Home ವಸಾಹತು ಪ್ರಜ್ಞೆಬುದ್ಧಿಜೀವಿಗಳ ಮೂಢನಂಬಿಕೆಗಳು ಕಾಣದ ಕೈಗಳು

ಕಾಣದ ಕೈಗಳು

by Rajaram Hegde
160 views

ಭಾರತದಲ್ಲಿ ಯಾವ ಜಾತಿಗಳೇ ಆದರೂ ’ಮೂಢನಂಬಿಕೆ’ ಎಂದು ಹಣೆಪಟ್ಟಿ ಹೊತ್ತ ಆಚರಣೆಗಳನ್ನು ಪಾಲಿಸುತ್ತಿರುತ್ತವೆ.  ಅಥವಾ ಮತ್ತೊಂದು ಜಾತಿಯ ಮೇಲೆ ದೌರ್ಜನ್ಯವನ್ನು ನಡೆಸುತ್ತಿರುತ್ತವೆ. ಅದರಲ್ಲಿ ಕಣ್ಣಿಗೆ ಕಾಣುವಂತೆ ಬ್ರಾಹ್ಮಣರ ಪಾತ್ರ ಏನೂ ಇರದಿದ್ದರೂ ಕೂಡ ಇವೆಲ್ಲ ಬ್ರಾಹ್ಮಣ ಪುರೋಹಿತ ಶಾಹಿಯ ಹುನ್ನಾರಗಳು ಎಂಬ ನಿರ್ಣಯ ಸಾಮಾನ್ಯ. ಹಾಗಂತ ಇಂಥ ನಿರ್ಣಯಕ್ಕೆ ಕಾರಣವೇನು ಎಂದು ಪ್ರಶ್ನಿಸಿದರೆ ತರ್ಕಬದ್ಧವಾದ ಉತ್ತರವೇನೂ ಸಿಗುವುದಿಲ್ಲ. ಸಿಗುವ ಉತ್ತರಗಳು ಹೇಗಿರುತ್ತವೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ನೋಡಿ.

ಇತ್ತೀಚೆಗೆ ಮಡೆಸ್ನಾನವನ್ನು ನಿಷೇಧಿಸುವ ಕುರಿತು ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಒಂದು ಕಾನೂನಿನ ಸಮಸ್ಯೆ ಉದ್ಭವವಾಯಿತು. ಆ ಆಚರಣೆಯನ್ನು ನಡೆಸುವ ಬುಡಕಟ್ಟುಗಳಾದ ಮಲೆಕುಡಿಯರು ಇಚ್ಛಾಪೂರ್ವಕವಾಗಿ ಅದನ್ನು ನಡೆಸುತ್ತಿದ್ದಾರೆ, ಹಾಗಾಗಿ ಅದನ್ನು ಮಾನವ ಹಕ್ಕಿನ ಉಲ್ಲಂಘನೆ ಎಂಬುದಾಗಿ ಹೇಗೆ ಹೇಳುತ್ತೀರಿ? ಎಂಬುದಾಗಿ ಒಂದು ಪಕ್ಷದವರ ವಾದ. ಅದಕ್ಕೆ ವಿರೋಧಿ ವಕೀಲರ ಉತ್ತರವೆಂದರೆ ’ ಅವರನ್ನು ಹಾಗೆ ಯಾರೋ ನಂಬಿಸಿಬಿಟ್ಟಿದ್ದಾರೆ, ಹಾಗಾಗಿ ಅದು ಸ್ವ ಇಚ್ಛೆಯಲ್ಲ’.  ಯಾರು ಅವರನ್ನು ನಂಬಿಸಿದವರು? ನಂತರ ಕನ್ನಡದ ಒಂದು ಸುಪ್ರಸಿದ್ಧ ಪತ್ರಿಕೆಯ ಅಂಕಣವೊಂದರಲ್ಲಿ ಅವರನ್ನು ನಂಬಿಸಿದ ಕಾಣದ ಕೈಗಳು ಯಾವವು ಎಂಬುದನ್ನು ಕೂಡಾ ಬಹಿರಂಗಪಡಿಸಲಾಯಿತು. ಅದೆಂದರೆ ಬ್ರಾಹ್ಮಣ ಪುರೋಹಿತಶಾಹಿ.

               ಇದು ಕೇವಲ ಮಡೆಸ್ನಾನದ ಸಂದರ್ಭಕ್ಕೊಂದೇ ಅಲ್ಲ. ನಮ್ಮಲ್ಲಿ ಆಗಾಗ ಸಾಂಪ್ರದಾಯಿಕ ಆಚರಣೆಗಳ (ಮೂಢ ನಂಬಿಕೆಗಳ) ಕುರಿತು ಇಂಥ ವಿವಾದಗಳು ಏಳುತ್ತಲೇ ಇರುತ್ತವೆ, ಹಾಗೂ ಅವುಗಳನ್ನು ರೂಢಿಸಿದ ಅಪರಾಧಿಗಳು ಯಾರೆಂಬ ಕುರಿತು ಯಾವ ಪ್ರಗತಿಪರರೂ ತಡವರಿಸಬೇಕಿಲ್ಲ. ಅದೇ ಕಾಣದ ಕೈಗಳು ಅಲ್ಲೂ ಇರುತ್ತವೆ ಎಂಬುದು ಗ್ಯಾರಂಟಿ.

                              ಮಡೆಸ್ನಾನದಲ್ಲಂತೂ ಬ್ರಾಹ್ಮಣರು ತಾವೇ ಶ್ರೇಷ್ಠರೆಂಬುದನ್ನು ಕೆಳಜಾತಿಗಳಿಗೆ  ಮನದಟ್ಟುಮಾಡಿಕೊಡಲು ತಮ್ಮ ಎಂಜಲೆಲೆಯ ಮೇಲೆ ಉರುಳಾಡುವುದನ್ನು ರೂಢಿಸಿದ್ದಾರೆ ಎನ್ನಲಾಗುತ್ತಿದೆ. ಬ್ರಾಹ್ಮಣರ ಎಲೆಯ ಮೇಲೆ ಕೆಲವರು ಉರುಳಾಡಿದರೆಂದರೆ ಅವರೇ ಅದನ್ನು ರೂಢಿಸಿದವರೆಂಬುದಾಗಿ ಯಾವ ತರ್ಕದ ಮೂಲಕ ನಿರ್ಣಯಿಸಲು ಸಾಧ್ಯ? ಜನರನ್ನು ಇಷ್ಟು ಸುಲಭವಾಗಿ ನಂಬಿಸಲು ಸಾಧ್ಯವಾಗುತ್ತದೆ ಅಂತಾದಲ್ಲಿ ಬ್ರಾಹ್ಮಣರಿರುವ ಎಲ್ಲಾ ದೇವಾಲಯಗಳಲ್ಲೂ, ಎಲ್ಲಾ ಸ್ಥಳಗಳಲ್ಲೂ ಈ ಆಚರಣೆಯನ್ನು ಅವರು ಏಕೆ ಜಾರಿಯಲ್ಲಿ ತರಲಿಲ್ಲ? ಚಂದ್ರಗುತ್ತಿಯ ಬತ್ತಲೆ ಸೇವೆಯು ವಿವಾದಾಸ್ಪದವಾಗಿ ಅದನ್ನು ಸರ್ಕಾರವು ನಿಷೇಧಿಸಲು ಪ್ರಯತ್ನಿಸಿದಾಗ ಅಲ್ಲಿದ್ದ ಜೋಗತಿಯರು ಹಾಗೂ ಸ್ಥಳೀಯ ಭಕ್ತರು ಹಿಂಸಾತ್ಮಕವಾಗಿ ಪ್ರತಿಭಟಿಸಿದ್ದು ಎಲ್ಲರಿಗೂ ತಿಳಿದ ವಿಷಯ. ನಂತರ ಅದರ ಕುರಿತು ನಾಟಕವೊಂದನ್ನು ರಚಿಸಲಾಯಿತು. ಅದರಲ್ಲಿ ಒಬ್ಬ ಬ್ರಾಹ್ಮಣನು ಬತ್ತಲೆ ಸೇವೆಗೆ ಪ್ರಚೋದನೆ ನೀಡುತ್ತ ಜೋಗತಿಯರ ಹಿಂದೆ ನಿಂತಿರುತ್ತಾನೆ. ಹೀಗೆ ಕನ್ನಡ ಸಾಹಿತಿಯೊಬ್ಬರ ಕೃಪೆಯಿಂದ ಬೀದಿಯಲ್ಲಿ ಕಾಣದ ಕೈ ನಾಟಕದಲ್ಲಿ  ಪ್ರಕಟವಾಗುತ್ತದೆ.

               ಇಂಥ ಉದಾಹರಣೆಗಳಲ್ಲಿ ಕಡೇ ಪಕ್ಷ ಬ್ರಾಹ್ಮಣರು ಅಂಥ ಸ್ಥಳಗಳಲ್ಲಿ ಪೂಜಾರಿಗಳಾಗಿಯೊ, ಪುರೋಹಿತರಾಗಿಯೊ ಉಪಸ್ಥಿತರಿರುತ್ತಾರೆ. ಆದರೆ ಇನ್ನೂ ಎಷ್ಟೋ ಉದಾಹರಣೆಗಳಲ್ಲಿ ಅಲ್ಲಿ ಯಾವ ಬ್ರಾಹ್ಮಣರೂ ಕಂಡುಬರುವುದಿಲ್ಲ. ಬ್ರಾಹ್ಮಣೇತರ ಪೂಜಾರಿಗಳೂ, ದೇವಾಲಯಗಳೂ ವಿಫುಲವಾಗಿಯೇ ಇವೆ ಹಾಗೂ ಅಂಥಲ್ಲಿ ಇದಕ್ಕೂ ಹಿಂಸಾತ್ಮಕ ಹಾಗೂ ಅವಮಾನಕರ ಆಚರಣೆಗಳೂ ಪ್ರಚಲಿತದಲ್ಲಿವೆ. ಆದರೂ ಅಂಥ ಆಚರಣೆಗಳ ಹಿಂದೆ ಕೂಡ ಬ್ರಾಹ್ಮಣರ ಕೈವಾಡವಿದೆ ಎಂಬುದರಲ್ಲಿ ಪ್ರಗತಿಪರರಿಗೆ ಸಂದೇಹವಿಲ್ಲ. ನಮ್ಮಲ್ಲಿ ಯಾವುದೇ ಜಾತಿಯ ಜನರು ಅನಿಷ್ಠ ಎಂದು ಕರೆಯಲಾಗುವ ಆಚರಣೆಗಳನ್ನು ರೂಢಿಸಿಕೊಂಡಿದ್ದರೂ ಅವುಗಳನ್ನು ವರ್ಣಿಸುವುದು ಮಾತ್ರ ’ಅವರು ಮೂಢನಂಬಿಕೆಗೆ ಬಲಿಯಾಗಿದ್ದಾರೆ’ ಅಂತ. ಮತ್ತೆ ಅದೇ ಕಾಣದ ಕೈ.

               ಈಗ ಒಂದು ಕಾಲ್ಪನಿಕ ಸಂಭಾಷಣೆಯ ಮೂಲಕ ಈ ವಾದದ ಸ್ವರೂಪವನ್ನು ತಿಳಿದುಕೊಳ್ಳೋಣ. 

ವಾದಿ: ಈ ಕಾಣದ ಕೈಗಳಿಂದ ಮಾನವ ಹಕ್ಕುಗಳ ದಮನವಾಗುತ್ತಿದೆ.

ಆಕ್ಷೇಪಣೆ: ಆದರೆ ಇಂಥ ವಾದದಿಂದ ಕೆಳಜಾತಿಗಳ ಮಾನವ ಹಕ್ಕನ್ನು ನಿರಾಕರಿಸಿದಂತಾಗುವುದಿಲ್ಲವೆ?   ಯಾರೋ ಒಂದಿಷ್ಟು ಬ್ರಾಹ್ಮಣರು ಏನು ಹೇಳಿದರೂ ಒಂದಿಷ್ಟೂ ಯೋಚಿಸದೇ ಇವರೆಲ್ಲ ನಂಬಿಬಿಡುತ್ತಾರೆ ಎನ್ನುತ್ತಿದ್ದೀರಿ.  ಯಾರನ್ನಾದರೂ ಮಂದಮತಿಗಳು ಅಥವಾ ಹುಚ್ಚರು ಎಂದು ನೇರವಾಗಿ  ಹೇಳಲು ಕಷ್ಟವಾದರೆ ಹೀಗೆ ಹೇಳಿದರೆ ಸಾಕಲ್ಲವೆ? ಅದೂ ಒಬ್ಬಿಬ್ಬರಲ್ಲ, ಭಾರತದ ಸಮಸ್ತ ಕೆಳಜಾತಿಯ ಹಾಗೂ ಬುಡಕಟ್ಟುಗಳ ಜನರೆಲ್ಲ ಶತಶತಮಾನಗಳಿಂದ ಹೀಗೇ ಇದ್ದಾರೆ ಎಂಬುದಾಗಿ ವಾದಿಸುತ್ತಿದ್ದೀರಿ. ಕೆಲವು ಮನುಷ್ಯ ಸಮುದಾಯಗಳು ವಿಕಾಸಪಥವನ್ನು ತುಳಿಯದೇ ಪ್ರಾಕೃತಾವಸ್ಥೆಯಲ್ಲೇ ಇವೆ ಎಂದರೆ ಅವರ ಮನುಷ್ಯತ್ವವನ್ನೇ ಅಲ್ಲಗಳೆದಂತಲ್ಲವೆ? 

ಸಮರ್ಥನೆ: ಇಲ್ಲ ಅವರು ವಿಚಾರವಂತರೇ. ಆದರೆ ಬಲವಂತವಾಗಿ ಅವರನ್ನೆಲ್ಲ ಗುಲಾಮರನ್ನಾಗಿ ಮಾಡಲಾಗಿದೆ. ಅಮೇರಿಕಾದಲ್ಲಿ ನಿಗ್ರೋ ಗುಲಾಮರನ್ನು ಹೀಗೆ ನಡೆಸಿಕೊಳ್ಳಲಿಲ್ಲವೆ? 

ಆಕ್ಷೇಪಣೆ: ಗುಲಾಮಗಿರಿ ವ್ಯವಸ್ಥೆಯು ಒಂದು ನಿರ್ದಿಷ್ಟ ಭೌತಿಕ ರಚನೆಯನ್ನು ಹೊಂದಿದ ಪ್ರಭುತ್ವದ ಶಕ್ತಿಯಿಂದ ಹಾಗೂ ಕಾನೂನಿನಿಂದ ಅಸ್ತಿತ್ವದಲ್ಲಿತ್ತು. ಅದರ ರಚನೆಯನ್ನು ತೋರಿಸಲಿಕ್ಕೆ ಸಾಧ್ಯವಿದೆ. ನಾವು ಚರ್ಚಿಸುತ್ತಿರುವ ಆಚರಣೆಗಳೆಲ್ಲ ಇಂದೂ ಇವೆ ಎನ್ನುತ್ತೀರಿ. ಇಂದು ಇರುವ ವ್ಯವಸ್ಥೆ ಆಧುನಿಕ ಭಾರತೀಯ ಸಂವಿಧಾನವನ್ನಾಧರಿಸಿ ನಿಂತಿದೆ. ಇಂದಿನ ಭಾರತೀಯ ಪ್ರಭುತ್ವದ ಆಳ್ವಿಕೆಯನ್ನು ಜಾರಿಯಲ್ಲಿ ತರಲು, ತಪ್ಪಿದವರನ್ನು ದಂಡಿಸಲು ಕಾನೂನುಗಳಿವೆ, ನ್ಯಾಯಾಲಯಗಳಿವೆ ಹಾಗೂ ಪೋಲೀಸ್ ವ್ಯವಸ್ಥೆಯಿದೆ. ಇದಕ್ಕೆಲ್ಲ ಸಾಕ್ಷ್ಯಾಧಾರಗಳನ್ನು ತೋರಿಸಬಹುದು. ಅದೇ ರೀತಿಯಲ್ಲಿ ಇಂದು ಇಲ್ಲಿ   ಬ್ರಾಹ್ಮಣರ  ದಮನಕಾರೀ ವ್ಯವಸ್ಥೆ  ಅಸ್ತಿತ್ವದಲ್ಲಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆಯೆ?

ಸಮರ್ಥನೆ:  ಈ ಬ್ರಾಹ್ಮಣರ ಆಳ್ವಿಕೆಯು ಅದೃಶ್ಯವಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ಹೇಗೆಂದರೆ ಅದು ಜನರ ನಂಬಿಕೆಯ ರೂಪದಲ್ಲಿ ಅವರ ಮನಸ್ಸಿನಲ್ಲಿ ಮಾತ್ರವೇ ಇದೆ.

ಆಕ್ಷೇಪಣೆ: ಅದು ಜನರ ನಂಬಿಕೆಯ ರೂಪದಲ್ಲಿದೆ ಅಂತಾದರೂ ಕೂಡ ಆ ನಂಬಿಕೆಯ ರೂಪುರೇಷೆಗಳನ್ನು ಕಂಡುಹಿಡಿಯಬಹುದಲ್ಲ. ಆಚರಿಸುವವರನ್ನೇ ಕೇಳಿದರೆ ಅವರೇನು ಹೇಳುತ್ತಾರೆ? ಅವರು ತಮ್ಮ ಪೂರ್ವಿಕರ ಆಚರಣೆಯನ್ನು ಪಾಲಿಸುತ್ತಿದ್ದೇವೆ ಎನ್ನುತ್ತಾರೆ.  ಈ ಆಚರಣೆಗಳು ತಮ್ಮವೇ, ತಾವೇ ಯೋಚಿಸಿ ನಿರ್ಣಯಿಸುತ್ತಿದ್ದೇವೆ ಅಂದುಕೊಳ್ಳುತ್ತಾರೆ. ಹಾಗಲ್ಲದೇ ಯಾವುದೋ ಬ್ರಾಹ್ಮಣರು ಹೇಳಿದಂತೆ ಜೀವಿಸುತ್ತಿದ್ದೇವೆ ಎಂದು ಉತ್ತರಿಸುವುದೂ ಇಲ್ಲ, ಅಂದುಕೊಳ್ಳುವುದೂ ಇಲ್ಲ.

ಸಮರ್ಥನೆ: ಈಗ ಅವರಿಗೆ ತಿಳಿಯದಿರಬಹುದು. ಸಾವಿರಾರು ವರ್ಷಗಳಿಗೂ ಪೂರ್ವದಲ್ಲೇ ಬ್ರಾಹ್ಮಣರು ಜಾತಿ ವ್ಯವಸ್ಥೆ ಎಂಬ ಕರಾಳ ವ್ಯವಸ್ಥೆಯನ್ನು ರಚಿಸಿಬಿಟ್ಟಿದ್ದಾರೆ. ಅದನ್ನು ಮನುಸ್ಮೃತಿ ಎಂಬ ಕಾನೂನಿನ ಮೂಲಕ ಜಾರಿಯಲ್ಲಿ ತಂದಿದ್ದರು. ಪ್ರಾಚೀನ ಸಮಾಜಕ್ಕೆ ಅದು ಸಂವಿಧಾನವಾಗಿತ್ತು. ಆ ಕಾನೂನುಗಳನ್ನು ಇವರಿಗೆ ಗೊತ್ತಿಲ್ಲದೇ ಇಂದೂ ಇವರು ಪಾಲಿಸುತ್ತಿದ್ದಾರೆ.

ಆಕ್ಷೇಪಣೆ: ಈ ಉತ್ತರ ಮೇಲಿನ ಉತ್ತರಗಳಿಗಿಂತಲೂ ಹಾಸ್ಯಾಸ್ಪದವಾಗಿದೆ. ಏಕೆಂದರೆ, ಯಾವುದೇ ಕಾನೂನನ್ನೂ ಜಾರಿಗೊಳಿಸಲು ಒಂದು ಪ್ರಭುತ್ವ ವ್ಯವಸ್ಥೆಯ ಅನಿವಾರ್ಯತೆಯಿದೆ.  ನಮ್ಮ ಪ್ರಾಚೀನ ಪ್ರಭುತ್ವಗಳು ಐರೋಪ್ಯ ಪ್ರಭುತ್ವಗಳಂತೆ ಕಾನೂನಿನ ತಳಹದಿಯ ಮೇಲೆ ನಿಂತಿರಲಿಲ್ಲ. ಹಾಗಾಗಿ ಅವುಗಳಿಗೆ ಮನುಸ್ಮೃತಿ ಹೋಗಲಿ, ಯಾವ ಸಂವಿಧಾನದ ತಳಹದಿಯೂ ಇರಲಿಲ್ಲ. ಅವು ಆಯಾ ಸಮುದಾಯಗಳ ಸಾಂಪ್ರದಾಯಿಕ ಆಚಾರಗಳನ್ನು ಒಪ್ಪಿಕೊಂಡು ಮಾನ್ಯ ಮಾಡಿದ್ದವು ಎಂದು ಇತಿಹಾಸಕಾರರೇ ಹೇಳುತ್ತಾರೆ. ಅಂದರೆ ಪ್ರಭುತ್ವವು ಸಮುದಾಯಗಳ ಸಂಪ್ರದಾಯಗಳನ್ನು ರೂಪಿಸಿ ರೂಢಿಸಿದ್ದಕ್ಕೆ  ಐತಿಹಾಸಿಕ ಆಧಾರಗಳು ಇಲ್ಲವಲ್ಲ?

ಸಮರ್ಥನೆ: ಐತಿಹಾಸಿಕ ಆಧಾರಗಳು ಇಲ್ಲದಿರಬಹುದು. ನಮ್ಮ ಪುರಾಣಗಳಲ್ಲಿ ಇಲ್ಲವೆ? ಏಕಲವ್ಯ. ಶಂಬೂಕ, ಕರ್ಣ?   ಮತ್ತೆ ಬುದ್ಧ, ಬಸವ ಇವರೆಲ್ಲ ಯಾವುದರ ವಿರುದ್ಧ ಹೋರಾಡಿದರು ಅಂತೀರಿ?

ಆಕ್ಷೇಪಣೆ: ಪುರಾಣಗಳ ಕೆಲವು ಹೆಸರುಗಳನ್ನು ತೆಗೆದುಕೊಂಡರೆ ನಿಮ್ಮ ವಾದದ ಸಮರ್ಥನೆಗೆ ಸಾಕು ಅಂತಾದರೆ ವಾಲ್ಮೀಕಿ, ವ್ಯಾಸ, ಕಾಳಿದಾಸ ಮುಂತಾದವರ ಹೆಸರನ್ನು ತೆಗೆದುಕೊಂಡು ನಿಮ್ಮ ಪಟ್ಟಿಗಿಂತಲೂ ಉದ್ದವಾದ ಪಟ್ಟಿಯನ್ನು ಸಾದರ ಪಡಿಸಿ ನಿಮ್ಮನ್ನು ಅಲ್ಲಗಳೆಯಬಹುದಲ್ಲ? ಮತ್ತೆ ಬುದ್ಧ, ಬಸವ ಮುಂತಾದವರು ಬ್ರಾಹ್ಮಣಶಾಹಿಯ ವಿರುದ್ಧ ಪ್ರತಿಭಟಿಸಿದರು ಎಂಬ ಜ್ಞಾನೋದಯವು ಏಕೆ ಬ್ರಿಟಿಷರು ಭಾರತಕ್ಕೆ ಬಂದ ನಂತರವೇ ನಮ್ಮವರಿಗೆ ಆಗಬೇಕು? ಅದಕ್ಕೂ ಮೊದಲು ಯಾರೂ ಅಂಥ ಇತಿಹಾಸವನ್ನು ಬರೆದೇ ಇಲ್ಲ ಏಕೆ?

ಸಮರ್ಥನೆ: ಇಂದು ಅಸ್ಪೃಶ್ಯತೆ, ದಲಿತರ ಮೇಲೆ ದೌರ್ಜನ್ಯ ಇತ್ಯಾದಿಗಳು ನಡೆಯುತ್ತಿಲ್ಲವೆ?  ನೀವು ಪೇಪರು ಓದುವುದಿಲ್ಲ ಅಂತ ಕಾಣುತ್ತದೆ.

ಆಕ್ಷೇಪಣೆ:  ಅಸ್ಪೃಶ್ಯತೆಯನ್ನು ಎಲ್ಲರೂ ಆಚರಿಸುತ್ತಾರೆ, ದಲಿತರಲ್ಲೇ ಒಂದು ಜಾತಿಯವರು ಮತ್ತೊಂದು ಜಾತಿಯವರ ಕುರಿತು ಆಚರಿಸುತ್ತಾರೆ. ಇವರಲ್ಲಿ ಮತ್ಯಾರೂ ಅಲ್ಲದೇ ಬ್ರಾಹ್ಮಣರೇ ಅದನ್ನು ರೂಢಿಸಿದ್ದಾರೆಂದು ಹೇಗೆ ಹೇಳುತ್ತೀರಿ?  ದೌರ್ಜನ್ಯದ ಪ್ರಕರಣಗಳ ಕುರಿತು ಇಷ್ಟೊಂದು ವರದಿಗಳು ಪತ್ರಿಕೆಗಳಲ್ಲಿ ಬಂದಿವೆ. ಏಕೆ ಅವುಗಳಲ್ಲಿ ಕಣ್ಣಿಟ್ಟು ಹುಡುಕಿದರೂ  ಎಲ್ಲೂ ಬ್ರಾಹ್ಮಣರು ದೌರ್ಜನ್ಯ ಮಾಡಿರುವುದು ಕಾಣುವುದಿಲ್ಲ? ಕೆಲವೊಮ್ಮೆ ದಲಿತ-ಹಿಂದುಳಿದವರಲ್ಲೇ ಇರುವ ಜಾತಿಗಳು ಪರಸ್ಪರರ ವಿರುದ್ಧ ದೌರ್ಜನ್ಯ ನಡೆಸಿರುವುದು ಕಂಡುಬರುತ್ತದೆಯಲ್ಲ? ಅದಕ್ಕೆ ಬ್ರಾಹ್ಮಣರು ಹೇಗೆ ಕಾರಣ?

ಸಮರ್ಥನೆ:  ಬ್ರಾಹ್ಮಣರು ನೇರವಾಗಿ ಕಾಣದಿರಬಹುದು. ಆದರೆ ಅವರು ಸಾವಿರಾರು ವರ್ಷಗಳ ಹಿಂದೆಯೇ ರಚಿಸಿದ ಶಾಸ್ತ್ರಗಳು ಈ ದೌರ್ಜನ್ಯಗಳ ಹಿಂದೆ ಅದೃಶ್ಯವಾಗಿ ಪ್ರಚೋದನೆಯನ್ನು ನೀಡುತ್ತಿವೆ. ಅವರು ದಲಿತರನ್ನೊಳಗೊಂಡಂತೆ ಉಳಿದ ಜಾತಿಯವರನ್ನೆಲ್ಲ ಜಾತಿ ತರತಮಗಳ ಕುರಿತು ನಂಬಿಸಿಬಿಟ್ಟಿದ್ದಾರೆ.

ಆಕ್ಷೇಪಣೆ: ಹೌದು ಶಾಸ್ತ್ರಗಳನ್ನೇನೋ ರಚಿಸಿದ್ದಾರೆ, ಅವು ಯಾವ ರಾಜ್ಯದ ಕಾನೂನುಗಳಾಗಿದ್ದವು? ನಮ್ಮಲ್ಲಿ ಕಾನೂನಿನ ಆಳ್ವಿಕೆ ಬ್ರಿಟಿಷರು ಬಂದ ನಂತರ ಪ್ರಾರಂಭವಾಯಿತಲ್ಲ? ಅಂದರೆ ಅವು ಜನರಿಗೆ ತಿಳಿದದ್ದಾದರೂ ಹೇಗೆ? ಏಕೆಂದರೆ ಅವೆಲ್ಲವೂ ಸಂಸ್ಕೃತ ಭಾಷೆಯಲ್ಲೇ ಇವೆ. ಪಂಡಿತರನ್ನು ಬಿಟ್ಟರೆ ಇತರ ಬ್ರಾಹ್ಮಣರೂ ಅವನ್ನು ಓದಿರಲಿಕ್ಕಿಲ್ಲ. ನೀವೇ ಹೇಳುತ್ತೀರಲ್ಲ, ಶೂದ್ರರನ್ನು ಸಂಸ್ಕೃತ ಜ್ಞಾನದಿಂದ ವಂಚಿಸಿದ್ದಾರೆ ಅಂತ.

ಸಮರ್ಥನೆ: ಅವನ್ನೆಲ್ಲ ಓದಲೇಬೇಕೆ? ಈ ಕುತಂತ್ರಿಗಳು ಬಾಯಲ್ಲಿ ತಿಳಿಸಿದ್ದಾರೆ.

ಆಕ್ಷೇಪಣೆ: ಬ್ರಾಹ್ಮಣರು ಸಾವಿರಾರು ವರ್ಷಗಳ ಹಿಂದೆ ವಿಧಿಸಿದ ನಿಯಮಗಳು ಯಾವ ಪ್ರಭುತ್ವದ ಸಹಾಯವಿಲ್ಲದೆ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ, ಸ್ವತಃ ಓದದೇ, ಆಚರಿಸುವವರ ನೆನಪಿನಲ್ಲೂ ಉಳಿಯದೇ, ಕೇವಲ ಸುಪ್ತ ಪ್ರಜ್ಞೆಯ ಭಾಗವಾಗಿ ಭಾರತದಂಥ ದೊಡ್ಡ ದೇಶದ ಉದ್ದಗಲಕ್ಕೂ ಮುಂದುವರಿದುಕೊಂಡು ಬಂದಿವೆ ಅಂದ ಹಾಗಾಯಿತು. ಹಾಗೂ ಇಂದಿನ ಸಂವಿಧಾನ, ನ್ಯಾಯಾಲಯ. ಪೋಲಿಸು ಇತ್ಯಾದಿ ವ್ಯವಸ್ಥೆಗಳಿಗಿಂತಲೂ ಆ ನಿಯಮಗಳು ಪರಿಣಾಮಕಾರಿಯಾಗಿವೆ ಅಂದಂತಾಯಿತು. ಅಂದರೆ ಇದಕ್ಕೂ ಅದ್ಭುತವಾದ ವ್ಯವಸ್ಥೆಯನ್ನು ಪ್ರಪಂಚದ ಇತಿಹಾಸವೇ ಕಂಡಿಲ್ಲ ಅಂದಂತೇ. ನಿಮ್ಮ ವಾದವು ಪ್ರಪಂಚದಲ್ಲಿರುವ ಯಾವುದೇ ಸಮಾಜಶಾಸ್ತ್ರೀಯ ತಿಳಿವಳಿಕೆ ಯನ್ನೂ, ಸಿದ್ಧಾಂತಗಳನ್ನೂ ಸುಳ್ಳು ಮಾಡುವಂತಿದೆಯಲ್ಲ? ನಿಮ್ಮ ಬಳಿ ಇದಕ್ಕೂ ವಿಶ್ವಾಸಾರ್ಹವಾದ  ಕಥೆಗಳಿಲ್ಲವೆ? ಇದು ಯಾವುದೋ ದೆವ್ವದ ಕಥೆಯಿದ್ದಂತೇ ಇದೆಯಲ್ಲ? 

ಸಮರ್ಥನೆ: ಈ ಕಥೆಯೇ ನಿಜ. ಇದನ್ನು ನೀವು ನಂಬದಿರುವುದೇ ಬ್ರಾಹ್ಮಣ ಪುರೋಹಿತಶಾಹಿಯ ಹುನ್ನಾರ. ಅಂದಹಾಗೆ ನೀವು ಬ್ರಾಹ್ಮಣರೇ ಇರಬೇಕು.

ಆಕ್ಷೇಪಣೆ: ನಾನು ಬ್ರಾಹ್ಮಣನಲ್ಲ ಅಂತಾದರೆ ಈ ಕಥೆ ಸುಳ್ಳು ಎಂಬುದನ್ನು ಒಪ್ಪಿಕೊಳ್ಳುತ್ತೀರಾ?

ಸಮರ್ಥನೆ: ಈ ಕಥೆಯನ್ನು ನೀವು ಒಪ್ಪದಿದ್ದರೆ ನೀವು ಶೂದ್ರರಾದರೂ, ದಲಿತರಾದರೂ ನಿಮ್ಮಲ್ಲಿ ಬ್ರಾಹ್ಮಣ್ಯ ಇದೆ ಅಂತಲೇ ಅರ್ಥ. ಜಗತ್ತಿನಲ್ಲಿ ಯಾವ ವಿದ್ವಾಂಸನು ಏನೇ ಸಮಾಜಶಾಸ್ತ್ರೀಯ ಸಂಶೋಧನೆ ಮಾಡಲಿ ಈ ಕಥೆ ಸುಳ್ಳು ಎಂದವರಲ್ಲಿ ಈ ಬ್ರಾಹ್ಮಣ್ಯವೇ ಕೆಲಸ ಮಾಡುತ್ತಿರುತ್ತದೆ. ನಾವು ಅಂಥ ಸಂಶೋಧನೆಗಳನ್ನು ನಂಬುವವರಲ್ಲ. ಅಂಥ ಸಮಾಜ ವಿರೋಧೀ ಸಂಶೋಧನೆಗಳು ನಮಗೆ ಬೇಡವೇ ಬೇಡ.

                 ಒಂದು ಸಂಗತಿಯನ್ನು ಗಮನಿಸಿ. ಆಚರಣೆಗಳು  ಯಾವುದೇ ತೊಡಕಿಲ್ಲದೇ, ವಿವಾದವಿಲ್ಲದೇ ನಡೆಯುತ್ತಿರುವಷ್ಟು ಕಾಲ ಇಂಥ ಚರ್ಚೆಗಳು ಹುಟ್ಟುವುದಿಲ್ಲ. ಯಾವುದಾದರೊಂದು ಆಚರಣೆಯು ಮೂಢನಂಬಿಕೆ ಎಂಬುದಾಗಿ ಗುರುತಿಸಲ್ಪಟ್ಟು ಅದರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬುದು ಕಂಡುಬಂದಾಗ ಮಾತ್ರವೇ ಕಾಣದ ಕೈಗಳು ಅವತರಿಸುತ್ತವೆ. ಅಂದರೆ  ಭಾರತದಲ್ಲಿರುವ ವೈವಿಧ್ಯಪೂರ್ಣ ಸಾಮಾಜಿಕ ಗುಂಪುಗಳೆಲ್ಲವುಗಳ ಸಮಸ್ತ ಆಚರಣೆಗಳನ್ನೂ ಈ ಕಾಣದ ಕೈಗಳು ರೂಪಿಸಿ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿವೆಯೆ? ಅಥವಾ ಈ ಕಾಣದ ಕೈಗಳು ಇಂಥ ಅಮಾನವೀಯ ಆಚರಣೆಗಳನ್ನು ಮಾತ್ರವೇ ರೂಢಿಸಿ ನಿಯಂತ್ರಿಸುತ್ತವೆಯೆ? ಯಾವುದಾದರೂ ಒಳ್ಳೆಯ ಆಚರಣೆಗಳು ಎಂದು ಇವರು ಗುರುತಿಸುವಂಥವುಗಳ ಹಿಂದೆ ಕೂಡ ಈ ಕಾಣದ ಕೈಗಳು ಇಲ್ಲವೆ? ಎಂಬಂಥ ಪ್ರಶ್ನೆಗಳಿಗೆ  ಉತ್ತರ ಸಿಗುವುದಿಲ್ಲ.

                ಈ ಮೇಲಿನವು ನಮ್ಮ ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಕಂಡುಕೊಂಡ ಉತ್ತರಗಳಲ್ಲವೇ ಅಲ್ಲ. ನಮ್ಮ ವಸಾಹತು ದೊರೆಗಳು ಅಂಥ ಪರಿಶ್ರಮದಿಂದ ನಮ್ಮನ್ನು ತಪ್ಪಿಸಿದ್ದಾರೆ. ಒಂದು ಸಾಮಾಜಿಕ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಸವಾಲು ಎಲ್ಲೆಲ್ಲಿ ಏಳುತ್ತದೆಯೊ ಆಗ ಅದನ್ನು ಅರ್ಥೈಸಲು ಸುಲಭವಾಗಿ ಸಿಗಬಲ್ಲ ವಿವರಣೆಯೊಂದನ್ನು ನಾವು ಈಗಾಗಲೇ ಪಡೆದುಕೊಂಡು ಬಿಟ್ಟಿದ್ದೇವೆ. ಅದೆಂದರೆ ಜಾತಿ ವ್ಯವಸ್ಥೆಯ ಕುರಿತ ಕಥೆ.  ಕಾಣದ ಕೈ ಕುರಿತ ಅಸಂಬದ್ಧತೆಯನ್ನು ತೋರಿಸುವುದಷ್ಟೇ ಈ ಲೇಖನದ ಉದ್ದೇಶವಾಗಿರುವುದರಿಂದ ಈ ಕಥೆ ಎಲ್ಲಿಂದ ಬಂದಿತು, ಏಕೆ ಬಂದಿತು ಇತ್ಯಾದಿಗಳನ್ನು ಸಂಬಂಧಪಟ್ಟ ಭಾಗಗಳಲ್ಲಿ ವಿವರಿಸುತ್ತೇನೆ.

               ಈ ಕುರಿತು ವಿವರವಾಗಿ ತಿಳಿದುಕೊಳ್ಳಬಯಸುವವರು ಮಲ್ಲಾಡಿಹಳ್ಳಿಯ ಆನಂದ ಕಂದ ಪ್ರಕಾಶನವು ಇತ್ತೀಚೆಗೆ ಪ್ರಕಟಿಸಿದ ’ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ?’ (ಸಂ. ಡಂಕಿನ್ ಜಳಕಿ) ಎಂಬ ಗ್ರಂಥವನ್ನು ನೋಡಬಹುದು. ನಾನು ಕಳೆದ ಹತ್ತಾರು ವರ್ಷಗಳಿಂದ ಜಾತಿಯ ಕುರಿತು ನಡೆಸಿದ ಚರ್ಚೆಯನ್ನು ಅದರಲ್ಲಿ ಸಂಗ್ರಹಿಸಿ ನೀಡಲಾಗಿದೆ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

2 comments

Balaji June 7, 2023 - 7:14 pm

Im not able to find Dunkin Jalaki’s book “ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ” anywhere online to purchase. Kindly add a link to purchase that book.

Reply
indalt June 15, 2023 - 11:07 am

Dear sir, Please send a WhatsApp message to the following number of Aarohi Research Foundation: 73491 27979. We have some copies and we can arrange the shipment.

Reply

Leave a Comment

Message Us on WhatsApp