Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂಯಿಸಂ ಇಲ್ಲದಿದ್ದರೆ ಮತ್ತೇನಿದೆ?

ಭಾರತೀಯ ಸಂಸ್ಕೃತಿಯಲ್ಲಿ ಹಿಂದೂಯಿಸಂ ಇಲ್ಲದಿದ್ದರೆ ಮತ್ತೇನಿದೆ?

by Rajaram Hegde
35 views

ಭಾರತದಲ್ಲಿ ಹಿಂದೂಯಿಸಂ ಎಂದು ಏನನ್ನು ಪಾಶ್ಚಾತ್ಯರು ಕಂಡರೋ, ನಾವು ಕೂಡ ಏನನ್ನು ಉದ್ದೇಶಿಸಿ ಹಿಂದೂಧರ್ಮ ಎಂದು ಹೇಳುತ್ತೇವೆಯೋ ಅದು ಅನೇಕ ಸಂಪ್ರದಾಯಗಳ ಒಂದು ಸಾಗರ. ಯಾವುದೇ ಗ್ರಂಥ ನಿರ್ದೇಶನಕ್ಕಿಂತ ಪೂರ್ವಜರು ಸಾವಿರಾರು ವರ್ಷ ಆಚರಿಸಿಕೊಂಡು ಬಂದ ಆಚರಣೆಗಳನ್ನು ಅನುಕರಿಸುವುದರ ಮೂಲಕ ಸಂಪ್ರದಾಯಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತವೆ.

’ಭಾರತೀಯ ಸಂಸ್ಕೃತಿಯಲ್ಲಿ ಹಿಂದೂಯಿಸಂ, ಬುದ್ಧಿಸಂ, ಇತ್ಯಾದಿಗಳು ಇಲ್ಲ’ ಎಂದು ನಾನು ಹೇಳಿದಾಗ ’ಮತ್ತೆ ಏನಿದೆ?’ ಎಂಬ ಪ್ರಶ್ನೆ ಸಾಮಾನ್ಯವಾಗಿ ಬಂದೇ ಬರುತ್ತದೆ. ನನ್ನ ಉತ್ತರವೆಂದರೆ ’ಇಲ್ಲಿ ಸಂಪ್ರದಾಯಗಳಿವೆ’. ಸಂಪ್ರದಾಯವೆಂಬುದು ಕೇವಲ ಭಾರತವೊಂದೇ ಅಲ್ಲ ಒಟ್ಟಾರೆಯಾಗಿ ಪೂರ್ವದೇಶಗಳ ಸಂಸ್ಕೃತಿಗಳಿಗೇ ಸಾಮಾನ್ಯವಾದ ಅಂಶವಾಗಿದೆ. ರಿಲಿಜನ್ನು ಪಾಶ್ಚಾತ್ಯ ಸಂಸ್ಕೃತಿಯನ್ನು ರೂಪಿಸಿದಂತೆ ಪೌರ್ವಾತ್ಯ ಸಂಸ್ಕೃತಿಗೆ ಸಂಪ್ರದಾಯವು ರೂಪುಕೊಟ್ಟಿದೆ.

          ಸಂಪ್ರದಾಯವೆಂದರೆ ತಲೆಮಾರಿನಿಂದ ತಲೆಮಾರಿಗೆ ದಾಟಿ ಬರುವ ಆಚರಣೆಗಳು. ಅದು ಹೇಗೆ ದಾಟಿ ಬರುತ್ತದೆಯೆಂದರೆ, ಅನುಕರಣೆಯ ಮೂಲಕ, ಭಾಷೆಯ ಮೂಲಕ, ಕ್ರಿಯೆಗಳನ್ನು ಮತ್ತೆ ಮತ್ತೆ ಮಾಡುವ ಮೂಲಕ, ಉಪದೇಶದ ಮೂಲಕ ಹೀಗೆ ಹಲವಾರು ರೀತಿಯಲ್ಲಿ ದಾಟಿ ಬರುತ್ತದೆ. ಏಕೆ ದಾಟಿಸಲಾಗುತ್ತದೆ? ಅಂಥ ಕ್ರಿಯೆಗಳು ತಮ್ಮ ಪೂರ್ವಜರಿಂದ ದಾಟಿ ಬಂದಿವೆ ಎನ್ನುವುದೇ ಅವುಗಳನ್ನು ಮುಂದಿನವರಿಗೆ ದಾಟಿಸುವುದಕ್ಕೆ ಸಮರ್ಥನೆ. ಯಾವುದೇ ಭಾರತೀಯನನ್ನಾದರೂ ಇಂಥ ಆಚರಣೆಗಳ ಕಾರಣದ ಕುರಿತು ಪ್ರಶ್ನಿಸಿ. ಅವರೇನು ಹೇಳುತ್ತಾರೆ? ’ಹಿಂದಿನ ಕಾಲದಿಂದ ಹೀಗೇ ನಡೆದುಕೊಂಡು ಬಂದಿದೆ’, ’ಹಿಂದಿನವರು ಹೀಗೇ ಮಾಡಿಟ್ಟಿದ್ದಾರೆ’ ಅನ್ನುತ್ತಾರೆ. ಸಂಪ್ರದಾಯದ ಕುರಿತು ಅಂಥ  ಪ್ರಶ್ನೆಯೇ ಅಸಂಬದ್ಧ.

          ನನ್ನದೇ ಅನುಭವವನ್ನು  ಹೇಳುವುದಾದರೆ ನಾನು ಸಣ್ಣವನಿರುವಾಗ ನಮ್ಮ ಸಾಂಪ್ರದಾಯಿಕ ಆಚರಣೆಗಳ ಕುರಿತು ನಮ್ಮ ಹಿರಿಯರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಮುಖ್ಯವಾಗಿ ಹಿರಿಯರು ನನಗೆ ಈ ಆಚರಣೆಗಳನ್ನು ಹೇಳಿಕೊಡುವಾಗ ಅವನ್ನೇಕೆ ಮಾಡಬೇಕು ಎಂಬ ಪ್ರಶ್ನೆಯನ್ನು ಎತ್ತುತ್ತಿದ್ದೆ. ನಮ್ಮ ಹಿರಿಯರು ಇವುಗಳಿಗೆ ಎಂದೂ ನೇರವಾಗಿ ಉತ್ತರಿಸಲಿಲ್ಲ. ಬದಲಾಗಿ ’ಒಮ್ಮೆ ಏನಾಯಿತು ಎಂದರೆ…’ ಎಂದು  ಒಂದು ಕಥೆಯನ್ನು ಹೇಳಿಬಿಡುತ್ತಿದ್ದರು. ಕಥೆಗಳು ಇಲ್ಲದಿದ್ದರೆ ’ಸುಮ್ಮನೆ ಹೇಳಿದಷ್ಟು ಮಾಡು, ಅಧಿಕ ಪ್ರಸಂಗ ಬೇಡ’ ಎಂದು ಗದರಿ ಸುಮ್ಮನಿರಿಸುತ್ತಿದ್ದರು. ಕೊನೆಗೂ ನನಗೆ ಅವುಗಳ ನಿಜವಾದ ಕಾರಣಗಳು ತಿಳಿಯುತ್ತಿರಲಿಲ್ಲ.

          ನಾನು ಬೆಳೆದು ದೊಡ್ಡವನಾದಂತೆಲ್ಲ ಸಾಂಪ್ರದಾಯಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಅಂತಹ ಪ್ರಶ್ನೆಗಳನ್ನು ಕೇಳಬಾರದು, ಕೇಳುವುದು ಬಾಲಿಶತನವಾಗುತ್ತದೆ ಎಂಬ ತಿಳುವಳಿಕೆಯನ್ನು ರೂಢಿಸಿಕೊಂಡೆ. ಅಂದರೆ ಸಾಂಪ್ರದಾಯಿಕ ಆಚರಣೆಗಳ ಕಾರಣಗಳನ್ನು  ಕುರಿತು ಪ್ರಶ್ನಿಸುವುದು ಪ್ರೌಢತನದ ಲಕ್ಷಣವಲ್ಲ. ಅದು ಅನುಕರಿಸಿಯೇ ಕಲಿಯುವಂತಹುದಾಗಿದೆ. ಹಾಗಂತ ಸಾಂಪ್ರದಾಯಿಕ ಆಚರಣೆಗಳಿಗೆ ಕಾರಣಗಳನ್ನು ಕೇಳಿದರೆ ಜನರು ಕಾರಣಗಳನ್ನು ನೀಡುವುದೇ ಇಲ್ಲವೆಂದರ್ಥವಲ್ಲ. ಆದರೆ ಒಬ್ಬೊಬ್ಬರು ಒಂದೊಂದು ಕಾರಣಗಳನ್ನು ತಿಳಿಸುತ್ತಾರೆ. ಇಲ್ಲ, ಪುರಾಣ ಕಥೆಗಳನ್ನು ಹೇಳುತ್ತಾರೆ. ಆದರೆ  ಇವು ಆಚರಣೆಗಳ ಸಂದರ್ಭದಲ್ಲಿ  ಹೇಳಲಾಗುವ ಕಥೆಗಳೇ ವಿನಃ ಅವುಗಳಿಗೆ ಕಾರಣಗಳಲ್ಲ.  ಒಂದು ಆಚರಣೆಗೆ ಯಾವುದೇ ಒಂದು ನಿರ್ದಿಷ್ಟ ಕಾರಣ ಇದ್ದಿದ್ದರೆ ಉತ್ತರಗಳು ಹೀಗೆ ಇರುತ್ತಿರಲಿಲ್ಲ.

            ನಮ್ಮ ಹಿರಿಯರಿಂದ ನಾವು ಸಂಪ್ರದಾಯಗಳನ್ನು ಕಲಿತುಕೊಳ್ಳುತ್ತೇವೆ. ನನ್ನ ಬಾಲ್ಯದಲ್ಲಿ ನನ್ನ ಅಮ್ಮನೇ ನನಗೆ ಅದನ್ನು ಕಲಿಸಿದವಳು. ಅವಳು ಮಾಧ್ಯಮಿಕ ಶಾಲೆಯನ್ನೂ ಕಲಿತವಳಲ್ಲ, ಸಂಸ್ಕೃತವನ್ನೂ ಕಲಿತವಳಲ್ಲ. ತನ್ನ ತಂದೆ ತಾಯಿಗಳಿಂದ ಕಲಿತದ್ದನ್ನೇ ನನಗೂ ನನ್ನ ತಮ್ಮ ತಂಗಿಯರಿಗೂ ಕಲಿಸಿದಳು. ನಾನು ದೊಡ್ಡವನಾಗಿ ತತ್ವಶಾಸ್ತ್ರವನ್ನು ವಿಶೇಷವಾಗಿ ಅಧ್ಯಯನ ಮಾಡಿದೆ. ಆಗ ಭಾರತೀಯ ಸಂಸ್ಕೃತ ಗ್ರಂಥಗಳ ಭಾಷಾಂತರಗಳನ್ನು ಓದಿದೆ. ನನ್ನ ಅಮ್ಮ ಅಂಥ ಯಾವುದನ್ನೂ ಓದಿರಲಿಲ್ಲ. ಆದರೂ, ನನ್ನ ಸಂಪ್ರದಾಯವನ್ನು ನನ್ನಮ್ಮ ಎಷ್ಟು ಕಲಿಸಿದ್ದಳೋ ಅಷ್ಟೇ ನಾನು ಕಲಿತದ್ದು. ನಾನೇನಾದರೂ ನನ್ನ ಮಕ್ಕಳಿಗೆ ಅದನ್ನು ದಾಟಿಸಬೇಕೆಂದರೆ ನನ್ನ ಅಮ್ಮನಿಂದ ಕಲಿತದ್ದನ್ನೇ ದಾಟಿಸಬೇಕು. ಏಕೆಂದರೆ ಅದಕ್ಕೂ ಹೊರತಾಗಿ ದಾಟಿಸಲಿಕ್ಕೆ ಇಷ್ಟೆಲ್ಲ ಗ್ರಂಥಗಳನ್ನು ಓದಿಯೂ ನನ್ನ ಬಳಿ ಹೊಸದೇನೂ ಇಲ್ಲ. ಇದು ಸಂಪ್ರದಾಯಗಳ ಒಂದು ವಿಶೇಷತೆ.

          ಸಾಂಪ್ರದಾಯಿಕ ಆಚರಣೆಗಳಿಗೆ ಕಾರಣದ ಹಂಗಿಲ್ಲ, ಹಾಗಾಗಿ ಅವಕ್ಕೆ ಹೊಂದಾಣಿಕೆಯ ಗುಣ ಪ್ರಾಪ್ತವಾಗಿದೆ. ಸಂಪ್ರದಾಯಗಳ ಗಡಿರೇಖೆಯು ಯಾವ ಆಚರಣೆಯನ್ನಾದರೂ ಒಳಗೊಳ್ಳುವಷ್ಟು ಸಡಿಲವಾಗಿದೆ. ಅನ್ಯ ಸಂಪ್ರದಾಯಗಳ ಆಚರಣೆಯನ್ನು ಅಳವಡಿಸಿಕೊಂಡು ಅದಕ್ಕೆ ತಮ್ಮ ಮುದ್ರೆಯನ್ನು ಒತ್ತಿ ಮುಂದುವರೆಸಲು  ಯಾವುದೇ ತೊಡಕುಗಳಿಲ್ಲ. ಹಾಗೆಯೇ ತನ್ನ ಹಿರಿಯರ ಯಾವ ಆಚರಣೆಗಳನ್ನು ನಡೆಸದಿದ್ದವನೂ ಆ ಸಂಪ್ರದಾಯದ ಸದಸ್ಯನಾಗಬಹುದು.  ಆದರೆ ಅದೇ ವೇಳೆಗೆ ಸಂಪ್ರದಾಯಗಳು ತಮ್ಮ ಗಡಿರೇಖೆಯನ್ನು ಸ್ಪಷ್ಟವಾಗಿಯೇ ಎಳೆದುಕೊಳ್ಳುತ್ತವೆ. ಇದು ನಮ್ಮದು ಇದು ಪರರದು ಎಂಬ ವ್ಯತ್ಯಾಸವನ್ನು ಮಾಡಲು ಯಾವುದೇ ಗೊಂದಲಗಳಿರುವುದಿಲ್ಲ. ಇಷ್ಟೆಲ್ಲ ಇದ್ದರೂ ಕೂಡ ನಮ್ಮ ಹಿರಿಯರು ಕಲಿಸಿದ ಆಚರಣೆ ಎಂಬುದನ್ನು ಬಿಟ್ಟರೆ ಅದನ್ನು ಗುರುತಿಸಲು ಇತರ ಯಾವುದೇ ಮಾನದಂಡಗಳಿಲ್ಲ. ಈ ಗುಣದಿಂದಾಗಿಯೇ  ಒಂದು  ಸಂಪ್ರದಾಯವನ್ನು ನಮ್ಮದೆಂದು ಗುರುತಿಸಿಯೂ, ಅದನ್ನು ನಮ್ಮ ವಿವೇಕಕ್ಕೆ ತಕ್ಕಂತೆ ಅದನ್ನು ಬದಲಾಯಿಸಿ ನಮ್ಮ ಮಕ್ಕಳಿಗೆ ದಾಟಿಸಬಹುದು.  

          ಯಾವ ಆಚರಣೆಯನ್ನು ದಾಟಿಸಬೇಕು ಎಂಬುದಕ್ಕೂ ಮಾನದಂಡಗಳಿಲ್ಲ. ಕೆಲವೊಮ್ಮೆ ಸಾವಿರಾರು ವರ್ಷಗಳಿಂದ ದಾಟಿ ಬಂದ ವೇದಗಳು, ಅವುಗಳ ಉಚ್ಚಾರಣೆ, ಕರ್ಮಾಂಗಗಳು, ಇತ್ಯಾದಿಗಳು ಕಣ್ಣಿಗೆ ಕಾಣುತ್ತವೆಯೇನೋ ನಿಜ. ಆದರೆ ಅಂಥ ನಿರ್ದಿಷ್ಟ ಉದಾಹರಣೆಗಳನ್ನು ಬಿಟ್ಟರೆ ನಮ್ಮ ಉಳಿದ ಆಚರಣೆಗಳನ್ನೆಲ್ಲ ಹೆಚ್ಚೆಂದರೆ ನಮ್ಮ ಅಜ್ಜ ಅಜ್ಜಿಯರು ನಮಗೆ ದಾಟಿಸಿರುತ್ತಾರೆ. ಒಂದು ತಲೆಮಾರಿನವರು ತಮ್ಮ ಹಿಂದಿನವರ ಆಚರಣೆಗಳನ್ನು ಅನುಕರಿಸಿ ಕಲಿತರೂ ತಮ್ಮ ಕಾಲಕ್ಕೆ ಹೊಂದಿಕೆಯಾಗುವಂತೇ ಅವುಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಅವುಗಳನ್ನು ತಮ್ಮ ಮಕ್ಕಳಿಗೆ ದಾಟಿಸುವಾಗ ಆಚರಣೆಗಳ ಸ್ವರೂಪವೇ ಬದಲಾಗಿಹೋಗಿರುತ್ತದೆ. ಕೆಲವು ಆಚರಣೆಗಳು ಒಂದು ತಲೆಮಾರಿಗೇ ನಿಂತು ಹೋಗಲೂ ಬಹುದು. ಅಷ್ಟೇ ಸಹಜವಾಗಿ ಹೊಸ ಆಚರಣೆಗಳು ಬಂದು ಸೇರಿಕೊಳ್ಳಲೂಬಹುದು.  ಅದಕ್ಕೂ ಮುಖ್ಯವಾಗಿ, ಆಚರಿಸುವವರ ಅನುಕೂಲಕ್ಕೆ ತಕ್ಕಂತೆ ಒಂದೇ ಆಚರಣೆಯ ಸರಳ, ಕಠಿಣ, ಲಘು, ದೀರ್ಘ, ಸಾಂಕೇತಿಕ ಆವೃತ್ತಿಗಳು ಪ್ರಚಲಿತದಲ್ಲಿರುತ್ತವೆ. ಸಂಪ್ರದಾಯದ ಪರಿಧಿಯೊಳಗೆ ಆಯಾ ಆಚರಣೆಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ, ಎಲ್ಲ ತಪ್ಪುಗಳಿಗೂ ಪ್ರಾಯಶ್ಚಿತ್ತವಿದೆ. ಸಾಂಪ್ರದಾಯಿಕ ವಿಧಿಗಳನ್ನು  ಆಚರಿಸುವಲ್ಲಿ ಎಂಥದ್ದೇ ತೊಡಕು ಏಳಲಿ, ಉದ್ದೇಶಿತ ಕೆಲಸಗಳು ನಿಲ್ಲುವುದಿಲ್ಲ. ಈ ಆಚರಣೆಗಳು ಸಂಪ್ರದಾಯಬದ್ಧವಾಗಿಯೇ ಮುರಿಯಬಹುದು.

          ಭಾರತೀಯ ಸಮಾಜವನ್ನು ಮೊತ್ತಮೊದಲ ಬಾರಿಗೆ ನೋಡಿದ ಪಾಶ್ಚಾತ್ಯ ವಿದ್ವಾಂಸರು ಅದನ್ನು ನಿಂತ ನೀರಿಗೆ ಹೋಲಿಸಿದರು. ಭಾರತೀಯ ಸಮಾಜವು ಸಾವಿರಾರು ವರ್ಷಗಳಿಂದ ಬದಲಾವಣೆಯೇ ಇಲ್ಲದ ಜಡ್ಡುಗಟ್ಟಿದ ಸಮಾಜ ಎಂಬುದು ಇಂದಿನ ವಿದ್ಯಾವಂತರ ಸಾಮಾನ್ಯ ಜ್ಞಾನವಾಗಿದೆ. ಆದರೆ ನಿಜವಾಗಿ ನೋಡಿದರೆ ಅದು ರಿಲಿಜನ್ನುಗಳ ಸಮಾಜಗಳಿಗಿಂತ ಸುಲಭವಾಗಿ ಬದಲಾವಣೆಗಳಿಗೆ ತೆರೆದುಕೊಳ್ಳುವ ಗುಣವನ್ನು ಹೊಂದಿದೆ. ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಒಂದು ಸಂಪ್ರದಾಯವನ್ನು ಅದು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆಯೇನೋ ಎಂಬಂತೆ ಕಟ್ಟುನಿಟ್ಟಾಗಿ ಪಾಲಿಸುತ್ತಿರುತ್ತಾರೆ. ಇಂದು ಪ್ರಚಲಿತದಲ್ಲಿರುವ ಅನೇಕ ಆಚರಣೆಗಳು ವೇದ  ಕಾಲದಿಂದ ಬಂದಿವೆ ಎಂಬುದಾಗಿ ನಮ್ಮ ಹಿರಿಯರು ಕೂಡ ಬಿಂಬಿಸಿಕೊಂಡು ಬಂದಿದ್ದಾರೆ. ಅದಕ್ಕೆ ಅನುಗುಣವಾಗಿ ಇಂದಿನ ಪ್ರತಿಯೊಂದು ಅನಿಷ್ಟ ಆಚರಣೆಯೂ ಕೂಡ ವೇದಕಾಲದ ಬ್ರಾಹ್ಮಣ ಪುರೋಹಿತಶಾಹಿಯ ಕಾಯ್ದೆಗಳಿಂದಲೇ ಹುಟ್ಟಿತು ಎಂದು  ಧೃಡವಾಗಿ ನಂಬುವ ವಿಚಾರವಂತರೂ ಇದ್ದಾರೆ. ಉದಾಹರಣೆಗೆ ಜಾತಿ ಪದ್ಧತಿ ಎಂಬುದಾಗಿ ನಾವು ಗುರುತಿಸುವ ಆಚರಣೆಗಳು. ಆದರೆ ಇಂತಹ ಆಚರಣೆಗಳ ಮೂಲವನ್ನು ಕೆದಕಿದರೆ ಅವು ಇತ್ತೀಚೆಗೆ ಅಳವಡಿಸಿಕೊಂಡ ಆಚರಣೆಗಳು ಎಂಬುದು ಕಂಡುಬಂದರೆ ಆಶ್ಚರ್ಯವೇ ಇಲ್ಲ. ಇನ್ನೊಂದು ನೂರು ವರ್ಷಗಳಲ್ಲಿ ಅವು ತಮ್ಮ ಇಂದಿನ ರೂಪವನ್ನೇ ಬದಲಿಸಿರುತ್ತವೆ.  ತಮ್ಮ ವಿಶಿಷ್ಟ ಸ್ವರೂಪದಿಂದಾಗಿಯೇ   ಸಂಪ್ರದಾಯಗಳಿಗೆ ಬದಲಾಗದೇ ಇರಲು ಸಾಧ್ಯವೇ ಇಲ್ಲ.

            ಏಕೆ ಆಚರಿಸಬೇಕು ಎಂಬುದೇ ಗೊತ್ತಿಲ್ಲದ ಮೇಲೆ ಅವುಗಳನ್ನು ನಿಲ್ಲಿಸಲು ಅಷ್ಟೊಂದೇಕೆ ವಿರೋಧ ಮಾಡುತ್ತಾರೆ? ಎಂಬ ಪ್ರಶ್ನೆ ಏಳಬಹುದು. ಇಂದು ಮಡೆಸ್ನಾನದಂತಹ ಕೆಲವು ಸಂಪ್ರದಾಯಗಳನ್ನು ಬದಲಾಯಿಸುವ ಬೇಡಿಕೆ ಬಂದಾಗ ಏಕೆ ಜನರು ವಿರೋಧಿಸುತ್ತಾರೆ? ಅಂಥ ಜನರೇ ತಮ್ಮ ಹಿರಿಯರಿಂದ ಕಲಿತ ಇತರ ಅನೇಕ ಆಚರಣೆಗಳನ್ನು ಯಾವ ಮುಲಾಜೂ ಇಲ್ಲದೇ ಬಿಟ್ಟುಹಾಕಿರುತ್ತಾರಲ್ಲ? ಬದಲಾಗುವುದೇ ನಿಯಮವಾಗಿರುವ ಸಂಪ್ರದಾಯಗಳಿಗೆ ಬದಲಾಗಲು ಏಕಿಷ್ಟು ಹಟ?

          ಇದನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ನಾನೊಂದು ಉದಾಹರಣೆಯನ್ನು ಕೊಟ್ಟು ವಿವರಿಸುತ್ತೇನೆ: ಒಬ್ಬನಿಗೆ ತಾನೇಕೆ ಬದುಕಬೇಕು ಎಂಬುದು ಗೊತ್ತಿಲ್ಲ, ಅಂದ ಮಾತ್ರಕ್ಕೆ ಆತ್ಮಹತ್ಯೆ ಮಾಡಿಕೋ ಎಂದು ಅವನಿಗೆ ಸಲಹೆ ನೀಡಲಿಕ್ಕಾಗುತ್ತದೆಯೆ? ಅವನಿಗೆ ತಾನು ಬದುಕಿರಲಿಕ್ಕೆ ಕಾರಣಗಳು ಇಲ್ಲದಿದ್ದರೂ ಸಾಯಲು ಪ್ರತ್ಯೇಕ ಕಾರಣ ಸಿಗುವವರೆಗೆ ಸಾಯಲೂ ಕಾರಣಗಳಿಲ್ಲ. ಸಂಪ್ರದಾಯಗಳೂ ಹಾಗೇ. ಕಾರಣಗಳು ಇಲ್ಲದೇ ಆಚರಿಸುವ ಷರತ್ತನ್ನು ಒಪ್ಪಿಕೊಂಡೇ ಅವುಗಳನ್ನು ಉಳಿಸಿಕೊಂಡಿರುವಾಗ ’ಕಾರಣಗಳಿಲ್ಲ ಹಾಗಾಗಿ ಅವುಗಳನ್ನು ನಿಲ್ಲಿಸಬೇಕು’ ಎಂದರೆ ಯಾವ ಸಂಪ್ರದಾಯಸ್ಥರಿಗೂ ಅರ್ಥವಾಗುವುದೇ ಇಲ್ಲ. ನಿಲ್ಲಿಸಲಿಕ್ಕೆ ಸೂಕ್ತ ಕಾರಣಗಳು ಸಿಗುವವರೆಗೆ  ಅವನ್ನು ನಡೆಸಿಕೊಂಡು ಹೋಗುತ್ತಾರೆ. ಅವರಿಗೆ ಅವನ್ನು ನಡೆಸಿಕೊಂಡು ಹೋಗಲಿಕ್ಕೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅವನ್ನು ನಿಲ್ಲಿಸಲಿಕ್ಕೆ ಕಾರಣವೊಂದು ಹುಟ್ಟಿದೆ ಎಂದೇ ಅರ್ಥ. 

          ಕಾರಣವಿಲ್ಲದೇ, ಡಾಕ್ಟ್ರಿನ್ನುಗಳಿಲ್ಲದೇ ದಾಟಿಬರುವ ನಿರ್ದಿಷ್ಟ ಕಾರಣದಿಂದಲೇ ಸಂಪ್ರದಾಯಗಳಿಗೆ ಮುಂದಿನ ಎರಡು ಸಾಧ್ಯತೆಗಳು ಪ್ರಾಪ್ತವಾಗಿವೆ: ೧.  ಆಯಾ ಕಾಲದ, ಸಂದರ್ಭದ ಅಗತ್ಯಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸುತ್ತ ರೂಪಾಂತರ ಹೊಂದುವ ಶಕ್ತಿ ಅವುಗಳಿಗಿದೆ. ಆದ್ದರಿಂದಲೇ ಸಾಂಪ್ರದಾಯಿಕ ಸಮಾಜವೊಂದು ಚಾರಿತ್ರಿಕ ಬದಲಾವಣೆಗಳನ್ನು ಯಾವುದೇ ಹಿಂಸೆ ಹಾಗೂ ಘರ್ಷಣೆಗಳಿಲ್ಲದೇ ಜೀರ್ಣಿಸಿಕೊಳ್ಳಬಲ್ಲದು. ಹಾಗೇ ಸಂಪ್ರದಾಯಗಳು ಐತಿಹಾಸಿಕ ಬದಲಾವಣೆಗಳ ಹೊಡೆತಕ್ಕೆ ಅಳಿದುಹೋಗುವ ಬದಲು ಹೊಸ ಹೊಸ ರೂಪಗಳನ್ನು ತಳೆದು ಉಳಿದುಕೊಂಡು ಬರುತ್ತವೆ. ೨. ಸಂಪ್ರದಾಯಗಳು ರಿಲಿಜನ್ನುಗಳಂತೆ ತಮ್ಮದೇ ಆದ ಸತ್ಯ ಪ್ರತಿಪಾದನೆಯೊಂದನ್ನು ದಾಟಿಸಿಕೊಂಡು ಬರುವ ಮಾರ್ಗಗಳಲ್ಲ. ಹಾಗಾಗಿ  ಅವು ಅನ್ಯ ಸಂಪದಾಯಗಳ ಜೊತೆಗೆ ತಮ್ಮದೇ ಆದ ಸತ್ಯವನ್ನು ಸಾಧಿಸುವ ಸ್ಪರ್ಧೆಗಿಳಿಯುವುದಿಲ್ಲ. ಹಾಗಾಗಿ ಒಂದು ಸಂಪ್ರದಾಯದವರಿಗೆ ಅನ್ಯ ಸಂಪ್ರದಾಯಗಳ ಆಚರಣೆಗಳ ಕುರಿತು ನಿರಾಸಕ್ತಿ ಅಥವಾ ನಿರ್ಲಿಪ್ತ ಧೋರಣೆ ಇರುತ್ತದೆ. ಇದು ಸಹಜವಾಗಿಯೇ ಬಹುತ್ವವನ್ನು ಒಪ್ಪಿಕೊಳ್ಳುವ ಗುಣವನ್ನು ಅವುಗಳಿಗೆ ನೀಡುತ್ತದೆ. ಈ ಕುರಿತು ಪ್ರತ್ಯೇಕವಾಗಿ ಚರ್ಚಿಸುತ್ತೇನೆ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp