Home ಪ್ರತಿಕ್ರಿಯೆ ಬ್ರಾಹ್ಮಣ-ಬ್ರಾಹ್ಮಣ್ಯ ಮತ್ತು ಜಾತಿರಾಜಕಾರಣ

ಬ್ರಾಹ್ಮಣ-ಬ್ರಾಹ್ಮಣ್ಯ ಮತ್ತು ಜಾತಿರಾಜಕಾರಣ

by Rajaram Hegde
583 views

ರಾಜಕೀಯ ಪ್ರೇರಿತ ಚರ್ಚೆಗಳಲ್ಲಿ ಕಂಡುಬರುವ ಬ್ರಾಹ್ಮಣ್ಯವೆಂಬುದು ಭಾರತೀಯ ರಾಜಕೀಯ ಅಗತ್ಯಕ್ಕಾಗಿ ಆಧುನಿಕ ಕಾಲದಲ್ಲಿ ಹುಟ್ಟುಹಾಕಿ, ಪೋಷಿಸಿಕೊಂಡು ಬಂದ ಪರಿಭಾಷೆಯಾಗಿದೆ.  ಈ ಬ್ರಾಹ್ಮಣ್ಯವೆಂಬುದು ಮೂಲತಃ  ಕ್ಯಾಥೋಲಿಕ್ ಪುರೋಹಿತಶಾಹಿಯ ಕುರಿತ  ಪ್ರೊಟೆಸ್ಟಾಂಟ್ ಚಳವಳಿಕಾರರ ಚಿತ್ರಣವಾಗಿದ್ದು, ಇದು ಭಾರತದ ಬ್ರಾಹ್ಮಣರ ಕುರಿತಾಗಿದ್ದು ಆಗಿರಲು ಸಾಧ್ಯವಿಲ್ಲ ಎಂಬುದಾಗಿ ಈ ಲೇಖನದಲ್ಲಿ ರಾಜಾರಾಮ ಹೆಗಡೆಯವರು ನಿರೂಪಿಸುತ್ತಾರೆ.

ಇತ್ತೀಚೆಗೆ ಈ  ಕುರಿತು (ಬ್ರಾಹ್ಮಣ್ಯ) ಸಾಕಷ್ಟು ಚರ್ಚೆಗಳು ನಡೆದಿವೆ. ಈ ಚರ್ಚೆಗಳೆಲ್ಲ ಯಾವುದೇ ಅಕ್ಯಾಡೆಮಿಕ್ ಮಹತ್ವವನ್ನು ಪಡೆದಿಲ್ಲ ಹಾಗೂ ರಾಜಕೀಯ ಪ್ರೇರಿತವಾದ ಚರ್ಚೆಗಳಾಗಿವೆ ಎಂಬುದು ಸ್ಪಷ್ಟ. ಆದರೆ ಈ ಚರ್ಚೆಯು ಸಾಮಾಜಿಕ ಮಹತ್ವವನ್ನು ಪಡೆದಿರುವುದರಿಂದ ಇದನ್ನು ಉಪೇಕ್ಷೆ ಮಾಡುವುದೂ ಸಾಧ್ಯವಿಲ್ಲ.  ಬ್ರಾಹ್ಮಣ್ಯ ಎಂಬ ಶಬ್ದವು ಬ್ರಾಹ್ಮನಿಸಂ ಎಂಬ ಶಬ್ದದ ತರ್ಜುಮೆಯಾಗಿದೆ. ಬ್ರಾಹ್ಮನಿಸಂ ಶಬ್ದವು ಬ್ರಾಹ್ಮಣ ಶಬ್ದದಿಂದ ಬಂದದ್ದಾದರೂ ಶಬ್ದ ಆಧುನಿಕ ಕಾಲದ್ದು.  ಬ್ರಾಹ್ಮಣರ ನಂಬಿಕೆ, ಡಾಕ್ಟ್ರಿನ್ ಇತ್ಯಾದಿ ಅರ್ಥ ಅದಕ್ಕಿದೆ. ಆ ಡಾಕ್ಟ್ರಿನ್ ಬ್ರಾಹ್ಮಣ್ಯ ಎಂಬ ಶಬ್ದದಿಂದ ಸೂಚಿತವಾಗಿದೆ. ಅದೊಂದು ಭಾರತೀಯ ರಾಜಕೀಯ ಅಗತ್ಯಕ್ಕಾಗಿ ಆಧುನಿಕ ಕಾಲದಲ್ಲಿ ಹುಟ್ಟುಹಾಕಿ, ಪೋಷಿಸಿಕೊಂಡು ಬಂದ ಪರಿಭಾಷೆ ಎಂಬುದೇ ಸೂಕ್ತ. ಸಮಸ್ಯೆ ಬರುವುದು ಈ ರಾಜಕೀಯವು ಬ್ರಾಹ್ಮಣ ಜಾತಿಗಳ ಕುರಿತು ಒಂದು ನಿರ್ದಿಷ್ಟ ಧೋರಣೆಯನ್ನು ಬೆಳೆಸಿ ನೀರೆರೆದು ಪೋಷಿಸುತ್ತಿದೆ. ಅದನ್ನು ಬೆಂಬಲಿಸುವ ಚಿಂತಕರು ಅದಕ್ಕೆ ಸಿದ್ಧಾಂತಗಳನ್ನು, ಉದಾಹರಣೆಗಳನ್ನು ಸೃಷ್ಟಿಸಿ ನೀಡುತ್ತಿದ್ದಾರೆ. ಆದರೆ ಇವರ‍್ಯಾರೂ ಈ ಕುರಿತು ಒಂದು ಸಂಶೋಧನಾ ಕುತೂಹಲವನ್ನು ಹೊಂದಿಲ್ಲ, ಅದು ಅವರಿಗೆ ಬೇಕಾಗಿಯೂ ಇಲ್ಲ.

ಈ ಆಧುನಿಕ ಚರ್ಚೆಗೂ ಪ್ರಾಚೀನ ಭಾರತದ ಬ್ರಾಹ್ಮಣವರ್ಣಕ್ಕೂ ಯಾವ ಸಂಬಂಧವೂ ಇಲ್ಲ. ಭಾರತೀಯರು  ಪ್ರಾಚೀನ ಕಾಲದಿಂದಲೂ ನಿಜವಾದ ಬ್ರಾಹ್ಮಣ ಯಾರು ಎಂಬ ಪ್ರಶ್ನೆಯನ್ನು ಕೇಳುತ್ತ ಬಂದಿದ್ದಾರೆ. ಆಂದರೆ ಬ್ರಾಹ್ಮಣನ ಸಾರ್ಥಕತೆಯ ಕುರಿತು ಚರ್ಚಿಸುವಾಗ ವರ್ಣ ಲಕ್ಷಣ ಬೇರೆ, ಜಾತಿ ಬೇರೆ ಎಂಬುದನ್ನು ಇಂಥ ಚರ್ಚೆಗಳು ಮನದಟ್ಟು ಮಾಡಲು ಪ್ರಯತ್ನಿಸುತ್ತವೆ. ಆದರೆ ಇಂದು ಚರ್ಚೆಯಲ್ಲಿರುವ ಬ್ರಾಹ್ಮಣ್ಯ ಎಂದರೆ ಬ್ರಾಹ್ಮಣರ ಡಾಕ್ಟ್ರಿನ್ ಎಂಬ ಕ್ರೈಸ್ತ ಥಿಯಾಲಜಿಯ ಪರಿಕಲ್ಪನೆ. ಅಂದರೆ ಬ್ರಾಹ್ಮಣರು ರೂಪಿಸಿ ಈ ಸಮಾಜದ ಮೇಲೆ ಹೇರಿದ ಮಾರ್ಗದರ್ಶೀ ನಿಯಮಗಳು. ಈ ಡಾಕ್ರಿನ್ನಿನಲ್ಲಿ ಒಳ್ಳೆಯ ಅಂಶ ಒಂದೂ ಇಲ್ಲದಿರುವುದೇ ಇದರ ವಿಶೇಷ. ಬರೀ ಒಣ ಅಹಂಕಾರ, ತರತಮ, ಜಾತಿಭೇದ, ಅಸ್ಪೃಶ್ಯತೆ, ಸ್ತ್ರೀ ಶೋಷಣೆ, ಮಡಿವಂತಿಕೆ, ಮೌಢ್ಯ, ಹೀಗೆ ಭಾರತೀಯ ಸಮಾಜದ ಅನಿಷ್ಠಗಳೆಂದು ಲಿಬರಲ್ ಹಾಗೂ ಎಡಪಂಥೀಯ ಚಿಂತನೆಗಳು ಏನೇನನ್ನು ಬಿಂಬಿಸುತ್ತವೆಯೋ ಅದೆಲ್ಲವೂ ಬಾಹ್ಮಣರದೇ ಡಾಕ್ಟ್ರಿನ್! ಅದನ್ನು ತಮ್ಮದನ್ನಾಗಿ ಮಾಡಿಕೊಂಡ ಇತರ ಜಾತಿ ಮತಗಳ ವ್ಯಕ್ತಿಗಳಲ್ಲೂ ಬ್ರಾಹ್ಮಣ್ಯವಿದೆ ಎನ್ನುವ ಸಾಧ್ಯತೆ ಈ ಡಾಕ್ಟ್ರಿನ್ನನ್ನು ಭಾವಿಸಿಕೊಂಡಾಗ ಸೃಷ್ಟಿಯಾಗುತ್ತದೆ.  ಈ ಅರ್ಥದಲ್ಲಿ ಗೌಡಿಕೆ, ಪಾಳೇಗಾರಿಕೆ ಇತ್ಯಾದಿ ಶಬ್ದಗಳನ್ನು ಇದಕ್ಕೆ ಸಮೀಕರಿಸುವಂತಿಲ್ಲ. ಯಾರೂ ಭಾರತೀಯ ಸಮಾಜದ ಅನಿಷ್ಠಗಳೆಲ್ಲ ಗೌಡಿಕೆಯಿಂದ, ಪಾಳೇಗಾರಿಕೆಯಿಂದ ಹುಟ್ಟಿವೆ ಎಂದು ಹೇಳಿಲ್ಲ, ಹೋರಾಟಗಳನ್ನೂ ಮಾಡಿಲ್ಲ. 

ಪ್ರಶ್ನೆ ಇರುವುದು ಈ ಆಧುನಿಕ ಚರ್ಚೆಯಲ್ಲಿ ಬರುವ ಬ್ರಾಹ್ಮಣರೆಂದರೆ ವರ್ಣವಲ್ಲದಿದ್ದರೆ ಮತ್ಯಾರು? ಅಂಥ ಬ್ರಾಹ್ಮಣರಿಗೆ ಇವರು ತಿಳಿಸುವ ಡಾಕ್ಟ್ರಿನ್ ಎಂಬುದು ಇದೆಯೆ? ಇಲ್ಲಿ ಬ್ರಾಹ್ಮಣ ಎಂದರೆ ಪುರೋಹಿತಶಾಹಿ ಅಂತ. ಅವನು ಯುರೋಪಿಯನ್ನರ ಕ್ಯಾಥೋಲಿಕ್ ಪ್ರೀಸ್ಟ್ ಅಥವಾ ಕ್ಲೆರ್ಜಿ.  ಬ್ರಾಹ್ಮನಿಸಂ ಎಂಬುದು ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನಿದೆ ಎಂಬ ಪಾಶ್ಚಾತ್ಯ ಪೂರ್ವಗ್ರಹದ ಕೂಸು. ಅಸಲು ಈ ಕಥೆ ಹುಟ್ಟಲಿಕ್ಕೆ ಕಾರಣ ಯುರೋಪಿನ ಕ್ಯಾಥೋಲಿಕ್ ರಿಲಿಜನ್ನಿನ ಕುರಿತ ಪ್ರೊಟೆಸ್ಟಾಂಟ್ ಚಳವಳಿಕಾರರ ಕಥನವನ್ನು ಭಾರತದ ಹಿಂದೂಯಿಸಂಗೂ ವಿಸ್ತರಿಸಿದ್ದು. ಪ್ರೊಟೆಸ್ಟಾಂಟರ ಪ್ರಕಾರ ಈ ಕ್ಯಾಥೋಲಿಕ್ ಪ್ರೀಸ್ಟ್‌ಹುಡ್ ಎಂಬುದೊಂದು ಈವಿಲ್. ಡೆವಿಲ್‌ನ ಹುನ್ನಾರ. ಜನರನ್ನೆಲ್ಲ ನರಕಕ್ಕೆ ಒಯ್ಯುವ ಮಾರ್ಗ. ಹಾಗಾಗಿ ಬ್ರಾಹ್ಮಣ್ಯವೆಂದರೆ ಮೂಲತಃ ಈ ಕ್ಯಾಥೋಲಿಕ್ ಪುರೋಹಿತ ಶಾಹಿಯ ಕುರಿತ ಚಿತ್ರಣವಾಗಿದೆ.  ಭಾರತದಲ್ಲಿ ಇಸ್ಲಾಂ, ಕ್ರಿಶ್ಚಿಯಾನಿಟಿ, ಜೂಡಾಯಿಸಂ ಬಿಟ್ಟು ಬೇರೆ ಯಾವ ರಿಲಿಜನ್ನುಗಳನ್ನೂ ಇದುವರೆಗಿನ ಅಧ್ಯಯನಗಳಲ್ಲಿ ಗುರುತಿಸಲು ಸಾಧ್ಯವಾಗಿಲ್ಲ. ಅಂದಮೇಲೆ ಭಾರತದಲ್ಲಿದೆಯೆಂದು ಹೇಳಲಾಗುವ ಎಲ್ಲಾ ತರತಮಗಳು, ಶೋಷಣೆಗಳು, ಸಾಮಾಜಿಕ ಅನಿಷ್ಠಗಳೂ ಈ ಹಿಂದೂಯಿಸಂ ಎಂಬ ಭ್ರಷ್ಟ ರಿಲಿಜನ್ನಿನ ಡಾಕ್ಟ್ರಿನ್ನುಗಳು ಎಂಬ ಹೇಳಿಕೆ ಕೂಡಾ ಪ್ರಶ್ನಾರ್ಹವಾಗುತ್ತದೆ. ರಿಲಿಜನ್ನೇ ಇಲ್ಲದ ನೆಲದಲ್ಲಿ ಈ ಡಾಕ್ಟ್ರಿನ್ನುಗಳನ್ನು ತಯಾರಿಸಿ ಹೇರಿದವರೇ ಬ್ರಾಹ್ಮಣರೆಂಬ ಪ್ರೀಸ್ಟ್‌ಗಳು ಎಂಬುದೂ ಪ್ರಶ್ನಾರ್ಹ. ಈ ಕುರಿತು ಸರಳ ಕನ್ನಡದಲ್ಲೇ ಇದುವರೆಗೆ ಸಾಕಷ್ಟು ಬರೆಯಲಾಗಿದೆ. ಬ್ರಾಹ್ಮಣ ವಿರೋಧೀ ಹೋರಾಟಗಾರರಿಗೆ ಕಿಂಚಿತ್ತಾದರೂ ಜ್ಞಾನ ಕುತೂಹಲವಿದ್ದರೆ ಮರುಚಿಂತನೆಗೆ ಅಷ್ಟು ಬರವಣಿಗೆಗಳು ಸಾಕು.  ಇಂದು ಇವರು ಬ್ರಾಹ್ಮಣ ಎನ್ನುವಾಗ ಕ್ಯಾಥೋಲಿಕ್ ಪ್ರೀಸ್ಟ್ ಕುರಿತು ಪ್ರೊಟೆಸ್ಟಾಂಟರಂತೆ ಮಾತನಾಡುತ್ತಿದ್ದಾರೆಯೇ ಹೊರತು ಭಾರತದ ಬ್ರಾಹ್ಮಣರ ಕುರಿತಲ್ಲ.

ವಸ್ತುಸ್ಥಿತಿ ಏನೆಂದರೆ ಬ್ರಾಹ್ಮಣರೆಂದರೆ ಪ್ರೀಸ್ಟ್‌ಗಳಲ್ಲ. ಭಾರತೀಯ ಪುರೋಹಿತ ಎಂಬ ಶಬ್ದವನ್ನು ಪ್ರೀಸ್ಟ್ ಎಂಬುದಾಗಿ ತಪ್ಪಾಗಿ ತಿಳಿಯಲಾಗಿದೆ. ಬ್ರಾಹ್ಮಣರನ್ನು ವರ್ಣಿಸಲಿಕ್ಕೆ ಪುರೋಹಿತ ಶಬ್ದವೂ ಪ್ರಯೋಜನವಿಲ್ಲ. ಬ್ರಾಹ್ಮಣರೆಲ್ಲರೂ ಪುರೋಹಿತರಲ್ಲ. ಪುರೋಹಿತರು ಅರ್ಚಕರು ಬ್ರಾಹ್ಮಣೇತರ ಜಾತಿಗಳಲ್ಲೂ ಇದ್ದಾರೆ. ಇಂದಂತೂ ಇರುವುದು ಒಂದಷ್ಟು ಬ್ರಾಹ್ಮಣ ಜಾತಿಗಳು.  ಈ ಜಾತಿಗಳನ್ನಾಧರಿಸಿ  ಬ್ರಾಹ್ಮಣ್ಯವನ್ನು ಗುರುತಿಸಲು ಸಾಧ್ಯವೆ? ಅದೂ ಸಾಧ್ಯವಿಲ್ಲ. ಬ್ರಾಹ್ಮಣ ಜಾತಿಗಳನ್ನು ಭೌತಿಕವಾಗಿ ಗುರುತಿಸುವ ಚಿಹ್ನೆಯೆಂದರೆ ಜನಿವಾರವಾದರೂ ಜನಿವಾರ ಹಾಕಿದವರೆಲ್ಲ ಬ್ರಾಹ್ಮಣರಲ್ಲ.  ಮದ್ಯ ಮಾಂಸಾಹಾರವನ್ನು ರೂಢಿಸಿಕೊಂಡ ಅನೇಕ ಜಾತಿಗಳೂ ಜನಿವಾರ ಹಾಕುತ್ತವೆ. ಲಿಂಗಿ ಬ್ರಾಹ್ಮಣ ಎಂದು ಕರೆದುಕೊಂಡ ಲಿಂಗಾಯತರೂ ಇದ್ದಾರೆ. ಹೋಗಲಿ, ಸಸ್ಯಾಹಾರವಾದರೂ ಬ್ರಾಹ್ಮಣರ ಸೊತ್ತೆ? ಬ್ರಾಹ್ಮಣರಲ್ಲೇ ಮೀನು, ಮಾಂಸಗಳನ್ನು ಪಾರಂಪರಿಕ ಆಹಾರವಾಗಿ ಬಳಸುವ ಜಾತಿಗಳಿವೆ, ಬ್ರಾಹ್ಮಣೇತರ ಲಿಂಗಾಯತ ಮುಂತಾದ ಜಾತಿಗಳಲ್ಲಿ ಕಟ್ಟಾ ಸಸ್ಯಾಹಾರವಿದೆ. 

