ಇಂದಿನ ಪ್ರಭುತ್ವವು ಕಾನೂನುಗಳನ್ನು ರಚಿಸಿಕೊಂಡು ಆಳ್ವಿಕೆ ನಡೆಸುತ್ತದೆ. ಪ್ರಜೆಗಳು ಕಾನೂನುಗಳನ್ನು ಗೌರವಿಸುವುದರ ಮೂಲಕ ಪ್ರಭುತ್ವವನ್ನು ಗೌರವಿಸಬೇಕೆನ್ನುತ್ತದೆ. ಆದರೆ ಭಾರತೀಯರು ಕಾನೂನುಗಳನ್ನು ಗೌರವಿಸುವಂತೆ ಕಾಣುವುದಿಲ್ಲ. ಬದಲಾಗಿ ಅವನ್ನು ಉಲ್ಲಂಘಿಸುವುದು ಹಾಗೂ ದುರುಪಯೋಗಪಡಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತರಾಗಿದ್ದಾರೆ. ಏಕೆಂದರೆ ಕಾನೂನಿನ ಕಲ್ಪನೆ ಭಾರತೀಯ ಸಂಸ್ಕೃತಿಗೆ ಪರಕೀಯವಾದುದು. ಹಾಗಾಗಿ ಕಾನೂನುಗಳನ್ನು ಏಕೆ ಗೌರವಿಸಬೇಕೆಂಬುದು ಅವರಿಗೆ ಅರ್ಥವಾಗುತ್ತಿಲ್ಲ
’ಭಾರತೀಯರು ಕಾನೂನುಗಳು ಇರುವುದೇ ಮುರಿಯುವುದಕ್ಕಾಗಿ ಎಂಬುದಾಗಿ ತಿಳಿದುಕೊಂಡಿದ್ದಾರೆ’ ಎಂಬ ಗೊಣಗಾಟಗಳನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ವಸಾಹತು ಕಾಲದಲ್ಲೂ ಬ್ರಿಟಿಷರು ಇದೇ ವಿಷಯದ ಕುರಿತು ಗೋಳಾಡಿಕೊಂಡರು. ನ್ಯಾಯಾಲಯಗಳಲ್ಲಿ ಭಾರತೀಯರ ಬಾಯಿಂದ ಸತ್ಯವನ್ನು ಹೇಳಿಸುವುದಕ್ಕೆ ಅವರ ಸೃಷ್ಟಿಕರ್ತನಿಗೂ ಸಾಧ್ಯವಿಲ್ಲ. ಇವರಿಗೆ ಕಾನೂನುಗಳ ಬಗೆಗೆ ಕಿಂಚಿತ್ತೂ ಗೌರವವಿಲ್ಲ, ಇತ್ಯಾದಿ. ಇದು ಕೇವಲ ವಸಾಹತು ಕಾಲದ ಕಥೆಯಲ್ಲ. ಅದು ಕಾನೂನಿನ ಕುರಿತು ಭಾರತೀಯರ ಸಾಮಾನ್ಯ ಧೋರಣೆಗೆ ಸಂಬಂಧಪಟ್ಟಿದ್ದು ಎಂಬುದಕ್ಕೆ ಪುರಾವೆಯಾಗಿ ಇಂದೂ ಕೂಡ ದೈನಂದಿನ ಜೀವನದಲ್ಲಿ ಧಾರಾಳ ಉದಾಹರಣೆಗಳು ಸಿಗುತ್ತವೆ. ಒಂದು ಕಾನೂನನ್ನು ಮಾಡಿದ ತಕ್ಷಣ ಅದರಿಂದ ತಪ್ಪಿಸಿಕೊಂಡು ತಮ್ಮ ಹಳೆಯ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಅನ್ವೇಷಿಸುವುದರಲ್ಲಿ ಜನರು ನಿರತರಾಗುತ್ತಾರೆ. ಕಾನೂನಿನ ಉದ್ದೇಶವೇ ಸಮಾಜದಲ್ಲಿರಬಹುದಾದ ತಪ್ಪು ಪದ್ಧತಿಗಳನ್ನು ನಿಲ್ಲಿಸಲಿಕ್ಕಾಗಿ. ಆದರೆ ಇಂಥ ಕಾನೂನುಗಳ ಪರಿಣಾಮವೇನು? ಅದರಿಂದ ಆ ಆಚರಣೆ ನಿಲ್ಲುವುದಿಲ್ಲ. ಬದಲಾಗಿ ಇಂಥ ಆಚರಣೆಗಳ ಜೊತೆಗೆ ಈ ಕಾನೂನುಗಳಿಗೆ ಚಳ್ಳೆಹಣ್ಣು ತಿನ್ನಿಸುವ ಒಂದು ಹೊಸ ತಪ್ಪು ಆಚರಣೆಯನ್ನು ಹುಟ್ಟುಹಾಕುವಲ್ಲಿ ಅದು ಪರ್ಯಾವಸಾನವಾಗುತ್ತದೆ. ಅಂದರೆ ಕಾನೂನುಗಳು ಹೆಚ್ಚಾದಂತೆಲ್ಲ ಅಪರಾಧಗಳ ಸಂಖ್ಯೆ ಕಡಿಮೆಯಾಗುವುದರ ಬದಲು ಹೆಚ್ಚಾಗುವಂತೆ ಮಾಡುವಲ್ಲಿ ಅವು ಯಶಸ್ವಿಯಾಗುತ್ತವೆ.
ಇದರರ್ಥ ಭಾರತೀಯ ಸಮಾಜದಲ್ಲಿ ಕಾನೂನುಗಳು ಕೆಲಸವನ್ನೇ ಮಾಡುವುದಿಲ್ಲ ಅಂತಲ್ಲ. ಬ್ರಿಟಿಷ್ ಕಾಲದಿಂದಲೂ ಇಂಥ ಅನೇಕ ಕಾನೂನುಗಳು ಬಂದು ಹೊಸ ಆಚರಣೆಗಳನ್ನು ರೂಢಿಸಿವೆ, ಇರುವ ಆಚರಣೆಗಳನ್ನು ತಿದ್ದಿವೆ, ಹಾಗೂ ನಿಗ್ರಹಿಸಿವೆ. ಆದರೆ ಜನರೇ ಇಂಥ ಕಾನೂನುಗಳನ್ನು ಗಮನಿಸಿ ಇಚ್ಛಾಪೂರ್ವಕವಾಗಿ ತಮ್ಮ ಆಚರಣೆಗಳನ್ನು ತಿದ್ದಿಕೊಳ್ಳುವುದಿಲ್ಲ. ಹಾಗಾಗಿ ಅದನ್ನು ಒತ್ತಾಯಪೂರ್ವಕವಾಗಿಯೇ ಮಾಡಿಸಬೇಕಾಗುತ್ತದೆ. ಕಾನೂನುಗಳು ಇರುವುದೇ ಒತ್ತಾಯಪೂರ್ವಕವಾಗಿ ಹೇರುವುದಕ್ಕೆ ಅಂತಾಗಿದೆ. ಮೊತ್ತಮೊದಲನೆಯದಾಗಿ ಭಾರತೀಯರಿಗೆ ಯಾವುದೇ ಕೆಲಸವನ್ನು ಮಾಡಲಿಕ್ಕೆ ಕಾನೂನಿನ ಅರಿವು ಮಹತ್ವದ್ದೆನ್ನಿಸುವುದಿಲ್ಲ. ಹಾಗಾಗಿ ಕಾನೂನಿನ ಅರಿವು ಮೂಡಿಸುವ ಕಾರ್ಯಕ್ರಮಗಳೆಷ್ಟೇ ಆಗಿರಲಿ, ಅದರ ಪರಿಣಾಮ ಅಷ್ಟಕ್ಕಷ್ಟೇ. ನಮ್ಮಲ್ಲಿ ಆಯಾ ಕ್ಷೇತ್ರದಲ್ಲಿ ಏನೇನು ಕಾನೂನುಗಳಿವೆ ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರೇ ಹೋಗುವುದಿಲ್ಲ. ತಮ್ಮನ್ನು ಕಾನೂನುಗಳು ಆಳುತ್ತಿವೆ ಎಂಬ ಅರಿವು ಅವರಿಗೆ ಅನುಭವದ ಸಂಗತಿಯಾಗಿ ಮೂಡಿಬರುವುದಿಲ್ಲ. ಕಾನೂನು ತಮ್ಮ ಕೆಲಸಕ್ಕೆ ಅಡಚಣೆಯನ್ನು ಸೃಷ್ಟಿಸುವ ಸಂಗತಿಯೆಂಬ ಕಾರಣದಿಂದ ಮಹತ್ವಪಡೆಯುತ್ತದೆ.
ಒಂದು ಆಚರಣೆಯನ್ನು ಕಾನೂನಿಂದ ನಿಷೇಧಿಸಿದರೆ ಅದರ ವ್ಯಾಖ್ಯೆಗೇ ಸಿಗದಂತೆ ಆ ಆಚರಣೆಯನ್ನು ಬದಲಿಸಿ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಇಂಥ ಅನೇಕ ದೃಷ್ಟಾಂತಗಳು ನಮ್ಮ ಸುತ್ತ ಮುತ್ತ ಇವೆ. ಕಪ್ಪುಹಣ, ಅಕ್ರಮ ಆಸ್ತಿ, ವರದಕ್ಷಿಣೆ, ಇಂಥ ನೂರೆಂಟು ಸಂಗತಿಗಳು ಯಾವ ಕಾನೂನುಗಳಿಗೂ ಜಗ್ಗದೇ ಬೇರೆ ಬೇರೆ ಹೆಸರು ಹಾಗೂ ರೂಪಗಳನ್ನು ತಳೆದು ಮುಂದುವರಿಯುತ್ತವೆ. ಬ್ರಿಟಿಷರ ಕಾಲದಲ್ಲಿ ನಮ್ಮವರು ಈ ಕಾನೂನಿನ ಆಳ್ವಿಕೆಗೆ ಒಳಪಟ್ಟರು. ಆ ಕಾಲದಿಂದಲೂ ನಮ್ಮವರು ಇಂಥವನ್ನೇ ಮಾಡಿಕೊಂಡು ಬಂದಿದ್ದಾರೆ.
ನಮ್ಮ ಶಾಸಕರು ಹಾಗೂ ನ್ಯಾಯಾಂಗದಲ್ಲಿ ಇರುವವರಿಗೇ ಇಂಥ ಕಾನೂನುಗಳ ಬಗ್ಗೆ ಗೌರವವಿಲ್ಲ ಎಂಬುದು ಇಂದಿನ ಹಗರಣಗಳನ್ನು ಗಮನಿಸಿದಾಗ ಕಂಡುಬರುವ ಸಂಗತಿಗಳು. ಶಾಸಕರ ಇಂಥ ಹಗರಣಗಳನ್ನು ಕೆದಕಿದಾಗ ’ಅವರೇನು ಸಂಭಾವಿತರೆ?’ ಎಂದು ವಿರೋಧಿಗಳತ್ತ ಬೊಟ್ಟುಮಾಡುವ ಪದ್ಧತಿ ಇದೆ. ಅಂದರೆ ಕಾನೂನು ಉಲ್ಲಂಘನೆಯಾಗಿದೆ ಎಂಬ ಕುರಿತು ಅವರದೇನೂ ತಕರಾರಿಲ್ಲ ಎಂಬುದು ಸ್ಪಷ್ಟ. ಒಂದೊಮ್ಮೆ ಅವರು ಸಿಕ್ಕು ಬಿದ್ದರೆ ಅದಕ್ಕೆ ಕಾರಣರಾದ ಅವರ ವಿರೋಧಿಗಳ ಷಡ್ಯಂತ್ರದಿಂದ ಹೀಗಾಯಿತೆನ್ನುತ್ತಾರೆ ಹಾಗೂ ಸೇಡಿನ ಭಾವನೆಯನ್ನು ತಳೆಯುತ್ತಾರೆಯೇ ವಿನಃ ಕಾನೂನಿನ ಉಲ್ಲಂಘನೆಯು ಅನೈತಿಕ ಎಂಬ ಭಾವವು ಅಪರಾಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಇದ್ದಂತೆ ಕಾಣುವುದಿಲ್ಲ. ಹೆಚ್ಚೆಂದರೆ ಸಿಕ್ಕುಬೀಳುವುದು ತಾಂತ್ರಿಕ ದೋಷ ಎಂಬಂತೇ ನೋಡುತ್ತಾರೆ. ಹಾಗಾಗಿ ಕಾನೂನನ್ನು ಉಲ್ಲಂಘಿಸಿದ್ದು ತಪ್ಪಾಗಿ ಕಾಣುವುದಕ್ಕಿಂತ ಸಿಕ್ಕಿಬಿದ್ದದ್ದು ತಪ್ಪಾಗಿ ಕಾಣುತ್ತದೆ. ಇಂಥ ಅಪರಾಧದಲ್ಲಿ ಸಿಕ್ಕುಬಿದ್ದು ಜೈಲಿಗೆ ಹೋದ ನಾಯಕರು ಬೇಲಿನ ಮೇಲೆ ಬಿಡುಗಡೆಯಾಗಿ ಹೊರಬಂದಾಗ ಅವರ ಬೆಂಬಲಿಗರು ಅವರನ್ನು ಮೆರವಣಿಗೆಯ ಸಮೇತ ಹೊತ್ತೊಯ್ದು ಸಂಭ್ರಮಾಚರಣೆ ಮಾಡುತ್ತಾರೆ. ಅದೇ ರೀತಿ ನ್ಯಾಯಾಂಗ ಕ್ಷೇತ್ರದಲ್ಲೇ ಭ್ರಷ್ಟಾಚಾರವು ವ್ಯಾಪಿಸಿಕೊಂಡಿರುವುದರ ಕುರಿತು ಆ ಕ್ಷೇತ್ರದ ಹಿರಿಯರೇ ಗೊಣಗಾಡುವುದು ಒಂದು ಸಾಮಾನ್ಯ ವಿಷಯವಾಗಿದೆ.
ಇದಕ್ಕಿಂತ ವಿಲಕ್ಷಣವಾದ ಸಂಗತಿಯೊಂದಿದೆ. ಕಾನೂನಿನ ಜ್ಞಾನವನ್ನು ತಾವು ಪಾಲಿಸಲಿಕ್ಕೆ ಉಪಯೋಗಿಸುವುದಕ್ಕಿಂತ ತಮಗೆ ಆಗದವರಿಗೆ ಕಿರಕುಳ ನೀಡಲಿಕ್ಕೆ ಹಾಗೂ ಉದ್ದೇಶಸಾಧನೆಗೆ ಬಳಸಿಕೊಳ್ಳುವುದರಲ್ಲೇ ಬಹುತೇಕರಿಗೆ ಆಸಕ್ತಿ ಇದ್ದಂತಿದೆ. ನಮ್ಮ ಕೊನೆಯಿಲ್ಲದ ಟಿವಿ ಧಾರಾವಾಹಿಗಳು ಹಾಗೂ ಸಿನಿಮಾ ಕಥೆಗಳನ್ನು ಹೊಸೆಯುವವರಿಗೆಲ್ಲ ಈ ಸಂಗತಿಯು ವರದಾನವಾಗಿದೆ. ತಾವು ಕಾನೂನುಗಳನ್ನು ಉಲ್ಲಂಘಿಸಿದಾಗ ಉಳಿದವರು ತಕರಾರೆತ್ತಿದರೆ ಅವರನ್ನು ದಾವೆಯಲ್ಲಿ ಸಿಕ್ಕಿಸಿ ಬಾಯಿ ಮುಚ್ಚಿಸುವುದು ಒಂದು ದೊಡ್ಡ ಅಸ್ತ್ರವಾಗಿದೆ. ಈ ಕಾನೂನುಗಳನ್ನು ರಕ್ಷಿಸುವ ನಮ್ಮ ನ್ಯಾಯಾಲಯಗಳನ್ನು ಜನ ಹೇಗೆ ನೋಡುತ್ತಾರೆ ಎಂಬುದೂ ಕಣ್ಣು ತೆರೆಸುವಂತಿದೆ. ತಮ್ಮ ಅಪರಾಧವನ್ನು ಬಯಲಿಗೆ ತರುವ ಯಾರನ್ನಾದರೂ ಹಣ್ಣು ಮಾಡಬೇಕೆಂದರೆ ಅವರನ್ನು ಒಂದು ಸುಳ್ಳು ಮೊಖದ್ದಮೆ ಹಾಕಿ ಕೋರ್ಟಿಗೆ ಎಳೆದರಾಯಿತು. ದಲಿತರನ್ನು ಹಾಗೂ ಸ್ತ್ರೀಯರನ್ನು ರಕ್ಷಿಸುವ ಸಲುವಾಗಿ ತಂದ ದೌರ್ಜನ್ಯತಡೆ ಕಾನೂನುಗಳನ್ನು ಬಳಸಿಕೊಂಡು ದಲಿತರೂ, ಸ್ತ್ರೀಯರೂ ಸುಳ್ಳು ಕೇಸುಗಳನ್ನು ಹಾಕಿ ಸೇಡು ತೀರಿಸಿಕೊಳ್ಳುವ ಉದಾಹರಣೆಗಳು ಇಲ್ಲಿ ಸಾಮಾನ್ಯ.
ಅಂದರೆ ಕಾನೂನುಗಳು ನಮ್ಮ ಜನರನ್ನು ಹೆಚ್ಚು ನೀತಿವಂತರನ್ನಾಗಿ ಮಾಡುವುದರ ಬದಲಾಗಿ ಹೆಚ್ಚು ಅನೀತಿವಂತರನ್ನಾಗಿ ಮಾಡುತ್ತಿದ್ದಂತೆ ತೋರುತ್ತಿದೆ ಹಾಗೂ ಅನೀತಿವಂತರಿಗೇ ಅನುಕೂಲಕರವಾಗಿವೆ ಎಂಬಂತೇ ತೋರುತ್ತಿದೆ. ಈ ಮೇಲಿನ ಉದಾಹರಣೆಗಳು ಏನು ಹೇಳುತ್ತವೆ? ಇವರು ಕಾನೂನಿನ ಆಳ್ವಿಕೆಗೆ ಇನ್ನೂ ಒಗ್ಗಿಕೊಂಡಿಲ್ಲವೆ? ಇಲ್ಲ ಕಾನೂನುಗಳನ್ನು ಉಲ್ಲಂಘಿಸುವುದೇ ಇವರ ದುರ್ಗುಣವೆ? ಅಸಲಿ ವಿಷಯವೆಂದರೆ, ಭಾರತೀಯರಿಗೆ ಕಾನೂನಿನ ಆಳ್ವಿಕೆ ಎಂಬುದು ಗೊತ್ತಾದದ್ದು ಪಾಶ್ಚಾತ್ಯರಿಂದಲೇ. ನಮ್ಮಲ್ಲಿ ಲಾ ಎಂಬ ಪರಿಕಲ್ಪನೆಗೆ ಸಂವಾದಿಯಾದ ದೇಸೀ ಶಬ್ದಗಳಿಲ್ಲ. ಹಾಗಾಗಿ ನಾವು ಕಾಯ್ದೆ, ಕಾನೂನು ಇತ್ಯಾದಿ ಶಬ್ದಗಳನ್ನು ಬಳಸುತ್ತೇವೆ. ಈ ಶಬ್ದಗಳೆಲ್ಲವೂ ಇಸ್ಲಾಂ ಸಂಸ್ಕೃತಿಯಿಂದ ಮಧ್ಯಕಾಲದಲ್ಲಿ ನಮ್ಮ ಶಬ್ದಕೋಶಗಳಿಗೆ ಸೇರಿಕೊಂಡಂಥವು. ಕಾನೂನುಗಳು ಇಲ್ಲದಿದ್ದರೆ ಸಮಾಜವು ಅನೈತಿಕತೆ, ಅರಾಜಕತೆಗೆ ಒಳಗಾಗುತ್ತದೆ ಎಂಬ ಪೂರ್ವಗ್ರಹೀತದಿಂದಲೇ ಭಾರತದಲ್ಲಿ ಕಾನೂನಿನ ಆಳ್ವಿಕೆಯನ್ನು ರಚಿಸಲಾಯಿತು. ಆದರೆ ಕಾನೂನುಗಳೇ ಇಲ್ಲಿನ ಜನರ ಅನೈತಿಕತೆಯನ್ನು ಪ್ರಚೋದಿಸುತ್ತಿವೆ ಎಂಬುದನ್ನು ಪ್ರಚಲಿತ ವಿದ್ಯಮಾನಗಳು ದೃಷ್ಟಾಂತಪಡಿಸುತ್ತವೆ.
ಕಾನೂನು ಎಂಬುದು ಸೆಮೆಟಿಕ್ ರಿಲಿಜನ್ನುಗಳಿಗೇ ವಿಶಿಷ್ಟವಾದ ಪರಿಕಲ್ಪನೆಯಾಗಿದೆ. ಸೃಷ್ಟಿಕರ್ತನಾದ ಗಾಡ್ ಸರ್ವಶಕ್ತನಾಗಿದ್ದಾನೆ ಅಥವಾ ಸಾರ್ವಭೌಮನಾಗಿದ್ದಾನೆ. ಅವನೇ ಒಂದು ಉದ್ದೇಶವನ್ನು ಇಟ್ಟುಕೊಂಡು ಈ ಪ್ರಪಂಚವನ್ನು ತನ್ನ ದೈವೀ ಸಂಕಲ್ಪದಿಂದ ನಿಯಮಿಸಿದ್ದಾನೆ. ಈ ಪ್ರಪಂಚವು ಗಾಡ್ನ ಕಾನೂನಿನ ಪ್ರಕಾರ ನಡೆಯುವುದರಿಂದಲೇ ಅದು ಒಂದು ವ್ಯವಸ್ಥೆಯಾಗಿದೆ ಹಾಗೂ ಅದು ಅವನ ಇಚ್ಛೆಯೇ ಆಗಿದೆ. ಈ ಪ್ರಪಂಚ ಹಾಗೂ ಮನುಷ್ಯರು ಗಾಡ್ನ ಈ ಇಚ್ಛೆಯನ್ನು ಆಧರಿಸಿ ಅಸ್ತಿತ್ವದಲ್ಲಿ ಇದ್ದಾರೆ. ಆಡಮ್ ಮತ್ತು ಈವ್ ಎಂಬ ಮೊದಲನೆಯ ಇಬ್ಬರು ಮಾನವರು ಗಾಡ್ನ ಆಜ್ಞೆಯನ್ನು ಉಲ್ಲಂಘಿಸಿದ ಪಾಪದಿಂದ ದೇವಲೋಕದಿಂದ ಭ್ರಷ್ಟರಾಗಿ ಭೂಮಿಗೆ ಬಿದ್ದರು. ಅವರ ಸಂತತಿಗಳಾದ ಮನುಷ್ಯರು ಗಾಡ್ ನ ಲೋಕವನ್ನು ಮತ್ತೆ ಸೇರಬೇಕಾದರೆ ಏನು ಮಾಡಬೇಕು? ಮೋಸೆಸ್, ಜೀಸಸ್ ಅಥವಾ ಮೊಹಮ್ಮದ ಪೈಗಂಬರ ಇವರಿಗೆ ಗಾಡ್ ತನ್ನ ಆಜ್ಞೆಯನ್ನು ತಿಳಿಸಿದ್ದಾನೆ ಹಾಗೂ ಅವರು ಅದನ್ನಾಧರಿಸಿ ಕಾನೂನನ್ನು ರಚಿಸಿ ತಮ್ಮ ಅನುಯಾಯಿಗಳಿಗೆ ನೀಡಿದ್ದಾರೆ. ಕಾನೂನುಗಳು ಗಾಡ್ನ ಆಜ್ಞೆಯನ್ನು ಈಡೇರಿಸುವ ಸಾಧನಗಳು. ಹಾಗಾಗಿ ಮನುಷ್ಯರು ಉದ್ಧಾರವಾಗಬೇಕಾದರೆ ಕಾನೂನನ್ನು ಗೌರವಿಸುವುದು ಅನಿವಾರ್ಯ (ought ಎಂಬರ್ಥದಲ್ಲಿ). ಈ ನಿಸರ್ಗವು ಗಾಡ್ನ ಕಾನೂನನ್ನು ಆಧರಿಸಿ ಇದೆ ಎಂಬ ಕಲ್ಪನೆಯೇ ಒಂದು ವ್ಯವಸ್ಥೆಯ ಅನುಭವವನ್ನು ರಿಲಿಜನ್ನಿನ ಅನುಯಾಯಿಗಳಿಗೆ ನೀಡುತ್ತದೆ.
ಈ ಪ್ರತಿಪಾದನೆಯನ್ನಾಧರಿಸಿ ಪಶ್ಚಿಮದಲ್ಲಿ ಆಳ್ವಿಕೆ ಹಾಗೂ ಕಾನೂನುಗಳ ಸಂಬಂಧವು ಸ್ಥಾಪಿತವಾಯಿತು. ಆಧುನಿಕ ಕಾಲದಲ್ಲಿ ಪಾಶ್ಚಾತ್ಯ ಸಮಾಜದಲ್ಲಿ ಆಳ್ವಿಕೆಯ ಹಾಗೂ ವ್ಯವಸ್ಥೆಯ ಕುರಿತು ಸೆಕ್ಯುಲರ್ ಚಿಂತನೆಗಳು ಬೆಳೆದವು. ಅವು ಮಾಡಿದ್ದೆಂದರೆ ಗಾಡ್ನ ಕಾನೂನನ್ನು ಈ ಆಳ್ವಿಕೆಯಿಂದ ಹೊರಗಿಟ್ಟು ಮಾನವನೇ ಮಾಡಿದ ಕಾನೂನನ್ನು ಇಂಥ ಪ್ರಭುತ್ವದ ತಳಹದಿ ಎಂಬುದಾಗಿ ಕಲ್ಪಿಸಿಕೊಂಡವು. ಪ್ರಭುತ್ವ (ಸ್ಟೇಟ್) ಎಂಬುದು ಕಾನೂನಿನ ತಳಹದಿಯನ್ನಾಧರಿಸಿ ವ್ಯವಸ್ಥಿತಗೊಂಡ ಆಳ್ವಿಕೆಯಾಗಿದೆ ಹಾಗೂ ಕಾನೂನು ಮಾನವನ ಇಚ್ಛೆಯನ್ನು ಪ್ರತಿನಿಧಿಸುತ್ತದೆ ಎಂಬುದಾಗಿ ಸೆಕ್ಯುಲರ್ ಚಿಂತಕರು ನಂಬಿದರು. ಅವರು ದೈವೀ ಇಚ್ಛೆಯ ಹಾಗೂ ಉದ್ದೇಶದ ಜಾಗದಲ್ಲಿ ಮಾನವ ಇಚ್ಛೆಯನ್ನು ಹಾಗೂ ಉದ್ದೇಶಗಳನ್ನು ಕಲ್ಪಿಸಿಕೊಂಡರು. ಒಂದು ಆಳ್ವಿಕೆಗೆ ಉದ್ದೇಶ ಹಾಗೂ ಗುರಿ ಇರುತ್ತದೆ, ಅದರ ಸಾಧನೆಗೆ ಕಾನೂನುಗಳನ್ನು ಇಚ್ಛಾಪೂರ್ವಕವಾಗಿ ಮನುಷ್ಯರು ಹಾಕಿಕೊಳ್ಳಬೇಕು. ಕಾನೂನುಗಳು ನಮ್ಮ ಸಾಮೂಹಿಕ ಗುರಿಯತ್ತ ನಮ್ಮನ್ನು ನಡೆಸುತ್ತವೆಯಾದ್ದರಿಂದ ನಾವು ಕಾನೂನುಗಳಿಗೆ ಬದ್ಧರಾಗಿರಲೇಬೇಕು (ought ಎಂಬರ್ಥದಲ್ಲಿ). ಕಾನೂನಿನ ತಳಹದಿಯಿಲ್ಲದಿದ್ದರೆ ಮನುಷ್ಯರು ಸ್ವೇಚ್ಛಾಚಾರಿಗಳಾಗುತ್ತಾರೆ, ಹಾಗೂ ಅರಾಜಕತೆ ಹುಟ್ಟುತ್ತದೆ. ಹಾಗಾಗಿ ಯಾವುದೇ ವ್ಯವಸ್ಥೆಯು ಸರಿಯಾಗಿ ನಡೆಯಬೇಕಾದರೆ ಅದಕ್ಕೆ ಕಾನೂನುಗಳ ನಿಯಂತ್ರಣ ಬೇಕು ಎಂಬುದು ಇಂಥ ನಂಬಿಕೆಗಳ ಮತ್ತೊಂದು ಮುಖವಾಗಿದೆ. ಇಷ್ಟಾಗಿಯೂ ಕೂಡ, ಮನುಷ್ಯನು ಕಾನೂನನ್ನು ಏಕೆ ಗೌರವಿಸಬೇಕೆಂದರೆ ಅವು ಮನುಷ್ಯನ ಇಚ್ಛೆಯೇ ಆಗಿವೆ ಎಂಬ ಕಾರಣಕ್ಕೇ ಹೊರತೂ ದಂಡನೆಯ ಭೀತಿಯಿಂದಲ್ಲ.
ಕಾನೂನಿನ ಆಳ್ವಿಕೆಯೇ ನಾಗರೀಕತೆಯ ಸಂಕೇತ ಹಾಗೂ ಎಲ್ಲಾ ಸಮಾಜಗಳೂ ಅಂಥ ಒಂದಿಲ್ಲೊಂದು ಕಾನೂನುಗಳನ್ನಾಧರಿಸಿ ಇರುತ್ತವೆ ಎಂಬುದಾಗಿ ನಂಬಿದ್ದ ಪಾಶ್ಚಾತ್ಯರು ತಮ್ಮ ವಸಾಹತುಗಳಲ್ಲೂ ಈ ಕಾನೂನುಗಳ ಆಳ್ವಿಕೆಯನ್ನು ರೂಪಿಸಿಕೊಂಡರು. ಬ್ರಿಟಿಷರು ಭಾರತದಲ್ಲಿ ವಸಾಹತು ಸರ್ಕಾರವನ್ನು ಸ್ಥಾಪಿಸಿದಾಗ ಅವರಿಗೆ ತುರ್ತಾಗಿ ಮಾಡಬೇಕಾಗಿ ಕಂಡಿದ್ದ ಕೆಲಸವೆಂದರೆ ಇಲ್ಲಿ ಕಾನೂನುಗಳನ್ನು ರೂಪಿಸಿ, ನ್ಯಾಯಾಲಯಗಳನ್ನು ಸ್ಥಾಪಿಸುವುದು. ಭಾರತೀಯರನ್ನು ಆಳ್ವಿಕೆಗೆ ಒಳಪಡಿಸಬೇಕಾದರೆ ಇಲ್ಲಿನ ಜನರ ಸಾಂಪ್ರದಾಯಿಕ ಕಾನೂನುಗಳನ್ನು ಆಧರಿಸಿದ ಕಾನೂನನ್ನು ರೂಪಿಸಬೇಕೆಂಬುದಾಗಿ ಅವರ ಸೆಕ್ಯುಲರ್ ನೀತಿ ಹೇಳುತ್ತಿತ್ತು. ಹಾಗಾಗಿ ಅವರು ಓರಿಯೆಂಟಲಿಸ್ಟ್ ವಿದ್ವಾಂಸನೂ, ಕಾನೂನು ತಜ್ಞನೂ ಆದ ವಿಲಿಯಂ ಜೋನ್ಸ್ ಎಂಬವನನ್ನು ಭಾರತಕ್ಕೆ ಕರೆಸಿಕೊಂಡರು.
ವಿಲಿಯಂ ಜೋನ್ಸನಿಗೆ ಭಾರತೀಯ ಮುಸ್ಲಿಮರ ಕಾನೂನುಗಳನ್ನು ಗುರುತಿಸಲು ಅಷ್ಟು ಕಷ್ಟವಾಗಲಿಲ್ಲ. ಅವರಿಗೆ ಶರೀಯತ್ತುಗಳೆಂಬ ಸಾಮಾಜಿಕ ಕಾನೂನುಗಳಿದ್ದವು ಹಾಗೂ ದೈವವಾಣಿಯಾದ ಪವಿತ್ರಗ್ರಂಥವೂ ಇತ್ತು. ಆದರೆ ಹಿಂದೂಗಳಿಗೆ ಇವೆರಡೂ ಇರಲಿಲ್ಲ. ಹಾಗಾಗಿ ಹಿಂದೂಗಳ ಸಾಂಪ್ರದಾಯಿಕ ಕಾನೂನನ್ನು ಹಾಗೂ ಅದನ್ನು ನೀಡಿದ ಪ್ರವಾದಿಯನ್ನು ಕಂಡುಹಿಡಿಯಲು ಸಾಕಷ್ಟು ಕಷ್ಟವಾಯಿತು. ಮೊದಮೊದಲು ಹಿಂದೂಗಳ ಪವಿತ್ರ ಗ್ರಂಥಗಳೆಂಬುದಾಗಿ ಭಾವಿಸಿಕೊಂಡ ಸಂಸ್ಕೃತ ಗ್ರಂಥಗಳ ಸಾಲುಗಳನ್ನು ಅಧಿಕೃತವಾಗಿ ಆಧರಿಸಲಾಯಿತು. ನ್ಯಾಯಾಲಯಗಳಲ್ಲಿ ಹಿಂದೂಗಳ ಯಾವುದಾದರೊಂದು ಕೃತ್ಯಕ್ಕೆ ಇಂಥ ಗ್ರಂಥಗಳ ಆಧಾರವನ್ನು ನೀಡಿದರೆ ಅದು ಕಾನೂನು ಸಮ್ಮತ ಎಂಬುದಾಗಿ ನಿರ್ಣಯಿಸಲಾಗುತ್ತಿತ್ತು. ಇದನ್ನು ನಿರ್ಣಯಿಸಲಿಕ್ಕೆ ಹಿಂದೂ ಪಂಡಿತರ ಸಹಾಯ ತೆಗೆದುಕೊಳ್ಳಲಾಯಿತು ಹಾಗೂ ವಿಲಿಯಂ ಜೋನ್ಸನೇ ಸ್ವತಃ ಸಂಸ್ಕೃತವನ್ನು ಕಲಿತನು. ನಂತರ ಕೆಲವು ಹಿಂದೂ ಪಂಡಿತರ ಸಹಾಯದಿಂದ ಅವನು ಮನುಸ್ಮೃತಿ ಎಂಬ ಗ್ರಂಥವನ್ನು ಕಂಡುಹಿಡಿದನು. ಮನು ಎಂಬವನೇ ಹಿಂದೂಗಳ ಮೋಸೆಸ್, ಅವನು ಹಿಂದೂಗಳಿಗೆ ಕಾನೂನನ್ನು ನೀಡಿದವನು ಹಾಗೂ ಮನುಸ್ಮೃತಿಯು ಹಿಂದೂ ಕಾನೂನಿನ ಸೂತ್ರಗಳನ್ನು ದಾಖಲಿಸುವ ಗ್ರಂಥವೆಂಬುದಾಗಿ ಭಾವಿಸಿದನು. ಹೀಗೆ ಮನುಸ್ಮೃತಿಯು ಹಿಂದೂ ಕಾನೂನು ಎಂಬುದಾಗಿ ಪ್ರಸಿದ್ಧಿಗೆ ಬಂದಿತು. ಕ್ರಮೇಣ ಇಂಥವೇ ಇನ್ನೂ ಹಲವಾರು ಧರ್ಮಶಾಸ್ತ್ರಗಳಿರುವುದನ್ನು ಬೆಳಕಿಗೆ ತರಲಾಯಿತು. ಧರ್ಮಶಾಸ್ತ್ರಗಳು ಹಿಂದೂ ಕಾನೂನುಗಳು ಎಂಬ ಭಾವನೆ ವಿದ್ಯಾವಂತ ಭಾರತೀಯರಲ್ಲಿ ಎಷ್ಟು ಗಟ್ಟಿಯಾಯಿತೆಂದರೆ ನಂತರ ಹಿಂದೂ ಕಾನೂನುಗಳಿಗೆ ಇವುಗಳನ್ನೇ ಆಕರಗಳಂತೆ ಬಳಸಲಾಯಿತು.
ಈ ಮೇಲಿನ ಬೆಳವಣಿಗೆಗಳಿಂದಾಗಿ ಭಾರತೀಯ ಸಮಾಜದಲ್ಲಿ ಕಾನೂನುಗಳು ಪ್ರಾಚೀನ ಕಾಲದಿಂದಲೂ ಇದ್ದವು ಎಂಬ ಭಾವನೆ ಇಂದು ಪ್ರಚಲಿತದಲ್ಲಿ ಬಂದಿದೆ. ಇದಕ್ಕೆ ಉದಾಹರಣೆಯಾಗಿ ಮನುಸ್ಮೃತಿಯು ವರ್ಣ ವ್ಯವಸ್ಥೆಯ ಕಾನೂನುಗಳನ್ನು ನೀಡುತ್ತದೆ ಎಂಬುದಾಗಿ ನಮ್ಮ ಕೆಲವು ಬುದ್ಧಿಜೀವಿಗಳು ಶಪಥಮಾಡಿ ಹೇಳುತ್ತಾರೆ. ಆದರೆ ಈ ಕಥೆಯಲ್ಲಿ ಏನೋ ಎಡವಟ್ಟಿದೆ ಎಂಬುದು ಸ್ಪಷ್ಟ. ಪ್ರಶ್ನೆ ಇರುವುದು ಒಂದೊಮ್ಮೆ ಹಿಂದೂಗಳಿಗೂ ಕಾನೂನುಗಳಿದ್ದರೆ ಅದನ್ನು ಕಂಡುಹಿಡಿಯಲು ಬ್ರಿಟಿಷರು ಏಕೆ ಅಷ್ಟು ಪರದಾಡಬೇಕಾಯಿತು? ಧರ್ಮಶಾಸ್ತ್ರಗಳೆಲ್ಲ ಕಾನೂನುಗಳಾಗಿದ್ದು ಭಾರತೀಯರನ್ನು ಒಂದು ಆಳ್ವಿಕೆಗೆ ಒಳಪಡಿಸಿದ್ದರೆ ಭಾರತೀಯರೇಕೆ ಇಂದು ಕಾನೂನಿನ ಆಳ್ವಿಕೆಗೆ ಈ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ? ಈ ಪ್ರಶ್ನೆಗಳಿಗೆ ಸ್ಥೂಲವಾಗಿ ಎರಡು ರೀತಿಯ ಉತ್ತರಗಳು ಸಾಧ್ಯವಿವೆ: ೧. ಅನೀತಿ ಹಾಗೂ ಭ್ರಷ್ಟತೆಗಳು ಭಾರತೀಯರನ್ನು ಬಹಬೇಗ ಸೆಳೆಯುತ್ತವೆ. ಅದು ಅವರ ದೌರ್ಬಲ್ಯ ಹಾಗೂ ದೋಷ. ಒಂದೊಮ್ಮೆ ಈ ನಿರ್ಣಯವು ನಿಜವಾದ ಪಕ್ಷದಲ್ಲಿ ಈ ಸಮಾಜವು ಸಾವಿರಾರು ವರ್ಷ ತಾಳಿಕೊಂಡು ಬರಲು ಸಾಧ್ಯವೇ ಇಲ್ಲ. ೨. ಇಂದು ಕಾನೂನು ಎಂಬುದಾಗಿ ನಾವೇನನ್ನು ಗುರುತಿಸಬಹುದೋ ಅದು ಭಾರತೀಯರಿಗೆ ಪರಕೀಯವಾದ ಒಂದು ವಿಚಾರ. ಹಾಗಾಗಿ ಅರ್ಥವಾಗಿಲ್ಲ. ಈ ಎರಡನೆಯ ಸಾಧ್ಯತೆಯನ್ನು ಇಟ್ಟುಕೊಂಡಾಗ ಅವರೇಕೆ ಅದರ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂಬುದನ್ನು ಸಕಾರಣವಾಗಿ ವಿವರಿಸಬಹುದು. ಭಾರತೀಯ ಸಮಾಜವು ಧರ್ಮ, ನೀತಿ, ನ್ಯಾಯ ಇತ್ಯಾದಿ ಪರಿಕಲ್ಪನೆಗಳನ್ನು ಆಧರಿಸಿ ಬೆಳೆದು ಬಂದಿದೆ. ಇವು ಯಾವವೂ ಕೂಡ ಪಾಶ್ಚಾತ್ಯರ ಕಾನೂನಿನ ಆಳ್ವಿಕೆಗೆ ಸಂಬಂಧಿಸಿದ ಪರಿಕಲ್ಪನೆಗಳಲ್ಲ. ಇವುಗಳನ್ನು ನಿರ್ಣಯಿಸುವ ಹಾಗೂ ಆಚರಿಸುವ ಕ್ರಮಗಳೂ ಕೂಡ ಬೇರೆಯೇ ಅಗಿವೆ.