Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಮೊದಲು ಈ ಕಥೆಯನ್ನು ಕೇಳಿ ಮುಂದೆ ಹೋಗಿ….

ಮೊದಲು ಈ ಕಥೆಯನ್ನು ಕೇಳಿ ಮುಂದೆ ಹೋಗಿ….

by Rajaram Hegde
110 views

ನಾವಿಂದು ನಮ್ಮ ಸಮಾಜದ ಕುರಿತು ಒಪ್ಪಿಕೊಂಡ ಚಿತ್ರಣಗಳು ಹಾಗೂ ಚಿಂತನೆಗಳು ಮೂಲತಃ ಕ್ರೈಸ್ತ ಥಿಯಾಲಜಿಯ ವಿಚಾರಗಳಾಗಿವೆ. ಅವುಗಳಲ್ಲಿ ಥಿಯಾಲಜಿಯು ನೇರವಾಗಿ ಕಾಣಿಸಿಕೊಳ್ಳುವುದಿಲ್ಲ ಅಷ್ಟೆ. ಈ ಚೋದ್ಯ ಹೇಗೆ ನಡೆಯಿತು ಎಂಬುದನ್ನು ಮುಂದೆ ನೋಡಿ…(ಬೌದ್ಧಿಕ ದಾಸ್ಯದಲ್ಲಿ ಭಾರತ – ಲೇಖನ 02)

ಎಲ್ಲಾ ಕಥೆಗಳಿಗೂ ಒಂದಿಲ್ಲೊಂದು ಪ್ರಾರಂಭ ಇರಲೇಬೇಕು. ಈ ಅಂಕಣಗಳಲ್ಲಿ ನೀವು ತಿಳಿದಿರಲೇಬೇಕಾದ ಕಥೆಗೆ ಮೂರು ಎಳೆಗಳಿವೆ. ಮೊದಲನೆಯ ಎಳೆ ಹೀಗಿದೆ ನೋಡಿ: ಈ ಎಳೆಯು ಬೈಬಲ್ಲಿನ ಜೆನೆಸಿಸ್ ಎಂಬ ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಅದು ಮನುಕುಲದ ಹಾಗೂ ರಿಲಿಜನ್ನುಗಳ ಹುಟ್ಟಿನ ಕಥೆ. ಮೊದಲು ಗಾಡ್ ಎಂಬವನೊಬ್ಬನೇ ಇದ್ದನು. ಅವನು ಒಂದು ಕಾರಣ ಹಾಗೂ ಉದ್ದೇಶಗಳನ್ನಿಟ್ಟುಕೊಂಡು ಈ ವಿಶ್ವವನ್ನು ಸೃಷ್ಟಿಸಿದನು. ಇಲ್ಲಿನ ಮನುಷ್ಯರನ್ನೂ ಸೃಷ್ಟಿಸಿದನು. ಅವರೇ ಆಡಂ ಮತ್ತು ಈವ್. ಇವರೇ ಭೂಮಿಯ ಮೇಲಿರುವ ಸಮಸ್ತ ಮಾನವರ ಮೂಲ ಪುರುಷರು. ಅವರು ಸ್ವರ್ಗದ ಏಡನ್ ತೋಟದಲ್ಲಿದ್ದರು. ಆದರೆ ಅವರು ಗಾಡ್‌ನ ಆಜ್ಞೆಯನ್ನು ಉಲ್ಲಂಘಿಸಿ ಅಲ್ಲಿನ ಹಣ್ಣನ್ನು ತಿಂದರು. ಹಾಗಾಗಿ ಗಾಡ್‌ನಿಂದ ಅಭಿಶಪ್ತರಾಗಿ ಸ್ವರ್ಗವನ್ನು ಕಳೆದುಕೊಂಡರು. ಮುಂದೆ ಅವರ ಸಂತತಿಯೇ ಭೂಮಿಯಲ್ಲಿ ನಾಲ್ಕೂ ದೆಸೆಗಳಲ್ಲಿ ಹಬ್ಬಿ ಬೇರೆ ಬೇರೆ ಜನಾಂಗಗಳಾದರು. ಅವರ ಜನಾಂಗೀಯ ಲಕ್ಷಣಗಳೂ ಭಿನ್ನ ಭಿನ್ನವಾದವು. ೧೬ನೆಯ ಶತಮಾನದಿಂದ ಅನ್ಯ ಭೂಖಂಡಗಳಿಗೆ ಬರತೊಡಗಿದ ಪಾಶ್ಚಾತ್ಯರು ಅಲ್ಲಿನ ಸಂಸ್ಕೃತಿಗಳನ್ನು ನೋಡಿದಾಗ ಅವರ ತಲೆಯಲ್ಲಿದ್ದದ್ದು ಈ ಬೈಬಲ್ಲಿನ ಕಥೆ.

