Home ಪುಸ್ತಕದ ಕುರಿತು ಹೊಸ ಚಿಗುರು ಹಳೆ ಬೇರು: ಧರಂಪಾಲ್‌ರನ್ನು ನೆನೆಯುತ್ತ…..

ಹೊಸ ಚಿಗುರು ಹಳೆ ಬೇರು: ಧರಂಪಾಲ್‌ರನ್ನು ನೆನೆಯುತ್ತ…..

by Ashwini B. Desai
60 views

ಭಾರತೀಯ ಅಂತಃಸತ್ವವನ್ನು ಗ್ರಹಿಸಲು ಜೀವನವನ್ನು ಮುಡಿಪಾಗಿಟ್ಟ ಚಿಂತಕ, ಪ್ರಖರ ಗಾಂಧೀವಾದಿ ಶ್ರೀ ಧರಂಪಾಲ್‌ರವರ ಜನ್ಮ ಶತಾಬ್ದಿ ವರ್ಷದಲ್ಲಿ ನಾವಿದ್ದೇವೆ. ಧರಂಪಾಲ್‌ರ ಬರಹಗಳು ಭಾರತದ ಗತ, ವಿಜ್ಞಾನ-ತಂತ್ರಜ್ಞಾನ, ಭಾರತೀಯ ಶಿಕ್ಷಣ, ಹೀಗೆ ಹಲವು ವಿಚಾರಗಳ ಬಗ್ಗೆ ಆಳವಾದ ಅಧ್ಯಯನದಿಂದ ಹೊರಬಂದಿವೆ. ಪ್ರಮುಖವಾಗಿ ಬ್ರಿಟೀಷ್ ದಾಖಲೆಗಳನ್ನು ಆಧರಿಸಿ ಧರಂಪಾಲ್‌ರ ಈ ಸಂಶೋಧನೆಗಳು ಭಾರತದ ಬಗ್ಗೆ ಅರಿವು ಮೂಡಿಸಿಕೊಳ್ಳಲು ಅತ್ಯಮೂಲ್ಯವಾದ ಆಕರಗಳು. ಪಾಶ್ಚಿಮಾತ್ಯರು ಮತ್ತು ಬುದ್ಧಿಜೀವಿ ವಲಯ ರೂಪಿಸಿರುವ ಭಾರತದ ಕುರಿತ ಚಿತ್ರಣಕ್ಕೆ ಧರಂಪಾಲ್‌ರ ಸಂಶೋಧನೆ ಸವಾಲೊಡ್ಡುತ್ತದೆ. ದುರ್ದೈವವಶಾತ್ ಬೌದ್ಧಿಕ ಜಗತ್ತಿನಲ್ಲಿ ಅಪಾರ  ನಿರ್ಲಕ್ಷ್ಯಕ್ಕೊಳಗಾಗಿರುವ ಈ ಬರಹಗಳು ಧರಂಪಾಲ್ ಜನ್ಮ ಶತಾಬ್ದಿಯ ಈ ವರ್ಷದಲ್ಲಿ ಇಂಗ್ಲಿಷ್‌ನಲ್ಲಿ ಮತ್ತು ಸಮಗ್ರ ಲೇಖನಗಳ ಸಂಗ್ರಹ ಕನ್ನಡದಲ್ಲಿ ಹೊರಬರಲಿವೆ.

ಧರಂಪಾಲ್‌ರವರ ವಿಚಾರಗಳು ಅವರಿದ್ದ ಕಾಲಕ್ಕಿಂತ ಇಂದು ಹೆಚ್ಚು ಪ್ರಸ್ತುತವೆನಿಸುತ್ತವೆ. ಉದಾಹರಣೆಗೆ ಕಳೆದ ದಶಕದಲ್ಲಿ ಭಾರತದಲ್ಲಿ ನಡೆದ ಹೋರಾಟಗಳಲ್ಲಿ ಸಾಮಾನ್ಯ ಜನರು ಆಸಕ್ತಿ ಕಳೆದುಕೊಂಡಂತೆ ಕಾಣಿಸುತ್ತಿದೆ. ಹಾಗಾದರೆ ನಿಶ್ಚಿತವಾಗಿ ಯಾವ ವಿಷಯಗಳನ್ನು ಭಾರತೀಯರು ಪ್ರತಿಭಟನೆಗೆ ಪೂರಕ ಎಂದು ಯೋಚಿಸುತ್ತಾರೆ ಹಾಗು ಜನಪರ ಹೋರಾಟಗಳಲ್ಲಿ ಜನರೇ ಭಾಗವಹಿಸದಿರಲು ಕಾರಣವೇನು ಎಂದು ಕೇಳಿಕೊಂಡಾಗ ಇಂದಿಗೂ ಧರಂಪಾಲ್‌ರವರು ಅತ್ಯಂತ ಪ್ರಸ್ತುತ ಎನಿಸುತ್ತಾರೆ.

ಒಮ್ಮೆ ನಮ್ಮ ಚಳವಳಿಗಳ ಕುರಿತ ಮಾತುಕತೆಗಳನ್ನು ನೋಡಿದರೆ ನಮ್ಮ ವಾಗ್ವಾದಗಳಲ್ಲಿ ಸ್ವಾತಂತ್ರ್ಯ ಹೋರಾಟ, ಗಾಂಧಿ-ನೆಹರು, ಕ್ರಾಂತಿಕಾರಿಗಳು ಇತ್ಯಾದಿ ಅನೇಕರು ಕಾಣಸಿಗುತ್ತಾರೆ. ಈ ಚರ್ಚೆಗಳಲ್ಲಿ ಗಾಂಧೀಜಿಯಂತವರು ಬಳಸಿದ ಸಾಂಸ್ಕೃತಿಕ ಸಂಪನ್ಮೂಲಗಳ ಬಗ್ಗೆ ನಾವೇನು ಹೆಚ್ಚು ಯೋಚನೆ ಮಾಡಿದಂತೆ ಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿ ಧರಂಪಾಲ್‌ರವರ “Civil Disobedience and Indian Tradition” ಎನ್ನುವ ಪುಸ್ತಕ ಉಪಯುಕ್ತವಾದ ಮತ್ತು ವಿಸ್ತಾರವಾದ ಮಾಹಿತಿಯನ್ನು ನೀಡುತ್ತದೆ.

ಗಾಂಧೀಜಿಯವರ ಅಸಹಕಾರ ಆಂದೋಲನ, ಕಾನೂನುಭಂಗ ಚಳುವಳಿಗಳು ಹೇಗೆ ಅಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ನಡೆದವು ಮತ್ತು ಯಶಸ್ಸು ಗಳಿಸಲು, ಗುರಿ ಮುಟ್ಟಲು ಕಾರಣಗಳೇನು ಎಂಬ ಪ್ರಶ್ನೆಯನ್ನೆತ್ತಿಕೊಂಡು ಅದಕ್ಕೆ ಪೂರಕ ಮಾಹಿತಿಯನ್ನೊದಗಿಸುತ್ತಾರೆ. ಗಾಂಧೀಜಿಯವರ ಪ್ರಮುಖ ಅಸ್ತ್ರಗಳಾದ ಅಸಹಕಾರ ಆಂದೋಲನವಾಗಲಿ, ಕಾನೂನು ಭಂಗ ಚಳವಳಿಯಾಗಲಿ ಎಲ್ಲಿಂದ ಬಂದವು ಎಂಬುದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಿವೆ. ಕೆಲವರು ಇದನ್ನು ಗಾಂಧೀಜಿಯವರೇ ಹುಟ್ಟು ಹಾಕಿದ್ದು ಎಂದು ಹೇಳಿದರೆ, ಮತ್ತೆ ಕೆಲವರು ಗಾಂಧೀಜಿಯವರು ರಸ್ಕಿನ್, ಥೋರು, ಟಾಲ್‌ಸ್ಟಾಯ್ ಮುಂತಾದ ಪಾಶ್ಚಿಮಾತ್ಯರಿಂದ ತಿಳಿದುಕೊಂಡರು ಎಂದು ಹೇಳುತ್ತಾರೆ. ಕೆಲವರು, ಗಾಂಧೀಜಿಯಾವರು ಈ ಹೋರಾಟಗಳನ್ನು ಭಾರತದ ಪುರಾಣಗಳಿಂದ ಪಡೆದರು ಎಂದೂ ಹೇಳುತ್ತಾರೆ. ಆದರೆ ಧರಂಪಾಲ್‌ರು ಗಾಂಧೀಜಿಯವರೇ ಹಿಂದ್ ಸ್ವರಾಜ್‌ನಲ್ಲಿ ಹೇಳಿದ ವಾಕ್ಯವನ್ನು ಉಲ್ಲೇಖಿಸುತ್ತಾರೆ. ಭಾರತೀಯರು ಒಂದು ಸಂಸ್ಕೃತಿಯಾಗಿ ನಿಷ್ಕ್ರಿಯ ಪ್ರತಿಭಟನೆ ಅಥವಾ ಪ್ರತಿರೋಧವನ್ನು (passive resistance) ತಮ್ಮ ಜೀವನದ ವಿವಿಧ ರಂಗಗಳಲ್ಲಿ ಉಪಯೋಗಿಸಿದ್ದಾರೆ. ಯಾವಾಗ ನಮ್ಮನ್ನು ಆಳುವವರು ನಮ್ಮನ್ನು ಅಸಂತುಷ್ಟರನ್ನಾಗಿ ಮಾಡಿದ್ದಾರೆಯೋ, ಆಗಾಗ ನಾವು ಇದನ್ನು ಉಪಯೋಗಿಸುತ್ತಲೇ ಬಂದಿದ್ದೇವೆ ಎಂದು ಹೇಳುತ್ತಾರೆ.

ಆಂದೋಲನಗಳ ಬಗ್ಗೆ ಗಾಂಧೀಯವರೇ ಹೇಳುವುದನ್ನು ಕೇಳಿದರೆ, ಅವರು ಪಾಶ್ಚಿಮಾತ್ಯರಿಂದ ಅಥವಾ ಪುರಾಣಗಳಿಂದ ಪ್ರೇರಿತರಾಗಿದ್ದಾರೆ ಅಥವ ತಮ್ಮದೆ ಆವಿಷ್ಕಾರದ ಮೂಲಕ ನಿಷ್ಕ್ರಿಯ (ಅಹಿಂಸಾ) ಪ್ರತಿರೋಧವನ್ನು ಹುಟ್ಟುಹಾಕಿದ್ದಾರೆ ಎನ್ನುವ ವಾದಗಳು ಅಸಮಂಜಸವಾಗುತ್ತವೆ. ಈ ಹಿನ್ನೆಲೆಯಲ್ಲಿ ಧರಂಪಾಲ್‌ರವರು ಬ್ರಿಟಿಷ್ ಗ್ರಂಥಾಲಯದಲ್ಲಿ ಭಾರತದಲ್ಲಿನ ಅಹಿಂಸಾತ್ಮಕ ಈ ಪ್ರತಿಭಟನೆಗಳು ಹೇಗಿದ್ದವು, ಎಲ್ಲಿ ನಡೆದವು ಎಂಬುದಕ್ಕೆ ಪೂರಕ ಆಕರಗಳನ್ನು ಹುಡುಕುತ್ತಾರೆ. ೧೬೮೦ರಲ್ಲಿ ಮದ್ರಾಸ್ ಪಟ್ಟಿನಂ ನಲ್ಲಿ ನಡೆದ ಅಹಿಂಸಾತ್ಮಕ ಪ್ರತಿಭಟನೆಯ ದಾಖಲೆಯನ್ನು ಧರಂಪಾಲ್‌ರು ಒದಗಿಸುತ್ತಾರೆ. ಆ ಪ್ರತಿಭಟನೆಯನ್ನು ವಿನೂತನ ರೀತಿಯಲ್ಲಿ – ತಮಟೆ ಬಾರಿಸಿಯೋ ಅಥವಾ ಹಾಡುಗಳಿಂದಲೋ ಅಥವಾ ಇನ್ಯಾವುದೋ ವಾದ್ಯಗಳ ಮೂಲಕ ವ್ಯಕ್ತ ಪಡಿಸುತ್ತಾರೆ ಎಂಬುದನ್ನು ಧರಂಪಾಲ್‌ರು ಗುರುತಿಸುತ್ತಾರೆ. ೧೮೧೦-೧೧ರಲ್ಲಿ ಬೆಂಗಾಲ್ ಪ್ರಾಂತದಲ್ಲಿ ಬ್ರಿಟಿಷರು ಮನೆ ಹಾಗೂ ಅಂಗಡಿಗಳ ಮೇಲೆ ತೆರಿಗೆಯೊಂದನ್ನು ವಿಧಿಸುತ್ತಾರೆ. ಆಗ ಬನಾರಸ್, ಪಟ್ನಾ, ಸಾರೂನ್, ಮೊರಶಿದಾಬಾದ್ ಮತ್ತು ಭಾಗಲ್ಪುರದಲ್ಲಿ ಅಸಹಕಾರ ಹಾಗೂ ಕಾನೂನುಭಂಗ ಚಳವಳಿ ಭಾರತೀಯರಿಂದ ವ್ಯಾಪಕವಾಗಿ ನಡೆಯುತ್ತವೆ. ಧರಣಿ ಕೂರುವುದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದು, ಉತ್ಪಾದನೆ ನಿಲ್ಲಿಸುವುದು ಹೀಗೆ ಜನರು ತಮ್ಮ ಅಹಿಂಸಾ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾರೆ. ಧರಂಪಾಲ್‌ರು, ಅತ್ಯಂತ ಯಶಸ್ವಿ ಚಳವಳಿಗಳ ಮೂಲಗಳು ಬೇರೆಲ್ಲಿಯೂ ಇಲ್ಲ, ಭಾರತದ ಗತದಿಂದ ಬಂದಿದೆ ಹಾಗು ಈ ಅಹಿಂಸಾ ಚಳವಳಿಗಳು ಭಾರತೀಯರ ಅಂತಃಸತ್ವವನ್ನು ಹಿಡಿಯಲು ಪರಿಣಾಮಕಾರಿ ಎಂದು ಗಾಂಧೀಜಿಯವರು ಅರಿತಿದ್ದರು ಎಂಬುದನ್ನು ತೋರಿಸಿಕೊಡುತ್ತಾರೆ. ಇಷ್ಟೇ ಅಲ್ಲ. ಈ ಬ್ರಿಟಿಷರ ದಾಖಲೆಗಳ ಮೂಲಕ, ಮೊಗಲ್ ಸುಲ್ತಾನರು ಭಾರತೀಯರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ರೀತಿಯ ಮನೆ ತೆರಿಗೆಯನ್ನು, ಅಂಗಡಿ ಅಥವಾ ವ್ಯಾಪಾರ, ದೇವಸ್ಥಾನಗಳ ಮೇಲಾಗಲಿ ತೆರಿಗೆಯನ್ನು ವಿಧಿಸಿರುವುದಿಲ್ಲವೆಂದು ಗುರುತಿಸುತ್ತಾರೆ. ಬಹುಶಃ ಸುಲ್ತಾನರಿಗೆ ಈ ರೀತಿಯ ಪ್ರತಿಭಟನೆಯ ಬಿಸಿ ತಟ್ಟಿರುತ್ತದೆ. ಹಾಗಾಗಿ ಸುಲ್ತಾನರು ಈ ವಿಷಯದ ಬಗ್ಗೆ ಎಚ್ಚರಿಕೆ ವಹಿಸುತ್ತಾರೆ ಎಂಬುದು ಬ್ರಿಟೀಷ್ ದಾಖಲಾತಿಗಳಲ್ಲಿವೆ. ಇದೇ ರೀತಿ ಕರ್ನಾಟಕದಾದ್ಯಂತ ೧೮೩೦ರಲ್ಲಿ ಸುಮಾರು ಹನ್ನೊಂದು ಸಾವಿರ ಜನ ಪಾಲ್ಗೊಂಡ ರೈತರ ಪ್ರತಿಭಟನೆಯನ್ನು ಧರಂಪಾಲ್ ಉಲ್ಲೇಖ ಮಾಡುತ್ತಾರೆ.

ಹೀಗೆ ಭಾರತೀಯರು ರಾಜರ ವಿರುದ್ಧ, ವಸಾಹತು ಪ್ರಭುಗಳು ವಿರುದ್ಧ ಮಾಡುವ ಪ್ರತಿಭಟನೆ ನಮ್ಮನ್ನು ಹೊಸ ದಿಕ್ಕಿನಲ್ಲಿ ಯೋಚನೆ ಮಾಡುವಂತೆ ಮಾಡುತ್ತದೆ. ಧರಂಪಾಲ್ ಪ್ರಕಾರ ಅಹಿಂಸಾತ್ಮಕ ಪ್ರತಿಭಟನೆ ಅತ್ಯಂತ ಫಲಕಾರಿಯಾದದ್ದು ಎಂದು ಗಾಂಧೀಜಿಯವರು ಕಂಡುಕೊಂಡಿದ್ದರು. ಹಾಗೆಂದ ಮಾತ್ರಕ್ಕೆ ಅವರಿಗೆ ಈ ಮಾರ್ಗವೊಂದೇ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು ಎಂಬ ಭ್ರಮೆ ಇರಲಿಲ್ಲ. ಕ್ರಾಂತಿಕಾರಿಗಳೂ ಇದರಲ್ಲಿ ಭಾಗವಹಿಸಿದ್ದಾರೆ ಎಂಬ ಸತ್ಯವನ್ನು ಗಾಂಧೀಯವರು ಮಾನ್ಯ ಮಾಡಿದ್ದರು.

ಆದರೆ ಧರಂಪಾಲ್‌ರ ಸಂಶೋಧನೆಯಿಂದ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಗೆ ಬರುವ ಅನೇಕ ಶತಮಾನಗಳ ಮುಂಚೆಯೇ ಈ ಅಸಹಕಾರ, ಕಾನೂನುಭಂಗ ಚಳವಳಿಗಳು ಭಾರತದಲ್ಲಿ ಪ್ರಭುತ್ವದ ವಿರುದ್ಧ ಭಾರತೀಯರ ಪ್ರಬಲ ಅಸ್ತ್ರಗಳಾಗಿದ್ದವು ಎಂದು ತಿಳಿಯುತ್ತದೆ. ಹಾಗಾಗಿಯೇ ಗಾಂಧೀಜಿಯವರು, ಭಾರತೀಯ ಪರಂಪರೆಗಳ ಈ ಸತ್ವವನ್ನು ಹಿಡಿದು ಅಹಿಂಸಾ ಪ್ರತಿಭಟನೆಯನ್ನು ಕಟ್ಟಿದರು. ಗಾಂಧೀಜಿಯವರು ಈ ವಿಧದ ಹೋರಾಟಕ್ಕೆ ಬೇಕಾಗಿದ್ದ ನೈತಿಕ ಶಕ್ತಿಯನ್ನು ಗುರುತಿಸಿದರು, ಆ ರೀತಿ ಜೀವಿಸಿದರು, ಇತರರಿಗೂ ಆ ರೀತಿ ಇರಲು ಪ್ರೇರಣೆ ನೀಡಿದರು. ಅಷ್ಟೇ ಅಲ್ಲ, ಭಾರತೀಯರು ಯಾವ ವಿಷಯಕ್ಕೆ ಪ್ರತಿಭಟನೆ ಮಾಡುತ್ತಾರೆ, ಪ್ರತಿಭಟನೆ ಯಾವ ರೀತಿಯ ವಸ್ತು – ವಿಷಯಕ್ಕೆ ಸಂಬಂಧ ಪಟ್ಟಿದ್ದಾಗಿರುತ್ತದೆ ಎನ್ನುವುದನ್ನು ಗಾಂಧೀಯವರು ಅನುಭವದ ಮೂಲಕ ಕಂಡುಕೊಂಡಿದ್ದರು. ಈ ಒಳನೋಟವನ್ನು ಧರಂಪಾಲ್‌ರವರು ಅತ್ಯಂತ ನಿಖರವಾಗಿ ಹಿಡಿದು, ಅದಕ್ಕೆ ಸಾಕ್ಷಿ, ಪುರಾವೆಗಳನ್ನೊದಗಿಸುವ ಅಮೂಲ್ಯ ಕೆಲಸ ಮಾಡಿರುತ್ತಾರೆ.

ಇದರಿಂದ ನಾವು ಕಲಿಯಬೇಕಾದ ಮುಖ್ಯವಾದ ಎರಡು ವಿಷಯಗಳಿವೆ. ಮೊದಲನೆಯದಾಗಿ ಇಂದು ಜಗತ್ತಿನಾದ್ಯಂತ ಅತ್ಯಂತ ಪರಿಣಾಮಕಾರಿ ಹಾಗೂ ವಿಶೇಷವಾದ ವಿಚಾರವಾಗಿ ಚರ್ಚಿಸಲ್ಪಡುವ ಅಹಿಂಸಾತ್ಮಕ ಹೋರಾಟದ ಸ್ವರೂಪದ ಮೂಲವಿರುವುದು ಭಾರತೀಯರ ಗತದಲ್ಲಿ; ಅದನ್ನು ಅವರು ಶತಮಾನಗಳಿಂದ ಬಳಸಿ ಯಶಸ್ವಿಯಾಗಿದ್ದಾರೆ. ಎರಡನೆಯದಾಗಿ ಧರಂಪಾಲ್‌ರ ಸಂಶೋಧನೆಯನ್ನು ವಿಶ್ವ ವಿದ್ಯಾಲಯಗಳು ಗಂಭೀರವಾಗಿ ಪರಿಗಣಿಸಿದರೆ ಭಾರತೀಯರ ಮಾನಸಿಕತೆ, ಪ್ರಭುತ್ವ ಹಾಗು ಹೇಗೆ ನಾವು ಪ್ರತಿಭಟನೆಗಳನ್ನು ರೂಪಿಸಬೇಕು ಎನ್ನುವ ತಿಳಿವಳಿಕೆ ದೊರೆಯುತ್ತದೆ. ಈ ಜನ್ಮ ಶತಮಾನೋತ್ಸವ ಧರಂಪಾಲ್‌ರ ಸಂಶೋಧನೆಯ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ನಮ್ಮ ಸಂಸ್ಕೃತಿಗಿರುವ ಸದಾವಕಾಶ.

ರಾಷ್ಟ್ರೋತ್ಥಾನ ಸಾಹಿತ್ಯ ಧರಂಪಾಲ್‌ರ ಪ್ರಮುಖ ಕೃತಿಗಳನ್ನು ಮರು ಮುದ್ರಣ ಮಾಡುತ್ತಿದೆ. ಹಾಗೆಯೇ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹನ್ನೆರಡು ಸಂಪುಟಗಳಲ್ಲಿ ಧರಂಪಾಲ್ ಸಮಗ್ರ ಕನ್ನಡ ಭಾಷಾಂತರವನ್ನು ಹೊರತರಲಿದೆ. ಈ ಚಿಂತನೆಗಳೊಡನೆ ಸಂವಾದದಲ್ಲಿ ತೊಡಗಿ ಭಾರತವನ್ನು, ಗಾಂದೀಜಿಯವ ಚಿಂತನೆಗಳನ್ನು ಸರಿಯಾಗಿ ಗ್ರಹಿಸುವ ಕಾಲ ಬಂದಿದೆ.

Author

  • Ashwini B. Desai is currently working as Fellow at India Studies Unit, Centre for Educational and Social Studies (CESS), and Fellow, Aarohi Research Foundation, Bengaluru. Her research explores how colonialism has impacted literary studies in India and the contemporary literary descriptions have been shaped by European description of India.

You may also like

Leave a Comment