Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಏನೀ ಮೂಢನಂಬಿಕೆ?

ಏನೀ ಮೂಢನಂಬಿಕೆ?

by Rajaram Hegde
71 views

ಮೂಢನಂಬಿಕೆ ಎನ್ನುವ ಶಬ್ದವನ್ನು ನಾವೆಲ್ಲ ಆಗಾಗ ಬಳಸುತ್ತಿದ್ದರೂ ಕೂಡ ಅದು ಭಾರತೀಯರಿಗೆ ಅರ್ಥವಾಗುವುದಿಲ್ಲ. ಕ್ರಿಶ್ಚಿಯಾನಿಟಿಯನ್ನು ಅರ್ಥಮಾಡಿಕೊಂಡರೆ ಮಾತ್ರ ಈ ಶಬ್ದ ಅರ್ಥವಾಗುತ್ತದೆ.

ವಿದ್ಯಾವಂತರಿಗೆ ಈ ಶಬ್ದ ಸುಪರಿಚಿತ. ’ಭಾರತೀಯ ಸಮಾಜದಲ್ಲಿ ಮೂಢನಂಬಿಕೆ ಆಳವಾಗಿ ಬೇರುಬಿಟ್ಟಿದೆ’, ಅಥವಾ ’ಭಾರತೀಯರು ಯಾವ್ಯಾವುದೋ ಮೂಢನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ’, ’ಈ ಮೂಢನಂಬಿಕೆಗಳನ್ನು ತೊಡೆದುಹಾಕಿದ ಹೊರತೂ ನಮ್ಮ ಸಮಾಜ ಉದ್ಧಾರವಾಗುವುದಿಲ’, ಇತ್ಯಾದಿ ಹೇಳಿಕೆಗಳನ್ನು ಪ್ರತಿಯೊಬ್ಬನೂ ಭಾಷಣ-ಲೇಖನಗಳಲ್ಲಿ, ತರಗತಿಯ ಪಾಠಗಳಲ್ಲಿ ಸಾಕಷ್ಟು ಕೇಳಿರುತ್ತಾನೆ. ಈ ಶಬ್ದದ ಜೊತೆಗೆ ಸಮಾನಾರ್ಥಕವಾಗಿ ’ಕುರುಡು ನಂಬಿಕೆ’, ’ಅಂಧ ಶ್ರದ್ಧೆ’, ’ಗೊಡ್ಡು ಸಂಪ್ರದಾಯಗಳು’ ಇತ್ಯಾದಿ ಶಬ್ದಗಳೂ ಬಳಕೆಯಲ್ಲಿವೆ. ಈ ಶಬ್ದಗಳೆಲ್ಲ ನಮಗೆ ಅರ್ಥವಾಗುತ್ತಿವೆ ಎಂಬುದಾಗಿ ಭಾವಿಸಿಕೊಂಡೇ ನಾವು ಅವನ್ನು ಉಪಯೋಗಿಸುತ್ತಿರುತ್ತೇವೆ. ಇವುಗಳ ಅರ್ಥವನ್ನು ಕೇಳಿದರೆ ’ಅವು ಅವೈಜ್ಞಾನಿಕ, ಅಜ್ಞಾನದಿಂದ ಮಾಡುವಂಥವು, ಹಾಗಾಗಿ ಅವು ಮೌಢ್ಯ’ ಎಂಬ ಉತ್ತರ ಬರುತ್ತದೆ.         

          ಹೀಗೊಂದು ಪ್ರಶ್ನೆ ಕೇಳಿಕೊಳ್ಳುವಾ. ಒಂದು ಸಮಾಜದಲ್ಲಿ ಜನರು ಮಾಡುವ ಕೆಲಸಕ್ಕೆಲ್ಲವೂ ವೈಜ್ಞಾನಿಕ ಕಾರಣಗಳಿರಲು ಸಾಧ್ಯವೆ? ಅಂಥವೆಲ್ಲವೂ ಮೂಢನಂಬಿಕೆಯಾಗುತ್ತವೆಯೆ?  ಗುರು ಹಿರಿಯರಿಗೆ ಕಾಲುಮುಟ್ಟಿ ನಮಸ್ಕರಿಸುತ್ತೇವೆ, ಮನಸ್ಸಿಗೆ, ಸಂಬಂಧಕ್ಕೆ ಎಲ್ಲ ಹಿತವೇ, ಆದರೆ ವೈಜ್ಞಾನಿಕ ಕಾರಣ ಗೊತ್ತಿಲ್ಲ. ನಮ್ಮ ವಿದ್ಯಾವಂತರ ಆಧುನಿಕ ಸಮಾಜವನ್ನೇ ತೆಗೆದುಕೊಳ್ಳಿ: ಬೇಸಿಗೆಯಲ್ಲಿ ಸೆಕೆಯಾಗಿ ಬೆವರು ಕಿತ್ತುಕೊಂಡು ಹಿಂಸೆಯಾಗುತ್ತಿರುತ್ತದೆ. ಆದರೂ ಕೋಟು, ಟೈಗಳನ್ನು ಕಟ್ಟಿಕೊಂಡು ಆಫೀಸಿಗೆ ಬರುವುದು ಶಿಷ್ಟಾಚಾರ ಅಥವಾ ಡ್ರೆಸ್ ಕೋಡು. ಕೆಲವರಿಗೆ ಕಡ್ಡಾಯ. ಇದರಲ್ಲಿ ಏನು ವೈಜ್ಞಾನಿಕತೆಯಿದೆ? 

          ಹೀಗೆ ಯಾವುದೇ ಸಮಾಜವನ್ನು ನೋಡಿದರೂ ಕೂಡ ವೈಜ್ಞಾನಿಕ ಕಾರಣಗಳ ಯಾವುದೇ ಹಂಗಿಲ್ಲದೇ ಇಂಥ ಪದ್ಧತಿಗಳು ಅಥವಾ ರೂಢಿಗಳು ಸಮುದಾಯಗಳನ್ನು ಒಟ್ಟಿಗೇ ಹಿಡಿದಿರುತ್ತವೆ, ಸಂಬಂಧಗಳನ್ನು ಬೆಸೆಯುತ್ತಿರುತ್ತವೆ. ’ಅವೈಜ್ಞಾನಿಕ’ ಎಂಬ ಕಾರಣವನ್ನು ಇಟ್ಟುಕೊಂಡು ಇಂಥ ಆಚರಣೆಗಳನ್ನೆಲ್ಲ ತೊಡೆದುಹಾಕಿದರೆ ಯಾವುದಾದರೂ ಮನುಷ್ಯ ಸಮಾಜವು ಅಸ್ತಿತ್ವದಲ್ಲಿರಲು ಸಾಧ್ಯವೆ? ಹಾಗಿದ್ದ ಪಕ್ಷದಲ್ಲಿ ಇಂಥ ರೂಢಿಗಳು ಭಾರತೀಯ ಸಮಾಜದಲ್ಲಿ ಮಾತ್ರವೇ ಉಚ್ಛಾಟಿಸಬೇಕಾದ ಪೆಡಂಭೂತವಾಗಿದ್ದು ಹೇಗೆ ಮತ್ತು ಯಾವಾಗ? ಮೂಢ ನಂಬಿಕೆ ಏಕೆ ತೊಡೆಯಬೇಕಾದ ಅನಿಷ್ಠವೆಂಬುದಾಗಿ ನಾವೆಲ್ಲ ನಂಬಿದ್ದೇವೆ?

          ಈ ಮೂಢನಂಬಿಕೆ, ಅಂಧಶ್ರದ್ಧೆ ಇತ್ಯಾದಿ ಪದಗಳೆಲ್ಲ ಕನ್ನಡದಲ್ಲಿ ಅರ್ಥವಿಲ್ಲದ ಶಬ್ದಗಳು. ಅವು ಇಂಗ್ಲೀಷಿನ ’ಸೂಪರ್‌ಸ್ಟಿಶನ್’ ಎಂಬ ಶಬ್ದದ ಕನ್ನಡಾನುವಾದಗಳು. ಭಾರತೀಯ ಭಾಷೆಗಳಲ್ಲಿ ಮೌಢ್ಯ ಎಂದರೆ ಅಜ್ಞಾನ ಎಂಬ ಅರ್ಥವಿದೆ. ಮೂಢ ಎಂದರೆ ಅಜ್ಞಾನಿ. ಈ ಶಬ್ದವನ್ನು ನಮ್ಮ ಅಧ್ಯಾತ್ಮದ ಹಿನ್ನೆಲೆಯಲ್ಲಿ ಅರ್ಥೈಸಿದರೆ ಮಾತ್ರ ಅರ್ಥವಾಗುತ್ತದೆ. ಜ್ಞಾನವೆಂದರೆ ಆತ್ಮಜ್ಞಾನ, ಅದನ್ನು ತೊಡಕಾಗುವುದು ಮೌಢ್ಯ. ಆದರೆ ನಮ್ಮಲ್ಲಿ ಮೂಢ ನಂಬಿಕೆ ಎನ್ನುವ ಪದಗುಚ್ಛವಿಲ್ಲ. ಅದೇ ಥರ ಅಂಧ ಶ್ರದ್ಧೆ. ಶ್ರದ್ಧೆ ಕುರುಡಾಗಿರುವುದು ಅಂದರೇನು? ಕಣ್ಣಿರುವ ಶ್ರದ್ಧೆ ಅಂತ ಒಂದಿದೆಯೆ? ಭಾರತೀಯ ಭಾಷೆಯಲ್ಲಿ ಈ ಪದವನ್ನು ಅರ್ಥೈಸಲು ಹೋದರೆ ನಗೆಪಾಟಲಾಗುತ್ತದೆ. ಸೂಪರ್‌ಸ್ಟಿಶನ್ ಎಂಬುದು ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಒಂದು ಪರಿಕಲ್ಪನೆಯನ್ನು ಸೂಚಿಸುವ ಪರಿಭಾಷೆ. ಆ ಹಿನ್ನೆಲೆಯಲ್ಲಿ ಮಾತ್ರವೇ ಅರ್ಥವಾಗುವ ಶಬ್ದ. ಈ ಶಬ್ದವು ಮೂಲತಃ ರೋಮನ್ನರಲ್ಲಿ ಬಳಕೆಯಲ್ಲಿದ್ದು, ಅದರರ್ಥ ’ದೇವರುಗಳ ಕುರಿತು ಅತಿಯಾದ ಹೆದರಿಕೆ’ ಎಂಬುದಾಗಿದೆ. ಇದನ್ನೊಂದು ಒಳ್ಳೆಯ ಲಕ್ಷಣ ಎಂಬುದಾಗಿ ರೋಮನ್ನರೇನೂ ಭಾವಿಸಿರಲಿಲ್ಲ. ಆದರೆ ರೋಮನ್ ಸಂಸ್ಕೃತಿಯನ್ನು ನಾಶಮಾಡಿ ಅದರ ಮೇಲೆ ಪ್ರತಿಷ್ಠಾಪಿತವಾದ ಕ್ರಿಶ್ಚಿಯಾನಿಟಿಯು ರೋಮನ್ನರ ದೇವತೆಗಳನ್ನು ಸುಳ್ಳು ದೇವತೆಗಳೆಂದು ನಿರೂಪಿಸಿತು. ಈ ಸುಳ್ಳು ದೇವತೆಗಳು ಕ್ರೈಸ್ತರ ಗಾಡ್‌ನ ವಿರೋಧಿಯಾದ ಡೆವಿಲ್ಲನ ಮೋಸಗಳು. ಈ ದೇವತೆಗಳ ಮೂಲಕ ಡೆವಿಲ್ಲನು ಜನರನ್ನು ದಾರಿತಪ್ಪಿಸುತ್ತಿದ್ದಾನೆ ಏಕೆಂದರೆ ಅವು ಗಾಡ್‌ನ ವೈರಿಗಳು ಎಂಬುದಾಗಿ ಬರೆದುಕೊಂಡರು. ಆಗ ಸೂಪರ್‌ಸ್ಟಿಶನ್ ಶಬ್ದಕ್ಕೆ ತನ್ನದೇ ಆದ ಹೊಸ ಅರ್ಥವೊಂದು ಪ್ರಾಪ್ತವಾಯಿತು. ಅದೆಂದರೆ ’ ಸುಳ್ಳು ದೇವರುಗಳನ್ನು ಕುರಿತ ಭಯ ಅಥವಾ ಅವನ್ನು ಪೂಜಿಸುವುದು’ ಅಂತ.

          ೧೬ನೆಯ ಶತಮಾನದಲ್ಲಿ ಪ್ರೊಟೆಸ್ಟಾಂಟ್ ಸುಧಾರಣಾವಾದಿಗಳು ಅಂದು ಪ್ರಚಲಿತದಲ್ಲಿದ್ದ ರೋಮನ್ ಕ್ಯಾಥೋಲಿಕ್ ಚರ್ಚಿನ ರೂಢಿಗಳನ್ನು ಕಟುವಾಗಿ ಟೀಕಿಸಿದರು. ಕ್ಯಾಥೋಲಿಕರು ರೋಮನ್ನರ ಪೇಗನ್ ಸೂಪರ್‌ಸ್ಟಿಶನ್ನುಗಳನ್ನು ಅಳವಡಿಸಿಕೊಂಡಿದ್ದಾರೆ. ಇಂಥ ಆಚರಣೆಗಳನ್ನು ಕ್ಯಾಥೋಲಿಕ್ ಪುರೋಹಿತರು ಸ್ವಲಾಭಕ್ಕಾಗಿ ಹುಟ್ಟುಹಾಕಿ ಜನರನ್ನು ಸನ್ಮಾರ್ಗದಿಂದ ದಾರಿತಪ್ಪಿಸಿದ್ದಾರೆ. ಎಂಬುದಾಗಿ ಅದರ ವಿರುದ್ಧ ಯುದ್ಧ ಸಾರಿದರು.

           ಅದೇ ಕಾಲದಲ್ಲೇ ಭಾರತಕ್ಕೆ ಬಂದ ಮಿಶನರಿಗಳು ಭಾರತದಲ್ಲಿದ್ದ ಜನರೆಲ್ಲ ಯಾವುದೋ ಕಾಲದಲ್ಲಿ ವಲಸೆ ಬಂದ ಕ್ರಿಶ್ಚಿಯನ್ನರೇ ಎಂಬ ಕಲ್ಪನೆಯನ್ನು ಇಟ್ಟುಕೊಂಡಿದ್ದರು. ಆದರೆ ಇವರನ್ನು ನೋಡಿದಾಗ ಇವರ ಆಚರಣೆಗಳಿಗೂ ಕ್ರೈಸ್ತ ಆಚರಣೆಗಳಿಗೂ ಸಂಬಂಧವೇ ಇಲ್ಲ ಎಂಬುದನ್ನು ಗಮನಿಸಿ ಇಲ್ಲಿ ಕೂಡ ನಿಜವಾದ ರಿಲಿಜನ್ನು ಸೂಪರ್‌ಸ್ಟಿಶನ್‌ಗಳಿಂದ ತುಂಬಿಕೊಂಡು ಹಳ್ಳಹಿಡಿದು ಹೋಗಿದೆ ಎಂಬುದಾಗಿ ಭಾವಿಸಿದರು. ಇವರನ್ನು ಹೀದನ್ನರೆಂಬುದಾಗಿ ಕರೆದರು. ಇವರಿಗೆ ತಮ್ಮ ಸೃಷ್ಟಿಕರ್ತನಾದ ಗಾಡ್ ತುಂಬಾ ಮಾಸಲು ಮಾಸಲಾಗಿ ನೆನಪಿನಲ್ಲಿದ್ದಾನೆ, ಹಾಗಾಗಿ ಅವನನ್ನೇ ಪೂಜಿಸಬೇಕೆಂಬುದು ಅವರ ತುಡಿತವಾಗಿದೆ. ಆದರೆ ಅವರಿಗೆ ಸತ್ಯವಾದ ರಿಲಿಜನ್ನು ಸ್ಪಷ್ಟವಾಗಿ ನೆನಪಿಲ್ಲ, ಡೆವಿಲ್ಲನು ಅವರನ್ನು ದಾರಿ ತಪ್ಪಿಸಿಬಿಟ್ಟಿದ್ದಾನೆ, ಅದಕ್ಕೇ ಹೀಗೆಲ್ಲಾ ತಪ್ಪು ತಪ್ಪು ಆಚರಣೆಗಳನ್ನು, ಅಥವಾ ಮೂಢಾಚರಣೆಗಳನ್ನು ರೂಢಿಸಿಕೊಂಡಿದ್ದಾರೆ ಎಂದುಕೊಂಡರು. ಇವರನ್ನು ತಪ್ಪುದಾರಿಗೆ ಎಳೆದವರೇ ಡೆವಿಲ್ಲನ ದೂತರಾದ ಬ್ರಾಹ್ಮಣ ಪುರೋಹಿತರು. ಹಾಗಾಗಿ ಈ ಅನಾಹುತವನ್ನು ನೋಡುತ್ತ ಸುಮ್ಮನೆ ಇರುವುದು ಮಿಶನರಿಗಳ ಪ್ರಾಮಾಣಿಕತೆಗೆ ಒಗ್ಗಲಿಲ್ಲ. ಭಾರತೀಯರಿಗೆ ನಿಜವಾದ ರಿಲಿಜನ್ನನ್ನು ಪರಿಚಯಿಸಿ ಇಂಥ ಸೂಪರ್‌ಸ್ಟಿಶನ್ನುಗಳ ಕುರಿತು ಅರಿವು ಮೂಡಿಸಿ ಅವರನ್ನು ನರಕದಿಂದ ಪಾರುಮಾಡಲು ಪ್ರಯತ್ನಿಸಿದರು. ಅದರಲ್ಲಿ ಅವರು ಸಫಲರಾಗಲಿಲ್ಲ ಎಂಬುದು ಬೇರೆ ವಿಷಯ.

          ’ಹೀದನ್ನನು (ಗಾಡ್ ಕುರಿತ) ಕುರುಡುತನದಿಂದ ಮರ ಮತ್ತು ಕಲ್ಲುಗಳಿಗೆ ತಲೆಬಾಗುತ್ತಾನೆ.’ ಎಂಬುದು   ಬಿಶಪ್ ಹೆಬರ್ ಎಂಬವನು ಬರೆದ ಪದ್ಯದ ಸುಪ್ರಸಿದ್ಧ ಸಾಲು. ಈ ಸಾಲು ಏನನ್ನು ಹೇಳುತ್ತದೆ ಎಂಬುದನ್ನು ಸರಿಯಾಗಿ ಬಿಡಿಸಿದರೆ ಮೂಢ ನಂಬಿಕೆ, ಅಂಧ ಶ್ರದ್ಧೆ ಇತ್ಯಾದಿ ಶಬ್ದಗಳಿಗೆ   ಕ್ರೈಸ್ತ ಅರ್ಥ ಸಿಗುತ್ತದೆ. ಕ್ರಿಶ್ಚಿಯನ್ನರ  ನಿಜವಾದ ಗಾಡ್ ಅಥವಾ ಸೃಷ್ಟಿಕರ್ತನನ್ನು ಕಾಣಲಾಗದೇ ಭಾರತೀಯನೊಬ್ಬನು ಮರ ಮತ್ತು ಕಲ್ಲುಗಳನ್ನು ಪೂಜಿಸುವುದು ಕ್ರೈಸ್ತ ಮಿಶನರಿಗಳಿಗೆ ಕುರುಡುತನವಾಗಿ ಕಂಡದ್ದರಲ್ಲಿ ಅರ್ಥವಿದೆ. ಹಾಗೂ ಅಂಥ ಸ್ಥಿತಿಯಲ್ಲಿ ಶೃದ್ಧೆಯಿಂದ ತಲೆಬಾಗುವುದೇ ಕುರುಡು ಶ್ರದ್ಧೆ ಎಂಬುದಾಗಿಯೂ ಕ್ರೈಸ್ತರ ಸಂದರ್ಭದಲ್ಲಿ   ಅರ್ಥಹೊರಡಬಹುದು.

          ಅದೇ ರೀತಿಯಲ್ಲಿ ’ನಂಬಿಕೆ’ ಎನ್ನುವ ಶಬ್ದ ಕೂಡ ಕ್ರಿಶ್ಚಿಯಾನಿಟಿಯಲ್ಲಿ ವಿಶೇಷಾರ್ಥವನ್ನು ಹೊಂದಿದೆ. ಅದು ದೈವವಾಣಿಯ ಮೇಲಿನ ನಂಬಿಕೆ. ಅದು ಪ್ರಪಂಚದ ಕುರಿತು ಅವರವರ ರಿಲಿಜನ್ನುಗಳು ತಿಳಿಸುವ ಸತ್ಯಗಳ (truths) ಮೇಲಿನ ನಂಬಿಕೆಯಾಗಿದೆ. ಎಲ್ಲಾ ರಿಲಿಜನ್ನುಗಳೂ ಇಂಥ ಒಂದಿಲ್ಲೊಂದು ದೈವವಾಣಿಯ ಸತ್ಯಗಳನ್ನು ನಂಬಿಕೊಂಡು (ಅವನ್ನು ಬಿಲೀಫ್ ಸಿಸ್ಟಂ ಎನ್ನುತ್ತಾರೆ) ತಮ್ಮ ಆಚರಣೆಗಳನ್ನು ರೂಢಿಸಿಕೊಂಡಿರುತ್ತವೆ  ಎಂಬುದಾಗಿ ಸೆಮೆಟಿಕ್ ರಿಲಿಜನ್ನುಗಳು ಭಾವಿಸುತ್ತವೆ. ಮಿಶನರಿಗಳು ಭಾರತಕ್ಕೆ ಬಂದಾಗ ಹಿಂದೂಗಳ ಇಂಥ ನಂಬಿಕೆಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಆ ಸಲುವಾಗಿ ’ನೀವು ಈ ಆಚರಣೆಗಳನ್ನು ಏಕೆ ಮಾಡುತ್ತೀರಿ?’ ಎಂದು ಹಿಂದೂಗಳನ್ನು ಕೇಳಿ ಅವರ ನಂಬಿಕೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಅಂದರೆ ಅವರ ಆಚರಣೆಗಳನ್ನು ನಿರ್ದೇಶಿಸುವ ಸೂತ್ರಗಳು ಅವರ ಪವಿತ್ರ ಗ್ರಂಥದಲ್ಲಿ ಇವೆಯೆ ಅಂತ. ಹಿಂದೂಗಳೇನು ಹೇಳಿದರು? ತಮ್ಮ ಸನಾತನ ಸಂಪ್ರದಾಯಗಳು ಹಾಗೂ ಅದನ್ನು ಹಿರಿಯರು ತಮಗೆ ಹೇಳಿಕೊಟ್ಟಂತೆ ಮಾಡುತ್ತಿದ್ದೇವೆ, ಅದಕ್ಕೆ ಬೇರೆ ಕಾರಣಗಳೇನಿಲ್ಲ ಎಂಬುದಾಗಿ ಉತ್ತರ ನೀಡಿದರು. ಇದರಾಚೆಗೆ ಅವರಿಗೆ ತಾವು ಏಕೆ ಅಂಥ ಆಚರಣೆಗಳನ್ನು ಮಾಡುತ್ತಿದ್ದೇವೆಂಬುದರ ಕುರಿತಾಗಿ ಹೇಳುವಂಥದ್ದೇನೂ ಅವರಿಗೆ ಇರಲಿಲ್ಲ.

          ನಂತರ ಬಂದ ಪಾಶ್ಚಾತ್ಯ ಸೆಕ್ಯುಲರ್ ವಿದ್ವಾಂಸರು ಕೂಡ ನಂಬಿಕೆಯ ಕುರಿತು ಈ ರಿಲಿಜನ್ನುಗಳ  ಪೂರ್ವಾಗ್ರಹದಿಂದ ತಪ್ಪಿಸಿಕೊಳ್ಳಲಿಲ್ಲ. ಅವರು ಮಿಶನರಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋದರು. ಹಿಂದೂಗಳಿಗೆ ಅಂಥ ನಂಬಿಕೆಗಳಿವೆ, ಆದರೆ ಅವರು ಅವುಗಳ ಕುರಿತು ಅಜ್ಞಾನವನ್ನು ಹೊಂದಿದ್ದಾರೆ. ಹಾಗಾಗಿ ಅವನ್ನು ತಾವೇ ಕಂಡುಹಿಡಿದು ಉಪಕರಿಸಬೇಕು ಎಂದು ಭಾವಿಸಿ ಹಿಂದೂ ನಂಬಿಕೆಗಳ ಕುರಿತು ಸಂಶೋಧನೆಯನ್ನು ನಡೆಸಿದರು. ಅವರೆಲ್ಲಾ ಸೇರಿ ನೂರಾರು ವರ್ಷಗಳವರೆಗೆ ನಮ್ಮ ಗ್ರಂಥಗಳನ್ನೆಲ್ಲ ಜಾಲಾಡಿ ಏನೇನೆಲ್ಲ ಕಸರತ್ತುಗಳನ್ನು ನಡೆಸಿ ಹಿಂದೂಗಳ ನಂಬಿಕೆಗಳ ಕುರಿತು ಗೊಂದಲಪೂರ್ಣವಾದ ಸಾಹಿತ್ಯವನ್ನು ಸೃಷ್ಟಿಸಿದರು. ಈ ಬರವಣಿಗೆಗಳೇ ನಮ್ಮ ಭಾರತೀಯ ಸಮಾಜ ವಿಜ್ಞಾನಕ್ಕೆ ಬುನಾದಿಯಾಗಿವೆ. ಈ ಬರವಣಿಗೆಗಳನ್ನು ಓದಿದಾಗ ಹಿಂದೂಗಳು ತಮ್ಮ ರಿಲಿಜನ್ನಿನ ಮೂಲ ತತ್ವಗಳನ್ನು ಮರೆತು ಸುಳ್ಳುಗಳನ್ನು ನಂಬಿರುವುದರಿಂದ ಇಂದು ಅವರ ಆಚರಣೆಗಳು ಭ್ರಷ್ಟವಾಗಿ ಹೋಗಿವೆ ಎಂಬುದಾಗಿ ಒಂದು ಸಾಮಾನ್ಯ ಅಭಿಪ್ರಾಯವು ಗಟ್ಟಿಯಾಯಿತು. ಕನ್ನಡದ ಮೂಢನಂಬಿಕೆ ಈ  ಸಂದರ್ಭದಲ್ಲಿ ಮಾತ್ರವೇ ಅರ್ಥವಾಗಬಹುದು. ಹಾಗಾಗಿಯೇ ಮೂಢನಂಬಿಕೆಯ ಕುರಿತು ಮಾತನಾಡುವಾಗ ನಮ್ಮ ಪ್ರಾಚೀನ ಗ್ರಂಥಗಳು ಹಾಗೂ ಅವುಗಳಲ್ಲಿನ ಸಾಲುಗಳ ಕುರಿತು ಮಾತನಾಡುವ ಅಗತ್ಯ ನಮಗೆ ಹುಟ್ಟಿಕೊಳ್ಳುತ್ತದೆ.

          ೧೯ನೇ ಶತಮಾನದಲ್ಲಿ ಭಾರತೀಯ ಸಮಾಜ ಸುಧಾರಕರು ಪ್ರೊಟೆಸ್ಟಾಂಟ್ ದೃಷ್ಟಿಯನ್ನೇ ಪ್ರಮಾಣವಾಗಿಟ್ಟುಕೊಂಡು ಅದರಿಂದ ಪ್ರೇರೇಪಿತರಾಗಿ ಸಾಮಾಜಿಕ ಚಳುವಳಿಗೆ ತೊಡಗಿದರು. ಪ್ರೊಟೆಸ್ಟಾಂಟರು ಕ್ಯಾಥೋಲಿಕರ ಸಂದರ್ಭದಲ್ಲಿ ಯಾವ್ಯಾವುದನ್ನು ಸೂಪರ್‌ಸ್ಟಿಶನ್ ಎಂಬುದಾಗಿ ಕರೆದರೋ ಅವನ್ನು ಹಿಂದೂಯಿಸಂನಲ್ಲಿಯೂ ಗುರುತಿಸಿ ಅವನ್ನು ಟೀಕಿಸಿದರು. ಉದಾಹರಣೆಗೆ ದೇಶೀಯ ಪೂಜಾ ಪದ್ಧತಿಗಳು ಹಾಗೂ ಸಾಂಪ್ರದಾಯಿಕ ಆಚರಣೆಗಳು. ನಮ್ಮ ಭಾರತೀಯ ರಾಷ್ಟ್ರೀಯ ಚಳುವಳಿಯೆಂದರೆ ಇಂಥ ನಿರಂತರವಾದ ಸಮಾಜ ಸುಧಾರಣೆಯ ಪ್ರಕ್ರಿಯೆಯಾಗಿದೆ. ಇದನ್ನೇ ಆಧುನೀಕರಣ ಎಂಬುದಾಗಿಯೂ ಕರೆಯುತ್ತಾರೆ. ಈ ಪ್ರಕ್ರಿಯೆಯ ಭಾಗವಾಗಿ ದೇಶಭಾಷೆಗಳಲ್ಲೆಲ್ಲ ಆಧುನಿಕ ವಿಚಾರಗಳ ತರ್ಜುಮೆಯಾಯಿತು.  ಆಗ ಮೂಲತಃ ಪಾಶ್ಚಾತ್ಯ ಪರಿಕಲ್ಪನೆಯಾದ ಸೂಪರ್‌ಸ್ಟಿಶನ್ ಎಂಬುದು ಮೂಢ ನಂಬಿಕೆ, ಅಂಧ ಶ್ರದ್ಧೆ ಎಂದೆಲ್ಲ ಅರ್ಥಹೀನ ಪದಪುಂಜಗಳ ಮೂಲಕ ಅನುವಾದಗೊಂಡಿತು.  ಅಷ್ಟೇ ಅಲ್ಲ ಭಾರತೀಯರ ಧಾರ್ಮಿಕ ಆಚರಣೆಗಳೆಲ್ಲವೂ ಮೂಢನಂಬಿಕೆಯಿಂದ ಕೂಡಿವೆ ಎಂಬ ಸಾಮಾನ್ಯ ಜ್ಞಾನವು ವಿದ್ಯಾವಂತರೊಳಗೆ ಪ್ರಚಲಿತದಲ್ಲಿ ಬಂದಿತು.

          ಇಂಥ ಅರ್ಥಹೀನ ಪದಪುಂಜದ ಬಳಕೆ ನಮ್ಮ ಸಂಪ್ರದಾಯಗಳ ಸಂದರ್ಭದಲ್ಲಿ ಅಪ್ರಸ್ತುತವೇಕೆಂದರೆ ನಾವು ಸಂಪ್ರದಾಯಗಳ ಕುರಿತು ಮಾತನಾಡುತ್ತಿರುವಾಗ ಒಂದು ಸತ್ಯವಾದ ದೇವವಾಣಿಯ ಕುರಿತಾಗಲೀ, ಡಾಕ್ಟ್ರಿನ್ ಕುರಿತಾಗಲೀ ಮಾತನಾಡುತ್ತಿಲ್ಲ. ಅಂಥವು ಈ ಸಂಪ್ರದಾಯಗಳಿಗೆ ಆಧಾರವಾಗಿ ಇಲ್ಲವೇ ಇಲ್ಲ.  ನಮ್ಮ ಸಂಪ್ರದಾಯಗಳು ಆಚರಣೆ ಮಾಡುತ್ತ ರೂಪುಗೊಂಡಂಥವು ಹಾಗೂ ಅನುಕರಣೆಮಾಡುತ್ತ ದಾಟಿ ಬಂದಂಥವು. ಇಂಥ ಸಮಾಜದಲ್ಲಿ ಪಾಶ್ಚಾತ್ಯ ಸಂಪರ್ಕದಿಂದಾಗಿ ಮೂಢನಂಬಿಕೆ ಇತ್ಯಾದಿ ಪದಪುಂಜಗಳು  ಪ್ರಚಲಿತದಲ್ಲಿ ಬಂದಿವೆ. ಅವುಗಳನ್ನು ನಾವೆಲ್ಲರೂ ಆಗಾಗ ಕೇಳುತ್ತ, ಓದುತ್ತ, ಹೇಳುತ್ತ ಇರುವುದರಿಂದ ಅವು ನಮಗೆ ಪರಿಚಿತ ಎಂಬಂತೆ ಭಾಸವಾಗುತ್ತದೆ. ’ನನಗೆ ಈ ಆಚರಣೆಯಲ್ಲಿ ನಂಬಿಕೆ ಇಲ್ಲ’, ’ ವೇದಗಳಲ್ಲಿ ನಂಬಿಕೆ ಇಲ್ಲ’, ’ನನಗೆ ದೇವರಲ್ಲಿ ನಂಬಿಕೆಯಿಲ್ಲ’ ಇತ್ಯಾದಿ  ಅರ್ಥಹೀನ ವಾಕ್ಯಗಳನ್ನು ನಾವು ಆಡಲು ಕಲಿತಿದ್ದೇ ಈ ಹೊಸ ಸಂದರ್ಭದಲ್ಲಿ. ಹಾಗೆ ಮಾತನಾಡುವಾಗ ’ಇವೆಲ್ಲ ಹೇಳಿಕೆಗಳು ಸತ್ಯ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ’ ಎಂಬ ನಮ್ಮ ಸಂಸ್ಕೃತಿಗೆ ಪರಕೀಯವಾದ ಅರ್ಥ ಬರುತ್ತದೆ.  ಏಕೆಂದರೆ ಸತ್ಯ ಎಂಬುದು ಪ್ರಪಂಚದ ಕುರಿತ ಹೇಳಿಕೆಗಳಿಗೆ ಆರೋಪಿಸಬಹುದಾದ ಸಂಗತಿಯಾಗಿದೆ. ಅಂದರೆ ಒಂದು ಹೇಳಿಕೆಯನ್ನು ನಂಬುವುದು ಅಥವಾ ನಂಬದಿರುವುದು ಸಾಧ್ಯ.

          ಇಲ್ಲೆಲ್ಲ ಈ ನಂಬಿಕೆ ಎಂಬ ಶಬ್ದವನ್ನು ನಾವು ಶ್ರದ್ಧೆ ಎನ್ನುವ ಅರ್ಥದಲ್ಲಿ ಬಳಸುತ್ತೇವಾದ್ದರಿಂದ ಅವು ನಮಗೆ ಅರ್ಥವಾಗುತ್ತಿಲ್ಲ ಎಂಬುದೂ ನಮ್ಮ ಗಮನಕ್ಕೆ ಬರುವುದಿಲ್ಲ.  ಶ್ರದ್ಧೆ ಎನ್ನುವಂಥಾದ್ದು ಆಚರಣೆಗೆ ಸಂಬಂಧಪಟ್ಟ ವಿಶೇಷಣವೇ ವಿನಃ ಯೋಚನೆಗೆ, ಆ ಮೂಲಕ ಪಡೆಯಬಹುದಾದ ಪ್ರಾಪಂಚಿಕ ಜ್ಞಾನಕ್ಕೆ ಸಂಬಂಧಪಟ್ಟಿದ್ದಲ್ಲ. ಉದಾಹರಣೆಗೆ ’ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ ಎಂಬ ಸತ್ಯದ ಕುರಿತು ನನಗೆ ಶ್ರದ್ಧೆಯಿದೆ’ ಎಂದರೆ ಅಸಂಬದ್ಧವಾಗುತ್ತದೆ. ’ಆಚರಣೆಯಲ್ಲಿ ಶ್ರದ್ಧೆಯಿಲ್ಲ್ಲ’, ’ವೇದವನ್ನು ಪಠಿಸುವುದರಲ್ಲಿ ಶ್ರದ್ಧೆಯಿಲ್ಲ’, ’ದೇವಪೂಜೆಯಲ್ಲಿ ಶ್ರದ್ಧೆಯಿಲ್ಲ್ಲ’ ಎಂದರೆ ಮಾತ್ರವೇ ನಮ್ಮ ಸಂಸ್ಕೃತಿಯ ಸಂದರ್ಭದಲ್ಲಿ ಅದಕ್ಕೊಂದು ಅರ್ಥವಿದೆ. ಭಾರತೀಯ ಸಂಸ್ಕೃತಿಯಲ್ಲಿ ಎಂದೂ ಇಂಥ ಕ್ರಿಯೆಗಳಿಗೆ ಪ್ರಾಪಂಚಿಕ ಸತ್ಯದ ಆಧಾರವನ್ನು, ಹಾಗೂ ಸಮರ್ಥನೆಯನ್ನು ನೀಡುವ ಪ್ರಯತ್ನಗಳು ನಡೆದಿಲ್ಲ. ಹಾಗಾಗಿ ಈ ಸಂಪ್ರದಾಯಗಳ ’ಬಿಲೀಫ್ ಸಿಸ್ಟಂ’ ಅಥವಾ  ನಂಬಿಕೆಯ ವ್ಯವಸ್ಥೆಗಳನ್ನು ಕಂಡುಹಿಡಿದು ಅವುಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಕೂಡ ವ್ಯರ್ಥವೇ ಸರಿ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp