Home ವಸಾಹತು ಪ್ರಜ್ಞೆಬುದ್ಧಿಜೀವಿಗಳ ಮೂಢನಂಬಿಕೆಗಳು ಬ್ರಾಹ್ಮಣ ಪುರೋಹಿತಶಾಹಿಯ ಹಿಂದಿರುವ ಪಾಶ್ಚಾತ್ಯ ಗ್ರಹಿಕೆಗಳು

ಬ್ರಾಹ್ಮಣ ಪುರೋಹಿತಶಾಹಿಯ ಹಿಂದಿರುವ ಪಾಶ್ಚಾತ್ಯ ಗ್ರಹಿಕೆಗಳು

by Rajaram Hegde
459 views

ಇಂದು ’ಬ್ರಾಹ್ಮಣ ಪುರೋಹಿತಶಾಹಿ’ ಎಂಬ ಶಬ್ದವನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಅದರ ಅರ್ಥವೇನು? ಅದು ಎಲ್ಲಿಂದ ಬಂದಿದೆ ಎಂಬುದರ ಕುರಿತು ಒಂದು ಚಿಕ್ಕ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಈಗಾಗಲೇ ಬ್ರಾಹ್ಮಣ ಪುರೋಹಿತಶಾಹಿ ಎಂಬ ಶಬ್ದವನ್ನು ನಮ್ಮ ಪ್ರಗತಿಪರರು ಮೇಲಿಂದ ಮೇಲೆ ಬಟ್ಟೆ ಒಗೆದಂತೆ ಒಗೆದಿದ್ದಾರೆ. ಹಾಗಾಗಿ ನಾನು ನಿಮಗೆ ಇದನ್ನು ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಈ ಶಬ್ದಕ್ಕೆ ಯಾರೂ ಒಳ್ಳೆಯ ಅರ್ಥವನ್ನು ಇದುವರೆಗೆ ನೀಡಿಲ್ಲ. ಅದಕ್ಕೆ ಈಗ ಪ್ರಚಲಿತದಲ್ಲಿ ಇರುವ ಅರ್ಥ ಮುಂದಿನಂತಿದೆ: ಪುರೋಹಿತರು ಎಂದರೆ ದೇವರು ಮತ್ತು ಮಾನವನ ನಡುವಿನ ಮಧ್ಯವರ್ತಿಗಳು ಹಾಗೂ ಅವರು ಅದಕ್ಕೆ ಸಂಬಂಧಿಸಿ ಏಕಸ್ವಾಮ್ಯವನ್ನು ಹೊಂದಿದ್ದಾರೆ. ಶಾಹಿ ಎಂದರೆ ಆಳ್ವಿಕೆ ಎಂದರ್ಥ.  ಪುರೋಹಿತರ ಆಳ್ವಿಕೆಯೇ ಪುರೋಹಿತಶಾಹಿ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬ್ರಾಹ್ಮಣರ ಪುರೋಹಿತಶಾಹಿ ಅಸ್ತಿತ್ವದಲ್ಲಿತ್ತು. ಆವರು ನಮ್ಮ ಸಮಾಜದಲ್ಲಿ  ಧರ್ಮದ, ದೇವರ ಹೆಸರಿನಲ್ಲಿ ಜಾತಿ ವ್ಯವಸ್ಥೆಯನ್ನು, ಮೂಢ ಆಚರಣೆಗಳನ್ನು, ಅನೈತಿಕತೆ, ಶೋಷಣೆ ಇತ್ಯಾದಿ ಎಲ್ಲ ಅನಿಷ್ಟಗಳನ್ನೂ ಹುಟ್ಟುಹಾಕಿದ್ದಾರೆ ಎಂಬುದು ಅವರ ಮೇಲಿನ ಆರೋಪ.

                 ಬ್ರಾಹ್ಮಣರೆಂದರೆ ಕಪಟತನ, ನಯವಂಚಕತೆ, ದುರಾಸೆ, ಸಮಯಸಾಧಕತೆ ಇತ್ಯಾದಿ ಲಕ್ಷಣಗಳನ್ನು ಉಳ್ಳವರು, ವೇದ ವಿದ್ಯೆಯನ್ನು ಉಳಿದವರಿಗೆ ಕೊಡದೇ ವಂಚಿಸಿದವರು, ತಮಗೆ ಅನುಕೂಲವಾಗುವ ಕಾನೂನುಗಳನ್ನು ಮಾಡಿ ಶೋಷಣಾತ್ಮಕ ಆಚರಣೆಗಳನ್ನು ಪ್ರಚಲಿತದಲ್ಲಿ ತಂದವರು, ಇತ್ಯಾದಿಗಳು ಪುರೋಹಿತಶಾಹಿ ಇದೆಯೆಂದು ನಂಬುವವರ ಲೋಕಜ್ಞಾನವಾಗಿದೆ. ಈ ಲೋಕಜ್ಞಾನವನ್ನು ವಿಮರ್ಶೆಗೆ ಒಡ್ಡದೇ ಒಪ್ಪಿಕೊಂಡ ಒಬ್ಬ ಮನುಷ್ಯನು ಬ್ರಾಹ್ಮಣರ ಜೊತೆಗೆ ಒಡನಾಡುವಾಗ ತನ್ನ ವೈಯಕ್ತಿಕ ಅನುಭವವು ಅದಕ್ಕೆ ಎಷ್ಟೇ ವಿರುದ್ಧವಾಗಿರಲಿ, ಈ ಮೇಲಿನ ಚಿತ್ರಣವು ಮಾತ್ರ ಅದಕ್ಕೂ ಮೀರಿದ ಸಾಮಾಜಿಕ ಸತ್ಯ ಎಂದು ನಂಬಿಕೊಂಡಿರುತ್ತಾನೆ. ಇದು ನಮ್ಮ ಕಥೆ-ಕಾದಂಬರಿಗಳಲ್ಲಿ ಮತ್ತು ಆತ್ಮಕಥೆಗಳಲ್ಲಿ ಕೂಡ ನಿದರ್ಶಿತವಾದ ಒಂದು ಸಂಗತಿ.

               ಆದರೆ ಈ ಚಿತ್ರಣಗಳು ವಸ್ತುಸ್ಥಿತಿಯನ್ನಾಧರಿಸಿವೆಯೆ? ಈ ಚಿತ್ರಣವು ಸತ್ಯವಾಗಬೇಕಾದರೆ   ಈ ಮುಂದಿನ ವಾಸ್ತವವು ನಮ್ಮ ಸಮಾಜದಲ್ಲಿ ಇರಬೇಕು: ಬ್ರಾಹ್ಮಣರೆಲ್ಲರೂ ಪುರೋಹಿತರಾಗಿರಬೇಕು, ಬ್ರಾಹ್ಮಣರಲ್ಲದವರು ಪುರೋಹಿತರಾಗಿರಲೇ ಬಾರದು,  ಅಂದರೆ ಉಳಿದೆಲ್ಲರೂ  ಕೂಡ ಬ್ರಾಹ್ಮಣರನ್ನಾಶ್ರಯಿಸಿಯೇ ತಮ್ಮ ದೇವ-ಧರ್ಮ ಕಾರ್ಯಗಳನ್ನು ನಡೆಸುತ್ತಿರಬೇಕು. ಬ್ರಾಹ್ಮಣರಲ್ಲೆಲ್ಲ ಈ ಮೇಲಿನ ದುರ್ಗುಣಗಳು ಕಂಡುಬರಬೇಕು. ಇಷ್ಟೇ ಅಲ್ಲದೇ ಉಳಿದ ಜನರ ಸಾಮಾಜಿಕ ಧಾರ್ಮಿಕ ಜೀವನದ ಮೇಲೆ ಬ್ರಾಹ್ಮಣರ ಶಾಸನ ಅಥವಾ ನಿಯಂತ್ರಣ ಇರಬೇಕು. ಆದರೆ ಇಂಥದೊಂದು ಸಮಾಜವನ್ನು ನಾವು ಇಂದಿನ ಭಾರತದಲ್ಲಂತೂ ನೋಡುವುದಿಲ್ಲ, ಅಷ್ಟೇ ಅಲ್ಲ, ಭಾರತದ ಇತಿಹಾಸವೂ ಇಂಥ ಸಮಾಜವನ್ನು ಕಂಡಿಲ್ಲ.

               ನಮ್ಮ ಸಮಾಜದಲ್ಲಿ ನಾವು ಕಾಣುವುದೇನು? ಎಲ್ಲಾ ಬ್ರಾಹ್ಮಣರೂ ಪುರೋಹಿತರಲ್ಲ. ಬ್ರಾಹ್ಮಣರಲ್ಲಿ ಪುರೋಹಿತರು ಎಂದು ಕರೆಸಿಕೊಂಡ ಒಂದು ಪ್ರಭೇದವಿದೆ. ಅವರು ದೇವ, ಪಿತೃ ಕಾರ್ಯಗಳನ್ನು ಹಾಗೂ ಇತರ ಸಂಸ್ಕಾರಗಳನ್ನು ಮಂತ್ರೋಕ್ತವಾಗಿ ನಡೆಸಿಕೊಡುತ್ತಾರೆ. ಅವರಿಗೆ ಶಿಷ್ಯವರ್ಗ ಅಂತ ಇರುತ್ತದೆ. ಅವರೆಲ್ಲ ಹೆಚ್ಚಿನದಾಗಿ ಬ್ರಾಹ್ಮಣರೇ ಆಗಿರುತ್ತಾರೆ. ಬ್ರಾಹ್ಮಣೇತರರಲ್ಲಿ ವಿವಾಹ, ಸತ್ಯನಾರಾಯಣ ಪೂಜೆ ಇತ್ಯಾದಿ ಆಚರಣೆಗಳ ಸಂಬಂಧಿಸಿ ಮಂತ್ರೋಕ್ತ ವಿಧಿಗಳಿಗೆ ಮಾತ್ರವೇ ಈ ಪೌರೋಹಿತ್ಯದ ಅವಶ್ಯಕತೆ ಇರುತ್ತದೆ. ಅದು ಕೂಡ ಎಲ್ಲಾ ಕಾಲದಲ್ಲೂ, ಎಲ್ಲೆಡೆಯಲ್ಲೂ ಪ್ರಚಲಿತದಲ್ಲಿ ಇರಲಿಲ್ಲ. ಇದನ್ನು ಬಿಟ್ಟರೆ ಆಗಮೋಕ್ತ ಪೂಜೆಯು ನಡೆಯುವ ದೇವಾಲಯಗಳಲ್ಲಿ ಆಗಮಗಳಲ್ಲಿ ಪರಿಣತರಾದ ಬ್ರಾಹ್ಮಣರಿಗೇ ಆದ್ಯತೆ ನೀಡಿ ಅರ್ಚಕರನ್ನಾಗಿ ನೇಮಿಸುವ ಪದ್ಧತಿ ಪ್ರಚಲಿತದಲ್ಲಿ ಇತ್ತು,  ಇಂಥ ಪುರೋಹಿತರಿಗೆ ಆಧುನಿಕ ತೀರ್ಥಕ್ಷೇತ್ರ ಹಾಗೂ ನಗರಗಳಲ್ಲಿ ಎಲ್ಲಾ ಜಾತಿಯ ಜನರಿಂದಲೂ ಹೆಚ್ಚಿನ ಬೇಡಿಕೆ ಬಂದಿರುವುದರಿಂದ ಅದು ಅಲ್ಲಿ ಲಾಭದಾಯಕ ವೃತ್ತಿಯಾಗಿದೆ. ಆದರೆ ಹಿಂದೆ ಹಾಗಿದ್ದಂತಿಲ್ಲ. ನಮ್ಮ ಕಥೆ ಪುರಾಣಗಳಲ್ಲೆಲ್ಲ ಬರುವ ಪುರೋಹಿತರು ಬಡಬ್ರಾಹ್ಮಣರೇ ಆಗಿರುತ್ತಾರೆ.

               ಬ್ರಾಹ್ಮಣರಲ್ಲೇ, ಅದರಲ್ಲೂ ಪುರೋಹಿತರ ಮನೆಯಿಂದಲೂ ಹಿಡಿದು ಅನೇಕ ಧಾರ್ಮಿಕ ವಿಧಿಗಳನ್ನು ಹೆಂಗಸರೇ ನಡೆಸುತ್ತಾರೆ.  ಬ್ರಾಹ್ಮಣೇತರರಲ್ಲಿ ಕೆಲವು ಸಂದರ್ಭಗಳನ್ನು ಬಿಟ್ಟರೆ ಉಳಿದೆಲ್ಲಾ ಧಾರ್ಮಿಕ ವಿಧಿಗಳನ್ನೂ ಅವರದೇ ಆದ ಐನೋರು, ದಾಸಯ್ಯ, ಜೋಗಯ್ಯ, ಇತ್ಯಾದಿ ಪುರೋಹಿತರು ನಡೆಸುತ್ತಾರೆ, ಇಲ್ಲ ಮನೆಯ ಯಜಮಾನನೊ, ಯಜಮಾನ್ತಿಯೊ ನಡೆಸುತ್ತಾರೆ. ಅವರ ಕಟ್ಟು ಕಟ್ಟಳೆಗಳು ಅವರವರ  ಸಂಪ್ರದಾಯಗಳಿಂದ ನಿರ್ಧಾರವಾಗುತ್ತವೆ. ಬ್ರಾಹ್ಮಣೇತರ ಜಾತಿಗಳಿಗೂ ಬ್ರಾಹ್ಮಣ ಜಾತಿಗಳಂತೆ ಅವರವರದೇ ದೇವಾಲಯ, ಮಠಗಳೆಲ್ಲವೂ ಇರುತ್ತವೆ. ಅಲ್ಲೆಲ್ಲ ಅವರವರ ಜಾತಿಯ ಅರ್ಚಕರು ಹಾಗೂ ಪದ್ಧತಿಗಳೇ ಇರುತ್ತವೆ. ಹಾಗಾಗಿ ನಮ್ಮ ಪುರೋಹಿತರು ಕೇವಲ ಬ್ರಾಹ್ಮಣರದೊಂದೇ ಅಲ್ಲ, ಯಾರ ಸಾಂಪ್ರದಾಯಿಕ ವಿಧಿಗಳು ಹಾಗೂ ಕಟ್ಟು ಕಟ್ಟಳೆಗಳನ್ನು ಕೂಡ ರೂಪಿಸುವವರೂ ಅಲ್ಲ, ನಿಯಂತ್ರಿಸುವವರೂ ಅಲ್ಲ. ಅವರು ಉಳಿದ ಕುಶಲ ಕರ್ಮಿಗಳಂತೆ ಜನರು ಬೇಡಿದ ಕಾರ್ಯವನ್ನು ನಡೆಸಿಕೊಟ್ಟು ಉಪಜೀವನ ನಡೆಸುವವರಾಗಿದ್ದಾರೆ. ಈ ಉಪಜೀವನದಿಂದ ಏನೇನು ಅಧಿಕಾರ ಹಾಗೂ ಅದರ ದುರುಪಯೋಗ ಸಾಧ್ಯವೊ ಅಷ್ಟನ್ನು ಕೆಲವರು ಚಲಾಯಿಸಿರಲೂಬಹುದು.

                   ಆದರೆ ಬ್ರಾಹ್ಮಣ ಪುರೋಹಿತಶಾಹಿ ಇದೆಯೆಂಬುದಕ್ಕೆ ನೀಡಲಾಗುವ ಆಧಾರಗಳೇನು? ಎಲ್ಲರೂ ಬ್ರಾಹ್ಮಣರು ಜಾತಿಯಲ್ಲಿ ಮೇಲೆ ಅನ್ನುತ್ತಾರೆ, ಸಾಂಪ್ರದಾಯಿಕ ಬ್ರಾಹ್ಮಣರು ಅನ್ಯ ಜಾತಿಯವರನ್ನು ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ, ಸಹಪಂಕ್ತಿ ಭೋಜನವನ್ನು ಮಾಡುವುದಿಲ್ಲ, ಇತರ ಜಾತಿಯವರ ಜೊತೆಗೆ ವಿವಾಹ ಸಂಬಂಧವನ್ನು ನಿರಾಕರಿಸುತ್ತಾರೆ, ಇತರ ಜಾತಿಯವರು ಅವರನ್ನು ಬಹುವಚನದಲ್ಲಿ ಸಂಬೋಧಿಸಬೇಕು, ಆದರೆ ಬ್ರಾಹ್ಮಣರ ಮಕ್ಕಳೂ ಕೂಡ ಇತರ ಜಾತಿಯವರನ್ನು ಏಕವಚನದಲ್ಲೇ ಕರೆಯುತ್ತವೆ. ಇಷ್ಟನ್ನೇ ಇಟ್ಟುಕೊಂಡು ಪುರೋಹಿತರಿಗೆ ಹಾಗೂ ಆ ಮೂಲಕ ಬ್ರಾಹ್ಮಣರಿಗೆ ಉಳಿದ ಸಮಸ್ತ ಜನರ ಜೀವನದ ಮೇಲೆ ನಿಯಂತ್ರಣ  ಬಂದು ಆಳ್ವಿಕೆ ನಡೆಯಿತು ಎಂದು ಹೇಳಬಹುದೆ? ಇವುಗಳು ಬ್ರಾಹ್ಮಣ ಜಾತಿಗೆ ಮಾತ್ರವೇ ಸೀಮಿತವಾದ ಆಚರಣೆಗಳಲ್ಲ. ಹಾಗಾಗಿ ಯಾರಿಗೂ ನಂಬಿಕೆ ಬರುವುದಿಲ್ಲ.  ಆದರೆ ಏಕೆ ಇಂಥ ಕಥೆಗಳು ನಮ್ಮ ಸಾಮಾಜಿಕ ಸತ್ಯಗಳಾಗಿವೆ ಎಂಬುದನ್ನು ಶೋಧಿಸಲಿಕ್ಕೆ ಪುನಃ ವಸಾಹತು  ಯುಗಕ್ಕೇ ಮರಳಬೇಕು.

               ಭಾರತದಲ್ಲಿ ಈ ರೀತಿಯ ಒಂದು ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವ ಹಿಂದೆ ಎರಡು ಸಂಗತಿಗಳು ಕೆಲಸಮಾಡಿವೆ. ಮೊದಲನೆಯದು ರೋಮನ್ ಕ್ಯಾಥೋಲಿಕ್ ಚರ್ಚು, ಎರಡನೆಯದು ಅದರ ವಿರುದ್ಧ ನಡೆದ ಪ್ರೊಟೆಸ್ಟಾಂಟ್ ಚಳವಳಿ . ಕ್ರಿಶ್ಚಿಯನ್ ಚರ್ಚುಗಳಲ್ಲಿ ಪ್ರೀಸ್ಟ್ ಹುಡ್ ಎಂಬ ಸ್ಥಾನವಿದೆ. ಪ್ರೀಸ್ಟ್ ಎಂಬವನು ಜನರು ಹಾಗೂ ಗಾಡ್ ನಡುವೆ ಮಧ್ಯವರ್ತಿಯಾಗಿ ರಿಲಿಜನ್ನಿನ ಆಚರಣೆಗಳನ್ನು ನಡೆಸಿಕೊಡುತ್ತಾನೆ. ಅವನಿಗೆ ಈ ಅಧಿಕಾರವನ್ನು ಚರ್ಚಿನ ವ್ಯವಸ್ಥೆ ನೀಡಿರುತ್ತದೆ. ಹಾಗೂ ಅದು ಗಾಡ್ ಕ್ರೈಸ್ತನೊಬ್ಬನಿಗೆ ನೀಡಬಹುದಾದ ಸರ್ವಶ್ರೇಷ್ಠ ಸ್ಥಾನಮಾನ ಎಂಬುದಾಗಿ ಅವರ ಪವಿತ್ರಗ್ರಂಥವು ಹೇಳುತ್ತದೆ. ಚರ್ಚಿನ ವ್ಯವಸ್ಥೆಯು ಎಲ್ಲಾ ಕ್ರಿಶ್ಚಿಯನ್ನರಿಗೂ ಒಂದೇ ರೀತಿ ಅನ್ವಯವಾಗುತ್ತದೆಯಾದ್ದರಿಂದ ಪ್ರೀಸ್ಟ್‌ನ ಅಧಿಕಾರಕ್ಕೆ ಎಲ್ಲರೂ ಸಮಾನವಾಗಿ ಒಳಗಾಗುತ್ತಾರೆ. ಕ್ಯಾಥೋಲಿಕರು ತಮ್ಮ ಚರ್ಚಿನಲ್ಲಿ ಈ ವ್ಯವಸ್ಥೆಯನ್ನು ತೀರಾ ಕಠಿಣವಾಗಿ ಪಾಲಿಸಿಕೊಂಡು ಬಂದಿದ್ದರು. ಚರ್ಚಿನಿಂದ ಹೊರಗೆ ರಿಲಿಜನ್ನಿನ ಆಚರಣೆಗಳನ್ನು ನಡೆಸುವ ಕಲ್ಪನೆಯೇ ಇರಲಿಲ್ಲ.

               ೧೬ನೆಯ ಶತಮಾನದಲ್ಲಿ ಕ್ಯಾಥೋಲಿಕರ ವಿರುದ್ಧ ಸಮರ ಸಾರಿದ ಪ್ರೊಟೆಸ್ಟಾಂಟರು ಮೊದಲು ಹಲ್ಲೆ ಮಾಡಿದ್ದು ಈ ಪ್ರೀಸ್ಟ್‌ಹುಡ್ ಮೇಲೆ. ಮಾರ್ಟಿನ್ ಲೂಥರ್ ಈ ಚಳವಳಿ ಯ ಮುಂದಾಳುವಾಗಿದ್ದನು. ಅವನು ಬೈಬಲ್ಲಿನ ಹೊಸ ಒಡಂಬಡಿಕೆಯ ಭಾಗಗಳನ್ನು ಆಧರಿಸಿ ಪ್ರೀಸ್ಟ್‌ಹುಡ್‌ನ ಕಲ್ಪನೆಯನ್ನು ಮರುನಿರೂಪಿಸಿದನು. ಆ ಪ್ರಕಾರ ಎಲ್ಲಾ ಕ್ರೈಸ್ತರೂ ಪ್ರೀಸ್ಟ್‌ಗಳೇ ಆಗುತ್ತಾರೆ. ಆದರೆ ಕ್ಯಾಥೋಲಿಕರು ಪವಿತ್ರ ಗ್ರಂಥಕ್ಕೆ ವಿರುದ್ಧವಾಗಿ ಅದನ್ನು  ಒಂದು ಸಂಸ್ಥೆಯಾಗಿ ಬೆಳೆಸಿದ್ದರಿಂದ ಅದೊಂದು ಶೋಷಣೆಯ ಸಾಧನವಾಯಿತು. ಈ ಕ್ಯಾಥೋಲಿಕ್ ಪ್ರೀಸ್ಟ್‌ಗಳು ಕ್ರೈಸ್ತರನ್ನು ವಿಭಾಗಿಸಿ ತರತಮಗಳನ್ನು ಹುಟ್ಟುಹಾಕಿದ್ದಾರೆ, ಪವಿತ್ರಗ್ರಂಥವನ್ನು ಸಾಮಾನ್ಯರಿಂದ ದೂರ ಇಟ್ಟು ಅವರನ್ನು ಸತ್ಯದಿಂದ ವಂಚಿಸಿದ್ದಾರೆ, ಪೇಗನ್ ಆಚರಣೆಗಳನ್ನು, ಮೂರ್ತಿಪೂಜೆಯನ್ನು ಪ್ರಚಲಿತದಲ್ಲಿ ತಂದು ಸುಳ್ಳು ರಿಲಿಜನ್ನನ್ನು  ಪ್ರಚಾರ ಮಾಡಿದ್ದಾರೆ, ಎಂದೆಲ್ಲ ಲೂಥರ್ ಟೀಕಿಸಿದನು. ಅವನ ಸುಧಾರಣೆ ಎಂದರೆ ಇದನ್ನೆಲ್ಲ ತೊಡೆಯುವುದೇ ಆಗಿತ್ತು.

               ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಯ ಕುರಿತು ಬರೆಯಲಿಕ್ಕೆ ಪ್ರಾರಂಭಿಸಿದಾಗ ಈ ಮೇಲಿನ ಎರಡೂ ಸಂಗತಿಗಳೂ ಯುರೋಪಿನಲ್ಲಿ ಜರುಗಿದ್ದವು. ಅವರಿಗೆ ಭಾರತದಲ್ಲಿ ಹಿಂದೂಯಿಸಂ, ಬುದ್ಧಿಸಂ ಇತ್ಯಾದಿ ರಿಲಿಜನ್ನುಗಳಿವೆ ಎಂದು ಅನಿಸಿತು.  ಅಂದರೆ ರಿಲಿಜನ್ನಿನ ಅಂಗಗಳಾದ ಇತರ ಸಂಸ್ಥೆಗಳೂ ಇಲ್ಲಿ ಕಾಣಲೇಬೇಕು. ಈ  ರೀತಿಯಾಗಿ ಭಾವಿಸಿಕೊಂಡ ಪಾಶ್ಚಾತ್ಯರು ಹಿಂದೂಯಿಸಂಗೆ ಕೂಡ ಪ್ರೀಸ್ಟ್‌ಹುಡ್ ಇರಲೇಬೇಕೆಂದು ಹುಡುಕಿದಾಗ ಅವರಿಗೆ ಕಂಡದ್ದು ಬ್ರಾಹ್ಮಣರು. ಹಿಂದೂಯಿಸಂನ ಪವಿತ್ರ ಗ್ರಂಥ ಎಂಬುದಾಗಿ ಗುರುತಿಸಿದ ವೇದಗಳನ್ನು ಬ್ರಾಹ್ಮಣರು ಮಾತ್ರವೇ ಕಲಿಯುತ್ತಿದ್ದರು. ಅದರ ಮಂತ್ರಗಳನ್ನು ಆಧರಿಸಿ ಇತರರಿಗೆ ಪೂಜೆಯನ್ನು ನಡೆಸಿಕೊಡುತ್ತಿದ್ದರು.    ಅದರಲ್ಲೂ ಅವರು ನೋಡಿದ ಹಿಂದೂಯಿಸಂ ಅವರಿಗೆ ಕ್ಯಾಥೋಲಿಕ್ ರಿಲಿಜನ್ನಿನಂತೇ ಭ್ರಷ್ಟವಾದ ರಿಲಿಜನ್ನಾಗಿ ಕಾಣಿಸಿತು. ಹಾಗೂ ಬ್ರಾಹ್ಮಣರನ್ನು ಕ್ಯಾಥೋಲಿಕ್ ಪ್ರೀಸ್ಟ್‌ಗಳಿಗೆ  ಹೋಲಿಸಿ ಹಿಂದೂಧರ್ಮವು ಹಾಳಾಗಲು ಅವರೇ ಕಾರಣ ಎಂಬುದಾಗಿ ತರ್ಕಿಸಿದರು. ಇವರು ಉದ್ದೇಶ ಪೂರ್ವಕವಾಗಿ ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಳ್ಳಲಿಕ್ಕೆ ವೇದವನ್ನು ಉಳಿದವರಿಗೆ ನಿಷೇಧಿಸಿದ್ದಾರೆ ಎಂದುಕೊಂಡರು. ಈ ಸಂದರ್ಭದಲ್ಲೇ ಋಗ್ವೇದದ ಪುರುಷಸೂಕ್ತ ಹಾಗೂ  ಮನುಸ್ಮೃತಿಯಂಥ ಗ್ರಂಥಗಳ ಭಾಷಾಂತರಗಳು ನಡೆದವು. ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಳ್ಳಲು ಬ್ರಾಹ್ಮಣರು ಹೇಗೆ ವರ್ಣ ವಿಭಜನೆಯನ್ನು ಮಾಡಿ ಸಾಮಾಜಿಕ ತರತಮಗಳನ್ನು ಸೃಷ್ಟಿಸಿದರು ಎಂಬುದಕ್ಕೆ ಅವರಿಗೆ ಪುರಾವೆ  ಸಿಕ್ಕಿತು. ಬ್ರಾಹ್ಮಣರೇ ಭಾರತೀಯ ಸಮಾಜದಲ್ಲಿರುವ ತರತಮಗಳನ್ನು ಸೃಷ್ಟಿಸಿದವರು ಎಂಬ ನಿರ್ಣಯಕ್ಕೆ ಪಾಶ್ಚಾತ್ಯ ವಿದ್ವಾಂಸರು ಬಂದರು. ಆದರೆ ಅವರನ್ನು ಆ ಸ್ಥಾನದಲ್ಲಿ ನಿಯಮಿಸಿ ಅಧಿಕಾರವನ್ನು ನೀಡುವ ಒಂದು ಚರ್ಚಿನಂಥ ವ್ಯವಸ್ಥೆ ಹಿಂದೂಗಳಲ್ಲಿ ಇಲ್ಲವೆಂಬುದು ಅವರಿಗೆ ಕಾಣಲಿಲ್ಲ. ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಿದವರೇ ಬ್ರಾಹ್ಮಣರು ಎಂಬ ಕಥೆಯನ್ನು ಕಟ್ಟುವಾಗ ಈ ಎಲ್ಲಾ ಗ್ರಹಿಕೆಗಳೂ ಕೆಲಸಮಾಡಿವೆ.  ಪುರೋಹಿತಶಾಹಿ ಎಂಬ ಶಬ್ದವು ನಮ್ಮ ಸಂಸ್ಕೃತಿಯ ಶಬ್ದಕೋಶಕ್ಕೆ ಸೇರಿಲ್ಲ ಅಷ್ಟೇ ಅಲ್ಲ, ಅದು ಕೇವಲ ಪ್ರೀಸ್ಟ್‌ಹುಡ್ ಎಂಬ ಶಬ್ದದ ಭಾಷಾಂತರವೂ ಅಲ್ಲ. ಇಡೀ ಕ್ಯಾಥೋಲಿಕ್ ಚರ್ಚ್ ವ್ಯವಸ್ಥೆಯ ಕುರಿತು ಪ್ರೊಟೆಸ್ಟಾಂಟರ ಟೀಕೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಮಾತ್ರವೇ ಪುರೋಹಿತಶಾಹಿ ಎಂಬ ಭಾಷಾಂತರವು ಅರ್ಥವಾಗಲು ಸಾಧ್ಯ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

1 comment

V R Kulkarni June 15, 2023 - 9:48 pm

‘ಬ್ರಾಹ್ಮಣಶಾಹಿಯ’ ಕುರಿತ ತಮ್ಮ ಆಲೋಚನೆಗಳು ಐತಿಹಾಸಿಕವಾಗಿ ಸತ್ಯ ಮತ್ತು ತರ್ಕಬದ್ಧವಾಗಿವೆ. ಆದರೆ ತಾವು ದಲಿತರ ಪ್ರತಿನಿಧಿಗಳು ಎಂದು ಕರೆದುಕೊಳ್ಳುವವರು ಮತ್ತು ಎಡಪಂಥಿಯರ ತುಂಬ ಬಲವಾಗಿದೆ. ಒಂದು ರೀತಿಯಲ್ಲಿ ಇದು ಸರ್ಕಾರಗಳಿಂದ ಹಣ ದೋಚುವ ಲಾಭದಾಯಕ ಉದ್ದಿಮೆಯಾಗಿಗೆ.

Reply

Leave a Comment

Message Us on WhatsApp