Home ವಸಾಹತು ಪ್ರಜ್ಞೆದಾರಿ ತಪ್ಪಿದ ಸಂಸ್ಕೃತಿ ಚಿಂತನೆ ಸೂರ್ಯನಮಸ್ಕಾರ ಮತ್ತು ನಮಾಜು ಎರಡೂ ಒಂದೇನಾ?

ಸೂರ್ಯನಮಸ್ಕಾರ ಮತ್ತು ನಮಾಜು ಎರಡೂ ಒಂದೇನಾ?

by Rajaram Hegde
47 views

ಇತ್ತೀಚೆಗೆ ಕೇಂದ್ರ ಸರ್ಕಾರವು ಯೋಗದಿನವನ್ನು ಆಚರಿಸಲು ನಿರ್ಧರಿಸಿದಾಗ ಕೆಲವು ಮುಸ್ಲಿಂ ಮತೀಯ ಮುಂದಾಳುಗಳಿಂದ ಒಂದು ತಕರಾರು ಎದ್ದಿತು. ಅದೆಂದರೆ ಯೋಗದ ಹೆಸರಿನಲ್ಲಿ ಬಿಜೆಪಿ ಸರ್ಕಾರವು ಹಿಂದೂ ಮತವನ್ನು ತಮ್ಮ ಮೇಲೆ ಹೇರುತ್ತಿದೆ. ತಾವು ಸೂರ್ಯನಮಸ್ಕಾರವನ್ನು ಮಾಡಲು ನಿರಾಕರಿಸುತ್ತೇವೆ ಎಂಬುದಾಗಿ ಅವರು ಘೋಷಿಸಿದರು. ನಂತರ ಕೇಂದ್ರ ಸರ್ಕಾರವು ಯೋಗದಿನದಂದು ಸೂರ್ಯನಮಸ್ಕಾರವನ್ನು ಕೈಬಿಡಬೇಕೆಂದು ನಿರ್ದೇಶಿಸಿತು. ಈ ಘಟನೆಗೆ ಸಂಬಂಧಿಸಿದಂತೆ ಪರ ಹಾಗೂ ವಿರೋಧ ಎರಡೂ ಪಕ್ಷಗಳಿಂದಲೂ ಸಾಕಷ್ಟು ಚರ್ಚೆಗಳಾಗಿವೆ.

ಜನಸಾಮಾನ್ಯರ ವಲಯದಲ್ಲಿ ಅನೇಕರು ಯೋಗಕ್ಕೂ ಹಿಂದೂಯಿಸಂಗೂ ತಳಕು ಹಾಕುತ್ತಾರೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತಿದೆ. ಅದಕ್ಕೆ ಮುಖ್ಯ ಕಾರಣವೆಂದರೆ ಯೋಗವು ಜಗತ್ತಿಗೆ ಹಿಂದೂಯಿಸಂನ ಕೊಡುಗೆ ಎಂದು ಭಾರತೀಯರೂ ಪ್ರಚಾರ ಮಾಡಿಕೊಂಡಿದ್ದಾರೆ. ಇತರರೂ ಅದನ್ನು ಹಾಗೇ ಸ್ವೀಕರಿಸಿದ್ದಾರೆ. ಹೀಗೆ ನಂಬುವವರಲ್ಲಿ ಅನೇಕರಿಗೆ ಯೋಗವೆಂದರೇನು ಎಂಬುದರ ಸ್ಪಷ್ಟ ಕಲ್ಪನೆ ಕೂಡ ಇಲ್ಲ. ಅದರಲ್ಲಿ ನಮಸ್ಕಾರ, ಧ್ಯಾನ ಇತ್ಯಾದಿಗಳು ಕೂಡ ಬರುತ್ತವೆ. ಹಾಗಾಗಿ ಅದು ಹಿಂದೂಗಳ ಮತೀಯ ಆಚರಣೆ ಎಂಬುದಾಗಿ ಅದರ ಕುರಿತು ಅಜ್ಞಾನ ಇರುವವರು ಯೋಚಿಸಿದರೆ ಆಶ್ಚರ್ಯವಿಲ್ಲ. ಸೂರ್ಯ ನಮಸ್ಕಾರದ ಕುರಿತ ವಿವಾದವು ಇದಕ್ಕೊಂದು ದೃಷ್ಟಾಂತ. ಸೂರ್ಯ ಹಿಂದೂಗಳ ಗಾಡ್ ಎಂದು ಆಧುನಿಕ ಸಾಂಸ್ಕೃತಿಕ ಅಧ್ಯಯನಗಳು ಜಗತ್ತನ್ನೇ ನಂಬಿಸಿವೆ. ಈ ಕುರಿತು ಕೆಲವು ಸಾಂಪ್ರದಾಯಿಕ ಮುಸ್ಲಿಮರನ್ನು ದೂರದರ್ಶನ ಸುದ್ದಿವಾಹಿನಿಗಳು ಸಂದರ್ಶನ ನಡೆಸಿವೆ. ಅವರು ತಿಳಿಸುವ ಪ್ರಕಾರ ಮುಸ್ಲಿಮರಾದವರು ಅಲ್ಲಾನನ್ನು ಮಾತ್ರ ಪ್ರಾರ್ಥಿಸಬೇಕು. ಅನ್ಯ ದೇವತೆಗಳನ್ನು ಪ್ರಾರ್ಥಿಸಿದರೆ ಪಾಪ ಬರುತ್ತದೆ. ಹಾಗಾಗಿ ಶ್ರದ್ಧಾವಂತ ಮುಸ್ಲಿಮನು ಸೂರ್ಯ ನಮಸ್ಕಾರವನ್ನು ಮಾಡುವುದು ಪಾಪಕಾರ್ಯ.

ಈ ವಿವಾದವು ಸೃಷ್ಟಿಯಾದ ನಂತರ ಯೋಗವೆಂಬುದು ಹಿಂದೂಯಿಸಂನ ಆಚರಣೆಯಲ್ಲ, ಅದೊಂದು ವಿಜ್ಞಾನ ಎಂಬ ವಾದಕ್ಕೆ ಪುಷ್ಟಿ ನೀಡಲಾಗುತ್ತಿದೆ. ಯೋಗವೊಂದು ವಿಜ್ಞಾನ ಎನ್ನುವವರೂ ಕೂಡ ಅದು ಯಾವ ರೀತಿಯ ವಿಜ್ಞಾನ ಎಂಬುದರ ಕುರಿತು ಸ್ಪಷ್ಟತೆಯನ್ನು ಹೊಂದಿದಂತೆ ಕಾಣುವುದಿಲ್ಲ. ಆದರೆಡೆ ಆಕರ್ಷಿತರಾಗುವ ಹಲವರಿಗೆ ಅದು ಆಸನ, ಪ್ರಾಣಾಯಾಮಗಳ ಒಂದು ದೈಹಿಕ ಚಿಕಿತ್ಸೆಯ ಕ್ರಮ. ಏಕೆಂದರೆ, ಯೋಗ ಶಿಕ್ಷಕರೂ ಕೂಡ ಯೋಗವನ್ನು ಹೀಗೇ ಪ್ರಚಾರ ಮಾಡುವುದು. ಇಂಥಿಂಥ ಆಸನ ಹಾಕಿದರೆ ಇಂತಿಂಥ ಖಾಯಿಲೆ ವಾಸಿಯಾಗುತ್ತದೆ ಅಂತಲೋ, ಮಾನಸಿಕ ಒತ್ತಡ ಶಮನವಾಗುತ್ತದೆ ಅಂತಲೋ ನಮ್ಮ ಮಾಧ್ಯಮಗಳಲ್ಲಿ, ಭಾಷಣಗಳಲ್ಲಿ, ಜನರಿಗೆ ಬಿಂಬಿಸಲಾಗುತ್ತಿದೆ. ಇಂದು ಪ್ರವಾಸೋದ್ಯಮದ ಯುಗದಲ್ಲಂತೂ ಯೋಗವು ವಿಶ್ವ ಮಾರುಕಟ್ಟೆಯನ್ನು ಆಕ್ರಮಿಸತೊಡಗಿದೆ. ಯೋಗ ಪ್ರವಾಸೋದ್ಯಮ ಅಂತಲೇ ಒಂದು ಶಾಖೆ ಹುಟ್ಟಿಕೊಂಡಿದೆ. ಅಂದರೆ ವಿಶ್ವಾದ್ಯಂತ ಇಂದು ಯೋಗದತ್ತ ಆಕರ್ಷಿತರಾಗುತ್ತಿರುವ ಜನರು ಹಾಗೂ ಅದನ್ನು ಕಲಿಸುತ್ತಿರುವವರು ಯೋಗವು ಭಾರತೀಯರು ಕಂಡುಹಿಡಿದ ಅದ್ಭುತ ಚಿಕಿತ್ಸಾವಿಧಾನ ಎಂಬ ಚಿತ್ರವನ್ನು ಗಟ್ಟಿ ಮಾಡುತ್ತಿದ್ದಾರೆ.

ಯೋಗವು ಮಾನವನ ದೈಹಿಕ ಹಾಗೂ ಮಾನಸಿಕ ನೆಮ್ಮದಿಯನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿರಬಹುದು, ಅದಿಲ್ಲದಿದ್ದರೆ ಇಷ್ಟೊಂದು ಜನರು ಆದರೆಡೆ ಆಕರ್ಷಿತರಾಗಲು ಕಾರಣವಿಲ್ಲ. ಆದರೆ ಇಲ್ಲಿ ನಮಗೆ ಏಳಬಹುದಾದ ಒಂದು ಸರಳ ಪ್ರಶ್ನೆ ಎಂದರೆ ನಮ್ಮ ಪ್ರಾಚೀನ ಮಹರ್ಷಿಗಳು ದೈಹಿಕ ಮಾನಸಿಕ ವ್ಯಾಧಿಗಳ ಚಿಕಿತ್ಸೆಗಾಗಿಯೇ ಯೋಗವನ್ನು ಕಂಡುಕೊಂಡರೆ? ಹಾಗಿದ್ದ ಪಕ್ಷದಲ್ಲಿ ಅದನ್ನು ಆಯುರ್ವೇದವೆಂದು ಕರೆಯದೇ ಯೋಗವೆಂದು ಏಕೆ ಕರೆದರು? ಯಾವ ದೇಹ ಹಾಗೂ ಮನಸ್ಸುಗಳ ಮೋಹವನ್ನು ದಾಟಿದ ಹೊರತೂ ಮುಕ್ತಿ ಸಾಧ್ಯವಿಲ್ಲ ಎಂಬುದಾಗಿ ಅವರು ಹೇಳಿದರೋ ಅವುಗಳ ಚಿಕಿತ್ಸೆಗಷ್ಟೇ ಯೋಗ ಬಳಕೆಯಾಯಿತೆ? ಹಾಗಿದ್ದಲ್ಲಿ ಸಮಾಧಿಯನ್ನು, ಪರಮಾತ್ಮನನ್ನು ತಲುಪುವ ಮಾರ್ಗವೆಂದೇಕೆ ಅವರು ಯೋಗವನ್ನು ಕರೆದರು? ಭಗವದ್ಗೀತೆಯನ್ನು ಯೋಗಶಾಸ್ತ್ರವೆಂದೇಕೆ ಕರೆದರು? ಅದರೊಳಗೆ ಬರುವ ಸಾಂಖ್ಯಯೋಗ, ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಇತ್ಯಾದಿಗಳೆಲ್ಲ ಏನು? ಯೋಗವೊಂದು ವಿಜ್ಞಾನ ಎನ್ನುವವರು ಅದು ಇಂದಿನ ವೈದ್ಯಕೀಯ ಶಾಸ್ತ್ರವೆಂದು ಬಣ್ಣಿಸಿ ತಮ್ಮ ವಾದವನ್ನು ಸಮರ್ಥಿಸಹೋದರೆ ಇಂಥ ಪ್ರಶ್ನೆಗಳು ಉತ್ತರ ಬೇಡುತ್ತವೆ.

ಯೋಗದಿನದಂದು ಸೂರ್ಯನಮಸ್ಕಾರವನ್ನು ಕೈಬಿಟ್ಟ ಕುರಿತು ಟೀಕೆಗಳು ಬಂದಿವೆ. ಆದರೆ ನನ್ನ ಪ್ರಕಾರ ಅದೊಂದು ಯೋಗ್ಯ ನಿರ್ಧಾರ. ಅಲ್ಲಾನ ಪ್ರಾರ್ಥನೆಯನ್ನು ಕೈಬಿಟ್ಟು ನಮಾಜು ಮಾಡಿ ಎಂದರೆ ಮುಸ್ಲಿಮರಿಗೆ ಅದು ಸಾಧ್ಯವಿಲ್ಲ. ಏಕೆಂದರೆ ಅಲ್ಲಾನ ಪ್ರಾರ್ಥನೆಗಾಗಿಯೇ ನಮಾಜು ಇರುವುದು. ಆದರೆ ಸೂರ್ಯನಮಸ್ಕಾರವನ್ನು ಕೈಬಿಟ್ಟೂ ಯೋಗವನ್ನು ಮಾಡಬಹುದು. ಸೂರ್ಯ ನಮಸ್ಕಾರದಲ್ಲಿ ಒಳಗೊಂಡ ಎಂಟೂ ಆಸನಗಳೂ ಯೋಗಾಸನಗಳೇ. ಅವನ್ನು ಪ್ರತ್ಯೇಕವಾಗಿ ಕೂಡ ಮಾಡಬಹುದು. ಅವು ಕೇವಲ ದೈಹಿಕ ಭಂಗಿಗಳು ಅಂದಹಾಗಾಯಿತು. ಅಂದರೆ ಯೋಗಕ್ಕೆ ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಕೆಲವು ಸೆಕ್ಯುಲರ್ ಚಿಂತಕರು ಯಾವ ಮತೀಯತೆಯನ್ನು ಆರೋಪಿಸಬಯಸುತ್ತಾರೋ ಅದನ್ನೇ ಹೊಡೆದು ಹಾಕಿದಂತಾಯಿತು. ಅದಕ್ಕಿಂತ ಮುಖ್ಯವಾಗಿ ಯೋಗವು ರಿಲಿಜನ್ನಲ್ಲ ಎಂಬುದನ್ನು ಇದಕ್ಕೂ ಚೆನ್ನಾಗಿ ತಿಳಿಸಲು ಸಾಧ್ಯವಿಲ್ಲ. ಹಿಂದೂ ಪರಂಪರೆಗಳ ಶಕ್ತಿ ಇಲ್ಲಿದೆ. ಸೂರ್ಯ ನಮಸ್ಕಾರದ ಬದಲಾಗಿ ಅದನ್ನು ಅಲ್ಲಾ ನಮಸ್ಕಾರವಾಗಿ ಮಾಡಿಕೊಂಡೂ ಒಬ್ಬ ಮುಸ್ಲಿಮನು ತನ್ನ ಪ್ರಾರ್ಥನೆ ಮಾಡಬಹುದು. ಈ ದೃಷ್ಟಿಯಿಂದ ಯೋಗವು ಅಪ್ಪಟ ಸೆಕ್ಯುಲರ್ ಆಚರಣೆಯಾಗಿ ಕಾಣಿಸತೊಡಗುತ್ತದೆ.

ಇಲ್ಲಿ ಸ್ವಲ್ಪ ಗಂಭೀರವಾಗಿ ಯೋಚನೆ ಮಾಡಬೇಕಾದದ್ದು ಸೂರ್ಯನಮಸ್ಕಾರ ಹಾಗೂ ಯೋಗ ಸಂಪ್ರದಾಯವು ಸೆಕ್ಯುಲರ್ ಸಮಸ್ಯೆಯಾದುದರ ಕುರಿತು. ಯೋಗ ಎಂಬುದಕ್ಕೆ ಸೂರ್ಯನಮಸ್ಕಾರವನ್ನು ಸೇರಿಸಿದರೂ ಕೂಡ ಅದು ಸೆಕ್ಯುಲ‌ರ್ ಸಮಸ್ಯೆಯಾಗಲಾರದು. ಏಕೆಂದರೆ ಯೋಗ ಸಂಪ್ರದಾಯವು ಯಾವ ಹಿಂದೂ ಪರಂಪರೆಯ ಭಾಗ ಎನ್ನಲಾಗುತ್ತದೆಯೋ ಅದು ರಿಲಿಜನ್ನಲ್ಲ. ಹಾಗೂ ಅಧ್ಯಾತ್ಮ ಎಂಬುದು ಮುಸ್ಲಿಂ ಕ್ರಿಶ್ಚಿಯನ್ನರು ಕೂಡ ತಮ್ಮ ದೇವತಾ ಕಲ್ಪನೆ, ಆಚರಣೆಗಳನ್ನಿಟ್ಟುಕೊಂಡೇ ತಲುಪಬಹುದಾದ ಗುರಿ ಎಂಬುದಾಗಿ ಭಾರತೀಯರು ತಿಳಿದಿದ್ದಾರೆ. ಮುಸ್ಲಿಂ ಕ್ರೈಸ್ತ ಇತ್ಯಾದಿಗಳೆಲ್ಲ ಆ ಅಂತಿಮ ಸತ್ಯವನ್ನು ತಲುಪಲು ವಿಭಿನ್ನ ಮಾರ್ಗಗಳು. ಅಂದರೆ ಎಲ್ಲಾ ಮಾರ್ಗಗಳೂ ಮಾನವನನ್ನು ಸತ್ಯದೆಡೆಗೆ ಒಯ್ಯುತ್ತವೆ. ಆದರೆ ನಮಾಜು, ವರ್ಷಿಪ್ ಇತ್ಯಾದಿಗಳು ಹೀಗಲ್ಲ. ಅವು ನಿರ್ದಿಷ್ಟವಾದ ರಿಲಿಜನ್ನುಗಳನ್ನು ಲಕ್ಷಣೀಕರಿಸುವ ಆಚರಣೆಗಳು. ಯೋಗದಿನದ ಕುರಿತ ವಿವಾದದ ಸಂದರ್ಭದಲ್ಲಿ ನಮಾಜಿನ ಕುರಿತು ಸಂಪ್ರದಾಯಸ್ಥ ಮುಸ್ಲಿಮರು ಏನು ಹೇಳುತ್ತಾರೆ ಎನ್ನುವುದರ ವರದಿಗಳು ಮಾಧ್ಯಮಗಳಲ್ಲಿ ಬಂದಿವೆ. ತಾವು ಅಲ್ಲಾನನ್ನು ಬಿಟ್ಟು ಮತ್ತೊಬ್ಬ ದೇವತೆಯನ್ನು ಪ್ರಾರ್ಥಿಸಿದರೆ ಅದು ಪಾಪ ಎಂದು ಕೂಡ ಕೆಲವರು ಹೇಳಿದ್ದಾರೆ. ಏಕೆಂದರೆ ಅವು ಸುಳ್ಳು ದೇವತೆಗಳು ಹಾಗೂ ಅವು ಸತ್ಯದೇವನನ್ನು ಸೇರುವ ಮಾರ್ಗಗಳೇ ಅಲ್ಲ. ಸಂಪ್ರದಾಯಸ್ಥ ಮುಸ್ಲಿಮರಿಗೆ ಸೂರ್ಯ ನಮಸ್ಕಾರ ಮಾಡುವುದು ಪಾಪಕಾರ್ಯ ಎಂಬ ನಂಬಿಕೆ ಇದೆಯೆಂದರೆ ಅವರಿಗೆ ಹಿಂದೂ ಎಂಬ ರಿಲಿಜನ್ನಿದೆ, ಅದರಲ್ಲಿ ಅವರು ಪ್ರಾರ್ಥಿಸುವ ದೇವತೆಗಳು ಸುಳ್ಳು ದೇವತೆಗಳು. ಆದರೆ ತಮ್ಮ ದೇವ ಅಲ್ಲಾ ಮಾತ್ರವೇ ಸತ್ಯ ಎಂಬ ಗ್ರಹಿಕೆಗಳು ಇರುವುದು ಸ್ಪಷ್ಟ. ಹಾಗಾಗಿ ಅವರು ಅನ್ಯ ಮತದ ಆಚರಣೆಗಳನ್ನು ಒಳಗೊಳ್ಳಲಾರರು.

ಆಶ್ಚರ್ಯವೆಂದರೆ ಭಾರತೀಯ ಗ್ರಾಮಾಂತರದ ಮುಸ್ಲಿಮರು ಹಿಂದೂ ದೇವತೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಕೈಮುಗಿಯುತ್ತಾರೆ. ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಅವರಿಗೆ ಅದರಲ್ಲಿ ಏನೂ ಸಮಸ್ಯೆಯಿಲ್ಲ. ಹಿಂದೂಗಳಿಗೆ ಕೂಡ ಅದರಿಂದ ಏನೂ ಸಮಸ್ಯೆಯಿಲ್ಲ. ಹಾಗಾದರೆ ಮುಸ್ಲಿಮರು ಸೂರ್ಯನಮಸ್ಕಾರವನ್ನು ಮಾಡುವುದು ಇಸ್ಲಾಂ ಹಾಗೂ ಸೆಕ್ಯುಲರಿಸಂ ವಿರೋಧಿ ಎಂಬ ಗ್ರಹಿಕೆ ಎಲ್ಲಿಂದ ಹುಟ್ಟಿತು? ಎರಡು ಪ್ರಕಾರದವರು ಇದರ ಹಿಂದೆ ಇದ್ದಾರೆ. ಇವರಲ್ಲಿ ಒಬ್ಬರು ಸೆಕ್ಯುಲರ್ ಪ್ರಜ್ಞೆಯನ್ನು ಹೊಂದಿದವರಿದ್ದರೆ ಮತ್ತೊಂದು ಪ್ರಕಾರದವರು ಇಸ್ಲಾಂ ರಿಲಿಜನ್ನಿನ ವಕ್ತಾರರು. ಇವರಿಬ್ಬರಿಗೆ ಇದು ಏಕೆ ಸಮಸ್ಯೆಯನ್ನು ಸೃಷ್ಟಿಸುತ್ತಿದೆ? ಸೆಕ್ಯುಲರ್ ವಾದಿಗಳಿಗೆ ಇದು ಪ್ರಭುತ್ವವು ಒಂದು ರಿಲಿಜನ್ನನ್ನು ಮತ್ತೊಂದರ ಮೇಲೆ ಹೇರುವ ಹುನ್ನಾರವಾಗಿ ಕಾಣಿಸುತ್ತದೆ. ಮತ್ತೊಂದೆಡೆ ಇಸ್ಲಾಂ ಒಂದು ರಿಲಿಜನ್ನಾಗಿ ಅದರ ಸ್ವರೂಪ ಹೇಗಿದೆಯೆಂದರೆ ಭಾರತೀಯ ಮುಸ್ಲಿಮರ ಇಂಥ ಆಚರಣೆಗಳನ್ನು ತಟಸ್ಥವಾಗಿ ಒಪ್ಪಿಕೊಳ್ಳಲು ಅದು ನಿರಾಕರಿಸುತ್ತದೆ. ಅಂಥ ಆಚರಣೆಗಳನ್ನು ತೊಡೆಯುವ ಕುರಿತು ಇಸ್ಲಾಂನಲ್ಲಿ ಇಂದು ಚಳವಳಿಗಳು ನಡೆಯುತ್ತಿವೆ. ಅಂದರೆ ಇದು ಸಹಬಾಳ್ವೆಯ ಸಮಸ್ಯೆಯಾಗುವುದು ಇಂಥವರಿಗೆ. ಇಲ್ಲಿ ಗಮನಿಸಬೇಕಾದ್ದೆಂದರೆ ಭಾರತೀಯ ಹಿಂದೂ ರಾಜಕಾರಣಿಗಳು ಕೆಲವೊಮ್ಮೆ ನಮಾಜೂ ಮಾಡುತ್ತಾರೆ. ಚರ್ಚಿಗೂ ಹೋಗುತ್ತಾರೆ. ಅದಕ್ಕೆ ಯಾವ ಹಿಂದೂ ಮಠಾಧೀಶರಿಂದಲೂ ಇದುವರೆಗೆ ಆಕ್ಷೇಪಣೆ ಬಂದಿಲ್ಲ. ಆದರೆ ಮುಸ್ಲಿಮರು ಸೂರ್ಯನಮಸ್ಕಾರ ಮಾಡುವುದು ಆ ರಿಲಿಜನ್ನಿನ ಸಮಸ್ಯೆಯಾಗಿ ಉದ್ಭವಿಸುತ್ತದೆ. ಅಂದರೆ ಸೂರ್ಯ ನಮಸ್ಕಾರ ಹಾಗೂ ನಮಾಜು ಮಾಡುವ ಆಚರಣೆಗಳಲ್ಲಿ ಸಹಬಾಳ್ವೆಯ ಸಮಸ್ಯೆಯೇನಾದರೂ ಸೃಷ್ಟಿಯಾದರೆ ಅದು ನಮಾಜಿನ ವೈಶಿಷ್ಟ್ಯತೆಗೆ ಸಂಬಂಧಿಸಿದ್ದೇ ವಿನಃ ಸೂರ್ಯನಮಸ್ಕಾರದ್ದಲ್ಲ. ಹಾಗಾಗಿ ಯೋಗದ ಕುರಿತು ವಿವಾದವನ್ನೆಬ್ಬಿಸುವ ಪೂರ್ವದಲ್ಲಿ ಇದು ಭಾರತೀಯ ಸೆಕ್ಯುಲರ್ ಸರ್ಕಾರಗಳು ಹಾಗೂ ಚಿಂತಕರು ತಿಳಿದಿರಬೇಕಾದ ವಾಸ್ತವ.

Author

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp