Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ “ಬೌದ್ಧಿಕ ದಾಸ್ಯದಲ್ಲಿ ಭಾರತ” ಲೇಖಕರ ಮಾತು

“ಬೌದ್ಧಿಕ ದಾಸ್ಯದಲ್ಲಿ ಭಾರತ” ಲೇಖಕರ ಮಾತು

by S. N. Balagangadhara
196 views
ಬೌದ್ಧಿಕ ದಾಸ್ಯದಲ್ಲಿ ಭಾರತದ ಪ್ರಸ್ತುತ ಲೇಖನಗಳು ಪ್ರೊ. ಎಸ್.ಎನ್. ಬಾಲಗಂಗಾಧರ ರವರ Heathen in His Blindness: Asia, the West and the Dynamics of Religion ಮಹಾ ಪ್ರಬಂಧ ಮತ್ತು ಅದರ ನಂತರ ಬೆಳೆದ ಸಂಶೋಧನೆಗಳನ್ನು ಕನ್ನಡದಲ್ಲಿ ಸರಳವಾಗಿ, ಸಾಮಾನ್ಯ ಓದುಗರಿಗೆ ತಲುಪುವ ರೀತಿಯಲ್ಲಿ, ಸಮಾಚಾರ ಪತ್ರಿಕೆಗೆಂದು ಕನ್ನಡದಲ್ಲಿ ನಿರೂಪಿಸಿರುವ ಪ್ರೊ. ರಾಜಾರಾಮ ಹೆಗಡೆಯವರ ಅಂಕಣಗಳ ಸಂಗ್ರಹ. ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸ್ತಕ  CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ  ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾದ ಕೆಲವರ್ಷಗಳ ನಂತರ ಈ ಅಂಕಣಗಳಿಗೆ ಪುಸ್ತಕದ ರೂಪ ಕೊಟ್ಟು, ವಸಾಹತು ಪ್ರಜ್ಞೆಯ ವಿಶ್ವರೂಪ ಎಂಬ ಸರಣಿಯಲ್ಲಿ ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಪುಸ್ತಕವನ್ನು ೨೦೧೫ ರಲ್ಲಿ ನಿಲುಮೆ ಪ್ರಕಾಶನದಿಂದ ಮೊದಲ ಬಾರಿ ಪ್ರಕಟ ಮಾಡಲಾಯಿತು. ಅದಾದ ನಂತರ ಈ ಪುಸ್ತಕವು ಮರುಮುದ್ರಣಗೊಂಡು ಆರೋಹಿ ಸಂಶೋಧನಾ ಸಂಸ್ಥೆ, ಬೆಂಗಳೂರು, ಇದರ ನೇತೃತ್ವದಲ್ಲಿ ೨೦೧೮ರಲ್ಲಿ ವಸಂತ ಪ್ರಕಾಶನದಿಂದ ಪ್ರಕಟವಾಯಿತು. ಇದೀಗ ಈ ಲೇಖನಗಳು ಈ ಅಂತರ್ಜಾಲದ ಮಾಧ್ಯಮದ ಮೂಲಕ ಪ್ರಕಟವಾಗುತ್ತಿವೆ.  

 

 

ಪ್ರಿಯ ಓದುಗರೆ,

          ನಿಮ್ಮ ಕೈಯೊಳಗಿರುವ ಈ ’ವಸಾಹತುಪ್ರಜ್ಞೆಯ ವಿಶ್ವರೂಪ’ ಪುಸ್ತಕಮಾಲೆಯು ಹುಟ್ಟಿಕೊಳ್ಳಲು ಅನೇಕ ಘಟನೆಗಳು ಹಾಗೂ ಕಾರಣಗಳು ಇವೆ. ಈ ಪುಸ್ತಕಗಳಲ್ಲಿ ಏನನ್ನು ಹೇಳುತ್ತಿದ್ದೇನೆ ಹಾಗೂ ಏಕೆ ಹೇಳುತ್ತಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವುಗಳಲ್ಲಿ ಕೆಲವನ್ನಾದರೂ ನೀವು ತಿಳಿದಿರಬೇಕಾಗುತ್ತದೆ. ಹಾಗಾಗಿ ಅವುಗಳಲ್ಲಿ ಕೆಲವೊಂದು ಕಾರಣಗಳನ್ನು ನಿಮಗೆ ತಿಳಿಸಿ ಈ ಪುಸ್ತಕಗಳನ್ನು ಓದಲಿಕ್ಕೆ ನಿಮಗೆ ಸಹಾಯಮಾಡುವುದು ಈ ಪ್ರಸ್ತಾವನೆಯ ಉದ್ದೇಶ.

          ಈ ಪುಸ್ತಕಗಳು ಕೆಲವು ವಿಷಯಗಳ ಸುತ್ತ ಪೋಣಿಸಿದ ಚಿಕ್ಕದಾದ ಹಾಗೂ ಸರಳವಾದ ಲೇಖನಗಳ ಸಂಗ್ರಹವಾಗಿವೆ. ಪ್ರಾರಂಭದಲ್ಲಿ ಅವು ಕನ್ನಡದ ದೈನಿಕ ಪತ್ರಿಕೆಯಾದ ವಿಜಯವಾಣಿಯ ಅಂಕಣಗಳ ರೂಪದಲ್ಲಿ ಹುಟ್ಟಿಕೊಂಡವು. ಆ ಪತ್ರಿಕೆಯು ಆಗಷ್ಟೇ ಪ್ರಾರಂಭವಾಗಿತ್ತು. ಅದು ಇನ್ನೂ ತನ್ನ ಓದುಗರ ಬಳಗವನ್ನು ಕಂಡುಕೊಳ್ಳುವ ಹಂತದಲ್ಲಿತ್ತು. ಹಾಗಾಗಿ ಅದರ ಸಂಪಾದಕರು ಬೇರೆ ಬೇರೆ ವ್ಯಕ್ತಿಗಳ ಮೂಲಕ ನನ್ನನ್ನು ಸಂಪರ್ಕಿಸಿ ನನ್ನ ವಿಚಾರಗಳನ್ನು ಅಂಕಣಗಳ ರೂಪದಲ್ಲಿ ಪ್ರಕಟಿಸಬೇಕೆಂಬುದಾಗಿ ಕೇಳಿಕೊಂಡರು. ನನಗೂ ನನ್ನ ವಿಚಾರಗಳನ್ನು ಕನ್ನಡ ಓದುಗರಿಗೆ ಹಿಡಿಸುವಷ್ಟು ಸರಳವಾಗಿ ರೆಯಲು ಸಾಧ್ಯವೇ? ಎಂಬ ಆತಂಕವಿತ್ತು. ಆದರೆ ಬಹು ಬೇಗನೆ ಈ ಅಂಕಣಗಳು ಜನಪ್ರಿಯವಾದವು. ಕರ್ನಾಟಕದ ಉದ್ದಗಲಕ್ಕೂ ಅದಕ್ಕೆ ಓದುಗರು ಹುಟ್ಟಿಕೊಂಡರು. ಕೆಲವರು ಕರೆಮಾಡಿ ತಮ್ಮ ಮೆಚ್ಚುಗೆಯನ್ನು ನಮಗೆ ತಿಳಿಸುತ್ತಿದ್ದರು. ನನ್ನನ್ನು ತಮ್ಮಲ್ಲಿಗೆ ಆಹ್ವಾನಿಸಿ ಈ ಕುರಿತು ಚರ್ಚಿಸುವ ಉತ್ಸಾಹವನ್ನೂ ವ್ಯಕ್ತಪಡಿಸುತ್ತಿದ್ದರು. ಆದರೆ ಅದೇ ವೇಳೆಗೆ ನಮ್ಮ ಸಂಸ್ಕೃತಿಯ ಕುರಿತು ಕನ್ನಡ ಚಿಂತನಾವಲಯದೊಳಗೆ ಬೇರುಬಿಟ್ಟಿದ್ದ ಸವಕಲು ವಿಚಾರಗಳನ್ನು ಅವು ಅಲ್ಲಾಡಿಸತೊಡಗಿದವು. ಆ ಕಾರಣಕ್ಕಾಗಿ ಕನ್ನಡದ ಕೆಲವು ಚಿಂತಕರು ಈ ಅಂಕಣಕಾರನ ಮೇಲೆ ಕೆಂಡಕಾರತೊಡಗಿದರು.

