಾ, ಈಗಾಗಲೇ ಇರುವ ಪಶ್ಚಿಮದ ವಿವರಣೆಯ ಜೊತೆ ತುಲನೆ ಮಾಡುವಂತಾಗಬೇಕು. ಈ ಎರಡು ವಿವರಣೆಗಳ ನಡುವಣ ಭಿನ್ನತೆಯನ್ನು ಅಧ್ಯಯನ ಮಾಡಬೇಕು. ಹೀಗೆ ಮಾಡುವುದರಿಂದ ಯಾವುದೋ ಒಂದು ಚೌಕಟ್ಟಿನೊಳಗಿನ ಪಶ್ಚಿಮ ಹಾಗೂ ಭಾರತೀಯ ಸಂಸ್ಕೃತಿಗಳನ್ನು ವಿವರಿಸುವ ಅವೈಜ್ಞಾನಿಕ ಮಾರ್ಗದಿಂದ ಹೊರಬರಲು ಸಾಧ್ಯವಾಗುತ್ತದೆ. ಇದಕ್ಕೆ ಬೇಕಾದ ಕ್ರಮವನ್ನು ಮತ್ತು ನಂತರ ತೆಗೆದುಕೊಳ್ಳಬೇಕಾದ ಹೆಜ್ಜೆಗಳನ್ನು ಬಾಲಗಂಗಾಧರ ರವರ ಸಂಶೋಧನೆಯು ತೋರಿಸಿಕೊಡುತ್ತದೆ. ತಮ್ಮ ಈ ಸಂಸ್ಕೃತಿಗಳ ವೈಜ್ಞಾನಿಕ ಸಂಶೋಧನೆಯನ್ನು ’ಸಂಸ್ಕೃತಿಗಳ ವೈಜ್ಞಾನಿಕ ತುಲನಾತ್ಮಕ ಅಧ್ಯಯನ’ (Comparative Science of Cultures) ಎಂದು ಬಾಲಗಂಗಾಧರ ರವರು ಕರೆಯುತ್ತಾರೆ.

ಈ ಕೃತಿಯಲ್ಲಿರುವ ಲೇಖನಗಳನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. ಮೊದಲನೇ ಭಾಗದ ಲೇಖನಗಳು ಸರಳ ಭಾಷೆಯಲ್ಲಿದ್ದು ಎರಡನೇ ಭಾಗವನ್ನು ಓದಿಕೊಳ್ಳಲು ತಯಾರಿ ಮಾಡುತ್ತವೆ. ಎರಡನೇ ಭಾಗದ ಲೇಖನಗಳು ಕೆಲವು ನಿರ್ದಿಷ್ಟ ಅಕಾಡೆಮಿಕ್ ಪೂರ್ವ ತಯಾರಿಯನ್ನು ಬೇಡುತ್ತವೆ. ಓರಿಯೆಂಟಲಿಸಂ, ವಸಾಹತೋತ್ತರ ಅಧ್ಯಯನ ಅಥವಾ ಪ್ರಸ್ತುತ ಸಮಾಜ ವಿಜ್ಞಾನಗಳಿಂದ ಯಾವ ಜ್ಞಾನವನ್ನೂ ಕಟ್ಟಲಾಗದ ಅಸಹಾಯಕ ವೇಳೆಯಲ್ಲಿ, ನಿರೀಕ್ಷೆಯ ಬೆಳಕಾಗಿ ಸಮಾಜ ವಿಜ್ಞಾನಕ್ಕೆ ಹೊಸ ದಾರಿ ತೋರಿಸುತ್ತಾ, ಸಂಸ್ಕೃತಿಗಳನ್ನು ಕುರಿತು ಜ್ಞಾನ ಕಟ್ಟುವ ಪರಿಯನ್ನು ಕಲಿಸಿಕೊಡುವ ಇಂತಹ ಚಿಂತನೆಯು ಕನ್ನಡ ಸಾಹಿತ್ಯಲೋಕಕ್ಕೆ, ಈ ಕೃತಿಯ ಮೂಲಕ, ಮರುಮುದ್ರಣವಾಗಿ ಬಂದಿರುವುದು ಸಂತಸದ ವಿಷಯ. ಈ ಪುಸ್ತಕ ಮುಂದಿನ ದಿನಗಳಲ್ಲಿ ಗಂಭೀರ ಚಿಂತನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನು ತಲುಪುತ್ತದೆ ಅನ್ನಬಹುದು. ಅಲ್ಲದೇ, ಇಂದು ದಿನನಿತ್ಯ ನಮ್ಮ ಪ್ರಗತಿಪರರ ಭರಾಟೆಗಳಿಂದ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಇಂತಹ ಪುಸ್ತಕಗಳು ನೆಮ್ಮದಿ ಕೊಡುವುದಲ್ಲದೆ ಅವರನ್ನು ಖಂಡಿತವಾಗಿಯೂ ಜಿಜ್ಞಾಸೆಯಲ್ಲಿ ತೊಡಗಿಸುತ್ತದೆ.

Author

  • ಹರ್ಷಿತ್ ಜೋಸೆಫ಼್ ರವರು ಪ್ರಸ್ತುತ India Studies Unit, CESS ನಲ್ಲಿ ಫ಼ೆಲೊ ಆಗಿ ಕಾರ್ಯ ನಿರ್ವಹಿಸುತಿದ್ದಾರೆ. ಸಾಂಸ್ಕೃತಿಕ ಭಿನ್ನತೆಯ ಹಿನ್ನೆಲೆಯಲ್ಲಿ ಭಾಷಾಂತರದ ಸಮಸ್ಯೆಯನ್ನು ಅರ್ಥೈಸಿಕೊಳ್ಳುವುದು ಅವರ ಸಂಶೋಧನೆಯಾಗಿದೆ.

You may also like

Leave a Comment