ಈ ಎಳೆಗೆ ಮತ್ತೊಂದಷ್ಟು ವಿವರವನ್ನು ಜೋಡಿಸಿದಾಗ ನಾನು ಹೇಳಲಿರುವ ಕಥೆ ಇನ್ನೂ ಸ್ಪಷ್ಟವಾಗುತ್ತದೆ. ಮನುಷ್ಯ ಸಂತತಿಯು ಪಾಪವನ್ನು ಮಾಡಿ ಸ್ವರ್ಗದಿಂದ ಚ್ಯುತವಾಯಿತಷ್ಟೆ? ಅವರಿಗೆ ಗಾಡ್ ಕಾಲದಿಂದ ಕಾಲಕ್ಕೆ ಬಂದು ಅವರನ್ನು ಈ ಸ್ಥಿತಿಯಿಂದ ಮೇಲೆತ್ತುವ ಭರವಸೆಯನ್ನು ನೀಡಿದ್ದಾನೆ. ಅಷ್ಟೇ ಅಲ್ಲ ಅವರಿಗೆ ತನ್ನ ಆಜ್ಞೆಗಳನ್ನು ನೀಡಿ ಅದರಂತೇ ಅನುಸರಿಸಿದರೆ ಸ್ವರ್ಗವನ್ನು ಮರಳಿ ನೀಡುವುದಾಗಿ ಭರವಸೆಯನ್ನು ನೀಡಿದ್ದಾನೆ. ಅಂದರೆ ಮನುಕುಲವು ಈಗ ಹೀನಾವಸ್ಥೆಯಲ್ಲಿದ್ದುದರಿಂದ ಅದರಿಂದ ಹೊರಬರಲು ಏಕೈಕ ಮಾರ್ಗವನ್ನೂ, ಗುರಿಯನ್ನೂ ನೀಡಿ ಅದುವೇ ಅವರ ಉದ್ಧಾರಕ್ಕೆ ಸಾಧನ ಎಂದು ಆಣತಿ ಮಾಡಿದ್ದಾನೆ. ಆ ಮಾರ್ಗವೇ ರಿಲಿಜನ್ನು ಎನಿಸಿಕೊಳ್ಳುತ್ತದೆ. ರಿಲಿಜನ್ನು ಎಂದರೆ ಗಾಡ್‌ನ ಜೊತೆಗೆ ಕಳೆದುಹೋದ ಅನುಬಂಧವನ್ನು ಪುನಃ ಜೋಡಿಸಿಕೊಳ್ಳುವ ಸಾಧನ. ಒಮ್ಮೆ ಅದು ಜೂಡಾಯಿಸಂ ಅಂತ ಕರೆಸಿಕೊಂಡರೆ, ಮತ್ತೊಮ್ಮೆ ಕ್ರಿಶ್ಚಿಯಾನಿಟಿ, ಮಗುದೊಮ್ಮೆ ಇಸ್ಲಾಂ ಅಂತೆನಿಸಿಕೊಂಡಿತು. ಈ ರಿಲಿಜನ್ನನ್ನು ಗಾಡ್ ಪ್ರತೀಬಾರಿಯೂ ಮಧ್ಯ ಏಷಿಯಾದಲ್ಲೇ ಕಾಣಿಸಿಕೊಂಡು ನೀಡಿದ್ದಾನೆ. ಸೃಷ್ಟಿಕರ್ತನೇ ಸ್ವತಃ ಬಂದು ತನ್ನ ಉದ್ದೇಶವನ್ನೂ, ಅಭೀಪ್ಸೆಯನ್ನೂ ತಿಳಿಸಿದ್ದು ಈ ರಿಲಿಜನ್ನುಗಳಲ್ಲಿ ಮಾತ್ರ.  ಆದರೆ ಆತನ ಆಣತಿ ಮಾತ್ರ ಆತನು ಸೃಷ್ಟಿಸಿದ  ಸಮಸ್ತ ಮನುಕುಲಕ್ಕೇ ಅನ್ವಯವಾಗುತ್ತದೆ. ಇದನ್ನು ಕಡೆಗಣಿಸಿದರೆ ಅವರೆಲ್ಲರಿಗೂ ಶಾಶ್ವತ ನರಕವೇ ಗತಿ.

ಇವುಗಳನ್ನು ಅಬ್ರಹಾಮಿಕ್ ರಿಲಿಜನ್ನುಗಳೆಂದೂ, ಸೆಮೆಟಿಕ್ ರಿಲಿಜನ್ನುಗಳೆಂದೂ ಕರೆಯುತ್ತಾರೆ. ಏಕೆಂದರೆ ಈ ರಿಲಿಜನ್ನುಗಳಿಗೆ ಮಹಾಪುರುಷರ ಒಂದು ಸಾಮಾನ್ಯ ವಂಶಾವಳಿಯಿದೆ. ಆಡಂ ಈವ್ ರಿಂದ ಹಿಡಿದು ತಂತಮ್ಮ ಪ್ರವಾದಿಗಳ ವರೆಗೆ ಅವರು ಈ ವಂಶಾವಳಿಯ ಸಂಬಂಧವನ್ನು ಕಲ್ಪಿಸುತ್ತಾರೆ. ಅವರಲ್ಲಿ ಮೋಸೆಸ್ ಹಾಗೂ ನೋಆ ಪ್ರಮುಖರು. ನೋಆನಿಗೆ ಮೂರು ಮಕ್ಕಳು ಅವರಲ್ಲಿ ಶೆಮ್/ ಸೆಮ್ ಎಂಬ ಮಗನ ಸಂತತಿಯು ಮಧ್ಯ್ಯ ಏಶಿಯಾದಲ್ಲಿ ಪಸರಿಸಿತು ಎಂಬುದಾಗಿ ಅವರ ಗ್ರಂಥ ಹೇಳುತ್ತದೆ. ಹಾಗಾಗಿ ಮಧ್ಯ ಏಶಿಯಾದ ಜನರನ್ನು ಸೆಮೆಟಿಕ್ ಜನಾಂಗವೆಂದು ಕರೆಯುವುದಷ್ಟೇ ಅಲ್ಲದೇ, ಗಾಡ್ ಈ ಮೇಲಿನ ಮೂರೂ ರಿಲಿಜನ್ನುಗಳನ್ನೂ  ಈ ಜನರಿಗೇ ಕೊಟ್ಟಿರುವುದರಿಂದ ಅವನ್ನು ಸೆಮೆಟಿಕ್ ರಿಲಿಜನ್ನುಗಳೆಂದೂ ವಿದ್ವಾಂಸರು ಕರೆದರು. ಶೆಮ್‌ನ ನಂತರ ಎಷ್ಟೋ ತಲೆಮಾರುಗಳ ನಂತರ ಅಬ್ರಹಾಂ ಎಂಬ ಮಹಾ ಪುರುಷನೊಬ್ಬನು ಆಗಿಹೋದನು. ಗಾಡ್ ಪದೇ ಪದೇ ಬಂದು ತನ್ನ ಗೂಢವನ್ನು ಅರುಹಿದ್ದು ಅಬ್ರಹಾಮನ ಸಂತತಿಯವರಿಗೇ ಆಗಿದೆ. ಹಾಗಾಗಿ ಈ ಮೇಲಿನ ಮೂರು ರಿಲಿಜನ್ನುಗಳನ್ನು ಅಬ್ರಹಾಮಿಕ್ ರಿಲಿಜನ್ನುಗಳೆಂಬುದಾಗಿ ಕೂಡ ವಿದ್ವಾಂಸರು ಕರೆಯುತ್ತಾರೆ. ಮನುಷ್ಯನನ್ನು ಕೇವಲ ಸೃಷ್ಟಿಸಿದ್ದೊಂದೇ ಅಲ್ಲದೇ ಅವರ ಹಿಂದೆ ಉದ್ದೇಶವನ್ನು, ಅವರಿಗೊಂದು ಅಂತಿಮ ಗುರಿಯನ್ನು ಯೋಜಿಸಿ ತನ್ನ ಕಾನೂನಿನ ಮೂಲಕ ಅದನ್ನೆಲ್ಲ ನಿಯಂತ್ರಿಸುವ ಏಕೈಕ ಶಕ್ತಿಯೇ ಸ್ವತಃ ಇವರಿಗೆ ಅದನ್ನು ತಿಳಿಸಿರುವುದರಿಂದ ತಮ್ಮದೇ ಸತ್ಯವಾದ ರಿಲಿಜನ್ನು ಎಂಬುದಾಗಿ ಅವರು ನಂಬುತ್ತಾರೆ.

ನನ್ನ ಕಥೆಯ ಎರಡನೆಯ ಎಳೆಯು ಪ್ರೊಟೆಸ್ಟಾಂಟ್ ಸುಧಾರಣೆಗೆ ಸಂಬಂಧಿಸಿದೆ: ಇಂಥ ಒಂದು ರಿಲಿಜನ್ನಾದ ಕ್ರಿಶ್ಚಿಯಾನಿಟಿಯು ಯುರೋಪಿನಾದ್ಯಂತವಾಗಿ ಪಸರಿಸಿ ತನ್ನ ಅಧಿಪತ್ಯವನ್ನು ಸಾವಿರಾರು ವರ್ಷಗಳ ವರೆಗೆ ಸ್ಥಾಪಿಸಿತು. ರೋಮನ್ ಕ್ಯಾಥೋಲಿಕ್ ಚರ್ಚ್ ಎಂಬುದಾಗಿ ಪ್ರಸಿದ್ಧಿ ಪಡೆಯಿತು. ಯುರೋಪಿನ ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನೆಲ್ಲ ಅದು ತನ್ನ ಪ್ರಭಾವವಲಯದೊಳಗೆ ಏಕತ್ರಗೊಳಿಸಿತು. ಕ್ಯಾಥೋಲಿಕ್ ರಿಲಿಜನ್ನಿನಲ್ಲಿ ಚರ್ಚು ಎಂಬ ಸಂಸ್ಥೆಯು ತನ್ನ ಅಧಿಕಾರ ಶ್ರೇಣೀಕರಣವನ್ನು ಸುವ್ಯವಸ್ಥಿತವಾಗಿ ಬೆಳೆಸಿಕೊಂಡು ರಿಲಿಜನ್ನಿಗೆ ನಿರ್ಣಾಯಕವಾಯಿತು. ಚರ್ಚಿನ ವಿಧಿವಿಧಾನಗಳು, ಅದರಲ್ಲಿ ಪ್ರೀಸ್ಟ್ ಹಾಗೂ ಕ್ಲೆರ್ಜಿ ಎಂಬವರ ಸ್ಥಾನಮಾನ, ಇವೆಲ್ಲ ರಿಲಿಜನ್ನು ಎಂದರೇ ಚರ್ಚು ಹಾಗೂ ಅದರ ಅಧಿಕಾರ ಶ್ರೇಣೀಕರಣ ಎಂಬಂತೇ ಮಾಡಿತು. ಈ ಸಂದರ್ಭದಲ್ಲಿ ೧೬ನೆಯ ಶತಮಾನದಲ್ಲಿ ಕ್ಯಾಥೋಲಿಕ್ ಚರ್ಚಿನ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿ, ಅದರ ಸುಧಾರಣೆಯನ್ನು ಮಾಡಿ ಸತ್ಯವಾದ ರಿಲಿಜನ್ನನ್ನು ಜನರಿಗೆಲ್ಲ ಸಿಗುವಂತೇ ಮಾಡಲು ಹುಟ್ಟಿಕೊಂಡದ್ದೇ ಪ್ರೊಟೆಸ್ಟಾಂಟ್ ಚಳವಳಿ.

ಪ್ರೊಟೆಸ್ಟಾಂಟ್ ಚಳವಳಿಯು ಉತ್ತರ ಯುರೋಪಿನಾದ್ಯಂತ ಹಬ್ಬಿ ಜನಪ್ರಿಯವಾಯಿತು. ಮಾರ್ಟಿನ್ ಲೂಥರ್ ಎಂಬವನು ಅದರ ಪ್ರವರ್ತಕ. ನಂತರ ಅನೇಕ ಪ್ರಾದೇಶಿಕ ಆವೃತ್ತಿಗಳೂ ಹುಟ್ಟಿಕೊಂಡವು. ಪ್ರೊಟೆಸ್ಟಾಂಟರ ಪ್ರಕಾರ ರಿಲಿಜನ್ನಿನ ಮೂಲ ಸತ್ಯಗಳು ಕಾಲ ಕಾಲಕ್ಕೆ ನಷ್ಟವಾಗಿ ಹೋಗುತ್ತವೆ, ಅರ್ಥಾತ್ ರಿಲಿಜನ್ನು ಕಾಲಕಾಲಕ್ಕೆ ಭ್ರಷ್ಟವಾಗುತ್ತದೆ. ಅದು ರಿಲಿಜನ್ನಿನ ಅಧಿಕಾರದ ಸಾಂಸ್ಥೀಕರಣದಿಂದ, ಪಟ್ಟಭದ್ರ ಹಿತಾಸಕ್ತಿಗಳಿಂದ ಆಗುವಂಥ ಬೆಳವಣಿಗೆ. ಹಾಗಾಗಿ ಈ ಅವನತಿಯಲ್ಲಿ ಪ್ರೀಸ್ಟ್/ಕ್ಲೆರ್ಜಿ ವರ್ಗವೇ ನಿಜವಾದ ಅಪರಾಧಿಯಾಗಿದೆ. ಪ್ರೊಟೆಸ್ಟಾಂಟ್ ರಿಲಿಜನ್ನಿನ ಪ್ರಕಾರ ಬೈಬಲ್ಲಿನಲ್ಲಿ ಗಾಡ್ ಸತ್ಯವಾಗಿಯೂ ತಿಳಿಸಿದ್ದೇನೆಂದರೆ ಪ್ರತಿಯೊಬ್ಬ ಕ್ರೈಸ್ತನೂ ಒಂದು ಚರ್ಚು ಹಾಗೂ ಅವನೇ ಪ್ರೀಸ್ಟ್. ಅಂದರೆ ಗಾಡ್‌ನೊಂದಿಗೆ ಪ್ರತಿಯೊಬ್ಬನಿಗೂ ನೇರವಾದ ಸಂಬಂಧವಿದೆ. ಅದಕ್ಕೆ ಮಧ್ಯವರ್ತಿಗಳು ಬೇಡ. ಈ ರೀತಿಯಲ್ಲಿ ಪ್ರೊಟೆಸ್ಟಾಂಟಿಸಂನಿಂದಾಗಿ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿಯು ತನ್ನ ಭೌತಿಕ ನಿರ್ದಿಷ್ಟತೆಯನ್ನು ಕಳಚಿಕೊಂಡು ಅಮೂರ್ತವಾಯಿತು. ಒಟ್ಟಾರೆಯಾಗಿ ೧೬ನೆಯ ಶತಮಾನದಲ್ಲಿ ಯುರೋಪಿನಲ್ಲಿ ರಿಲಿಜನ್ನಿನ ಅವನತಿ ಹಾಗೂ ಅದರ ಪ್ರಕ್ರಿಯೆಗಳು, ಸತ್ಯವಾದ ರಿಲಿಜನ್ನು ಹಾಗೂ ಸುಳ್ಳು ರಿಲಿಜನ್ನು ಇತ್ಯಾದಿಗಳ ಕುರಿತ ಪ್ರೊಟೆಸ್ಟಾಂಟ್ ವಾಗ್ವಾದಗಳು ಸಾಮಾನ್ಯ ಜ್ಞಾನದ ಒಂದು ಭಾಗವಾದವು.

ನನ್ನ ಕಥೆಯ ಮೂರನೆಯ ಎಳೆಯು ಸೆಕ್ಯುಲರೀಕರಣ ಎಂಬ ಸಂಗತಿಗೆ ಸಂಬಂಧಪಟ್ಟದ್ದು: ಸೆಕ್ಯುಲರೀಕರಣವೆಂದರೆ ರಿಲಿಜನ್ನಿನಿಂದ ಹೊರಬರುವ ಪ್ರಕ್ರಿಯೆ. ಸುಮಾರು ೧೭-೧೮ ನೆಯ ಶತಮಾನದಲ್ಲಿ ಯುರೋಪಿನಲ್ಲಿ ಒಂದು ವೈಚಾರಿಕ ಕ್ರಾಂತಿ ಕಾಣಿಸಿಕೊಳ್ಳುತ್ತದೆ. ಅದನ್ನು ಜ್ಞಾನೋದಯ ಯುಗ ಅಥವಾ ವೈಚಾರಿಕತೆಯ ಯುಗ ಎನ್ನುತ್ತಾರೆ. ಆಗ ನಡೆದದ್ದೆಂದರೆ ಪ್ರಾಪಂಚಿಕ ಹಾಗೂ ಮಾನವೀಯ ಸತ್ಯಗಳನ್ನು ಕುರಿತ ತಿಳುವಳಿಕೆಯನ್ನು ಚರ್ಚಿನ ಹಾಗೂ ರಿಲಿಜನ್ನಿನ ಪರಿಭಾಷೆಗಳಿಂದ ಬಿಡಿಸಿ ಅದಕ್ಕೆ ಸೆಕ್ಯುಲರ್ ರೂಪವನ್ನು ನೀಡಿದ್ದು. ಅದನ್ನು ರಿಲಿಜನ್ನಿನ ವಿರುದ್ಧದ ಸಮರ ಎಂಬಂತೇ ಅಥವಾ ರಿಲಿಜನ್ನಿನ ಪಾಶದಿಂದ ಹಾಗೂ ಕುರುಡು ನಂಬಿಕಗೆಳಿಂದ ಮನುಷ್ಯನನ್ನು ವಿಮೋಚನೆಗೊಳಿಸುವ ಆಧುನಿಕ ಚಳವಳಿಯೆಂಬಂತೆ ನೋಡಲಾಗಿದೆ. ಈ ಸೆಕ್ಯುಲರ್ ಚಿಂತಕರು ಮಾನವನ ಕುರಿತು ತಮ್ಮದೇ ಸಿದ್ಧಾಂತಗಳನ್ನು ಹಾಗೂ ಕಥೆಗಳನ್ನು ಬೆಳೆಸಿದರು. ರಿಲಿಜನ್ನಿನ ಕಥೆಗಳನ್ನು ಹಾಗೂ ವರ್ಣನೆಗಳನ್ನು ತಿರಸ್ಕರಿಸಿದರು. ಹೀಗೆ ಪಶ್ಚಿಮದಲ್ಲಿ ನಿರ್ದಿಷ್ಟವಾದ ವೇಷತೊಟ್ಟ ರಿಲಿಜನ್ನುಗಳ ಕಥೆಗಳ ಬದಲಾಗಿ ಮನುಕುಲದ ಕುರಿತ ಸಾರ್ವತ್ರಿಕ ವೈಜ್ಞಾನಿಕ ಸತ್ಯಗಳು, ಮೌಲ್ಯಗಳು ಆವಿಷ್ಕಾರವಾದವು. ಹಾಗೂ ಅವು ಮನುಕುಲಕ್ಕೆ ಪ್ರಪಂಚದ ಕುರಿತ ಸತ್ಯವಾದ ಜ್ಞಾನವನ್ನು ನೀಡುವ ಭರವಸೆಯನ್ನು ಹುಟ್ಟುಹಾಕಿದವು.

ಆದರೆ ಈ ಸೆಕ್ಯುಲರ್ ಸಾಮಾಜಿಕ ಚಿಂತನೆಗಳು ನಿಜವಾಗಿ ಏನು ಮಾಡಿದವೆಂದರೆ ಸೆಮೆಟಿಕ್ ರಿಲಿಜನ್ನುಗಳಿಗಷ್ಟೇ ಸೀಮಿತವಾಗಿದ್ದ ಯೋಚನಾಕ್ರಮವನ್ನು ಸಾರ್ವತ್ರಿಕವಾಗಿ ಪ್ರಸಾರಮಾಡಿದವು. ಈ ಚಿಂತನೆಗಳು ಬೆಳೆಯುವ ಕಾಲದಲ್ಲಿ ಯುರೋಪಿನ ಇಡೀ ಸೆಕ್ಯುಲರ್ ಲೋಕವೇ ಥಿಯಾಲಜಿಯಿಂದ ರೂಪುಗೊಂಡಿತ್ತು. ಬಹುತೇಕವಾಗಿ ಪ್ರೊಟೆಸ್ಟಾಂಟರ ಅಮೂರ್ತ ಪ್ರತಿಪಾದನೆಗಳು ಈ ಚಿಂತನೆಗಳಿಗೆ ಆಧಾರವನ್ನು ರಚಿಸಿದವು. ಯುರೋಪಿನಲ್ಲಿ ಸಾಮಾನ್ಯರ ಭಾಷಾ ರೂಢಿಯಲ್ಲಿ ಹಾಗೂ ತಿಳುವಳಿಕೆಯಲ್ಲಿ  ರಿಲಿಜನ್ನಿನ ಗ್ರಹಿಕೆಗಳು ಹಾಸು ಹೊಕ್ಕಾಗಿದ್ದವಷ್ಟೆ? ಅವು ಮೇಲ್ನೋಟಕ್ಕೆ ಬೈಬಲ್ಲಿನ ಘಟನೆಗಳನ್ನು ಹಾಗೂ ಥಿಯಾಲಜಿಯ ಸಂಬಂಧವನ್ನು ಹೊಂದಿದಂತೇ ಕಾಣುತ್ತಿರಲಿಲ್ಲ, ಆದರೆ ಅವಕ್ಕೆ ಥಿಯಾಲಜಿಯೇ ಆಧಾರ ವಾಕ್ಯವಾಗಿತ್ತು. ಆದರೂ ಅವು ತೋರಿಕೆಗೆ ಸೆಕ್ಯುಲರ್ ರೂಪವನ್ನು ಹೊಂದಿದ್ದವು. ಜ್ಞಾನೋದಯ ಯುಗದಲ್ಲಿ ಅವುಗಳನ್ನು ಆಧರಿಸಿ ಮಾನವರ ಕುರಿತ ಸಿದ್ಧಾಂತಗಳು ಹಾಗೂ ಚಿಂತನೆಗಳು ರೂಪುಗೊಂಡವು. ಹಾಗಾಗಿ ಈ ಜ್ಞಾನೋದಯ ಯುಗದ ಚಿಂತನೆಗಳು ಒಂದೆಡೆ ರಿಲಿಜನ್ನನ್ನು ಅಲ್ಲಗಳೆದರೂ ಮತ್ತೊಂದೆಡೆ ಅದರದ್ದೇ ಆಧಾರವಾಕ್ಯಗಳನ್ನು ಕಳ್ಳಸಾಗಣೆ ಮಾಡಿದವು. ಇದರ ಪರಿಣಾಮವಾಗಿ  ಥಿಯಾಲಜಿಯೇ ವೇಷಮರೆಸಿಕೊಂಡು ಸೆಕ್ಯುಲರ್ ಚಿಂತನೆಯ ಹೆಸರಿನಲ್ಲಿ ಪ್ರಚಲಿತದಲ್ಲಿ ಬಂದಿತು. ರಿಲಿಜನ್ನು ಮಾಯವಾಯಿತು ಆದರೆ ಅದರ ಸತ್ಯಗಳು ಸಾರ್ವತ್ರಿಕವಾಗತೊಡಗಿದವು.

ಈ ಮೇಲಿನ ಮೂರೂ ಎಳೆಗಳೂ ಬೇರೆ ಬೇರೆ ಕಥೆಗಳೇ ಎಂಬುದಾಗಿ ಯುರೋಪಿನ ಇತಿಹಾಸವು ಬಿಂಬಿಸುತ್ತದೆ. ಆದರೆ ಈ ಮೇಲಿನಂತೇ ಜೋಡಿಸಿದಾಗ ಅವು ಒಂದೇ ಕಥೆಯ ಮೂರು ಎಳೆಗಳು ಮಾತ್ರವೇ ಆಗಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ಕಥೆಯ ಪ್ರಾರಂಭವು ಬೈಬಲ್ಲಿನ ಜಿನೆಸಿಸ್‌ನಲ್ಲಿದೆ. ಅಂತ್ಯವು ವಸಾಹತುಕಾಲದ ಸಮಾಜ ವಿಜ್ಞಾನಗಳಲ್ಲಿದೆ. ಪಾಶ್ಚಾತ್ಯರು ಇಂಥ ಚಿಂತನೆಗಳನ್ನು ಬಳಸಿ ಭಾರತದಂತಹ ಅನ್ಯ ಸಂಸ್ಕೃತಿಗಳ ಕುರಿತು ವೈಜ್ಞಾನಿಕ ಸಿದ್ಧಾಂತಗಳನ್ನು ಬೆಳೆಸಿದರು. ಅವರು ಯಾವ ಪರಿಕಲ್ಪನೆಗಳನ್ನು ಇಟ್ಟುಕೊಂಡು ತಮ್ಮನ್ನು ಅರ್ಥೈಸಲು ಕಲಿತಿದ್ದರೋ ಅವುಗಳಿಂದಲೇ ಭಾರತದಂತಹ ಸಂಸ್ಕೃತಿಗಳನ್ನೂ ಅರ್ಥೈಸಲು ಪ್ರಯತ್ನಿಸಿದರು. ಹಾಗಾಗಿ ಅವರಿಗೆ ಎಲ್ಲೆಲ್ಲೂ ತಮ್ಮ ಸಂಸ್ಕೃತಿಯ ಪ್ರತಿರೂಪಗಳೇ ಕಂಡವು, ಭಾರತೀಯರಿಗೂ ತಮ್ಮ ಹಾಗೇ ಒಂದು ರಿಲಿಜನ್ನು ಇದೆ, ಅವರ ರಿಲಿಜನ್ನು ಕೂಡ ಭ್ರಷ್ಟವಾಗಿ ಅವನತಿ ಹೊಂದಿದೆ, ಅಲ್ಲೂ ಕೂಡ ಅದಕ್ಕೆ ಪ್ರತಿಭಟನೆಗಳು ನಡೆದಿವೆ, ಅಲ್ಲೂ ಕೂಡ ಡಾಕ್ಟ್ರಿನ್ನುಗಳಿವೆ, ಪವಿತ್ರಗ್ರಂಥ, ಪುರೋಹಿತಶಾಹಿ ಇತ್ಯಾದಿಗಳಿವೆಅವರಿಗೂ ಕೂಡ ತಮ್ಮಂತೇ ನಾರ್ಮೇಟಿವ್ ಭಾಷೆ ಇದೆ, ಎಂಬುದಾಗಿ ಭಾವಿಸಿದರು. ಆದರೆ ಈ ಯಾವ ಪ್ರತಿರೂಪವೂ ಅವರ ಸಂಸ್ಕೃತಿಯ ಮೂಲರೂಪಗಳಷ್ಟು ಪರಿಪೂರ್ಣವಾಗಿ ಕಾಣಲಿಲ್ಲ. ಇವು ಯಾವವೂ ಸರಿಯಾಗಿಲ್ಲ ಎಂಬುದು ಅವರ ಅನುಭವಕ್ಕೆ ಬಂದಿತು. ಇಂಥವೇ ಕಲ್ಪನೆಗಳನ್ನಿಟ್ಟುಕೊಂಡು ಈ ಸಮಾಜ ಹಾಗೂ  ಸಂಸ್ಕೃತಿಯ ಚಿತ್ರವನ್ನು ಅವರೂ ನಾವೂ ಸೇರಿಯೇ ಕಟ್ಟಿಕೊಂಡೆವು. ಅಂದರೆ ಸಮಾಜ ಶಾಸ್ತ್ರಗಳಲ್ಲಿ ಸಧ್ಯಕ್ಕೆ ಮಾನವ ಪ್ರಪಂಚವನ್ನು ವರ್ಣಿಸಲು ನಮಗಿರುವುದೊಂದೇ ಆಧಾರ ವಾಕ್ಯ, ಅದೇ ರಿಲಿಜನ್ನಿನ ದೇವವಾಣಿ ಹಾಗೂ ಅದಕ್ಕೆ ಭಾಷೆಯೊಂದೇ, ಅದು ರಿಲಿಜನ್ನಿನದು.

ಆದರೊಂದು ಷರತ್ತು. ನಮ್ಮೆಲ್ಲರ ಸೃಷ್ಟಿಕರ್ತನು ಪ್ರತೀ ಬಾರಿಯೂ ಅರೇಬಿಯಾದ ಮರುಭೂಮಿಗೇ ಬಂದು ಸೆಮೆಟಿಕ್ ಜನರಿಗೆ ಮಾತ್ರವೇ ಸತ್ಯವನ್ನು ಪ್ರಕಟಪಡಿಸಿದ್ದಾನೆ ಎಂಬುದು ಸತ್ಯವಾದರೆ ಮಾತ್ರವೇ ಪಾಶ್ಚಾತ್ಯರ ಪ್ರತಿಪಾದನೆಗಳು ಸತ್ಯ ಎಂಬುದನ್ನು ಒಪ್ಪಿಕೊಳ್ಳಬಹುದು.  ಆದರೆ ಈ ಮುಂದಿನ ಅಂಕಣಗಳು ನಿಮ್ಮ ಅನುಭವಕ್ಕೆ ಪರಿಚಿತವಾದ ವಿಷಯವನ್ನೇ ಹೇಳುತ್ತವೆ ಎಂದಾದಲ್ಲಿ ಈ ಮೇಲಿನ ಸತ್ಯದ ಕುರಿತು ಅನುಮಾನಗಳು ಹುಟ್ಟೇ ಹುಟ್ಟುತ್ತವೆ. ನಿಮ್ಮ ಅನುಭವವು ಈ ಮೇಲಿನ ಸತ್ಯಗಳಿಗೆ ವ್ಯತಿರಿಕ್ತವಾಗಿದೆ ಎಂದಾದಲ್ಲಿ ನಿಮ್ಮ ಜೀವನವಿಧಾನದಲ್ಲಿ ಈ ಮೇಲಿನ ಸತ್ಯಗಳ ಸ್ಥಾನಮಾನವೇನು? ಮುಂದಿನ ಲೇಖನಗಳ ಮೂಲಕ ನಿಮ್ಮೊಳಗಿನ ಈ ಎರಡೂ ಜಗತ್ತುಗಳನ್ನು ಗುರುತಿಸಲು ನಿಮಗೆ ಈ ಕಥೆ ಸಹಕರಿಸುತ್ತದೆ.

ಬೌದ್ಧಿಕ ದಾಸ್ಯದಲ್ಲಿ ಭಾರತದ ಪ್ರಸ್ತುತ ಲೇಖನಗಳು ಪ್ರೊ. ಎಸ್.ಎನ್. ಬಾಲಗಂಗಾಧರ ರವರ Heathen in His Blindness: Asia, the West and the Dynamics of Religion ಮಹಾ ಪ್ರಬಂಧ ಮತ್ತು ಅದರ ನಂತರ ಬೆಳೆದ ಸಂಶೋಧನೆಗಳನ್ನು ಕನ್ನಡದಲ್ಲಿ ಸರಳವಾಗಿ, ಸಾಮಾನ್ಯ ಓದುಗರಿಗೆ ತಲುಪುವ ರೀತಿಯಲ್ಲಿ, ಸಮಾಚಾರ ಪತ್ರಿಕೆಗೆಂದು ಕನ್ನಡದಲ್ಲಿ ನಿರೂಪಿಸಿರುವ ಪ್ರೊ. ರಾಜಾರಾಮ ಹೆಗಡೆಯವರ ಅಂಕಣಗಳ ಸಂಗ್ರಹ. ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸ್ತಕ  CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ  ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾದ ಕೆಲವರ್ಷಗಳ ನಂತರ ಈ ಅಂಕಣಗಳಿಗೆ ಪುಸ್ತಕದ ರೂಪ ಕೊಟ್ಟು, ವಸಾಹತು ಪ್ರಜ್ಞೆಯ ವಿಶ್ವರೂಪ ಎಂಬ ಸರಣಿಯಲ್ಲಿ ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಪುಸ್ತಕವನ್ನು ೨೦೧೫ ರಲ್ಲಿ ನಿಲುಮೆ ಪ್ರಕಾಶನದಿಂದ ಮೊದಲ ಬಾರಿ ಪ್ರಕಟ ಮಾಡಲಾಯಿತು. ಅದಾದ ನಂತರ ಈ ಪುಸ್ತಕವು ಮರುಮುದ್ರಣಗೊಂಡು ಆರೋಹಿ ಸಂಶೋಧನಾ ಸಂಸ್ಥೆ, ಬೆಂಗಳೂರು, ಇದರ ನೇತೃತ್ವದಲ್ಲಿ ೨೦೧೮ರಲ್ಲಿ ವಸಂತ ಪ್ರಕಾಶನದಿಂದ ಪ್ರಕಟವಾಯಿತು. ಇದೀಗ ಈ ಲೇಖನಗಳು ಈ ಅಂತರ್ಜಾಲದ ಮಾಧ್ಯಮದ ಮೂಲಕ ಪ್ರಕಟವಾಗುತ್ತಿವೆ.  

ಪುಸ್ತಕ ದೊರಕುವ ಸ್ಥಳ:-

 

ವಸಂತ ಪ್ರಕಾಶನ
360, 10/B ಮೇನ್
ಜಯನಗರ 3ನೇ ಬ್ಲಾಕ್
ಬೆಂಗಳೂರು – 11
ಫೋನ್: 9986020852

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment