Home ವಸಾಹತು ಪ್ರಜ್ಞೆದಾರಿ ತಪ್ಪಿದ ಸಂಸ್ಕೃತಿ ಚಿಂತನೆ ವರ್ಣದಿಂದ ಜಾತಿಗಳು ಹುಟ್ಟಿದವೆ?

ವರ್ಣದಿಂದ ಜಾತಿಗಳು ಹುಟ್ಟಿದವೆ?

by Rajaram Hegde
105 views

ಪ್ರಾಚೀನ ಭಾರತೀಯ ಸಮಾಜವು ನಾಲ್ಕು ವರ್ಣಗಳಾಗಿ ವಿಭಾಗವಾಗಿತ್ತು ಎಂಬುದನ್ನು ನಾವು ಸ್ಕೂಲುಗಳಲ್ಲೇ ಕಲಿಯುತ್ತೇವೆ. ಅವೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ತರತಮ ವಿಭಜನೆ. ಈ ವಿಭಜನೆಯನ್ನು ವೇದ ಕಾಲದಲ್ಲಿ ಮಾಡಲಾಯಿತು ಹಾಗೂ ಅದು ಈಗಲೂ ಚಾಲ್ತಿಯಲ್ಲಿದೆ ಎಂಬುದಾಗಿ ಹೇಳಲಾಗುತ್ತದೆ. ಅಂದರೆ ಸುಮಾರು ಮೂರು ಸಾವಿರ ವರ್ಷಗಳ ವರೆಗೆ ಈ ವ್ಯವಸ್ಥೆಯು ಚೂರೂ ಕೊಂಕದೇ ಹಾಗೇ ಉಳಿದುಕೊಂಡು ಬಂದಿದೆ ಎಂದೂ ನಂಬಲಾಗಿದೆ. ಇಂದು ಈ ವೇದಕಾಲದ ವ್ಯವಸ್ಥೆ ಹಾಗೇ ಉಳಿದುಕೊಂಡು ಬಂದಿದೆ ಎಂದು ಹೇಗೆ ಹೇಳುತ್ತೀರಿ? ಅದಕ್ಕೆ ಇಂದಿನ ಸಾವಿರಾರು ಜಾತಿಗಳೆಲ್ಲ ಅದರದೇ ಭಾಗಗಳು ಎಂಬುದೇ ಉತ್ತರ. ನಾವೆಲ್ಲ ತಿಳಿದಂತೆ ವರ್ಣವೆಂಬುದು ವೃತ್ತಿಯನ್ನಾಧರಿಸಿ ಮಾಡಿಕೊಂಡ ವಿಂಗಡಣೆ, ಜಾತಿಯೆಂಬುದು ಹುಟ್ಟಿನಿಂದ ಬರುವ ವಿಂಗಡಣೆ. ಒಂದು ಮತ್ತೊಂದಕ್ಕೆ ಹೇಗೆ ಸಾಕ್ಷಿಯಾಗುತ್ತದೆ?

ಭಾರತೀಯ ಸಮಾಜದ ಕುರಿತು ಈ ಮೇಲಿನ ಸಾಮಾನ್ಯ ಜ್ಞಾನವು ಕಳೆದ ನೂರಾರು ವರ್ಷಗಳಿಂದ ಸತ್ಯದ ಸ್ಥಾನವನ್ನು ಪಡೆದಿದೆ. ಇಂದು ಕಾಣುವ ಈ ಸಾವಿರಾರು ಜಾತಿಗಳನ್ನೆಲ್ಲ ವೇದಕಾಲದಲ್ಲೇ ವಿಭಾಗಿಸಿ ಇಟ್ಟಿದ್ದಾರೆ, ಅದಕ್ಕೆ ಸಾಕ್ಷಿ ಎಂದರೆ ಪುರುಷ ಸೂಕ್ತ ಹಾಗೂ ನಂತರ ಕಾಲದ ಧರ್ಮಶಾಸ್ತ್ರಗಳಲ್ಲಿ ಬರುವ ವರ್ಣಧರ್ಮ ಕಲ್ಪನೆ. ನೀವು ಯಾವುದೇ ಇತಿಹಾಸ ಪುಸ್ತಕವನ್ನು ತೆಗೆದು ನೋಡಿ, ಯಾವುದೇ ರಾಜ್ಯದಲ್ಲಾಗಿರಬಹುದು ಸಮಾಜವು ನಾಲ್ಕು ವಿಭಾಗಗಳಾಗಿ ಇತ್ತು ಎನ್ನುತ್ತವೆ ಅವು. ಇಂದು ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಬಂಧಗಳನ್ನು ನೋಡಿರಿ, ಅವು ಹೊಸ ಹೊಸ ಚಾರಿತ್ರಿಕ ಕಾಲಘಟ್ಟ ಹಾಗೂ ಪ್ರದೇಶಗಳ ಕುರಿತು ಸಂಶೋಧಿಸುತ್ತವೆ ಹಾಗೂ ಆ ಸಮಾಜಗಳೂ ನಾಲ್ಕು ವರ್ಣಗಳಾಗಿ ವಿಭಜಿತವಾದವು ಎನ್ನುತ್ತವೆ ಅವು. ಆದರೆ ಈ ಇತಿಹಾಸಕಾರರು ಹಾಗೂ ಸಂಶೋಧಕರಲ್ಲಿ ಅದಕ್ಕೆ ಆಧಾರವನ್ನು ತೋರಿಸಿ ಎಂದು ಕೇಳಿದರೆ ಒಂದು ಸ್ಪಷ್ಟವಾದ ಆಧಾರವನ್ನು ತೋರಿಸಲೂ ಅವರಿಂದ ಸಾಧ್ಯವಾಗುವುದಿಲ್ಲ. ಈ ಕಾಲದ ಶಾಸನಗಳಲ್ಲಿ, ದಾಖಲೆಗಳಲ್ಲಿ ಬ್ರಾಹ್ಮಣರು ಅಂತ ಕಾಣಿಸಿಕೊಳ್ಳುತ್ತಾರೆ. ಉಳಿದ ವರ್ಣಗಳ ಬದಲಾಗಿ ನಾಲ್ಕು ವಿಭಾಗಗಳಿಗೆ ಸಂಬಂಧಪಡದ ಅನೇಕ ವೃತ್ತಿಗುಂಪುಗಳೂ, ಪಂಗಡಗಳೂ, ಬುಡಕಟ್ಟುಗಳೂ ವಿಫುಲವಾಗಿ ಕಾಣಿಸಿಕೊಳ್ಳುತ್ತವೆ. ಆಯಾ ಕಾಲದ ದಾಖಲೆಗಳಲ್ಲಿ ಬರುವ ಇಂಥ ಸಾಮಾಜಿಕ ಗುಂಪುಗಳು ಯಾವ ವರ್ಣಕ್ಕೆ ಸೇರುತ್ತವೆ ಎಂಬುದನ್ನು ಸಂಶೋಧಕರೇ ಕಂಡುಹಿಡಿಯಬೇಕಾಗುತ್ತದೆ. ಅಂದರೆ ಈ ರಾಜ್ಯಗಳಲ್ಲಿ ಇತ್ತೆಂದು ಹೇಳಲಾಗುವ ವರ್ಣ ವ್ಯವಸ್ಥೆಯನ್ನು ರಚಿಸಿದವರು ಆಧುನಿಕ ಇತಿಹಾಸ ಸಂಶೋಧಕರೇ ಎನ್ನಬಹುದು.

ತಾತ್ಪರ್ಯವೆಂದರೆ ಮೌರ್ಯ ಕಾಲದಿಂದ ಹಿಡಿದು ಮರಾಠ ಕಾಲದ ವರೆಗೆ ಹಿಂದೂ ರಾಜ್ಯಗಳಲ್ಲೇ ಈ ನಾಲ್ಕು ವಿಭಜನೆಗಳು ಇದ್ದುದಕ್ಕೆ ನಮಗೆ ಆಧಾರಗಳಿಲ್ಲ. ಅವು ಧರ್ಮಶಾಸ್ತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಆದರೆ ಇಂಥ ಧರ್ಮಶಾಸ್ತ್ರಗಳು ಈ ನಾಲ್ಕು ವರ್ಣಗಳ ಜೊತೆಗೆ ಇವುಗಳಿಂದ ಸಂಕರವಾಗಿ ಹುಟ್ಟಿದ ನೂರಾರು ಸಂಕೀರ್ಣ ಜಾತಿಗಳನ್ನೂ ಉಲ್ಲೇಖಿಸುತ್ತವೆ. ಹಾಗೂ ಈ ಜಾತಿಗಳಿಗೆ ಇಂತಿಂಥ ವೃತ್ತಿ ಎಂದು ನೂರಾರು ವೃತ್ತಿಗಳನ್ನು ಅವು ವಿಧಿಸುತ್ತವೆ. ಈ ಜಾತಿಗಳು ನಾಲ್ಕು ವರ್ಣಗಳಿಂದ ಸಂಕರವಾಗಿ ಹುಟ್ಟಿದ ಕಾರಣದಿಂದ ನಾಲ್ಕು ವರ್ಣಗಳಂತೂ ಅಲ್ಲ. ಹಾಗಾಗಿ ಧರ್ಮಶಾಸ್ತ್ರಗಳ ಪ್ರಕಾರವೂ ಭಾರತೀಯ ಸಮಾಜದಲ್ಲಿ ನಾಲ್ಕೇ ವಿಭಜನೆ ಇರಲಿಲ್ಲ. ಆದರೆ ಈ ಸಂಕೀರ್ಣ ಜಾತಿಗಳು ಧರ್ಮಶಾಸ್ತ್ರಕಾರರ ಕಪೋಲಕಲ್ಪನೆ ಎಂಬುದಾಗಿ ಧರ್ಮಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ ಪಿ.ವಿ.ಕಾಣೆ ಎಂಬ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಈ ಧರ್ಮಶಾಸ್ತ್ರಕಾರರು ತಮ್ಮ ಕಾಲದಲ್ಲಿ ಇದ್ದ ನೂರಾರು ಜಾತಿಗಳನ್ನು ವರ್ಣದ ಚೌಕಟ್ಟಿನೊಳಗೆ ವಿವರಿಸಲು ಈ ಕಥೆಯನ್ನು ಕಟ್ಟಿಕೊಂಡು ಹೆಣಗಿದ್ದಾರೆ. ಇಂದು ನಮ್ಮ ಸುತ್ತ ಕಾಣುವ ಸಾವಿರಾರು ಜಾತಿಗಳೆಲ್ಲ ನಾಲ್ಕು ಶುದ್ಧ ವರ್ಣಗಳ ಸಂಕರದಿಂದಲೇ ಹುಟ್ಟಿವೆ ಎಂಬುದನ್ನು ಸಣ್ಣ ಮಗು ಕೂಡ ನಂಬಲಾರದು.

ಈ ರೀತಿಯಾಗಿ ವರ್ಣಕ್ಕೂ ಜಾತಿಗೂ ಏನು ಸಂಬಂಧ ಎಂಬುದು ನಮ್ಮ ಸಂಸ್ಕೃತ ಗ್ರಂಥಗಳನ್ನು ಓದಿದರೆ ತಿಳಿಯುವುದಿಲ್ಲ. ಅಸಲು ವರ್ಣ ಎನ್ನುವುದು ಸಮಾಜದ ವಿಭಜನೆಯಾಗಿತ್ತು ಎನ್ನುವುದಕ್ಕೇ ಆಧಾರವಿಲ್ಲ. ಅದು ಈಗಾಗಲೇ ಅಸ್ತಿತ್ವದಲ್ಲಿದ್ದ ಸಮಾಜವನ್ನು ವಿವರಿಸುವ ಒಂದು ಚೌಕಟ್ಟಾಗಿತ್ತು. ಈ ಚೌಕಟ್ಟನ್ನಿಟ್ಟುಕೊಂಡು ಇಂದಿನ ಯಾವುದೇ ದೇಶದ ಸಮಾಜವನ್ನೂ ವಿವರಿಸಬಹುದು. ಉದಾಹರಣೆಗೆ, ಅದನ್ನು ಅಮೇರಿಕಾದಲ್ಲಿ ಕೂಡ ಕಲ್ಪಿಸಬಹುದು: ಅಲ್ಲಿನ ಶಿಕ್ಷಕರೆಲ್ಲ ಬ್ರಾಹ್ಮಣರು, ಆಳುವವರು ಕ್ಷತ್ರಿಯರು, ವ್ಯಾಪಾರಿಗಳು ವೈಶ್ಯರು, ಕಾರ್ಮಿಕರು ಶೂದ್ರರು ಅಂತ. ಅದರರ್ಥ ಅಮೇರಿಕಾದ ಸಮಾಜವನ್ನು ಈ ರೀತಿಯಾಗಿ ಯಾರೋ ವಿಭಜನೆ ಮಾಡಿದ್ದಾರೆ ಎಂಬುದು ಸಿದ್ಧವಾಗುವುದಿಲ್ಲ. ಅಂದರೆ ಚರಿತ್ರೆಯ ಯಾವುದೇ ಕಾಲದಲ್ಲಾದರೂ ನಮ್ಮ ಸಮಾಜವು ನಾಲ್ಕು ಕೋಣೆಗಳ ಹಾಗೆ ವಿಭಜಿತವಾಗಿತ್ತು ಎಂಬುದು ಅಸಂಭವನೀಯ. ವರ್ಣವೊಂದು ವಿವರಣೆಯ ಚೌಕಟ್ಟು.

