Home ವಸಾಹತು ಪ್ರಜ್ಞೆಬುದ್ಧಿಜೀವಿಗಳ ಮೂಢನಂಬಿಕೆಗಳು ಭಾರತೀಯರಿಗೆ ಭಾಷೆಯೇಕೆ ಬಡಿದಾಟದ ವಿಷಯವಾಗಿದೆ?

ಭಾರತೀಯರಿಗೆ ಭಾಷೆಯೇಕೆ ಬಡಿದಾಟದ ವಿಷಯವಾಗಿದೆ?

by Rajaram Hegde
96 views

ರಾಷ್ಟ್ರ ಎಂಬುದು ನೇಶನ್ ಸ್ಟೇಟ್ ಎಂಬ ಆಂಗ್ಲ ಶಬ್ದದ ಭಾಷಾಂತರವಾಗಿದೆ. ನೇಶನ್ ಸ್ಟೇಟ್ ಎಂಬುದು ಜನಾಂಗದ ಆಳ್ವಿಕೆ. ಈ ಜನಾಂಗವನ್ನು ನಿರ್ಧರಿಸುವ ಅಂಶಗಳೆಂದರೆ ಭಾಷೆ, ರಿಲಿಜನ್ನು ಹಾಗೂ ಒಂದೇ ಮೂಲ. ಇವು ಬಂಧುತ್ವ (ಎಥ್ನಿಸಿಟಿ)ವನ್ನು ರಚಿಸುತ್ತವೆ ಎನ್ನಲಾಗುತ್ತದೆ. ಇಂದಿನ ಭಾಷಾವಾರು ರಾಜ್ಯಗಳು ಭಾರತವೆಂಬ ರಾಷ್ಟ್ರದ ಪ್ರಾಂತ್ಯಗಳು ಮಾತ್ರವೇ ಅಲ್ಲ, ಅವು ಪ್ರತ್ಯೇಕ ರಾಷ್ಟ್ರೀಯತೆಗಳೇ ಆಗಿವೆ. ಏಕೆಂದರೆ ಅವು ಕೂಡ ಭಾಷೆಯನ್ನಾಧಾರವಾಗಿಟ್ಟುಕೊಂಡು ಜನಾಂಗೀಯ ಬಂಧುತ್ವವನ್ನು ಪ್ರತಿಪಾದಿಸುತ್ತವೆ. ಆದರೆ ಭಾರತೀಯ ಸಂದರ್ಭದಲ್ಲಿ  ಇಂಥ ಪಾಶ್ಚಾತ್ಯ ಕಲ್ಪನೆಗಳು ಅವಾಸ್ತವಿಕವಾಗಿವೆ.

ಭಾರತದಲ್ಲಿ ಇಂದು ಭಾಷೆ ಎಂಬುದು ಬಡಿದಾಟದ ವಸ್ತುವಾಗಿದೆ. ವಿಭಿನ್ನ ಭಾಷೆಗಳುಳ್ಳ ಭಾಷಾವಾರು ರಾಜ್ಯಗಳು ಅಕ್ಕ ಪಕ್ಕದಲ್ಲಿದ್ದರಂತೂ ಗಡಿ ಸಮಸ್ಯೆ, ನದಿನೀರಿನ ಹಂಚಿಕೆಯ ಸಮಸ್ಯೆ, ವಲಸೆಯ ಸಮಸ್ಯೆ, ಹೀಗೆ ಹಲವು ಸಮಸ್ಯೆಗಳು ಭಾಷೆಯ ಸಮಸ್ಯೆಗಳಾಗಿ ಅವತರಿಸುತ್ತವೆ. ಇತ್ತೀಚೆಗೆ ಮಹಾರಾಷ್ಟ್ರದ ಗಡಿಯಲ್ಲಿದ್ದ ಯೆಳ್ಳೂರಿನಲ್ಲಿ ಹಾಕಿದ್ದ ಮಹಾರಾಷ್ಟ್ರ ರಾಜ್ಯ ಎಂಬ ಮರಾಠೀ ಫಲಕವನ್ನು ತೆಗೆಯಬೇಕೆಂದು ಸುಪ್ರೀಂ ಕೋರ್ಟು ತೀರ್ಮಾನ ಕೊಟ್ಟಿತು. ಅದನ್ನನುಸರಿಸಿ ಕರ್ನಾಟಕ ಸರ್ಕಾರವು ಆ ಫಲಕವನ್ನು ಕಿತ್ತು ಕರ್ನಾಟಕದ ಫಲಕವನ್ನು ಹಾಕಿತು. ಒಂದೇ ದಿನದಲ್ಲಿ ಅಲ್ಲಿನ ಎಂಇಎಸ್ ಕಾರ್ಯಕರ್ತರು ಸೇರಿ ಆ ಫಲಕವನ್ನು ಕಿತ್ತು, ಸತ್ಯಾಗ್ರಹವನ್ನು ಆರಂಭಿಸಿದರು. ಜೊತೆಗೇ ಅವರು ಬಸ್ಸುಗಳ ಮೇಲೆ ಹಾಗೂ ಪೋಲೀಸರ ಮೇಲೆ ಕಲ್ಲು ತೂರಿದರು. ಅದಕ್ಕೆ ಪ್ರತಿಯಾಗಿ ಕರ್ನಾಟಕ ಪೋಲೀಸರು ಮರಾಠೀ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜನ್ನು ಮಾಡಿದರು. ಅವರು ಯೆಳ್ಳೂರಿನ ಪ್ರತಿಭಟನಾಕಾರರನ್ನು ಥಳಿಸುವ ದೃಶ್ಯಗಳನ್ನು ಕನ್ನಡಿಗರ ವಿಜಯೋತ್ಸವ ಎಂಬಂತೇ ನಮ್ಮ ಕನ್ನಡ ಸುದ್ದಿವಾಹಿನಿಗಳಲ್ಲಿ ಪದೇ ಪದೇ ಹಾಕಿದರು.

               ಇದಕ್ಕಿಂತಲೂ ವಿಚಿತ್ರವಾದ ಸುದ್ದಿಯೊಂದನ್ನು ವಾಹಿನಿಗಳು ಪ್ರಕಟಿಸಿದವು.  ಅದು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಹೇಳಿಕೆ. ’ಯೆಳ್ಳೂರಿನಲ್ಲಿ ಪೋಲೀಸರ ದೌರ್ಜನ್ಯವನ್ನು ನೋಡಿದರೆ ಯೆಳ್ಳೂರಿನ ಮರಾಠಿಗಳು ಭಾರತ ದೇಶದ ನಾಗರೀಕರೇ ಅಲ್ಲವೇನೋ ಎನ್ನುವಂತಿದೆ. ಇದು ಬ್ರಿಟಿಷರು, ಮೊಘಲರು ಭಾರತೀಯರ ಮೇಲೆ ಮಾಡಿದ ದೌರ್ಜನ್ಯಕ್ಕಿಂತ ಕ್ರೂರ.’ ಅಷ್ಟೇ ಅಲ್ಲದೇ ಮಹಾರಾಷ್ಟ್ರ ಸರ್ಕಾರವು ಹೊಡೆತ ತಿಂದ ಮರಾಠಿಗರಿಗೆ ಪರಿಹಾರವನ್ನೂ ಘೋಷಿಸಿತು. ಮಹಾರಾಷ್ಟ್ರೀಯ ರಾಜಕಾರಣಿಗಳಿಗೆ ಬೆಳಗಾಂ ವಿಮೋಚನೆ ಹಾಗೂ ಕನ್ನಡ ವಿರೋಧ ಅವರ ರಾಜಕೀಯ ಭವಿಷ್ಯಕ್ಕೆ ಸಂಬಂಧಪಟ್ಟ ವಿಚಾರವೇ ಆಗಿದೆ. ಅವರು ಕೇವಲ ಆ ರಾಜಕೀಯದ ಒಂದು ಭಾಗವಾಗಿ ಇಲ್ಲಿ ಭಾರತ ದೇಶ ಎಂಬ ಶಬ್ದವನ್ನು ಬಳಸುತ್ತಿದ್ದಾರೆ. ಮರಾಠಿಗರೊಂದೇ ಅಲ್ಲ, ನಮ್ಮ ಕನ್ನಡ ರಾಜಕಾರಣಿಗಳೂ ಕೂಡ ಕನ್ನಡ ಭಾಷೆಯನ್ನು ತಮ್ಮ ರಾಜಕೀಯ ಭವಿಷ್ಯಕ್ಕೆ ಸಂಬಂಧಪಡದ ವಿಚಾರ ಎಂದೇನೂ ಭಾವಿಸಿಲ್ಲ.

               ಅಂದರೆ ನಮ್ಮ ಈ ಭಾಷಾ ರಾಜಕಾರಣದ ಸ್ವರೂಪ ಹೇಗಿದೆಯೆಂದರೆ, ಇಲ್ಲಿ ಎರಡು ವೈರಿ ಜನಾಂಗಗಳು ಇವೆ. ಅವು ಭಾಷೆಯನ್ನಾಧರಿಸಿ ರೂಪುಗೊಂಡಿವೆ. ಅವರಲ್ಲಿ ಒಬ್ಬರಿಗೆ ಲಾಭವಾಗಬೇಕಾದರೆ ಮತ್ತೊಬ್ಬನಿಗೆ ನಷ್ಟವಾಗಲೇಬೇಕಾದ ನಿಬಂಧನೆಯಿದೆ. ಒಬ್ಬನಿಗೆ ಸಂತೋಷವಾಗಬೇಕಾದರೆ ಮತ್ತೊಬ್ಬನಿಗೆ ದುಃಖವಾಗಲೇಬೇಕಾದ ಷರತ್ತು ಇದೆ. ಭಾಷೆಯೆಂಬ ಸಂಗತಿಯು ಒಂದಷ್ಟು ಬಸ್ಸುಗಳನ್ನು ಹಾಳುಮಾಡಿ, ಪ್ರಯಾಣಿಕರನ್ನು ಗಾಯಗೊಳಿಸಿ, ನಾಗರಿಕರ ಬೆನ್ನುಮೂಳೆ ಮುರಿದು, ಒಟ್ಟಿಗಿದ್ದ  ಒಂದು ಸಮುದಾಯವನ್ನು ಒಡೆದು ವೈರತ್ವವನ್ನು ಬೆಳೆಸಿಯಾದರೂ ಸಾಧಿಸಬೇಕಾದ ಸಂಪತ್ತು ಎಂದು ಈ ಭಾಷಾ ರಾಜಕಾರಣ ಏಕೆ ನಂಬುತ್ತದೆ? ಭಾಷೆಯಿರುವುದು ಸಂವಹನೆಗೆ, ಗೊಂದಲವನ್ನು ತಿಳಿಗೊಳಿಸುವುದಕ್ಕೆ ಹಾಗೂ ಜನರನ್ನು ಒಟ್ಟಿಗೆ ತರುವುದಕ್ಕೆ ಎಂದು ನಾವು ದಣಿವಿಲ್ಲದೇ ಭಾಷಣ ಮಾಡುತ್ತಿರುತ್ತೇವೆ. ಇಲ್ಲಿ ಭಾಷೆಯೇ ಅದಕ್ಕೆ ದೊಡ್ಡ ತಡೆಯಾಗಿದೆಯಲ್ಲ? ಇಂಥ ವಿಷಯಗಳು ಈ ಭಾಷಾವಾರು ಪ್ರಾಂತ್ಯಗಳ ಪ್ರಜೆಗಳಿಗೆ ಅರ್ಥವಾಗುವ ವಿಷಯಗಳಲ್ಲ.   ಯೆಳ್ಳೂರಿನ ಮರಾಠಿಗರು ಕರ್ನಾಟಕದ ಪ್ರಜೆಗಳು. ಕರ್ನಾಟಕದ ಪ್ರಜೆಗಳು ಕಾನೂನನ್ನು ಉಲ್ಲಂಘಿಸಿ ಏಟು ತಿಂದರೆ ಅದು ಕರ್ನಾಟಕದ ಸಮಸ್ಯೆಯಾಗಿ ಏಕೆ ಉಳಿಯುವುದಿಲ್ಲ? ಮಹಾರಾಷ್ಟ್ರದ ಮುಖ್ಯಮಂತ್ರಿಯೇಕೆ ನೊಂದುಕೊಳ್ಳುತ್ತಾರೆ?

               ಈ ಕರ್ನಾಟಕ. ಮಹಾರಾಷ್ಟ್ರ ಇವೆಲ್ಲ ಪ್ರತ್ಯೇಕ ರಾಜ್ಯಗಳು. ಅಷ್ಟಾದರೂ ಕೂಡ ಕರ್ನಾಟಕದೊಳಗೆ ಮಹಾರಾಷ್ಟ್ರದ ಪ್ರಜೆಗಳಿದ್ದಾರೆ ಎಂದು ಭಾವಿಸುವ, ಹಾಗೂ ಮಹಾರಾಷ್ಟ್ರದಲ್ಲಿ ಕರ್ನಾಟಕದ ಪ್ರಜೆಗಳಿದ್ದಾರೆ ಎಂದು ಭಾವಿಸುವ ಸನ್ನಿವೇಶಗಳು ರಾಜಕೀಯದಲ್ಲಿ ಜೀವಂತವಾಗಿವೆ. ಅಷ್ಟೇ ಅಲ್ಲ, ಇವರಿಗೆ ನಾವು ಭಾರತ ದೇಶದ ಕಾನೂನಿಗೆ ಒಳಪಟ್ಟಿದ್ದೇವೆ ಎಂಬ ಬದ್ಧತೆಯೂ ಇಲ್ಲ. ತಮ್ಮ ದೇಶದ ಕಾನೂನನ್ನು ಮುರಿಯುವುದು ಅಪರಾಧ ಎಂದು ಇವರಿಗೆ ಅನಿಸುವುದಿಲ್ಲ. ಭಾರತವು ನಮ್ಮ ರಾಷ್ಟ್ರ ಎಂದು ಒಂದೆಡೆ ಅನ್ನುತ್ತಾರೆ, ಮತ್ತೊಂದೆಡೆ ತಾವಿರುವ ಭಾಗವು ಅನ್ಯಾಕ್ರಮಣಕ್ಕೆ ಒಳಗಾಗಿದೆ ಎಂದು ನಂಬಿಕೊಂಡು ಬಿಡುಗಡೆಗಾಗಿ ಹೋರಾಡುತ್ತಿದ್ದಾರೆ. ಇದೊಂದು ವಿಚಿತ್ರ ಪರಿಸ್ಥಿತಿಯಾಗಿದೆ. ಈ ಪರಿಸ್ಥಿತಿ ಉಂಟಾದದ್ದು ಭಾಷಾ ರಾಜಕೀಯದಿಂದ. ಅಂದರೆ ೧. ಭಾಷೆ ಎಂಬುದು ಒಂದು ಎಥ್ನಿಕ್ (ಜನಾಂಗೀಯ ಬಂಧುತ್ವ) ಗುರುತು, ೨. ಜನಾಂಗೀಯ ಬಂಧುತ್ವವು ರಾಷ್ಟ್ರೀಯತೆಯ ಲಕ್ಷಣ. ೩. ಹಾಗಾಗಿ ಜನಾಂಗವೊಂದಕ್ಕೆ ಸಾರ್ವಭೌಮತ್ವವನ್ನು ನೀಡುವ ಪ್ರತ್ಯೇಕ ಪ್ರಭುತ್ವವಿರಬೇಕು ಎಂಬ ಮೂರು ನಂಬಿಕೆಗಳು ಇಲ್ಲಿ ಕೆಲಸಮಾಡುತ್ತಿವೆ.

               ಪಾಶ್ಚಾತ್ಯರ ಪ್ರಕಾರ ಮನುಷ್ಯರು ಜನಾಂಗೀಯ ಬಂಧುತ್ವದ ( ಎಥ್ನಿಸಿಟಿ) ಆಧಾರದ ಮೇಲೆ ಬೇರೆ ಬೇರೆ ಗುಂಪುಗಳಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿರುತ್ತಾರೆ. ಇಂಥ ಜನಾಂಗೀಯತೆಯನ್ನು ರಚಿಸುವ ಒಂದು ಅಂಶವೆಂದರೆ ಭಾಷೆಯಾಗಿದೆ. ಒಂದೇ ಭಾಷೆಯನ್ನು ಕಲಿಯುವ ಹಾಗೂ ಆಡುವ ಮೂಲಕ ಮನುಷ್ಯರು ತಾವು ಒಂದೇ ಜನಾಂಗ ಎಂದು ಭಾವಿಸುತ್ತಾರೆ. ತನ್ನ ಜನಾಂಗದ ಭಾಷೆಯನ್ನು ಮನುಷ್ಯನು ಮೊಟ್ಟಮೊದಲು ಕಲಿಯುತ್ತಾನೆ. ಅದನ್ನೇ ಮಾತೃಭಾಷೆ ಎನ್ನಲಾಗುತ್ತದೆ. ಈ ಮಾತೃಭಾಷೆಯನ್ನು ಆಡುವುದಕ್ಕೂ, ನಂತರ ಕಲಿತ ಇತರ ಭಾಷೆಗಳನ್ನು ಆಡುವುದಕ್ಕೂ ವ್ಯತ್ಯಾಸವಿದೆ. ಮಾತೃಭಾಷೆಯು ಬಂಧುತ್ವವನ್ನು ಬೆಸೆಯುತ್ತದೆ, ಅನ್ಯ ಭಾಷೆಗಳು ಕೇವಲ ವ್ಯವಹಾರಕ್ಕೆ ಮಾತ್ರವೇ ಸೀಮಿತವಾಗಿರುತ್ತವೆ. ಮಾತೃಭಾಷೆಯು ಜನಾಂಗೀಯತೆಯನ್ನು ಅನುಭವಕ್ಕೆ ತರುತ್ತದೆ.

               ಪಾಶ್ಚಾತ್ಯ ಪಂಡಿತರ ಪ್ರಕಾರ ಜನಾಂಗವೆಂಬುದು ಕೇವಲ ಒಂದೇ ಭಾಷೆಯನ್ನಾಡುವ ಮನುಷ್ಯರ ಗುಂಪು ಮಾತ್ರವಲ್ಲ, ಅದು ಒಂದು ನಿರ್ದಿಷ್ಟ ಭೂಪ್ರದೇಶದ ಒಳಗೆ ವ್ಯಾಪಿಸಿರತಕ್ಕ ಗುಂಪಾಗಿದೆ. ಅಂದರೆ ಜನಾಂಗಕ್ಕೆ ಭೂಪ್ರದೇಶವು ಮೂಲ ಲಕ್ಷಣವಾಗಿದೆ. ಭಾಷೆ ಎನ್ನುವುದು ಜನಾಂಗವನ್ನು ರಚಿಸುವ ಹಾಗೂ ಬೆಸೆಯುವ ಒಂದು ಅಂಶವಾಗಿದ್ದೇ ಹೌದಾದರೆ ಅದೂ ಆಯಾ ಜನಾಂಗದ ಭೂಪ್ರದೇಶದಲ್ಲಿ ಇರಲಿಕ್ಕೇ ಬೇಕು. ಅಂದರೆ ಜನಾಂಗಗಳ ಗುರುತು ಭಾಷೆ ಎಂದಮೇಲೆ ಜನಾಂಗದ ಭೂಪ್ರದೇಶವನ್ನು ಭಾಷೆಯನ್ನಾಧರಿಸಿ ಕೂಡ ಗುರುತಿಸಬಹುದು. ಜನಾಂಗಗಳ ಭೌತಿಕ ಗಡಿ ಹಾಗೂ ಭಾಷೆಯ ಗಡಿಗಳು ಒಂದೇ ಆಗಿರುತ್ತವೆ. ಪಾಶ್ಚಾತ್ಯ ವಿದ್ವಾಂಸರ ಈ ನಿರ್ಣಯಗಳು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಎದ್ದುಕಾಣುವ ಕೆಲವು ವಾಸ್ತವಗಳನ್ನು ಆಧರಿಸಿ ಇದ್ದವು. ಉದಾಹರಣೆಗೆ ಫ್ರೆಂಚ್, ಬ್ರಿಟಿಷ್, ಡಚ್, ಜರ್ಮನ್, ಪೋಲಿಷ್, ಸ್ಪ್ಯಾನಿಷ್, ಇಟಾಲಿಯನ್, ಪೋರ್ಚುಗೀಸ್, ಇತ್ಯಾದಿ ಭೂಪ್ರದೇಶಗಳು ಕೇವಲ ರಾಜಕೀಯ ಗಡಿರೇಖೆಗಳಲ್ಲ. ಅವು ಭಾಷಾ ಪ್ರದೇಶಗಳು ಹಾಗೂ ಜನಾಂಗೀಯತೆಗಳು ಎಂದೂ ಭಾವಿಸಲಾಗುತ್ತದೆ. ಅವುಗಳನ್ನಾಧರಿಸಿ ಅವು ಪ್ರತ್ಯೇಕ ರಾಷ್ಟ್ರಗಳಾಗಿ ಮೈದಳೆದವು.     

               ಜನಾಂಗಗಳ ಕುರಿತ ಪಾಶ್ಚಾತ್ಯ ಸಿದ್ಧಾಂತಕ್ಕೆ ಇನ್ನೂ ಒಂದು ಆಯಾಮವಿದೆ. ಅದೆಂದರೆ ಈ ಜನಾಂಗಗಳು ವ್ಯಕ್ತಿಗಳಿದ್ದ ಹಾಗೇ. ಅವಕ್ಕೂ ಸ್ವಂತಿಕೆ ಇರುತ್ತದೆ. ಸ್ವಾತಂತ್ರ್ಯ ಇರುತ್ತದೆ, ಹಿತಾಸಕ್ತಿಯಿರುತ್ತದೆ, ಉದ್ದೇಶಸಾಧನೆ ಇರುತ್ತದೆ. ಅದೇ ರೀತಿಯಲ್ಲಿ, ಒಂದು ಜನಾಂಗವು ಮತ್ತೊಂದು ಜನಾಂಗವನ್ನು ತನ್ನ ಉದ್ದೇಶ ಸಾಧನೆಗಾಗಿ ಹತ್ತಿಕ್ಕಬಲ್ಲದು.  ತಮ್ಮ ಉದ್ದೇಶಿತ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಜನಾಂಗಗಳಿಗೆ ಸ್ವಾತಂತ್ರ್ಯ ಇರಬೇಕಾದರೆ ಅವು ತಮ್ಮ ಶಾಸನವನ್ನು ತಾವೇ ಮಾಡಿಕೊಳ್ಳಬೇಕು. ಅನ್ಯ ಜನಾಂಗಗಳ ಶಾಸನಕ್ಕೆ ಒಳಗಾಗಬಾರದು. ತನ್ನ ಶಾಸನವನ್ನು ತಾನೇ ಮಾಡಿಕೊಳ್ಳುವುದೇ ಸಾರ್ವಭೌಮತ್ವ ಎನಿಸಿಕೊಳ್ಳುತ್ತದೆ. ಹಾಗೆ ತನ್ನ ಶಾಸನವನ್ನು ತಾನೇ ಮಾಡಿಕೊಳ್ಳುವ ಸ್ಥಿತಿಯನ್ನು ಪಡೆಯಬೇಕಾದರೆ ಜನಾಂಗವೊಂದು ತನ್ನದೇ ಪ್ರತ್ಯೇಕ ರಾಷ್ಟ್ರವನ್ನು ರಚಿಸಿಕೊಳ್ಳಬೇಕು. ರಾಷ್ಟ್ರವೆನ್ನುವುದು ತನ್ನ ಶಾಸನವನ್ನು ತಾನೇ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಪಡೆದ ಜನಾಂಗ.

               ಇದು ಥಿಯಾಲಜಿಯಿಂದ ಪಾಶ್ಚಾತ್ಯರು ಪಡೆದುಕೊಂಡ ನಂಬಿಕೆ. ಥಿಯಾಲಜಿಯ ಪ್ರಕಾರ ಗಾಡ್ ತನ್ನ ಶಾಸನವನ್ನು ಮಾಡಬಲ್ಲವನು ಹಾಗೂ ಮನುಷ್ಯನು ಆ ಶಾಸನಕ್ಕೆ ಅಧೀನನಾಗಿದ್ದಾನೆ. ಹಾಗಾಗಿ ಗಾಡ್ ಒಬ್ಬನೇ ಸಾರ್ವಭೌಮ. ಈ ಥಿಯಾಲಜಿಯ ಕಲ್ಪನೆಯು ೧೭ನೆಯ ಶತಮಾನದ ಯುರೋಪಿನಲ್ಲಿ ಸೆಕ್ಯುಲರೀಕರಣಕ್ಕೆ ಒಳಗಾಯಿತು. ಆ ಹಂತದಲ್ಲಿ ಗಾಡ್ ಈ ಭೂಮಿಯ ಮೇಲೆ ತಾನು ಸೃಷ್ಟಿಸಿದ ಮನುಷ್ಯನಿಗೆ ಅಧಿಕಾರವನ್ನು ನೀಡಿರುವುದರಿಂದ ಭೂಮಿಗೆ ಮನುಷ್ಯನೇ ಸಾರ್ವಭೌಮ ಎಂಬ ಕಲ್ಪನೆ ಬೆಳೆಯಿತು. ಅಂದರೆ ಮನುಷ್ಯನು ಈ ಮರ್ತ್ಯಪ್ರಪಂಚಕ್ಕೆ ಸಂಬಂಧಿಸಿದ ಕಾನೂನನ್ನು ಮಾಡಿಕೊಳ್ಳುವ ಮಟ್ಟಿಗೆ ಸಾರ್ವಭೌಮನೇ ಆಗಿದ್ದಾನೆ. ಆದರೆ ಪ್ರತೀ ವ್ಯಕ್ತಿಯೂ ತನ್ನ ಶಾಸನವನ್ನು ಮಾಡಿಕೊಳ್ಳುವುದು ಪ್ರಾಯೋಗಿಕವಾದುದಲ್ಲ. ಹಾಗಾಗಿ ರಾಷ್ಟ್ರವೆಂಬ ಸಾಮೂಹಿಕ ಹಿತಾಸಕ್ತಿ ಹಾಗೂ ಉದ್ದೇಶಗಳ ಕಲ್ಪನೆಯನ್ನು ಬೆಳೆಸಿಕೊಂಡ ಪ್ರಭುತ್ವಗಳು ಬೆಳೆದುಬಂದವು. ಆದರೆ ಒಬ್ಬೊಬ್ಬರ ಉದ್ದೇಶ ಒಂದೊಂದು ರೀತಿ ಇರುವಾಗ ಸಮುದಾಯಗಳ ಸಾರ್ವಭೌಮತ್ವವು ವ್ಯಕ್ತಿಗಳ ಸಾರ್ವಭೌಮತ್ವವನ್ನು ರಕ್ಷಿಸುವುದು ಹೇಗೆ? ಆಗ ಈ ರಾಷ್ಟ್ರಗಳಿಗೆ ಜನಾಂಗೀಯತೆಯು ಒಂದು ಜನಸಮುದಾಯವನ್ನು ವ್ಯಕ್ತಿಯ ಹಾಗೇ ಕಲ್ಪಿಸಿಕೊಳ್ಳಲು ಸಹಾಯ ಮಾಡಿತು. ಅಂದರೆ ಒಂದು ಜನಾಂಗಕ್ಕೆ ಏಕೈಕ ಹಿತಾಸಕ್ತಿ, ಉದ್ದೇಶ, ಗುರಿ ಇತ್ಯಾದಿಗಳು ಇರುವುದರಿಂದ ಆ ಜನಾಂಗದ ಸಾರ್ವಭೌಮತ್ವವು ಅದರ ಸದಸ್ಯರೆಲ್ಲರ ಹಿತಾಸಕ್ತಿಯನ್ನು ರಕ್ಷಿಸಲೇಬೇಕು.  ಹೀಗೆ ಸೆಕ್ಯುಲರ್ ರಾಷ್ಟ್ರ ಪ್ರಭುತ್ವಗಳು ಮನುಷ್ಯ ಜನಾಂಗಗಳ  ಸಾರ್ವಭೌಮತ್ವವನ್ನು ಸಾಕಾರಗೊಳಿಸುವ ವ್ಯವಸ್ಥೆಗಳಾಗಿ ಅಸ್ತಿತ್ವಕ್ಕೆ ಬಂದವು.

               ವಸಾಹತು ಕಾಲದಲ್ಲಿ ಈ ಚಿಂತನೆಗಳು ಭಾರತೀಯ ರಾಜಕೀಯವನ್ನೂ ರೂಪಿಸಿದವು. ಇಂದು ಇವೆಲ್ಲವೂ ಸಮಸ್ಯಾತ್ಮಕ ವಿಚಾರಗಳು ಎಂಬುದನ್ನು ಪಾಶ್ಚಾತ್ಯ ವಿದ್ವಾಂಸರು ಗುರುತಿಸಿದ್ದಾರೆ. ಐರೋಪ್ಯ ರಾಜಕೀಯವು ಹೊಸ ನೆಲೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಭಾರತದಲ್ಲಿ ವಸಾಹತು ರಾಜಕೀಯವೇ ಮುಂದುವರಿದಿದೆ.

               ಯುರೋಪಿನಲ್ಲಿ ನಡೆದ ಈ ಮೇಲಿನ ಬೆಳವಣಿಗೆಯನ್ನು ಗಮನಿಸಿದಾಗ ಭಾರತದಲ್ಲಿ ಏನು ತೊಡಕಾಗುತ್ತಿದೆ ಎಂಬುದು ಸ್ಪಷ್ಟಗೊಳ್ಳುತ್ತದೆ. ಇಲ್ಲಿ ನಾವು ಭಾರತವನ್ನು ರಾಷ್ಟ್ರ ಎನ್ನುತ್ತೇವೆ. ಆದರೆ ಒಂದು ಏಕೈಕ ಜನಾಂಗೀಯತೆ ಅದಕ್ಕಿಲ್ಲ. ಅಂದರೆ ಜನಾಂಗೀಯ ಬಂಧುತ್ವವನ್ನು ಯುರೋಪಿಯನ್ನರು ಹೇಗೆ ಲಕ್ಷಣೀಕರಿಸುತ್ತಾರೆಯೋ ಆ ಲಕ್ಷಣಗಳು ಅದರಲ್ಲಿ ಕಂಡುಬರುವುದಿಲ್ಲ. ಇಲ್ಲಿ ಏಕೈಕ ರಿಲಿಜನ್ನಿಲ್ಲ, ಭಾಷೆಯಿಲ್ಲ, ಹಾಗಾಗಿ ಜನಾಂಗೀಯ ಬಂಧುತ್ವವೂ ಇಲ್ಲ. ಅಷ್ಟಾಗಿಯೂ ಭಾರತೀಯ ರಾಷ್ಟ್ರ ಪ್ರಭುತ್ವವನ್ನು ರಚಿಸಿಕೊಂಡಿದ್ದೇವೆ. ಸಾರ್ವಭೌಮತ್ವವನ್ನು ಪಡೆದಿದ್ದೇವೆ ಹಾಗೂ ಶಾಸನಗಳನ್ನು ಮಾಡಿಕೊಂಡಿದ್ದೇವೆ. ಆದರೆ ಇದರ ಜೊತೆಗೇ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯೂ ನಡೆಯಿತು ಹಾಗೂ ಈ ಪ್ರದೇಶಗಳಿಗೆ ರಾಜ್ಯದ ಸ್ಥಾನಮಾನವನ್ನು ನೀಡಲಾಯಿತು. ಈ ಇಡೀ ಪ್ರಕ್ರಿಯೆಯ ಹಿಂದೆ ಭಾಷೆ ಹಾಗೂ ಜನಾಂಗಗಳ ಸಮೀಕರಣವು ಕೆಲಸಮಾಡಿದೆ. ಹಾಗಾಗಿ ಭಾರತವು ಒಂದೇ ರಾಷ್ಟ್ರವಾದರೂ ಅದರೊಳಗೆ ಹಲವಾರು ಜನಾಂಗೀಯತೆಗಳು ಪ್ರಸ್ತುತತೆ ಪಡೆದವು. ಅವುಗಳಲ್ಲಿ ಒಂದಕ್ಕೆ ಮತ್ತೊಂದು ತನ್ನ ಹಿತಾಸಕ್ತಿಗೆ ಮಾರಕ ಎನಿಸತೊಡಗಿದೆ. ಮತ್ತೊಂದು ಭಾಷಿಕ ರಾಜ್ಯದೊಳಗೆ ಸೇರಿಹೋದ ತನ್ನ ಭಾಷಿಕರನ್ನು ತನ್ನ ಜನಾಂಗೀಯ ಬಂಧುಗಳು ಎಂದು ಭಾವಿಸುವುದೂ, ಅಂಥವರನ್ನು ತನ್ನ ಪ್ರಭುತ್ವದ ಗಡಿಯೊಳಗೆ ತಂದು ಅವರನ್ನು ಬಿಡುಗಡೆಗೊಳಿಸುವುದೂ ಈ ಭಾಷಾ ರಾಜಕೀಯದ ಒಂದು ಕಾರ್ಯಕ್ರಮ ಎಂದು ತಿಳಿಯಲಾಗುತ್ತದೆ. ಅಂದರೆ ಜನಾಂಗೀಯತೆಯ ಸಿದ್ಧಾಂತವನ್ನಾಧರಿಸಿದ ಈ ರಾಜಕೀಯವು ಒಂದು ಭಾಷಾ ಗುಂಪು ಮತ್ತೊಂದು ಭಾಷಾ ಗುಂಪಿನ ಭವಿಷ್ಯಕ್ಕೆ ಕಂಟಕ ಎಂಬ ನಂಬಿಕೆಯನ್ನು ಪ್ರಚುರಪಡಿಸುತ್ತಿದೆ. ಭಾಷಾ ಗುಂಪುಗಳ ಉದ್ಧಾರ ಪ್ರತ್ಯೇಕ ರಾಜ್ಯದಲ್ಲೇ ಇದೆ ಎನ್ನುತ್ತದೆ.

               ಭಾರತಕ್ಕೆ ಸ್ವಾಂತಂತ್ರ್ಯ ಬಂದಿದ್ದು, ಅದನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸಿದ್ದು ಹಾಗೂ ಅಂಥ ರಾಜ್ಯಗಳ ಪ್ರಜೆಗಳಾಗಿ ನಾವು ನಮ್ಮ ಭಾಷಾ ಅಸ್ಮಿತೆಯನ್ನು ಪಡೆದುಕೊಂಡಿದ್ದು, ಹಾಗೂ ನೆರೆ ರಾಜ್ಯಗಳೊಂದಿಗೆ ಭಾಷೆಯ ಹೆಸರಿನಲ್ಲಿ ಬಡಿದಾಟಕ್ಕೆ ತೊಡಗಿದ್ದು ಈಗ ಇತಿಹಾಸ. ಭಾಷೆ ಹಾಗೂ ಜನಾಂಗೀಯತೆಯನ್ನು ತಳುಕುಹಾಕುವ ಬೌದ್ಧಿಕ ಚಟವನ್ನೂ ನಾವು ಸಾಕಷ್ಟು ರೂಢಿಸಿಕೊಂಡಿದ್ದೇವೆ. ಕನ್ನಡಿಗರು ಒಂದು ಜನಾಂಗ ಎಂದು ಭಾವಿಸಿಕೊಂಡು ಅವರ ಉಗಮ, ವಲಸೆಗಳ ಕುರಿತ ಸಂಶೋಧನೆಗಳು ನಡೆದಿವೆ. ಕನ್ನಡಿಗರೆಂದರೆ ಒಂದು ವ್ಯಕ್ತಿತ್ವವೋ ಎಂಬಂತೇ ಅವನ ಗುಣಲಕ್ಷಣಗಳನ್ನು ಪಟ್ಟಿಮಾಡಿಯಾಗಿದೆ. ಈ ಕನ್ನಡಿಗನ ಭವಿಷ್ಯಕ್ಕೆ ಮಾರಕವಾಗಬಲ್ಲ ಭಾಷೆಗಳನ್ನೂ ಗುರುತಿಸಿಕೊಂಡಿದ್ದೇವೆ. ಕನ್ನಡದಲ್ಲಿ ಅನ್ಯ ಭಾಷೆಯ ಅಕ್ಷರಗಳನ್ನೂ ಶಬ್ದಗಳನ್ನೂ ಗುರುತಿಸಿ ಅವನ್ನು ತೊಡೆದ ಹೊರತೂ ಕನ್ನಡಿಗರು ಉದ್ಧಾರವಾಗುವುದಿಲ್ಲ ಎನ್ನುತ್ತಿದ್ದೇವೆ, ಕನ್ನಡದವರಿಗೆ ಅವರದೇ ಆದ ಸ್ವತಂತ್ರ ಭೂ ಪ್ರದೇಶ ಇರಬೇಕೆನ್ನುತ್ತೇವೆ, ಆದರೆ ಏಕೆ? ಎನ್ನುವ ಪ್ರಶ್ನೆಗೆ ಯಾರಲ್ಲಾದರೂ ತರ್ಕಬದ್ಧವಾದ ಉತ್ತರವಿದೆ ಅನಿಸುವುದಿಲ್ಲ. ಅದು ಹೋಗಲಿ ಮಾತೃಭಾಷೆ, ಸೋದರ ಭಾಷೆ ಅಂದರೇನು? ಕನ್ನಡ ಸಂಸ್ಕೃತಿ, ಇತಿಹಾಸ ಎಂದರೇನು ಎಂಬುದೂ ನಮಗೆ ಸ್ಪಷ್ಟವಿಲ್ಲ. ಏಕೆಂದರೆ ಈ ಇಡೀ ಭಾಷಾ ರಾಜಕೀಯದ ಪರಿಕಲ್ಪನೆಗಳೇ ನಮ್ಮ ಬುದ್ಧಿಗೆ ಹಾಗೂ ಅನುಭವಕ್ಕೆ ನಿಲುಕದಂಥವು. ಭಾಷಾ ಜನಾಂಗೀಯತೆಯ ಕುರಿತ ಐರೋಪ್ಯ ಸಿದ್ಧಾಂತಗಳು ಈ ನೆಲದ ವಾಸ್ತವದಲ್ಲಿ ಬೆಳೆದವರಿಗೆ ಅರ್ಥವಾಗಲಾರವು.

               ಕರ್ನಾಟಕ ಎಂಬುದು ಒಂದು ಜನಾಂಗೀಯ ಭೂಪ್ರದೇಶವೆ? ಈ ಭೂಪ್ರದೇಶದೊಳಗಿರುವ ಎಲ್ಲರಿಗೂ ಕನ್ನಡವೇ ಮಾತೃಭಾಷೆಯೆ? ಹೋಗಲಿ ಮಾತೃಭಾಷೆ ಎನ್ನುವ ಶಬ್ದವನ್ನು ತರ್ಜುಮೆ ಮಾಡಿಕೊಂಡ ಭಾರತೀಯರಿಗೆ ಅದರ ಕಲ್ಪನೆಯಾದರೂ ಇದೆಯೆ? ನಮ್ಮಲ್ಲಿ ಹಲವು ಭಾಷೆಗಳು ಒಟ್ಟಿಗೇ ಇರುತ್ತವೆ. ಇಲ್ಲಿ ಹುಟ್ಟಿದ ಒಂದು ಮಗುವು ಸಲೀಸಾಗಿ ದ್ವಿಭಾಷಿ ಅಥವಾ ಬಹುಭಾಷಿಕನಾಗಿ ಬೆಳೆದಿರುತ್ತದೆ. ಭಾರತದಲ್ಲಿರುವ ಅಸಂಖ್ಯ ಭಾಷೆಗಳಲ್ಲಿ ಯಾವುದಾದರೂ ಎರಡರ ನಡುವೆ ವೈರತ್ವ ಬೆಳೆದ ದಾಖಲೆಯೂ ಇಲ್ಲ. ಭಾಷೆಗಳು ಒಟ್ಟಿಗೇ ಅಸ್ತಿತ್ವದಲ್ಲಿರುತ್ತಿದ್ದವು. ಕೆಲವೊಂದು ಪ್ರದೇಶಗಳಿಗೆ ಸೀಮಿತವಾಗಿ ಕೆಲವೊಂದು ಭಾಷೆಗಳು ಪ್ರಚಲಿತದಲ್ಲಿ ಇರುತ್ತಿದ್ದವೇನೋ ನಿಜ. ಆದರೆ ಅಂಥ ಪ್ರದೇಶಗಳಿಗೆ ಅನ್ಯ ಭಾಷಿಕ ಸಮುದಾಯಗಳನ್ನು ಒಳಗೊಳ್ಳುವಲ್ಲಿ ಯಾವುದೇ ಇರುಸು ಮುರುಸು ಕೂಡ ಇರಲಿಲ್ಲ. ಇದು ವಲಸೆ ಹೋದ ಭಾಷಿಕ ಸಮುದಾಯಕ್ಕೆ ತನ್ನ ಭಾಷೆಯನ್ನು ಮುಂದುವರಿಸಲು ಮುಕ್ತತೆಯನ್ನು ಸೃಷ್ಟಿಸುತ್ತದೆ.

               ಯುರೋಪು ಅಥವಾ ಅಮೇರಿಕೆಯಲ್ಲಿ ಈ ಪರಿಸ್ಥಿತಿ ಇಲ್ಲ. ಹಾಗಾಗಿ ಅಲ್ಲಿನ ಪ್ರಜೆಯೊಬ್ಬನು ಅನ್ಯ ರಾಷ್ಟ್ರಕ್ಕೆ ವಲಸೆ ಹೋದರೆ ಕಾಲಾಂತರದಲ್ಲಿ ಮನೆಯಲ್ಲಿಯೂ ಕೂಡ ತನ್ನ ಭಾಷೆಯನ್ನು ಬಿಟ್ಟು ಆ ರಾಷ್ಟ್ರದ ಭಾಷೆಯನ್ನು ಮಾತನಾಡಲು ತೊಡಗುತ್ತಾನೆ. ಭಾರತೀಯ ಕುಟುಂಬಗಳು ಅನ್ಯ ರಾಜ್ಯಗಳಿಗೆ ಅಥವಾ ದೇಶಗಳಿಗೆ ವಲಸೆ ಹೋದರೆ ಹಲವಾರು ತಲೆಮಾರುಗಳಾದರೂ ತಮ್ಮ ಮನೆಗಳೊಳಗೆ ತಮ್ಮ ಭಾಷೆಯನ್ನು ಬಿಡುವುದಿಲ್ಲ. ಸಾರ್ವಜನಿಕವಾಗಿ ಅನ್ಯ ಭಾಷೆಯನ್ನು ಕಲಿಯುವ ಅನಿವಾರ್ಯತೆ ಇರುವುದರಿಂದ ಅದನ್ನು ಕಲಿಯುತ್ತಾರೆ. ಕಲಿಯುವ ಅನಿವಾರ್ಯತೆ ಇಲ್ಲದಿದ್ದರೆ ಆ ರಾಜ್ಯದಲ್ಲಿ ಎಷ್ಟೇ ವರ್ಷ ವಾಸವಾಗಿದ್ದರೂ ಕಲಿಯುವುದಿಲ್ಲ. ಒಂದು ಭಾಷಿಕ ದ್ವೀಪವನ್ನೇ ರಚಿಸಿಕೊಳ್ಳುತ್ತಾರೆ.

               ನಮ್ಮಲ್ಲಿ ಭಾಷೆಯನ್ನಾಧರಿಸಿದ ಜನಾಂಗೀಯ ಪ್ರಭುತ್ವಗಳಾಗಲೀ, ಅಂಥ ಬೇರೆ ಯಾವ ಸ್ವರೂಪದ ಪ್ರಭುತ್ವಗಳಾಗಲೀ ಇತಿಹಾಸ ಕಾಲದಲ್ಲಿ ಇರಲಿಲ್ಲ.  ನಮ್ಮ ಹಿಂದಿನ ರಾಜ್ಯಗಳು ಬಹು ಭಾಷಿಕವಾಗಿದ್ದವು. ಬಹು ಭಾಷೆಗಳನ್ನು ಪೋಷಿಸಿದ್ದವು. ಹಾಗಾಗಿ ನಮ್ಮ ಸಂಸ್ಕೃತಿಯಲ್ಲಿ ಭಾಷೆಗೂ, ಪ್ರಭುತ್ವಕ್ಕೂ, ಜನಾಂಗೀಯತೆಗೂ ಭಾಷಾ ರಾಜಕೀಯವು ಅಂದುಕೊಳ್ಳುವ ಸಂಬಂಧ ಇಲ್ಲ. ಇಂಥ ಪ್ರಜೆಗಳನ್ನು ಭಾಷಾ ಜನಾಂಗೀಯ ರಿವಾಜುಗಳಿಗೆ ಒಗ್ಗಿಸುವುದು ಹಿಂಸೆಗೆ ಎಡೆಮಾಡಿಕೊಡುತ್ತದೆ. ಇಂಥ ಸಂಸ್ಕೃತಿಯ ಜನರು ಜನಾಂಗೀಯ ಬಂಧುತ್ವದ ನಿಯಮದ ಪ್ರಕಾರ ವ್ಯವಹರಿಸಬೇಕೆಂದು ನಿರೀಕ್ಷಿಸಿದರೆ ಅವರಿಗದು ಅರ್ಥವಾಗುವುದಿಲ್ಲ. ಏಕೆಂದರೆ ಭಾಷೆಯನ್ನು ಒಂದು ಜನಾಂಗ ಎಂಬುದಾಗಿ ಅನುಭವಿಸುವುದೆಂದರೇನು ಎಂಬುದು ಅವರಿಗೆ ತಿಳಿಯುವುದಿಲ್ಲ. ಒಂದೇ ಸಮುದಾಯವೇ ಹಲವಾರು ಭಾಷೆಗಳನ್ನು ಆಡುತ್ತಿರುವಾಗ ಭಾಷಾ ಬಂಧುತ್ವದ ಕಲ್ಪನೆಯು ಕೂಡ ಅವರ ಬುದ್ಧಿಗೆ ನಿಲುಕದು.

               ಅದಕ್ಕಿಂತಲೂ ವಿಶೇಷವಾಗಿ ನಮ್ಮಲ್ಲಿ ಅನೇಕ ಸಂಪ್ರದಾಯಗಳು ಭಾಷಾ ಗಡಿಗಳನ್ನು ಮೀರಿ ಪ್ರಚಲಿತದಲ್ಲಿವೆ. ಅವು ಬಹುಭಾಷಿಕರನ್ನು ಒಟ್ಟಗೇ ತರುತ್ತವೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಇಷ್ಟೊಂದು ವೈರತ್ವವನ್ನು ನಮ್ಮ ಆಧುನಿಕ ರಾಜಕಾರಣವು  ಹುಟ್ಟುಹಾಕುತ್ತಿದ್ದರೂ ಕೂಡ ನಮ್ಮ ಗಡಿಭಾಗದ ಅನೇಕ ತೀರ್ಥಕ್ಷೇತ್ರಗಳು ಹಾಗೂ ಪೂಜಾ ಪಂಥಗಳು ಇಂದಿಗೂ ತಮ್ಮ ಪಾರಂಪರಿಕ ಭಾಷಾವೈವಿಧ್ಯತೆಯನ್ನು ಬಿಟ್ಟುಕೊಟ್ಟಿಲ್ಲ. ಅವುಗಳಲ್ಲಿ ಪಂಡರಾಪುರದ ವಿಠಲ ಪಂಥ, ದತ್ತ ಪಂಥಗಳು ಮುಖ್ಯವಾದವು. ಆಷಾಢ ಮಾಸದಲ್ಲಿ ಮಹಾರಾಷ್ಟ್ರ, ಕರ್ನಾಟಕಗಳ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಇಂದಿಗೂ ಪಂಢರಾಪುರಕ್ಕೆ ಪಾದಯಾತ್ರೆಯನ್ನು ಮಾಡುತ್ತಾರೆ. ಇವರಿಗೆಲ್ಲ ಭಾಷೆ ಮುಖ್ಯವಲ್ಲ. ಇದೇ ರೀತಿಯ ಬಹುಭಾಷಿಕ ಸಂದರ್ಭವನ್ನು ನಾವು ಕನ್ನಡ-ತೆಲುಗು-ತಮಿಳುಗಳನ್ನು ಬೆಸೆಯುವ ಶ್ರೀವೈಷ್ಣವ  ಹಾಗೂ ವೀರಶೈವ ಸಂಪ್ರದಾಯದಲ್ಲೂ ನೋಡುತ್ತೇವೆ. ಈ ಎಲ್ಲವುಗಳಲ್ಲೂ ಹಾಸು ಹೊಕ್ಕಾಗಿ ಸಂಸ್ಕೃತ ಭಾಷೆಯು ಇದ್ದೂ ಇಲ್ಲದಂತೇ ದಾಟಿ ಬಂದಿವೆ. ಅದಕ್ಕೆ ಪ್ರಾದೇಶಿಕ ಭಾಷೆಯ ಪರ್ಯಾಗಳನ್ನು ಸೃಷ್ಟಿಮಾಡಿಕೊಂಡು ಜೊತೆಜೊತೆಗೇ ದಾಟಿಸಿಕೊಂಡು ಬರಲಾಗಿದೆ. ವಚನಗಳ ಜೊತೆಗೆ ಆಗಮಗಳ ಶ್ಲೋಕಗಳು, ತೇವಾರಂಗಳ ಜೊತೆಗೆ ಮಂತ್ರಗಳು, ಹೀಗೇ. ದಕ್ಷಿಣ ಕನ್ನಡದಲ್ಲಿ ತುಳು-ಕನ್ನಡ-ಸಂಸ್ಕೃತಗಳು ಅಲ್ಲಿನ ಪೂಜಾ ಸಂಪ್ರದಾಯಗಳಲ್ಲಿ ಸಹಬಾಳ್ವೆಯನ್ನು ನಡೆಸುತ್ತಿವೆ. ಅಷ್ಟೇ ಅಲ್ಲ ಕನ್ನಡ- ಉರ್ದುವನ್ನು ಬೆಸೆಯುವ ದರ್ಗಾ ಸಂಪ್ರದಾಯಗಳನ್ನೂ ನಾವಿಲ್ಲಿ ನೋಡುತ್ತೇವೆ.

               ಅಂದರೆ ನಮ್ಮ ಸಂಸ್ಕೃತಿಯು ಭಾಷಾ ಬಹುತ್ವವನ್ನು ತೀರಾ ಶಾಂತಿಯುತವಾಗಿ ನಿಭಾಯಿಸಿಕೊಳ್ಳುತ್ತದೆ ಅಷ್ಟೇ ಅಲ್ಲ, ಭಾಷೆಯ ಗಡಿಯನ್ನು ಗೌಣಮಾಡುತ್ತದೆ. ಇಂಥ ವಾಸ್ತವವಿರುವಾಗ ಕನ್ನಡ ಸಂಸ್ಕೃತಿ, ಕನ್ನಡ ಜನಾಂಗ ಎಂದು ಭಾಷೆಗೆ ಸಂಸ್ಕೃತಿಯನ್ನು, ಜನಾಂಗವನ್ನು ಸಮೀಕರಿಸಿ ಮಾತನಾಡುವಾಗ ತಾವೇನು ಹೇಳುತ್ತಿದ್ದೇವೆ ಎಂಬುದು ರಾಜಕಾರಣಿಗಳಿಗೆ ಹೋಗಲಿ, ವಿದ್ವಾಂಸರಿಗಾದರೂ ಅರ್ಥವಾಗುತ್ತದೆಯೆ?

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

You may also like

Leave a Comment

Message Us on WhatsApp