ಹಿಂದೂ ಮಹಿಳೆಯ ಸ್ಥಾನಮಾನದ ಕುರಿತ ಬರವಣಿಗೆಗಳು ಬರತೊಡಗಿದ್ದು ವಸಾಹತು ಕಾಲದ ನಂತರ. ಅದರಲ್ಲೂ ಭಾರತೀಯ ಮಹಿಳೆಯರು ಸತಿ ಪದ್ಧತಿಯಂಥ ಅಮಾನುಷ ಆಚರಣೆಗೆ ಬಲಿಯಾಗಿದ್ದಾರೆ. ವಿಧವಾ ವಿವಾಹ ನಿಷೇಧ, ಬಾಲ್ಯ ವಿವಾಹ, ಶಿಕ್ಷಣ ನೀಡದಿರುವುದು, ಇತ್ಯಾದಿ ಸಾಂಪ್ರದಾಯಿಕ ರೂಢಿಗಳಿಂದಾಗಿ ಆಕೆ ಪುರುಷ ವರ್ಗದಿಂದ ಶೋಷಿತಳಾಗಿದ್ದಾಳೆ ಎಂಬುದಾಗಿ ಪಾಶ್ಚಾತ್ಯರೂ, ಭಾರತೀಯ ಸುಶಿಕ್ಷಿತರೂ ಕಂಡುಕೊಂಡ ನಂತರ ಸುಧಾರಣಾ ಚಳವಳಿಗಳು ಮೊದಲಾದವು. ಸತಿಪದ್ಧತಿಯನ್ನು ಕಾಯ್ದೆ ಬದ್ಧವಾಗಿ ನಿಲ್ಲಿಸಲಾಯಿತು. ನಂತರ ಒಂದೊಂದಾಗಿ ಮಹಿಳೆಗೆ ಸಂಬಂಧಪಟ್ಟ ಕಾನೂನುಗಳೂ, ಸುಧಾರಣೆಗಳೂ ಬರತೊಡಗಿದವು. ಹತ್ತೊಂಭತ್ತನೆಯ ಶತಮಾನದಲ್ಲಿ ಈ ಸುಧಾರಣೆಗಳು ಮೊದಲುಗೊಂಡವು. ಈ ಸುಧಾರಣಾವಾದಿಗಳಿಗೆ ಭಾರತೀಯ ಇತಿಹಾಸದ ಕುರಿತು ಒಂದು ನಿರ್ದಿಷ್ಟ ಕಲ್ಪನೆ ಇತ್ತು. ಅದೆಂದರೆ ಹಿಂದೂಯಿಸಂ ಎಂಬುದು ವೇದಕಾಲದಲ್ಲಿ ಶುದ್ಧವಾದ ರಿಲಿಜನ್ನಾಗಿದ್ದು, ಸ್ವಾತಂತ್ರ್ಯ, ಸಮಾನತೆ ಇತ್ಯಾದಿಗಳನ್ನು ಪ್ರತಿಪಾದಿಸುತ್ತಿತ್ತು. ಆದರೆ ಅದು ನಂತರ ಬ್ರಾಹ್ಮಣ ಪುರೋಹಿತಶಾಹಿಯಿಂದಾಗಿ ಭ್ರಷ್ಟವಾಯಿತು. ಈ ಇತಿಹಾಸವನ್ನು ನಂಬಿಕೊಂಡ ಸುಧಾರಣಾವಾದಿಗಳು ಮಹಿಳೆಯರ ಕುರಿತ ಇಂಥ ಆಚರಣೆಗಳಿಗೆ ಪ್ರಾಚೀನ ಹಿಂದೂ ಗ್ರಂಥಗಳ ಬೆಂಬಲವಿಲ್ಲ ಎಂಬುದಾಗಿ ವಾದಿಸಿ ತಮ್ಮ ಸುಧಾರಣಾ ಚಳವಳಿಯನ್ನು ಸಮರ್ಥಿಸಿದರು. ಅದನ್ನು ನಿದರ್ಶಿಸಲು ವೇದಗಳು ಹಾಗೂ ಪ್ರಾಚೀನ ಧರ್ಮಶಾಸ್ತ್ರಗಳ ಸಾಲುಗಳನ್ನು ಉದ್ದರಿಸತೊಡಗಿದರು. ಅಂದರೆ ವೇದಕಾಲದಲ್ಲಿ ಹಿಂದೂ ಸ್ತ್ರೀಯ ಶೋಷಣೆಯು ಇರಲಿಲ್ಲ. ನಂತರ ಧರ್ಮಶಾಸ್ತ್ರಗಳ ಕಾಲದಲ್ಲಿ ಕ್ರಮೇಣ ಇಂಥ ಪದ್ಧತಿಗಳು ರೂಢಿಯಲ್ಲಿ ಬಂದವು ಎಂಬುದಾಗಿ ನಿರೂಪಿಸಲಾಯಿತು. ಭಾರತೀಯ ಸುಶಿಕ್ಷಿತನೊಬ್ಬನಿಗೆ ಇಂದಿನ ಭಾರತೀಯ ಸಂಪ್ರದಾಯಗಳು ಸ್ತ್ರೀಯರ ಶೋಷಣೆ ಮಾಡುತ್ತಿವೆ ಹಾಗೂ ಅದು ವೇದ ಕಾಲದ ನಂತರ ಆದಂಥ ಬೆಳವಣಿಗೆ ಎಂಬುದು ಒಂದು ಸಾಮಾನ್ಯ ಜ್ಞಾನವಾಯಿತು.
ಇಂಥ ಸಂದರ್ಭದಲ್ಲಿ ರಾಷ್ಟ್ರೀಯ ಹೋರಾಟ ಕೂಡ ಮೊದಲುಗೊಂಡಿತು. ಆ ಕಾಲದಲ್ಲಿ ಭಾರತೀಯ ಇತಿಹಾಸಕಾರರು ಕೂಡ ಈ ಮೇಲಿನ ಕಥೆಯನ್ನು ಸತ್ಯವೆಂದು ಒಪ್ಪಿಕೊಂಡಿದ್ದರು. ಅವರಿಗೆ ಭಾರತೀಯ ಸ್ತ್ರೀಯ ಕುರಿತು ಇರುವ ಇಂಥ ಆಚರಣೆಗಳು ಹಿಂದೂ ಸಮಾಜದ ದೋಷಗಳು ಎನ್ನಿಸಿದ್ದವು. ಆದರೆ ಅವು ಮೂಲತಃ ಹಿಂದೂ ಆಚರಣೆಗಳಲ್ಲ, ಅವು ನಂತರ ಕಾಲದಲ್ಲಿ ಆದಂತಹ ಬೆಳವಣಿಗೆಗಳು ಎಂಬುದಕ್ಕೆ ಅವರು ಆಧಾರಗಳನ್ನು ನೀಡುತ್ತಾರೆ. ಈ ಮಹಿಳಾ ಚರಿತ್ರೆಯ ಪ್ರಕಾರ ವೇದಕಾಲದ ಸಮಾಜವು ಸ್ತ್ರೀಸಮಾನತೆಯ ತಳಹದಿಯ ಮೇಲೆ ನಿಂತಿತ್ತು. ಆಕೆಗೆ ವೇದಾಭ್ಯಾಸ ಮಾಡಿಸಲಾಗುತ್ತಿತ್ತು. ಯಜ್ಞಯಾಗಾದಿಗಳನ್ನು ಮಾಡಬಹುದಿತ್ತು. ಗಾರ್ಗಿ, ಲೋಪಾಮುದ್ರಾ ಇತ್ಯಾದಿ ಸ್ತ್ರೀಯರೇ ಇದಕ್ಕೆ ಉದಾಹರಣೆಗಳು. ಈ ಕಥೆ ಎಷ್ಟು ಜನಪ್ರಿಯವಾಗಿದೆಯೆಂದರೆ ಇಂದು ಶಾಲಾಮಕ್ಕಳು ಕೂಡ ಈ ಹೆಸರುಗಳನ್ನು ಇಟ್ಟುಕೊಂಡು ವೇದಕಾಲದ ಮಹಿಳೆಯು ಪುರುಷನಿಗೆ ಸಮಾನಳಾಗಿದ್ದಳು ಎಂದು ಭಾಷಣ ಬಿಗಿಯಬಲ್ಲರು. ಈ ಇತಿಹಾಸದ ಪ್ರಕಾರ ವೇದೋತ್ತರ ಕಾಲದಲ್ಲಿ ಕ್ರಮೇಣವಾಗಿ ಸ್ತ್ರೀಯರ ಮೇಲೆ ನಿರ್ಬಂಧಗಳು ಹೇರಲ್ಪಟ್ಟವು. ಸ್ತ್ರೀಗೆ ಬಾಲ್ಯ ವಿವಾಹವನ್ನು ಕಡ್ಡಾಯಗೊಳಿಸಲಾಯಿತು. ವೇದ ಶಿಕ್ಷಣವನ್ನು ರದ್ದು ಪಡಿಸಲಾಯಿತು, ವಿಧವೆಗೆ ಮರುವಿವಾಹವನ್ನು ನಿಷೇಧಿಸಲಾಯಿತು. ಪಾತಿವ್ರತ್ಯವನ್ನು ವೈಭವೀಕರಿಸಲಾಯಿತು. ಸತಿ ಪದ್ಧತಿ, ಪರ್ದಾ ಇತ್ಯಾದಿಗಳು ಪ್ರಚಲಿತದಲ್ಲಿ ಬಂದವು. ಏಕೆ ಹೀಗೆ? ಇದೆಲ್ಲ ಕಾರಣವೇ ಇಲ್ಲದೇ ನಡೆಯುತ್ತದೆಯೆ? ಅದು ನಡೆದೇ ಇಲ್ಲ ಎನ್ನಲಿಕ್ಕಂತೂ ಹಿಂದೂಯಿಸಂನ ಅವನತಿಯ ಕಥೆಯನ್ನು ನಂಬಿಕೊಂಡವರಿಗೆ ಸಾಧ್ಯವಿಲ್ಲ. ಹಾಗಾಗಿ ಈ ಇತಿಹಾಸವು ಅದಕ್ಕೆ ಕಾರಣಗಳನ್ನು ಹುಡುಕುತ್ತದೆ. ಮೊದಲನೆಯ ಕಾರಣ ಬ್ರಾಹ್ಮಣ ಪುರೋಹಿತಶಾಹಿ ಹಾಗೂ ಕರ್ಮಠತೆ. ವೇದೋತ್ತರ ಕಾಲದಲ್ಲಿ ಕ್ರಮೇಣವಾಗಿ ಬ್ರಾಹ್ಮಣರು ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಿ ಬಿಗಿಪಡಿಸತೊಡಗಿದರು. ಅದರ ಪರಿಣಾಮವಾಗಿ ಹಿಂದೂ ಸ್ತ್ರೀಯ ಕುರಿತ ಕಟ್ಟು ಕಟ್ಟಳೆಗಳು ಬಿಗುವಾದವು. ಇಂದು ಹಿಂದೂ ಸ್ತ್ರೀಯ ಶೋಷಣೆಗೆ ಸಂಬಂಧಿಸಿದಂತೆ ಪ್ರಗತಿಪರ ಸ್ತ್ರೀವಾದಿಗಳ ಕಥೆಗೆ ಈ ವಿವರಣೆಯೇ ಹಿನ್ನೆಲೆಯಾಗಿದೆ. ಹಾಗಾಗಿಯೇ ಅವರು ತಮ್ಮ ಸಮಸ್ಯೆಗಳಿಗೆಲ್ಲ ಬ್ರಾಹ್ಮಣತ್ವವೇ ಕಾರಣ ಎಂದು ಹಲ್ಲು ಕಡಿಯುತ್ತಾರೆ. ಎರಡನೆಯ ಕಾರಣವೆಂದರೆ ಮಧ್ಯಕಾಲದಲ್ಲಿ ಆದ ಮುಸ್ಲಿಂ ಆಕ್ರಮಣ. ಮುಖ್ಯವಾಗಿ ಸತಿ ಪದ್ಧತಿ, ಪರ್ದಾ ಇತ್ಯಾದಿಗಳು ಮುಸ್ಲಿಂ ಆಕ್ರಮಣಕಾರರಿಂದ ಹಿಂದೂ ಸ್ತ್ರೀಯರನ್ನು ರಕ್ಷಿಸಲು ಪ್ರಚಲಿತದಲ್ಲಿ ಬಂದವು ಎಂಬ ಕಾರಣವಂತೂ ಹಿಂದುತ್ವವಾದಿಗಳಿಗೆ ಹೌದೆನ್ನಿಸುವಂತಿದೆ. ಈ ರೀತಿಯಾಗಿ ಈ ಎರಡೂ ಬಣಗಳ ಸ್ತ್ರೀವಾದಿಗಳೂ ತಮಗೆ ಅನುಕೂಲವಾದ ಕಾರಣಗಳನ್ನು ನೆಚ್ಚಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹಿಂದೂ ಸ್ತ್ರೀ ವೇದೋತ್ತರ ಕಾಲದಲ್ಲಿ ತನ್ನ ಸ್ವಾತಂತ್ರ್ಯ ಕಳೆದುಕೊಂಡಳು ಎಂಬ ಕಥೆಯನ್ನು ಇಬ್ಬರೂ ಸೇರಿಯೇ ಗಟ್ಟಿ ಮಾಡಿದ್ದಾರೆ.
ಈ ಮೇಲಿನ ಇತಿಹಾಸವನ್ನು ಪ್ರಮುಖವಾಗಿ ಧರ್ಮಶಾಸ್ತ್ರಗಳನ್ನು ಆಧರಿಸಿ ಕಟ್ಟಲಾಗಿದೆ. ಇದರ ಪ್ರಕಾರ ಮಧ್ಯಕಾಲದ ನಂತರ ಹಿಂದೂ ಸ್ತ್ರೀಯ ಸ್ಥಾನಮಾನವನ್ನು ಪುರುಷರು ಕಿತ್ತುಕೊಂಡು ಆಕೆಯನ್ನು ತಮ್ಮ ಕೈಗೊಂಬೆಯಾಗಿ ಮಾಡಿಕೊಂಡಿದ್ದರು. ಆಕೆಗೆ ವಿದ್ಯಾಭ್ಯಾಸ ಇರಲಿಲ್ಲ, ಅವಳು ಪತಿಯ ಅಡಿಯಾಳಾಗಿದ್ದಳು. ಗಂಡನ ಮನೆಯ ಜೀತದವಳಾಗಿದ್ದಳು. ಇತ್ಯಾದಿ. ಆದರೆ ವಿಚಿತ್ರವೆಂದರೆ ನಮಗೆ ಭಾರತೀಯ ಮಹಿಳೆಯ ಕುರಿತು ಇದಕ್ಕೆ ವಿರುದ್ಧವಾದ ಒಂದು ಇತಿಹಾಸ ಕೂಡಾ ಸಿಗುತ್ತದೆ. ಸುಮಾರು ಏಳನೆಯ ಶತಮಾನದಿಂದ, ಅಂದರೆ ಯಾವ ಕಾಲದಿಂದ ಸ್ತ್ರೀ ಸ್ವಾತಂತ್ರ್ಯ ಹರಣವಾಯಿತು ಎಂದು ಈ ಇತಿಹಾಸ ಹೇಳುತ್ತದೆಯೋ ಆ ಕಾಲದಿಂದಲೇ ಭಾರತದಾದ್ಯಂತ ಅರ್ಧ ಲಕ್ಷಕ್ಕೂ ಮಿಕ್ಕಿ ಶಾಸನಗಳು ಸಿಕ್ಕಿವೆ. ಅವುಗಳಿಂದ ಕಟ್ಟಿದ ಇತಿಹಾಸವು ಭಾರತೀಯ ಹೆಣ್ಣಿನ ಇಂಥ ದುರಂತಕ್ಕೆ ಒಂದು ಸಣ್ಣ ಸಾಕ್ಷ್ಯಾಧಾರವನ್ನೂ ನೀಡುವುದಿಲ್ಲ. ಹನ್ನೆರಡನೆಯ ಶತಮಾನದ ನಂತರ ಸತಿ ಸಹಗಮನ ಪದ್ಧತಿಯು ವ್ಯಾಪಕವಾಗಿದ್ದುದು ಮಹಾಸತಿ ಕಲ್ಲುಗಳಿಂದ ಸ್ಪಷ್ಟವಾಗಿದೆ ಎಂಬುದೇನೋ ನಿಜ. ಆದರೆ ಆಕೆ ಮೂಗಿಗೆ ಕವಡೆ ಕಟ್ಟಿಕೊಂಡು ಜೀತದಾಳಾಗಿ ಇದ್ದುದಕ್ಕೆ ಅದು ಆಧಾರವಾಗುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಈ ಕಾಲದಲ್ಲಿ ರಾಣಿಯರು, ಬೇರೆ ಬೇರೆ ವೃತ್ತಿಕುಟುಂಬಗಳ ಗೃಹಿಣಿಯರು, ಸನ್ಯಾಸಿನಿಯರು, ಸೂಳೆಯರು, ಇವರೆಲ್ಲ ದೇವಾಲಯಗಳನ್ನು, ಕೆರೆಗಳನ್ನು ಕಟ್ಟಿಸಿ ದಾನ ಶಾಸನ ಹಾಕಿಸುತ್ತಾರೆ. ಪ್ರಾಂತ್ಯಾಧಿಕಾರಿಗಳಾಗಿ ಆಡಳಿತ ನಡೆಸುತ್ತಾರೆ. ಪತಿಯ ಮರಣಾನಂತರ ರಾಣಿಯರಾಗಿ ಸಿಂಹಾಸನ ಏರುತ್ತಾರೆ. ರಣಭೂಮಿಯಲ್ಲಿ ಕುದುರೆ ಏರಿ ಖಡ್ಗ ಝಳಪಿಸಿ ಯುದ್ಧಮಾಡುತ್ತಾರೆ. ನೆರೆ ರಾಜ್ಯದ ಗೋವುಗಳನ್ನು ಅಪಹರಿಸುತ್ತಾರೆ, ಜೈನ ವ್ರತಧಾರಿಗಳಾಗಿ ಸಲ್ಲೇಖನ ಮಾಡಿ ನಿಷಿದಿ ಕಲ್ಲುಗಳಲ್ಲಿ ಅಮರರಾಗುತ್ತಾರೆ, ಕಾವ್ಯ ಶಾಸ್ತ್ರ ಪಾರಂಗತರಾಗುತ್ತಾರೆ, ವಿದ್ಯಾವಂತೆಯರಾಗುತ್ತಾರೆ. ನೃತ್ಯಾದಿ ಕಲೆಗಳನ್ನು ಕರಗತಮಾಡಿಕೊಳ್ಳುತ್ತಾರೆ. ಸಾಧಾರಣವಾಗಿ ಇಂಥ ಶಾಸನಗಳಲ್ಲಿ ಗಂಡನ ಜೊತೆಗೆ ಹೆಂಡತಿಯನ್ನೂ ಅಷ್ಟೇ ಅತಿಶಯೋಕ್ತಿಗಳಿಂದ ಕಾವ್ಯಮಯವಾಗಿ ಪ್ರಶಂಸಿಸಲಾಗುತ್ತದೆ. ಇಲ್ಲೆಲ್ಲೂ ಹೆಂಗಸರು ಮನೆಯ ನಾಲ್ಕು ಗೋಡೆಗಳ ನಡುವೆ ಖೈದಿಗಳಂತೆ ಬದುಕುವ ಒತ್ತಡಕ್ಕೆ ಒಳಗಾದ ಸೂಚನೆಯೂ ಇಲ್ಲ. ಹಾಗಾದರೆ ನಾವು ಕಲಿಯುವ ಇತಿಹಾಸದಲ್ಲಿ ಎಲ್ಲಿ ಎಡವಟ್ಟಾಗಿದೆ?
ಒಂದಂತೂ ಸತ್ಯ. ಒಂದು ಕಾಲದಲ್ಲಿ ಹಿಂದೂಯಿಸಂ ಶುದ್ಧವಾಗಿತ್ತು, ನಂತರ ಅದು ಅವನತಿಯಾಯಿತು ಎಂಬ ಕಥೆಗೆ ಗ್ರಾಂಥಿಕ ಆಧಾರಗಳೂ ಇಲ್ಲ. ಶಾಸನ ಆಧಾರಗಳಂತೂ ಇಲ್ಲವೇ ಇಲ್ಲ. ಅದನ್ನೇ ಆಧರಿಸಿ ಹುಟ್ಟಿಕೊಂಡ ಹಿಂದೂ ಮಹಿಳೆಯ ಸ್ಥಾನಮಾನದ ಕಥೆಗೂ ಯಾವ ಆಧಾರಗಳು ಇಲ್ಲ. ಗಾರ್ಗಿ ಮೈತ್ರೆಯಿ ಇತ್ಯಾದಿ ಮೂರು ಮತ್ತೊಂದು ಸ್ತ್ರೀಯರನ್ನು ಉದಾಹರಿಸಿ ಒಂದು ಕಾಲದ ಸ್ತ್ರೀಯರ ಸ್ಥಾನಮಾನವನ್ನು ತರ್ಕಿಸುವುದು ಸಾಧ್ಯವಿಲ್ಲದ ಮಾತು. ಶಿಕ್ಷಣ ಎಂದರೆ ವೇದಾಭ್ಯಾಸ ಮಾತ್ರ ಎನ್ನುವುದು ಕೂಡ ಪಾಶ್ಚಾತ್ಯರಿಂದ ನಾವು ಪಡೆದುಕೊಂಡ ಅಜ್ಞಾನ. ಭಾರತದಲ್ಲಿ ಶಿಕ್ಷಣದ ಪರಿಕಲ್ಪನೆ ಅಥವಾ ಸ್ವರೂಪವೇ ಬೇರೆಯಾಗಿದೆ. ಅದೇ ರೀತಿ ಇಡೀ ಹಿಂದೂ ಸ್ತ್ರೀ ಸಂಕುಲಕ್ಕೇ ಅನ್ವಯವಾಗುವ ಯಾವ ಪದ್ಧತಿಗಳೂ ಹಿಂದೆ ಇರಲಿಲ್ಲ, ಇಂದೂ ಇಲ್ಲ. ಸತಿಪದ್ಧತಿ ಮುಖ್ಯವಾಗಿ ಕ್ಷತ್ರಿಯ ಆಚರಣೆಯಾದರೆ, ವಿಧವೆಯ ಕಟ್ಟುಪಾಡುಗಳು ಬ್ರಾಹ್ಮಣ ಆಚರಣೆಗಳು. ಅವೂ ಎಷ್ಟು ವ್ಯಾಪಕವಾಗಿದ್ದವು ಎಂಬುದು ಪ್ರಶ್ನಾರ್ಹ. ಮಧ್ಯಕಾಲದ ಸಂಸ್ಕೃತ ಪುರಾಣ, ಕಾವ್ಯ, ನಾಟಕಗಳಲ್ಲಿ ಕೂಡ ವೈವಿಧ್ಯಪೂರ್ಣ ಸ್ತ್ರೀಯರು ಸಿಗುತ್ತಾರೆ. ಭಕ್ತಿಯುಗದ ಸಾಹಿತ್ಯದಲ್ಲಿ ಶರಣೆಯರು, ಭಕ್ತಿಯರು ಭಾರತದ ತುಂಬೆಲ್ಲ ಸಿಗುತ್ತಾರೆ. ಹಾಗಿರುವಾಗ ಈ ಕಾಲದಲ್ಲಿ ಸ್ತ್ರೀಯ ಸ್ಥಾನಮಾನದ ಕುರಿತು ಮಾತನಾಡಲಿಕ್ಕೆ ಧರ್ಮಶಾಸ್ತ್ರಗಳ ಆಯ್ದ ವಾಕ್ಯಗಳು ಮಾತ್ರವೇ ಆಧಾರವೇಕಾಗಬೇಕು?