Home ವಸಾಹತು ಪ್ರಜ್ಞೆಬುದ್ಧಿಜೀವಿಗಳ ಮೂಢನಂಬಿಕೆಗಳು ಥಿಯರಿಯನ್ನು ಕಟ್ಟುತ್ತಾ ಬದುಕನ್ನು ರೂಪಿಸಿಕೊಳ್ಳುವ ಕ್ರಮ

ಥಿಯರಿಯನ್ನು ಕಟ್ಟುತ್ತಾ ಬದುಕನ್ನು ರೂಪಿಸಿಕೊಳ್ಳುವ ಕ್ರಮ

by Rajaram Hegde
114 views

ವಸಾಹತು ಕಾಲದಲ್ಲಿ ಬ್ರಿಟಿಷರು ಪಾಶ್ಚಾತ್ಯ ಸಾಮಾಜಿಕ ಚಿಂತನೆಗಳನ್ನೂ ಅವುಗಳನ್ನಾಧರಿಸಿದ ರಾಜಕೀಯ ವ್ಯವಸ್ಥೆಯನ್ನೂ ಭಾರತಕ್ಕೆ ಪರಿಚಯಿಸಿದರು. ಆದರೆ ಪಾಶ್ಚಾತ್ಯ ಚಿಂತನೆಗಳ ಹಿಂದೆ ಅವರದೇ ಜೀವನ ಕ್ರಮವೊಂದು ಇದೆ. ಅದೆಂದರೆ ಥಿಯರಿಗಳನ್ನು ಕಟ್ಟಿಕೊಂಡು ಬದುಕು ರೂಪಿಸಿಕೊಳ್ಳುವುದು. ಅವರು ಭಾರತೀಯ ಸಮಾಜದ ಕುರಿತೂ ಥಿಯರಿಗಳನ್ನು ಕಟ್ಟಿದರು. ಇಂಥ ಥಿಯರಿಗಳು ಕ್ರೈಸ್ತ ಲೋಕದೃಷ್ಟಿಯಿಂದ ಹುಟ್ಟಿವೆ. ಹಾಗಾಗಿ ಅವು ನಿಜವಾದ ಥಿಯರಿಗಳೇ ಅಲ್ಲ. ಭಾರತೀಯ ಬುದ್ಧಿಜೀವಿಗಳು ಪಾಶ್ಚಾತ್ಯರು ಥಿಯರಿಗಳೆಂಬುದಾಗಿ ನಮ್ಮ ಕುರಿತು ತಿಳಿಸಿದ್ದನ್ನೇ ಅಂತಿಮ ಸತ್ಯಗಳೋ ಎಂಬಂತೆ ಸ್ವೀಕರಿಸಿ ಅವೇ ವೈಚಾರಿಕತೆಯ ಪ್ರಮಾಣಗಳು ಎಂಬುದಾಗಿ ಇಂದಿಗೂ ನಂಬಿದ್ದಾರೆ. ಅಷ್ಟೇ ಅಲ್ಲ ಅವನ್ನು ಪರಿಷ್ಕರಿಸಲು ಕೂಡ ನಿರಾಕರಿಸುತ್ತಿದ್ದಾರೆ.

ಕಳೆದ ಐನೂರು ವರ್ಷಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯು ಜಗತ್ತಿಗೆ ಏನನ್ನು ಕೊಟ್ಟಿದೆ ಎಂಬುದನ್ನು ಪಟ್ಟಿ ಮಾಡುವುದೂ ಕಷ್ಟದ ಕೆಲಸ. ಅದು ವಿಜ್ಞಾನ, ತಂತ್ರಜ್ಞಾನದ ಕ್ಷೇತ್ರದಲ್ಲಿ ಕ್ರಾಂತಿಕಾರಕ ಆವಿಷ್ಕಾರಗಳನ್ನು ನಡೆಸಿದೆ, ಸಮಾಜ ವಿಜ್ಞಾನವನ್ನು ಕೊಟ್ಟಿದೆ, ರಾಜಕೀಯ ಚಿಂತನೆಗಳು, ಪ್ರಜಾ ಪ್ರಭುತ್ವ, ಆಧುನಿಕ ಸಂಸ್ಥೆಗಳು, ಹೀಗೆ ಆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟು ಇಂದಿನ ನಾಗರೀಕತೆಯನ್ನು ಊಹಿಸುವುದೂ ಸಾಧ್ಯವಿಲ್ಲ. ಪಾಶ್ಚಾತ್ಯರ ಜೀವನಕ್ರಮವನ್ನು ಭಾರತೀಯರ ಜೀವನ ಕ್ರಮಕ್ಕೆ ಹೋಲಿಸಿದಾಗ ಮೇಲ್ನೋಟಕ್ಕೇ ಸಾಮಾನ್ಯವಾಗಿ ಕಂಡುಬರುವ ಒಂದು ವ್ಯತ್ಯಾಸವಿದೆ. ಅದೆಂದರೆ ಈ ಪ್ರಪಂಚದ ಕುರಿತು ತಿಳಿದುಕೊಳ್ಳಲು ಅವರು ತೋರಿಸುವ ಕುತೂಹಲ. ಈ ಭೂಮಿ, ವಿಶ್ವ, ಸಸ್ಯ, ಪ್ರಾಣಿಗಳು, ನೈಸರ್ಗಿಕ ಆಗುಹೋಗುಗಳು, ವಿಭಿನ್ನ ಸಮಾಜಗಳು ಹಾಗೂ ಸಂಸ್ಕೃತಿಗಳು ಇವುಗಳ ಕುರಿತು ವ್ಯವಸ್ಥಿತವಾದ ಜ್ಞಾನವನ್ನು ಕಟ್ಟುವುದು ಅವರಿಗೆ ಬಹು ಮುಖ್ಯ ಎನ್ನಿಸುತ್ತದೆ. ಕಳೆದ ಮುನ್ನೂರು ವರ್ಷಗಳಿಗೂ ಹೆಚ್ಚಿನ ಕಾಲ ಅವರು ನಿರಂತರವಾಗಿ ಈ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಇವೆಲ್ಲವುಗಳ ಕುರಿತು ಸರಿಯಾದ ಪ್ರಶ್ನೆಗಳನ್ನು ಎತ್ತಿ ಉತ್ತರಿಸುವ ವಿಧಾನವನ್ನು ಪರಿಷ್ಕರಿಸುತ್ತ ಬೆಳೆಸಿದ್ದಾರೆ. ಈ ವಿಶ್ವದ ಕುರಿತು, ಭೂಮಿಯ ಕುರಿತು, ಮನುಷ್ಯ ಸಮಾಜದ ಕುರಿತು ಥಿಯರಿಗಳನ್ನು ಬೆಳೆಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ನಿಸರ್ಗ ಹಾಗೂ ಸಮಾಜ ವಿಜ್ಞಾನಗಳನ್ನು ಬೆಳೆಸಿಕೊಂಡು ಬಂದಿದ್ದಾರೆ.

               ಸಾಮಾನ್ಯವಾಗಿ ಪಾಶ್ಚಾತ್ಯ ಸಂಶೋಧಕರನ್ನು ಕುರಿತು ನಾವೆಲ್ಲರೂ ಒಂದು ವಿಷಯವನ್ನು ಗಮನಿಸಿದ್ದೇವೆ. ಪ್ರಪಂಚದ ಯಾವ್ಯಾವುದೋ ಮೂಲೆಗೆ ಹೋಗಿ, ಏನೇನೋ ಅವಸ್ಥೆ ಪಟ್ಟುಕೊಂಡು ಅವರು ಒಂದಿಲ್ಲೊಂದು ವಿಷಯಗಳ ಕುರಿತು ಅಧ್ಯಯನದಲ್ಲಿ ನಿರತರಾಗಿರುತ್ತಾರೆ. ಇದೆಲ್ಲ ಏಕೆ? ನಿಸರ್ಗದ ಹಾಗೂ ಮಾನವನ ಕುರಿತ ಅಂತರ್ಗತ ನಿಯಮಗಳನ್ನು ತಿಳಿದುಕೊಳ್ಳಲಿಕ್ಕೆ. ಹಾಗಾದರೆ ಉಳಿದ ಸಂಸ್ಕೃತಿಯವರು ಇಂಥ ಸಂಶೋಧನೆಯನ್ನೇ ಮಾಡುತ್ತಿಲ್ಲವೆ? ಎಂಬ ಪ್ರಶ್ನೆ ಏಳಬಹುದು. ಉಳಿದವರು ಆಧುನಿಕ ಕಾಲದಲ್ಲಂತೂ ಮಾಡುತ್ತಿದ್ದಾರೆ. ಆದರೆ ಇಂದು ಈ ಕ್ರಮವನ್ನು ಅವರು ಕಲಿತದ್ದು ಪಾಶ್ಚಾತ್ಯರಿಂದಲೇ ಎಂಬುದನ್ನು ಕಂಡುಕೊಳ್ಳಲಿಕ್ಕೆ ಮತ್ತೊಂದು ಸಂಶೋಧನೆಯ ಅಗತ್ಯವೇನೂ ಇಲ್ಲ.  ಇಷ್ಟಾಗಿಯೂ ಕೂಡ ಪಾಶ್ಚಾತ್ಯರಿಗೆ ಹೋಲಿಸಿದರೆ ಸಂಶೋಧನೆಯಲ್ಲಿ ತೊಡಗಿಕೊಳ್ಳುವುದರಲ್ಲಿ ನಾವು ಸಾಕಷ್ಟು ಹಿಂದೆ ಬಿದ್ದಿದ್ದೇವೆ. ಕೆಲವು ಅಪವಾದಗಳನ್ನು ಬಿಟ್ಟರೆ, ಯಾವುದೇ ಕ್ಷೇತ್ರದಲ್ಲಾಗಲೀ ಅವರೇ ಥಿಯರಿಗಳನ್ನು ರೂಪಿಸುವವರು. ನಾವು ಅವನ್ನು ಬಳಸುವವರು. ಇದು ಒಂದು ರೀತಿಯಲ್ಲಿ ಅವರ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಕೆಲಸವಾದರೂ ಕೂಡ ಅದು ಅಕ್ರಮ ಎಂದೆನಿಸುವುದಿಲ್ಲ. ಎಷ್ಟೋ ಬಾರಿ ಏಕೆ ಇವರಿಗೆ ಭೌತಿಕ ಪ್ರಪಂಚದ ಕುರಿತು ಇಷ್ಟೊಂದು ಕುತೂಹಲ? ನಮಗೇಕಿಲ್ಲ? ಎಂಬ ಪ್ರಶ್ನೆ ಕೂಡಾ ಏಳುತ್ತದೆ.

   ಸೈನ್ಸ್ ಅಥವಾ ಪಾಶ್ಚಾತ್ಯ ವಿಜ್ಞಾನವು ಪಶ್ಚಿಮದಲ್ಲಿ ಬೆಳೆದು ಬರಲು ಅಲ್ಲಿನ ಸಾಂಸ್ಕೃತಿಕ ಹಿನ್ನೆಲೆ ಕಾರಣವಾಗಿದೆ ಎಂಬುದರ ಕುರಿತು ನಾನು ಇದೇ ಮಾಲಿಕೆಯ ಹಿಂದಿನ ಪುಸ್ತಕದಲ್ಲಿ ಚರ್ಚಿಸಿದ್ದೇನೆ.  ಒಂದು ಕಾಣದ ಶಕ್ತಿಯ ಉದ್ದೇಶವನ್ನು ಸಾಕಾರಗೊಳಿಸುವ ಸಲುವಾಗಿ ಈ ವಿಶ್ವವನ್ನು ವಿನ್ಯಾಸಗೊಳಿಸಲಾಗಿದೆ ಎಂಬುದಾಗಿ ಕ್ರಿಶ್ಚಿಯಾನಿಟಿ ತಿಳಿಸುತ್ತದೆ. ಈ ವಿನ್ಯಾಸವು ಅಂತರ್ಗತ ನಿಯಮಗಳಾಗಿ ವಿಶ್ವದ ಆಗು ಹೋಗುಗಳನ್ನು ವ್ಯವಸ್ಥಿತಗೊಳಿಸುತ್ತವೆ. ಇಂಥ ವಿನ್ಯಾಸಗಳನ್ನು ಸಾಧಾರವಾಗಿ ವಿವರಿಸುವ ಪ್ರಯತ್ನದಲ್ಲಿ ಪಾಶ್ಚಾತ್ಯ ವಿಜ್ಞಾನವು ರೂಪುತಳೆಯಿತು. ಒಟ್ಟಿನಲ್ಲಿ ಇಡೀ ಪಾಶ್ಚಾತ್ಯ ಸಂಸ್ಕೃತಿಯ ಬೌದ್ಧಿಕ ಸಾಧನೆಗಳು ಈ ಅಂತರ್ಗತ ನಿಯಮಗಳನ್ನು ಪೂರ್ವಭಾವಿಯಾಗಿ ಕಲ್ಪಿಸಿಕೊಂಡು ನಡೆಸಿದ ಹುಡುಕಾಟದ ಫಲವಾಗಿವೆ.

               ಪಾಶ್ಚಾತ್ಯರ ವೈಜ್ಞಾನಿಕ ಸಾಧನೆಗಳ ಹಿಂದೆ ಪಾಶ್ಚಾತ್ಯರಿಗೇ ವಿಶಿಷ್ಟವಾದ ಕಲಿಕೆಯ ಕ್ರಮವೊಂದಿದೆ. ಅದನ್ನು ನಾನು ಥಿಯರಿಯನ್ನು ಬಳಸಿ ಕಲಿಯುವ ಕ್ರಮ ಎಂಬುದಾಗಿ ಕರೆಯುತ್ತೇನೆ. ಥಿಯರಿಗಳೆಂದರೆ ಅದೃಶ್ಯ ನಿಯಮ ಅಥವಾ ವಿನ್ಯಾಸಗಳನ್ನು ವೈಜ್ಞಾನಿಕ ಭಾಷೆಯಲ್ಲಿ ಕಟ್ಟಿಕೊಡುವ ಪ್ರಯತ್ನಗಳು. ಅವು ಪ್ರಪಂಚದ ಕುರಿತ ಸತ್ಯಗಳನ್ನು ತಿಳಿಸುತ್ತವೆ ಹಾಗೂ ಅವನ್ನು ಆಧರಿಸಿ ಪ್ರಾಪಂಚಿಕ ವಿದ್ಯಮಾನಗಳ ಯತಾರ್ಥವಾದ ಕಾರಣ ವಿವರಣೆಯನ್ನು ನೀಡಲಾಗುತ್ತದೆ. ಉದಾಹರಣೆಗೆ: ಗುರುತ್ವಾಕರ್ಷಣೆ ಎಂಬ ಸಂಗತಿ ಇದೆ ಎಂಬ ಥಿಯರಿಯು ಗ್ರಹಗಳ ಪರಿಭ್ರಮಣ, ಉಬ್ಬರ-ಇಳಿತ, ಇತ್ಯಾದಿ ಅನೇಕ ಸಂಗತಿಗಳು ಏಕಾಗುತ್ತವೆ, ಹೇಗಾಗುತ್ತವೆ ಎಂಬ ಕುರಿತು ವಿವರಣೆಗಳನ್ನು ಬೆಳೆಸಲು ಆಧಾರವನ್ನು ಒದಗಿಸುತ್ತದೆ. ಅಥವಾ ಭೂಮಿ ಗೋಲಾಗಿದ್ದೂ, ತನ್ನ ಮೈಸುತ್ತ ತಿರುಗುತ್ತಿದ್ದೂ ಅದರ ಮೇಲಿನ ವಸ್ತುಗಳೇಕೆ ಇದ್ದಂತೆ ಇರುತ್ತವೆ ಎಂಬ ಪ್ರಶ್ನೆಗೆ ಉತ್ತರಿಸಲು ಸಹಕರಿಸುತ್ತದೆ. ಅಥವಾ ಅದನ್ನು ಆಧರಿಸಿ ನಿಸರ್ಗದ ನಿಯಮಗಳನ್ನು ತರ್ಕಿಸಿ ಅನೇಕ ತಂತ್ರ ಸಾಧನಗಳನ್ನು ರಚಿಸಲು ಬುನಾದಿಯಾಗುತ್ತದೆ.

               ಪಾಶ್ಚಾತ್ಯ ವಿಜ್ಞಾನವು ಆ ಸಂಸ್ಕೃತಿಯ ಜೀವನ ಕ್ರಮದ ವೈಶಿಷ್ಟ್ಯವೇ ಆಗಿದೆ. ಅಂದರೆ ಪಾಶ್ಚಾತ್ಯರು ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದಕ್ಕೂ ಪೂರ್ವಭಾವಿಯಾಗಿ ಅಂಥ ಕ್ರಿಯೆಯ ಕುರಿತು ಸೈದ್ಧಾಂತಿಕ ತಿಳಿವಳಿಕೆ ಯನ್ನು ಬೆಳೆಸಿಕೊಳ್ಳುವ  ಕ್ರಮವನ್ನು ಹೊಂದಿದ್ದಾರೆ.  ಪಾಶ್ಚಾತ್ಯರು ಅನ್ಯ ಸಂಸ್ಕೃತಿಗಳ ನಡುವೆ ತಮ್ಮ ಶ್ರೇಷ್ಠತೆಯನ್ನು ಸ್ಥಾಪಿಸಿಕೊಳ್ಳಲಿಕ್ಕಾಗಿ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಲ್ಲ. ಅದು ಅವರ ಸಂಸ್ಕೃತಿಗೆ ಸಹಜವಾಗಿದೆ ಹಾಗೂ ಆ ಸಂಸ್ಕೃತಿಯಲ್ಲೇ ಬೆಳೆದುಬಂದ ಒಬ್ಬ ವ್ಯಕ್ತಿಗೆ ಅದೊಂದು ತನ್ನ ಬದುಕಿಗೆ ಅತ್ಯಗತ್ಯವಾದ ಕ್ರಿಯೆ ಎನ್ನಿಸುತ್ತದೆ. ಏಕೆ ಅತ್ಯಗತ್ಯವೆಂದರೆ ಯಾವುದೇ ಕ್ರಿಯೆಯನ್ನು ಜರುಗಿಸುವಾಗಲೂ ತಾನು ನಡೆಸಲಿರುವ ಕ್ರಿಯೆಯ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಅದರ ಕುರಿತು ಪೂರ್ವಭಾವಿಯಾದ ತಿಳಿವಳಿಕೆ ಯನ್ನು ಬೆಳೆಸಿಕೊಳ್ಳುವ ಕ್ರಮವನ್ನು ಅವನು ಕಲಿತಿರುತ್ತಾನೆ. ತೀರಾ ದೈನಂದಿನ ವ್ಯವಹಾರದಲ್ಲೂ ಇದು ಎದ್ದು ಕಾಣುತ್ತದೆ. ಅಲ್ಲಿನ ವ್ಯಕ್ತಿಯೊಬ್ಬನು ಪ್ರಯಾಣ ಮಾಡಬೇಕೆಂದರೆ ಮುಂಚಿತವಾಗಿಯೇ ಮಾರ್ಗದರ್ಶೀ ಪುಸ್ತಕಗಳು, ನಕಾಶೆಗಳು ಇತ್ಯಾದಿಗಳನ್ನು ಓದಿ ತಾನು ಭೇಟಿಮಾಡಲಿರುವ ಭೂಭಾಗ, ಭಾಷೆ, ಸಂಸ್ಕೃತಿ, ನಂಬಿಕೆ ಹಾಗೂ ಶಿಷ್ಟಾಚಾರಗಳ ಕುರಿತು ಒಂದು ಚಿತ್ರಣವನ್ನು ಪಡೆದುಕೊಳ್ಳಲು ಪರಿಶ್ರಮ ಪಡುವುದು ಸಹಜ. ಅವರು ತಮ್ಮ ಪ್ರಯಾಣ ಕಾಲದಲ್ಲೂ ಕೂಡ ಇಂಥ ಹತಾರುಗಳನ್ನು ಹೊತ್ತುಕೊಂಡು ಆದಷ್ಟೂ ತಾವೇ ಸ್ಥಳಗಳನ್ನು ಶೋಧಿಸುತ್ತಿರುತ್ತಾರೆ. (ಇದಕ್ಕೆ ವಿರುದ್ಧವಾಗಿ ಭಾರತೀಯನೊಬ್ಬನಿಗೆ ತನ್ನ ಪ್ರಯಾಣಕ್ಕೆ ಇಂಥ ಮಾಹಿತಿಗಳು ಅಗತ್ಯ ಎನ್ನಿಸುವುದೇ ಇಲ್ಲ ಎಂಬುದನ್ನು ಗಮನಿಸಿ. ಅವನು ತನ್ನ ಬಂಧು ಮಿತ್ರರ ವಿಳಾಸವನ್ನು ಸಂಗ್ರಹಿಸುವುದರಲ್ಲಿ ನಿರತನಾಗುತ್ತಾನೆ.)

               ಇದು ಕೇವಲ ದೈನಂದಿನ ವ್ಯವಹಾರಗಳನ್ನು ನಿಭಾಯಿಸುವಷ್ಟಕ್ಕೇ ಸೀಮಿತವಲ್ಲ. ದೈನಂದಿನ ವ್ಯವಹಾರಗಳು ತೀರಾ ಕ್ಷುಲ್ಲಕ ದೃಷ್ಟಾಂತಗಳು. ಅದಕ್ಕೂ ಗಂಭೀರವಾದ ಹಾಗೂ ಮೂಲಭೂತವಾದ ಕ್ರಿಯೆಗಳನ್ನು ರೂಪಿಸಿಕೊಳ್ಳುವಾಗಲೂ ಕೂಡ ಅವರು ಇದೇ ಕ್ರಮವನ್ನು ಅನುಸರಿಸುತ್ತಾರೆ: ಅವೆಂದರೆ ಮನುಷ್ಯನ ಸಮಾಜ ಮತ್ತು ರಾಜಕೀಯಗಳು ಹೇಗೆ ವ್ಯವಸ್ಥಿತವಾಗಿರಬೇಕು? ಮನುಷ್ಯನ ನೀತಿ ಮತ್ತು ನ್ಯಾಯಗಳನ್ನು ಯಾವ ನಿಯಮಗಳಿಗೆ ಅನುಗುಣವಾಗಿ ರೂಪಿಸಬೇಕು? ಇತ್ಯಾದಿಗಳ ಕುರಿತು ಆಧುನಿಕ ಕಾಲದಲ್ಲಿ ಥಿಯರಿಗಳ ಮೇಲೆ ಥಿಯರಿಗಳನ್ನು ಕಟ್ಟಿ ಪ್ರತಿಪಾದಿಸಿದ್ದಾರೆ. ಅಲ್ಲಿನ ಮುಂದಾಳುಗಳಿಗೆ ಸಮಾಜವನ್ನು ರೂಪಿಸಬೇಕಾದರೆ ಒಳ್ಳೆಯ ಸಮಾಜವೆಂದರೇನು?  ಎಂಬ  ಥಿಯರಿಗಳನ್ನು ಕಟ್ಟಬೇಕಾಗುತ್ತದೆ. ಅಲ್ಲಿನ ವೈದ್ಯರಿಗೆ ರೋಗಕ್ಕೆ ಚಿಕಿತ್ಸೆಯನ್ನು ಕಂಡು ಹಿಡಿಯಬೇಕಾದರೆ ದೇಹ ಹಾಗೂ ನಿಸರ್ಗದ ಕುರಿತು ಥಿಯರಿಗಳನ್ನು ಕಟ್ಟಬೇಕಾಗುತ್ತದೆ. ಶಿಕ್ಷಣ, ನ್ಯಾಯ, ನೀತಿ, ಉದ್ಯಮ, ಚಿತ್ರಕಲೆ, ನಾಟಕ, ಸಾಹಿತ್ಯ, ಹೀಗೆ ಮನುಷ್ಯ ಕ್ರಿಯೆಯ ಯಾವುದೇ ಕ್ಷೇತ್ರವನ್ನಾದರೂ ತೆಗೆದುಕೊಳ್ಳಿ, ಅಲ್ಲಿ ಥಿಯರಿಗಳನ್ನು ಕಟ್ಟುವ ಕೆಲಸ ಭರದಿಂದ ಸಾಗಿರುತ್ತದೆ.  ಈ ಪ್ರಯತ್ನದಲ್ಲಿ ಅವರು ಥಿಯರಿಗಳ ರಾಶಿಯನ್ನೇ ಪೇರಿಸಿದ್ದಾರೆ. ಜೀವನದ ಪ್ರತೀ ಕ್ರಿಯೆಗಳ ಕುರಿತೂ ತಿಳಿವಳಿಕೆ ಯನ್ನು ಶೋಧಿಸುವ ಕೆಲಸವು ಕೂಡ ಆ ಕ್ರಿಯೆಗಳ ಅನಿವಾರ್ಯ ಅಂಗವೇ ಆಗಿರುತ್ತದೆ. ಒಮ್ಮೆ ತಿಳಿದುಕೊಳ್ಳದಿದ್ದರೆ ಕ್ರಿಯೆಯ ಸಾಧ್ಯತೆಯೇ ಅವರಿಗೆ ಹೊಳೆಯಲಾರದು.

               ಇದು ಪಾಶ್ಚಾತ್ಯ ಸಂಸ್ಕೃತಿಯು ರೂಪಿಸಿಕೊಂಡ ಜೀವನಕ್ರಮವಾಗಿದೆ. ಈ ಜೀವನ ಕ್ರಮದಲ್ಲಿ ಪ್ರಪಂಚದ ಕುರಿತು ಸತ್ಯವಾದ ಚಿತ್ರಣವನ್ನು ಕಟ್ಟಿಕೊಳ್ಳುವುದು ಅದರೊಳಗೆ ಬದುಕು ಸಾಗಿಸಲಿಕ್ಕೆ ಪೂರ್ವಭಾವಿಯಾದ ಅಗತ್ಯವಾಗಿದೆ. ಇಲ್ಲಿ ಥಿಯರಿಗಳು ಕ್ರಿಯೆಗಳಿಗೆ ಕಾರಣಗಳಾಗಿ ಬರುತ್ತವೆ. ಅಂದರೆ ’ನೀವು ಈ ರೀತಿಯ ರಾಜಕೀಯವನ್ನು ಏಕೆ ಅಳವಡಿಸಿಕೊಳ್ಳಬೇಕು? ಈ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಏಕೆ ಅಳವಡಿಸಿಕೊಳ್ಳಬೇಕು?’ ಎಂಬುದಕ್ಕೆ ’ಇಂಥಿಂತ  ಥಿಯರಿಗಳು ಹೀಗೆ ಹೇಳುತ್ತವೆ ಹಾಗಾಗಿ ಈ ರೀತಿಯ ವ್ಯವಸ್ಥೆಯನ್ನೇ ಅಳವಡಿಸಿಕೊಳ್ಳುವುದು ಸೂಕ್ತ’ ಎಂಬುದಾಗಿ ಉತ್ತರ ಬರುತ್ತದೆ. ಅಂದರೆ ಆ  ಥಿಯರಿಗಳು ಸತ್ಯ ಎಂಬುದಾಗಿ ಮೊದಲು ನೀವು ನಂಬಬೇಕು. ಸತ್ಯವಾದ ಚಿತ್ರಣವನ್ನು ಆಧರಿಸಿ ರೂಪಿಸಿಕೊಂಡ ಕ್ರಿಯೆಯು ಮಾತ್ರವೇ ಸರಿಯಾದದ್ದು ಹಾಗೂ ಸಮರ್ಥನೀಯ. ಸುಳ್ಳನ್ನು ಆಧರಿಸಿದ ಕ್ರಿಯೆಗಳು ಮನುಷ್ಯನನ್ನು ಪತನದತ್ತ ಒಯ್ಯುತ್ತವೆ.  ಪ್ರಪಂಚದ ಕುರಿತ ನಿಮ್ಮ ಜ್ಞಾನವು ಸರಿಯಾಗಿದ್ದರೆ ಮಾತ್ರವೇ ನಿಮ್ಮ ಕ್ರಿಯೆಗಳೂ ಸರಿಯಾಗಿರಲು ಸಾಧ್ಯ. ಅಂದರೆ ಪ್ರಪಂಚದ ಕುರಿತ ನಮ್ಮ ಚಿತ್ರಣವು ಸತ್ಯವೆಂಬ ನಂಬಿಕೆಯನ್ನಾಧರಿಸಿ ನಮ್ಮ ಕ್ರಿಯೆಗಳು ರೂಪುಗೊಳ್ಳಬೇಕು. ಇದನ್ನು ವೈಜ್ಞಾನಿಕ ಮನೋಭಾವನೆ ಎಂಬುದಾಗಿ ಕರೆಯಲಾಗುತ್ತದೆ.            ಅಂಥ ಸತ್ಯವಾದ ಚಿತ್ರಣಗಳನ್ನು ಸಾಧಿಸುವುದೇ ವೈಜ್ಞಾನಿಕ ಸಂಶೋಧನೆಯ ಗುರಿ.

               ಇದನ್ನು ನಾನು ಕಲಿಕೆಯ ಸಂಯೋಜನೆ ಎಂಬುದಾಗಿ ಕರೆಯುತ್ತೇನೆ. ಯಾವುದೇ ಸಂಸ್ಕೃತಿಯೂ ಕೂಡ ರೂಪುಗೊಳ್ಳುವುದು ಹಾಗೂ ಉಳಿದು ಬರುವುದು ತನ್ನ ವಿಶಿಷ್ಟವಾದ ಕಲಿಕೆಯ ಸಂಯೋಜನೆಯಿಂದಲೇ. ಪ್ರತೀ ವ್ಯಕ್ತಿಯೂ ತಾನು ಹೇಗೆ ಬದುಕಬೇಕೆಂಬುದನ್ನು ಜೀವನದುದ್ದಕ್ಕೂ ಕಲಿಯುತ್ತಲೇ ಇರುತ್ತಾನೆ. ಈ ಕಲಿಕೆಯನ್ನು ಯಾವ ಕ್ರಮದಲ್ಲಿ ನಡೆಸಬೇಕೆಂಬುದನ್ನು ಪ್ರತೀ ಸಂಸ್ಕೃತಿಯೂ ತನ್ನದೇ ಆದ ಕ್ರಮದಲ್ಲಿ ತನ್ನ ಸದಸ್ಯರಿಗೆ ಕಲಿಸುವ ಉಪಾಯಗಳನ್ನು ಸಂಯೋಜಿಸಿರುತ್ತದೆ. ಉದಾಹರಣೆಗೆ ನಾವು ಮಾಡುವ ಕ್ರಿಯೆಗಳನ್ನು ನಾವು ಹೇಗೆ ಹೇಗೆ ಕಲಿಯಲು ತೊಡಗಬಹುದು? ಹಿರಿಯರನ್ನು ಅನುಕರಿಸಬಹುದು, ಅವುಗಳ ಕುರಿತು ಓದಿ ತಿಳಿದುಕೊಳ್ಳಬಹುದು, ಸ್ವತಃ ಪ್ರಯೋಗ ಮಾಡಬಹುದು, ಇತ್ಯಾದಿ ಉಪಾಯಗಳಿವೆ. ಇವುಗಳಲ್ಲಿ ಯಾವುದೋ ಒಂದಕ್ಕೆ ಪ್ರಾಧಾನ್ಯತೆಯನ್ನು ನೀಡಿ ಉಳಿದವನ್ನು ಅದಕ್ಕೆ ಅನುಗುಣವಾಗಿ ಜೋಡಿಸಿಕೊಂಡು ಕಲಿಸುವ ಉಪಾಯವನ್ನು ಸಂಸ್ಕೃತಿಗಳು ಕಂಡುಕೊಳ್ಳುತ್ತವೆ. ನನ್ನ ಪ್ರಕಾರ ಒಂದು ನಿರ್ದಿಷ್ಟ ಸಂಸ್ಕೃತಿಯು ಈ ಕಲಿಕೆಯನ್ನು ಹೇಗೆ ಸಂಯೋಜಿಸಿಕೊಂಡಿದೆ, ಯಾವುದಕ್ಕೆ ಪ್ರಾಧಾನ್ಯತೆ ನೀಡುತ್ತದೆ, ಯಾವುದನ್ನು ಗೌಣ ಮಾಡುತ್ತದೆ ಎಂಬುದರ ಮೇಲೆ ಅದು ಮತ್ತೊಂದು ಸಂಸ್ಕೃತಿಯಿಂದ ಭಿನ್ನವಾಗುತ್ತದೆ.  ಆಯಾ ಸಂಸ್ಕೃತಿಗೆ ಸೇರಿದ ಪ್ರತೀ ಹಿಂದಿನ ತಲೆಮಾರು ಕೂಡ ಈ  ಸಂಯೋಜನೆಯನ್ನು ಆಧರಿಸಿ ತನ್ನ ಮುಂದಿನ ತಲೆಮಾರಿಗೆ ಬದುಕನ್ನು ಸಾಗಿಸುವ ಕ್ರಮವನ್ನು ಕಲಿಸುತ್ತದೆ. ಈ ಕ್ರಮವು ಆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಫಲಿಸಿ ಒಂದು ಸಂಸ್ಕೃತಿಯನ್ನು ನಿರ್ಮಿಸುತ್ತವೆ ಹಾಗೂ ಅದು ತಲೆಮಾರುಗಳನ್ನು ದಾಟಿ ಬರುತ್ತದೆ.

               ಪಾಶ್ಚಾತ್ಯ ಸಂಸ್ಕೃತಿಯು ಯೋಜಿಸಿಕೊಂಡಿರುವ ಕಲಿಕೆಯ ಸಂಯೋಜನೆಯಲ್ಲಿ ಭೌತಿಕ ಪ್ರಪಂಚವನ್ನು ಥಿಯರಿಗಳ ಮೂಲಕ ತಿಳಿದುಕೊಳ್ಳುವುದಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಭೌತಿಕ ಪ್ರಪಂಚದ ನಿಬಂಧನೆಗಳಿಗೆ ಬದ್ಧವಾಗಿ ಕ್ರಿಯೆಯನ್ನು ಜರುಗಿಸಲು ಅದರ ಕುರಿತು ತಿಳಿದುಕೊಳ್ಳುವುದು ಅತೀ ಅಗತ್ಯ ಎಂಬ ಅಂಶಕ್ಕೆ ಇಲ್ಲಿ ಒತ್ತು ಬೀಳುತ್ತದೆ. ನಾವು ಬದುಕುತ್ತಿರುವ ಜಗತ್ತು ಯಾವ ರೀತಿಯದು ಎಂಬುದನ್ನು ತಿಳಿದುಕೊಳ್ಳದೇ ಅಂಥ ಜಗತ್ತಿನಲ್ಲಿ ಮಾಡಿದ ಕ್ರಿಯೆಯು ಈ ಸಂಸ್ಕೃತಿಯ ಪ್ರಕಾರ ಅರ್ಥಹೀನ. ಏಕೆಂದರೆ ಅಂಥ ಕ್ರಿಯೆಗಳಲ್ಲಿ ನಿಮ್ಮ ಕ್ರಿಯೆಗೆ ಸೈದ್ಧಾಂತಿಕ ಸಮರ್ಥನೆ ಇರುವುದಿಲ್ಲ. ನಾವು ಬದುಕಿರುವ ಜಗತ್ತಿನಲ್ಲಿ ನಮ್ಮನ್ನೂ ಒಳಗೊಂಡು ಎಲ್ಲವೂ ಆಂತರಿಕವಾಗಿ ವ್ಯವಸ್ಥಿತವಾಗಿವೆ ಹಾಗೂ ಅದರ ಹಿಂದೆ ಒಂದು ಉದ್ದೇಶವಿದೆ. ಅದನ್ನು ಈಡೇರಿಸುವುದೇ ಕ್ರಿಯೆಯ ಸಾಫಲ್ಯ ಅಂತಾದಾಗ ಈ ಸತ್ಯವನ್ನು ತಿಳಿದುಕೊಳ್ಳದೇ ಕ್ರಿಯೆಯನ್ನು ಜರುಗಿಸುವುದರಲ್ಲಿ ಏನು ಅರ್ಥವಿದೆ? ಅದನ್ನು ತಿಳಿದುಕೊಂಡಾಗ ನಾವು ನಿಜವಾಗಿಯೂ ಏನನ್ನು ಮಾಡುವುದು ಸೂಕ್ತ ಎನ್ನುವುದು ಗೊತ್ತಾಗುತ್ತದೆ. ಈ ಧೋರಣೆಯು ಪಾಶ್ಚಾತ್ಯ ಕಲಿಕೆಯ ಸಂಯೋಜನೆಯಲ್ಲಿ ಸೈದ್ಧಾಂತಿಕ ಜ್ಞಾನಕ್ಕೆ ಆದ್ಯತೆಯನ್ನು ಕಲ್ಪಿಸುತ್ತದೆ.

               ಇಂಥ ಕಲಿಕೆಯ ಕ್ರಮವನ್ನು ರೂಢಿಸಿಕೊಂಡ ಪಾಶ್ಚಾತ್ಯರು ಅನ್ಯ ಸಮಾಜಗಳ ಜೊತೆ ವ್ಯವಹರಿಸಬೇಕಾದರೆ ಅವುಗಳನ್ನು ಅಧ್ಯಯನಕ್ಕೆ  ಒಳಪಡಿಸುವ ಹಾಗೂ ಅವುಗಳ ಕುರಿತು ಸೈದ್ಧಾಂತಿಕ ತಿಳಿವಳಿಕೆ ಯನ್ನು ಹುಟ್ಟುಹಾಕುವ  ಅನಿವಾರ್ಯತೆ ಇತ್ತು. ಹಾಗೂ ಈ ಪ್ರಕ್ರಿಯೆಯಲ್ಲಿ ಅವರು ಸಮಾಜ ವಿಜ್ಞಾನವನ್ನು ಹುಟ್ಟುಹಾಕಿದರು. ಅನ್ಯ ಸಮಾಜಗಳ ಕುರಿತು ಥಿಯರಿಗಳನ್ನು ಹುಟ್ಟುಹಾಕಿದರು. ಇಂಥ ಥಿಯರಿಗಳನ್ನು ರಚಿಸಿಕೊಳ್ಳದೇ ಅವರಿಗೆ ಅನ್ಯ ಸಮಾಜಗಳು ಅರ್ಥವಾಗುತ್ತಿರಲಿಲ್ಲ. ಆದರೆ ವಿಪರ್ಯಾಸವೆಂದರೆ ಅನ್ಯ ಸಮಾಜಗಳ ಕುರಿತು ಪಾಶ್ಚಾತ್ಯರು ಥಿಯರಿಗಳು ಎಂಬುದಾಗಿ ಏನನ್ನು ರೂಪಿಸಿದರೋ ಅವು ಅಸಲು ಥಿಯರಿಗಳೇ ಆಗಿರಲಿಲ್ಲ. ಪಶ್ಚಿಮದಲ್ಲಿ ಸಮಾಜ ವಿಜ್ಞಾನದ ಬೆಳವಣಿಗೆಯು ಕೂಡ ಕ್ರಿಶ್ಚಿಯಾನಿಟಿಯ ಸೆಕ್ಯಲರೀಕರಣದ ಒಂದು ಭಾಗವೇ ಆಗಿದೆ. ಯುರೋಪಿನಲ್ಲಿ ಸೆಕ್ಯಲರೀಕರಣವೆಂದರೆ ಥಿಯಾಲಜಿಯ ಸತ್ಯಗಳಿಗಿದ್ದ ಕ್ರೈಸ್ತ ವೇಷವನ್ನು ಕಳಚಿ ಸಾರ್ವತ್ರೀಕರಣಗೊಳಿಸುವ  ಕೆಲಸವಾಗಿತ್ತು ಎಂಬುದನ್ನು ನಾನು ನನ್ನ ಹಿಂದಿನ ಪುಸ್ತಕದಲ್ಲಿ ವಿವರಿಸಿದ್ದೇನೆ. ಅದಕ್ಕೆ ಅನುಗುಣವಾಗಿ ಸಮಾಜ ವಿಜ್ಞಾನವನ್ನು ರೂಪಿಸುವಾಗ ಪಾಶ್ಚಾತ್ಯರಿಗೆ ಮನುಷ್ಯನ ಕುರಿತು ಹಾಗೂ ಅವನ ಸಮಾಜದ ಕುರಿತು ಥಿಯಾಲಜಿಯ ಗ್ರಹಿಕೆಗಳೇ ಬುನಾದಿಯನ್ನು ರಚಿಸಿದ್ದವು. ಅವುಗಳ ಸತ್ಯವನ್ನು ಪ್ರಶ್ನಿಸುವ ಕೆಲಸವನ್ನು ಇಂಥ ಸಮಾಜ ವಿಜ್ಞಾನಗಳು ಮಾಡಲಿಲ್ಲ. ಇಂಥ ಗ್ರಹಿಕೆಗಳನ್ನೇ ಆಧರಿಸಿ ಪಾಶ್ಚಾತ್ಯರು ಆಧುನಿಕ ರಾಜಕೀಯ, ಸಾಮಾಜಿಕ ಹಾಗೂ ನೈತಿಕ ಚಿಂತನೆಗಳನ್ನು ಬೆಳೆಸಿದರು. ಇವೆಲ್ಲವೂ ಮನುಕುಲಕ್ಕೇ ಸಾರ್ವತ್ರಿಕವಾಗಿ ಅನ್ವಯವಾಗುತ್ತವೆ ಎಂಬ ಧೋರಣೆ ಆಧುನೀಕರಣದ ಜೊತೆಗೇ ವಿಶ್ವವ್ಯಾಪಿಯಾಯಿತು.

               ಈ ಪ್ರಕ್ರಿಯೆಯಲ್ಲಿ ಇಂಥ ಚಿಂತನೆಗಳು ವಿಭಿನ್ನ ಸಾಮಾಜಿಕ, ರಾಜಕೀಯ ಹೋರಾಟಗಳ ಐಡಿಯಾಲಜಿಗಳಾಗಿ ಪರಿವರ್ತನೆಯಾದವು. ಐಡಿಯಾಲಜಿ ಎಂಬುದು ರಿಲಿಜನ್ನಿನ ಡಾಕ್ಟ್ರಿನ್ನುಗಳ ಸೆಕ್ಯುಲರ್ ರೂಪಗಳು. ಐಡಿಯಾಲಜಿ ಎಂಬುದು ವಿಚಾರವನ್ನು ಹೇಗೆ ಮಾಡಬೇಕು ಎಂಬುದನ್ನು ನಿರ್ದೇಶಿಸುವ ಶಾಸ್ತ್ರ ಎನ್ನಬಹುದು. ಅಂದರೆ  ಸರಿ, ತಪ್ಪು ಎಂಬ ನಾರ್ಮೇಟಿವ್ ವಿಂಗಡಣೆಯನ್ನು ಮಾಡಿ ಮನುಷ್ಯನ ಕ್ರಿಯೆಗೆ ನಿರ್ದೇಶನವನ್ನು ಹಾಗೂ ಸಮರ್ಥನೆಯನ್ನು ನೀಡುವ ಕೆಲಸವನ್ನು ಇಂಥ ಐಡಿಯಾಲಜಿಗಳು ಮಾಡುತ್ತವೆ. ಐಡಿಯಾಲಜಿಗಳಲ್ಲಿ ವಿಚಾರಗಳನ್ನು ಪರೀಕ್ಷಿಸುವ ಹಾಗೂ ತಿರಸ್ಕರಿಸುವ ವೈಜ್ಞಾನಿಕ ಪ್ರಕ್ರಿಯೆ ಇರುವುದಿಲ್ಲ. ಅದೇ ಅಂತಿಮ ಸತ್ಯ ಎಂಬಂತೆ ನಂಬಿಕೊಳ್ಳಲಾಗುತ್ತದೆ. ಹಾಗಾಗಿ ಅದು ಯಾವುದೇ ಪರೀಕ್ಷೆಗೆ ತನ್ನನ್ನು ಒಡ್ಡಿಕೊಳ್ಳುವುದಿಲ್ಲ. ಆದ್ದರಿಂದ ಅವು ಮೂಲತಃ ಅವೈಜ್ಞಾನಿಕ ವಿಚಾರಗಳು. ಪಾಶ್ಚಾತ್ಯ ಸಮಾಜ ವಿಜ್ಞಾನಗಳು ಥಿಯರಿಗಳನ್ನು ಕಟ್ಟುವಾಗ ಇಂಥ ಐಡಿಯಾಲಜಿಗಳಿಗೆ ಸ್ಪಂದಿಸುತ್ತ ರಾಜಕೀಯ ಮಡಿವಂತಿಕೆಯನ್ನು ಬೆಳೆಸಿಕೊಂಡವು. ಇದು ಪಾಶ್ಚಾತ್ಯ ಸಮಾಜ ವಿಜ್ಞಾನಕ್ಕೆ ಅಂಟಿಕೊಂಡಿರುವ ಮಿತಿ.

               ಐರೋಪ್ಯ ಆಧುನಿಕ ಚಿಂತನೆಗಳನ್ನು ಆಧರಿಸಿ ರೂಪಿಸಿದ ರಾಜಕೀಯ ಹಾಗೂ ಸಮಾಜ ವಿಜ್ಞಾನದ ಥಿಯರಿಗಳು, ಅವುಗಳ ಮಿತಿಗಳು ಹಾಗೂ ಅವುಗಳನ್ನಾಧರಿಸಿದ ವ್ಯವಸ್ಥೆಗಳು ಯುರೋಪಿಗೆ ಮಾತ್ರ ಸೀಮಿತವಾಗಲಿಲ್ಲ. ಅವು ಆಧುನಿಕ ಕಾಲದಲ್ಲಿ ಜಗತ್ತಿನಾದ್ಯಂತ ಪ್ರಚಲಿತದಲ್ಲಿ ಬಂದವು. ಈ ಬೆಳವಣಿಗೆಯಿಂದಾಗಿ ಐರೋಪ್ಯೇತರ ರಿಲಿಜನ್ನುಗಳಿಲ್ಲದ ಸಂಸ್ಕೃತಿಗಳಲ್ಲಿ ಒಂದು ವಿಲಕ್ಷಣ ಸ್ಥಿತಿ ನಿರ್ಮಾಣವಾಗಿದೆ. ರಿಲಿಜನ್ನಿಲ್ಲದ ಸಂಸ್ಕೃತಿಗಳ ಮಾನವ ವಾಸ್ತವವನ್ನು ಹಿಡಿದಿಡಲು ಹಾಗೂ ವಿವರಿಸಲು ಈ ಪಾಶ್ಚಾತ್ಯ ಥಿಯರಿಗಳು ಸೋಲುತ್ತವೆ. ರಿಲಿಜನ್ನಿನ ಲೋಕದೃಷ್ಟಿಯ ಹಿನ್ನೆಲೆಯುಳ್ಳ ಪಾಶ್ಚಾತ್ಯ ಸಾಮಾಜಿಕ, ರಾಜಕೀಯ ಹಾಗೂ ನೈತಿಕ ಚಿಂತನೆಗಳು ರಿಲಿಜನ್ನುಗಳಿಲ್ಲದ ಸಮಾಜಗಳಿಗೆ ಅರ್ಥವಾಗುವುದು ಸಾಧ್ಯವಿಲ್ಲ ಅಷ್ಟೇ ಅಲ್ಲ ಅಂಥ ಸಂಸ್ಕೃತಿಗಳ ಬದುಕು ಈ ಚಿಂತನೆಗಳಿಂದ ವಿರೂಪಗೊಳ್ಳುತ್ತದೆ.

               ಉದಾಹರಣೆಗೆ ಭಾರತೀಯ ಜನರ ಕಲಿಕೆಯ ಕ್ರಮದಲ್ಲಿ ಕ್ರಿಯಾ ಜ್ಞಾನವು ಪ್ರಧಾನ ಪಾತ್ರ ವಹಿಸುತ್ತದೆ. ಕ್ರಿಯಾ ಜ್ಞಾನದ ಕುರಿತು ನಾನು ಇದೇ ಮಾಲಿಕೆಯ ಹಿಂದಿನ ಪುಸ್ತಕದಲ್ಲಿ ಚರ್ಚಿಸಿದ್ದೇನೆ. ಈ ಜನರ ಕಲಿಕೆಯು ಕ್ರಿಯೆಗಳ ಅನುಕರಣೆಯಿಂದ ವಿನ್ಯಾಸಗೊಂಡಿರುತ್ತದೆಯೇ ವಿನಃ ಅಮೂರ್ತ ಥಿಯರಿಗಳಿಂದಲ್ಲ. ಐರೋಪ್ಯರು ತಮ್ಮ ಥಿಯರಿಗಳಲ್ಲಿ ಏನನ್ನು ಹೇಳುತ್ತಿದ್ದಾರೆ ಎಂಬ ಕಲ್ಪನೆ ಇವರಿಗೆ ಅನುಭವಕ್ಕೆ ಸಿಗದ ವಿಷಯ. ಅಷ್ಟೇ ಅಲ್ಲ ಜಗತ್ತಿನಲ್ಲಿ ಬದುಕುವುದನ್ನು ಕಲಿಯಲಿಕ್ಕೆ ಥಿಯರಿಗಳು ಅನಿವಾರ್ಯ ಎಂಬ ಸತ್ಯವು ಅವರ ಅನುಭವಕ್ಕೆ ಕಷ್ಟ ಸಾಧ್ಯವಾದುದು. ಆದರೂ ವಸಾಹತುಕಾಲದಲ್ಲಿ ನಿರ್ಮಾಣವಾದ ಬುದ್ಧಿಜೀವಿಗಳ ವರ್ಗವು ಈ ಐರೋಪ್ಯ ಥಿಯರಿಗಳನ್ನೆಲ್ಲ ತನ್ನದನ್ನಾಗಿಸಿಕೊಂಡಿತು. ಭಾರತದಲ್ಲಿ ಸೈದ್ಧಾಂತಿಕ ಕಲಿಕೆಯನ್ನು ಆಧರಿಸಿದ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿತು. ಬುದ್ಧಿಜೀವಿಗಳಿಂದ ಹಿಡಿದು ಈ ವ್ಯವಸ್ಥೆಗೆ ಒಳಪಟ್ಟ ಜನಸಾಮಾನ್ಯರವರೆಗೂ ಇಂಥ ಪಾಶ್ಚಾತ್ಯ ಬೌದ್ಧಿಕ ರಚನೆಗಳು ಹಾಗೂ ವ್ಯವಸ್ಥೆಗಳ ಕುರಿತ ಅಜ್ಞಾನದ ಕಾರಣದಿಂದ ಅವನ್ನು ವಿರೂಪಗೊಳಿಸುತ್ತ ಸಾಗಿದರು. ವಿಜ್ಞಾನದಲ್ಲಿ ಥಿಯರಿಗಳು ಸದಾ ಪರಿಷ್ಕರಿಸುತ್ತಲೇ ಇರಬೇಕಾದ ಸತ್ಯಗಳು, ಆದರೆ ಭಾರತೀಯರಿಗೆ ಇಂಥ ಸತ್ಯಗಳನ್ನು ಪರಿಷ್ಕರಿಸುವ ಕೆಲಸ ಅರ್ಥವಾಗದು. ಮೇಲಾಗಿ ಪಾಶ್ಚಾತ್ಯರ ಬೇರೆ ಬೇರೆ ಹೋರಾಟಗಳ ಐಡಿಯಾಲಜಿಗಳನ್ನು ಸಾಮಾಜಿಕ ಸತ್ಯಗಳು ಎಂಬುದಾಗಿ ನಂಬಿಕೊಂಡು ಅವುಗಳನ್ನು ಪುನರುಚ್ಛರಿಸುವುದೇ  ಪ್ರಯೋಜನಕಾರಿಯಾಗಿ ಕಾಣಿಸಿತು. ಇಂಥ ಐಡಿಯಾಲಜಿಗಳನ್ನು ಇಟ್ಟುಕೊಂಡು ಸಂಸ್ಥೆಗಳನ್ನೂ, ಹಿತಾಸಕ್ತಿಗಳನ್ನೂ ಕಟ್ಟಿಕೊಳ್ಳುವ ಕೆಲಸವಷ್ಟೇ ಇವರಿಗೆ ಅರ್ಥಪೂರ್ಣವಾಗಿ ಕಂಡಿತು.

               ಅಂದರೆ ಭಾರತೀಯ ಸಮಾಜದ ಕುರಿತು ಇಂದು ಪ್ರಚಲಿತದಲ್ಲಿರುವ ಥಿಯರಿಗಳು ಕ್ರೈಸ್ತ ಥಿಯಾಲಜಿಯ ಪೂರ್ವಗ್ರಹಗಳು ಹಾಗೂ ಅವುಗಳನ್ನಾಧರಿಸಿದ ರಾಜಕೀಯ ಐಡಿಯಾಲಜಿಗಳೇ ವಿನಃ ನಿಜವಾದ ಥಿಯರಿಗಳಲ್ಲ. ನಿಜವಾದ ಥಿಯರಿಗಳನ್ನು ಕಟ್ಟುವ ಕೆಲಸ ಇನ್ನು ಮುಂದೆ ನಡೆಯಬೇಕಿದೆ. ಈಗ ಸಮಾಜ ವಿಜ್ಞಾನಿಗಳಿಂದ ಆಗಬೇಕಾಗಿರುವ ಕೆಲಸವೆಂದರೆ ಇಂಥ ಐಡಿಯಾಲಜಿಗಳಿಂದ ಕಳಚಿಕೊಂಡು ನಿಜವಾದ ಸಾಮಾಜಿಕ ಸಿದ್ಧಾಂತಗಳನ್ನು ರೂಪಿಸುವುದು. ಅಂದರೆ ಪಾಶ್ಚಾತ್ಯರು ಪ್ರಾರಂಭಿಸಿದ ಸಮಾಜ ವಿಜ್ಞಾನದ ತಿಳಿವಳಿಕೆಯನ್ನು ನಮ್ಮ ಅನುಭವದ ಬೆಳಕಿನಲ್ಲಿ ಪರಿಷ್ಕರಿಸುತ್ತ ಬೆಳೆಸುವುದು. ಇದೊಂದು ಅಗಾಧವಾದ ಕೆಲಸ ಹಾಗೂ ಅನೇಕ ತಲೆಮಾರುಗಳ ಕೆಲಸ.

               ಇಂಥ ಸವಾಲುಗಳು ಸಮಾಜ ವಿಜ್ಞಾನದ ಎದುರು ಧಗಧಗಿಸುತ್ತಿವೆ. ಆದರೆ ಆಧುನಿಕ ವ್ಯವಸ್ಥೆಗಳನ್ನು ಪ್ರತಿಪಾದಿಸುತ್ತಿರುವ ಬಹುತೇಕ ಬುದ್ಧಿಜೀವಿಗಳು ತಮ್ಮ ಜೀವನವನ್ನು ಆಳುತ್ತಿರುವ ಚಿಂತನೆಗಳ ಅನ್ಯತೆಯನ್ನು ಗುರುತಿಸಲು ಅಸಮರ್ಥರಾಗುತ್ತಿದ್ದಾರೆ. ಅವುಗಳ ಅಸಂಬದ್ಧತೆಯನ್ನು ಕೂಡ ಗ್ರಹಿಸುತ್ತಿಲ್ಲ. ಕ್ರೈಸ್ತ ಥಿಯಾಲಜಿಯ ಹೇಳಿಕೆಗಳೇ ಸಾಮಾಜಿಕ ಸತ್ಯಗಳೆಂಬ ಭದ್ರವಾದ ನಂಬಿಕೆಯನ್ನು ಹೊಂದಿದ್ದಾರೆ. ಹಾಗೂ ಇಂಥ ಸತ್ಯಗಳನ್ನು ಆಧರಿಸಿ ತಮ್ಮ ಹೋರಾಟವನ್ನೂ, ಭವಿಷ್ಯವನ್ನೂ ರೂಪಿಸಿಕೊಳ್ಳುವುದರಲ್ಲಿ ಆಸಕ್ತರಾಗಿದ್ದಾರೆ. ಆ ಕಾರಣದಿಂದ ತಾವು ನಂಬಿಕೊಂಡ ಸತ್ಯಗಳನ್ನು ಕುರಿತು ಪ್ರಶ್ನೆಗಳನ್ನು ಎತ್ತುವ ಸಮಾಜ ವಿಜ್ಞಾನಿಗಳನ್ನು ಸಹಿಸದ ಸ್ಥಿತಿಗೆ ತಲುಪಿದ್ದಾರೆ. ಇಂದು ಸಮಾಜ ವಿಜ್ಞಾನದ ಸತ್ಯಗಳು ಒಬ್ಬನು ಯಾವ ಜಾತಿ, ಲಿಂಗ ಅಥವಾ ಮತಕ್ಕೆ ಸೇರಿದ್ದಾನೆ ಎಂಬುದನ್ನು  ಅವಲಂಬಿಸಿ ನಿರ್ಣಯವಾಗುವ ಪರಿಸ್ಥಿತಿ ಇದೆ. ಇದೊಂದು ರೀತಿಯ ಕುರುಡು. ಇದನ್ನೇ ಬುದ್ಧಿಜೀವಿಗಳ ಮೌಢ್ಯ ಎಂದು ಕರೆಯಲು ಬಯಸುತ್ತೇನೆ. ಅಂದರೆ ಇದು ನಿಜವಾಗಿಯೂ ವೈಜ್ಞಾನಿಕ ಚಿಂತನೆಯ ಕುರಿತ ಹಾಗೂ ಸಾಮಾಜಿಕ ಥಿಯರಿಗಳನ್ನು ಕಟ್ಟುವ ಕುರಿತ ಮೌಢ್ಯ. ಇವರೆಲ್ಲ ಭಾರತೀಯ ಸಂಸ್ಕೃತಿಯಲ್ಲಿರುವ ಮೂಢನಂಬಿಕೆಗಳನ್ನು ತೊಡೆಯುವ ಕುರಿತು ಮಾತನಾಡುತ್ತಿದ್ದಾರೆ. ಆದರೆ ಅಂಥ ಭಾರತೀಯ ಸಂಸ್ಕೃತಿ ಹಾಗೂ ಸಮಾಜದ ಕುರಿತ ಇವರ ವಿಚಾರಗಳೇ ಮೂಢನಂಬಿಕೆಗಳ ಸರಣಿಯಾಗಿವೆ ಎಂಬುದು ಒಂದು ವಿಪರ್ಯಾಸ. ಮುಂದಿನ ಅಂಕಣಗಳಲ್ಲಿ ಅದನ್ನು ಮನಗಾಣಲಿದ್ದೀರಿ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp