ಕಳೆದ ನೂರಾರು ವರ್ಷಗಳಿಂದ ಭಾರತದಲ್ಲಿರುವ ಜಾತಿ ವ್ಯವಸ್ಥೆಯ ಸ್ವರೂಪ ಹಾಗೂ ಕಾರಣಗಳನ್ನು ಕುರಿತು ಸಂಶೋಧನೆಗಳು ನಡೆಯುತ್ತಿವೆ. ಆದರೆ ಸಮಾಜ ವಿಜ್ಞಾನಿಗಳು ಜಾತಿ ವ್ಯವಸ್ಥೆ ಎಂದರೆ ಏನು ಎಂಬುದನ್ನು ಇಂದಿಗೂ ಕೂಡ ಸಾಕ್ಷ್ಯಾಧಾರಗಳನ್ನು ನೀಡಿ ವಿವರಿಸಲು ಸೋಲುತ್ತಾರೆ. ಹಾಗಾದರೆ ಈ ಸಮಸ್ಯೆ ಎಲ್ಲಿಂದ ಹುಟ್ಟುತ್ತದೆ? ಭಾರತದಲ್ಲಿ ಜಾತಿ ವ್ಯವಸ್ಥೆ ಇದೆ ಎಂಬ ನಿರ್ಣಯಕ್ಕೆ ಪಾಶ್ಚಾತ್ಯರು ಏಕೆ ಬಂದರು?
ವ್ಯವಸ್ಥೆ ಎಂಬ ಶಬ್ದವು ನಮಗೆಲ್ಲ ಚಿರಪರಿಚಿತವಾಗಿದ್ದರೂ ಕೂಡ ನಾವು ಅದನ್ನು ಸಿಸ್ಟಂ ಅಥವಾ ಆರ್ಡರ್ ಎಂಬ ಆಂಗ್ಲ ಪದವನ್ನು ಭಾಷಾಂತರಿಸಲು ಬಳಸಿದಾಗ ಅದರ ಅರ್ಥವನ್ನು ಗ್ರಹಿಸಲು ಸೋಲುತ್ತೇವೆ. ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ, ಆದರೆ ನಾವು ನಮ್ಮ ಸಂಸ್ಕೃತಿಯ ಕುರಿತು ಮಾತನಾಡುವಾಗ ಈ ಗೊಂದಲವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಾವು ಹಿಂದೂ ಧರ್ಮ, ಜಾತಿ ವ್ಯವಸ್ಥೆ, ಇತ್ಯಾದಿ ಪರಿಭಾಷೆಗಳನ್ನು ಬಳಸುವಾಗ ಅವನ್ನು ನಮ್ಮ ಆಡುಮಾತಿನ ಅರ್ಥದಲ್ಲಿ ಬಳಸುತ್ತಿರುವುದಿಲ್ಲ. ಅಂಥ ಪದಪುಂಜಗಳು ನಮ್ಮ ಶಬ್ದಕೋಶದಲ್ಲಿ ಬಂದು ಸೇರಿಕೊಂಡಿದ್ದೇ ವಸಾಹತು ಕಾಲದಲ್ಲಿ. ಅಂದರೆ ಯಾವುದೋ ವಿದೇಶೀ ಪರಿಕಲ್ಪನೆಯನ್ನು ಅನುವಾದಿಸುವ ಸಲುವಾಗಿ ನಾವು ಈ ಪದಪುಂಜಗಳನ್ನು ಸೃಷ್ಟಿಸಿದ್ದೇವೆ ಎಂಬುದು ಸ್ಪಷ್ಟ. ಹಾಗೆ ಸೃಷ್ಟಿಸಿಕೊಂಡ ನಂತರವಾದರೂ ಆ ಪರಿಕಲ್ಪನೆಗಳು ನಮಗೆ ಎಷ್ಟು ಅರ್ಥವಾಗಿವೆ? ಧರ್ಮ ಎಂಬ ಶಬ್ದದ ಸಂದರ್ಭದಲ್ಲಿ ಏನೇನು ಆವಾಂತರಗಳಾಗಿವೆ ಎಂಬುದನ್ನು ಈಗಾಗಲೇ ಗಮನಿಸಿದ್ದೇವೆ. ಈಗ ಈ ವ್ಯವಸ್ಥೆ ಎಂಬ ಶಬ್ದವು ಹೇಗೆ ಗೊಂದಲದ ಗೂಡಾಗಿದೆ ಎಂಬುದನ್ನು ಗಮನಿಸೋಣ.
ನಾವು ವ್ಯವಸ್ಥೆ ಎಂಬ ಶಬ್ದವನ್ನು ಆಡುಮಾತಿನಲ್ಲಿ ಹೇಗೆ ಬಳಸುತ್ತೇವೆ? ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ, ಇತ್ಯಾದಿ. ಅಂದರೆ ಇಂಥ ಆಡುಮಾತುಗಳು ವ್ಯವಸ್ಥೆ ಎಂಬ ಶಬ್ದಕ್ಕೆ ’ಸೌಕರ್ಯವನ್ನು ಕಲ್ಪಿಸುವುದು’ ಎಂಬ ಅರ್ಥವನ್ನು ನೀಡುತ್ತವೆ. ಅವ್ಯವಸ್ಥೆ ಎಂದರೆ ಸರಿಯಾದ ನಿರ್ದೇಶನಗಳಿಲ್ಲದೇ, ನಿರ್ವಹಣೆಯಿಲ್ಲದೇ ಗೊಂದಲ ನಿರ್ಮಾಣವಾಗುವುದು. ’ಕುಟುಂಬ ವ್ಯವಸ್ಥೆ’ ’ವಿವಾಹ ವ್ಯವಸ್ಥೆ’ ಎಂಬಂಥ ಶಬ್ದಗಳು ನಮ್ಮ ಆಡುನುಡಿಗೂ ನಿಲುಕದಷ್ಟು ಅಪರಿಚಿತವಾಗಿಬಿಡುತ್ತವೆ. ಅವುಗಳಲ್ಲಿ ಜಾತಿ ವ್ಯವಸ್ಥೆ ಎಂಬ ಶಬ್ದವು ತೀರಾ ಪರಿಚಿತವಾಗಿಬಿಟ್ಟಿದೆ, ಆದರೆ ಈ ವ್ಯವಸ್ಥೆಗಳು ನಮಗೆ ಅರ್ಥವಾಗಿವೆಯೆ? ’ಕುಟುಂಬವನ್ನು/ವಿವಾಹವನ್ನು ವ್ಯವಸ್ಥೆ ಮಾಡಿದ್ದೇವೆ, ವಿವಾಹದ ವ್ಯವಸ್ಥೆಯಿದೆ’ ’ನಮ್ಮ ಹಳ್ಳಿಯಲ್ಲಿ ನಾವು ಜಾತಿ ವ್ಯವಸ್ಥೆಯನ್ನು ಮಾಡಿದ್ದೇವೆ,’ ಎಂಬಂಥ ವಾಕ್ಯಗಳು ಹಾಸ್ಯಾಸ್ಪದವಾಗುತ್ತವೆ. ಏಕೆಂದರೆ ಈ ವಾಕ್ಯದಲ್ಲಿ ವ್ಯವಸ್ಥೆ ಎನ್ನುವುದನ್ನು ನಿರ್ದಿಷ್ಟವಾಗಿ ಇಂಗ್ಲೀಷಿನ ಸಿಸ್ಟಂ ಎಂಬ ಶಬ್ದದ ತರ್ಜುಮೆಯಾಗಿ ಬಳಸಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ.
ಸಿಸ್ಟಂ ಎಂಬ ಪರಿಕಲ್ಪನೆಯ ಪ್ರಕಾರ ಅದರೊಳಗೆ ಈ ಮುಂದಿನ ಅಂಶಗಳಿರುತ್ತವೆ: ೧. ಒಂದು ಉದ್ದೇಶ, ೨. ಆ ಉದ್ದೇಶವನ್ನು ಸಾಕಾರಗೊಳಿಸುವ ಒಟ್ಟಾರೆ ವಿನ್ಯಾಸ ಅಥವಾ ರಚನೆ. ೩. ಆ ವಿನ್ಯಾಸದಲ್ಲಿ ಒಂದು ಭಾಗವಾಗಿ ನಿರ್ದಿಷ್ಟವಾದ ಕಾರ್ಯವನ್ನು ನಿರ್ವಹಿಸುತ್ತಿರುವ ಬಿಡಿ ಭಾಗಗಳು. ೪. ಇವುಗಳನ್ನೆಲ್ಲಾ ನಿರ್ದೇಶಿಸುತ್ತಿರುವ ನಿಯಮಾವಳಿಗಳು. ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಉದಾಹರಣೆಗೆ ತೆಗೆದುಕೊಳ್ಳಿ. ಅದಕ್ಕೊಂದು ರಚನೆಯಿದೆ, ಉದ್ದೇಶವಿದೆ, ನಿಯಮಾವಳಿಯಿದೆ, ಹಾಗೂ ಅದಕ್ಕನುಗುಣವಾಗಿ ನಡೆಯುವ ಸಂಸ್ಥೆಗಳು, ಪದಾಧಿಕಾರಗಳು, ಚಟುವಟಿಕೆಗಳು ಇವೆಲ್ಲಾ ಇರುತ್ತವೆ. ಇವೆಲ್ಲವೂ ಕೂಡ ಶಿಕ್ಷಣ ವ್ಯವಸ್ಥೆಯ ಉದ್ದೇಶವನ್ನು ಸಾಕಾರಗೊಳಿಸುವ ಸಲುವಾಗಿ ಇವೆ. ಯಾರು ಯಾರು ಏನೇನು ಕರ್ತವ್ಯವನ್ನು ಮಾಡಬೇಕು ಎನ್ನುವುದನ್ನು ಅದರ ನಿಯಮಾವಳಿಗಳು ನಿರ್ಧರಿಸುತ್ತವೆ. ಒಬ್ಬ ಅಧ್ಯಾಪಕನನ್ನು ಆ ಕೆಲಸಕ್ಕಾಗಿಯೇ ನೇಮಿಸಲಾಗಿರುತ್ತದೆ, ಜವಾನನನ್ನು ಜವಾನನ ಕೆಲಸಕ್ಕಾಗಿಯೇ ನೇಮಿಸಲಾಗಿರುತ್ತದೆ. ಈ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ಅಂಗವನ್ನು ನೋಡಿದರೂ ಅದರ ಹಿಂದೆ ನಿಯಮಾವಳಿಗಳು ಇರುವುದನ್ನು ಕಾಣುವುದಕ್ಕೆ ಇಂದು ನಮಗೆ ಸಿದ್ಧಾಂತಗಳನ್ನು ಬೆಳೆಸಬೇಕಿಲ್ಲ. ’ಜಾತಿ ವ್ಯವಸ್ಥೆ’ಯು ಅರ್ಥವಾಗಬೇಕಾದರೆ ಅದರ ಹಿಂದೆ ಈ ಸಂಗತಿಗಳೆಲ್ಲವೂ ಇರಬೇಕು.
ರಿಲಿಜನ್ನು ಈ ವಿಶ್ವದ ಹಿಂದೆ ಅಂಥದ್ದೊಂದು ಯೋಜನೆಯನ್ನೂ, ರಚನೆಯನ್ನೂ ಕಲ್ಪಿಸಿಕೊಡುತ್ತದೆ. ರಿಲಿಜನ್ನು ತಿಳಿಸುವ ಪ್ರಕಾರ ಈ ಸೃಷ್ಟಿಯೇ ಅಂಥದ್ದೊಂದು ರಚನೆಯಾಗಿದೆ. ಅದನ್ನು ರಚಿಸಿದವನು ಗಾಡ್. ಅವನು ಒಂದು ಉದ್ದೇಶವನ್ನು ಇಟ್ಟುಕೊಂಡು ಅದನ್ನು ವಿನ್ಯಾಸಗೊಳಿಸಿದ್ದಾನೆ. ಅಂದರೆ ಈ ಸೃಷ್ಟಿಯ ರಚನೆಯ ಹಿಂದೆ ಕಾರಣವೊಂದಿದೆ. ಹಾಗಾಗಿ ಇಲ್ಲಿ ಬಿಡಿ ಬಿಡಿಯಾಗಿ ಕಾಣುವ ಸಂಗತಿಗಳೂ, ವಸ್ತುಗಳೂ ನಿಜದಲ್ಲಿ ಹಾಗಿಲ್ಲ, ಅವು ಪರಸ್ಪರ ಒಂದಕ್ಕೊಂದು ಜೋಡಣೆಯಾಗಿವೆ. ಆದರೆ ಆ ಜೋಡಣೆಯ ವಿನ್ಯಾಸವು ಅವ್ಯಕ್ತವಾಗಿದ್ದುಕೊಂಡು ಈ ಸೃಷ್ಟಿಯನ್ನು ಹಿಡಿದಿಟ್ಟಿದೆ. ಹಾಗೂ ಗಾಡ್ ಅದರ ಕಾರ್ಯವನ್ನು ನಿರ್ದೇಶಿಸುತ್ತಿದ್ದಾನೆ. ಅಂದರೆ ಈ ಇಡೀ ಸೃಷ್ಟಿಯು ಯೋಜಿಸಿದವನ ಉದ್ದೇಶಕ್ಕನುಗುಣವಾಗಿ ಯೋಜನಾಬದ್ಧವಾಗಿ ನಡೆಯುತ್ತಿದೆ. ರಿಲಿಜನ್ನು ಈ ವಿಶ್ವದಲ್ಲಿ ನಮಗೆ ಕಂಡುಬರುವ ಪರಸ್ಪರ ಪ್ರತ್ಯೇಕವಾದ ಸಂಗತಿಗಳನ್ನು ಕಾರ್ಯಾಕಾರಣ ಸಂಬಂಧದಿಂದ ಜೋಡಿಸಿ ಅದರ ಹಿಂದೆ ಒಂದು ಉದ್ದೇಶವಿದೆ ಎಂಬುದನ್ನು ತಿಳಿಸುತ್ತದೆ. ಆ ಮೂಲಕವಾಗಿ ಪಾಶ್ಚಾತ್ಯರ ವ್ಯವಸ್ಥೆಯ ಕಲ್ಪನೆಗೆ ಮಾದರಿಯೊಂದನ್ನು ರಿಲಿಜನ್ನು ನೀಡುತ್ತದೆ.
ಇಂಥದ್ದೊಂದು ಮಾದರಿಯನ್ನಿಟ್ಟುಕೊಂಡು ಜಗತ್ತನ್ನು ಅರ್ಥಮಾಡಿಕೊಳ್ಳಲು ಕಲಿತ ಸಂಸ್ಕೃತಿಯೇ ಪಾಶ್ಚಾತ್ಯ ಸಂಸ್ಕೃತಿಯಾಗಿದೆ. ಆಧುನಿಕ ಸಮಾಜಶಾಸ್ತ್ರಜ್ಞರು ಬೈಬಲ್ಲಿನ ಈ ಕಥೆಯನ್ನು ನಿರಾಧಾರ ಎಂದು ಅಲ್ಲಗಳೆಯಬಹುದು. ಆದರೆ ಪ್ರಪಂಚದ ಕುರಿತು ಒಂದು ನಿರ್ದಿಷ್ಟ ರೀತಿಯ ಧೋರಣೆಯನ್ನು ಈ ಮೇಲಿನ ಕಥೆಯು ರೂಪಿಸಿದೆ. ಈ ಧೋರಣೆಯೇ ಪೂರ್ವಗ್ರಹೀತವಾಗಿ ಅವರ ಹುಡುಕಾಟವನ್ನು ನಿರ್ದೇಶಿಸುತ್ತಿದೆ. ಇದು ಪೂರ್ವಗ್ರಹೀತವೇಕೆಂದರೆ ಅದು ಸ್ವತಃ ಪರೀಕ್ಷೆಗೆ ಒಳಪಡುವುದಿಲ್ಲ. ಹಾಗಾಗಿ ಗಾಡ್ನನ್ನು ಹಾಗೂ ಅವನ ಉದ್ದೇಶವನ್ನು ನಿರಾಕರಿಸಿದರೂ ಇಡೀ ನಿಸರ್ಗವೇ ಅಂತರಿಕವಾಗಿ ವ್ಯವಸ್ಥಿತವಾಗಿ ಜೋಡಣೆಗೊಂಡಿದೆ ಎಂಬುದಾಗಿಯೇ ಭಾವಿಸಲಾಯಿತು. ಹಾಗಾದಲ್ಲಿ ಇದೆಲ್ಲ ಹೇಗೆ ಅಸ್ತಿತ್ವದಲ್ಲಿ ಬಂದಿದೆ ಹಾಗೂ ಹೇಗೆ ನಡೆಯುತ್ತಿದೆ ಎಂಬುದನ್ನು ವಿವರಿಸುವ ಸವಾಲು ಹುಟ್ಟಿಕೊಂಡಿತು. ಆಗ ಗಾಡ್ನ ಇಚ್ಛೆಗೆ ಬದಲಾಗಿ ನಿಸರ್ಗನಿಯಮಗಳೇ ಈ ವ್ಯವಸ್ಥೆಯನ್ನು ನಿಯಂತ್ರಿಸುತ್ತವೆ ಎಂದೂ ಭಾವಿಸಲಾಯಿತು. ಇಂಥ ನಿಯಮಗಳ ಹುಡುಕಾಟವೇ ಹೇಗೆ ಪಾಶ್ಚಾತ್ಯ ವಿಜ್ಞಾನಕ್ಕೆ ಬುನಾದಿಯಾಯಿತು ಎಂಬುದನ್ನು ನೋಡಿದ್ದೇವೆ.
