Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಜಾತ್ಯತೀತತೆ : ಅರ್ಥ ಗೊತ್ತಿಲ್ಲದ ಮೇಲೆ ಭಾಷಾಂತರ ಏನಾದರೇನಂತೆ?

ಜಾತ್ಯತೀತತೆ : ಅರ್ಥ ಗೊತ್ತಿಲ್ಲದ ಮೇಲೆ ಭಾಷಾಂತರ ಏನಾದರೇನಂತೆ?

by Rajaram Hegde
124 views

ಸೆಕ್ಯುಲರ್ ಎಂದರೆ ರಿಲಿಜನ್ನಿಗೆ ಹೊರತಾಗಿರುವುದು ಎಂದರ್ಥ. ಪ್ರಭುತ್ವವು ರಿಲಿಜನ್ನುಗಳಿಂದ ದೂರವಿರುವ ನೀತಿಯನ್ನು ಸೆಕ್ಯುಲರಿಸಂ ಎನ್ನಲಾಗುತ್ತದೆ. ಇದನ್ನೊಂದು ಆದರ್ಶ ಎಂಬುದಾಗಿ ನಂಬಿದ ಬ್ರಿಟಿಷರು ಭಾರತದಲ್ಲೂ ಈ ನೀತಿಯನ್ನು ಅಳವಡಿಸಿಕೊಂಡರು. ಭಾರತೀಯ ಸಂದರ್ಭದಲ್ಲಿ ಈ ನೀತಿಯು ಅನಾಹುತಗಳನ್ನು ಸೃಷ್ಟಿಸಿದೆಯೇ ವಿನಃ ಭಾರತೀಯರ ತಲೆಯೊಳಗೆ ಅದು ಇಳಿಯಲು ವಿಫಲವಾಗಿದೆ..

ರಿಲಿಜನ್ನಿಗೆ ಜಾತಿ ಎಂಬ ಭಾಷಾಂತರ ಕೂಡ ಸಾಧ್ಯವಿದೆಯೆ? ಹೌದು ಎಂಬುದು ನನ್ನ ಉತ್ತರ.  ನೀವೆಲ್ಲ ಜಾತ್ಯತೀತ ಎಂಬ ಶಬ್ದವನ್ನು ಪದೇ ಪದೇ ಕೇಳುತ್ತೀರಿ. ಭಾರತವು ಜಾತ್ಯತೀತ ರಾಷ್ಟ್ರ, ನಮ್ಮದು ಜಾತ್ಯತೀತ ಸರ್ಕಾರ, ಎನ್ನುತ್ತೇವೆ. ಜಾತ್ಯತೀತ ಪಕ್ಷಗಳೂ ಇಲ್ಲಿವೆ. ಹಾಗೆಂದರೇನು? ಎಂದು ಜನರನ್ನು ಪ್ರಶ್ನಿಸಿದರೆ ಬಹುತೇಕರಿಗೆ ಅರ್ಥ ಗೊತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಕೇಳಿದ ತಕ್ಷಣ ಶಬ್ದವನ್ನು ಹಿಡಿದುಕೊಂಡು ಅಂದಾಜುಮಾಡಲು ಪ್ರಾರಂಭಿಸುತ್ತಾರೆ. ಜಾತಿಭೇದವನ್ನು ಮಾಡದೇ ಇರುವುದು, ರಾಜಕೀಯದಲ್ಲಿ ಜಾತಿಯನ್ನು ತರದಿರುವುದು, ಹೀಗೆ ಅನೇಕ ಉತ್ತರಗಳು ಬಂದಿವೆ. ಆದರೆ ನಮ್ಮ ರಾಜಕೀಯ ಸಿದ್ಧಾಂತ ಹಾಗೂ ಆಚರಣೆಗಳ ರುಚಿಯನ್ನು ಅನುಭವಿಸಿದ ಯಾರಿಗೂ ಈ ನಿರೂಪಣೆಯು ಸತ್ಯವೆಂಬುದಾಗಿ ನಂಬಲು ಆಧಾರಗಳಿಲ್ಲ. ಈ ಶಬ್ದದ ನಿಜವಾದ ಅರ್ಥ ’ಸೆಕ್ಯುಲರ್’ ಅಂತ. ಸೆಕ್ಯುಲರ್ ಎಂದರೆ ’ರಿಲಿಜನ್ನಿಗೆ ಹೊರತಾಗಿರುವ’ ಎಂಬ ಅರ್ಥವಿದೆ. ರಿಲಿಜನ್ನನ್ನು ಜಾತಿ ಎಂಬುದಾಗಿ ಭಾಷಾಂತರಿಸಿದಾಗ ಮಾತ್ರವೇ ’ಜಾತ್ಯತೀತ’ ಎಂಬುದು ಸೆಕ್ಯುಲರ್ ಶಬ್ದದ ಭಾಷಾಂತರವಾಗಲು ಸಾಧ್ಯ. 

          ಸೆಕ್ಯುಲರ್ ಶಬ್ದಕ್ಕೆ ಧರ್ಮ ನಿರಪೇಕ್ಷ, ಸರ್ವಧರ್ಮ ಸಮಭಾವ ಇತ್ಯಾದಿ ಭಾಷಾಂತರಗಳನ್ನು ಕೂಡ ಪ್ರಯೋಗಿಸಲಾಗಿದೆ. ಏಕೋ ಅವು ಅಷ್ಟು ಪ್ರಚಲಿತದಲ್ಲಿ ಬಂದಿಲ್ಲ. ರಿಲಿಜನ್ ಶಬ್ದಕ್ಕೆ ’ಧರ್ಮ’ ಎಂಬ ಭಾಷಾಂತರವೇ ಪ್ರಚಲಿತದಲ್ಲಿ ಇದ್ದರೂ ಕೂಡ ಧರ್ಮ ಎಂಬ ಶಬ್ದವನ್ನಿಟ್ಟುಕೊಂಡು ’ಸೆಕ್ಯುಲರ್’ ಶಬ್ದದ ಭಾಷಾಂತರವನ್ನು ರೂಪಿಸಿದಾಗ ಅದು ಜನಪ್ರಿಯವಾಗುತ್ತಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಅಂದರೆ ಇವು ಯಾವವೂ ಅರ್ಥ ಗೊತ್ತಿದ್ದು ಬಳಸುವ ಶಬ್ದಗಳೇ ಅಲ್ಲ ಎಂದು ತೀರ್ಮಾನಿಸದೇ ಗತ್ಯಂತರವಿಲ್ಲ. ಧರ್ಮಕ್ಕೆ ಸತ್ಕಾರ್ಯ ಎಂಬ ಸಾಂಪ್ರದಾಯಿಕ ಅರ್ಥವನ್ನು ಇಟ್ಟುಕೊಂಡು ಬಳಸಿದರೆ ಈ ಶಬ್ದಗಳು ಆಘಾತಕಾರಿಯಾಗಿ ಕಾಣುತ್ತವೆ. ರಿಲಿಜನ್ನನ್ನು ಅವಲಂಬಿಸದಿರುವುದು, ಎಲ್ಲಾ ರಿಲಿಜನ್ನುಗಳನ್ನೂ ಸಮನಾಗಿ ನೋಡುವುದು ಎಂಬುದು ಈ ವಾಕ್ಯಗಳ ನಿಜವಾದ ಸಂದರ್ಭ. ಆದರೆ ಭಾರತೀಯ ಸಂಪ್ರದಾಯದಲ್ಲಿ ಬೆಳೆದವರಿಗೆ ಈ ಸಂದರ್ಭವು ಗೊತ್ತಿದ್ದರೂ ಈ ವಾಕ್ಯಗಳು ಅರ್ಥವಾಗುವುದಿಲ್ಲ ಎಂಬುದು ನಮ್ಮ ಅನುಭವ.

          ಏಕೆ ಅರ್ಥವಾಗುವುದಿಲ್ಲವೆಂದರೆ ರಿಲಿಜನ್ ಹಾಗೂ ಅದರ ಸಮಸ್ಯೆಗಳನ್ನು ಪರಿಹರಿಸಲೆಂದು ಪಶ್ಚಿಮದಲ್ಲಿ ಬೆಳೆದ ಪರಿಕಲ್ಪನೆಗಳು ನಮ್ಮ ಸಂಸ್ಕೃತಿಗೆ ಅಪರಿಚಿತ ಹಾಗೂ ಅಪ್ರಸ್ತುತವಾಗಿವೆ. ಸೆಕ್ಯುಲರಿಸಂ ಅಂಥದೊಂದು  ಪರಿಕಲ್ಪನೆ. ಸೆಕ್ಯುಲರಿಸಂ ಯುರೋಪಿನ ಪ್ರಭುತ್ವಗಳಿಗೆ ಏಕೆ ಅನಿವಾರ್ಯವಾಯಿತು ಎಂಬುದನ್ನು ಹಿಂದಿನ ಅಂಕಣವೊಂದರಲ್ಲಿ (ದಿಕ್ಕುಗೆಟ್ಟ ಧರ್ಮ) ಸಾಂದರ್ಭಿಕವಾಗಿ ತಿಳಿಸಿದ್ದೇನೆ. ಅಂದರೆ, ರಿಲಿಜನ್ನುಗಳ ಸತ್ಯ ಪ್ರತಿಪಾದನೆಯಲ್ಲಿ ಹಾಗೂ ಪೈಪೋಟಿಯಲ್ಲಿ ಪ್ರಭುತ್ವವು ಯಾರ ಪಕ್ಷವನ್ನೂ ವಹಿಸದೇ ತಟಸ್ಥವಾಗಿರುವ ನೀತಿಯೇ ಸೆಕ್ಯುಲರಿಸಂ. ಅಂಥ ಸೆಕ್ಯುಲರ್ ನೀತಿಯನ್ನು ಒಂದು ಆದರ್ಶ ಎಂಬುದಾಗಿ ಸ್ವೀಕರಿಸಿದ ಪಾಶ್ಚಾತ್ಯ ಪ್ರಭುತ್ವಗಳು ಅದು ಒಂದು ಸಾರ್ವತ್ರಿಕ ಆದರ್ಶವೆಂಬುದಾಗಿ ನಂಬಿಕೊಂಡಿದ್ದವು.

          ೧೮ನೆಯ ಶತಮಾನದ ಕೊನೆಯಲ್ಲಿ ಬ್ರಿಟಿಷರು ಕಲ್ಕತ್ತಾದಲ್ಲಿ ಕಂಪೆನಿ ಸರ್ಕಾರವನ್ನು ಸ್ಥಾಪಿಸಿದಾಗ ಭಾರತದಲ್ಲಿ ವಸಾಹತು ಪ್ರಭುತ್ವವು ಪ್ರಾರಂಭವಾಯಿತೆನ್ನಬಹುದು.  ಆಗ ಅವರು ಸೆಕ್ಯುಲರ್ ನೀತಿಯ ಆಧಾರದ ಮೇಲೆ ಆಡಳಿತವನ್ನು ರೂಪಿಸಿದರು. ಭಾರತದಲ್ಲಿ ಹಿಂದೂಯಿಸಂ, ಇಸ್ಲಾಂ ಇತ್ಯಾದಿ ರಿಲಿಜನ್ನುಗಳು ಇವೆ ಎಂಬುದಾಗಿ ಅವರು ಭಾವಿಸಿದ್ದರು. ಬುದ್ಧಿಸಂ, ಜೈನಿಸಂ, ಸಿಖ್ಖಿಸಂ, ಇತ್ಯಾದಿ ಇನ್ನೂ ಅನೇಕ ರಿಲಿಜನ್ನುಗಳು ಭಾರತದಲ್ಲಿ ಇವೆ ಎಂಬುದನ್ನೂ ಪಾಶ್ಚಾತ್ಯರು ಹತ್ತೊಂಭತ್ತನೆಯ ಶತಮಾನದಲ್ಲಿ ಕಂಡುಹಿಡಿದರು. ಈ ರಿಲಿಜನ್ನುಗಳು ಯಾವ  ಡಾಕ್ಟ್ರಿನ್ನುಗಳನ್ನು ಉಪದೇಶಿಸುತ್ತವೆಯೋ ಅದಕ್ಕನುಗುಣವಾಗಿಯೇ ಇವರೆಲ್ಲ ತಮ್ಮ ಆಚರಣೆಯನ್ನು ನಡೆಸುತ್ತಿದ್ದಾರೆ  ಎಂದು ಅವರು ನಂಬಿದ್ದರು. ಅಂಥ ಆಚರಣೆಗಳನ್ನು ನಿಷೇಧಿಸುವುದಾಗಲೀ, ಅವುಗಳಿಗೆ ವಿರುದ್ಧವಾದ ನೀತಿಗಳನ್ನು ರೂಪಿಸುವುದಾಗಲೀ ಸೆಕ್ಯುಲರ್ ಪ್ರಭುತ್ವಕ್ಕೆ ಸಾಧ್ಯವಿಲ್ಲ. ಏಕೆಂದರೆ ಹಾಗೆ ಮಾಡಿದಲ್ಲಿ  ಪ್ರಭುತ್ವದ ನಿರ್ಲಿಪ್ತತೆಗೆ ಭಂಗ ಬರುತ್ತದೆ ಹಾಗೂ ಅದು ರಿಲಿಜನ್ನುಗಳ ವಿಷಯದಲ್ಲಿ ಪಕ್ಷಪಾತೀ ಧೋರಣೆಯಾಗುತ್ತದೆ. 

           ಹಿಂದೂಗಳ ಡಾಕ್ಟ್ರಿನ್ನುಗಳನ್ನು ಹುಡುಕಿ ಹೊರಟ ಬ್ರಿಟಿಷರು ಕೊನೆಯಿರದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಹಿಂದೂಗಳ ಬಹುತೇಕ ಆಚರಣೆಗಳಿಗೆ ಇವರ ಧರ್ಮಗ್ರಂಥಗಳಲ್ಲಿ ಆಧಾರವೇ ಇಲ್ಲದಿರುವುದೂ ಗಮನಕ್ಕೆ ಬಂತು. ಆಚರಿಸುವವರು ಕೂಡ ತಾವು ತಮ್ಮ ಪೂರ್ವಜರ ಆಚರಣೆಗಳನ್ನು ಅನುಕರಿಸುತ್ತಿದ್ದೇವೆ ಎಂಬುದಾಗಿ ಹೇಳಿದರೇ ವಿನಃ ಡಾಕ್ಟ್ರಿನ್ನುಗಳ ಆಧಾರಗಳನ್ನು ನೀಡಲಿಲ್ಲ. ಹಾಗಾಗಿ ಅವೆಲ್ಲ ಮೂಢನಂಬಿಕೆಗಳೆಂಬುದಾಗಿ ಬ್ರಿಟಿಷರು ತೀರ್ಮಾನಿಸಿದರು. ತಾವು ನೋಡುತ್ತಿರುವ ಹಿಂದೂಯಿಸಂ ಬ್ರಾಹ್ಮಣ ಪುರೋಹಿತರಿಂದ ಭ್ರಷ್ಟವಾಗಿದೆಯೆಂದು ಅವರು ತರ್ಕಿಸಿದರು. ಶುದ್ಧವಾದ ಹಿಂದೂಧರ್ಮವನ್ನು ಮಾತ್ರವೇ ಮಾನ್ಯ ಮಾಡಬೇಕು. ಅಂಥ ಹುಸಿ ಆಚರಣೆಗಳನ್ನು ಅಮಾನ್ಯಗೊಳಿಸುವುದರಿಂದ ಸೆಕ್ಯುಲರ್ ಸಹಿಷ್ಣುತಾ ನೀತಿಗೇನೂ ಭಂಗ ಬರುವಂತೆ ಕಾಣಲಿಲ್ಲ.  ಹಾಗಾಗಿ ಬ್ರಿಟಿಷರು ಭಾರತೀಯ ಸಮಾಜದ ಸುಧಾರಣೆಗೆ ಚಾಲನೆ ನೀಡಿದರು.

          ಈ ಸಂದರ್ಭದಲ್ಲೇ ೧೮೫೭ರಲ್ಲಿ ಕಂಪನಿ ಆಡಳಿತದ ವಿರುದ್ಧ ಭಾರತೀಯರ ಸಂಗ್ರಾಮ ನಡೆಯಿತು. ಬ್ರಿಟಿಷರು ತಮ್ಮ ಸುಧಾರಣಾ ನೀತಿಗಳ ಮೂಲಕ ಭಾರತೀಯರ ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ, ಭಾರತೀಯರು ಅದಕ್ಕೆ ಪ್ರತಿಯಾಗಿ ದಂಗೆ ಎದ್ದಿದ್ದಾರೆ ಎಂಬುದಾಗಿ ಬ್ರಿಟನ್ನಿನಲ್ಲಿ ಟೀಕೆಗಳು ಬಂದವು. ಸೆಕ್ಯುಲರ್ ನೀತಿಗೆ ಬದ್ಧವಾದ ಬ್ರಿಟಿಷ್ ದೊರೆಗಳು ಇದನ್ನು ಗಂಭೀರವಾಗಿಯೇ ತೆಗೆದುಕೊಂಡರು. ಅವರಿಗೂ ಕೂಡ ಈ ಸುಧಾರಣೆಗಳು  ಹಸ್ತಕ್ಷೇಪವಾಗಿ ಪರಿಣಮಿಸಿ ತಮ್ಮ ಆಳ್ವಿಕೆಗೆ ಅಪಖ್ಯಾತಿ ಹಾಗೂ ಕುತ್ತು ಬರುವುದು ಬೇಕಿರಲಿಲ್ಲ. ೧೮೫೮ರಲ್ಲಿ ಕಂಪೆನಿಯ ಆಡಳಿತವನ್ನು ಕೊನೆಗೊಳಿಸಿ ವಿಕ್ಟೋರಿಯಾ ರಾಣಿಯು ಆಡಳಿತವು ಪ್ರಾರಂಭವಾಯಿತು.. ಆಗ ರಾಣಿಯು ತಾನಾಗಲೀ, ತನ್ನ ಆಡಳಿತಾಧಿಕಾರಿಗಳಾಗಲೀ ಭಾರತದ ಯಾವ ರಿಲಿಜನ್ನುಗಳಲ್ಲೂ ಹಸ್ತಕ್ಷೇಪ ನಡೆಸುವುದಿಲ್ಲವೆಂಬುದಾಗಿ ಘೋಷಣೆ ಹೊರಡಿಸಿದಳು. ೧೮೫೭ರ ನಂತರ ಭಾರತದ ಕುರಿತಂತೆ ಬ್ರಿಟಿಷ್ ಸೆಕ್ಯುಲರ್ ನೀತಿಯು ತನ್ನ ಹಳೆಯ ಜಾಡನ್ನು ಬಿಟ್ಟು ಹೊಸ ಆವಿಷ್ಕಾರಗಳನ್ನು ನಡೆಸಿತು. ಹಿಂದೂ, ಮುಸ್ಲಿಂ ರಿಲಿಜನ್ನುಗಳ ಪೂಜಾಸ್ಥಳಗಳನ್ನು ಹಾಗೂ ಸಂಪ್ರದಾಯಗಳನ್ನು ಸಮಾನವಾಗಿ ಪೋಷಿಸುವ ಕಾನೂನುಗಳನ್ನು ರೂಪಿಸಲಾಯಿತು. ಭಾರತದಲ್ಲಿನ ಬ್ರಿಟಿಷ್ ರಾಜಕೀಯಕ್ಕೆ ರಿಲಿಜನ್ನು ಸೂಕ್ಷ್ಮವಾದ ಹಾಗೂ ನಿರ್ಣಾಯಕವಾದ ವಿಚಾರವಾಗಿ ಪರಿಣಮಿಸಿತು.

          ಇದರ ಪರಿಣಾಮವಾಗಿ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಭಾರತದ ವಿಭಿನ್ನ ರಿಲಿಜನ್ನುಗಳ ಹಿತಾಸಕ್ತಿಯ ರಕ್ಷಣೆಗಾಗಿ ಹೋರಾಟದ ಗುಂಪುಗಳು ಹುಟ್ಟಿಕೊಂಡವು. ಇಲ್ಲಿನ ಬಹುಸಂಖ್ಯಾತರ ರಿಲಿಜನ್ನು ಹಿಂದೂಯಿಸಂ ಎಂಬುದಾಗಿ ಎಲ್ಲರೂ ಒಪ್ಪಿಕೊಂಡಿದ್ದರು. ಈ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರಾದ ಮುಸ್ಲಿಮರ ಹಿತಕ್ಕೆ ಧಕ್ಕೆ ಬರಬಹುದೆಂಬುದಾಗಿ ಮುಸ್ಲಿಂ ಮುಂದಾಳುಗಳು ಸೆಕ್ಯುಲರ್ ನೀತಿಯನ್ನಾಶ್ರಯಿಸಿ ಬಂದೋಬಸ್ತು ಮಾಡಿಕೊಳ್ಳತೊಡಗಿದರು.  ಬ್ರಿಟಿಷರು ಕೂಡ ಮುಸ್ಲಿಮರ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಪ್ರತ್ಯೇಕ ಮತಕ್ಷೇತ್ರಗಳಂಥ ನಡಾವಳಿಗಳನ್ನು ಅಂಗೀಕರಿಸಿದರು. ಹಿಂದೂಗಳು ಹಿಂದೂ ಮಹಾಸಭಾ, ಆರ್.ಎಸ್. ಎಸ್ ಗಳನ್ನು ಹುಟ್ಟುಹಾಕಿಕೊಂಡು ಹಿಂದೂ ಹಿತಾಸಕ್ತಿಗಾಗಿ ಹೋರಾಡಿದರು. ಭಾರತದ ವಿಭಜನೆಗೂ, ನಂತರ ಹುಟ್ಟಿದ ಪ್ರಭುತ್ವಗಳಲ್ಲಿ ಬಹುಸಂಖ್ಯಾತ-ಅಲ್ಪಸಂಖ್ಯಾತ ರಿಲಿಜನ್ನುಗಳ ಸ್ಥಾನಮಾನಗಳ ಕುರಿತ ಚರ್ಚೆಗೂ, ಹಿಂಸಾಕಾಂಡಗಳಿಗೂ ಆಧಾರವಾಗಿ ಈ ಸೆಕ್ಯುಲರ್ ರಾಜಕೀಯದ ಪರಂಪರೆಯಿದೆ. 

          ಇಂಥ ಪ್ರಯೋಗಗಳ ಫಲಶ್ರುತಿಯೇನು? ಬ್ರಿಟಿಷರ ಸೆಕ್ಯುಲರ್ ಪ್ರಯೋಗಗಳು ಇಂದು ಒಡೆದು ಆಳುವ ನೀತಿ ಎಂಬ ತಪ್ಪು ಹಣೆಪಟ್ಟಿಯನ್ನು ಹಚ್ಚಿಕೊಂಡು ಕುಪ್ರಸಿದ್ಧವಾಗಿವೆ.  ಇಂಥ ಸೆಕ್ಯುಲರ್ ನೀತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಹುಟ್ಟಿದ ರಾಜಕೀಯ ಗುಂಪುಗಳನ್ನು ಕೋಮುವಾದಿಗಳು, ಮುಸ್ಲಿಂ ಪ್ರತ್ಯೇಕತಾವಾದಿಗಳು, ಹಿಂದೂ ಮೂಲಭೂತವಾದಿಗಳು ಎಂಬುದಾಗಿ ನಕಾರಾತ್ಮಕವಾಗಿಯೇ ನೋಡುತ್ತೇವೆ. ಹಾಗೂ ಅವು ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಮುದಾಯದ ಶಾಂತಿಯನ್ನು ಕದಡುವಲ್ಲಿ. ಕಾನೂನು-ಸುವ್ಯವಸ್ಥೆಗೆ ಸವಾಲುಗಳನ್ನು ಸೃಷ್ಟಿಸುವಲ್ಲಿ ಅತ್ಯಂತ ಪ್ರಧಾನ ಪಾತ್ರವಹಿಸಿವೆ. ಅದಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಈ ಉದಾತ್ತ ನೀತಿಯ ಫಲವಾಗಿ ರಿಲಿಜನ್ನಿನ ಆಧಾರದ ಮೇಲೆ ದೇಶದ ವಿಭಜನೆಯಾಗಿ ಲಕ್ಷಾಂತರ ಭಾರತೀಯರು ಹಿಂದೂ-ಮುಸ್ಲಿಂ ಎಂಬ ಹೆಸರಿನಲ್ಲಿ ಹತ್ಯೆಗೊಳಗಾದರು. ಇವೆಲ್ಲವೂ ನಮಗೆ ಸೆಕ್ಯುಲರ್ ರಾಜನೈತಿಕ ಪ್ರಯೋಗಗಳಾಗಿ ಕಾಣಿಸುವ ಬದಲು ದುಃಸ್ವಪ್ನಗಳಾಗಿ ಕಾಡುತ್ತಿವೆ ಎಂಬುದೇ  ಸೆಕ್ಯುಲರಿಸಂನ ದೊಡ್ಡ ವ್ಯಂಗ್ಯ

          ಇಂಥ ಹಿಂಸಾಕಾಂಡವು ಬ್ರಿಟಿಷರ ಸೆಕ್ಯುಲರ್ ರಾಜಕೀಯದ ಫಲ ಎಂಬುದನ್ನು ಗುರುತಿಸಲು ನೆಹರೂ ಆಡಳಿತವು ವಿಫಲವಾಯಿತು. ಬದಲಾಗಿ ಅದನ್ನು ಧಾರ್ಮಿಕ ಮೂಲಭೂತವಾದ, ಕೋಮುವಾದ ಎಂದೆಲ್ಲ ವರ್ಣಿಸಲಾಯಿತು. ರಾಜಕೀಯವನ್ನು ಧಾರ್ಮಿಕ ಸಂಸ್ಥೆ ಹಾಗೂ ಆಚರಣೆಗಳಿಂದ ರಕ್ಷಿಸುವ ಪಣ ತೊಡಲಾಯಿತು.   ಧರ್ಮವು ಪ್ರತಿಗಾಮಿ ಶಕ್ತಿ, ಅದು ರಾಜಕೀಯವನ್ನು ಹಾಳುಮಾಡುತ್ತದೆ, ಸಮುದಾಯಗಳನ್ನು ಒಡೆಯುತ್ತದೆ, ಹಿಂಸೆಯನ್ನು ಹುಟ್ಟಿಸುತ್ತದೆ, ಇತ್ಯಾದಿ ಅಭಿಪ್ರಾಯಗಳು ನೆಹರೂ ಸೆಕ್ಯುಲರಿಸಂನ ಆಧಾರ ವಾಕ್ಯಗಳಾದವು. ಜೊತೆಗೇ ಧಾರ್ಮಿಕ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರ ಹದ್ದಿನ ಕಣ್ಣುಗಳಿಂದ ರಕ್ಷಿಸುವ ಮತ್ತಷ್ಟು ಕಾಯ್ದೆಗಳೂ, ಅವರನ್ನು ಓಲೈಸುವ ತಂತ್ರಗಳೂ ರಚನೆಯಾದವು. ಆದರೆ ನೆಹರೂ ಸೆಕ್ಯುಲರಿಸಂಗೆ ಪ್ರತಿಫಲವಾಗಿ ಎಂಭತ್ತರ ದಶಕದಿಂದ ಭಾರತವು ಹಿಂದೆಂದೂ ಕಂಡರಿಯದ ಕೋಮು ಗಲಭೆಗಳು ಹಾಗೂ ಹಿಂಸಾಕಾಂಡಗಳನ್ನು ಕಂಡಿತು. ಅಂದರೆ ಸೆಕ್ಯುಲರ್ ಆದರ್ಶವನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಷ್ಟೂ ಅದು ನಮ್ಮ ಸಮಾಜದಲ್ಲಿ ಹಿಂಸೆಯನ್ನು ಹೆಚ್ಚಿಸುತ್ತಿದೆ ಎಂಬುದು ಇತಿಹಾಸದಿಂದ ನಿದರ್ಶಿತವಾಗಿದೆ.

          ದುರಾದೃಷ್ಟವೆಂದರೆ, ಭಾರತೀಯರ ಜೀವನದಲ್ಲಿ ಇಷ್ಟೆಲ್ಲಾ ತುಮುಲವನ್ನು ಹುಟ್ಟುಹಾಕಿದ ಈ ಸೆಕ್ಯುಲರಿಸಂ ಏನು ಎಂಬುದು ಇಂದು ಕೂಡ ಅದನ್ನು ಬಳಸುವವರಿಗೆ ಸ್ಪಷ್ಟವಿಲ್ಲ. ದೇಶೀ ಭಾಷೆಗಳ ಭಾಷಾಂತರದಲ್ಲಿ ಈ ಅಜ್ಞಾನ ಸ್ಪಷ್ಟವಾಗಿದೆ. ನಾನು ಕೇವಲ ಭಾಷಾಂತರದ ಬಗ್ಗೆ ಹೇಳುತ್ತಿಲ್ಲ. ಜಾತ್ಯತೀತ, ಸರ್ವಧರ್ಮ ಸಮಭಾವ ಇತ್ಯಾದಿಗಳೆಲ್ಲ ಸೆಕ್ಯುಲರಿಸಂ ಶಬ್ದದ ಭಾಷಾಂತರಗಳು ಎಂಬುದನ್ನು ತಿಳಿದಿರುವ  ಜನರ ಕುರಿತೇ ಹೇಳುತ್ತಿದ್ದೇನೆ. ಈ ವಿಷಯದಲ್ಲಿ ಉದ್ದಾಮ ಪಂಡಿತರಿಗೂ ಕೂಡ ಅದು ಸ್ಪಷ್ಟವಿಲ್ಲ.  ಅವರು ಸೆಕ್ಯುಲರಿಸಂಗೆ ಭಾರತದಲ್ಲಿ ಬೇರೆಯದೇ ಏನೋ ದೇಶೀ ಅರ್ಥವಿರಬೇಕು ಎಂದು ಹುಡುಕುತ್ತಿದ್ದಾರೆ, ಆ ಅರ್ಥ  ಗೊತ್ತಾಗಿದೆ  ಎನ್ನುವವರೂ ಕೂಡ  ಅದು ಏನು ಎಂಬುದನ್ನು ಇನ್ನೂ ಗುಟ್ಟಾಗಿಯೇ ಇಟ್ಟಿದ್ದಾರೆ. ಭಾರತದಲ್ಲಿ ಸೆಕ್ಯುಲರಿಸಂ ಇನ್ನೂ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲದಿರುವುದರಿಂದ ಈ ಅವಸ್ಥೆ ಬಂದಿದೆ ಎಂದೂ ಅನ್ನುವವರಿದ್ದಾರೆ. ಅರ್ಧಂಬರ್ಧ ಅನುಷ್ಠಾನದಿಂದಲೇ ಇಷ್ಟೆಲ್ಲ ಅನಾಹುತಗಳಾಗಿರುವಾಗ ಅದರ ಪರಿಪೂರ್ಣ ಅನುಷ್ಠಾನದಿಂದ ಏನಾಗಬಹುದು ಎಂಬುದನ್ನು ನಿಮ್ಮ ಊಹೆಗೇ ಬಿಟ್ಟಿದ್ದೇನೆ. 

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp