Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಕ್ರಿಯೆಯನ್ನು ಜರುಗಿಸುತ್ತಾ ಬದುಕನ್ನು ರೂಪಿಸಿಕೊಳ್ಳುವ ಕ್ರಮ

ಕ್ರಿಯೆಯನ್ನು ಜರುಗಿಸುತ್ತಾ ಬದುಕನ್ನು ರೂಪಿಸಿಕೊಳ್ಳುವ ಕ್ರಮ

by Rajaram Hegde
167 views

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಜ್ಞಾನ ಮತ್ತು ಕ್ರಿಯೆಗಳು ಬೇರೆ ಬೇರೆ. ಜ್ಞಾನವನ್ನಾಧರಿಸದ ಕ್ರಿಯೆ ಮೌಢ್ಯ. ಅಂದರೆ ಸರಿಯಾದ ಕ್ರಿಯೆ ಎಂಬುದು ಜ್ಞಾನದಿಂದ ಹುಟ್ಟುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನವು ಕ್ರಿಯೆಯಿಂದ ಹುಟ್ಟುತ್ತದೆ. ಕ್ರಿಯೆಯ ಮೂಲಕ ಈ ಜನರು ಪ್ರಪಂಚದ ಕುರಿತ ಜ್ಞಾನವನ್ನು ಪಡೆಯುತ್ತಾರೆ.

ನಮ್ಮ ಸಾಂಪ್ರದಾಯಿಕ ಆಚರಣೆಗಳು ವೈಚಾರಿಕ ಕಾರಣಗಳ ಆಧಾರದ ಮೇಲೆ ನಿಂತಿಲ್ಲ ಎಂಬುದಕ್ಕೆ ನನ್ನ ಹಿಂದಿನ ಕೆಲವು ಅಂಕಣಗಳಲ್ಲಿ ಕೆಲವು ದೃಷ್ಟಾಂತಗಳನ್ನು ಕೊಟ್ಟಿದ್ದೆ. ಸಂಪ್ರದಾಯವೆಂದರೆ ನಮ್ಮ ಹಿಂದಿನವರ ಆಚರಣೆಗಳನ್ನು ಅನುಕರಿಸಿ ಮುಂದುವರಿಸಿಕೊಂಡು ಹೋಗುವುದಷ್ಟೇ ಆಗಿದೆ. ಅಂಥ ಆಚರಣೆಗಳನ್ನು  ಪಾಶ್ಚಾತ್ಯ ಕಥೆಗಳ ಮೂಲಕ ನೋಡಿದಾಗ ಅವುಗಳ ಹಿಂದೆ ಇಲ್ಲದಿರುವ ಒಂದು ವೈಚಾರಿಕ ಪ್ರಪಂಚವು ಇದ್ದಂತೆ ಭಾಸವಾಗುತ್ತದೆ.  ಅಂದರೆ ಈ ಆಚರಣೆಗಳ ಹಿಂದೆ ನಿಯಮಗಳಿವೆ,  ಅವುಗಳನ್ನು ರಚಿಸಲು ಕಾರಣಗಳಿವೆ, ಅವುಗಳನ್ನು ಸಂಸ್ಕೃತ ಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ, ಇತ್ಯಾದಿ. ಆದರೆ ಇದುವರೆಗೆ ನಾವು ನೋಡಿದ ಪ್ರಕಾರ ನಮ್ಮ ದಿನನಿತ್ಯದ ಅನುಭವವು ಇಂಥ ಪ್ರತಿಪಾದನೆಗಳಿಗೆ ವಿರುದ್ಧವಾಗಿದೆಯಷ್ಟೇ ಅಲ್ಲ, ನಾವು ನಮಗೇ ಅರ್ಥವಾಗದ  ಶಬ್ದಗಳಿಂದ ಭಾಷಾಂತರಿಸಿಕೊಂಡು ಅದನ್ನು ಇನ್ನೂ ಅರ್ಥವಾಗದಂತೆ ಮಾಡಿಕೊಂಡಿದ್ದೇವೆ. 

          ನೀವು ನನ್ನನ್ನು ಕೇಳಬಹುದು: ’ಹಾಗಾದರೆ ಇಂಥ ಆಚರಣೆಗಳು ಅವೈಚಾರಿಕ ಎನ್ನುತ್ತೀರಾ? ಸಂಪ್ರದಾಯಗಳನ್ನು ಆಚರಿಸುವವರನ್ನು ಅಜ್ಞಾನಿಗಳು ಎನ್ನುತ್ತೀರಾ? ಇಂಥ ಪ್ರಶ್ನೆಗಳು ನಿಮ್ಮಲ್ಲಿ ಏಳುವುದು ಸ್ವಾಭಾವಿಕ. ಹಾಗಾಗಿಯೇ ನನ್ನ ವಿಚಾರವನ್ನು ಒಪ್ಪಿಕೊಳ್ಳಲು ನಿಮಗೆ ಕಷ್ಟವೂ ಆಗಬಹುದು. ಆದರೆ ನಾನು ಭಾರತೀಯರು ಅಜ್ಞಾನಿಗಳು ಎಂಬ ಹೇಳಿಕೆಯನ್ನು ಮಾಡುತ್ತಿಲ್ಲ. ಯಾವ ಆಚರಣೆಗಳ ಹಿಂದೆ ವೈಚಾರಿಕ ಕಾರಣಗಳು ಇಲ್ಲವೊ ಅವನ್ನು ವಿಚಾರರಹಿತ ಆಚರಣೆಗಳು ಎನ್ನಬಹುದು. ಆದರೆ ಆ ಕಾರಣಕ್ಕೆ ಅಂಥ ಆಚರಣೆಗಳನ್ನು ನಡೆಸುವವರನ್ನು ಅಜ್ಞಾನಿಗಳು ಎನ್ನುವುದು ಸಾಧ್ಯವಿಲ್ಲ. ಮನುಷ್ಯನ ಕ್ರಿಯೆಗೆ ವೈಚಾರಿಕ ಕಾರಣಗಳಿಲ್ಲದಿದ್ದರೆ ಅದು ಅಜ್ಞಾನವಾಗುತ್ತದೆ ಎಂಬುದು ಪಾಶ್ಚಾತ್ಯರ ನಂಬಿಕೆ. ಆದರೆ ಅದು ನಿರಾಧಾರವಾದ ನಂಬಿಕೆ ಎನ್ನುವುದು ನನ್ನ ವಾದ. ಭಾರತೀಯರ ಪ್ರಕಾರ ಕ್ರಿಯೆಯನ್ನು ಮಾಡುವುದೇ ನಿಜವಾದ ಜ್ಞಾನ. ಕ್ರಿಯೆಯಲ್ಲಿ ತೊಡಗಿಕೊಳ್ಳುವುದಕ್ಕೆ ಸಂಬಂಧಪಟ್ಟಂತೆ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಭಾರತೀಯ ಸಂಸ್ಕೃತಿಗಳು ಬೇರೆ ಬೇರೆಯ  ಕ್ರಮಗಳನ್ನೇ ಹೊಂದಿವೆ. 

          ಪಾಶ್ಚಾತ್ಯರ ಚಿಂತನೆಯ ಪ್ರಕಾರ ನಾವು ಮಾಡುವ ಯಾವುದೇ ಕ್ರಿಯೆಯು ಕುರಿತು ವಿವರಣೆಗಳಿದ್ದರೆ ಮಾತ್ರವೇ ಅದು ಸರಿಯಾದ ಕ್ರಿಯೆ. ಏಕೆ ಎಲ್ಲ ಶಿಶುಗಳಿಗೂ ಕಡ್ಡಾಯವಾಗಿ ಹಲವಾರು ಸೂಜಿಮದ್ದುಗಳನ್ನು ಚುಚ್ಚಿಸಬೇಕು? ಏಕೆ ಕ್ಯಾನ್ಸರ್ ರೋಗಿಗಳು ಕಿಮೋ ಥೆರಪಿಯ ದಾರುಣ ಹಿಂಸೆಗೆ ಒಳಗಾಗಬೇಕು? ಇತ್ಯಾದಿ ಕ್ರಿಯೆಗಳಿಗೆ ಸ್ಪಷ್ಟವಾದ ಕಾರಣಗಳನ್ನು ವೈದ್ಯಕೀಯ ಶಾಸ್ತ್ರದ ಸಿದ್ಧಾಂತಗಳ ಮೂಲಕ ವಿವರಿಸಬಹುದು, ಹಾಗಾಗಿ ಆ ಕ್ರಿಯೆಗಳು ಸಮರ್ಥನೀಯ. ಆದರೆ ನಮ್ಮ ಮನೆ ವೈದ್ಯರ ಪಥ್ಯವನ್ನೇ ತೆಗೆದುಕೊಳ್ಳಿ. ಬಾಣಂತಿಯರಿಗೆ ಏಕೆ ಕಾಳು ಮೆಣಸಿನ ಸಾರನ್ನು ನೀಡಬೇಕು, ಕಂಬಳಿಯಲ್ಲಿ ಮುಚ್ಚಿ ಬೆವರಿಸಬೇಕು ಎಂಬುದಕ್ಕೆ ಒಂದು ವಿವರಣೆಯಿಲ್ಲ. ವೈದ್ಯಕೀಯ ಸಿದ್ಧಾಂತವನ್ನಿಟ್ಟುಕೊಂಡು ಅದು ನಿರಾಧಾರ, ಅದರಿಂದ ದುಷ್ಪರಿಣಾಮವಾಗುತ್ತದೆ ಎಂಬುದಾಗಿ ವಾದಿಸಿದರೆ ಅದು ಮೌಢ್ಯ, ಅಮಾನವೀಯ ಆಚರಣೆ ಎಂದುಕೊಳ್ಳುತ್ತೇವೆ. ಆದರೆ ಅದಕ್ಕೇ ವೈಜ್ಞಾನಿಕ ಕಾರಣವನ್ನು ಯಾವುದದರೂ ವಿಜ್ಞಾನಿ ಕಂಡುಹಿಡಿದಾಗ ಅದೇ ಆಚರಣೆ ಒಳ್ಳೆಯದೆಂದು ಭಾವಿಸುತ್ತೇವೆ.  ಅಂದರೆ ಕ್ರಿಯೆಯ ಆಚರಣೆ ಹಾಗೂ ಅದರ ಪರಿಣಾಮಗಳೆರಡೂ ಅದರ ಕುರಿತ ಸೈದ್ಧಾಂತಿಕ ಜ್ಞಾನದಿಂದ ಸಕ್ರಮಗೊಳ್ಳುತ್ತವೆ ಎಂಬುದು ಇದರ ಹಿಂದಿನ ನಂಬಿಕೆ.

          ಹಾಗಾಗಿ ಪಾಶ್ಚಾತ್ಯ ಚಿಂತನೆಯ ಪ್ರಕಾರ ಕ್ರಿಯೆಯ ಕುರಿತು ತಿಳಿದುಕೊಂಡವನೇ ನಿಜವಾದ ಜ್ಞಾನಿ, ಕ್ರಿಯೆಯ ಕುರಿತು ತಿಳಿಯುವುದೆಂದರೆ ನೀವು ಆ ಕುರಿತು ಸೈದ್ಧಾಂತಿಕ ವಿವರಣೆಯೊಂದನ್ನು ನಂಬಬೇಕಾಗುತ್ತದೆ. ಅದು ರಿಲಿಜನ್ನಿನ ಹೇಳಿಕೆ ಆಗಬಹುದು ಇಲ್ಲ ವೈಜ್ಞಾನಿಕ ಸಿದ್ಧಾಂತವೇ ಇರಬಹುದು. ಆ ಸಿದ್ಧಾಂತವನ್ನು ಇಟ್ಟುಕೊಂಡು ನಿಮ್ಮ ಕ್ರಿಯೆ ರೂಪುಗೊಳ್ಳಬೇಕು. ಒಟ್ಟಿನಲ್ಲಿ ನಿಮ್ಮ ಕ್ರಿಯೆ ಈ ಪ್ರಪಂಚದ ಕುರಿತಾದ ಸತ್ಯವನ್ನು ಆಧರಿಸಿರಬೇಕು. ಈ ರೀತಿಯಾಗಿ ಆಚರಣೆಗಳ ಹಿಂದೆ ವೈಚಾರಿಕ ಕಾರಣಗಳಿರಬೇಕು ಎಂಬ ನಿಲುವು ಏನನ್ನು ಸೂಚಿಸುತ್ತದೆ? ಕ್ರಿಯೆಯು ತನ್ನಷ್ಟಕ್ಕೇ ಅಜ್ಞಾನ, ಹಾಗೂ ಅದು ತನ್ನಿಂದ ಹೊರಗಿರುವ ಒಂದು ಜ್ಞಾನವನ್ನು ಆಧರಿಸಿ ಇದ್ದರೇ ಸರಿ ಎಂಬ ನಂಬಿಕೆಯನ್ನು ಸೂಚಿಸುತ್ತದೆ. ಅಂದರೆ ಈ ಕ್ರಿಯೆಗಳ ಜೊತೆಗೆ ನಿಮಗೆ ಅವುಗಳನ್ನು ಏಕೆ ಮಾಡಬೇಕು ಎಂಬ ಕುರಿತು ಒಂದು ವಿವರಣೆ ಪ್ರತ್ಯೇಕವಾಗಿ ಇರಬೇಕು. ಹೀಗೆ ಕ್ರಿಯೆಯನ್ನು ಜ್ಞಾನದಿಂದ ಬೇರ್ಪಡಿಸಿ, ಕ್ರಿಯೆಯು ಜ್ಞಾನವನ್ನು ಅವಲಂಬಿಸಿ ಇರಬೇಕು, ಜ್ಞಾನದ ತಳಹದಿಯಿಲ್ಲದ ಕ್ರಿಯೆಯು ಅಜ್ಞಾನ ಎಂಬ ನಿಲುವು ಪಾಶ್ಚಾತ್ಯ ಸಂಸ್ಕೃತಿಗೆ ವಿಶಿಷ್ಟವಾದದ್ದು.

          ಪಾಶ್ಚಾತ್ಯರ ಪ್ರಕಾರ ನೀವು ಪ್ರಪಂಚದಲ್ಲಿ ಯಾವ ಕ್ರಿಯೆಯಲ್ಲಾದರೂ ತೊಡಗಿಸಿಕೊಳ್ಳಬೇಕಾದರೆ ಅದರ ಕುರಿತು ಮೊದಲು ಜ್ಞಾನವನ್ನು ಸಂಗ್ರಹಿಸುವುದು ಸರಿಯಾದ ಕ್ರಮ. ನಿಮಗೆ ಯಾವುದೋ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎನ್ನಿ. ಆಗ ಅದರ ಕುರಿತು ಬರವಣಿಗೆಗಳನ್ನು ಸಂಗ್ರಹಿಸಿ ತಿಳುವಳಿಕೆ ಬೆಳೆಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದಲ್ಲಿ ಮುಂದೇನು ಮಾಡಬೇಕೆಂಬುದು ಗೊತ್ತಾಗುವುದಿಲ್ಲ. ಹಾಗಾಗಿ ಅವರು ಕ್ರಿಯೆಯನ್ನು ಜರುಗಿಸುವ ಕ್ರಮದಲ್ಲಿ ಸೈದ್ಧಾಂತಿಕ ತಿಳುವಳಿಕೆ ಮೊದಲು ಬರಬೇಕು. ಉದಾಹರಣೆಗೆ ಪಾಶ್ಚಾತ್ಯ ಸ್ತ್ರೀಯೊಬ್ಬಳು ಗರ್ಭಿಣಿಯಾದಾಗ ಅದರ ಬೇರೆ ಬೇರೆ ಅವಸ್ಥೆಗಳು ಹೇಗೆ, ಏಕೆ? ಇತ್ಯಾದಿ ತಿಳುವಳಿಕೆಯನ್ನು ಮುಂಚಿತವಾಗಿ ಪುಸ್ತಕಗಳಿಂದ ಸಂಗ್ರಹಿಸಲು ತೊಡಗುತ್ತಾಳೆ.  ಮುಂದೆ ತಾನು ಗರ್ಭಿಣಿಯಾಗಿ ಯಾವ ಯಾವ ಕ್ರಿಯೆಗಳನ್ನು ಹೇಗೆ ಹೇಗೆ ಮಾಡಬೇಕು ಎಂಬುದು ಅವಳಿಗೆ ತಿಳಿಯಬೇಕಾದರೆ ಇದು ಅವಳಿಗೆ ತೆರೆದಿರುವ ಏಕೈಕ ಮಾರ್ಗ.  ಪ್ರಪಂಚದಲ್ಲಿ ಯಾವ ಕ್ರಿಯೆಯನ್ನು ಜರುಗಿಸಿದರೆ ಒಳ್ಳೆಯದು ಎಂಬುದನ್ನು ಗೊತ್ತುಮಾಡಿಕೊಳ್ಳಲಿಕ್ಕೆ ಈ ಕ್ರಮವೇ ಸರಿಯಾದದ್ದು ಎಂಬುದು ಅವರ ನಂಬಿಕೆ. ಹಾಗಾಗಿ ಇಂಥ ತಿಳುವಳಿಕೆಯನ್ನೇ ಆಧರಿಸದ ಕ್ರಿಯೆಗಳು ಅಜ್ಞಾನ ಹಾಗಾಗಿ ಸಮರ್ಥನೀಯವಲ್ಲ ಅನಿಸುತ್ತವೆ.

          ಇದು ಒಂದು ಸಂಸ್ಕೃತಿಯ ನಂಬಿಕೆ ಅಷ್ಟೆ. ಇದನ್ನು ಪಾಶ್ಚಾತ್ಯರ ಕ್ರಮ ಎನ್ನೋಣ. ಆದರೆ ಪ್ರಾಪಂಚಿಕ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಇದೊಂದೇ ಕ್ರಮ ನಮಗೆ ಲಭ್ಯವಿದೆ ಎಂದಾಗಲೀ, ಅದೊಂದೇ ಸರಿಯಾದ ಕ್ರಮ ಎಂದಾಗಲೀ ನಂಬಲಿಕ್ಕೆ ನಮಗೆ ಸೂಕ್ತ ಸಮರ್ಥನೆಗಳಿಲ್ಲ. ಉದಾಹರಣೆಗೆ, ಕೆಲವು ಕ್ರಿಯೆಗಳನ್ನು ಪುನಃ ಪುನಃ ಮಾಡುತ್ತಾ ಮುಂದೆ ಏನು ಮಾಡಿದರೆ ಒಳ್ಳೆಯದೆಂಬುದನ್ನು  ಅನುಭವದಲ್ಲಿ ಕಂಡುಕೊಳ್ಳಲು ಸಾಧ್ಯ. ಇದುವರೆಗೆ ಜರುಗಿಸಿದ ಕ್ರಿಯೆಯೇ ನಾವು ಮುಂದೇನು ಮಾಡಬೇಕೆಂಬುದನ್ನು ನಿರ್ದೇಶಿಸುತ್ತ ಹೋಗುತ್ತದೆ. ತಲೆಮಾರುಗಳ ಇಂಥ ತಿಳುವಳಿಕೆಯನ್ನಾಧರಿಸಿ ಹಿರಿಯರು ಕಿರಿಯರಿಗೆ ಕ್ರಿಯೆಗಳನ್ನು ಕಲಿಸುತ್ತಾರೆ. ಆದರೆ ಅದಕ್ಕೊಂದು ಸೈದ್ಧಾಂತಿಕ ವಿವರಣೆ ಇಲ್ಲ ಎಂಬ ಕಾರಣಕ್ಕೇ ಆ ಕ್ರಿಯೆಯನ್ನು ಮಾಡಬಾರದೆಂದರೆ ಸರಿಯೆ? ಕ್ರಿಯೆಯ ಕುರಿತ ಸಿದ್ಧಾಂತಗಳನ್ನು ತಿಳಿದುಕೊಳ್ಳುವುದು ಕ್ರಿಯೆಯನ್ನು ಜರುಗಿಸುವುದಕ್ಕೆ ಎಷ್ಟು  ಅನಿವಾರ್ಯ? ಕ್ರಿಯೆಯನ್ನು ಆಚರಿಸುವುದರ ಮೂಲಕ ಆ ಕ್ರಿಯೆಯ ಪರಿಣಾಮವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಿರುವಾಗ ಅದಕ್ಕೆ ಹೆಚ್ಚುವರಿಯಾಗಿ ಒಂದು ಕಾರಣ ವಿವರಣೆಯನ್ನು ಕೊಟ್ಟುಕೊಳ್ಳುವದರ ಕುರಿತು ಕೆಲವು ಸಂಸ್ಕೃತಿಗಳಿಗೆ ಆಸಕ್ತಿ ಇಲ್ಲದಿರಬಹುದು.

          ಭಾರತೀಯ ಚಿಂತನೆಯ ಪ್ರಕಾರ ಕ್ರಿಯೆಯ ಕುರಿತು ಓದಿ ತಿಳಿದುಕೊಳ್ಳುವುದಕ್ಕಿಂತ ಕ್ರಿಯೆಯನ್ನು ಮಾಡುವುದೇ ನಿಜವಾದ ಜ್ಞಾನ. ಪಾಂಡಿತ್ಯವೇ ಬೇರೆ, ಜ್ಞಾನವೇ ಬೇರೆ. ಪಾಂಡಿತ್ಯಕ್ಕೆ ನಮ್ಮ ಸಂಸ್ಕೃತಿಯು ಆತ್ಯಂತಿಕ ಮಹತ್ವವನ್ನು ನೀಡಿಲ್ಲ. ’ಓದಿ ಓದಿ ಮರುಳಾದ ಕೂಚುಭಟ್ಟ’ ಎಂಬಂಥ ಹೇಳಿಕೆಗಳಿವೆ. ಶಂಕರಾಚಾರ್ಯರ ಭಜಗೋವಿಂದಂ ಕೃತಿಯಲ್ಲಿ ’ಮರಣವು ಸನ್ನಿಹಿತವಾಗಿರುವಾಗ ಡುಕೃಂಕರಣವು ರಕ್ಷಿಸಲಾರದು’ ಎಂಬ ಸಾಲಿದೆ. ಒಂದು ಜನಪ್ರಿಯ ಕಥೆಯಿದೆ: ಒಬ್ಬ ಪಂಡಿತನು ದೋಣಿ ದಾಟುತ್ತಿರುತ್ತಾನೆ. ಅವನು ಅಂಬಿಗನಿಗೆ ವೇದ ಶಾಸ್ತ್ರ, ಇತ್ಯಾದಿಗಳು ಗೊತ್ತೆ ಎಂಬುದಾಗಿ ವಿಚಾರಿಸುತ್ತ ಆತನ ಮುಕ್ಕಾಲು ಪಾಲು ಜೀವನವೇ ವ್ಯರ್ಥ ಎಂಬುದಾಗಿ ಛೇಡಿಸುತ್ತಿರುವಾಗ ದೋಣಿಯು ಹೊಯ್ದಾಡತೊಡಗುತ್ತದೆ. ಅಂಬಿಗನು ಪಂಡಿತನಿಗೆ ಈಜು ಬರುತ್ತದೆಯೆ ಎಂಬುದಾಗಿ ವಿಚಾರಿಸುತ್ತಾನೆ. ಆಗ ಪಂಡಿತನು ಇಲ್ಲ ಎನ್ನುತ್ತಾನೆ. ಆಗ ಅಂಬಿಗನು ’ಹಾಗಾದರೆ ಪಂಡಿತರೆ, ನಿಮ್ಮ ಇಡೀ ಜೀವನವು ವ್ಯರ್ಥ’ ಎನ್ನುತ್ತಿದ್ದಂತೆ ದೋಣಿ ಮುಳುಗುತ್ತದೆ. ಅಂಬಿಗ ಈಜಿ ದಡ ಸೇರುತ್ತಾನೆ, ಪಂಡಿತ ಮುಳುಗಿ ಸಾಯುತ್ತಾನೆ. ಇಂಥ ಹೇಳಿಕೆಗಳು ಹಾಗೂ ಕಥೆಗಳು ನಮ್ಮಲ್ಲಿ ಹೇರಳವಾಗಿವೆ.

          ಭಾರತೀಯ ವೈದ್ಯ ಪದ್ಧತಿಯಲ್ಲಿ ಅನೇಕ ರೋಗಗಳಿಗೆ ಪರಿಣಾಮಕಾರಿಯಾದ ಔಷಧವನ್ನೂ, ಚಿಕಿತ್ಸೆಯನ್ನೂ ಬೆಳೆಸಿಕೊಂಡು ಬರಲಾಗಿದೆ. ಆದರೆ ಆ ಜ್ಞಾನವು ಯಾವ ರೋಗಕ್ಕೆ ಯಾವ ಔಷಧ, ಚಿಕಿತ್ಸೆ ಎಂಬುದನ್ನು ತಿಳಿಸುತ್ತದೆಯೇ ವಿನಃ ಏಕೆ ಎಂಬ ವಿವರಣೆಯನ್ನು ನೀಡುವುದಿಲ್ಲ. ಏಕೆ ಇಂಥ ರೋಗಕ್ಕೆ ಇಂಥ ಔಷಧವನ್ನೇ ಬಳಸಬೇಕು ಎಂಬುದನ್ನು ಪೂರ್ವಯೋಜಿತವಾಗಿ ಸೈದ್ಧಾಂತಿಕ ಜ್ಞಾನವನ್ನು ಬೆಳೆಸಿಕೊಂಡು ಚಿಕಿತ್ಸೆಯನ್ನು ರೂಪಿಸಲಾಗಿಲ್ಲ. ಆದರೆ ಇಂತಿಂಥ ವಸ್ತುಗಳಿಗೆ ಇಂತಿಂಥ ಔಷಧೀಯ ಪರಿಣಾಮಗಳು ಇವೆ ಎಂಬುದನ್ನು ಕ್ರಿಯೆಯ ಮೂಲಕ ಕಂಡುಕೊಂಡು ಅವುಗಳನ್ನು ಬೆಳೆಸಲಾಗಿದೆ.

          ಹಾಗಂತ ಭಾರತೀಯರು ತಮ್ಮ ಕ್ರಿಯೆಗಳ ಕುರಿತು ಚಿಂತನೆಯನ್ನು, ಜಿಜ್ಞಾಸೆಯನ್ನು ಬೆಳೆಸೇ ಇಲ್ಲ, ಅದಕ್ಕೆ ಮಹತ್ವವನ್ನೇ ನೀಡಿಲ್ಲ ಎಂದು ಅರ್ಥವಲ್ಲ. ನಮ್ಮಲ್ಲಿ ಕ್ರಿಯೆಯ ಕುರಿತು ಆಲೋಚಿಸುವ ಹಾಗೂ ಸಿದ್ಧಾಂತಗಳನ್ನು ಬೆಳೆಸುವ ಕೆಲಸಕ್ಕೆ ಪ್ರಾಧಾನ್ಯತೆ ಖಂಡಿತವಾಗಿಯೂ ಇದೆ. ಕಳೆದ ಸಾವಿರಾರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಅಗಾಧವಾದ ಜ್ಞಾನವನ್ನು ಅವರು ಸೂತ್ರ, ಶಾಸ್ತ್ರ, ಭಾಷ್ಯ ಇತ್ಯಾದಿಗಳ ಮೂಲಕ ಬೆಳೆಸಿಕೊಂಡು ಬಂದಿದ್ದಾರೆ. ಅದು ಕಾವ್ಯ, ನಾಟ್ಯ, ವೈದ್ಯ, ಜ್ಯೋತಿಷ, ಗಣಿತ, ವಾಸ್ತು, ಸಂಗೀತ ಇತ್ಯಾದಿ ಕೌಶಲ್ಯಗಳಿರಬಹುದು, ಅಧ್ಯಾತ್ಮದ ಕುರಿತ ಸಿದ್ಧಾಂತಗಳೇ ಇರಬಹುದು. ಆದರೆ ಅವುಗಳಲ್ಲಿ ಯಾವುದರ ಕುರಿತೂ ಪಾಂಡಿತ್ಯವನ್ನು ಬೆಳೆಸಿಕೊಳ್ಳುವ ಮಾತ್ರದಿಂದಲೇ ಸಂಬಂಧಪಟ್ಟ ವಿದ್ಯೆಯು ಸಿಕ್ಕಿಬಿಡುತ್ತದೆ ಎಂಬುದಾಗಿ ಅವು ಎಲ್ಲೂ ಹೇಳುವುದಿಲ್ಲ, ಅವುಗಳನ್ನು ಓದುವವರೂ ಹಾಗೆ ಭಾವಿಸುವುದಿಲ್ಲ. ಅಂಥ ವಿದ್ಯೆಗಳನ್ನು ಪ್ರಾಯೋಗಿಕವಾಗಿ ಕಲಿಸುವ ಗುರುವಿನಿಂದಲೇ ಸಾಧಿಸಿಕೊಳ್ಳಬೇಕಾಗುತ್ತದೆ. ಹಾಗೆ ಗುರುವಿನಿಂದ ಕಲಿತವನೇ ತನ್ನ ಕ್ಷೇತ್ರದಲ್ಲಿ ನಿಜವಾದ ಜ್ಞಾನಿಯಾಗುತ್ತಾನೆ ಹಾಗೂ ತನ್ನ ಕ್ಷೇತ್ರದಲ್ಲಿ ಹೊಸ ಕ್ಷಿತಿಜವನ್ನು ತೆರೆಯಬಲ್ಲವನಾಗುತ್ತಾನೆ.

          ನಮ್ಮ ಸಂಸ್ಕೃತಿಯಲ್ಲಿ  ಭಾಷೆ, ಸಂಗೀತ, ನಾಟ್ಯ, ಕುಶಲಕರ್ಮ, ಇತ್ಯಾದಿ ಸಾಂಪ್ರದಾಯಿಕ ವಿದ್ಯೆಗಳೆಲ್ಲವನ್ನೂ ಗುರುವನ್ನು ಅನುಕರಿಸುವುದರ ಮೂಲಕವೇ ಕಲಿಯಲಾಗುತ್ತದೆ ಎಂಬುದನ್ನು ಗಮನಿಸಿ. ಹಾಗಾಗಿ ಈ ಕಲಿಕೆಗೆ ಗುರು ಅನಿವಾರ್ಯ, ಪಠ್ಯವು ಅನಿವಾರ್ಯವಲ್ಲ. ನಮ್ಮ ಸಂಸ್ಕೃತಿಯಲ್ಲಿ ವಿದ್ಯಾವಂತನಾಗಲಿಕ್ಕೆ ಅಕ್ಷರದ, ಪಠ್ಯಗಳ ಹಂಗಿಲ್ಲ ಎಂದರೂ ತಪ್ಪಲ್ಲ. ಅಕ್ಷರ, ಪಠ್ಯಗಳ ಜ್ಞಾನವು ವಿದ್ಯೆಗೆ ಮಾನದಂಡ ಎಂಬುದು ರಿಲಿಜನ್ನುಗಳು ಸೃಷ್ಟಿಸಿದ ಸಂಸ್ಕೃತಿಗಳ ನಂಬಿಕೆಯೇ ಹೊರತೂ ನಮ್ಮ ಸಂಸ್ಕೃತಿಯ ಪ್ರತಿಪಾದನೆಯಲ್ಲ. ಏಕೆಂದರೆ ರಿಲಿಜನ್ನುಗಳು ಪವಿತ್ರ ಗ್ರಂಥ, ಅದರಲ್ಲಿರುವ ಡಾಕ್ಟ್ರಿನ್ನುಗಳು ಹಾಗೂ ಅವುಗಳ ಅರ್ಥನಿರೂಪಣೆಯನ್ನೇ ಆತ್ಯಂತಿಕವಾಗಿ ತಮ್ಮ ಜ್ಞಾನಕ್ಕೆ ಅವಲಂಬಿಸಿಕೊಂಡಿವೆ.

          ಅಂದರೆ ಕ್ರಿಯೆಯನ್ನು ಆಚರಿಸುವುದೇ ಒಂದು ಜ್ಞಾನ ಎಂಬುದನ್ನು ನಾವು ಅರಿಯಬೇಕಿದೆ. ಇದನ್ನೇ   ನಾನು ಕ್ರಿಯಾಜ್ಞಾನ ಎನ್ನುತ್ತೇನೆ. ಕ್ರಿಯಾಜ್ಞಾನವು ಅನುಭವದಿಂದ ಹುಟ್ಟುತ್ತದೆಯೇ ಹೊರತೂ ಸೈದ್ಧಾಂತಿಕ ವಿವರಣೆಯಿಂದಲ್ಲ.  ಪಾಶ್ಚಾತ್ಯರು ತಿಳಿಸುವ ವಿವರಣೆಗಳೇನಿವೆಯೊ ಅವು ಸೈದ್ಧಾಂತಿಕ ಜ್ಞಾನಕ್ಕೆ ಸಂಬಂಧಪಟ್ಟಿವೆ. ಅಂಥ ಜ್ಞಾನವನ್ನು ಹೊಂದದವರು ಅಜ್ಞಾನಿಗಳು ಎಂಬುದಾಗಿ ಪಾಶ್ಚಾತ್ಯರು ತಿಳಿದರು. ಏಕೆಂದರೆ ಅವರ ಪ್ರಕಾರ ಸೈದ್ಧಾಂತಿಕ ಜ್ಞಾನವು ಮಾತ್ರವೇ ನಿಜವಾದ ಜ್ಞಾನ. ಇದನ್ನು ನಂಬಿಕೊಂಡಿರುವುದರಿಂದ, ನಮ್ಮ ಆಚರಣೆಗಳಿಗೆ ಕಾರಣಗಳಿಲ್ಲ ಎಂಬುದಾಗಿ ಯಾರಾದರೂ ಹೇಳಿದರೆ ನಾವು ಅಜ್ಞಾನಿಗಳು ಎಂಬುದಾಗಿ ಹೇಳಿದಂತೆ ಕೇಳಿಸುತ್ತದೆ. ಹಾಗಾಗಿ ನಾವು ಇಂಥ ಆಚರಣೆಗಳಿಗೆ ನಮ್ಮದೇ ವೈಜ್ಞಾನಿಕ ಕಾರಣಗಳನ್ನು ಸೃಷ್ಟಿಸುವ ಕಸರತ್ತು ಮಾಡುತ್ತೇವೆ.   ನಮ್ಮ ಸಂಪ್ರದಾಯಗಳು ಮಾನವ ಸಮಾಜ ವಿಜ್ಞಾನಕ್ಕೆ ನಿಜವಾಗಿಯೂ ಏನನ್ನು ಕೊಡಬಲ್ಲವು ಎಂಬುದನ್ನು ತಿಳಿಯಬೇಕಾದರೆ ಕ್ರಿಯಾಜ್ಞಾನದ ಮಹತ್ವವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸುವುದೊಂದೇ  ಮಾರ್ಗವಾಗಿದೆ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp