Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ನಮ್ಮೊಳಗಿನ ಎರಡು ಜಗತ್ತುಗಳು

ನಮ್ಮೊಳಗಿನ ಎರಡು ಜಗತ್ತುಗಳು

by Rajaram Hegde
138 views
ನಾವು ವಿದ್ಯಾವಂತರಾಗಿ ಬೆಳೆಯುತ್ತಿರುವಾಗ ನಾವು ಸಾಂಪ್ರದಾಯಿಕವಾಗಿ ಸ್ವೀಕರಿಸಿದ ವಿಚಾರಗಳಿಗೂ ಶಿಕ್ಷಣವು ನಮಗೆ ಕಲಿಸುವ ವಿಚಾರಗಳಿಗೂ ಸಂಘರ್ಷ ಹತ್ತಿಕೊಳ್ಳುತ್ತದೆ. ಈ ಸಂಘರ್ಷವು ನಮಗೂ ನಮ್ಮ ಸಾಂಪ್ರದಾಯಿಕ ಸಮಾಜಕ್ಕೂ ನಡುವೆ ಒಂದು ಕಂದಕವನ್ನು ಹುಟ್ಟುಹಾಕುತ್ತದೆ. ಈ ಸಂಘರ್ಷದ ಸ್ವರೂಪವನ್ನು ಇಲ್ಲಿ ಬಿಡಿಸಿ ಇಡಲಾಗಿದೆ. ಹಾಗೂ ಅದಕ್ಕೆ ಕಾರಣವನ್ನು ವಿವರಿಸಲಾಗಿದೆ. (ಬೌದ್ಧಿಕ ದಾಸ್ಯದಲ್ಲಿ ಭಾರತ – ಲೇಖನ 01)

  ಭಾರತೀಯ ವಿದ್ಯಾವಂತರಲ್ಲಿ ಇರಬಹುದಾದ ಎರಡು ಜಗತ್ತುಗಳ ಕುರಿತು ಗಮನ ಹರಿಸೋಣ: ಒಂದು ಜಗತ್ತು ಸಾಂಪ್ರದಾಯಿಕವಾಗಿ ನಾವು ಬೆಳೆದು ಬಂದ ಜಗತ್ತಾಗಿದೆ. ಅಲ್ಲಿ ನಮ್ಮ ಅಪ್ಪ ಅಮ್ಮ, ಬಂಧು-ಬಳಗ, ನೆರೆ-ಹೊರೆಯವರು ನಮಗೆ ಈ ಪ್ರಪಂಚದಲ್ಲಿ ಹೇಗೆ ವ್ಯವಹರಿಸಬೇಕೆಂಬುದನ್ನು ಕಲಿಸಿರುತ್ತಾರೆ. ಅನೇಕ ಆಚರಣೆಗಳನ್ನು, ಆಲೋಚನಾ ಕ್ರಮವನ್ನು ಒಳಗೊಂಡ ಜೀವನ ಶೈಲಿಯನ್ನು ಕಲಿಸಿರುತ್ತಾರೆ.

 ನಂತರ ನಾವು ವಿದ್ಯಾವಂತರಾದಂತೆಲ್ಲ ಮತ್ತೊಂದು ಜಗತ್ತಿಗೆ ತೆರೆದುಕೊಳ್ಳುತ್ತೇವೆ. ಇದು ವಿಚಾರಗಳ ಜಗತ್ತು. ಅದು ನಮ್ಮ ಆಧುನಿಕ ಶಿಕ್ಷಣವು ನಮಗೆ ಪರಿಚಯಿಸುವ ಜಗತ್ತು.  ನಮ್ಮ ಕುಟುಂಬ, ಜಾತಿ ಮುಂತಾದ ಸಾಂಪ್ರದಾಯಿಕ ಸಮಾಜದಾಚೆಗೆ ಇರಬಹುದಾದ ಸಾರ್ವಜನಿಕ ಜಗತ್ತು ಇಂಥ ವಿಚಾರಗಳ ತಳಹದಿಯ ಮೇಲೆ ನಿರ್ಮಾಣವಾಗಿದೆ. ಹಾಗಾಗಿ ಅದು ನಮಗೆಲ್ಲ ಒಂದು ಆದರ್ಶ ಮಾದರಿ ಎಂದುಕೊಂಡಿರುತ್ತೇವೆ.

ಅದಕ್ಕೆ ಪೂರಕವಾಗಿ ಆ ಜಗತ್ತು ನಮ್ಮ ಸಾಂಪ್ರದಾಯಿಕ ಜಗತ್ತಿನ ಕುರಿತು ಕೆಲವು ನಿರ್ದಿಷ್ಟ ಧೋರಣೆಗಳನ್ನು ಬೆಳೆಸುತ್ತಿರುತ್ತದೆ. ಉದಾಹರಣೆಗೆ ಭಾರತೀಯ ಸಮಾಜ ವ್ಯವಸ್ಥೆಯು ಜಾತಿ ಪದ್ಧತಿಯೆಂಬ ಅನೈತಿಕ ಹಾಗೂ ಅಮಾನವೀಯ ತಳಹದಿಯ ಮೇಲೆ ನಿಂತಿದೆ,   ಶತಶತಮಾನಗಳಿಂದ ಸ್ತ್ರೀಯರನ್ನು ಹಾಗೂ ಕೆಳಜಾತಿಗಳನ್ನು ಶೋಷಿಸುತ್ತಿದೆ, ಈ ಜನರು ಆಚರಿಸುವ ಗೊಡ್ಡು ಸಂಪ್ರದಾಯಗಳು ಅನಾರೋಗ್ಯಕರ ಹಾಗೂ ಅವೈಜ್ಞಾನಿಕ, ಇತ್ಯಾದಿ.  ಒಟ್ಟಿನಲ್ಲಿ ನಾವು ಇದುವರೆಗೆ ಬೆಳೆದು ಬಂದ ಜಗತ್ತು ಸರಿ ಇಲ್ಲ, ಅದು ಈ ಹೊರ ಜಗತ್ತನ್ನು ಅನುಕರಿಸಿ ತನ್ನ ದೋಷಗಳನ್ನು ತಿದ್ದಿಕೊಳ್ಳಬೇಕು, ಅದನ್ನು ತಿದ್ದುವುದು ಈ ಹೊರ ಜಗತ್ತಿನ ಕುರಿತು ಜಾಗೃತಿಯನ್ನು ಹೊಂದಿದ ವಿದ್ಯಾವಂತನ ಕರ್ತವ್ಯ ಎಂಬ ಧೋರಣೆಯನ್ನು ಈ ಎರಡನೆಯ ಜಗತ್ತು ಬೆಳೆಸುತ್ತದೆ.  

ಸೋಜಿಗದ ಸಂಗತಿಯೆಂದರೆ, ನಾವು ಯಾರೂ ನಮ್ಮ ಬಾಲ್ಯದಲ್ಲಿ ಮೊದಲನೆಯ ಜಗತ್ತನ್ನು ದೋಷಪೂರ್ಣ, ಅಪೂರ್ಣ ಎಂಬುದಾಗಿ ಅನುಭವಿಸುತ್ತ ಬದುಕುವುದಿಲ್ಲ.  ಅಲ್ಲಿ ಸುಖ-ದುಃಖಗಳೂ, ಹತಾಶೆ, ಅತೃಪ್ತಿ, ಕ್ರೌರ್‍ಯ-ಹಿಂಸೆಗಳೂ ಕೂಡ ಅನುಭವಕ್ಕೆ ಬಂದಿರಬಹುದು. ಆದರೆ  ಆ ಕಾರಣಕ್ಕೆ ನಮ್ಮ ಆಚರಣೆಗಳು ಕೆಟ್ಟವು, ಅವು ನಮ್ಮ ಪೂರ್ವಿಕರು ಹಾಗೂ ಬಂಧುಗಳ ಮೌಢ್ಯ, ಅವು ಅನಾಗರಿಕತೆಯ ಲಕ್ಷಣ ಎಂಬ ಭಾವನೆಯಿಂದ ಅದನ್ನು ನಾವು ಬದುಕಿರುವುದಿಲ್ಲ. ಅದನ್ನು ಶೃದ್ಧೆಯಿಂದ ಆಚರಿಸಿಕೊಂಡು ಬರುತ್ತಿದ್ದ ನಮ್ಮ ಹಿರಿಯರು ಎಂದೂ ಇಂಥ ಅಭಿಪ್ರಾಯಗಳನ್ನು ಹೊಂದಿದಂತೆ ಕಾಣುವುದಿಲ್ಲ. ಇಂಥ ಆಚರಣೆಗಳನ್ನು ನಡೆಸುವ ಸಮಾಜವು ತನ್ನದೇ ಪುಣ್ಯ-ಪಾಪ, ನ್ಯಾಯಾನ್ಯಾಯ, ಧರ್ಮಾಧರ್ಮದ ವಿವೇಕವನ್ನೂ ನಮಗೆ ಕಲಿಸಿದೆ. ಇಂಥ ಕಲ್ಪನೆಗಳಿಗೂ ಹೊರತಾಗಿ ನಮ್ಮ ಬದುಕಿನ ಪರಮ ಸಂಭ್ರಮದ ಕ್ಷಣಗಳೂ ಅವುಗಳಲ್ಲಿರುತ್ತವೆಯಾದ್ದರಿಂದ ಅವನ್ನು ಆಚರಿಸುತ್ತಿರುತ್ತೇವೆ. ಇಂಥ ಅನುಭವಗಳು ಕಳೆದು ಹೋದ ಕಾಲದ್ದಲ್ಲ, ನಮ್ಮ ವೈಚಾರಿಕ ಜಗತ್ತಿನ ಜೊತೆಜೊತೆಗೇ ಅಸ್ತಿತ್ವದಲ್ಲಿರುವಂಥವು.

ತಮ್ಮ ಬಾಲ್ಯದ ಇಂಥ ಸಂಭ್ರಮದ ಅನುಭವಗಳನ್ನು ಕನ್ನಡದ ಸುಪ್ರಸಿದ್ಧ ಬರಹಗಾರರು ತಮ್ಮ ಆತ್ಮಕಥನಗಳಲ್ಲಿ ಕೂಡ ದಾಖಲಿಸಿದ್ದಾರೆ. ಆದರೆ ಇಂಥವರಿಗೆ ಮತ್ತೊಂದು ಜಗತ್ತಿನ ಪರಿಚಯವಾದ  ತಕ್ಷಣ ಅವರ ಹಳೆಯ ಜಗತ್ತಿನ ಅನುಭವಗಳೆಲ್ಲ ಬೇರೆಯದೇ ಸತ್ಯಗಳನ್ನು ತಿಳಿಸಲು ತೊಡಗುತ್ತವೆ. ಇಂಥ ಸತ್ಯದರ್ಶನವು ಅವರಿಗೆ ಯಾವುದೋ ಪುಸ್ತಕವನ್ನು ಓದಿ, ಯಾರದೋ ಮಾತನ್ನು ಕೇಳಿ ಆಯಿತು ಎಂಬುದಾಗಿ ಅವರು ದಾಖಲಿಸುತ್ತಾರೆ. ಅಂಥ ಬರೆಹಗಾರರು ಮೊದಲು ನಾನು ಅದರಲ್ಲೇ ಬದುಕಿದ್ದರೂ ನನಗಿದೆಲ್ಲ ತಿಳಿದೇ ಇರಲಿಲ್ಲ, ಇಂಥದೊಂದು ಪುಸ್ತಕವನ್ನು ಓದಿದ ನಂತರ/ಇಂಥವರ ಮಾತನ್ನು ಕೇಳಿದ ನಂತರ ನಾನು ಬೆಳೆದ ಸಮಾಜದ ನಿಜಸ್ವರೂಪವೇನು (ಅದರ ಅನಿಷ್ಠಗಳು, ಮೌಢ್ಯ, ಶೋಷಣೆ ಇತ್ಯಾದಿ) ಎಂಬುದು ಅರಿವಾಯಿತು. ಅಷ್ಟರ ನಂತರ ಈ ಪದ್ಧತಿಗಳೆಲ್ಲ ತೊಲಗಿದ ಹೊರತೂ ನಮ್ಮ ನಾವು ಉದ್ಧಾರವಾಗುವುದಿಲ್ಲ ಎಂಬುದು ತಿಳಿಯಿತು. ಎಂಬಂಥ ಹೇಳಿಕೆಗಳನ್ನು ಮಾಡುತ್ತಾರೆ. ಹೀಗೆ ಈ ಎರಡನೆಯ ಜಗತ್ತಿಗೆ ಪ್ರವೇಶಿಸುವುದೆಂದರೆ ’ಮೊದಲು ಸುಳ್ಳುಗಳಲ್ಲಿ ಬದುಕಿದ್ದೆವು ಈಗ ನಿಜ ತಿಳಿದಿದೆ’ ಎಂಬ ಜ್ಞಾನೋದಯವನ್ನು ಪಡೆಯುವ ಕೆಲಸ.

 ಮತ್ತೊಂದು ಜಗತ್ತು ನಮ್ಮನ್ನು ಆಕ್ರಮಿಸಿಕೊಂಡ ನಂತರ ವಿಭಿನ್ನ ರೀತಿಯಲ್ಲಿ ನಾವು ಅದಕ್ಕೆ ಪ್ರತಿಕ್ರಿಯಿಸಬಹುದು:

   ೧) ಅವರಲ್ಲಿ ಬಹುತೇಕರು ಇದನ್ನೊಂದು ಸಮಸ್ಯೆಯಾಗಿ ಮಾಡಿಕೊಳ್ಳದೇ ಈ ಎರಡು ಜಗತ್ತುಗಳಲ್ಲೂ ಸಲೀಸಾಗಿ ಈಜಾಡುವುದನ್ನು ರೂಢಿಸಿಕೊಳ್ಳುತ್ತಾರೆ.  

   ೨) ಇನ್ನೂ ಕೆಲವರು ಮೊದಲನೆಯ ಜಗತ್ತಿನ ಕುರಿತು ರಕ್ಷಣಾತ್ಮಕ ನಿಲುವು ತಳೆಯುತ್ತಾರೆ.     ಎರಡನೆಯ ಜಗತ್ತಿನ ಪರಿಭಾಷೆಗಳನ್ನೇ ಉಪಯೋಗಿಸಿ ತಮ್ಮದು ಮೌಢ್ಯವಲ್ಲ, ವೈಜ್ಞಾನಿಕ ಎಂದು ಸಾಧಿಸಲು ಅವರು ಪ್ರಯತ್ನಿಸಬಹುದು. ಇಲ್ಲ ಅದು ಮಾಡುವ ಟೀಕೆಗಳನ್ನು ಪರಿಗಣಿಸಿ ಸಂಪ್ರದಾಯವನ್ನು ಸುಧಾರಿಸುವ ಯುಕ್ತಿಯೂ ಅವರಲ್ಲಿ  ಮೂಡಬಹುದು.

  ೩) ಮತ್ತೂ ಕೆಲವರು ಮೊದಲನೆಯ ಜಗತ್ತನ್ನು ಸಂಪೂರ್ಣವಾಗಿ ಇಲ್ಲ ಭಾಗಶಃ ಅಲ್ಲಗಳೆಯತೊಡಗುತ್ತಾರೆ. ಮೊದಲ ಜಗತ್ತನ್ನು ಅನುಭವಿಸುವಾಗ, ಅಥವಾ ಅದರಲ್ಲಿ ಭಾಗವಹಿಸುವಾಗ ಅರೆಮನಸ್ಸು ಬರುತ್ತದೆ.  ಅದರಲ್ಲಿ ತೊಡಗಿಕೊಂಡಾಗ ತನಗೆ ಹುಟ್ಟುವ ಸಂತೋಷವೇ ಹಿಂಸೆ ಎಂಬ ಪಾಪಪ್ರಜ್ಞೆ ಬೆಳೆಯುತ್ತದೆ, ಅದನ್ನು ಸಂತೋಷದಿಂದ ಆಚರಿಸುವವರ ಕುರಿತು ಅಸಹ್ಯ, ಕನಿಕರ, ಇತ್ಯಾದಿ ಭಾವನೆಗಳು ಹುಟ್ಟುತ್ತವೆ. ಇಲ್ಲ ಅದರ ವಿರುದ್ಧ ಯುದ್ಧ ಸಾರುವುದು ಪ್ರಜ್ಞಾವಂತರ ಕರ್ತವ್ಯ ಎಂಬ ಭಾವ ಮೂಡುತ್ತದೆ. ಆ ಜಗತ್ತಿನ ಜೊತೆಗೆ ಸಂಘರ್ಷಪೂರ್ಣ ಮುಖಾಮುಖಿಗಳೂ ನಡೆಯಬಹುದು.

ಒಟ್ಟಿನಲ್ಲಿ ಮೊದಲನೆಯ ಜಗತ್ತಿನ ಅನುಭವದಿಂದ ಉದ್ದೇಶಪೂರ್ವಕವಾಗಿ ಬಿಡಿಸಿಕೊಳ್ಳುವ ಅಥವಾ ಕಳಚಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಕಳಚಿಕೊಳ್ಳಲಾಗದೇ ತೋರಿಕೆ, ಇಬ್ಬಂದಿತನಗಳು ಬೆಳೆಯುತ್ತವೆ. ಇಲ್ಲ ಅದಕ್ಕೆ ವೈಚಾರಿಕತೆಯನ್ನು ಆರೋಪಿಸಿ ಸಮರ್ಥಿಸಿಕೊಳ್ಳುವ, ಇಲ್ಲವೇ ಅನಾಸಕ್ತರಾಗಿ ತಾವೊಂದೇ ಅದರಿಂದ ಕಳಚಿಕೊಂಡು ನೈತಿಕವಾಗಿ ನಿಟ್ಟುಸಿರು ಬಿಡುವ, ಇಲ್ಲ ತಮ್ಮ ಬಂಧುಗಳ ಮನಸ್ಸನ್ನು ನೋಯಿಸಲಾರದೇ ಅವರಿಗಾಗಿ ನಾಟಕ ಮಾಡಿ ಇಲ್ಲ ತ್ಯಾಗ ಮಾಡಿ ಧನ್ಯರಾಗುವ, ನಾನಾ ರೀತಿಯ ಉದಾಹರಣೆಗಳು ನಮಗೆ ಕನ್ನಡ ಬರವಣಿಗೆಯ ಲೋಕದಲ್ಲಿ ಚಿರಪರಿಚಿತ. 

ಆದರೆ ಇವರ ಈ ಎಲ್ಲ ಡೊಂಬರಾಟಗಳಿಗೂ ಅತೀತವಾಗಿ ಆ ಮೊದಲಿನ ಜಗತ್ತು ತನ್ನಷ್ಟಕ್ಕೆ ಮುಂದುವರಿದುಕೊಂಡು ಹೋಗುತ್ತಿರುತ್ತದೆ. ಎರಡನೆಯ ಜಗತ್ತನ್ನು ಕೂಡ ತಿರಸ್ಕರಿಸದೇ ತನ್ನದೊಂದು ಆಭರಣದಂತೆ ಅದನ್ನು ಧರಿಸಿ ಸಾಗುವುದೊಂದೇ ಅದರ ಕೆಲಸ. ಹಾಗಾಗಿ ಒಮ್ಮೆ ಬದಲಾದ ಹಾಗೆ ಕಾಣಿಸುತ್ತದೆ, ಮತ್ತೆ ತನ್ನ ’ಕಬಂಧ ಬಾಹುಗಳ’ ನಿಜ ಸ್ವರೂಪವನ್ನು ದರ್ಶಿಸುತ್ತದೆ. ಇದನ್ನು ಬದಲಾಯಿಸಹೊರಟ ಚಳುವಳಿಕಾರರು ಹತಾಶರಾಗಿ ಕೈಚೆಲ್ಲುತ್ತಾರೆ, ರಾಜಿ ಮಾಡಿಕೊಳ್ಳುತ್ತಾರೆ, ಇಬ್ಬಂದಿತನವನ್ನು ರೂಢಿಸಿಕೊಳ್ಳುತ್ತಾರೆ, ದ್ವೀಪವಾಗುತ್ತಾರೆ, ಇಲ್ಲ ತಾವೇ ಪಳಗಿ ಅದರೊಳಗೆ ಸೇರಿಕೊಳ್ಳುತ್ತಾರೆ. ’ನಮ್ಮ ಈ ಸಮಾಜವನ್ನು ತಿದ್ದಲು ಯಾರಿಗೂ ಸಾಧ್ಯವಿಲ್ಲ, ನೋಡಿ, ಬುದ್ಧ ಬಂದ, ಬಸವ ಬಂದ… ಏನಾಯಿತು?’ ಎಂಬ ಹೇಳಿಕೆ ನಮಗೆಲ್ಲ ಸತ್ಯವಾಗಿಬಿಟ್ಟಿದೆ. ಎಲ್ಲ ತಲೆಮಾರುಗಳ ಆಧುನಿಕ ವಿದ್ಯಾವಂತರಿಗೂ ಈ ಅನುಭವದ ಮೃದು ಅಥವಾ ಕಟು ಆವೃತ್ತಿಗಳು ಒಂದಿಲ್ಲೊಂದು ಬಾರಿ ಪರಿಚಯವಾಗಿರುತ್ತವೆ. ಭಾರತೀಯ ಸಮಾಜವು ವಿದ್ಯಾವಂತರ ವಿಚಾರಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಒಗ್ಗಲಾರೆನೆಂದು ಹಟ ಹಿಡಿದಂತೆ ವಿಚಾರವಾದಿಗಳಿಗೆ ಕಾಣುತ್ತದೆ.   

ಆದರೆ ಸಮಾಜದ ದೃಷ್ಟಿಯಿಂದ ನೋಡಿ, ಬೇರೆಯದೇ ಸತ್ಯವೊಂದು ಗೋಚರಿಸುತ್ತದೆ: ಜನರ ಅನುಭವವನ್ನು ನಿಜವೆಂದು ಪರಿಗಣಿಸಿ ಅದನ್ನಾಧರಿಸಿ ಈ ಸಮಾಜದ   ಸ್ವರೂಪವನ್ನು ತಿಳಿದುಕೊಳ್ಳಲು ಈ ಮೇಲಿನ ವೈಚಾರಿಕ ಜಗತ್ತು ನಿರಾಕರಿಸುತ್ತಿದೆ. ಇದರ ಪರಿಣಾಮಗಳನ್ನು ಇಂಥ ಫಜೀತಿಗಳ ರೂಪದಲ್ಲಿ ನಾವು ಅನುಭವಿಸುತ್ತಿಲ್ಲವೆಂದು ಹೇಗೆ  ಹೇಳುತ್ತೀರಿ?  ಏಕೆಂದರೆ ನಮ್ಮ ವೈಚಾರಿಕ ಜಗತ್ತು ನಮ್ಮ ಕುರಿತು ಪಾಶ್ಚಾತ್ಯರ ಅನುಭವವನ್ನು ಹಾಗೂ ಪ್ರಶ್ನೆಗಳನ್ನು ಆಧರಿಸಿ ಹುಟ್ಟಿಕೊಂಡ ಚಿತ್ರಣಗಳನ್ನು ಆಧರಿಸಿದೆ. ಇದು ಮೂಢನಂಬಿಕೆ, ಇದು ಸಮಾಜವಿರೋಧಿ, ಇದು ಮಾನವ ವಿರೋಧಿ, ಇದು ಪ್ರತಿಗಾಮಿ, ಇದು ಶೋಷಣಾತ್ಮಕ, ಇದು ತಾರತಮ್ಯ, ಇದು ಅನಿಷ್ಠ, ಇದು ದಮನಕಾರಿ, ಎನ್ನುತ್ತಿರುವಾಗ ಪಾಶ್ಚಾತ್ಯ ಪರಿಕಲ್ಪನೆಗಳನ್ನು ಬಳಸಿಕೊಳ್ಳುತ್ತಿರುತ್ತೇವೆ. ಇಂಥ ಪರಿಕಲ್ಪನೆಗಳೆಲ್ಲ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಿರ್ದಿಷ್ಟ ಇತಿಹಾಸವನ್ನೂ, ಅರ್ಥವನ್ನೂ ಹೊಂದಿವೆ. ಅದನ್ನು ತಿಳಿದುಕೊಳ್ಳುವ ಗೋಜಿಗೇ ಹೋಗದೇ, ಅಥವಾ ಅದರ ಅರಿವೇ ಇಲ್ಲದೆ ಅಂಥ ಶಬ್ದಗಳನ್ನು ಯೆರ್ರಾಬಿರ್ರಿಯಾಗಿ ಅನುವಾದಿಸಿಕೊಂಡು ನಮ್ಮ ಸಮಾಜವನ್ನು ವರ್ಣಿಸುತ್ತಿರುತ್ತೇವೆ. 

ಎಲ್ಲಾದರೂ ಜನರ ಅನುಭವದ ಕುರಿತು ಚರ್ಚೆಗಳನ್ನೆತ್ತಿದರೆ ಅದೊಂದು ಪಾಪವೋ ಎಂಬಂತೆ, ಅನೈತಿಕ ಕೆಲಸವೊ ಎಂಬಂತೆ, ಇಲ್ಲ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರವೋ ಎಂಬಂತೆ ಅದನ್ನು ಬದಿಗೊತ್ತಲಾಗುತ್ತದೆ.   ಪಾಶ್ಚಾತ್ಯ ಚಿತ್ರಣಗಳನ್ನೇ ಸತ್ಯವೆಂಬುದಾಗಿ ನಂಬಿಕೊಂಡು ನಮ್ಮ ಅನುಭವವನ್ನು ಆ ಚಿತ್ರಣಗಳ ಬೆಳಕಿನಲ್ಲಿ ವಿಕಾರವಾಗಿ ಜೋಡಿಸಿಕೊಳ್ಳುವಂತೆ ಮಾಡುವುದೇ ವಸಾಹತು ಪ್ರಜ್ಞೆ.  ವಸಾಹತು ಪ್ರಜ್ಞೆ ಎಂಬುದಾಗಿ ಏಕೆ ಕರೆಯುತ್ತಿದ್ದೇವೆಂದರೆ, ಬ್ರಿಟಿಷರ ಸಾಮ್ರಾಜ್ಯದಿಂದ ವಸಾಹತುವಿನ ದಾಸರು ಪಡೆದ ಬಳುವಳಿ ಅದು. ವಸಾಹತು ಪ್ರಜ್ಞೆಯು ನಮ್ಮ ಅನುಭವದ ಕುರಿತು ಆಲೋಚಿಸದಂತೆ ನಮ್ಮನ್ನು ತಡೆಯುತ್ತದೆ.

ಅಂದರೆ ನಮ್ಮ ಬಾಲ್ಯದ  ಅನುಭವವು ನಿಜವಾಗಿದ್ದರೂ ಕೂಡ ಅದು ನಮ್ಮ ಅಜ್ಞಾನದಿಂದ ಹುಟ್ಟಿರುವುದರಿಂದ ಅದನ್ನು ಆಧರಿಸಿ ನಮ್ಮ ಸಾಮಾಜಿಕ ಚಿಂತನೆಯನ್ನು ನಡೆಸುವಂತಿಲ್ಲ   ಎಂಬುದಾಗಿ ನಮ್ಮ ವೈಚಾರಿಕ ಜಗತ್ತು ಭಾವಿಸುತ್ತದೆ. ನಮ್ಮ ಸಮಾಜದ ಕುರಿತು ನಾವು   ವೈಚಾರಿಕ ವಿವರಣೆಗಳನ್ನು ಬೆಳೆಸಬೇಕಾದರೆ ಈ ಜನರ ಅನುಭವಗಳನ್ನು ಅಲ್ಲಗಳೆಯುವುದು  ಅನಿವಾರ್ಯ.  ಆ ಕೆಲಸವನ್ನು ಮಾಡಲೇಬಾರದೆಂಬುದು ನನ್ನ ಅಭಿಪ್ರಾಯವಲ್ಲ. ಅದರಲ್ಲಿ ತಪ್ಪೇನಿದೆ? ಪ್ರಪಂಚದ ಕುರಿತ ನಮ್ಮ ಅಜ್ಞಾನವನ್ನು ಕಳೆದುಕೊಳ್ಳುವುದೇ ಶಿಕ್ಷಣದ ಗುರಿ. ದಿನವೂ ಸೂರ್ಯನೇ ಭೂಮಿಯ ಸುತ್ತ ತಿರುಗುತ್ತಿರುವುದನ್ನು ನೋಡುವುದು ನಮ್ಮ ಅನುಭವ. ಆದರೂ ಕೂಡ ಭೂಮಿಯೇ ಸೂರ್ಯನ ಸುತ್ತ ತಿರುಗುತ್ತಿದೆ ಎಂಬ ಸತ್ಯವನ್ನು ನಾವು ಶಿಕ್ಷಣದಿಂದಲೇ ಕಲಿತಿದ್ದಲ್ಲವೆ?  ಹಾಗಾಗಿ ನಮ್ಮ ಅನುಭವಕ್ಕೆ ವ್ಯತಿರಿಕ್ತವಾಗಿರುವ ಇಂಥ ಸಂಗತಿಗಳೇಕೆ ಸತ್ಯವಾಗಿರಬಾರದು? ಎಂಬ ಪ್ರಶ್ನೆಯೂ ಏಳಬಹುದು. 

ಆದರೆ ವೈಜ್ಞಾನಿಕ ಸತ್ಯಗಳನ್ನು ನಮ್ಮ ತರ್ಕಕ್ಕೆ ಸುಸಂಬದ್ಧವಾಗುವಂತೆ ವಿವರಿಸಿರುತ್ತಾರೆ ಎಂಬುದನ್ನೂ ನೆನಪಿಡಬೇಕು. ನಮ್ಮನ್ನು ಪೋಷಿಸಿ ಬದುಕಿಗೆ ಹಚ್ಚಿಸಿದ ಸಮಾಜವನ್ನು ಏಕೆ ಅಮಾನವೀಯ ಎಂಬುದಾಗಿ ತಿಳಿಯಬೇಕು, ನಮಗೆ ವ್ಯವಹಾರವನ್ನು ಹಾಗೂ ಯೋಚಿಸುವುದನ್ನು ಹೇಳಿಕೊಟ್ಟ ಹಿರಿಯರನ್ನು ಏಕೆ ಮೂಢರೆಂದು ತಿಳಿಯಬೇಕು, ಸಂಭ್ರಮದ ಕ್ಷಣಗಳೆಂದುಕೊಂಡವುಗಳನ್ನು ಹಿಂಸೆ ಎಂಬುದಾಗಿ ಏಕೆ ತಿಳಿಯಬೇಕು, ಪುಣ್ಯಕಾರ್ಯ ಎಂದು ಹೇಳುತ್ತಿರುವುದು ನಿಜವಾಗಿಯೂ ಪಾಪಕಾರ್ಯವೇಕೆ ಎಂಬುದನ್ನು ಎಲ್ಲೂ ಯಾರೂ ವೈಜ್ಞಾನಿಕವಾಗಿ ವಿವರಿಸಿಲ್ಲ. ಯಾವ ಸ್ಪಷ್ಟೀಕರಣಗಳನ್ನೂ ನೀಡದೇ  ಅವುಗಳನ್ನು  ಸತ್ಯವೆಂಬಂತೆ ನಮಗೆ ನೀಡಲಾಗುತ್ತದೆ.

ಈ ವಸಾಹತು ಪ್ರಜ್ಞೆಯನ್ನು ಇಂಥ ಯಾವುದೇ ವೈಜ್ಞಾನಿಕ ವಿವರಣೆಗಳನ್ನು ನೀಡದೇ ಸಮರ್ಥಿಸುವ ಕೈಂಕರ್ಯವನ್ನು ಸಮಾಜಶಾಸ್ತ್ರವು ಮಾಡಿದೆ. ಕಳೆದ ನೂರಾರು ವರ್ಷಗಳಿಂದ ಭಾರತೀಯ ಸಮಾಜದ ಕುರಿತು ನಡೆಸಿಕೊಂಡು ಬಂದ ಚಿಂತನೆ ಹಾಗೂ ಚರ್ಚೆಗಳೆಲ್ಲವೂ ಇಂಥ ಸಮಾಜಶಾಸ್ತ್ರವನ್ನು ಆಧರಿಸಿದ  ತಿಳುವಳಿಕೆಗಳೇ. ಈ ಸಮಾಜಶಾಸ್ತ್ರವು ಪಾಶ್ಚಾತ್ಯರ ಪ್ರಶ್ನೆಗಳನ್ನು, ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ಹುಟ್ಟಿಕೊಂಡಿದ್ದು, ಈಗಲೂ ಅದೇ ಕೆಲಸವನ್ನು ಮಾಡುತ್ತಿದೆ. 

ಒಂದು ಸಮಾಜದ ಸಮಸ್ಯೆಯೆಂದರೆ ಜನರ ಸಮಸ್ಯೆಯೇ ಆಗಿದ್ದಲ್ಲಿ ಈ ಕುರಿತು ಎರಡು ಪ್ರಶ್ನೆಗಳಂತೂ  ಎದ್ದೇ ಏಳುತ್ತವೆ: ೧) ಎಲ್ಲಾ ಮನುಷ್ಯ ಸಮಾಜಗಳಲ್ಲಿರುವಂತೆ ನಮ್ಮ ಜನರಿಗೂ ಅವರದೇ ಸಮಸ್ಯೆಗಳಿದ್ದಿರಲೇಬೇಕು. ಅವುಗಳನ್ನು ಪರಿಹರಿಸಬೇಕಾದರೆ ಈ ಜನರ ಅನುಭವವನ್ನು ಆಧರಿಸಿ  ಅವುಗಳ ಸ್ವರೂಪವೇನೆಂಬುದನ್ನು ತಿಳಿದುಕೊಳ್ಳುವ ಕೆಲಸವನ್ನು ಮಾಡಲೇಬೇಕು. ಆದರೆ ನಾವು ಆ ಕೆಲಸವನ್ನು ಮಾಡುತ್ತಿದ್ದೇವೆಯೆ?  ೨) ನಮ್ಮ ಜನರ ಸಮಸ್ಯೆಗಳೆಂದು ನಾವು ನಡೆಸುತ್ತಿರುವ ಬಗೆಹರಿಯದ ಚರ್ಚೆ, ಚಿಂತನ-ಮಂಥನಗಳಲ್ಲಿ ಬೌದ್ಧಿಕ ಜಗತ್ತು ಸೃಷ್ಟಿಸಿಕೊಂಡದ್ದೆಷ್ಟು ನಮ್ಮ ಜನರ ನೈಜ ಸಮಸ್ಯೆಗಳೆಷ್ಟು? ಈ ಮೇಲಿನ ಎರಡೂ ಪ್ರಶ್ನೆಗಳಿಗೆ ನಕಾರಾತ್ಮಕ ಉತ್ತರವೇ ಬಂದ ಪಕ್ಷದಲ್ಲಿ ಮತ್ತೊಂದು ಪ್ರಶ್ನೆ ಏಳುತ್ತದೆ: ಇಂಥ ವಸಾಹತು ಪ್ರಜ್ಞೆಯಿಂದ ರೂಪಿತವಾದ ಚಿಂತನೆಯ  ಅನಾಹುತಗಳೇನು?

ಇಂದು ಭಾರತೀಯ ವಿದ್ಯಾವಂತರ ಜೀವನದಲ್ಲಿ ಪ್ರಚಲಿತದಲ್ಲಿರುವ ಚರ್ಚೆಗಳನ್ನೇ ಉದಾಹರಿಸಿ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬಹುದು. ಇಂದು ನಮ್ಮ ಸಂಸ್ಕೃತಿ ಹಾಗೂ ಸಮಾಜದ ಕುರಿತು ಪತ್ರಿಕೆಗಳಲ್ಲಿ ಹಾಗೂ ಸಾರಸ್ವತ ಲೋಕದಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲೆಲ್ಲ ಪ್ರತಿಪಾದನೆಗೊಳ್ಳುತ್ತಿರುವ ಅನೇಕ ಧೋರಣೆಗಳು ಹಾಗೂ ಒಪ್ಪಿಕೊಂಡ ಪ್ರಮಾಣಗಳು ಹಾಗೂ ಪರಿಭಾಷೆಗಳು ವಸಾಹತು ಪ್ರಜ್ಞೆಯನ್ನು ನಿದರ್ಶಿಸುತ್ತಿರುತ್ತವೆ. ಅವು ನಮ್ಮ ನೈಜ ಸಮಸ್ಯೆಗಳನ್ನು ಗುರುತಿಸಲಿಕ್ಕೂ ದೊಡ್ಡ ತೊಡಕಾಗಿವೆ.  ಈ ಅಂಕಣದಲ್ಲಿ ಇನ್ನು ಮುಂದೆ ಇಂಥ ದೃಷ್ಟಾಂತಗಳನ್ನು  ಚರ್ಚೆಗೆತ್ತಿಕೊಳ್ಳಲಾಗುವದು.

ವಸಾಹತು ಪ್ರಜ್ಞೆಯು ಹುಟ್ಟುಹಾಕುವ ಇಂಥ ಚರ್ಚೆಯನ್ನು ನಡೆಸುತ್ತಿರುವಾಗ ಮತ್ಯಾವುದೋ ಜಗತ್ತಿನ ಸಮಸ್ಯೆಗಳನ್ನು ನಮ್ಮಲ್ಲಿದೆ ಎಂಬುದಾಗಿ ಭಾವಿಸಿಕೊಂಡು ಚರ್ಚಿಸುತ್ತಿರುತ್ತೇವೆ. ಆ ಕಾರಣದಿಂದಾಗಿಯೇ ಇಂಥ ಸಮಸ್ಯೆಗಳನ್ನು ಕುರಿತು ನಮ್ಮ ಅನುಭವಕ್ಕೆ ಸರಿ ಎನ್ನಿಸುವಂತೆ ತರ್ಕಬದ್ಧವಾಗಿ ಯೋಚಿಸುವುದೂ ಸಾಧ್ಯವಿಲ್ಲ, ಜನರಿಗೆ ಮನದಟ್ಟಾಗುವಂತೆ ವಿವರಿಸುವುದೂ ಸಾಧ್ಯವಿಲ್ಲ, ಇನ್ನು ಪರಿಹರಿಸುವುದಂತೂ ದೂರದ ಮಾತು. ವಸಾಹತು ಪ್ರಜ್ಞೆಯ ಆವಾಂತರಗಳನ್ನು ಗುರುತಿಸುತ್ತ ಅವುಗಳ ಪರಾಮರ್ಶೆಯನ್ನು ನಡೆಸಿದರೆ ಮಾತ್ರವೇ ಅಂಥ ಬೌದ್ಧಿಕ ಸಮಸ್ಯೆಗಳಿಂದ ಹೊರಬರುವ ಮಾರ್ಗಗಳು ಗೋಚರಿಸಬಹುದು ಹಾಗೂ ನಮ್ಮ ಸಮಾಜದಲ್ಲಿರುವ ಸಮಸ್ಯೆಗಳ ನೈಜ ಸ್ವರೂಪವನ್ನು ತಿಳಿಯಬಹುದು. ಆ ಕಾರಣಕ್ಕಾಗಿ ಈ ಗ್ರಂಥಸರಣಿಯನ್ನು ವಸಾಹತು ಪ್ರಜ್ಞೆಯ ವಿಶ್ವರೂಪ ಎಂಬುದಾಗಿ ಹೆಸರಿಸಲಾಗಿದೆ.

ಬೌದ್ಧಿಕ ದಾಸ್ಯದಲ್ಲಿ ಭಾರತದ ಪ್ರಸ್ತುತ ಲೇಖನಗಳು ಪ್ರೊ. ಎಸ್.ಎನ್. ಬಾಲಗಂಗಾಧರ ರವರ Heathen in His Blindness: Asia, the West and the Dynamics of Religion ಮಹಾ ಪ್ರಬಂಧ ಮತ್ತು ಅದರ ನಂತರ ಬೆಳೆದ ಸಂಶೋಧನೆಗಳನ್ನು ಕನ್ನಡದಲ್ಲಿ ಸರಳವಾಗಿ, ಸಾಮಾನ್ಯ ಓದುಗರಿಗೆ ತಲುಪುವ ರೀತಿಯಲ್ಲಿ, ಸಮಾಚಾರ ಪತ್ರಿಕೆಗೆಂದು ಕನ್ನಡದಲ್ಲಿ ನಿರೂಪಿಸಿರುವ ಪ್ರೊ. ರಾಜಾರಾಮ ಹೆಗಡೆಯವರ ಅಂಕಣಗಳ ಸಂಗ್ರಹ. ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸ್ತಕ  CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ  ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾದ ಕೆಲವರ್ಷಗಳ ನಂತರ ಈ ಅಂಕಣಗಳಿಗೆ ಪುಸ್ತಕದ ರೂಪ ಕೊಟ್ಟು, ವಸಾಹತು ಪ್ರಜ್ಞೆಯ ವಿಶ್ವರೂಪ ಎಂಬ ಸರಣಿಯಲ್ಲಿ ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಪುಸ್ತಕವನ್ನು ೨೦೧೫ ರಲ್ಲಿ ನಿಲುಮೆ ಪ್ರಕಾಶನದಿಂದ ಮೊದಲ ಬಾರಿ ಪ್ರಕಟ ಮಾಡಲಾಯಿತು. ಅದಾದ ನಂತರ ಈ ಪುಸ್ತಕವು ಮರುಮುದ್ರಣಗೊಂಡು ಆರೋಹಿ ಸಂಶೋಧನಾ ಸಂಸ್ಥೆ, ಬೆಂಗಳೂರು, ಇದರ ನೇತೃತ್ವದಲ್ಲಿ ೨೦೧೮ರಲ್ಲಿ ವಸಂತ ಪ್ರಕಾಶನದಿಂದ ಪ್ರಕಟವಾಯಿತು. ಇದೀಗ ಈ ಲೇಖನಗಳು ಈ ಅಂತರ್ಜಾಲದ ಮಾಧ್ಯಮದ ಮೂಲಕ ಪ್ರಕಟವಾಗುತ್ತಿವೆ.  

ಪುಸ್ತಕ ದೊರಕುವ ಸ್ಥಳ:-

ವಸಂತ ಪ್ರಕಾಶನ
360, 10/B ಮೇನ್
ಜಯನಗರ 3ನೇ ಬ್ಲಾಕ್
ಬೆಂಗಳೂರು – 11
ಫೋನ್: 9986020852

Author

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

You may also like

Leave a Comment