Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ನಮ್ಮ ಆಚರಣೆಗಳು ಮತ್ತು ನಮ್ಮದಲ್ಲದ ವಿವರಣೆಗಳು

ನಮ್ಮ ಆಚರಣೆಗಳು ಮತ್ತು ನಮ್ಮದಲ್ಲದ ವಿವರಣೆಗಳು

by Rajaram Hegde
76 views

ಸೆಮೆಟಿಕ್ ರಿಲಿಜನ್ನುಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಲು ಕಾರಣವಾಗಿ ದೇವವಾಣಿಯ ಸತ್ಯದ ಕುರಿತ ನಂಬಿಕೆ ಇರುತ್ತದೆ. ಪಾಶ್ಚಾತ್ಯ ಸೆಕ್ಯುಲರ್ ಸಮಾಜವು ರಿಲಿಜನ್ ಎಂಬುದು ತಪ್ಪು ವಿಜ್ಞಾನ, ಹಾಗಾಗಿ ನಿಜವಾದ ವೈಜ್ಞಾನಿಕ ನಂಬಿಕೆಗಳು ಮನುಷ್ಯನ ಆಚರಣೆಗಳಿಗೆ ಕಾರಣವಾಗಿರಬೇಕು ಎನ್ನುತ್ತದೆ. ಅನ್ಯ ಸಂಸ್ಕೃತಿಗಳ ಆಚರಣೆಗಳನ್ನು ಅವರು ನೋಡಿದಾಗ ಅವರಲ್ಲಿ ದೇವವಾಣಿಯೂ ಅವರಿಗೆ ಕಾಣದಿದ್ದಾಗ ಅವನ್ನು ಮ್ಯಾಜಿಕ್ ಎಂಬುದಾಗಿ ವಿವರಿಸಿದರು. ಇದು ಪಾಶ್ಚಾತ್ಯ ವಿದ್ವಾಂಸರ ಅಜ್ಞಾನ.

ನಮ್ಮ ಸಾಂಪ್ರದಾಯಿಕ ಆಚರಣೆಗಳ ಕುರಿತು ವಿದ್ವಾಂಸರಿಂದ ಹಿಡಿದು ರಾಜಕಾರಣಿಗಳ ವರೆಗೆ ಎಲ್ಲರೂ ವಿವರಣೆ ನೀಡಬಲ್ಲವರಾಗಿದ್ದಾರೆ. ಯಾವುದು ಸರಿ, ಏಕೆ ಸರಿ, ಯಾವುದನ್ನು ಮಾಡಬಾರದು, ಇತ್ಯಾದಿ ಹೇಳಿಕೆಗಳನ್ನು ನಾವು ದಿನನಿತ್ಯ ಪತ್ರಿಕೆಗಳಲ್ಲಿ ನೋಡುತ್ತೇವೆ. ನಮ್ಮಲ್ಲಿ ಪ್ರಚಲಿತದಲ್ಲಿರುವ ಬಹುತೇಕ ಸಾಂಪ್ರದಾಯಿಕ ಆಚರಣೆಗಳಲ್ಲಿ ಅಮಾನವೀಯ ಅಂಶ ಯಾವುದು ಎಂಬುದು ಸ್ಪಷ್ಟವಿರುವುದಿಲ್ಲ. ಯಜ್ಞಗಳನ್ನು ಮಾಡುವುದು, ಅಶ್ವತ್ಥಪ್ರದಕ್ಷಿಣೆ, ನಾಗನಿಗೆ ಹಾಲೆರೆಯುವುದು,  ಕಪ್ಪೆಯ ಮದುವೆ ಮಾಡಿಸುವುದು, ಮೂರ್ತಿಪೂಜೆ, ಇಂಥ ಅಸಂಖ್ಯ ಆಚರಣೆಗಳು ಭಾರತೀಯರ ಜೀವನದಲ್ಲಿವೆ.  ಈ ಎಲ್ಲಾ ಆಚರಣೆಗಳೂ ಕೂಡ ವಿದ್ಯಾವಂತರ ಚಿಂತನಾ ಜಗತ್ತಿನ ನ್ಯಾಯಾಲಯದ ಕಟಕಟೆಯಲ್ಲಿವೆ.  ಅಲ್ಲಿ ಇಡೀ ಭಾರತೀಯ ಸಂಸ್ಕೃತಿಯೇ ಕಳೆದ ಎರಡು ಶತಮಾನಗಳಿಂದ ಮೂಢನಂಬಿಕೆ ಎಂಬ ಫೋರ್ಜರಿ ಮೊಖದ್ದಮೆಯನ್ನು ಎದುರಿಸುತ್ತಿದೆ. ಹಾಗಾಗಿ ಅದರ ಪರ ವಿರೋಧಿ ವಕೀಲರುಗಳೆಲ್ಲರೂ ಈಗಾಗಲೇ ಸಾಕಷ್ಟು ಪರ-ವಿರೋಧದ ವಾದಗಳನ್ನು ಪೇರಿಸಿದ್ದಾರೆ.

          ಸಾಂಪ್ರದಾಯಿಕ ಆಚರಣೆಗಳೆಲ್ಲ ಮೂಢ ನಂಬಿಕೆಗಳು, ಅವುಗಳಲ್ಲಿ ಪ್ರತಿಯೊಂದನ್ನೂ ಬಿಟ್ಟುಹಾಕಿ ಭಾರತೀಯರು ಹೊರಬಂದರೆ ಮಾತ್ರವೇ ಈ ಸಮಾಜದ ಪ್ರಗತಿ ಸಾಧ್ಯ ಎನ್ನುವವರು ಒಂದು ಕಡೆ ಇದ್ದಾರೆ. ಅವು ಅವೈಚಾರಿಕ ಅಷ್ಟೇ ಅಲ್ಲ, ಅವುಗಳನ್ನು ಬ್ರಾಹ್ಮಣರೆಂಬ ಪುರೋಹಿತ ಶಾಹಿಗಳು ಕಂಡುಹಿಡಿದು ಇಡೀ ಸಮಾಜದ ಮೇಲೆ ಹೇರಿದ್ದಾರೆ, ಅವು ಇರುವವರೆಗೆ ಜಾತಿ ಶೋಷಣೆ ಇರುತ್ತದೆ, ಭಾರತೀಯ ಸಮಾಜವು ಪುರೋಹಿತರಿಂದ ಹಾಗೂ ಅವರ ಶೋಷಣೆಯಿಂದ ಮುಕ್ತವಾಗಬೇಕಾದರೆ ಈ ಆಚರಣೆಗಳೆಲ್ಲವೂ ಹೋಗಬೇಕು ಎಂಬುದಾಗಿ ಅದರ ವಿರೋಧಿಗಳು ವಾದಿಸಿದ್ದಾರೆ. ಆದರೆ ಪುರೋಹಿತರಿಗೂ ಈ ಸಮಸ್ತ ಆಚರಣೆಗಳಿಗೂ ಏನು ಸಂಬಂಧವಿದೆ ಎಂಬುದನ್ನಾಗಲೀ, ಆ ಆಚರಣೆಗಳಿಗೂ ಶೋಷಣೆಗೂ ಏನು ಸಂಬಂಧವಿದೆ ಎನ್ನುವುದನ್ನಾಗಲೀ ಸಿದ್ಧಪಡಿಸಲು ಅವರು ಸೋತಿದ್ದರಿಂದ ನಮ್ಮ ನ್ಯಾಯಾಲಯಕ್ಕೆ ಅವರ ವಾದವು ಅಷ್ಟು ಮನದಟ್ಟಾದಂತಿಲ್ಲ. ಮತ್ತೊಂದೆಡೆಗೆ ಅದರ ಪರವಾಗಿ ವಾದಿಸುವವರು ಇಂಥ ಆಚರಣೆಗಳಿಗೆಲ್ಲ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತ ಇದ್ದಾರೆ. ಏಕೆಂದರೆ ಅವರಿಗೇ ಸ್ವತಃ ಅಂಥ ಆಚರಣೆಗಳನ್ನು ವೈಜ್ಞಾನಿಕ ಕಾರಣಗಳಿಲ್ಲದೇ ಮಾಡಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ಆದರೆ ಅವರು ಕೊಡುವ ವೈಜ್ಞಾನಿಕ ವಿವರಣೆಗಳು ಅಸಂಬದ್ಧವಾಗಿ ಹಾಗೂ ಅಪೂರ್ಣವಾಗಿ, ಕೆಲವೊಮ್ಮೆ ಹಾಸ್ಯಾಸ್ಪದವಾಗಿ ವಿಚಾರವಂತರಿಗೆ ಕಾಣಿಸುತ್ತವೆಯಾದ್ದರಿಂದ ಅವೂ ಮನದಟ್ಟಾಗುವುದಿಲ್ಲ.

          ಇಂಥ ಆಚರಣೆಗಳನ್ನು ಮುಂದುವರಿಸಬೇಕೋ ಬೇಡವೋ ಎನ್ನುವ ಕಾರಣದಿಂದಲೇ ಇಂಥ ಜಿಜ್ಞಾಸೆಗಳು ಇಂದು ಹುಟ್ಟಿಕೊಳ್ಳುತ್ತಿವೆ ಎಂಬುದನ್ನು ಗಮನಿಸಬೇಕು. ಅದಕ್ಕಿಂತಲೂ ಮುಖ್ಯವಾಗಿ ಆರೋಪ ಇರುವುದು ಇವು ಮೂಢನಂಬಿಕೆಗಳು, ಹಾಗಾಗಿ ಅವುಗಳನ್ನು ನಾಶ ಮಾಡಬೇಕು ಅಂತ. ಅದಕ್ಕೆ ರಕ್ಷಣಾತ್ಮಕವಾಗಿ ಹುಟ್ಟಿಕೊಂಡಿರುವುದೇ ಅವುಗಳಿಗೆ ವೈಜ್ಞಾನಿಕ ಕಾರಣವನ್ನು ಕೊಡುವ ಗೀಳು. ನಮ್ಮ ಸಮಾಜವನ್ನು ಪಾಶ್ಚಾತ್ಯರು ಸಮಾಜ ಶಾಸ್ತ್ರೀಯವಾಗಿ ವಿವರಿಸುವ ಪ್ರಯತ್ನ ನಡೆದಾಗಿನಿಂದಲೂ ಈ ಆರೋಪವು ಹುಟ್ಟಿಕೊಂಡಿದೆ. ಹಾಗಾಗಿ ಈ ಆರೋಪಕ್ಕೂ ಭಾರತೀಯ ಸಮಾಜ ಶಾಸ್ತ್ರದ ಹುಟ್ಟಿಗೂ ಅವಿನಾಭಾವೀ ಸಂಬಂಧವಿದೆ. ಅಂದರೆ ಐರೋಪ್ಯ ಚಿಂತಕರು ಆಫ್ರಿಕಾ, ಏಶಿಯಾ ಮುಂತಾದ ಐರೋಪ್ಯೇತರ ದೇಶಗಳಲ್ಲಿನ ಆಚರಣೆಗಳನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ಅವು ಮೌಢ್ಯಗಳೆಂಬ ನಿರ್ಣಯಕ್ಕೆ ಬರುತ್ತಾರೆ. ಉದಾಹರಣೆಗೆ ನೀಟ್ಶೆ ಎಂಬ ಚಿಂತಕನು ಭಾರತೀಯ ಆಯುಧ ಪೂಜೆಯ ಕುರಿತು ಏನು ಹೇಳುತ್ತಾನೆ ನೋಡಿ:

 ಅಂದಿನ ದಿನಗಳಲ್ಲಿ ಮನುಷ್ಯನಿಗೆ ನಿಸರ್ಗದ ನಿಯಮಗಳು ತಿಳಿದಿರಲಿಲ್ಲ,..ಹಾಗಾಗಿ ನೈಸರ್ಗಿಕ ಕಾರಣಗಳ ಪರಿಕಲ್ಪನೆಯೂ ಇರಲಿಲ್ಲ…ಎಲ್ಲವೂ ಅದೃಶ್ಯ ಡೆಮೊನ್‌ಗಳಿಂದ ನಡೆಯುತ್ತದೆ ಎಂದು ನಂಬಿದ್ದರು…ದೋಣಿಯ ಹುಟ್ಟನ್ನು ಹಾಕಿದ್ದರಿಂದ ದೋಣಿ ಚಲಿಸುತ್ತಿದೆ ಎಂದು ಅವರು ತಿಳಿದಿರಲಿಲ್ಲ..ಬದಲಾಗಿ ಆ ಡೆಮೊನ್ ದೋಣಿಯನ್ನು ಮುಂದಕ್ಕೆ ಒಯ್ಯಬೇಕಾದರೆ ಹುಟ್ಟುಹಾಕುವ ತಾಂತ್ರಿಕ ಆಚರಣೆ ಅತ್ಯಗತ್ಯ ಎಂದು ತಿಳಿದಿದ್ದರು..”

ಅಂದರೆ ಭಾರತೀಯರು ಆಯುಧಗಳನ್ನು ಏಕೆ ಪೂಜಿಸುತ್ತಾರೆಂದರೆ ಅವರ ಪ್ರಕಾರ ತಾವು ಆ ಆಯುಧಗಳಿಂದ ಮಾಡುವ ಕೆಲಸವು ಒಂದು ತಾಂತ್ರಿಕ ಆಚರಣೆ ಅಷ್ಟೆ. ಇಲ್ಲಿನ ಬಡಗಿ ತನ್ನ ಉಳಿ ಸುತ್ತಿಗೆಗಳನ್ನು ಪೂಜಿಸಿದರೇನೇ ಅವುಗಳೊಳಗಿನ ಡೆಮೊನ್‌ಗಳು ಕೆಲಸ ಮಾಡುತ್ತವೆ ಎಂದು ನಂಬುತ್ತಾನೆ. ನಿಜವಾಗಿಯೂ ಕೆಲಸ ಮಾಡುವುದು ಡೆಮೊನ್.

          ನೀಟ್ಶೆ ಒಂದು ಅಪವಾದವಲ್ಲ. ಪಾಶ್ಚಾತ್ಯ ಮಾನವ ಶಾಸ್ತ್ರಜ್ಞರೆಲ್ಲರೂ ಈ ಮೇಲಿನ ವಿವರಣೆಯನ್ನೇ ಉಳಿದ ಜನಾಂಗಗಳ ಕುರಿತು ಕೂಡ ನೀಡಿದ್ದರು. ಫ್ರೇಜರ್ ಎಂಬ ಮಾನವಶಾಸ್ತ್ರಜ್ಞನು ಅನ್ಯ ಸಂಸ್ಕೃತಿಗಳ ಇಂಥ ವಿಲಕ್ಷಣ ಆಚರಣೆಗಳ ಕುರಿತ ವಿವರಗಳನ್ನು ಕಲೆಹಾಕಿ ’ಗೋಲ್ಡನ್ ಬೋ’ ಎಂಬ ಅನೇಕ ಸಂಪುಟಗಳನ್ನು ರಚಿಸಿದ್ದಾನೆ. ಇಲ್ಲಿನ ಆಚರಣೆಗಳು ಕ್ರಿಶ್ಚಿಯಾನಿಟಿಯ ಎದುರು ಹಾಗೂ ವೈಜ್ಞಾನಿಕ ಚಿಂತನೆಯ ಎದುರು ನಿಗೂಢವಾಗಿ ಹಾಗೂ ವಿಲಕ್ಷಣವಾಗಿ ಕಾಣಿಸುತ್ತವೆ. ಇಂಥ ಆಚರಣೆಗಳಿಗೂ ಮಾನವನು ನಿಸರ್ಗದ ಮೇಲೆ ತನ್ನ ನಿಯಂತ್ರಣವನ್ನು ಸ್ಥಾಪಿಸುವುದಕ್ಕೂ ಸಂಬಂಧವಿದೆ ಎಂಬುದಾಗಿ ಫ್ರೇಜರ್ ತೀರ್ಮಾನಿಸುತ್ತಾನೆ. ಆಫ್ರಿಕಾದ ಕೆಲವು ಬುಡಕಟ್ಟುಗಳು ಮಳೆ ನೃತ್ಯಗಳನ್ನು ಏಕೆ ಮಾಡುತ್ತವೆ ಎಂದರೆ ಆ ನೃತ್ಯದಿಂದ ಅದೃಶ್ಯ ಶಕ್ತಿ ಒಲಿದು ಮಳೆಗರೆಯುತ್ತದೆ.  ಅಂದರೆ ಇಂಥ ಆಚರಣೆಗಳೆಲ್ಲವೂ ಕೂಡ ಮನುಷ್ಯನಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಯದ ಹಂತದಲ್ಲಿ ಹುಟ್ಟಿಕೊಂಡವುಗಳು. ಅವು ಪೃಕೃತಿಯನ್ನು ತಪ್ಪಾಗಿ ಅರ್ಥೈಸಿ, ತಪ್ಪಾಗಿ ಅದನ್ನು ನಿಯಂತ್ರಿಸುವ ವಿಧಾನಗಳಾಗಿವೆ. ಹಾಗಾಗಿ ಮೌಢ್ಯಗಳು. ಮಾನವಶಾಸ್ತ್ರಜ್ಞರು ಇಂಥ ಆಚರಣೆಗಳನ್ನು ಆದಿಮ ವಿಜ್ಞಾನಗಳು ಎಂಬುದಾಗಿ ಭಾವಿಸಿದರು ಇಂಥ ವಿಧಿ ಆಚರಣೆಗಳನ್ನು ಮ್ಯಾಜಿಕ್ ಎಂಬುದಾಗಿ ವಿವರಿಸಿದರು. ಅಂದರೆ ನಿಸರ್ಗದ ಅದೃಶ್ಯ ಶಕ್ತಿಗಳನ್ನು ನಿಯಂತ್ರಿಸುವುದಕ್ಕಾಗಿಯೇ ಮ್ಯಾಜಿಕ್ ಹುಟ್ಟಿಕೊಂಡಿದೆ ಎಂದರು. ಈ ನೆಲೆಯಲ್ಲಿ ಮ್ಯಾಜಿಕ್ ಎಂಬುದು ಆದಿಮ ವಿಜ್ಞಾನ ಎಂಬ ಸಮೀಕರಣವನ್ನೂ ಅವರು ಮಾಡುತ್ತಾರೆ. ಈ ಸಮೀಕರಣವು ಅನ್ಯ ಸಂಸ್ಕೃತಿಗಳ ಆಚರಣೆಗಳನ್ನು ಅರ್ಥೈಸಲು ಯುರೋಪಿಯನ್ನರಿಗೆ ಮಂತ್ರದಂಡವಾಯಿತು.

          ಪಾಶ್ಚಾತ್ಯ ದೃಷ್ಟಿಕೋನವು ಅನ್ಯ ಸಂಸ್ಕೃತಿಗಳ ವಿಧಿ ಆಚರಣೆಗಳನ್ನು ತಪ್ಪು ವಿಜ್ಞಾನವನ್ನಾಗಿ ಬದಲಾಯಿಸುತ್ತದೆ. ಹಾಗಾಗಿ ಅವು ಮೌಢ್ಯವಾಗುತ್ತವೆ. ಆ ಕಾರಣದಿಂದಲೇ ಈ ಪಾಶ್ಚಾತ್ಯ ವಾದವನ್ನು ಅಲ್ಲಗಳೆದು ತಮ್ಮ ಆಚರಣೆಗಳ ಶ್ರೇಷ್ಟತೆಯನ್ನು ಸ್ಥಾಪಿಸಲು ಬಯಸುವವರು ವೈಜ್ಞಾನಿಕ ಕಾರಣಗಳನ್ನು ಸೃಷ್ಟಿಸುವ ಒತ್ತಡಕ್ಕೆ ಒಳಗಾಗುತ್ತಾರೆ. ಪಾಶ್ಚಾತ್ಯರಿಗೆ ಈ ಆಚರಣೆಗಳನ್ನು ಆಚರಣೆಗಳನ್ನಾಗಿಯಷ್ಟೇ ತೆಗೆದುಕೊಳ್ಳಲು ಏಕೆ ಸಾಧ್ಯವಾಗಲಿಲ್ಲ? ಅದೇಕೆ ಮೌಢ್ಯ, ಸುಳ್ಳುವಿಜ್ಞಾನ ಇತ್ಯಾದಿಯಾಗಿ ಕಾಣಿಸಿತು? ಅದಕ್ಕೆ ಕಾರಣವೆಂದರೆ ಅವರ ದೃಷ್ಟಿಕೋನದ ಪ್ರಕಾರ ಆಚರಣೆಗಳು ನಂಬಿಕೆಯನ್ನಾಧರಿಸಿ ಇರುತ್ತವೆ. ಅಂದರೆ ಪ್ರಾಕೃತಿಕ ಸತ್ಯವೊಂದನ್ನು ನಂಬಿಕೊಂಡು ಮನುಷ್ಯನು ತನ್ನ ಕ್ರಿಯೆಯನ್ನು ರೂಪಿಸಿಕೊಳ್ಳುತ್ತಾನೆ ಅಂತ ಈ ವಿದ್ವಾಂಸರು ತಿಳಿದಿದ್ದಾರೆ. ಮನುಷ್ಯನ ಎಲ್ಲಾ ಕ್ರಿಯೆಗಳ ಹಿಂದೂ ಕೂಡ ಅವನ ಈ ನಂಬಿಕೆ ಕೆಲಸಮಾಡುತ್ತದೆ. ಅಂದರೆ ನಿಸರ್ಗದ ಕುರಿತು ಅವನಿಗೆ ಅವನದೇ ಆದ ಸಿದ್ಧಾಂತಗಳು ಇರುತ್ತವೆ. ಆ ಸಿದ್ಧಾಂತಗಳನ್ನಾಧರಿಸಿ ಅವನ ಕ್ರಿಯೆ ರೂಪುಗೊಳ್ಳುತ್ತದೆ. ಉದಾಹರಣೆಗೆ ಇಂದು ವೈದ್ಯನೊಬ್ಬನು ಒಂದು ರೋಗಕ್ಕೆ ಒಂದು ಔಷಧವನ್ನು ನೀಡಬೇಕಾದರೆ ಆ ರೋಗದ ಹಾಗೂ ಔಷಧದ ಕುರಿತ ಒಂದು ವೈಜ್ಞಾನಿಕ ತಿಳುವಳಿಕೆಯು ಅವನಿಗೆ ಇರುತ್ತದೆ. ಆದಿವಾಸಿಯೊಬ್ಬನು ಔಷಧ ನೀಡುವ ಬದಲು ಛೂಮಂತ್ರವನ್ನು ಹಾಕಿದರೆ ಆ ಕ್ರಿಯೆಯು ಏಕೆ ರೋಗವನ್ನು ವಾಸಿ ಮಾಡುತ್ತದೆ ಎಂಬುದರ ಕುರಿತು ಅವನಿಗೊಂದು ಸಿದ್ಧಾಂತ ಇರಲೇಬೇಕು ಎಂಬುದು ಇಲ್ಲಿನ ತರ್ಕ.

          ನಂಬಿಕೆಗೂ ಕ್ರಿಯೆಗೂ ಇರುವ ಈ ಸಂಬಂಧವು ಕ್ರೈಸ್ತ ಥಿಯಾಲಜಿಯಿಂದ ಸೆಕ್ಯುಲರ್ ಜಗತ್ತಿಗೆ ಸಿಕ್ಕ  ಬಳುವಳಿಯಾಗಿದೆ. ಕ್ರೈಸ್ತನೊಬ್ಬನ ಆಚರಣೆಯು ದೈವವಾಣಿಯ ಮೇಲಿನ ನಂಬಿಕೆಯನ್ನಾಧರಿಸಿ ಇದೆ ಎಂಬುದು ಅವರ ತಿಳುವಳಿಕೆಯಾಗಿದೆ. ಕ್ರಿಶ್ಚಿಯನ್ನನೊಬ್ಬನ ಆಚರಣೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ನಂಬಿಕೆ ಏನು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಪಾಶ್ಚಾತ್ಯ ಮಾನವಶಾಸ್ತ್ರಜ್ಞರು ಅನ್ಯ ಸಂಸ್ಕೃತಿಗಳಲ್ಲಿನ ಆಚರಣೆಗಳನ್ನು ನೋಡಿದಾಗ ಅವು ಅವರಿಗೆ ತೋರಿಕೆಗೆ ವಿಲಕ್ಷಣವಾಗಿ ಕಂಡವು. ವಿಲಕ್ಷಣವಾಗಿ ಏಕೆ ಕಂಡವೆಂದರೆ ಕ್ರಿಶ್ಚಿಯಾನಿಟಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಅವರಿಗೆ ಅಂಥ ಆಚರಣೆಗಳಿಗೆ ಕಾರಣಗಳಾಗಿ ಅವರ ನಂಬಿಕೆಗಳಿವೆ, ಆ ನಂಬಿಕೆಗಳನ್ನು ತಿಳಿದುಕೊಂಡರೆ ಮಾತ್ರ ಅವುಗಳ ಕಾರಣ ಅರ್ಥವಾಗುತ್ತದೆ ಎಂಬ ಧೋರಣೆ ಇತ್ತು. ಅವುಗಳ ಕಾರಣವು ಪಾಶ್ಚಾತ್ಯರಿಗೆ ಗೊತ್ತಿಲ್ಲದಿದ್ದುದರಿಂದ, ಹಾಗೂ ಆಚರಿಸುವವರಿಗೇ ತಮ್ಮ ನಂಬಿಕೆ ಏನೆಂಬುದು ಗೊತ್ತಿಲ್ಲದಿದ್ದುದರಿಂದ ಅವರಿಗೆ ಅವು ವಿಲಕ್ಷಣವಾಗಿ ಕಂಡವು. ಅದೇ ಭಾರತೀಯ ಅಥವಾ ಏಶಿಯಾದ ಒಬ್ಬನಿಗೆ ಅನ್ಯರ ಆಚರಣೆಗಳು ಈ ರೀತಿ ಒಗಟಾಗಿ ಅನುಭವಕ್ಕೆ ಬರುವುದಿಲ್ಲ. ಏಕೆಂದರೆ ಅವನು ಅವುಗಳ ಹಿಂದಿರುವ ನಂಬಿಕೆಯ ಪ್ರಪಂಚವೊಂದನ್ನು ಕಲ್ಪಿಸಿಕೊಂಡು ಹುಡುಕುತ್ತಿರುವುದಿಲ್ಲ. ಅವನ ಪಾಲಿಗೆ ಅದು ಒಂದು ಆಚರಣೆ ಅಷ್ಟೆ. ಅದರಲ್ಲಿ ಅರ್ಥಮಾಡಿಕೊಳ್ಳುವಂಥದ್ದು ಏನೂ ಇರುವುದಿಲ್ಲ.

          ಪಾಶ್ಚಾತ್ಯರಿಗೆ ಇವು ಕೇವಲ ಆಚರಣೆಗಳಾಗಿ ಕಾಣುವುದಿಲ್ಲ. ಯಾವುದೋ ನಂಬಿಕೆಯ ಅಭಿವ್ಯಕ್ತಿಗಳಾಗಿ ಕಾಣಿಸುತ್ತವೆ. ಆ ನಂಬಿಕೆ ಗೊತ್ತಾಗುವವರೆಗೂ ಅವು ಅರ್ಥವಾಗದ ಆಚರಣೆಗಳ ಹಾಗೇ ಕಾಣಿಸುತ್ತವೆ. ಆ ನಂಬಿಕೆ ಏನು ಎಂಬುದನ್ನು ವಿವರಿಸಿದ ಮೇಲೆ ಅವು ಅರ್ಥವಾಗುತ್ತವೆ. ಹಾಗಾಗಿ ಅನ್ಯರ ಆಚರಣೆಗಳನ್ನು ನೋಡಿದ ತಕ್ಷಣ ಅವರಲ್ಲಿ “ಏಕೆ ಮಾಡುತ್ತಾರೆ?” ಎಂಬ ಪ್ರಶ್ನೆ ಮೊದಲು ಏಳುತ್ತದೆ. ಅದಕ್ಕೆ ವಿವರಣೆ ಅದರ ಹಿಂದಿನಿಂದ ಬರುತ್ತದೆ. ಇಂಥ ವಿವರಣೆಯನ್ನು ನೀಡಬೇಕಾದರೆ ಅವರ ನಂಬಿಕೆಯನ್ನು ಕಟ್ಟಿಕೊಡಬೇಕು. ಪಾಶ್ಚಾತ್ಯ ಮಾನವ ಶಾಸ್ತ್ರವು ಅನ್ಯ ಸಂಸ್ಕೃತಿಗಳ ಆಚರಣೆಗಳಿಗೆಲ್ಲ ಈ ’ಏಕೆ’ ಎಂಬ ಪ್ರಶ್ನೆಯನ್ನು ಹಾಕಿದೆ. ಅನ್ಯ ಸಂಸ್ಕೃತಿಗಳ ಜನರು ಅದಕ್ಕೆ ಉತ್ತರಿಸಲಿಲ್ಲ ಅಥವಾ ಹಾಸ್ಯಾಸ್ಪದವಾದ, ಬೇಕಾ ಬಿಟ್ಟಿಯಾದ ಉತ್ತರಗಳನ್ನು ಕೊಟ್ಟರು. ಏಕೆಂದರೆ ಅವರು ಅಂಥ ಆಚರಣೆಗಳನ್ನು ತಮ್ಮ ಹಿರಿಯರನ್ನು ಅನುಕರಿಸಿ ಕಲಿತಿದ್ದರೇ ವಿನಃ ನಿಸರ್ಗ ಸತ್ಯಗಳ ಕುರಿತ ನಂಬಿಕೆಯನ್ನಿಟ್ಟುಕೊಂಡಲ್ಲ. ಅವುಗಳ ಕಾರಣ ಅವರಿಗೆ ಗೊತ್ತಿರಲಿಲ್ಲ ಏಕೆಂದರೆ ಅವುಗಳಿಗೆ ಕಾರಣವೇ ಇರಲಿಲ್ಲ.

          ಈ ಜನರು ತಮಗೆ ಮಾಹಿತಿಯನ್ನು ನೀಡಲು ಸೋಲುತ್ತಿರುವುದನ್ನು ನೋಡಿಯಾದರೂ ಪಾಶ್ಚಾತ್ಯ ವಿದ್ವಾಂಸರು ಈ ಸಂಸ್ಕೃತಿಯ ವೈಶಿಷ್ಟ್ಯತೆಯನ್ನು ಅರಿಯಬಹುದಿತ್ತು. ಅವರಿಗೆ ತಮ್ಮ ಅನುಭವದ ಕುರಿತು ಎಷ್ಟು ವಿಶ್ವಾಸ ಇತ್ತೆಂದರೆ ಈ ಜನರೇ ಅಜ್ಞಾನಿಗಳು ಎಂದು ತೀರ್ಮಾನಿಸಿದರು. ತಾವೇ ಆ ಕಾರಣಗಳನ್ನು ಕಂಡುಹಿಡಿಯತೊಡಗಿದರು. ಈ ಪ್ರಯತ್ನದಲ್ಲಿ ಮಾನವ ಶಾಸ್ತ್ರ, ಸಮಾಜ ಶಾಸ್ತ್ರ, ಮನಃಶಾಸ್ತ್ರ ಇತ್ಯಾದಿಗಳು ಹುಟ್ಟಿಕೊಂಡವು. ಈ ಶಾಸ್ತ್ರಗಳೆಲ್ಲವೂ ಮಾಡಿದ್ದೇನೆಂದರೆ ಪಾಶ್ಚಾತ್ಯರಿಗೇ ವಿಶಿಷ್ಟವಾದ ಪೂರ್ವಗ್ರಹೀತಗಳನ್ನು ಈ ಎಲ್ಲಾ ಸಂಸ್ಕೃತಿಗಳಿಗೆ ಆರೋಪಿಸಿದ್ದು. ಅಂದರೆ ಆಚರಣೆಗಳ ಹಿಂದೆ ನಂಬಿಕೆಗಳು ಇರುತ್ತವೆ ಎಂಬ ಧೋರಣೆ. ಮಳೆಗಾಲದಲ್ಲಿ ನೃತ್ಯ ಮಾಡುವ ಬುಡಕಟ್ಟುಗಳು ಮತ್ತೇಕೆ ಅದನ್ನು ಮಾಡಬಹುದು? ಮಳೆ ಬರಲಿ ಅಂತ. ತಾವು ನೃತ್ಯ ಮಾಡಿದರೆ ಮಳೆ ಬರುತ್ತದೆ ಎಂದು ಅವು ನಂಬುತ್ತವೆ ಅಂತಾದರೆ ನೃತ್ಯಕ್ಕೂ ಮಳೆಗೂ ಕಾರ್ಯಾಕಾರಣ ಸಂಬಂಧವನ್ನು ಕಲ್ಪಿಸುತ್ತಿವೆ ಅಂತ ಅರ್ಥ. ಈ ನಂಬಿಕೆ ಏನು? ಮಳೆ ಹೊಯ್ಯಿಸುವವನೊಬ್ಬನಿದ್ದಾನೆ, ಅವನು ನೃತ್ಯ ಮಾಡಿದರೆ ಹೊಯ್ಯಿಸುತ್ತಾನೆ ಅಂತ. ಈ ಆಚರಣೆಗಳನ್ನು ಕುರಿತು ಈ ಜನರು ಕಥೆಗಳನ್ನು, ಪ್ರತೀತಿಗಳನ್ನು ಹೇಳಿಕೊಂಡು ಬಂದಿರುತ್ತಾರೆ. ಕಾರಣವನ್ನು ಕೇಳಿದಾಗ ಅವರು ಅಂಥ ಕಥೆಗಳನ್ನು ಹೇಳುತ್ತಾರೆ. ಇವೆಲ್ಲವುಗಳನ್ನಾಧರಿಸಿದ ವಿವರಣೆಗಳು ವಿದ್ವಾಂಸರನ್ನು ಎಲ್ಲಿಗೆ ಕೊಂಡೊಯ್ದವೆಂದರೆ ಈ ಜನರಿಗೆ ನಿಸರ್ಗದ ಕುರಿತು ಯಾವುದೇ ಯತಾರ್ಥ ತಿಳುವಳಿಕೆಯಿಲ್ಲ, ಅವರ ಕ್ರಿಯೆಗಳು ನಿಸರ್ಗದ ಕುರಿತ ಅಜ್ಞಾನದಿಂದ ಹುಟ್ಟಿವೆ.

          ಪಾಶ್ಚಾತ್ಯ ಮಾನವಶಾಸ್ತ್ರಜ್ಞರ ಇಂಥ ನಿರ್ಣಯಗಳ ಸಮಸ್ಯೆಯನ್ನು ವಿಟ್‌ಗೆನ್‌ಸ್ಟೈನ್ ಎಂಬ ವಿದ್ವಾಂಸನು ನಮ್ಮ ಗಮನಕ್ಕೆ ತರುತ್ತಾನೆ. ಅವನೆನ್ನುವಂತೆ ’ಇಂಥ ಆಚರಣೆಗಳ ಹಿಂದೆ ನಂಬಿಕೆಗಳು ಇವೆ ಎಂದು ವಿವರಿಸಲು ಹೋಗುವಲ್ಲೇ ಈ ಪಾಶ್ಚಾತ್ಯ ವಿದ್ವಾಂಸರು ಎಡವುತ್ತಾರೆ. ಹಾಗೂ ವಿವರಿಸುವಾಗ ಆ ಜನರೂ ಪಾಶ್ಚಾತ್ಯ ಮನುಷ್ಯರಂತೇ ಯೋಚಿಸುತ್ತಾರೆ ಎಂದು ಭಾವಿಸಿಕೊಳ್ಳುತ್ತಾರೆ. ಅದರ ಫಲವಾಗಿ ಅವರ ಕ್ರಿಯೆಗಳು ಹೆಡ್ಡತನದ್ದಾಗಿ ಕಾಣಿಸುತ್ತದೆ. ಆ ಜನರು ತಮ್ಮ ಕ್ರಿಯೆಗಳ ಕುರಿತು ಯಾವ ಕಥೆಯನ್ನು, ಪ್ರತೀತಿಯನ್ನು ಹೇಳುತ್ತಾರೋ ಅದು ಅವರ ಕ್ರಿಯೆಗಳ ಜೊತೆಗೆ ಇರುವ ಸಂಗತಿಯೇ ವಿನಃ ಕ್ರಿಯೆಗೆ ಕಾರಣವಲ್ಲ. ಭೂಮಿಯ ಮೇಲಿರುವ ಮನುಷ್ಯರ ಕ್ರಿಯೆಗಳನ್ನು ಗಮನಿಸಿದರೆ ಅವರ ಪ್ರಾಣಿ ಸಹಜ ವರ್ತನೆಗಳ ಜೊತೆಗೆ ವಿಧಿ ಆಚರಣೆಗಳು ಎಂದು ಕರೆಯಬಹುದಾದ ಪ್ರಭೇದದ ಆಚರಣೆಗಳೂ ಕೂಡ ಅವರಲ್ಲಿರುತ್ತವೆ. ಅವು ಸಿದ್ಧಾಂತಗಳನ್ನು, ನಂಬಿಕೆಯನ್ನು ಆಧರಿಸಿದ ಆಚರಣೆಗಳಲ್ಲ. ಅಂಥ ಆಚರಣೆಗಳು ಅಜ್ಞಾನದಿಂದ ಹುಟ್ಟಿವೆ ಎಂದು ಚಿತ್ರಿಸಿ ಅವು ಸುಳ್ಳು ವೈದ್ಯ, ಸುಳ್ಳು ವಿಜ್ಞಾನ ಅಂತೆಲ್ಲ ಕರೆದರೆ ಅಸಂಬದ್ಧವಾಗುತ್ತದೆ. ನೃತ್ಯ ಮಾಡಿದಾಕ್ಷಣ ಮಳೆ ಬರುತ್ತದೆ ಎಂದು ಆಫ್ರಿಕಾದ ಬುಡಕಟ್ಟುಗಳು ನಂಬಿದ್ದೇ ಹೌದಾದಲ್ಲಿ, ಅವು ಬಿರು ಬೇಸಿಗೆಯಲ್ಲೇಕೆ ನೃತ್ಯ ಮಾಡುವುದಿಲ್ಲ? ನಾಯಿಯ ಮೈಮೇಲಿನ ಹೇನುಗಳು ಏನಾದರೂ ಆಚರಣೆ ಮಾಡುತ್ತವೆ ಅಂತಾದರೆ ಅದು ನಾಯಿಯ ಚರ್ಮ ಹಾಗೂ ಕೂದಲನ್ನೇ ಅವಲಂಬಿಸಿ ನಡೆಯುವುವು ಸ್ವಾಭಾವಿಕ. ಅದರ ಹಿಂದೆ ನಂಬಿಕೆಗಳನ್ನು ಹುಡುಕುವುದೇ ತಪ್ಪು.

          ಈ ಕಾರಣಕ್ಕಾಗಿ ಪಾಶ್ಚಾತ್ಯರ ವಿವರಣೆಗಳನ್ನು ವೈಜ್ಞಾನಿಕ ಎಂದು ಕರೆಯುವುದು ಸಾಧ್ಯವಿಲ್ಲ. ವಿವರಣೆಯೇ ವೈಜ್ಞಾನಿಕವಾಗಿರದ ಮೇಲೆ ಅವು ಪಾಶ್ಚಾತ್ಯರ ಅಜ್ಞಾನಕ್ಕಷ್ಟೇ ಸಾಕ್ಷಿಯಾಗಬಲ್ಲವು. ಪಾಶ್ಚಾತ್ಯ ವಿದ್ವಾಂಸರು ನಮ್ಮ ಆಚರಣೆಗಳನ್ನು ವಿವರಿಸುವಾಗ ನಮ್ಮ ಕುರಿತ ಅವರ ಅಜ್ಞಾನವು ನಮ್ಮ ಹೆಡ್ಡತನವಾಗಿ ಅವರಿಗೆ ಕಾಣಿಸಿದೆ. ಅದಕ್ಕೆ ಕಾರಣ ಪಾಶ್ಚಾತ್ಯರ ಜ್ಞಾನದ ಮಿತಿಯೇ ವಿನಃ ನಮ್ಮ ಜ್ಞಾನದ ಮಿತಿಯಲ್ಲ ಎಂಬದನ್ನು ನಾವು ಅರಿಯುವ ಅಗತ್ಯವಿದೆ. ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ವಿವರಿಸುವ ಸಮಾಜ ವಿಜ್ಞಾನವೊಂದು ಇನ್ನೂ ಸ್ಪಷ್ಟವಾದ ಆಕಾರ ತಳೆದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಯಾರಾದರೂ ಅದರ ಪರವಾಗಿ ಅಥವಾ ವಿರೋಧವಾಗಿ ವೈಜ್ಞಾನಿಕ ಕಾರಣಗಳನ್ನು ಕೊಟ್ಟರೆ ಅವರು ಪಾಶ್ಚಾತ್ಯರ ತಪ್ಪನ್ನು ಮುಂದುವರೆಸುತ್ತಿರುತ್ತಾರೆ ಅಷ್ಟೆ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp