ಧರ್ಮ ಸಹಿಷ್ಣುತೆ ಎಂಬ ಶಬ್ದವು ಭಾರತೀಯ ಸಂಸ್ಕೃತಿಗೆ ಅಪರಿಚಿತವಾದುದು. ಅದು ರಿಲಿಜಿಯಸ್ ಟಾಲರೆನ್ಸ್ ಎಂಬ ಪಾಶ್ಚಾತ್ಯ ಪರಿಕಲ್ಪನೆಯ ತರ್ಜುಮೆಯಾಗಿದೆ. ಅನ್ಯ ರಿಲಿಜನ್ನುಗಳ ಜೊತೆಗೆ ಕಾದಾಡದೇ ಶಾಂತಿಯುತ ಸಹಬಾಳ್ವೆ ನಡೆಸಲಿಕ್ಕೆ ಇರುವ ಒಂದೇ ಉಪಾಯವೆಂದರೆ ಅವನ್ನು ಸಹಿಸಿಕೊಂಡು ಸುಮ್ಮನಿದ್ದುಬಿಡುವುದು. ಭಾರತೀಯರು ಅನ್ಯ ಸಂಪ್ರದಾಯಗಳು ಕೂಡ ತಮ್ಮಂಥದ್ದೇ ಒಂದು ಮಾರ್ಗ ಎಂದು ಭಾವಿಸುವುದರಿಂದ ಅವರಿಗೆ ಅನ್ಯರನ್ನು ಅನ್ಯರೆಂದು ಒಪ್ಪಿಕೊಳ್ಳಲು ಸಹಜವಾಗಿಯೇ ಸಾಧ್ಯವಾಗುತ್ತದೆ. ಅವರನ್ನು ಸಹಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ.
ರಿಲಿಜನ್ನನ್ನು ಧರ್ಮ ಎಂಬುದಾಗಿ ಭಾಷಾಂತರಿಸಿದಾಗ ಸಮ್ಮ ಸಂಸ್ಕೃತಿಯ ಕುರಿತ ಗ್ರಹಿಕೆಯೇ ಹೇಗೆ ವಿಕೃತವಾಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ನೀಡುತ್ತೇನೆ. ಇಂದು ಎಲ್ಲಾ ಭಾರತೀಯರಿಗೂ ಧರ್ಮ ಸಹಿಷ್ಣುತೆಯನ್ನು ರೂಢಿಸಿಕೊಳ್ಳಬೇಕೆಂಬುದಾಗಿ ಕರೆ ನೀಡಲಾಗುತ್ತಿದೆ. ಏಕೆಂದರೆ ವಿಭಿನ್ನ ಧರ್ಮಗಳ (ಅಂದರೆ ರಿಲಿಜನ್ನುಗಳ) ನಡುವೆ ಪೈಪೋಟಿ ಹಾಗೂ ವೈರತ್ವ ಇರುತ್ತದೆ. ಅವುಗಳ ನಡುವೆ ಶಾಂತಿ-ಸಹಬಾಳ್ವೆ ಇರಬೇಕೆಂದರೆ ಸಹಿಷ್ಣುತೆಯ ಮೌಲ್ಯವನ್ನು ಅವು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ದೇಶದಲ್ಲಿ ದೊಂಬಿ ಏಳುತ್ತದೆ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಿಬಿಡುತ್ತಾರೆ ಎಂಬುದು ಸೆಕ್ಯುಲರ್ ತರ್ಕ. ಈ ಮೌಲ್ಯವನ್ನು ಪಾಶ್ಚಾತ್ಯ ಸೆಕ್ಯುಲರ್ ಪ್ರಭುತ್ವಗಳು ಕಂಡುಹಿಡಿದಿವೆ ಹಾಗೂ ಪಾಶ್ಚಾತ್ಯ ಪ್ರಭುತ್ವಗಳು ಇದನ್ನು ಅಳವಡಿಸಿಕೊಂಡು ತಮ್ಮಲ್ಲಿ ಶಾಂತಿ ಸುವ್ಯವಸ್ಥೆಯನ್ನು ರಕ್ಷಿಸಿಕೊಂಡಿವೆ ಎನ್ನಲಾಗುತ್ತದೆ. ಇಂಥ ಕರೆಗಳೇನು ಮಹಾ ಎನ್ನುವ ಗುಂಪೂ ಇದೆ. ಧರ್ಮ ಸಹಿಷ್ಣುತೆಯು ಹಿಂದೂ ಧರ್ಮದ ಹೆಗ್ಗಳಿಕೆಯಾಗಿರುವುದರಿಂದ ಅವರಿಗೇನೂ ಅದನ್ನು ಪಾಶ್ಚಾತ್ಯರು ಹೇಳಿಕೊಡುವ ಅಗತ್ಯವಿಲ್ಲ ಎಂಬ ಅಭಿಪ್ರಾಯಗಳೂ ಇವೆ.
ನಮ್ಮ ಚರಿತ್ರೆ ಪುಸ್ತಕಗಳು ಕೂಡ ಭಾರತೀಯ ರಾಜರನ್ನು ಹೊಗಳಬೇಕಾದರೆ ಧರ್ಮ ಸಹಿಷ್ಣುತೆ ಎಂಬ ಶಬ್ದವನ್ನು ಬಳಸುತ್ತವೆ. ಅದನ್ನು ಮತ ಸಹಿಷ್ಣುತೆ ಎಂಬುದಾಗಿಯೂ ಕರೆಯುತ್ತಾರೆ. ಒಟ್ಟಾರೆಯಾಗಿ ಅದು ಭಾರತೀಯ ರಾಜರ ಸದ್ಗುಣ ಎನ್ನಲಾಗುತ್ತದೆ. ಏನು ಈ ಸದ್ಗುಣ? ತನ್ನ ಮತವಲ್ಲದೇ ಇತರ ಮತಗಳನ್ನೂ ಪೋಷಿಸಿ ದಾನ ಧರ್ಮಗಳನ್ನು ಮಾಡುವುದು, ಇತರ ದೇವತೆಗಳನ್ನೂ ಪೂಜಿಸುವುದು. ಆದರೆ ಇದು ಧರ್ಮ ಸಹಿಷ್ಣುತೆ ಹೇಗಾಗುತ್ತದೆ ಎಂಬುದನ್ನು ಯಾರೂ ವಿವರಿಸುವ ಗೋಜಿಗೆ ಹೋಗಿಲ್ಲ. ಏಕೆಂದರೆ ಧರ್ಮ ಸಹಿಷ್ಣುತೆ ಎನ್ನುವುದು ’ರಿಲಿಜಿಯಸ್ ಟಾಲರೆನ್ಸ್’ ಎಂಬ ಆಂಗ್ಲ ಪದದ ತರ್ಜುಮೆಯಾಗಿದೆ. ರಿಲಿಜನ್ನನ್ನು ಧರ್ಮವೆಂಬುದಾಗಿ ತರ್ಜುಮೆ ಮಾಡಲಾಗಿದೆ. ಟಾಲರೆನ್ಸ್ ಎಂಬುದಕ್ಕೆ ಸಹಿಷ್ಣುತೆ ಎಂಬುದಾಗಿ ಭಾಷಾಂತರಿಸಿದ್ದಾರೆ. ಟಾಲರೇಟ್, ಅಂದರೆ ಸಹಿಸು ಅಂತ ಅರ್ಥ. ಸಹಿಷ್ಣು ಎಂದರೆ ಸಹಿಸಿಕೊಳ್ಳುವವನು ಅಂತ ಅರ್ಥ. ಸಹಿಸಿಕೊಳ್ಳುವುದೆಂದರೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳುವುದು. ಕಷ್ಟ ಸಹಿಷ್ಣು ಅನ್ನುತ್ತೇವಲ್ಲ, ಆ ಅರ್ಥ. ಕಷ್ಟವನ್ನು ಯಾರೂ ಖುಷಿಪಟ್ಟು ಅನುಭವಿಸುವುದಿಲ್ಲ, ಹಾಗಾಗೇ ಅದನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅದು ಸರಿ, ಆದರೆ ಧರ್ಮವನ್ನು ಸಹಿಸಿಕೊಳ್ಳುವುದು ಅಂದರೇನು?
ಈಗೊಂದು ಪ್ರಶ್ನೆಗೆ ನಿಮ್ಮ ಅನುಭವವನ್ನಿಟ್ಟುಕೊಂಡು ಉತ್ತರಿಸಿ. ನಿಮ್ಮ ಕುಲದೇವತೆ ಒಂದಿರುತ್ತದೆ. ಗ್ರಾಮದ ದೇವತೆ ಮತ್ತೊಂದಿರುತ್ತದೆ. ನೀವು ತಿರುಪತಿ, ಉಡುಪಿ, ಧರ್ಮಸ್ಥಳ ಇತ್ಯಾದಿ ಕ್ಷೇತ್ರಗಳಿಗೆಲ್ಲ ಹೋಗಿ ಪೂಜಿಸಿ ಅಲ್ಲೂ ದಾನಗಳನ್ನು ನೀಡುತ್ತೀರಾ. ಇಲ್ಲೆಲ್ಲ ಅನ್ಯ ದೇವತೆಗಳನ್ನು ಸಹಿಸಿಕೊಳ್ಳುತ್ತಿದ್ದೀರಿ ಎಂಬ ಭಾವನೆ ನಿಮಗೆಂದಾದರೂ ಬಂದಿದೆಯೆ? ಇಲ್ಲ ಅವುಗಳ ಕುರಿತು ಪೂಜ್ಯ ಭಾವನೆಯಿಂದ ಈ ಕೆಲಸ ಮಾಡಿದ್ದೀರಿ ಅಂದುಕೊಳ್ಳುತ್ತೀರೊ? ಈ ರೀತಿಯಲ್ಲಿ ಅನೇಕ ದೇವತೆಗಳನ್ನು ಪೂಜ್ಯಭಾವನೆಯಿಂದ ನೋಡುವುದು ಭಾರತೀಯ ಸಂಸ್ಕೃತಿಗೆ ಸೇರಿದವರಿಗೆ ಸಹಜ ಎಂದಾದಲ್ಲಿ ನಮ್ಮ ರಾಜರು ಅನ್ಯ ದೇವತಾ ಪಂಥಗಳನ್ನು ಸಹಿಸಿಕೊಳ್ಳುತ್ತಿದ್ದರು ಎಂಬುದಾಗಿ ವರ್ಣಿಸಿದರೆ ಅದು ವಾಸ್ತವ ಎನ್ನಿಸಿಕೊಳ್ಳುತ್ತದೆಯೆ? ನಮ್ಮ ದೇಶೀ ರಾಜರ ಇತಿಹಾಸವನ್ನು ಗಮನಿಸಿದರೆ ಅವರು ’ಧರ್ಮ ಸಹಿಷ್ಣು’ಗಳಂತೂ ಆಗಿರಲು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟ.
ಈ ಧರ್ಮ ಸಹಿಷ್ಣುತೆ ಎಂಬ ಶಬ್ದವೇ ಆಧುನಿಕ ಸೃಷ್ಟಿ. ನಮ್ಮ ಸಾಂಪ್ರದಾಯಿಕ ಗ್ರಂಥಗಳಲ್ಲೆಲ್ಲೂ ಈ ಶಬ್ದವಿಲ್ಲ. ಇದು ರಿಲಿಜಿಯಸ್ ಟಾಲರೆನ್ಸ್ ಎಂಬ ಪರಿಕಲ್ಪನೆಯ ಅನುವಾದ. ಹಾಗಾಗಿ ಅದಕ್ಕೆ ಈ ಆಂಗ್ಲ ಶಬ್ದವನ್ನು ಬಿಟ್ಟರೆ ಬೇರೆ ಅರ್ಥವೇ ಇಲ್ಲ. ರಿಲಿಜನ್ನುಗಳಿಗೆ ಅನ್ಯ ರಿಲಿಜನ್ನುಗಳನ್ನು ಸಹಿಸಿಕೊಳ್ಳುವುದು ಒಂದು ಸದ್ಗುಣ. ಏಕೆಂದರೆ ಪ್ರತಿಯೊಂದು ರಿಲಿಜನ್ನಿನ ಪ್ರಕಾರವೂ ತನ್ನದೊಂದೇ ಸತ್ಯ ಹಾಗೂ ಆ ನಿರ್ದಿಷ್ಟ ಕಾರಣಕ್ಕೇ ಅನ್ಯ ರಿಲಿಜನ್ನುಗಳು ಸತ್ಯವಾಗಲು ಸಾಧ್ಯವೇ ಇಲ್ಲ. ಇದಕ್ಕೂ ದೊಡ್ಡ ಫಜೀತಿಯೆಂದರೆ ನೀವು ಅನ್ಯ ರಿಲಿಜನ್ನು ಸತ್ಯ ಎಂದರೆ ನಿಮ್ಮ ರಿಲಿಜನ್ನು ಸುಳ್ಳು ಎಂದಂತೆಯೇ. ನೀವು ಒಂದೆಡೆ ಖುರಾನೇ ಸತ್ಯ ಎಂಬುದನ್ನು ಒಪ್ಪಿಕೊಂಡು ಮತ್ತೊಂದೆಡೆ ಕ್ರೈಸ್ತರಾಗಿರಲು ಸಾಧ್ಯವಿಲ್ಲ. ನಿಮ್ಮ ರಿಲಿಜನ್ನು ತಿಳಿಸುವ ಕಥೆಯಲ್ಲಿ ನಿಮಗೆ ನಂಬಿಕೆ ಇದ್ದರೆ ಮಾತ್ರವೇ ನೀವು ಆ ರಿಲಿಜನ್ನಿಗೆ ಸೇರುತ್ತೀರಿ. ಎರಡಕ್ಕಿಂತ ಹೆಚ್ಚು ರಿಲಿಜನ್ನುಗಳು ಶಾಂತಿಯುತವಾಗಿ ಸಹಬಾಳ್ವೆ ಮಾಡಬೇಕೆಂದರೆ ಅವು ಪರಸ್ಪರರನ್ನು ಗೌರವಿಸುವುದು ಅಸಾಧ್ಯವಾದುದರಿಂದಲೇ ಸಹಿಷ್ಣುತೆಯು ಅವುಗಳಿಗೆ ಒಂದು ಸಾಧಿಸಬೇಕಾದ ಮೌಲ್ಯವಾಯಿತು.
ಈ ಸಹಿಷ್ಣುತೆ ಎಂಬುದು ಪಾಶ್ಚಾತ್ಯ ಸೆಕ್ಯುಲರ್ ಪ್ರಭುತ್ವಗಳಲ್ಲಿ ಒಂದು ಆದರ್ಶವಾಗಿತ್ತು. ಸೆಕ್ಯುಲರಿಸಂ ಎಂದರೆ ಪ್ರಭುತ್ವವು ಎಲ್ಲಾ ರಿಲಿಜನ್ನುಗಳನ್ನು ತಟಸ್ಥವಾಗಿ ಒಂದೇ ರೀತಿಯಲ್ಲಿ ನಡೆಸಿಕೊಳ್ಳುವ ನೀತಿ. ಇಂಥ ಪಾಶ್ಚಾತ್ಯ ಪ್ರಭುತ್ವಗಳಲ್ಲಿ ಕ್ರಿಶ್ಚಿಯಾನಿಟಿಯ ಹಲವಾರು ಪಂಥಗಳು ಇದ್ದು ಅವು ತಮ್ಮದೇ ಸತ್ಯ ಎಂಬುದಾಗಿ ಪರಸ್ಪರರ ವಿರುದ್ಧ ಯುದ್ಧ ಘೋಷಿಸಿದ್ದವು. ಹೀಗೆ ಕಚ್ಚಾಡುತ್ತ ಬದುಕುವುದು ಅನಾಗರಿಕತೆಯಾಗುತ್ತದೆ. ಅದರಿಂದ ಹಿಂಸೆ, ಸಾಮಾಜಿಕ ಪ್ರಕ್ಷುಬ್ದತೆ, ಆಡಳಿತಾತ್ಮಕ ಸಮಸ್ಯೆಗಳು ಹಾಗೂ ಕಾನೂನಿನ ಸಮಸ್ಯೆಗಳೆಲ್ಲ ಹುಟ್ಟಿಕೊಳ್ಳುತ್ತವೆ. ಹಾಗಂತ ಪರರನ್ನು ಸರಿ ಎಂಬುದಾಗಿ ಒಪ್ಪಿಕೊಳ್ಳುವುದೂ ಆಗದ ಮಾತು, ಹಾಗಾಗಿ ಪರರನ್ನು ಸಹಿಸಿಕೊಳ್ಳುವುದು ಶಾಂತಿಯನ್ನು ಕಾಪಾಡುವ ಮಾರ್ಗ ಹಾಗೂ ನಾಗರೀಕತೆಯ ಲಕ್ಷಣ ಎಂಬ ನೀತಿಯನ್ನು ಸೆಕ್ಯುಲರ್ ರಾಜಕೀಯವು ಬೆಳೆಸಿತು. ಬ್ರಿಟಿಷರು ಭಾರತದಲ್ಲಿ ತಮ್ಮ ವಸಾಹತು ಪ್ರಭುತ್ವವನ್ನು ಸ್ಥಾಪಿಸಿದಾಗ ಈ ನಾಗರಿಕ ಮೌಲ್ಯವನ್ನು ತಮ್ಮ ಸೆಕ್ಯುಲರ್ ನೀತಿಯ ಒಂದು ಅಂಗವಾಗಿ ಭಾರತದಲ್ಲಿ ಅಳವಡಿಸಿದರು.
ಪಾಶ್ಚಾತ್ಯರು ಭಾರತೀಯ ಇತಿಹಾಸವನ್ನು ರಚಿಸಲು ತೊಡಗಿದಾಗ ಭಾರತೀಯ ರಾಜರು ಬೇರೆ ಬೇರೆ ಪೂಜಾ ಪಂಥಗಳಿಗೆ ದಾನವನ್ನು ನೀಡುವ ಸಂಗತಿ ಅವರ ಕುತೂಹಲವನ್ನು ಕೆರಳಿಸಿತು. ಗಂಡ ಒಂದು ಪಂಥಕ್ಕೆ ದಾನ ನೀಡಿದರೆ ಹೆಂಡತಿ ಮತ್ತೊಂದಕ್ಕೆ ನೀಡುತ್ತಾಳೆ. ಒಬ್ಬನೇ ತನ್ನನ್ನು ಶಿವಭಕ್ತ ಎಂಬುದಾಗಿ ಕರೆದುಕೊಂಡು ಜೈನರಾದಿಯಾಗಿ ಎಲ್ಲಾ ಪಂಥಗಳ ದೇವಾಲಯಗಳಿಗೂ ದಾನ ನೀಡುತ್ತಾನೆ. ಇಂಥವೇ ಅಸಂಖ್ಯ ಘಟನೆಗಳನ್ನು ಈ ಇತಿಹಾಸವು ತಿಳಿಸುತ್ತದೆ ಅಥವಾ ನಮ್ಮ ಇತಿಹಾಸದಲ್ಲಿ ಇಂಥವೇ ಘಟನೆಗಳು ತುಂಬಿಕೊಂಡಿವೆ. ಶೈವ, ವೈಷ್ಣವ, ಜೈನ, ಶಾಕ್ತ, ಇತ್ಯಾದಿಯಾಗಿ ಈ ಎಲ್ಲಾ ಪೂಜಾ ಪಂಥಗಳನ್ನೂ ರಿಲಿಜನ್ನುಗಳೆಂದು ಅದಾಗಲೇ ನಾಮಕರಣ ಮಾಡಿಯಾಗಿತ್ತು. ರಿಲಿಜನ್ನಿನ ಹಿನ್ನೆಲೆಯಿಂದ ಬಂದವರಿಗೆ ಒಬ್ಬರೇ ಬಹು ರಿಲಿಜನ್ನುಗಳನ್ನು ಅನುಸರಿಸುವುದು ಅರ್ಥವೇ ಆಗದ ಸಂಗತಿ. ಹಾಗಾಗಿ ರಾಜರ ಈ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಪಾಶ್ಚಾತ್ಯ ಇತಿಹಾಸಕಾರರಿಗೆ ಇದ್ದ ಒಂದೇ ಒಂದು ಪರಿಕಲ್ಪನೆಯೆಂದರೆ ರಿಲಿಜಿಯಸ್ ಟಾಲರೆನ್ಸ್. ಈ ಸದ್ಗುಣವೇ ಭಾರತೀಯ ಸಂಸ್ಕೃತಿಯ ಹೆಗ್ಗಳಿಕೆ ಎಂಬುದಾಗಿ ಭಾರತೀಯ ಇತಿಹಾಸಕಾರರು ಕೂಡ ಅದನ್ನು ತಮ್ಮ ಬರವಣಿಗೆಯಲ್ಲಿ ಮುಂದುವರಿಸಿದರು. ನಂತರ ದೇಶೀ ಜನರು ತಮ್ಮ ಭಾಷೆಗಳಲ್ಲಿ ಧರ್ಮ ಸಹಿಷ್ಣುತೆ ಎಂಬ ಶಬ್ದವನ್ನೂ ಸೃಷ್ಟಿಸಿದರು.
ಈ ಧರ್ಮ ಸಹಿಷ್ಣುತೆ ಎಂಬ ಕಥೆಯ ಪ್ರಕಾರ ಒಂದು ರಾಜ್ಯದಲ್ಲಿ ಶೈವ, ವೈಷ್ಣವ, ಜೈನ, ಬೌದ್ಧ ಇತ್ಯಾದಿ ರಿಲಿಜನ್ನುಗಳು ಇರುತ್ತವೆ. ಇವುಗಳಲ್ಲೊಂದು ಇಂಥ ರಾಜ್ಯಗಳಲ್ಲಿ ಆಳುವವನ ರಿಲಿಜನ್ನಾಗಿರುತ್ತದೆ, ಉಳಿದವುಗಳ ಕುರಿತು ರಾಜನು ಸಹಿಷ್ಣುವಾಗಿರುತ್ತಾನೆ. ಇಂದಿನ ಇತಿಹಾಸ ಪುಸ್ತಕಗಳು ತಿಳಿಸುವ ಪ್ರಕಾರ ಮೌರ್ಯ ರಾಜನಾದ ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಹಾಗಾಗಿ ಅವನ ಕಾಲದಲ್ಲಿ ಬೌದ್ಧ ಧರ್ಮವು ರಾಜ್ಯದ ಧರ್ಮವಾಗಿತ್ತು, ಗುಪ್ತರ ಕಾಲದಲ್ಲಿ ಹಿಂದೂಧರ್ಮವು ರಾಜ್ಯದ ಧರ್ಮವಾಯಿತು, ಇತ್ಯಾದಿ, ಇತ್ಯಾದಿ. ಒಬ್ಬ ರಾಜನಿಗೊಂದು ರಿಲಿಜನ್ ಇರಲೇಬೇಕು, ಹಾಗೂ ಅದು ರಾಜ್ಯದ ರಿಲಿಜನ್ ಆಗಬೇಕು ಎಂಬ ಪೂರ್ವಾಗ್ರಹವು ನಮಗೆ ಪಾಶ್ಚಾತ್ಯ ಚಿಂತನೆಯ ಬಳುವಳಿ. ಪಾಶ್ಚಾತ್ಯರಿಗೆ ಗೊತ್ತಿದ್ದ ಪ್ರಕಾರ ಕ್ರೈಸ್ತ ಹಾಗೂ ಇಸ್ಲಾಂ ಪ್ರಭುತ್ವಗಳಲ್ಲಿ ರಾಜನು ತನ್ನ ರಿಲಿಜನ್ನನ್ನೇ ಆಶ್ರಯಿಸಿ ರಾಜ್ಯಭಾರ ಮಾಡುವುದೂ, ಅದನ್ನೇ ಎತ್ತಿಹಿಡಿಯುವುದೂ ಅಷ್ಟೇ ಸಹಜವಾಗಿತ್ತು. ಅನ್ಯ ರಿಲಿಜನ್ನುಗಳೂ ಆ ರಾಜ್ಯದಲ್ಲಿ ಇದ್ದ ಪಕ್ಷದಲ್ಲಿ ತಮ್ಮ ರಿಲಿಜನ್ನು ನಿರ್ದೇಶಿಸುವ ಷರತ್ತುಗಳಿಗೆ ಒಳಪಡಿಸಿ ಅವುಗಳನ್ನು ಒಪ್ಪಿಕೊಳ್ಳುವುದು ಒಂದು ನೀತಿಯಾಗಿತ್ತು.
ಆದರೆ ಭಾರತೀಯ ಸಂಪ್ರದಾಯಗಳ ಸಂದರ್ಭದಲ್ಲಿ ಈ ರೀತಿಯ ನಿರೂಪಣೆಗಳೇ ಅಸಂಬದ್ಧ. ಶೈವ, ವೈಷ್ಣವ, ಬೌದ್ಧ, ಜೈನ ಇತ್ಯಾದಿಗಳೆಲ್ಲ ರಿಲಿಜನ್ನುಗಳಲ್ಲ. ಒಂದು ಸಂಸ್ಕೃತಿಯಲ್ಲಿ ವ್ಯಕ್ತಿಯೊಬ್ಬನು ಹಲವಾರು ದೈವಗಳನ್ನು ಗೌರವದಿಂದ ಪೂಜಿಸಬಲ್ಲನಾದರೆ ಅಂಥ ಸಂದರ್ಭದಲ್ಲಿ ಖಾಸಗಿ ಭಕ್ತಿಯನ್ನು ಪ್ರಜೆಗಳ ಮೇಲೆ ಹೇರುವುದಾಗಲೀ, ಅನ್ಯ ಪಂಥಗಳನ್ನು ಸಹಿಸಿಕೊಳ್ಳುವ ಪರಿಸ್ಥಿತಿಯಾಗಲೀ ಉದ್ಭವಿಸುವುದೇ ಇಲ್ಲ. ಹಾಗಾಗಿ ಪ್ರಭುತ್ವದ ರಿಲಿಜನ್ ಎಂಬ ಕಲ್ಪನೆ ಭಾರತೀಯ ರಾಜ್ಯಗಳಿಗೆ ಹೊಂದುವುದಿಲ್ಲ. ರಾಜನೂ ಕೂಡ ಇಂದಿನ ಸಾಂಪ್ರದಾಯಿಕ ಸಮಾಜದ ಸದಸ್ಯನಂತೇ ಒಬ್ಬ ವ್ಯಕ್ತಿಯಾಗಿದ್ದ ಎಂಬುದಾಗಿ ಭಾವಿಸಿದರೆ ಈ ಮೇಲಿನ ಎಲ್ಲಾ ಐತಿಹಾಸಿಕ ಒಗಟುಗಳಿಗೂ ಉತ್ತರ ಸಿಗುತ್ತದೆ. ರಾಜ್ಯದಲ್ಲಿರುವ ಇಂಥ ವಿಭಿನ್ನ ಪಂಥಗಳನ್ನು ಪೋಷಿಸುವುದು ಭಾರತೀಯ ರಾಜರ ರಾಜಧರ್ಮವಾಗಿತ್ತು. ಅಂದರೆ ರಾಜರು ಈ ಎಲ್ಲಾ ಪಂಥಗಳಿಗೂ ರಾಜರಾದ ಕಾರಣ ಅವರನ್ನು ಪೋಷಿಸುವುದು ಅವನ ಕರ್ತವ್ಯವಾಗಿತ್ತು.
ನಮ್ಮ ಸಂಪ್ರದಾಯಗಳು ಅನ್ಯ ಸಂಪ್ರದಾಯಗಳನ್ನು ಹೇಗೆ ನೋಡುತ್ತವೆ? ಒಂದು ರಿಲಿಜನ್ನು ಮತ್ತೊಂದನ್ನು ನೋಡಿದಂತೆ ಖಂಡಿತ ಅಲ್ಲ ಎಂಬುದಂತೂ ಸ್ಪಷ್ಟ. ನಮ್ಮಲ್ಲಿ ಅನ್ಯ ಪೂಜಾ ಪಂಥಗಳು ಹಾಗೂ ಸಂಪ್ರದಾಯಗಳ ಕುರಿತು ಒಂದು ಥರದ ನಿರ್ಲಿಪ್ತತೆ ಅಥವಾ ನಿರಾಸಕ್ತಿ ಇದೆ. ನಮ್ಮ ಪಕ್ಕದ ಮನೆಯವರು ಬೇರೆ ದೇವತೆಯನ್ನು ಪೂಜಿಸುತ್ತಾರೆ ಹಾಗೂ ಬೇರೆ ದೇವಾಲಯಕ್ಕೆ ಹೋಗುತ್ತಾರೆ ಎಂಬುದು ನಮ್ಮಲ್ಲಿ ಯಾವ ಆಸಕ್ತಿಯನ್ನ್ನೂ ಕೆರಳಿಸುವುದಿಲ್ಲ. ಒಮ್ಮೆ ಅದು ನಮ್ಮ ಆಸಕ್ತಿಯನ್ನು ಕೆರಳಿಸಿದರೆ ನಮ್ಮ ಪ್ರತಿಕ್ರಿಯೆ ಒಂದೇ: ಆ ದೇವತೆಗಳ ಪೂಜೆ ಹಾಗೂ ಅವುಗಳಿಗೆ ಸಂಬಂಧಿಸಿದ ಆಚರಣೆಗಳನ್ನು ನಾವೂ ಮಾಡಲು ತೊಡಗುತ್ತೇವೆ. ಅದರಲ್ಲಿ ಏನೂ ಇರುಸು ಮುರುಸುಗಳಿಲ್ಲ. ಹಿಂದೆ ಪೂಜಿಸುತ್ತಿದ್ದ ದೇವತೆಯನ್ನು ಅಷ್ಟೇ ಸಹಜವಾಗಿ ಮರೆತೂ ಬಿಡುತ್ತೇವೆ. ನಾವು ಪೂಜಿಸುವ ದೇವತೆಯನ್ನು ಪೂಜಿಸದವರೂ, ಟೀಕಿಸುವವರೂ ನಮ್ಮ ಮನೆಯಲ್ಲೇ ಇರುತ್ತಾರೆ. ಅವರೂ ಕೂಡ ನಮ್ಮ ಜೊತೆಗೇ ಗೌರವಯುತವಾಗಿಯೇ ಬದುಕುತ್ತಾರೆ.
ಭಾರತೀಯ ಸಂಪ್ರದಾಯಗಳಿಗೆ ಸೇರಿದವರು ಕ್ರೈಸ್ತ ಹಾಗೂ ಮುಸ್ಲಿಮರನ್ನೂ ಕೂಡ ತಮ್ಮಂಥದ್ದೇ ಒಂದು ಪೂಜಾ ಪಂಥಗಳೆಂಬುದಾಗಿ ಭಾವಿಸಿದ್ದಾರೆ. ಹಾಗಾಗಿಯೇ ಅವರ ಸಂಕೇತಗಳನ್ನೂ ತಮ್ಮ ದೇವತೆಗಳ ಜೊತೆಗೆ ಪೂಜಿಸುವುದು ಹಾಗೂ ರಾಮ, ಏಸು, ರಹೀಮ ಎಲ್ಲರನ್ನೂ ಸೇರಿಸಿ ಸ್ತುತಿಸುವುದು ಇವರಿಗೆ ಸಹಜ ಸಾಧ್ಯವಾಗುತ್ತದೆ. ಇದೇ ರೀತಿ ನಮ್ಮ ಭಾರತೀಯ ರಾಜರು ತಮ್ಮ ರಾಜ್ಯದಲ್ಲಿದ್ದ ಉಳಿದ ಪೂಜಾ ಪಂಥಗಳಿಗೆಲ್ಲ ದಾನ ನೀಡಿದಂತೆ ಮಸೀದಿ ಚರ್ಚುಗಳಿಗೂ ದಾನ ನೀಡಿದರು. ಇವಕ್ಕೆಲ್ಲ ಸಹಿಷ್ಣುತೆ ಎಂಬುದು ತಕ್ಕ ಶಬ್ದವಲ್ಲ. ನಾನು ಏನನ್ನು ಸೂಚಿಸುತ್ತಿದ್ದೇನೆನ್ನುವುದಕ್ಕೆ ಕರ್ನಾಟಕದ ಧರ್ಮಸ್ಥಳ ಕ್ಷೇತ್ರವೊಂದು ಒಳ್ಳೆಯ ಉದಾಹರಣೆ: ಅಲ್ಲಿ ಮುಖ್ಯ ದೇವತೆ ಶಿವ, ಅರ್ಚಕರು ವೈಷ್ಣವರು, ಧರ್ಮಾಧಿಕಾರಿಗಳು ಜೈನರು ಹಾಗೂ ಎಲ್ಲಾ ಹಿನ್ನೆಲೆಯವರೂ ಭಕ್ತಾದಿಗಳು. ಪ್ರಶ್ನೆಯೆಂದರೆ, ಇದೆಲ್ಲಾ ಸಹಿಷ್ಣುತೆಯಿಂದ ಸಾಧ್ಯವಾಗುವ ಮಾತೆ? ಸಹಿಷ್ಣುತೆ ಇಂಥ ಸಂಸ್ಕೃತಿಗೆ ಆದರ್ಶವಾಗಬೇಕೆ?