Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ “ಬೌದ್ಧಿಕ ದಾಸ್ಯದಲ್ಲಿ ಭಾರತ” ಕನ್ನಡ ನಿರೂಪಕರ ಪ್ರಸ್ತಾವನೆ

“ಬೌದ್ಧಿಕ ದಾಸ್ಯದಲ್ಲಿ ಭಾರತ” ಕನ್ನಡ ನಿರೂಪಕರ ಪ್ರಸ್ತಾವನೆ

by Rajaram Hegde
24 views
ಬೌದ್ಧಿಕ ದಾಸ್ಯದಲ್ಲಿ ಭಾರತದ ಪ್ರಸ್ತುತ ಲೇಖನಗಳು ಪ್ರೊ. ಎಸ್.ಎನ್. ಬಾಲಗಂಗಾಧರ ರವರ Heathen in His Blindness: Asia, the West and the Dynamics of Religion ಮಹಾ ಪ್ರಬಂಧ ಮತ್ತು ಅದರ ನಂತರ ಬೆಳೆದ ಸಂಶೋಧನೆಗಳನ್ನು ಕನ್ನಡದಲ್ಲಿ ಸರಳವಾಗಿ, ಸಾಮಾನ್ಯ ಓದುಗರಿಗೆ ತಲುಪುವ ರೀತಿಯಲ್ಲಿ, ಸಮಾಚಾರ ಪತ್ರಿಕೆಗೆಂದು ಕನ್ನಡದಲ್ಲಿ ನಿರೂಪಿಸಿರುವ ಪ್ರೊ. ರಾಜಾರಾಮ ಹೆಗಡೆಯವರ ಅಂಕಣಗಳ ಸಂಗ್ರಹ. ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸ್ತಕ  CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ  ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾದ ಕೆಲವರ್ಷಗಳ ನಂತರ ಈ ಅಂಕಣಗಳಿಗೆ ಪುಸ್ತಕದ ರೂಪ ಕೊಟ್ಟು, ವಸಾಹತು ಪ್ರಜ್ಞೆಯ ವಿಶ್ವರೂಪ ಎಂಬ ಸರಣಿಯಲ್ಲಿ ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಪುಸ್ತಕವನ್ನು ೨೦೧೫ ರಲ್ಲಿ ನಿಲುಮೆ ಪ್ರಕಾಶನದಿಂದ ಮೊದಲ ಬಾರಿ ಪ್ರಕಟ ಮಾಡಲಾಯಿತು. ಅದಾದ ನಂತರ ಈ ಪುಸ್ತಕವು ಮರುಮುದ್ರಣಗೊಂಡು ಆರೋಹಿ ಸಂಶೋಧನಾ ಸಂಸ್ಥೆ, ಬೆಂಗಳೂರು, ಇದರ ನೇತೃತ್ವದಲ್ಲಿ ೨೦೧೮ರಲ್ಲಿ ವಸಂತ ಪ್ರಕಾಶನದಿಂದ ಪ್ರಕಟವಾಯಿತು. ಇದೀಗ ಈ ಲೇಖನಗಳು ಈ ಅಂತರ್ಜಾಲದ ಮಾಧ್ಯಮದ ಮೂಲಕ ಪ್ರಕಟವಾಗುತ್ತಿವೆ.  

ನಮ್ಮ ಹಾಗೂ ನಮ್ಮ ಸುತ್ತಲಿನ ಪ್ರಪಂಚದ ಕುರಿತ ತಿಳುವಳಿಕೆಯನ್ನು ಸದಾ ಪರಿಷ್ಕರಿಸಿಕೊಳ್ಳುತ್ತಾ ಬದುಕನ್ನು ನಡೆಸಬೇಕಾಗುತ್ತದೆ. ಒಂದೊಮ್ಮೆ ಆ ಕೆಲಸವು ನಡೆಯದಿದ್ದಲ್ಲಿ ನಮ್ಮ ಬದುಕಿನಲ್ಲಿ ತಪ್ಪು ನಿರ್ಣಯಗಳು ಹಾಗೂ ಅವುಗಳನ್ನನುಸರಿಸಿದ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ಇದು ನಮ್ಮೆಲ್ಲರ ಅನುಭವ. ನಮ್ಮ ಜೀವನದಲ್ಲಿ ತಿಳಿದುಕೊಳ್ಳುವ ಕೆಲಸವು ಮುಗಿಯಿತು ಎನ್ನುವ ಕ್ಷಣವೇ ಇಲ್ಲ. ನಮ್ಮ ಸಂಸ್ಕೃತಿಯ ಕುರಿತ ತಿಳುವಳಿಕೆಯ ಸಂದರ್ಭದಲ್ಲೂ ಕೂಡ ಈ ಮಾತು ಅಷ್ಟೇ ನಿಜ. ಭಾರತೀಯ ಸಂಸ್ಕೃತಿಯ ಕುರಿತು ನಾವು ಇದುವರೆಗೂ ಏನನ್ನು ಪ್ರತಿಪಾದಿಸಿಕೊಂಡು ಬಂದಿದ್ದೇವೋ ಅವುಗಳನ್ನು ಮರುಚಿಂತನೆಗೊಳಪಡಿಸುವ ಅಗತ್ಯ ಇಂದು ಅತ್ಯಂತ ತುರ್ತಾಗಿದೆ. ಕಾರಣವೆಂದರೆ, ಇಂದು ಯಾವ ವಿಚಾರಗಳನ್ನು ಸತ್ಯಗಳೆಂದು ನಾವು ನಂಬಿಕೊಂಡಿದ್ದೇವೋ ಅವು ನೂರು ವರ್ಷಗಳಿಗೂ ಹಿಂದಿನ ವಿಚಾರಗಳು. ಅವನ್ನು ಕಟ್ಟಿಕೊಟ್ಟದ್ದು ಅಂದಿನ ಸಮಾಜ ವಿಜ್ಞಾನ. ಇಂದು ಕಾಲ ಹಾಗೂ ತಿಳುವಳಿಕೆ ಎರಡೂ ಬದಲಾಗಿವೆ.

ವಿಜ್ಞಾನವು ಯಾವಾಗಲೂ ಪ್ರಪಂಚದ ಕುರಿತ ತನ್ನ ಗ್ರಹಿಕೆಗಳನ್ನು ಪರಿಷ್ಕರಿಸುತ್ತಾ ಬೆಳೆಯುತ್ತದೆ. ಯಾವ ರೀತಿಯಲ್ಲಿ ನೂರು ವರ್ಷಗಳ ಹಿಂದಿನ ನಿಸರ್ಗ ವಿಜ್ಞಾನದ ನಿರ್ಣಯಗಳನ್ನು ಯಥಾವತ್ತಾಗಿ ಸ್ವೀಕರಿಸುವುದು ಇಂದಿನ ವಿಜ್ಞಾನಿಗಳಿಗೆ ಸಾಧ್ಯವಿಲ್ಲವೋ ಹಾಗೆಯೇ ನೂರು ವರ್ಷಗಳ ಹಿಂದಿನ ಸಾಮಾಜಿಕ ಚಿಂತನೆಗಳನ್ನೂ ಇಂದು ಸತ್ಯವೆಂಬುದಾಗಿ ಪ್ರತಿಪಾದಿಸುವುದು ಇಂದಿನ ಸಾಮಾಜಿಕ ಚಿಂತಕರಿಗೆ ತಕ್ಕುದಲ್ಲ. ಸಮಾಜ ವಿಜ್ಞಾನಗಳು ಕಳೆದ ನೂರು ವರ್ಷಗಳಲ್ಲಿ ಅನೇಕ ಹೊಸ ಚರ್ಚೆಗಳನ್ನು ಎತ್ತಿವೆ, ಹಳೆಯ ಸಿದ್ಧಾಂತಗಳಲ್ಲಿನ ಸಮಸ್ಯೆಗಳನ್ನು ಬೆಳಕಿಗೆ ತಂದಿವೆ ಹಾಗೂ ನಮ್ಮ ತಿಳುವಳಿಕೆಯನ್ನು ಪರಿಷ್ಕರಿಸಿವೆ. ಆದರೆ ಭಾರತೀಯ ಸಂಸ್ಕೃತಿಯ ಕುರಿತಂತೇ ನಾವು ಮಾತ್ರ ನೂರು ವರ್ಷಗಳ ಹಿಂದಿನ ವಿಚಾರಗಳ ಮೇಲಿನ ವ್ಯಾಮೋಹವನ್ನು ಬಿಟ್ಟುಕೊಡಲು ಹಿಂಜರಿಯುತ್ತಿದ್ದೇವೆ.

ನೂರು ವರ್ಷಗಳ ಹಿಂದೆ ನಮ್ಮ ಸಂಸ್ಕೃತಿಯ ಕುರಿತು ಏನೇನು ಗ್ರಹಿಕೆಗಳನ್ನಿಟ್ಟುಕೊಂಡು ನಮ್ಮ ರಾಜಕೀಯವನ್ನು, ನೀತಿಗಳನ್ನು ರೂಪಿಸಿಕೊಂಡೆವೋ, ಅವುಗಳಿಂದ ಹುಟ್ಟಿರಬಹುದಾದ ಸಮಸ್ಯೆಗಳೂ ಇಂದು ರಾಶಿ ಬಿದ್ದಿವೆ. ಒಂದು ಶರೀರವನ್ನು ಹಾಗೂ ಅದರ ರೋಗವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಔಷಧವನ್ನು ಹಾಗೂ ಚಿಕಿತ್ಸೆಯನ್ನು ನೀಡಿದರೆ ಅದು ಆ ಶರೀರಕ್ಕೆ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ರೋಗ ಕೂಡ ಬಿಗಡಾಯಿಸುತ್ತದೆ. ಇದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಅದೇ ರೀತಿಯಲ್ಲಿ ನಮ್ಮ ಸಂಸ್ಕೃತಿಯನ್ನು ಹಾಗೂ ಅದರ ಸಮಸ್ಯೆಗಳನ್ನು ಯತಾರ್ಥವಾಗಿ ಅರ್ಥಮಾಡಿಕೊಳ್ಳದೇ ನೀತಿಗಳನ್ನು ರೂಪಿಸಿಕೊಂಡಾಗ ಅವು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಹಳೆಯ ಸಮಸ್ಯೆಗಳು ಮತ್ತೂ ಬಿಗಡಾಯಿಸುತ್ತವೆ. ಹಾಗಾಗಿ ನಮ್ಮ ಸಂಸ್ಕೃತಿಯ ಸ್ವರೂಪ ಹಾಗೂ ಸಮಸ್ಯೆಗಳ ಕುರಿತು ತಿಳುವಳಿಕೆಯನ್ನು ಪರಿಷ್ಕರಿಸುವುದು ಸಾಮಾಜಿಕ ಕಳಕಳಿ ಇರುವ ಎಲ್ಲರ ಕರ್ತವ್ಯ.

ಸ್ವೀಕೃತ ವಿಚಾರಗಳನ್ನು ಪ್ರಶ್ನಿಸುವುದು ಅಥವಾ ಅಲ್ಲಗಳೆಯುವುದು ಕೇವಲ ಬೌದ್ಧಿಕ ಚರ್ಚೆಗೇ ಸೀಮಿತವಾಗಿ ಉಳಿಯುವುದಿಲ್ಲ. ಅದರಲ್ಲೂ ಅಂಥ ವಿಚಾರಗಳಿಗೆ ರಾಜಕೀಯ, ನೈತಿಕ ಹಿತಾಸಕ್ತಿ ಹಾಗೂ ಬಣ್ಣಗಳು ಇದ್ದಾಗಂತೂ ಅವನ್ನು ಪ್ರಶ್ನಿಸುವುದು ಪ್ರವಾಹದ ವಿರುದ್ಧ ಈಜುವ ಸಾಹಸವೇ ಆಗುತ್ತದೆ. ಹೀಗೆ ಪ್ರಶ್ನೆ ಮಾಡುವವರ ವಿಚಾರದ ಯುಕ್ತಾಯುಕ್ತತೆಗಿಂತ ಅವರ ಸಾಮಾಜಿಕ ಕಾಳಜಿಯನ್ನು ಪ್ರಶ್ನಿಸುವುದೇ ಎದುರಾಳಿಗಳಿಗೆ ಮುಖ್ಯವಾಗಿಬಿಡುತ್ತದೆ. ಹಿತಾಸಕ್ತಿಯ ಗುಂಪುಗಳಂತೂ ಇದನ್ನೇ ಮುಂದೆ ಮಾಡಿ ಅವರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತವೆ.

ಪ್ರಸ್ತುತ ಪುಸ್ತಕಮಾಲೆಯನ್ನು ಓದಲು ಮೇಲಿನ ಪೀಠಿಕೆಯು ಅತ್ಯಗತ್ಯ. ಈ ಲೇಖನಗಳು  ಎಸ್. ಎನ್ ಬಾಲಗಂಗಾಧರ ಅವರ ಸಂಶೋಧನೆಗಳಾಗಿವೆ. ಅವರ ಸಂಶೋಧನೆಗಳು ಇಂದು ಭಾರತೀಯ ಸಂಸ್ಕೃತಿಯ ಹಾಗೂ ಸಮಾಜದ ಕುರಿತು ಇರುವ ಚಿಂತನೆಗಳಲ್ಲಿನ ಸಮಸ್ಯೆಗಳನ್ನು ಗುರುತಿಸುತ್ತವೆ. ಈ ಬೌದ್ಧಿಕ ಸಮಸ್ಯೆಗಳು ಹೇಗೆ ನಮ್ಮ ಜನಜೀವನದಲ್ಲಿ ವ್ಯಾವಹಾರಿಕ ಸಮಸ್ಯೆಗಳನ್ನು ಸೃಷ್ಟಿಸಿವೆ ಎಂಬುದನ್ನು ತೋರಿಸುತ್ತವೆ. ಈ ಎರಡೂ ಸಮಸ್ಯೆಗಳು ಹೇಗೆ ನಮ್ಮ ಸಂಸ್ಕೃತಿಯ ಕುರಿತ ತಪ್ಪು ತಿಳುವಳಿಕೆಯಿಂದ ಹುಟ್ಟುತ್ತವೆ ಎಂಬುದನ್ನು ಕೂಡ ಅವು ತೋರಿಸುತ್ತವೆ. ಅಷ್ಟೇ ಅಲ್ಲದೇ ಅವುಗಳನ್ನು ಪರಿಹರಿಸಿಕೊಳ್ಳಬೇಕಾದರೆ ನಮ್ಮ ಸಂಸ್ಕೃತಿಯನ್ನು ಸರಿಯಾಗಿ ಅರ್ಥೈಸುವ ನಿಟ್ಟಿನಲ್ಲಿ ಯಾವ ರೀತಿಯ ತಿಳುವಳಿಕೆಯು ಸಮಂಜಸವಾಗಬಹುದು ಎಂಬುದನ್ನೂ ತಿಳಿಸುತ್ತವೆ.

ಅಂದರೆ ಭಾರತೀಯ ಸಮಾಜದಲ್ಲಿ ಸಮಸ್ಯೆಗಳೇ ಇಲ್ಲ ಎಂಬುದಾಗಿ ಲೇಖಕರು ಹೇಳುತ್ತಿಲ್ಲ. ಇಂದು ಪ್ರಚಲಿತದಲ್ಲಿರುವ ಸ್ವೀಕೃತ ವಿಚಾರಗಳು ಅವುಗಳನ್ನು ಬಗೆಹರಿಸಲಾರವು ಅಷ್ಟೇ ಅಲ್ಲ, ಅವು ಹೊಸ ಸಮಸ್ಯೆಗಳನ್ನು ಕೂಡಾ ಹುಟ್ಟಿಸುತ್ತಿವೆ, ಹಾಗಾಗಿ ಈಗಾಗಲೇ ಇದ್ದ ಸಮಸ್ಯೆಗಳೂ ಪರಿಹಾರವನ್ನು ಕಾಣದೇ ಬಿಗಡಾಯಿಸಿವೆ. ಆ ಕಾರಣಕ್ಕಾಗಿಯೇ ಈ ದಿಕ್ಕಿನಲ್ಲಿ ಪ್ರಸ್ತುತ ಸಂಶೋಧನೆಯನ್ನು ಕೈಗೊಳ್ಳಲಾಗಿದೆ. ಇಂದು ಭಾರತೀಯ ಸಮಾಜದಲ್ಲಿ ಇರುವ ಯಾವ ನೂರೆಂಟು ಸಮಸ್ಯೆಗಳ ಪರಿಹಾರದ ಕುರಿತು  ಸಾಮಾಜಿಕ ಕಳಕಳಿಯುಳ್ಳ ಬುದ್ಧಿಜೀವಿಗಳೆಲ್ಲರೂ ತಿಣುಕಾಡುತ್ತಿದ್ದಾರೋ ಅವನ್ನೇ ಈ ಸಂಶೋಧನೆಗಳು ಅರ್ಥಮಾಡಿಕೊಳ್ಳುವ ಹಾಗೂ ಪರಿಹರಿಸುವ ಉದ್ದೇಶವನ್ನು ಹೊಂದಿವೆ. ಅಷ್ಟೇ ಅಲ್ಲ, ಈ ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ಸೂಚಿಸುತ್ತವೆ. ಅಂತಿರುವಾಗ ಅವರೆಲ್ಲರನ್ನೂ ಬಿಟ್ಟು ಬಾಲಗಂಗಾಧರರ ಸಾಮಾಜಿಕ ಕಳಕಳಿಯ ಕುರಿತು ಮಾತ್ರವೇ ಪ್ರಶ್ನೆ ಉದ್ಭವಿಸಲು ಸಾಧ್ಯವಿಲ್ಲ.

ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಈಗ ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ. ಈ ಸಂಗ್ರಹದ ಲೇಖನಗಳು ಮೂಲತಃ ವಿಜಯವಾಣಿ ದಿನಪತ್ರಿಕೆಯಲ್ಲಿ ಪತ್ರಿಕಾ ಅಂಕಣಗಳಾಗಿ ಪ್ರಾರಂಭವಾದವುಗಳು. ನಂತರ ಜಾಲತಾಣದಲ್ಲಿ ಇವುಗಳ ಪ್ರಕಟಣೆ ಮುಂದುವರಿದಿದೆ. ಪ್ರಸ್ತುತ ಸಂಗ್ರಹದಲ್ಲಿ ಪ್ರಕಟಿಸದ ಲೇಖನಗಳನ್ನು ಮುಂದಿನ ಸಂಪುಟಗಳಲ್ಲಿ ಪ್ರಕಟಿಸುವ ಆಶಯವಿದೆ.

ಈ ಲೇಖನಗಳ ರಚನೆ ಹೇಗಿದೆಯೆಂದರೆ ಅವು ಮೇಲ್ನೋಟಕ್ಕೆ ಲಘುವಾಗಿ, ಹರಟೆಗಳಂತೇ ಕಾಣಿಸಬಹುದು. ಅನಿಸಿದ್ದನ್ನು ಬರೆದಂತೇ ಕಾಣಬಹುದು. ಇಲ್ಲ ಜನಪ್ರಿಯ ಭಾಷಣಗಳಂತೆಯೂ ಕಾಣಬಹುದು. ಆದರೆ ಅವು ವ್ಯಕ್ತಿಯೊಬ್ಬರ ನಾಲ್ಕೈದು ದಶಕಗಳ ಸಂಶೋಧನೆ ಹಾಗೂ ಭಾರತೀಯ ಸಂಸ್ಕೃತಿಯ ಕುರಿತು ಅವರ ಹೊಸ ಸಿದ್ಧಾಂತಗಳನ್ನು ಆಧರಿಸಿವೆ. ಇಲ್ಲಿನ ವಿಚಾರಗಳು ಸಂಶೋಧನೆಯ ಪ್ರತಿಫಲಗಳಾಗಿವೆ. ಕವಿಸಮಯಗಳಲ್ಲ. ಅವಸರದಲ್ಲಿ ಗೀಚಿದ ಅಂಕಣಗಳಲ್ಲ. ಇವು ಯಾರೋ ತಮ್ಮ ಪಕ್ಷವನ್ನು ಸಮರ್ಥಿಸಲಿಕ್ಕಾಗಿ ಮತ್ಯಾರೋ ಸಂಶೋಧಿಸಿ ಪ್ರಕಟಿಸಿದ ವಿಚಾರಗಳನ್ನು ಕಣ್ಮುಚ್ಚಿ ಸ್ವೀಕರಿಸಿ ಬಳಸಿಕೊಂಡದ್ದೂ ಅಲ್ಲ. ಇವು ಸ್ವತಃ ಇದುವರೆಗಿನ ಸಂಶೋಧನೆಗಳನ್ನು ಒರೆಗೆ ಹಚ್ಚಿ, ಅವುಗಳ ಇತಿಮಿತಿಗಳನ್ನು ವಿಮರ್ಶಿಸಿ ಮಂಡಿಸಿದ ಸಮಾಜ ವಿಜ್ಞಾನಿಯೊಬ್ಬನ ವಾದಗಳು. ಭಾರತೀಯ ಸಂಸ್ಕೃತಿಯ ಕುರಿತು ನಮ್ಮ ತಿಳುವಳಿಕೆಯು ಇನ್ನೂ ಪರಿಷ್ಕಾರಗೊಳ್ಳಲಿ ಎಂಬುದೇ ಬಾಲಗಂಗಾಧರರ  ಕಾಳಜಿಯಾಗಿದೆ.

ಇವುಗಳನ್ನು ಇಷ್ಟು ಲಘು ರೂಪದಲ್ಲಿ ಇಡಲೂ ಕಾರಣವಿದೆ. ಪರಭಾಷೆಯ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸುವುದೆಂದರೆ ಅವನ್ನು ಕನ್ನಡ ಭಾಷೆಯಲ್ಲಿ ತರ್ಜುಮೆ ಮಾಡಿದಷ್ಟಕ್ಕೆ ಸಾಕಾಗುವುದಿಲ್ಲ. ನಾನು ಬಾಲಗಂಗಾಧರರ ’ದಿ ಹೀದನ್ ಇನ್ ಹಿಸ್ ಬ್ಲೈಂಡ್‌ನೆಸ್’ ಕೃತಿಯನ್ನು ’ಸ್ಮೃತಿ ವಿಸ್ಮೃತಿ ಭಾರತೀಯ ಸಂಸ್ಕೃತಿ’ ಎಂಬ ಅನುವಾದ ರೂಪದಲ್ಲಿ ತಂದ ನಂತರ ಈ ವಿಷಯವು ನನ್ನ ಅನುಭವಕ್ಕೆ ಬಂದಿತು. ಇಂಗ್ಲೀಷಿನಲ್ಲಿ  ವಿದ್ವಜ್ಜನರಲ್ಲಿ ಚರ್ಚೆ ನಡೆಯುವ ಸಂದರ್ಭವೇ ಬೇರೆ, ಅದರ ಪ್ರಸ್ತುತತೆಯೇ ಬೇರೆ, ಆಕೃತಿಯೇ ಬೇರೆ. ಅದೇ ಯಥಾವತ್ತಾಗಿ ಕನ್ನಡಕ್ಕೆ ತರ್ಜುಮೆಯಾದಾಗ ಅದರ ಸಂದರ್ಭವು ಪಲ್ಲಟವಾಗುತ್ತದೆ. ಅಂದರೆ ಅದೇ ಚಿಂತನೆಗಳಲ್ಲಿನ ಸಮಸ್ಯೆಯು ವ್ಯಕ್ತವಾಗುವ ಹಾಗೂ ಅನುಭವಕ್ಕೆ ಬರುವ ರೀತಿ ಬೇರೆ ಇರುತ್ತದೆ. ಹಾಗಾಗಿ ಈ ಪ್ರಯೋಗ.

ಬಾಲಗಂಗಾಧರರ ವಿಚಾರಗಳನ್ನು ಕನ್ನಡ ರೂಪದಲ್ಲಿ ಇಡುವಾಗ ಅವನ್ನು ನಾನು ಅರ್ಥೈಸಿದಂತೇ ನಿರೂಪಿಸಿದ್ದೇನೆ. ಅವರ ವಿಚಾರಗಳನ್ನು ಕನ್ನಡದ ಸಂದರ್ಭಕ್ಕೆ ತರುವ ಕೆಲಸವೂ ಕೂಡ ಇಲ್ಲಿ ನಡೆದಿದೆ. ಈ ಅಂಶಗಳನ್ನು ಓದುಗರು ಗಮನದಲ್ಲಿಟ್ಟುಕೊಳ್ಳಬೇಕೆಂಬುದು ನನ್ನ ಆಶಯ. ಹಾಗಾಗಿ ನಮ್ಮ ಸಂದರ್ಭಕ್ಕೆ ಪ್ರಸ್ತುತವೆನ್ನಿಸಬಹುದಾದ ಕೆಲವು ನಿರ್ದಿಷ್ಟ ವಿಚಾರಗಳನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದೇನೆ. ಆ ಕೆಲಸಕ್ಕೆ ಅಗತ್ಯವಾದ ಉದಾಹರಣೆಗಳು ಹಾಗೂ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ಹಾಗಾಗಿ ಈ ಲೇಖನಗಳಲ್ಲಿ  ಪ್ರಸ್ತಾಪವಾಗುವ ವಿಚಾರಗಳ ಮೂಲ ಸಂದರ್ಭಗಳೂ ಪಲ್ಲಟವಾಗಿವೆ. ನನ್ನ ಬೌದ್ಧಿಕ ಮಿತಿಯ ಜೊತೆಗೇ, ಹೊಸ ಸಂದರ್ಭಕ್ಕೆ ತಮ್ಮ ಪ್ರಸ್ತುತತೆಯನ್ನು ಶೋಧಿಸಿಕೊಳ್ಳುತ್ತಾ ಮೂಲ ವಿಚಾರಗಳೇ ತಮ್ಮ ಚಹರೆಯನ್ನು ಬದಲಿಸಿಕೊಂಡಿರುವ ಸಾಧ್ಯತೆಯೂ ಇದೆ. ಹಾಗಾಗಿ ಇವುಗಳನ್ನು ಓದಿ ಕುತೂಹಲಗೊಂಡವರು ಅಧಿಕೃತವಾಗಿ ತಿಳಿದುಕೊಳ್ಳಲು ಬಾಲಗಂಗಾಧರ ಅವರ ಬರೆಹಗಳನ್ನೇ ಓದುವುದು ಅತ್ಯಗತ್ಯ.

ಬಾಲಗಂಗಾಧರರ ವಿಚಾರಗಳನ್ನು ಓದುತ್ತ ಹೋದಂತೇ ನಾವು ನಂಬಿಕೊಂಡಿದ್ದನ್ನೆಲ್ಲ ಅವರು ಅಲ್ಲಗಳೆಯುತ್ತಿದ್ದಾರೆ ಎಂಬುದಾಗಿ ಕೆಲವರಿಗೆ ಕಾಣಬಹುದು. ಆದರೆ ಕಳೆದ ನೂರು ವರ್ಷಗಳ ಈಚೆಗಿನ ಸಮಾಜಶಾಸ್ತ್ರೀಯ ಚರ್ಚೆಗಳ ಪರಿಚಯವಿರುವವರಿಗೆ ಅವು ಹಾಗೆ ಕಾಣಿಸಲಿಕ್ಕೆ ಕಾರಣಗಳಿಲ್ಲ. ಬದಲಾಗಿ ಇತ್ತೀಚಿನ ವರ್ಷಗಳಲ್ಲಿ ಸಮಾಜಶಾಸ್ತ್ರದಲ್ಲಿ ನಡೆದ ಚರ್ಚೆಗಳು ಹಾಗೂ ಅವು ಎತ್ತುವ ಸಮಸ್ಯೆಗಳು ಯಾರಿಗೆ ತೀವ್ರವಾಗಿ ಕಾಡಿವೆಯೋ ಅವರಿಗೆ ಬಾಲಗಂಗಾಧರರು ಹೊಸ ಭರವಸೆಯಾಗಿ ಹಾಗೂ ಉತ್ತರವಾಗಿ ಕಾಣಿಸುತ್ತಾರೆ. ಏಕೆಂದರೆ ನಮ್ಮ ಇವತ್ತಿನ ಚಿಂತನೆಯ ಸಮಸ್ಯೆಗಳನ್ನು ಅನೇಕ ಬುದ್ಧಿಜೀವಿಗಳು ಗುರುತಿಸಿದ್ದರೂ ಕೂಡ, ಅವುಗಳ ನಿಶ್ಚಿತ ಸ್ವರೂಪವೇನು? ಅವುಗಳಿಂದ ಹೊರಬರುವ ಮಾರ್ಗಗಳೇನು? ಎಂಬುದನ್ನು ಶೋಧಿಸುವ ಧೀಮಂತಿಕೆಯನ್ನು ಹಾಗೂ ಧೈರ್ಯವನ್ನು ಬಾಲಗಂಗಾಧರರು ತೋರಿಸಿದ್ದಾರೆ. ಅವರು ಎತ್ತಿದ ಪ್ರಶ್ನೆಗಳು ಹಾಗೂ ರೂಪಿಸಿದ ಸಿದ್ಧಾಂತಗಳು ಹೊಸ ತಲೆಮಾರಿನ ಸಂಶೋಧನೆಗೆ ಫಲಪ್ರದ ಮಾರ್ಗವನ್ನು ನಿರ್ಮಿಸುವ ಸಾಧ್ಯತೆಯನ್ನು ಹೊಂದಿವೆ. ಹಳೆಯ ಕಗ್ಗಂಟುಗಳನ್ನು ಸಡಿಲಗೊಳಿಸುವ ಶಕ್ತಿಯನ್ನು ಹೊಂದಿವೆ.

ಸಂಶೋಧನೆ ಕರೆದುಕೊಂಡು ಹೋಗುವ ಹಾದಿಯಲ್ಲಿ ಸಾಗುವವರಿಗೆ ಮತ್ತೊಂದು ತೊಡಕೂ ಇದೆ. ಬಾಲಗಂಗಾಧರರು ಈಗ ಪ್ರಚಲಿತದಲ್ಲಿರುವ ಯಾವುದೇ ಸ್ಥಾಪಿತ ರಾಜಕೀಯ ಬಣಗಳಿಗೆ ರುಚಿಸದಿರಬಹುದು. ಅವರ ಕೆಲವೊಂದು ವಿಚಾರಗಳು ಕೆಲವು ಬಣಗಳಿಗೆ ಹಿತವಾಗಿ ಕಾಣಬಹುದು, ಕೆಲವು ಅಹಿತವಾಗಿ ಕಾಣಬಹುದು. ಇದು ಸಹಜ. ಏಕೆಂದರೆ ಈಗ ಪ್ರಚಲಿತದಲ್ಲಿರುವ ರಾಜಕೀಯ ಸಿದ್ಧಾಂತಗಳು ಸಮಾಜ ವಿಜ್ಞಾನದ ಬುನಾದಿಯ ಮೇಲೇ ನಿಂತಿವೆ. ಆ ಬುನಾದಿಯನ್ನೇ ಮರುಚಿಂತನೆಗೆ ಒಳಪಡಿಸಿದಾಗ ಅದರ ಮೇಲೆ ನಿಂತಿರುವ ಎಲ್ಲಾ ಕಟ್ಟಡಗಳೂ ಅಲುಗಾಡುವುದು ಸ್ವಾಭಾವಿಕ. ಅದರಂತೆಯೇ, ಇವತ್ತಿನ ಸಮಾಜ ವಿಜ್ಞಾನದ ನಿರೂಪಣೆಗಳ ಅಪಕ್ವತೆಯಿಂದಾಗಿಯೇ ಇಂದಿನ ರಾಜಕೀಯದಲ್ಲಿ ವಿರೋಧಗಳು ಹಾಗೂ ಅಸಮಾಧಾನಗಳು ಅವಕಾಶವನ್ನು ಪಡೆದುಕೊಳ್ಳುತ್ತವೆ. ಹೊಸ ಸಿದ್ಧಾಂತಗಳು ಇಂಥ ಸಮಸ್ಯೆಗಳನ್ನು ಗುರುತಿಸಿ ಅವನ್ನು ವಿವರಿಸುವ ಹಾದಿಯನ್ನು ತೆರೆಯುತ್ತವೆ. ಆದರೆ ಇಂಥ ಹೊಸ ಸಿದ್ಧಾಂತಗಳು ಹಳೆಯ ಚಿಂತನೆಗಳನ್ನು ಆಧರಿಸಿದ  ರಾಜಕೀಯಕ್ಕೆ ಅಲ್ಲಲ್ಲಿ ಪ್ರಸ್ತುತವಾದಂತೇ ಕಂಡರೂ ಅವುಗಳ  ಮುಖವಾಣಿಯಾಗುವುದಂತೂ ಖಂಡಿತಾ ಸಾಧ್ಯವಿಲ್ಲ. ಹೊಸ ರಾಜಕೀಯವನ್ನು ಆಶಿಸುವವರಿಗೆ ಇವು ಖಂಡಿತಾ ದಾರಿ ದೀಪಗಳಾಗಬಲ್ಲವು.

ಈ ಅಂಕಣಗಳನ್ನು ಬರೆಯಲು ಪ್ರೇರೇಪಿಸಿ ೧೯ ಅಂಕಣಗಳನ್ನು ಪ್ರಕಟಿಸಿ ಈ ವಿಚಾರಗಳಿಗೆ ಪ್ರಚಾರ ನೀಡಿದ ವಿಜಯವಾಣಿ ದಿನಪತ್ರಿಕೆಯ ಎಲ್ಲರಿಗೂ ನಾವು ಕೃತಜ್ಞರಾಗಿದ್ದೇವೆ. ಇವನ್ನು ಮಲ್ಹಾರ ಎಂಬ ಪತ್ರಿಕೆಯಲ್ಲಿಯೂ ಪ್ರಕಟಿಸಲಾಗುತ್ತಿದೆ. ಆ ಪತ್ರಿಕೆಯ ಸಂಪಾದಕರಿಗೂ ನಾವು ಕೃತಜ್ಞರಾಗಿದ್ದೇವೆ. ಇವುಗಳನ್ನು ನನಗೆ ಬೇಕಾದಂತೇ ಕನ್ನಡಕ್ಕೆ ರೂಪಾಂತರಿಸುವ ಸ್ವಾತಂತ್ರ್ಯವನ್ನೂ, ಸದಾವಕಾಶವನ್ನೂ ನೀಡಿದ ಹಾಗೂ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಬಾಲಗಂಗಾಧರ ಅವರಿಗೆ ಕೂಡ ನಾನು ವಯಕ್ತಿಕವಾಗಿ ಆಭಾರಿ. ಈ ಅಂಕಣಗಳನ್ನು ಬರೆಯುವಾಗ ಚರ್ಚಿಸಿ, ಸಲಹೆಗಳನ್ನು ನೀಡಿ ಸಹಕರಿಸಿದ ಸದಾನಂದ, ಷಣ್ಮುಖ, ಹಾಗೂ ಸಿಎಸ್‌ಎಲ್‌ಸಿಯ ನನ್ನೆಲ್ಲ ವಿದ್ಯಾರ್ಥಿಗಳು, ಡಂಕಿನ್ ಝಳಕಿ, ಉಮಾ, ಇವರಿಗೆಲ್ಲ ನಾನು ಋಣಿ. ಪತ್ರಿಕೆಯನ್ನು ಓದಿ ಕರ್ನಾಟಕದ ಮೂಲೆ ಮೂಲೆಗಳಿಂದ ಕರೆಮಾಡಿ ತಮ್ಮ ಮೆಚ್ಚುಗೆ ತಿಳಿಸಿದ, ಪ್ರಶ್ನೆಗಳ ಮಹಾಪೂರವನ್ನು ಹರಿಸಿದ ಎಲ್ಲ ಓದುಗರಿಗೆ ನನ್ನ ನಮನಗಳು.

ಪುಸ್ತಕ ದೊರಕುವ ಸ್ಥಳ:-

ವಸಂತ ಪ್ರಕಾಶನ
360, 10/B ಮೇನ್
ಜಯನಗರ 3ನೇ ಬ್ಲಾಕ್
ಬೆಂಗಳೂರು – 11
ಫೋನ್: 9986020852

 

Author

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

You may also like