Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ವಿಧಿ ಆಚರಣೆಗಳನ್ನು ಅರ್ಥೈಸುವುದು ಹೇಗೆ?

ವಿಧಿ ಆಚರಣೆಗಳನ್ನು ಅರ್ಥೈಸುವುದು ಹೇಗೆ?

by Rajaram Hegde
78 views

ಭಾರತೀಯ ಧಾರ್ಮಿಕ ವಿಧಿ ಆಚರಣೆಗಳನ್ನು ರಿಚ್ಯುವಲ್ ಎಂದು ಗುರುತಿಸಿ, ಅದು ಹಿಂದೂಯಿಸಂನ ಲಕ್ಷಣ ಎಂದು ಪಾಶ್ಚಾತ್ಯರು ವರ್ಣಿಸಿದರು. ಅವುಗಳಿಗೆ ಅರ್ಥ ಹುಡುಕುವ ಪ್ರಯತ್ನ ಮಾಡಿದರು. ಆದರೆ ಅವುಗಳ ಮಹತ್ವವನ್ನು ಅರಿಯಲು ಮನುಷ್ಯ ಸಂಸ್ಕೃತಿಗಳಲ್ಲಿ ಅರ್ಥವಿಲ್ಲದ ಆಚರಣೆಗಳ ಪಾತ್ರವೇನು ಎಂಬುದನ್ನು ವಿವರಿಸುವ ಸವಾಲು ಇದೆ. ಈ ಸವಾಲನ್ನು ಗುರುತಿಸಲು ಅಸಮರ್ಥರಾದ ವಿದ್ವಾಂಸರು ಅವು ಭಾರತೀಯ ಸಂಸ್ಕೃತಿಯ ಹಿಂದುಳಿದಿರುವಿಕೆಗೆ ಸಾಕ್ಷಿಯಾಗಿವೆ ಎಂದು ಹೇಳುತ್ತಾರೆ.

ಇಂಗ್ಲೀಷಿನ ರಿಚ್ಯುವಲ್ ಎಂಬ ಶಬ್ದವನ್ನು ವಿಧಿ ಆಚರಣೆ ಎಂಬುದಾಗಿ ಇಲ್ಲಿ ಭಾಷಾಂತರಿಸಲಾಗಿದೆ. ಸಾಧಾರಣವಾಗಿ ಯಾಂತ್ರಿಕವಾದ ಹಾಗೂ ಮಾಡಿದ್ದನ್ನೇ ಮಾಡುವ ಕ್ರಿಯೆಗಳನ್ನು ರಿಚ್ಯುವಲ್ ಎಂಬರ್ಥದಲ್ಲಿ ಬಳಸಲಾಗುತ್ತದೆ. ’ಹಾಗೆ ಮಾಡದೇ ಬೇರೆ ವಿಧಿ ಇರಲಿಲ್ಲ’ ’ವಿಧಿಪೂರ್ವಕವಾಗಿ/ವಿದ್ಯುಕ್ತವಾಗಿ ನೆರವೇರಿತು’ ಎಂಬಂಥ ಪದಗುಚ್ಛಗಳು ನಮಗೆಲ್ಲ ಅಭ್ಯಾಸವಾಗಿವೆ. ಈ ಹೇಳಿಕೆಗಳಲ್ಲಿ ಬರುವ ವಿಧಿ ನಮ್ಮ ಧಾರ್ಮಿಕ ವಿಧಿಗಳನ್ನೇ ಮೂಲತಃ ಉದ್ದೇಶಿಸಿದೆ. ವಿಧಿ ಅಂದರೆ ಮಾಡಬೇಕಾದ ಕ್ರಮ. ಧಾರ್ಮಿಕ ವಿಧಿಗಳನ್ನು ಆಚರಿಸುವಾಗ ನಮ್ಮ ಪೂರ್ವಜರ ಆಚರಣೆಗಳನ್ನು ನಾವು ಅನುಸರಿಸುತ್ತಿರುತ್ತೇವೆ. ಇದೊಂದು ಶುದ್ಧ ಕ್ರಿಯಾಜ್ಞಾನವಾಗಿದೆ. ಅಂದರೆ ಮಾಡಿಸುವವರಿಲ್ಲದೆ, ಕ್ರಿಯೆಯನ್ನು ನೋಡಿ ಅನುಕರಿಸದೇ ಇದು ದಾಟಿ ಬರುವುದಿಲ್ಲ. ಅವುಗಳಲ್ಲಿ ಯಾವ ಕ್ರಮದಲ್ಲಿ ಹೇಗೆ ಕ್ರಿಯೆಗಳನ್ನು ಜರುಗಿಸಬೇಕೆಂಬ ನಿರ್ದೇಶನಗಳಿರುತ್ತವೆಯೇ ವಿನಃ ಅವುಗಳನ್ನು ಯಾಕಾಗಿ ಮಾಡಬೇಕೆಂಬ ವಿವರಣೆಗಳಿರುವುದಿಲ್ಲ. ಅದೇ ರೀತಿ, ಅವುಗಳನ್ನು ಆಚರಿಸುವವರೂ ಕೂಡ ಕ್ರಿಯೆಗಳನ್ನು ಜರುಗಿಸುವುದನ್ನು ಕಲಿಯುತ್ತಾರೆಯೇ ವಿನಃ ಅವುಗಳ ಕಾರಣ ಅಥವಾ ಉದ್ದೇಶಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ವಿಶೇಷ ಸಂದರ್ಭದಲ್ಲಿ ಈ ಕ್ರಿಯೆಗಳನ್ನು ಹೇಳಿದ ಕ್ರಮದಲ್ಲಿ ಆಚರಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದೋ, ಒಳ್ಳೆಯದಾಗುತ್ತದೆ ಎಂದೋ ನಂಬಿರುತ್ತಾರೆಯಾದರೂ, ಸಾಧಾರಣವಾಗಿ ರೂಢಿಗತ ಆಚರಣೆಗಳನ್ನು ಹಿಂದಿನವರು ಹೇಳಿಕೊಟ್ಟದ್ದಾರೆ ಎಂಬ ಕಾರಣಕ್ಕೇ ನಡೆಸುತ್ತಿರುತ್ತಾರೆ. ಇಂಥ ಆಚರಣೆಗಳಿಗೆ ಕಾರಣಗಳನ್ನು ಕೇಳಿದರೆ ವೈವಿದ್ಯಪೂರ್ಣವಾದ ಕಥೆಗಳನ್ನು ಹಾಗೂ ಪುರಾಣಗಳನ್ನು ಹೇಳುತ್ತಾರೆ. ಒಂದೇ ಆಚರಣೆಗೆ ಅನೇಕ ಕಥೆಗಳು ಇರುತ್ತವೆ. ಅದಕ್ಕೂ ವಿಶೇಷವೆಂದರೆ ಅವುಗಳನ್ನು ಆಚರಿಸುವವರು ಒಂದಿಲ್ಲೊಂದು ಸಂದರ್ಭದಲ್ಲಿ ಇಂಥ ಆಚರಣೆಗಳನ್ನು ಟೀಕಿಸುತ್ತಲೇ ಇದ್ದರೂ ಆಚರಿಸುವುದನ್ನು ಬಿಡುವುದಿಲ್ಲ.

          ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನವನ್ನು ನಡೆಸಿದ ಪಾಶ್ಚಾತ್ಯರಿಗೆ  ವಿಧಿ ಆಚರಣೆಗಳ ಕುರಿತು ಅವರದೇ ಆದ ಗ್ರಹಿಕೆಗಳಿದ್ದವು.   ಮನುಷ್ಯ ಕ್ರಿಯೆಗಳನ್ನು ವಿಚಾರಗಳು ಹಾಗೂ ಉದ್ದೇಶಗಳು ನಿರ್ದೇಶಿಸಬೇಕು ಎಂಬ ನಂಬಿಕೆಯ ಮೇಲೆ ಇಂಥ ಗ್ರಹಿಕೆಗಳು ನಿಂತಿದ್ದವು. ಕ್ರೈಸ್ತರು ಇಂಥ ವಿಧಿ ಆಚರಣೆಗಳು ನಂಬಿಕೆಯ ಅಥವಾ ಪವಿತ್ರಗ್ರಂಥದ ತಳಹದಿಯ ಮೇಲೆ ನಿಂತಿಲ್ಲ ಎಂಬ ಕಾರಣಕ್ಕಾಗಿ ಅವನ್ನು ತ್ಯಾಜ್ಯವೆಂದು ಪರಿಗಣಿಸಿದ್ದರು. ಹಾಗಾಗಿ ರಿಲಿಜನ್ನಿಲ್ಲದ ಸಂಸ್ಕೃತಿಗಳಲ್ಲಿನ ವಿಧಿ ಆಚರಣೆಗಳಿಗೆ ಹೋಲಿಸಬಹುದಾದ ಆಚರಣೆಗಳು ಕ್ರಿಶ್ಚಿಯನ್ ಚರ್ಚಿನಲ್ಲಿ ಕಂಡುಬರುವುದಿಲ್ಲ. ಸೆಕ್ಯುಲರ್ ವಿಚಾರವಂತರು ಗಾಡ್‌ನ ಬದಲು ವೈಚಾರಿಕತೆಯನ್ನು ಪ್ರತಿಷ್ಠಾಪಿಸಿ ಉದ್ದೇಶಪೂರ್ಣ ಕ್ರಿಯೆಗಳಿಗೆ ಒಂದು ಪವಿತ್ರ ಸ್ಥಾನವನ್ನು ನೀಡಿದರು. ಅವೈಚಾರಿಕ ಕ್ರಿಯೆಗಳು ಮನುಷ್ಯರ ಉದ್ಧಾರಕ್ಕೆ ಅಡ್ಡಿಯಾಗುತ್ತವೆ ಎಂಬುದಾಗಿ ಈ ನಂಬಿಕೆಯನ್ನು ರೂಪಾಂತರಿಸಿದರು. ಒಟ್ಟಾರೆಯಾಗಿ ಪಾಶ್ಚಾತ್ಯ ಚಿಂತಕರಿಗೆ ವಿಧಿ ಆಚರಣೆಗಳು ಅವೈಚಾರಿಕವಾಗಿರುವುದರಿಂದಲೇ ಅನಾರೋಗ್ಯಕರವಾಗಿ ಕಾಣಿಸಿದವು.

          ಮನುಷ್ಯ ಕ್ರಿಯೆಗಳ ಹಿಂದೆ ಉದ್ದೇಶ ಹಾಗೂ ಕಾರಣಗಳು ಇರಲೇಬೇಕೆಂದು ಪಾಶ್ಚಾತ್ಯ ವಿದ್ವಾಂಸರು ನಂಬಿದ್ದರು. ಅವರು ಭಾರತದಲ್ಲಿ ಯಜ್ಞ ಯಾಗಾದಿಗಳನ್ನು ನೋಡಿದಾಗ ಅವುಗಳನ್ನು ಯಾವುದೋ ನಿರ್ದಿಷ್ಟ ಕಾರಣದಿಂದ ಹಿಂದೂಯಿಸಂನಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಭಾವಿಸಿದರು. ಆಗ ಒಂದು ಸಮಸ್ಯೆ ಎದುರಾಯಿತು: ಅದೆಂದರೆ ಹಿಂದೂಯಿಸಂ ಜೊತೆಗೆ ಅವುಗಳ ಸಂಬಂಧವನ್ನು ತಿಳಿಯುವುದು ಹಾಗೂ ಆ ಮೂಲಕ ಹಿಂದೂಗಳ ವಿಧಿ ಆಚರಣೆಗಳ ಹಿಂದಿನ ಉದ್ದೇಶಗಳನ್ನು ಗೊತ್ತುಮಾಡಿಕೊಳ್ಳುವುದು. ಆ ಸಂಬಂಧವನ್ನು ಕಂಡುಹಿಡಿಯುವ ಕೆಲಸ ಕೂಡ ಮರೀಚಿಕೆಯೇ ಆಯಿತು. ಅವುಗಳನ್ನು ಈಗ ಆಚರಿಸುವವರು ಕೂಡ ಇದಕ್ಕೊಂದು ಅಸಂದಿಗ್ಧವಾದ ಉತ್ತರವನ್ನು ನೀಡಲು ವಿಫಲರಾದರು.

          ಆಗ ಮೇಲ್ನೋಟಕ್ಕೆ ಅಸಂಬದ್ಧವಾದ ಈ ಆಚರಣೆಗಳು ಗೂಢವಾದ ಸಂಕೇತಾರ್ಥವನ್ನು ಹೊಂದಿವೆ ಎಂಬುದಾಗಿಯೂ ತರ್ಕಿಸಿ ವಿವರಣೆಗಳನ್ನು ಬೆಳೆಸಿದರು. ಈ ನಿಟ್ಟಿನಲ್ಲಿ ಈ ಆಚರಣೆಗಳಲ್ಲಿ ಪಠಿಸಲಾಗುವ ಮಂತ್ರಗಳ ಅರ್ಥವನ್ನು ಹಾಗೂ ಪುರಾಣ/ಜಾನಪದವನ್ನು ಅಧ್ಯಯನ ಮಾಡಿ ಈ ಆಚರಣೆಗಳ ಸಂಕೇತಗಳನ್ನು ವಿವರಿಸುವ ಪ್ರಯತ್ನವೂ ನಡೆಯಿತು. ನಮ್ಮ ಪ್ರಾಚೀನ ಯಜ್ಞ ಯಾಗಾದಿಗಳಿಗೆ ಸಂಬಂಧಿಸಿದಂತೆ ಸಾಂಕೇತಿಕ ಅರ್ಥಗಳ ಮಹಾಪೂರವೇ ಹರಿಯಿತು. ಈ ಆಚರಣೆಗಳು ಹಿಂದೂಯಿಸಂನ ಒಂದು ಭಾಗವಾಗಿ ಅದರ ಉದ್ದೇಶಗಳನ್ನು ನೆರವೇರಿಸಿದ್ದೇ ಹೌದಾದಲ್ಲಿ  ಹಿಂದೂಗಳ ಬೋಧನೆಯಾದ ವರ್ಣ ವ್ಯವಸ್ಥೆಯ ಐಡಿಯಾಲಜಿಯನ್ನು ಅವು ಕಟ್ಟಿಕೊಡಲೇ ಬೇಕು ಎಂಬುದಾಗಿ ತರ್ಕಿಸಲಾಯಿತು. ಇನ್ನೂ ಕೆಲವರು ಹಿಂದೂಯಿಸಂನ ತೀರ ಅಮೂರ್ತವಾದ ವಿಶ್ವಕಲ್ಪನೆಯನ್ನು ಇವು ಹೇಗೆ ತಿಳಿಸುತ್ತವೆ ಎಂಬುದನ್ನು ವಿವರಿಸಲು ಪ್ರಯತ್ನಿಸಿದರು.

          ಭಾರತೀಯ ವಿಚಾರವಾದಿಗಳಲ್ಲಿ ವಿಧಿ ಆಚರಣೆಗಳ ಅರ್ಥ ಉದ್ದೇಶಗಳ ವ್ಯಾಖ್ಯಾನವು ಮತ್ತೂ ಒಂದು ಆಯಾಮವನ್ನು ಗಳಿಸಿಕೊಂಡಿದೆ. ಈ ವಿಧಿ ಆಚರಣೆಗಳು ಅಪಾಯಕರ ಎಂಬುದಾಗಿ ವಿಚಾರವಾದಿಗಳು ಅವುಗಳನ್ನು ಟೀಕಿಸತೊಡಗಿದರು. ಆದರೆ ಅವುಗಳಿಂದ ಏನು ಅಪಾಯವಿದೆ ಎಂಬುದು ಅವರಿಗೂ ಸ್ಪಷ್ಟವಿದ್ದಂತಿಲ್ಲ. ಕ್ರೈಸ್ತ ರಿಲಿಜನ್ನಿನಿಂದ ರೂಪುಗೊಂಡ ಸಂಸ್ಕೃತಿಯಲ್ಲಿ ಬೆಳೆದವರಿಗೆ ಅವುಗಳಿಂದ ಅಪಾಯವಿದೆ ಎನ್ನುವುದು ಸಹಜಜ್ಞಾನವಾದರೆ, ಸಾಂಪ್ರದಾಯಿಕ ಸಮಾಜದಲ್ಲಿ ಬೆಳೆದವರಿಗೆ ಅವು ಕೇವಲ ಶಬ್ದಗಳಾಗಿ ಮಾತ್ರ ಅರ್ಥವಾಗಬಹುದು. ಇಂಥ ವಿಧಿ ಆಚರಣೆಗಳು ಮೌಢ್ಯವನ್ನು, ಸಾಮಾಜಿಕ ತರತಮವನ್ನು ಪೋಷಿಸುತ್ತವೆ ಎಂಬ ವಿವರಣೆ ಅವರಿಂದ ಬರುತ್ತದೆಯಾದರೂ, ಅವನ್ನು ಹೇಗೆ ಪೋಷಿಸುತ್ತದೆ ಎಂಬುದನ್ನು ಇನ್ನೂ ವಿದ್ವಾಂಸರು ಸ್ಪಷ್ಟವಾಗಿ ಕಂಡುಹಿಡಿದು ಕೊಟ್ಟಿಲ್ಲ. ಕೆಲವು ಆಚರಣೆಗಳು ಆಚರಿಸುವವರಿಗೆ ಹಿಂಸಾದಾಯಕವಾಗಿವೆ ಎಂಬ ಕಾರಣಗಳೇನೋ ಅವರಿಗೆ ಸಿಗುತ್ತವೆ. ಆದರೆ ಇನ್ನುಳಿದ ಬಹಳಷ್ಟು ಆಚರಣೆಗಳಲ್ಲಿ ಹಿಂಸೆ ಇರುವುದಿಲ್ಲ. ಆಗ ಬೇರೇನೋ ಕಾರಣವನ್ನು ಹುಡುಕುತ್ತಾರೆ. ಅವಮಾನ, ತರತಮ ಇತ್ಯಾದಿ. ಹೋಮ-ಹವನಗಳಿಗೆ ಸಂಬಂಧಿಸಿದಂತೆ ಬೆಂಕಿಗೆ ಡಬ್ಬಗಟ್ಟಳೆ ತುಪ್ಪವನ್ನು ಸುರಿದು ಹಾಳು ಮಾಡುತ್ತಾರೆ, ಅದನ್ನೇ ಬಡವರಿಗೆ ಕೊಡಬಹುದಿತ್ತು, ಎಂಬುದೇ ಮುಖ್ಯ ತಗಾದೆಯಾಗಿದೆ. ಹೀಗೆ ಇಂಥ ಆಚರಣೆಗಳನ್ನು ಒಟ್ಟಾರೆಯಾಗಿ ನಕಾರಾತ್ಮಕವಾಗಿ ನೋಡುವುದೇ ಟೀಕಾಕಾರರ ಮುಖ್ಯ ಗುರಿಯಾಗಿದೆ.

          ಈ ಮೇಲಿನ ದಾಳಿಗೆ ಪ್ರತಿಯಾಗಿ ಆಚರಣೆಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಇಂಥ ಆಚರಣೆಗಳ ಪರವಾಗಿರುವವರು ಈ ಮುಂದಿನ ವಾದವನ್ನು ಇಡುತ್ತಾರೆ: ಇಂಥ ವಿಧಿ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳು ಹಾಗೂ ವೈಚಾರಿಕ ಉದ್ದೇಶಗಳಿವೆ ಎಂಬುದೇ ಆ ವಾದ. ಇಂಥ ಒಂದೊಂದೇ ಆಚರಣೆಗಳನ್ನು ಹೆಕ್ಕಿ ವೈಜ್ಞಾನಿಕ ಕಾರಣಗಳನ್ನು ತೋರಿಸುವ ಪ್ರಯತ್ನಗಳು ನಡೆದಿವೆ. ಕೆಲವು ತೀರಾ ಹಾಸ್ಯಾಸ್ಪದವಾಗಿ ಕಾಣಿಸುತ್ತವೆ. ಕೆಲವು ಸಂದೇಹಾಸ್ಪದವಾಗಿ ಕಾಣಿಸುತ್ತವೆ. ಏಕೆ ಆಧುನಿಕ ವಿಜ್ಞಾನದ ಆವಿಷ್ಕಾರಗಳನ್ನು, ಪರಿಭಾಷೆಗಳನ್ನು ಬಳಸಿಕೊಂಡೇ ಪ್ರಾಚೀನ ವಿಧಿಗಳಿಗೆಲ್ಲ ವಿವರಣೆಯನ್ನು ನೀಡುವ ಆಗ್ರಹಕ್ಕೆ ಇವರೆಲ್ಲ ಕಟ್ಟುಬಿದ್ದಿದ್ದಾರೆ? ಅದನ್ನು ಬಿಟ್ಟು ಬೇರೆ ಯಾವುದಾದರೂ ವಿಧಾನದಲ್ಲಿ ಈ ಆಚರಣೆಗಳು ವೈಜ್ಞಾನಿಕ ಎಂಬುದನ್ನು ತೋರಿಸುವ ಪ್ರಯತ್ನಗಳು ಏಕೆ ನಡೆಯುತ್ತಿಲ್ಲ? ಎಂಬ ಪ್ರಶ್ನೆಗಳನ್ನು ಕೇಳಿಕೊಂಡರೆ ಆಧುನಿಕ ಸೈನ್ಸ್‌ಗಳ ಸಿದ್ಧಾಂತಗಳೇ ಈ ವೈಜ್ಞಾನಿಕತೆಗೆ ಮಾನದಂಡವಾಗಿವೆ ಎಂಬ ಸಂಗತಿ ಸ್ಪಷ್ಟವಾಗುತ್ತದೆ.

          ಹಾಗಾಗಿ ಅಂಥ ಆಚರಣೆಗಳಿಗೆ ಬೇರೆ ಮಹತ್ವ ಇಲ್ಲ ಹಾಗೂ ಅವುಗಳ ಹಿಂದೆ ವೈಜ್ಞಾನಿಕ ಕಾರಣಗಳಿಲ್ಲದಿದ್ದರೆ ಅವು ಸಮರ್ಥನೀಯವಲ್ಲ ಎಂಬುದನ್ನು ಇಂಥ ಸಂಪ್ರದಾಯವಾದಿಗಳೂ ನಂಬಿದಂತೆ ಕಾಣುತ್ತದೆ. ಒಟ್ಟಿನಲ್ಲಿ ವಿಧಿ ಆಚರಣೆಗಳ ಹಿಂದೆ ಅರ್ಥ ಹಾಗೂ ಉದ್ದೇಶಗಳಿರಬೇಕು ಎಂಬುದರಲ್ಲಿ ಭಾರತೀಯ ವಿಚಾರವಾದಿಗಳಿಗೂ, ಸಂಪ್ರದಾಯವಾದಿಗಳಿಗೂ ಏಕಮತವಿದೆ, ಅಥವಾ ವಿಧಿ ಆಚರಣೆಗಳ ಕುರಿತು ಸದ್ಯಕ್ಕೆ ಪಾಶ್ಚಾತ್ಯ ದೃಷ್ಟಿಕೋನವೊಂದೇ ಸರಿ ಎಂಬುದಾಗಿ ಇವರೆಲ್ಲ ನಿರ್ಣಯಿಸಿರುವಂತೆ ಕಾಣುತ್ತದೆ. ಹಾಗೂ ಈ ಧೋರಣೆ ಇಂದು ಕೇವಲ ಆಧುನಿಕ ವಿದ್ಯಾವಂತರದೊಂದೇ ಅಲ್ಲ ಸಾಂಪ್ರದಾಯಿಕ ಪಂಡಿತರ ಸಾಮಾನ್ಯಜ್ಞಾನವು ಕೂಡ ಆಗಿದೆ.

          ನಮ್ಮ ಧಾರ್ಮಿಕ ವಿಧಿ ಆಚರಣೆಗಳ ಅರ್ಥ ಮತ್ತು ಉದ್ದೇಶಗಳ ಕುರಿತು ಹಲವಾರು ಸಮಾಜಶಾಸ್ತ್ರೀಯ ನಿರೂಪಣೆಗಳು ಇಂದು ಪ್ರಚಲಿತದಲ್ಲಿ ಬಂದಿವೆ. ಅಂಥ ಯಾವುದೇ ನಿರೂಪಣೆಯೂ ಸಂಪ್ರದಾಯಸ್ಥರ ಕಥೆಗಳನ್ನೇ ವೈಜ್ಞಾನಿಕ ಪರಿಭಾಷೆಯಲ್ಲಿ ಹೇಳಿದಂತಿರುತ್ತದೆ. ಸಂಪ್ರದಾಯಸ್ಥರ ಕಥೆಗಳು ಪರಸ್ಪರ ವಿರುದ್ಧವಾಗಿ, ವೈವಿಧ್ಯಪೂರ್ಣವಾಗಿ ಇರುತ್ತವೆ. ಹಾಗಾಗಿ ಒಂದು ಆಚರಣೆಗೇ ಹಲವಾರು ಉದ್ದೇಶಗಳು ಹಾಗೂ ಕಾರಣಗಳು ಸೃಷ್ಟಿಯಾಗಿ ಅವನ್ನು ವೈಜ್ಞಾನಿಕ ವಿವರಣೆಯ ಸಾಲಿನಲ್ಲಿ ಸೇರಿಸುವುದು ದುಃಸ್ಸಾಧ್ಯವಾಗಿದೆ. ಏಕೆಂದರೆ ಇವುಗಳಲ್ಲಿ ಒಂದಕ್ಕಿಂತ ಮತ್ತೊಂದು ಏಕೆ ಸರಿಯಾದದ್ದು ಎನ್ನುವುದಕ್ಕೆ ವಿವರಣೆಗಳಿಲ್ಲ.

          ಈ ಸಮಸ್ಯೆಗೆ ಪರಿಹಾರವಾಗಿ ಕೆಲವು ಪಾಶ್ಚಾತ್ಯ ವಿದ್ವಾಂಸರು ಇತ್ತಿಚೆಗೆ ಏನನ್ನು ಕಂಡುಕೊಳ್ಳುತ್ತಿದ್ದಾರೆಂದರೆ ವೈದಿಕ ಯಜ್ಞ ಯಾಗಾದಿಗಳು ಕೇವಲ ಕ್ರಿಯೆಯ ವಿನ್ಯಾಸಗಳೇ ವಿನಃ ಯಾವುದೋ ಸಂಕೇತವನ್ನಾಗಲೀ ಅರ್ಥವನ್ನಾಗಲೀ ಉದ್ದೇಶದಲ್ಲಿ ಇಟ್ಟುಕೊಂಡ ಆಚರಣೆಗಳಲ್ಲ. ಅವುಗಳನ್ನು ಆಚರಿಸುವವರ ಲೋಕವನ್ನು ಪ್ರವೇಶಿಸಿದಾಗ ಅವು ಕೇವಲ ಶುದ್ಧವಾದ ಆಚರಣೆಗಳು ಎಂದು ತಿಳಿದುಬರುತ್ತದೆ. ಇಂಥ ನಿರ್ಣಯವು ಈ ಮೇಲೆ ಉಲ್ಲೇಖಿಸಿದ ಭಾರತೀಯ ವಿದ್ವಾಂಸರಿಗಾಗಲೀ, ವಿದ್ಯಾವಂತರಿಗಾಗಲೀ ಪಥ್ಯವಾಗುವುದು ಕಷ್ಟ. ಅವರೆಲ್ಲ ಈ ಹೇಳಿಕೆಗೆ ಪ್ರತಿರೋಧಿಸಲೂ ಬಹುದು. ನಮ್ಮ ವಿಧಿ ಆಚರಣೆಗಳಿಗೆ ಅರ್ಥ ಉದ್ದೇಶಗಳೇ ಇಲ್ಲವೆನ್ನುವುದು ನಮ್ಮ ಪರಂಪರೆಯ ಅವಹೇಳನವಾಗಿ ಸಂಪ್ರದಾಯವಾದಿಗಳಿಗೆ ಕಾಣಬಹುದು ಇಲ್ಲ ವಿಚಾರವಾದಿಗಳಿಗೆ ವೈದಿಕಶಾಹಿಯ ಹೊಸ ಹುನ್ನಾರವೆಂಬಂತೆ ಕೂಡ ಕಾಣಿಸಬಹುದು. ಏಕೆಂದರೆ ಈ ಪೂರ್ವಗ್ರಹೀತದಿಂದಲೇ ನಮ್ಮ ಇಂದಿನ ಸಾಮಾಜಿಕ ಸಾಂಸ್ಕೃತಿಕ ಮೀಮಾಂಸೆಗಳು ಅಸ್ತಿತ್ವದಲ್ಲಿವೆ. ಅಂದರೆ ಈ ಮೇಲಿನ ಧೋರಣೆಗಳು ನಮ್ಮ ಸಂಪ್ರದಾಯವನ್ನು ಯತಾರ್ಥವಾಗಿ ಅರ್ಥೈಸಲು ದೊಡ್ಡ ತೊಡಕುಗಳಾಗಿವೆ.

            ಅರ್ಥ, ಉದ್ದೇಶಗಳಿಲ್ಲದ ಕ್ರಿಯೆಗಳು ಅನಾರೋಗ್ಯಕರ ಎಂಬುದು ಪಾಶ್ಚಾತ್ಯ ಸಂಸ್ಕೃತಿಯ ಗೀಳು. ಅರ್ಥ ಉದ್ದೇಶಗಳಿಲ್ಲದ ಕ್ರಿಯೆಗಳು ಇರುತ್ತವೆ ಹಾಗೂ ಅವು ಮನುಷ್ಯ ಸಂಸ್ಕೃತಿಯನ್ನು ರೂಪಿಸುವಲ್ಲಿ ಹಾಗೂ ದಾಟಿಸುವಲ್ಲಿ ತೀರ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂಬ ಸತ್ಯವನ್ನು ನಾವು ಮನಗಾಣಬೇಕಿದೆ. ಬಹುಶಃ ಇದನ್ನು ಅರಿಯುವ ಮೂಲಕ ನಾವು ಪಾಶ್ಚಾತ್ಯ ಜ್ಞಾನ ಮೀಮಾಂಸೆಯ ಮಿತಿಯಿಂದ ತಪ್ಪಿಸಿಕೊಳ್ಳುವ ಮಾರ್ಗವೂ ತೆರೆಯುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ರಿಲಿಜನ್ನಾಗಲೀ ಅದು ಸೃಷ್ಟಿಸುವ ಜೀವನ ಕ್ರಮವಾಗಲೀ ಇಲ್ಲದಿರುವುದರಿಂದ ಪಾಶ್ಚಾತ್ಯ ಚಿಂತನೆಯ ಪೂರ್ವಗ್ರಹೀತಗಳು ಇದಕ್ಕೆ ಅನ್ವಯವಾಗಲಾರವು. ನಮ್ಮ ಧಾರ್ಮಿಕ ಆಚರಣೆಗಳು ಈ ಸಂಸ್ಕೃತಿಯು ಯಾವ ಜೀವನಕ್ರಮವನ್ನು ರೂಢಿಸಿಕೊಂಡಿದೆಯೋ ಅದನ್ನು ಕಲಿಸುವ ಸಾಧನಗಳಾಗಿವೆ. ಈ ಜೀವನಕ್ರಮದಲ್ಲಿ ಕ್ರಿಯೆಯನ್ನು ಜರುಗಿಸುವುದರ ಮೂಲಕ ಬದುಕನ್ನು ರೂಪಿಸಿಕೊಳ್ಳಲಾಗುತ್ತದೆ. ಇಂಥ ಕ್ರಿಯೆಗಳನ್ನು ನೋಡಿ ಅನುಕರಿಸಿ ಕಲಿಯಲಾಗುತ್ತದೆಯೇ ವಿನಃ ಅವುಗಳ ಕುರಿತು ಸಿದ್ಧಾಂತಗಳನ್ನು ಹಾಗೂ ಅರ್ಥಗಳನ್ನು ಬೆಳೆಸಿಕೊಂಡಲ್ಲ. ಹಾಗಾಗಿ ಇಲ್ಲಿನ ಕಲಿಕೆಯಲ್ಲಿ ಸಿದ್ಧಾಂತಗಳು ಕ್ರಿಯೆಯ ಕಾರಣಗಳಾಗಿ ಮಹತ್ವವನ್ನು ಪಡೆಯುವುದಿಲ್ಲ. ಕ್ರಿಯೆಯನ್ನು ಅನುಕರಿಸುವುದು ಅಥವಾ ಕ್ರಿಯೆಯನ್ನು ಆಚರಿಸುವ ಜ್ಞಾನವು ಇಂಥ ಸಂಸ್ಕೃತಿಯಲ್ಲಿ ಬದುಕಿಗೆ ಅತ್ಯಂತ ನಿರ್ಣಾಯಕ.

          ವಿಧಿ ಆಚರಣೆಗಳ ಈ ಮೇಲಿನ ವೈಶಿಷ್ಟ್ಯತೆಯನ್ನು ಗಮನಿಸಿ ಮಾನವ ಸಮಾಜಗಳಲ್ಲಿ ಅವುಗಳ ಸಂಭಾವ್ಯ ಮಹತ್ವಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ಈ ಕುರಿತು ಇನ್ನೂ ಸರಿಯಾದ ಸಂಶೋಧನೆ ಆಗಬೇಕಿದೆ. ೧) ಕ್ರಿಯೆಗಳನ್ನು ವಿನ್ಯಾಸಗೊಳಿಸಿ ಅದನ್ನು ಶ್ರದ್ಧೆಯಿಂದ ಅನುಕರಿಸಿ ಆಚರಿಸುವುದನ್ನು ಇಂಥ ಸಂಸ್ಕೃತಿಯ ಪ್ರತಿಯೊಬ್ಬ ಸದಸ್ಯನಿಗೂ ಧಾರ್ಮಿಕ ವಿಧಿಗಳು ಕಲಿಸುತ್ತವೆ. ಅವು ಒಟ್ಟಾರೆಯಾಗಿ ಕ್ರಿಯೆಯನ್ನು  ಜರುಗಿಸುವುದನ್ನು ಕಲಿಯುವುದು ಹೇಗೆ ಎಂಬುದನ್ನು ಕಲಿಸುತ್ತವೆಯೇ ವಿನಃ ಯಾವುದೋ ನಿರ್ದಿಷ್ಟ ಕ್ರಿಯೆಯನ್ನು ಕಲಿಸುವುದಿಲ್ಲ. ಹಾಗಾಗಿ ಅವು ಕಲಿಕೆಯ ಕಲಿಕೆ ಎನ್ನಬಹುದು. ಅವುಗಳಿಗೆ ಮನುಷ್ಯನ ಇತರ ಲೌಕಿಕ ಕ್ರಿಯೆಗಳಿಗೆ ಆರೋಪಿಸಬಹುದಾದ ಉದ್ದೇಶವನ್ನಾಗಲೀ, ಹುನ್ನಾರವನ್ನಾಗಲೀ ಆರೋಪಿಸಲು ಸಾಧ್ಯವಿಲ್ಲ. ಅಥವಾ ಅವು ಯಾವುದೋ ಪ್ರತಿಪಾದನೆಯನ್ನಾಗಲೀ, ಅರ್ಥನ್ನಾಗಲೀ ಕಟ್ಟಿಕೊಡುವ ಉದ್ದೇಶಕ್ಕಾಗಿ ಇವೆ ಎಂಬುದೂ ತಪ್ಪು ಗ್ರಹಿಕೆ.

          ವಿಧಿ ಆಚರಣೆಗಳ ಮೂಲಕ ಈ ಸಂಸ್ಕೃತಿಯ ಸದಸ್ಯನೊಬ್ಬನು ಕ್ರಿಯಾಜ್ಞಾನವನ್ನು ಪಡೆಯಲು ಬೇಕಾದ ಮನೋಭೂಮಿಕೆಯನ್ನೂ, ತಿಳುವಳಿಕೆಯನ್ನೂ, ತರಬೇತಿಯನ್ನೂ  ಪಡೆಯುತ್ತಾನೆ. ಅದು ಅವನಿಗೆ ಯಾವುದೇ ಕ್ರಿಯೆಯನ್ನಾದರೂ ಶ್ರದ್ಧಾಪೂರ್ವಕವಾಗಿ ಅನುಕರಿಸಿ ಕಲಿಯುವ ಸಾಮರ್ಥ್ಯವನ್ನು ನೀಡುತ್ತದೆ. ಅಂದರೆ ಅದು ಆತನಿಗೆ ಕ್ರಿಯೆಯೇ ಪ್ರಧಾನವಾದ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧತೆಯನ್ನು ನೀಡುತ್ತದೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕ್ರಿಯೆಯ ಕುರಿತು ಏನೇನು ಜ್ಞಾನವಿದೆಯೋ ಅದನ್ನು ಓದಿ, ಕೇಳಿ ಅರ್ಥಮಾಡಿಕೊಳ್ಳುವುದು ಕ್ರಿಯೆಯ ಕಲಿಕೆಗೆ ಪೂರ್ವ ಸಿದ್ಧತೆಯಾಗಿದ್ದರೆ ವಿಧಿಆಚರಣೆಗಳ ಲೋಕದ ಜನರ ಕಲಿಕೆಗೆ ಕ್ರಿಯೆಗಳನ್ನು ನೋಡಿ ಆಚರಿಸುವುದನ್ನು ಕಲಿಯುವುದೇ ಪೂರ್ವ ಸಿದ್ಧತೆಯಾಗಿದೆ. ಅಂಥ ಜನರು ಜೀವನಕ್ರಮವೂ ವಿಧಿ ಆಚರಣೆಯಲ್ಲೇ ಜರುಗುತ್ತದೆ.

          ೨) ಎರಡನೆಯ ಮಹತ್ವವೆಂದರೆ ಅನೇಕ ವಿದ್ವಾಂಸರು ಈಗಾಗಲೇ ಗುರುತಿಸಿರುವಂತೆ ವಿಧಿ ಆಚರಣೆಗಳು ಸಮುದಾಯವನ್ನು ನಿರ್ಮಾಣ ಮಾಡುತ್ತವೆ. ಅಂದರೆ ಅವು ಜನರನ್ನು ಒಟ್ಟಿಗೆ ತರುವ ಕೆಲಸ ಮಾಡುತ್ತವೆ ಅಥವಾ ಸಮಾಜವನ್ನು ಒಟ್ಟಾಗಿ ಹಿಡಿದಿಡುವ ಕೆಲಸ ಮಾಡುತ್ತವೆ. ಯಾವುದೇ ಅರ್ಥ ಉದ್ದೇಶಗಳ ಸಂಘರ್ಷಗಳಿಲ್ಲದೇ, ಮತ ಸಿದ್ಧಾಂತಗಳ ಬೇಲಿಗಳಿಲ್ಲದೇ ಜನರು ಒಟ್ಟಿಗೆ ಬರುವ,  ಬೆರೆಯುವ ಸನ್ನಿವೇಶವನ್ನು ಸೃಷ್ಟಿಸುತ್ತವೆ. ಉದಾಹರಣೆಗೆ ಇಂದು ಭಾರತೀಯ ಸಂಸ್ಕೃತಿಯ ಯಾವ ಆಚರಣೆಗಳನ್ನು ಮತೀಯ ಸಹಬಾಳ್ವೆ, ಸಮನ್ವಯ ಇತ್ಯಾದಿ ಪದಗಳಿಂದ ವರ್ಣಿಸಲಾಗುತ್ತದೆಯೋ ಅವೆಲ್ಲವೂ ವಿಧಿ ಆಚರಣೆಗಳ ಈ ವೈಶಿಷ್ಟ್ಯತೆಯಿಂದಲೇ ಸಾಧ್ಯವಾಗಿವೆ. ಪೌರ್ವಾತ್ಯ ಸಂಸ್ಕೃತಿಯಲ್ಲಿ ಒಂದಿಲ್ಲೊಂದು ವಿಧಿ ಆಚರಣೆಗಳ ಮೂಲಕವೇ ಇಲ್ಲಿನವರ ಸಾಮಾಜಿಕ ಜೀವನವು ಸಾಧ್ಯವಾಗುತ್ತದೆ. ಇಂಥ ಸಂಸ್ಕೃತಿಯಲ್ಲಿ ವಿಧಿ ಆಚರಣೆಗಳನ್ನು ಬಿಡುವುದೆಂದರೆ ಈ ಸಮಾಜವನ್ನು ಶಿಥಿಲಗೊಳಿಸುವ ಕೆಲಸ ಎಂದರೂ ತಪ್ಪಿಲ್ಲ.

          ವಿಧಿ ಆಚರಣೆಗಳ ಮಹತ್ವವು ಕೇವಲ ಪೌರ್ವಾತ್ಯ ಸಾಂಪ್ರದಾಯಿಕ ಸಮಾಜಕ್ಕಷ್ಟೇ ಸೀಮಿತವಲ್ಲ,  ಸಿದ್ಧಾಂತಗಳಿಂದ ಸಮುದಾಯವು ನಿರ್ಮಾಣವಾಗಲಾರದು, ಸಮುದಾಯ ನಿರ್ಮಾಣವೆಂಬುದು ಕ್ರಿಯೆಗೆ ಸಂಬಂಧಿಸಿದ ವಿಚಾರವಾಗಿದೆ. ಕ್ರಿಯಾಜ್ಞಾನಕ್ಕೆ ಪ್ರಾಧಾನ್ಯತೆಯಿಲ್ಲದ ಸಂಸ್ಕೃತಿಗಳಲ್ಲಿ ಸಾಮಾಜಿಕ ಬಂಧವು ಶಿಥಿಲವಾಗಿರುತ್ತದೆ. ಏಶಿಯಾದ ಸಂಸ್ಕೃತಿಗಳಲ್ಲಿ ಸಾಮಾಜಿಕ ಬಂಧವು ಪಾಶ್ಚಾತ್ಯ ಸಂಸ್ಕೃತಿಗಿಂತಲೂ ಬಿಗಿಯಾಗಿರುವುದಕ್ಕೆ  ಅಲ್ಲಿ ವಿಧಿ ಆಚರಣೆಗಳಿಗಿರುವ ಪ್ರಾಧಾನ್ಯತೆಯೇ ಕಾರಣ ಎಂಬುದಾಗಿ ವಿದ್ವಾಂಸರು ಗುರುತಿಸಿದ್ದಾರೆ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

You may also like

Leave a Comment

Message Us on WhatsApp