Home ವಸಾಹತು ಪ್ರಜ್ಞೆಬುದ್ಧಿಜೀವಿಗಳ ಮೂಢನಂಬಿಕೆಗಳು ಭಾರತೀಯರಿಗೆ ಕಾನೂನಿನ ಭಾಷೆ ಅರ್ಥವಾಗುತ್ತದೆಯೆ?

ಭಾರತೀಯರಿಗೆ ಕಾನೂನಿನ ಭಾಷೆ ಅರ್ಥವಾಗುತ್ತದೆಯೆ?

by Rajaram Hegde
142 views

ಭಾರತೀಯರು ಕಾನೂನುಗಳ ಜೊತೆಗೇ ಕಾನೂನಿನ ಪರಿಭಾಷೆಗಳನ್ನು ಹಾಗೂ ಪರಿಕಲ್ಪನೆಗಳನ್ನು ಪಶ್ಚಿಮದಿಂದ ಆಮದು ಮಾಡಿಕೊಂಡಿದ್ದಾರೆ. ಈ ಪರಿಕಲ್ಪನೆಗಳು ಮೂಲತಃ ಕ್ರೈಸ್ತ ಥಿಯಾಲಜಿಯ ಭಾಗಗಳಾಗಿವೆ. ಆದರೆ ಆಧುನಿಕ ಕಾಲದಲ್ಲಿ ಈ ಪರಿಭಾಷೆಗಳು ಕಾನೂನುಗಳಲ್ಲಿ ಪ್ರಸ್ತುತತೆ ಗಳಿಸಿಕೊಂಡು ವಿಶ್ವವ್ಯಾಪಿಯಾದವು. ಭಾರತೀಯ ಸಂಸ್ಕೃತಿಯಲ್ಲಿ ರಿಲಿಜನ್ನೇ ಇಲ್ಲದಿದ್ದರಿಂದ ಈ ಪರಿಕಲ್ಪನೆಗಳೂ ಭಾರತೀಯರಿಗೆ ಅಪರಿಚಿತ. ಆದರೆ ಭಾರತೀಯರು ಇಂಥ ಅರ್ಥವಾಗದ ಪರಿಭಾಷೆಗಳನ್ನೇ ಆಧರಿಸಿ ನ್ಯಾಯದಾನವನ್ನು ಮಾಡುತ್ತಾರೆ. ಅದರ ಪರಿಣಾಮವೇನು?

ಈಗಾಗಲೇ ಲಾ, ಜಸ್ಟೀಸ್ ಇತ್ಯಾದಿ ಪದಗಳು ಭಾರತೀಯ ಸಂಪ್ರದಾಯಗಳಿಗೆ ಅಪರಿಚಿತ ಎಂಬುದನ್ನು ನೋಡಿದ್ದೇವೆ. ಆ ಮೂಲಕ ಇಂದಿನ ಕಾನೂನು ವ್ಯವಸ್ಥೆಯು ಭಾರತೀಯರಿಗೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂಬ ಯಕ್ಷ ಪ್ರಶ್ನೆಯೊಂದು ನಮ್ಮೆದುರು ನಿಲ್ಲುತ್ತದೆ. ಆದರೆ ಸಮಸ್ಯೆ ಇನ್ನೂ ಆಳವಾಗಿದೆ. ಈ ಪದಗಳು ಕೇವಲ ಮೇಲ್ಪದರದ ಸಮಸ್ಯೆಗಳಲ್ಲ. ಪಾಶ್ಚಾತ್ಯ ಕಾನೂನಿನ ಕುರಿತು ಅಧ್ಯಯನವನ್ನು ಮಾಡಿದಂತೆಲ್ಲ ನನಗೆ ಇನ್ನೂ ಗಹನವಾದ ಸಮಸ್ಯೆಗಳು ಗೋಚರಿಸುತ್ತಿವೆ. ನಮಗೆ ಇಂಗ್ಲಿಷ್ ಭಾಷೆ ಬರುತ್ತದೆ ಎಂದುಕೊಂಡಿದ್ದೇವೆ. ನಾನಂತೂ ಹಾಗೇ ಅಂದುಕೊಂಡಿದ್ದೆ. ಆದರೆ ಶಬ್ದಕೋಶ ಹಾಗೂ ವ್ಯಾಕರಣಗಳು ಗೊತ್ತಾಗಿಬಿಟ್ಟರೆ ಆ ಭಾಷೆ ಅರ್ಥವಾಗಿಬಿಡುತ್ತದೆ ಎನ್ನುವುದು ಸುಳ್ಳು. ಇದು ಪಾಶ್ಚಾತ್ಯ ಕಾನೂನಿನ ಪರಿಭಾಷೆಗಳನ್ನು ಕುರಿತು ತಿಳಿದುಕೊಳ್ಳಲು ಹೊರಟಾಗ ನನಗೆ ಗೊತ್ತಾದ ವಿಷಯ.

               ಪಾಶ್ಚಾತ್ಯ ಕಾನೂನಿನ ಪರಿಭಾಷೆಗಳು ನೇರವಾಗಿ ಕ್ರೈಸ್ತ ಥಿಯಾಲಜಿಯಂದ ಬಂದಿವೆ. ಅದೇ ಕಾನೂನಿನ ಪರಿಭಾಷೆಗಳನ್ನು ನಮ್ಮಲ್ಲಿ ಕೂಡ ಅಳವಡಿಸಿಕೊಂಡಿದ್ದೇವೆ. ಆದರೆ ನಮ್ಮಲ್ಲಿ ಎಷ್ಟು ಜನ ನ್ಯಾಯಾಧೀಶರಿಗೆ ಅಥವಾ ವಕೀಲರಿಗೆ ಕ್ರೈಸ್ತ ಥಿಯಾಲಜಿಯ ಜ್ಞಾನವಿದೆ? ಹೋಗಲಿ ಈ ಕಾನೂನಿನ ಕಲಿಕೆಯಲ್ಲಿ ಎಲ್ಲಾದರೂ ಈ ಪರಿಭಾಷೆಗಳನ್ನು ಅರ್ಥಮಾಡಿಕೊಳ್ಳಲಿಕ್ಕೆ ಕ್ರೈಸ್ತ ಥಿಯಾಲಜಿಯನ್ನು ಕಲಿಯಬೇಕು ಎಂಬ ಷರತ್ತನ್ನಾದರೂ ಇಡುತ್ತಾರೆಯೆ? ಹಾಗೆ ಇಡಬೇಕೆಂಬುದು ಕಾನೂನಿನ ಕಲಿಕೆಯ ಒಂದು ಅಗತ್ಯವೇ ಆಗಿಲ್ಲ. ಏಕೆಂದರೆ ಕಾನೂನನ್ನು ಕಲಿಸುವವರು ತಾವೊಂದು ಸಾರ್ವತ್ರಿಕ ಭಾಷೆಯನ್ನು ಉಪಯೋಗಿಸುತ್ತಿದ್ದೇವೆ ಅಂದುಕೊಂಡಿದ್ದಾರೆ. ಪಾಶ್ಚಾತ್ಯ ಚಿಂತಕರು ಕಾನೂನನ್ನು ಒಂದು ಸೆಕ್ಯುಲರ್ ಭಾಷೆ ಎಂಬ ಧೋರಣೆಯಿಂದ ನಮಗೆ ಪರಿಚಯಿಸಿದರು ಹಾಗೂ ಈ ಪದ್ಧತಿಯನ್ನು ನಮ್ಮಲ್ಲಿ ಅಳವಡಿಸಿದರು. ಇಂಗ್ಲಿಷ್  ಬಲ್ಲವರಿಗೆಲ್ಲ ಅದು ಅರ್ಥವಾಗುತ್ತದೆ ಎಂಬ ಭರವಸೆ ನೀಡಿದರು. ನಾವು ಆ ಪರಿಭಾಷೆಗಳನ್ನೇ ಉಪಯೋಗಿಸಿಕೊಂಡು ಅವೇ ಕಾನೂನುಗಳನ್ನೇ ನಮ್ಮಲ್ಲಿ ಅಳವಡಿಸಿಕೊಂಡಿದ್ದೇವೆ. ನಮ್ಮ ಇಡೀ ಕಾನೂನು ವ್ಯವಸ್ಥೆಯೇ ಇಂಥ ಪರಿಭಾಷೆಗಳ ಮೇಲೆ ನಿಂತಿದೆ ಅಂತಾದ ಪಕ್ಷದಲ್ಲಿ ಆ ಪರಿಭಾಷೆಗಳು ನಮಗೆ ಅರ್ಥವಾಗುವುದಿಲ್ಲ ಎಂದರೆ ಏನರ್ಥ? ಅದನ್ನಾಧರಿಸಿದ ನಮ್ಮ ನ್ಯಾಯದಾನ ವ್ಯವಸ್ಥೆಯ ಗತಿ ಏನಾಗಿರಬಹುದು?

               ಈ ಅಂಶವನ್ನು ಒಂದು ಉದಾಹರಣೆಯ ಮೂಲಕ ವಿಶದೀಕರಿಸುತ್ತೇನೆ. ಸಾಂಸ್ಕೃತಿಕ ವ್ಯತ್ಯಾಸವು ಶಬ್ದಾರ್ಥಗಳಲ್ಲಿ ಎಷ್ಟೊಂದು ಪಲ್ಲಟವನ್ನು ಮಾಡುತ್ತದೆ ಎಂಬುದನ್ನು ನಿದರ್ಶಿಸಲಿಕ್ಕೆ ಈ ಒಂದು ಉದಾಹರಣೆ ಸಾಕು. ಕ್ರಿಮಿನಲ್ ಮೊಖದ್ದಮೆಗಳಲ್ಲಿ ಅತ್ಯಂತ ಮುಖ್ಯವಾಗಿರುವ ಪರಿಭಾಷೆ ಎಂದರೆ lie, ಅಥವಾ falsity. ಈ ಶಬ್ದವನ್ನು true ಎಂಬ ಶಬ್ದಕ್ಕೆ ವಿರುದ್ಧವಾಗಿ ಇಡುತ್ತಾರೆ. ಈ ಶಬ್ದಗಳನ್ನು ಬಳಸುವಲ್ಲಿ ನಮಗೇನೂ ಸಮಸ್ಯೆಯಾಗಿಲ್ಲ. ಏಕೆಂದರೆ ನಮ್ಮ ಸುಳ್ಳು ಹಾಗೂ ಸತ್ಯ ಎಂಬ ಎರಡು ಶಬ್ದಗಳ ಮೂಲಕ ನಾವು ಅವನ್ನು ಅರ್ಥಮಾಡಿಕೊಳ್ಳುತ್ತೇವೆ. ಸುಳ್ಳು ಹೇಳುವುದು ಒಂದು ಕ್ರಿಮಿನಲ್ ಅಪರಾಧ ಎಂಬುದಾಗಿ ಪಾಶ್ಚಾತ್ಯ ಕಾನೂನು ಹೇಳುತ್ತದೆ. ಈ ಹೇಳಿಕೆ ನಮಗೆ ಅರ್ಥವಾಗಿದೆಯೆ? ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದಕ್ಕೂ ಪೂರ್ವದಲ್ಲಿ ಪಾಶ್ಚಾತ್ಯರಿಗೆ ಸುಳ್ಳು ಹೇಳುವುದು ಏಕೆ ಕ್ರಿಮಿನಲ್ ಅಪರಾಧವೆಂಬುದನ್ನು ನೋಡೋಣ.

               ಪಾಶ್ಚಾತ್ಯರ ಕಾನೂನಿನ ಪ್ರಕಾರ ಸುಳ್ಳು ಹೇಳುವುದು ಹಾಗೂ ಮೋಸ ಮಾಡುವುದು ಎರಡೂ ಒಂದೇ. ಸುಳ್ಳು ಹೇಳುವುದೇ ಮೋಸ ಮಾಡುವುದಕ್ಕಾಗಿ. ಸುಳ್ಳು ಹಾಗೂ ಮೋಸಗಳ ನಡುವಿನ ಈ ಸಮೀಕರಣವು ಥಿಯಾಲಜಿಯಿಂದ ಹುಟ್ಟಿಕೊಂಡಿದೆ. ಸುಳ್ಳು ಹೇಳುವವನು ವಿಶ್ವಾಸಾರ್ಹ ವ್ಯಕ್ತಿಯಲ್ಲ. ಟ್ರೂ ಎಂದರೆ ವಿಶ್ವಾಸಾರ್ಹ ಎಂದೂ ಅರ್ಥವಿದೆ. ಗಾಡ್ ಪರಿಪೂರ್ಣನಾಗಿ ವಿಶ್ವಾಸಾರ್ಹ ವ್ಯಕ್ತಿ ಹಾಗಾಗಿ ಅವನು ಪರಿಪೂರ್ಣವಾಗಿ ಸತ್ಯವಂತ. ಡೆವಿಲ್ ಅವನಿಗೆ ತದ್ವಿರುದ್ಧ. ಅವನು ಪರಿಪೂರ್ಣ ಸುಳ್ಳುಗಾರ, ಹಾಗಾಗಿ ಮೋಸಗಾರ, ಹಾಗಾಗಿ ವಿಶ್ವಾಸಕ್ಕೆ ಅರ್ಹನಲ್ಲದ ವ್ಯಕ್ತಿ. ಜನರನ್ನು ದಾರಿ ತಪ್ಪಿಸಿ ಅವರನ್ನು ನರಕಕ್ಕೆಳೆಯಲು ಹಾಗೂ ಅವರ ಭವಿಷ್ಯವನ್ನು ನಾಶಮಾಡಲು ಅವನು ಸುಳ್ಳು ಹೇಳುತ್ತಾನೆ. ಡೆವಿಲ್ಲನನ್ನು ಈವಿಲ್ ಎಂದು ಕೂಡ ಕರೆಯುತ್ತಾರೆ. ಅಂದರೆ ಕೇಡು. ಜನರಿಗೆ ಕೇಡು ಮಾಡುವ ಬುದ್ಧಿಯೇ ಈವಿಲ್. ಅಂದರೆ ಸುಮ್ಮನೇ ಹುಡುಗಾಟಕ್ಕೆ ಜನರಿಗೆ ತೊಂದರೆ ಮಾಡುವುದಲ್ಲ, ಅಥವಾ ಈ ಕೇಡು ತಾತ್ಕಾಲಿಕ ಸಂಗತಿಯೂ ಅಲ್ಲ. ಶಾಶ್ವತವಾಗಿ ಅವರು ಉದ್ಧಾರವಾಗದಂತೇ ನಾಶಮಾಡುವುದು. ಒಳ್ಳೆಯದರ ಜೊತೆಗೆ ಈವಿಲ್‌ಗೆ ಶಾಶ್ವತವಾದ ವೈರತ್ವವಿದೆ. ತನ್ನ ಕಾರ್ಯಸಾಧನೆಗಾಗಿ ಅದು ಹೊಂಚು ಹಾಕಿ ಕಾಯುತ್ತಿರುತ್ತದೆ. ನಾನಾ ರೀತಿಯ ಸುಳ್ಳುಗಳನ್ನು ಸೃಷ್ಟಿಸಿ ಜನರನ್ನು ಆಕರ್ಷಿಸಿ ದಾರಿ ತಪ್ಪಿಸುತ್ತದೆ. ಇದೇ ಮೋಸ. ಈ ಕಥೆಯನ್ನು ಸತ್ಯವೆಂದು ನಂಬಿಕೊಂಡು ಬಂದ ಸಂಸ್ಕೃತಿಗೆ ಸುಳ್ಳು ಎನ್ನುವುದು ಈವಿಲ್‌ನ ಪ್ರತಿರೂಪ ಹಾಗೂ ಗಾಡ್‌ನ ಮತ್ತು ಮನುಷ್ಯೋದ್ಧಾರದ ವೈರಿ. ಯಾವನಾದರೂ ಒಬ್ಬನು ಸುಳ್ಳು ಹೇಳುವುದು ಈ ಈವಿಲ್‌ನ ಪ್ರಸ್ತುತಿಯಿಂದಲೇ.

               ಈ ಥಿಯಾಲಜಿಯ ಹಿನ್ನೆಲೆಯಲ್ಲಿ ರೂಪುಗೊಂಡ ಪಾಶ್ಚಾತ್ಯ ಕಾನೂನು ಸಂಹಿತೆಯು ಜಸ್ಟೀಸ್ ಎಂಬ ಕಲ್ಪನೆಯ ಜೊತೆಗೇ ಟ್ರೂಥ್, ಫಾಲ್ಸಿಟಿ ಮುಂತಾದ ಪರಿಭಾಷೆಗಳನ್ನೂ  ಅದರಿಂದಲೇ ತೆಗೆದುಕೊಂಡಿತು. ಹಾಗಾಗಿ ಅದಕ್ಕೆ ಸುಳ್ಳು ಹೇಳುವುದು ಒಂದು ಕ್ರಿಮಿನಲ್ ಅಪರಾಧ. ಈ ಪಾಶ್ಚಾತ್ಯ ಕಾನೂನು ಸಂಹಿತೆಯು ಮನುಷ್ಯ ಪ್ರಭುತ್ವಗಳಲ್ಲಿ ಬಳಕೆಗೆ ಬಂದಾಗ ಥಿಯಾಲಜಿಯ ಜೊತೆಗಿನ ಅದರ ಸಂಬಂಧವು ತೋರಿಕೆಯಿಂದ ಹಿನ್ನೆಲೆಗೆ ಸರಿಯಿತು. ಆದರೆ ಆ ಶಬ್ದದ ಅರ್ಥ ಸಂಬಂಧ ಹಾಗೇ ಉಳಿಯಿತು. ಅದಕ್ಕೆ ಸೆಕ್ಯುಲರ್ ಕಾನೂನಿನಲ್ಲಿ ಬೇರೆ ಪ್ರತ್ಯೇಕ ಅರ್ಥವಿಲ್ಲ. ಹಾಗಾಗಿ ಈ ಥಿಯಾಲಜಿಯ ಅರ್ಥವು ಅದರಲ್ಲಿ ಅಂತರ್ಗತವಾಗಿದೆ. ಥಿಯಾಲಜಿಯನ್ನೇ ಸಾಮಾನ್ಯ ಜ್ಞಾನವನ್ನಾಗಿ ಪಡೆದ ಪಾಶ್ಚಾತ್ಯ ಸಂಸ್ಕೃತಿಯ ಜನರಿಗೆ ಅದು ಅರ್ಥವಾಗುವುದು ಕಷ್ಟವಿಲ್ಲ. ಏಕೆಂದರೆ ಆ ಸಂಸ್ಕೃತಿಯ ಜನರು ತಮ್ಮ ದಿನನಿತ್ಯದ ಮಾತುಗಳಲ್ಲಿ ಇಂಥ ಅನೇಕ ಪದಗುಚ್ಛಗಳನ್ನು ಬಳಸಿ ಅರ್ಥಮಾಡಿಕೊಳ್ಳುತ್ತಿರುತ್ತಾರೆ. ಇಂಥ ಮಾತುಗಳು ಯುರೋಪಿನ ದೇಶಭಾಷೆಗಳಲ್ಲಿ ರೂಢಿಯಲ್ಲಿ ಬಂದವು. ಇಂಗ್ಲೀಷು ಕೂಡ ಅಂಥದೊಂದು ಭಾಷೆಯಾಗಿದೆ. ಹಾಗಾಗಿ ಇಂಗ್ಲೀಷು ಮಾತನಾಡುವವರು ಇಂಥ ಕಾನೂನಿನ ಪರಿಭಾಷೆಗಳು ಥಿಯಾಲಜಿಗೆ ಸೇರಿದವು ಎಂಬುದರ ಕುರಿತು ಗಮನ ಕಳೆದುಕೊಂಡರು. ಬದಲಾಗಿ ಅದು ಸಾರ್ವತ್ರಿಕ ಭಾಷೆಯೋ ಎಂಬಂತೇ ಬಳಸತೊಡಗಿದ್ದರು. ಭಾರತದಲ್ಲಿ ಪಾಶ್ಚಾತ್ಯ ಕಾನೂನಿನ ಪರಿಭಾಷೆಗಳು ಪ್ರಚಲಿತದಲ್ಲಿ ಬರುವ ಸಂದರ್ಭದಲ್ಲಿ ಈ ಕಾರಣದಿಂದಾಗಿ ಕಾನೂನಿನ ಭಾಷೆಯು ಸಾರ್ವತ್ರಿಕ ಭಾಷೆಯಾಗಿ ಮಾರ್ಪಟ್ಟಿತ್ತು. ನಾವೂ ಕೂಡ ಈ ಕಾನೂನಿನ ಪರಿಬಾಷೆಗಳನ್ನು ಅರ್ಥಮಾಡಿಕೊಳ್ಳುವುದೆಂದರೆ ಇಂಗ್ಲಿಷ್  ಭಾಷೆಯನ್ನು ಕಲಿಯುವ ಕೆಲಸ ಎಂಬಂತೇ ಅದನ್ನು ಸ್ವೀಕರಿಸಿದೆವು.

               ನಾವು ಈ ಪರಿಭಾಷೆಗಳನ್ನು ದೇಶೀ ಭಾಷೆಗೆ ತರ್ಜುಮೆ ಮಾಡಿಕೊಂಡೆವು. ಫಾಲ್ಸಿಟಿಗೆ ಸುಳ್ಳು, ಝೂಟ್, ಇತ್ಯಾದಿ ಭಾಷಾಂತರಗಳನ್ನು ಮಾಡಿ ಇಂಗ್ಲಿಷ್  ಶಬ್ದಗಳನ್ನು ಅರ್ಥೈಸಿದೆವು. ನಮ್ಮ ಗ್ರಹಿಕೆಯೆಂದರೆ, ಈ ಶಬ್ದಗಳೆಲ್ಲವೂ ಪ್ರಪಂಚದ ಎಲ್ಲಾ ಸಂಸ್ಕೃತಿಗಳಲ್ಲೂ ಒಂದೇ ಅರ್ಥವನ್ನು ಹೊಂದಿರುತ್ತವೆ ಅಂತ. ಈ ಸಂಬಂಧಿಸಿ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸವು ನಮಗೆ ಗೊತ್ತಿರಲಿಲ್ಲ. ಏಕೆಂದರೆ, ಭಾರತೀಯ ಭಾಷೆಗಳಲ್ಲಿ ಸುಳ್ಳು ಹಾಗೂ ಮೋಸ ಎಂಬವು ಎರಡು ಬೇರೆ ಬೇರೆಯದೇ ಕಲ್ಪನೆಗಳು. ಝೂಟ್ ಹಾಗೂ ಧೋಕಾ ಎಂಬವು ಬೇರೆ ಬೇರೆ ಕಲ್ಪನೆಗಳು. ನಮ್ಮಲ್ಲಿ ಸುಳ್ಳು ಹೇಳುವುದು ಮೋಸವಾಗಲೇ ಬೇಕೆಂದಿಲ್ಲ. ನಾವು ಒಳ್ಳೆಯ ಉದ್ದೇಶಕ್ಕೆ, ಉಪಕಾರ ಮಾಡಲಿಕ್ಕೆ, ಕೂಡ ಸುಳ್ಳು ಹೇಳುತ್ತೇವೆ. ಹಾಗೂ ಅದನ್ನು ಒಂದು ನೀತಿಯನ್ನಾಗಿ ಕೂಡ ಮಾಡಿಕೊಂಡಿದ್ದೇವೆ. ನಮಗೆ ಸುಳ್ಳು ಹೇಳಲು ಹಿರಿಯರಿಂದಲೇ ಪಾಠವಾಗುತ್ತದೆ. ನನಗೆ ನನ್ನ ಅಮ್ಮನೇ ’ಅಪ್ಪನಿಗೆ ಕೋಪ ಬಂದಿದೆ ಸತ್ಯ ಹೇಳಬೇಡ’ ಎಂಬುದಾಗಿ ಸುಳ್ಳು ಹೇಳಿಸಿದ್ದು ನೆನಪಿದೆ. ಮನೆಗೆ ಯಾರಾದರೂ ಬಂದು ಅಪ್ಪ ಇದ್ದಾರೆಯೆ ಎಂದು ವಿಚಾರಿಸಿದಾಗ ’ಇಲ್ಲ ಎಂದು ಹೇಳೋ’ ಎಂದು ಅಪ್ಪನೇ ಹೇಳಿಕೊಟ್ಟದ್ದು ಇದೆ. ಅವರೇನೂ ನಮಗೆ ಕ್ರಿಮಿನಲ್ ಬುದ್ಧಿಯನ್ನು ತುಂಬುವ ಉದ್ದೇಶದಿಂದ ಹಾಗೆ ಹೇಳಿಕೊಟ್ಟಿರಲಿಲ್ಲ. ಏಕೆಂದರೆ ಸುಳ್ಳು ಹೇಳುವುದು ದುಷ್ಟತನ ಎಂದೇ ಅವರು ಭಾವಿಸಿರಲಿಲ್ಲ. ಅದೊಂದು ನಿರುಪದ್ರವಿಯಾದ ವ್ಯಾವಹಾರಿಕ ಅಗತ್ಯ ಎಂಬುದಗಿ ಭಾವಿಸಿದ್ದರು.

               ಇದು ನನ್ನೊಬ್ಬನ ಅನುಭವವಲ್ಲ, ನಮ್ಮೆಲ್ಲರ ಅನುಭವ. ನನ್ನ ಹಿರಿಯರೊಂದೇ ಅಲ್ಲ, ನಮ್ಮ ಸಮಾಜವೇ ನಮಗೆ ವ್ಯಾವಹಾರಿಕ ಅಗತ್ಯಕ್ಕಾಗಿ ಸುಳ್ಳನ್ನು ಹೇಳುವುದನ್ನು ಕಲಿಸುತ್ತದೆ. ಹಾಗಾಗಿಯೇ ನಮ್ಮಲ್ಲಿ ’ಸಾವಿರ ಸುಳ್ಳನ್ನು ಹೇಳಿಯಾದರೂ ಒಂದು ಮದುವೆ ಮಾಡು’, ’ಒಳ್ಳೆಯ ಮಾತಿಗೆ ಸುಳ್ಳೇ ಪ್ರಧಾನ’ ಎಂಬ ಗಾದೆಗಳೂ ಇವೆ. ಸುಳ್ಳು ಹೇಳಿದರೆ ಜನರಿಗೆ ಖುಷಿಯಾಗುತ್ತದೆ ಎಂಬ ಸತ್ಯವೊಂದು ನಮಗೆಲ್ಲ ಗೊತ್ತು. ಹಾಗಾಗಿ ನಮ್ಮ ಎಷ್ಟೋ ಕೆಲಸಗಳನ್ನು ಈ ಸತ್ಯವನ್ನಾಧರಿಸಿ ಸಾಧಿಸಿಕೊಳ್ಳುತ್ತೇವೆ. ಅದರಿಂದ ಯಾರಿಗೂ ಕೇಡು ಮಾಡುವ ಉದ್ದೇಶ ನಮಗಿರುವುದಿಲ್ಲ. ಇದು ಕೇವಲ ಇಂದಿನ ಭಾರತೀಯ ಜೀವನ ಕ್ರಮಕ್ಕೆ ಸಂಬಂಧಿಸಿದ ವಿಚಾರವಲ್ಲ. ನಮ್ಮ ಸಂಸ್ಕೃತ ಗ್ರಂಥಗಳನ್ನು ಅವಲೋಕಿಸಿದಾಗ ಕೂಡ ನಮಗೆ ಕಂಡುಬರುವುದು ಇದೇ ಆಗಿದೆ. ನಮ್ಮ ಪ್ರಾಚೀನ ಗ್ರಂಥಗಳು ಸತ್ಯವನ್ನೇ ಹೇಳಬೇಕೆಂದು ಮತ್ತೆ ಮತ್ತೆ ತಿಳಿಸುವುದು ಹೌದು. ಸತ್ಯಕ್ಕೆ ಅತ್ಯುಚ್ಚ ಸ್ಥಾನವನ್ನು ನೀಡುವುದೂ ಹೌದು. ಆದರೆ ಧರ್ಮಸೂಕ್ಷ್ಮವನ್ನು ತಿಳಿದು ಸತ್ಯವನ್ನು ಹೇಳಬೇಕೆಂದೂ ಅವು ಹೇಳುತ್ತವೆ. ಸುಳ್ಳನ್ನು ಯಾವ ಸಂದರ್ಭದಲ್ಲೂ ಹೇಳಲೇಕೂಡದು, ಹೇಳಿದರೆ ಪಾಪ ಎಂದು ಅವು ಕುರುಡಾಗಿ ಪ್ರತಿಪಾದಿಸುವುದಿಲ್ಲ. ಅಂದರೆ ಸತ್ಯ ಹಾಗೂ ಸುಳ್ಳುಗಳನ್ನು ಪಾಶ್ಚಾತ್ಯರಂತೇ ನಾರ್ಮೇಟಿವ್ ವೈರುಧ್ಯಗಳೆಂಬಂತೇ ನಮ್ಮ ಸಂಸ್ಕೃತಿಯು ನೋಡುವುದಿಲ್ಲ.

               ಎಲ್ಲರಿಗೂ ಗೊತ್ತಿರುವ ಸುಭಾಷಿತವೊಂದಿದೆ. ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್.. ಎಂಬುದಾಗಿ ಅದು ಪ್ರಾರಂಭವಾಗುತ್ತದೆ. ಅದರ ಅರ್ಥವೆಂದರೆ ’ಸತ್ಯವನ್ನು ಹೇಳು, ಪ್ರಿಯವಾದುದನ್ನು ಹೇಳು, ಅಪ್ರಿಯವಾದ ಸತ್ಯವನ್ನು ಹೇಳಬೇಡ, ಪ್ರಿಯವಾದ ಸುಳ್ಳನ್ನೂ ಹೇಳಬೇಡ, ಇದು ಸನಾತನ ಧರ್ಮ’. ಅಂದರೆ ಎಂಥ ಸಂದರ್ಭದಲ್ಲಾದರೂ ಸತ್ಯವನ್ನೇ ಹೇಳಬೇಕೆಂಬುದು ನಮ್ಮಲ್ಲಿ ವಿವೇಕವೆನಿಸುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಕೆಲವು ಸಂದರ್ಭಗಳಲ್ಲಿ ಸುಳ್ಳನ್ನೇ ಹೇಳುವುದು ಶ್ರೇಯಸ್ಕರ ಎಂದೂ ಈ ಗ್ರಂಥಗಳು ತಿಳಿಸುತ್ತವೆ. ಮಹಾಭಾರತದಲ್ಲಿ ಇಂಥ ಅನೇಕ ಸಂದರ್ಭಗಳು ಬರುತ್ತವೆ. ಅಂಥ ಸನ್ನಿವೇಶಗಳು ನಮಗೆ ತಿಳಿಸುವುದೆಂದರೆ ಯಾವಾಗಲೂ ಸತ್ಯವನ್ನು ಹೇಳುವುದೇ ಸರಿಯಲ್ಲ. ಕೆಲವೊಮ್ಮೆ ಸತ್ಯವನ್ನು ಹೇಳುವುದರಿಂದ ಅನ್ಯಾಯವೇ ಆಗಬಹುದು. ಕೆಟ್ಟದ್ದೇ ಆಗಬಹುದು. ಅಂಥ ಅಂದರ್ಭದಲ್ಲಿ ಸುಳ್ಳನ್ನು ಹೇಳಿ ಒಳ್ಳೆಯದನ್ನು ಸಾಧಿಸುವುದೇ ಮೇಲು. ಅಂಥ ಸಂದರ್ಭಗಳಲ್ಲಿ ಸತ್ಯವನ್ನು ಹೇಳಿದರೆ ಸುಳ್ಳನ್ನು ಹೇಳಿದ ಪಾಪ ತಟ್ಟುತ್ತದೆ. ಸುಳ್ಳನ್ನು ಹೇಳಿದರೆ ಸತ್ಯವನ್ನು ಹೇಳಿದ ಪುಣ್ಯವೇ ಬರುತ್ತದೆ. ಮಹಾಭಾರತವು ಉಪಕಥೆಗಳ ಮೂಲಕ ಇಂಥ ಸಂದರ್ಭಗಳನ್ನು ದೃಷ್ಟಾಂತಪಡಿಸುತ್ತದೆ. ಅಂಥ ಒಂದು ಉಪಕಥೆಯು ಕರ್ಣಪರ್ವದಲ್ಲಿ ಬರುತ್ತದೆ. ಅರ್ಜುನನು ಒಂದು ಪ್ರತಿಜ್ಞೆಯನ್ನು ಮಾಡಿರುತ್ತಾನೆ. ’ನಿನ್ನ ಗಾಂಡೀವವನ್ನು ಎಸೆ’ ಎಂದು ಹೇಳಿದವನ ರುಂಡವನ್ನು ಹಾರಿಸುತ್ತೇನೆ ಎಂಬುದೇ ಆ ಪ್ರತಿಜ್ಞೆ. ಕರ್ಣನು ಮಹಾರಥಿಯಾಗಿದ್ದಾಗ ಅರ್ಜುನನು ಕರ್ಣನನ್ನು ವಧಿಸುತ್ತಾನೆ ಎಂಬುದನ್ನು ನಿರೀಕ್ಷಿಸಿ ಸಾಕಾಗಿದ್ದ ಯುಧಿಷ್ಠಿರನು ಒಂದು ದಿನ ’ನಿನ್ನ ಗಾಂಡೀವವನ್ನು ಎಸೆ’ ಎಂದು ಕ್ರುದ್ಧನಾಗಿ ಲೇವಡಿ ಮಾಡುತ್ತಾನೆ. ಅರ್ಜುನನು ಅವನನ್ನು ಕತ್ತರಿಸಲು ಮುಂದಾಗುತ್ತಾನೆ. ಆಗ ಕೃಷ್ಣನು ಅವನನ್ನು ತಡೆದು ಅವನಿಗೆ ಸತ್ಯಾಸತ್ಯಕ್ಕೆ ಸಂಬಂಧಿಸಿದ ಈ ಮೇಲಿನ ಧರ್ಮಸೂಕ್ಷ್ಮತೆಯನ್ನು ತಿಳಿಸಿಕೊಟ್ಟು ಸಹೋದರನ ವಧೆಯನ್ನು ತಪ್ಪಿಸುತ್ತಾನೆ.

               ಅಂದರೆ ನಮ್ಮ ಸಂಸ್ಕೃತಿಯು ಕಂಡುಕೊಂಡಿದ್ದೆಂದರೆ ಸತ್ಯ ಅಥವಾ ಸುಳ್ಳುಗಳು ತಮ್ಮಷ್ಟಕ್ಕೇ ಒಳ್ಳೆಯದು ಅಥವಾ ಕೆಟ್ಟದ್ದು ಆಗಲಾರವು. ಅದು ಸಂದರ್ಭವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಸತ್ಯವನ್ನು ಹೇಳುವುದೇ ಶ್ರೇಯಸ್ಕರ. ಆದರೆ ಕೆಲವೊಮ್ಮೆ ಅದು ವಿರುದ್ಧವಾಗುತ್ತದೆ. ಅದು ಧರ್ಮಸೂಕ್ಷ್ಮಕ್ಕೆ ಸಂಬಂಧಪಟ್ಟ ವಿಚಾರ. ಒಟ್ಟಿನಲ್ಲಿ, ಹೇಳುವವನಿಗೆ ವಿವೇಕ, ಧರ್ಮಸೂಕ್ಷ್ಮತೆ, ಹಾಗೂ ಬುದ್ಧಿ ಇರಬೇಕು.  ಹಾಗಾಗಿ ಸತ್ಯವನ್ನು ಹೇಳಬೇಕು ಎಂಬುದನ್ನು ನಾರ್ಮೇಟಿವ್ ನಿಯಮವನ್ನಾಗಿ ನಮ್ಮ ಸಂಸ್ಕೃತಿಯು ಪ್ರತಿಪಾದಿಸುವುದಿಲ್ಲ. ನಮ್ಮ ಗ್ರಂಥಗಳು ಕೆಲವು ಸಂದರ್ಭಗಳಲ್ಲಿ ಸತ್ಯವನ್ನು ಹೇಳಿದರೇ ಮೋಸವಾಗುತ್ತದೆ ಅನ್ನುತ್ತವೆ. ಅಂದರೆ ನಮ್ಮ ಸಂಸ್ಕೃತಿಯು ಸುಳ್ಳು ಹಾಗೂ ಮೋಸವನ್ನು ಸಮೀಕರಿಸಿದ್ದರೆ ಇಂಥ ಹೇಳಿಕೆಗಳು ಸಾಧ್ಯವೇ ಇರಲಿಲ್ಲ.

               ನಮ್ಮ ಪುರಾಣಗಳಲ್ಲಿ ಹಾಗೂ ಕಥೆಗಳಲ್ಲಿ ಸತ್ಯವನ್ನು ಹೇಳಿ ವಂಚಿಸಿದ ಘಟನೆಗಳು ಕೂಡ ಬರುತ್ತವೆ. ಜಾನಪದ ಕಥೆಯೊಂದರಲ್ಲಿ ಈ ಮುಂದಿನ ಸನ್ನಿವೇಶವಿದೆ: ಗಂಡನಿಲ್ಲದ ವೇಳೆ ನಾಗ ಪುರುಷನ ಜೊತೆಗೆ ಪ್ರಣಯವನ್ನು ನಡೆಸಿದ ಸ್ತ್ರೀಯೊಬ್ಬಳು ಜನರಿಂದ ದಿವ್ಯಕ್ಕೆ ಒಳಗಾಗುತ್ತಾಳೆ.  ಅವಳು ಹುತ್ತದಲ್ಲಿದ್ದ ನಾಗನನ್ನು ಮೈಮೇಲೆ ಬಿಟ್ಟುಕೊಂಡು ಸತ್ಯವನ್ನು ಹೇಳಿ ದಿವ್ಯವನ್ನು ಎದುರಿಸಬೇಕಿತ್ತು. ಅವಳೊಮ್ಮೆ ಸುಳ್ಳು ಹೇಳಿದರೆ ನಾಗ ಅವಳನ್ನು ಕಚ್ಚುತ್ತದೆ. ಆ ಸಂದರ್ಭದಲ್ಲಿ ಅವಳು ನಾಗನನ್ನು ಮೈಮೇಲೆ ಬಿಟ್ಟುಕೊಂಡು ’ನನ್ನ ಗಂಡ ಹಾಗೂ ಈ ನಾಗನನ್ನು ಬಿಟ್ಟು ಯಾರೂ ನನ್ನನ್ನು ಮುಟ್ಟಿಲ್ಲ’ ಎಂಬುದಾಗಿ ಸತ್ಯವನ್ನೇ ಹೇಳಿ ದಿವ್ಯವನ್ನು ಗೆಲ್ಲುತ್ತಾಳೆ.  ಅವಳ ಗಂಡನಿಗೆ ಹಾಗೂ ಜನರಿಗೆ ಈ ನಾಗನೇ ಅವಳ ಪ್ರಣಯಿ ಎಂಬುದು ಗೊತ್ತಿರಲಿಲ್ಲ. ಹಾಗಾಗಿ ಅವಳು ಪತಿವ್ರತೆ ಎಂಬ ತೀರ್ಮಾನಕ್ಕೆ ಅವರು ಬರುತ್ತಾರೆ. ಸ್ವಾರಸ್ಯವೆಂದರೆ, ಈ ಕಥೆಯನ್ನು ಓದಿದವರಿಗೆ ಆ ಸ್ತ್ರೀ ಆ ಸಂದರ್ಭಕ್ಕೆ ಸರಿಯಾದುದನ್ನೇ ಮಾಡಿದಳು ಎಂಬ ಮೆಚ್ಚುಗೆಯೇ ಮೂಡುತ್ತದೆ. (ಈ ಕಥೆಯು ಕನ್ನಡದಲ್ಲಿ ಎರಡು ನಾಟಕಗಳ ರೂಪದಲ್ಲಿ ಕೂಡ ಬಂದಿದೆ) ಇಂಥ ಪ್ರಸಂಗಗಳು ನಮ್ಮ ಕಥೆಗಳಲ್ಲಿ, ಪುರಾಣಗಳಲ್ಲಿ ಅಪರೂಪಕ್ಕಾದರೂ ಸಿಗುತ್ತವೆ.

               ಈ ಲೇಖನದ ಆರಂಭದಲ್ಲಿ ಪಾಶ್ಚಾತ್ಯ ಸಂಸ್ಕೃತಿಯು ಯಾವರೀತಿಯಲ್ಲಿ ಸುಳ್ಳು ಹೇಳುವುದನ್ನು ಮೋಸಕ್ಕೆ ಹಾಗೂ ಆ ಮೂಲಕ ಪಾಪಕ್ಕೆ ಸಮೀಕರಿಸುತ್ತದೆ ಎಂಬುದನ್ನು ನೋಡಿದ್ದೆವು. ನಮ್ಮ ಕಾನೂನು ಸಂಹಿತೆಯಲ್ಲಿ ಸುಳ್ಳು ಎಂದರೆ ಈ ಅರ್ಥವೇ ಇದೆ. ಆದರೆ ಭಾರತೀಯರಿಗೆ ಕೆಲವು ಸಂದರ್ಭದಲ್ಲಿ ಸುಳ್ಳು ಹೇಳುವುದೇ ಪುಣ್ಯ, ಸತ್ಯ ಹೇಳುವುದೇ ಪಾಪ ಅಂತಾದರೆ ಸುಳ್ಳನ್ನು ಸಾರಾಸಗಟಾಗಿ ಅಪರಾಧ ಎಂಬುದಾಗಿ ಭಾರತೀಯರು ಪರಿಗಣಿಸಲು ಸಾಧ್ಯವೆ? ಅಥವಾ ಇಂಥ ಕೇಸುಗಳನ್ನು ನಿರ್ಣಯಿಸುತ್ತಿರುವ ನ್ಯಾಯಾಧೀಶನಿಗೆ ಸುಳ್ಳು ಹೇಳುವುದು ಏಕೆ ಅಪರಾಧ ಎಂದು ನಿಜವಾಗಿಯೂ ಗೊತ್ತಾಗಲಿಕ್ಕೆ ಸಾಧ್ಯವೆ? ನಮ್ಮ ವಕೀಲರು, ಕಕ್ಷಿದಾರರು ಹಾಗೂ ನ್ಯಾಯಾಧೀಶರುಗಳು ಈ ಪರಿಭಾಷೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

               ನಮ್ಮ ನ್ಯಾಯಾಲಯಗಳ ಮೇಲೆ ಇದರ ಪರಿಣಾಮವು ಯಾವ ರೀತಿಯಲ್ಲಿ ಆಗುತ್ತದೆ? ಇಂದು ನಮ್ಮ ನ್ಯಾಯಾಲಯಗಳಲ್ಲಿ ಸುಳ್ಳು ಸಾಕ್ಷಿ ಹೇಳುವುದೇ ದಂಧೆಯಾಗಿದೆ. ಸುಳ್ಳು ಸಾಕ್ಷಿಗಳು ದುಡ್ಡು ಕೊಟ್ಟರೆ ಸಿಗುತ್ತಾರೆ. ನಗರಗಳಲ್ಲಿ ಕೆಲವರು ಅದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ನಿಜವಾದ ಸಾಕ್ಷಿಯೂ ಕೂಡ ನಿಜವನ್ನು ಹೇಳುವಂತಿಲ್ಲ. ವಕೀಲರು ಅವನಿಗೆ ಸುಳ್ಳು ಹೇಳಬೇಕೆಂದೂ, ಹಾಗೆ ಹೇಳುವುದರಿಂದಲೇ ಕೇಸನ್ನು ಗೆಲ್ಲುವುದು ಸಾಧ್ಯ, ನಿಜ ಹೇಳಿದರೆ ಸಾಧ್ಯವಿಲ್ಲ ಎಂದು ತಿಳಿಸಿರುತ್ತಾರೆ. ಒಂದು ಪ್ರಕರಣವನ್ನು ಕೇಸನ್ನಾಗಿ ಪರಿವರ್ತಿಸುವಾಗ ಕಾನೂನು ಸಂಹಿತೆಯಲ್ಲಿ ಅದನ್ನು ಪರಿಣಾಮಕಾರಿಯಾಗಿ ನಿರೂಪಿಸಬೇಕಾದರೆ ಇಲ್ಲದ್ದನ್ನು ಸೇರಿಸಬೇಕು ಎಂಬುದು ಸಾಮಾನ್ಯ ಜ್ಞಾನವಾಗಿದೆ. ಮಹಿಳೆಯೊಬ್ಬಳು ಡೈವೋರ್ಸ ಕೊಡಬೇಕಾದರೆ ಸಕಾರಣವನ್ನು ತೋರಿಸಬೇಕು ಎಂಬುವುದಕ್ಕಾಗಿ ಇಲ್ಲದ ಕಿರಕುಳವನ್ನು ಸೃಷ್ಟಿಸಲಾಗುತ್ತದೆ. ಅದೇನೂ ಗಂಡನ ಮೇಲಿನ ದ್ವೇಷದಿಂದಲ್ಲ. ಸೇಡು ತೀರಿಸಿಕೊಳ್ಳಲಿಕ್ಕಾಗಿ ಹಾಕುವ ಸುಳ್ಳು ಕೇಸುಗಳಂತೂ ನಮ್ಮ ಕೋರ್ಟುಗಳಲ್ಲಿ ಸಾಮಾನ್ಯ. ಇಂಥ ನ್ಯಾಯಾಲಯಗಳಲ್ಲಿ ಮೋಸ ಮಾಡಿಸಿಕೊಂಡವರು, ಹಾಗೂ ಮಾಡಿದವರಿಬ್ಬರೂ ಸುಳ್ಳು ಹೇಳಿಯೇ ಜಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನಿನ ನಿಜವಾದ ಅರ್ಥವಾಗಿದ್ದರೆ ಸುಳ್ಳು ಹೇಳುವುದು ಕ್ರಿಮಿನಲ್ ಅಪರಾಧ ಎನ್ನುವ ನ್ಯಾಯಾಲಯಗಳೇ ಈ ಪ್ರಮಾಣದ ಸುಳ್ಳನ್ನು ಪೋಷಿಸಿಕೊಂಡು ಬರಲು ಹೇಗೆ ಸಾಧ್ಯ?

               ಸುಳ್ಳು ಸಾಕ್ಷಿಗಳನ್ನು ತರುತ್ತಾರೆ ಎಂಬುದು ನ್ಯಾಯಾಧೀಶರಿಗೆ ಗೊತ್ತೇ ಆಗುವುದಿಲ್ಲವೆ? ಗೊತ್ತಿರುತ್ತದೆ, ಆದರೆ ಏನೂ ಮಾಡುವಂತಿಲ್ಲ. ಕೆಲವೊಮ್ಮೆ ಸುಳ್ಳು ಹೇಳುತ್ತಿದ್ದಾರೆ ಎಂಬುದು ನ್ಯಾಯಾಧೀಶರಿಗೆ ಗೊತ್ತಿದ್ದರೂ ಕೂಡ ಸಮ್ಮತಿಸುವ ಅನಿವಾರ್ಯತೆ ಇದೆ. ಆ ಕೇಸುಗಳು ಹೇಗಿರುತ್ತವೆಯೆಂದರೆ ಸುಳ್ಳನ್ನು ಸೃಷ್ಟಿಸದಿದ್ದರೆ ಅನ್ಯಾಯಕ್ಕೊಳಗಾದವನಿಗೆ ನ್ಯಾಯವನ್ನು ನೀಡುವುದೇ ಸಾಧ್ಯವಿಲ್ಲ. ಒಂದು ಉದಾಹರಣೆಯನ್ನು ನೀಡುವುದಾದರೆ, ನನ್ನ ಗೆಳೆಯನೊಬ್ಬ ಪೋಲೀಸ್ ಅಧಿಕಾರಿಯಾಗಿದ್ದನು. ಅವನು ಹೇಳಿದ ಘಟನೆ. ಒಮ್ಮೆ ಒಬ್ಬ ಮಹಿಳೆಯ ಚಿನ್ನಾಭರಣ ಕಳ್ಳತನವಾಯಿತು. ಕಳ್ಳರನ್ನು ಹಿಡಿಯುವ ವೇಳೆಗೆ ಕಳ್ಳರು  ಅವನ್ನು ಕರಗಿಸಿ ಬಿಟ್ಟಿದ್ದರು. ಆಭರಣಗಳು ಕಳುವಾಗಿವೆ ಎಂದೇ ದೂರು ದಾಖಲಾಗಿತ್ತು. ಏನು ಮಾಡುವುದು? ಕರಗಿಸಿದ ಚಿನ್ನದಲ್ಲಿ ಒಂದಷ್ಟು ಹೊಸ ಆಭರಣಗಳನ್ನು ಆ ಮಹಿಳೆಯ ಸಹಾಯದಿಂದ ಪೋಲೀಸರೇ ತಯಾರಿಸಿ ಕೋರ್ಟಿಗೆ ಅದನ್ನು ಹಾಜರು ಮಾಡಿದರು. ಆಕೆ ಕಳುವಾಯಿತೆಂದು ವರ್ಣಿಸಿದ ಆಭರಣಗಳೇ ಬೇರೆ. ಅದು ಹೊಸದೆಂಬುದು ನ್ಯಾಯಾಧೀಶರಿಗೂ ಗೊತ್ತು. ಆದರೆ ಹಾಗೆ ಮಾಡದಿದ್ದರೆ ಮಹಿಳೆಗೆ ನ್ಯಾಯ ಸಿಗುವುದಿಲ್ಲ. ಅಂದರೆ ಭಾರತೀಯರು ಅಳವಡಿಸಿಕೊಂಡಿರುವ ಪಾಶ್ಚಾತ್ಯ ಕಾನೂನುಗಳು ಸುಳ್ಳು ಹೇಳುವುದು ಸರ್ವಥಾ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುತ್ತವೆ. ಆದರೆ ಕೆಲವೊಮ್ಮೆ ನ್ಯಾಯಕ್ಕಾಗಿ ಸುಳ್ಳನ್ನಾಧರಿಸಿಯೇ ಇಂಥ ಕಾನೂನುಗಳನ್ನು ಅನ್ವಯ ಮಾಡುವ ವಿಪರ್ಯಾಸ ಭಾರತೀಯ ನ್ಯಾಯಾಲಯಗಳಲ್ಲಿ ಇದೆ. ಪಶ್ಚಿಮದಲ್ಲಿ ಇವೆಲ್ಲ ಘೋರ ಅಪರಾಧಗಳು. ಏಕೆಂದರೆ ಇವೆಲ್ಲವೂ ಸುಳ್ಳುಗಳು ಹಾಗೂ ಆ ಕಾರಣದಿಂದ ಮೋಸಗಳು. ನಮ್ಮವರಿಗೂ ಹಾಗನಿಸಿದ್ದರೆ ಹೀಗೇಕಾಗುತ್ತಿತ್ತು?

               ಅರ್ಥವಾಗದ ಪರಿಭಾಷೆಗಳು ನಮ್ಮ ಕಾನೂನುಗಳ ಅನುಷ್ಠಾನದಲ್ಲಿ ಯಾವ ರೀತಿಯ ವಿಪರ್ಯಾಸಗಳನ್ನು ಹಾಗೂ ವಿಕೃತಿಗಳನ್ನು ಹುಟ್ಟುಹಾಕಬಲ್ಲವೆಂಬುದಕ್ಕೆ ಇದೊಂದು ಉದಾಹರಣೆ.  ಇಂಥ ವಾಸ್ತವದಲ್ಲಿ ಇರುವ ನ್ಯಾಯಾಧೀಶನೊಬ್ಬನಿಗೆ ಅಥವಾ ವಕೀಲನೊಬ್ಬನಿಗೆ ಸುಳ್ಳು ಹೇಳುವುದು ಏಕೆ ಮೋಸ ಎಂಬುದು ಅರ್ಥವಾಗಲು ಸಾಧ್ಯವೆ? ಇದು ಒಂದು ಶಬ್ದದ ಕಥೆ. ನಮ್ಮ ಕಾನೂನು ಸಂಹಿತೆಯೇ ಇಂಥ ಶಬ್ದಗಳಿಂದ ತುಂಬಿದೆಯಲ್ಲ? ಅದು ಏನೇನು ಅನರ್ಥವನ್ನು ಸೃಷ್ಟಿಸಿರಬಹುದು ಎಂಬುದು  ಸಂಶೋಧನೆಯ ವಿಷಯವೇ ಆಗಿದೆ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp