Home ವಸಾಹತು ಪ್ರಜ್ಞೆಬುದ್ಧಿಜೀವಿಗಳ ಮೂಢನಂಬಿಕೆಗಳು ಪರೋಪಜೀವನದ ಪಾಲಾಗುತ್ತಿರುವ ಭಾರತೀಯ ಪ್ರಭುತ್ವ

ಪರೋಪಜೀವನದ ಪಾಲಾಗುತ್ತಿರುವ ಭಾರತೀಯ ಪ್ರಭುತ್ವ

by Rajaram Hegde
30 views

ಭಾರತೀಯ ಪ್ರಭುತ್ವದ ಸಂಸ್ಥೆಗಳನ್ನು ಪಾಶ್ಚಾತ್ಯ ಆದರ್ಶಗಳನ್ನು ಇಟ್ಟುಕೊಂಡು ರಚಿಸಲಾಗಿದೆ. ಆದರೆ ತಲೆಮಾರಿನಿಂದ ತಲೆಮಾರಿಗೆ ಅವುಗಳ ಗುಣಮಟ್ಟವು ಕುಸಿಯುತ್ತಿದೆ. ಅಂದರೆ ಅವುಗಳ ಧ್ಯೇಯಾದರ್ಶಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಾಗೂ ಆಚರಿಸುವಲ್ಲಿ ಅವುಗಳನ್ನು ನಡೆಸುವವರು ವಿಫಲರಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಈ ಸಂಸ್ಥೆಗಳ ತುಂಬೆಲ್ಲ ಪರೋಪಜೀವಿಗಳ ಒಂದು ವರ್ಗವು ತುಂಬಿಕೊಂಡು ಅವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಈ ಸಂಸ್ಥೆಗಳ ಧ್ಯೇಯಾದರ್ಶಗಳ ಹೆಸರಿನಲ್ಲೇ ಅವುಗಳ ಸಂಪನ್ಮೂಲವನ್ನು ಹೀರಿ ತನ್ನ ಸ್ವಾರ್ಥಸಾಧನೆ ಮಾಡಿಕೊಳ್ಳುವ ಕೆಲಸದಲ್ಲಿ  ಅದು ನಿರತವಾಗಿದೆ. ಹಾಗೂ ಇಂಥ ಸಂಸ್ಥೆಗಳ ಸತ್ವವನ್ನು ಹೀರಿ ಶಿಥಿಲಗೊಳಿಸುತ್ತಿದೆ.

ನಮ್ಮ ಆಧುನಿಕ ಭಾರತೀಯ ಪ್ರಭುತ್ವವನ್ನು ಗಮನಿಸಿದಾಗ ಸಾಮಾನ್ಯವಾಗಿ ಕಂಡುಬರುವ ಸಂಗತಿಯೊಂದಿದೆ. ಅದೆಂದರೆ ದಿನದಿಂದ ದಿನಕ್ಕೆ ಅದರ ಸಂಸ್ಥೆಗಳ ಗುಣಮಟ್ಟದಲ್ಲಿ ಆಗುತ್ತಿರುವ ಅಧೋಗತಿ. ಈ ಸಾಮಾನ್ಯ ಸಂಗತಿಯನ್ನು ಗುರುತಿಸಲಿಕ್ಕೆ ಸಂಶೋಧನೆ ಮಾಡಬೇಕಿಲ್ಲ. ಪ್ರತೀ ತಲೆಮಾರಿಗೂ ’ಹಿಂದಿನವರೇ ವಾಸಿ’ ಎನಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಈಗೊಂದು ಐವತ್ತು ವರ್ಷದ ಹಿಂದೆ ಇದ್ದ ಶಿಕ್ಷಕರಿಗೆ ಹೋಲಿಸಿದರೆ ಈಗಿನ ಶಿಕ್ಷಕರು ಅವರ ಮಟ್ಟಕ್ಕೆ ಏರಲಾರರು. ಸಂಶೋಧನೆಯ ಕ್ಷೇತ್ರದಲ್ಲಿ ಈಗ ಐವತ್ತು ವರ್ಷದ ಹಿಂದಿದ್ದ ವಿದ್ವತ್ತು ಈಗ ಕಾಣೆಯಾಗಿದೆ. ಶಿಕ್ಷಣ ಸಂಸ್ಥೆಗಳು ಕೂಡ ಅಷ್ಟೆ, ಹಣ ಹಡೆಯುವ ಹಾಗೂ ಪದವೀಧರರನ್ನು ಉತ್ಪಾದಿಸುವ ಫ್ಯಾಕ್ಟರಿಗಳಾಗುತ್ತಿವೆ. ಜಾತಿ ಜಗಳಗಳ ಕಣಗಳಾಗುತ್ತಿವೆ. ಸಂಶೋಧನೆಗಾಗಿ ಕೋಟಿ ಕೋಟಿ ಹಣವನ್ನು ಸರ್ಕಾರವು ವೆಚ್ಚಮಾಡುತ್ತಿದೆ. ಆದರೆ ಐವತ್ತು ವರ್ಷದ ಹಿಂದೆ ಬಿಡಿಗಾಸನ್ನೂ ತೆಗೆದುಕೊಳ್ಳದೇ ನಡೆಸಿದ ಸಂಶೋಧನೆಗಳಿಂದ ಹೊರಟಷ್ಟೂ ಫಲಿತಾಂಶ ಇವುಗಳಿಂದ ಹೊರಡುತ್ತಿಲ್ಲ. ಇಂದು  ವಿದ್ವತ್ಪೂರ್ಣ ಗ್ರಂಥಗಳನ್ನು ಬರೆಯುವವರೂ, ಓದುವವರೂ ಕಾಣೆಯಾಗುತ್ತಿದ್ದಾರೆ. ಶಿಕ್ಷಕರೇ ಟಿಪ್ಪಣಿಗಳನ್ನು ಓದಿಕೊಂಡು ಪಾಠಮಾಡುವುದರಿಂದ ಆಯಾ ಕ್ಷೇತ್ರದಲ್ಲಿನ ಜ್ಞಾನ ಹಾಗೂ ಜಿಜ್ಞಾಸೆಗಳ ಉಸಿರು ಕ್ಷೀಣವಾಗುತ್ತ ಸಾಗಿದೆ.

               ಇದು ಕೇವಲ ಶಿಕ್ಷಣ ಕ್ಷೇತ್ರಕ್ಕೊಂದೇ ಸೀಮಿತವಲ್ಲ. ಆಧುನಿಕ ಪ್ರಭುತ್ವದ ಕಾರ್ಯಕ್ರಮದಡಿ ಪೋಷಣೆಗೊಂಡ ಯಾವುದೇ ವ್ಯವಸ್ಥೆಯನ್ನು ತೆಗೆದುಕೊಳ್ಳಿ ಅಲ್ಲಿ ಈ ಅವನತಿ ಸ್ಪಷ್ಟವಾಗಿ ಕಾಣುತ್ತಿರುತ್ತದೆ. ನ್ಯಾಯಾಲಯ ಕ್ಷೇತ್ರದಲ್ಲಿ ಯಾವುದಾದರೂ ಹಳೆಯ ನ್ಯಾಯಾಧೀಶರನ್ನು, ವಿಚಾರಿಸಿ ನೋಡಿ. ಅವರು ಇಂದಿನ ವಕೀಲರು ಕಾನೂನುಗಳನ್ನು ಹಾಗೂ ಆ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು  ತಿಳಿದುಕೊಳ್ಳುವ ಆಸಕ್ತಿ ಹಾಗೂ ಅರ್ಹತೆಗಳನ್ನೇ ಹೊಂದಿಲ್ಲ ಎನ್ನುತ್ತಾರೆ. ಮತ್ತೊಂದೆಡೆ, ತಾವು ಮಾಡಿದ  ವಾದಗಳು ಹೊಸತಲೆಮಾರಿನ ನ್ಯಾಯಾಧೀಶರಿಗೆ ಅರ್ಥವೇ ಆಗುವುದಿಲ್ಲ ಎಂದು ಸ್ವಲ್ಪ ಆಳವಾಗಿ ತಿಳಿದುಕೊಂಡ ಹಳೆಯ ವಕೀಲರು ಗೋಳಾಡುತ್ತಾರೆ. ಒಟ್ಟಿನಲ್ಲಿ ನ್ಯಾಯಾಲಯ ವ್ಯವಸ್ಥೆ ಗಬ್ಬೆದ್ದುಹೋಗಿದೆ ಎಂಬುದು ಇಂಥವರ ಅಂಬೋಣ. ಅದನ್ನು ಬಿಟ್ಟು ರಾಜಕೀಯ ಕ್ಷೇತ್ರಕ್ಕೆ ಬನ್ನಿ. ಅಲ್ಲೂ  ಹಳಬರದು ಅದೇ ಗೋಳಾಟ: ಬಹುತೇಕ ರಾಜಕಾರಣಿಗಳು ನಮ್ಮ ಸಂವಿಧಾನವನ್ನಾಗಲೀ, ಕಾನೂನು ಹಾಗೂ ನೀತಿ ಸಂಹಿತೆಗಳನ್ನಾಗಲೀ ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿದಂತೆ ಕಾಣುವುದಿಲ್ಲ; ರಾಜಕೀಯವನ್ನೊಂದು ಅಧಿಕಾರ ಹಿಡಿಯುವ ಹಾಗೂ ಹಣ ಮಾಡುವ ಕಲೆಯನ್ನಾಗಿ ಮಾರ್ಪಡಿಸಲಾಗಿದೆ; ದಿನದಿಂದ ದಿನಕ್ಕೆ ಅಪರಾಧೀ ಹಿನ್ನೆಲೆಯನ್ನು ಹೊಂದಿರುವವರ ಸಂಖ್ಯೆ ರಾಜಕೀಯದಲ್ಲಿ ಹೆಚ್ಚಾಗುತ್ತಿದೆ; ಇತ್ಯಾದಿ.

               ನಮ್ಮ ಆಧುನಿಕ ಸಂಸ್ಥೆಗಳ ಧ್ಯೇಯಾದರ್ಶಗಳನ್ನು ನಾಶಪಡಿಸುವ ಪ್ರಕ್ರಿಯೆಯು ಈ ರೀತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವಾಗ ಈ ಸಂಸ್ಥೆಗಳು ಮತ್ತೆ ಹೇಗೆ ಉಳಿದುಕೊಂಡಿವೆ? ಸಮಾಜಕ್ಕೆ ಅವು ಏನನ್ನು ನೀಡುತ್ತಿವೆ?ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ನಮ್ಮ ಪ್ರಭುತ್ವದ ಧ್ಯೇಯೋದ್ದೇಶ, ಸಂಪನ್ಮೂಲಗಳು ಹಾಗೂ ಅಧಿಕಾರಗಳು ಅವುಗಳನ್ನು ಉಳಿಸುತ್ತಿರುವ ಶಕ್ತಿ. ಪ್ರಭುತ್ವದ ಧ್ಯೇಯಾದರ್ಶಗಳ ಹೆಸರಿನಲ್ಲಿಯೇ ಇವೆಲ್ಲ ನಡೆಯುತ್ತಿವೆ ಎಂಬುದು ಗಮನಾರ್ಹ. ಅಂದರೆ ಮಾತುಗಳಲ್ಲಿ ಹಾಗೂ ಕಾಗದದ ಮೇಲೆ ಧ್ಯೇಯಾದರ್ಶಗಳೇ ಇರುತ್ತವೆ. ಆದರೆ ಇವುಗಳ ಹೆಸರಿನಲ್ಲಿ ಬೇರೇನೋ ನಡೆಯುತ್ತಿದೆ. ಈ ಸಂಸ್ಥೆಗಳನ್ನು ನಡೆಸುವವರು ತಮಗೆ ಏನು ಬೇಕೋ ಅದನ್ನು ಯಾವುದೇ ಎಗ್ಗಿಲ್ಲದೇ ಮಾಡಿಕೊಳ್ಳುತ್ತಿದ್ದಾರೆ. ಅದರ ಪರಿಣಾಮವಾಗಿ ಈ ಸಂಸ್ಥೆಗಳ ಧ್ಯೇಯಾದರ್ಶಗಳು ದಿಕ್ಕು ತಪ್ಪಿವೆ.

               ಉದಾಹರಣೆಗೆ ಶಿಕ್ಷಣ ಎಂದರೆ ಇಂದು ಪದವಿಯನ್ನು ಪಡೆಯುವುದು. ಗುಣಮಟ್ಟ ಎಂದರೆ ಹೆಚ್ಚು ಮಾರ್ಕುಗಳನ್ನು ತೆಗೆದುಕೊಳ್ಳುವುದು. ಇಂಥ ಪದವಿಗಳನ್ನು ಪಡೆದವರು ಒಳ್ಳೆಯ ನೌಕರಿಗಳನ್ನು ಹಿಡಿಯುವುದೇ ಶಿಕ್ಷಣದ ಗುಣಮಟ್ಟಕ್ಕೆ ಪ್ರಮಾಣವಾಗುತ್ತದೆ. ಶಿಕ್ಷಣ ಸಂಸ್ಥೆಗಳು ಉತ್ತಮ ಫಲಿತಾಂಶ ಹಾಗೂ ಪರ್ಸೆಂಟೇಜುಗಳ ಸ್ಪರ್ಧೆಗಿಳಿದಿವೆ. ವಿಶ್ವವಿದ್ಯಾಲಯಗಳು ಪೈಪೋಟಿಯ ಮೇಲೆ ಪದವಿಗಳ ಹಾಗೂ ಮಾರ್ಕುಗಳ ಸುರಿಮಳೆಗೈಯುತ್ತಿವೆ. ಇಂಥ ಪದವೀಧರರು ಸರ್ಕಾರೀ ಸಂಸ್ಥೆಗಳನ್ನು ಬಿಟ್ಟು ಖಾಸಗಿ ಸಂಸ್ಥೆಗಳಿಗೆ ಹೋದರೆ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಸರ್ಕಾರೀ ಸಂಸ್ಥೆಗಳಲ್ಲಿ ಹಣ, ಪ್ರಭಾವ, ರಾಜಕೀಯ ಗುಂಪುಗಾರಿಕೆ, ನಕಲಿ ಪ್ರಮಾಣ ಪತ್ರಗಳು, ಇತ್ಯಾದಿಗಳ ಇತ್ಯಾದಿಗಳ ಮೂಲಕ ಅವರು ನೌಕರಿ ಗಿಟ್ಟಿಸಿಕೊಂಡು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಕಲಿಸುವ ಮನಸ್ಸು ಹಾಗೂ ಅರ್ಹತೆ ಇಲ್ಲದವರು ಅವರಿಗೆ ಬೇಕಾಬಿಟ್ಟಿಯಾಗಿ ಮಾರ್ಕುಗಳನ್ನು ನೀಡಿ ಜನಪ್ರಿಯತೆ ಗಳಿಸಿಕೊಳ್ಳುತ್ತಾರೆ. ಜ್ಞಾನವಿಲ್ಲದವರು ಹಣ, ವಶೀಲಿಯ ಮೂಲಕ ಸಿಗಬೇಕಾದ ಭಡ್ತಿಗಳನ್ನು ಪಡೆದುಕೊಳ್ಳುತ್ತಾರೆ. ಜಾತೀಯತೆ ಹಾಗೂ ಗುಂಪುಗಾರಿಕೆಗಳು ಇಂಥವರ ಅಸ್ತಿತ್ವಕ್ಕೆ ಅನಿವಾರ್ಯವಾಗಿವೆ. 

               ಈ ಮೇಲಿನ ಬೆಳವಣಿಗೆಗೆ ಒಂದು ವಿನ್ಯಾಸವಿದೆ ಹಾಗೂ ವೈಶಿಷ್ಟ್ಯತೆಯಿದೆ. ಇದು ಭಾರತೀಯ ಪ್ರಭುತ್ವದ ಸಂಸ್ಥೆಗಳ ಗತಿಯಾಗಿದೆ. ಭಾರತದ ಸ್ವತಂತ್ರ ಪ್ರಭುತ್ವವು ರಚನೆಯಾದಾಗಿನಿಂದ ಅದರೊಳಗೆ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಸ್ವಾತಂತ್ರ್ಯ ಬಂದಾಗ ವಸಾಹತು ಪ್ರಭುತ್ವವನ್ನು ಮಾದರಿಯಾಗಿಟ್ಟುಕೊಂಡು  ಭಾರತಕ್ಕೆ ಇಂದಿನ ಪ್ರಭುತ್ವದ ರೂಪುರೇಷೆಗಳನ್ನು ನೀಡಲಾಯಿತು. ಪ್ರಭುತ್ವದ ಕುರಿತು ಐರೋಪ್ಯರು ಯಾವ ಪರಿಕಲ್ಪನೆಗಳನ್ನು ಬೆಳೆಸಿಕೊಂಡಿದ್ದರೋ ಅವು ವಸಾಹತು ಪ್ರಭುತ್ವಕ್ಕೆ ಬೆನ್ನೆಲುಬಾಗಿದ್ದವು. ಭಾರತೀಯ ಪ್ರಭುತ್ವದಲ್ಲಿ ಸ್ವಾತಂತ್ರ್ಯ, ಸಮಾನತೆ, ಮಾನವ ಹಕ್ಕು ಇತ್ಯಾದಿ ಪಾಶ್ಚಾತ್ಯ ಮೌಲ್ಯಗಳನ್ನು ಆದರ್ಶವಾಗಿಟ್ಟುಕೊಂಡು, ಪ್ರಜಾಪ್ರಭುತ್ವ, ಕಾನೂನು, ನ್ಯಾಯ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಇತ್ಯಾದಿಗಳನ್ನು ಯೋಜಿಸಲಾಯಿತು. ಈ ವ್ಯವಸ್ಥೆಗೆ ಆಧಾರಭೂತವಾಗಿ ಪಾಶ್ಚಾತ್ಯ ಸಮಾಜ ವಿಜ್ಞಾನದ ಸಿದ್ಧಾಂತಗಳು ಇದ್ದವು. ವಸಾಹತು ಕಾಲದಲ್ಲಿ ಸುಮಾರು ನೂರು ವರ್ಷಗಳ ವರೆಗೆ ಬ್ರಿಟಿಷರು ಮನುಷ್ಯ ಸಮಾಜಗಳ ಹಾಗೂ ಭಾರತೀಯರ ಕುರಿತ ಜ್ಞಾನವನ್ನು ಆಧುನಿಕ ಶಿಕ್ಷಣದ ಸಂಸ್ಥೆಗಳ ಸಂಶೋಧನೆಗಳ ಮೂಲಕ ಕಟ್ಟಿಕೊಂಡಿದ್ದರು ಹಾಗೂ ವಿದ್ಯಾವಂತರಿಗೆ ದಾಟಿಸಿದ್ದರು. ಇಂಥ ವಿದ್ಯಾವಂತರು ಸ್ವತಂತ್ರ ಭಾರತಕ್ಕೆ ಬುನಾದಿ ಹಾಕಿದರು ಹಾಗೂ ತಮ್ಮ ವಸಾಹತು ವಾರಸುದಾರಿಕೆಯನ್ನು ಮುಂದುವರಿಸಿದರು.

               ಈ ವಾರಸುದಾರಿಕೆಯು ಪ್ರಾರಂಭದ ದಿನಗಳಲ್ಲಿ ವಸಾಹತು ಸಂಸ್ಥೆಗಳ ಆದರ್ಶಗಳಿಗೆ ಆದಷ್ಟೂ ಹತ್ತಿರದಲ್ಲಿತ್ತು. ಆದರೆ ಕ್ರಮೇಣ ಮೂಲ ಧ್ಯೇಯಗಳಿಂದ ದೂರಾಗುತ್ತಾ ಬಂದಿತು. ಈ ಮೂಲ ಧ್ಯೇಯಗಳನ್ನೇ ಹೆಸರಿಗೆ ಮಾತ್ರ ಇಟ್ಟುಕೊಂಡು ಅದೇ ಚೌಕಟ್ಟಿನೊಳಗೇ ಭಾರತೀಯರು ಬೇರೇನನ್ನೋ ನಡೆಸತೊಡಗಿದರು. ಈ ಸಂಸ್ಥೆಗಳ ಧ್ಯೇಯಾದರ್ಶಗಳು, ಅವುಗಳಿಗೆ ಆಧಾರಭೂತವಾದ ಸಿದ್ಧಾಂತಗಳು ಹಾಗೂ ಕಾರ್ಯಕ್ರಮಗಳು ಜನರ ಸ್ಮೃತಿ ಪಟಲದಿಂದ ಮರೆಯಾಗತೊಡಗಿ ಅಪ್ರಸ್ತುತವಾಗತೊಡಗಿದವು. ಆದರೆ ಈ ವಸಾಹತು ರಚನೆಗಳು ಭೌತಿಕವಾಗಿ  ಹಾಗೇ ಉಳಿದುಕೊಂಡವು, ಆದರೆ ಒಳಗಿನಿಂದ ಶಿಥಿಲವಾಗತೊಡಗಿದವು. ಈ ಪ್ರಕ್ರಿಯೆಯನ್ನು ಹೇಗೆ ಚಿತ್ರಿಸಬೇಕೆನ್ನುವುದೊಂದು ಸವಾಲು. ನಾನು ನೀಡಬಯಸುವ ಚಿತ್ರಣವು ಈ ಕೆಳಗಿನಂತಿದೆ:

               ನಾನು ಈ ಆಧುನಿಕ ಪ್ರಭುತ್ವದ ಸಂಸ್ಥೆಗಳನ್ನು ಶಿಥಿಲಗೊಳಿಸುತ್ತಿರುವ ವ್ಯಕ್ತಿಗಳನ್ನು ಹಾಗೂ ಗುಂಪುಗಳನ್ನು ಪರೋಪಜೀವಿಗಳು ಅಥವಾ ಬದನಿಕೆಗಳಿಗೆ ಹೋಲಿಸುತ್ತೇನೆ. ಒಂದು ಆರೋಗ್ಯಕರ ವೃಕ್ಷದಲ್ಲಿ ಬದನಿಕೆಗಳು ಮೊಳೆತು ಮರದ ಸಾರವನ್ನು ಹೀರುತ್ತ ಚಿಗುರಿಕೊಳ್ಳುತ್ತವೆ. ಅವುಗಳಿಗೆ ಸ್ವತಃ ಬೇರುಗಳಿದ್ದರೂ ಕೂಡ ಅವುಗಳು ತಾವು ಆಶ್ರಯಿಸಿದ ವೃಕ್ಷಗಳ ಬೇರುಗಳನ್ನು ಅವಲಂಬಿಸಿರುತ್ತವೆ. ಅವುಗಳಿಗೆ ಸ್ವತಃ ಎಲೆಗಳಿದ್ದರೂ ಕೂಡ ಆಶ್ರಯಿಸಿದ ವೃಕ್ಷದ ಎಲೆಗಳನ್ನು ಕೂಡ ಅವಲಂಬಿಸಿರುತ್ತವೆ. ಬದನಿಕೆಗಳು ಸೊಂಪಾಗಿ ಬೆಳೆದ ಮರಗಳನ್ನೇ ಆಶ್ರಯಿಸಿ ತಮ್ಮ ಬದುಕು ಪ್ರಾರಂಭಿಸುತ್ತವೆ. ಆದರೆ ಅವು ಮರವು ತಯಾರಿಸುವ ಆಹಾರವನ್ನು ಹೀರಿ ಪುಷ್ಟವಾಗಿ ಬೆಳೆದಷ್ಟೂ ಮರವು ಬಡವಾಗುತ್ತದೆ. ಹಾಗಾಗಿ ಕೊನೆಗೊಂದು ದಿನ ಮರವು ಬೆಳೆಯುವುದನ್ನು ನಿಲ್ಲಿಸುತ್ತದೆ, ಅದರ ಬದಲಾಗಿ ಬದನಿಕೆಗಳೇ ಬೆಳೆಯುತ್ತಿರುತ್ತವೆ. ಆದರೆ ಅಂತ್ಯವು ಕೇವಲ ಮರಕ್ಕೆ ಮಾತ್ರ ದುರಂತವಲ್ಲ, ಬದನಿಕೆಗಳಿಗೂ ಕೂಡ. ಮರವು ಬಡವಾದ ಹಾಗೆ ಅದು ಹೀರುವ ಆಹಾರವೂ ಕ್ಷೀಣಿಸುತ್ತದೆ. ಮರವನ್ನೇ ಆಧರಿಸಿ ಬೆಳೆದ ಬದನಿಕೆಗಳೂ ಕ್ಷೀಣಿಸುತ್ತವೆ. ಮರವು ಸತ್ತು ಹೋಯಿತೆಂದರೆ ಆ ಮರದ ಮೇಲೆ ಬದನಿಕೆಗಳ ಭವಿಷ್ಯವೂ ಮುಚ್ಚಿಹೋದಹಾಗೇ.

               ಭಾರತೀಯ ಪ್ರಭುತ್ವದ ಸಂಸ್ಥೆಗಳೂ ಕೂಡ ಇದೇ ಪ್ರಕ್ರಿಯೆಗೆ ಒಳಪಟ್ಟಿವೆ ಎಂಬುದು ನನ್ನ ಊಹೆ. ಭಾರತೀಯ ಪ್ರಭುತ್ವವು ವಸಾಹತುವಿನ ವಾರಸುದಾರಿಕೆಯಲ್ಲಿ ರೂಪು ತಳೆಯಿತು. ಅದು ತನ್ನ ಅಂಗ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಅವುಗಳಿಗೆ ಆರ್ಥಿಕ ಸಂಪನ್ಮೂಲಗಳನ್ನು ನಿರ್ಮಿಸಿ, ಅಧಿಕಾರ ಕ್ಷೇತ್ರಗಳನ್ನು ಹಾಗೂ ಕೇಂದ್ರಗಳನ್ನು ನಿರ್ಮಿಸಿ, ಅವುಗಳನ್ನು ಚಾಲನೆಗೆ ತಂದಿತು. ಈ ಅಧಿಕಾರ ಹಾಗೂ ಆರ್ಥಿಕ ಸಂಪನ್ಮೂಲಗಳು ಇಡೀ ರಾಷ್ಟ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡ ಪ್ರಭುತ್ವವನ್ನು ಆಧರಿಸಿವೆ. ಪ್ರಭುತ್ವದ ಈ ಅಂಗ ಸಂಸ್ಥೆಗಳ ಬೆಳವಣಿಗೆಯು ಈ ದೇಶದ ಜನಜೀವನವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲಿಕ್ಕೆ ನಿರ್ಣಾಯಕವಾಗಿತ್ತು. ಇಂಥದ್ದೊಂದು ಬೃಹತ್ ಯಂತ್ರವನ್ನು ಮುನ್ನಡೆಸುವ ಸಲುವಾಗಿ ನಮ್ಮ ದೇಶದ ಜನತೆಯನ್ನು ಸಕ್ರಿಯವಾಗಿ ತೊಡಗಿಸಲಾಯಿತು. ಅಂದರೆ ಆಳುವವರು ಹಾಗೂ ನೌಕರರ ರೂಪದಲ್ಲಿ ಲಕ್ಷಾಂತರ ಜನರು ಅದರ ಒಂದು ಸಕ್ರಿಯ ಭಾಗವಾದರು. ಇದು ಪ್ರಾರಂಭವಾದದ್ದು ಹೀಗೆ.

               ಆದರೆ ಪ್ರಾರಂಭದಿಂದಲೂ ವಸಾಹತು ರಚನೆಯ ಭಾಗಗಳಾದ ಇಂಥ ಸಂಸ್ಥೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತ ಭಾರತೀಯರಿಗೆ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ಪೂರೈಸಲು ಕೆಲವು ತೊಡಕುಗಳಿದ್ದವು. ಮೊತ್ತಮೊದಲನೆಯದಾಗಿ ಈ ವಸಾಹತು ಸಂಸ್ಥೆಗಳ ಹಿಂದಿನ ಧ್ಯೇಯಾದರ್ಶಗಳು ಹಾಗೂ ಚಿಂತನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಏಕೆಂದರೆ ಅವುಗಳ ಸಾಂಸ್ಕೃತಿಕ  ಹಿನ್ನೆಲೆಯು ಭಾರತೀಯರಿಗೆ ಅಪರಿಚಿತವಾಗಿತ್ತು. ಹಾಗಾಗಿ ಪಾಶ್ಚಾತ್ಯ ಪರಿಕಲ್ಪನೆಗಳನ್ನು ಹಾಗೂ ಚಿಂತನೆಗಳನ್ನು ವಿರೂಪಗೊಳಿಸುವ ಕೆಲಸವು ಅವ್ಯಾಹತವಾಗಿ ನಡೆಯಿತು. ಎರಡನೆಯದಾಗಿ ಪಾಶ್ಚಾತ್ಯ ವಸಾಹತು ಸಂಸ್ಥೆಗಳು ಯಾವುದನ್ನು ಈ ಪ್ರಭುತ್ವಕ್ಕೆ ಮೂಲಭೂತವೆಂಬುದಾಗಿ ಪರಿಗಣಿಸಿದ್ದವೋ ಅವು ಭಾರತೀಯರಿಗೆ ಪ್ರಸ್ತುತವೆಂದೇ ಅನಿಸಿರಲಿಲ್ಲ. ಉದಾಹರಣೆಗೆ ಸಿದ್ಧಾಂತವನ್ನಾಧರಿಸಿದ ಕ್ರಿಯೆ, ಕಾನೂನನ್ನಾಧರಿಸಿದ ಆಳ್ವಿಕೆ ಹಾಗೂ ನ್ಯಾಯದಾನ, ನೈತಿಕ ನಿಯಮಗಳನ್ನಾಧರಿಸಿದ ಸದಾಚಾರಗಳು, ಉನ್ನತ ಶಿಕ್ಷಣ, ಸಂಶೋಧನೆ, ಸಾಂಸ್ಥಿಕ ಧ್ಯೇಯ, ಸಾರ್ವಜನಿಕ ಹಿತಾಸಕ್ತಿ, ಪ್ರತಿನಿಧಿತ್ವ, ಇತ್ಯಾದಿ. ಇತ್ಯಾದಿ… ಇಂಥ ಗ್ರಹಿಕೆಯ ಮಿತಿಗಳನ್ನು ಗುರುತಿಸುವ ಕೆಲಸ ನಡೆಯಲಿಲ್ಲ. ಹಾಗಾಗಿ ಸರ್ಕಾರೀ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ತಾವೇನು ಮಾಡುತ್ತಿದ್ದೇವೆ, ಏಕಾಗಿ ಮಾಡುತ್ತಿದ್ದೇವೆ ಎಂಬ ಸ್ಪಷ್ಟ ತಿಳಿವಳಿಕೆಯೇ ಮೂಡಲಿಲ್ಲ.

               ಇಂಥ ಸಂದರ್ಭದಲ್ಲಿ ಈ ಕೆಲಸಗಳಿಗಿದ್ದ ಒಂದೇ ಅರ್ಥಪೂರ್ಣ ಆಯಾಮವೆಂದರೆ ಅವು ಜೀವನ ನಿರ್ವಹಣೆಯ ಮಾಧ್ಯಮಗಳು ಎಂಬುದು. ಸರ್ಕಾರವೆಂಬುದು ನೌಕರಿಯನ್ನು ಸೃಷ್ಟಿಸುವ, ಜನರಿಗೆ, ಸಮುದಾಯಗಳಿಗೆ ಬದುಕುವ ದಾರಿಯನ್ನು ಕಲ್ಪಿಸುವ  ಸಾಧನವಷ್ಟೇ ಆಯಿತು. ಅಂದರೆ ಸರ್ಕಾರೀ ಸಂಸ್ಥೆ ಎಂಬುದು ಒಂದು ಅರ್ಥ ಸಾಧನೆಯ ಮಾಧ್ಯಮವಾಗಿಯಷ್ಟೇ ಜನರಿಗೆ ಕಾಣಿಸಿತು. ಅವನು ಶಿಕ್ಷಕನಿರಲಿ, ನ್ಯಾಯಾಧೀಶನಿರಲಿ, ರಾಜಕಾರಣಿ ಇರಲಿ, ಪೋಲೀಸನಿರಲಿ, ಭಾರತೀಯ ನಾಗರೀಕ ಸೇವೆಯ ಅಧಿಕಾರಿಯಾಗಲಿ, ಇವರಿಗೆಲ್ಲ ಏನೂ ವ್ಯತ್ಯಾಸ ಉಳಿಯಲಿಲ್ಲ, ನೌಕರಿಯು ಒಂದು ಜೀವನ ಮಾಧ್ಯಮವಾಯಿತು ಅಷ್ಟೆ. ಸಾಂಪ್ರದಾಯಿಕ ಭಾರತೀಯರು ನೌಕರಿಯನ್ನು ಒಂದು ಜೀವನ ಮಾಧ್ಯಮವಾಗಿ ಮಾತ್ರ ನೋಡಿದ್ದರು. ಅವರು ಅದನ್ನು ಚಾಕರಿ ಎನ್ನುತ್ತಾರೆ. ಅಂದರೆ ಯಾರದೋ ಕೈಕೆಳಗೆ ಅವರು ಹೇಳಿದ್ದನ್ನು ಮಾಡಿ ಸಂಬಳ ಎಣಿಸಿಕೊಳ್ಳುವ ಕೆಲಸ ಅಷ್ಟೆ.

               ಆದರೆ ಪ್ರಕ್ರಿಯೆ ಇಷ್ಟಕ್ಕೇ ನಿಲ್ಲಲಿಲ್ಲ. ಗೊತ್ತು ಗುರಿಗಳನ್ನು ಕಳೆದುಕೊಂಡ ಸಂಸ್ಥೆಗಳು ಅವುಗಳನ್ನು ನಡೆಸುವವರ ಅರ್ಥಸಾಧನೆಗೆ ಆಹಾರವಾಗತೊಡಗಿದವು. ಸಂಬಳಕ್ಕಿಂತ ಗಿಂಬಳವು ಪ್ರಾಧಾನ್ಯತೆ ಪಡೆಯತೊಡಗಿತು. ಗಿಂಬಳದಲ್ಲಿ ಸರ್ಕಾರವು ಸಾಂಸ್ಥಿಕ ಬೆಳವಣಿಗೆಗೆ ನಿಗದಿ ಪಡಿಸಿದ ಸಂಪನ್ಮೂಲವನ್ನು ವ್ಯಕ್ತಿಗಳು ಕೊಳ್ಳೆಹೊಡೆಯುವ ಕೆಲಸ ಹಾಗೂ ಸರ್ಕಾರೀ ಸಂಸ್ಥೆಗಳ ಅಧಿಕಾರವನ್ನು ಉಪಯೋಗಿಸಿಕೊಂಡು ಹೊಸ ಸಂಪನ್ಮೂಲಗಳನ್ನು, ಸಾಧ್ಯತೆಗಳನ್ನು ಆವಿಷ್ಕರಿಸುವ ಕೆಲಸಗಳೆಲ್ಲ ಸೇರಿವೆ. ಆದರೆ ಈ ಆವಿಷ್ಕಾರವು ಸಂಸ್ಥೆಗಳ ಬೆಳವಣಿಗೆಯ ಸಲುವಾಗಿ ಅಲ್ಲ. ಅವುಗಳನ್ನಾಧರಿಸಿದ ವ್ಯಕ್ತಿಗಳ ಹಾಗೂ ಸಮೂಹಗಳ ಅರ್ಥಸಾಧನೆಗಾಗಿ. ಇಂಥ ಅರ್ಥಸಾಧನೆಗಾಗಿ ನಮ್ಮ ಪ್ರಭುತ್ವದ ಧ್ಯೇಯಾದರ್ಶಗಳನ್ನೆಲ್ಲ ಹಾಗೂ ಉದಾರವಾದೀ ಮೌಲ್ಯಗಳನ್ನೆಲ್ಲ ಎಗ್ಗಿಲ್ಲದೇ ಬಳಸಿಕೊಳ್ಳಲಾಯಿತು. ಸಂವಿಧಾನವನ್ನೂ ಧಾರಾಳವಾಗಿ ಬಳಸಿಕೊಳ್ಳಲಾಯಿತು. ಇಂಥವರನ್ನು ನಾನು ಬದನಿಕೆಗಳಿಗೆ ಹೋಲಿಸುತ್ತೇನೆ.

               ಇಂಥ ಬೆಳವಣಿಗೆಯಿಂದಾಗಿ ಸಂಸ್ಥೆಗಳ ಧ್ಯೇಯಾದರ್ಶಗಳಿಗಾಗಿ ದುಡಿಯುವವರು ಕ್ರಮೇಣ ಕ್ಷೀಣಿಸುತ್ತಿದ್ದಾರೆ. ಇಂಥ ಸಂಸ್ಥೆಗಳಲ್ಲಿ ಅಂಥವರು ಕೆಲಸ ಮಾಡುವ ವಾತಾವರಣವೇ ನಾಶವಾಗುತ್ತ ಬಂದಿದೆ. ಏಕೆಂದರೆ ಈ ಸಂಸ್ಥೆಗಳು ಈಗ ಬೇರೆಯದೇ ಕೆಲಸ ನಡೆಯುವ ಸ್ಥಳಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಇಲ್ಲಿ ಸಂಶೋಧನೆಯ ಹಾಗೂ ಶಿಕ್ಷಣದ ಹೆಸರಿನಲ್ಲಿ, ನ್ಯಾಯ ಹಾಗೂ ರಕ್ಷಣೆಯ ಹೆಸರಿನಲ್ಲಿ, ಜನಸೇವೆ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಬೇರೆಯ ಕೆಲಸವೇ ನಡೆಯತೊಡಗಿದೆ. ಸಮಾನತೆಯ ಹೆಸರಿನಲ್ಲಿ ಜಾತೀಯತೆ, ಜ್ಞಾನದ ಹೆಸರಿನಲ್ಲಿ ಅಜ್ಞಾನ, ನ್ಯಾಯದ ಹೆಸರಿನಲ್ಲಿ ಅನ್ಯಾಯ, ಪಾಲನೆಯ ಹೆಸರಿನಲ್ಲಿ ಪೀಡನೆ, ಇತ್ಯಾದಿಗಳ ಪೋಷಣೆ ನಡೆಯತೊಡಗಿದೆ. ಈ ಕೆಲಸದಲ್ಲಿ ಪಾಲುಗಾರರಾಗಬಲ್ಲವರು ಮಾತ್ರವೇ ಈ ಸಂಸ್ಥೆಗಳಲ್ಲಿ ಉಳಿದುಕೊಳ್ಳುವ ಹಾಗೂ ಏಳ್ಗೆಯನ್ನು ಹೊಂದುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಒಳ್ಳೆಯ ಜನಸೇವಕನೊಬ್ಬನಿಗೆ ಪ್ರಜಾ ಪ್ರತಿನಿಧಿಯಾಗುವ ಬಾಗಿಲುಗಳು ಮುಚ್ಚಿಹೋದಂತೇ ಒಳ್ಳೆಯ ಶಿಕ್ಷಕ ಹಾಗೂ ಸಂಶೋಧಕನಾಗಬಲ್ಲವನೊಬ್ಬನಿಗೆ ಶಿಕ್ಷಣಸಂಸ್ಥೆಯ ಬಾಗಿಲುಗಳು ಮುಚ್ಚತೊಡಗಿವೆ. ಈ ಪರಿಸ್ಥಿತಿಯಿಂದಾಗಿ ನಮ್ಮ ಸರ್ಕಾರೀ ಸಂಸ್ಥೆಗಳು ಯಾವ ಮಾನವ ಸಂಪನ್ಮೂಲಗಳನ್ನು ಆಧರಿಸಿ ತಮ್ಮ ಬೆಳವಣಿಗೆಯನ್ನು ಹೊಂದಬೇಕಿತ್ತೋ ಅವನ್ನೇ ಕಳೆದುಕೊಂಡು ಗುಣಮಟ್ಟದಲ್ಲಿ ಕ್ಷೀಣವಾಗತೊಡಗಿವೆ. ಟೊಳ್ಳಾಗತೊಡಗಿವೆ.

               ಹೀಗೆ ಟೊಳ್ಳಾದ ವೃಕ್ಷವು ಖಾಸಗೀಕರಣವೆಂಬ ಬಿರುಗಾಳಿ ಬೀಸತೊಡಗಿದಾಗ ಅಲುಗಾಡತೊಡಗಿದ್ದು ಆಶ್ಚರ್ಯವೇನಲ್ಲ. ಅಂದರೆ ಕಳೆದ ಎರಡು ದಶಕಗಳಿಗೂ ಹಿಂದೆಯೇ  ಖಾಸಗಿ ಕ್ಷೇತ್ರಗಳಿಂದ ಸರ್ಕಾರೀ ಸಂಸ್ಥೆಗಳಿಗೆ ನಿಧಾನವಾಗಿ ಒಂದೊಂದೇ ಸವಾಲುಗಳು ಬರತೊಡಗಿದವು. ಸರ್ಕಾರೀ ಕ್ಷೇತ್ರವನ್ನು ರಕ್ಷಿಸುವುದು ಹೇಗೆಂಬ ಕುರಿತು ಅಂದಿನಿಂದಲೂ ಚಿಂತನ ಮಂಥನಗಳು ನಡೆಯತೊಡಗಿವೆ. ಸರ್ಕಾರದ ವಿಭಿನ್ನ ಸಂಸ್ಥೆಗಳ ಗುಣಮಟ್ಟ ಕುಸಿಯುತ್ತಿದೆ ಎಂಬ ಎಚ್ಚರಿಕೆಯ ಕರೆಗಂಟೆಯು ಹೊಡೆದೂ ಎರಡು ದಶಕಗಳಿಗಿಂತ ಜಾಸ್ತಿ ಸಮಯವಾಯಿತು. ಅವುಗಳನ್ನು ಸಮುದ್ಧರಿಸಲು ಕಾನೂನುಗಳನ್ನೂ, ನೀತಿ ಸಂಹಿತೆಗಳನ್ನೂ ಬೆಳೆಸುವ ಕೆಲಸವು ಅಣಬೆಯ ಕೃಷಿಯಂತೇ ನಡೆಯಿತು. ಉದಾಹರಣೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸವಾಲು ಸೃಷ್ಟಿಯಾದಂತೆಲ್ಲ ಸರ್ಕಾರೀ ಶಿಕ್ಷಣ ಕ್ಷೇತ್ರಕ್ಕೆ ಒಳ್ಳೆಯ ಶಿಕ್ಷಕರನ್ನು ಆಕರ್ಷಿಸುವುದು ಹೇಗೆಂಬ ಹಾಗೂ ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದು ಹೇಗೆಂಬ ಜಿಜ್ಞಾಸೆಗಳು ಕಾವೇರಿವೆ. ಅದರ ಪರಿಣಾಮವಾಗಿ ಸಂಬಳವನ್ನು ಏರಿಸಿ, ಕೈಕಾಲುಗಳನ್ನು ಆಡಿಸಲೂ ಆಗದಷ್ಟು ನಿಯಮ ನಿಬಂಧನೆಗಳನ್ನು ಗಂಟುಹಾಕಿ, ಉಸಿರಾಡಲೂ ಪುರುಸೊತ್ತಿಲ್ಲದಷ್ಟು ಕಲಿಕೆಯ ವಿಷಯಗಳನ್ನು ಹಾಗೂ ವಿಧಾನಗಳನ್ನು ಜಾರಿಗೊಳಿಸಿ  ಅಳಿದುಳಿದ ಶಿಕ್ಷಣ ಮತ್ತು ಸಂಶೋಧನೆಗಳು ಕೂಡ ಶೀಘ್ರವೇ ಕೊನೆಯುಸಿರೆನ್ನೆಳೆಯುವಂತಾಗಿದೆ. ಇವೆಲ್ಲವೂ ಪರೋಪಜೀವಿಗಳಿಗೆ ವರದಾನಗಳೇ ಆದವು. ಸುಳ್ಳು ಪ್ರಕಾಶನಗಳು, ಸುಳ್ಳು ಸಂಶೋಧನಾ ಪತ್ರಿಕೆಗಳು, ಸುಳ್ಳು ಪದವಿಗಳು ಹಾಗೂ ಪ್ರಮಾಣ ಪತ್ರಗಳು, ಸುಳ್ಳು ಸೆಮಿನಾರುಗಳು ಹಾಗೂ ಸಂಶೋಧನೆಗಳು ಹಾಗೂ ಸುಳ್ಳು ಬಿಲ್ಲುಗಳು ನಾಯಿಕೊಡೆಗಳಂತೇ ಬೆಳೆದವು. 

               ಆಧುನಿಕ ಪ್ರಭುತ್ವದಲ್ಲಿ ಅದರ ಧ್ಯೇಯಾದರ್ಶಗಳನ್ನು ಉಳಿಸಬಲ್ಲ ಹಾಗೂ ಅದರ ಪತನವನ್ನು ತಪ್ಪಿಸಬಲ್ಲ ಒಂದು ಮಾರ್ಗವಾಗಿ ಬುದ್ಧೀಜೀವಿವರ್ಗಕ್ಕೆ, ನಾಗರಿಕ ಹೋರಾಟಗಳಿಗೆ ಹಾಗೂ ಮಾಧ್ಯಮಗಳಿಗೆ ಅವಕಾಶವನ್ನು ಸೃಷ್ಟಿಸಲಾಗಿದೆ. ಆದರೆ ಇವೂ ಕೂಡ ಮೇಲಿನ ಹಾದಿಯನ್ನೇ ಹಿಡಿದಿರುವುದು ಸ್ಪಷ್ಟ. ಅಂದರೆ ಅವಕ್ಕೆ ತಮ್ಮ ಉದ್ದೇಶದ ಕುರಿತ ತಿಳಿವಳಿಕೆಯು ನಷ್ಟವಾಗಿದೆ. ಅವೆಲ್ಲ ತಮ್ಮ ಐಡಿಯಾಲಜಿಗಳ ಮೂಲಕ ಪರೋಪಜೀವನವನ್ನು  ಗಟ್ಟಿಮಾಡುವ ಪಾತ್ರ ವಹಿಸುತ್ತಿವೆ. ಅಥವಾ ಇದೇ ಪ್ರಭುತ್ವದಲ್ಲಿ ಅರ್ಥಸಾಧನೆಯ ಹಾಗೂ ಸ್ಥಾನಮಾನದ ಉಪಾಯಗಳಾಗಿ ಪರೋಪಜೀವನದ ಉಪಾಯಗಳನ್ನು ಕಂಡುಕೊಳ್ಳುತ್ತಿವೆ. ಪ್ರಭುತ್ವವು ಯಾವುದನ್ನು ತನ್ನ ಕ್ಷೇತ್ರ ಎಂದು ಗುರುತಿಸುತ್ತದೆಯೋ ಅದರಲ್ಲಿ ಇಂಥ ಪರೋಪಜೀವಿಗಳು ವೈರಸ್ಸುಗಳಂತೆ ಬೆಳೆದುಕೊಳ್ಳುತ್ತವೆ.

               ನಾವು ಯಾವುದನ್ನು ತಲೆಮಾರಿನಿಂದ ತಲೆಮಾರಿಗೆ ಆಗುತ್ತಿರುವ ಅವನತಿ ಎಂಬುದಾಗಿ ಗುರುತಿಸುತ್ತೇವೋ ಅದು ಈ ಮೇಲಿನ ಪ್ರಕ್ರಿಯೆಯ ಬಾಹ್ಯ ಲಕ್ಷಣವಾಗಿದೆ. ದಿನದಿಂದ ದಿನಕ್ಕೆ ಪರೋಪಜೀವಿಗಳು ಸಂಖ್ಯೆಯಲ್ಲಿ ಹಾಗೂ ಶಕ್ತಿಯಲ್ಲಿ ಹೆಚ್ಚುತ್ತಿವೆ. ಅದಕ್ಕೆ ಅನುಗುಣವಾಗಿ ನಮ್ಮ ಆಧುನಿಕ ಸಂಸ್ಥೆಗಳ ಆಧಾರ ಸ್ಥಂಭಗಳು ಶಿಥಿಲವಾಗುತ್ತಿವೆ. ಇದರ ಪರಿಣಾಮವಾಗಿ ಒಂದು ತಲೆಮಾರಿಗಿಂತ ನಂತರದ ತಲೆಮಾರು ಗುಣಮಟ್ಟದಲ್ಲಿ ಕ್ಷೀಣಿಸಿದಂತೆ ಕಾಣಿಸುತ್ತದೆ. ಅಂದರೆ ನಮ್ಮ ಸರ್ಕಾರೀ ಸಂಸ್ಥೆಗಳು ಪರೋಪಜೀವಿಗಳ ಆಹಾರವಾಗಿರುವುದರಿಂದ ಜ್ಞಾನ ಹಾಗೂ ಬದ್ಧತೆಗಳು ತಲೆಮಾರಿನಿಂದ ತಲೆಮಾರಿಗೆ ವೃದ್ಧಿಯಾಗುವುದರ ಬದಲಾಗಿ ಕ್ಷೀಣಿಸುವುದು ಸಹಜ.

               ಆದರೆ ದಿನದಿಂದ ದಿನಕ್ಕೆ ಆಂತರಿಕವಾಗಿ ನಿಃಸತ್ವಗೊಳ್ಳುತ್ತಿದ್ದರೂ ಬಹಿರಂಗವಾಗಿ ಇಂಥ ಸಂಸ್ಥೆಗಳು ಸಂಖ್ಯೆಯಲ್ಲಿ, ಗಾತ್ರದಲ್ಲಿ ವರ್ಧಿಸುತ್ತಲೇ ಇವೆ. ನಮ್ಮ ಸರ್ಕಾರಗಳು ಹೊಸ ಹೊಸ ವಿಶ್ವವಿದ್ಯಾಲಯಗಳನ್ನು, ಶಿಕ್ಷಣ ಸಂಸ್ಥೆಗಳನ್ನು, ನ್ಯಾಯಾಲಯಗಳನ್ನು, ಹೊಸ ಹೊಸ ರಾಜ್ಯ, ಜಿಲ್ಲೆ, ತಾಲೂಕುಗಳನ್ನು, ಆಡಳಿತ ವಿಕೇಂದ್ರೀಕರಣಗಳನ್ನು ಸೃಷ್ಟಿಸಿ ಅವುಗಳ ಸಂಖ್ಯಾವೃದ್ಧಿ ಮಾಡುವುದರತ್ತ ವಿಶೇಷ ಉತ್ಸುಕತೆ ತೋರಿಸುತ್ತಿವೆ. ಇವೆಲ್ಲ ಸರ್ಕಾರದ ಕಾರ್ಯಕ್ರಮಗಳು ಹೆಚ್ಚೆಚ್ಚು ಜನರನ್ನು ತಲುಪಿ ಆ ಮೂಲಕ ಸರ್ಕಾರೀ ಸಂಸ್ಥೆಗಳ ಅಭಿವೃದ್ಧಿಯನ್ನು ಸಾರುತ್ತಿಲ್ಲವೆ ಎಂಬ ಪ್ರಶ್ನೆ ಏಳಬಹುದು.

               ಆದರೆ ಈ ಬೆಳವಣಿಗೆಗಳ ಹಿಂದೆ ನಿಜವಾಗಿಯೂ ನಡೆಯುತ್ತಿರುವ ಪ್ರಕ್ರಿಯೆ ಯಾವುದು? ಸರ್ಕಾರದ ಸಂಪನ್ಮೂಲಗಳು ಅವ್ಯಾಹತವಾಗಿ ಹರಿಯುತ್ತಿರುವವರೆಗೆ ಈ ಪರೋಪಜೀವಿಗಳು ಈ ಸಂಸ್ಥೆಗಳನ್ನು ಆಶ್ರಯಿಸುತ್ತವೆ. ತಮ್ಮ ಸಂಖ್ಯೆ ವೃದ್ಧಿಯಾದಂತೆಲ್ಲ ಹೊಸ ಹೊಸ ಸಂಸ್ಥೆಗಳನ್ನು ಹುಟ್ಟುಹಾಕಿಕೊಳ್ಳುವುದು ಅವುಗಳ ಅಸ್ತಿತ್ವಕ್ಕೆ ಅನಿವಾರ್ಯ. ಸಂಸ್ಥೆಗಳ ಅಂತಃಸ್ಸತ್ವವು ಹಾಳಾದಷ್ಟೂ ಸಂಸ್ಥೆಗಳ ಧ್ಯೇಯಾದರ್ಶಗಳ ಕುರಿತು ಭಾಷಣಗಳು ಮತ್ತಷ್ಟು ಏರುಧ್ವನಿಯಲ್ಲಿ ಕೇಳಿಸತೊಡಗುತ್ತವೆ. ಹಿಂದೆಂದೂ ಇಲ್ಲದಷ್ಟು ಸುಳ್ಳು ಅಥವಾ ಅತಿಶಯೋಕ್ತಿಯಿಂದ ಕೂಡಿದ ಪ್ರಗತಿ ವರದಿಗಳು, ಪ್ರಮಾಣ ಪತ್ರಗಳು, ಮೌಲ್ಯಮಾಪನ ವರದಿಗಳು, ಸಾಧನೆಯ ಕಥೆಗಳು ಅಂಕಿ ಅಂಶ ಸಮೇತವಾಗಿ ರಾಶಿಬೀಳುತ್ತವೆ. ಅಂದರೆ ಮೇಲ್ನೋಟಕ್ಕೆ ಪ್ರಭುತ್ವವು ವಿಸ್ತಾರವಾಗಿ ಹಬ್ಬಿಕೊಳ್ಳುತ್ತಿರುವುದಕ್ಕೆ, ಹಾಗೂ ಅದರ ಧ್ಯೇಯಾದರ್ಶಗಳು ಸಾಕಾರವಾಗುತ್ತಿರುವುದಕ್ಕೆ ಸಾಕ್ಷ್ಯಾಧಾರಗಳು ರಾಶಿಬೀಳುತ್ತವೆ. ಆದರೆ ನಿಜವಾಗಿಯೂ ನಡೆಯುತ್ತಿರುವುದು  ಅವುಗಳನ್ನು ಆಶ್ರಯಿಸಿದ ಪರೋಪಜೀವಿಗಳ ಅಭಿವೃದ್ಧಿ. ಹಾಗಾಗಿ ಅದರ ಆಂತರಿಕ ಸತ್ವವು ತಲೆಮಾರಿನಿಂದ ತಲೆಮಾರಿಗೆ ಟೊಳ್ಳಾಗುತ್ತಿದೆ. ಈ ಸತ್ಯವನ್ನು ಈ ಮೇಲಿನ ಯಾವ ಕಸರತ್ತುಗಳಿಂದಲಾದರೂ ಮರೆಮಾಚಲಿಕ್ಕೆ ಸಾಧ್ಯವೆ?

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp