Home ಪ್ರತಿಕ್ರಿಯೆ ಪ್ರಜಾತಂತ್ರ ಮತ್ತು ಮಠವ್ಯವಸ್ಥೆ

ಪ್ರಜಾತಂತ್ರ ಮತ್ತು ಮಠವ್ಯವಸ್ಥೆ

by J.S. Sadananda
258 views

ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿಸ್ಥಾನಕ್ಕೆ ರಾಜಿನಾಮೆ ಕೊಡುವ ಮುನ್ನ ಅವರ ಪರವಾಗಿ ಲಿಂಗಾಯತ ಮಠದ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದು ಸಾಕಷ್ಟು ಟೀಕೆಗೊಳಗಾಗಿದೆ. ಸ್ವಾಮೀಜಿಗಳ ಈ ನಡವಳಿಕೆಯು ಪ್ರಜಾತಂತ್ರ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ ಎನ್ನುವುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಟೀಕೆಯಾಗಿದೆ. ಸ್ವಾಮೀಜಿಗಳು ಲಿಂಗಾಯತ ಮಠವ್ಯವಸ್ಥೆಯು ಸಾಂಪ್ರದಾಯಿಕ ಧಾರ್ಮಿಕ ಮಾರ್ಗವನ್ನು ಬಿಟ್ಟು ರಾಜಕೀಯಕ್ಕೆ ನೇರ ಪ್ರವೇಶ ಮಾಡುತ್ತಿರುವುದು, ಅದೂ ಸಹ ಒಂದು ಜಾತಿಯ ಪರವಾಗಿ, ಪ್ರಜಾತಂತ್ರ ವ್ಯವಸ್ಥೆಯ ತಾತ್ವಿಕ ಅಡಿಪಾಯವನ್ನೇ ಅಲುಗಿಸುತ್ತಿದೆ ಎನ್ನುವ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಒಂದೆಡೆಯಿಂದ ಅಧಿಕಾರದ ಬೆನ್ನು ಹತ್ತಿರುವ ಪಟ್ಟಭದ್ರ ಹಿತಾಸಕ್ತಿಗಳಾಗಿ ಬೆಳೆದಿರುವ ಕರ್ನಾಟಕದ ಪ್ರಬಲ ಜಾತಿ ಸಂಘಟನೆಗಳು ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದ ಮಠಗಳನ್ನು ತಮ್ಮ ಸಂಕುಚಿತ ಜಾತಿ ಹಿತಾಸಕ್ತಿಗಳ ರಕ್ಷಣೆಗೆ ಬಳಸಿಕೊಳ್ಳುತ್ತಿವೆ ಎನ್ನುವ ಟೀಕೆಯು ಕೇಳಿಬಂದರೆ, ಮತ್ತೊಂದೆಡೆಯಿಂದ ಅಂಬೇಡ್ಕರ್‌ರವರ ಸೈದ್ಧಾಂತಿಕ ಚೌಕಟ್ಟಿಗೆ ತಿಲಾಂಜಲಿಯಿತ್ತು ಕೇವಲ ಜಾತಿ ಅಸ್ಮಿತೆಗಳಿಗೆ ಅಂಟಿಕೊಳ್ಳುತ್ತಿವೆ ಎನ್ನುವ ಟೀಕೆಯನ್ನು ದಲಿತ ಮತ್ತು ಹಿಂದುಳಿದ ಜಾತಿಗಳು ಎದುರಿಸುತ್ತಿವೆ. ಒಟ್ಟಾರೆಯಾಗಿ ಹೇಳುವುದಾದರೆ ಜಾತಿ ರಾಜಕೀಯದ ಇತ್ತೀಚಿನ ಬೆಳವಣಿಗೆಗಳು ಭಾರತದಲ್ಲಿ ಪ್ರಜಾಪ್ರಭುತ್ವವು ಬೇರೂರುತ್ತಾ ಹೋದಂತೆ ಜಾತಿ ಸಂಘಟನೆಗಳು ಕ್ರಮೇಣ ಸಡಿಲಗೊಂಡು ಭಾರತದಲ್ಲಿ ಜಾತಿರಹಿತ ಸಮಾಜದ ನಿರ್ಮಾಣವಾಗುತ್ತದೆ ಎನ್ನುವ ಪ್ರಜಾಸತ್ತೆಯ ಮೂಲ ಆಶಯಕ್ಕೆ ವ್ಯತಿರಿಕ್ತವಾಗಿರುವಂತೆ ಕಾಣಿಸುತ್ತಿದೆ. ಮೇಲ್ನೋಟಕ್ಕೆ ಜಾತಿ ಸಂಘಟನೆಗಳು ಪ್ರಜಾತಂತ್ರ ವ್ಯವಸ್ಥೆಯ ಬೇರನ್ನೇ ಘಾಸಿಗೊಳಿಸುತ್ತಿರುವಂತೆ ಕಾಣಿಸುತ್ತಿರುವುದು ನಿಜ. ಆದರೆ, ಭಾರತದಲ್ಲಿ ಉದಾರವಾದಿ ಪ್ರಜಾತಂತ್ರ ವ್ಯವಸ್ಥೆಯು ಬೆಳೆದುಬಂದ ಇತಿಹಾಸವನ್ನು ಗಮನಿಸಿದರೆ, ಈ ವ್ಯವಸ್ಥೆಯು ವಿಸ್ತಾರಗೊಳ್ಳುತ್ತಾ ಹೋದಂತೆ ಜಾತಿ ಸಂಘಟನೆಗಳು ಮತ್ತಷ್ಟು ಗಟ್ಟಿಗೊಳ್ಳುತ್ತಾ ಹೋಗುತ್ತಿರುವ ವ್ಯೆರುಧ್ಯವನ್ನೂ ಸಹ ನಾವು ಕಾಣುತ್ತಿದ್ದೇವೆ. ಹೀಗೇಕಾಗುತ್ತಿದೆ ಎನ್ನುವದನ್ನು ವಿವರಿಸುವ ಒಂದು ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡುತ್ತೇನೆ.

ಭಾರತದಲ್ಲಿ ಪಾಶ್ಚಾತ್ಯ ಮಾದರಿಯ ಪ್ರಜಾತಂತ್ರ ವ್ಯವಸ್ಥೆಯನ್ನುಅಳವಡಿಸಿಕೊಳ್ಳಬೇಕೇ ಬೇಡವೇ ಎನ್ನುವ ಬಗ್ಗೆ ಸಕಷ್ಟು ಭಿನ್ನಾಬಿಪ್ರಾಯಗಳಿದ್ದವು. ಅಸಮಾನತೆ, ಸಂಪ್ರದಾಯಗಳಿಗೆ ಕಟ್ಟುಬಿದ್ದಿರುವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯೇ ಇಲ್ಲದಿರುವ ಭಾರತೀಯ ಸಮಾಜವು ಉದಾರವಾದಿ ಪ್ರಜಾಪ್ರಭುತ್ವಕ್ಕೆ ಸಿದ್ದವಾಗಿಲ್ಲ ಎನ್ನುವುದು ಬ್ರಿಟಿಷರ ವಾದವಾಗಿತ್ತು. ಭಾರತೀಯ ರಾಷ್ಟ್ರೀಯ ಚಳವಳಿಯ ಒಂದು ಪ್ರಮುಖ ಭಾಗವಾಗಿದ್ದ ಮಂದಗಾಮಿ ಗುಂಪಿನ ವಾದವೂ ಇದೇ ಆಗಿತ್ತು. ಹಾಗಾಗಿ ರಾನಡೆ ಮತ್ತು ಗೋಖಲೆಯಂತಹ ನಾಯಕರು ಭಾರತೀಯ ಸಮಾಜವು ಸಂಪೂರ್ಣವಾಗಿ ಆಧುನಿಕ ಉದಾರವಾದಿ (ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ) ಮೌಲ್ಯಗಳನ್ನು ಅಂತರ್ಗತ ಮಾಡಿಕೊಂಡು ಬದಲಾಗದ ಹೊರತು ಉದಾರವಾದಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವುದು ಸೂಕ್ತವಲ್ಲ ಮತ್ತು ಇಲ್ಲಿಯ ಸಮಾಜಕ್ಕೆ ಅದು ಅತ್ಯಂತ ಅಪಾಯಕಾರಿ ಕೂಡ ಎನ್ನುವ ನಿಲುವು ತಾಳಿದ್ದರು. ಆ ಕಾರಣದಿಂದಲೇ ಅವರು ಬ್ರಿಟಿಷರಿಂದ ಸಂಪೂರ್ಣವಾಗಿ ಸ್ವಾತಂತ್ರ್ಯವನ್ನು ಪಡೆಯುವುದಕ್ಕೆ ಉತ್ಸಾಹವನ್ನು ತೋರಿಸದೆ ಅವರ ಮಾರ್ಗದರ್ಶನದಡಿಯಲ್ಲಿಯೇ ನಾವು ಮತ್ತಷ್ಟು ಕಾಲ ಮುಂದುವರೆದು ಸಾಮಾಜಿಕ ಪರಿವರ್ತನೆಯನ್ನು ಸಾಧಿಸುವ ಅಗತ್ಯವಿದೆ ಎಂದು ಭಾವಿಸಿದ್ದರು. ಮತ್ತೊಂದು ದಿಕ್ಕಿನಿಂದ ನಮ್ಮಲ್ಲಿರುವ ದುಷ್ಟ ಜಾತಿಪದ್ಧತಿ, ಅಸಮಾನತೆ, ಅಸ್ಪೃಶ್ಯತೆ ಹಾಗೂ ಮೇಲ್ಜಾತಿಯವರ ದಬ್ಬಾಳಿಕೆ ಕೊನೆಗೊಳ್ಳುವ ಮೊದಲೇ ಬ್ರಿಟಿಷರ ಆಳ್ವಿಕೆ ಕೊನೆಗೊಳ್ಳುವುದು ಕೆಳಜಾತಿಯವರ ಹಿತದೃಷ್ಟಿಯಿಂದ ಒಳಿತಲ್ಲ ಎನ್ನುವ ಧೋರಣೆ ಅಂಬೇಡ್ಕರ್‌ರವರದಾಗಿತ್ತು. ಅಂತಹ ಮುನ್ನೋಟವನ್ನು ಹೊಂದಿದ್ದ ಅಂಬೇಡ್ಕರ್ ಜಾತಿಯೇ ಶೋಷಣೆಗೆ ಮೂಲ ಕಾರಣವೆಂಬ ಬಲವಾದ ನಂಬಿಕೆಯಿಂದ ದಮನಕ್ಕೆ ಒಳಗಾದ ಜಾತಿಗಳನ್ನು ಜಾತಿ/ನಿಮ್ನವರ್ಗಗಳಾಗಿ ಸಂಘಟನೆಯಾಗುವುದು ಅನಿವಾರ್ಯವೆಂದು ಕರೆಕೊಟ್ಟರು ಮತ್ತು ಇಡೀ ದಮನಿತ ಸಮುದಾಯದ ಹಿತಾಸಕ್ತಿಯ ರಕ್ಷಣೆ ಅಂಬೇಡ್ಕರ್ ಅವರು ರೂಢಿಸಿಕೊಂಡ ಪ್ರಜಾಪ್ರಭುತ್ವವಾದಿ ರಾಜಕೀಯದ ಸ್ವರೂಪವಾಗಿತ್ತು.  ಇದು ಭಾರತದಲ್ಲಿ ಉದಾರವಾದಿ ಪ್ರಜಾಪ್ರಭುತ್ವವು ನೆಲೆಯೂರಲು ಪ್ರಾರಂಭವಾಗುತ್ತಿದ್ದ ಕಾಲದಲ್ಲಿ ಅದಕ್ಕೆ ಅಂಬೇಡ್ಕರ್ ಕೊಟ್ಟ ಒಂದು ದೊಡ್ಡ ತಿರುವು ಎಂದೇ ಹೇಳಬೇಕು. ಈ ತಿರುವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವಿಕಾಸಗೊಂಡ ಪ್ರಜಾತಂತ್ರ ವ್ಯವಸ್ಥೆಯ ಮೂಲ ತತ್ವಗಳಿಗೆ ವ್ಯತಿರಿಕ್ತವಾಗಿತ್ತು. ಅಂದರೆ ಉದಾರವಾದಿ ಪ್ರಜಾಪ್ರಭುತ್ವ ವ್ಯವಸ್ಥೆಯು ಹುಟ್ಟಿ ಬೆಳೆದ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಪ್ರಭುತ್ವ ಮತ್ತು ವ್ಯಕ್ತಿಯ ನಡುವಿನ ಸಂಬಂಧ ಅದರ ತಿರುಳಾಗಿತ್ತು.  ಹಿತಾಸಕ್ತಿ ಎನ್ನುವುದು ವ್ಯಕ್ತಿಯ (ಸಾರ್ವಜನಿಕ) ಹಿತಾಸಕ್ತಿಯೇ ಹೊರತು ಗುಂಪಿನ/ಸಮುದಾಯದ ಹಿತಾಸಕ್ತಿಯಾಗಿರುವುದು ಸಾಧ್ಯವಲ್ಲದ ಮಾತಾಗಿತ್ತು ಮತ್ತು ಒಬ್ಬ ವ್ಯಕ್ತಿ ಪ್ರಜೆಯಾಗುವುದು ಅವನು/ಳು ಸಾರ್ವಜನಿಕ ಹಿತಾಸಕ್ತಿಯ ಭಾಗವಾಗಿದ್ದಾಗ ಮಾತ್ರ. ಸಾರ್ವಜನಿಕ ಹಿತಾಸಕ್ತಿ ಎನ್ನುವುದು ವ್ಯಕ್ತಿ ಅಥವಾ ಒಂದು ಗುಂಪಿನ ಹಿತಾಸಕ್ತಿಗಳ ಒಟ್ಟು ಮೊತ್ತವಲ್ಲ. ಬದಲಿಗೆ ಪ್ರಭುತ್ವದ ಒಳಗೆ ಬದುಕುವ ಪ್ರತಿಯೊಬ್ಬ ಪ್ರಜೆ/ವ್ಯಕ್ತಿಯ ಸಾಮಾನ್ಯ ಸಾರ್ವಜನಿಕ ಹಿತಾಸಕ್ತಿ. ವ್ಯಕ್ತಿ ಮತ್ತು ಸಮುದಾಯ/ಗುಂಪಿಗೆ ಸೀಮಿತವಾದ ಹಿತಾಸಕ್ತಿ ಸಾರ್ವಜನಿಕ ಹಿತಾಸಕ್ತಿಯ ಪರಿಧಿಗೆ ಬರುವುದಿಲ್ಲ. ಆದ್ದರಿಂದ ಯಾವುದೇ ಒಂದು ಗುಂಪಿನ ಹಿತಾಸಕ್ತಿ, ಅದು ನೈತಿಕವಾಗಿ ಎಷ್ಟೇ ಸರಿಯಾಗಿದ್ದರೂ, ಅದೊಂದು ಸಾರ್ವಜನಿಕ ಹಿತಾಸಕ್ತಿಯಾಗಿ ಬದಲಾಗದ ಹೊರತು, ಕೇವಲ ಖಾಸಗಿ ಹಿತಾಕ್ತಿಯಾಗಿರುತ್ತದೆ ಮತ್ತು ಅದರ ರಕ್ಷಣೆ ಪ್ರಭುತ್ವದ ಜವಾಬ್ದಾರಿಯಾಗಿರುವುದಿಲ್ಲ.  ಒಂದು ಪ್ರಭುತ್ವದ ಪ್ರಜೆಗಳಾಗಿರುವ ಎಲ್ಲಾ ವ್ಯಕ್ತಿಗಳ ಸಾಮಾನ್ಯ ಸಾರ್ವಜನಿಕ ಹಿತಾಸಕ್ತಿಗಳನ್ನು ಪ್ರತಿನಿದಿಸುವುದೇ ಪ್ರಾತಿನಿಧ್ಯವೆನ್ನುವುದು ಪ್ರಜಾಪ್ರಭುತ್ವ ಸಿದ್ದಾಂತದ ಪ್ರಾಥಮಿಕ ಪಾಠ. ಈ ಹಿತಾಸಕ್ತಿಯ ಪ್ರಾತಿನಿಧ್ಯಕ್ಕಿಂತ ಭಿನ್ನವಾಗಿ ಗುಂಪು/ಸಮುದಾಯಗಳ ಪ್ರಾತಿನಿಧ್ಯ ಹೇಗಿರುತ್ತದೆ ಮತ್ತು ಅದರ ಸ್ವರೂಪವೇನು ಎನ್ನುವ ಯಾವುದೇ ಪ್ರಜಾಪ್ರಭುತ್ವವಾದಿ ಸಿದ್ಧಾಂತ ಇದುವರೆಗೂ ರೂಪುಗೊಂಡಿಲ್ಲ. ವ್ಯಕ್ತಿಯ ಖಾಸಗಿ ಮತ್ತು ಸಾರ್ವಜನಿಕ ಹಿತಾಸಕ್ತಿಗಳಿಗಿಂತ ಸಮುದಾಯಗಳ ಖಾಸಗಿ/ಸಾರ್ವಜನಿಕ ಹಿತಾಸಕ್ತಿಗಳು ಹೇಗೆ ಭಿನ್ನ ಅಥವಾ ವಿಶಿಷ್ಟ? ಮತ್ತು ಈ ಹಿತಾಸಕ್ತಿಗಳ ಸ್ವರೂಪ ಒಂದು ಸಮುದಾಯದಿಂದ ಮತ್ತೊಂದು ಸಮುದಾಯಕ್ಕೆ ಹೇಗೆ ಭಿನ್ನ ಎನ್ನುವ ಕುರಿತೂ ಇದುವರೆಗೂ ಯಾವುದೇ ರಾಜಕೀಯ ಸಿದ್ದಾಂತ ನಮಗೆ ಲಭ್ಯವಿಲ್ಲ. ಹಾಗಾಗಿ, ಪ್ರಜಾಪ್ರಭುತ್ವದಲ್ಲಿ ಪ್ರಾತಿನಿಧ್ಯವೆಂದರೆ ವ್ಯಕ್ತಿಗಳ ಹಿತಾಸಕ್ತಿಗಳ ಪ್ರಾತಿನಿಧ್ಯವೆಂದಷ್ಟೇ ಅರ್ಥ. ಒಬ್ಬ ಪ್ರತಿನಿಧಿಯು ತಾನು ಯಾವುದೇ ಗುಂಪು/ಸಮುದಾಯ/ ಅಥವಾ ಲಿಂಗವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಹೇಳಿಕೊಂಡರೂ ಅಂತಹ ಪ್ರತಿನಿಧಿಯು ಆ ಗುಂಪಿಗೆ ವಿಶಿಷ್ಟವಾದ ಹಿತಾಸಕ್ತಿಯನ್ನೇನೂ ಪ್ರತಿನಿಧಿಸುತ್ತಿರುವುದಿಲ್ಲ. ಬದಲಿಗೆ ಎಲ್ಲರಿಗೂ ಸಾಮಾನ್ಯವಾದ ಶಿಕ್ಷಣ, ನೈರ್ಮಲ್ಯ, ವಸತಿ, ಆರೋಗ್ಯ, ಮತ್ತಿತರ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಹಿತಾಸಕ್ತಿಗಳ ಕಾರ್ಯಗಳನ್ನಷ್ಟೇ ಮಾಡಲು ಸಾಧ್ಯ. ಹೆಚ್ಚೆಂದರೆ ಇವುಗಳನ್ನು ಆಯಾ ಗುಂಪಿನವರಿಗೆ ಹೆಚ್ಚು ಒದಗಿಸಿಕೊಡಬಹುದು (ಆದರೆ ಖಾತರಿ ಏನೂ ಇಲ್ಲ). ಆದರೆ ಇವು ಯಾವವೂ ಯಾವುದೇ ಗುಂಪು/ಸಮುದಾಯಕ್ಕೆ ವಿಶಿಷ್ಟವಾದ ಹಿತಾಸಕ್ತಿಯಂತೂ ಅಲ್ಲ ಎನ್ನುವುದು ಇಲ್ಲಿ ಬಹಳ ಮುಖ್ಯ.

ಭಾರತಕ್ಕೆ ಸ್ವಾತಂತ್ರ್ಯ ಬಂದ ಕಾಲದಿಂದಲೂ (ಅದಕ್ಕೂ ಮೊದಲೇ ಎಂದು ಹೇಳಿದರೂ ತಪ್ಪಿಲ್ಲ) ಮೀಸಲಾತಿ ನೀತಿಗೆ ಸಂಬಂಧಿಸಿದಂತೆ ಜಾತಿ ಹಿತಾಸಕ್ತಿಯು ಒಂದು ಸಾರ್ವಜನಿಕ ಹಿತಾಸಕ್ತಿಯಾಗುತ್ತದೆಯೆ ಎನ್ನುವ ಪ್ರಶ್ನೆಯನ್ನು ಆಗಾಗ ಮುಂದೊತ್ತಲಾಗುತ್ತಿತ್ತು. ಮೊತ್ತ ಮೊದಲ ಹಿಂದುಳಿದ ವರ್ಗಗಳ ಸಮಿತಿಯ ವರದಿಯನ್ನು (ಕಾಕಾ ಕಾಲೇಲ್ಕರ್ ವರದಿ) ಸಂಸತ್ತು ತಿರಸ್ಕರಿಸಿದ್ದು ಜಾತಿಗಳ ಹಿತಾಸಕ್ತಿ ಸಾರ್ವಜನಿಕ ಹಿತಾಸಕ್ತಿಯಾಗುವುದಿಲ್ಲ ಎನ್ನುವ ಕಾರಣದಿಂದಲೇ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮಾತ್ರ ಸಂವಿಧಾನದಲ್ಲಿಯೇ (ರಾಜಕೀಯ) ಮೀಸಲಾತಿಯನ್ನು ಖಾತ್ರಿಗೊಳಿಸಲಾಗಿತ್ತು. ಅರವತ್ತು ಮತ್ತು ಎಪ್ಪತ್ತರ ದಶಕದವರೆಗೂ ಮಠಗಳೂ ಸೇರಿದಂತೆ ಜಾತಿ ಸಂಘಟನೆಗಳು ಇದ್ದರೂ ಅವು ರಾಜಕೀಯದಲ್ಲಿ (ಒಳಗೊಳಗೆ ಗುಟ್ಟಾಗಿ ನಡೆಯುತ್ತಿದ್ದರೂ) ತಮ್ಮ ಬಲವನ್ನು ನೇರವಾಗಿ ಪ್ರದರ್ಶಿಸುವ ಮತ್ತು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕಾರ್ಯಕ್ಕಿಳಿದಿರಲಿಲ್ಲ. ಈಗಲೂ ಅವು ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತಿವೆ ಎನ್ನುವುದು ಇನ್ನೂ ನಿರ್ವಿವಾದವಾಗಿ ಸಾಬೀತಾಗಿಲ್ಲ. ಎಪ್ಪತ್ತರ ದಶಕದವರೆಗೂ ಮೇಲ್ಜಾತಿಯ ಬಹಳಷ್ಟು ವಿದ್ಯಾವಂತ ಯುವಕರು (ವಿಶೇಷವಾಗಿ ಬ್ರಾಹ್ಮಣರು) ತಮ್ಮ ಜಾತಿ ಸಂಕೇತವಾದ ಉಪನಾಮ ಮತ್ತು ಗುರುತುಗಳನ್ನು ಸಾರ್ವಜನಿಕವಾಗಿ ತೋರ್ಪಡಿಸಲು ಹಿಂಜರಿಯುತ್ತಿದ್ದುದು ನಮಗೆ ಕಂಡುಬರುತ್ತದೆ. ಈ ಧೋರಣೆ ಕ್ರಮೇಣ ಬದಲಾಗುತ್ತಾ ಹೋಗಿ ಜಾತಿ ಸಂಘಟನೆಗಳು  ಅನಿವಾರ್ಯ ಎನ್ನುವ ಭಾವ ಮೇಲ್ಜಾತಿಯರಲ್ಲೂ ಗಟ್ಟಿಯಾಗುತ್ತಿದೆ.  ಎಪ್ಪತ್ತರ ದಶಕದ ರಾಜಕೀಯಕ್ಕೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಬಲವನ್ನು ತಂದುಕೊಟ್ಟ ಹೆಗ್ಗಳಿಕೆ ಇದೆ. ಅದೇ ಸಮಯದಲ್ಲಿ ಜಾತಿ ಸಂಘಟನೆಗಳು ಯಾವ ಅಳುಕು ಮತ್ತು ಹಿಂಜರಿಕೆಯಿಲ್ಲದೆ ನೇರವಾಗಿ ಚುನಾವಣಾ ರಾಜಕೀಯದಲ್ಲಿ  ಭಾಗವಹಿಸಲು ತೊಡಗಿದ್ದನ್ನೂ ಸಹ ನಾವು ಕಾಣುತ್ತೇವೆ. ಹಿಂದುಳಿದ ಜಾತಿಗಳ ಸಂಘಟನೆಯು ಪ್ರಗತಿಪರ ರಾಜಕೀಯ ಎನ್ನುವ ಧೋರಣೆ ಎಲ್ಲರಲ್ಲೂ ಎಷ್ಟು ಬಲವಾಗಿತ್ತೆಂದರೆ ಎಲ್ಲೋ ಬೆರಳೆಣಿಕೆಯಷ್ಟು ಬುದ್ಧಿಜೀವಿಗಳು ಮಾತ್ರ  ಇದರ ಅಪಾಯವನ್ನು ಗುರುತಿಸಿದ್ದರು. ಐವತ್ತರ ದಶಕದಲ್ಲಿ ಜಾತಿ ಸಂಘಟನೆಗಳು ಬೇಡ ಎನ್ನುವುದು ಪ್ರಗತಿಪರ ಚಿಂತನೆ ಎನಿಸಿದರೆ, ಎಪ್ಪತ್ತರ ದಶಕದಲ್ಲಿ ಹಿಂದುಳಿದ ಮತ್ತು ದಲಿತರು ಜಾತಿ ಸಂಘಟನೆ ಮಾಡುವುದು ಪ್ರಗತಿಪರ. ಆದರೆ ಮೇಲ್ಜಾತಿಯವರ ಜಾತಿ ಸಂಘಟನೆಯು ಪ್ರತಿಗಾಮಿ ಎನ್ನುವುದು ಪ್ರಗತಿಪರ ನಿಲುವು ಎನಿಸಿಕೊಂಡಿತು. ಕೆಲವು ಜಾತಿಗಳು ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಮತ್ತು  ಅದೇ ಸಮಯದಲ್ಲಿ ಉಳಿದ ಜಾತಿಗಳು ಜಾತಿಯಾಗಿ ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳಬೇಕು ಎನ್ನುವ ಅಂತರ್ ವ್ಯೆರುಧ್ಯವನ್ನೊಳಗೊಂಡ ವಾದವೇ ಪ್ರಗತಿಪರ ಎನಿಸಿಕೊಳ್ಳತೊಡಗಿತು. ಅನಂತಮೂರ್ತಿಯವರು ಒಮ್ಮೆ ಬೆಂಗಳೂರಿನಲ್ಲಿ ಮಾಡಿದ ಭಾಷಣದಲ್ಲಿನ ಈ ಹೇಳಿಕೆ ಸಾಕಷ್ಟು ಪ್ರಚಾರ ಪಡೆಯಿತು. (ಅದಾದ ನಂತರ ನಾನು ಅವರನ್ನು ಭೇಟಿಯಾದಾಗ ಈ ಅಂತರ್‌ವ್ಯೆರುಧ್ಯವನ್ನು ಅವರ ಗಮನಕ್ಕೆ ತಂದು ನಿಮ್ಮ ಈ ಹೇಳಿಕೆ ಒಂದು ಕೊಳದಲ್ಲಿ ನೀರು ಅರ್ಧದಷ್ಟು ಬಗ್ಗಡಗೊಂಡಿದ್ದರೂ ಇನ್ನರ್ಧ ತಿಳಿಯಾಗಿರಬೇಕು ಎಂದು ಹೇಳಿದ ಹಾಗಾಗುವುದಿಲ್ಲವೆ ಎಂದು ಕೇಳಿದಾಗ ಅವರು ಸ್ವಲ್ಪ ಹೊತ್ತು ಯೋಚಿಸಿ ನೀನು ಹೇಳುತ್ತಿರುವುದು ನಿಜ ಎನಿಸುತ್ತಿದೆ ಎಂದರು).

ಆದರೆ ಎಂಬತ್ತರ ದಶಕ ಮತ್ತು ನಂತರದಲ್ಲಿ ಹಿಂದುಳಿದ ವರ್ಗ ಮತ್ತು ದಲಿತ ಎನ್ನುವುದು ಸಮಾನ ಹಿತಾಸಕ್ತಿಯುಳ್ಳ ಒಂದು ವರ್ಗವಾಗಿ ಉಳಿಯದೆ ಪ್ರತಿಯೊಂದು ಜಾತಿಗೂ ತನ್ನದೇ ಅದ ರಕ್ಷಿಸಿಕೊಳ್ಳಬೇಕಾದ ಪ್ರತ್ಯೇಕ ಹಿತಾಸಕ್ತಿ ಇದೆ ಎನ್ನುವ ಅಭಿಪ್ರಾಯ ಬಲವಾಗಿ ಬೆಳೆಯತೊಡಗಿತು. ಹೀಗಾಗಲು ಪ್ರಮುಖ ಕಾರಣವೆಂದರೆ ಎಪ್ಪತ್ತರ ದಶಕದಲ್ಲಿ ಹಿಂದುಳಿದ ದಲಿತರಿಗೆ ಪ್ರಬಲ ಮೇಲ್ಜಾತಿಗಳು ಸಮಾನ (ರಾಜಕೀಯ) ಶತ್ರುಗಳಾಗಿದ್ದರು. ಹಾಗಾಗಿ ಅಧಿಕಾರದಿಂದ ವಂಚಿತವಾದ ಹಿಂದುಳಿದ ಜಾತಿಯ ನಾಯಕರುಗಳು ರಾಜಕೀಯವಾಗಿ ಒಂದು ವರ್ಗವಾಗಿ ಹೋರಾಟ ಪ್ರಾರಂಭಿಸಿದರು. ಇದು ಚುನಾವಣಾ ರಾಜಕೀಯದಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಳ್ಳತೊಡಗಿತು.  ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ವರೂಪ ಪ್ರಕಟಗೊಳ್ಳುವುದು ಚುನಾವಣೆಯು ಹೇಗೆ ನಡೆಯುತ್ತದೆ ಎನ್ನುವುದರ ಮೇಲೆ. (ಚೆನ್ನಿಯವರು ಚುನಾವಣಾ ಪ್ರಜಾತಂತ್ರ ಮತ್ತು ನಿಜ ಪ್ರಜಾತಂತ್ರ ಎನ್ನುವ ವ್ಯತ್ಯಾಸವನ್ನು ಹೇಗೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುವುದಿಲ್ಲ. ನಿಜ ಪ್ರಜಾತಂತ್ರದ ನಿಜ ಸ್ವರೂಪ ಪ್ರಕಟಗೊಳ್ಳುವುದೇ ಚುನಾವಣೆಯಲ್ಲಿ.  ನಿಜ ಪ್ರಜಾತಂತ್ರ ಎನ್ನುವುದು ಅದರ್ಶದಲ್ಲಿ ಇರಬೇಕಾದ ವ್ಯವಸ್ಥೆ ಎನ್ನುವ ಅರ್ಥದಲ್ಲಿ ಅವರು ಬಳಸಿದ್ದರೆ ಆ ಮಾತು ಬೇರೆ. – ರಾಜೇಂದ್ರ ಚೆನ್ನಿ, ಪ್ರಜಾತಂತ್ರ ಮತ್ತು ಮಠವ್ಯವಸ್ಥೆ. ಹೊಸಮನುಷ್ಯ, ಸೆಪ್ಟೆಂಬರ್ ೨೦೨೧). ನಂತರದ ದಶಕಗಳಲ್ಲಿ ರಾಷ್ಟ್ರೀಯ ಹಾಗು ರಾಜ್ಯ ಮಟ್ಟದ ರಾಜಕಾರಣದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳಲ್ಲಿಯೆ ಜಾತಿಯ ಆಧಾರದ ಮೆಲೆ ನಾಯಕತ್ವಕ್ಕೆ ಪ್ಯೆಪೋಟಿ ನಡೆಯತೊಡಗಿತು. ಮತ್ತು ಅದೇ ಸಮಯದಲ್ಲಿ ಲಿಂಗಾಯಿತ, ಬ್ರಾಹ್ಮಣ ಜಾತಿಗಳಲ್ಲಿ ತಾವು ಜಾತಿಯಾಗಿ ಸಂಘಟನೆಯಾಗದಿದ್ದರೆ ರಾಜಕೀಯವಾಗಿ ನಮಗೆ ಉಳಿಗಾಲವಿಲ್ಲ ಎನ್ನುವ, ಇದೂವರೆಗೆ ಅವ್ಯಕ್ತವಾಗಿದ್ದ, ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಗತೊಡಗಿತು. ಈ ಬೆಳವಣಿಗೆಗಳಿಂದಾಗಿ ವಿದ್ಯಾವಂತ ಬ್ರಾಹ್ಮಣರಲ್ಲಿ ಮತ್ತು ಲಿಂಗಾಯತರಲ್ಲಿ ತಾವು ಜಾತಿಯಾಗಿ ಸಂಘಟನೆಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಮಾತ್ರವಲ್ಲ ಅದು ಅನಿವಾರ್ಯ ಕೂಡ ಎನ್ನುವ ಭಾವನೆ ಗಟ್ಟಿಯಾಗತೊಡಗಿತು. ಮಠಗಳ ಸ್ವಾಮಿಗಳು ರಾಜಕೀಯ ನಿಲುವನ್ನು ಬಹಿರಂಗವಾಗಿ ತೆಗೆದುಕೊಳ್ಳತೊಡಗಿದರು. ಜಾತಿ ಮತ್ತು ರಾಜಕೀಯದ ಸಂಬಂಧ ಅತ್ಯಂತ ಸಂಕೀರ್ಣವಾಗಿದೆ. ಚುನಾವಣೆಯಲ್ಲಿ ಗೆಲ್ಲಬೇಕಾದರೆ ಸ್ಪರ್ಧಿಗಳು ತಮ್ಮ ಜಾತಿಯವರನ್ನಷ್ಟೆ ಅಲ್ಲದೆ ಇತರ ಜಾತಿಯ ಜನರನ್ನೂ ಓಲ್ಯೆಸಲು ತೊಡಗಬೇಕಾಗುತ್ತದೆ. ಅವರು ಗೆದ್ದು ಅಧಿಕಾರಕ್ಕೆ ಬಂದಮೇಲೂ ಅಂತಹ ಧೋರಣೆಯನ್ನು ಮುಂದುವರೆಸಬೇಕಾಗುತ್ತದೆ. ಹಾಗಾಗಿ, ನಮ್ಮ ಜಾತಿಯವರಾಗಿದ್ದೂ ನಮ್ಮವರಿಗೆ ಏನೂ ಮಾಡುತ್ತಿಲ್ಲ ಎನ್ನುವ ದೂರು ಹೆಚ್ಚು ಕಡಿಮೆ ಎಲ್ಲ ಜಾತಿಯ ಜನರದ್ದಾಗಿರುತ್ತದೆ. ತಮ್ಮ ಕ್ಷೇತ್ರದ ಹೊರಗೆ ಜಾತಿ ವ್ಯವಸ್ಥೆಯ ಬಗ್ಗೆ ಕಟುವಾಗಿ ಮಾತನಾಡುವ ನಾಯಕರುಗಳು ತಮ್ಮ ಕ್ಷೇತ್ರದಲ್ಲಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದಿರುವುದನ್ನು ನಾವು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ನೋಡಿದಾಗ ಜಾತಿಯ ನಾಯಕರುಗಳು ತಮ್ಮ ಜಾತಿಯ ಹಿತಾಸಕ್ತಿಯನ್ನು ಪ್ರತಿನಿಧಿಸಲು ಸಾಧ್ಯವೇ ಮತ್ತು ಯಾವುದೇ ಜಾತಿಯಾಗಿರಲಿ ಒಂದು ಇಡೀ ಜಾತಿಗೆ ತನ್ನದೇ ಆದ ಒಂದು ಹಿತಾಸಕ್ತಿ ಎನ್ನುವುದು ಇರಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ಸುಲಭವಲ್ಲ.

ಇಂದರಿಂದ ನಮಗೇನು ಸ್ಪಷ್ಟವಾಗುತ್ತದೆಂದರೆ ಭಾರತದ ಸಾಮಾಜಿಕ ರಚನೆಯು ಉದಾರವಾದಿ ಪ್ರಜಾತಂತ್ರವನ್ನು ಬಗ್ಗಡಗೊಳಿಸುವುದಕ್ಕಿಂತ ಹೆಚ್ಚಾಗಿ ಅದಕ್ಕೆ ವಿರುದ್ಧವಾದ, ಅಂದರೆ ಪ್ರಜಾಪ್ರಭುತ್ವ ಎನ್ನುವ ರಾಜಕೀಯ ವ್ಯವಸ್ಥೆಯೇ ಸಾಮಾಜಿಕ ಬದುಕನ್ನು ಪಲ್ಲಟಗೊಳಿಸುವ, ಪ್ರಕ್ರಿಯೆ ಚಾಲ್ತಿಯಲ್ಲಿದೆ ಎನ್ನುವುದು. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜಾತಿಯು ಯಾವ ರೀತಿಯಲ್ಲಿ ಸಂಘಟನೆಯಾಗಬೇಕು ಎಂದು ನಿರ್ಣಯಿಸಿ ಅದರ ಸ್ವರೂಪವನ್ನೇ ಬದಲಾಯಿಸಿದ ಇಂತಹ ಒಂದು ರಾಜಕೀಯ ವ್ಯವಸ್ಥೆಯಲ್ಲಿ ಅಧ್ಯಾತ್ಮಿಕ ಸ್ವರೂಪದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿದ್ದ ಮತ್ತು ಆ ಮೂಲಕ ತನ್ನ ಅನುಯಾಯಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಮಠಗಳು ಮತ್ತು ಸ್ವಾಮೀಜಿಗಳಿಗೆ ಸ್ಥಾನವೇ ಇಲ್ಲ. ಅಂತಹವರು ಇಲ್ಲವೇ ಇಲ್ಲವೆಂದಲ್ಲ ಖಂಡಿತ ಇದ್ದಾರೆ. ಆದರೆ ಈ ಆಧುನಿಕ ಸಾಮಾಜಿಕ ಬದುಕನ್ನು ರೂಪಿಸುತ್ತಿರುವ ಸಾಮಾಜಿಕ, ’ಧಾರ್ಮಿಕ’ ಬದುಕಿನಲ್ಲಿ ಜಾತಿಗಳ ಸಂಘಟನೆಗಳಲ್ಲಾಗಲಿ ಅಥವಾ ರಾಜಕೀಯ ವೇದಿಕೆಯಲ್ಲಾಗಲಿ ಅವರಿಗೆ ಯಾವ ಪಾತ್ರವೂ ಇಲ್ಲ. ಅವರನ್ನು ಹುಡುಕಲು ಮಠಗಳ ಸಂಪ್ರದಾಯ ಮತ್ತು ಪಾತ್ರಗಳ ಬಗ್ಗೆ ಉದಾರವಾದಿ/ಪ್ರಗತಿಪರ ಚಿಂತನೆಯ ಬಂಧನದಿಂದ ಕಳಚಿಕೊಳ್ಳಬೇಕಾಗುತ್ತದೆ. ಹಿಂದೆ ಆಧ್ಯಾತ್ಮಿಕ ಪ್ರಭಾವಳಿ ಇದ್ದವರಿಗೆ ಮಾತ್ರ ಲಭ್ಯವಿದ್ದ ಸ್ವಾಮೀಜಿಯ ಪಟ್ಟ ಈಗ ಪ್ರತಿಯೊಂದು ಜಾತಿಯ ಪ್ರಬಲ ರಾಜಕೀಯ ನಾಯಕರುಗಳು ಅವರ ಜಾತಿಗೆ ಸಂಬಂಧಿಸಿದ ಮಠಗಳಿಗೆ ಯಾರು ಸ್ವಾಮೀಜಿಗಳಾಗಬೇಕೆಂದು ನಿರ್ಧರಿಸಿದವರಿಗೆ (ಎಲ್ಲ ಮಠದ ಸ್ವಾಮಿಗಳಿಗೂ ಈ ಮಾತು ಅನ್ವಯಿಸುವುದಿಲ್ಲವಾದರೂ) ದೊರೆಯುತ್ತದೆ. ಇದರಿಂದ ನಮಗೆ ಸ್ಪಷ್ಟವಾಗುವುದೇನೆಂದರೆ, ಸಾಂಪ್ರದಾಯಿಕವಾದ ಮಠಗಳಾಗಲಿ ಸ್ವಾಮಿಗಳಾಗಲಿ ’ನಿಜ’ ಪ್ರಜಾತಂತ್ರದ ಕಾರ್ಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡುತ್ತಿಲ್ಲ. ಬದಲಾಗಿ ಆಧುನಿಕ ಪ್ರಜಾತಂತ್ರ ವ್ಯವಸ್ಥೆಯು ಕಾರ್ಯ ನಿರ್ವಹಿಸುತ್ತಿರುವ ವಿಧಾನವು ಅವುಗಳನ್ನು ಪಲ್ಲಟಗೊಳಿಸಿ ಅವುಗಳ ಸ್ಥಾನದಲ್ಲಿ ಜಾತಿ ರಾಜಕೀಯ ವ್ಯವಸ್ಥೆಗೆ ಪೂರಕವಾಗಿರುವ ಹೊಸ ಮಠವ್ಯವಸ್ಥೆಗಳ/ ಸ್ವಾಮಿಗಳ ಸೃಷ್ಟಿಯಾಗುತ್ತಿದೆ. ನಮ್ಮಲ್ಲಿ ವಿಕಾಸಗೊಂಡ ಪ್ರಜಾತಾಂತ್ರಿಕ ವ್ಯವಸ್ಥೆಯ ಹಿನ್ನಲೆಯಲ್ಲಿ ಮಠದ ಸ್ವಾಮಿಗಳೇಕೆ ರಾಜಕೀಯವನ್ನು ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಯೇ ತಪ್ಪು. ಆಧ್ಯಾತ್ಮಿಕ ಚಿಂತನೆಗೆ ಹೊರತಾಗಿರುವ ರಾಜಕೀಯ ಅಧಿಕಾರದಲ್ಲಿ ಆಸಕ್ತಿ ಇರುವವರು ಏಕೆ ಮತ್ತು ಹೇಗೆ ಸ್ವಾಮಿಗಳಾಗುತ್ತಿದ್ದಾರೆ ಎನ್ನುವುದು ಸರಿಯಾದ ಪ್ರಶ್ನೆಯಾಗುತ್ತದೆ. ಇದು ಮಠಗಳಿಗೆ ಮಾತ್ರ ಅನ್ವಯಿಸುವುದಿಲ್ಲ ಭಾರತದಲ್ಲಿ ಈ ವ್ಯವಸ್ಥೆಯೊಳಗೆ ರೂಪುಗೊಂಡ ಹೆಚ್ಚು ಕಡಿಮೆ ಎಲ್ಲ ಸಾರ್ವಜನಿಕ ಸಂಸ್ಥೆಗಳಿಗೂ ಈ ಮಾತು ಅನ್ವಯಿಸುತ್ತದೆ. ವಿಶ್ವವಿದ್ಯಾನಿಲಯ/ಕಾಲೇಜುಗಳ ಬಹುಪಾಲು ಅಧ್ಯಾಪಕರುಗಳು ಪಾಠ ಪ್ರವಚನ ಮಾಡುವುದಲ್ಲಾಗಲಿ, ಸಂಶೋಧನೆಯಲ್ಲಾಗಲಿ ತಮ್ಮನ್ನು ಏಕೆ ಗಂಭೀರವಾಗಿ ತೊಡಗಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಆಗಾಗ ಕೇಳಲಾಗುತ್ತದೆ ಮತ್ತು ಇದಕ್ಕೆ ಪರಿಹಾರವಾಗಿ ಸಾಕಷ್ಟು ಹೊಸ ಹೊಸ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳಲಾಗುತ್ತಿದೆ. ಅಷ್ಟೆಲ್ಲಾ ಮಾಡಿದರೂ ಸಹ ಪರಿಣಾಮಕಾರಿ ಬದಲಾವಣೆ ಕಾಣಿಸುತ್ತಿಲ್ಲ ಎನ್ನಲಾಗುತ್ತಿದೆ. ಇದಕ್ಕೆ ಸರಿಯಾದ ಉತ್ತರ ಬೇಕೆಂದರೆ ಇಲ್ಲಿಯೂ ಸಹ ಕೇಳಬೇಕಾದ ಸರಿಯಾದ ಪ್ರಶ್ನೆ ಎಂದರೆ: ಪಾಠಪ್ರವಚನ, ಮತ್ತು ಸಂಶೋಧನೆಯಲ್ಲಿ ಆಸಕ್ತಿ ಇಲ್ಲದೆ ಇರುವವರೇ ಬಹುಪಾಲು ಅಧ್ಯಾಪಕರುಗಳಾಗಿ ಹೇಗೆ ನೇಮಕಗೊಳ್ಳುತ್ತಿದ್ದಾರೆ ಎಂದು. ಅದೇ ರೀತಿ ಪ್ರಾಮಾಣಿಕರಿಗೇಕೆ ರಾಜಕೀಯದಲ್ಲಾಗಲಿ, ಆಧಿಕಾರಶಾಹಿಯಲ್ಲಾಗಲಿ ಉಳಿದುಕೊಳ್ಳಲು ಕಷ್ಟವಾಗುತ್ತಿದೆ? ಹೀಗೆ ಪ್ರಶ್ನೆಗಳನ್ನು ಬೆಳೆಸುತ್ತಾ ಹೋಗಬಹುದು.

ಇಲ್ಲಿ ಮತ್ತೊಂದು ಅಂಶವನ್ನೂ ನಾವು ಗಮನಿಸಬೇಕು. ತಮ್ಮ ಸಾಂಪ್ರದಾಯಿಕ ಕೆಲಸವಾದ ಧರ್ಮ/ಆಧ್ಯಾತ್ಮಿಕ ಪ್ರಚಾರವನ್ನು ಬಿಟ್ಟು ಸ್ವಾಮಿಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳುವವರಿಗೆ ’ಪ್ರಗತಿಪರ’ ಚಿಂತನೆಯನ್ನು ಹೊಂದಿರುವ ಕೆಲವು ಸ್ವಾಮಿಗಳ ರಾಜಕೀಯ ಪ್ರವೇಶ ಸ್ವಾಗತಾರ್ಹವೆನಿಸುತ್ತದೆ. ಅಂತಹ ಸ್ವಾಮಿಗಳ ನಿಲುವು ನ್ಯೆತಿಕವಾದುದು ಮತ್ತು ಸರಿ ಎಂದು ಕೆಲವರು ಸಮರ್ಥಿಸಿಕೊಳ್ಳಬಹುದು. ಆದರೆ ಮಠಗಳು/ಸ್ವಾಮಿಗಳು ತಮ್ಮ ಸಾಂಪ್ರದಾಯಿಕ ಕಾರ್ಯಕ್ಷೇತ್ರದಿಂದ ಹೊರಗಿರುವ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಬಾರದು ಎನ್ನುವುದು ಅವರ ಒಂದು ಪ್ರಜಾತಾಂತ್ರಿಕ ತಾತ್ವಿಕ ನಿಲುವೇ ಆಗಿದ್ದರೆ ಅದು ಎಲ್ಲರಿಗೂ ಒಂದೇ ತೆರನಾಗಿ ಅನ್ವಯವಾಗಬೇಕಲ್ಲವೆ?

ಮಠಗಳ ಬಗ್ಗೆ ಬರುತ್ತಿರುವ ಟೀಕೆಗಳನ್ನು ನೋಡಿದರೆ ಮಠಗಳ ಮತ್ತು ರಾಜಕೀಯದ ಸಂಬಂಧವನ್ನು ಯುರೋಪಿನ ದೇಶಗಳಲ್ಲಿರುವ ರಾಜಕೀಯ ಮತ್ತು ರಿಲಿಜನ್ ಸಂಬಂಧದೊಡನೆ ಸಮೀಕರಿಸಿರುವಂತೆ ಕಾಣಿಸುತ್ತದೆ. ಇಲ್ಲಿಯ ಮಠಗಳು ಮತ್ತು ಭಕ್ತರಿಗಿರುವ ಸಂಬಂಧಕ್ಕೂ ಯುರೋಪಿನ ಚರ್ಚುಗಳು ಮತ್ತು ಅವುಗಳ ಅನುಯಾಯಿಗಳಿಗಿರುವ ಸಂಬಂಧಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದನ್ನು ಈ ಲೇಖನದ ಮಿತಿಯಲ್ಲಿ ವಿಸ್ತೃತಪಡಿಸಲು ಸಾದ್ಯವಾಗುವುದಿಲ್ಲ. ರಾಜರುಗಳು ಮಠಮಾನ್ಯಗಳಿಗೆ ದಾನ ದತ್ತಿಗಳನ್ನು ಕೊಡುತ್ತಿದ್ದುದನ್ನು ರಾಜಕೀಯದಲ್ಲಿ ರಿಲಿಜನ್‌ನ ಪ್ರವೇಶವೆಂಬಂತೆ ನೋಡಿದರೆ ನಮ್ಮ ಸಮಾಜದಲ್ಲಿ ಮಠಗಳು ವಹಿಸಿದ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ನಮಗೆ ಖಂಡಿತಾ ಸಾದ್ಯವಾಗುವುದಿಲ್ಲ. ಇಲ್ಲಿ ನಾವು ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಒಂದು ನಿರ್ದಿಷ್ಟ ಜಾತಿಗೆ ಸೇರಿದ ಮಠದ ಸ್ವಾಮಿಯು ತನ್ನ ಜಾತಿಯವರಿಗೆ ಮೀಸಲಾತಿ ನೀಡಬೇಕೆಂದು ಕೇಳುವುದು ರಿಲಿಜಸ್ ಬೇಡಿಕೆಯೊ ಅಥವಾ ಸೆಕ್ಯುಲರ್ ಬೇಡಿಕೆಯೊ ಎಂದು ತೀರ್ಮಾನಿಸುವುದು ಹೇಗೆ? ಅಲ್ಲದೆ, ಮಠದ ಸ್ವಾಮಿಗಳ ಅಣತಿಯನ್ನು ಅನುಯಾಯಿಗಳು ಶಿರಸಾವಹಿಸಿ ಪಾಲಿಸುತ್ತಾರೆ ಎನ್ನುವುದಕ್ಕೆ ಪುರಾವೆ ಏನು? ಇದುವರೆಗಿನ ಚುನಾವಣಾ ಸಮೀಕ್ಷೆಗಳಾಗಲಿ ಅಥವಾ ಮತಗಳ ವಿಶ್ಲೇಷಣೆಯಲ್ಲಾಗಲಿ ಇದನ್ನು ಸಿದ್ಧಪಡಿಸಲಾಗಿದೆಯೇ? ಕರ್ನಾಟಕದಲ್ಲಿ ಲಿಂಗಾಯಿತ ಸ್ವಾಮಿಗಳ ರಾಜಕೀಯ ಪ್ರವೇಶವು ಲಿಂಗಾಯತ ಜಾತಿಗಳಿಗೆ ಸೇರಿದ ಜನಸಮಾನ್ಯರು ಬಿ.ಜೆ.ಪಿ ಕಡೆ ಒಲವು ತೋರಿಸಿದ ಪರಿಣಾಮವೇ ಅಥವಾ ಸ್ವಾಮಿಗಳ ನಿಲುವನ್ನು ಆಧರಿಸಿ ಜನರು ರಾಜಕೀಯ ನಿಲುವನ್ನು ತೆಗೆದುಕೊಂಡಿದ್ದಾರೆಯೇ? ಇಂತಹ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ಮಠ/ಸ್ವಾಮಿಗಳ ಮತ್ತು ರಾಜಕೀಯದ ನಡುವೆ ಕಾರ್ಯಾಕಾರಣ ಸಂಬಂಧವನ್ನು ಆರೋಪಿಸುವುದು ಎಷ್ಟು ಸರಿ?

ಒಟ್ಟಾರೆಯಾಗಿ ನಾನು ಹೇಳಬಯಸುವುದೇನೆಂದರೆ: ಉದಾರವಾದಿ ಪ್ರಜಾತಾಂತ್ರಿಕ ವ್ಯವಸ್ಥೆಯು ಭಾರತದಲ್ಲಿ ವಿಕೃತಗೊಳ್ಳುತ್ತಿರುವುದಕ್ಕೆ ಇಲ್ಲಿಯ ಸಮಾಜ, ಸಂಪ್ರದಾಯ, ಸಾಂಸ್ಕೃತಿಕ ಮೌಲ್ಯಗಳು ಕಾರಣ ಎನ್ನುವ ದಿಡೀರ್ ತೀರ್ಮಾನಕ್ಕೆ ಬರುವ ಮೊದಲು ಅಂತಹ ವ್ಯವಸ್ಥೆಯು ಯಾವ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿನ್ನೆಲೆಯಿಂದ ವಿಕಾಸಗೊಂಡಿದೆ ಮತ್ತು ಅದು ಮತ್ತೊಂದು ಸಾಂಸ್ಕೃತಿಕ ಪರಿಸರಕ್ಕೆ ವಲಸೆ ಬಂದಾಗ ವಿಕಾರಗೊಳ್ಳಲು ಕಾರಣ ಏನು ಎನ್ನುವುದರ ಬಗ್ಗೆ ಆಳವಾದ ಸಂಶೋಧನೆಯ ಅಗತ್ಯವಿದೆ. ಮೇಲ್ನೋಟಕ್ಕೆ ಜಾತಿ ಅಸ್ಮಿತೆಗಳು, ಮಠಗಳು ಸ್ವಾಮಿಗಳು ವ್ಯವಸ್ಥೆಯನ್ನು ಹದಗೆಡಿಸುತ್ತಿರುವಂತೆ ಕಾಣಿಸುತ್ತದೆ ನಿಜ. ಆದರೆ ಅದೇ ಸತ್ಯವಲ್ಲ. ಇವರುಗಳನ್ನು ಮಾತ್ರ ಪ್ರಜಾಪ್ರಭುತ್ವ ವಿರೂಪ/ವಿಕೃತಗೊಂಡ ಪ್ರಕ್ರಿಯೆಯ ಹೊಣೆಗಾರರಾಗಿಸುವ ಮುಂಚೆ ಭಾರತೀಯ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಮರುರೂಪಿಸುವ ನೆಪದಲ್ಲಿ ಎಷ್ಟರ ಮಟ್ಟಿಗೆ ಅದರ ಮೂಲಭೂತ ತತ್ವಗಳಿಗೆ ತಿಲಾಂಜಲಿ ಹೇಳಲಾಗಿದೆ ಮತ್ತು ಅದು ಎಷ್ಟರ ಮಟ್ಟಿಗೆ ಇಂದಿನ ಮಠಗಳ ಮತ್ತು ಜಾತಿಗಳ, ಪ್ರಜಾಪ್ರಭುತ್ವಕ್ಕೆ ಅನಪೇಕ್ಷಿತವಾದ, ರಾಜಕಾರಣಕ್ಕೆ ಕಾರಣವಾಗಿದೆ ಎನ್ನುವ ವಿಮರ್ಶೆಯನ್ನೂ ಸಹ ಮಾಡಬೇಕಿದೆ. ಇಲ್ಲವಾದರೆ ರೋಗದ ಮೂಲವನ್ನು ಗುರುತಿಸದೆ ಮೇಲ್ನೋಟಕ್ಕೆ ಕಾಣಿಸುವ ಲಕ್ಷಣಗಳನ್ನೇ ರೋಗವೆಂದು ಪರಿಗಣಿಸುವ ಅಪಾಯವಿದೆ. ತಪ್ಪಾದ ರೋಗಲಕ್ಷಣ ನಿರ್ಣಯದ ಆಧಾರದ ಮೇಲೆ ಪರಿಹಾರವಾಗಿ ನಾವು ಔಷಧಿಯನ್ನು ಕೊಟ್ಟಷ್ಟೂ ರೋಗ ಮತ್ತಷ್ಟು ಉಲ್ಬಣಿಸುತ್ತಾ ಹೋಗುತ್ತದೆ.

Author

  • ಪ್ರೊ. ಸದಾನಂದ ಜೆ.ಎಸ್. ರವರು ಕುವೆಂಪು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಪ್ರೊ. ಎಸ್.ಎನ್. ಬಾಲಗಂಗಾಧರ ರವರ “We Shall Not Cease Form Exploration” ಪ್ರಬಂಧವನ್ನು ಕನ್ನಡಕ್ಕೆ "ಹುಡುಕಾಟವನ್ನು ನಿಲ್ಲಿಸದಿರೋಣ" ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದ ಮಾಡಿರುತ್ತಾರೆ.

You may also like

Leave a Comment