Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಭಾರತೀಯ ಸಂಸ್ಕೃತಿಯಲ್ಲಿ ಸೆಕ್ಯುಲರ್ ಎಂಬ ಪರಿಕಲ್ಪನೆ ಇದೆಯೆ?

ಭಾರತೀಯ ಸಂಸ್ಕೃತಿಯಲ್ಲಿ ಸೆಕ್ಯುಲರ್ ಎಂಬ ಪರಿಕಲ್ಪನೆ ಇದೆಯೆ?

by Rajaram Hegde
66 views

ಸೆಕ್ಯುಲರ್ ಎನ್ನುವುದು ರಿಲಿಜನ್ನಿಗೆ ಸಂಬಂಧಿಸಿದ  ಪರಿಕಲ್ಪನೆ. ಇದು ಮನುಷ್ಯ ಜೀವನವನ್ನು ರಿಲಿಜನ್ನಿಗೆ ಸೇರಿದ್ದು, ರಿಲಿಜನ್ನಿಗೆ ಸೇರದೇ ಹೋದದ್ದು ಎಂಬುದಾಗಿ ವಿಭಾಗಿಸುತ್ತದೆ. ಭಾರತೀಯ ಸಂಪ್ರದಾಯಗಳಲ್ಲಿ ಈ ವಿಭಜನೆ ಇಲ್ಲ ಹಾಗೂ ಸೆಕ್ಯುಲರ್ ಎಂಬ ಪರಿಕಲ್ಪನೆ ಅಪ್ರಸ್ತುತ.

ಸೆಕ್ಯುಲರ್ ಎಂದರೆ ’ರಿಲಿಜನ್ನಿಗೆ ಸೇರದಿರುವುದು ಅಥವಾ ಅದಕ್ಕೆ ಹೊರತಾಗಿರುವುದು’ ಎಂಬ ಅರ್ಥ ಬರುತ್ತದೆ. ರಿಲಿಜನ್ ಎಂಬ ಶಬ್ದದಂತೇ ಈ ಶಬ್ದಕ್ಕೆ ಕೂಡ ಭಾರತೀಯ ಭಾಷೆಗಳಲ್ಲಿ ಅನುವಾದವು ಸಾಧ್ಯವಿಲ್ಲ. ಹಾಗಾಗಿಯೇ ರಾಜಕೀಯದ ಸಂದರ್ಭದಲ್ಲಿ ಸೆಕ್ಯುಲರಿಸಂ ಎಂಬ ಶಬ್ದಕ್ಕೆ ಧರ್ಮ ನಿರಪೇಕ್ಷ, ಜಾತ್ಯತೀತವಾದ, ಇತ್ಯಾದಿ ತಪ್ಪು ತಪ್ಪಾದ ಭಾಷಾಂತರಗಳನ್ನು ಮಾಡಲಾಗಿದೆ. ಸೆಕ್ಯುಲರ್ ಎಂಬ ಶಬ್ದವನ್ನು ಇತರ ಸಂದರ್ಭಗಳಲ್ಲಿ ಲೌಕಿಕ, ಪ್ರಾಪಂಚಿಕ, ಐಹಿಕ ಇತ್ಯಾದಿ ಭಾಷಾಂತರಗಳಿಂದ ಸೂಚಿಸಲಾಗುತ್ತದೆ. ಆದರೆ ಈ ಶಬ್ದಗಳು ಕೂಡ ಸೆಕ್ಯುಲರ್ ಶಬ್ದದ ಭಾಷಾಂತರಗಳಾಗಲಾರವು. ಸೆಕ್ಯುಲರ್ ಎಂಬ ಶಬ್ದವಿರಬೇಕಾದರೆ ರಿಲಿಜನ್ ಎಂಬ ಪರಿಕಲ್ಪನೆ ಬೇಕೇ ಬೇಕು. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಭಾರತೀಯ ಸಂಸ್ಕೃತಿಯಲ್ಲಿ ಈ ನಾಣ್ಯವು ಚಲಾವಣೆಯಲ್ಲಿಲ್ಲ.