ಈಗ ನಾನು ಹೇಳುತ್ತಿರುವ ಕಥೆಯು ಸಾಮಾಜಿಕ ವ್ಯವಸ್ಥೆಗೆ ಸಂಬಂಧಿಸಿದೆ. ಪಾಶ್ಚಾತ್ಯರು ಸಮಾಜವನ್ನು ಕೂಡ ಇಂಥದ್ದೇ ಒಂದು ರಚನೆಯೆಂಬುದಾಗಿ ಗ್ರಹಿಸಿದರು. ಆದರೆ ಈ ವ್ಯವಸ್ಥೆಯಲ್ಲಿ ಅದನ್ನು ರಚಿಸಿದ ಕರ್ತೃ ಮನುಷ್ಯನೇ ಆಗಿರುತ್ತಾನೆ. ಆತನ ಉದ್ದೇಶವು ಅದನ್ನು ರಚಿಸಿ ನಿರ್ದೇಶಿಸುತ್ತ ಇರುತ್ತದೆ. ಅಥವಾ ಈ ಸಮಾಜವೆಂಬ ಸಂಗತಿಯನ್ನು ಒಂದು ನಿರ್ದಿಷ್ಟ ಕಾರಣಕ್ಕೋಸುಗ ರಚಿಸಲಾಗುತ್ತದೆ ಹಾಗೂ ರಚಿಸಬೇಕು. ಇಲ್ಲಿರುವ ಪ್ರತಿಯೊಂದು ಪದ್ಧತಿಗಳೂ ಆಚರಣೆಗಳೂ ಆ ಉದ್ದೇಶವನ್ನು ಸಾಕಾರಗೊಳಿಸಬೇಕು. ಆಗ ಮಾತ್ರವೇ ಅಂಥ ಆಚರಣೆಗಳಿಗೆ ವೈಚಾರಿಕ ನೆಲೆ ನಿರ್ಮಾಣವಾಗುತ್ತದೆ. ಅಂದರೆ ಸಮಾಜವೆಂಬುದು ಮನುಷ್ಯರ ಉದ್ದೇಶಕ್ಕನುಗುಣವಾಗಿ ನಿರ್ಮಿಸುವ, ಪುನರ್ನಿರ್ಮಿಸುವ ವಸ್ತುವಾಗಿದೆ.
ಪಾಶ್ಚಾತ್ಯರ ಸಾಮಾಜಿಕ ಚಿಂತನೆಗಳು ಹಾಗೂ ಚಳವಳಿಗಳೆಲ್ಲವೂ ಈ ಗ್ರಹಿಕೆಯನ್ನಾಧರಿಸಿಯೇ ರೂಪುಗೊಂಡಿವೆ. ಅಂದರೆ ಒಂದು ಕಾಲದಲ್ಲಿ ಯಾವುದೋ ಉದ್ದೇಶವನ್ನಿಟ್ಟುಕೊಂಡು ಒಂದು ವ್ಯವಸ್ಥೆಯನ್ನು ರಚಿಸಲಾಗುತ್ತದೆ. ಆದರೆ ಕಾಲಾಂತರದಲ್ಲಿ ಮನುಷ್ಯರ ಸ್ವಾರ್ಥ ಹಾಗೂ ಅಜ್ಞಾನಗಳಿಂದಾಗಿ, ಕಾಲಮಾನದ ಬದಲಾವಣೆಯಿಂದಾಗಿ ಅದು ಶೋಷಣೆಯ ಸಾಧನವಾಗುತ್ತದೆ ಅಥವಾ ಮೂಢಾಚರಣೆಗಳು ಬೆಳೆದುಕೊಳ್ಳುತ್ತವೆ. ಅಂಥ ಆಚರಣೆಗಳನ್ನು ತೊಡೆದು ಹಾಕಿ ಸಮಾಜವನ್ನು ಸುಧಾರಣೆಗೆ ಒಳಪಡಿಸುವುದು ಅತ್ಯಗತ್ಯ. ಅಥವಾ ಹೊಸ ಹೊಸ ಚಿಂತನೆಗಳ ನೆಲಗಟ್ಟಿನ ಮೇಲೆ ಇನ್ನೂ ಹೆಚ್ಚು ಪ್ರಯೋಜನಕಾರಿಯಾದ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಈಗಿರುವ ಸಮಾಜ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಾಯಿಸುವುದು, ಕ್ರಾಂತಿಮಾಡುವುದು ಸಮಾಜದ ಆರೋಗ್ಯಕ್ಕೆ ಅತ್ಯಗತ್ಯ ಎಂಬುದಾಗಿ ಅವರು ನಂಬುತ್ತಾರೆ.
ಈ ಧೋರಣೆಯನ್ನು ರೂಪಿಸಿಕೊಂಡ ಪಾಶ್ಚಾತ್ಯ ಚಿಂತಕರು ಅನ್ಯ ಸಮಾಜಗಳನ್ನು ನೋಡಿದಾಗಲೂ ಹಾಗೇ ತರ್ಕಿಸಿದ್ದು ಸಹಜವಾಗಿಯೇ ಇದೆ. ಭಾರತದಂತಹ ಸಂಸ್ಕೃತಿಯನ್ನು ಹಾಗೂ ಸಮಾಜವನ್ನು ನೋಡಿದಾಗ ಅವರಿಗೆ ಹಿಂದೂಯಿಸಂ ಎಂಬ ರಿಲಿಜನ್ನನ್ನು ನಂಬಿದ ಆಧುನಿಕಪೂರ್ವ ಸಮುದಾಯಗಳು ಕಾಣಿಸಿದವು. ಆದರೆ ಇಂಥ ಸಮುದಾಯಗಳನ್ನು ಏಕತ್ರವಾಗಿ ಹಿಡಿದಿಡುವ ರಿಲಿಜನ್ನು ಹಾಗೂ ಚರ್ಚುಗಳು ಕಾಣಲಿಲ್ಲ. ಪರಸ್ಪರ ಸಂಬಂಧವೇ ಇಲ್ಲದ ವೈವಿಧ್ಯಪೂರ್ಣವಾದ ಸಾಂಪ್ರದಾಯಿಕ ಗುಂಪುಗಳು ಕಾಣಿಸಿದವು. ಇದು ತಮಗೆ ಗೊತ್ತಿಲ್ಲದ ಯಾವುದೋ ಒಂದು ವ್ಯವಸ್ಥೆಯೇ ಆಗಿರಬೇಕು ಎಂದು ಅವರು ತರ್ಕಿಸಿದರು. ಹಾಗೂ ಕೆಲವು ಆಚರಣೆಗಳು ಒಗಟಿನಂತೇ ಕಾಣಿಸಿದವು, ಹಾಗಾಗಿಯೇ ಅವು ಕಣ್ಣಿಗೆ ಎಸೆದು ಕಾಣಿಸಿದವು. ಉದಾಹರಣೆಗೆ ಜಾತಿಭೇದ, ಅಸ್ಪೃಶ್ಯತೆ, ಸಜಾತಿ ವಿವಾಹ, ಸತಿ ಪದ್ಧತಿ, ಇತ್ಯಾದಿಗಳು. ಯಾವ ಆಚರಣೆಗಳು ಅವರ ಅನುಭವಕ್ಕೆ ಅನ್ಯವಾಗಿ ತೋರಿದವೋ, ಅಸಹಜವಾಗಿ ತೋರಿದವೋ ಅವು ಈ ಸಮಾಜವನ್ನು ವ್ಯವಸ್ಥಿತಗೊಳಿಸುವ ಮುಖ್ಯ ಲಕ್ಷಣಗಳಾಗಿ ಬದಲಾದವು. ಇಂಥ ಪರಸ್ಪರ ಸಂಬಂಧವಿಲ್ಲದಂತೇ ತೋರುವ ಸಂಗತಿಗಳೆಲ್ಲವೂ ಮೂಲತಃ ಈ ಜನರು ರಚಿಸಿಕೊಂಡ ವ್ಯವಸ್ಥೆಯ ವಿಶಿಷ್ಟ ಲಕ್ಷಣಗಳಾಗಿವೆ ಎಂಬುದಾಗಿ ಅಂದುಕೊಂಡರು.
ಆ ವ್ಯವಸ್ಥೆಯ ಸ್ವರೂಪವೇನು? ಹಾಗೂ ಆ ವ್ಯವಸ್ಥೆಯನ್ನು ಯಾವ ಉದ್ದೇಶದಿಂದ ರಚಿಸಲಾಗಿದೆ? ಯಾರು ರಚಿಸಿದ್ದಾರೆ ಎಂಬ ಹುಡುಕಾಟ ವೈಜ್ಞಾನಿಕವಾಗಿ ನಡೆಯಬೇಕಿತ್ತು. ಆದರೆ ಈ ಸವಾಲನ್ನು ವೈಜ್ಞಾನಿಕವಾಗಿ ಎದುರಿಸುವ ಪರಿಸ್ಥಿತಿ ಅವರಿಗೆ ನಿರ್ಮಾಣವಾಗಲಿಲ್ಲ. ಏಕೆಂದರೆ ಅದಾಗಲೇ ರಿಲಿಜನ್ನಿನ ಹಾಗೂ ಅದರ ಪುರೋಹಿತಶಾಹಿಗಳ ಕುರಿತ ಕಥೆಗಳು ಪೂರ್ವಗ್ರಹೀತ ಉತ್ತರಗಳಾಗಿ ಪಾಶ್ಚಾತ್ಯ ವಿದ್ವಾಂಸರಲ್ಲಿದ್ದವು. ಕ್ಯಾಥೋಲಿಕ್ ಪ್ರೀಸ್ಟ್ಗಳು ಚರ್ಚಿನಲ್ಲಿ ತರತಮವನ್ನು ಸೃಷ್ಟಿಸಿದ ಕರ್ತೃಗಳು ಹಾಗೂ ಅವರಂತೆ ಬ್ರಾಹ್ಮಣರು ಹಿಂದೂಯಿಸಂನಲ್ಲಿ ಜಾತಿಯ ತರತಮಗಳನ್ನು ಸೃಷ್ಟಿಸಿದವರು ಎಂಬ ನಿರೂಪಣೆಗಳು ವೈಜ್ಞಾನಿಕ ಸಂಶೋಧನೆಗಳಿಗೂ ಮೊದಲೇ ಪ್ರಚಲಿತದಲ್ಲಿ ಬಂದಿದ್ದವು. ಅಂದರೆ ಜಾತಿ ವ್ಯವಸ್ಥೆಯನ್ನು ಪಾಶ್ಚಾತ್ಯ ಸಮಾಜ ಶಾಸ್ತ್ರಜ್ಞರು ಅಧ್ಯಯನಕ್ಕೆ ಒಳಪಡಿಸುವಾಗ ಈ ನಿರ್ದಿಷ್ಟವಾದ ಕಥೆಯನ್ನೇ ಸತ್ಯದ ಸ್ಥಾನದಲ್ಲಿ ಗ್ರಹಿಸಿಕೊಂಡಿದ್ದರು. ಇಲ್ಲಿ ವ್ಯವಸ್ಥೆಯಿದೆ ಎಂಬುದೊಂದೇ ಅಲ್ಲ, ಅದು ಒಂದು ನಿರ್ದಿಷ್ಟ ರೀತಿಯಲ್ಲೇ ಇದೆ ಎಂಬುದಾಗಿ ಜಾತಿ ವ್ಯವಸ್ಥೆಯ ಕಥೆ ತಿಳಿಸುತ್ತದೆ. ಆ ವ್ಯವಸ್ಥೆಯು ಆಧುನಿಕ ಪೂರ್ವ ಐರೋಪ್ಯ ಸಮಾಜದ ಪ್ರತಿರೂಪವಾಗಿ ಅವತರಿಸಿತು.
ಈ ಉತ್ತರವನ್ನಿಟ್ಟುಕೊಂಡು ಪಾಶ್ಚಾತ್ಯರು ಭಾರತದಲ್ಲಿ ತಾವು ನೋಡಿದ ವಿಶೇಷ ಸಂಗತಿಗಳನ್ನು ಅದಕ್ಕೆ ಜೋಡಿಸಿದರು. ಆದರೆ ಅವರು ಕಲ್ಪಿಸಿಕೊಂಡ ಉತ್ತರಕ್ಕೆ ಇಲ್ಲಿನ ಸಂಗತಿಗಳು ತರ್ಕಬದ್ಧವಾಗಿ ಜೋಡಣೆಯಾಗಲಿಲ್ಲ. ಆಗ ಅವರು ಇದು ತಾವು ಕಲ್ಪಿಸಿಕೊಂಡ ವ್ಯವಸ್ಥೆಯಲ್ಲ, ಬೇರೆಯದೇನೋ ಇರಬೇಕು ಎಂಬುದಾಗಿ ತರ್ಕಿಸಬಹುದಿತ್ತು. ಅದಕ್ಕೆ ಬದಲಾಗಿ ಇದು ತಾವು ಕಲ್ಪಿಸಿಕೊಂಡ ಜಾತಿ ವ್ಯವಸ್ಥೆಯೇ ಆಗಿದೆ, ಆದರೆ ಈ ಸಂಗತಿಗಳು ಹೇಗೆ ಅದರ ಭಾಗಗಳಾಗುತ್ತವೆ ಎಂಬುದನ್ನು ನಾವಿನ್ನೂ ಸರಿಯಾಗಿ ಅರ್ಥೈಸಿಲ್ಲ ಎಂದುಕೊಂಡರು. ಅದನ್ನು ಅರ್ಥೈಸುವ ಪ್ರಯತ್ನದ ಫಲವಾಗಿ ಜಾತಿ ವ್ಯವಸ್ಥೆಯ ಕುರಿತ ನೂರಾರು ವರ್ಷಗಳ ಸಂಶೋಧನೆಯು ಅಸ್ತಿತ್ವಕ್ಕೆ ಬಂದಿತು. ಈ ವ್ಯವಸ್ಥೆಯ ಉಗಮ ಹೇಗಾಯಿತು ಎಂಬ ಕುರಿತು ಸಿದ್ಧಾಂತಗಳ ಮೇಲೆ ಸಿದ್ಧಾಂತಗಳು ಬಂದವು. ಇದರ ರಚನೆಯ ಸ್ವರೂಪವೇನು ಎಂಬುದರ ಕುರಿತೂ ಸಿದ್ಧಾಂತಗಳನ್ನು ಕಟ್ಟಲಾಯಿತು. ಇದೆಲ್ಲ ಏಕೆಂದರೆ ಈ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ. ಅಂದರೆ ಭಾರತೀಯ ಸಮಾಜದಲ್ಲಿ ಕಂಡುಬರುವ ಆಚರಣೆಗಳ ಕುರಿತಾಗಿ ಯಾವ ಅಂತರ್ಗತ ಸತ್ಯವನ್ನು ಅವರು ತಿಳಿಯಹೊರಟಿದ್ದಾರೋ ಆ ಕುರಿತು ಅವರ ಸಂಶೋಧನೆಯಿಂದ ಒಂದು ನಿರ್ಣಯ ಇನ್ನೂ ಹೊರಟಿಲ್ಲ.
ಅಂದರೆ ಜಾತಿ ವ್ಯವಸ್ಥೆ ಎಂಬುದಾಗಿ ನಾವೇನು ಕರೆಯುತ್ತೇವೆಯೋ ಅದು ಕಾಸ್ಟ್ ಸಿಸ್ಟಂ ಎಂಬ ಈ ಮೇಲಿನ ನಿರ್ದಿಷ್ಟ ಪರಿಭಾಷೆಯ ಭಾಷಾಂತರವಾಗಿದೆ. ನಮ್ಮ ಭಾಷೆಯಲ್ಲಿ ಆ ಭಾಷಾಂತರವು ಕೆಲವೊಮ್ಮೆ ಜಾತಿವ್ಯವಸ್ಥೆ ಎಂದಾದರೆ ಕೆಲವೊಮ್ಮೆ ಜಾತಿಪದ್ಧತಿ ಎಂದಾಗುತ್ತದೆ. ಇವೆರಡರಲ್ಲಿ ಯಾವ ಶಬ್ದವನ್ನು ಬಳಸಿದರೂ ನಮಗೇನೂ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ನಾವು ಏನನ್ನು ದಿನನಿತ್ಯ ನೋಡುತ್ತೇವೆಯೋ ಅದನ್ನೇ ಈ ಶಬ್ದ ತಿಳಿಸುತ್ತದೆ ಅಂದುಕೊಳ್ಳುತ್ತೇವೆ. ಅಂದರೆ ಇಲ್ಲಿ ವಿಭಿನ್ನ ಜಾತಿಗಳಿವೆ, ವಿಭಿನ್ನ ಆಚರಣೆಗಳಿವೆ, ಜಾತಿ ಜಾತಿಗಳ ನಡುವೆ ಹೊಡೆದಾಟವಾಗುತ್ತದೆ, ಯಾವುದೋ ಒಂದು ಹಳ್ಳಿಯಲ್ಲಿ ಒಂದು ಪ್ರಬಲ ಜಾತಿಯು ದುರ್ಬಲ ಜಾತಿಯನ್ನು ದಮನ ಮಾಡುತ್ತದೆ, ಹಾಗೂ ಜಾತಿ ವ್ಯವಸ್ಥೆಯೆಂದರೆ ಅದೇ ಆಗಿದೆ ಎಂದು ಅಂದುಕೊಳ್ಳುತ್ತೇವೆ. ಆದರೆ ಇಲ್ಲಿರುವ ಸಾಮಾಜಿಕ ವೈವಿಧ್ಯತೆಗಳನ್ನೆಲ್ಲ ಜಾತಿ ವಿಭಜನೆ ಎಂದು ಕರೆದರೆ ಮಗಿಯಿತೆ? ಮತ ವಿಭಾಗಗಳಿವೆಯಲ್ಲ? ಕುಲ, ಗೋತ್ರ, ಬಳಿ, ಎಡಗೈ-ಬಲಗೈ ಇತ್ಯಾದಿ ವಿಭಾಗಗಳನ್ನಿಟ್ಟುಕೊಂಡೂ ಇಲ್ಲಿನ ಜನರು ವ್ಯವಹರಿಸುತ್ತಾರಲ್ಲ? ಇವೆಲ್ಲ ಜಾತಿ ವ್ಯವಸ್ಥೆಯಲ್ಲೇ ಬರುತ್ತವೆಯೆ? ಎಂಬುದರ ಕುರಿತು ಯೋಚಿಸುವುದಿಲ್ಲ. ಅಥವಾ ಜಾತಿ ಉಪಜಾತಿ ಎಂದೆಲ್ಲ ನಾವು ಮಾಡಿಕೊಂಡ ಆಧುನಿಕ ವಿಭಾಗಗಳು ನಿಜವಾಗಿಯೂ ಹಾಗಿವೆಯೆ? ಹಾಗೆ ಇದ್ದಿದ್ದೇ ಹೌದಾಗಿದ್ದರೆ ಅವುಗಳನ್ನಾಧರಿಸಿ ಅಳವಡಿಸಿಕೊಂಡ ಆಡಳಿತ ನೀತಿಗಳು ಸಮಸ್ಯೆಯನ್ನೂ ಸಂಘರ್ಷವನ್ನೂ ಏಕೆ ಹುಟ್ಟಿಸುತ್ತಿವೆ? ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳುವುದಿಲ್ಲ. ಜಾತಿ ವ್ಯವಸ್ಥೆಯ ಕುರಿತ ಸಂಶೋಧನೆಯು ಇನ್ನೂ ಆ ಎರಡನೆಯ ಹಂತವನ್ನು ತಲುಪಲು ಸೋಲುತ್ತಿದೆ.
ಏಕೆಂದರೆ ಪಾಶ್ಚಾತ್ಯರು ಜಾತಿ ವ್ಯವಸ್ಥೆ ಎಂಬುದರ ಕುರಿತು ಯಾವ ಕಲ್ಪನೆಯನ್ನು ಹೊತ್ತುಕೊಂಡು ಭಾರತಕ್ಕೆ ಬಂದಿದ್ದಾರೋ ಅದೊಂದು ಸ್ವೀಕೃತ ಧೋರಣೆಯಿಂದ ಹುಟ್ಟಿದ ಅನಿಸಿಕೆಯಾಗಿದೆ. ಅದು ಇಲ್ಲಿನ ಸಮಾಜದ ಅಧ್ಯಯನವನ್ನು ಮಾಡಿದ ನಂತರ ಅವರು ಕಂಡುಕೊಂಡ ಸಂಗತಿಯಲ್ಲ. ಹಾಗಾಗಿ ಅದರ ರೂಪುರೇಷೆಗಳನ್ನು ಅವರಿನ್ನೂ ಕಂಡುಹಿಡಿಯುತ್ತಲೇ ಇದ್ದಾರೆ. ಅದೊಂದು ಧೋರಣೆಯಾಗಿ ಅವರ ಹುಡುಕಾಟವನ್ನು ನಿರ್ದೇಶಿಸುತ್ತಿದೆ ಅಷ್ಟೆ. ಇದಕ್ಕೊಂದು ಉದಾಹರಣೆ ನೀಡುವುದಾದರೆ, ನಮ್ಮ ಮುಂದಿರುವ ಪುಸ್ತಕದ ಹಾಳೆಯಲ್ಲಿ ಚುಕ್ಕಿಗಳಿವೆ ಅಂತಿಟ್ಟುಕೊಳ್ಳಿ. ಚುಕ್ಕಿಗಳಿದ್ದಲ್ಲೆಲ್ಲ ವಿನ್ಯಾಸ ಇದ್ದೇ ಇರಬೇಕೆಂದಿಲ್ಲ. ಆದರೆ ಒಂದು ವಿನ್ಯಾಸವನ್ನು ರಚಿಸಲಿಕ್ಕಾಗಿಯೇ ಯಾರೋ ಈ ಚುಕ್ಕಿಗಳನ್ನು ಇಟ್ಟಿದ್ದಾರೆ ಎಂಬುದಾಗಿ ನಾವು ನಂಬಿಕೊಂಡಿದ್ದೇವೆ ಅಂತಿಟ್ಟುಕೊಳ್ಳಿ. ಅದು ಆನೆಯೇ ಎಂಬುದಾಗಿಯೂ ತೀರ್ಮಾನಿಸಿದ್ದೇವೆ ಅಂತಿಟ್ಟುಕೊಳ್ಳಿ. ಶತಮಾನಗಳ ಕಾಲ ಹುಡುಕಾಡುತ್ತಿದ್ದರೂ ನಮಗೆ ಆನೆಯ ಆಕೃತಿಯನ್ನು ಧೃಡೀಕರಿಸುವ ಎಲ್ಲಾ ಚುಕ್ಕೆಗಳೂ ಸಿಗುವುದಿಲ್ಲ. ಅಥವಾ ಅದಕ್ಕೆ ಹೊಂದದ ಚುಕ್ಕೆಗಳೇ ಪ್ರಧಾನವಾಗಿ ಕಾಣಿಸುತ್ತಿರುತ್ತವೆ. ಆಗ ಅದು ಒಂಟೆ ಅಥವಾ ಕುದುರೆ ಏಕಾಗಿರಬಾರದು? ಎಂಬ ಪರ್ಯಾಯ ಪ್ರಶ್ನೆಗಳನ್ನು ಎತ್ತುತ್ತೇವೆಯೇ ವಿನಃ ಅಂಥ ಯಾವ ಆಕೃತಿಯೂ ಇಲ್ಲದಿರುವ ಸಾಧ್ಯತೆಯ ಕುರಿತು ತಲೆ ಓಡುವುದಿಲ್ಲ.
ಇವೆಲ್ಲ ಜಾತಿ ವ್ಯವಸ್ಥೆಯ ಕುರಿತು ಅಧ್ಯಯನವನ್ನು ಕೈಗೊಳ್ಳುತ್ತಿರುವ ವಿದ್ವಾಂಸರ ಮಿತಿಗಳು ಹಾಗೂ ಸವಾಲುಗಳಾಗಿವೆ. ಇದನ್ನು ವೈಜ್ಞಾನಿಕವಾಗಿ ಬಗೆಹರಿಸುವುದು ಹೇಗೆ? ಎಂಬ ತಿಣುಕಾಟದಲ್ಲಿ ಸಮಾಜಶಾಸ್ತ್ರಜ್ಞರು ಕಳೆದ ನೂರಾರು ವರ್ಷಗಳಿಂದ ಮಗ್ನರಾಗಿದ್ದಾರೆ. ಆದರೆ ಬೇರೆ ಬೇರೆ ಚಳವಳಿಗಳ ಭಾಗವಾಗಿ ಈ ಸಮಾಜದ ಕುರಿತು ಮಾತನಾಡುತ್ತಿರುವ ಭಾರತೀಯರಿಗೆ ಈ ಶಬ್ದವು ಈ ಮೇಲಿನ ಯಾವ ಸವಾಲುಗಳನ್ನೂ, ಗೊಂದಲಗಳನ್ನೂ ಮುಂದಿಡುವುದಿಲ್ಲ. ನಮ್ಮ ಸಮಾಜ ವಿಜ್ಞಾನದ ಸಿದ್ಧಾಂತಗಳು ಏನು ಹೇಳುತ್ತಿವೆ ಎಂಬುದು ಅವರಿಗೆ ಅರ್ಥವಾದಂತೇ ಭಾಸವಾಗುತ್ತದೆ, ಏಕೆಂದರೆ ಅದರಲ್ಲಿ ಅವರಿಗೆ ತೀರಾ ಪರಿಚಿತವಾದ ಎರಡು ಶಬ್ದಗಳು ಇವೆ, ಅವೆಂದರೆ ಜಾತಿ ಹಾಗೂ ವ್ಯವಸ್ಥೆ. ಆದರೆ ಶಬ್ದಗಳು ಬಿಡಿಬಿಡಿಯಾಗಿ ನಮಗೆ ಪರಿಚಿತವೇ ಹೊರತೂ ಅವುಗಳನ್ನು ಒಂದುಮಾಡಿ ರಚಿಸಲಾದ ಶಬ್ದಪುಂಜವಲ್ಲ. ನಮ್ಮಲ್ಲಿಲ್ಲದ ಈ ಹೊಸ ಶಬ್ದಪುಂಜವನ್ನೇಕೆ ಸೃಷ್ಟಿಸಿಕೊಂಡಿದ್ದೇವೆ ಎಂಬ ಪ್ರಶ್ನೆಯನ್ನು ಅವರು ಕೇಳಿಕೊಳ್ಳುವುದಿಲ್ಲ. ಹಾಗಾಗಿ ಅದು ನಮಗೆ ಪರಿಚಿತವಲ್ಲ ಎಂಬ ಸಂಗತಿಯ ಮೇಲೆ ಅವರ ಗಮನ ಹೋಗುವುದಿಲ್ಲ. ಇದೊಂದು ತುಂಬಾ ಸಲೀಸಾದ ಕೆಲಸ ಎಂಬಂತೆ ಯಾರೋ ಇದನ್ನು ಮಾಡಿ ಉಳಿದವರ ಮೇಲೆ ಹೇರಿ ನಡೆಸುತ್ತಿದ್ದಾರೆ ಎಂಬುದಾಗಿ ಅದರ ಸಾಧ್ಯಾಸಾಧ್ಯತೆಗಳ ಕುರಿತಾಗಿ ತಲೆ ಕೆಡಿಸಿಕೊಳ್ಳದೇ ಈ ಕಥೆಯನ್ನು ಹೇಳಲಾಗುತ್ತದೆ.