ವರ್ಣವು ಕಾಲ್ಪನಿಕವಾಗಿರಬಹುದು. ಆದರೆ ಈ ಕಾಲ್ಪನಿಕ ಚೌಕಟ್ಟನ್ನೇ ಇಟ್ಟುಕೊಂಡು ಲೋಕದಲ್ಲಿ ಅಸ್ತಿತ್ವದಲ್ಲಿರುವ ನಾನಾ ರೂಪದ ಜಾತಿಗಳನ್ನೆಲ್ಲ ಅದಕ್ಕೆ ತುರುಕುವ ಕೆಲಸವೆಂದಾದರೂ ನಡೆದಿತ್ತೆ? ನಡೆದಿತ್ತು ಎನ್ನಲಿಕ್ಕೂ ಆಧಾರಗಳಿಲ್ಲ. ಹಾಗೆ ತುರುಕಿದ್ದರೆ ಇಂದು ಇರುವ ಜಾತಿಗಳು ಈ ನಾಲ್ಕು ವಿಭಾಗಕ್ಕೆ ನೀಟಾಗಿ ಹೊಂದಿಕೊಳ್ಳಬೇಕಿತ್ತು. ಹಾಗಾಗಿದ್ದ ಪಕ್ಷದಲ್ಲಿ ಕಳೆದ ನೂರು ವರ್ಷಗಳ ಸಮಾಜಶಾಸ್ತ್ರವು ವರ್ಣಕ್ಕೂ ಜಾತಿಗೂ ಏನು ಸಂಬಂಧ ಎಂಬ ಬಗೆಹರಿಯದ ಚರ್ಚೆಯನ್ನು ಮಾಡುವ ಕೆಲಸವಿರಲಿಲ್ಲ. ಈ ಜಾತಿ ಮತ್ತು ವರ್ಣಗಳು ಒಂದೇ ಎಂಬ ಜ್ಞಾನವನ್ನು ಇಟ್ಟುಕೊಂಡು ಇಂದಿನ ಜಾತಿಗಳ ಕುರಿತು ಸಿದ್ದಾಂತಗಳನ್ನು ಬೆಳೆಸಲು ಪ್ರಯತ್ನಿಸಿದ ಸಮಾಜ ಶಾಸ್ತ್ರಜ್ಞರಿಗಾದರೂ ಏನಾದರೂ ಉತ್ತರ ಸಿಕ್ಕಿದೆಯೆ? ಅವರಿಗೂ ಬಗೆಹರಿಯದ ಸಮಸ್ಯೆಗಳು ಎದುರಾದವು. ಇಂದು ನಮ್ಮ ಸುತ್ತಲಿರುವ ಜಾತಿಗಳನ್ನು ವರ್ಣಗಳಿಗೆ ತಾಳೆಮಾಡುತ್ತ ಹೋದಾಗಲೂ ಒಂದಷ್ಟು ಬ್ರಾಹ್ಮಣ ಜಾತಿಗಳು ಮಾತ್ರ ಸಿಕ್ಕವು. ಕ್ಷತ್ರಿಯ ವೈಶ್ಯರು ಅಂತ ಕರೆದುಕೊಳ್ಳುವ ಕೆಲವು ಜಾತಿಗಳೂ ಇದ್ದವೆನ್ನಿ. ಆದರೆ ಉಳಿದ ಸಾವಿರಾರು ಜಾತಿಗಳನ್ನು ಎಲ್ಲಿ ಸೇರಿಸಬೇಕು ಎಂಬುದು ತಿಳಿಯಲಿಲ್ಲ. ಹಾಗಾಗಿ ಅವರೆಲ್ಲ ಶೂದ್ರರಾದರು.

ಇದರ ಪರಿಣಾಮವಾಗಿ ಸಮಾಜ ಶಾಸ್ತ್ರಜ್ಞರು ಹೇಳುವುದೆಂದರೆ ಭಾರತದಲ್ಲಿ ಬ್ರಾಹ್ಮಣ ಮತ್ತು ಶೂದ್ರ ಇವೆರಡೇ ಸ್ಥಾಯಿಯಾಗಿದ್ದ ವಿಂಗಡಣೆಗಳು, ವೈಶ್ಯ, ಕ್ಷತ್ರಿಯಗಳು ಅಸ್ಪಷ್ಟವಾಗಿವೆ ಅಂತ. ಕೇವಲ ಜನಿವಾರವನ್ನು ಗಮನದಲ್ಲಿ ಇಟ್ಟುಕೊಂಡು ಬ್ರಾಹ್ಮಣ ಹಾಗೂ ಶೂದ್ರ ಎಂಬ ವಿಂಗಡಣೆಯನ್ನು ಮಾಡಿದರೆ ಸಮಾಜ ವಿಜ್ಞಾನವಾಗುತ್ತದೆಯೆ? ವರ್ಣ ಕಲ್ಪನೆಯ ಪ್ರಕಾರ ಮೇಲಿನ ಮೂರೂ ವರ್ಣಗಳಿಗೂ ಉಪನಯನ ಸಂಸ್ಕಾರವಿತ್ತು. ಜನಿವಾರ ಹಾಕಿದವರಲ್ಲೂ ನೂರಾರು ಜಾತಿಗಳಿವೆ. ಹಾಕದವರಲ್ಲೂ ಇವೆ. ವರ್ಣವಿಭಜನೆ ಇದೆ ಎಂಬುದನ್ನು ಸಮರ್ಥಿಸುವ ಸಲುವಾಗಿ ಅವರ ತರತಮ, ವೈವಿಧ್ಯತೆಗಳನ್ನೆಲ್ಲ ಬದಿಗಿರಿಸಿ ಅವರನ್ನು ಎರಡೇ ಗುಂಪು ಎಂದು ಗುರುತಿಸಬೇಕಾಗುತ್ತದೆ. ಹಾಗೆ ಮಾಡುವಾಗ ಈ ಜಾತಿಗಳನ್ನೆಲ್ಲ ಇನ್ನೂ ಬೇರೆ ಬೇರೆ ರೀತಿಯಲ್ಲಿ ವಿಂಗಡಿಸುವ ಸ್ಪೃಶ್ಯ-ಅಸ್ಪೃಶ್ಯರು, ಎಡಗೈ-ಬಲಗೈ, ಅಥವಾ ಶೈವ-ವೈಷ್ಣವ ಇತ್ಯಾದಿಗಳೆಲ್ಲ ಏನು ಎಂಬ ಪ್ರಶ್ನೆ ಬರುತ್ತದೆ.

ವರ್ಣಕ್ಕೂ ಜಾತಿಗೂ ಅವಿನಾಭಾವೀ ಸಂಬಂಧ ಏರ್ಪಟ್ಟಿದ್ದು ವಸಾಹತು ಕಾಲದ ಸಮಾಜಶಾಸ್ತ್ರದಲ್ಲಿ, ಬ್ರಿಟಿಷರಿಗೆ ನಮ್ಮ ಸಮಾಜದ ಕುರಿತು ಮಾಹಿತಿಯನ್ನು ನೀಡಿದವರು ದೇಶೀ ಪಂಡಿತರೇ. ಇವರು ಇಂದಿನ ಜಾತಿಗಳ ರಚನೆಗೆ ಗ್ರಂಥಾಧಾರವಾಗಿ ನಾಲ್ಕು ವರ್ಣಗಳನ್ನು ಉಲ್ಲೇಖಿಸಿದರು. ಆದರೆ ವರ್ಣ ಎಂಬುದು ವೃತ್ತಿಯನ್ನಾಧರಿಸಿದ್ದು ಹಾಗೂ ಜಾತಿ ಎಂಬುದು ಹುಟ್ಟನ್ನಾಧರಿಸಿದ್ದು ಎಂಬ ಸಂಗತಿಯನ್ನು ಪಾಶ್ಚಾತ್ಯ ವಿದ್ವಾಂಸರು ಕಂಡುಕೊಂಡರು. ಹಾಗಾಗಿಯೇ ವೃತ್ತಿಯನ್ನಾಧರಿಸಿದ ವರ್ಣವು ಹುಟ್ಟನ್ನಾಧರಿಸಿದ ಜಾತಿಯಾಗಿ ಹೇಗೆ ವಿರೂಪಗೊಂಡಿತು ಎಂಬ ಸಂಶೋಧನೆ ಸಮಾಜ ಶಾಸ್ತ್ರಕ್ಕೆ ಬಹಳ ಮಹತ್ವದ್ದಾಯಿತು. ಕಳೆದ ನೂರು ವರ್ಷಗಳಿಂದ ಇಂಥ ದಾರಿತಪ್ಪಿಸುವ ಪ್ರಶ್ನೆಗಳೇ ಸಮಾಜ ಶಾಸ್ತ್ರಕ್ಕೆ ಮುಖ್ಯವಾಗಿರುವುದರಿಂದ ವಸ್ತುಸ್ಥಿತಿ ಮರೆಮಾಚಿ ಹೋಗಿದೆ. ವರ್ಣ ವಿಭಜನೆಯು ಇಂದಿಗೂ ಇದೆ ಎಂಬ ಸಾಮಾನ್ಯ ಜ್ಞಾನವು ಅಚಲವಾಗಿ ಉಳಿದಿದೆ.

Author

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp