ರಾಜಾವಳೀ ಕಥಾಸಾರವನ್ನು ರಚಿಸಿದವನು ದೇವಚಂದ್ರ ಎಂಬ ಜೈನ ಬ್ರಾಹ್ಮಣ. ಅವನು ಚಾಮರಾಜನಗರದ ಸಮೀಪದ ಕನಕಗಿರಿಯಲ್ಲಿ ನೆಲೆಸಿ ಜೈನ ಕೃತಿಗಳನ್ನು ಬರೆದುಕೊಂಡಿದ್ದನು. ೧೮೦೫ರ ಸುಮಾರಿಗೆ ಕರ್ನಲ್ ಮೆಕೆಂಝಿ ಎಂಬ ಬ್ರಿಟಿಷ್ ಅಧಿಕಾರಿಯು ಅವನನ್ನು ಭೇಟಿಮಾಡಿ ಕರ್ನಾಟಕದ ಚರಿತ್ರೆಯನ್ನು ಸಾದ್ಯಂತವಾಗಿ ಬರೆದುಕೊಡಬೇಕೆಂಬುದಾಗಿ ಕೇಳಿಕೊಳ್ಳುತ್ತಾನೆ. ಆ ಮೇರೆಗೆ ದೇವಚಂದ್ರನು ರಾಜಾವಳಿಯನ್ನು ಬರೆದನು. ಇದು ಕನ್ನಡಿಗನೊಬ್ಬನು ಬರೆದ ಕರ್ನಾಟಕದ ಪ್ರಪ್ರಥಮ ಚರಿತ್ರೆ ಎನ್ನಲಿಕ್ಕಡ್ಡಿಯಿಲ್ಲ. ಆದರೆ ರಾಜಾವಳಿಯು ಅತ್ತ ಚರಿತ್ರೆ ಪುಸ್ತಕದಂತೆಯೂ ಕಾಣುವುದಿಲ್ಲ, ಇತ್ತ ಜೈನಪುರಾಣವಂತೂ ಅಲ್ಲವೇ ಅಲ್ಲ. ನನಗೆ ರಾಜಾವಳಿಯು ಬೇರೆ ಕಾರಣಗಳಿಗಾಗಿ ಬಹಳ ಕುತೂಹಲಕಾರಿಯಾಗಿ ಕಾಣಿಸಿದ್ದಿದೆ. ಅದರಲ್ಲಿ ಒಂದು ಅಂಶವನ್ನು ಪ್ರಸ್ತಾಪಿಸುತ್ತಿದ್ದೇನೆ.
ದೇವಚಂದ್ರನು ಕೃತಿಯುದ್ದಕ್ಕೂ ಅನ್ಯ ಮತಗಳಿಂಧ ಜೈನಮತದ ಮೇಲೆ ನಡೆದ ಹಲ್ಲೆಯನ್ನು ಪ್ರಸ್ತಾಪಿಸುತ್ತಾನೆ. ಇಂಥ ಹಲ್ಲೆಗಳು ಜೈನ ದೇವಾಲಯಗಳನ್ನು ಹಾಳುಮಾಡುವುದು, ಅಥವಾ ಅವುಗಳ ಮೂರ್ತಿಗಳನ್ನು ಬದಲುಮಾಡುವುದು, ಮರೆಮಾಚಿ ತಮ್ಮದನ್ನಾಗಿ ಮಾಡಿಕೊಳ್ಳುವುದು, ಜೈನ ಒಕ್ಕಲುಗಳನ್ನು ತಮ್ಮ ಮತಕ್ಕೆ ಎಳೆದುಕೊಳ್ಳುವುದು, ಇತ್ಯಾದಿ. ಅವನು ತನ್ನ ಹೇಳಿಕೆಗೆ ಪ್ರಮಾಣವಾಗಿ ಪೂಜಾ ಸ್ಥಳಗಳ ಪಟ್ಟಿಯನ್ನೇ ನೀಡುತ್ತಾನೆ. ಅಂಥ ಕೃತ್ಯಗಳಲ್ಲಿ ಮುಖ್ಯವಾಗಿ ವೈಷ್ಣವರು ಹಾಗೂ ವೀರಶೈವರು ಕಾಣಿಸಿಕೊಳ್ಳುತ್ತಾರೆ. ಸ್ಥಾರ್ತರೂ ಹಿಂದೆ ಬಿದ್ದಿಲ್ಲ. ಅವನಿಗೆ ವೀರಶೈವರ ಮೇಲೆ ವಿಶೇಷ ಸಿಟ್ಟಿದ್ದಂತೆ ತೋರುತ್ತದೆ. ಅವನು ಬಸವಣ್ಣ, ರಾಮಾನುಜಾಚಾರ್ಯ, ಶಂಕರಾಚಾರ್ಯ ಮುಂತಾದವರನ್ನು ಪದ್ದು ಪವಾಡಗಳ ಮೂಲಕ ಸುದ್ದಿಯಾದವರೆಂಬ ರೀತಿಯಲ್ಲಿ ವಿಡಂಬಿಸುತ್ತಾನೆ. ಅದರಲ್ಲೂ ಬಸವಣ್ಣರ ಕುರಿತು ಅವನ ವಿಡಂಬನೆ ತುಂಬ ಹರಿತವಾಗಿದೆ. ಇದಕ್ಕೆಲ್ಲ ಕಳಸವಿಟ್ಟಂತೆ ಷಣ್ಮತಗಳ ಪೂಜಾ ಸ್ಥಳಗಳನ್ನೂ ಹಾಳುಗೆಡವಿದ ಮುಸ್ಲಿಮರು ಕೂಡ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಮುಸ್ಲಿಮರು ಬಂದು ವೀರಶೈವರನ್ನು ಬಗ್ಗು ಬಡೆದ ವಿಚಾರವನ್ನು ಅವನು ಅತಿರಂಜಿತವಾಗಿ ತಿಳಿಸಲು ಮರೆಯುವುದಿಲ್ಲ. ದೇವ ಚಂದ್ರನ ಕೃತಿಯಲ್ಲಿ ಜೈನ ಒಕ್ಕಲುಗಳಿಗೆ ವೈಷ್ಣವರು ನಾಮಧಾರಣೆ ಮಾಡಿ ತಮ್ಮತ್ತ ಸೆಳೆದುಕೊಳ್ಳುವುದು, ವೈಷ್ಣವ ಒಕ್ಕಲನ್ನು ಲಿಂಗಧಾರಣೆ ಮಾಡಿ ಲಿಂಗಾಯತರು ತಮ್ಮೊಳಗೆ ಸೇರಿಸಿಕೊಳ್ಳುವುದು, ಹಾಗೂ ಇವರನ್ನೆಲ್ಲ ಮತಾಂತರ ಮಾಡುವ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಇವರೆಲ್ಲ ಭರತಖಂಡದ ಸಹಜ ವ್ಯಾಪಾರದಂತೆ ಚಿತ್ರಿತರಾಗಿದ್ದಾರೆ.
ದೇವಚಂದ್ರನು ತಿಳಿಸಿದ್ದೆಲ್ಲ ಐತಿಹಾಸಿಕ ನಿಜವೆ? ಎಂಬ ಪ್ರಶ್ನೆ ನಮಗೆ ಪ್ರಸ್ತುತವಲ್ಲ. ಅದನ್ನು ಬರೆಸಿದ ಬ್ರಿಟಿಷರು ಹಿಸ್ಟರಿಯ ಗಂಧಗಾಳಿಯಿಲ್ಲದ ಇಂಥ ಕೃತಿಗಳ ಕುರಿತು ನಿರಾಸಕ್ತಿ ತಳೆದರು. ಆಧುನಿಕ ವಿದ್ವಾಂಸರು ರಾಜಾವಳಿಯು ಒಂದು ಕಲ್ಪಿತ ಕೃತಿ, ಪೂರ್ವಾಗ್ರಹ ಪೀಡಿತ ಕೃತಿ ಎಂದೆಲ್ಲ ಅದನ್ನು ನಿವಾಳಿಸಿ ಮೂಲೆಯಲ್ಲಿಟ್ಟೂ ಆಗಿದೆ. ಇನ್ನೂ ಕೆಲವು ವಿಧ್ವಂಸಕರು ತಮ್ಮ ಕೆಲಸಕ್ಕೆ ಅನುಕೂಲವಾಗುವ ಸಂಗತಿಗಳನ್ನು ಬಳಸಿಕೊಳ್ಳುವ ಮಟ್ಟಿಗೆ ಇದರ ಹೆಸರನ್ನು ಚಾಲ್ತಿಯಲ್ಲಿ ಇಡಲು ಪ್ರಯತ್ನಿಸಿದ್ದಾರೆ. ಹಾಗಂತ ಇದರ ಕುರಿತು ಗಂಭೀರವಾಗಿ ಸಂಶೋಧನೆ ನಡೆಸಿದವರೂ ಇದ್ದಾರೆ ಎನ್ನಿ. ಇಲ್ಲಿ ಎರಡು ಪ್ರಶ್ನೆಗಳು ಮುಖ್ಯವಾಗಿವೆ ಎನ್ನಿಸುತ್ತದೆ: ೧. ದೇವಚಂದ್ರನಿಗೆ ಮತಗಳ ಆಕ್ರಮಣ, ಪರಿವರ್ತನೆ ಇತ್ಯಾದಿಗಳು ಅಷ್ಟೊಂದು ಮುಖ್ಯ ಏಕಾಗುತ್ತವೆ? ೨. ಈ ಕಥನವನ್ನು ದೇವಚಂದ್ರನು ಯಾವ ಧೋರಣೆಯಿಂದ ಸ್ವೀಕರಿಸುತ್ತಾನೆ? ಮೊದಲನೆಯ ಪ್ರಶ್ನೆಗೆ ಸಂಬಂಧಿಸಿದಂತೆ ದೇವಚಂದ್ರನಿಗೆ ವಸಾಹತು ಚರಿತ್ರೆಕಾರರ ಧೋರಣೆಯ ಹಾಗೂ ಕ್ರೈಸ್ತ ನಿರೂಪಣೆಗಳ ಪ್ರಭಾವವಾಗಿರುವಂತೆ ತೋರುತ್ತದೆ. ಹಾಗಾಗಿ ಭಾರತದ ಚರಿತ್ರೆಯೆಂದರೆ ಮತಗಳ ಆಕ್ರಮಣ, ಸಂಘರ್ಷಗಳ ಹಾಗೂ ಮೇಲಾಟಗಳ ಚರಿತ್ರೆಯೆಂಬಂತೆ ತೋರಿರುವ ಸಾಧ್ಯತೆಯಿದೆ. ಅದರ ಜೊತೆಗೇ ಅವನಿಗೆ ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದ ಐತಿಹ್ಯಗಳಂತೂ ಇದ್ದಿರಲೇಬೇಕು. ಎರಡನೆಯ ಪ್ರಶ್ನೆ ನಮಗೆ ಇಂದು ಬಹಳ ಮುಖ್ಯವಾದುದು. ತಾನು ಕಥಿಸುವ ಚರಿತ್ರೆಯ ಕುರಿತು ಅವನ ಧೋರಣೆ ಏನು? ದೇವಚಂದ್ರನ ಕಥನದಲ್ಲಿ ಒಂದು ನಿರ್ವಿಕಾರತೆಯಿದೆ. ಅವನು ಜೈನರ ಮೇಲೆ ಉಳಿದವರ ಹಲ್ಲೆಯನ್ನು ಉಲ್ಲೇಖಿಸುವಾಗಲೂ ಭಾವುಕನಾಗುವುದಿಲ್ಲ. ಅದಕ್ಕೆ ಕಾರಣವೆಂದರೆ ಅದನ್ನು ಅವನು ಗ್ರಹಿಸುವ ರೀತಿ, ದೇವಚಂದ್ರನು ಜೈನ ಯುಗಗಳ ಕಲ್ಪನೆಯನ್ನು ತನ್ನ ಚರಿತ್ರೆಯ ಕಥನದ ಭಿತ್ತಿಯಾಗಿ ರೂಪಿಸುತ್ತಾನೆ. ಜೈನ ಯುಗ ಕಲ್ಪನೆಯನ್ನು ತನ್ನ ಚರಿತ್ರೆಗೆ ಆಧಾರವಾಗಿ ರೂಪಿಸುವಾಗ ಜೈನ ಧರ್ಮಕ್ಕಿರುವ ಉತ್ಸರ್ಪಿಣಿ (ಉನ್ನತಿ) ಹಾಗೂ ಅವಸರ್ಪಿಣಿ (ಅವನತಿ) ಎಂಬ ಎರಡು ಅವಸ್ಥೆಗಳ ಕುರಿತು ತಿಳಿಸುತ್ತಾನೆ. ಕಾಲವು ಇಲ್ಲಿ ಜೈನ ಮತದ ಏರಿಳಿತದ ಗತಿಯನ್ನು ನಿರ್ಧರಿಸುವ ಜೊತೆಗೇ ಉಳಿದ ಮತಗಳ ಏರಿಳಿತಗಳನ್ನೂ ನಿರ್ಧರಿಸುವ ಶಕ್ತಿಯಾಗಿದೆ. ಪ್ರಸ್ತುತ ಹುಂಡಾವಸರ್ಪಿಣಿ ಕಾಲ ನಡೆಯುತ್ತಿದೆ. ಹಾಗಾಗಿ ಜೈನ ಮತವು ಅವನತಿ ಹೊಂದುವುದು ಹಾಗೂ ಉಳಿದ ಮತಗಳು ಅದರ ಮೇಲೆ ಸವಾರಿ ಮಾಡುವುದು ಜೈನ ಮತದ ಗತಿಯ ಭಾಗವೇ ಆಗಿದೆ. ಜೈನರೂ ಏನೂ ಮಾಡುವಂತಿಲ್ಲ. ಏಕೆಂದರೆ ಅದು ಕಾಲಧರ್ಮವೇ ಆಗಿದೆ. ಯಾವ ಯಾವ ರಾಜರು ಜೈನ ಮತವನ್ನು ಅನಾದರದಿಂದ ನೋಡಿದರೋ, ಅದಕ್ಕೆ ಹಾನಿ ಎಸಗಿದರೋ ಅದರಲ್ಲಿ ಅವರ ದೋಷವೇನೂ ಇಲ್ಲ. ಅದು ಕಾಲದೋಷ!
ಈ ಕಥನವು ಇಂದು ನಮಗೆ ಬಹಳ ಮುಖ್ಯವಾದುದು ಎಂಬುದು ನನ್ನ ಅಭಿಪ್ರಾಯ. ನಮ್ಮ ಚಾರಿತ್ರಿಕ ಸತ್ಯಗಳ ಜೊತೆಗೆ ಹೇಗೆ ಏಗಬೇಕೆಂಬುದು ನಮ್ಮ ಇಂದಿನ ಬಹುದೊಡ್ಡ ಸವಾಲು. ಬಹುಶಃ ಆಧುನಿಕಕಾಲದಲ್ಲಿ ಬ್ರಿಟಿಷರು ನಮಗೆ ಚರಿತ್ರೆ ಬರವಣಿಗೆಯನ್ನು ಕಲಿಸಿದ ನಂತರ ನಾವು ಗತವನ್ನು ಚಿತ್ರಿಸಿಕೊಳ್ಳುವ ರೀತಿ ಹಾಗೂ ಉದ್ದೇಶಗಳೇ ಬದಲಾದಂತಿದೆ. ಅದರ ಪರಿಣಾಮವಾಗಿ ನಮಗೆ ವರ್ತಮಾನದಲ್ಲಾಗುತ್ತಿರುವ ಅನ್ಯಾಯಗಳನ್ನು ಗುರುತಿಸುವ, ಅರ್ಥೈಸುವ ಹಾಗೂ ಸರಿಪಡಿಸುವ ಏಕೈಕ ವಿಧಾನವೇ ಚರಿತ್ರೆ ಬರವಣಿಗೆಯಾಗಿ ಮಾರ್ಪಟ್ಟಿದೆ. ಚರಿತ್ರೆಯಲ್ಲಿ ವಿಭಿನ್ನ ಸಮುದಾಯಗಳನ್ನು ಕಲ್ಪಿಸಿಕೊಂಡು, ಇದ್ದುಬಿದ್ದ ಆಧಾರಗಳನ್ನು ನಿರೂಪಿಸಿಕೊಂಡು, ಅವುಗಳಿಗೆ ಉದ್ದೇಶಗಳನ್ನು ಆರೋಪಿಸಿಕೊಂಡು ಒಂದು ಪಕ್ಷದವರು ಮತ್ತೊಂದು ಪಕ್ಷದವರ ಮೇಲೆ ನಡೆಸಿದ ದೌರ್ಜನ್ಯದ ಕಥನಗಳಿಂದ ನಮ್ಮ ಚರಿತ್ರೆಯು ಗಿಜಿಗುಡುತ್ತಿದೆ. ಅದರಲ್ಲೂ ಇಂದು ಚರಿತ್ರೆಯ ಇಂಥ ಸತ್ಯಗಳನ್ನಾಧರಿಸಿ ವಿಭಿನ್ನ ಹೋರಾಟದ ಗುಂಪುಗಳು ಹುಟ್ಟಿಕೊಂಡಿವೆ. ರಾಜಕೀಯ ನೀತಿಗಳು, ಪಕ್ಷಗಳು ಅವುಗಳನ್ನಾಧರಿಸಿಕೊಂಡಿವೆ. ಹಿಂದೆ ನಡೆದ ತಪ್ಪುಗಳನ್ನು ಸರಿಪಡಿಸುವ, ಅವುಗಳಿಗೆ ಪ್ರತೀಕಾರವನ್ನೆಸಗುವ ಕುರಿತು ಕೂಗುಗಳು, ಒತ್ತಾಯಗಳು ಕೇಳಿಬರುತ್ತಿವೆ. ಇಂಥ ವಾತಾವರಣದಲ್ಲಿ ಬೆಳೆದವರಿಗೆ ಚರಿತ್ರೆಯ ಕುರಿತ ಕುತೂಹಲವೇನಿದ್ದರೂ ಸ್ವ ಪಕ್ಷದ ಮೇಲೆ ಪರಪಕ್ಷದವರು ಏನೇನು ಹಾನಿ ಎಸಗಿದರು ಎಂಬುದಕ್ಕಷ್ಟೇ ಸೀಮಿತವಾಗುತ್ತಿದೆ. ಗತದ ಜೊತೆಗೆ ಇಂಥ ಆಸಕ್ತಿಯನ್ನು ಬೆಳೆಸಿಕೊಂಡ ನಮಗೆ ಚರಿತ್ರೆಯನ್ನಿಟ್ಟುಕೊಂಡು ವರ್ತಮಾನದ ಭಾವನೆಗಳನ್ನು ಕೆರಳಿಸುವುದೇ ನೈತಿಕತೆಯಾಗಿ ಕಾಣಿಸುವುದರಿಂದ ವ್ಯತಿರಿಕ್ತವಾದ ಕಥನಗಳು ಅನೈತಿಕವಾಗಿ ಕೂಡ ಕಾಣಿಸುತ್ತವೆ. ಉದಾಹರಣೆಗೆ ಮುಸ್ಲಿಂ ರಾಜರ ಕಾಲದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳಾದ ಘಟನೆಗಳು ನಮ್ಮ ಚರಿತ್ರೆಯಲ್ಲಿವೆ. ಅದು ಕಾಲದೋಷವೇ ಹೊರತೂ ಅವರದಲ್ಲ ಎಂದು ಯಾರಾದರೂ ಹೇಳಿದರೆ ಅದು ಮುಸ್ಲಿಂಪರ ವಾದವಾಗಿ, ಹಿಂದೂ ವಿರೋಧಿಯಾಗಿ ಕಾಣಿಸಬಹುದು.
ಹಿಂದೂ ಮುಸ್ಲಿಂ ಸಂಘರ್ಷದ ಸಂದರ್ಭದಲ್ಲಿ ಗತದ ಘಟನೆಗಳನ್ನು ನಿರ್ವಿಕಾರವಾಗಿ ನೋಡಬೇಕೆಂಬ ಪ್ರಸ್ತಾಪಗಳೂ ಅನೇಕ ಸೆಕ್ಯುಲರ್ ಬುದ್ಧಿಜೀವಿಗಳಿಂದ ಬಂದಿವೆಯೇನೋ ನಿಜ. ಆದರೆ ಅವರೇ ಸಾಮಾಜಿಕ ನ್ಯಾಯದ ಸಂದರ್ಭದಲ್ಲಿ ಅದೇ ಚರಿತ್ರೆಯ ಘಟನೆಗಳನ್ನು ಆಧರಿಸಿಕೊಂಡು ಕೆಲವು ಮೇಲ್ಟಾತಿಗಳ ಕುರಿತು ಇಷ್ಟೇ ಅಥವಾ ಇದಕ್ಕಿಂತಲೂ ದ್ವೇಷಕಾರುವ ಭಾಷಣಗಳನ್ನು ಮುಂದುವರೆಸಿರುತ್ತಾರೆ.
ಹಾಗೂ ಅದು ನಮ್ಮ ಸಮಾಜದ ಕಲ್ಯಾಣಕ್ಕೆ ಅತ್ಯಗತ್ಯ ಎಂದು ಭಾವಿಸಿರುತ್ತಾರೆ. ಅಂಥ ಎಲ್ಲ ಮಾತುಗಳನ್ನೂ ನಿಲ್ಲಿಸಬೇಕೆಂಬ ಪ್ರಸ್ತಾಪವು ಅವರಿಗೆ ಪ್ರತಿಗಾಮಿಗಳ ಹುನ್ನಾರವಾಗಿ ಕಂಡರೂ ಆಶ್ಚರ್ಯವಿಲ್ಲ. ಚರಿತ್ರೆಯನ್ನು ಹೀಗೇ ನೋಡಬೇಕೆಂಬ ನಿರ್ಬಂಧಕ್ಕೆ ನಾವೆಲ್ಲ ಒಳಗಾಗಿರುವುದರಿಂದ ಅದು ನಮಗೆ ಶಾಂತಿ ಸೌಹಾರ್ದವನ್ನು ದಯಪಾಲಿಸುತ್ತದೆ ಎಂಬುದು ದೊಡ್ಡ ಭ್ರಮೆ. ಇಂಥ ಚರಿತ್ರೆಯೇ ಗತಕಾಲದ ಸತ್ಯವನ್ನು ವಸ್ತುನಿಷ್ಠವಾಗಿ ತಿಳಿಸುತ್ತದೆ ಎಂದು ನಂಬಿದ ತಲೆಮಾರಿಗಂತೂ ದೇವಚಂದ್ರನ ಕಥನ ಹಾಗೂ ಧೋರಣೆಗಳೆರಡೂ ಹಾಸ್ಯಾಸ್ಪದ ಎನ್ನುವಂತೆ ಆಗಿದೆ.