Home ಲೇಖನ ಸಾಂಸ್ಕೃತಿಕ ಭಿನ್ನತೆ ಮತ್ತು ಭಾಷಾಂತರ

ಸಾಂಸ್ಕೃತಿಕ ಭಿನ್ನತೆ ಮತ್ತು ಭಾಷಾಂತರ

by Harshith Joseph
687 views

ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ, ಈ ಮುಖಾಮುಖಿಗಳಿಂದ ಜನಿಸುವ ಸಮಸ್ಯೆಗಳನ್ನು ನಾವು ಭಾಷೆಯ ಮೂಲಕವೇ ಗ್ರಹಿಸುವುದು ಅನಿವಾರ್ಯವಾದರೂ, ಇಲ್ಲಿ ನಾವು ಗುರುತಿಸುತ್ತಿರುವ ಸಮಸ್ಯೆಗಳು ಭಾಷೆಯಲಿಲ್ಲ, ಬದಲಾಗಿ, ಸಾಂಸ್ಕೃತಿಕ ಭಿನ್ನತೆಯ ಮೂಲಕ ಹುಟ್ಟುವ ಸಮಸ್ಯೆಗಳಲ್ಲಿದೆ ಎಂದು ಈ ಲೇಖನದಲ್ಲಿ ಹರ್ಷಿತ್ ಜೋಸೆಫ್ ಹಾಗೂ ಚೈತ್ರ ಎಂ. ಎಸ್   ವಾದಿಸುತ್ತಾರೆ. 

ಪೀಠಿಕೆ

ಜಾಗತೀಕರಣದ ಪರಿಣಾಮವಾಗಿ ಇಂದು ಜಗತ್ತಿನ ಎಲ್ಲ ಭಾಗಗಳ ನಡುವೆ ಅತ್ಯಂತ ವೇಗವಾಗಿ ಸಂವಹನ ಜರುಗುತ್ತಿದೆ. ಅದರ ಒಳಿತು-ಕೆಡುಕುಗಳ ಕುರಿತು ಅನೇಕ ಚಿಂತಕರು ಮಾತನಾಡುತ್ತಿದ್ದಾರೆ. ಈ ಚರ್ಚೆಗಳಲ್ಲಿ ಸಾಧಾರಣವಾಗಿ, ಜಗತ್ತಿನಲ್ಲಿ ಭಿನ್ನ ಸಂಸ್ಕೃತಿಗಳಿವೆ ಮತ್ತು ಈ ಸಂಸ್ಕೃತಿಗಳ ನಡುವೆ ಇರುವ ಸಾಂಸ್ಕೃತಿಕ ಭಿನ್ನತೆಗಳು ಅನೇಕ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ ಎನ್ನುವುದು ಚಿಂತಕರ ಅಭಿಪ್ರಾಯ. ನಿರ್ದಿಷ್ಟವಾಗಿ ಈ ಸಂಸ್ಕೃತಿಗಳ ನಡುವಿನ ಭಿನ್ನತೆಗಳ ಸ್ವರೂಪವೇನು ಮತ್ತು ಈ ಭಿನ್ನತೆಗಳಿಂದ ಆಗುವ ತೊಂದರೆಗಳೇನು ಎಂಬುದನ್ನು ಗ್ರಹಿಸಲು ಇಂದಿಗೂ ನಾವು ಸರಿಯಾದ ತಿಳಿವಳಿಕೆ ಹೊಂದಿಲ್ಲ ಎಂಬುದು ಇಂದಿನ ಚಿಂತಕರ ವಾದವೂ ಹೌದು. ಆದರೂ ಜಗತ್ತಿನಾದ್ಯಂತ ಸಾಂಸ್ಕೃತಿಕ ಭಿನ್ನತೆಗಳನ್ನು ಎಲ್ಲರೂ ಗುರುತಿಸತೊಡಗಿದ್ದಾರೆ.((ಉದಾಹರಣೆಗೆ ಈ ಆಕರಗಳನ್ನು ಗಮನಿಸಬಹುದು: Balagangadhara S.N. “Culture and Cultural: Problems, Pitfalls and a Proposal.” Reconceptualizing India Studies, Oxford University Press, 2012; Balagangadhara S.N. and Divya Jhingran. As Others See Us: A Conversation on Cultural Differences. Cinnamon Teal Publishing, 2015; Lydia H. Liu. Tokens of Exchange: The Problem of Translation in Global Circulations. Duke University Press, 1999.))  ಈ ಭಿನ್ನತೆಗಳು, ಎರಡು ಸಂಸ್ಕೃತಿಗಳ ಜನರ ನಡುವೆ ನಡೆಯಬೇಕಾದ ವಿಚಾರ ವಿನಿಮಯಕ್ಕೆ ಅನೇಕ ಸಮಸ್ಯೆಗಳನ್ನು ಒಡ್ಡುತ್ತವೆ ಎನ್ನುವುದೇ ಈ ಚರ್ಚೆಗಳ ಕೇಂದ್ರ ಬಿಂದು. ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಚಿಂತಕರು ಕಂಡುಕೊಂಡ ಅನೇಕ ರೀತಿಯ ಸಾಧ್ಯತೆಗಳಿಂದು ನಮಗೆ ನೋಡಲು ಸಿಗುತ್ತವೆ. ಈ ವಿಭಿನ್ನ ಪ್ರಯತ್ನಗಳಲ್ಲಿ, ಭಾಷಾಂತರ ಅಥವಾ ಅನುವಾದವೂ ಒಂದು ಪ್ರಮುಖವಾದ ಸಾಧನವೆಂದು ಚಿಂತಕರು ಅಭಿಪ್ರಾಯ ಪಡುತ್ತಾರೆ. ಹಾಗಾಗಿ ಭಾಷಾಂತರವು ಎರಡು ಸಂಸ್ಕೃತಿಗಳನ್ನು ಪರಸ್ಪರ ಅರ್ಥಮಾಡಿಸುವಲ್ಲಿ ಅತ್ಯಂತ ಮಹತ್ವದ್ದು ಎನ್ನುವುದು ಅನೇಕರ ನಂಬಿಕೆ. ಹಾಗೆಯೇ, ಎರಡು ಸಂಸ್ಕೃತಿಗಳ ನಡುವೆ ವಿಚಾರ ವಿನಿಮಯವಾಗುವಾಗ ಮೂಡುವ ಸಾಂಸ್ಕೃತಿಕ ಭಿನ್ನತೆಯ ಸಮಸ್ಯೆಗಳನ್ನು ಭಾಷಾಂತರವು ಬಗೆಹರಿಸುತ್ತದೆ ಎಂಬುದು ಇಂದಿನ ಪ್ರಚಲಿತ ಸಾಮಾನ್ಯ ಜ್ಞಾನ. ಆದರೆ ಈ ಸಮಸ್ಯೆಗಳನ್ನೇನೂ ಭಾಷಾಂತರವು ಪರಿಹರಿಸುವಂತೆ ಕಾಣುವುದಿಲ್ಲ ಎಂದು ಅನೇಕ ಭಾಷಾಂತರ ತಜ್ಞರೇ ವಾದಿಸುತ್ತಾರೆ.((Ioana Irina Durdureanu. “Translation of Cultural Terms: Possible or Impossible?” JoLie, vol. 4, 2011; Andre Lefevere and Susan Bassnett. editors, Translation History Culture: A Source Book. Routledge, 1992; Jeremey Munday. Introducing Translation Studies: Theory and Application, 2nd ed., Routledge, 2010.)) ಆದರೂ ಈ ಸಾಂಸ್ಕೃತಿಕ ಭಿನ್ನತೆಯ ಸಮಸ್ಯೆಯನ್ನು, ಭಾಷಾಂತರವನ್ನು ಕೇಂದ್ರದಲ್ಲಿರಿಸಿ, ಭಾಷೆಯ ಸಮಸ್ಯೆ ಎಂದೇ ಗುರುತಿಸಿಕೊಂಡು ಚಿಂತಕರು ಚರ್ಚಿಸುತ್ತಾರೆ.((Jeremey Munday. Introducing Translation Studies: Theory and Application, 2nd ed., Routledge, 2010; Susan Bassnett. Translation Studies. 3rd ed., Routledge, 2002.)) ಇದಕ್ಕೆ ವ್ಯತಿರಿಕ್ತವಾಗಿ, ನಾವು, ಯಾವುದನ್ನು ಭಾಷಾಂತರ ಅಥವಾ ಭಾಷೆಯ ಸಮಸ್ಯೆ ಎಂದು ಗುರುತಿಸಲಾಗಿದೆಯೋ, ಅದನ್ನು ಭಾಷೆಯ ಸಮಸ್ಯೆಯೆಂದು ನೋಡದೆ, ಸಾಂಸ್ಕೃತಿಕ ಭಿನ್ನತೆಗೆ ಸಂಬಂಧಿಸಿರುವ ಸಮಸ್ಯೆ ಎಂದು ವಾದಿಸಿ, ಆ ಸಮಸ್ಯೆಯ ಸ್ವರೂಪವನ್ನು ಬಿಡಿಸಿಕೊಳ್ಳುವ ಪ್ರಯತ್ನವನ್ನು ಈ ಲೇಖನವು ಕೇಂದ್ರವಾಗಿರಿಸಿಕೊಂಡು ಚರ್ಚಿಸುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ, ಈ ಮುಖಾಮುಖಿಗಳಿಂದ ಜನಿಸುವ ಸಮಸ್ಯೆಗಳನ್ನು ನಾವು ಭಾಷೆಯ ಮೂಲಕವೇ ಗ್ರಹಿಸುವುದು ಅನಿವಾರ್ಯವಾದರೂ, ಇಲ್ಲಿ ನಾವು ಗುರುತಿಸುತ್ತಿರುವ ಸಮಸ್ಯೆಗಳು ಭಾಷೆಯಲಿಲ್ಲ, ಬದಲಾಗಿ, ಸಾಂಸ್ಕೃತಿಕ ಭಿನ್ನತೆಯ ಮೂಲಕ ಹುಟ್ಟುವ ಸಮಸ್ಯೆಗಳಲ್ಲಿದೆ ಎಂದು ಈ ಲೇಖನ ವಾದಿಸುತ್ತದೆ. ಹಾಗಾಗಿ, ಇದಕ್ಕೆ ಉದಾಹರಣೆಯಾಗಿ ಕನ್ನಡದ ಒಂದು ಭಾಷಾಂತರವನ್ನು ಗಮನಿಸಿ, ಆ ಸಮಸ್ಯೆಯ ಸ್ವರೂಪವನ್ನು ವಿವರಿಸಲು ಪ್ರಯತ್ನಿಸುತ್ತೇವೆ.

ಪ್ರಸ್ತುತ ಲೇಖನವು ’ಕನ್ನಡದ ಭಾಷಾಂತರಗಳು’ ಎಂಬ ಮೊದಲನೇ ಭಾಗದಲ್ಲಿ ಕನ್ನಡ ಸಾಹಿತ್ಯ ವಲಯದಲ್ಲಿ ನಾವು ಇಂದು ಗಮನಿಸಬಹುದಾದ ಚರ್ಚೆಗಳು ಹಾಗೂ ಭಾಷಾಂತರ ತಜ್ಞರ ಅಭಿಪ್ರಾಯಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಡುತ್ತದೆ. ಎರಡನೆಯ ಭಾಗವಾದ ’ಇಂಗ್ಲಿಷ್ ಗೀತೆಗಳು ಮತ್ತು ಭಾಷಾಂತರ’, ಎಂಬ ಶೀರ್ಷಿಕೆಯಡಿಯಲ್ಲಿ ಬಿ.ಎಂ.ಶ್ರೀಕಂಠಯ್ಯರವರ ’ಇಂಗ್ಲಿಷ್ ಗೀತೆಗಳು’ ಎಂಬ ಇಂಗ್ಲಿಷ್ ಪದ್ಯಗಳ ಭಾಷಾಂತರದ ಸಂಕಲನವನ್ನು ಪರಿಚಯಿಸಿ, ಮುಂದೆ ’ಸುಖಜೀವನ ಪದ್ಯದ ಅನುವಾದದ ಕುರಿತು’ ಎಂಬ ಭಾಗದಲ್ಲಿ ಬಿ.ಎಂ.ಶ್ರೀಯವರು ಮಾಡಿರುವ ‘Character of a Happy Life’ ಎಂಬ ಇಂಗ್ಲಿಷ್ ಪದ್ಯದ ಭಾಷಾಂತರವಾದ ’ಸುಖಜೀವನ’ ಪದ್ಯದ ಕೆಲವು ಸಾಲುಗಳನ್ನು ಚರ್ಚೆಗೆ ತೆಗೆದುಕೊಳ್ಳುತ್ತದೆ. ಮೂರನೆಯ ಭಾಗದಲ್ಲಿ ’ಉತ್ತಮ ಭಾಷಾಂತರ ಪರಿಹಾರವೇ?’ ಎಂಬ ಚರ್ಚೆಯನ್ನು ತೆಗೆದುಕೊಂಡು, ಬಿ.ಎಂ.ಶ್ರೀರವರ ಭಾಷಾಂತರಕ್ಕೆ ಪರ್ಯಾಯವಾದ ಉತ್ತಮವಾದ ಭಾಷಾಂತರವೊಂದನ್ನು ನೀಡಿ, ಹೀಗೆ ಉತ್ತಮ ಭಾಷಾಂತರಗಳನ್ನು ನೀಡುವುದರಿಂದ ಭಾಷಾಂತರದ ಸಮಸ್ಯೆಯು ಪರಿಹಾರವಾಗುತ್ತದೋ ಇಲ್ಲವೋ ಎಂಬ ಚರ್ಚೆಯನ್ನು ಮಾಡಲಾಗುತ್ತದೆ. ನಾಲ್ಕನೆಯ ಭಾಗವಾದ ’ನಿಘಂಟುಗಳು, ಅರ್ಥ ಮತ್ತು ಭಾಷಾಂತರ’ದಲ್ಲಿ, ಭಾಷಾಂತರ ಪ್ರಕ್ರಿಯೆಯಲ್ಲಿ ನಿಘಂಟುಗಳನ್ನು ಮತ್ತು ಅವು ಕೊಡುವ ಶಬ್ದಾರ್ಥಗಳನ್ನು ಬಳಸಿಕೊಳ್ಳುವುದರಿಂದಾಗುವ ಪರಿಣಾಮವನ್ನು ಪರಿಶೀಲಿಸಲಾಗುತ್ತದೆ. ಲೇಖನದ ಐದನೆಯ ಭಾಗದಲ್ಲಿ ’ಭಾಷಾಂತರ: ಭಾಷೆಯ ಆಚೆಗಿನ ಸಾಂಸ್ಕೃತಿಕ ಭಿನ್ನತೆಯ ಸಮಸ್ಯೆಯಾಗಿ’ ಎಂಬ ಶೀರ್ಷಿಕೆಯಡಿಯಲ್ಲಿ ಭಾಷಾಂತರದ ಸಮಸ್ಯೆಯನ್ನು ಅರ್ಥೈಸಿಕೊಳ್ಳಲು ಚೌಕಟ್ಟೊಂದನ್ನು ಪರಿಚಯಿಸುತ್ತದೆ. ’ಸಮಸ್ಯೆಯ ಸ್ವರೂಪದ ವಿವರಣೆ’ ಹಾಗೂ ’ಅನುಭವ, ಭಾಷೆ ಮತ್ತು ಸಾಂಸ್ಕೃತಿಕ ಭಿನ್ನತೆ’ ಭಾಗಗಳಲ್ಲಿ ಕ್ರಮವಾಗಿ ಈ ಲೇಖನವು ಮಾಡಲು ಹೊರಟಿರುವ ವಾದವನ್ನು ಕಟ್ಟುತ್ತಾ ಹಾಗು ಅನುವಾದದ ಸಮಸ್ಯೆಯು ಯಾವ ಬಗೆಯಲ್ಲಿ ತೋರ್ಪಡಿಸಿಕೊಳ್ಳುತ್ತದೆ ಎಂಬುದನ್ನು ಕೂಡ ತೋರಿಸಿಕೊಡಲು ಪ್ರಯತ್ನ ಮಾಡಲಾಗಿದೆ.

೧. ಕನ್ನಡದ ಭಾಷಾಂತರಗಳು((ಕನ್ನಡ ಸಾಹಿತ್ಯದ ವಲಯದಲ್ಲಿ ಭಾಷಾಂತರವನ್ನು ಕುರಿತ ಚರ್ಚೆಗಳಿಗಾಗಿ ಈ ಆಕರಗಳನ್ನು ನೋಡಬಹುದು: ಮೋಹನ ಕುಂಟಾರ. ಅನುವಾದ ಸಾಹಿತ್ಯ. ಕನ್ನಡ ಸಾಹಿತ್ಯ ಪರಿಷತ್ತು ಹೆಚ್. ಸತ್ಯಮೂರ್ತಿ. ಕನ್ನಡದಲ್ಲಿ ಭಾಷಾಂತರ ಕುರಿತು ಚಿಂತನೆಗಳು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸಿ. ಎನ್. ರಾಮಚಂದ್ರನ್. ಭಾಷಾಂತರ: ಸೈದ್ಧಾಂತಿಕ ಹಾಗು ಆನ್ವಯಿಕ ನೆಲೆಗಳು. ಮನೋಹರ ಗ್ರಂಥಮಾಲ ))

ಹೊಸಗನ್ನಡ ಸಾಹಿತ್ಯದ ಇತಿಹಾಸದಲ್ಲಿ ಹತ್ತೊಂಬತ್ತನೆಯ ಶತಮಾನ ಹಾಗೂ ಇಪ್ಪತ್ತನೆಯ ಶತಮಾನದ ಮೊದಲ ಭಾಗವು ಬಹಳ ಪ್ರಮುಖವಾದದ್ದಾಗಿದೆ. ವಸಾಹತುಶಾಹಿ ಆಳ್ವಿಕೆಯಡಿಯಲ್ಲಿದ್ದ ಅಂದಿನ ಭಾರತವು ಯುರೋಪಿನ ವಿಚಾರಗಳಿಂದ ಪ್ರಭಾವಿತಗೊಳ್ಳಲಾರಂಭಿಸಿತು. ಕನ್ನಡ ಸಾಹಿತ್ಯ ವಲಯವೂ ಇಂಗ್ಲಿಷ್ ಸಾಹಿತ್ಯದ ಪ್ರಭಾವಕ್ಕೆ ಒಳಗೊಂಡು ತನ್ನೊಳಗೆ ಹೊಸ ಅಲೆಯೊಂದನ್ನು ಕಂಡುಕೊಂಡಿತು. ಅಂದರೆ, ಕನ್ನಡದ ಲೇಖಕರು ಇಂಗ್ಲಿಷ್ ಸಾಹಿತ್ಯದೊಳಗೆ ಕಂಡುಬಂದ ವಸ್ತು-ವಿಷಯಗಳನ್ನು, ಸಾಹಿತ್ಯ ಪ್ರಕಾರಗಳನ್ನು, ಕನ್ನಡ ಲೇಖನಗಳಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದರು.((Tharakeshwar V.B. “Modernism in Kannada Literature.” The Routledge Encyclopedia of Modernism. Taylor and Francis, 2016.)) ಇದಲ್ಲದೆ ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಮಾಡುವ ಕೆಲಸಕ್ಕೆ ತೊಡಗಿದರು. ಯೂರೋಪಿನಿಂದ ಇಲ್ಲಿಗೆ ಬಂದವರು ಕೂಡ ಇದೇ ಕೆಲಸ ಮಾಡಿದರು. ಅಂದರೆ ಕ್ರೈಸ್ತ ಮಿಷನರಿಗಳು, ಯುರೋಪಿನ ಅಧಿಕಾರಿಗಳು ಮತ್ತು ವಿದ್ವಾಂಸರು ಮೊದಲಾದವರು ಇಲ್ಲಿನ ಕೃತಿಗಳನ್ನು ತಮ್ಮ ಭಾಷೆಗೆ ಭಾಷಾಂತರ ಮಾಡಿಕೊಂಡರು. ಹೀಗೆ ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳ ನಡುವೆ ಸಾಕಷ್ಟು ಕೊಡು-ಕೊಳ್ಳುವಿಕೆಗಳಾದವು.

ಇಂದು ಈ ಕೊಡು-ಕೊಳ್ಳುವಿಕೆಯ ಕುರಿತು ಅನೇಕ ವಾದ-ವಿವಾದಗಳಿವೆ. ಕೆಲವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಮೇಲಾದ ಪರಕೀಯ ಪ್ರಭಾವದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದರೆ((ಶ್ರೀನಿವಾಸ ಹಾವನೂರು. ಹೊಸಗನ್ನಡ ಅರುಣೋದಯ. ಕನ್ನಡ ಪುಸ್ತಕ ಪ್ರಾಧಿಕಾರ, 2011; ಎಲ್.ಎಸ್. ಶೇಷಗಿರಿ ರಾವ್. ಹೊಸಗನ್ನಡ ಸಾಹಿತ್ಯ ಚರಿತ್ರೆ. ಸಪ್ನ ಬುಕ್ ಹೌಸ್, 2012.))  ಇನ್ನು ಕೆಲವರು ಕನ್ನಡ ಸಾಹಿತ್ಯವು ಹೊರ ಜಗತ್ತಿಗೆ ತೆರೆದುಕೊಂಡು, ಬೇರೊಂದು ಭಾಷೆ-ಸಾಹಿತ್ಯ-ಸಂಸ್ಕೃತಿಯಿಂದ ಕಲಿತು, ವಿಚಾರ ವಿನಿಮಯ ಮಾಡಿಕೊಂಡಿರುವುದು ಲಾಭದಾಯಕವೆಂದು ಭಾವಿಸುತ್ತಾರೆ.((Ibid (ಎರಡೂ ಪುಸ್ತಕಗಳನ್ನು ಗಮನಿಸಬಹುದು))) ಅದರಲ್ಲೂ ವಿಶೇಷವಾಗಿ, ಭಾಷಾಂತರವು ಬೇರೆ ಭಾಷೆಯ ಸಾಹಿತ್ಯವನ್ನು ಓದುವ ಅವಕಾಶ ಕಲ್ಪಿಸುವ ಮಾಧ್ಯಮವಾಗಿದೆ ಎಂಬ ವಿಚಾರ ಮಹತ್ತ್ವಪಡೆದುಕೊಂಡಿದೆ. ಇಂದು ಭಾಷಾಂತರವನ್ನು ಒಂದು ಪ್ರಮುಖ ಅಧ್ಯಯನ ಕ್ಷೇತ್ರವನ್ನಾಗಿ ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆ-ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಅನೇಕ ತಜ್ಞರು ನಮಗೆ ಕಾಣಿಸುತ್ತಾರೆ. ಅಂದರೆ, ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾದ ಇಂಗ್ಲಿಷ್ ಸಾಹಿತ್ಯ ವಿಷಯವನ್ನು, ಕನ್ನಡ ಭಾಷೆಗೆ ಭಾಷಾಂತರಿಸಿ, ಕನ್ನಡಿಗರಿಗೆ ಕನ್ನಡದಲ್ಲೇ ಇಂಗ್ಲಿಷ್ ಸಾಹಿತ್ಯದ ವಿಷಯವನ್ನು ಅರ್ಥಮಾಡಿಸಬಹುದು ಎಂಬ ನಂಬಿಕೆಯು ಈ ಭಾಷಾಂತರಕಾರರಲ್ಲಿ ಇರುವುದನ್ನು ಇಲ್ಲಿ ಗಮನಿಸಬಹುದು. ಈ ನಂಬಿಕೆಯ ಆಧಾರದಿಂದ ಹುಟ್ಟಿದ ಬರಹಗಳು, ತಾವೇ ಕಂಡುಕೊಂಡ ಗುರಿಗಳನ್ನು ತಲುಪಲು ಸಾಧ್ಯವಾಗಿವೆಯೆ? ನಿಜವಾಗಿಯೂ ಇಂಗ್ಲಿಷ್ ಸಾಹಿತ್ಯದ ಕೃತಿಯನ್ನು ಕನ್ನಡ ಭಾಷೆಗೆ ಅನುವಾದಿಸಿ ಅರ್ಥಮಾಡಿಕೊಳ್ಳಲು ಅಥವಾ ಕಲಿತುಕೊಳ್ಳಲು ಸಾಧ್ಯವೇ? ಅಥವಾ ಇಂಗ್ಲಿಷ್ ಕೃತಿಗಳನ್ನು ಕನ್ನಡದಲ್ಲಿ ಅರ್ಥೈಸಿಕೊಳ್ಳಲು ಮಾಡಬೇಕಾದ ಭಾಷಾಂತರದ ಸ್ವರೂಪವೇನು? ಅಥವಾ ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ತರಲು ಸಾಧ್ಯವೇ ಇಲ್ಲವೆ? ಇತ್ಯಾದಿ ಗಂಭೀರ ಪ್ರಶ್ನೆಗಳು ಇಂದಿಗೂ ಬಗೆಹರಿದಿಲ್ಲ.

ಒಂದು ರೀತಿಯಲ್ಲಿ ಹೇಳಬೇಕೆಂದರೆ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ತರುವುದು ಕಷ್ಟ ಎಂಬುದು ಅನೇಕ ಚಿಂತಕರ ಅಭಿಪ್ರಾಯ. ಹಾಗೆಯೇ ಕನ್ನಡದ ಕೃತಿಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸುವುದೂ ಕಷ್ಟವೆನ್ನುವುದು ಅನೇಕರ ಅಭಿಪ್ರಾಯ. ಏಕೆಂದರೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ನೇರವಾಗಿ ಸಮಾನಾರ್ಥ ಕೊಡುವ ಪದಗಳಿಲ್ಲ ಎನ್ನುವುದು ಇದಕ್ಕೆ ಪ್ರಮುಖ ಕಾರಣವೆಂದು ಎಲ್ಲರೂ ಒಪ್ಪುತ್ತಾರೆ. ಹಾಗಿದ್ದ ಪಕ್ಷದಲ್ಲಿ ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಹಾಗು ಕನ್ನಡದ ಕೃತಿಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸುವುದ ಅಸಾಧ್ಯವೇ? ನೇರವಾಗಿ ಯಾರೂ ಈ ಪ್ರಶ್ನೆಗಳಿಗೆ ಉತ್ತರಿಸದಿದ್ದರೂ, ಮೂಲದಲ್ಲಿ ಈ ಕೃತಿಗಳನ್ನು ಓದಬೇಕು ಹಾಗು ಭಾಷಾಂತರಗಳಿಂದ ಮೂಲವನ್ನು ಗ್ರಹಿಸಲು ಸಾಧ್ಯವಿಲ್ಲ ಎನ್ನುವುದೇ ಈ ಚಿಂತಕರ ಸೂಚಿತ ಅಭಿಪ್ರಾಯವಾಗಿರುತ್ತದೆ. ವಸಾಹತೋತ್ತರ ಚಿಂತಕರು ಭಾಷಾಂತರವನ್ನು ಪುನರ್‌ಸೃಷ್ಟಿ ಅಥವಾ ಮರುಸೃಷ್ಟಿ ಇತ್ಯಾದಿ ಶಬ್ದಗಳಿಂದ ಕರೆದು, ಭಾಷಾಂತರವೆನ್ನುವುದು ಯುರೋಪಿನ ವಸಾಹತು ಪ್ರಭುಗಳ ವಿರುದ್ಧ ಬಂಡಾಯ, ಹಾಗಾಗಿ ಮೂಲಕ್ಕಿಂತ ಭಿನ್ನವಾಗಿ ಭಾಷಾಂತರಗಳು ಕೃತಿಗಳ ಪುನರ್ ರಚನೆ ಮಾಡುತ್ತವೆ ಎಂದು ವಾದಿಸುತ್ತಾರೆ.((ಉದಾಹರಣೆಗೆ, ಈ ಆಕರಗಳನ್ನು ಗಮನಿಸಿ: Susan Bassnett and Harish Trivedi. editors. Post-colonial Translation: Theory and Practice. Routledge, 2002; Tejaswini Niranjana. Siting
Translation: History, Post-Structuralism and the Colonial Context
. Oriental Longman, 1992.))

ಈ ವಾದಗಳೇನೇ ಇರಲಿ. ನಮ್ಮ ಮುಂದಿರುವ ಪ್ರಶ್ನೆ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಭಾಷಾಂತರ ಮಾಡುವುದರಿಂದ ಇಂಗ್ಲಿಷ್ ಕೃತಿಯ ವಿಚಾರಗಳನ್ನು ಕನ್ನಡದಲ್ಲಿ ಕಲಿತು, ಅರ್ಥಮಾಡಿಕೊಳ್ಳಬಹುದೆಂಬ ನಂಬಿಕೆಯು ಸರಿಯಾದದ್ದೇ? ಈ ಮೇಲಿನ ಚರ್ಚೆಗಳಿಂದ ಭಾಷಾಂತರದ ಕುರಿತು ಒಂದು ರೀತಿಯ ಸಂಶಯ ಮೂಡುವುದು ಸಹಜವಾದ ಸಂಗತಿಯೇ ಸರಿ. ಹಾಗಾದರೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳ ಮಧ್ಯೆ ಸಂವಹನ ಸಾಧ್ಯವೇ ಇಲ್ಲವೆ? ಹಾಗಾಗಲು ಸಾಧ್ಯವಿಲ್ಲ ಎಂಬುದು ನಮ್ಮ ಸಾಮಾನ್ಯ ಜ್ಞಾನ. ಈ ರೀತಿ ಎರಡು ಭಾಷೆಗಳ ನಡುವೆ ಸಂವಹನ ಸಾಧ್ಯವಿಲ್ಲವೆಂದುಬಿಟ್ಟರೆ, ವಿಜ್ಞಾನದ ಕಲಿಕೆ, ಅಥವಾ ಬೇರೆ ಬೇರೆ ಭಾಷೆ ಮಾತನಾಡುವ ವ್ಯಕ್ತಿಗಳ ನಡುವಣ ಸಂಬಂಧ ಇತ್ಯಾದಿ ವಾಸ್ತವಗಳನ್ನು ನಿರಾಕರಿಸಿದಂತಾಗುತ್ತದೆ. ಅಲ್ಲದೆ ಜಗತ್ತಿನಲ್ಲಿ ಬೇರೆ ಬೇರೆ ಭಾಷೆಗಳ ಜನರು ಚಾರಿತ್ರಿಕವಾಗಿ ವ್ಯಾಪಾರ-ವಹಿವಾಟು ಇತ್ಯಾದಿ ಸಂಬಂಧಗಳನ್ನು ಯಾವಾಗಲೂ ನಡೆಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಹಾಗಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಯ ನಡುವೆ ಸಂವಹನ ಸಾಧ್ಯವಿಲ್ಲ ಎಂಬುದು ಅವಾಸ್ತವ ಹೇಳಿಕೆಯಾಗಿಬಿಡುತ್ತದೆ. ಕನ್ನಡ ಮತ್ತು ಇಂಗ್ಲಿಷ್ ನಡುವೆ ಸಂವಹನ ಸಾಧ್ಯವಿದೆ ಎಂದಾದರೆ, ಯಾವ ರೀತಿಯಲ್ಲಿ ಅದು ಸಾಧ್ಯ ಹಾಗೂ ಈ ಎರಡು ಭಾಷೆಗಳು ಭಿನ್ನ ಸಾಂಸ್ಕೃತಿಕ ಜಗತ್ತಿನ ಅನುಭವಕ್ಕೆ ಸಂಬಂಧಿಸಿದ್ದರಿಂದ, ಈ ಸಂವಹನಗಳಲ್ಲಿ ಸಾಂಸ್ಕೃತಿಕ ಭಿನ್ನತೆಯಿಂದ ಹುಟ್ಟುವ ತೊಡಕುಗಳೇನು? ಆ ತೊಡಕುಗಳನ್ನು ಪರಿಹರಿಸಲು ಯಾವ ರೀತಿಯ ಕೆಲಸವನ್ನು ಮಾಡಬೇಕು? ಭಾಷಾಂತರದಿಂದ ಈ ಕೆಲಸ ಸಾಧ್ಯವೇ? ಇತ್ಯಾದಿ ಪ್ರಶ್ನೆಗಳು ಅತ್ಯಂತ ಮಹತ್ವಪೂರ್ಣವಾಗಿ ಬಿಡುತ್ತವೆ.

ಈ ಪ್ರಶ್ನೆಗಳಿಗೆ ಉತ್ತರಗಳೇನೇ ಇರಲಿ, ನಮ್ಮ ಪ್ರಕಾರ ಎರಡು ಭಾಷೆಗಳ ನಡುವೆ ಸಾಂಸ್ಕೃತಿಕ ಭಿನ್ನತೆಗಳಿದ್ದರೂ ಸಂವಹನ ಸಾಧ್ಯವಿದೆ. ಅಂತಹ ಸಂವಹಕ್ಕೆ ಸಾಂಸ್ಕೃತಿಕ ಭಿನ್ನತೆಯನ್ನು ಸರಿಯಾಗಿ ಗ್ರಹಿಸುವುದೇ ಅತಿ ಮುಖ್ಯವಾದ ಭಾಗ ಎನ್ನುವುದು ನಮ್ಮ ಪ್ರಮುಖ ವಾದ. ಹಾಗಿದ್ದ ಪಕ್ಷಗದಲ್ಲಿ ಈಗಿರುವ ಭಾಷಾಂತರಗಳ ಮುಂದಿರುವ ತೊಂದರೆಗಳೇನು? ಮುಂದೆ ಯಾವ ಮಾರ್ಗದಲ್ಲಿ ಯೋಚಿಸುವುದರಿಂದ ಸಾಂಸ್ಕೃತಿಕ ಭಿನ್ನತೆಯ ಸಮಸ್ಯೆಗಳನ್ನು ನಿವಾರಿಸಬಹುದು ಎಂಬುದನ್ನು ಯೋಚಿಸುವುದು ನಮ್ಮ ಮುಂದಿರುವ ಸೂಕ್ತವಾದ ಮಾರ್ಗ. ಆ ಕಾರಣಕ್ಕಾಗಿ, ಮೇಲೆ ಕೇಳಿದ ಪ್ರಶ್ನೆಗಳನ್ನು ಬಿ.ಎಂ. ಶ್ರೀಕಂಠಯ್ಯ ನವರ ಇಂಗ್ಲಿಷ್ ಪದ್ಯದ ಭಾಷಾಂತರದ ಕೆಲವು ಸಾಲುಗಳನ್ನು ಗಂಭೀರವಾಗಿ ಓದುವುದರ ಮೂಲಕ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಹಾಗೂ ಈ ಕ್ರಮದಿಂದ ಏನಾದರೂ ಉತ್ತರಗಳನ್ನು ಕಂಡುಕೊಳ್ಳಬಹುದೇ ಎನ್ನುವುದು ಈ ಪರಿಶೀಲನೆಯ ಪ್ರಮುಖ ಉದ್ದೇಶ.

೨. ಇಂಗ್ಲಿಷ್ ಗೀತೆಗಳು ಮತ್ತು ಭಾಷಾಂತರ

 ಕನ್ನಡದ ಹೆಸರಾಂತ ಲೇಖಕರೂ ಕವಿಯೂ ಆದ ಬಿ.ಎಂ. ಶ್ರೀಕಂಠಯ್ಯ((ಬಿ.ಎಂ. ಶ್ರೀಕಂಠಯ್ಯ ರವರನ್ನು ಕುರಿತು ಮಾಹಿತಿಗಾಗಿ: https://kn.wikipedia.org/wiki/%E0%B2%AC%E0%B2%BF.%E0%B2%8E%E0%B2%82.%E0%B2%B6%E0%B3%8D%E 0%B2%B0%E0%B3%80%E0%B2%95%E0%B2%82%E0%B2%A0%E0%B2%AF%E0%B3%8D%E0%B2%AF)) ನವರು ಅನೇಕ ಇಂಗ್ಲಿಷ್ ಸಾಹಿತ್ಯದ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಇಂಗ್ಲಿಷ್ ಸಾಹಿತ್ಯ-ಸಂಸ್ಕೃತಿಯನ್ನು ಕನ್ನಡಕ್ಕೆ ಭಾಷಾಂತರ ಮಾಡುವುದರ ಮೂಲಕ ಯುರೋಪಿನ ಸಾಂಸ್ಕೃತಿಕ ಜಗತ್ತಿನ ಅನೇಕ ವಿಷಯಗಳನ್ನು ಇಲ್ಲಿನವರಿಗೆ ಪರಿಚಯಿಸಬೇಕೆಂಬ ಹಂಬಲದ ಜೊತೆಗೆ, ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಅಲ್ಲಿಯವರಿಗೆ ಪರಿಚಯಮಾಡಿಕೊಡಬೇಕೆಂಬ ಉದಾತ್ತ ಮನೋಭಾವನೆಯನ್ನು ಅವರು ಹೊಂದಿದ್ದರು. “ಇನಿಯರಿಬ್ಬರನ್ನು ತೂಗಿ, ಇವಳ ಸೊಬಗನವಳು ತೊಟ್ಟು, ನೋಡ ಬಯಸಿದೆ; ಅವಳ ತೊಡಿಗೆ ಇವಳಿಗಿಟ್ಟು, ಹಾಡ ಬಯಸಿದೆ”((ಬಿ.ಎಂ. ಶ್ರೀಕಂಠಯ್ಯ. “ಕಾಣಿಕೆ” – ಈ ಅಂತರ್ಜಾಲ ಕೊಂಡಿಯಲ್ಲಿ ಈ ಪದ್ಯ ಲಭ್ಯವಿದೆ: https://kannada.pratilipi.com/read/%E0%B2%95%E0%B2%BE%E0%B2%A3%E0%B2%BF%E0%B2%95%E0%B3%86-%E0%B2%95%E0%B2%BE%E0%B2%A3%E0%B2%BF%E0%B2%95%E0%B3%86-tpdzsy5mkqox-189jg5o3293y51z)) ಎಂಬ ಅವರ ಈ ಸಾಲು ಅದಕ್ಕೆ ಸಾಕ್ಷಿ. ತಮ್ಮ ಈ ಆಶಯವನ್ನು ಅವರು ಮಾಡಿದ ಭಾಷಾಂತರಗಳು ನೆರವೇರಿಸುತ್ತವೆ ಎಂದು ಅವರು ಭಾವಿಸಿದ್ದರು, ಅದಕ್ಕಾಗಿ ಅವರು ಅನೇಕ ಭಾಷಾಂತರಗಳನ್ನೂ ಮಾಡಿದ್ದರು. ಅವರ ಈ ಪ್ರಯತ್ನದಿಂದ ಆಧುನಿಕ ಕನ್ನಡದಲ್ಲಿ ನವೋದಯ ಎಂಬ ಹೊಸ ಯುಗವೇ ತೆರೆದುಕೊಂಡಿತು ಎನ್ನುವುದು ಕೆಲವು ಚಿಂತಕರ ವಾದ.((ಮೋಹನ ಕುಂಟಾರ. ಅನುವಾದ ಸಾಹಿತ್ಯ. ಕನ್ನಡ ಸಾಹಿತ್ಯ ಪರಿಷತ್ತು, 2015.)) ಈ ಪ್ರಯತ್ನದಿಂದ ಅವರ ಆಶಯ ಈಡೇರಿತೆ? ಎನ್ನುವ ಪ್ರಶ್ನೆಯ ಮೂಲಕ ನಾವು ಅವರ ಭಾಷಾಂತರಗಳನ್ನು ಪರಿಶೀಲಿಸೋಣ. ಮೇಲೆ ಹೇಳಿದ ಪ್ರಯತ್ನವನ್ನು ಅವರು ತಮ್ಮ ’ಇಂಗ್ಲಿಷ್ ಗೀತೆಗಳು’((ಬಿ.ಎಂ. ಶ್ರೀಕಂಠಯ್ಯ. ಇಂಗ್ಲಿಷ್ ಗೀತೆಗಳು. ಬಿ.ಎಂ. ಶ್ರೀ ಸ್ಮಾರಕ ಪ್ರತಿಷ್ಟಾನ, 2013.)) (1924) ಎಂಬ ಇಂಗ್ಲಿಷ್ ಪದ್ಯಗಳ ಕನ್ನಡ ಭಾಷಾಂತರದ ಸಂಕಲನದಲ್ಲಿ ಪ್ರಾರಂಭಿಸಿದರು ಎನ್ನುವುದು ಒಪ್ಪಿತ ಅಭಿಪ್ರಾಯ. ಬಿ.ಎಂ.ಶ್ರೀಯವರ ’ಇಂಗ್ಲಿಷ್ ಗೀತೆಗಳು’ಕೃತಿಯು ಭಾಷಾಂತರಕಾರರೊಳಗೆ ಅತೀ ಮೆಚ್ಚುಗೆಯಾಗಿರುವುದರಿಂದಲೂ ಕನ್ನಡ ಸಾಹಿತ್ಯಾಸಕ್ತರೊಳಗೆ ’ಕನ್ನಡದ ಕಣ್ವ’ ಎಂದೇ ಹೆಸರುವಾಸಿಯಾಗಿರುವುದರಿಂದಲೂ ಭಾಷಾಂತರ ಪ್ರಕ್ರಿಯೆಯಲ್ಲಿ ಇದು ಕನ್ನಡದ ಪ್ರಮುಖ ಘಟ್ಟವೆಂಬ((ಸಿ.ವಿ. ವೇಣುಗೋಪಾಲ. “ಇಂಗ್ಲಿಷ್ ಗೀತೆಗಳು” ಬಿ.ಎಂ. ಶ್ರೀಕಂಠಯ್ಯ: ಜೀವನ-ಸಾಧನೆ, ಗೀತಾಚಾರ್ಯ ಮತ್ತು ಕೆ.ಎಸ್. ದೇಶ್‍ಪಾಂಡೆ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಟಾನ, 2009.)) ಹೆಸರು ಪಡೆದಿರುವುದರಿಂದಲೂ ಈ ಕೃತಿಯನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಈ ಕೃತಿಯಲ್ಲಿ ಒಟ್ಟು ೬೦ ಪದ್ಯಗಳಿದ್ದು ಅದರಲ್ಲಿ ’ಸುಖಜೀವನ’ ಎಂಬ ಪದ್ಯದ ಎರಡು ಸಾಲುಗಳನ್ನು ತೆಗೆದುಕೊಂಡು, ಈಗಾಗಲೇ ತಿಳಿಸಿರುವಂತೆ ಭಾಷಾಂತರವೆಂಬುದು ಭಾಷೆಯ ಸಮಸ್ಯೆ ಮತ್ತು ಕೇವಲ ಭಾಷೆಗಳಿಂದ ಎರಡು ಸಂಸ್ಕೃತಿಗಳ ಸಡುವೆ ಸಂವಾದ ಸಾಧ್ಯವಿದೆ ಎನ್ನುವ ಪೂರ್ವಗ್ರಹೀತವನ್ನು ಪರೀಕ್ಷೆಗೆ ಒಳಪಡಿಸಿ ನೋಡುವುದು ಮುಂದಿನ ಭಾಗದ ಉದ್ದೇಶ.

 ೨.೧. ’ಸುಖಜೀವನ’ ಪದ್ಯದ ಅನುವಾದದ ಕುರಿತು

 ’ಸುಖಜೀವನ’ ಎಂಬ ಪದ್ಯವು ಸರ್ ಹೆನ್ರಿ ವೂಟನ್((ಸರ್. ಹೆನ್ರಿ ವೂಟನ್ನನ ಕುರಿತು ಮಾಹಿತಿಗಾಗಿ: https://en.wikipedia.org/wiki/Henry_Wottons))  ಎಂಬ ಇಂಗ್ಲಿಷ್ ಕವಿಯ “Character of a Happy Life” ಎಂಬ ಪದ್ಯದ ಭಾಷಾಂತರವಾಗಿದೆ. ಅದರ ಮೊದಲೆರಡು ಸಾಲುಗಳ ಬಿ.ಎಂ.ಶ್ರೀ ಅವರ ಅನುವಾದ ಹೀಗಿದೆ:

                      ಏನು ಸುಖಿಯೋ, ತಾನು ಹುಟ್ಟಿನಲಿ, ಕಲಿಕೆಯಲಿ,

                        ಇನ್ನೊಬ್ಬನಿಚ್ಛೆಯನು ದುಡಿಯದಿರುವವನು!

ಸರಳವಾಗಿ ಹೇಳುವುದಾದರೆ, ಯಾರಾದರೂ ಸುಖಿಯಾಗಿರಬೇಕೆಂದರೆ, ಏನು ಮಾಡಬೇಕೆಂಬ ಸೂತ್ರವನ್ನು ತಿಳಿಸಿಕೊಡುವಂತೆ ಈ ಸಾಲುಗಳು ಕಾಣುತ್ತವೆ. ಈ ಸಾಲುಗಳ ಪ್ರಕಾರ ಯಾರಾದರೂ ಸುಖಿಯಾಗಿರಬೇಕೆಂದರೆ, ಅವನು ತನ್ನ ಹುಟ್ಟಿನಲ್ಲಿ ಮತ್ತು ತನ್ನ ಕಲಿಕೆಯಲ್ಲಿ, ಇನ್ನೊಬ್ಬನ ಇಚ್ಛೆಯಂತೆ ದುಡಿಯಬಾರದು. ಹಾಗಾದರೆ ಅವನು ಇನ್ನೊಬ್ಬರ ಇಚ್ಛೆಯನ್ನು ದುಡಿಯದೆ ಯಾರ ಇಚ್ಛೆಯಂತೆ ದುಡಿಯಬೇಕು? ಎಂಬ ಪ್ರಶ್ನೆ ಇಲ್ಲಿ ಬರುವುದು ಸಹಜ. ಅದೇನೇ ಇರಲಿ, ಈ ಸಾಲುಗಳನ್ನು ಇನ್ನೂ ಸ್ಪಷ್ಟವಾಗಿ ಓದಬೇಕೆಂದರೆ ಹೀಗೆ ಬಿಡಿಸಿಕೊಂಡು ಓದಬಹುದು: (ಎ) ಯಾರು ತನ್ನ ಹುಟ್ಟಿನಲ್ಲಿ ಇನ್ನೊಬ್ಬನ ಇಚ್ಛೆಯನ್ನು ದುಡಿಯುವುದಿಲ್ಲವೋ, ಅವನು ಸುಖಿ. (ಬಿ) ಯಾರು ಕಲಿಕೆಯಲ್ಲಿ ಇನ್ನೊಬ್ಬನ ಇಚ್ಛೆಯನ್ನು ದುಡಿಯುವುದಿಲ್ಲವೋ ಅವನು ಸುಖಿ. ಈ ಎರಡು ಭಾಗಗಳನ್ನು ಒಂದೊಂದಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ.

 (ಎ) ಯಾರು ಹುಟ್ಟಿನಲ್ಲಿ ಇನ್ನೊಬ್ಬನಿಚ್ಛೆಯನ್ನು ದುಡಿಯುವುದಿಲ್ಲವೋ ಅವನು ಸುಖಿ: ಬಿ.ಎಂ.ಶ್ರೀರವರ ಭಾಷಾಂತರದ ಪ್ರಕಾರ ಯಾವ ವ್ಯಕ್ತಿಯಾದರೂ ಸುಖಿಯಾಗಿರಬೇಕಾದರೆ, ಅವನು ತನ್ನ ಹುಟ್ಟಿಲ್ಲಿ ಇನ್ನೊಬ್ಬನಿಚ್ಛೆಯಂತೆ ದುಡಿಯಬಾರದು. ಇಲ್ಲಿ ’ಹುಟ್ಟಿನಲಿ’ ಎಂಬ ಶಬ್ದವನ್ನು ಹೇಗೆ ಗ್ರಹಿಸಬೇಕು? ಹುಟ್ಟಿನಲ್ಲಿ ಎಂದರೆ, ಹುಟ್ಟುವ ಮೊದಲೋ, ಹುಟ್ಟುವಾಗಲೋ ಅಥವಾ ಹುಟ್ಟಿದ ಮೇಲೋ ಎಂಬ ಪ್ರಶ್ನೆ ಬರುತ್ತದೆ. ಸಾಧಾರಣವಾಗಿ ಹುಟ್ಟುವಾಗ ಮತ್ತು ಹುಟ್ಟುವ ಮುಂಚೆ ಏನೇ ನಡೆದರೂ ಅದನ್ನು ನಮಗೆ ಸುಲಭವಾಗಿ ಗ್ರಹಿಸಲು ಸಾಧ್ಯವಿಲ್ಲ. ಹಾಗಾದರೆ ಹುಟ್ಟಿಲ್ಲಿ ಎನ್ನುವುದು ಹುಟ್ಟಿದ ನಂತರವೇ ಆಗಿರಬೇಕು. ಇನ್ನೊಂದು ರೀತಿಯಲ್ಲಿ ಚರ್ಚಿಸಬೇಕೆಂದರೆ ಹುಟ್ಟಿಲ್ಲಿ ಎಂಬ ಶಬ್ದವನ್ನು ನಾವು ಕೆಲವು ವಾಕ್ಯ ಪ್ರಯೋಗಗಳಿಂದ ಗುರುತಿಸಬಹುದು. ಉದಾಹರಣೆಗೆ: ಹುಟ್ಟಿಲ್ಲಿ ಕುಲೀನ, ಹುಟ್ಟಿನಲ್ಲಿ ಬ್ರಾಹ್ಮಣ ಇತ್ಯಾದಿ. ಆದರೆ ಈ ಯಾವ ಬಳಕೆಗಳೂ ಮೇಲಿನ ಬಿ.ಎಂ.ಶ್ರೀಯವರ ’ಇಚ್ಛೆ’ ಮತ್ತು ’ದುಡಿಯುವುದರ’ ಕುರಿತು ಮಾತನಾಡುವಾಗ ಭಾಷೆಯ ದೃಷ್ಟಿಯಿಂದ ಸಮಂಜಸವಾಗುವುದಿಲ್ಲ. ಹಾಗಾದರೆ, ಹುಟ್ಟಿನಲ್ಲಿ ಎಂಬ ಶಬ್ದಕ್ಕೆ ಹುಟ್ಟಿದ ನಂತರ ಎನ್ನುವ ಅರ್ಥವನ್ನೇ ಗ್ರಹಿಸಬೇಕಾಗುತ್ತದೆ. ಹಾಗಾದರೆ ಹುಟ್ಟಿನ ನಂತರ ಯಾವಾಗ? – ಒಂದು ತಿಂಗಳೋ ಆರು ತಿಂಗಳೋ ಅಥವಾ ವರ್ಷಗಳೋ? ಎನ್ನುವುದು ಇಲ್ಲಿ ಸ್ಪಷ್ಟವಾಗುವುದಿಲ್ಲ.

ಈ ಸಮಸ್ಯೆಗಳೇನೇ ಇರಲಿ. ಹುಟ್ಟಿನಲ್ಲಿ ಎಂಬ ಬಳಕೆಗೆ, ’ತಾಯಿಯ ಗರ್ಭದಲ್ಲಿ’ ಎನ್ನುವ ಅರ್ಥವನ್ನು ಆರೋಪಿಸಿದರೆ, ತಾಯಿಯ ಗರ್ಭದಲ್ಲಿ ಮಗುವಿಗೆ ತನ್ನ ಇಚ್ಛೆಯನ್ನು ದುಡಿಯಲು ಸಾಧ್ಯವೇ? ಅಥವಾ ಹುಟ್ಟಿಲ್ಲಿ ಎನ್ನುವುದು ’ಹುಟ್ಟಿದ ಮಗು’ ಎಂದುಕೊಂಡರೆ, ಹುಟ್ಟಿದ ಮಗುವಿಗೆ ತನ್ನಿಚ್ಛೆಯನ್ನು ದುಡಿಯಲು ಸಾಧ್ಯವೇ? ಹಾಗೇನಾದರೂ ಹುಟ್ಟಿದ ಮಗುವಿಗೆ ತನ್ನಿಚ್ಛೆಯಂತಿರಲು ಬಿಟ್ಟರೆ, ಆಗಬಹುದಾದ ಅನಾಹುತಗಳೇನು? ಉದಾಹರಣೆಗೆ ಆ ಮಗುವಿಗೆ ತನ್ನ ಮಲ-ಮೂತ್ರಗಳನ್ನು ಸ್ವಚ್ಛಗೊಳಿಸುವ ಶಕ್ತಿ ಇರುವುದಿಲ್ಲ. ಅಂತಹ ಮಗು ತನ್ನ ಇಚ್ಛೆಯನ್ನು ದುಡಿಯುವುದು ಎಂದರೆ ಏನರ್ಥವಿರಬಹುದು ಎಂಬುದು ಸ್ಪಷ್ಟವಾಗುವುದಿಲ್ಲ. ಹುಟ್ಟಿನಲ್ಲಿ ಕುಲೀನ ಎನ್ನುವ ರೀತಿಯಲ್ಲಿ ಈ ವಾಕ್ಯವನ್ನೇನಾದರೂ ಓದಿದರೆ, ಹುಟ್ಟಿನಲ್ಲಿ ಇನ್ನೊಬ್ಬನ ಇಚ್ಚೆಯನ್ನು ದುಡಿಯದೆ ಕೇವಲ ತನ್ನ ಇಚ್ಚೆಯನ್ನು ದುಡಿಯುವವನು ಎನ್ನುವ ಅರ್ಥ ಬರುತ್ತದೆ. ಹಾಗಾದರೆ ಹುಟ್ಟಿಲ್ಲಿ ಇನ್ನೊಬ್ಬನ ಇಚ್ಚೆಯನ್ನು ದುಡಿಯದೇ ತನ್ನ ಇಚ್ಚೆಯನ್ನು ಮಾತ್ರ ದುಡಿಯುವವನು ಯಾರು? ಎನ್ನುವ ಪ್ರಶ್ನೆಮಾತ್ರ ಹಾಗೆಯೇ ಉಳಿದುಬಿಡಿತ್ತದೆ. ಹಾಗಾಗಿ ಯಾವುದೇ ರೀತಿಯಲ್ಲಿ ಗ್ರಹಿಸಿದರೂ ಹುಟ್ಟಿನಲ್ಲಿ ತನ್ನಿಚ್ಛೆಯನ್ನು ದುಡಿಯುವುದು ನಮ್ಮ ಅರಿವಿಗೆ ನಿಲುಕದ ಸಂಗತಿಯಾಗುತ್ತದೆ. ಅಷ್ಟೇ ಅಲ್ಲ ಹುಟ್ಟಿದ ತಕ್ಷಣ ಮಗುವಿಗೆ ತನ್ನ ಇಚ್ಚೆಯಂತೆ ಬದುಕಲು ಬೇಕಾದ ದೈಹಿಕ ಅಥವಾ ಮಾನಸಿಕ ಸಾಧ್ಯತೆಯೇ ಇರುವುದಿಲ್ಲ.

ಅಂದರೆ ಮೇಲಿನ ವಾಕ್ಯದಲ್ಲಿ, ಹುಟ್ಟಿದಾಗ ಅಥವಾ ಹುಟ್ಟುತ್ತಿರುವಾಗ ಅಥವಾ ಹುಟ್ಟಿದಮೇಲೆ ಮಗುವೊಂದು ತನ್ನ ಇಚ್ಛೆಯ ಮೇರೆಗೆ ಮಾತ್ರ ನಡೆದುಕೊಂಡರೆ ಸುಖಿಯಾಗಿರುತ್ತದೆ ಎನ್ನುವುದು ಹಾಸ್ಯಾಸ್ಪದವಾಗಿಬಿಡುತ್ತದೆ. ಅಲ್ಲದೆ ಈ ರೀತಿ ಓದಿಕೊಂಡಾಗ, ಒಂದಷ್ಟು ಪ್ರಶ್ನೆಗಳು ಮೂಡುತ್ತವೆ: ಈಗ ತಾನೆ ಹುಟ್ಟಿರುವ ಮಗುವೊಂದಕ್ಕೆ ’ಇಚ್ಛೆ’ ಎಂದರೆ ಏನೆಂಬುದು ತಿಳಿದಿರುತ್ತದೆಯೆ? ಮಗುವೊಂದು ತಾನು ಹುಟ್ಟಿದಾಗ ತನ್ನ ಇಚ್ಛೆಯಂತೆ ನಡೆದುಕೊಳ್ಳುತ್ತಿದ್ದೇನೋ ಅಥವಾ ಬೇರೆಯವರ ಇಚ್ಛೆಯನ್ನು ದುಡಿಯುತ್ತಿದ್ದೇನೋ ಎಂದೆಲ್ಲಾ ಯೋಚಿಸಿ ತಿಳಿಯಲು ಎಲ್ಲಿಯಾದರೂ ಸಾಧ್ಯವೇ? ಹುಟ್ಟುತ್ತಿರುವಾಗ ಅಥವಾ ಹುಟ್ಟಿರುವ ಮಗುವೊಂದು ತನ್ನ ಇಚ್ಛೆಯನ್ನು ದುಡಿಯುವುದು ಎಂದರೇನು? ಇತ್ಯಾದಿ ಪ್ರಶ್ನೆಗಳು ಭಾರತೀಯರಿಗೆ ಅಥವಾ ಕನ್ನಡಿಗರಿಗೆ ಅರ್ಥವಾಗಲು ಸಾಧ್ಯವಿಲ್ಲ. ಹೀಗಾಗಿ, ಬಿ.ಎಂ.ಶ್ರೀರವರ ಭಾಷಾಂತರದ ಈ ಭಾಗವು ಅರ್ಥಹೀನವಾಗಿದೆ ಎಂದು ಹೇಳಬೇಕಾಗುತ್ತದೆ. ಅಂದರೆ ಕನ್ನಡ ಭಾಷಿಕರಿಗೆ ಈ ಸಾಲುಗಳು ವ್ಯಾಕರಣಬದ್ದವಾಗಿದ್ದರೂ ಅರ್ಥಹೀನವಾಗಿಬಿಡುತ್ತವೆ. ಅರ್ಥಾತ್, ಯಾವ ಇಂಗ್ಲಿಷ್ ಭಾಷೆಯ ಕವನವನ್ನು ಕನ್ನಡದಲ್ಲಿ ಹೇಳುವ ಮೂಲಕ ಇಂಗ್ಲಿರ (ಯುರೋಪಿನ) ಸಾಂಸ್ಕೃತಿಕ ಜಗತ್ತನ್ನು ಕನ್ನಡಿಗರಿಗೆ ಪರಿಚಯಿಸಲು ಬಿ.ಎಂ.ಶ್ರೀ ಪ್ರಯತ್ನಿಸಿದರೋ ಅದು ಕನ್ನಡ ಭಾಷೆಯ ಜನರಿಗೆ ಅರ್ಥಹೀನ ವಾಕ್ಯವಾಗಿ ಮಾರ್ಪಾಟಾಗಿಬಿಟ್ಟಿದೆ.((ಈ ಭಾಗದಲ್ಲಿ ‘ಹುಟ್ಟಿನಲ್ಲಿ’ ಎಂಬ ಶಬ್ದವನ್ನು ಹೇಗೆ ಗ್ರಹಿಸಬೇಕು ಎನ್ನುವ ಪ್ರಯತ್ನವನ್ನು ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ ಪರಿಶೀಲಿಸಲಾಗಿದೆ. ಸಾಮಾನ್ಯವಾಗಿ, ಪದ್ಯವನ್ನು ಅಥವಾ ಸಾಹಿತಿಕ ಕೃತಿಯೊಂದನ್ನು ಓದುವಾಗ ಶಬ್ದದ ಅರ್ಥವು ಓದುಗರ ಅರ್ಥೈಸುವಿಕೆಯನ್ನು (interpretation) ಅವಲಬಿಸಿರುತ್ತದೆ ಎಂಬ ವಾದವಿದೆ. ಹೀಗಾಗಿ ‘ಹುಟ್ಟಿನಲ್ಲಿ’ ಎಂಬ ಶಬ್ದದ ಅರ್ಥವನ್ನು ಇಲ್ಲಿ ಪರಿಶೀಲಿಸಿರುವಹಾಗೆ ಮಾಡದೆ, ಓದುಗರ ಅರ್ಥೈಸುವಿಕೆ (interpretation)ಗೆ ಬಿಡಬೇಕು ಎಂಬ ಪ್ರಶ್ನೆ ಬರಬಹುದು. ಆದರೆ ಈ ಲೇಖನದಲ್ಲಿ ‘ಹುಟ್ಟಿನಲ್ಲಿ’ ಎಂಬ ಶಬ್ದವು ಇಂಗ್ಲಿಷ್ ಪದ್ಯದ ಸಾಲಿನಲ್ಲಿ ಬರುವ ‘born’ ಎಂಬ ಶಬ್ದವನ್ನು ಅನುವಾದಿಸುತ್ತದೆಯೋ ಇಲ್ಲವೋ ಎಂಬ ಸಂಗತಿಯನ್ನು ಪರೀಕ್ಷಿಸುವ ಉದ್ದೇಶದಿಂದ ಹಾಗೆ ಪರಿಶೀಲಿಸಲಾಗಿದೆ. ಅಲ್ಲದೆ, ಈ ರೀತಿಯಲ್ಲಿ ಪರಿಶೀಲಿಸುವುದು ಅರ್ಥೈಸುವಿಕೆಯ (interpretationನ್ನಿನ) ಪ್ರಶ್ನೆಯಾಗಿರದೆ, ಒಂದು ಶಬ್ದವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತೋರಿಸಿಕೊಡುತ್ತದೆ. ಇದರಿಂದಾಚೆಗೆ, ಶಬ್ದಗಳನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಿ, interpret ಮಾಡಿಕೊಳ್ಳಬಹುದು ಎಂದು ವಾದಿಸುವವರೂ ಇದ್ದಾರೆ. ಆದರೆ, ಈ ರೀತಿ ವಾದಿಸುವುದರಿಂದ ಪದ್ಯದ ಸಾಲುಗಳು ಏನನ್ನು ಹೇಳುತ್ತಿವೆ ಎನ್ನುವುದನ್ನು ಸಮಂಜಸವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ.)) ಇನ್ನು ಎರಡನೇ ಭಾಗಕ್ಕೆ ಹೋಗೋಣ.

(ಬಿ) ಯಾರು ಕಲಿಕೆಯಲ್ಲಿ ಇನ್ನೊಬ್ಬನ ಇಚ್ಛೆಯನ್ನುದುಡಿಯುವುದಿಲ್ಲವೋ ಅವನು ಸುಖಿ: ಬಿ.ಎಂ.ಶ್ರೀಯವರ ಭಾಷಾಂತರದ ಪ್ರಕಾರ ಯಾವ ವ್ಯಕ್ತಿಯಾದರೂ ಸುಖಿಯಾಗಿರಬೇಕಾದರೆ, ಅವನು ತನ್ನ ಕಲಿಕೆಯಲ್ಲಿ ಅಥವಾ ತಾನು ಕಲಿಯುವಾಗ ಇನ್ನೊಬ್ಬನ ಇಚ್ಛೆಯಂತೆ ನಡೆದುಕೊಂಡಿರಬಾರದು ಅಥವಾ ದುಡಿಯಬಾರದು. ಕಲಿಯುವಾಗ ತಾನು ತನ್ನ ಇಚ್ಛೆಯಂತೆ ಮಾತ್ರ ನಡೆದುಕೊಂಡಿರಬೇಕು, ಹಾಗಿದ್ದರೆ ಅವನು ಸುಖಿ ಎಂದು ನಾವು ಈ ಸಾಲನ್ನು ಅರ್ಥೈಸಬೇಕಾಗುತ್ತದೆ. ಇದನ್ನು ಒಪ್ಪಿಬಿಟ್ಟರೆ ಇಲ್ಲಿಯೂ ಹಲವು ಪ್ರಶ್ನೆಗಳು ಮೂಡುತ್ತವೆ: ಅಷ್ಟಕ್ಕೂ ಕಲಿಯುವಾಗ, ಕಲಿಯಲೆಂದೇ ಬಂದಿರುವ ವಿದ್ಯಾರ್ಥಿಯು ತನ್ನ ಗುರುವಿನ ಇಚ್ಛೆಯಂತೆ ಅಭ್ಯಾಸಮಾಡುವುದನ್ನು ಬಿಟ್ಟು ತನ್ನಿಚ್ಛೆಯಂತೆ ಕಲಿಯಲು ಸಾಧ್ಯವೆ? ತನ್ನಿಚ್ಛೆಯಂತೆಯೇ ಕಲಿಯುವುದಾದರೆ, ಗುರುವಿನ ಅಗತ್ಯವೇ ಬರುವುದಿಲ್ಲ. ತನ್ನಿಚ್ಛೆಯನ್ನೇ ಸಾಧಿಸಿಕೊಳ್ಳುವವನು ಉತ್ತಮ ವಿದ್ಯಾರ್ಥಿಯಾಗಲೂ ಸಾಧ್ಯವಿಲ್ಲ. ಕಲಿಯುವ ಪ್ರತಿಯೊಬ್ಬನೂ ಕಲಿಸುವವರು ಹೇಳುವಂತೆ ನಡೆದುಕೊಳ್ಳುವುದು ಮತ್ತು ಅಭ್ಯಾಸಮಾಡುವುದು ಅಥವಾ ಕಲಿಸುವವರ ಇಚ್ಛೆಗೆ ವಿಧೇಯನಾಗಿ ಕಲಿಯುವುದು ಅತ್ಯವಶ್ಯ. ಉದಾಹರಣೆಗೆ ನಾವು ಶಾಲಾಕಾಲೇಜುಗಳಲ್ಲಿ ಕಲಿಯುವಾಗಿನ ನಮ್ಮ ಕಲಿಕೆಯ ಕ್ರಮವನ್ನು ಒಮ್ಮೆ ಮೆಲುಕುಹಾಕೋಣ. ನಿರಂತರವಾಗಿ ನಮ್ಮ ಅಧ್ಯಾಪಕರಾಗಲಿ, ಮನೆಯವರಾಗಲಿ ನಾವು ಅಧ್ಯಾಪಕರ ಆಜ್ಞೆಯನ್ನು ಮೀರದಂತೆ ಹೋಮ್ ವರ್ಕ್, ಓದು ಇತ್ಯಾದಿಗಳನ್ನು ಮಾಡಲು ನಮ್ಮನ್ನು ಹೆದರಿಸಿ-ಗದರಿಸಿ ತೊಡಗಿಸಿರುತ್ತಿದ್ದರು. ನಮ್ಮ ಇಚ್ಛೆಗೆ ವಿರುದ್ಧವಾಗಿ ನಾವು ಹೋಮ್ ವರ್ಕ್, ಅಸೈನ್‌ಮೆಂಟ್ ಇತ್ಯಾದಿಗಳನ್ನು ಮಾಡಲೇಬೇಕಾಗಿತ್ತು. ಇಲ್ಲದಿದ್ದರೆ ಬೈಗುಳ-ಹೊಡೆತಗಳು ಸಾಮಾನ್ಯವಾಗಿ ಇರುತ್ತಿದ್ದವು. ನಮ್ಮ ಕಲಿಕೆಯ ಸಂದರ್ಭದಲ್ಲಿ ನಾವು ನಮ್ಮ ಇಚ್ಛೆಗೆ ವಿರುದ್ಧ ಸಂಗತಿಗಳನ್ನು ಮಾಡಿದ್ದೇ ಹೆಚ್ಚು. ಹಾಗಾದರೆ ನಾವು ಅಸುಖಿಗಳೇ? ಈಗ ನಾವು ಆ ದಿನಗಳ ಕುರಿತು ಮಾತನಾಡುವಾಗ, ಆ ಶಿಸ್ತು-ಬದ್ಧತೆಗಳನ್ನು ಗಮನಿಸಿದಾಗ ಮತ್ತೊಬ್ಬರ ಇಚ್ಛೆಯಿಂದ ನಾವು ಸುಖಿಯಾಗಿದ್ದೇವೆಂದೇ ಮಾತನಾಡುತ್ತೇವೆ. ಆ ರೀತಿ ಅಧ್ಯಾಪಕರ ಇಚ್ಛೆಗನುಗುಣವಾಗಿ ಪಾಠ-ಪ್ರವಚನ ಕಲಿಯದವರು ಹಾದಿ ತಪ್ಪಿ ಅಸುಖಿಗಳಾಗಿದ್ದಾರೆ ಎಂದೂ ನಾವು ಅನುಭವದಿಂದ ಸಾಧಾರಣವಾಗಿ ಮಾತನಾಡುತ್ತೇವೆ.

ಹಾಗಿದ್ದ ಪಕ್ಷದಲ್ಲಿ, ಕಲಿಕೆಯಲ್ಲಿ ಇನ್ನೊಬ್ಬನ ಇಚ್ಛೆಯನ್ನು ದುಡಿಯದಿರುವವನು ಹೇಗೆ ಸುಖಿಯಾಗಲು ಸಾಧ್ಯ? ಅಂದರೆ ಬಿ.ಎಂ.ಶ್ರೀರವರ ಭಾಷಾಂತರದ ಈ ಭಾಗ ನಮ್ಮ ಅನುಭವಕ್ಕೆ ವಿರುದ್ಧವಾದುದನ್ನೇ ಹೇಳುತ್ತಿದೆಯಲ್ಲವೇ? ಒಂದು ಮಾತಿನಲ್ಲಿ ಹೇಳಬೇಕೆಂದರೆ, ಭಾರತೀಯರ ಅಥವಾ ಕನ್ನಡಿಗರ ಅನುಭವದ ಜಗತ್ತಿನಲ್ಲಿ ಬದುಕುವವರಿಗೆ ಬಿ.ಎಂ.ಶ್ರೀಯವರ ಈ ಭಾಷಾಂತರವು ಅರ್ಥಹೀನ. ಅಷ್ಟೇ ಅಲ್ಲ, ಇಂಗ್ಲಿಷ್ ಸಂಸ್ಕೃತಿಯ ಜನರು ಅತ್ಯಂತ ಅವಿಧೇಯರು ಹಾಗೂ ಗುರುಹಿರಿಯರನ್ನು ಗೌರವಿಸದಿರುವವರು ಎಂಬ ಅರ್ಥವನ್ನು ಈ ಅನುವಾದವು ಹುಟ್ಟಿಸುತ್ತದೆ. ಇನ್ನು ಈ ಭಾಷಾಂತರವು ಇಂಗ್ಲಿಷ್ ಮೂಲದ ವಿಚಾರವನ್ನು ಕನ್ನಡದಲ್ಲೇ ತಿಳಿಸಿಕೊಡುತ್ತಿದೆ ಎಂದು ಹೇಳುವುದು ದೂರದ ಮಾತೇ ಸರಿ. ಇಲ್ಲಿಯವರೆಗೆ ನಾವು ಪರಿಶೀಲಿಸಿದ ಭಾಷಾಂತರವು (೧) ಭಾರತೀಯರಿಗೆ ಅಥವಾ ಕನ್ನಡಿಗರಿಗೆ ಅರ್ಥವಾಗುವುದುಲ್ಲ ಹಾಗೂ (೨) ಇಂಗ್ಲಿಷ್‌ನ ಪಠ್ಯವೊಂದನ್ನು ವಿರೂಪಗೊಳಿಸಿ ಆ ಸಂಸ್ಕೃತಿಯ ಜನರ ಕುರಿತು ಋಣಾತ್ಮಕವಾದ ಅಭಿಪ್ರಾಯವನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಬಿ.ಎಂ.ಶ್ರೀಯವರು ಎರಡು ಸಂಸ್ಕೃತಿಗಳ ನಡುವೆ ಸಂಬಂಧಗನ್ನು ಬೆಸೆಯಲು ಮಾಡಿದ ಭಾಷಾಂತರವು ವಿರುದ್ಧವಾದ ಪರಿಣಾಮವನ್ನು ಉಂಟುಮಾಡಿರುವುದು ಸ್ಪಷ್ಟವಾಗುತ್ತದೆ.

 ೩. ಉತ್ತಮ ಭಾಷಾಂತರ ಪರಿಹಾರವೇ?

ಬಿ.ಎಂ.ಶ್ರೀಯವರ ಭಾಷಾಂತರದಲ್ಲಿನ, ಈ ಮೇಲೆ ತಿಳಿಸಿದ ವೈಫ಼ಲ್ಯವನ್ನು ಪರಿಹರಿಸಲು ಇರುವ ಸಾಧ್ಯತೆಗಳೇನು ಎನ್ನುವುದು ನಮ್ಮ ಮುಂದಿರುವ ಸವಾಲು. ಈಗಾಗಲೇ ಚಿಂತಕರು ನಂಬಿರುವಂತೆ ಭಾಷಾಂತರವು ಕೇವಲ ಭಾಷೆಯ ಸಮಸ್ಯೆಯಾದರೆ ಬಿ.ಎಂ.ಶ್ರೀಯವರ ವೈಫ಼ಲ್ಯವನ್ನು ಇನ್ನೊಂದು ಉತ್ತಮವಾದ ಭಾಷಾಂತರದಿಂದ ಸರಿಪಡಿಸಬಹುದು ಎಂದೇ ಒಪ್ಪಬೇಕಾಗುತ್ತದೆ. ಆ ಕಾರಣದಿಂದಾಗಿ ಬಿ.ಎಂ.ಶ್ರೀಯವರ ಭಾಷಾಂತರವನ್ನು ನಮಗೆ ಗೊತ್ತಿರುವ ಇಂದಿನ ಭಾಷೆಯ ಸಾಧ್ಯತೆಗಳನ್ನೆಲ್ಲ ಬಳಸಿ ಉತ್ತಮವಾದ ಭಾಷಾಂತರವೊಂದನ್ನು ಮಾಡುವುದರ ಮೂಲಕ ಪರಿಹರಿಸಬಹುದೇ ಎಂದು ಈಗ ಪರೀಕ್ಷಿಸೋಣ. ಈ ಪರಿಶೀಲನೆಗಾಗಿ ಈಗಾಗಲೇ ಇರುವ ಕನ್ನಡ ಭಾಷಾಂತರವನ್ನು ಬದಿಗಿಟ್ಟು, ನೇರವಾಗಿ ಇಂಗ್ಲಿಷ್ ಪದ್ಯಕ್ಕೇ ಹೋಗಿ ಅಲ್ಲಿ ಇಂಗ್ಲಿಷ್ ಕವಿಯು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂಬುದನ್ನು ನೋಡೋಣ. ಆ ಕಾರಣಕ್ಕಾಗಿ, ಈ ಇಂಗ್ಲಿಷ್ ಪದ್ಯದ ಮೊದಲೆರಡು ಸಾಲುಗಳು ಏನನ್ನು ಹೇಳುತ್ತವೆ ಎಂದು ತಿಳಿಯುವ ಪ್ರಯತ್ನ ಮಾಡೋಣ. ಅನಂತರ ಈ ಇಂಗ್ಲಿಷ್ ಸಾಲುಗಳು ಹೇಳುತ್ತಿರುವುದನ್ನು ಕನ್ನಡದಲ್ಲಿ ಹೇಳಲು ಹೋಗಿ, ಅರ್ಥವಾಗದ ಸಾಲುಗಳನ್ನು ಬಿ.ಎಂ.ಶ್ರೀರವರು ಅದೇಕೆ ಬರೆದರು ಎಂಬುದನ್ನು ಅರ್ಥೈಸಲು ಸಾಧ್ಯವೇ ಎಂಬುದನ್ನು ಯೋಚಿಸೋಣ. ಅಲ್ಲದೇ ಬಿ.ಎಂ.ಶೀಯವರ ಭಾಷಾಂತರವನ್ನು ನಮ್ಮ ಪರ್ಯಾಯ ಭಾಷಾಂತರದಿಂದ ಸರಿಪಡಿಸಲು ಸಾಧ್ಯವೇ? ಎಂದು ಪರೀಕ್ಷಿಸುತ್ತ, ಭಾಷೆಯ ಮೂಲಕ ಬಿ.ಎಂ.ಶೀಯವರ ಭಾಷಾಂತರದ ದೋಷಗಳನ್ನು ಪರಿಹರಿಸಲು ಸಾಧ್ಯವೇ? ಎಂಬುದನ್ನು ಪರಿಶೀಲಿಸೋಣ.

ಸರ್ ಹೆನ್ರಿ ವೂಟನ್ ಅವರ “Character of a Happy Life”  ಪದ್ಯದ ಮೊದಲೆರಡು ಸಾಲುಗಳು ಹೀಗಿವೆ:

                                                 “How happy is he born or taught

                                                  That serveth not another’s will.”

 ಈ ಸಾಲುಗಳನ್ನು ಬಿಡಿಸಿಕೊಂಡು ಹೀಗೆ ಓದೋಣ. (ಎ)how happy is he who is born not to serve another’s will (ಬಿ) how happy is he who is taught not to serve another’s will.ಈ ಮೇಲಿನ ವಾಕ್ಯಗಳನ್ನು ಕನ್ನಡದಲ್ಲಿ ಹೇಳಬೇಕೆಂದರೆ (ಎ) ಯಾರು ಇನ್ನೊಬ್ಬನ ಇಚ್ಛೆಯನ್ನು ಸೇವೆ ಮಾಡಬಾರದೆಂದು ಹುಟ್ಟಿರುತ್ತಾನೋ ಅವನು ಸುಖಿ. (ಬಿ) ಯಾರು ಇನ್ನೊಬ್ಬನ ಇಚ್ಛೆಯಂತೆ ಸೇವೆ ಮಾಡಬಾರದೆಂದು ಶಿಕ್ಷಿತನಾಗಿರುತ್ತಾನೋ, ಅವನು ಸುಖಿ. ಒಂದರ್ಥದಲ್ಲಿ ನೋಡಿದರೆ, ಬಿ.ಎಂ.ಶ್ರೀ ರವರ ಭಾಷಾಂತರಕ್ಕಿಂತ, ಇಲ್ಲಿ ಸೂಚಿಸಿರುವ ಇಂಗ್ಲಿಷ್ ಸಾಲಿನ ಭಾಗಗಳ ಕನ್ನಡದ ಅನುವಾದ ಹೆಚ್ಚು ಸೂಕ್ತ ಅನಿಸಬಹುದು. ಏಕೆಂದರೆ, “born not to serve” ಎಂದರೆ ’ಸೇವೆ ಮಾಡಬಾರದೆಂದೇ ಹುಟ್ಟಿರುವವನು’ ಎಂಬ ಅರ್ಥ ಬರುವುದೇ ವಿನಾ, ಬಿ.ಎಂ.ಶ್ರೀರವರು ಭಾಷಾಂತರಿಸುವ ಹಾಗೆ ’ಹುಟ್ಟಿನಲಿ (in or at birth) ದುಡಿಯದಿರುವುದು’ ಎಂಬ ಅರ್ಥವು ಬರುವುದಿಲ್ಲ. ಹಾಗೂ, “taught not to serve” ಎಂದರೆ ‘ಸೇವೆ ಮಾಡಬಾರದೆಂದು ಶಿಕ್ಷಿತನಾಗಿರುವುದು’ ಎಂಬ ಅರ್ಥ ಬರುವುದೇ ವಿನಹ, ಬಿ.ಎಂ.ಶ್ರೀರವರ ಭಾಷಾಂತರದಲ್ಲಿ ಬರುವ ಹಾಗೆ ’ಕಲಿಕೆ’ಗೆ (learning) ಸಂಬಂಧ ಪಡುವ ಯಾವ ಸೂಚನೆಯೂ ಮೂಲ ವಾಕ್ಯದಲ್ಲಿ ಬರುವುದೇ ಇಲ್ಲ. ಹಾಗಾದರೆ, ಈ ಮೇಲೆ ಪ್ರಸ್ತಾಪಿಸಿದ ಅನುವಾದವು, ಈ ಹಿಂದೆ ಬಿ.ಎಂ.ಶ್ರೀಯವರ ಇತಿಮಿತಿಗಳನ್ನು ದಾಟಿ ಈ ಸಾಲುಗಳನ್ನು ಅರ್ಥಮಾಡಿಸುತ್ತದೆಯೇ? ಇದನ್ನು ಸ್ಥೂಲವಾಗಿ ಪರೀಕ್ಷಿಸಿ ನೋಡೋಣ.

ಈ ಇಂಗ್ಲಿಷ್ ಸಾಲುಗಳ ನಮ್ಮ ಅನುವಾದದ ಮೊದಲನೆ ಭಾಗವನ್ನು ಪರಿಶೀಲಿಸೋಣ: (ಎ) ಯಾರು ಇನ್ನೊಬ್ಬನ ಇಚ್ಛೆಯಂತೆ ಸೇವೆಮಾಡಬಾರದೆಂದು ಹುಟ್ಟಿರುತ್ತಾನೋ ಅವನು ಸುಖಿ. ಈ ಅನುವಾದವನ್ನು ಗಮನಿಸಿದರೆ, ಯಾರಾದರು ಸುಖಿಯಾಗಿರಬೇಕಾದರೆ ಅವನು ಇನ್ನೊಬ್ಬನ ಇಚ್ಛೆಯನ್ನು ಸೇವೆ ಮಾಡಲೇಬಾರದು, ಎಂಬ ಅರ್ಥವನ್ನು ಉತ್ಪತ್ತಿಮಾಡುತ್ತದೆ. ಇದನ್ನು ವ್ಯಕ್ತಿಯೊಬ್ಬ ಇನ್ನೊಬ್ಬನ ಇಚ್ಛೆಯಂತೆ ಸೇವೆ ಮಾಡಬಾರದು ಅಂದರೆ ತನ್ನ ಇಚ್ಛೆಯಂತೆ ಮಾತ್ರ ಸೇವೆ ಮಾಡಬೇಕು ಎಂದು ಓದಿಕೊಂಡರೆ ಅದು ಒಂದಷ್ಟು ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿಬಿಡುತ್ತದೆ. ಏಕೆಂದರೆ ಕನ್ನಡದಲ್ಲಿ ನಾವು ಬಳಸುವಂತೆ ಗುರು-ಹಿರಿಯರಿಗೆ ಸೇವೆ ಮಾಡುವುದು, ತಂದೆ-ತಾಯಿಯರಿಗೆ ಸೇವೆ ಮಾಡುವುದು, ದೇವರಿಗೆ ಸೇವೆ ಸಲ್ಲಿಸುವುದು ಎಂಬುದಾಗಿ ಬಳಕೆಯಲ್ಲಿದ್ದರೂ, ಇನ್ನೊಬ್ಬರ ಇಚ್ಛೆಯಂತೆ ಸೇವೆಮಾಡದಿರುವುದು ಎಂದರೇನು ಎನ್ನುವುದು ಅರ್ಥವಾಗುವುದಿಲ್ಲ. ಈ ವಿಷಯವನ್ನು ಇನ್ನೂ ಸ್ಪಷ್ಟಪಡಿಸಬೇಕೆಂದರೆ ತನ್ನ ಇಚ್ಛೆಯಂತೆ ಸೇವೆಮಾಡುವುದು ಸರಿಯಾದುದ್ದು ಎಂಬುದು ಮೇಲ್ನೋಟಕ್ಕೆ ಸರಿಯಾಗಿ ಕಂಡರೂ, ಈ ರೀತಿಯಲ್ಲಿ ದೇವರ ಸೇವೆಯನ್ನು ಮಾಡಬೇಕೆಂದು ಅರ್ಚಕರೋ, ಹಿರಿಯರೋ ಹೇಳಿರುತ್ತಾರೆ. ಅನೇಕ ಬಾರಿ ಗುರು-ಹಿರಿಯರ ಅಥವಾ ದೇವರ ಸೇವೆಯು ಮತ್ತೊಬ್ಬರ ಇಚ್ಛೆಗನುಗುಣವಾಗಿ ನೆರವೇರುತ್ತದೆ. ಉದಾಹರಣೆಗೆ ತಂದೆ-ತಾಯಿಯವರ ಇಚ್ಛೆಯಂತೆ, ಬಂಧು-ಬಳಗದವರ ಇಚ್ಛೆಯಂತೆ ನಾವು ಸೇವೆ ಮಾಡುತ್ತೇವೆ. ಹಾಗಿದ್ದರೆ ಬೇರೆಯವರ ಇಚ್ಛೆಯನ್ನು ಹುಟ್ಟಿನಿಂದ ಸೇವೆ ಮಾಡಬಾರದೆಂದು ಮಾತನಾಡುವುದೇ ಅಷ್ಟು ಸಮಂಜಸ ಎನಿಸುವುದಿಲ್ಲ.

ಅಲ್ಲದೆ ಇಲ್ಲಿ ‘service’ ಎಂಬ ಶಬ್ದಕ್ಕೆ ಸೇವೆ ಮಾಡುವುದು ಎನ್ನುವುದು ಹೊಂದಾಣಿಕೆಯಾಗುತ್ತಿಲ್ಲ ಮತ್ತು ಶ್ರೀಯವರು ಬಳಸಿದಂತೆ ಸೇವೆಯನ್ನು ದುಡಿಯುವುದು ಎನ್ನುವ ಒಂದು ಸಮಾನಾರ್ಥಕ ಶಬ್ದದ ಮೂಲಕ ಬಳಸಿದರೆ ಸಮಸ್ಯೆಯೇನು ಪರಿಹಾರವಾದಂತೆ ಕಾಣುವುದಿಲ್ಲ. ಇನ್ನೊಬ್ಬನ ಇಚ್ಛೆಯನ್ನು ಹುಟ್ಟಿನಿಂದ ಮತ್ತು ಶಿಕ್ಷಣದಿಂದ ಇನ್ನೊಬ್ಬನ ಇಚ್ಛೆಯನ್ನು ದುಡಿಯದಿರುವವನು ಸುಖಿ ಎಂದು ಓದಿಕೊಂಡರೆ ಅದು ಇನ್ನೊಂದು ರೀತಿಯ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಅಂದರೆ, ಉದಾಹರಣೆಗೆ ನಮ್ಮ ಅನುಭವದಲ್ಲಿ ಗ್ರಹಿಸಿದಂತೆ ಹಿರಿಯರು ತಮ್ಮ ಅನುಭವದಿಂದ ನಮ್ಮ ಒಳಿತಿಗಾಗಿ ಹೀಗೆ ಮಾಡುವುದೇ ಒಳ್ಳೆಯದು ಇತ್ಯಾದಿಯಾಗಿ ತಮ್ಮ ಇಚ್ಚೆ ಅಥವಾ ಬಯಕೆಗಳನ್ನು ವ್ಯಕ್ತಪಡಿಸುತ್ತಾರೆ ಹಾಗು ಆ ಮೂಲಕ ನಾವು ಈ ಸಾಮಾಜಿಕ ಜೀವನದ ಕಲಿಕೆಯನ್ನು ಮಾಡುತ್ತೇವೆ. ಆದರೆ, ಮೇಲಿನ ವಾಕ್ಯದಲ್ಲಿ ವ್ಯಕ್ತಿಯೊಬ್ಬ ಸುಖಿಯಾಗಬೇಕೆಂದರೆ ಹಿರಿಯರ ಇಚ್ಚೆಯನ್ನು ದುಡಿಯಬಾರದು ಎಂದಾಗುತ್ತದೆ. ಇನ್ನೂ ಮುಂದುವರೆದು ಈ ವಾಕ್ಯವನ್ನು ಸರಿಯಾಗಿ ಗ್ರಹಿಸಲು ಪ್ರಯತ್ನಿಸಿದರೆ ಮನೆಯಲ್ಲಿ ತಂದೆ-ತಾಯಂದಿರ ಮಾತನ್ನು ಕೇಳಬಾರದು, ಗುರು-ಹಿರಿಯರ ಆಶಯದಂತೆ ನಡೆಯಬಾರದು ಎಂಬ ಅರ್ಥವನ್ನು ಹೇಳಿದಂತಾಗುತ್ತದೆ. ಅದಲ್ಲದೇ ಮನುಷ್ಯನೊಬ್ಬ ಈ ಸಾಮಾಜಿಕ ಜಗತ್ತಿನಲ್ಲಿ ಕೇವಲ ತನ್ನ ಇಚ್ಛೆಯಂತೆ ಬದುಕಲು ಹೊರಟರೆ ಆ ರೀತಿಯ ಬದುಕು ನಮ್ಮ ಸಾಮಾಜಿಕ ಜೀವನದಲ್ಲಿರುವ ಹೊಂದಾಣಿಕೆಗಳೆಲ್ಲವನ್ನೂ ನಿರ್ಮೂಲನೆ ಮಾಡಿ ನಮಗೆ ಊಹಿಸಲು ಸಾಧ್ಯವೇ ಇಲ್ಲದ ಒಂದು ಅಶಾಂತಿಯುತ ಜಗತ್ತನ್ನು ಸೃಷ್ಟಿಸಿಬಿಡುತ್ತದೆ. ಆ ಕಾರಣಕ್ಕಾಗಿ, ನಮ್ಮ ದಿನನಿತ್ಯದ ಬದುಕಿನಲ್ಲಿ ಈ ರೀತಿಯ ನಡವಳಿಕೆಯನ್ನು ಅಸಹಜ ಅಥವಾ ಸರಿಯಲ್ಲದ್ದು ಎಂದೇ ನೋಡುತ್ತೇವೆ. ಗುರು-ಹಿರಿಯರ, ಮನೆಯವರ ಮತ್ತು ಅನುಭವಸ್ತರ ಮಾತುಗಳನ್ನು-ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡು, ಹೀಗೆ ಮಾಡುವುದೇ ಒಳ್ಳೆಯದು ಎಂಬ ಸಲಹೆಗೆ ತಲೆ ಬಾಗಿ, ಅವರ ಇಚ್ಛೆಯಂತೆ ನಡೆಯುವುದೇ ಸೂಕ್ತ ಮತ್ತು ಇದೇ ಸುಖ ಜೀವನದ ಮರ್ಮವೆಂದೂ ಮಾತನಾಡುತ್ತೇವೆ. ಹೀಗಿರುವುದರಿಂದ, ನಮ್ಮ ಅನುವಾದವು ಬಿ.ಎಂ.ಶ್ರೀಯವರ ಅನುವಾದಕ್ಕಿಂತ ಭಾಷಾ ದೃಷ್ಟಿಯಿಂದ ಉತ್ತಮ ಎನಿಸಿದರೂ, ಭಾರತೀಯರಿಗೆ ಅಥವಾ ಕನ್ನಡಿಗರಿಗೆ ನಮ್ಮ ಈ ಅನುವಾದವು ಅರ್ಥಹೀನವೇ ಆಗಿದೆ. ಒಂದು ಪಕ್ಷ ಈ ಪದ್ಯಗಳು ನಮಗೆ ಅರ್ಥಹೀನ ಏಕೆಂದರೆ ಈ ಪದ್ಯದಲ್ಲಿನ ಅನುಭವಗಳು ನಮ್ಮ ಅನುಭವಗಳಲ್ಲ (ಏಕೆಂದರೆ ಅದು ಯುರೋಪಿನವರ ಅನುಭವ) ಎನ್ನುವ ಸತ್ಯವನ್ನು ಒಪ್ಪಿದರೂ, ಈ ಅನುವಾದದಲ್ಲಿ ಇಂಗ್ಲಿಷ್ (ಪಾಶ್ಚಿಮಾತ್ಯ) ಸಂಸ್ಕೃತಿಯ ಜನರು ಅತ್ಯಂತ ಅವಿಧೇಯರು ಹಾಗು ಗುರುಹಿರಿಯರನ್ನು ಗೌರವಿಸದಿರುವವರು ಎಂಬ ಅರ್ಥವನ್ನೇ ಹುಟ್ಟಿಸಿಬಿಡುತ್ತದೆ. ನಮ್ಮ ಅನುವಾದವಾಗಲೀ ಅಥವಾ ಬಿ.ಎಂ.ಶ್ರೀಯವರ ಅನುವಾದವಾಗಲೀ ಕೇವಲ ಅರ್ಥಹೀನ ವಾಕ್ಯವಾಗಿರದೆ ಇನ್ನೊಂದು ಸಂಸ್ಕೃತಿಯ ಜನರನ್ನು ವಿರೂಪಗೊಳಿಸಿ ಚಿತ್ರಿಸಿಬಿಡುತ್ತದೆ.

ಇನ್ನು ಎರಡನೆಯ ಭಾಗಕ್ಕೆ ಹೋಗೋಣ. (ಬಿ) ಯಾರು ಇನ್ನೊಬ್ಬನ ಇಚ್ಛೆಯನ್ನು ಸೇವೆ ಮಾಡಬಾರದೆಂದು ಶಿಕ್ಷಿತನಾಗಿರುತ್ತಾನೋ, ಅವನು ಸುಖಿ. ಈ ಅನುವಾದವು ಕೂಡ ಇನ್ನೊಬ್ಬನ ಇಚ್ಛೆಯನ್ನು ಸೇವೆ ಮಾಡಬಾರದೆಂದು ಯರಿಗೆ ಶಿಕ್ಷಣವು ದೊರೆತಿರುತ್ತದೆಯೋ ಅವನು ಸುಖಿಯಾಗಿರುತ್ತಾನೆ ಎಂಬ ಅರ್ಥವನ್ನು ಕೊಡುತ್ತದೆ. ಈ ಅರ್ಥವು ನಮ್ಮಲ್ಲಿ ಸಹಜವಾಗಿ ಈ ಹಿಂದೆ ತೋರಿಸಿರುವಂತೆ ಸಮಸ್ಯೆಯನ್ನುಂಟು ಮಾಡುತ್ತದೆ. ಅಲ್ಲದೆ ಈ ವಾಕ್ಯವು ಕನ್ನಡದಲ್ಲೇ ಇದ್ದರೂ ನಮಗೆ ಅದು ಅರ್ಥವಾಗುವುದಿಲ್ಲ ಅಥವಾ ನಮ್ಮ ಅನುಭವಕ್ಕೆ ದಕ್ಕುವುದಿಲ್ಲ. ಏಕೆಂದರೆ, ಈಗಾಗಲೇ ನೋಡಿರುವ ಹಾಗೆ, ಅನುಭಸ್ಥರ, ಗುರು-ಹಿರಿಯರ ಮಾತು-ವಿಚಾರಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಅವರ ಸಲಹೆಯಂತೆ ಅಥವಾ ಅವರು ಇಚ್ಛಿಸುವಂತೆ ನಡೆಯುವುದೇ ಸುಖ ಜೀವನಕ್ಕೆ ಸೂತ್ರ ಎಂಬುದು ನಮ್ಮ ಅನುಭವದ ಮಾತು. ಹೀಗಿರುವಾಗ, ಉದಾಹರಣೆಗೆ ಗುರು ಹಿರಿಯರ, ಹಿತೈಷಿಗಳ ಮಾತು-ಸಲಹೆಗಳನ್ನು, ಅಂಥವರ ಇಚ್ಛೆಯಂತೆ ನಡೆಯಬಾರದು, ಇಚ್ಛೆಯಂತೆ ಸೇವೆಮಾಡಬಾರದು ಅಥವಾ ಇಚ್ಛೆಯಂತೆ ದುಡಿಯಬಾರದೆಂದು ಶಿಕ್ಷಿತರಾಗುವುದು ಎಂಬ ಮಾತು ಕನ್ನಡಿಗರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಏಕೆಂದರೆ, ಒಳ್ಳೆಯ ರೀತಿಯಲ್ಲಿ ಶಿಕ್ಷಿತರಾಗಬೇಕು ಎಂದು ಮಾತನಾಡುವುದು ನಮಗೆ ಪರಿಚಿತ. ಹಾಗೂ ಒಳ್ಳೆಯ ರೀತಿಯಲ್ಲಿ ಶಿಕ್ಷಿತರಾದವರನ್ನು ಸುಶಿಕ್ಷಿತರು ಅಥವಾ ಸುಸಂಸ್ಕೃತರು ಎಂದು ಕರೆಯುವುದು ನಮ್ಮ ವಾಡಿಕೆ. ಈ ರೀತಿ ಸಂಸ್ಕಾರವಂತ ಶಿಕ್ಷಣ ಇನ್ನೊಬ್ಬರ ಇಚ್ಛೆಯಂತೆ ನಮ್ಮನ್ನು ಯಾವಾಗ, ಹೇಗೆ ಮತ್ತು ಎಷ್ಟರ ಮಟ್ಟಿಗೆ ದುಡಿಯಲು ತೊಡಗಿಸಿಕೊಳ್ಳಬೇಕು ಅಥವಾ ಇನ್ನೊಬ್ಬರ ಸಲಹೆಯ ಮೇಲೆ ಸೇವೆ ಮಾಡಬೇಕು ಎನ್ನುವ ವಿವೇಚನೆಯನ್ನು ಕಲಿಸಿರುತ್ತದೆ. ಆದ್ದರಿಂದ ಇನ್ನೊಬ್ಬರ ಇಚ್ಛೆಯನ್ನು, ಅದರಲ್ಲೂ ನಮ್ಮವರು, ಮನೆಯವರು, ಸ್ನೇಹಿತರು, ಗುರು-ಹಿರುಯರು ಒಳಗೊಂಡು, ನಮ್ಮ ಒಳಿತಿಗೆಂದೇ ಹೇಳುವವರ ಇಚ್ಛೆಯನ್ನು ದುಡಿಯಬಾರದು ಅಥವಾ ಸೇವೆ ಮಾಡಬಾರದು ಎಂದು ಹೇಳಿಕೊಡುವುದು, ಪಾಠಮಾಡುವುದು ಇತ್ಯಾದಿ ಮಾತುಗಳು ನಮಗೆ ಅರ್ಥವಾಗುವುದಿಲ್ಲ.((‘ಇನ್ನೊಬ್ಬರ ಇಚ್ಛೆಯಂತೆ ಸೇವೆ ಮಾಡುವುದು’ ಎನ್ನುವ ಪ್ರಯೋಗವು ಸಮಸ್ಯಾತ್ಮಕ. ಏಕೆಂದರೆ, ‘ಸೇವೆ’ ಎಂಬ ಶಬ್ದವನ್ನು ಸಾಮಾನ್ಯವಾಗಿ ಈ ರೀತಿಯಲ್ಲಿ ಬಳಸುತ್ತೇವೆ: ಗುರು-ಹಿರಿಯರ ಸೇವೆ, ಉರುಳು ಸೇವೆ ಇತ್ಯಾದಿ. ‘ಇಚ್ಛೆಯನ್ನು ಸೇವೆ ಮಾಡುವುದು’ ಎಂದು ನಾವು ಬಳಸುವುದಿಲ್ಲ. ಒಂದುವೇಳೆ ಬಿ.ಎಂ.ಶ್ರೀಯವರ ಭಾಷಾಂತರವಾದ ‘ದುಡಿ’ ಶಬ್ದಕ್ಕೆ ಪರ್ಯಾಯವಾಗಿ ‘ಸೇವೆ’ ಶಬ್ದವನ್ನು ಬಳಸಿದರು, ಇಂಗ್ಲಿಷ್ ಪದ್ಯದ ಸಾಲುಗಳನ್ನು ಅರ್ಥಮಾಡಿಕೊಳ್ಳಲು ಅದು ನೆರವು ಮಾಡುವುದಿಲ್ಲ. ಇದನ್ನು ಕುರಿತು ಈ ಲೇಖನವು ಮುಂದೆ ಚರ್ಚೆ ಮಾಡುತ್ತದೆ.))

ಹೀಗಾಗಿ, ಬಿ.ಎಂ.ಶ್ರೀರವರ ಭಾಷಾಂತರಕ್ಕಿಂತ, ಮೇಲೆ ತೋರಿಸಿರುವ ನಮ್ಮ ಭಾಷಾಂತರವು ಉತ್ತಮ ಭಾಷಾಂತರ ಎಂದು ಹೇಳಲು ಸಾಧ್ಯವಿಲ್ಲ ಹಾಗು ಆ ರೀತಿಯ ವಾದ ಮಾಡುವುದು ನಮ್ಮ ಉದ್ದೇಶವೂ ಅಲ್ಲ. ಏಕೆಂದರೆ, ನಾವು ತೋರಿಸಿರುವ ಅನುವಾದ ಕೂಡ ಕನ್ನಡ ಸಾಲುಗಳನ್ನು ಅರ್ಥಹೀನ ಮಾಡುವುದು ಮಾತ್ರವಲ್ಲದೆ, ಇಂಗ್ಲಿಷ್ ಸಾಲುಗಳು ಏನು ಹೇಳುತ್ತಿವೆ ಎಂಬುದನ್ನು ಅರ್ಥಮಾಡಿಸುವುದಿಲ್ಲ. ಬದಲಿಗೆ ಯುರೋಪಿಯನ್ನರ ಬಗ್ಗೆ ಒಂದು ವಿರೂಪಗೊಂಡ ಅಭಿಪ್ರಾಯ ಸೃಷ್ಟಿಸುತ್ತದೆ. ಅಂದರೆ, ಇಂಗ್ಲಿಷ್ ಕವಿಯು ಹೇಳುವಂತೆ ಸುಖಿಯಾಗಿರುವದಕ್ಕೆ ಇನ್ನೊಬ್ಬನ will(’ಇಚ್ಛೆ’) ಅನ್ನು ಏಕೆ ದುಡಿಯಬಾರದು, (ಸೇವೆ ಮಾಡಬಾರದು) ಮತ್ತು ಏಕೆ ದುಡಿಯಬರದೆಂದು (ಸೇವೆ ಮಾಡಬಾರದೆಂದು) ಶಿಕ್ಷಿತರಾಗಿರಬೇಕು ಹಾಗು will (’ಇಚ್ಛೆ’) ಅನ್ನು ದುಡಿಯುವುದಕ್ಕು (ಸೇವೆ ಮಾಡುವುದಕ್ಕೂ)  ಸುಖಿಯಾಗಿರುವುದಕ್ಕು ಏನು ಸಂಬಂಧ ಎಂದು ತಿಳಿಯುವುದೇ ಇಲ್ಲ.

 ಇಲ್ಲಿಯವರೆಗಿನ ಚರ್ಚೆಯನ್ನು ಇನ್ನೂ ಸ್ಪಷ್ಟಪಡಿಸಿಕೊಳ್ಳಬೇಕೆಂದರೆ, ಬಿ.ಎಂ.ಶ್ರೀಯವರ ಅನುವಾದವಾಗಲಿ ಅಥವಾ ನಮ್ಮ ಅನುವಾದವಾಗಲಿ, ಕನ್ನಡದಲ್ಲಿ ನಮಗೆ ಯುರೋಪಿನ ಸಂಸ್ಕೃತಿಯನ್ನು ತಿಳಿಸುವುದಿಲ್ಲ. ಅಲ್ಲದೆ ಯುರೋಪಿನ ಮೂಲ ಪದ್ಯವನ್ನು ಈ ಅನುವಾದಗಳು ವಿರೂಪಗೊಳಿಸುತ್ತವೆ. ಅದಲ್ಲದೆ ಇನ್ನೊಬ್ಬನ ಇಚ್ಛೆಯನ್ನು ಅಗತ್ಯಕ್ಕನುಸಾರವಾಗಿ, ವಿವೇಚನಾಯುಕ್ತವಾಗಿ ಅನುಸರಿಸುವುದೇ ನಮ್ಮ ಸುಖಜೀವನಕ್ಕೆ ಸೂತ್ರ ಎನ್ನುವ ನಮ್ಮ ಅನುಭವಕ್ಕೆ ವಿರುದ್ಧವಾದದನ್ನು ಹೆನ್ರಿ ವೂಟನ್ ಏಕೆ ಹೇಳುತ್ತಾನೆ? ಹಾಗಾದರೆ ಅವನು ಎಂದಾದರೂ ತನ್ನ ಬದುಕಿನಲ್ಲಿ ಇನ್ನೊಬ್ಬನ ಇಚ್ಛೆಯಂತೆ ನಡೆಯಲೇ ಇಲ್ಲವೇ? ನಡೆಯಲೇ ಇಲ್ಲ ಎಂದು ಹೇಳವುದಕ್ಕೆ ಸಾಧ್ಯವಿದೆಯೆ? ಹೀಗಿರಲು ಬಹುಶಃ ಸಾಧ್ಯವೇ ಇಲ್ಲ. ಏಕೆಂದರೆ ವೂಟನ್ ಸಣ್ಣ ವಯಸ್ಸಿನವನಾಗಿದ್ದಾಗ, ತನ್ನ ತಂದೆ-ತಾಯಿಯರ ಮಾತನ್ನಾದರೂ ಕೇಳಿ, ಅವರ ಇಚ್ಛೆಯಂತೆ ನಡೆದಿರಲೇ ಬೇಕು. ಶಾಲೆಯಲ್ಲಿ ತನ್ನ ಅಧ್ಯಾಪಕರು ಹೇಳಿದ್ದನ್ನು ಕೇಳಿ, ಅವರ ಇಚ್ಛೆಯಂತೆ ಕೆಲಸ ಮಡಿರಲೇ ಬೇಕು. ಒಬ್ಬ ಒಳ್ಳೆಯ ಕವಿಯಾಗಿ ತನ್ನ ಸಮಾಜದಲ್ಲಿ ಹೆಸರುವಾಸಿಯಾಗಿರುವ ಈತನು, ಸಹಜವಾಗಿ ತನ್ನ ಸಮಾಜದ ಸಂಸ್ಕೃತಿಗೆ, ಕಾನೂನಿಗೆ, ಹಿರಿಯರಿಗೆ ಬದ್ಧನಾಗಿ ನಡೆದು ಬೆಳೆದು ಬಂದಿರಲೇಬೇಕು. ಇಲ್ಲವೇ ವೂಟನ್ನನ ಜೀವನದಲ್ಲಿ ಅವನ ಇಚ್ಛೆಯು, ತನ್ನ ಸುತ್ತ-ಮುತ್ತಲಿನ ಜನರ ಇಚ್ಛೆಯೂ ಎಲ್ಲ ವಿಷಯಗಳಲ್ಲೂ ಒಂದೇ ಆಗಿದ್ದಿರಬೇಕು. ಹೀಗೆ ಹೇಳುವುದೂ ಕಷ್ಟಸಾಧ್ಯ. ಏಕೆಂದರೆ, ಮಾಡಬೇಡ ಎಂದು ಹೇಳಿದ್ದನ್ನೇ ಮಾಡುವುದು ಮಕ್ಕಳಲ್ಲಂತೂ ಸಹಜ ಸ್ವಭಾವ. ಹೆನ್ರಿ ವೂಟನ್ನನಿಗೂ ತನ್ನ ಬಾಲ್ಯದಲ್ಲಿ ಇಂತಹದ್ದೇ ಅನುಭವಗಳು ಸಹಜವಾಗಿಯೇ ಇರಲೇಬೇಕು. ಇನ್ನು, ಈ ಕವಿಗೆ ಇನ್ನೊಬ್ಬನ ಇಚ್ಛೆಯನ್ನು ದುಡಿಯಬಾರದು ಎಂದು ಶಿಕ್ಷಣವಾಗಿರಲು ಸಾಧ್ಯವೇ? ಅವನು ಓದುವಾಗ ಶಾಲೆಯಲ್ಲಿ ಅಥವಾ ವಿಶ್ವವಿದ್ಯಾಲಯದಲ್ಲಿ ತನ್ನ ಅಧ್ಯಾಪಕರು ಹೇಳಿದ್ದನ್ನು ಸ್ವಲ್ಪವಾದರೂ ಮಾಡಿರಲೇಬೇಕು ಅಥವಾ ಕೇಳಿರಲೇಬೇಕು. ಅಲ್ಲದೆ ಅವನ ಇಚ್ಛೆಗೆ ವಿರುದ್ದವಾಗಿ, ಬೇರೆಯವರ ಇಚ್ಛೆಯನ್ನು ದುಡಿಯಲು ಅವನಿಗೆ ಶಿಕ್ಷಣವು ದೊರೆತಿರಲೇಬೇಕು.

 ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಯಾವ (ಇನ್ನೊಬ್ಬನ) ಇಚ್ಛೆ ಅಥವಾ willಅನ್ನು ಸೂಕ್ತ ಸಮಯದಲ್ಲಿ ವಿವೇಚನಾಯುಕ್ತವಾಗಿ ದುಡಿಯುವುದರಿಂದ ಸುಖಿಯಾಗಿರುತ್ತೇವೆ ಎಂದು ನಮಗೆ ಕಾಣುತ್ತದೆಯೋ, ಅದೇ ಸಂಗತಿಯನ್ನು (ಇನ್ನೊಬ್ಬನ) ಇಚ್ಛೆ ಅಥವಾ willಅನ್ನು ದುಡಿಯುವುದರಿಂದ ಅಸುಖಿಯಾಗುತ್ತೇವೆ ಎಂದು ಹೆನ್ರಿ ವೂಟನ್ ಹೇಳಲು ಕಾರಣವೇನು? ಈ ಪ್ರಶ್ನೆಗಳಿಂದ ನಮ್ಮ ಮುಂದೆ ಎರಡು ಆಯ್ಕೆಗಳು ಹುಟ್ಟುತ್ತವೆ: (೧) ಇನ್ನೊಬ್ಬರ ಇಚ್ಛೆಯನ್ನು ವಿವೇಚನಾಯುಕ್ತವಾಗಿ ದುಡಿಯುವುದು ಸುಖ ಜೀವನಕ್ಕೆ ಮಾರ್ಗ ಅಥವಾ (೨) ಇನ್ನೊಬ್ಬರ ಇಚ್ಛೆಯನ್ನು ದುಡಿಯದಿರುವುದೇ ಸುಖ ಜೀವನಕ್ಕೆ ಮಾರ್ಗ. ಈ ಎರಡರಲ್ಲಿ ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಆ ರೀತಿ ತೀರ್ಮಾನ ಮಾಡಲು ಹೊರಟರೆ: (೧) ವೂಟನ್ ಹೇಳುತ್ತಿರುವುದು ಅರ್ಥವಿಲ್ಲದ ಮಾತಾಗಿರಬೇಕು ಅಥವಾ (೨) ಅವನು ಹೇಳುತ್ತಿರುವುದು ನಮಗೆ ಅರ್ಥವಾಗದ ಮಾತಾಗಿರಬೇಕು. ಇದರಲ್ಲಿ ಮೊದಲನೆಯ ತೀರ್ಮಾನಕ್ಕೆ ಬರುವುದು ಕಷ್ಟ. ಏಕೆಂದರೆ, ವೂಟನ್ ಒಬ್ಬ ಅತ್ಯಂತ ಹೆಸರುವಾಸಿಯಾದ ಕವಿ ಮತ್ತು ವೂಟನ್ನಿನ ಈ ಪದ್ಯವು ಯುರೋಪಿನಲ್ಲಿ ಗಂಭೀರವಾಗಿ ಚರ್ಚಿತವಾಗಿದೆ. ಅಲ್ಲದೆ ಯುರೋಪಿನ ಸಾಹಿತ್ಯದ ಜಗತ್ತಿನಲ್ಲಿ ಅವನಿಗೆ ಪ್ರಮುಖ ಸ್ಥಾನವನ್ನೂ ನೀಡಲಾಗಿದೆ.  ಅಂತಹ ಜವಾಬ್ದಾರಿಯುತ ವ್ಯಕ್ತಿ ಅರ್ಥವಿಲ್ಲದ ಮಾತನ್ನು ಅಥವಾ ವಾಕ್ಯವನ್ನು ಬರೆಯಲು ಹೇಗೆ ಸಾಧ್ಯ? ಹಾಗಿದ್ದ ಪಕ್ಷದಲ್ಲಿ ಯುರೋಪಿನ ವಿಮರ್ಶಕರು ಸಾಹಿತಿಗಳು ಅರ್ಥಹೀನ ವಾಕ್ಯಗಳಿಗೇಕೆ ಮಹತ್ವದ ಸ್ಥಾನ ನೀಡಿದರು ಎಂಬ ಪ್ರಶ್ನೆ ಹುಟ್ಟಿ ಬಿಡುತ್ತದೆ. ವೂಟನ್ನ ಕುರಿತ ಯುರೋಪಿನ ಚಿಂತಕರು ಮಾತನಾಡುವ ರೀತಿ, ಆತ ಅರ್ಥಹೀನ ವಾಕ್ಯಗಳನ್ನು ಬಳಸುತ್ತಿದ್ದಾನೆ ಎನ್ನುವುದನ್ನು ಸಮರ್ಥಿಸುವುದಿಲ್ಲ. ಆದ್ದರಿಂದ ಅವನಿಗೆ ಹಾಗು ಶತಮಾನಗಳ ಕಾಲ ಯುರೋಪಿನವರಿಗೆ ಅರ್ಥಪೂರ್ಣವಾದ ವಾಕ್ಯವು ನಮಗೆ ಏಕೆ ಅರ್ಥವಾಗುತ್ತಿಲ್ಲ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಈ ಮೇಲೆ ನಾವು ತೋರಿಸಿದಂತೆ ವೂಟನ್ನನ ಕಾವ್ಯವನ್ನು ಕೇವಲ ಭಾಷೆಯ ಸಮಸ್ಯೆಯೆಂದು ಗುರುತಿಸಿ ನಾವು ಯಾವುದೇ ಪ್ರಯತ್ನ ಮಾಡಿದರೂ ನಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಕನ್ನಡ ಭಾಷೆಯಲ್ಲಿ ಇಂಗ್ಲಿಷಿನ ಪದ್ಯವು ನಮಗೆ ಅರ್ಥವಾಗುತ್ತಿಲ್ಲ ಹಾಗೂ ಮೂಲ ಇಂಗ್ಲಿಷ್ ಕಾವ್ಯವನ್ನು ನಮ್ಮ ಅನುವಾದಗಳು ವಿರೂಪಗೊಳಿಸುತ್ತವೆ. ಹಾಗಾದರೆ ವೂಟನ್ನನ ಪದ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೇ? ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಆದರೆ, ಈ ರೀತಿಯಾಗೆ ವಾದಿಸುವುದು ನಮ್ಮ ಸಾಮಾನ್ಯ ಜ್ಞಾನಕ್ಕೆ ವಿರುದ್ಧವಾದ ವಿಚಾರ ಎಂದು ಈಗಾಗಲೇ ನಾವು ನಮ್ಮ ಲೇಖನದಲ್ಲಿ ಸೂಚಿಸಿದ್ದೇವೆ. ಆದ್ದರಿಂದ ವೂಟನ್ನನ ಪದ್ಯವನ್ನು ಅರ್ಥಮಾಡಿಕೊಳ್ಳಲು ನಮ್ಮ ಮುಂದಿನ ಸಾಧ್ಯತೆಗಳನ್ನು ಮುಂದಿನ ಭಾಗದಲ್ಲಿ ಪರಿಶೀಲಿಸೋಣ.

೪. ನಿಘಂಟುಗಳು, ಅರ್ಥ ಮತ್ತು ಭಾಷಾಂತರ

 ಈಗಾಗಲೇ ನಾವು ಗುರುತಿಸಿರುವ ಸಮಸ್ಯೆ, ನಮ್ಮ ಪ್ರಕಾರ, ಹೆನ್ರಿ ವೂಟನ್ ಹೇಳುತ್ತಿರುವ ’will’, ಬಿ.ಎಂ.ಶ್ರೀಯವರ (ಭಾಷಾಂತರದಲ್ಲಿ ಬರುವ) ’ಇಚ್ಛೆ’ ಎರಡೂ ನೇರವಾಗಿ ಸಂಬಂಧಿಸಿದ ಶಬ್ದಗಳಲ್ಲವೆಂಬುದು ನಮ್ಮ ವಾದವಾಗಿದೆ. ಅಲ್ಲದೇ ಈ ’will’ ಎನ್ನುವ ಶಬ್ದವನ್ನು ನಾವು ಸರಿಯಾಗಿ ಗ್ರಹಿಸಿದರೆ ವೂಟನ್ ಬರೆದ ಸಾಲುಗಳು ನಮಗೆ ಅರ್ಥವಾಗುತ್ತವೆ ಎನಿಸುತ್ತದೆ. ಅಲ್ಲದೆ ’will’ ಶಬ್ದಕ್ಕೆ ’ಇಚ್ಛೆ’ ಎನ್ನುವ ಅನುವಾದವು ಇಲ್ಲಿ ಸಮಸ್ಯೆಯನ್ನು ಹುಟ್ಟು ಹಾಕುತ್ತಿರುವಂತೆ ನಮಗೆ ಕಾಣುತ್ತಿದೆ. ’will’ ಎನ್ನುವ ಶಬ್ದದ ’ಇಚ್ಛೆ’ ಎನ್ನುವ ಭಾಷಾಂತರವೇ ನಮಗೆ ಇಲ್ಲಿ ಹೇಳುತ್ತಿರುವುದು ಅರ್ಥವಾಗದಿರುವುದಕ್ಕೆ ಕಾರಣವಿರಬಹುದೇ? ಈ ಪ್ರಶ್ನೆಯನ್ನು ಈಗ ಪರಿಶೀಲಿಸಬೇಕಿದೆ. ಇದರ ಜೊತೆಗೆ ನಮ್ಮ ಹಳೆಯ ಪ್ರಶ್ನೆಗಳು ಅಂದರೆ: ಸುಖಿಯಾಗಿರುವದಕ್ಕೆ ಇನ್ನೊಬ್ಬನ willಅನ್ನು ಏಕೆ ದುಡಿಯಬಾರದು? ಮತ್ತು ಏಕೆ ದುಡಿಯಬರದೆಂದು ಶಿಕ್ಷಿತರಾಗಿರಬೇಕು? ಹಾಗೂ ಇನ್ನೊಬ್ಬನ willಅನ್ನು ದುಡಿಯುವುzಕ್ಕೂ ಸುಖಿಯಾಗಿರುವುದಕ್ಕೂ ಏನು ಸಂಬಂಧ? ಎಂಬಿತ್ಯಾದಿ ಪ್ರಶ್ನೆಗಳು ನಮ್ಮ ಕಣ್ಣಮುಂದಿವೆ.

 ನಾವು ಮೊದಲು ’ಇಚ್ಛೆ’ಗೆ ಸಮಂಜಸವಾದ ಅರ್ಥ ಕೊಡುತ್ತಿದೆ ಎಂದು ಗುರುತಿಸುತ್ತಿರುವ ’will’ ಎಂಬ ಪರಿಕಲ್ಪನೆಯು ಏನಿರಬಹುದು ಎಂದು ತಿಳಿದುಕೊಳ್ಳುವ ಹಾದಿ ಹಿಡಿಯೋಣ. ಈ ಹಾದಿಯಿಂದ ನಮ್ಮ ಬೇರೆ ಪ್ರಶ್ನೆಗಳಿಗೂ ಉತ್ತರ ದೊರಕುವುದೇನೋ ನೋಡೋಣ. ಇಂಗ್ಲಿಷ್ ಭಾಷೆಯ ’will’ ಶಬ್ದದ ಅರ್ಥವೇನು ಎಂಬುದು ಮೊದಲ ಪ್ರಶ್ನೆ. ಹೆಸರುವಾಸಿಯಾದ ಇಂಗ್ಲಿಷ್ ನಿಘಂಟುಗಳಾದ ಆಕ್ಸ್‌ಫರ್ಡ್,((Illustrated Oxford Dictionary. Dorling Kindersley Limited and Oxford University Press, 2011.)) ಕೇಂಬ್ರಿಡ್ಜ್,((Colin McIntosh. editor. Cambridge Advanced Learner’s Dictionary. Cambridge University Press, 2013.)) ವೆಬ್ಸ್ಟರ್((The Merriam-Webster Dictionary. Merriam Webster, Incorporated Springfield, 2016.)) ನಿಘಂಟುಗಳನ್ನು ನೋಡಿದರೆ, ಆ ನಿಘಂಟುಗಳಲ್ಲಿ ’will’ is a faculty or a mental ability (since it includes ability to decide) which allows an individual to choose, decide, desire for or wish for something ಎಂಬ ಅರ್ಥವನ್ನು ನೀಡುತ್ತವೆ. ಈ ನಿಘಂಟುಗಳು ಕೊಡುವ ಈ ಅರ್ಥವನ್ನು ಇಂಗ್ಲಿಷ್ ಸಾಲಿನಲ್ಲಿ ಬರುವ ’will’ ಶಬ್ದದ ಸ್ಥಳದಲ್ಲಿ ಪರ್ಯಾಯವಾಗಿ ಬಳಸಿ ಓದಿನೋಡೋಣ ಮತ್ತು ಹಾಗೆ ಓದಿದಾಗhow happy is he born or not that serves not another’s faculty or a mental ability (since it includes ability to decide) which allows an individual to choose, decide, desire for or wish for something ಎಂದು ಓದಬೇಕಾಗುತ್ತದೆ. ಈ ಇಂಗ್ಲಿಷ್ ಶಬ್ದಾರ್ಥದಿಂದ ’will’ ಎನ್ನುವುದು ವ್ಯಕ್ತಿಯೊಬ್ಬನಿಗೆ ಯಾವುದನ್ನಾದರು ಆಶಿಸುವ, ಬಯಸುವ ಅಥವಾ ಯಾವುದನ್ನಾದರೂ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಮಾಡುವ mental ability  ಎಂದು ತಿಳಿಯುತ್ತದೆ.

 ಮೇಲ್ನೋಟಕ್ಕೆ ಇದು ಅರ್ಥವಾದಂತೆ ಕಾಣಬಹುದು. ಅಲ್ಲದೆ, ಕನ್ನಡದ ನಿಘಂಟುಗಳಲ್ಲೂ ’ಇಚ್ಛೆ’ ಶಬ್ಧಕ್ಕೆ ಹೆಚ್ಚುಕಡಿಮೆ ಇಂಗ್ಲಿಷ್ ನಿಘಂಟು ಕೊಡುವ ಶಬ್ಧಾರ್ಥವನ್ನೇ ಕೊಡಲಾಗಿದೆ. ಉದಾಹರಣೆಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟಿನಲ್ಲಿ((ಸಂಕ್ಷಿಪ್ತ ಕನ್ನಡ ನಿಘಂಟು. ಕನ್ನಡ ಸಾಹಿತ್ಯ ಪರಿಷತ್ತು, 1977.)) ’ಇಚ್ಛೆ’ ಶಬ್ದಕ್ಕೆ ಇಂಗ್ಲಿಷ್ ನಲ್ಲಿರುವಹಾಗೆ ಅಪೇಕ್ಷೆ, ಬಯಕೆ (wish or desire) ಎಂಬ ಅರ್ಥಗಳಿರುವುದನ್ನು ನೋಡಬಹುದು. ಹೀಗಾಗಿ ಇನ್ನೊಬ್ಬರ ಅಪೇಕ್ಷೆ ಅಥವಾ wish, ಬಯಕೆ ಅಥವಾ desire ಅನ್ನು ದುಡಿಯದೆ ಹಾಗು ದುಡಿಯಬೇಕೆಂದು ಶಿಕ್ಷಿತನಾಗಿರದೆ, ತನ್ನ ಅಪೇಕ್ಷೆ ಅಥವಾ wish,  ಬಯಕೆ ಅಥವಾ desire ಅನ್ನು ದುಡಿಯುವವನು ಹಾಗೂ ದುಡಿಯಬೇಕೆಂದು ಶಿಕ್ಷಿತನಾಗಿರುವವನು ಸುಖಿ ಎಂದಷ್ಟೇ ಹೆಳಬೇಕಾಗುತ್ತದೆ ವಿನಹ ನಮ್ಮ ಅನುಭವದಲ್ಲಿ ’ಇಚ್ಛೆ’ ಶಬ್ದವನ್ನು ’will’ ಎನ್ನುವ ಶಬ್ದಕ್ಕೆ ಭಾಷಾಂತರವಾಗಿ ಬಳಸುವುದು ಸಮಸ್ಯಾತ್ಮಕವಾಗಿ ಏಕೆ ತೋರುತ್ತಿದೆ ಎಂದು ವಿವರಿಸಲಾಗುವುದಿಲ್ಲ. ಹಾಗೂ, ಇನ್ನೊಬ್ಬರ willಅನ್ನು ಏಕೆ ದುಡಿಯಬಾರದು ಮತ್ತು ಏಕೆ ದುಡಿಯಬರದೆಂದು ಶಿಕ್ಷಿತರಾಗಿರಬೇಕು ಹಾಗೂ willಅನ್ನು ದುಡಿಯುವುದಕ್ಕೂ ಸುಖಿಯಾಗಿರುವುದಕ್ಕೂ ಏನು ಸಂಬಂಧ ಎಂಬುದನ್ನೂ ವಿವರಿಸಲಾಗುವುದಿಲ್ಲ. ಆದ್ದರಿಂದ ಯಾವುದೇ ರೀತಿಯ ಭಾಷೆ-ವ್ಯಾಕರಣಾದಿ ವಿಚಾರಗಳಿಂದ ನಮಗೆ ವೂಟನ್ನನ ಪದ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿಘಂಟುಗಳ ಶಬ್ದಾರ್ಥಗಳನ್ನು ಬಿಟ್ಟು ಬೇರೆ ಏನಾದರೂ ಮಾಡಬಹುದೇ ನೋಡೋಣ.

 ೫. ಭಾಷಾಂತರ: ಭಾಷೆ ಆಚೆಗಿನ ಸಾಂಸ್ಕೃತಿಕ ಭಿನ್ನತೆಯ ಸಮಸ್ಯೆಯಾಗಿ

 ನಮ್ಮ ಚರ್ಚೆಯನ್ನು ’will’ ಎನ್ನುವ ಇಂಗ್ಲಿಷ್ ಶಬ್ದದ ಮೇಲೆ ಕೇಂದ್ರೀಕರಿಸಿ ಸ್ವಲ್ಪ ಆಲೋಚಿಸಲು ಪ್ರಯತ್ನಿಸೋಣ. ’will’ ಎಂಬ ಇಂಗ್ಲಿಷ್ ಶಬ್ದವನ್ನು ಒಂದು ಪರಿಕಲ್ಪನೆಯ ರೂಪದಲ್ಲಿ ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಬಳಕೆ ಮಾಡುವ ರೀತಿಯನ್ನು ನಾವು ಈ ಸಂದರ್ಭದಲ್ಲಿ ಗಂಭೀರವಾಗಿ ಗಮನಿಸಬಹುದು. ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ’will’ ಪರಿಕಲ್ಪನೆಯನ್ನು ಹೇಗೆ ಚರ್ಚಿಸಿದ್ದಾರೆ ಎಂಬುದನ್ನು ತಿಳಿದರೆ, ಅದರ ಹಿನ್ನೆಲೆಯಲ್ಲಿ ವೊಟನ್ನನ್ನ ವಾಕ್ಯಗಳು ಅರ್ಥವಾಗಬಹುದೇನೋ ಎನ್ನುವುದು ನಮ್ಮ ಸಾಧ್ಯತೆಗಳಲ್ಲೊಂದು. ಆದರೆ, ಇಲ್ಲೊಂದು ಸಮಸ್ಯೆ ಇದೆ. ವೋಟನ್ನನ್ನ ವಾಕ್ಯವನ್ನು ಥಿಯಾಲಜಿಯಲ್ಲಿ ಬರುವ ’will’ ಚರ್ಚೆಯನ್ನೇ ಹಿನ್ನೆಲೆಲ್ಲಿಟ್ಟುಕೊಂಡು ಏಕೆ ಓದಬೇಕು? ಎಂಬ ಪ್ರಶ್ನೆ ಸಹಜವಾಗಿ ನಮಗೆ ಬರುತ್ತದೆ. ಹಾಗೆ ಓದುವುದು ಸಮಂಜಸ ಏಕೆಂದರೆ ’will’ ಎಂಬ ಇಂಗ್ಲಿಷ್ ಪದವನ್ನು ಇಂಗ್ಲಿಷ್ ಭಾಷೆಯು ಮೂಲತಃ ಕ್ರಿಶ್ಚಿಯಾನಿಟಿಯಿಂದ ಎರವಲು ಪಡೆದುಕೊಂಡಿದೆ. ಈ ಶಬ್ದಕ್ಕೆ ಅನೇಕ ಅರ್ಥಗಳು ಇವೆ. ಆದರೆ ’will’ ಎಂಬ ಶಬ್ದದ ನಾಮಪದದ ರೂಪವು ಇಂದಿಗೂ ಕ್ರಿಶ್ಚಿಯನ್ ಥಿಯಾಲಜಿಯ ಮೂಲರೂಪದಲ್ಲಿ ಯೂರೋಪಿನ ಸಮುದಾಯಗಳಲ್ಲಿ ಬಳಕೆಯಾಗುತ್ತದೆ.((ಉದಾಹರಣೆ ಇವುಗಳನ್ನು ನೋಡಬಹುದು: “She was a powerful ruler, used to imposing her will.”; “For once politicians are listening to the will of the people”; He claims he was held in the flat against
his will” (https://www.macmillandictionary.com/dictionary/british/will_2))) ಹಾಗಾಗಿ ವೂಟನ್ನನ್ನ ವಾಕ್ಯಗಳನ್ನು ಥಿಯಾಲಜಿಯ ಚರ್ಚೆಯಲ್ಲಿ ಬರುವ ’will’ಅನ್ನು ಹಿನ್ನೆಯಲ್ಲಿಟ್ಟುಕೊಂಡು ಓದುವುದು ನಮ್ಮ ಮುಂದಿರುವ ಏಕೈಕ ಮಾರ್ಗ ಎನ್ನುವುದು ಅತ್ಯಂತ ಸಮಂಜಸ. ಅಲ್ಲದೆ ಹೆನ್ರಿ ವೂಟನ್ನನ ಪ್ರಸ್ತುತ ಪದ್ಯವು ಒಂದು ರಿಲೀಜಿಯಸ್ ಹಿನ್ನೆಲೆಯ ಪದ್ಯವೇ ಆಗಿದೆ.((Isabel Rivers. Classical and Christian Ideas in English Renaissance Poetry. Routledge, 1994.)) ಅಷ್ಟೇ ಅಲ್ಲ ಅವನ ಕಾಲಾವಧಿಯಲ್ಲಿ ಬರುವ ಸಾಹಿತ್ಯಕಾರರು, ಕವಿಗಳು ಹೆಚ್ಚಾಗಿ ಅಂದಿನ ಯುರೋಪಿನ ರಿಲೀಜನ್ನಿನ ವಿಚಾರಗಳನ್ನೇ ಕುರಿತು ಬರೆಯುವವರೇ ಆಗಿದ್ದರು.((Ibid)) ಹೆನ್ರಿ ವೋಟನ್ನನು ಸ್ವತಃ ಒಬ್ಬ ರಿಲೀಜಿಯಸ್ ವ್ಯಕ್ತಿಯಾಗಿದ್ದನು. ಅವನ ಕುರಿತು ಬರೆದಿರುವ ಕೆಲ ವಿಮರ್ಶಕರು ’ಪ್ರೊಟೆಸ್ಟಂಟ್ ಮಿಲಿಟೆಂಟಿಸಮ್’ ವಿಚಾರದ ಚರ್ಚೆಯ ಸಂದರ್ಭದಲ್ಲಿ ಹೆನ್ರಿ ವೂಟನ್ನನ ಬಗ್ಗೆ ಮಾತನಾಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.((Henrey Craik. English Prose: From the 16th century to the restoration. McMillan and Co., 1920.)) ಈ ಎಲ್ಲ ಕಾರಣಗಳಿಂದ, ಹೆನ್ರಿ ವೂಟನ್ ಬರೆದಿರುವ ಪದ್ಯದಲ್ಲಿ ’will’ ಎಂಬ ಪರಿಕಲ್ಪನೆಯನ್ನು ಕ್ರಿಶ್ಚಿಯನ್ ಥಿಯಾಲಜಿಯಲ್ಲಿನ ಚರ್ಚೆಯಲ್ಲಿ ಚರ್ಚಿಸುವ ಬಗೆಯನ್ನು ಸ್ಥೂಲವಾಗಿ ಗಮನಿಸಿ, ಅದರ ಮೂಲಕ ನಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದೋ ನೋಡೋಣ. ಇದಷ್ಟೇ ಅಲ್ಲದೆ ’will’ ಎಂಬ ಇಂಗ್ಲಿಷಿನ ನಾಮ ಪದಕ್ಕೆ ಕ್ರಿಶ್ಚಿಯನ್ ಥಿಯಾಲಜಿಯ ಹೊರಗಿನ ಯಾವುದೇ ಅರ್ಥಗಳು ಕಂಡುಬರುವಂತೆ ತೋರುವುದಿಲ್ಲ.

 ಕ್ರಿಶ್ಚಿಯನ್ ಥಿಯಾಲಜಿಯ ಪ್ರಕಾರ ’will’ ಅಂದರೆ ಮನುಷ್ಯನೊಳಗಿರುವ ’God’ನ ಪ್ರತಿರೂಪವೇ ಆಗಿದೆ.((‘Will’ in

Baker’s Evangelical Dictionary of Biblical Theology: https://www.biblestudytools.com/dictionaries/bakers-evangelical-dictionary/will.html; Ian A. McFarland, David A.S. Fergusson et.al. editors, The Cambridge Dictionary of Christian Theology. Cambridge University Press, 2011; John L. McKenzie SJ editor, Dictionary of the Bible. Asian Trading Corporation, 1983.)) Godನ ಪ್ರತಿರೂಪವು ಮನುಷ್ಯನೊಳಗಿರುವುದರಿಂದ, ಆ ಪ್ರತಿರೂಪವು ಮನುಷ್ಯನಿಗೆ ತನ್ನ ಜೀವನದ ಕುರಿತು ಇರುವ Godನ ಉದ್ದೇಶವನ್ನು ತಿಳಿಸಿಕೊಡುತ್ತದೆ. ಹೀಗೆ ಮನುಷ್ಯನು ತನ್ನ will, ಅಂದರೆ ತನ್ನೊಳಗಿರುವ Godನ ಪ್ರತಿರೂಪವು ಹೇಳುವ ಹಾಗೆ ನಡೆದುಕೊಂಡರೆ, ಆ ಮನುಷ್ಯನು ಸುಖಿಯಾಗಿರುತ್ತಾನೆ. ಏಕೆಂದರೆ ಒಬ್ಬ ಒಳ್ಳೆಯ ಕ್ರೈಸ್ತ ವ್ಯಕ್ತಿಯು salvation ಪಡೆಯಲು, ತನ್ನ ಬದುಕಿನಲಿ Godನ ಉದ್ದೇಶವನ್ನು ನೆರವೇರಿಸುವುದರಿಂದ ಮಾತ್ರ ಸಾಧ್ಯ.((will ಶಬ್ದದ ಕುರಿತು ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಯುರೋಪಿಯನ್ನರು ಸಾವಿರಾರು ವರ್ಷಗಳ ಕಾಲ ವಿಸ್ತಾರವಾದ ಚರ್ಚೆಗಳನ್ನು ಮತ್ತು ವಾದ-ವಿವಾದಗಳನ್ನು ಮಾಡಿದ್ದಾರೆ. ನಮ್ಮ ಲೇಖನಕ್ಕೆ ಆ ಚರ್ಚೆಗಳು ಅಷ್ಟು ಪ್ರಮುಖವಲ್ಲ. ಅಲ್ಲದೇ ನಾವು ಇಲ್ಲಿ ವಿವರಿಸಿರುವ will ಶಬ್ದದ ಅರ್ಥವನ್ನು ಈ ಎಲ್ಲ ಚರ್ಚೆಗಳು ಮೂಲಭೂತವಾಗಿ ಒಪ್ಪಿಕೊಳ್ಳುತ್ತವೆ.)) ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಮನುಷ್ಯನಿಗೂ God ಪ್ರತ್ಯೇಕವಾಗಿ ಬೇರೆ ಬೇರೆ ಉದ್ದೇಶವನ್ನು ಕೊಟ್ಟಿರುವುದರಿಂದ, ಪ್ರತಿ ಮನುಷ್ಯನೂ ತನ್ನ salvationನ್ನಿಗೋಸ್ಕರ, ತನ್ನ will ಅಂತೆಯೇ ನಡೆಯಬೇಕು. ಅಂದರೆ ತನ್ನ willನಂತೆ ನಡೆದುಕೊಳ್ಳುವುದು ಎಂದರೆ ಸೃಷ್ಟಿಕರ್ತ God willನಂತೆ ನಡೆದುಕೊಳ್ಳುವುದು ಎಂಬ ಅರ್ಥವೇ ಆಗುತ್ತದೆ ಹಾಗೂ ಪ್ರತಿಯೊಬ್ಬರಿಗೂ God ಬೇರೆ ಬೇರೆ ಉದ್ದೇಶಗಳನ್ನು ಸೃಷ್ಟಿಸಿರುವುದರಿಂದ ಬೇರೆಯವರ willಅನ್ನು ಅನುಸರಿಸುವುದು God ಅಣತಿಗೆ ವಿರೋಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಯುರೋಪಿನವರು ಮಾತನಾಡುವಾಗ “Man is born free, and everywhere he is in chains”((ರೂಸೋ ಎಂಬ political philosopherನ ಮಾತು – On the Social Contract; or Principles of Political Rights (French: Du contract social; ou Principes du droit politique) – 1762, translated with an Historical and Critical Introduction and Notes by H.J. Tozer Etc in 1895. Swan Sonnenschein & Company, London. ಅಂದರೆ ಹುಟ್ಟುವಾಗ ತನ್ನ will ಅನುಸರಿಸಲು ಸ್ವತಂತ್ರನಾಗಿರುತ್ತಾನೆ ಮತ್ತು ಆತ ಹುಟ್ಟಿದಾಗ ಇನ್ನೊಬ್ಬರ willನ ಅಧೀನಕ್ಕೆ ಒಳಪಡದೆ ಇರುವವನಾಗಿರುತ್ತಾನೆ. ಈ ಜಗತ್ತಿನಲ್ಲಿ, ಸಮಾಜದಲ್ಲಿ ಬದುಕಲು ಕಲಿಯುತ್ತಾ ತದನಂತರ ಮನುಷ್ಯನು ಈ ಜಗತ್ತಿನ ನಿಯಮಗಳು, ವ್ಯವಹಾರಗಳಿಗೆ ಒಳಪಟ್ಟು ಬೇರೆಯವರ willನ ಅಧೀನಕ್ಕೆ ಒಳಪಡುತ್ತಾನೆ. ಆ ಕಾರಣದಿಂದಲೇ ಸರಪಳಿಗಳಿಂದ ಬಂಧಿಸಲ್ಪಡುತ್ತಾನೆ ಎಂದು ಹೇಳಲಾಗುತ್ತದೆ ಮತ್ತು ಈ ಸರಪಳಿಗಳಿಂದ ಬಿಡುಗಡೆ ಅಥವಾ ವಿಮೋಚನೆ ಹೊಂದಲು ಆತ ಹೋರಾಡಬೇಕಾಗುತ್ತದೆ. ಈ ಮಾತುಗಳು ಯುರೋಪಿನ ಎನ್‍ಲೈಟನ್‍ಮೆಂಟ್ ಚಿಂತಕರಲ್ಲಿ ಸೆಕ್ಯುಲರ್ ರೂಪದಲ್ಲಿ ಹೇರಳವಾಗಿ ಕಾಣಿಸುತ್ತವೆ ಮತ್ತು ಈ ಮಾತುಗಳು ಯುರೋಪಿನವರಿಗೆ ಇಂದೂ ಸಾಮಾನ್ಯ ಜ್ಞಾನವಾಗಿದೆ. ಈ ಕುರಿತು ಯುರೋಪಿನಲ್ಲಿ ಶತಮಾನಗಳ ಕಾಲ ಬೇರೆ ಬೇರೆ ವಿಷಯಗಳನ್ನು ಚರ್ಚಿಸಿದ್ದಾರೆ. ಆ ಎಲ್ಲಾ ಚರ್ಚೆಗಳೂ ಈ ಲೇಖನಕ್ಕೆ ಪ್ರಮುಖವಾದದ್ದಲ್ಲ.)) ಎನ್ನುವಂತಹ ವಾಕ್ಯಗಳು ನಮ್ಮ ಗಮನಕ್ಕೆ ಯುರೋಪಿನ ಚಿಂತಕರಿಂದ ಸಿಗುತ್ತವೆ. ಅಂದರೆ ಮನುಷ್ಯನೊಬ್ಬನು ಹುಟ್ಟಿದಾಗ ಅವನು Godನ ಪ್ರತಿರೂಪವನ್ನು ತನ್ನೊಳಗೆ ಇಟ್ಟ್ಟುಕೊಂಡು ಹುಟ್ಟಿರುತ್ತಾನೆ. ಕಾಲ ಕ್ರಮೇಣ, ತಾನು ಬೆಳೆಯುವಾಗ ಅವನು ಈ ಜಗತ್ತಿನ ವಿಚಾರಗಳಿಂದ ಪ್ರಭಾವಿತನಾಗಿ, God ಅಣತಿಯಿಂದ ದೂರಹೋಗುತ್ತಾನೆ ಇತ್ಯಾದಿಯಾಗಿ ಸಾವಿರಾರು ವರ್ಷಗಳಿಂದ ಕ್ರಿಶ್ಚಿಯನ್ ಸಮುದಾಯದಲ್ಲಿ ಮಾತನಾಡುತ್ತಾ ಬಂದಿದ್ದಾರೆ. ಇಂದಿನ ಯುರೋಪಿನ ಸಮಾಜದಲ್ಲಿ ಈ ವಾಕ್ಯಗಳ ಥಿಯಾಲಜಿಯ ಹಿನ್ನೆಲೆ ತಿಳಿಯದಿದ್ದರೂ ಯೂರೋಪಿನ ಜನರಿಗೆ ಈ ವಾಕ್ಯಗಳು ಅರ್ಥವಾಗುತ್ತವೆ. ಅಷ್ಟೆ ಅಲ್ಲದೇ ಈ ವಾಕ್ಯಗಳು ಅವರ ಜೀವನಕ್ಕೆ ಉಪಯುಕ್ತವಾಗಿವೆ. ಯಾವ ರೀತಿಯಲ್ಲಿ ಥಿಯಾಲಜಿಯಲ್ಲಿ ಈ ವಾಕ್ಯಗಳನ್ನು ಬಳಸಲಾಗುತ್ತದೋ ಅದೇ ರೀತಿ ಈ ವಾಕ್ಯಗಳು ಇಂದಿಗೂ ಪಶ್ಚಿಮದ ಸಮಾಜದ ಜನರಿಗೆ ಬಹಳ ಅರ್ಥಪೂರ್ಣವಾಗಿ ಕಾಣಿಸುತ್ತವೆ.

 ಈ ಥಿಯಲಜಿಕಲ್ ವಿವರಣೆಯಿಂದ, ಹೆನ್ರಿ ವೂಟನ್ ಹೇಳುತ್ತಿರುವುದು ಅರ್ಥಪೂರ್ಣ ವಾಕ್ಯವಾಗುವಂತೆ ತೋರುತ್ತದೆ. ಯಾರು ಇನ್ನೊಬ್ಬನ willಅಂತೆ ನಡೆಯದೇ ಇರಲು ಹುಟ್ಟಿರುತ್ತಾನೋ ಮತ್ತು ಅದಕ್ಕಾಗಿ ಶಿಕ್ಷಿತನಾಗಿರುತ್ತಾನೋ ಅವನು ಸುಖಿ, ಏಕೆಂದರೆ ಇನ್ನೊಬ್ಬನ willಅಂತೆ ನಡೆಯದೇ ತನ್ನ willಅಂತೆ ನಡೆಯುವವನು, Godನ ಉದ್ದೇಶವನ್ನು ನೆರವೇರಿಸುವವನಾಗಿದ್ದು, ಅದೇ ಕ್ರಿಶ್ಚಿಯನ್ ಒಬ್ಬನ ಪರಮ ಗುರಿಯಾಗಿರಬೇಕು. ಹೀಗೆ ಕ್ರಿಶ್ಚಿಯನ್ ಥಿಯಾಲಜಿಯ ಹಿನ್ನೆಲೆಯಲ್ಲಿ ಈ ಸಾಲುಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಆಗ ಮಾತ್ರ ಇನ್ನೊಬ್ಬನ will ದುಡಿಯದಿರುವುದು, ದುಡಿಯಬಾರದೆಂದು ಶಿಕ್ಷಿತನಾಗಿರುವುದು ಎನ್ನುವ ಮಾತು ಹೇಗೆ ಸುಖಿಯಾಗಿರುವುದಕ್ಕೆ ಕಾರಣವೆಂದು ವಿವರಿಸುತ್ತಿದೆ ಎಂದು ತಿಳಿಯಬದು. ಮತ್ತು ಈ ದೃಷ್ಟಿಯಿಂದ ನೋಡಿದಾಗ, ’will’ ಎಂಬುದು ಮನುಷ್ಯನಲ್ಲಿರುವ God will ಆಗಿರುವುದರಿಂದ ಮತ್ತು ಅದನ್ನೇ ದುಡಿಯುವುದರ ಮೂಲಕ ಮುಂದೆ ಸುಖ ಪ್ರಾಪ್ತಿಯಾಗುವುದರಿಂದ, ಅದು ಯುರೋಪಿನ ಜನರಿಗೆ ಸಾಮಾನ್ಯ ಜ್ಞಾನ. ಈ ವಾಕ್ಯಗಳು ನಮ್ಮ ಗುರು-ಹಿರಿಯರ ಸಲಹೆಯಂತೆ ನಡೆದು ಸುಖಿಯಾಗುವ ರೀತಿಯ ಪ್ರಶ್ನೆಯಲ್ಲ. ವೂಟನ್ನ ಸಂದರ್ಭದಲ್ಲಿ, ವ್ಯಕ್ತಿಯೊಬ್ಬನು ಇನ್ನೊಬ್ಬನ will ದುಡಿಯುವುದು God willಅನ್ನು ದುಡಿದಂತೆ ಆಗದಿರುವುದರಿಂದ ಅವನು ಅಸುಖಿಯಾಗುತ್ತಾನೆ. willನ ಕುರಿತ ನಮ್ಮ ವಿವರಣೆಯಿಂದ will’ ಮತ್ತು ’ಇಚ್ಛೆ’ ಒಂದಕ್ಕೊಂದು ಸಂಬಂಧಪಡದ ವಿಭಿನ್ನ ಅರ್ಥ ಪ್ರಪಂಚಕ್ಕೆ ಸೇರಿವೆ ಎಂಬುದು ಸ್ಪಷ್ಟವಾಗಿತ್ತದೆ. ಎರಡನೆಯದಾಗಿ, ನಿಘಂಟುಗಳ ಶಬ್ದಾರ್ಥಗಳಿಂದ ಬಗೆಹರಿಯದ ಸಮಸ್ಯೆಯು, ’will’ ಎನ್ನುವ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡಾಗ ಸ್ಪಷ್ಟವಾಗತೊಡಗುತ್ತದೆ. ಅಲ್ಲದೆ ನಿಘಂಟುಗಳು ಈ ಸಾಲುಗಳನ್ನು ಅರ್ಥಮಾಡಿಸುವುದಲ್ಲಿ ಸೋಲುತ್ತವೆ. ಹಾಗಾಗಿ, ಮೇಲಿನ ಚರ್ಚೆಯು, ನಮ್ಮ ಮುಂದಿನ ಸಮಸ್ಯೆ ಭಾಷೆಯ ಸಮಸ್ಯೆಯಲ್ಲ, ಬದಲಿಗೆ ನಮಗೆ ಪಾಶ್ಚಾತ್ಯ ಸಮಾಜದ ಕುರಿತು ಸರಿಯಾದ ತಿಳಿವಳಿಕೆ ಇಲ್ಲದೆ ಇರುವುದರಿಂದ ಹುಟ್ಟುವ ಸಮಸ್ಯೆಯಾಗಿ ಕಾಣಿಸುತ್ತದೆ.

ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಥಿಯಾಲಜಿಗೆ ಸಂಬಂಧಿಸಿದ ವಿವರಣೆಯೊಂದು ಹೇಗೆ ಪಾಶ್ಚಾತ್ಯ ಸಮಾಜದ ವಿವರಣೆಯಾಗಿಬಿಡುತ್ತದೆ ಎನ್ನುವ ಪ್ರಾಶ್ನೆ ಹುಟ್ಟುತ್ತದೆ. ಈ ಪ್ರಶ್ನೆಯ ವಿಸ್ತಾರವಾದ ವಿವರಣೆಗೆ ಹೋಗದೆ ಸರಳವಾಗಿ ಹೇಳಬೇಕೆಂದರೆ, ಯುರೋಪಿನ ಜಗತ್ತು ಇಂದು ಇರುವ ರೀತಿಯನ್ನು, ಸರಿಸುಮಾರು ಎರಡು ಸಾವಿರ ವರುಷಗಳ ಕಾಲ ಕ್ರಿಶ್ಚಿಯನ್ ರಿಲೀಜನ್ ಪ್ರಭಾವಿಸಿದೆ. ಹಾಗಾಗಿ ಯುರೋಪಿನ ಸಂಸ್ಕೃತಿಯನ್ನು ಅರ್ಥೈಸುವಾಗ ಕ್ರಿಶ್ಚಿಯಾನಿಟಿ ಎಂಬ ರಿಲೀಜನ್ನಿನ ತಿಳಿವಳಿಕೆ ಇಲ್ಲದಿದ್ದರೆ ಅವರ ಸಾಂಸ್ಕೃತಿಕ ಜಗತ್ತು ನಮಗೆ ಅರ್ಥವಾಗುವುದಿಲ್ಲ.((ಹೆಚ್ಚಿನ ಮಾಹಿತಿಗಾಗಿ ಈ ಮುಂದೆ ಸೂಚಿಸಿರುವ ಆಕರಗಳನ್ನು ಗಮನಿಸಬಹುದು: Balagangadhara S.N. “The Heathen in his Blindness….” Asia, the Westand the Dynamic of Religion. 2nd ed., Manohar Publishers, 2005; Balagangadhara S.N. “Comparative Anthropology and Action Sciences: An Essay on Knowing to Act and Acting to Know” Philosophica, vol. 40, 1987.)) ಅಷ್ಟೇ ಅಲ್ಲ ಯುರೋಪಿನ ಆಡುಭಾಷೆಗಳಲ್ಲಿ ಕ್ರಿಶ್ಚಿಯನ್ ಥಿಯಾಲಜಿಯ ಪರಿಭಾಷೆಗಳು ಸೇರಿಹೋಗಿದ್ದು ಯುರೋಪಿನವರಿಗೆ ತಮ್ಮ ದಿನನಿತ್ಯದ ಮಾತುಕಥೆಗಳಲ್ಲಿ ಅವು ತಮ್ಮ ಅನುಭವಕ್ಕೆ ದಕ್ಕುತ್ತವೆ. ನಮಗೆ ಆ ಅನುಭವಗಳು ದಕ್ಕುವುದಿಲ್ಲ. ಹಾಗೂ ಈ ಅನುಭವಗಳನ್ನು ಕ್ರಿಶ್ಚಿಯನ್ ಥಿಯಾಲಜಿಯನ್ನು ಸರಿಯಾಗಿ ಗ್ರಹಿಸದೆ ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.((ಏಕೆಂದರೆ, ‘God’, ‘will’, ‘grace’, ‘salvation’, ‘worship’ ಇತ್ಯಾದಿ ಶಬ್ದಗಳು ನಮ್ಮ ಸಮಾನ್ಯ ಭಾಷಾಬಳಕೆಯಲ್ಲಿದ್ದರೂ, ಕನ್ನಡದಲ್ಲಿ ಬಳಸುವ ಇಂಗ್ಲಿಷ್ ಶಬ್ದಗಳಾದ ‘bus’ (ಬಸ್ಸು), ‘car’ (ಕಾರು), ‘pen’ (ಪೆನ್ನು) ಇತ್ಯಾದಿಗಳ ಹಾಗಿರದೆ, ಕ್ರಿಶ್ಚಿಯನ್ ಥಿಯಾಲಜಿಗೆ ಸೇರಿದ ಪರಿಕಲ್ಪನೆಗಳಾಗಿವೆ. ಹೀಗಾಗಿ, ಕ್ರಿಶ್ಚಿಯನ್ ಥಿಯಾಲಜಿಯನ್ನು ಸರಿಯಾಗಿ ಗ್ರಹಿಸದೆ ಅವುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಯುರೋಪಿನ ಭಾಷೆಗಳು, ತಮ್ಮ ಆಡುಭಾಷೆಯಲ್ಲಿ ಹೇರಳವಾಗಿ ಥಿಯಾಲಜಿಯ ಪರಿಕಲ್ಪನೆಗಳನ್ನು ಬಳಸಿಕೊಂಡಿವೆ. ಈ ಥಿಯಾಲಜಿಯ ಪರಿಕಲ್ಪನೆಗಳು ಯುರೋಪಿನ ಸಮಾಜದ ಅನುಭವದ ಜಗತ್ತು ಮತ್ತು ಭಾಷೆಗಳನ್ನು ತೀವ್ರವಾಗಿ ಪ್ರಭಾವಿಸಿವೆ. ಹಾಗಾಗಿ ಯುರೋಪಿನ ಜನರು ರಿಲೀಜಿಯಸ್ ಆಗಿದ್ದರೂ ಅಥವಾ ರಿಲೀಜಿಯಸ್ ಅಲ್ಲದಿದ್ದರೂ ಈ ಥಿಯಾಲಜಿಯ ಪರಿಭಾಷೆಗಳನ್ನು ಸರಿಯಾಗಿ ಗ್ರಹಿಸುತ್ತಾರೆ.)) ಅಂದರೆ, ಭಾಷಾಂತರದ ಸಮಸ್ಯೆ ಎಂದು ಗುರುತಿಸಲಾದ ಈ ಸಮಸ್ಯೆಯು ಭಾಷೆಯ ಅಥವಾ ಶಬ್ಧಾರ್ಥದ ಸಮಸ್ಯೆಯಾಗಿರದೆ, ಇನ್ನೊಂದು ಸಾಂಸ್ಕೃತಿಕ ಜಗತ್ತಿನ ಪರಿಕಲ್ಪನೆಗಳನ್ನು ಗ್ರಹಿಸುವುದಕ್ಕೆ ಸಂಬಂಧಪಟ್ಟದ್ದಾಗಿದೆ ಎಂಬುದು ಈಗ ಸ್ಪಷ್ಟವಾಗುತ್ತದೆ.

ಬಿ.ಎಂ.ಶ್ರೀರವರ ಕನ್ನಡ ಭಾಷಾಂತರವು, ಶಬ್ಧಾರ್ಥಗಳ (ನಿಘಂಟು, ಭಾಷೆಯ ತಿಳಿವಳಿಕೆ) ಆಧಾರದ ಮೇಲೆ ಅನುವಾದಗೊಂಡಿದೆ ಎಂಬುದೂ ಈಗ ಗೋಚರವಾಗುತ್ತದೆ. ಈಗಾಗಲೇ ನೋಡಿದ ಹಾಗೆ ’ಇಚ್ಛೆ’ ಮತ್ತು ’will’ ಎಂಬ ಶಬ್ದಗಳಿಗೆ ನಿಘಂಟುಗಳು ತೀರ ಹತ್ತಿರದ ಅರ್ಥಕೊಡುವುದರಿಂದ, ’will’ ಶಬ್ದಕ್ಕೆ ’ಇಚ್ಛೆ’ ಶಬ್ದವನ್ನು ನೇರವಾಗಿ ಬಿ.ಎಂ.ಶ್ರೀಯವರು ಬಳಸಿದ್ದಿರಬಹುದು. ಹೀಗಾಗಿ, ನಮ್ಮ ಅನುಭವದ ದೃಷ್ಟಿಯಲ್ಲಿ ತೋರಿಬರುವ ವೈರುಧ್ಯ, ಅವರ ಭಾಷಾಂತರದಲ್ಲಿ ಮೇಲ್ನೋಟಕ್ಕೆ ತೋರಿಬರುವುದಿಲ್ಲ. ಇಂಗ್ಲಿಷ್ ಸಾಲಿನಲ್ಲಿರುವ ಈ ರಿಲೀಜಿಯಸ್ ವಿಚಾರವನ್ನು ಕನ್ನಡದಲ್ಲಿ ಹೇಳಲು ಬಿ.ಎಂ.ಶ್ರೀರವರ ಭಾಷಾಂತರ ವಿಫಲವಾಗಿರುವುದಕ್ಕೆ ಇದೇ ಕಾರಣ ಎಂದು ಈಗ ತೋರುತ್ತದೆ. ಈ ವೈಫಲ್ಯಕ್ಕೆ ಎರಡು ಪರಿಣಾಮಗಳಿವೆ: (ಎ) ಈಗಾಗಲೇ ಗುರುತಿಸಿಕೊಂಡಿರುವಂತೆ, ಭಾರತೀಯ ಸಂಸ್ಕೃತಿಯ ಅನುಭವ ಜಗತ್ತಿನಿಂದ ಬಂದವರಿಗೆ ಅನುವಾದಿತ ಕನ್ನಡದ ಸಾಲು ಅರ್ಥಹೀನವಾಗುತ್ತದೆ. (ಬಿ) ಇಂಗ್ಲಿಷ್ (ಯುರೋಪಿನ ಸಾಂಸ್ಕೃತಿಕ ಅನುಭವಗಳು) ವಿಚಾರವನ್ನು ತಿಳಿಸಿ ಹೇಳಬೇಕಾದ ಭಾಷಾಂತರವು ಅದನ್ನು ತಿಳಿಸದೆ, ಇಂಗ್ಲಿಷ್ ವಿಚಾರಗಳನ್ನು ವಿರೂಪಗೊಳಿಸುತ್ತವೆ. ತತ್ಪರಿಣಾಮವಾಗಿ ಈ ಮೊದಲೇ ಪ್ರಸ್ತಾಪಿಸಿದ ಬಿ.ಎಂ.ಶ್ರೀಗಳ ಎರಡು ಸಂಸ್ಕೃತಿಗಳನ್ನು ಮುಖಾಮುಖಿ ಮಾಡಿಸಿ – ಇಬ್ಬರನ್ನು ಸರಿಯಾಗಿ ಒಬ್ಬರಿಗೊಬ್ಬರನ್ನು ಅರ್ಥಮಾಡಿಸುವ ಅವರ ಪ್ರಕಲ್ಪ ಭಾರತೀಯರಿಗೆ ಅರ್ಥವಾಗುತ್ತಿಲ್ಲ ಹಾಗು ಈ ಅನುವಾದವನ್ನು ಓದುವ ಭಾರತೀಯರಿಗೆ ಯುರೋಪಿನ ಸಂಸ್ಕೃತಿಯ ವಿರೂಪಗೊಂಡಿರುವ ಚಿತ್ರಣವನ್ನು ನೀಡುತ್ತದೆ.

 ೫.೧. ಸಮಸ್ಯೆಯ ಸ್ವರೂಪದ ವಿವರಣೆ

 ಈ ವೈಫಲ್ಯವು ಬಿ.ಎಂ.ಶ್ರೀರವರ ವೈಯಕ್ತಿಕ ವೈಫಲ್ಯವೇ? ಇದನ್ನು ಬಿ.ಎಂ.ಶ್ರೀ ಯವರ ವೈಯಕ್ತಿಕ ವೈಫಲ್ಯವೆಂದು ಪರಿಗಣಿಸಲು ನಾವು ಕಾರಣಗಳನ್ನು ತೋರಿಸಬೇಕಾಗುತ್ತದೆ. ಹಾಗೆ ನೋಡಿದರೆ ಭಾಷಾಂತರದಲ್ಲಿ ಈಗ ನಾವು ತೋರಿಸುವ ಸಮಸ್ಯೆಗಳನ್ನು ಬಿ.ಎಂ.ಶ್ರೀಯವರ ವೈಯಕ್ತಿಕ ಮಿತಿ ಎಂದು ಮಾತನಾಡಲು ಹೊರಟರೆ ನಮಗೆ ಅದಕ್ಕೆ ವಿರುದ್ಧವಾದ ಸಾಕ್ಷ್ಯಗಳೇ ಹೆಚ್ಚು ದೊರೆಯುತ್ತವೆ. ಏಕೆಂದರೆ, ನಮಗೆಲ್ಲ ತಿಳಿದಿರುವಂತೆ ಬಿ.ಎಂ.ಶ್ರೀರವರು ಕನ್ನಡ ಸಾಹಿತ್ಯ ಲೋಕ ಕಂಡ ಧೀಮಂತ ಲೇಖಕರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲಿದ್ದ ಅವರ ಹಿಡಿತ ಮತ್ತು ನೈಪುಣ್ಯವನ್ನು ಅವರ ಇನ್ನಿತರ ಲೇಖನಗಳು ಎತ್ತಿತೋರಿಸುತ್ತವೆ. ಆದರೆ ಭಾಷಾಂತರದ ವಿಷಯಕ್ಕೆ ಬಂದಾಗ ಬಿ.ಎಂ.ಶ್ರೀರವರು ಕೆಲವು ಸಮಸ್ಯೆಗಳಿಗೆ ಸಿಲುಕಿಬಿಡುತ್ತಾರೆ. ಈ ರೀತಿ ಭಾಷಾಂತರದಲ್ಲಿ, ಮೇಲೆ ತೋರಿಸಿದ ಸಮಸ್ಯೆಗಳಿಗೆ ಬಿ.ಎಂ.ಶ್ರೀಗಳು ಸಿಲುಕಲು ಕಾರಣವೇನಿರಬಹುದು? ಈ ಮೇಲ್ಕಂಡ ಸಮಸ್ಯೆಗಳು ಬಿ.ಎಂ.ಶ್ರೀಗಳ ವೈಯಕ್ತಿಕ ವೈಫಲ್ಯವಲ್ಲದಿದ್ದರೆ ನಾವು ಚರ್ಚಿಸುತ್ತಿರುವ ಸಮಸ್ಯೆಗಳು ಬರಲು ಕಾರಣಗಳೇನಿರಬಹುದು ಎನ್ನುವುದು ಈಗ ನಮ್ಮ ಮುಂದಿರುವ ಸವಾಲು. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುವುದು ಈ ಲೇಖನದ ವ್ಯಾಪ್ತಿಯನ್ನು ಮೀರಿದ ವಿಷಯವಾದರೂ ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಈಗಾಗಲೇ ಯಾವುದನ್ನು ನಾವು ಭಾಷಾಂತರದ ಸಮಸ್ಯೆ ಎಂದು ಗುರುತಿಸುತ್ತಿದ್ದೇವೆಯೋ ಅವುಗಳನ್ನು ಈ ಕೆಳಕಂಡಂತೆ ಬಿಡಿಸಿಕೊಳ್ಳೋಣ. ಯೂರೋಪಿನ ಸಾಂಸ್ಕೃತಿಕ ಜಗತ್ತಿನ ವಿಚಾರಗಳನ್ನು ಭಾರತೀಯರಿಗೆ ತಿಳಿಸುವುದು ಭಾಷಾಂತರದ ಪ್ರಶ್ನೆಯೋ ಅಲ್ಲವೋ ಎಂಬ ಪ್ರಶ್ನೆಯನ್ನು ಬಿ.ಎಂ.ಶ್ರೀರವರನ್ನೂ ಒಳಗೊಂಡು, ಭಾಷಾಂತರಕಾರರಾರೂ ಕೇಳಿಕೊಂಡಿರುವಹಾಗೆ ಕಾಣುವುದಿಲ್ಲ. ಇಂಗ್ಲಿಷ್ (ಯುರೋಪಿನ) ಜಗತ್ತಿನ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ಹೇಳಿಬಿಡಬಹುದು ಎಂಬ ಪೂರ್ವಗ್ರಹಿಕೆಯನ್ನು ಅತಿ ಸಾಮಾನ್ಯವಾಗಿಯೇ ಭಾಷಾಂತರಕಾರರೆಲ್ಲರೂ ಹೊಂದಿರುವಂತೆ ಕಾಣುತ್ತದೆ. ಹೀಗಾಗಿ ಇಂಗ್ಲಿಷ್ (ಯುರೋಪಿನ) ಜಗತ್ತಿನ ವಿಚಾರಗಳನ್ನು ಕನ್ನಡಕ್ಕೆ (ಇನ್ನಿತರೆ ಭಾರತೀಯ ಭಾಷೆಗಳಿಗೆ) ಭಾಷಾಂತರಿಸುವುದು ಸಾಧ್ಯ ಎನ್ನುವುದು ಭಾರತೀಯ ಭಾಷಾಂತರಕಾರರ ಧೋರಣೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅನುವಾದಕನಿಗೆ ಮೂಲಭಾಷೆ (source language) ಹಾಗೂ ಉದ್ದಿಷ್ಟ ಭಾಷೆ (target language) ಎಂಬ ಎರಡು ಭಾಷೆಗಳು ಪರಿಚಿತವಿದ್ದರೆ, ಭಾಷಾಂತರ ಸಾಧ್ಯ ಎನ್ನುವ ಇಂಗಿತವೇ ಈ ಧೋರಣೆಯ ಹಿಂದಿದೆ ಹಾಗೂ ಭಾಷಾಂತರದ ಸುತ್ತ ಇರುವ ಚರ್ಚೆಗಳೆಲ್ಲವೂ ಈ ನಂಬಿಕೆಯನ್ನು ಪ್ರಶ್ನಿಸುವುದಿಲ್ಲ.  ಹಾಗಾಗಿ ಅನುವಾದವನ್ನು ಭಾಷೆಯ ಸಮಸ್ಯೆಯನ್ನಾಗಿ ಮಾಡಿಕೊಂಡು, ನಿಘಂಟುಗಳ ಮೂಲಕ ಶಬ್ದಾರ್ಥಗಳಿಂದ ಅನುವಾದವನ್ನು ಸುಲಭವಾಗಿ ಮತ್ತು ಅರ್ಥವತ್ತಾಗಿ ಮಾಡಲು ಸಹಕರಿಸುತ್ತವೆ ಎನ್ನುವುದು ಅನುವಾದಕರ ಬಲವಾದ ನಂಬಿಕೆ.

 ನಾವು ಈ ಲೇಖನದಲ್ಲಿ ಚರ್ಚಿಸುತ್ತಿರುವ ಭಾಷಾಂತರವು ಕೇವಲ ಭಾಷೆಯ ಸಮಸ್ಯೆಯಲ್ಲ. ಏಕೆಂದರೆ ನಮಗಿಂತ ಭಿನ್ನ ಸಂಸ್ಕೃತಿಯ ಜನ, ಭಿನ್ನ ರೀತಿಯಲ್ಲಿ ಜಗತ್ತಿನ ಜೊತೆ ವ್ಯವಹರಿಸುತ್ತಿದ್ದು, ನಾವು ಚರ್ಚಿಸಿದ ಕಾವ್ಯವು ಭಿನ್ನವಾದ ಸಾಂಸ್ಕೃತಿಕ ಅನುಭವದ ಜಗತ್ತಿನ ಚಿತ್ರಣವಾಗಿದೆ. ಈ ಅನುಭವಗಳನ್ನು ಗ್ರಹಿಸಲು ಭಾಷೆ ಅಗತ್ಯ ಮತ್ತು ಅನಿವಾರ್ಯ ಎನ್ನುವುದು ಪ್ರಶ್ನಾತೀತವಾದರೂ, ಪ್ರಶ್ನೆ ಇರುವುದು ನಾವು ಅರ್ಥಮಾಡಿಕೊಳ್ಳಲು ಹೊರಟಿರುವುದು ಭಾಷೆಯನ್ನೋ? ಅಥವಾ ನಮಗೆ ತಿಳಿವಳಿಕೆ ಇರದ ಇನ್ನೊಂದು ಸಾಂಸ್ಕೃತಿಕ ಜಗತ್ತಿನ ಜೀವನಾನುಭಾವವನ್ನೋ? ಅಂದರೆ, ‘God’, ‘will’, ‘service’ ಇತ್ಯಾದಿ ಶಬ್ದಗಳು ಯುರೋಪಿನ ಭಾಷೆಗಳಲ್ಲಿ ಯಾವ ರೀತಿಯ ಅನುಭವಗಳನ್ನು ಹೇಳುತ್ತವೆ ಎನ್ನುವುದು ನಮ್ಮ ಅನುವಾದಗಳು ನಮಗೆ ಕಟ್ಟಿಕೊಡಬೇಕಾಗಿರುವ ವಿಚಾರಗಳು. ಹಾಗಾಗಿ, ಅನುವಾದಕರು ತಮ್ಮ ಅನುವಾದಗಳಲ್ಲಿ ಈ ಕಾವ್ಯಗಳನ್ನು ಭಾಷೆಯ ಸಮಸ್ಯೆಯಾಗಿಸಿದಾಗ, ಆ ಭಾಷೆಗಳ ಮೂಲಕ ಅನುಭವಗಳು ಮರೆಯಾಗುತ್ತವೆ. ಆದರೆ, ಇದು ಭಾಷೆಯ ವಿಷಯ ಅಲ್ಲ ಎಂಬುದನ್ನು ನಮ್ಮ ಉದಾಹರಣೆಯಿಂದ ತಿಳಿಸಿದಂತೆ ಗ್ರಹಿಸಿದರೆ, ಅದು ಭಾಷೆಯ ಸಮಸ್ಯೆಯಲ್ಲ, ಬದಲಿಗೆ ಭಾಷಾಂತರವನ್ನು ನಮ್ಮ ಅನುಭವಕ್ಕೆ ದಕ್ಕುವಹಾಗೆ ಮಾಡುವಲ್ಲಿನ ಅನುವಾದಗಳ ವೈಫಲ್ಯವೆಂದು ಅರ್ಥವಾಗುತ್ತದೆ. ಹೀಗಾಗಿ, ಇದು ಭಾಷೆಯ ಸಮಸ್ಯೆ ಅಲ್ಲವೆಂದರೆ, ಮತ್ತಾವ ರೀತಿಯ ಸಮಸ್ಯೆ ಎಂಬುದನ್ನು ಇನ್ನೂ ಸ್ವಲ್ಪ ವಿವರವಾಗಿ ಅರ್ಥೈಸಲು ಪ್ರಯತ್ನಿಸೋಣ.

ಈಗಾಗಲೇ ತಿಳಿಸಿರುವಂತೆ ಭಾರತೀಯರಾದ ನಾವು ಯೂರೋಪಿನಿಂದ ಅನೇಕ ಸಂಗತಿಗಳನ್ನು ಕಲಿತುಕೊಂಡಿದ್ದೇವೆ. ಹಾಗೆ ಕಲಿಯುವುದು ತಪ್ಪೇನೂ ಅಲ್ಲ. ಯೂರೋಪಿನಿಂದ ನಾವು ವಿಜ್ಞಾನ, ತಂತ್ರಜ್ಞಾನ, ಔಷಧ ಇತ್ಯಾದಿ ಕಲಿತಿದ್ದೇವೆ, ಅಳವಡಿಸಿಕೊಂಡಿದ್ದೇವೆ ಮತ್ತದರ ಲಾಭ ಪಡೆದುಕೊಂಡಿದ್ದೇವೆ. ಆದರೆ, ಯೂರೋಪಿನ ಸಾಹಿತ್ಯವನ್ನು ಭಾರತೀಯ ಭಾಷೆಗೆ ಅನುವಾದ ಮಾಡಿಕೊಂಡು ಕಲಿಯುತ್ತೇವೆಂದು ಹೊರಟಾಗ, ಈಗಾಗಲೇ ತೋರಿಸಿದಂತೆ ಈ ಅನುವಾದಗಳು ಅನೇಕ ಸಮಸ್ಯೆಗಳನ್ನು ಹುಟ್ಟಿಸುತ್ತವೆ. ಹಾಗೆ ಮಾಡುವುದರಿಂದಾಗುವ ವೈಫಲ್ಯ ಮತ್ತದರ ಎರಡು ಮುಖಗನ್ನೂ ಈ ಲೇಖನದಲ್ಲಿ ಈಗಾಗಲೇ ನೋಡಿದ್ದೇವೆ. ಈ ಮಿತಿಯು ಭಾಷೆಯ ಕುರಿತ ವಿಚಾರವೂ ಅಲ್ಲ ಎಂಬುದನ್ನು ನೋಡಿದ್ದೇವೆ. ಅಲ್ಲದೆ ಇದು ಇನ್ನೊಂದು ಸಂಸ್ಕೃತಿಯ ಅನುಭವವನ್ನು ಗ್ರಹಿಸುವಾಗ ಉದ್ಭವಿಸುವ ಸಮಸ್ಯೆ ಎಂದು ಗುರುತಿಸಿದ್ದೇವೆ. ಇಂತಹ ಒಂದು ಸಮಸ್ಯೆಯನ್ನು ಯಾವ ರೀತಿಯ ನಿರ್ದಿಷ್ಟ ಸಮಸ್ಯೆ ಎಂದು ಗುರುತಿಸಿ ಆಲೋಚಿಸಲು ಸಾಧ್ಯವೇ? ಸಾಧ್ಯವಿದೆ. ನಮ್ಮ ಪ್ರಕಾರ ಈ ಮೇಲೆ ಗುರುತಿಸಿದ ಸಮಸ್ಯೆಯು, ಈಗಾಗಲೇ ನಾವು ತೋರಿಸಿರುವಂತೆ, ಎರಡು ಭಿನ್ನ ಸಂಸ್ಕೃತಿಗಳು ಮುಖಾಮುಖಿಯಾದಾಗ ಉಧ್ಬವಿಸುವ ಸಮಸ್ಯೆ ಎಂದು ಗುರುತಿಸಬಹುದು. ಎರಡು ಸಂಸ್ಕೃತಿಯ ಮುಖಾಮುಖಿಯಲ್ಲಿ ಇರುವ ನಿರ್ದಿಷ್ಟ ಸಮಸ್ಯೆಗಳೇನು? ಅದರ ಕುರಿತು ಆಲೋಚಿಸಲು ಸಾಧ್ಯವೇ? ಎನ್ನುವ ಪ್ರಶ್ನೆಗಳಿಂದ ನಾವು ಈಗ ಮುಂದಿನ ಆಲೋಚನೆಯನ್ನು ಪ್ರಾರಂಭಿಸೋಣ.

೫.೨. ಅನುಭವ, ಭಾಷೆ ಮತ್ತು ಸಾಂಸ್ಕೃತಿಕ ಭಿನ್ನತೆ

ಜಗತ್ತಿನಾದ್ಯಂತ ಅನೇಕ ಭಾಷಾಂತರ ತಜ್ಞರು ಸಾಂಶ್ಕೃತಿಕ ವ್ಯತ್ಯಾಸದಿಂದಾಗಿ, ಎರಡು ಸಂಸ್ಕೃತಿಗಳ ನಡುವೆ ಭಾಷಾಂತರವನ್ನು ಮಾಡುವುದು ದೊಡ್ಡ ಸವಾಲು ಎಂಬುದನ್ನು ಗುರುತಿಸಿಕೊಂಡಿದ್ದಾರೆ. ಆದರೆ ಸಾಂಸ್ಕೃತಿಕ ಭಿನ್ನತೆ ಎಂದರೆ ಏನು ಹಾಗೂ ಈ ಭಿನ್ನತೆ ಹೇಗೆ ಸಂಸ್ಕೃತಿಗಳ ನಡುವೆ ನಡೆಯುವ ವಿಚಾರ ವಿನಿಮಯಕ್ಕೆ ಸವಾಲಾಗಿ ನಿಂತು ಸಮಸ್ಯೆಗಳನ್ನು ಉತ್ಪತ್ತಿ ಮಾಡುತ್ತದೆ ಎಂದು ಪ್ರೊ. ಎಸ್.ಎನ್. ಭಾಲಗಂಗಾಧರರವರು ತಮ್ಮ ಸಂಶೋಧನೆಯಲ್ಲಿ ವಿವರವಾಗಿ ತೋರಿಸಿಕೊಡುತ್ತಾರೆ.((Balagangadhara S.N. “Translation, Interpretation and Culture: On the Disingenuity of a Comparative Theology.” Canadian Social Science, vol.10, no. 5, 2014; Balagangadhara S.N. “Comparative Studies and the Explanatory Problem: A Methodological Essay.” In Classical Indian Thought and the English Language: Perspectives and Problems. D.K. Print World (P) Ltd., Mohini Mullick and Madhuri S. Sondhi. (eds). pg no. 48 – 101. 2016.)) ಬಾಲಗಂಗಾಧರರವರ ಸಂಶೋಧನಾ ಚೌಕಟ್ಟನ್ನು ಬಳಸಿಕೊಂಡು, ಭಾಷಾಂತರದಲ್ಲಿ ಸಾಂಸ್ಕೃತಿಕ ಭಿನ್ನತೆಯ ಪಾತ್ರವು ಎಷ್ಟು ಮಹತ್ತ್ವದ್ದಾಗಿದೆ ಎಂಬುದನ್ನು ಇನ್ನೂ ಸ್ಪಷ್ಟವಾಗಿ ಈ ಭಾಗದಲ್ಲಿ ನೋಡೋಣ.

ಜಗತ್ತಿನ ಯಾವುದೇ ಮೂಲೆಯಲ್ಲಾದರು, ಮನುಷ್ಯರು ಬದುಕಲು ಎರಡು ರೀತಿಯ ಕಲಿಕೆಯಲ್ಲಿ ಭಾಗವಹಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಏಕಕಾಲಕ್ಕೆ ಮನುಷ್ಯ ತನ್ನ ಸುತ್ತಮುತ್ತಲಿನ ಜನರ ಜೊತೆಗಿನ ಒಡನಾಟವನ್ನು ಕಲಿಯುತ್ತಲೇ ತನ್ನ ಸುತ್ತಿಲಿನ ಭೌತಿಕ ಪರಿಸರದ ಜೊತೆ ಬದುಕುವುದನ್ನು ಕಲಿಯಬೇಕಾಗುತ್ತದೆ. ಈ ಎರಡೂ ರೀತಿಯ ಕಲಿಕೆಗಳು ಮನುಷ್ಯನಿಗೆ ಈ ಜಗತ್ತಿನಲ್ಲಿ ಹೇಗೆ ಬದುಕಬೇಕು ಎಂಬುದಕ್ಕೆ ಸಹಕಾರಿಯಾಗಿರುತ್ತದೆ. ಈ ರೀತಿ ಮನುಷ್ಯರು ತಾವು ಕಲಿತ ಸಂಗತಿಗಳನ್ನು ಮುಂದಿನ ತಲೆಮಾರುಗಳಿಗೆ ದಾಟಿಸುತ್ತಾರೆ. ಹಾಗಾಗಿ ಮನುಷ್ಯನ ಬದುಕು ಒಂದು ತಲೆಮಾರಿನವರು ಕಲಿತ ಅನುಭವಗಳನ್ನು ಮುಂದಿನ ತಲೆಮಾರಿಗೆ ದಾಟಿಸುವುದು ಹಾಗೂ ಇನ್ನೊಂದು ತಲೆಮಾರು ಅದನ್ನು ಕಲಿತು ತನ್ನ ಮುಂದಿನ ತಲೆಮಾರಿಗೆ ದಾಟಿಸುವುದೇ ಆಗಿರುತ್ತದೆ. ಹಾಗಾಗಿ ಈ ದಾಟಿಸುವ ಪ್ರಕ್ರಿಯೆಯಲ್ಲಿ ಏನನ್ನು ದಾಟಿಸುವುದು ಮತ್ತು ಹೇಗೆ ದಾಟಿಸುವುದು ಎನ್ನುವ ಪ್ರಶ್ನೆಗಳು ಪ್ರಮುಖವಾಗಿರುತ್ತವೆ. ಈ ತಲೆಮಾರಿನಿಂದ ತಲೆಮಾರಿಗೆ ಕಲಿಯುವ ಮತ್ತು ದಾಟಿಸುವ ಪ್ರಕ್ರಿಯೆಯಲ್ಲಿ ಅನುಭವ ಮತ್ತು ಭಾಷೆ ಮಾನವನ ಸಮಾಜದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಹಾಗಾದರೆ ಈ ಅನುಭವ ಮತ್ತು ಭಾಷೆಗೆ ಇರುವ ಸಂಬಂಧವೇನು? ಎನ್ನುವುದು ಮುಖ್ಯ ಪ್ರಶ್ನೆಯಾಗಿರುತ್ತದೆ.

ಒಂದು ತಲೆಮಾರಿನ ಸಮಾಜ ಈ ಜಗತ್ತಿನ ಜೊತೆ ಹೇಗೆ ವ್ಯವಹರಿಸಬೇಕೆಂದು ತಾವು ಅನುಭವದಿಂದ ಕಂಡುಕೊಂಡಿರುತ್ತದೆ. ಈ ಸಮಾಜಗಳಲ್ಲಿನ ಜನರು ತಮ್ಮ ಅನುಭವಗಳನ್ನು ಭಾಷೆಯನ್ನು ಸೇರಿದಂತೆ ಹಲವು ರೀತಿಯಲ್ಲಿ ಮುಂದಿನ ತಲೆಮಾರುಗಳಿಗೆ ದಾಟಿಸುತ್ತಾರೆ. ಅಂದರೆ, ಮನುಷ್ಯರಿಗೆ, ತಮ್ಮ ಅನುಭವವನ್ನು ಭಾಷೆಯಲ್ಲಿ ಗ್ರಹಿಸುವುದು ಅಥವಾ ಹಿಡಿದಿಡುವುದು ಅತಿ ಮುಖ್ಯ ಸಂಗತಿ. ಹಾಗಾಗಿ ಅನೇಕಾನೇಕ ಶಬ್ದಗಳಲ್ಲಿ ಈ ಅನುಭವವನ್ನು ಹೇಳಲು ಪ್ರಯತ್ನಿಸುತ್ತಾರೆ. ಒಂದು ಭಾಷಿಕ ಸಮುದಾಯಕ್ಕೆ ಅದರ ಆಚಾರ-ನಡವಳಿಕೆ, ಭಾಷೆ ಹಾಗು ಅನುಭವಗಳನ್ನು ಗ್ರಹಿಸುವ ತರ್ಕ-ಪರಿಕರಗಳಿದ್ದು ಅವರು ಅದನ್ನು ಸರಿಯಾಗಿ ಗ್ರಹಿಸುತ್ತಾರೆ. ಹಾಗೆಯೇ ಕಾಲಾನಂತರ ಅವರ ಅನುಭವದ ಕುರಿತ ಚರ್ಚೆ ವಿಸ್ತಾರವಾದಂತೆ, ಭಾಷಾಬಳಕೆಯಲ್ಲಿ ವ್ಯತ್ಯಾಸಗಳು ಆಗಿರುತ್ತವೆ. ಒಟ್ಟಿನಲ್ಲಿ ಒಂದು ನಿರ್ದಿಷ್ಟ ಸಾಂಸ್ಕೃತಿಕ ಪರಿಸರದಲ್ಲಿ, ಭಾಷೆ ಹಾಗೂ ಅನುಭವಗಳ ನಡುವೆ ಒಂದು ನಿರ್ದಿಷ್ಟ ರೀತಿಯ ಸಂಬಂಧಗಳಿರುತ್ತವೆ. ಹಾಗೆಂದ ಮಾತ್ರಕ್ಕೆ ಎಲ್ಲ ಅನುಭವಗಳನ್ನು ಭಾಷೆಯಲ್ಲಿ ಹೇಳಲು ಸಾಧ್ಯವಿದೆಯೆಂದಿಲ್ಲ ಅಥವಾ ಭಾಷೆಯಲ್ಲಿ ಅನುಭವಗಳನ್ನು ಹೇಲೇಬೇಕೆಂದಿಲ್ಲ. ಆದರೂ ಅನೇಕ ಪರಿಕಲ್ಪನೆಗಳನ್ನು ಬಳಸಿ ಭಾಷೆಯ ಮೂಲಕ ಅನುಭವಗಳನ್ನು ವ್ಯಕ್ತಪಡಿಸಿದರೆ ಅದನ್ನು ಸಂಬಂಧಪಟ್ಟ ಸಾಂಸ್ಕೃತಿಕ ಪರಿಸರದ ಜನರು ಗುರುತಿಸಬಲ್ಲರು. ಉದಾಹರಣೆ: ‘God’, ‘mercy’, ‘Christ’, ‘church’, ‘soul’, ‘conscience’, ‘will’ ಇತ್ಯಾದಿಗಳು ಪಶ್ಚಿಮದ ಜಗತ್ತಿನ ಜನರಿಗೆ ಒಂದು ಸಮುಚ್ಚಯವಾಗಿ ಅನೇಕ ಒಂದಕ್ಕೊಂದು ಸಂಬಂಧಿಸಿದ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ. ಅದೇರೀತಿ, ’ಪಾಪ’, ’ಪುಣ್ಯ’, ’ಪಾತಕ’, ’ಆಚಾರ’, ’ಭ್ರಷ್ಟ’, ಇತ್ಯಾದಿ ಶಬ್ದಗಳು ಒಂದು ಸಮುಚ್ಚಯವಾಗಿ ಅನೇಕ ವಿದ್ಯಮಾನಗಳನ್ನು ಭಾರತೀಯರಿಗೆ ಗ್ರಹಿಸಲು ಸಾಧ್ಯವಾಗುವಂತೆ ಮಾಡಬಲ್ಲವು.

 ಇದನ್ನು ಹೆಚ್ಚು ಸ್ಪಷ್ಟಪಡಿಸಿಕೊಳ್ಳಬೇಕೆಂದರೆ ಮುಂದಿನ ಉದಾಹರಣೆಯನ್ನು ಗಮನಿಸೋಣ. ಉದಾಹರಣೆಗೆ, ಭಾರತೀಯರಿಗೆ ಮಂಗಳಾರತಿ ಕುರಿತು ಮಾತನಾಡಿದಾಗ ಅವರ ಅನುಭವದ ಜಗತ್ತಿನಲ್ಲಿ ’ಪೂಜೆ’, ’ನೈವೇದ್ಯ’, ’ದೀಪ’, ’ಧೂಪ’, ’ಅರಿಶಿಣ’, ’ಕುಂಕುಮ’ ಇತ್ಯಾದಿ ಅನೇಕ ಸಂಗತಿಗಳ ಚಿತ್ರ ಮೂಡಿ ಸಮಗ್ರವಾಗಿ ಪೂಜೆಯ ಕಲ್ಪನೆಯನ್ನು ಕಟ್ಟಿಕೊಡುತ್ತದೆ. ಅಂದರೆ, ’ಮಂಗಳಾರತಿ’ ಎನ್ನುವ ಶಬ್ದಕ್ಕೆ ಸ್ಪಷ್ಟವಾದ ಅರ್ಥವನ್ನು ಹೊರಡಿಸಲು ಮೇಲೆ ತಿಳಿಸಿದ ಅನೇಕ ಪರಿಕಲ್ಪನೆಗಳನ್ನು ಗುರುತಿಸುವ ಕೆಲಸ ಪರೋಕ್ಷವಾಗಿ ಭಾರತೀಯನ ಅನುಭವದ ಜಗತ್ತಿನಲ್ಲಿ ನಡೆದಿರುತ್ತದೆ. ಹಾಗಾಗಿ ’ಮಂಗಳಾರತಿ’ ಎನ್ನುವ ಒಂದು ಶಬ್ದಕ್ಕೆ ಅರ್ಥ ಉತ್ಪತ್ತಿಯಾಗಲು ನಮ್ಮ ಅನುಭವದಲ್ಲಿ ಮಂಗಳಾರತಿಗೆ ಸಂಬಂಧಿಸಿದ ಅನೇಕ ಶಬ್ದಗಳು ಸೇರಬೇಕಾಗುತ್ತದೆ. ಆ ಕಾರಣಕ್ಕಾಗಿ ಮಂಗಳಾರತಿ ಎನ್ನುವ ಶಬ್ದ ಒಂದಕ್ಕೆ ಭಾರತೀಯರ ಅನುಭವದ ಜಗತ್ತಿನ, ’ಮಂಗಳಾರತಿ’ ಎನ್ನುವ ಆಚರಣೆಗೆ ಸಂಬಂಧಿಸಿದ ಅನೇಕ ಪರಿಕಲ್ಪನೆಗಳು ಒಟ್ಟಿಗೆ ಸೇರಿ ಒಂದು ಪರಿಕಲ್ಪನಾ ಸಮುಚ್ಚಯದ (concept cluster) ಸಹಾಯದಿಂದ ಮಂಗಳಾರತಿ ಎಂದರೇನು ಎಂದು ಅರ್ಥೈಸಲು ಸಾಧ್ಯವಾಗುತ್ತದೆ.

 ಇದೇ ’ಮಂಗಳಾರತಿ’ ಎಂಬ ಶಬ್ದವನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದಾಗ, ನಿಘಂಟು ಇಂಗ್ಲಿಷ್ ಒಂದು ಶಬ್ದವನ್ನು ಕೊಡುತ್ತದೆ. ಆದರೆ, ಯಾವ ಪರಿಕಲ್ಪನಾ ಸಮುಚ್ಚಯ ಮೂಲಕ ಭಾರತೀಯನಿಗೆ ’ಮಂಗಳಾರತಿ’ ಎಂಬ ಕಲ್ಪನೆ ಮೂಡುತ್ತದೆಯೋ, ಅದನ್ನು ನಿಘಂಟುಗಳು ಮೂಡಿಸುವುದಿಲ್ಲ.  ಹಾಗಾಗಿ ಪಶ್ಚಿಮದವನಿಗೆ ’ಮಂಗಳಾರತಿ’ ಎನ್ನುವುದು ಅವನ ಅನುಭವದಲ್ಲಿ ನಿಲುಕದ ಸಂಗತಿಯಾಗಿಬಿಡುತ್ತದೆ. ಹಾಗಾಗಿ ಆತ ’worship’ ಎನ್ನುವ ಯಾವುದೋ ಒಂದು ತನ್ನ ಅನುಭವದ ಜಗತ್ತಿನ ಗುರುತಿನೊಂದಿಗೆ ಮಂಗಳಾರತಿಯನ್ನು ಸಮೀಕರಿಸಿ, ಮಂಗಳಾರತಿಗೆ ಹೊಸ ಚಿತ್ರಣವನ್ನು ನಿರೂಪಿಸಬೇಕಾಗುತ್ತದೆ. ಆ ಚಿತ್ರಣವು ಮಂಗಳಾರತಿಯೂ ಅಲ್ಲದೆ, worship ಕೂಡ ಆಗದೆ ವಿಚಿತ್ರವಾದ ಚಿತ್ರಣವಾಗುತ್ತದೆ. ಹಾಗೆಯೇ ಈಗಾಗಲೇ ವಿವರಿಸಿರುವಂತೆ ಬಿ.ಎಂ.ಶ್ರೀಯವರ ಅನುವಾದವು ಇದೇ ಸಮಸ್ಯೆಯನ್ನು ಹೊಂದಿದೆ.

 ಅಂದರೆ ಎರಡು ಭಿನ್ನ ಸಂಸ್ಕೃತಿಗಳು ಮುಖಾಮುಖಿಯಾದಾಗ ಒಂದು ಸಂಸ್ಕೃತಿಯ ವಿಚಾರವನ್ನು ಗ್ರಹಿಸಲು ಕೇವಲ ಭಾಷೆಯನ್ನು ಕಲಿಯುವುದರಿಂದ ಸಾಧ್ಯವಿಲ್ಲ. ಬದಲಿಗೆ ಸಂಸ್ಕೃತಿಯೊಂದು ತನ್ನ ಅನುಭವಜನ್ಯ ಜ್ಞಾನವನ್ನು ಹೇಗೆ ನಿರ್ದಿಷ್ಟ ’ಪರಿಕಲ್ಪನಾ ಸಮುಚ್ಚಯ’ ಅಥವಾ ’ಸಮುಚ್ಚಯಗಳ’ ಸಹಾಯದಿಂದ ಅದನ್ನು ಭಾಷೆಯ ಮೂಲಕ ಬಳಸಿಕೊಳ್ಳುತ್ತದೆ ಎನ್ನುವುದನ್ನು ಗ್ರಹಿಸುವುದು ಅತ್ಯಂತ ಪ್ರಮುಖವಾದ ಸಂಗತಿ.

ನಾವು ಈ ಲೇಖನದಲ್ಲಿ ಗಮನಹರಿಸಿದ ಸಮಸ್ಯೆ ಹೇಗೆ ಸಂಸ್ಕೃತಿಯೊಂದು ’ಪರಿಕಲ್ಪನೆ’ಗಳ ಮೂಲಕ ಅನುಭವಗಳನ್ನು ಹಿಡಿದಿಟ್ಟುಕೊಳ್ಳತ್ತದೆ ಎನ್ನುವುದಕ್ಕೆ ಸಂಬಂಧಪಟ್ಟ ವಿಚಾರ. ಅಂದರೆ, ಸಂಸ್ಕೃತಿಯೊಂದು ಹೇಗೆ ತನ್ನ ಜೀವನವನ್ನು ಅನೇಕ ಪರಿಕಲ್ಪನೆಗಳ ಮೂಲಕ ಕಟ್ಟಿಕೊಳ್ಳುತ್ತದೆ, ಹಾಗೂ ಆ ಅನುಭವಗಳನ್ನು ಹೇಗೆ ಅರ್ಥೈಸಿಕೊಳ್ಳುವುದು ಎನ್ನುವುದರ ಕುರಿತು ನಮ್ಮ ತಿಳಿವಳಿಕೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಒಂದು ಸಂಸ್ಕೃತಿಯು ತನ್ನ ಚೌಕಟ್ಟಿನ ಒಳಗೆ ಬದುಕುವ ಜನರಿಗೆ, ಒಂದು ನಿರ್ದಿಷ್ಟ ರೀತಿಯ ಚಿಂತನಾಕ್ರಮವನ್ನು, ಕಲಿಕಾಕ್ರಮವನ್ನು ಮತ್ತು ಇದರಿಂದ ಉತ್ಪತ್ತಿಯಾಗುವ ಜಗತ್ತಿನ ಬಗೆಗಿನ ಅನುಭವವನ್ನು ನಿರ್ಮಿಸುತ್ತದೆ. ಯೂರೋಪಿನವರು, ಪಶ್ಚಿಮದ ಸಂಸ್ಕೃತಿಯು ತಮಗೆ ನಿರ್ಮಿಸುವ ಅನುಭವದ ಹಿನ್ನೆಲೆಯಲ್ಲಿ ಒಂದಿಷ್ಟು ’ಪರಿಕಲ್ಪನೆಗಳನ್ನು’ ಕಟ್ಟಿಕೊಂಡು ಅದನ್ನು ಬಳಸಿ ತಮ್ಮ ಸಾಹಿತ್ಯವನ್ನು ಸೃಷ್ಟಿಸಿಕೊಂಡಿರುತ್ತಾರೆ. ಹಾಗೆಯೇ ಭಾರತೀಯರು, ಭಾರತೀಯ ಸಂಸ್ಕೃತಿಯು ತಮಗೆ ನಿರ್ಮಿಸಿಕೊಡುವ ಒಂದಿಷ್ಟು ಪರಿಕಲ್ಪನೆಗಳನ್ನು ಮತ್ತು ಅವು ಕಟ್ಟಿಕೊಡುವ ಅನುಭವದ ಹಿನ್ನೆಲೆಯಲ್ಲಿ ತಮ್ಮ ಸಾಹಿತ್ಯ ಅಥವಾ ಸಾಂಸ್ಕೃತಿಕ ಜಗತ್ತನ್ನು ನಿರ್ಮಿಸಿಕೊಳ್ಳುವ, ಅದನ್ನು ಅರ್ಥಮಾಡಿಕೊಳ್ಳುವ ಕ್ರಮ, ಅದಕ್ಕೆ ತಕ್ಕ ಭಾಷೆ ಮತ್ತು ಅದರ ಬಳಕೆಯ ರೀತಿಯನ್ನು ನಿರ್ಮಿಸಿಕೊಂಡಿರುತ್ತಾರೆ. ಭಾಷಾಂತರ ಪ್ರಕ್ರಿಯೆಯಲ್ಲಿ ಈ ರೀತಿಯ ಎರಡು ವಿಭಿನ್ನ ಅನುಭವದ ಜಗತ್ತುಗಳು ಮುಖಾಮುಖಿಯಾಗಿ ಬರುತ್ತವೆ. ’will’ ಒಂದು ಅನುಭವ ಜಗತ್ತಿನ ಪರಿಕಲ್ಪನೆಯಾದರೆ, ’ಇಚ್ಛೆ’ ಇನ್ನೊಂದು ಅನುಭವದ ಜಗತ್ತಿನ ಪರಿಕಲ್ಪನೆಯಾಗಿದೆ. ಇಷ್ಟೆ ಅಲ್ಲ. ’will’ ಪರಿಕಲ್ಪನೆಯು, ತನ್ನ ಜೊತೆಗಿನ ಅನೇಕ ಬೇರೆ ಬೇರೆ ಪರಿಕಲ್ಪನೆಯ (‘conscience’, ‘God’, ‘soul’ ಇತ್ಯಾದಿ) ಜೊತೆಗೆ ಬೆಸೆದುಕೊಂಡಿರುತ್ತದೆ. ಮತ್ತು ಈ ಅನೇಕ ಪರಿಕಲ್ಪನೆಗಳ ಸಮುಚ್ಚಯದಲ್ಲಿ ಮಾತ್ರ ಅದಕ್ಕೆ’ ಅರ್ಥ (intelligibility) ಬಂದಿರುತ್ತದೆ. ಭಾಷಾಂತರ ಪ್ರಕ್ರಿಯೆಯಲ್ಲಿ, ಕೇವಲ ಒಂದೇ ಪರಿಕಲ್ಪನೆಯನ್ನು (will) ಅದರ ಸಮುಚ್ಚಯದಿಂದ ಹೊರಗೆಳೆದು, ಅದಕ್ಕೆ ಹೊಂದದ ಬೇರಾವುದೋ ಪರಿಕಲ್ಪನಾ ಸಮುಚ್ಚಯದ ಶಬ್ಧಕ್ಕೆ (ಇಚ್ಛೆ) ಅನುವಾದಿಸಲಾಗುತ್ತದೆ. ಹೀಗೆ ಪರಿಕಲ್ಪನೆಯು ವಿರೂಪಗೊಂಡು ಅರ್ಥಹೀನವಾಗುತ್ತದೆ ಅಥವಾ ಅಗ್ರಾಹ್ಯವಾಗುತ್ತದೆ (intelligibility). ಒಂದು ಸಾಂಸ್ಕೃತಿಕ ಜಗತ್ತಿನ ವಿಚಾರವನ್ನು ಇನ್ನೊಂದು ಸಾಂಸ್ಕೃತಿಕ ಜಗತ್ತಿಗೆ, ಭಾಷಾಂತರಕಾರರು ಭಾಷೆಯಲ್ಲಿ ತಂದುಕೊಡುವ ರೀತಿಯಲ್ಲಿ, ಉದ್ಭವಿಸುವುದು ಪರಿಕಲ್ಪನೆಗಳು ವಿರೂಪಗೊಳ್ಳುವ (Conceptual Distortion)((Jakob de Roover, Sarah Claerhout and Balagangadhara S.N. “Liberal Political Theory and the Cultural Migration of Ideas: The Case of Secularism in India.” Political Theory, vol. 39, no.5, 2011; Sarah Claerhout.  “Gandhi, Conversion, and the Equality of Religions: More Experiments with Truth.” Numen-international Review for the History of Religions, vol. 61, no. 1, 2014. Balagangadhara S.N. Notes on Topos (unpublished article))) ಸಮಸ್ಯೆಯೇ ಹೊರತು, ಭಾಷೆಯದಲ್ಲ. ಇದನ್ನು Problem of Inteligibility ಎಂದು ಕರೆಯಬಹುದು.

ಇದು ಭಾಷೆಯ ಸಮಸ್ಯೆ ಆಗಿದ್ದರೆ, ಹೊಸ ಶಬ್ದಗಳನ್ನು ಸೃಷ್ಟಿಸಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿತ್ತು. ಅಥವಾ ’will’ ಎನ್ನುವ ಶಬ್ದವನ್ನೇ ಕನ್ನಡದಲ್ಲಿ ಬರದುಬಿಡಬಹುದಾಗಿತ್ತು. ಆದರೆ ಈ ಎರಡೂ ದಾರಿಗಳು ಇನ್ನೊಂದು ಸಂಸ್ಕೃತಿಯನ್ನು ಗ್ರಹಿಸಲು ಸಹಾಯ ಮಾಡುತ್ತಿಲ್ಲ. ಹೀಗಾಗಿ ಇಂಗ್ಲಿಷ್ ಸಾಹಿತ್ಯದ ವಿಚಾರಗಳನ್ನು ಕನ್ನಡಲ್ಲಿ ಈಗ ಮೂಡುತ್ತಿರುವ ಅನುವಾದಗಳಿಂದ ಹೇಳಿಬಿಡಬಹುದು ಎಂಬ ಪೂರ್ವಗ್ರಹೀತವೆ ತಪ್ಪಾದುದ್ದೆಂದು ಹೇಳಬಹುದು. ಹಾಗೂ, ಪಶ್ಚಿಮದ ಸಂಸ್ಕೃತಿಯ ಚೌಕಟ್ಟಿನಿಂದ ಬರುವ ಎಲ್ಲ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿ, ಅರಗಿಸಿಕೊಂಡಿದ್ದೇವೆಂದು ಅಂದುಕೊಂಡಿರುವ ಭಾಷಾಂತರಕಾರರು ಮತ್ತು ಸಾಹಿತ್ಯದ ಪಂಡಿತರು, ತಾವು ಎಷ್ಟರ ಮಟ್ಟಿಗೆ ಯುರೋಪಿನ ಸಂಸ್ಕೃತಿಯನ್ನು ಅರ್ಥಮಾಡಿಕೊಂಡಿದ್ದೇವೆ ಎಂದು ಆಲೋಚಿಸುವುದು ಸೂಕ್ತ ಎಂಬುದು ನಮ್ಮ ಅಭಿಪ್ರಾಯ.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ, ಅವುಗಳಿಗೆ ಭಾಷೆಯ ಮುಖಾಂತರ ಸಂವಹನ ನಡೆಸುವ ಅನಿವಾರ್ಯತೆ ಇರುತ್ತದೆ. ಈ ಸಂವಹನದಲ್ಲಿ ಕೆಲವು ಪರಿಕಲ್ಪನೆಗಳು ಒಂದು ಸಂಸ್ಕೃತಿಯ ಪರಿಕಲ್ಪನಾ ಸಮುಚ್ಛಯದಿಂದ ಬೇರ್ಪಟ್ಟು ಕೇವಲ ಒಂದು ಶಬ್ದವಾಗಿ ಇನ್ನೊಂದು ಸಂಸ್ಕೃತಿಗೆ ಪ್ರಯಾಣಿಸುತ್ತವೆ. ಈ ಸಂದರ್ಭದಲ್ಲಿ ಈ ಶಬ್ದಗಳಿಗೆ ಅವು ಪ್ರಯಾಣಿಸಿದ ಭಾಷೆಯಲ್ಲಿ ಸ್ಪಷ್ಟ ಅರ್ಥಗಳು ಸಿಗುವುದಿಲ್ಲ. ಹಾಗು ಇನ್ನೊಂದು ಭಾಷೆಯಲ್ಲಿ (ಕನ್ನಡದಲ್ಲಿ) ಮೂಲ ಭಾಷೆಯ (ಇಂಗ್ಲಿಷ್) ಶಬ್ದ ವಿರೂಪಗೊಳ್ಳುತ್ತದೆ. ಹಾಗಾಗಿ ನಮಗೆ ಇತ್ತ ಭಾಷಾಂತರವೂ ಅರ್ಥಪೂರ್ಣವಾಗಿರುವುದಿಲ್ಲ ಮತ್ತು ಅತ್ತ ಮೂಲವೂ ತಿಳಿಯುವುದಿಲ್ಲ. ಹಾಗೆಂದ ಮಾತ್ರಕ್ಕೆ ಎರಡು ಭಾಷೆಗಳ ನಡುವೆ ಸಂವಹನ ಅಸಾಧ್ಯವೆಂದೇನಲ್ಲ. ಆ ರೀತಿಯ ಸಂವಹನದ ಸಾಧ್ಯತೆಗಳೇನೆಂದು ಈ ಲೇಖದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.1

ಈ ಲೇಖನವು  ಕುವೆಂಪು ಭಾಷಾ ಪ್ರಾಧಿಕಾರದ “ಭಾಷಾಭಾರತೀ” ಎಂಬ ಪತ್ರಿಕೆಯ ಸಂಪುಟ 1, ಸಂಚಿಕೆ 2ರಲ್ಲಿ  ಪ್ರಕಟವಾಗಿದ್ದು, ಅದರ ಈ-ಕೊಂಡಿ ಹೀಗಿದೆ:- ಸಾಂಸ್ಕೃತಿಕ ಭಿನ್ನತೆ ಮತ್ತು ಭಾಷಾಂತರ

Author

  • ಹರ್ಷಿತ್ ಜೋಸೆಫ಼್ ರವರು ಪ್ರಸ್ತುತ India Studies Unit, CESS ನಲ್ಲಿ ಫ಼ೆಲೊ ಆಗಿ ಕಾರ್ಯ ನಿರ್ವಹಿಸುತಿದ್ದಾರೆ. ಸಾಂಸ್ಕೃತಿಕ ಭಿನ್ನತೆಯ ಹಿನ್ನೆಲೆಯಲ್ಲಿ ಭಾಷಾಂತರದ ಸಮಸ್ಯೆಯನ್ನು ಅರ್ಥೈಸಿಕೊಳ್ಳುವುದು ಅವರ ಸಂಶೋಧನೆಯಾಗಿದೆ.

Harshith Joseph

ಹರ್ಷಿತ್ ಜೋಸೆಫ಼್ ರವರು ಪ್ರಸ್ತುತ India Studies Unit, CESS ನಲ್ಲಿ ಫ಼ೆಲೊ ಆಗಿ ಕಾರ್ಯ ನಿರ್ವಹಿಸುತಿದ್ದಾರೆ. ಸಾಂಸ್ಕೃತಿಕ ಭಿನ್ನತೆಯ ಹಿನ್ನೆಲೆಯಲ್ಲಿ ಭಾಷಾಂತರದ ಸಮಸ್ಯೆಯನ್ನು ಅರ್ಥೈಸಿಕೊಳ್ಳುವುದು ಅವರ ಸಂಶೋಧನೆಯಾಗಿದೆ.

  1. ಈ ಲೇಖನವನ್ನು ಗಮನಿಸಿದಾಗ ಕೇವಲ will ಎಂಬ ಶಬ್ದದ ಕುರಿತ ಚರ್ಚೆಯೊಂದನ್ನು ಇಟ್ಟುಕೊಂಡು ಸಾಂಸ್ಕೃತಿಕ ಭಿನ್ನತೆಯ ಬಗ್ಗೆ ಇಷ್ಟೆಲ್ಲಾ ವಿಸ್ತಾರವಾದ ಚರ್ಚೆಯನ್ನು ಮಾಡಲು ಸಾಧ್ಯವೇ? ಎನ್ನುವ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಆದರೆ ಶ್ರೀಯವರ ಸುಖಜೀವನ ಪದ್ಯದಲ್ಲೇ will ಜೊತೆಗೆ service, soul, God, grace ಇತ್ಯಾದಿ ಅನೇಕ ಶಬ್ದಗಳಿವೆ. ಯಾವ ರೀತಿಯಲ್ಲಿ will ಕುರಿತು ಭಾಷಾಂತರದ ದೋಷಗಳನ್ನು ತೋರಿಸಿದ್ದೇವೆಯೋ ಅದೇ ರೀತಿ ಮೇಲೆ ಸೂಚಿಸಿದ ಶಬ್ದಗಳನ್ನು ವಿಶ್ಲೇಷಣೆಗೊಳಪಡಿಸಿದಾಗ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ತೋರಿಸಬಹುದು. ಈ ಸಮಸ್ಯೆ ಕೇವಲ ಬಿ.ಎಂ. ಶ್ರೀಯವರದ್ದಾಗಲೀ ಅಥವಾ ಭಾರತೀಯ ಅನುವಾದಕರ ಸಮಸ್ಯೆ ಮಾತ್ರವಲ್ಲ ಬದಲಿಗೆ ಎರಡು ಸಂಸ್ಕೃತಿಯ ಜನರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಹೊರಟರೆ, ಹೇಗೆ ಸಾಂಸ್ಕೃತಿಕ ಭಿನ್ನತೆಯ ಬಗೆಗಿನ ನಮ್ಮ ತಿಳಿವಳಿಕೆಯ ಕೊರತೆ ಸಮಸ್ಯೆಯನ್ನುಂಟು ಮಾಡುತ್ತದೆ ಎಂಬುದನ್ನು ತೋರಿಸಲು ಸಾಧ್ಯವಿದೆ. ಇಲ್ಲಿ ಸ್ಥಳಾವಕಾಶದ ಮಿತಿಯಿಂದ ಆ ಎಲ್ಲ ವಿಷಯಗಳನ್ನು ವಿಸ್ತಾರವಾಗಿ ತೋರಿಸಲು ಸಾಧ್ಯವಾಗಿಲ್ಲ. ಅಲ್ಲದೇ ಈಗಾಗಲೆ ಎಸ್.ಎನ್.ಬಾಲಗಂಗಾಧರ ಅವರು, ಭಾಷಾಂತರ ಮತ್ತು ಸಾಂಸ್ಕೃತಿಕ ಭಿನ್ನತೆಯ ಕುರಿತು ವಿಸ್ತಾರವಾದ ಸೈದ್ಧಾಂತಿಕ ಚೌಕಟ್ಟೊಂದನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಲೇಖನವು ಆ ಚೌಕಟ್ಟಿಗೆ ಶ್ರೀಯವರ ಪದ್ಯವೊಂದನ್ನು ಉದಾಹರಣೆಯಾಗಿ ಬಳಸಿ ತೋರಿಸಿದೆ. []

You may also like

Leave a Comment

Message Us on WhatsApp