          ನಾನು ವಿದೇಶದಲ್ಲಿ ನೆಲೆಸಿ ಸುಮಾರು ೩೫ ವರ್ಷಗಳಾದವು. ದುರಾದೃಷ್ಟದ ವಿಷಯವೆಂದರೆ ಇಂದು ನಮ್ಮ ಅನೇಕ ಕನ್ನಡ ಚಿಂತಕರು ತಮಗೆ ಇಷ್ಟವಾಗದ ವಿಚಾರಗಳನ್ನು  ಹೇಗೆ ನಿಭಾಯಿಸುತ್ತಾರೆಂಬುದನ್ನು ನೋಡಿದ ನನಗೆ ಹತಾಶೆಯಾಗಿದೆ. ೩೫ ವರ್ಷಗಳ ಹಿಂದಿನ ನನ್ನ ನೆನಪನ್ನು ಕೆದಕಿದಾಗ ನನಗೆ ಕಾಣುವುದೇನು? ವೈಚಾರಿಕ ಎದುರಾಳಿಗಳನ್ನು ವಾದಗಳು ಹಾಗೂ ವಿಚಾರಗಳ ಮೂಲಕ ಎದುರಿಸುವುದು ನಮ್ಮ ಕನ್ನಡಿಗರ ಸಂಪ್ರದಾಯವಾಗಿತ್ತು. ಕಳೆದ ಕೆಲವು  ದಶಕಗಳಲ್ಲಿ ಈ ಸಂಪ್ರದಾಯವು ನಾಶವಾದಂತೇ ಕಾಣಿಸುತ್ತಿದೆ. ಈಗ ಹಳೆಯ ವಿಚಾರಗಳನ್ನು  ಪ್ರಶ್ನಿಸುವ ಹೊಸ ವಿಚಾರಗಳು ಹುಟ್ಟಿಕೊಂಡರೆ ಅವನ್ನು ಧಮಕಿ ಹಾಕುವುದರ ಮೂಲಕ, ಬಲಪ್ರಯೋಗಮಾಡಿ ಹತ್ತಿಕ್ಕುವ ಹಾಗೂ ಬಹಿಷ್ಕಾರ ಹಾಕುವ ಮೂಲಕ ನಿಭಾಯಿಸಲಾಗುತ್ತಿದೆ ಎಂಬುದು ನನ್ನ ಅನುಭವಕ್ಕೆ ಬಂದಿದೆ. ವಿಜಯವಾಣಿಯ ನಮ್ಮ ಅಂಕಣಕ್ಕೆ ಇದೇ ಗತಿಯಾಯಿತು. ಕೆಲವು ಗಣ್ಯ ವ್ಯಕ್ತಿಗಳು ವಿಜಯವಾಣಿಯ ಸಂಸ್ಥಾಪಕರನ್ನು ಪ್ರಭಾವಿಸಿ ನಮ್ಮ ಅಂಕಣಗಳನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ದುರಾದೃಷ್ಟವೆಂದರೆ ಆ ಪತ್ರಿಕೆಯು ನಮ್ಮನ್ನು ಈ ಕುರಿತು ಯಾವ ಸ್ಪಷ್ಟನೆಯನ್ನೂ ಕೇಳುವ ಔದಾರ್ಯವನ್ನು ಹಾಗೂ ಶಿಷ್ಟಾಚಾರವನ್ನು ತೋರಿಸದೇ ಅನಾಮತ್ತಾಗಿ ನನ್ನ ಅಂಕಣವನ್ನು ನಿಲ್ಲಿಸಿತು. ಈ ರೀತಿಯಲ್ಲಿ ಈ ಅಂಕಣಗಳ ಮೂಲಕ ನಾನಿಟ್ಟ ವಿಚಾರವನ್ನು ಒಪ್ಪದವರು ತಮ್ಮ ಬಲಪ್ರದರ್ಶನ ಮಾಡಿ ಅವುಗಳನ್ನು ನಿಭಾಯಿಸಲು ಪ್ರಯತ್ನಿಸಿದ್ದು ಇತಿಹಾಸದ ಪುಟಗಳಲ್ಲಿ ಸೇರಿದೆ. ಇಂದು ಕರ್ನಾಟಕದಲ್ಲಿರುವ ಗೌರವಾನ್ವಿತ ಬುದ್ಧಿಜೀವಿಗಳು ಹಾಗೂ ಗಣ್ಯರು ವಿಚಾರ ವಿಮರ್ಶೆ ನಡೆಸುವ ವೈಖರಿಗೆ ಇದೊಂದು ಉದಾಹರಣೆ ಅಷ್ಟೆ. ಅಂದರೆ ನಿಮಗೆ ವಿಚಾರಗಳು ಇಷ್ಟವಿಲ್ಲದಿದ್ದರೆ ಅದನ್ನು ವ್ಯಕ್ತಪಡಿಸುವವರ ಬಾಯಿಗೆ ಬಟ್ಟೆ ತುರುಕಿ ಅವರ ಪ್ರಕಟಣೆಗಳನ್ನು ನಿಲ್ಲಿಸಿ ಅವು ಬೆಳಕು ಕಾಣದಂತೇ ಮಾಡುವುದು. ಇದು ನನಗೆ ಅರಿವಿಗೆ ಬಂದಾಗ ಇಂಥ ವಾತಾವರಣದಲ್ಲಿ ನಮ್ಮ ೧೮ ಅಂಕಣಗಳನ್ನು ಪ್ರಕಟಿಸುವ ಸಾಹಸವನ್ನಾದರೂ ವಿಜಯವಾಣಿಯು ಮಾಡಿತಲ್ಲಾ ಎಂದು ಆ ಪತ್ರಿಕೆಯ ಕುರಿತು ಮೆಚ್ಚುಗೆ ಮೂಡಿತು.

          ಆದರೆ ಈ ಕಾರಣಕ್ಕೇ ನಾವು ನಮ್ಮ ರೀತಿಯಲ್ಲಿ ಯೋಚಿಸುವುದನ್ನು ನಿಲ್ಲಿಸಿಯೂ ಇಲ್ಲ, ನಾವು ಏನು ಹೇಳುತ್ತೇವೆಂಬುದನ್ನು ಆಸಕ್ತ ಜನರ ಗಮನಕ್ಕೆ ಒಂದಿಲ್ಲೊಂದು ರೂಪದಲ್ಲಿ ತರುವುದನ್ನು ನಿಲ್ಲಿಸಿಯೂ ಇಲ್ಲ. ಅದಕ್ಕೆ ಈ ಪುಸ್ತಕ ಸರಣಿಯೇ ಸಾಕ್ಷಿ. ಅಂಕಣದ ಲೇಖನಗಳ ರೂಪದಲ್ಲೇ ಬರೆಯುವುದನ್ನು ಅಂತರ್ಜಾಲದಲ್ಲಿ ಮುಂದುವರಿಸಿ ಅದನ್ನು ಈ ಪುಸ್ತಕಗಳ ರೂಪದಲ್ಲಿ ಓದುಗರ ಮುಂದಿಡುತ್ತಿದ್ದೇವೆ. ಇನ್ನು ಈ ವಿಚಾರಗಳ ಕುರಿತು ತೀರ್ಮಾನ ತೆಗೆದುಕೊಳ್ಳುವುದು ನಿಮಗೆ ಬಿಟ್ಟದ್ದು.