ಇನ್ನು ಬ್ರಾಹ್ಮಣರ ಡಾಕ್ಟ್ರಿನ್ ಎಂಬುದೊಂದು ಇದೆಯೆ? ಇಂಥದ್ದೊಂದು ಇದೆ ಎಂಬುದಕ್ಕೆ ಮತ್ತೆ ನಮ್ಮ ಸಮಾಜದಲ್ಲಿ ಕುರುಹುಗಳಿಲ್ಲ. ಇವರೆನ್ನುವಂತೆ ಸಾಮಾಜಿಕ ತರತಮ, ಮಡಿ, ಅಸ್ಪೃಶ್ಯತೆ, ಸ್ತ್ರೀ ಶೋಷಣೆ, ಇವೆಲ್ಲ ಬ್ರಾಹ್ಮಣರಿಗೇ ಮೀಸಲಾದ ಸೊತ್ತಲ್ಲ ಎಂಬುದು ಈ ಸಮಾಜದಲ್ಲಿ ಬೆಳೆದುಬಂದ ಪ್ರತಿಯೊಬ್ಬನ ಅನುಭವ. ಕೆಳಜಾತಿಗಳಿಗೆ ಹೋದಂತೆ ಅದು ಇನ್ನೂ ಗಾಢವಾಗಿ, ಕ್ರೂರವಾಗಿ ವ್ಯಕ್ತವಾಗುವುದೂ ಪ್ರಚಲಿತ ವಿದ್ಯಮಾನಗಳಲ್ಲಿ ಸ್ಪಷ್ಟವಾಗಿದೆ. ಬ್ರಾಹ್ಮಣ್ಯ ವಿರೋಧಿಗಳಿಗೂ ಉದಾಹರಣೆ ಕೊಡುವಾಗ ಇಂಥವೇ ಸಿಗುತ್ತವೆ ಎಂಬುದು ಅವರೇ ನಡೆಸುವ ಚರ್ಚೆಗಳಲ್ಲಿ ಢಾಳಾಗಿ ಹೊಡೆದು ಕಾಣುವ ಸಂಗತಿ. ಹಾಗಿರುವಾಗ ಇವೆಲ್ಲವೂ ಬ್ರಾಹ್ಮಣರ ಡಾಕ್ಟ್ರಿನ್ನುಗಳು ಎಂಬುದಕ್ಕೆ ಪ್ರಮಾಣವನ್ನು ನೀಡುವಲ್ಲಿ ಅವರೇ ವಿಫಲರಾಗುತ್ತಾರೆ. ಸುಮ್ಮನೆ ಅವಕ್ಕೆಲ್ಲ ಬ್ರಾಹ್ಮಣರೇ ಕಾರಣ ಎಂದು ಹೇಳಿಬಿಟ್ಟರೆ ಬೇರೆಯವರು ತಿಂದ ತುಪ್ಪವನ್ನು ಬ್ರಾಹ್ಮಣರ ಬಾಯಿಗೆ ಒರೆಸುವ ಪ್ರಯತ್ನವಾಗಿ ಕಾಣಿಸುತ್ತದೆ. ಅಷ್ಟೇ ಅಲ್ಲ ಅದು ನಿರಾಧಾರವಾದ ಜಾತಿ ನಿಂದನೆಯಂತೆ ಕಾಣುತ್ತದೆ ಎಂಬ ಪರಿಜ್ಞಾನವೂ ಅವರಿಗಿಲ್ಲ. ಸಹೃದಯೀ ಪ್ರಜ್ಞಾವಂತ ಕೇಳುಗರಿಗೆ ಇವರೆಲ್ಲ ವಸಾಹತು ಕಾಲದ ಹಿಸ್ಟರಿಯ ವರ್ಣನೆಗಳಿಂದ ಮುಕ್ತಿ ಪಡೆಯಲು ನಿರಾಕರಿಸುವ ಪ್ರೇತಾತ್ಮಗಳಂತೆ ಕಾಣುತ್ತಾರೆ.

ವಸಾಹತುಕಾಲದಲ್ಲಿ ಕಟ್ಟಿದ ಪ್ರಾಚೀನ ಭಾರತದ ಹಿಸ್ಟರಿಯ ವರ್ಣನೆಗಳನ್ನು ಸಾರಾ ಸಗಟಾಗಿ ಬಳಸುವುದರಲ್ಲಿ ಸಮಸ್ಯೆಯಿದೆ ಎಂಬುದು ಚರಿತ್ರೆಕಾರರಿಗೆ ಹೊಲಬಾಗಿ ಶತಮಾನಗಳೇ ಕಳೆದವು. ಆದರೆ ಅಷ್ಟರಲ್ಲೇ ಬ್ರಾಹ್ಮಣ-ಬ್ರಾಹ್ಮಣ್ಯಗಳು ರಾಜಕೀಯ ಪ್ರಭೇದವಾಗಿ ಪರಿವರ್ತಿತನಾಗಿದ್ದವು.. ವಿಪರ‍್ಯಾಸವೆಂದರೆ ಬ್ರಾಹ್ಮಣ-ಬ್ರಾಹ್ಮಣ್ಯವು ರಾಜಕೀಯ ಪ್ರಭೇದವಾಗಿ ಅವತರಿಸಿದ್ದೇ ವಸಾಹತು ಹಿಸ್ಟರಿಯ ಸಂಶೋಧನೆಯನ್ನಾಧರಿಸಿ. ಬ್ರಾಹ್ಮಣ ವಿರೋಧಿಗಳು ಈ ಸತ್ಯವನ್ನು ಪ್ರಮಾಣೀಕರಿಸುವುದು ಹಿಸ್ಟರಿಯಿಂದಲೇ. ಆದರೆ ಈ ಸಂಶೋಧನೆ ತನ್ನ ಮಿತಿಗಳನ್ನು ಕಳಚಿಕೊಳ್ಳಲು ಆಸ್ಪದವನ್ನು ನೀಡದಂತೆ ಶತಮಾನಗಳಿಂದ ದಿಗ್ಭಂಧನ ಹಾಕಲಾಗಿದೆ. ’ನೀನು ಇಷ್ಟು ಹೇಳಿದ್ದು ಸಾಕು, ಇನ್ನು ಮತ್ತೆ ಹೊಸದನ್ನು ಹೇಳಕೂಡದು’ ಎಂದು ತಮ್ಮ ಲಾಭಕ್ಕಾಗಿ ಆ ಹಿಸ್ಟರಿಯ ಕತ್ತನ್ನೇ ಅಮುಕಿ ಹಿಡಿಯಲಾಗಿದೆ.

ಬ್ರಾಹ್ಮಣನ ಕುರಿತು ಪಾಶ್ಚಾತರ ಕಲ್ಪನೆಗೆ ಹೊಂದುವಂತಹ ಒಂದು ಅವಾಸ್ತವಿಕ ಚಿತ್ರಣವು ಆಧುನಿಕ ವಿದ್ಯಾವಂತರ ಮನದಲ್ಲಿ ಇಂದು ಬೇರೂರಿದೆ. ನಮ್ಮಲ್ಲಿ ಕಾದಂಬರಿ ಕಥೆ ಸಿನೀಮಾಗಳಲ್ಲಿ ಬ್ರಾಹ್ಮಣನ ಒಂದು ಸ್ಟೀರಿಯೋ ಟೈಪ್ ಕಾಣಿಸುತ್ತದೆ. ಜುಟ್ಟು ಜನಿವಾರ ಧರಿಸಿ, ಗುಳ್ಳೆ ನರಿಯಂತೆ ವರ್ತಿಸುತ್ತ, ಬ್ರಾಹ್ಮಣರ ಡಾಕ್ಟ್ರಿನ್ನು ಎಂಬ ಸಕಲ ಕೇಡುಗಳನ್ನೂ ಮೈಗೂಡಿಸಿಕೊಂಡ ಪಾತ್ರ ಅದು. ಈ ಪಾತ್ರವು ಬ್ರಾಹ್ಮಣ ವಿರೋಧೀ ಚಳವಳಿಗಳಿಂದ ಎಷ್ಟು ಗಟ್ಟಿಯಾಗಿದೆಯೆಂದರ ಸ್ವತಃ ಬ್ರಾಹ್ಮಣರೇ ತಮ್ಮೆಲ್ಲ ಅನುಭವಗಳನ್ನು ನಿರಾಕರಿಸಿ ತಮ್ಮ ಕುರಿತ ಅಂಥ ಚಿತ್ರಣಗಳನ್ನು ನಿಜವೆಂದು ನಂಬಿ ಪ್ರಗತಿಪರರೆಂಬ ಭ್ರಮೆಯಲ್ಲಿ ತೇಲುವ ಮಟ್ಟಿಗೆ. ದುರ್ಗುಣಗಳು ಯಾವ ಜಾತಿಯ ಸೊತ್ತೂ ಅಲ್ಲದ್ದರಿಂದ ಬ್ರಾಹ್ಮಣ ಜಾತಿಗಳಲ್ಲೂ ಅವು ಕಂಡುಬರುವುದು ಪ್ರಕೃತಿ ನಿಯಮ. ಅಂಥ ಉದಾಹರಣೆಗಳನ್ನೇ ಹೆಕ್ಕಿ ಸಾಮಾನ್ಯೀಕರಿಸುತ್ತ, ತಿರುಚುತ್ತ, ಮಸಾಲೆ ಸೇರಿಸುತ್ತ ಬ್ರಾಹ್ಮಣರ ಸ್ಟೀರಿಯೋಟೈಪಿಗೆ ಆಧಾರಗಳನ್ನು ಸೃಷ್ಟಿಸುವ ಉದ್ದೇಶಪೂರ್ವಕ ಪ್ರಯತ್ನ ನಡೆದಿದೆ. ಇಂಥ ಬ್ರಾಹ್ಮಣನ ಚಿತ್ರವು ಪುರೋಹಿತ ವೃತ್ತಿಯನ್ನು ಅಥವಾ ಅರ್ಚಕ ವೃತ್ತಿಯನ್ನು ಮಾಡುವವನ ವೇಷದಲ್ಲಿರುವುದರಿಂದ ಅಂಥ ವೇಷಗಳು ದೇವಾಲಯಗಳಲ್ಲಿ, ಧರ್ಮಕಾರ್ಯಗಳಲ್ಲಿ ಆಗಾಗ್ಗೆ ಸಾಕ್ಷೀಭೂತವಾಗಿ ಕಂಡಂತಾಗುತ್ತದೆ, ಆದರೆ  ಬರೀ ವೇಷವೊಂದು ತಾಳೆಯಾದರಾಯಿತೆ? ಅವನಿಗೆ ಆರೋಪಿಸಿದ ಗುಣಸ್ವಭಾವಗಳು ಇವರೆಲ್ಲರಲ್ಲ್ಲೂ ಇವೆಯೆಂದು ನಮ್ಮ ಅನುಭವಕ್ಕೆ ಕಾಣಿಸುವುದಿಲ್ಲ. ಪ್ರಮುಖವಾಗಿ ಇಂಥ ಬ್ರಾಹ್ಮಣರು ಸಾಮಾಜಿಕ ಅಧಿಕಾರ ಹೊಂದಿರುವ  ಬದಲು ಅಬ್ಬೇಪಾರಿಗಳಾಗಿರುವುದೇ ಹೆಚ್ಚು.  ಅದಕ್ಕೂ ಮಹತ್ವದ್ದೆಂದರೆ ಭಾರತದ ತುಂಬೆಲ್ಲ ನಾನಾ ಪ್ರಕಾರದ ಬ್ರಾಹ್ಮಣೇತರ ಪುರೋಹಿರು, ಅರ್ಚಕರು ಬ್ರಾಹ್ಮಣರಷ್ಟೇ ಢಾಳಾಗಿ ಕಾಣಿಸುತ್ತಾರೆ. 

ಅಷ್ಟಾಗಿಯೂ ಎಲ್ಲೆಲ್ಲೂ ಕಾಣಿಸುವ ಬ್ರಾಹ್ಮಣರು ಇಂಥ ವೇಷಕ್ಕೆ ಹೊಂದದಂಥವರು. ನಾನಾ ವೃತ್ತಿಗಳನ್ನು ಅನುಸರಿಸುವ ಬ್ರಾಹ್ಮಣರಿದ್ದಾರೆ. ಅವರಲ್ಲಿ ವೇಷಭೂಷಣ, ಜೀವನಕ್ರಮದಲ್ಲಿ ಇಂಗ್ಲೀಷರಾಗಿ ಬದಲಾದವರು ಹಾಗೂ ಆಧುನಿಕ ವಿದ್ಯಾಭ್ಯಾಸದಿಂದಾಗಿ ಐರೋಪ್ಯರಂತೆ ಯೋಚಿಸುವವರಂತೂ ಎಲ್ಲೆಲ್ಲೂ ಇದ್ದಾರೆ. ಅಂಥವರಲ್ಲಿ ಈ ಸಾಂಪ್ರದಾಯಿಕ ಸ್ಟೀರಿಯೋಟೈಪ್ ವೇಷವಿಲ್ಲದಿದ್ದರೂ ಕೂಡ ಅವರು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರೆಂಬ ವಾಸ್ತವವಂತೂ ಸತ್ಯ. ಅಂಥವರಲ್ಲಿ ಬ್ರಾಹ್ಮಣ್ಯದ ದುರ್ಗುಣಗಳಿರುತ್ತವೆ ಎಂಬ ಗುಮಾನಿಯನ್ನು ಉಳಿಸಿಕೊಳ್ಳಲು ಜಾತಿಯೇ ನಿರ್ಣಾಯಕವಾಗುತ್ತದೆ.  ಅದನ್ನು ಪರೀಕ್ಷಿಸುವ ಗೋಜಿಗೂ ಯಾರೂ ಹೋಗುವುದಿಲ್ಲ. ಆದರೆ ಇವರ ಸಮಸ್ಯೆ ಇಷ್ಟಕ್ಕೇ ಮುಗಿಯುವಂತಿಲ್ಲ. ನಿಜವಾದ ಸವಾಲೆಂದರೆ ಬ್ರಾಹ್ಮಣ ಜಾತಿಯವರೇ ಮುಂಚೂಣಿಯಲ್ಲಿ ನಿಂತು ಬ್ರಾಹ್ಮಣ್ಯವನ್ನು ಖಂಡಿಸುವುದು, ಸುಧಾರಣಾ ಚಳವಳಿಗಳನ್ನು ಕಟ್ಟುವುದು, ಬ್ರಾಹ್ಮಣ್ಯದ ಕಲ್ಪನೆಗೆ ವ್ಯತಿರಿಕ್ತವಾಗಿ ವರ್ತಿಸುವುದು, ಬಂಡಾಯ ಏಳುವುದು, ಇತ್ಯಾದಿ  ಉದಾಹರಣೆಗಳು ನಮ್ಮ ಸ್ಮೃತಿಪಟಲದೊಳಗೆ ಕಿಕ್ಕಿರಿದಿವೆ. ಅಂಥವರ ಮೇಲೂ ಜಾತಿಯನ್ನಾಧರಿಸಿ ಸಾಕಷ್ಟು ಗುಮಾನಿ ಇದ್ದರೂ ಅವರ ಕಾರ್ಯವನ್ನು ಒಪ್ಪಿಕೊಳ್ಳುವ, ವಿವರಿಸುವ ಅನಿವಾರ್ಯತೆಯಂತೂ ಇದೆ. ಆಗ ಅವರು ಜಾತಿಯಲ್ಲಿ ಬ್ರಾಹ್ಮಣರಾಗಿದ್ದರೂ ಅವರಲ್ಲಿ ಬ್ರಾಹ್ಮಣ್ಯವಿಲ್ಲ ಎಂಬ ಸುಲಭ ವಿವರಣೆ ಕೆಲಸಕ್ಕೆ ಬರುತ್ತದೆ. ಅಂಥ ವಿವರಣೆಯನ್ನು ಕೊಟ್ಟುಕೊಂಡೇ ಅವರನ್ನು ಬ್ರಾಹ್ಮಣ ವಿರೋಧಿಗಳು ಸ್ವೀಕರಿಸಿ ನಂಬುತ್ತಾರೆ. ಅಂದರೆ ಬ್ರಾಹ್ಮಣನಾಗಿ ಹುಟ್ಟಬಹುದು, ಆದರೆ ತನ್ನ ಜಾತಿಯ ಕುರಿತ ಅವಾಸ್ತವಿಕ ಚಿತ್ರಣವನ್ನು, ವೃಥಾ ನಿಂದನೆಯನ್ನು  ಪ್ರಶ್ನಿಸುವ ಹಾಗೂ ವಿರೋಧಿಸುವ ಸ್ವತಂತ್ರವಿಲ್ಲ. ಬ್ರಾಹ್ಮಣೇತರರಿಗೆ ಅಹಿತವನ್ನು ಬಯಸದಿದ್ದರೂ, ಅವರ ಕುರಿತು ಯಾವುದೇ ಕಹಿ ಭಾವನೆ ಇಲ್ಲದಿದ್ದರೂ ತನ್ನ ಅನುಭವವನ್ನು ಹೇಳಿಕೊಂಡಾಕ್ಷಣ ಆತ ಬ್ರಾಹ್ಮಣೇತರರ ವಿರೋಧಿಯಾಗುತ್ತಾನೆ. ಅವನು ತನ್ನ ಅನುಭವವನ್ನೂ ಧಿಕ್ಕರಿಸಿ, ಅವರ ಚಿತ್ರಣವನ್ನು ಮನಸಾರೆ ಒಪ್ಪಿಕೊಂಡರೆ ಮಾತ್ರ ಅವನು ಬ್ರಾಹ್ಮಣ್ಯವನ್ನು ಮೀರಿದವನಾಗುತ್ತಾನೆ. 

ಬ್ರಾಹ್ಮಣ ಎಂಬ ಜಾತಿ ಬೇರೆ, ಬ್ರಾಹ್ಮಣ್ಯ ಎಂಬ ಗುಣಧರ್ಮ/ಡಾಕ್ಟ್ರಿನ್ನು ಬೇರೆ ಎಂದು   ತಿಪ್ಪೆ ಸಾರಿಸುವ ಕೆಲಸವು ಏಕೆ ಉದ್ಭವಿಸುತ್ತದೆಯೆಂದರೆ ಬ್ರಾಹ್ಮಣರ ಕುರಿತು ವಸಾಹತು ಕಾಲದ ಕಥೆಗೂ ನಮ್ಮ ಅನುಭವಕ್ಕೂ ತಾಳೆಯಾಗದಿದ್ದಾಗ.  ಆದರೆ ಎಷ್ಟು ದಿನ ಅಂತ ಜನರ ಅನುಭವವನ್ನು ನಿರಾಕರಿಸಿ ಬ್ರಾಹ್ಮಣ್ಯದ  ರಾಜಕೀಯ ನಡೆಸಲು ಸಾಧ್ಯ? ಅದು ಮತ್ತೊಂದು ವಿರೋಧೀ ರಾಜಕೀಯಕ್ಕೆ ಅವಕಾಶ ಮಾಡುತ್ತದೆ. ಹಿಂದುತ್ವದಲ್ಲಿ  ಅಂಥ ಸಾಧ್ಯತೆಯನ್ನು ಗುರುತಿಸಿ  ಇತ್ತೀಚಿನ ರಾಜಕೀಯದಲ್ಲಿ ಬ್ರಾಹ್ಮಣ ಎಂಬ ಸಮುದಾಯದ ವಿರೋಧ ಕಟ್ಟಿಕೊಳ್ಳುವ ಅಪಾಯ ಕೂಡ ರಾಜಕಾರಣಿಗಳಿಗೆ ಎದುರಾಗುತ್ತಿದೆ. ಈ ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಬೌದ್ಧಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ಕಂಡುಹಿಡಿದುಕೊಂಡ ಸುಲಭ ಪರಿಹಾರವೆಂದರೆ ಬ್ರಾಹ್ಮಣ್ಯ ಎಂದರೆ ಬ್ರಾಹ್ಮಣ ಜಾತಿಯಲ್ಲ ಎನ್ನುವುದು. ಬುದ್ಧಿಜೀವಿಗಳು ಈ ಥರದ ಹೇಳಿಕೆಗಳನ್ನು ಸಾಕಷ್ಟು ಹಿಂದಿನಿಂದಲೇ ಮಾಡುತ್ತ ಬಂದಿದ್ದಾರೆ. ಆದರೆ ಹಾಗೆ ಮಾಡುವುದು ಹೆಗ್ಗಣವನ್ನು ಒಳಗಿಟ್ಟು ಬಿಲಕ್ಕೆ ಮಣ್ಣು ಮೆತ್ತಿದಷ್ಟೇ ಸಾರ್ಥಕ ಕೆಲಸವಾಗುತ್ತದೆ. ಅದು ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂಬುದು ಮುಂದಿನ ವಿವರಗಳಿಂದ ಸ್ಪಷ್ಟವಾಗುತ್ತದೆ:

ಭಾರತೀಯ ರಾಜಕೀಯದಲ್ಲಿ ಬ್ರಾಹ್ಮಣ-ಬ್ರಾಹ್ಮಣತ್ವ ಎಂಬುದು ಒಂದು ಜಾತಿಯಾಗಿಯೇ ಪ್ರಯೋಗಕ್ಕೆ ಬಂದಿದೆ. ಅದಕ್ಕೆ ಬೇರೇನೂ ಅರ್ಥವಿಲ್ಲ. ಉದಾಹರಣೆಗೆ, ಹಿಂದುತ್ವ ರಾಜಕೀಯವನ್ನು ಹಿಮ್ಮೆಟ್ಟಿಸಲು   ಅಲ್ಪಸಂಖ್ಯಾತರು, ದಲಿತರು ಹಾಗೂ ಬ್ರಾಹ್ಮಣೇತರರನ್ನು/ಶೂದ್ರರನ್ನು ಒಟ್ಟುತಂದು ರಾಜಕೀಯ ಬಣವೊಂದನ್ನು ಸೃಷ್ಟಿಸುವ ಅಗತ್ಯವಿದೆ ಎಂಬುದನ್ನು ೯೦ರ ದಶಕದಲ್ಲಿ  ಬುದ್ಧಿಜೀವಿ ವಲಯದಲ್ಲಿ ಕೇಳತೊಡಗುತ್ತೇವೆ. ಅಂದು ಹಿಂದುತ್ವ ರಾಜಕಾರಣದ ಕುರಿತು ಬುದ್ಧೀಜೀವಿಗಳಿಗೆ ಕೆಲವು ತಪ್ಪುಕಲ್ಪನೆಗಳಿದ್ದವು. ಅದು ಬ್ರಾಹ್ಮಣರ ಕಾರ್ಯಕ್ರಮ ಅಥವಾ ಹುನ್ನಾರ ಎಂದು ಅವರು ಭಾವಿಸಿದ್ದರು. (ಇಂದೂ ಅವರ ಮನಃಸ್ಥಿತಿ ಬದಲಾಗಿಲ್ಲ ಅನ್ನಿ.) ಮನುಸ್ಮೃತಿಯನ್ನು ಪುನಃ ಜಾರಿಗೆ ತಂದು ಸಂವಿಧಾನವನ್ನು ಅಮಾನ್ಯಗೊಳಿಸಿ ತಮ್ಮ ಬ್ರಾಹ್ಮಣ ಪುರೋಹಿತಶಾಹಿಯನ್ನು ಹೇರುವುದು ಹಿಂದುತ್ವದ ಗುರಿ. ಅದು ಯಶಸ್ವಿಯಾದಲ್ಲಿ  ಬ್ರಾಹ್ಮಣೇತರರೆಲ್ಲರ ಪ್ರಾಚೀನ ಶೋಷಣೆಯ ಅಧ್ಯಾಯ ಮತ್ತೆ ಪ್ರಾರಂಭವಾಗುತ್ತದೆ. ಹಾಗಾಗಿ ಬ್ರಾಹ್ಮಣೇತರರ ಬಣವನ್ನು ಅದಕ್ಕೆ ಎದುರಾಗಿ ಸೃಷ್ಟಿಸುವ ಅಗತ್ಯವಿದೆ.  ಈ ಗ್ರಹಿಕೆಗಳ ಹಿಂದೆ ಇರುವ ವಸಾಹತುಶಾಹೀ ತಪ್ಪು ಕಲ್ಪನೆಗಳನ್ನು ಬಿಡಿಸಿ ಹೇಳಬೇಕಿಲ್ಲ.  ಏಕೆಂದರೆ ಬ್ರಾಹ್ಮಣ ಜಾತಿಗಳಲ್ಲ ಎಂಬುದನ್ನು ಬಿಟ್ಟರೆ ಯಾವ ವಾಸ್ತವದಲ್ಲಿ ಮುಸ್ಲಿಮರು, ಕ್ರೈಸ್ತರು, ಸಮಸ್ತ ಬ್ರಾಹ್ಮಣೇತರ ಜಾತಿಗಳು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸ್ತರಗಳಲ್ಲಿ ಸಮಾನರಾಗುತ್ತಾರೆ? ಇವರೆಲ್ಲ ಶೋಷಿತ ವರ್ಗದವರೆಂದು ಘೋಷಿಷಿಬಿಟ್ಟರಾಯಿತೆ? ಸಮಸ್ತ ಅಲ್ಪಸಂಖ್ಯಾತರೂ, ಬ್ರಾಹ್ಮಣೇತರರೂ, ಶೋಷಿತ ವರ್ಗದಲ್ಲಿ ಹೇಗೆ ಬರುತ್ತಾರೆ? ಅವರಲ್ಲೂ ಶೋಷಕರಿದ್ದಾರೆ. ಈ ಕಟ್ಟುಕಥೆಯ ಮೇಲೆ ಸ್ವತಃ ಅದರ ವಕ್ತಾರರಿಗೇ ನಂಬಿಕೆ ಇರಲಿಕ್ಕೆ ಸಾಧ್ಯವಿಲ್ಲ. ಹಾಗಿರುವಾಗ ಯಾವ ಭಾರತೀಯ ಜಾತಿ ಮತಗಳನ್ನು ಒಳಗೊಂಡು ಇವರು ರಾಜಕಾರಣ ಮಾಡಬಯಸುತ್ತಾರೋ ಅವರಿಗೆ ತಾವೆಲ್ಲ ಸಮಾನರಾಗಿ, ತಮ್ಮ ವಿರುದ್ಧ ಬ್ರಾಹ್ಮಣ ಪುರೋಹಿತಶಾಹಿ ಎಂಬ  ಕಲ್ಪಿತ ಕ್ರೂರ ಮೃಗವು ಏಕೈಕ ವೈರಿಯಾಗಿ ಕಾಣುವ ಪರಿ ಎಂತು?

ಈ ಕಾರಣದಿಂದ ಈ ರಾಜಕೀಯ ನಡೆಯು ತನ್ನದೇ ಆದ ಸಂಕೋಲೆಗಳನ್ನೂ ಸೃಷ್ಟಿಸಿಕೊಂಡಿದೆ. ಇಂದಿನ ವಿವಾದವು ಅದಕ್ಕೆ ಸಂಬಂಧಿಸಿದ್ದು. ಸುಳ್ಳುಗಳ ಮೇಲೆ ಚಿಂತನೆಯನ್ನು ಕಟ್ಟುತ್ತೇವೆಂದು ನಿರ್ಣಯಿಸಿದ ನಂತರ ಸುಳ್ಳಿನ ಮೇಲೆ ಸುಳ್ಳುಗಳನ್ನು ಹೆಣೆಯುವುದೇ ಗತಿ. ಆದರೆ ಸುಳ್ಳುಗಳನ್ನು ಜನರಿಗೆ ಅರ್ಥಮಾಡಿಸಬೇಕಲ್ಲ, ಅದನ್ನಾಧರಿಸಿ ಸಂಘಟನೆ ಮಾಡಬೇಕಲ್ಲ. ಅದು ಪರಿಣಾಮದಲ್ಲಿ ಜಾತಿ ರಾಜಕೀಯದ ಸ್ವರೂಪವನ್ನು ಪಡೆದುಕೊಂಡು ಜನಮನದಲ್ಲಿ ಸ್ಥಾನಗಳಿಸಿತು. ಜಾತಿ ಕಾಣುವ ಸಂಗತಿ. ಅನುಭವಕ್ಕೆ ಬರುವ ಸಂಗತಿ. ಇವರು ಬ್ರಾಹ್ಮಣ್ಯವೆಂದರೆ ಜನರು ಬ್ರಾಹ್ಮಣರದ್ದು ಅಂತ ತಮ್ಮ ಸುತ್ತುಮುತ್ತಲಿನ ಜಾತಿಗಳನ್ನೇ ಅಸ್ಪಷ್ಟವಾಗಿ ಗ್ರಹಿಸಿಕೊಳ್ಳುತ್ತಾರೆ. ಆ ಜಾತಿಗಳಿಂದ ತಮಗೆ ವಂಚನೆಯಾಯಿತು ಅಂತಲೇ ಅರ್ಥೈಸುತ್ತಾರೆ. ಜನಸಾಮಾನ್ಯರನ್ನು ಬಿಡಿ, ಪ್ರತಿಷ್ಠಿತ ಬುದ್ಧಿಜೀವಿಗಳಿಂದ ಹಿಡಿದು ಹೋರಾಟಗಾರರವರೆಗೆ ಎಲ್ಲರೂ ಈ ಶಬ್ದವನ್ನು ಅರ್ಥೈಸುವುದು ಜಾತಿಯ ನೆಲೆಯಲ್ಲೇ ಎಂಬುದನ್ನು ಅವಕಾಶ ಸಿಕ್ಕಿದಾಗೆಲ್ಲ ತೋರಿಸಿಕೊಟ್ಟಿದ್ದಾರೆ. ಪಾಪ ಅವರೂ ಅಸಹಾಯಕರು. ಎಕೆಂದರೆ ಬ್ರಾಹ್ಮಣ್ಯ ಎಂಬ ಪರಿಕಲ್ಪನೆಗೆ ಬೇರೆ ನೆಲೆಯಿಲ್ಲ. ವಾಸ್ತವಿಕ ನೆಲೆಯಿಲ್ಲದ ಶಬ್ದವನ್ನು ಒಂದೋ  ಅರ್ಥವಿಲ್ಲದೇ ಉಚ್ಛರಿಸಬೇಕು, ಇಲ್ಲ ಜಾತಿಯ, ಜನಿವಾರದ ನೆಲೆಗೆ ತಂದೇ ಅರ್ಥೈಸಬೇಕು. ಅದನ್ನು ಹಾಗೇ ಮಾಡಲಾಗುತ್ತಿದೆ.

ಈ ರಾಜಕಾರಣದಲ್ಲಿ ಬ್ರಾಹ್ಮಣರನ್ನು  ಜಾತಿಯನ್ನೇ ಆಧರಿಸಿ ಹೊರಗಿಡಲಾಗುತ್ತದೆಯೇ ವಿನಃ ಬ್ರಾಹ್ಮಣ್ಯದ ಆಧಾರದಲ್ಲಿ ಅಲ್ಲ. ಅದರ ಕಾರ್ಯಕ್ರಮಗಳೂ ಕೂಡ ಬ್ರಾಹ್ಮಣರನ್ನು ಜಾತಿಯಾಧರಿಸಿ ಗುರುತಿಸಿವೆಯೇ ಹೊರತೂ ಬ್ರಾಹ್ಮಣ್ಯವನ್ನು ಆಧರಿಸಿಯಲ್ಲ. ಇಂಥ ವಾಸ್ತವವನ್ನು ಸೃಷ್ಟಿಸಿದ ಮೇಲೆ ಬ್ರಾಹ್ಮಣ ಜಾತಿಯವರಿಗೂ, ಬ್ರಾಹ್ಮಣೇತರರಿಗೂ ಇವರು ಹೇಳುವ ಬ್ರಾಹ್ಮಣ್ಯವು ಜಾತಿಯ ರೂಪದಲ್ಲಿ ಮಾತ್ರವೇ ಅನುಭವಗಮ್ಯವಾದ ಸಂಗತಿಯಾಗಬಲ್ಲದು. ಅಂದರೆ ಈ ಬುದ್ಧಿಜೀವಿಗಳ ಹಾಗೂ ರಾಜಕಾರಣಿಗಳ ಮಾತುಗಳು ಜಾತೀಯತೆಯನ್ನು ವ್ಯಾಪಕವಾಗಿ ಗಟ್ಟಿಮಾಡುವ ಕೆಲಸವನ್ನಲ್ಲದೇ ಬೇರೆ ಘನಕಾರ್ಯವನ್ನೇನೂ ಇದುವರೆಗೆ ಮಾಡಿಲ್ಲ. ಬ್ರಾಹ್ಮಣ್ಯವನ್ನು ದೂಷಿಸುವಾಗ  ಅದು ಬ್ರಾಹ್ಮಣೇತರರಲ್ಲಿ ಇರುವ ದುರ್ಗುಣಗಳನ್ನೆಲ್ಲ, ಅನಿಷ್ಠಗಳನ್ನೆಲ್ಲ ಬ್ರಾಹ್ಮಣರಿಗೆ ಅಂಟಿಸುವ ಜಾಣ ಕೆಲಸವಾಗಿ ಕಾಣುತ್ತದೆಯೇ ವಿನಃ ಬೇರೆ ಯಾವ ಘನೋದ್ದೇಶವೂ ಅದರಲ್ಲಿ ಕಂಡುಬರುವುದಿಲ್ಲ. ಅದರಲ್ಲೂ ಬ್ರಾಹ್ಮಣ ಜಾತಿಗಳನ್ನೊಂದು ಬಿಟ್ಟು ಉಳಿದೆಲ್ಲ ಜಾತಿ ಪಂಗಡಗಳನ್ನೂ ಒಟ್ಟುಗೂಡಿಸಿ ಎತ್ತಿಕಟ್ಟುತ್ತ, ನಾವು ಬ್ರಾಹ್ಮಣ್ಯದ ವಿರುದ್ಧ ಹೋರಾಡುತ್ತಿದ್ದೇವೆ ಎಂದರೆ ಯಾವ ಬ್ರಾಹ್ಮಣನಿಗಾಗಲೀ ಬ್ರಾಹ್ಮಣೇತರನಿಗಾಗಲೀ ಅಂಥ ಅವಾಸ್ತವಿಕ ವಿಷಯಗಳು ತಲೆಯೊಳಗೇ ಹೋಗುವ ಸಾಧ್ಯತೆಯೇ ಇರುವುದಿಲ್ಲ. ಅದನ್ನು ತಲೆಯೊಳಗೆ ಬಲಾತ್ಕಾರವಾಗಿ ತುಂಬಿಕೊಂಡ ಬುದ್ಧಿಜೀವಿ ಹೋರಾಟಗಾರರು ಅಥವಾ ರಾಜಕಾರಣಿಗೆ ಕೂಡ ಅದೊಂದು ಅರ್ಥವಾಗಿರದ ಸಂಗತಿ. ಹಾಗಾಗೇ ಅದನ್ನು ತರ್ಕಬದ್ಧವಾಗಿ ವಿವರಿಸುವುದೂ ಅವರಿಂದ ಸಾಧ್ಯವಿಲ್ಲ.

Author

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

You may also like

Leave a Comment