Home ವಸಾಹತು ಪ್ರಜ್ಞೆಬುದ್ಧಿಜೀವಿಗಳ ಮೂಢನಂಬಿಕೆಗಳು ’ಮನುಷ್ಯನು ಹುಟ್ಟಾ ಸ್ವತಂತ್ರ’ ಎಂದರೇನು?

’ಮನುಷ್ಯನು ಹುಟ್ಟಾ ಸ್ವತಂತ್ರ’ ಎಂದರೇನು?

by Rajaram Hegde
15 views

ಫ್ರೀಡಂ ಎಂದರೆ ಯಾವುದೇ ನಿರ್ಬಂಧವಿಲ್ಲದ ಮುಕ್ತಸ್ಥಿತಿ. ಮನುಷ್ಯನು ಹುಟ್ಟಾ ಮುಕ್ತ ಎಂಬುದಾಗಿ ಪಾಶ್ಚಾತ್ಯ ರಾಜಕೀಯ ಚಿಂತನೆ ತಿಳಿಸುತ್ತದೆ. ಈ ವಾಕ್ಯವು ಮೂಲತಃ ಥಿಯಾಲಜಿಯಲ್ಲಿ ಬರುವಂಥದ್ದು. ಪ್ರತೀ ಮನುಷ್ಯನಲ್ಲೂ ಗಾಡ್ ರಚಿಸಿದ ಸೋಲ್ ಎಂಬ ಆಂತರಿಕ ಅಂಗವು ಇರುತ್ತದೆ ಹಾಗೂ ಅದು ಸತ್ಯದೇವನ ಜೊತೆ ಸಂಬಂಧವನ್ನು ಜೋಡಿಸಿಕೊಳ್ಳಲಿಕ್ಕೆ ಯಾವುದೇ ಲೌಕಿಕ ನಿರ್ಬಂಧಗಳೂ ಇಲ್ಲ ಎಂಬುದು ಅದರ ಇಂಗಿತ. ಈ ಹೇಳಿಕೆಯೇ ಸೆಕ್ಯುಲರ್ ರೂಪವನ್ನು ಪಡೆದಾಗ ಮನುಷ್ಯನು ಏಕೆ ಹುಟ್ಟಾ ಸ್ವತಂತ್ರ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

’ಮನುಷ್ಯನು ಹುಟ್ಟಾ ಸ್ವತಂತ್ರ’ ಎಂಬ ಹೇಳಿಕೆಯಿದೆ. ಇದು ’ಮ್ಯಾನ್ ಇಸ್ ಬಾರ್ನ್ ಫ್ರೀ’ ಎಂಬ ಇಂಗ್ಲಿಷ್  ವಾಕ್ಯದ ತರ್ಜುಮೆಯಾಗಿದೆ. ನಾವೆಲ್ಲ ಇದನ್ನು ಅನೇಕ ಬಾರಿ ಕೇಳಿರುತ್ತೇವೆ. ಅಷ್ಟೇ ಅಲ್ಲ ಅದೊಂದು ಸಾರ್ವತ್ರಿಕ ಸತ್ಯ ಎಂದೂ ನಂಬಿದ್ದೇವೆ. ಮನುಷ್ಯನಿಗೆ ಸ್ವಾತಂತ್ರ್ಯ ಏಕೆ ಬೇಕು? ಎಂಬ ಪ್ರಶ್ನೆಗೆ ಅವನು ಹುಟ್ಟಾ ಸ್ವತಂತ್ರನಾಗಿರುವುದರಿಂದ ಅದು ಅವನ ಜನ್ಮಸಿದ್ಧ ಹಕ್ಕು ಎನ್ನಲಾಗುತ್ತದೆ. ಹಾಗಾಗಿಯೇ ಪ್ರಭುತ್ವದ ಬಹುಮುಖ್ಯ ಜವಾಬ್ದಾರಿಯೆಂದರೆ ಅದರ ಪ್ರಜೆಗಳ ಸ್ವಾತಂತ್ರ್ಯವನ್ನು ರಕ್ಷಿಸುವುದು. ಅವುಗಳಲ್ಲಿ ವಾಕ್ ಸ್ವಾತಂತ್ರ್ಯ, ರಿಲಿಜನ್ನಿನ ಸ್ವಾತಂತ್ರ್ಯ ಇತ್ಯಾದಿಗಳಿವೆ. ಯಾವುದೇ ವ್ಯಕ್ತಿಯ ಇಂಥ ಸ್ವಾತಂತ್ರ್ಯವನ್ನು ಅಪಹರಣ ಮಾಡುವುದು ತಪ್ಪು ಹಾಗೂ ಅನೈತಿಕ ಎನ್ನಲಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ತೀರಾ ಜನಪ್ರಿಯವಾದ ಶಬ್ದ. ಯಾರದಾದರೂ ಲೇಖನ, ಭಾಷಣ ಅಥವಾ ಪುಸ್ತಕಗಳ ವಿರುದ್ಧವಾಗಿ ಪ್ರತಿಭಟನೆಗಳು ನಡೆದರೆ, ಅಥವಾ ಪ್ರಭುತ್ವವು ಅದನ್ನು ನಿಷೇಧಿಸಿದರೆ ನಮ್ಮ ಬುದ್ಧಿ ಜೀವಿಗಳು ಮೊದಲು ಎತ್ತುವ ಆಕ್ಷೇಪಣೆಯೆಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬುದು.

                              ಈ ಶಬ್ದಗಳು ನಮಗೆ ಅರ್ಥವಾಗಿವೆಯೆ? ಮನುಷ್ಯನು ಹುಟ್ಟಾ ಸ್ವತಂತ್ರ ಎಂದರೇನು? ಆಗತಾನೇ ಹುಟ್ಟಿದ ಶಿಶುವಿಗೆ ಏನು ಸ್ವಾತಂತ್ರ್ಯವಿರುತ್ತದೆ? ಬಹುಶ: ಮನುಷ್ಯರಲ್ಲೇ ಅದು ಅತ್ಯಂತ ಪರತಂತ್ರ ಜೀವಿ. ಅದಕ್ಕೆ ಅಳುವುದೊಂದನ್ನು ಬಿಟ್ಟು ಸ್ವತಂತ್ರವಾಗಿ ಏನನ್ನೂ ಮಾಡುವ ಶಕ್ತಿ ಇರುವುದಿಲ್ಲ. ಇದನ್ನು ಸ್ವತಂತ್ರ ಅಭಿವ್ಯಕ್ತಿ ಎನ್ನಲೂ ಸಾಧ್ಯವಿಲ್ಲ. ಅದಕ್ಕೆ ಮಾತೂ ಬರುವುದಿಲ್ಲ, ಭಾಷೆಯೂ ಬರುವುದಿಲ್ಲ. ಅದನ್ನು ಹಡೆದ ತಾಯಿ ಬೀದಿಗೆಸೆದು ಹೋದರೆ ಅದು ಸಾಯುತ್ತದೆ. ಹಾಗಾಗಿ ಇಂಥ ಅವಸ್ಥೆಯಲ್ಲಿ ಅದಕ್ಕೆ ನಮ್ಮ ಈ ಯಾವ ಸ್ವಾತಂತ್ರ್ಯಗಳನ್ನು ಆರೋಪಿಸಲೂ ಸಾಧ್ಯವಿಲ್ಲ. ಹಾಗಾದರೆ ನಾವು ದೊಡ್ಡವರು ಆಗತಾನೇ ಹುಟ್ಟಿದ ಶಿಶುವಿನ ಮೇಲೆ ಆಣೆಮಾಡಿ ಅನುಭವಿಸುವ ಈ ಸ್ವಾತಂತ್ರ್ಯಗಳೆಲ್ಲ ಎಲ್ಲಿಂದ ಪ್ರಸ್ತುತವಾಗುತ್ತವೆ?

               ಈ ಹಂತದಲ್ಲಿ ಭಾಷಾಂತರದ ಆವಾಂತರದ ಕುರಿತು ಸ್ವಲ್ಪ ಸೂಚಿಸಿ ಮುಂದೆ ಹೋಗುತ್ತೇನೆ. ಸ್ವತಂತ್ರ ಎಂಬ ಭಾರತೀಯ ಶಬ್ದದ ಅರ್ಥವೆಂದರೆ ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುವುದು ಅಥವಾ ನಮ್ಮ ಜವಾಬ್ದಾರಿಯನ್ನು ನಾವೇ ಹೊರುವುದು. ಈ ಅರ್ಥದಲ್ಲಿ  ಶಿಶುಗಳು ಹಾಗೂ ಹಾಸಿಗೆ ಹಿಡಿದವರು ಸ್ವತಂತ್ರರು ಎಂದರೆ ಅದು ನಮ್ಮ ಅನುಭವಕ್ಕೆ ವಿರುದ್ಧವಾದುದು. ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂಬ ಮನುಸ್ಮೃತಿಯ ಹೇಳಿಕೆಯನ್ನೇ ತೆಗೆದುಕೊಳ್ಳಿ. ಅದಕ್ಕೆ ’ಸ್ರೀಯರ ಜವಾಬ್ದಾರಿಯನ್ನು ಬೇರೆಯವರು, ಅಂದರೆ ತಂದೆ, ಗಂಡ ಹಾಗೂ ಮಕ್ಕಳು ಹೊರಬೇಕು’ ಎಂಬ ಅರ್ಥ ಬರುತ್ತದೆ. ಆದರೆ ಈ ಹೇಳಿಕೆಯನ್ನು  ಹಿಡಿದುಕೊಂಡು ನಮ್ಮ ಸ್ತ್ರೀವಾದಿಗಳು ಹಾರಿಬೀಳುವುದು ಈ ಅರ್ಥಕ್ಕಂತೂ ಅಲ್ಲ. ಅವರು ಸ್ವಾತಂತ್ರ್ಯ ಎಂದರೆ ಫ್ರೀಡಂ ಎಂಬ ಆಂಗ್ಲ ಶಬ್ದವನ್ನು ಭಾವಿಸಿಕೊಳ್ಳುತ್ತಾರೆ. ಇಂಗ್ಲೀಷಿನ ಫ್ರೀಡಂ ಎಂಬ ಶಬ್ದವು ನಮ್ಮ ಕ್ರಿಯೆಗೆ ಹಾಗೂ ಭವಿಷ್ಯಕ್ಕೆ ಸಂಬಂಧಿಸಿದಂತೆ ಸ್ವಂತ ನಿರ್ಣಯವನ್ನು ತೆಗೆದುಕೊಳ್ಳುವ ಮುಕ್ತವಾದ ಒಂದು ಅವಸ್ಥೆಯನ್ನು ಸೂಚಿಸುತ್ತದೆ.  ಹಾಗಾಗಿ ಭಾರತೀಯ ಸ್ತ್ರೀಗೆ ಸ್ವಂತ ನಿರ್ಣಯ ತೆಗೆದುಕೊಳ್ಳುವ ಹಕ್ಕಿರಲಿಲ್ಲ ಎಂಬುದು ಅವರ ತಕರಾರು. ಆದರೆ ಸ್ವಾತಂತ್ರ್ಯ ಶಬ್ದದಲ್ಲಿ ಅಂಥ ಅರ್ಥವೇನೂ ಹೊರಡಬೇಕೆಂದಿಲ್ಲ. ಅಂದರೆ ನಾವು ಸ್ವಾತಂತ್ರ್ಯ ಎಂದು ಮಾತನಾಡುವಾಗ ಫ್ರೀಡಂ ಎಂಬ ಶಬ್ದವನ್ನು ಉದ್ದೇಶಿಸಿರುತ್ತೇವೆ. ಆದರೆ ಫ್ರೀಡಂ ಎಂಬುದಾದರೂ ನಮಗೆ ಅರ್ಥವಾಗಿದೆಯೆ? ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಬೊಬ್ಬೆ ಹೊಡೆಯುವ ಬುದ್ಧೀಜೀವಿಗಳನ್ನು ಸ್ವಲ್ಪ ಗಮನಿಸಿ. ಅವರು ತಾವು ಹೇಳುತ್ತಿರುವುದು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತಾರೆ. ಮತ್ತೊಬ್ಬರು ಹೇಳುವುದು ಅವರಿಗೆ ಪಥ್ಯವಾಗದಿದ್ದರೆ ಅನೀತಿ, ಅನ್ಯಾಯ, ಸಮಾಜ ವಿರೋಧಿ, ಎಂದೆಲ್ಲ ನೆಪ ಸೃಷ್ಟಿಸಿ ಅದನ್ನು ಸಕಾರಣವಾಗಿ ಹತ್ತಿಕ್ಕಲು ತೊಡಗುತ್ತಾರೆ.

               ಮನಬಂದಂತೇ ನಿರ್ಣಯಿಸುವುದು ಅಥವಾ ವರ್ತಿಸುವುದು ಸ್ವಾತಂತ್ರ್ಯ ಎಂಬುದಾಗಿ ಯಾರೂ ಹೇಳಲಾರರು. ಅದೇಕೆ ಸ್ವಾತಂತ್ರ್ಯವಲ್ಲವೆಂದರೆ ಅದರಿಂದ ಇತರರಿಗೆ ಹಾನಿಯಾಗುತ್ತದೆ, ಸಮಾಜಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಒಬ್ಬರಿಗೆ ಉಪಯುಕ್ತವಾದುದು ಮತ್ತೊಬ್ಬರಿಗೆ ಹಾನಿಕರವಾಗಿರಬಹುದು. ಹಾಗಿರುವಾಗ ಯಾವುದೋ ಒಂದು ವರ್ತನೆ ಇತರರಿಗೆ ಹಾನಿಕರ ಎಂದು ತೀರ್ಮಾನಿಸಿ ಮಾಡಬೇಕೆಂದಿರುವ ಕ್ರಿಯೆಯನ್ನು ಮಾಡದಿದ್ದರೆ ನಮ್ಮನ್ನೇ ಹತ್ತಿಕ್ಕಿಕೊಂಡ ಹಾಗಾಗುವುದಿಲ್ಲವೆ? ಸ್ವಾತಂತ್ರ್ಯ ಯಾವುದು, ಸ್ವೇಚ್ಛಾಚಾರ ಯಾವುದು? ಅವೆರಡರ ನಡುವಿನ ಗೆರೆ ಎಲ್ಲಿದೆ? ಇದಕ್ಕೆಲ್ಲ ಇನ್ನೂ ಉತ್ತರಗಳು ಸಿಕ್ಕಿಲ್ಲ.

               ಇದಕ್ಕೂ ಆಸಕ್ತಿಪೂರ್ಣವಾದುದೆಂದರೆ ಧಾರ್ಮಿಕ ಸ್ವಾತಂತ್ರ್ಯ ಎಂಬ ಕಲ್ಪನೆ. ಕೆಲವು ಸಾಂಪ್ರದಾಯಿಕ ಆಚರಣೆಗಳನ್ನು ಮೂಢಾಚರಣೆ ಎಂಬುದಾಗಿ ಕರೆದು ಅವನ್ನು ಪ್ರಭುತ್ವವು ಬಲವಂತವಾಗಿ ನಿಲ್ಲಿಸಬೇಕು ಎನ್ನಲಾಗುತ್ತದೆ. ಉದಾಹರಣೆಗೆ ಮಡೆಸ್ನಾನ. ಅಂಥ ಆಚರಣೆಗಳ ವಿರುದ್ಧ ಹೋರಾಡಿ ಅವುಗಳನ್ನು ಬಲಪ್ರಯೋಗಿಸಿ ನಿಲ್ಲಿಸುವುದು ಸ್ವಾತಂತ್ರ್ಯದ ದಮನವಾಗುವುದಿಲ್ಲ. ಆದರೆ ಕೆಲವು ಆಧುನಿಕ ಆಚರಣೆಗಳು ನಿಲ್ಲಬೇಕೆಂದು ಮತ್ತೊಂದು ಸಂಘಟನೆಯವರು ಬಲವಂತ ಮಾಡಿದರೆ ಅದು ಸ್ವಾತಂತ್ರ್ಯ ಹರಣವಾಗುತ್ತದೆ. ಉದಾ: ಮಂಗಳೂರಿನಲ್ಲಿ ಪಬ್‌ಗಳ ಮೇಲೆ ನಡೆದ ದಾಳಿ. ಹಾಗಾಗಿ ಸ್ವಾತಂತ್ರ್ಯ ಎಂದರೇನು ಅಷ್ಟೇ ಅಲ್ಲ, ಅದು ಎಲ್ಲಿ ಬೇಕು ಎಲ್ಲಿ ಬೇಡ ಎಂಬುದರ ಕುರಿತೂ ನಮಗೆ ಸ್ಪಷ್ಟತೆಯಿಲ್ಲ. ಇಂಥ ಸ್ಪಷ್ಟತೆ ಇಲ್ಲವಾದ್ದರಿಂದ ಜನರಿಗೆ ತಿಳಿಸಿ ಹೇಳಿ ಮನವೊಲಿಸುವ ಕೆಲಸವೂ ಕೂಡ ಈ ಸಂಘಟನೆಗಳಿಗೆ ಸಾಧ್ಯವಿಲ್ಲ. ಏಕೆಂದರೆ ಸ್ವಾತಂತ್ರ್ಯವೇನೆಂಬುದು ಅವರಿಗೇ ಗೊತ್ತಿಲ್ಲವಲ್ಲ.

               ಅಂದರೆ, ಒಂದು ಸತ್ಯವನ್ನಂತೂ ನಾವು ಒಪ್ಪಿಕೊಳ್ಳಲೇಬೇಕು. ನಾವು ಸ್ವಾತಂತ್ರ್ಯ ಬೇಕು ಎಂದು ಬೊಬ್ಬೆ ಹೊಡೆಯುತ್ತೇವೆಯೇ ಹೊರತೂ, ಸ್ವಾತಂತ್ರ್ಯ ಎಂದರೇನು? ಅದು ಏಕೆ ಬೇಕು? ಎಂಬ ಕುರಿತು ಯೋಚಿಸಿಲ್ಲ. ಇದು ಕೇವಲ ಭಾರತೀಯರ ಸಮಸ್ಯೆ ಅಲ್ಲ. ಪಾಶ್ಚಾತ್ಯ ಚಿಂತಕರೂ ಕೂಡ ಕಳೆದ ನೂರಾರು ವರ್ಷಗಳಿಂದ ಈ ಕುರಿತು ತಲೆ ಕೆಡಿಸಿಕೊಂಡಿದ್ದಾರೆ, ಒಮ್ಮತದ ತೀರ್ಮಾನಕ್ಕೆ ಇನ್ನೂ ಬಂದಿಲ್ಲ. ನಮ್ಮ ಆಧುನಿಕ ಸಮಾಜದ ಬುನಾದಿಯಾಗಿರುವ ಈ ಫ್ರೀಡಂ ಎಂಬ ಪರಿಕಲ್ಪನೆಯ ಕುರಿತು ಇನ್ನೂ ಸ್ಪಷ್ಟತೆ ಏಕಿಲ್ಲ? ಏಕೆಂದರೆ ಫ್ರೀಡಂ ಎಂಬ ಕಲ್ಪನೆಯನ್ನು ಲಿಬರಲ್ ಚಿಂತಕರು ಕ್ರಿಶ್ಚಿಯನ್ ಥಿಯಾಲಜಿಯಿಂದ ತೆಗೆದುಕೊಂಡಿದ್ದಾರೆ. ಆದರೆ ಅವರು ಅದು ಸೆಕ್ಯುಲರ್ ಪರಿಕಲ್ಪನೆ ಎಂಬುದಾಗಿ ಭಾವಿಸಿದ್ದಾರೆ. ಥಿಯಾಲಜಿಯ ಸಂದರ್ಭವನ್ನು ಬಿಟ್ಟು ಈ ಪರಿಕಲ್ಪನೆಗೆ ಅರ್ಥವಿಲ್ಲ. ಹಾಗಾಗಿ ಥಿಯಾಲಜಿಯ ಸಹಾಯವನ್ನು ತೆಗೆದುಕೊಳ್ಳದೇ ಈ ಶಬ್ದವನ್ನು ಎಷ್ಟೇ ಹೊರಳಾಡಿಸಿದರೂ ಅದು ತನ್ನ ಅರ್ಥವನ್ನು ಬಿಟ್ಟುಕೊಡುವುದಿಲ್ಲ.

               ಕ್ರೈಸ್ತರ ಪ್ರಕಾರ ಮನುಷ್ಯನಲ್ಲಿ ಎರಡು ಜಗತ್ತುಗಳಿರುತ್ತವೆ. ಒಂದು ಸ್ಪಿರಿಚ್ಯುವಲ್ ಜಗತ್ತು ಮತ್ತೊಂದು ಲೌಕಿಕ ಅಶಾಶ್ವತ ಜಗತ್ತು. ಸ್ಪಿರಿಚ್ಯುವಲ್ ಜಗತ್ತನ್ನು ಗಾಡ್ ಆಳುತ್ತಿರುತ್ತಾನೆ. ಗಾಡ್ ಪ್ರತಿಯೊಂದು ಜೀವಿಯಲ್ಲೂ ಸೋಲ್ ಎಂಬ ಅದೃಶ್ಯ ಅಂಗವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿರುತ್ತಾನೆ. ಅದು ಮನುಷ್ಯನ ಸ್ಪಿರಿಚ್ಯುವಲ್ ಜಗತ್ತನ್ನು ನಿರ್ಮಿಸುತ್ತದೆ. ಅಂದರೆ ಪ್ರತಿಯೊಂದೂ ಸೋಲ್ ಕೂಡ ಗಾಡ್‌ನನ್ನು ಸೇರಲು, ಗಾಡ್‌ನಿಂದ ಪ್ರಭಾವಿತವಾಗಲು ಮುಕ್ತವಾಗಿರುವಂತೇ ಅದರ ಸೃಷ್ಟಿಯಾಗಿದೆ. ಅಂದರೆ ಅದಕ್ಕೆ ಯಾವುದೇ ಲೌಕಿಕ ಕಟ್ಟುಪಾಡುಗಳಿಲ್ಲ ಅಂತ ಅರ್ಥ. ಹೀಗೆ ಗಾಡ್ ಪ್ರತಿಯೊಂದು ಜೀವಿಯನ್ನೂ ಮುಕ್ತವಾಗಿ ಸೃಷ್ಟಿಸಿದ್ದಾನೆ ಎಂಬುದಾಗಿ ಕ್ರೈಸ್ತರು ನಂಬುತ್ತಾರೆ. ಮನುಷ್ಯನು ಹುಟ್ಟಾ ಸ್ವತಂತ್ರನೆಂದರೆ, ಅವನು ಹುಟ್ಟಾ ಸತ್ಯದೇವನನ್ನು ಸೇರುವ ಅಥವಾ ಉದ್ದಾರವನ್ನು ಹೊಂದುವ ಮುಕ್ತತೆಯನ್ನು ಹೊಂದಿದ್ದಾನೆ ಎಂದರ್ಥ. ಮನುಷ್ಯನ ಐಹಿಕ ಜಗತ್ತು ಆತನ ಸ್ವಾರ್ಥ, ಲಾಲಸೆ, ದಬ್ಬಾಳಿಕೆ, ಕಾಯ್ದೆ ಕಾನೂನುಗಳು, ಮುಂತಾದ ಐಹಿಕ ನಿರ್ಬಂಧಗಳಿಂದ ಕೂಡಿದ್ದು ಅದು ಅಶಾಶ್ವತವಾಗಿದೆ. ಅದು ನಮ್ಮ ಲೌಕಿಕ ಅಗತ್ಯಗಳನ್ನು ಪೂರೈಸುವುದನ್ನೇ ಗುರಿಯಾಗಿ ಹೊಂದಿದೆ.

               ಈ ಮೇಲಿನ ನಿರೂಪಣೆಯು ರಿಲಿಜನ್ನಿನ ಫ್ರೀಡಂ ಸಂದರ್ಭದಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಪ್ರೊಟೆಸ್ಟಾಂಟ್ ಥಿಯಾಲಜಿ ತಜ್ಞರ ಪ್ರಕಾರ ಮನುಷ್ಯನ ಸ್ಪಿರಿಚ್ಯುವಲ್ ಜಗತ್ತಿನ ಮೇಲೆ ಲೌಕಿಕ ಪ್ರಭುತ್ವದ ಯಾವುದೇ ಕಾಯ್ದೆ ಕಾನೂನುಗಳೂ ಸವಾರಿ ಮಾಡುವಂತಿಲ್ಲ. ಲೌಕಿಕ ಪ್ರಭುತ್ವವು ಮರ್ತ್ಯ ಮಾನವರಿಂದ ಆಗಿದೆ. ಅದು ಸೆಕ್ಯುಲರ್ ಜಗತ್ತು. ಅದರ ಕಾಯ್ದೆಗಳು ಮನುಷ್ಯನ ಲೌಕಿಕ ವ್ಯವಹಾರಗಳಿಗೆ ಸೀಮಿತವಾಗಿರಬೇಕು. ಸ್ಪಿರಿಚ್ಯುವಲ್ ಜಗತ್ತಿನ ಒಡೆಯ ಗಾಡ್. ಮನುಷ್ಯನ ಸೋಲ್‌ಅನ್ನು ಅವನು ಆಳುತ್ತಿದ್ದಾನೆ. ಹಾಗೂ ತನ್ನ ಸ್ಪಿರಿಚ್ಯುವಲ್ ಪ್ರಯಾಣವನ್ನು ನಿರ್ಧರಿಸುವವನು ಆಯಾ ಮನುಷ್ಯನೇ. ಏಕೆಂದರೆ ಅವನ ಸೋಲ್ ಆತನಿಗೆ ಅದನ್ನು ನಿರ್ದೇಶಿಸುತ್ತದೆ. ಅಂದರೆ ತನ್ನ ಉದ್ದಾರಕ್ಕೆ ಸಂಬಂಧಿಸಿದಂತೇ ಸ್ವಯಂ ನಿರ್ಧಾರವನ್ನು ಆಯಾ ವ್ಯಕ್ತಿಯೇ ತೆಗೆದುಕೊಳ್ಳಬೇಕು. ಅದೇ ಗಾಡ್‌ನ ಇಚ್ಛೆ. ಮರ್ತ್ಯ ಮಾನವರು ತಮ್ಮ ಕಾಯ್ದೆ ಕಾನೂನುಗಳ ಮೂಲಕ ಅದರಲ್ಲಿ ಹಸ್ತಕ್ಷೇಪವನ್ನು ನಡೆಸಿದರೆ ಅದು ಮಾನವನಿಗೆ ಗಾಡ್ ಕೊಟ್ಟ ಫ್ರೀಡಂನ ಹರಣವಾಗುತ್ತದೆ, ಅಷ್ಟೇ ಅಲ್ಲ ಗಾಡ್‌ನನ್ನು ಧಿಕ್ಕರಿಸಿದ ಪಾಪ ತಟ್ಟುತ್ತದೆ. ಪ್ರೊಟೆಸ್ಟಾಂಟ್ ಕ್ರೈಸ್ತರು ಈ ಕಾರಣದಿಂದಾಗಿ ಮನುಷ್ಯ ಜಗತ್ತನ್ನು ಎರಡಾಗಿ ವಿಂಗಡಿಸಿದರು. ಆ ಮೂಲಕ ಮನುಷ್ಯ ಪ್ರಭುತ್ವದಿಂದ ಮನುಷ್ಯನ ರಿಲಿಜನ್ನನ್ನು ಪ್ರತ್ಯೇಕಿಸಿ ಅದನ್ನು ರಕ್ಷಿಸುವ ಪ್ರಯತ್ನ ನಡೆಸಿದರು. ಅಂದರೆ, ತಾನು ತನ್ನ ಉದ್ಧಾರಕ್ಕೆ ರಿಲಿಜನ್ನನ್ನು ಅನುಸರಿಸುವಲ್ಲಿ ಆಯಾ ವ್ಯಕ್ತಿಗೆ ಪ್ರಭುತ್ವದ ಅಂಕುಶ ಇರಬಾರದು. ಏಕೆಂದರೆ ಆತನೊಬ್ಬನೇ ಅದನ್ನು ನಿರ್ಣಯಿಸಬಲ್ಲ. ಅದೇ ಆತನಿಗೆ ಹುಟ್ಟಿನಿಂದ ಬಂದ ಫ್ರೀಡಂ ಆಗಿದೆ. ಹಾಗಾಗಿ ಪ್ರಭುತ್ವಕ್ಕೆ  ರಿಲಿಜನ್ನಿಗೆ ಸಂಬಂಧಿಸಿದ ಕಾನೂನುಗಳನ್ನು ಮಾಡುವ ಅಧಿಕಾರವಿಲ್ಲ.

               ಯುರೋಪಿನ ಸೆಕ್ಯುಲರ್ ಪ್ರಭುತ್ವವು ತನ್ನ ಪ್ರಜೆಗಳಿಗೆ ರಿಲಿಜನ್ನಿನ ಫ್ರೀಡಂ ನೀಡಬೇಕು ಎಂಬ ಧ್ಯೇಯಾದರ್ಶವನ್ನು ಈ ಥಿಯಾಲಜಿಯ ಪ್ರತಿಪಾದನೆಯನ್ನಾಧರಿಸಿ ರೂಪಿಸಿಕೊಂಡಿದೆ. ಅಂದರೆ ಯುರೋಪಿನಲ್ಲಿ ಮೊತ್ತಮೊದಲು ಸೆಕ್ಯುಲರ್ ರಾಜಕೀಯ ಚಿಂತನೆಗಳನ್ನು ರೂಪಿಸಿದ ಚಿಂತಕರು ಥಿಯಾಲಜಿಯ ಪ್ರತಿಪಾದನೆಗಳನ್ನೇ ವೇಷ ಮರೆಸಿ ಇಟ್ಟರು. ಅವರಲ್ಲಿ ಜಾನ್ ಲಾಕ್ ಎಂಬವನು ಅಗ್ರಗಣ್ಯನಾಗಿದ್ದಾನೆ. ಅವನ ನಂತರ ಯುರೋಪು ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನದ ಸೆಕ್ಯುಲರ್ ಪ್ರಭುತ್ವಗಳಲ್ಲಿ ರಿಲಿಜನ್ನಿನ ಫ್ರೀಡಂ ಅನ್ನು ಮಾನ್ಯಮಾಡಲಾಯಿತು. ಹಾಗೂ ಸೆಕ್ಯುಲರ್ ಪ್ರಭುತ್ವವು ತನ್ನ ಪ್ರಜೆಯೊಬ್ಬನ ರಿಲಿಜನ್ನಿನ ಫ್ರೀಡಂ ಅನ್ನು ಮಾನ್ಯಮಾಡಬೇಕು ಎಂಬ ಸಾಮಾನ್ಯ ಧ್ಯೇಯವು ರೂಪುಗೊಂಡಿತು. ಈ ಚಿಂತಕರು ಸೆಕ್ಯುಲರ್ ಪ್ರಭುತ್ವವು ರಿಲಿಜನ್ನಿನ ಫ್ರೀಡಂ ಅನ್ನು ಏಕೆ ಮಾನ್ಯಮಾಡಬೇಕು ಎಂಬ ಪ್ರಶ್ನೆಗೆ ಥಿಯಾಲಜಿಯ ಉತ್ತರವನ್ನೇ ಕೊಡುತ್ತಾರೆ: ಏಕೆಂದರೆ ಮನುಷ್ಯ ಜೀವನವು ಎರಡು ಜಗತ್ತುಗಳನ್ನು ಹೊಂದಿದೆ, ಅದರಲ್ಲಿ ಅವನ ಉದ್ಧಾರವನ್ನು ನಿರ್ಧರಿಸುವ ಶಕ್ತಿ ಆತನ ಸ್ಪಿರಿಟ್. ಇದು ಗಾಡ್‌ನ ಇಚ್ಛೆಯಲ್ಲ, ಮನುಷ್ಯ ಇರುವುದೇ ಹಾಗೆ. ಸೆಕ್ಯುಲರ್ ಜಗತ್ತಿಗೆ ಅದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ ಎಂಬುದೇ ಅವರ ಉತ್ತರ. ಇಲ್ಲಿ ಈ ಚಿಂತಕರೆಲ್ಲರೂ ಮಾನವನ ಜೀವನವು ಎರಡು ಜಗತ್ತಾಗಿ ಒಡೆದುಕೊಂಡಿದೆ ಎಂಬ  ಪೂರ್ವಗ್ರಹೀತವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳುತ್ತಾರೆ. ಅದು ನಿಜವಾಗಿಯೂ ಹಾಗೆ ಒಡೆದುಕೊಂಡಿದೆಯೆ ಎಂಬ ಕುರಿತು ಯಾವ ವೈಜ್ಞಾನಿಕ ಸಿದ್ಧಾಂತಗಳನ್ನು ಕಟ್ಟುವ ಪ್ರಯತ್ನಗಳೂ ನಡೆದಿಲ್ಲ. 

               ಈ ರಿಲಿಜನ್ನಿನ ಫ್ರೀಡಂನ ಕಲ್ಪನೆಯನ್ನು ರಿಲಿಜನ್ನುಗಳಿಲ್ಲದ ಭಾರತೀಯ ಸಂಸ್ಕೃತಿಗೆ ತಂದರೆ ಅದು ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ. ಭಾರತೀಯರಿಗೆ ರಿಲಿಜನ್ನಿಲ್ಲ, ಗಾಡ್ ಇಲ್ಲ. ತಮ್ಮ ಆತ್ಮವನ್ನು ಗಾಡ್ ಸೃಷ್ಟಿಸಿದ್ದಾನೆ ಎಂದೂ ಅವರು ನಂಬುವುದಿಲ್ಲ. ಹಾಗೂ ಗಾಡ್‌ನನ್ನು ಸೇರುವ ಸ್ವಾತಂತ್ರ್ಯವನ್ನು ಗಾಡ್ ತಮಗೆ ನೀಡಬೇಕು ಎಂದರೆ ಅವರಿಗೆ ಅರ್ಥವಾಗುವ ವಿಷಯವೇ ಅಲ್ಲ. ಹಾಗಾಗಿ ನಾನು ಹುಟ್ಟಿನಿಂದಲೇ ಮುಕ್ತ ಎಂಬ ವಾಕ್ಯಕ್ಕೆ ಇರಬಹುದಾದ ಥಿಯಾಲಜಿಯ ಅರ್ಥವು ಅವರಿಗೆ ಎಟುಕಲಾರದು. ಇದು ಒಂದು ಅನರ್ಥವಾದರೆ, ಇನ್ನೊಂದು, ಭಾರತದಲ್ಲಿ ಸ್ಪಿರಿಚ್ಯುವಲ್ ಮತ್ತು ಲೌಕಿಕ ಜಗತ್ತುಗಳನ್ನು ಗುರುತಿಸುವುದು ಹೇಗೆ? ಏಕೆಂದರೆ ರಿಲಿಜನ್ನು ಮತ್ತು ಸೆಕ್ಯುಲರ್ ಜಗತ್ತುಗಳ ವಿಭಜನೆ ಎಂದರೇನು ಎಂಬುದೇ ನಮ್ಮ ತಲೆಗೆ ಹೋಗುವುದಿಲ್ಲ. ಇಂಥ ಸಮಾಜದಲ್ಲಿ ಸೆಕ್ಯುಲರ್ ಪ್ರಭುತ್ವವು ರಿಲಿಜನ್ನಿನ ವಿಷಯದಲ್ಲಿ ಹಸ್ತಕ್ಷೇಪ ನಡೆಸಬಾರದು ಎಂಬ ಸೆಕ್ಯುಲರ್ ನೀತಿಯನ್ನು ಅಳವಡಿಸುವುದು ಕಷ್ಟ. ಏಕೆಂದರೆ ಹಿಂದೂಗಳ ರಿಲಿಜನ್ನು ಯಾವುದು? ಅದನ್ನು ಗುರುತಿಸುವುದು ಹೇಗೆ? ಅದನ್ನು ಗುರುತಿಸದೇ ಹಿಂದೂಗಳ ಸ್ಪಿರಿಚ್ಯುವಲ್ ಜಗತ್ತನ್ನು ಗುರುತಿಸುವುದು ಹೇಗೆ. ಇಂಥದ್ದೇ ಪ್ರಶ್ನೆ ಇಲ್ಲಿ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರಿಗೆ ಸಂಬಂಧಿಸಿ ಏಳುವುದಿಲ್ಲ. ಏಕೆಂದರೆ ಅವು ಸತ್ಯದೇವನೇ ನೀಡಿದ ರಿಲಿಜನ್ನುಗಳು.

               ಭಾರತೀಯ ಆಚರಣೆಗಳ ಸಂಬಂಧಿಸಿ ಬ್ರಿಟಿಷರಿಗೆ ಪ್ರಾರಂಭದಿಂದಲೂ ಈ ಫಜೀತಿ ಏಳತೊಡಗಿತು. ಕೊನೆಗೆ ಅವರು ಹಿಂದೂಗಳ ಕೆಲವು ಆಚರಣೆಗಳು ಮೂಢನಂಬಿಕೆಗಳು ಅಥವಾ ರಿಲಿಜನ್ನಲ್ಲ ಎಂದು ಗುರುತಿಸಿ ಅವನ್ನು ಬಲವಂತವಾಗಿ ತೊಡೆಯಲು ಹೊರಟರು. ಹಿಂದೂಗಳ ಯಾವ ಆಚರಣೆಗಳನ್ನು ತಡೆಯುವುದರಿಂದ ರಿಲಿಜನ್ನಿನ ಸ್ವಾತಂತ್ರ್ಯ ಹರಣವಾಗುತ್ತದೆ? ಯಾವ ಆಚರಣೆಗಳನ್ನು ಹತ್ತಿಕ್ಕುವುದು ಸೆಕ್ಯುಲರ್ ತಟಸ್ಥತೆಗೆ ಭಂಗ ತರಲಾರದು? ಎಂಬ ಕುರಿತು ಸೆಕ್ಯುಲರ್ ಪ್ರಭುತ್ವಕ್ಕೆ ಇಂದೂ ಕೂಡ ಸ್ಪಷ್ಟತೆಯಿಲ್ಲ. ಇಂಥ ನಿರ್ಣಯಗಳು ಅವೈಜ್ಞಾನಿಕವಾಗಿದ್ದಲ್ಲಿ ಅವು ಹಿಂದೂಗಳಲ್ಲಿ ಸಕಾರಣವಾಗಿಯೇ ಅಸಮಾಧಾನವನ್ನು ಹುಟ್ಟುಹಾಕುತ್ತವೆ.

               ಇದು ’ರಿಲಿಜನ್ನಿನ ಫ್ರೀಡಂ’ ಎಂಬ ಕಲ್ಪನೆಗೆ ಸಂಬಂಧಿಸಿದ ಗೋಜಲಾದರೆ, ಇನ್ನು ರಿಲಿಜನ್ನನ್ನು ಬಿಟ್ಟು ಫ್ರೀಡಂ ಎಂಬ ಪರಿಕಲ್ಪನೆಯ ಅವಸ್ಥೆ ಹೇಗಿರಬಹುದು ಊಹಿಸಿ. ಏಕೆಂದರೆ ಪಾಶ್ಚಾತ್ಯ ಸಮಾಜದಲ್ಲಿ ಕೂಡ ಅದು ರಿಲಿಜನ್ನಿನ ಫ್ರೀಡಂ ಆಗಿದ್ದಲ್ಲಿ ಅಲ್ಲಿನ ಜನರ ಗ್ರಹಿಕೆಗೆ ನಿಲುಕುತ್ತದೆ. ಸೆಕ್ಯುಲರ್, ರಿಲಿಜಿಯಸ್ ವಿಭಜನೆ ಅವರಿಗೆ ಸಹಜ ಜ್ಞಾನವಾಗಿದೆ. ರಿಲಿಜನ್ನಿನ ಸಂದರ್ಭದಿಂದ ಅದನ್ನು ತೆಗೆದರೆ ಪಾಶ್ಚಾತ್ಯರಿಗಾದರೂ ಅದು ಅರ್ಥವಾಗಬಹುದೆ? ಉದಾಹರಣೆಗೆ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಇತ್ಯಾದಿ ಶಬ್ದಗಳು. ಅವುಗಳನ್ನು ಮಾನವನಿಗೆ ಕೊಟ್ಟವರು ಯಾರು? ಅಥವಾ ಅವು ಇವೆ ಎಂದು ಹೇಳಿದವರಾದರೂ ಯಾರು? ಇವನ್ನು ಥಿಯಾಲಜಿಗೆ ಜೋಡಿಸುವಂತಿಲ್ಲ. ಗಾಡ್ ಮಾನವನಿಗೆ ಸರಿಯಾದ ರಿಲಿಜನ್ನನ್ನು ಅನುಸರಿಸುವ ಮುಕ್ತತೆಯನ್ನು ಕೊಟ್ಟಹಾಗೇ ಸರಿಯಾಗಿ ಮಾತನಾಡುವ ಮುಕ್ತತೆಯನ್ನು ಕೊಟ್ಟಿದ್ದಾನೆ ಅಂತಲೋ, ಪತ್ರಿಕೆಯ ಮೂಲಕ ತನ್ನ ಅನಿಸಿಕೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಸವಲತ್ತನ್ನು ಕೊಟ್ಟಿದ್ದಾನೆ ಅಂತಲೋ ಹೇಳಿ ನುಣುಚಿಕೊಳ್ಳುವಂತಿಲ್ಲ.

               ಆ ಕಾರಣದಿಂದ ಫ್ರೀಡಂ ಕುರಿತ ಸೆಕ್ಯುಲರ್ ಚಿಂತನೆಗಳು ಗಾಡ್‌ನನ್ನು ಕೈಬಿಡುತ್ತವೆ. ಸೆಕ್ಯುಲರ್ ಚಿಂತನೆಗಳು ಹೇಳುವುದೇನೆಂದರೆ ಪ್ರತೀ ಮಾನವನಿಗೂ ಸ್ವಾತಂತ್ರ್ಯವು ನಿಸರ್ಗದತ್ತವಾಗಿದೆ. ಏಕೆಂದರೆ ಪ್ರತಿಯೊಬ್ಬನಲ್ಲೂ ಒಂದು ಸ್ವಂತಿಕೆ (ಸೆಲ್ಫ್) ಇರುತ್ತದೆ. ಅದು ಸ್ವಾವಲಂಬಿ ಹಗೂ ಮುಕ್ತವಾದುದು. ಅದಕ್ಕೆ ತಾನು ಏನು ಮಾಡಬೇಕೆಂಬುದು ಗೊತ್ತು. ಅದಕ್ಕೆ ಏನನ್ನೋ ಮಾಡುವುದಿರುತ್ತದೆ, ಹೇಳುವುದಿರುತ್ತದೆ. ಏನನ್ನೋ ಅಭಿವ್ಯಕ್ತಿಸುವುದಿರುತ್ತದೆ. ಅದು ತನ್ನಷ್ಟಕ್ಕೆ ತಾನೇ ಸಾರ್ವಭೌಮ. ಅದನ್ನು ತಡೆಯುವ ಅಧಿಕಾರ ಉಳಿದ ಯಾರಿಗೂ ಇಲ್ಲ. ಏಕಿಲ್ಲ? ಎಂಬ ಪ್ರಶ್ನೆಗೆ ಅವರಿಗೂ ಉತ್ತರ ಗೊತ್ತಿಲ್ಲ. ಆದರೆ ಅದು ಗಾಡ್‌ನ ಇಚ್ಛೆ ಎಂಬ ಉತ್ತರವನ್ನು ಕೊಡುವ ಹಾಗಿಲ್ಲ. ಆದರೆ ಈ ಮುಕ್ತವಾದ ಸೆಲ್ಫ್‌ಗಳು ಸಮುದಾಯದಲ್ಲಿ ಹೇಗೆ ಬದುಕಬೇಕೆಂಬುದು ಪಾಶ್ಚಾತ್ಯ ಸಾಮಾಜಿಕ ಚಿಂತಕರ ತಲೆತಿನ್ನುವ ಸಮಸ್ಯೆಯಾಗಿದ್ದಂತೂ ಹೌದು.

               ಪಾಶ್ಚಾತ್ಯ ಚಿಂತಕರಿಗೆ ತಾವು ಥಿಯಾಲಜಿಯಿಂದ ಕಳ್ಳಸಾಗಣೆ ಮಾಡಿದ ಇಂಥ ಅನೇಕ ಪರಿಕಲ್ಪನೆಗಳು ಏಕೆ ಬೇಕು ಎನ್ನುವುದು ಗೊತ್ತಿಲ್ಲ. ಅಂಥ ಪ್ರಶ್ನೆಗಳನ್ನು ಕೇಳಿಕೊಳ್ಳದೇ ಅವನ್ನು ಸಹಜವಾಗಿ ಬಳಕೆ ಮಾಡಲಾಗಿದೆ. ಆದರೆ ಅವರ ಅನುಭವಕ್ಕೇ ಅವು ನಿಲುಕುವುದಿಲ್ಲ. ಅವು ಏಕೆ ಬೇಕು ಎಂಬುದು ಥಿಯಾಲಜಿಯಲ್ಲಿ ಸ್ಪಷ್ಟವಾಗಿದೆ. ಅದರ ಪ್ರಕಾರ ಫ್ರೀಡಂ ಗಾಡ್‌ನ ಇಚ್ಛೆ. ಗಾಡ್‌ನನ್ನೇ ತಿರಸ್ಕರಿಸುವ ಸೆಕ್ಯುಲರ್ ಚಿಂತಕರಿಗೆ ರಿಲಿಜನ್ನಿನ ಹೊರಗೆ ಫ್ರೀಡಂ ಎಂದರೇನು, ಅದು ಏಕೆ ಬೇಕು ಎಂಬುದನ್ನು ವಿವರಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಅದನ್ನು ಸ್ವಾತಂತ್ರ್ಯ ಎಂಬುದಾಗಿ ತಪ್ಪಾಗಿ ಭಾಷಾಂತರಿಸಿಕೊಂಡ ಭಾರತೀಯರಿಗಂತೂ ಪಾಶ್ಚಾತ್ಯರು ಏನು ಚರ್ಚೆ ನಡೆಸಿದ್ದಾರೆ ಎಂಬುದರ ತಲೆ ಬುಡ ಅರ್ಥವಾಗದಿದ್ದರೂ ಆಶ್ಚರ್ಯವಿಲ್ಲ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

You may also like

Leave a Comment

Message Us on WhatsApp