          ಈ ಘಟನೆಗಳಿಂದ ಹಲವು ಪ್ರಶ್ನೆಗಳಂತೂ ಏಳುತ್ತವೆ:  ಏಕೆ ಕೆಲವು ಗಣ್ಯರು ನಮ್ಮ ಮೇಲೆ ಸಿಟ್ಟಾಗಬೇಕು? ನಮ್ಮ ಬರವಣಿಗೆಗಳಲ್ಲಿ ಅವರನ್ನು ಕೆರಳಿಸಿದ ಸಂಗತಿ ಯಾವುದು? ಯಾವ ರೂಢಿಗತ ವಿಚಾರಗಳನ್ನು ನಾವು ಪ್ರಶ್ನಿಸುತ್ತಿದ್ದೇವೆ ಹಾಗೂ ಅದೇಕೆ ಅಪಾಯಕಾರಿಯಾಗಿ ಅವರಿಗೆ ಕಾಣಿಸುತ್ತಿದೆ? ನಮ್ಮ ವಿಚಾರಗಳನ್ನು ಬೌದ್ಧಿಕ ಚರ್ಚೆಯ ಮೂಲಕ ಎದುರಿಸಲು ಈ ಕನ್ನಡ ಬುದ್ಧಿಜೀವಿಗಳೇಕೆ ಪ್ರಯತ್ನಿಸಲಿಲ್ಲ? ಅವರೇಕೆ ಬೆದರಿಕೆ ಒಡ್ಡುವ ಹಾಗೂ ಬಾಯಿ ಮುಚ್ಚಿಸುವ ಕೆಲಸಕ್ಕೆ ಇಳಿಯಬೇಕು? ಈ ಎಲ್ಲಾ ಪ್ರಶ್ನೆಗಳಿಗೂ ವಿವರವಾಗಿ ಉತ್ತರಿಸಲು ಈ ಪ್ರಸ್ತಾವನೆಯಲ್ಲಿ ಸಾಧ್ಯವಿಲ್ಲ. ಆದರೂ ನನಗೆ ತಿಳಿದ ಕೆಲವು ಉತ್ತರಗಳನ್ನಾದರೂ ನೀಡುವ ಅಗತ್ಯವಿದೆ.

ಪರಕೀಯ ಆಳ್ವಿಕೆಯ ಹಿನ್ನೆಲೆಯ ಕುರಿತು

ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಭಾರತೀಯ ಸಂಸ್ಕೃತಿಯ ಮೇಲೆ ಹಾಗೂ ನಮ್ಮ ಮೇಲೆ ಪರಕೀಯ ಆಳ್ವಿಕೆಗಳ ಪ್ರಭಾವವನ್ನು ಅರ್ಥಮಾಡಿಕೊಳ್ಳುತ್ತ ಪ್ರಾರಂಭಿಸಬೇಕಾಗುತ್ತದೆ. ಈ ಪರಕೀಯ ಆಳ್ವಿಕೆಯನ್ನು ವಸಾಹತುಶಾಹಿ ಎಂಬುದಾಗಿ ಕರೆಯಲಾಗುತ್ತದೆ. ನನ್ನ ಪ್ರಕಾರ ಭಾರತದಲ್ಲಿ ಕನಿಷ್ಠ ಎರಡಾದರೂ ವಸಾಹತುಶಾಹಿಗಳು ಆಗಿವೆ; ಮೊದಲನೆಯದು ಇಸ್ಲಾಂ ವಸಾಹತುಶಾಹಿ ಹಾಗೂ ಎರಡನೆಯದು ಬ್ರಿಟಿಷ್ ವಸಾಹತುಶಾಹಿ. ಈ ಎರಡು ವಸಹತುಶಾಹಿಗಳು ನಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ದಾಟಿಸುವ ಪ್ರಕ್ರಿಯೆಯನ್ನು ಹಾಳುಮಾಡಿವೆ. ಆದರೆ ಅವು ಈ ಕೆಲಸದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಆದರೂ ಅನೇಕ ತಲೆಮಾರುಗಳಿಂದ ಅದನ್ನು ಭಾಗಶಃ ಹಾಳುಮಾಡುವ ಕೆಲಸದಲ್ಲಂತೂ ಯಶಸ್ವಿಯಾಗಿವೆ. ಅದರ ಪರಿಣಾಮವಾಗಿ ಈ ಎಲ್ಲಾ ತಲೆಮಾರುಗಳನ್ನು ದಾಟಿಬಂದ ನಮ್ಮ ಸಂಸ್ಕೃತಿಯೇ ಘಾಸಿಗೊಂಡಿದೆ ಹಾಗೂ ನಾವು ಅಂಥದ್ದೊಂದು ಘಾಸಿಗೊಂಡ ಸಂಸ್ಕೃತಿಗೆ ಉತ್ತರಾಧಿಕಾರಿಗಳಾಗಿದ್ದೇವೆ. ಈ ಎರಡೂ ವಸಾಹತುಶಾಹಿಗಳಿಗೆ ಒಳಪಟ್ಟು ನಾವು ಭಾರತೀಯರು ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಭಾಗಶಃ ಬಳುವಳಿಯಾಗಿ ಪಡೆದಿದ್ದೇವೆ ಅದೂ ಕೂಡ ಅಡ್ಡತಿಡ್ಡವಾದ ವಿಧಾನದಲ್ಲಿ ಅದನ್ನು ಪಡೆದಿದ್ದೇವೆ.

ನಮ್ಮ ಸಂಸ್ಕೃತಿಯ ಸಂವಹನೆಯು ಯಾವ ಯಾವ ರೀತಿಗಳಲ್ಲಿ ಘಾಸಿಗೊಂಡಿದೆ? ಅದರ ಎಲ್ಲಾ ಬಗೆಗಳನ್ನೂ ಇಲ್ಲಿ ತಿಳಿಸಲು ಸಾದ್ಯವಿಲ್ಲವಾದರೂ ಒಂದು ಬಗೆಯನ್ನು ಕುರಿತು ಇಲ್ಲಿ ತಿಳಿಸಬಹುದು: ಅದೆಂದರೆ, ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಕುರಿತು ಆಲೋಚನೆಮಡುವ ಹಾಗೂ ಮಾತನಾಡುವ ಬಗೆ.

ನಾವು ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಕುರಿತು ಆಲೋಚನೆಮಾಡುವ ಹಾಗೂ ಮಾತನಾಡುವ ಬಗೆಯನ್ನು ಬ್ರಿಟಿಷರಿಂದ ಕಲಿತುಕೊಂಡಿದ್ದೇವೆ. ಅವರಿಗೆ ಭಾರತದ ಎಲ್ಲಾ ವಿಷಯಗಳ ಕುರಿತೂ ಜಿಗುಪ್ಸೆ ಇತ್ತು. ಭಾರತವು ಕೇವಲ ಹಿಂದುಳಿದ ಹಾಗೂ ಹಾಳಾದ ದೇಶವೊಂದೇ ಆಗಿರಲಿಲ್ಲ, ಅದು ಅಸಹ್ಯಕರವಾಗಿ ವಾಕರಿಕೆ ಹುಟ್ಟಿಸುವಂತೇ ಕೂಡ ಅವರಿಗೆ ಕಾಣಿಸಿತ್ತು. ನಾಗರೀಕ ಮನುಷ್ಯನೊಬ್ಬನು ಅಸಹ್ಯ ಪಟ್ಟುಕೊಳ್ಳಬೇಕಾದ ಎಲ್ಲವೂ ನಮ್ಮ ಸಂಸ್ಕೃತಿ ಸಂಪ್ರದಾಯಗಳಲ್ಲಿ ಕಂಡವು. ವಿಚಾರವಂತನೊಬ್ಬನು ಒಪ್ಪಿಕೊಳ್ಳಲಿಕ್ಕೇ ಆಗದ ವಿಷಯಗಳೇ ಅದರಲ್ಲಿ ತುಂಬಿದ್ದವು. ನಮ್ಮ ರಿಲಿಜನ್ನುಗಳು, ಜಾತಿ ವ್ಯವಸ್ಥೆಗಳು, ಮೂರ್ತಿಪೂಜೆ, ನೈತಿಕತೆ, ಇವೆಲ್ಲವೂ ಮಾನವ ನೈತಿಕತೆಯು ಎಷ್ಟು ಅಧಃಪತನವನ್ನು ಹೊಂದಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದವು. ಹಾಗಾಗಿ ನಮ್ಮನ್ನು ನಾಗರೀಕರನ್ನಾಗಿ ಮಾಡಿ ಮನುಷ್ಯರ ಆಕಾರಕ್ಕೆ ತರುವುದು ತಮಗೆ ಗಾಡ್ ನೀಡಿದ ಕರ್ತವ್ಯವೆಂಬುದಾಗಿ ಅವರು ಭಾವಿಸಿದರು.

ಭಾರತೀಯ ಸಂಸ್ಕೃತಿಯನ್ನು ಪ್ರಶಂಸಿಸಿದ ಪಾಶ್ಚಾತ್ಯರೂ ಇದ್ದರು ಎನ್ನಿ. ಪ್ರಾರಂಭಿಕ ಬುದ್ಧಿಸಂ ಹಾಗೂ ಉಪನಿಷತ್ತುಗಳ, ದರ್ಶನಗಳ ಸೌಂದರ್ಯ ಹಾಗೂ ಆಳವನ್ನು ಕುರಿತು ಅಂಥ ಪ್ರಶಂಸೆಗಳು ಬಂದವು. ಆದರೆ ಅಂಥ ಜನರು ಸಾವಿರಾರು ವರ್ಷಗಳ ಹಿಂದಿನ ಸಂಗತಿಗಳನ್ನು ಹೊಗಳುತ್ತಿದ್ದರು ಎಂಬುದನ್ನು ಗಮನಿಸುವ ಅಗತ್ಯವಿದೆ. ಅವರೂ ಕೂಡ ಇಂದಿನ ಭಾರತೀಯರ ಕುರಿತು ಅದೇ ಜಿಗುಪ್ಸೆಯನ್ನು ಹೊಂದಿದ್ದರು: ಭ್ರಷ್ಟವಾದ ಹಿಂದೂಯಿಸಂ, ಹಾಗೂ ಹಾಳಾಗಿ ಹೋದ ಬುದ್ಧಿಸಂನಂಥ ಜನಪ್ರಿಯ ರಿಲಿಜನ್ನುಗಳು ಭಾರತವು ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದವು. ಭಾರತೀಯರು ತಮ್ಮದೇ ಸಂಪ್ರದಾಯಗಳನ್ನು ಹಾಗೂ ಸಂಸ್ಕೃತಿಯನ್ನು ಹಾಳುಗೆಡವಿದ್ದಾರೆ ಹಾಗೂ ಈ ಸಂಸ್ಕೃತಿಯ ಶುದ್ಧ ರೂಪವು ಬ್ರಿಟಿಷರಿಗೆ ಮಾತ್ರ ಗೊತ್ತಿದೆ ಎಂದು ಅವರು ಭಾವಿಸಿದ್ದರು. ಭಾರತೀಯರನ್ನೇ ಬಿಟ್ಟರೆ ಅವರು ತಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ರಕ್ಷಿಸಿಕೊಳ್ಳುತ್ತಾರೆಂಬ ವಿಶ್ವಾಸವು ಬ್ರಿಟಿಷರಿಗಿರಲಿಲ್ಲ. ಆ ಕೆಲಸವನ್ನು ತಾವು ಮಾತ್ರವೇ ಮಾಡಲು ಸಮರ್ಥರು ಎಂದು ಅವರು ತಿಳಿದಿದ್ದರು. ಅಷ್ಟಾಗಿಯೂ ಅವರಿಗೆ ಈ ಅದ್ಭುತ ಗತಕಾಲವೂ ಕೂಡ ಬ್ರಿಟಿಷರ ಸಂಸ್ಕೃತಿ ಹಾಗೂ ರಿಲಿಜನ್ನಗಳಿಗೆ ಹೋಲಿಸಿದರೆ ಸಪ್ಪೆಯಾಗಿಯೇ ಕಾಣುತ್ತಿದ್ದವು.

ಸ್ವತಂತ್ರ ಭಾರತದ ಗತಕಾಲ

ದುರಾದೃಷ್ಟವೆಂದರೆ ಮಹಾತ್ಮಾ ಗಾಂಧಿಯಂಥ ಕೆಲವು ಅಪವಾದಗಳನ್ನು ಬಿಟ್ಟರೆ ಸ್ವಾತಂತ್ರ್ಯ ಚಳುವಳಿಯ ನೇತಾರರೆಲ್ಲರೂ ಬ್ರಿಟಿಷರ ಈ ಧೋರಣೆಯನ್ನು ಸಾರಾಸಗಟಾಗಿ ಆತುಕೊಂಡರು. ಬ್ರಿಟಿಷರಷ್ಟೇ ಉತ್ಸಾಹದಿಂದ ಭಾರತೀಯ ಸಂಸ್ಕೃತಿಯ ಕುರಿತು ತಮ್ಮ ಜಿಗುಪ್ಸೆಯನ್ನು ಪ್ರಕಟಿಸಿದರು. ನಮ್ಮ ಸಂಸ್ಕೃತಿಯು ಭ್ರಷ್ಟವಾಗಿದೆ ಎಂಬುದರ ಜೊತೆಗೆ ಅದು ಹೇಗೆ ಭ್ರಷ್ಟವಾಯಿತು ಎಂಬ ಕುರಿತು ಬ್ರಿಟಿಷರು ಹೇಳಿದ ಕಥೆಯನ್ನು ಸಾರಾಸಗಟಾಗಿ ಒಪ್ಪಿಕೊಂಡರು. ಹಿಂದೂಯಿಸಂ ಭ್ರಷ್ಟವಾದ ರಿಲಿಜನ್ನಾಗಿದೆ, ಬ್ರಾಹ್ಮಣ ಪುರೋಹಿತರಿಂದ ಅದಕ್ಕೆ ಆ ಗತಿ ಬಂದಿದೆ, ಬ್ರಾಹ್ಮಣ ಪುರೋಹಿತರು ಜಾತಿ ವ್ಯವಸ್ಥೆಯೆಂಬ ಅನಿಷ್ಠವನ್ನು ಹೇಗೆ ಸೃಷ್ಟಿಸಿದರು, ಇತ್ಯಾದಿ ಕಥೆಗಳನ್ನು ಒಪ್ಪಿಕೊಂಡು ಭಾರತೀಯ ಜನಸಾಮಾನ್ಯರ ಪ್ರತಿಯೊಂದು ಹಬ್ಬ ಹಾಗೂ ಧಾರ್ಮಿಕ ವಿಧಿಗಳನ್ನು ಕೂಡ ಅವರ ಮೂಢನಂಬಿಕೆ ಹಗೂ ಅಜ್ಞಾನ ಎಂಬುದಾಗಿ ಅಪಹಾಸ್ಯ ಮಾಡಿದರು. ಮೇಲ್ಜಾತಿಗಳು ಕೆಳಜಾತಿಗಳಮೇಲೆ ಸಾವಿರಾರು ವರ್ಷಗಳ ವರೆಗೆ ದಬ್ಬಾಳಿಕೆ ನಡೆಸಿದ್ದಾರೆ,  ಭಾರತೀಯ ಸಂಸ್ಕೃತಿಯ ಇಂಥ ಅಸಹ್ಯಕರ ಅಂಶಗಳನ್ನು ತೊಡೆಯುವುದು ಜ್ಞಾನೋದಿತ ವಿದ್ಯಾವಂತರ ಕಾರ್ಯವಾಗಿದೆ ಅಂದುಕೊಂಡರು. ಭಾರತವನ್ನು ಅದರ ಸಂಸ್ಕೃತಿ ಹಾಗೂ ಸಂಪ್ರದಾಯಗಳೇ ಅಷ್ಟೊಂದು ಹಿಂದುಳಿದ, ಆದಿಮ ಸಂಸ್ಕೃತಿಯನ್ನಾಗಿ ಮಾಡಿವೆ ಎಂಬುದರಲ್ಲಿ ಅವರಿಗೆ ಯಾವುದೇ ಸಂಶಯವಿರಲಿಲ್ಲ.

ಈ ಕಥೆಗೆ ಭಾರತದ ಪ್ರಪ್ರಥಮ ಪ್ರಧಾನಿಯಾದ ನೆಹರೂರವರು ತಮ್ಮ ’ಡಿಸ್ಕವರಿ ಆಫ್ ಇಂಡಿಯಾ’ ಗ್ರಂಥದ ಮೂಲಕ ಜನಪ್ರಿಯತೆಯನ್ನು ನೀಡಿದರು. ಆ ಪುಸ್ತಕದ ಪ್ರತೀ ವಾಕ್ಯ ಹಾಗೂ ಪ್ಯಾರಾಗಳಲ್ಲಿಯೂ ಭಾರತೀಯ ಸಂಸ್ಕೃತಿಯ ಕುರಿತು ಜಿಗುಪ್ಸೆ ಒಸರುತ್ತದೆ. ಅವರ ಕಾಂಗ್ರೆಸ್ ಪಕ್ಷವು ಇದನ್ನು ಮತ್ತೂ ಪ್ರಚಾರ ಮಾಡಿತು. ಭಾರತ ಹಾಗೂ ಹೊರನಾಡುಗಳಲ್ಲಿ ಭಾರತದ ರಾಷ್ಟ್ರಗೀತೆಗಿಂತಲೂ  ಬ್ರಿಟಿಷರ ಈ ಕಥೆಯೇ ಹೆಚ್ಚು ಸುಪ್ರಸಿದ್ಧವಾಯಿತು. ಪ್ರತಿಯೊಬ್ಬ ಸೆಕ್ಯುಲರ್ ಹಗೂ ಪ್ರಗತಿಪರ ಚಿಂತಕನೂ ಈ ಕಥೆಯನ್ನು ದಣಿವಿಲ್ಲದೇ ಪುನರುಚ್ಚರಿಸುತ್ತ ಬಂದನು. ಆದರೆ ಈ ಕಥೆಗೆ ಒಂದು ದೇಶೀ ತಿರುವು ಕೊಟ್ಟುಕೊಳ್ಳಲು ಅವರು ಮರೆಯಲಿಲ್ಲ. ಈ ಕಥೆಯು ಯಾವಾಗಲೂ ಹೊಸದಾಗಿ ಕಾಣುವಂತೇ ಮಾಡಲು ಅಗತ್ಯವಾದ ಮಸಾಲೆಗಳು, ವಿವರಗಳು ಹಾಗೂ ಭಾವೋದ್ದೀಪಕಗಳನ್ನು ಸೇರಿಸುತ್ತ ಹೋಗಲಾಯಿತು.

ಹಾಸ್ಯಾಸ್ಪದ ಕಥೆಗಳನ್ನು ಸತ್ಯವೆಂಬಂತೇ ಪ್ರಚಾರಮಾಡಲು ಏನಾದರೂ ಆಮಿಷಗಳು ಇರಬೇಕಾಗುತ್ತದೆ ಎಂಬುದು ಖಂಡಿತ. ಅಂಥ ಕಥೆಗಳನ್ನು ಹೇಳಿದವರಿಗೆ ಭಕ್ಷೀಸುಗಳನ್ನು, ಪ್ರಶಸ್ತಿಗಳನ್ನು ನೀಡಲಾಯಿತು. ಈ ಕಥೆಗಳ ಕುರಿತ ಸಂಶೋಧನೆಗಳಿಗೆ ವಿಶೇಷ ಧನಸಹಾಯವನ್ನೂ, ಪ್ರೋತ್ಸಾಹವನ್ನೂ ನೀಡಲಾಯಿತು. ಇಂಥ ಕಥೆಗಳನ್ನು ಉಳಿಸಲು ಪ್ರಯತ್ನಿಸಿದವರ ಜೊತೆಗೆ ರಾಜಕೀಯ ಅಧಿಕಾರವನ್ನು ಹಂಚಿಕೊಳ್ಳಲಾಯಿತು. ಈ ರೀತಿಯಾಗಿ ಸ್ವತಂತ್ರ ಭಾರತದಲ್ಲಿ ಒಂದು ಪ್ರಬಲ ಹಿತಾಸಕ್ತಿಯ ಗುಂಪು ಅಸ್ತಿತ್ವಕ್ಕೆ ಬಂದಿತು. ಅದು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಪ್ರಬಲವಾಗಿತ್ತು. ವಸಾಹತು ದೊರೆಗಳು ಹೇಳಿದ ಕಥೆಯನ್ನು ಒಪ್ಪಿಕೊಳ್ಳುವ ಷರತ್ತಿನ ಮೇಲೆ ಈ ಲಾಭಗಳು ಅವರಿಗೆ ಸಿದ್ಧಿಸಿದ್ದವು. ವಸಾಹತು ದೊರೆಗಳೇನೋ ಭಾರತೀಯರನ್ನು ಗುಲಾಮರನ್ನಾಗಿ ಉಳಿಸಿಕೊಳ್ಳುವ ಸಲುವಾಗಿ ಈ ಕಥೆಯನ್ನು ಹೇಳಿದ್ದರು, ಆದರೆ ಸ್ವತಂತ್ರ ಭಾರತದ ಬುದ್ಧಿಜೀವಿಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಈ ಕಥೆಯನ್ನೇ ನಮ್ಮ ಅಭಿವೃದ್ಧಿಯ ಕಥೆಯೆಂಬಂತೇ ಪ್ರಚಾರ ಮಾಡಿದರು. ಇವರಿಬ್ಬರ ನಡುವೆ ಸತ್ಯವು ಬಡವಾಯಿತು. ಅಷ್ಟಕ್ಕೂ ಸ್ವಾರ್ಥಸಾಧನೆಗೆ ಅಡ್ಡಗಾಲು ಹಾಕುವ ಸತ್ಯ ಯಾರಿಗೆ ಬೇಕಾಗಿದೆಯಂತೆ?

ಇಂದು

ಆ ಸತ್ಯ ನಮಗೆ ಬೇಕು. ಈ ಆಧುನಿಕ ಸೆಕ್ಯುಲರ್ ಬುದ್ಧೀಜೀವಿಗಳು ನಂಬಿರುವ ಬ್ರಿಟಿಷರ ಕಥೆಯು ಅಪ್ಪಟ ಸುಳ್ಳು ಹಾಗೂ ಅಪಾಯಕಾರಿ ಎಂಬುದಾಗಿ ಕಳೆದ ಕೆಲವು ದಶಕಗಳ ಸಂಶೋಧನೆಯು ತೋರಿಸಿಕೊಟ್ಟಿದೆ. ನಾವು ಈ ವಿಚಾರವನ್ನು ಹೇಳಿದಾಗ ಇಲ್ಲವೇ ಪ್ರಕಟಿಸಿದಾಗ ಈ ಗಣ್ಯರು ಸಿಟ್ಟಾಗುವುದರಲ್ಲಿ ಆಶ್ಚರ್ಯವಿದೆಯೆ? ನಾವು ಅವರ ನಂಬಿಕೆ ಹಾಗೂ ಅದರಿಂದ ಲಭ್ಯವಾಗಿರಬಹುದಾದ ಸವಲತ್ತು ಹಾಗೂ ಸ್ಥಾನಮಾನಗಳಿಗೆ ಈ ವಿಚಾರಗಳ ಮೂಲಕ ಸವಾಲು ಎಸೆಯುತ್ತಿದ್ದೇವೆ. ನಾವು ಅವರ ಹೊಟ್ಟೆಯ ಮೇಲೇ ಹೊಡೆಯುತ್ತಿದ್ದೇವೆಯೋ ಎಂಬಂತೇ ಅವರು ಕೆಂಡಕಾರುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅವರು ಭಾರತೀಯ ಸಮಾಜದ ಒಂದು ಗುಂಪನ್ನು ಮತ್ತೊಂದು ಗುಂಪಿಗೆ ವಿರುದ್ಧವಾಗಿ ಎತ್ತಿಕಟ್ಟಿ ತಮ್ಮ ಸ್ಥಾನಮಾನವನ್ನು ಕಾಪಾಡಿಕೊಳ್ಳುತ್ತಿದ್ದಾರೆ: ಲಿಂಗಾಯತರ ವಿರುದ್ಧ ಬ್ರಾಹ್ಮಣರನ್ನು, ಇವರಿಬ್ಬರ ವಿರುದ್ಧ ಒಕ್ಕಲಿಗರನ್ನು, ಇವರೆಲ್ಲರ ವಿರುದ್ಧ ದಲಿತರನ್ನು, ಹೀಗೆ. ಇಂಥವರ ಪಿತ್ಥವನ್ನು ನಾವು ಕೆರಳಿಸುತ್ತಿದ್ದೇವೆ.

ಈ ಪುಸ್ತಕವು ಈ ಮಾಲೆಯ ಪ್ರಥಮ ಕೃತಿಯಾಗಿದೆ. ಇಂಥ ಇನ್ನೂ ಕೆಲವು ಕೃತಿಗಳನ್ನು ಹೊರತರುವ ಆಲೋಚನೆ ಇದೆ. ಪ್ರತಿಯೊಂದೂ ಕೂಡ ನಮ್ಮ ಸಂಶೋಧನೆಯನ್ನು ಆದಷ್ಟೂ ಸರಳವಾಗಿ ತಿಳಿಸಲು ಪ್ರಯತ್ನಿಸುತ್ತದೆ. ನಾವು ತಿಳಿಸುವ ಸತ್ಯಗಳನ್ನು ಓದಿ ಯೋಚಿಸಬೇಕಾದವರು ನೀವು. ನಾವು ತಪ್ಪಿದ್ದೇವೆಂದು ನಿಮಗನ್ನಿಸಬಹುದು, ನಾವು ತಪ್ಪಿರಲೂ ಬಹುದು. ಅಂಥ ಸಂದರ್ಭದಲ್ಲಿ ನಾವು ಚರ್ಚೆಗೆ ಮುಕ್ತರಾಗಿದ್ದೇವೆ. ನಾವು ಬೌದ್ಧಿಕ ಮಾಯಾಜಾಲವನ್ನು ಬೀಸಿ ಕಳ್ಳರಂತೇ ತಲೆತಪ್ಪಿಸಿಕೊಳ್ಳುವವರಲ್ಲ.  ಹಾಗೆ ಮಾಡಲಿಕ್ಕೆ ನಮಗೆ ಸಾಧ್ಯವಿದ್ದರೂ ಕೂಡ ಮಾಡುವುದಿಲ್ಲ.

ಅಂತಿಮವಾಗಿ ಇನ್ನೂ ಒಂದು ವಿಷಯವನ್ನು ದಾಖಲಿಸಬೇಕಾಗಿದೆ. ಈ ಪುಸ್ತಕದ ಬಹುತೇಕ ವಿಚಾರಗಳು ನನ್ನವೇ ಆದರೂ ಕೂಡ ನನ್ನ ನೆಚ್ಚಿನ ಗೆಳೆಯ ರಾಜಾರಾಮ ಕೇವಲ ಅವುಗಳ ಅನುವಾದಕ ಮಾತ್ರವೇ ಅಲ್ಲ. ಈ ಪುಸ್ತಕದಲ್ಲಿ ಅವನು ಮಾಡಿರುವುದು ನನ್ನ ವಿಚಾರಗಳ ಕನ್ನಡ ರೂಪಾಂತರ. ಅವನಿಗೆ ನನ್ನ ಧನ್ಯವಾದ ಹಾಗೂ ಕೃತಜ್ಞತೆಗಳು.

ಪುಸ್ತಕ ದೊರಕುವ ಸ್ಥಳ:-

ವಸಂತ ಪ್ರಕಾಶನ
360, 10/B ಮೇನ್
ಜಯನಗರ 3ನೇ ಬ್ಲಾಕ್
ಬೆಂಗಳೂರು – 11
ಫೋನ್: 9986020852

Author

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

S. N. Balagangadhara

ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Message Us on WhatsApp