          ಕ್ರಿಶ್ಚಿಯಾನಿಟಿಯಲ್ಲಿ ರಿಲಿಜನ್ನಿನ ಆಚರಣೆಗಳು ಚರ್ಚಿಗೆ ಸಂಬಂಧಪಟ್ಟಿವೆ. ಅವು ಪವಿತ್ರ ಆಚರಣೆಗಳು. ಅದರ ಹೊರಗೆ ಕ್ರೈಸ್ತರು ಆಚರಿಸುವ ಆಚರಣೆಗಳನ್ನು ಈ ಆಚರಣೆಗಳಿಂದ ಸ್ಪಷ್ಟವಾಗಿ ಪ್ರತ್ಯೇಕಿಸಿ ಗುರುತಿಸಬಹುದು. ಅವುಗಳಿಗೆ ಚರ್ಚಿನ ನಿರ್ದೇಶನಗಳಿಲ್ಲ. ಅಂದರೆ ರಿಲಿಜನ್ನಿಗೆ ಸಂಬಂಧಿಸಿದ ಆಚರಣೆಗಳನ್ನು ಮಾಡಬೇಕಾದರೆ ಅದನ್ನು ಚರ್ಚಿನ ವ್ಯವಸ್ಥೆಯಲ್ಲೇ ನೆರವೇರಿಸಬೇಕು. ನೀವೇ ನಿಮ್ಮ ಮನೆಗಳಲ್ಲಿ, ಬೀದಿಗಳಲ್ಲಿ, ಅಂಗಡಿಗಳಲ್ಲಿ ಹಾಗೂ ಇತರ ಸಂಸ್ಥೆಗಳಲ್ಲಿ ಮಾಡಿಕೊಳ್ಳುವ ವ್ಯವಹಾರವನ್ನು ರಿಲಿಜನ್ ಎಂದು ಕರೆಯಲು ಸಾಧ್ಯವಿಲ್ಲ. ಹಾಗಾಗಿ ಚರ್ಚನ್ನು ಬಿಟ್ಟು ಉಳಿದೆಲ್ಲಾ ಸಂಸ್ಥೆಗಳನ್ನೂ ಸೆಕ್ಯುಲರ್ ಸಂಸ್ಥೆಗಳು ಎಂಬುದಾಗಿ ಗುರುತಿಸಿದಲ್ಲಿ ಗೊಂದಲ ಏಳುವ ಸಾಧ್ಯತೆಯೇ ಇಲ್ಲ. ಇಂಥ ಸಂಸ್ಥೆಗಳನ್ನು ಮನುಷ್ಯ ಪ್ರಭುತ್ವವು ತನ್ನ ಅಧಿಕಾರ ವಲಯದಲ್ಲಿ ನಿಯಂತ್ರಿಸುತ್ತದೆ.             ಪಾಶ್ಚಾತ್ಯ ಸಂಸ್ಕೃತಿಯು ತನ್ನ ಜನರ ಜೀವನವನ್ನು ಈ ಎರಡು ಸ್ಪಷ್ಟವಾಗಿ ಪ್ರತ್ಯೇಕಿಸಿದ ಅಧಿಕಾರ ವಲಯಗಳಲ್ಲಿ ವ್ಯವಸ್ಥಿತಗೊಳಿಸಿಕೊಂಡು ಬಂದಿದೆ. ಈ ಎರಡೂ ವಲಯಗಳ ನಡುವೆ ಅಧಿಕಾರದ ಪೈಪೋಟಿ ಉದ್ದಕ್ಕೂ ನಡೆದುಕೊಂಡುಬಂದಿದೆ. ಈ ಕಾರಣದಿಂದ ಅಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಅಧಿಕಾರದ ಕುರಿತ ಚಿಂತನೆಗಳು ಕೂಡ ಈ ಪರಿಭಾಷೆಗಳನ್ನು ನಿರ್ಣಾಯಕವಾಗಿ ಆಧರಿಸಿವೆ.

          ರಿಲಿಜನ್ ಎಂಬ ಶಬ್ದವನ್ನು ರೆಲಿಗೇರ್  ಎಂಬ ಧಾತುವಿನಿಂದ ಪಡೆದುಕೊಳ್ಳಲಾಗಿದೆ. ರೆಲಿಗೇರ್ ಶಬ್ದಕ್ಕೆ ಕ್ರೈಸ್ತರು ಕೊಟ್ಟುಕೊಂಡ ಅರ್ಥದ ಪ್ರಕಾರ ಅದು ’ಮಾನವ ಮತ್ತು ಗಾಡ್‌ನ ಅನುಬಂಧ’. ಮಧ್ಯಕಾಲದಲ್ಲಿ ಕ್ರೈಸ್ತ ಚರ್ಚು ತನ್ನ ಅಧಿಕಾರವಲಯವನ್ನು ಸೇಕ್ರೆಡ್ ಅಥವಾ ಹೋಲೀ (ಪವಿತ್ರ) ಎಂಬುದಾಗಿ ಪ್ರತಿಪಾದಿಸಿತ್ತು.  ಮಾನವನನ್ನೂ ಹಾಗೂ ಈ ಪ್ರಪಂಚವನ್ನೂ ಸೃಷ್ಟಿಸಿದ ಗಾಡ್ ಸ್ವತಃ ಪ್ರವಾದಿಗೆ ಪ್ರಕಟಗೊಂಡು ರಿಲಿಜನ್ನನ್ನು ನೀಡಿದ್ದಾನೆ. ಅದನ್ನಾಧರಿಸಿ ಈ ರಿಲಿಜನ್ನನ್ನು ಭೂಮಿಯ ಮೇಲೆ ರಕ್ಷಿಸಿಕೊಂಡು ಪ್ರಸಾರಮಾಡಿಕೊಂಡು ಹೋಗುವ ಸಲುವಾಗಿ ಚರ್ಚೆಂಬ ಸಂಸ್ಥೆ ಅವಶ್ಯಕವಾಯಿತು.  ಚರ್ಚಿನ ನಿರ್ದೇಶನದಲ್ಲಿ ನಡೆಯುವ ಚಟುವಟಿಕೆಗಳು ದೈವೀ ವಾಣಿಯನ್ನಾಧರಿಸಿರುವುದರಿಂದ ಅವು ಪವಿತ್ರವಾದವುಗಳು ಹಾಗೂ ಅವೇ ಮನುಷ್ಯನನ್ನು ಗಾಡ್ ಜೊತೆಗೆ ಬಂಧಿಸುವ ಸಾಧನಗಳು. ಹಾಗಾಗಿ ಚರ್ಚು ತನ್ನ ಅನುಯಾಯಿಗಳಿಗೆ ನಿರ್ದೇಶಿಸುವ ಅಂಥ ಚಟುವಟಿಕೆಗಳು ರಿಲಿಜನ್ನಿಗೆ ಸಂಬಂಧಿಸಿವೆ. ಹಾಗಾಗಿ ಸಾವಿರಾರು ವರ್ಷಗಳಿಂದ ಈ ಚರ್ಚಿನ ಆಶ್ರಯದಲ್ಲಿಯೇ, ಅದಕ್ಕೆ ಸೀಮಿತವಾಗಿಯೇ ರಿಲಿಜನ್ನು ಬೆಳೆದುಕೊಂಡು ಬಂದಿದೆ.

             ಚರ್ಚೆಂಬ ಸಂಸ್ಥೆಯ ಅಧಿಕಾರದ ಸೀಮಾರೇಖೆಗಳನ್ನು ನಿರ್ದಿಷ್ಟಪಡಿಸಿದಾಗ ಅದರ ಹೊರಗೂ ಒಂದು ಪ್ರಪಂಚವು ಹಾಗೇ ಉಳಿದುಕೊಳ್ಳುವುದು ಸಹಜ. ಅಂದರೆ ಮನುಷ್ಯನ ಅನೇಕ ಚಟುವಟಿಕೆಗಳು ಕೇವಲ ಆತನ ಐಹಿಕ ಅರ್ಥಸಾಧನೆಯ ಉದ್ದೇಶದಿಂದ ನಡೆಯುತ್ತವೆ ಹಾಗೂ ನಡೆಯಲೇಬೇಕು. ಅದರ ಜೊತೆಗೇ ಚರ್ಚು ಒಂದು ಜನಜೀವನವನ್ನು ಎಷ್ಟರ ಮಟ್ಟಿಗೆ ಆವರಿಸಿಕೊಳ್ಳಬಹುದು ಎಂಬ ಸವಾಲು ಕೂಡ ಇತ್ತು. ದಿನನಿತ್ಯ ಉಣ್ಣುವುದು ಉಡುವುದರಿಂದ ಹಿಡಿದು ಅನುಯಾಯಿಗಳು ಅನೇಕ ಚಟುವಟಿಕೆಗಳನ್ನು ಮಾಡುತ್ತಾರೆ. ಇವೆಲ್ಲವನ್ನೂ ರಿಲಿಜನ್ನಿಗೆ ಸಂಬಂಧಿಸಿದ್ದು ಎನ್ನುವುದು ಸಾಧ್ಯವೇ ಇಲ್ಲ.

          ಚರ್ಚಿನ ಈ ಸಮಸ್ಯೆಯನ್ನು ಮತಪರಿವರ್ತನೆಯ ಹಿನ್ನೆಲೆಯಲ್ಲಿಟ್ಟು ನೋಡಿದಾಗ ಚರ್ಚಿನ ಸಮಸ್ಯೆಯ ಅಗಾಧತೆಯನ್ನು ಅಂದಾಜುಮಾಡಬಹುದು. ಪೇಗನ್ ಸಮುದಾಯಗಳಲ್ಲಿ ಮತಪರಿವರ್ತನೆಯನ್ನು ನಡೆಸಿದಾಗ ಪೇಗನ್ನರ ಜೀವನದಲ್ಲಿನ ಯಾವ ಯಾವ ಚಟುವಟಿಕೆಗಳನ್ನು ಚರ್ಚು ಬದಲಿಸಬೇಕು? ಯಾವವನ್ನು ನಿಷೇಧಿಸಬೇಕು? ಯಾವವನ್ನು ನಿರ್ಲಿಪ್ತವಾಗಿ ನೋಡಬೇಕು? ಎಂಬ ಸಮಸ್ಯೆಯು ಜ್ವಲಂತವಾಗಿ ಚರ್ಚಿನ ಎದುರಿಗಿತ್ತು. ಅಂಥ ವಾಸ್ತವವನ್ನು ಎದುರಿಸುವ ಸಲುವಾಗಿ ಚರ್ಚು ರಿಲಿಜನ್ನಿಗೆ ಸಂಬಂಧಿಸಿಲ್ಲದ ಚಟುವಟಿಕೆಗಳನ್ನು ಹಾಗೂ ಅವುಗಳ ಸ್ವಾಯತ್ತ ವಲಯವನ್ನು ಗುರುತಿಸಿ ಅದನ್ನು ಪ್ರೊಫೇನ್ ಅಥವಾ ಸೆಕ್ಯುಲರ್ ಪ್ರಪಂಚವೆಂಬುದಾಗಿ ಕರೆದುಕೊಳ್ಳುತ್ತಾ ಬಂದಿತು.  ಅಂದರೆ ಗಾಡ್‌ನನ್ನು ಸೇರುವ ಸಾಧನವಲ್ಲದ ಹಾಗೂ ಮಾನವನ ಐಹಿಕ ಜೀವನಕ್ಕೆ ಮಾತ್ರವೇ ಸಂಬಂಧಪಟ್ಟ ಚಟುವಟಿಕೆಗಳು, ಸಂಸ್ಥೆಗಳು ಹಾಗೂ ಚಿಂತನೆಗಳು ಸೆಕ್ಯುಲರ್ ಎಂಬುದಾಗಿ ಕರೆಸಿಕೊಂಡವು. 

          ಚರ್ಚು ಗಾಡ್‌ಗೆ ಸಂಬಂಧಪಟ್ಟಿದ್ದರಿಂದ ಹಾಗೂ ಆ ಕಾರಣದಿಂದ ರಿಲಿಜನ್ನಿಗೆ ಸಂಬಂಧಪಟ್ಟಿದ್ದರಿಂದ ಅದು ಪವಿತ್ರ ವಲಯ.  ಸೆಕ್ಯುಲರ್ ಪ್ರಪಂಚವು ರಿಲಿಜನ್ನಿಗೆ ಹೊರತಾದ ವಲಯವಾದುದರಿಂದ ಅದು ಪವಿತ್ರವಲ್ಲದ ವಲಯವೆಂಬುದಾಗಿ ಚರ್ಚು ಗ್ರಹಿಸಿತ್ತು. ಪ್ರೊಫೇನ್ ಎಂಬ ಶಬ್ದವು ಅಪವಿತ್ರ ಎಂಬ ಅರ್ಥವನ್ನೂ ಹೊಂದಿದೆ. ಅಂದರೆ ಸೆಕ್ಯಲರ್ ಪ್ರಪಂಚವು ಯಾವ ಕಾರಣಕ್ಕೂ ಚರ್ಚಿಗಿಂತ ಮಹತ್ವದ್ದಲ್ಲ ಎಂಬುದು ಚರ್ಚುಗಳ ನಿರೂಪಣೆ. ಇಂಥ ನಿರೂಪಣೆಯು ಚರ್ಚು ಹಾಗೂ ರಾಜಪ್ರಭುತ್ವಗಳ ಸಂದರ್ಭದಲ್ಲಿ  ಒಂದು ಪೈಪೋಟಿಯನ್ನು ಹುಟ್ಟುಹಾಕಿತು. ಅದರ ಐತಿಹಾಸಿಕ ಸಂದರ್ಭ ಹೀಗಿದೆ: ಪ್ರಾಚೀನ ರೋಮನ್ ಸಾಮ್ರಾಜ್ಯದ ಕೊನೆಯ ಸಾಮ್ರಾಟನಾದ ಕಾನ್ಸ್ಟೆಂಟೈನನನ್ನು ಕ್ರೈಸ್ತರು ಪರಿವರ್ತನೆ ಮಾಡಿದರು. ಆ ಮೂಲಕ ರೋಮನ್ ಸಾಮ್ರಾಜ್ಯವು ಚರ್ಚಿನ ಪ್ರಭಾವಕ್ಕೆ ಒಳಪಟ್ಟಿತು. ಆದರೆ ಈ ಘಟನೆಯಾದ  ಅಲ್ಪಾವಧಿಯಲ್ಲೇ ರೋಂ ಸಾಮ್ರಾಜ್ಯದ ಪತನವಾಯಿತು. ರೋಂ ಸಾಮ್ರಾಟನ ಪರಿವರ್ತನೆಗೂ ಆ ಸಾಮ್ರಾಜ್ಯದ  ಪತನಕ್ಕೂ ಕಾರ್ಯಕಾರಣ ಸಂಬಂಧವನ್ನು ಕಲ್ಪಿಸಿ ಕ್ರೈಸ್ತರ ವಿರುದ್ಧ ಟೀಕೆಗಳು ಪೇಗನ್ನರಿಂದ ಬಂದವು. ರೋಮನ್ ನಗರ ದೇವತೆಗಳನ್ನು ಪೂಜಿಸಲು ಕ್ರೈಸ್ತರು ನಿರಾಕರಿಸುತ್ತಾರೆ,  ಹಾಗಾಗಿ ಆ ದೇವತೆಗಳ ಕೋಪಕ್ಕೆ ಸಾಮ್ರಾಜ್ಯವೇ ಬಲಿಯಾಯಿತು ಎಂಬುದೇ ಆ ಟೀಕೆ.

          ಇಂಥದೊಂದು  ಟೀಕೆಯಿಂದಾಗಿ ಮನುಷ್ಯ ಪ್ರಭುತ್ವಕ್ಕೆ ಸಂಬಂಧಿಸಿದಂತೆ ಗಾಡ್‌ನ ಉದ್ದೇಶವೇನು? ಚರ್ಚಿನ ಎದುರು ಮನುಷ್ಯರ ಪ್ರಭುತ್ವಗಳ  ಸ್ಥಾನಮಾನಗಳೇನು?  ಎಂಬ ಜಿಜ್ಞಾಸೆಗಳು ಹುಟ್ಟಿಕೊಂಡವು.  ಆ ಸಂದರ್ಭದಲ್ಲಿ ಸೇಂಟ್ ಅಗಸ್ಟೈನ್ ಎಂಬವನು ಚರ್ಚೆಂಬುದು ಗಾಡ್‌ನ ರಾಜ್ಯ ಹಾಗೂ ರಾಜರುಗಳ ಆಳ್ವಿಕೆಯೆಂಬುದು ಮರ್ತ್ಯರ ರಾಜ್ಯ, ಮಾನವನನ್ನೂ ಗಾಡ್‌ನೇ ಸೃಷ್ಟಿಸಿದ್ದಾನೆ ಹಾಗೂ ಅವನೇ ಶಾಶ್ವತ ಹಾಗೂ ಪರಿಪೂರ್ಣ. ಮಾನವನು ಮರ್ತ್ಯನಾಗಿರುವುದರಿಂದ ಅವನ ರಾಜ್ಯವು ಅಶಾಶ್ವತವಾಗಿರುವುದು ಸಹಜವೇ ಆಗಿದೆ. ಗಾಡ್‌ನ ಉದ್ದೇಶಕ್ಕೆ ಅನುಗುಣವಾಗಿ ಮಾನವನಿರುವುದರಿಂದ ಹಾಗೂ ಮಾನವನಿಗೆ ಅವನ ಉದ್ದೇಶವು ಗೊತ್ತಿಲ್ಲದಿರುವುದರಿಂದ ಮರ್ತ್ಯರ ರಾಜ್ಯವು ಗಾಡ್‌ನ ರಾಜ್ಯಕ್ಕೆ, ಅಂದರೆ ಅದರ ಪ್ರತಿನಿಧಿಯಾದ ಚರ್ಚಿಗೆ ಆಧೀನವಾಗಿರುವುದೊಂದೇ ಮಾರ್ಗ.

          ಮಧ್ಯಕಾಲೀನ ಯುರೋಪಿನಲ್ಲಿ ಕ್ರಿಶ್ಚಿಯಾನಿಟಿಯು ಸರ್ವವ್ಯಾಪಿಯಾದ ನಂತರ ಮನುಷ್ಯ ಪ್ರಭುತ್ವವು ಚರ್ಚಿನ ಪ್ರಭುತ್ವದ ಆಧೀನತೆಯಲ್ಲಿ ತನ್ನ ಪ್ರಸ್ತುತತೆಯನ್ನು ಪಡೆಯಿತು. ೧೮ನೆಯ ಶತಮಾನದ ನಂತರ ಯುರೋಪಿನಲ್ಲಾದ ಬದಲಾವಣೆಗಳಿಂದಾಗಿ ಮನುಷ್ಯ  ಪ್ರಭುತ್ವವನ್ನು ಸೆಕ್ಯುಲರ್ ವಲಯವನ್ನಾಗಿ ಪರಿವರ್ತಿಸುವ ಒತ್ತಡ ನಿರ್ಮಾಣವಾಯಿತು. ಈ ಒತ್ತಡವು ಸೃಷ್ಟಿಯಾಗುವುದಕ್ಕೆ ಪೂರ್ವಭಾವಿಯಾಗಿ ಪ್ರೊಟೆಸ್ಟಾಂಟ್ ಚಳವಳಿ, ಜ್ಞಾನೋದಯ ಯುಗದ ವಿಚಾರವಾದ,   ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು ಕೆಲಸಮಾಡಿವೆ.  ಒಟ್ಟಿನಲ್ಲಿ ಮನುಷ್ಯ ಪ್ರಭುತ್ವಗಳು ಸ್ಟೇಟ್ ಸೆಕ್ಯುಲರಿಸಂ ಎಂಬ ಪ್ರತಿಪಾದನೆಯನ್ನು ಎತ್ತಿಹಿಡಿದವು. ಆ ಪ್ರಕಾರ ಸ್ಟೇಟ್ ಎಂಬುದು ಸೆಕ್ಯುಲರ್ ವಲಯವೇ ಹೊರತು ರಿಲಿಜನ್ನಿನದಲ್ಲ. ಹಾಗಾದಾಗಲೇ ಮನುಷ್ಯರ ಕಲ್ಯಾಣ ಹಾಗೂ ಪ್ರಗತಿ ಸಾಧ್ಯ, ಇತ್ಯಾದಿ. ಅಂದರೆ ನಮ್ಮ ಜೀವನದ ಯಾವ ಭಾಗವು ರಿಲಿಜನ್ನಿಗೆ ಸೇರಿದೆ ಹಾಗೂ ಯಾವ ಭಾಗವು ಸೆಕ್ಯುಲರ್ ಪ್ರಪಂಚಕ್ಕೆ ಸೇರಿದೆ ಎಂಬ ಜಿಜ್ಞಾಸೆಯ ಮುಂದುವರಿಕೆಯನ್ನೇ  ಈ ಮೇಲಿನ ಉದಾಹರಣೆಯಲ್ಲಿ ಕಾಣುತ್ತೇವೆ.

           ಯುರೋಪಿನಲ್ಲಿ ಆಧುನಿಕ ಕಾಲದಲ್ಲಿ ಈ ಸೆಕ್ಯುಲರ್-ರಿಲಿಜಿಯಸ್ ಎಂಬ ವಿಂಗಡಣೆಯನ್ನು ಇಟ್ಟುಕೊಂಡ ಚರ್ಚೆಗಳು ಕೇವಲ ರಾಜಕೀಯದಲ್ಲೊಂದೇ ಅಲ್ಲ, ತತ್ವಚಿಂತನೆಯಲ್ಲಿ, ಕಾನೂನಿನಲ್ಲಿ, ಸಾಮಾಜಿಕ ಸಂಸ್ಥೆಗಳಲ್ಲಿ, ಕಲಾಪ್ರಕಾರಗಳಲ್ಲಿ, ಹೀಗೆ ವಿಭಿನ್ನ ಕ್ರೇತ್ರಗಳಲ್ಲಿ ಪ್ರಸ್ತುತವಾದವು. ಇಂಥ ಚಿಂತನೆಗಳು ವ್ಯಾವಹಾರಿಕ ಹಾಗೂ ಪ್ರಾಯೋಗಿಕ ಸಮಸ್ಯೆಯಿಂದ ಹುಟ್ಟಿರದಿದ್ದರೆ ಹಾಗೂ ಜನರಿಗೆ ಅವು ಪ್ರಸ್ತುತವೆನ್ನಿಸದಿದ್ದರೆ ಹೀಗೆ ಐರೋಪ್ಯ ಸಂಸ್ಕೃತಿಯನ್ನೇ ಕಾಡುವ ಚರ್ಚೆಯಾಗಿ ಅದು ಬೆಳೆಯುತ್ತಿರಲಿಲ್ಲ ಎಂಬುದೂ ಸ್ಪಷ್ಟ. ಯುರೋಪಿನ ಇತಿಹಾಸವನ್ನು ಗಮನಿಸಿದಾಗ ಉದ್ದಕ್ಕೂ ಕ್ರಿಶ್ಚಿಯಾನಿಟಿಯಿಂದಾಗಿಯೇ ಈ ಎರಡೂ ವಲಯಗಳೂ ಅಸ್ತಿತ್ವಕ್ಕೆ ಬಂದು ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿವೆ ಎಂಬುದೂ ಸ್ಪಷ್ಟವಾಗುತ್ತದೆ. ಅಂದರೆ, ಸೆಕ್ಯುಲರ್ ವಲಯವು  ಕ್ರಿಶ್ಚಿಯಾನಿಟಿಯು ತನ್ನೊಳಗೇ ಮಾಡಿಕೊಂಡ ಒಂದು ವಿಂಗಡಣೆಯಾಗಿದೆ. ಈ ವಿಂಗಡಣೆಯನ್ನಿಟ್ಟುಕೊಂಡೇ ಅದು ಯುರೋಪಿನಾದ್ಯಂತ ಪಸರಿಸಿದೆ ಹಾಗೂ ಆ ರಿಲಿಜನ್ನಿನಿಂದಲೇ ರೂಪಿತವಾದ ಐರೋಪ್ಯ ಸಂಸ್ಕೃತಿಯ ಜನರಿಗೆ ಆ ವಿಂಗಡಣೆಯು ಪ್ರಸ್ತುತವೆನ್ನಿಸುತ್ತದೆ.

          ಈ ಹಿನ್ನೆಲೆಯನ್ನುಳ್ಳ ಪಾಶ್ಚಾತ್ಯರು ವಿಶ್ವದ ಇತರ ಸಂಸ್ಕೃತಿಗಳನ್ನು ಕೂಡಾ ಹಾಗೇ ಅನುಭವಕ್ಕೆ ತಂದುಕೊಂಡರು. ಉದಾಹರಣೆಗೆ ಭಾರತೀಯ ಸಂಸ್ಕೃತಿಯನ್ನು ಗಮನಿಸಿದಾಗ ಅವರಿಗೆ ಇಲ್ಲಿನ ಕೆಲವು ಆಚರಣೆಗಳು ರಿಲಿಜನ್ನಿಗೆ ಸೇರಿದಂತೇ ಕಂಡವು. ದೇವರುಗಳು,  ಗ್ರಂಥಗಳು, ಪೂಜೆ, ಮಂತ್ರ-ತಂತ್ರ ಇತ್ಯಾದಿಗಳು ರಿಲಿಜನ್ನುಗಳಂತೇ ಕಂಡು ಅವುಗಳನ್ನು ಹಿಂದೂಯಿಸಂ, ಬುದ್ಧಿಸಂ ಇತ್ಯಾದಿಯಾಗಿ ಗುರುತಿಸಿದರು.  ಆದರೆ ಈ ಹಿಂದೂಯಿಸಂ ಮುಂತಾದ ರಿಲಿಜನ್ನುಗಳ ರೂಪುರೇಷೆಗಳನ್ನು ನಿರ್ದಿಷ್ಟ ಪಡಿಸುತ್ತಾ ಹೋದಂತೆ ಗಾಳಿಯಲ್ಲಿ ಗುದ್ದಾಡಿದ ಅನುಭವವಾಯಿತು. ಅದೇ ರೀತಿಯಲ್ಲಿ ಈ ಜನರಿಗೆ ಒಂದು ಸೆಕ್ಯುಲರ್ ಪ್ರಪಂಚವೂ ಕೂಡ ಇದೆಯೆಂಬುದರಲ್ಲಿಯೂ ಅವರಿಗೆ ಯಾವುದೇ ಸಂಶಯವಿರಲಿಲ್ಲ. ಈ ಜನರೂ ಊಟ, ಉಡುಗೆ, ಆಟಪಾಠ, ಇತ್ಯಾದಿ ಸೆಕ್ಯುಲರ್ ಜೀವನವನ್ನು ಹೊಂದಿದಂತೇ ಕಂಡಿತು.

          ಆದರೆ ಸಮಸ್ಯೆ ಬಂದದ್ದು ಹಿಂದೂಗಳ ಸೆಕ್ಯುಲರ್ ಜೀವನವನ್ನು ಹೇಗೆ ಗುರುತಿಸಬೇಕೆಂಬುದರಲ್ಲಿ.  ಏಕೆಂದರೆ ಹಿಂದೂಯಿಸಂಗೆ ಸೇರಿದ ಲಕ್ಷಣಗಳು ಈ ಜನರ ಸರ್ವ ವ್ಯವಹಾರಗಳಲ್ಲೂ  ಯಾವುದೇ ಭೇದಕ್ಕೆ ಆಸ್ಪದ ಕೊಡದೇ ವ್ಯಾಪಿಸಿಕೊಂಡಂತೆನಿಸಿತು. ಪಾಶ್ಚಾತ್ಯ ವಿದ್ವಾಂಸರು ಈ ಗೊಂದಲದ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಈ ಸಮಸ್ಯೆಗಳನ್ನೆಲ್ಲ ಪರಿಹರಿಸಿಕೊಳ್ಳಲು ’ಹಿಂದೂಯಿಸಂ ಒಂದು ಜೀವನ ಕ್ರಮ’ ಎನ್ನುವ ವ್ಯಾಖ್ಯೆ ತೀರಾ ಅನುಕೂಲಕರವಾಗಿದೆ ಎಂಬ ಅಭಿಪ್ರಾಯಕ್ಕೆ ನಾವಿಂದು ಬಂದಿದ್ದೇವೆ. ಆದರೆ ಆ ವ್ಯಾಖ್ಯೆಯನ್ನು ಒಪ್ಪಿಕೊಂಡು ಹೋದೆಯಾ ಭೂತ ಎಂದರೆ ಮತ್ತೆ ಅದೇ ಹಳೇ ಪ್ರಶ್ನೆಯೇ ಬಂದೆ ಗವಾಕ್ಷೀಲಿ ಎನ್ನುತ್ತ ವಾಪಸು ಬರುತ್ತದೆ.  ಈ ಜನರ ಸಮಗ್ರ ಜೀವನಕ್ರಮವೇ ರಿಲಿಜನ್ನಾಗಿದ್ದುದು ನಿಜವೇ ಆದಲ್ಲಿ, ಅಲ್ಲಿ ಸೆಕ್ಯುಲರ್ ಯಾವುದು ಎಂಬುದನ್ನು ಹೇಗೆ ಕಂಡುಹಿಡಿಯುವುದು?

          ಅಂದರೆ, ಈ ಸಮಸ್ಯೆ ಏಕೆ ಏಳುತ್ತದೆಯೆಂದರೆ ಭಾರತೀಯ ಸಂಸ್ಕೃತಿಯಲ್ಲಿ ಈ ಮೇಲಿನ ಎರಡೂ ಪರಿಭಾಷೆಗಳೂ ಇಲ್ಲ, ವಿಂಗಡಣೆಗಳೂ ಇಲ್ಲ. ಈ ರಿಲಿಜನ್ ಮತ್ತು ಸೆಕ್ಯುಲರ್ ಎಂಬ ಪರಿಭಾಷೆಗಳನ್ನು ಲೌಕಿಕ-ಅಲೌಕಿಕ, ಐಹಿಕ-ಪಾರಮಾರ್ಥಿಕ ಇತ್ಯಾದಿ ಶಬ್ದಗುಚ್ಛಗಳಿಂದ ಅನುವಾದಿಸಿ ನಮ್ಮದನ್ನಾಗಿ ಮಾಡಿಕೊಳ್ಳಬಹುದಲ್ಲವೆ? ಎಂಬ ಸಲಹೆಯನ್ನು ನೀವು ನೀಡಬಹುದು. ಆದರೆ ಅಲೌಕಿಕ, ಪಾರಮಾರ್ಥಿಕ ಇತ್ಯಾದಿ ಶಬ್ದಗಳೆಲ್ಲ ರಿಲಿಜನ್ ಎಂಬ ಸಂಸ್ಥೆಗಳಲ್ಲ, ಅಥವಾ ಅವುಗಳಿಗೆ ಸಂಬಂಧಪಟ್ಟ ಆಚರಣೆಗಳು ಪ್ರತ್ಯೇಕ ಸಂಸ್ಥೆ ಅಥವಾ ಅಧಿಕಾರ ವಲಯವಾಗಿ ಬೆಳೆದಿಲ್ಲ. ಹಾಗಾಗಿ ಅವುಗಳು ಅಧಿಕಾರ ವಲಯಗಳ ವಿಂಗಡಣೆಗಳಲ್ಲ. ನಾನು ಹೀಗೆ ಹೇಳಿದಾಕ್ಷಣ ’ಹಾಗಾದರೆ ಭಾರತದಲ್ಲಿ ಬ್ರಾಹ್ಮಣ ಪುರೋಹಿತಶಾಹಿಯು ಆ ಕೆಲವನ್ನು ಮಾಡುತ್ತಿಲ್ಲವೆ?” ಎಂಬ ಆಕ್ಷೇಪಣೆ ಬಂದೇ ಬರುತ್ತದೆ. ಆದರೆ ಈ ಪುರೋಹಿತಶಾಹಿ ಎಂಬ ಪರಿಕಲ್ಪನೆ ಕೂಡಾ ರಿಲಿಜನ್ನುಗಳಿಂದ ಕಡ ತೆಗೆದುಕೊಂಡದ್ದಾಗಿದೆ.  ಅದೇನು ಎಂಬುದು ನಮಗೆ ನಿಜವಾಗಿಯೂ ಗೊತ್ತಿಲ್ಲದಿರುವುದರಿಂದ ನಮ್ಮಲ್ಲಿ ಇದ್ದುದೆಲ್ಲ ಅದರಂತೇ ಕಾಣಿಸುತ್ತದೆ.

           ಉದಾಹರಣೆಗೆ ದೇವರು, ಪೂಜೆ, ಪ್ರಾರ್ಥನೆ ಇತ್ಯಾದಿಗಳನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ಅದಕ್ಕೇ ಪ್ರತ್ಯೇಕ ಸ್ಥಳವನ್ನು ಹಾಗೂ ಕ್ರಮವನ್ನು ಕಲ್ಪಿಸಿರುವ ಸಂಸ್ಥೆಯಾಗಲೀ, ಅಧಿಕಾರ ವ್ಯವಸ್ಥೆಯಾಗಲೀ ಭಾರತದಲ್ಲಿ  ಕಂಡುಬರುವುದಿಲ್ಲ. ಹಿಂದೂಗಳ ಆಚರಣೆಗಳನ್ನು ದೇವಾಲಯಗಳಲ್ಲೊಂದೇ ಅಲ್ಲ, ಮನೆಮನೆಗಳಲ್ಲಿ, ಬೀದಿಗಳಲ್ಲಿ, ಆಫೀಸುಗಳಲ್ಲಿ, ಪಾರ್ಕುಗಳಲ್ಲಿ, ಆಸ್ಪತ್ರೆ, ಬಸ್‌ಸ್ಟ್ಯಾಂಡು,  ಇತ್ಯಾದಿ ಎಲ್ಲಾ ಜಾಗಗಳಲ್ಲೂ, ಅಂದರೆ ಈ ಸಂಸ್ಕೃತಿಗೆ ಸೇರಿದ ಮನುಷ್ಯರು ಇರುವ ಎಲ್ಲೆಡೆಯಲ್ಲೂ ಯಾವುದೇ ನಿರ್ದೇಶನ ಹಾಗೂ ನಿಯಂತ್ರಣಗಳಿಲ್ಲದೇ ನಡೆಸಲಾಗುತ್ತದೆ. ಭಾರತೀಯರ ಜೀವನದಲ್ಲಿ ದೇವರು, ಪೂಜೆ ಇತ್ಯಾದಿಗಳು ಇಲ್ಲದ ಅಥವಾ ಇರಲೇಬೇಕಾದ ವಲಯಗಳ ವಿಂಗಡಣೆಯನ್ನು ಗುರುತಿಸಲು ಸಾಧ್ಯವಿಲ್ಲ. ಭಾರತೀಯರ ಆರ್ಥಿಕ, ರಾಜಕೀಯ, ಸಾಮಾಜಿಕ ಜೀವನ ಅಂತೆಲ್ಲ ಏನೇನು ಐಹಿಕ ಪ್ರಭೇದಗಳನ್ನು ಗುರುತಿಸಬಹುದೋ ಅವುಗಳಲ್ಲೆಲ್ಲ ದೇವರುಗಳ ಕಲ್ಪನೆ ಹಾಗೂ ಅವರ ಪೂಜೆ ಸದಾ ಪ್ರಸ್ತುತವಾಗಿವೆ. ಇಲ್ಲಿ ದೇವರುಗಳನ್ನು ಪೂಜೆ ಮಾಡಲೇ ಬೇಕೆಂದೂ ಇಲ್ಲ. ಕಳ್ಳರನ್ನು ಹಿಡಿಯಲಿಕ್ಕೆ, ನ್ಯಾಯ ತೀರ್ಮಾನಕ್ಕೆ,  ಸೇಡು ತೀರಿಸಿಕೊಳ್ಳಲಿಕ್ಕೆ, ಹೀಗೆ ಈ ಆಚರಣೆಗಳು ಪೂರೈಸದ ಐಹಿಕ  ಅಗತ್ಯಗಳಿಲ್ಲ.

          ಭಾರತೀಯರ ನೃತ್ಯ, ಶಿಲ್ಪ,  ಸಂಗೀತ ಇತ್ಯಾದಿ ಸಮಸ್ತ ಕಲಾಪ್ರಕಾರಗಳಲ್ಲಿ ದೇವರುಗಳು ಪ್ರಸ್ತುತತೆ ಪಡೆಯುವುದೊಂದೇ ಅಲ್ಲದೇ ಅವುಗಳಲ್ಲಿ ದೈವಭಕ್ತಿಯೇ  ಸೃಜನಶೀಲತೆಯ ಮೂಲ ಸೆಲೆಯಾಗಿದೆ. ಹಾಗಂತ ಅವುಗಳನ್ನು ಪಾರಮಾರ್ಥಿಕ ಚಟುವಟಿಕೆಗಳು ಎಂಬುದಾಗಿ ಯಾರೂ ಗ್ರಹಿಸುವುದಿಲ್ಲ. ಈ ಕಲೆಗಳನ್ನೆಲ್ಲ ಯಾವುದೇ ಹಿಂಜರಿಕೆ ಹಾಗೂ ಪ್ರತಿರೋಧಗಳಿಲ್ಲದೇ ಉದ್ಯಮಗಳಲ್ಲಿ, ಜಾಹೀರಾತುಗಳಲ್ಲಿ, ಸರ್ಕಾರೀ ಪ್ರಚಾರ ಕಾರ್ಯಗಳಲ್ಲಿ, ಮನೋರಂಜನೆಯಲ್ಲಿ, ಹೀಗೆ ನಮ್ಮ ಊಹೆಗೆ ನಿಲುಕುವ ಎಲ್ಲಾ ರೀತಿಯಲ್ಲೂ ಐಹಿಕ ಹಾಗೂ ಲೌಕಿಕ ಅರ್ಥಸಾಧನೆಗಾಗಿ ಬಳಸಲಾಗುತ್ತಿದ. ಅದು ಯಾವ ಮಟ್ಟಕ್ಕೆ ಹೋಗಬಹುದೆಂದರೆ ಬೆಂಗಳೂರಿನ ವಸತಿ ಬಡಾವಣೆಗಳಲ್ಲಿ ರಸ್ತೆಯ ಪಕ್ಕದ ಕಂಪೌಂಡ್ ಗೋಡೆಗೆ ಜನರು ಹೊಲಸು ಮಾಡುವುದನ್ನು ನಿಲ್ಲಿಸಲು ಕೂಡಾ ದೇವರ ಫೋಟೋಗಳನ್ನು ಅಳವಡಿಸಿರುವುದನ್ನು ನೀವು ಕಾಣಬಹುದು. 

          ಇಂಥದ್ದೊಂದು ಜನಜೀವನದ ಮೇಲೆ ಸೆಕ್ಯುಲರ್-ರಿಲಿಜಿಯಸ್ ಎಂಬ ವಿಂಗಡಣೆಯನ್ನು ಹಾಕಲು ಹೋದಾಗ ಮುಗಿಯದ ಗೊಂದಲಗಳನ್ನು ಎದುರಿಸದೇ ಬೇರೆ ಗತಿಯಿಲ್ಲ. ಆ ವಿಂಗಡಣೆಯೇ ಇಲ್ಲಿ ಅಪ್ರಸ್ತುತವಾದುದು ಎಂಬುದನ್ನು ಅರಿಯುವುದೊಂದೇ ಈ ಗೊಂದಲಗಳಿಂದ ಹೊರಬರುವ ಮಾರ್ಗ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp