ಇಂದು ವಿಚಾರವಾದಿಯೊಬ್ಬನಿಗೆ ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಕಂಡುಬರುವ ದೊಡ್ಡ ಅನಿಷ್ಟವೆಂದರೆ ಅದು ಮೂಢಾಚಾರ ಅಥವಾ ಡಂಬಾಚಾರ, ಇತ್ತೀಚೆಗೆ ಮೂಢ ನಂಬಿಕೆ ವಿರೋಧಿ ಕಾನೂನುಗಳ ಸಂದರ್ಭದಲ್ಲಿ ಕೂಡ ಡಂಬಾಚಾರಗಳ ಪ್ರಸ್ತಾಪವಾಗುತ್ತಿದೆ. ಈ ಡಂಬಾಚಾರಗಳನ್ನು ನಿಲ್ಲಿಸಿದ ಹೊರತೂ ನಮ್ಮ ಸಮಾಜ ಉದ್ದಾರವಾಗಲು ಸಾಧ್ಯವಿಲ್ಲ ಎಂಬುದರ ಕುರಿತು ಯಾವ ವಿಚಾರವಾದಿಗಳಿಗೂ ಎರಡು ಅಭಿಪ್ರಾಯಗಳು ಇರಲು ಸಾಧ್ಯವಿಲ್ಲ. ಆದರೆ ಇವರ ಹೇಳಿಕೆಗಳನ್ನು ಸ್ವಲ್ಪ ಕೂಲಂಕಷವಾಗಿ ಪರಿಶೀಲಿಸಿದಾಗ ಇವರೆಲ್ಲ ನಮ್ಮ ಸಂಪ್ರದಾಯಗಳನ್ನು ಟೀಕಿಸಲು ಒಂದು ಅಸ್ತ್ರವಾಗಿ ಈ ಪದವನ್ನು ಬಳಸುತ್ತಿದ್ದಾರೆಯೇ ವಿನಃ ಅದನ್ನು ಅರ್ಥಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಭಾರತೀಯ ಸಾಹಿತ್ಯದಲ್ಲಿ ಪ್ರಾಚೀನ ಕಾಲದಿಂದಲೂ ಅಧ್ಯಾತ್ಮದ ಸಂದರ್ಭದಲ್ಲಿ, ಅದರಲ್ಲೂ ಭಕ್ತಿ ಹಾಗೂ ಪೂಜಾಚರಣೆಗಳಿಗೆ ಸಂಬಂಧಿಸಿದಂತೆ ಡಂಬಾಚಾರವನ್ನು ಟೀಕಿಸಿ ಎಚ್ಚರಿಸುತ್ತ ಬಂದಿದ್ದಾರೆ. ಉಪನಿಷತ್ತುಗಳಲ್ಲಿ, ಇತಿಹಾಸ ಪುರಾಣಾದಿಗಳಲ್ಲಿ, ಪ್ರಾದೇಶಿಕ ಭಾಷೆಗಳಲ್ಲಿ ಬಂದ ವಚನ, ಕೀರ್ತನೆ, ಅಭಂಗ, ಭಜನ್, ಇತ್ಯಾದಿ ಭಕ್ತಿ ಸಾಹಿತ್ಯದಲ್ಲಿ ನಮಗೆ ಇಂಥ ಟೀಕೆಗಳು ವಿಫುಲವಾಗಿ ದೊರೆಯುತ್ತವೆ. ಅದರಲ್ಲೂ ಪುರಂದರ ದಾಸರು ಡಾಂಬಿಕ ಆಚರಣೆಗಳ ಕುರಿತು ಮಾಡಿದಷ್ಟು ಅಪಹಾಸ್ಯವನ್ನು ಬೇರೆ ಯಾರೂ ಮಾಡಿರಲಿಕ್ಕಿಲ್ಲ. ಅವರ ಉದರವೈರಾಗ್ಯವಿದು, ಮಡಿಮಡಿಮಡಿಯೆಂದು ಮೂರಾರು ಹಾರುತಿ, ಇತ್ಯಾದಿ ಕೀರ್ತನೆಗಳು ಗೊತ್ತಿರದ ಕರ್ಮಠರು ಇರಲಿಕ್ಕಿಲ್ಲ. ಡಂಬ ಅಥವಾ ದಂಬ ಎಂದರೆ ಮರೆಮಾಚುವುದು ಅಥವಾ ವಂಚನೆ ಎಂದಾಗುತ್ತದೆ. ಅಧ್ಯಾತ್ಮದ ಸಂದರ್ಭದಲ್ಲಿ ವಂಚನೆ ಯಾವಾಗ ಆಗುತ್ತದೆ? ಕೇವಲ ತೋರಿಕೆಗಾಗಿ ಆಚರಣೆಗಳನ್ನು ಮಾಡಿ ಅಂತರಂಗದಲ್ಲಿ ನಿಜವಾದ ಗುರಿಯನ್ನು ಸಾಧಿಸದಿದ್ದಾಗ. ಅಂದರೆ ನಿಜಭಕ್ತಿ ಇಲ್ಲದೇ ಪೂಜಿಸಿದಾಗ ತಾನೊಬ್ಬ ಭಕ್ತ ಎಂದು ಜನರಿಗೆ ತೋರಿಸಿಕೊಳ್ಳಲು ಮಾತ್ರ ಅದು ಪ್ರಯೋಜನವಾಗಬಲ್ಲದು. ಇದು ಎರಡು ರೀತಿಯ ವಂಚನೆಗೆ ದಾರಿ ಮಾಡುತ್ತದೆ: ೧. ನಮ್ಮನ್ನೇ ನಾವು ವಂಚಿಸಿಕೊಳ್ಳುವುದು. ಅಂದರೆ ನಾನೊಬ್ಬ ಮಹಾ ಭಕ್ತ ಎಂದು ಭ್ರಮಿಸುವುದು. ಈ ಭ್ರಮೆಯಿಂದ ಭಕ್ತಿಯ ಫಲವಾದ ಪರಮಾತ್ಮ ಜ್ಞಾನ ಸಿಗಲಾರದು. ಹಾಗಾಗಿ ಇದು ನಮಗೆ ನಾವೇ ಮಾಡಿಕೊಳ್ಳುವ ವಂಚನೆ. ೨. ಅಥವಾ ಉಳಿದವರು ಈತನು ನಿಜವಾಗಿಯೂ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡಿದ್ದಾನೆ ಎಂಬುದಾಗಿ ಭಾವಿಸಿ ಅವನಿಗೆ ಅರ್ಹವಲ್ಲದ ಗೌರವಾದರಗಳನ್ನು ನೀಡುವಾಗ ವಾಸ್ತವವನ್ನು ಮುಚ್ಚಿಟ್ಟು ಅವನ್ನು ಸ್ವೀಕರಿಸುವುದು. ಅವನಿಗೆ ಮಾನ ಸನ್ಮಾನಾದಿಗಳು ಕೂಡ ಆ ಕಾರಣದಿಂದಲೇ ಪ್ರಾಪ್ತವಾಗುತ್ತವೆ. ಒಂದೊಮ್ಮೆ ಅವನು ಕೇವಲ ತೋರಿಕೆಯವನಾದರೆ ತನ್ನ ಸುತ್ತಲಿನವರನ್ನು ವಂಚಿಸುತ್ತಿರುತ್ತಾನೆ. ಅದು ಅವನಿಗೆ ಕೇವಲ ಉದರಂಭರಣವಷ್ಟೇ ಆಗುತ್ತದೆ.
ಅಂದರೆ ಅಧ್ಯಾತ್ಮದ ಆಸಕ್ತಿಯು ನಿಜವಾದುದಲ್ಲವಾದರೆ ತೋರಿಕೆ, ಯಾಂತ್ರಿಕತೆ ಇವೇ ವಿಜೃಂಭಿಸುತ್ತವೆ. ‘ಏತ ತಲೆಬಾಗಿದರೇನು ಶಿವಭಕ್ತನಪ್ಪುದೆ?’ ‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ’ ಇತ್ಯಾದಿ ವಚನ ಸಾಲುಗಳು ಇಂಥ ಕ್ರಿಯೆಗಳು ಬೂಟಾಟಿಕೆಯಾಗುವ ಸಾಧ್ಯತೆಯನ್ನು ತಿಳಿಸುತ್ತವೆ. ‘ಉದರ ವೈರಾಗ್ಯವಿದು’ ಎಂಬ ಕೀರ್ತನೆಯ ಸಾಲುಗಳು ಬೂಟಾಟಿಕೆಯನ್ನೇ ಜೀವನವನ್ನಾಗಿ ಮಾಡಿಕೊಂಡ ಜನರನ್ನು ಸೂಚಿಸುತ್ತವೆ. ಈ ಎಲ್ಲಾ ಸಾಲುಗಳು ಕೂಡ ಏನನ್ನು ಹೇಳುತ್ತವೆ ಎಂಬುದು ಸ್ಪಷ್ಟ. ಅದರ ಸಂದರ್ಭ ಅಧ್ಯಾತ್ಮ. ಒಬ್ಬನ ಆಚರಣೆಗಳು ಡಾಂಬಿಕವೋ, ನಿಜವೊ ಎಂಬುದಕ್ಕೆ ಅಧ್ಯಾತ್ಮದಲ್ಲಿ ಸ್ವಪ್ರಮಾಣಗಳು ಇದ್ದೇ ಇವೆ. ಈ ಪ್ರಮಾಣಗಳನ್ನು ಒಪ್ಪಿಕೊಳ್ಳಬೇಕಾದರೆ ನಾವು ಅಧ್ಯಾತ್ಮದ ಸಂದರ್ಭವನ್ನು ಗಮನದಲ್ಲಿಡಬೇಕಾದುದು ಮುಖ್ಯ. ಏಕೆಂದರೆ ಇಂಥ ಹೇಳಿಕೆಗಳು ಯಾರನ್ನು ಉದ್ದೇಶಿಸಿವೆ? ಅಧ್ಯಾತ್ಮ ಸಾಧನೆಯಲ್ಲಿ ತೊಡಗಿಕೊಂಡವರು ಹಾಗೂ ಅದನ್ನು ಗೌರವಿಸುವವರನ್ನು. ಈ ಇಬ್ಬರಿಗೂ ಈ ಹೇಳಿಕೆಗಳು ಎಚ್ಚರಿಕೆಯ ಮಾತುಗಳು. ಇವರು ವಂಚನೆಯ ಜಾಲಕ್ಕೆ ಸಿಕ್ಕಿಕೊಳ್ಳಬಾರದು ಎಂಬ ಕಾಳಜಿಯಿಂದ ಬಂದ ಮಾತುಗಳು. ಈ ಮಾತುಗಳು ನಾಸ್ತಿಕರಿಗೆ ಅಪ್ರಸ್ತುತ. ಇಂಥ ಗುರಿಯನ್ನೇ ನಿರಾಕರಿಸುವವರಿಗೆ ಅದನ್ನು ತಲುಪುವ ಮಾರ್ಗವನ್ನು ಕಟ್ಟಿಕೊಂಡೇನು? ನೀವು ಅಂಟಾರ್ಕ್ಟಿಕಾ ಖಂಡ ಎಂಬುದು ಇದೆ ಎಂಬುದನ್ನು ಒಪ್ಪಿಕೊಳ್ಳಲಿಕ್ಕೇ ತಯಾರಿಲ್ಲದ ಮೇಲೆ ಅದನ್ನು ತಲುಪಲು ಸರಿದಾರಿ ತಪ್ಪುದಾರಿಗಳ ಕುರಿತು ಚರ್ಚಿಸುವ ಸಾಧ್ಯತೆಯೇ ಹೊರಟುಹೋಗುತ್ತದೆ. ಹಾಗೊಮ್ಮೆ ಯಾರಾದರೂ ಚರ್ಚಿಸುತ್ತಾರೆನ್ನಿ, ಅವರು ಬೇರೆ ಯಾವುದೋ ಅರ್ಥಹಚ್ಚಿಕೊಂಡು ಹಾಗೆ ಮಾಡುವ ಸಾಧ್ಯತೆ ಇದೆ.
ಹಾಗಾದರೆ ಇಂದು ಸಂಪ್ರದಾಯಗಳ ಸಂದರ್ಭದಲ್ಲಿ ತಾವು ಎತ್ತುತ್ತಿರುವ ಡಾಂಬಿಕತೆಯ ಪ್ರಶ್ನೆ ತಮಗೆ ಪ್ರಸ್ತುತವೆಂದೇಕೆ ದೇವರು, ಸಂಪ್ರದಾಯಗಳನ್ನು ನಿರಾಕರಿಸುವ ವಿಚಾರವಾದಿಗಳು ಅಂದುಕೊಂಡಿದ್ದಾರೆ? ನಮ್ಮ ಜನರು ತಪ್ಪುದಾರಿಯಲ್ಲಿ ನಡೆಯುತ್ತಿದ್ದಾರೆ. ಅವರು ನಿಜದ ದಾರಿಯಲ್ಲಿ ನಡೆದು ಆದಷ್ಟು ಬೇಗನೆ ಪರಮಾತ್ಮನನ್ನು ಸೇರಬೇಕು ಎಂಬುದು ಇವರ ಮಹೋದ್ದೇಶವೆ? ಹಾಗೆ ಸೂಚಿಸುವುದು ಸೂಚಿಸುವವರಿಗೆ ಹೋಗಲಿ ಟೀಕಿಸುವ ವಿಚಾರವಾದಿಗಳಿಗೇ ಹಾಸ್ಯಾಸ್ಪದವಾಗಿ ತೋರುತ್ತದೆ. ಅಂದರೆ ಡಾಂಬಿಕತೆಯ ಕುರಿತು ನಮ್ಮ ಇಡೀ ಭಾರತೀಯ ಸಾಹಿತ್ಯ ಪರಂಪರೆ ಏನಿದೆಯೋ ಆ ಪರಂಪರೆಗೆ ಇವರು ಸೇರಿಲ್ಲ. ಇವರು ತಾವು ಭಾರತೀಯ ನಾಸ್ತಿಕ ಪಂಥಗಳನ್ನು ಒಪ್ಪಿಕೊಳ್ಳುವವರು ಎಂದು ವಾದಿಸುವ ಸಾಧ್ಯತೆ ಇದೆ. ಆದರೆ ಬೌದ್ಧ, ಜೈನಾದಿ ನಾಸ್ತಿಕ ಮಾರ್ಗಗಳು ಸಮಾಧಿ. ನಿರ್ವಾಣ ಇತ್ಯಾದಿಗಳ ಸಾಧನಾ ಮಾರ್ಗಗಳು, ಅವು ಕೂಡ ತಮ್ಮ ಸಾಧನೆಯ ಮಾರ್ಗದಲ್ಲಿ ಇಂಥ ಡಂಬಾಚಾರಗಳ ಕುರಿತು ಎಚ್ಚರಿಸುತ್ತವೆ. ಇಂದು ಡಂಬಾಚಾರದ ಕುರಿತು ಮಾತನಾಡುವವರು ಸನ್ಯಾಸ ಮಾರ್ಗದವರೂ ಅಲ್ಲ, ಸಮಾಧಿ ತತ್ಪರರೂ ಅಲ್ಲ..
ಹಾಗಾಗಿ ಇಂಥವರ ವಾದವನ್ನು ಅರ್ಥೈಸುವ ಒಂದೇ ದಾರಿಯೆಂದರೆ ಅವರು ಪಾಶ್ಚಾತ್ಯ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ ಎಂದು ನಿರ್ಣಯಿಸುವುದು. ಹಿಂದೂಯಿಸಂ ಎಂಬುದು ಸುಳ್ಳು ರಿಲಿಜನ್ನು. ಇದನ್ನು ತೊಡೆದಲ್ಲದೇ ಈ ಜನರು ಉದ್ಧಾರವಾಗಲು ಸಾಧ್ಯವಿಲ್ಲ ಎಂಬ ಧೋರಣೆ. ಅಂದರೆ ಡಂಬಾಚಾರವನ್ನು ಟೀಕಿಸುವ ವಿಚಾರವಂತರು ಪಾಶ್ಚಾತ್ಯ ಚಿಂತನೆಗಳ ಸಂದರ್ಭದಲ್ಲಿ ಮಾತನಾಡುತ್ತಿದ್ದಾರೆ. ಇವರು ಸೂಪರ್‌ಸ್ಪಿಶನ್ ಎಂಬರ್ಥದಲ್ಲಿ ಮೌಢ್ಯ, ಡಂಬಾಚಾರ, ಇತ್ಯಾದಿ ಶಬ್ದಗಳನ್ನು ಬಳಸುತ್ತಿದ್ದಾರೆ. ಮೂಲತಃ ಈ ಸೂಪರ್‌ಸ್ಪಿಶನ್ ಆಚರಣೆ ಗಾಡ್‌ನ ಮಾರ್ಗದಿಂದ ನಮ್ಮನ್ನು ಭ್ರಷ್ಟಗೊಳಿಸುತ್ತದೆ, ಹಾಗಾಗಿ ಅದು ತಪ್ಪು ಎನ್ನುತ್ತದೆ ಕ್ರಿಶ್ಚಿಯಾನಿಟಿ. ಆದರೆ ಆಧುನಿಕ ವಿಚಾರವಂತರು ಕ್ರಿಶ್ಚಿಯಾನಿಟಿಯ ಸಂದರ್ಭದಲ್ಲಿ ಇದನು ಬಳಸುತ್ತಿಲ್ಲ. ಅವು ವೈಜ್ಞಾನಿಕವಲ್ಲದ ಆಚರಣೆಗಳು ಎಂಬ ಸೆಕ್ಯುಲರ್ ಅರ್ಥದಲ್ಲಿ ಬಳಸುತ್ತಾರೆ. ಈ ಅರ್ಥವೂ ಕೂಡ ಕ್ರಿಶ್ಚಿಯನ್ ಮೂಲದ್ದೇ ಆಗಿದೆ. ನಮ್ಮ ಆಚರಣೆಗಳು ಬೈಬಲ್ಲಿನ ಸತ್ಯಗಳನ್ನು ಆಧರಿಸಿರಬೇಕು ಎಂಬ ಕ್ರಿಶ್ಚಿಯನ್ ಪ್ರತಿಪಾದನೆಯೇ ನಮ್ಮ ಆಚರಣೆಗಳು ವೈಜ್ಞಾನಿಕ ಸತ್ಯಗಳನ್ನು ಆಧರಿಸಿರಬೇಕು ಎಂಬ ಸೆಕ್ಯುಲರ್ ಪ್ರತಿಪಾದನೆಯಾಗಿ ಬದಲಾಗಿದೆ. ಬೈಬಲ್ಲನ್ನು ಆಧರಿಸಿರದ ಆಚರಣೆಗಳು ಕ್ರಿಸ್ಟಿಯಾನಿಟಿಯ ಪ್ರಕಾರ ಸುಪರ್‌ಸ್ಟಿಶನ್. ಆದರೆ ವೈಜ್ಞಾನಿಕ ಸತ್ಯಗಳನ್ನು ಆಧರಿಸಿರದ ಆಚರಣೆಗಳು ಸುಪರ್‌ಸ್ಟಿಶನ್ ಎಂಬುದಾಗಿ ಸೆಕ್ಯುಲರ್ ಚಿಂತಕರು ಹೇಳುತ್ತಾರೆ.
ಹಾಗಂತ ನಮ್ಮ ಸಮಾಜದಲ್ಲಿ ಡಂಬಾಚಾರ ಎಂಬ ಶಬ್ದವೇ ಪ್ರಸ್ತುತವಲ್ಲ ಎಂಬ ವಾದ ನನ್ನದಲ್ಲ, ಆದರೆ ಅಧ್ಯಾತ್ಮದ ಸಂದರ್ಭದಲ್ಲಿ ಬಳಕೆಯಾದ ಪರಿಭಾಷೆಯನ್ನು ಥಿಯಾಲಜಿಯ ಚಿಂತನೆಗಳನ್ನಿಟ್ಟುಕೊಂಡು ಅರ್ಥೈಸಿದಾಗ ಮಾತ್ರ ಅವು ಅಸಂಬದ್ಧವಾಗಿ ಕಾಣುತ್ತವೆ. ಡಂಬಾಚಾರವನ್ನು ಲೌಕಿಕ ಸಂದರ್ಭಕ್ಕೂ ಅನ್ವಯಿಸಬಹುದು. ಯಾವುದೇ ಆಚರಣೆಯನ್ನಾಗಲೀ ಪ್ರಾಮಾಣಿಕತೆಯಿಲ್ಲದೇ ತೋರಿಕೆಗೆ ಮಾಡುವದು ಡಂಬಾಚಾರ ಎನಿಸಿಕೊಳ್ಳುತ್ತದೆ.
ಈ ನಿಟ್ಟಿನಿಂದ ನೋಡಿದಾಗ ಡಂಬಾಚಾರವನ್ನೂ ಟೀಕಿಸುವವರೇ ಮಹಾನ್ ಡಾಂಬಿಕರಾಗಿ ಕಾಣಿಸುತ್ತಾರೆ. ಏಕೆಂದರೆ, ಇವರೆಲ್ಲ ಪಾಶ್ಚಾತ್ಯ ಸಾಮಾಜಿಕ-ರಾಜಕೀಯ ಚಿಂತನೆಗಳನ್ನೇ ಪ್ರಮಾಣವಾಗಿಟ್ಟುಕೊಂಡು ವಿಚಾರವಂತರೆನಿಸಿಕೊಂಡಿದ್ದಾರೆ. ಆದರೆ ಭಾರತದ ಕುರಿತು ಪಾಶ್ಚಾತ್ಯರು ನೀಡಿದ ಚಿತ್ರಣಗಳು ಭಾರತೀಯ ವಾಸ್ತವಗಳಲ್ಲ, ಅವು ಪಾಶ್ಚಾತ್ಯರ ಪೂರ್ವಗ್ರಹಗಳು ಎಂಬುದಾಗಿ ಇಂದಿನ ಸಮಾಜ ಶಾಸ್ತ್ರವು ಕಂಡುಕೊಂಡಿದೆ. ಅದಕ್ಕಿಂತಲೂ ಮುಖ್ಯವಾಗಿ, ಭಾರತೀಯರಿಗೆ ಪಾಶ್ಚಾತ್ಯ ಪರಿಕಲ್ಪನೆಗಳೇ ಅರ್ಥವಾಗುತ್ತಿಲ್ಲ ಎಂಬ ಸತ್ಯವನ್ನೂ ನಾವು ಇಂದು ಕಂಡುಕೊಳ್ಳುತ್ತಿದ್ದೇವೆ. ಪಾಶ್ಚಾತ್ಯ ರಾಜಕೀಯ ಸಾಮಾಜಿಕ ಚಿಂತನೆಗಳ ಅರ್ಥವನ್ನು ತಿಳಿದುಕೊಳ್ಳಲು ಕೂಡ ಇಂಥ ವಿಚಾರವಂತರು ವಿಫಲರಾಗಿದ್ದಾರೆ. ಹಾಗಾಗಿ ಅಂಥ ವಿಚಾರಗಳನ್ನು ಸತ್ಯವೆಂದು ಪ್ರತಿಪಾದಿಸುತ್ತಿರುವ ವಿಚಾರವಾದಿಗಳ ಆಚರಣೆಗಳು ಅಂಥ ವಿಚಾರಗಳ ಸತ್ಯವನ್ನು ಆಧರಿಸಿರುವುದಂತೂ ದೂರದ ಮಾತು. ಇದು ಎಂಥ ವಿಪರ್ಯಾಸವನ್ನು ಸೃಷ್ಟಿಸಿದೆಯೆಂದರೆ ಪಾಶ್ಚಾತ್ಯ ಚಿಂತನೆಗಳನ್ನಾಧರಿಸಿ ಅವರು ಅಳವಡಿಸಿಕೊಂಡ ಆಚರಣೆಗಳೆಲ್ಲವನ್ನೂ ಡಂಬಾಚಾರಗಳ ಸಾಲಿಗೇ ಸೇರಿಸುವ ಸಾಧ್ಯತೆಯನ್ನು ಅದು ಸೃಷ್ಟಿಸಿದೆ. ನಮ್ಮ ಆಧುನಿಕ ಸಂದರ್ಭದಲ್ಲಿ ವಿಚಾರವಂತರಿಗೆ ಪ್ರಸ್ತುತವಾಗಬಹುದಾದ ಡಂಬಾಚಾರಗಳು ಈ ಸ್ವರೂಪದಲ್ಲಿವೆ.