Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಹಿಂದೂಯಿಸಂ ಇಲ್ಲದೇ ಹಿಂದೂ ಮೂಲಭೂತವಾದವು ಹೇಗೆ ಹುಟ್ಟಿಕೊಂಡಿತು?

ಹಿಂದೂಯಿಸಂ ಇಲ್ಲದೇ ಹಿಂದೂ ಮೂಲಭೂತವಾದವು ಹೇಗೆ ಹುಟ್ಟಿಕೊಂಡಿತು?

by Rajaram Hegde
146 views

ಮೂಲಭೂತವಾದವೆಂಬುದು ದೇವವಾಣಿಗಳ ಕಲ್ಪನೆ ಇರುವ ರಿಲಿಜನ್ನುಗಳಲ್ಲಿ ಮಾತ್ರ ಇರಲಿಕ್ಕೆ ಶಕ್ಯ. ಹಿಂದೂ ಮೂಲಭೂತವಾದ ಎಂಬುದು ಇರಲಿಕ್ಕೆ ಸಾಧ್ಯವಿಲ್ಲ. ಭಾರತದಲ್ಲಿ ಹಿಂದೂ ಮೂಲಭೂತವಾದ ಎಂಬುದು ಸೆಕ್ಯುಲರ್ ನೀತಿಗಳ ಸೃಷ್ಟಿಯಾಗಿದೆ.

ಭಾರತೀಯ ಸೆಕ್ಯಲರ್‌ವಾದಿಗಳಿಗಿರುವ ದೊಡ್ಡ ಆತಂಕವೆಂದರೆ ಹಿಂದೂ ಮೂಲಭೂತವಾದದ ಬೆಳವಣಿಗೆ. ಅವರ ಪ್ರಕಾರ ಭಾರತದಲ್ಲಿ ಸೆಕ್ಯುಲರಿಸಂನ ಅನುಷ್ಠಾನಕ್ಕೆ ಮೂಲಭೂತವಾದವೇ   ದೊಡ್ಡ ತೊಡಕು,  ಅದು ಹಿಂದೂ ಇರಬಹುದು, ಇಲ್ಲ ಮುಸ್ಲಿಂ ಇರಬಹುದು. ಅದರಲ್ಲೂ ಹಿಂದೂ ಮೂಲಭೂತವಾದವು ಇಲ್ಲಿನ ಬಹುಸಂಖ್ಯಾತ ಸಮುದಾಯವನ್ನು ಆಧರಿಸಿರುವುದರಿಂದ ಅದು ಇನ್ನಷ್ಟು ಅಪಾಯಕಾರಿ. ಮೂಲಭೂತವಾದವೆಂದರೆ ಏನು? ಎಂಬುದಾಗಿ ಅವರನ್ನು ಕೇಳಿದರೆ ಸಂಪ್ರದಾಯದ ಪುನರುತ್ಥಾನ, ಧರ್ಮದ ಆಧಾರದ ಮೇಲೆ ಜನಾಂಗ ದ್ವೇಷವನ್ನು ಬೆಳೆಸುವುದು, ಅಶಾಂತಿಯನ್ನು ಹುಟ್ಟುಹಾಕುವುದು ಎಂದೆಲ್ಲ ವಿವರಿಸುತ್ತಾರೆ. ಆದರೆ ಹಿಂದೂಯಿಸಂ ಎಂಬುದೇ ಇಲ್ಲವೆಂಬುದಕ್ಕೆ ಈಗಾಗಲೇ ಸಾಕಷ್ಟು ದೃಷ್ಟಾಂತಗಳನ್ನು ಒದಗಿಸಿದ್ದೇನೆ. ಅಂದ ಮೇಲೆ ಹಿಂದೂ ಮೂಲಭೂತವಾದವೂ ಇರಲಿಕ್ಕೆ ಸಾಧ್ಯವಿಲ್ಲ ಎಂಬುದು ನನ್ನ ವಾದ. 

          ಮೂಲಭೂತವಾದವು  ರಿಲಿಜನ್ನುಗಳಿಗೆ ಮಾತ್ರವೇ ಸಾಧ್ಯ. ಏಕೆಂದರೆ ರಿಲಿಜನ್ನುಗಳು ತಮ್ಮ ಪವಿತ್ರ ಗ್ರಂಥದಲ್ಲಿರುವ ಸತ್ಯವನ್ನು ಸ್ವತಃ ಸೃಷ್ಟಿಕರ್ತನೇ ತಿಳಿಸಿದ್ದಾನೆ ಎಂಬ ನಂಬಿಕೆಯನ್ನು ಹೊಂದಿವೆ.  ಕಾಲಾಂತರದಲ್ಲಿ ರಿಲಿಜನ್ನಿನ ಐತಿಹಾಸಿಕ ಸನ್ನಿವೇಶವು ಬದಲಾಗಬಹುದು, ಆದರೆ ಪವಿತ್ರಗ್ರಂಥದ ಸತ್ಯವನ್ನು ಬದಲುಮಾಡಲಿಕ್ಕೆ ಸಾಧ್ಯವಿಲ್ಲ. ಹಾಗೂ ಅಂಥ ಮೂಲ ಡಾಕ್ಟ್ರಿನ್ನುಗಳನ್ನು ಆಚರಣೆಯಲ್ಲಿ ತರುವ ಪ್ರಯತ್ನವೇ ಮೂಲಭೂತವಾದ. ಮೂಲಭೂತವಾದ ಅಥವ ಫಂಡಮೆಂಟಲಿಸಂ ಎಂಬುದು ಅಮೇರಿಕಾದ ಪ್ರೊಟೆಸ್ಟಾಂಟ್ ಕ್ರೈಸ್ತರ ಒಂದು ಪಂಗಡವು ೧೯ನೆಯ ಶತಮಾನದ ಕೊನೆಯ ಭಾಗದಲ್ಲಿ ಬಳಕೆಗೆ ತಂದ ಪದ. ಬೈಬಲ್ಲಿನಲ್ಲಿ  ಐದು ಮೂಲಭೂತ ತತ್ವಗಳನ್ನು ಗುರುತಿಸಿ ಅವನ್ನು ರಕ್ಷಿಸುವ ಸಲುವಾಗಿ ಅವರು ಚಳುವಳಿಯನ್ನು ನಡೆಸಿದರು. ಇದನ್ನು ಮೂಲಭೂತವಾದೀ ಚಳುವಳಿ ಎನ್ನುತ್ತಾರೆ. ಇಸ್ಲಾಂ ಫಂಡಮೆಂಟಲಿಸಂ, ಹಿಂದೂ ಫಂಡಮೆಂಟಲಿಸಂ ಎಂಬೆಲ್ಲ ಪದಗಳು  ಅಷ್ಟರ ನಂತೆರ ಚಾಲ್ತಿಯಲ್ಲಿ ಬಂದವು.

          ಹಾಗಾದರೆ ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲ ಹಿಂದುತ್ವಕ್ಕಾಗಿ ನಡೆದ ಹೋರಾಟವೇ ಸುಳ್ಳೆನ್ನುತ್ತೀರಾ? ಎಂಬ ಪ್ರಶ್ನೆ ನಿಮ್ಮಲ್ಲಿ ಏಳಬಹುದು. ಈಗ ಚಾಲ್ತಿಯಲ್ಲಿ ಇರುವ ಅಭಿಪ್ರಾಯಗಳು ಈ ಮುಂದಿನಂತಿವೆ: ನಮ್ಮ ಸೆಕ್ಯುಲರ್ ಪ್ರಭುತ್ವದಲ್ಲಿ ಎರಡು ಪರಸ್ಪರ ವಿರುದ್ಧ ಹಿತಾಸಕ್ತಿಯ ಗುಂಪುಗಳು ಹೋರಾಡುತ್ತಿವೆ, ಅವೆಂದರೆ ಸೆಕ್ಯುಲರ್ ವಾದಿಗಳು ಹಾಗೂ ಕೋಮುವಾದಿಗಳು ಅಥವಾ ಮೂಲಭೂತವಾದಿಗಳು. ಅದರಲ್ಲೂ ಮುಖ್ಯವಾಗಿ  ಹಿಂದೂ ಮೂಲಭೂತವಾದವನ್ನು ನಿಗ್ರಹಿಸಲಿಕ್ಕಾಗಿ ಸೆಕ್ಯುಲರ್ ನೀತಿಗಳು ಅತ್ಯಗತ್ಯವಾಗಿವೆ. ಆದರೆ ಚಾಲ್ತಿಯಲ್ಲಿರುವ ಇಂಥ ಅಭಿಪ್ರಾಯಗಳು ತಪ್ಪು ಎಂಬುದು ನನ್ನ ವಾದ. ಹಿಂದುತ್ವದ ಹೋರಾಟವು ಹಿಂದೂ ಮೂಲಭೂತವಾದವಲ್ಲ. ಹಿಂದುತ್ವವು ವಸಾಹತು ಸರ್ಕಾರವು ಭಾರತದಲ್ಲಿ ಅಳವಡಿಸಿದ ಸೆಕ್ಯುಲರ್ ನೀತಿಗೆ ಪ್ರತಿಕ್ರಿಯೆಯಾಗಿ ಹುಟ್ಟಿದ ಸಂಘಟನೆಯಾಗಿದೆ. ಸೆಕ್ಯುಲರ್ ಪ್ರಭುತ್ವದಲ್ಲಿ ಮುಸ್ಲಿಂ, ಕ್ರೈಸ್ತ ಇತ್ಯಾದಿ ರಿಲಿಜನ್ನುಗಳಂತೆ ಹಿಂದೂ ಎಂಬ ಒಂದು ರಿಲಿಜನ್ನಿನ ಹಕ್ಕುಗಳ ಪ್ರತಿಪಾದನೆಗಾಗಿ ಅಸ್ತಿತ್ವದಲ್ಲಿ ಬಂದ ಸಂಘಟನೆಯಾಗಿದೆ. ಆದರೆ ಅದು ಯಾವುದೇ ಮೂಲಭೂತ ಡಾಕ್ಟ್ರಿನ್ನುಗಳನ್ನು ಇದುವರೆಗೂ ಪ್ರಚಲಿತದಲ್ಲಿ ತರುವಲ್ಲಿ ಯಶಸ್ವಿಯಾಗಿಲ್ಲ. ಏಕೆಂದರೆ ಅವು ನಮ್ಮಲ್ಲಿ ಎಂದೂ ಇರಲಿಲ್ಲ.

          ಅಂದರೆ ಭಾರತದಲ್ಲಿ  ಹಿಂದುತ್ವವೆಂಬುದು ಸೆಕ್ಯುಲರ್ ನೀತಿಯಿಂದ ಹುಟ್ಟಿದ್ದಷ್ಟೇ ಅಲ್ಲ, ಅದೂ ಒಂದು ಸೆಕ್ಯುಲರ್ ಚಳುವಳಿಯೇ ಆಗಿದೆ. ಸೆಕ್ಯುಲರ್ ಸರ್ಕಾರವು ನೀಡುವ ರಿಲಿಜನ್ನಿನ ಹಕ್ಕನ್ನು ಪಡೆಯುವಾಗ ಭಾರತೀಯ ಸಂಪ್ರದಾಯಗಳು ಮುಂದಿಟ್ಟ ರಿಲಿಜನ್ನಿನ ಪ್ರತಿರೂಪವೇ ಹಿಂದುತ್ವವಾದ. ಈ ಚಳುವಳಿಯ ಘೋಷಣೆಗಳು ಹಾಗೂ ಕಾರ್ಯಕ್ರಮಗಳೇನು? ಸೆಕ್ಯುಲರ್ ಸರ್ಕಾರವು ಅಲ್ಪ ಸಂಖ್ಯಾತರನ್ನು ಓಲೈಸುತ್ತಿರುವುದರಿಂದ ಹಿಂದೂಧರ್ಮವು ಅಪಾಯದಲ್ಲಿದೆ, ಅಲ್ಪ ಸಂಖ್ಯಾತರು ವರ್ಧಿಸುತ್ತಿದ್ದಾರೆ, ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ, ಹಿಂದೂಗಳ ನೆಲದಲ್ಲೇ ಹಿಂದೂಗಳ ಆಚರಣೆಗೆ ಸ್ವಾತಂತ್ರ್ಯವಿಲ್ಲ, ಹಿಂದೂಗಳಲ್ಲಿ ಐಕ್ಯತೆಯನ್ನು ತರಬೇಕು, ಸನಾತನ ಹಿಂದೂ ತತ್ವಗಳನ್ನು ಆಚರಣೆಯಲ್ಲಿ ತರಬೇಕು, ಇತ್ಯಾದಿ. ಹಿಂದುತ್ವವಾದಿಗಳು ಕಾಂಗ್ರೆಸಿಗರನ್ನು ಢೋಂಗಿ ಸೆಕ್ಯುಲರ್‌ವಾದಿಗಳು ಎನ್ನುತ್ತಾರೆ. ಅಂದರೆ ಕಾಂಗ್ರೆಸಿಗರ ಸೆಕ್ಯುಲರ್ ಪ್ರಭುತ್ವವು ಎಲ್ಲ ಧರ್ಮಗಳನ್ನೂ ಒಂದೇ ರೀತಿ ನೋಡುತ್ತಿಲ್ಲ ಎಂಬುದು ಅವರ ಆಕ್ಷೇಪಣೆ. ಹಾಗಾಗಿ ಸೆಕ್ಯುಲರ್ ನೀತಿಯ ಚೌಕಟ್ಟಿನಲ್ಲಿ ಮಾತ್ರವೇ ಇಂಥ ಈ ಹೋರಾಟವು ಅರ್ಥ ಪಡೆದುಕೊಳ್ಳುತ್ತದೆ.

          ಹಿಂದೂಯಿಸಂ ಎಂಬ ರಿಲಿಜನ್ನನ್ನು ಭಾವಿಸಿಕೊಂಡ ಪಾಶ್ಚಾತ್ಯರು ಭಾರತೀಯ ಸಮಾಜದಲ್ಲಿ ಏನೇನೋ  ಇಲ್ಲದ್ದನ್ನು ಇದೆ ಎಂಬುದಾಗಿ ಚಿತ್ರಿಸಿ ಉಂಟಾದ ಫಜೀತಿಗಳನ್ನು ಹಿಂದಿನ ಲೇಖನಗಳಲ್ಲಿ ನೋಡಿದ್ದೇವೆ. ಇಲ್ಲದ ಹಿಂದೂ ರಿಲಿಜನ್ನನ್ನು ಬಲಗೊಳಿಸುವ ಈ ಒತ್ತಡವು ಹಿಂದುತ್ವವಾದಿಗಳಿಗೆ ಏಕೆ ಮತ್ತು ಹೇಗೆ ಹುಟ್ಟಿಕೊಂಡಿತು? ಇದನ್ನು ಅರ್ಥಮಾಡಿಕೊಳ್ಳಲು ನಾವು ವಸಾಹತು ಆಡಳಿತದ ಪ್ರಾರಂಭದ ದಿನಗಳಿಗೆ ಮರಳಬೇಕಾಗುತ್ತದೆ. ಬ್ರಿಟಿಷರು ೧೮ನೆಯ ಶತಮಾನದ ಅಂತ್ಯದಲ್ಲಿ ಕಲ್ಕತ್ತಾದಲ್ಲಿ ವಸಾಹತು ಸರ್ಕಾರವನ್ನು ಸ್ಥಾಪಿಸಿದರು. ಅವರು ಆಗ ಲಿಬರಲ್ ಸೆಕ್ಯುಲರ್ ಚಿಂತನೆಗಳ ಅನುಷ್ಠಾನವೇ ಉತ್ತಮ ಆಡಳಿತದ ಗುರಿ ಎಂಬುದಾಗಿ ಭಾವಿಸಿದ್ದರು. ಈ ಆದರ್ಶದ ಪ್ರಕಾರ ಪ್ರಪಂಚದ ಎಲ್ಲಾ ಸಂಸ್ಕೃತಿಗಳಿಗೂ ರಿಲಿಜನ್ನುಗಳಿರುತ್ತವೆ ಹಾಗೂ ಅವುಗಳ ಆಚರಣೆಯು ಆಯಾ ರಿಲಿಜನ್ನಿನ ಡಾಕ್ಟ್ರಿನ್ನುಗಳನ್ನು ಆಧರಿಸಿರುತ್ತದೆ. ಲಿಬರಲ್ ಪ್ರಭುತ್ವವು ಅಂಥ ರಿಲಿಜನ್ನುಗಳ ಸತ್ಯ ಪ್ರತಿಪಾದನೆಯಲ್ಲಿ ಹಸ್ತಕ್ಷೇಪವನ್ನು ಮಾಡಬಾರದು. ಭಾರತದಲ್ಲಿ ಇಸ್ಲಾಂ, ಹಿಂದೂಯಿಸಂ, ಬುದ್ಧಿಸಂ ಇತ್ಯಾದಿ ರಿಲಿಜನ್ನುಗಳು ಪಾಶ್ಚಾತ್ಯರಿಗೆ ಕಂಡುಬಂದವು. ಸೆಕ್ಯುಲರ್ ಆದರ್ಶವನ್ನು ಹೊಂದಿದ ವಸಾಹತು ಸರ್ಕಾರವು ಇಲ್ಲಿ ಸ್ಥಳೀಯರ ರಿಲಿಜನ್ನಿನ ನಂಬಿಕೆಗಳನ್ನು  ಮಾನ್ಯಮಾಡುವ ನೀತಿಯನ್ನು ಹಾಕಿಕೊಂಡಿತು.           

          ಈ ಸೆಕ್ಯುಲರ್ ನೀತಿಯನ್ನು ಅಳವಡಿಸುವಾಗ ಬ್ರಿಟಿಷರಿಗೆ ಎದುರಾದ ದೊಡ್ಡ ತೊಡಕೆಂದರೆ ಪಾಶ್ಚಾತ್ಯ ಲಿಬರಲ್ ಕಾನೂನಿಗೆ ಭಾರತೀಯರ ಅನೇಕ ಆಚರಣೆಗಳು ಅಪರಾಧವಾಗಿ, ಮಾನವ ಹಕ್ಕುಗಳ ಉಲ್ಲಂಘನೆಯಾಗಿ ಕಂಡವು.  ಅವು ಅಪರಾಧವೊ ಅಲ್ಲವೊ ಎಂಬುದನ್ನು ನಿರ್ಧರಿಸುವ ಒಂದೇ ಉಪಾಯವೆಂದರೆ ಹಿಂದೂಗಳ ಆಚರಣೆಗಳ ಹಿಂದಿನ ಡಾಕ್ಟ್ರಿನ್ನುಗಳನ್ನು ಕಂಡುಹಿಡಿಯುವುದು. ಏಕೆಂದರೆ ರಿಲಿಜನ್ನುಗಳಲ್ಲಿ ಯಾವ ಆಚರಣೆ ಅವುಗಳ ಪವಿತ್ರ ಗ್ರಂಥವನ್ನು ಆಧರಿಸಿರುತ್ತದೆಯೊ ಅವನ್ನು ಪ್ರಶ್ನಿಸುವ ಹಕ್ಕು ಸೆಕ್ಯುಲರ್ ಪ್ರಭುತ್ವಕ್ಕಿಲ್ಲ. ಆದರೆ ಹಿಂದೂಗಳು ತಮ್ಮ ಆಚರಣೆಗಳನ್ನು ಯಾವುದೇ ಗ್ರಂಥ ನಿರ್ದೇಶನಗಳಿಂದಾಗಲೀ, ಡಾಕ್ಟ್ರಿನ್ನುಗಳಿಂದಾಗಲೀ ಪಡೆದಿರಲಿಲ್ಲ.  ಅವನ್ನು ಅವರು ತಮ್ಮ ಹಿರಿಯರು ಕಲಿಸಿದಂತೆ ಕಲಿತಿರುತ್ತಿದ್ದರು. ಇಂಥ ಆಚರಣೆಗಳನ್ನು ಹಿಂದೂ ಆಚರಣೆಗಳು ಎಂದು ಹೇಗೆ ನಿರ್ಧರಿಸುವುದು? ಅದಕ್ಕೆ ಹಿಂದೂಗಳ ಪವಿತ್ರಗ್ರಂಥವನ್ನು, ಡಾಕ್ಟ್ರಿನ್ನುಗಳನ್ನು ಗುರುತಿಸಿ ಅದರೊಂದಿಗೆ ತಾಳೆ ಹಾಕುವುದೊಂದೇ ಮಾರ್ಗ. ಇವನ್ನೆಲ್ಲ ಸೃಷ್ಟಿಸಿಕೊಡುವಲ್ಲಿ ದೇಶೀ ಪಂಡಿತರ ಒಂದು ಪಡೆಯೇ ಕೆಲಸ ಮಾಡಿತು. ಈ ಪಂಡಿತರು ನಮ್ಮ ಸಂಪ್ರದಾಯಗಳಿಗೆ, ಗ್ರಂಥಗಳಿಗೆ, ಕಥೆ ಪುರಾಣಗಳಿಗೆ ಸಾಧ್ಯವಾದಲ್ಲೆಲ್ಲ ರಿಲಿಜನ್ನಿನ ವೇಷವನ್ನು ತೊಡಿಸಿ ಬ್ರಿಟಿಷರ ಸೆಕ್ಯುಲರ್ ನೀತಿಯ ಅನುಷ್ಠಾನದಲ್ಲಿ ನ್ಯೂನತೆ ಬರದಂತೆ ನೋಡಿಕೊಂಡರು. ಒಟ್ಟಿನಲ್ಲಿ ತಮ್ಮ ಅರ್ಹತೆಯನ್ನು ಬ್ರಿಟಿಷರಿಗೆ ಮನದಟ್ಟು ಮಾಡಿಕೊಡಲು ಶ್ರಮಿಸಿದರು.

          ಒಟ್ಟಾರೆಯಾಗಿ ಇಂದಿನ ಆಚರಣೆಗಳಿಗೆ ಯಾವುದೋ ಒಂದು ಶಾಸ್ತ್ರವನ್ನು ಉಲ್ಲೇಖಿಸಿ ಆಧಾರವನ್ನು ತೋರಿಸಿದರೆ ಮಾತ್ರವೇ ಅದು ಹಿಂದೂ ಆಚರಣೆಯೆಂಬುದಾಗಿ ಕಾನೂನುಬದ್ಧವಾಗಿ ಮಾನ್ಯತೆ ಹೊಂದುವ ಪರಿಸ್ಥಿತಿ ನಿರ್ಮಾಣವಾಯಿತು. ಹಾಗಾಗಿ ತಮ್ಮ ಎಲ್ಲಾ ಆಚರಣೆಗಳಿಗೆ ಆಧಾರವಾಗಿ ಹಿಂದೂ ರಿಲಿಜನ್ನು ಎಂಬುದೊಂದನ್ನು ಸೃಷ್ಟಿಸಿಕೊಳ್ಳುವ ಒತ್ತಡವು ಹಿಂದೂಗಳ ಮೇಲೆ ಬಿದ್ದಿತು.  ಹೀಗೆ ಭಾರತೀಯರು ತಮ್ಮ ಆಚರಣೆಗಳಿಗೆಲ್ಲ ಹಿನ್ನೆಲೆಯಾಗಿ ಹಿಂದೂಯಿಸಂ ಎನ್ನುವ ರಿಲಿಜನ್ನನ್ನು ಕ್ರಮಕ್ರಮವಾಗಿ  ಕಟ್ಟಿಕೊಡತೊಡಗಿದರು. ಆದರೂ ಬಹುತೇಕ ಆಚರಣೆಗಳಿಗೆ ಗ್ರಂಥಾಧಾರವನ್ನು ನೀಡಲು ಅವರು ಸಮರ್ಥರಾಗಲಿಲ್ಲ.  ತಮ್ಮ ಪೂರ್ವಜರಿಂದ ಸ್ವೀಕರಿಸಿದ ಆಚರಣೆಗಳನ್ನು ಇಟ್ಟುಕೊಳ್ಳಲು ಗ್ರಂಥಗಳ ಹಾಗೂ ಪ್ರಭುತ್ವದ ಸಮ್ಮತಿಯ ಅವಶ್ಯಕತೆ ಏನಿದೆ? ಎಂಬ ಪ್ರಶ್ನೆ ಸಂಪ್ರದಾಯಸ್ಥರಲ್ಲಿ ಹಾಗೇ ಉಳಿದುಕೊಂಡಿತು. 

          ಈ ಕಾಲದಲ್ಲೇ ಹಿಂದೂಯಿಸಂ ಎಂಬ ರಿಲಿಜನ್ನು ಈಗ ಭ್ರಷ್ಟವಾಗಿ ಹೋಗಿರುವುದರಿಂದ ಇಂಥ ಶಾಸ್ತ್ರಾಧಾರವಿಲ್ಲದ ಆಚರಣೆಗಳು ಹುಟ್ಟಿಕೊಂಡಿವೆ ಎಂಬ ವಾದಗಳು ಹುಟ್ಟಿಕೊಂಡವು ಹಾಗೂ ಅವನ್ನು ತೊಡೆಯಲು ಸುಧಾರಣಾ ಚಳುವಳಿಗಳು ಹುಟ್ಟಿಕೊಂಡವು. ಅವಕ್ಕೆ ಪ್ರತಿಯಾಗಿ ಸೆಕ್ಯುಲರ್ ಪ್ರಭುತ್ವದಲ್ಲಿ ಹಿಂದೂ ಆಚರಣೆಗಳಿಗೆ ಒಟ್ಟಾರೆಯಾಗಿ   ಅಪಾಯವೊದಗಿದೆ ಎಂಬ ಅಭಿಪ್ರಾಯವನ್ನು ಹೊತ್ತ ಹಿಂದೂ ಜಾಗೃತಿಯ ಚಳುವಳಿ ಕೂಡ ಈ ಸಂದರ್ಭದಲ್ಲೇ ಹುಟ್ಟಿಕೊಂಡಿತು. ಅದರ ವೈಶಿಷ್ಟ್ಯತೆ ಎಂದರೆ: ೧) ಕಳೆದುಹೋದ ಹಿಂದೂ ಐಕ್ಯತೆಯನ್ನು ಹಾಗೂ ತತ್ವಗಳನ್ನು ರಿಲಿಜನ್ನಿನ ಮಾದರಿಯನ್ನಿಟ್ಟುಕೊಂಡು ಮರಳಿ ಪಡೆಯುವದು. ೨) ಸೆಕ್ಯುಲರ್ ಪ್ರಭುತ್ವದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ರಿಲಿಜನ್ನುಗಳು ಅದಕ್ಕೆ  ಪ್ರತಿಸ್ಪರ್ಧಿಗಳು, ಅಷ್ಟೇ ಅಲ್ಲ  ಅವುಗಳಿಂದ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂಬ ಭಾವನೆ. ೩) ಸೆಕ್ಯುಲರ್ ಸರ್ಕಾರದಲ್ಲಿ ಹಿಂದೂ ಆಚರಣೆಗಳು ಹಾಗೂ ರಿಲಿಜನ್ನಿನ ಹಕ್ಕುಗಳಿಗಾಗಿ ಹೋರಾಟ ನಡೆಸುವುದು. ಈ ಹೋರಾಟಗಳು ಬಹುತೇಕ ಅನ್ಯ ರಿಲಿಜನ್ನುಗಳಿಗೆ ಪ್ರತಿಯಾಗಿ ಹಿಂದೂ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಕಾರಣಕ್ಕಾಗಿ ಹುಟ್ಟಿ ಸಂಘರ್ಷದ ವಾತಾವರಣವನ್ನು ನಿರ್ಮಿಸುತ್ತಿದ್ದವು. ವಿಪರ್ಯಾಸವೆಂದರೆ ಸಹಿಷ್ಣುತೆಯೇ ಹಿಂದೂಗಳ ತತ್ವ ಎಂದ ಈ ಹೋರಾಟಗಾರರು ಅನ್ಯ ರಿಲಿಜನ್ನುಗಳಲ್ಲಿ ಆ ತತ್ವವಿಲ್ಲ ಎಂಬ ಕಾರಣಕ್ಕೇ ಅಸಹಿಷ್ಣುಗಳಾದರು.  

          ಈ ಮೇಲಿನ ಹಿಂದುತ್ವದ ಹೋರಾಟವು ರಾಷ್ಟ್ರೀಯ ಹೋರಾಟದ ರಾಜಕೀಯದಲ್ಲಿ ಬೆರೆತುಕೊಂಡು ವಿಭಿನ್ನ ರೂಪಗಳನ್ನು ತಳೆಯಿತು. ರಿಲಿಜನ್ನು  ರಾಷ್ಟ್ರೀಯ ಐಕ್ಯತೆಯನ್ನು ನಿರ್ಧರಿಸುವ ಒಂದು ಲಕ್ಷಣ ಎಂಬುದು    ಪಾಶ್ಚಾತ್ಯ ರಾಷ್ಟ್ರೀಯವಾದವು ಭಾರತಕ್ಕೆ ಹೊತ್ತುತಂದ ಒಂದು ವಿಚಾರವಾಗಿದೆ. ಈ ವಿಚಾರವು  ಮುಸ್ಲಿಂ ಪ್ರತ್ಯೇಕತಾವಾದ ಹಾಗೂ ಹಿಂದೂರಾಷ್ಟ್ರದ ಕಲ್ಪನೆಗಳಿಗೆ ನೀರೆರೆದು ಪೋಷಿಸಿತು. ಸ್ವಾತಂತ್ರ್ಯಾನಂತರ ಕಾಲದಲ್ಲಿ ನಮ್ಮ ಸೆಕ್ಯುಲರ್ ಸರ್ಕಾರವು ಹಿಂದೂಗಳನ್ನು ಬಹುಸಂಖ್ಯಾತ ರಿಲಿಜನ್ನೆಂದು ಘೋಷಿಸಿ ರಿಲಿಜನ್ನಿನ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ರಕ್ಷಿಸುವ ನೀತಿಗಳನ್ನು ರೂಪಿಸಿತು. ಈ ನೀತಿಗಳು ಇಂದು ಹಿಂದುತ್ವದ ಹೋರಾಟಕ್ಕೆ ಹೊಸ ತಳಹದಿಯನ್ನೊದಗಿಸಿವೆ. ಆದರೆ ಈ ಎಲ್ಲಾ ಹೋರಾಟದ ಫಲವಾಗಿ ಹಿಂದೂಯಿಸಂ ಎಂಬ ರಿಲಿಜನ್ನು ಸಿಕ್ಕಿತೆ? ಅದು ಇದ್ದರೆ ತಾನೆ ಸಿಗುವುದು? ಹಾಗಾದರೆ ಹಿಂದೂ ಮೂಲಭೂತವಾದ ಎಂಬುದನ್ನು ಹೇಗೆ ವರ್ಣಿಸಬಹುದು? ರಿಲಿಜನ್ನೇ ಇಲ್ಲದ ಸಮಾಜವೊಂದರಲ್ಲಿ ಸೆಕ್ಯುಲರ್ ಪ್ರಭುತ್ವದ ಒತ್ತಡವನ್ನು ಎದುರಿಸಲು ರಿಲಿಜನ್ನಿನ ಹೆಸರಿನಲ್ಲಿ ಹುಟ್ಟಿಕೊಂಡ ಒಂದು ಚಳವಳಿ ಎನ್ನಬಹುದು. ಸಾಂಸ್ಕೃತಿಕ ವ್ಯತ್ಯಾಸಕ್ಕೆ ಕುರುಡಾಗಿರುವ ಸೆಕ್ಯುಲರ್ ರಾಜಕೀಯದ ಸೃಷ್ಟಿ ಎಂದೂ ಅದನ್ನು ವರ್ಣಿಸಬಹುದು.  

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp