Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಭಾರತೀಯ ಸಂಸ್ಕೃತಿಯಲ್ಲಿ ಡೆವಿಲ್ ಅಥವಾ ಈವಿಲ್ ಎಂಬ ಪರಿಕಲ್ಪನೆ ಇರಲಿಕ್ಕೆ ಸಾಧ್ಯವೆ?

ಭಾರತೀಯ ಸಂಸ್ಕೃತಿಯಲ್ಲಿ ಡೆವಿಲ್ ಅಥವಾ ಈವಿಲ್ ಎಂಬ ಪರಿಕಲ್ಪನೆ ಇರಲಿಕ್ಕೆ ಸಾಧ್ಯವೆ?

by Rajaram Hegde
29 views

ಕ್ರಿಶ್ಚಿಯಾನಿಟಿಯಲ್ಲಿ ಗಾಡ್ ಮತ್ತು ಡೆವಿಲ್ ಎಂಬ ಪರಸ್ಪರ ವಿರುದ್ಧವದ ಶಕ್ತಿಗಳು ಇವೆ. ಗಾಡ್ ಒಳ್ಳೆಯದರ (ಗುಡ್) ಸಾಕಾರಮೂರ್ತಿ, ಡೆವಿಲ್ ಕೆಡುಕಿನ (ಈವಿಲ್) ಸಾಕಾರಮೂರ್ತಿ. ಒಳ್ಳೆಯದು ಮತ್ತು ಕೆಡುಕು ಒಂದಿದ್ದಲ್ಲಿ ಒಂದಿರುವುದಿಲ್ಲ. ಭಾರತೀಯರಿಗೆ ಈ ಪರಿಕಲ್ಪನೆ ಇಲ್ಲ.

ಈವಿಲ್ ಎಂದರೆ ಸದಾ ಕೆಡುಕನ್ನೇ ಬಯಸುವ ಪರಿಪೂರ್ಣ ದುಷ್ಟ ಶಕ್ತಿ. ಈ ಶಕ್ತಿಯು ಡೆವಿಲ್ ಎಂಬವನಲ್ಲಿ ಸಾಕಾರವಾಗಿದೆ. ಈ ಪ್ರಪಂಚವನ್ನು ಸೃಷ್ಟಿಸಿದ ಗಾಡ್ ಪರಿಪೂರ್ಣನಾಗಿ ಒಳ್ಳೆಯವನು. ಅವನಿಗೆ ತದ್ವಿರುದ್ಧನಾದವನು ಡೆವಿಲ್. ಇಸ್ಲಾಂ ರಿಲಿಜನ್ನಿನಲ್ಲಿ ಅವನೇ ಶೈತಾನ. ಅವನು ಒಳ್ಳೆಯದನ್ನು ಸದಾ ವಿರೋಧಿಸುತ್ತಿರುವವನು. ಗಾಡ್ ಹಾಗೂ ಒಳಿತಿನ ವಿರುದ್ಧ ದಿಕ್ಕಿನತ್ತ ಈ ಪ್ರಪಂಚದಲ್ಲಿನ ಜನರನ್ನು ಎಳೆಯುತ್ತಿರುವ ಪ್ರೇರಣೆಯಾಗಿದ್ದಾನೆ. ಅವನು ಗಾಡ್‌ನ ವಿರೋಧಿಯಾಗಿದ್ದು ಜನರು ಗಾಡ್‌ನ ಪ್ರಭಾವಕ್ಕೆ ಒಳಗಾಗದಂತೆ, ಗಾಡ್‌ನನ್ನು ಸೇರದಂತೆ ತಡೆಯುವುದೇ ಅವನ ಕೆಲಸ. ಜನರ ತಲೆಕೆಡಿಸಿ, ದಾರಿ ತಪ್ಪಿಸಿ ಅವರು ಪಾಪವನ್ನು ಎಸಗುವಂತೆ ಮಾಡುವುದು ಅವನ ಹುನ್ನಾರ  ಹಾಗೂ ಕುತಂತ್ರವಾಗಿದೆ.

ಹಾಗಾಗಿ ಪಾಪವನ್ನು ಎಸಗುವ ಮಾನವರು ಇಂಥ ಈವಿಲ್‌ನಿಂದ ಪ್ರಭಾವಿತರಾಗಿರುತ್ತಾರೆ ಎಂಬುದಾಗಿ ಸೆಮೆಟಿಕ್ ರಿಲಿಜನ್ನುಗಳು ಸಾರುತ್ತವೆ. ಹೀಗೆ ಸೆಮೆಟಿಕ್ ಥಿಯಾಲಜಿಯಲ್ಲಿ ಒಳ್ಳೆಯ ಹಾಗೂ ಕೆಟ್ಟ ಶಕ್ತಿಗಳನ್ನು ಗುರುತಿಸುವುದು ಕಪ್ಪು ಬಿಳುಪುಗಳಷ್ಟು ಗೆರೆ ಕೊರೆದಂತೇ ನಿಚ್ಚಳವಾಗಿದೆ. ಸೆಮೆಟಿಕ್ ರಿಲಿಜನ್ನುಗಳನ್ನಾಧರಿಸಿ ರೂಪುಗೊಂಡ ಸಂಸ್ಕೃತಿಗಳಲ್ಲಿ  ಗಾಡ್ ಹಾಗೂ ಡೆವಿಲ್/ಶೈತಾನನ ತದ್ವಿರುದ್ಧ ಕಲ್ಪನೆಯ ಮಾದರಿಯಲ್ಲೇ ಒಳ್ಳೆಯದು ಹಾಗೂ ಕೆಟ್ಟದ್ದನ್ನು ವಿಭಜನೆ ಮಾಡಿ ಗ್ರಹಿಸುವುದು ಕೂಡಾ ಸಹಜವಾಗಿದೆ.

ಸೆಮೆಟಿಕ್ ಥಿಯಾಲಜಿಯ ಪರಿಕಲ್ಪನೆಗಳಿಗೆ ಸೆಕ್ಯುಲರ್ ರೂಪವನ್ನು ನೀಡಿ ಅದನ್ನಾಧರಿಸಿ ಬೆಳೆದ ಆಧುನಿಕ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಈ ಗಾಡ್/ಡೆವಿಲ್ ಪಾತ್ರಗಳು ರಿಲಿಜನ್ನಿನ ಪಳೆಯುಳಿಕೆಗಳಾಗಿ ಅಪ್ರಸ್ತುತವಾಗಿವೆ ಎಂಬುದೇನೋ ನಿಜ. ಆದರೆ ವಾಸ್ತವ ಬೇರೆಯೇ ಇದೆ. ಕೇವಲ ಈ ಥಿಯಾಲಜಿಯಲ್ಲಿ ಬರುವ ಕಥೆ ಹಾಗೂ ಹೆಸರುಗಳನ್ನಷ್ಟೇ ಕೈಬಿಡಲಾಗಿದೆ. ಅವುಗಳಿಗೆ ಬದಲಾಗಿ ಗುಡ್ ಹಾಗೂ ಈವಿಲ್‌ಗಳ ಕಲ್ಪನೆ ಬಹು ಆಳವಾಗಿ ಈ ಆಧುನಿಕರ ಸಾಮಾನ್ಯ ಜ್ಞಾನದಲ್ಲಿ ಹಾಗೂ ನೈತಿಕ ಜಿಜ್ಞಾಸೆಗಳಲ್ಲಿ ಬೇರೂರಿವೆ.

ಮನುಷ್ಯನ ಕೆಟ್ಟ ಕೆಲಸಗಳು ಈವಿಲ್‌ನಿಂದ ಪ್ರೇರಿತವಾಗಿವೆ. ಅದು ಮನುಷ್ಯನನ್ನು ಕಬಳಿಸಿ ಅವನನ್ನು ದುರಂತಕ್ಕೆ ತಳ್ಳುತ್ತದೆ. ಈ ಗುಣವನ್ನು ವ್ಯಕ್ತಿಯಲ್ಲಾಗಲೀ ಸಮುದಾಯದಲ್ಲಾಗಲೀ ಗುರುತಿಸಿದಾಗ ಆ ವ್ಯಕ್ತಿ ಅಥವಾ ಇಡೀ ಸಮುದಾಯದ ಮೂಲಕ ಈವಿಲ್ ವ್ಯವಸ್ಥಿತವಾಗಿ ಮನುಷ್ಯರ ಒಳಿತಿಗೆ ವಿರೋಧಿಯಾಗಿ ಕೆಲಸಮಾಡುತ್ತಿದೆ ಎಂಬ ತರ್ಕವು ಹುಟ್ಟಲು ಆಸ್ಪದವಾಗುತ್ತದೆ. ಅಂಥವರ ಕುರಿತು ಕೊನೆಯಿಲ್ಲದ ಭಯ ಹಾಗೂ ಆತಂಕವನ್ನು ಸೃಷ್ಟಿಸುತ್ತದೆ. ಅವರ ಮೂಲಕ ಈವಿಲ್‌ನ ಪ್ರಳಯಾಂತಕ ಹುನ್ನಾರಗಳು ಯಾವ ಸಮಯದಲ್ಲಿ, ಯಾವ ರೂಪದಲ್ಲಿ ದಾಳಿ ಮಾಡುತ್ತವೆ ಎನ್ನಲಿಕ್ಕೆ ಬರುವಂತಿಲ್ಲ. ಅದು ನಾವು ಹಿಮ್ಮೆಟ್ಟಿಸಬೇಕಾದ, ಹೊಡೆದೋಡಿಸಬೇಕಾದ ಒಂದು ಶಕ್ತಿಯಾಗಿರುವುದರಿಂದ  ಅಂಥವರ ನಾಶಕ್ಕಾಗಿ ಎಷ್ಟೇ ಹಿಂಸೆಯಾಗಲೀ, ಮಾರಣ ಹೋಮವಾಗಲಿ, ಅದು ಒಳಿತೇ ಆಗಿರುತ್ತದೆ. ಸೆಮೆಟಿಕ್ ಸಂಸ್ಕೃತಿಗಳಲ್ಲಿ ರಿಲಿಜನ್ನಿನ ಹೆಸರಿನಲ್ಲಿ, ಸಿದ್ಧಾಂತಗಳ ಹೆಸರಿನಲ್ಲಿ ನಡೆದ ಮಾರಣ ಹೋಮಗಳೆಲ್ಲದರ ಹಿಂದೆ ಈ ಸದಭಿಲಾಷೆ, ಭಯ ಹಾಗೂ ಆತಂಕಗಳು ಕೆಲಸಮಾಡಿವೆ. ಒಳಿತು ಹಾಗೂ ಕೆಡುಕುಗಳ ಕಪ್ಪು ಬಿಳುಪು ಚಿತ್ರಗಳನ್ನು ಸಾಮಾನ್ಯ ಜ್ಞಾನವಾಗಿ ಹೊಂದಿದ ಸಂಸ್ಕೃತಿಗಳ ಲೋಕದೃಷ್ಟಿಗೆ ಇಂತಹ ಧೋರಣೆಗಳೂ ಸಹಜ.

          ವಸಾಹತು ಕಾಲದಲ್ಲಿ ಈವಿಲ್‌ನ ಈ ರಿಲಿಜಿಯಸ್ ಹಾಗೂ ಸೆಕ್ಯುಲರ್ ಆವೃತ್ತಿಗಳೆರಡೂ ಭಾರತೀಯ ಸಮಾಜದ ಚಿತ್ರಣಗಳಲ್ಲೂ ಸಹಜವಾಗಿಯೇ ಪ್ರಸ್ತುತತೆ ಪಡೆದವು. ಭಾರತೀಯರ ರಿಲಿಜನ್ನು ಸುಳ್ಳು ರಿಲಿಜನ್ನು ಎಂಬುದಾಗಿ ಕ್ರೈಸ್ತ ಮಿಶನರಿಗಳು ಚಿತ್ರಿಸಿದಾಗ ಇವರು ಡೆವಿಲ್‌ನ ವಶವರ್ತಿಗಳಾಗಿ ಭ್ರಷ್ಟರಾಗಿದ್ದಾರೆ, ಸ್ವರ್ಗದಿಂದ ವಂಚಿತರಾಗಿದ್ದಾರೆ ಎಂಬ ಇಂಗಿತವು ಸ್ಪಷ್ಟವಾಗಿಯೇ ಇತ್ತು. ಅದರಲ್ಲೂ ಪ್ರೊಟೆಸ್ಟಾಂಟರು ಹಿಂದೂಯಿಸಂಅನ್ನು ಕ್ಯಾಥೋಲಿಕ್ ಪಂಥಕ್ಕೆ ಸಮೀಕರಿಸಿದರು. ಕ್ಯಾಥೋಲಿಕರಂತೇ ಇಲ್ಲಿನ ಪುರೋಹಿತಶಾಹಿಗಳು ಕೂಡಾ ಡೆವಿಲ್‌ನ ವಶವಾಗಿ ರಿಲಿಜನ್ನನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂಬ ಎಚ್ಚರಿಕೆಯನ್ನು ನೀಡಿದರು.

 ಸೆಕ್ಯುಲರ್ ಪ್ರಗತಿವಾದೀ ಕಥನದಲ್ಲಿ ರಿಲಿಜನ್ನಿನಾದಿಯಾಗಿ ಜಗತ್ತಿನ ಎಲ್ಲಾ ಸಂಪ್ರದಾಯವಾದೀ ಶಕ್ತಿಗಳೂ ಮನುಕುಲವನ್ನು ಏಳ್ಗೆಯಿಂದ ಹಿಂಜಗ್ಗುವ ಹುನ್ನಾರಗಳಂತೇ ಚಿತ್ರಿತವಾದವು. ಭಾರತೀಯ ಸಂಸ್ಕೃತಿಯಲ್ಲಿ ಕೂಡ ಈವಿಲ್ ತನ್ನ ಕರಾಮತ್ತು ತೋರಿಸಬಲ್ಲದು ಎಂಬ ಧೋರಣೆ ಬೆಳೆಯಿತು. ಆದರೆ ಈ ತೀರ್ಮಾನಕ್ಕೆ ಬರುವ ಮೊದಲು ಸ್ವಲ್ಪ ಯೋಚಿಸುವ ಅಗತ್ಯವಿದೆ. ಏಕೆಂದರೆ ನಮ್ಮಲ್ಲಿ ಡೆವಿಲ್‌ಎಂಬ ಪರಿಕಲ್ಪನೆಯೇ ಕಂಡುಬರುವುದಿಲ್ಲ, ಹಾಗಾಗಿ ಅವನಿಂದಲೇ ಹುಟ್ಟಬಹುದಾದ ಈವಿಲ್ ಕೂಡ ಇರಲಿಕ್ಕೆ ಸಾಧ್ಯವಿಲ್ಲ. 

 ನಮ್ಮಲ್ಲಿ ಡೆವಿಲ್‌ನಿಗೆ ಸಮಾನವಾದ ಪರಿಕಲ್ಪನೆ ಇಲ್ಲ ಎಂದಾಕ್ಷಣ ಆಕ್ಷೇಪಣೆಗಳು ಏಳಬಹುದು. ನಮ್ಮ ದೈತ್ಯರು, ರಾಕ್ಷಸರೆಲ್ಲ ಯಾರು? ನಮ್ಮ ಪುರಾಣಗಳ ತುಂಬೆಲ್ಲ ಒಂದಿಲ್ಲೊಂದು ದೈತ್ಯರು, ದಾನವರು, ಅಸುರರು ಅಥವಾ ರಾಕ್ಷಸರು ಅನ್ನಿಸಿಕೊಂಡವರು ದೇವತೆಗಳಿಗೆ ಉಪಟಳ ನೀಡುತ್ತಲೇ ಇರುವುದನ್ನು ಕಾಣುತ್ತೇವೆ. ಅವರ ರಾಜರು ದೇವೇಂದ್ರನ ಸಿಂಹಾಸನಕ್ಕೆ ಲಗ್ಗೆ ಹಾಕುತ್ತಲೇ ಇರುತ್ತಾರೆ. ಸ್ವರ್ಗದ ಒಡೆತನಕ್ಕಾಗಿ ದೇವಾಸುರರದು ಮುಗಿಯದ ಯುದ್ಧ. ಅಸುರರ ವಿನಾಶಕ್ಕೆ ಒಂದು ಮುಕ್ತಾಯವೆಂಬುದಿಲ್ಲ. ರಕ್ತಬೀಜಾಸುರನ ರಕ್ತದ ಹನಿ ಬಿದ್ದಲ್ಲೆಲ್ಲ ಹೊಸ ರಾಕ್ಷಸರು ಹುಟ್ಟುತ್ತಿದ್ದರು. ಅಸುರರೂ ಮೃತ ಸಂಜೀವಿನಿಯಂಥ ವಿದ್ಯೆಗಳನ್ನು ಕಲಿತು ದೇವತೆಗಳಿಗೆ ಸೆಡ್ಡು ಹೊಡೆಯುತ್ತಿದ್ದರು. ಅವರು ಮಹಾ ಮಾಯಾವಿಗಳಾಗಿದ್ದು ಹೊಸ ಹೊಸ ರೂಪಗಳಲ್ಲಿ ದೇವತೆಗಳಿಗೆ ಪೀಡೆ ಕೊಡುತ್ತಿದ್ದರು.

ನಮ್ಮ ಪೌರಾಣಿಕ ದೇವತೆಗಳಾದ ವಿಷ್ಣು, ಶಿವ, ರಾಮ, ಕೃಷ್ಣ, ಗಣಪತಿ, ಕುಮಾರ, ದುರ್ಗೆ, ಇತ್ಯಾದಿ ದೇವತೆಗಳು ಇಂಥ ಅಸುರ ಸಂಹಾರವನ್ನು ನಡೆಸಲಿಕ್ಕೇ ವಿಭಿನ್ನ ರೂಪಗಳನ್ನು ತಳೆದು ಬಂದವರು. ಪುರಾಣಗಳಲ್ಲಿ ಬರುವ ರಾಕ್ಷಸರಂತೂ ಭಯಂಕರವಾಗಿ, ಅಕರಾಳ ವಿಕರಾಳವಾಗಿ ಚಿತ್ರಿತರಾಗಿರುತ್ತಾರೆ. ಭಾರತೀಯ ಶಿಲ್ಪಗಳಲ್ಲೂ ಕೂಡ ಕೋರೆದಾಡೆಗಳನ್ನು ಹೊಂದಿ, ಕಣ್ಣುಗುಡ್ಡೆಗಳನ್ನು ಹೊರಚಾಚಿಕೊಂಡು, ಬೀಭತ್ಸ ರೂಪಿನಿಂದ ಕೂಡಿದ ಅಸುರರು ದೇವತೆಗಳಿಂದ ವಧೆಯಾಗುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಕಾರ್ಟೂನು, ನಾಟಕ, ಸಿನೀಮಾಗಳಂಥ ಮಾಧ್ಯಮಗಳಲ್ಲಿ ಕೂಡ ರಾಕ್ಷಸರೆಂದರೆ ನೋಡಿದ ತಕ್ಷಣ ಗುರುತಿಸುವಂತೆ ಭೀಕರವಾಗಿರುತ್ತಾರೆ. ಕರಿಗಪ್ಪು ಬಣ್ಣ, ದೊಡ್ಡ ಮೀಸೆ, ಬಿಲದಂತಹ ಮೂಗಿನ ಹೊಳ್ಳೆಗಳು, ಕೋರೆ ಹಲ್ಲುಗಳು, ಭಯಾನಕ ನಗು, ಕರ್ಕಶ ಧ್ವನಿ, ರೋಮಭರಿತ ದೇಹ, ಇತ್ಯಾದಿಗಳು ಅವರ ಸಾಮಾನ್ಯ ಲಕ್ಷಣಗಳು.

ಆಸುರೀ ಗುಣ ಅಥವಾ ಪೃವೃತ್ತಿ ಕೆಟ್ಟದ್ದು ಎಂಬ ಕಲ್ಪನೆ ನಮ್ಮಲ್ಲಿತ್ತು. ಹಾಗೂ ಆ ಕಾರಣಕ್ಕೇ ಅವರನ್ನು ದೇವಲೋಕದಿಂದ ಹೊರದಬ್ಬಲಾಗುತ್ತಿತ್ತು ಎಂಬುದಾಗಿ ನಮ್ಮ ಪುರಾಣಗಳು ತಿಳಿಸುತ್ತವೆ. ಈ ಗುಣಗಳ ಪ್ರೇರಣೆಯಿಂದಾಗಿಯೇ ದುರ್ಯೋಧನಾದಿಗಳು ಅಧರ್ಮದಿಂದ ನಡೆದುಕೊಂಡರು ಎಂಬುದಾಗಿ ಮಹಾಭಾರತವು ತಿಳಿಸುತ್ತದೆ. ಹಾಗಾಗಿ ಗಾಡ್ ಎನ್ನುವ ಪದವನ್ನು ದೇವ ಎಂದು ಭಾಷಾಂತರಿಸಿದಾಗ ಸಹಜವಾಗಿಯೇ ಅವರ ವಿರೋಧಿಗಳಾಗ ಈ ಶಕ್ತಿಗಳೆಲ್ಲ ಡೆವಿಲ್‌ನ ಪ್ರತಿರೂಪಗಳು ಎಂದು ಗುರುತಿಸುವ ಚಪಲ ಹುಟ್ಟುತ್ತದೆ. ಆದರೆ ದೇವ ಎನ್ನುವುದ ಹೇಗೆ ಗಾಡ್ ಆಗಲಿಕ್ಕೆ ಸಾಧ್ಯವಿಲ್ಲವೋ ಹಾಗೇ ಈ ಶಕ್ತಿಗಳೂ ಕೂಡ ಡೆವಿಲ್‌ಗಳಾಗಲಿಕ್ಕೆ ಸಾಧ್ಯವಿಲ್ಲ ಎಂಬುದು ಈ ಕೆಳಗಿನ ವಿವರಗಳನ್ನು ಗಮನಿಸಿದಾಗ ಹೊಳೆಯುವ ಸಂಗತಿ:

 ನಮ್ಮ ಪುರಾಣಗಳ ಪ್ರಕಾರ ದೈತ್ಯರು ಹಾಗೂ ದೇವತೆಗಳು ಕಶ್ಯಪನ ಹೆಂಡತಿಯರಾದ ದಿತಿ ಹಾಗೂ ಅದಿತಿಯರ ಮಕ್ಕಳು. ಅಂದರೆ ಒಂದೇ ತಂದೆಯಿಂದ ಜನ್ಮ ಪಡೆದವರು. ಹಾಗಾಗಿ ದೈತ್ಯರಿಗೂ ದೇವತೆಗಳಿಗೂ ನಿರಂತರ ಯುದ್ಧಗಳಾಗುತ್ತಿದ್ದರೂ ಅದು ದಾಯಾದಿ ಕಲಹದಂತೆ ಕಂಡುಬರುತ್ತದೆ. ಅವರಲ್ಲಿ ಅನೇಕರು ಬ್ರಹ್ಮನನ್ನು ತಪಸ್ಸಿನಿಂದ ಒಲಿಸಿಕೊಂಡು ದೇವತೆಗಳಿಗೆ ಅಜೇಯರಾಗುವಂಥ ವರವನ್ನು ಪಡೆದಿರುತ್ತಿದ್ದರು. ಅಂಥ ವರಗಳ ಬಲದಿಂದಲೇ ದೇವತೆಗಳ ಮೇಲೆ ವಿಜಯವನ್ನು ಪಡೆದು ಅವರಿಗೆ ತೊಂದರೆ ಕೊಡುತ್ತಿದ್ದರು. ಈ ದೌರ್ಜನ್ಯವು ಮಿತಿಮೀರಿದಾಗ ಬ್ರಹ್ಮನಾದಿಯಾಗಿ ಎಲ್ಲ ದೇವತೆಗಳೂ ಸೇರಿಕೊಂಡು ಅಂಥವರನ್ನು ವಧಿಸುವ ಉಪಾಯವನ್ನು ಕಂಡುಹಿಡಿಯುತ್ತಿದ್ದರು. ಸಾಧಾರಣವಾಗಿ ತಾವೇ ನೀಡಿದ ಅಂಥ ವರಗಳಲ್ಲಿನ ತಾಂತ್ರಿಕ ದೋಷಗಳನ್ನು ಕಂಡುಹಿಡಿದು ದೈತ್ಯರನ್ನು ಹಣಿಯುತ್ತಿದ್ದರು. ಉದಾಹರಣೆಗೆ ತನಗೆ ಯಾವ ದೇವತೆಗಳಿಂದಲೂ ಮರಣ ಬರಬಾರದು ಎಂಬುದಾಗಿ ಒಬ್ಬ ದೈತ್ಯನು ವರ ಪಡೆದಿದ್ದರೆ ಮನುಷ್ಯನೊಬ್ಬನ ಮೂಲಕ ಅವನನ್ನು ಕೊಲ್ಲಿಸುವುದು. ವರವೂ ಸುಳ್ಳಾಗುತ್ತಿರಲಿಲ್ಲ, ದೈತ್ಯನ ವಧೆಯ ಸಾಧ್ಯತೆಯೂ ತೆರೆಯುತ್ತಿತ್ತು.  ಮಹಾ ಧರ್ಮಿಷ್ಠನಾದ ಬಲಿಯನ್ನು ವಧಿಸುವಾಗ ವಿಷ್ಣುವು ವಾಮನನಾಗಿ ಬಂದು ಮೂರು ಹೆಜ್ಜೆಗಳನ್ನು ಬೇಡಿದನು. ತ್ರಿವಿಕ್ರಮನಾಗಿ ಬೆಳೆದು ಬಲಿಯನ್ನು ಧರ್ಮಭ್ರಷ್ಟನನ್ನಾಗಿ ಮಾಡಿ ಅವನನ್ನು ಮೆಟ್ಟಿ ಪಾತಾಳಕ್ಕೆ ತಳ್ಳಿದನು. ಈ ರೀತಿಯಾಗಿ ದೇವತೆಗಳು ಉಪಾಯದಿಂದ, ಕುತಂತ್ರದಿಂದ ಅಸುರರನ್ನು ಸಂಹರಿಸುವ ಕಥೆಗಳನ್ನು ನೋಡಿದರೆ ದೈತ್ಯರೇ ಸತ್ಯನಿಷ್ಠರೂ, ಪ್ರಾಮಾಣಿಕರೂ ಆಗಿ ಕಂಡುಬಿಡುತ್ತಾರೆ. ಇವರು ಈವಿಲ್ ಆಗಲಿಕ್ಕಂತೂ ಸಾಧ್ಯವಿಲ್ಲ.

ಇನ್ನು ಈ ಅಸುರರ ಕುಲವೂ ಒಂದು ಅಖಂಡ ದುಷ್ಟಕೂಟವಲ್ಲ. ಅವರಲ್ಲಿ ಹಲವರು ಮಹಾ ವಿದ್ವಾಂಸರಾಗಿರುತ್ತಾರೆ. ಸಕಲ ಕಲಾವಲ್ಲಭರಾಗಿರುತ್ತಾರೆ. ಅವರ ತಪಸ್ಸಿಗೆ ಮೂರು ಲೋಕಗಳೂ ನಡುಗುತ್ತವೆ. ರಾವಣನು ಮಹಾ ಶಿವಭಕ್ತ. ತನ್ನ ತಾಯಿಯ ಪೂಜೆಗೆ ಶಿವನ ಆತ್ಮಲಿಂಗವನ್ನೇ ತರಲು ಹೊರಟವನು. ಅವನು ಒಬ್ಬ ಬ್ರಾಹ್ಮಣನಾಗಿದ್ದನು. ಆದರೆ ಅವನಿಗೆ ಸಂಧ್ಯಾವಂದನೆಯ ನೇಮವಿದ್ದುದೇ ಕುತ್ತಾಯಿತು. ಅವನನ್ನು ಅದರ ಮೂಲಕವೇ ವಂಚಿಸಿ ಅವನು ಆತ್ಮಲಿಂಗವನ್ನು ಹೊತ್ತೊಯ್ಯುವುದನ್ನು ತಡೆಯಲಾಯಿತು. ಪ್ರಹ್ಲಾದನು ಹಿರಣ್ಯಕಶಿಪು ಎಂಬ ದೈತ್ಯನ ಮಗ. ಅಪ್ಪನು ಶಿವಭಕ್ತ. ಆದರೆ ಪ್ರಹ್ಲಾದನು ಪರಮ ಭಾಗವತ. ದೈತ್ಯನ ಮಗನಾದರೂ ಅವನು ಭಗವಂತನ ನಾಮಸ್ಮರಣೆ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ದುಷ್ಟ ಯೋಚನೆಯನ್ನು ಹೊಂದಿದಂತೆ ಕಾಣುವುದಿಲ್ಲ.     

ದೈತ್ಯರಿಗೆ ಇಂದ್ರಾದಿ ದೇವತೆಗಳ ಜೊತೆಗೆ ವೈರವಿತ್ತೇ ವಿನಃ ಅವರಿಗಿಂತಲೂ ಮೇಲಿನ ದೇವತೆಗಳ ಜೊತೆಗಲ್ಲ. ಬ್ರಹ್ಮ ವಿಷ್ಣು ಹಾಗೂ ಮಹೇಶ್ವರ ಎಂಬೀ ಪರಂದೈವಗಳು ದೈತ್ಯರ ಜೊತೆಗೆ ಇಟ್ಟುಕೊಂಡ ಸಂಬಂಧ ವೈರತ್ವದ್ದಲ್ಲ, ಬದಲಾಗಿ ಭಕ್ತ ಭಗವಂತರದ್ದು. ಅಸುರರು ಅವರಲ್ಲಿ ಒಬ್ಬಿಲ್ಲೊಬ್ಬರ ಭಕ್ತರಾಗಿರುತ್ತಿದ್ದರು. ತಮ್ಮ ಭಕ್ತರಿಗೆ ವರ ನೀಡಿ ಇಂದ್ರಾದಿ ದೇವತೆಗಳ ಪಾಲಿಗೆ ದೊಡ್ಡ ಆವಾಂತರಗಳನ್ನು ಸೃಷ್ಟಿಸುವುದು, ಹಾಗೂ ನಂತರ ಅದನ್ನು ಬಗೆಹರಿಸುವುದು ಇಂಥ ಪರಂದೈವಗಳ ಲೀಲೆಯ ಒಂದು ಭಾಗವೇ ಆಗಿತ್ತು. ವಿಷ್ಣು ಬಲಿಯನ್ನು ಮೆಟ್ಟಿ ಪಾತಾಳಕ್ಕೆ ಕಳುಹಿಸಿದರೂ ಕೂಡ, ಬಲಿಯು ತನ್ನ ಪರಮ ಭಕ್ತನೆಂಬುದನ್ನು ಮರೆಯಲಿಲ್ಲ.  ಬಲಿಗೆ ಭವಿಷ್ಯದ ಇಂದ್ರ ಪದವಿಯನ್ನು ಕರುಣಿಸುವುದೊಂದೇ ಅಲ್ಲದೇ ಪಾತಾಳದಲ್ಲಿ ಅವನ ಅರಮನೆಯ ಬಾಗಿಲನ್ನು ಕಾಯುವ ದೂತನೂ ಆಗುತ್ತಾನೆ. ಭಾಗವತ ಪುರಾಣದ ಪ್ರಕಾರ ವಿಷ್ಣುವನ್ನು ಸೇರಲು ಭಕ್ತನಾಗಲೇಬೇಕೆಂದಿಲ್ಲ. ದೈತ್ಯನಾಗಿ ಅವನ ವಿರುದ್ಧ ಹೋರಾಡುವುದೂ ಒಂದು ಮಾರ್ಗ. ಅವನ  ಅವತಾರಗಳ ಜೊತೆಗೆ ಹೋರಾಡಿದ ದೈತ್ಯರೆಲ್ಲ ಅವನನ್ನೇ ಸೇರುವ ಉದ್ದೇಶದಿಂದ ಅವತಾರವೆತ್ತಿದ ಜಯವಿಜಯರೆಂಬ ಕಿಂಕರರಾಗಿದ್ದರು. ಶಿವನಂತೂ ಇಂಥ ಅನೇಕ ಹೆಸರಾಂತ ದೈತ್ಯರಿಗೆ ಅತ್ಯಂತ ಪ್ರಿಯ ದೈವವಾಗಿದ್ದನು. ಈ ನಿಟ್ಟಿನಿಂದ ನೋಡಿದಾಗ ಇಂಥ ಅಸುರರು ದೇವತೆಗಳ ಭಕ್ತರಂತೇ ಕಾಣಿಸುತ್ತಾರೆಯೇ ವಿನಃ ವೈರಿಗಳಂತಲ್ಲ.

ಇತ್ತ ದೇವತೆಗಳನ್ನೊಮ್ಮೆ ಸ್ವಲ್ಪ ಲಕ್ಷ್ಯಕೊಟ್ಟು ನೋಡಿದರೆ ಮತ್ತೊಂದು ವಿಶೇಷ ಕಾಣಿಸುತ್ತದೆ. ಕಾಳಿ, ಮಾರಿ, ಇತ್ಯಾದಿ ಮಾತೃದೇವತಾಗಣಗಳು, ಭೈರವ, ನರಸಿಂಹ ಇತ್ಯಾದಿ ದೇವತೆಗಳು, ಶಿವನ ಗಣಗಳು ಇವರನ್ನೆಲ್ಲ ಗಮನಿಸಿ. ಈ ಹಿಂದೆ ವಿವರಿಸಿದ ಪೌರಾಣಿಕ ರಾಕ್ಷಸರ ರೂಪುಗಳಿಗಿಂತ ಅವರು ಹೇಗೆ ಭಿನ್ನರು ಎಂಬುದೇ ಗೊತ್ತಾಗುವುದಿಲ್ಲ. ಕೋರೆದಾಡೆಗಳ ನಡುವೆ ರಕ್ತ ಸಿಕ್ತ ನಾಲಿಗೆಯನ್ನು ಎದೆಯವರೆಗೆ ಜೋಲಿಸಿ, ರುಂಡಮಾಲೆಯನ್ನು ಧರಿಸಿ, ರಕ್ತ ತೊಟ್ಟಿಕ್ಕುವ ಮಾನವ ರುಂಡದ ಜುಟ್ಟು ಹಿಡಿದು ನೇತಾಡಿಸಿ, ತನ್ನ ಗಂಡನ ಶವದ ಮೇಲೇ ನರ್ತಿಸುತ್ತಿರುವ ಮಹಾಕಾಳಿ ಅಂಥದೊಂದು ಉದಾಹರಣೆ. ಇಂಥ ದೇವತೆಗಳನ್ನು ಯಾರೂ ರಾಕ್ಷಸರೆಂಬುದಾಗಿ ಅಪಾರ್ಥ ಮಾಡಿಕೊಳ್ಳುವುದಿಲ್ಲ. ಅಂದರೆ ನಮ್ಮ ದೇವತೆಗಳಲ್ಲಿ ಕೂಡ ತಾಮಸ ರೂಪಗಳಿವೆ. ಇಂಥ ರೂಪವು ತಾಮಸ ಪೃವೃತ್ತಿಯ ಲಕ್ಷಣವೇ ಹೊರತೂ ಅಸುರರ ಅಥವಾ ದೇವತೆಗಳ ಲಕ್ಷಣವಲ್ಲ. ಅಸುರರಲ್ಲೂ ಸಾತ್ವಿಕ ರೂಪಗಳನ್ನು ಹೊಂದಿದವರಿದ್ದಾರೆ. ಅಂದಮೇಲೆ ದೇವತೆಗಳಿಗೂ ಅಸುರರಿಗೂ ಕಡ್ಡಾಯವಾದ ಗುಣಲಕ್ಷಣಗಳ ವಿಭಜನೆ ಇದ್ದಂತೆ ಕಾಣುವುದಿಲ್ಲ.

ನಮ್ಮ ಪುರಾಣಗಳನ್ನು ಬಿಟ್ಟು ಜಾನಪದಕ್ಕೆ ಬಂದರೆ ದೇವತೆಗಳು ಯಾರು, ದೈತ್ಯರು ಯಾರು ಎಂಬ ತಾರತಮ್ಯ ಜ್ಞಾನವನ್ನೇ  ಇಂದಿನ ವಿದ್ವಾಂಸರು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿಯೇ ಇಂಡಾಲಜಿ ವಿದ್ವಾಂಸರು ಒಂದು ಸಿದ್ಧಾಂತವನ್ನು ಹುಟ್ಟುಹಾಕಿದ್ದಾರೆ:  ಅದೆಂದರೆ ಭಾರತದಲ್ಲಿ ಡೆಮೊನ್‌ಗಳು ವಿಕಾಸಹೊಂದಿ ಅಥವಾ ರೂಪಾಂತರ ಹೊಂದಿ ಅಂಥ ದೇವತೆಗಳಾಗಿವೆ. ಅವರ ಪ್ರಕಾರ ಇಲ್ಲಿ ಕ್ರಿಮಿನಲ್ ಗಾಡ್ಸ್ ಕೂಡ ಇದ್ದಾರೆ. ಅದಕ್ಕೆ ಸಾಂಸ್ಕೃತಿಕ ಪ್ರಕ್ರಿಯೆಯ ಬಣ್ಣವನ್ನು ಕೂಡ ಬಳಿಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಭೂತಗಳು ಇದಕ್ಕೊಂದು ಜ್ವಲಂತ ಉದಾಹರಣೆ. ಈ ಭೂತಗಳ ಪೂಜೆಯನ್ನು ನೋಡಿದ ಕೆಲವು  ಪಾಶ್ಚಾತ್ಯರು ಇದನ್ನು ಡೆವಿಲ್ ವರ್ಶಿಪ್ ಎಂಬುದಾಗಿ ಕರೆದರು. ನಂತರದ ಕಾಲದಲ್ಲಿ ಡೆವಿಲ್ ಪದಪ್ರಯೋಗದ ಅಸಂಗತತೆಯು ಗಮನಕ್ಕೆ ಬಂದು ತೀರಾ ನಾಜೂಕಾದ ಮಾನವಶಾಸ್ತ್ರೀಯ ವಿವರಣೆಗಳು ಬಂದವು ಅಂತಿಟ್ಟುಕೊಳ್ಳಿ. ಆದರೆ ಸೆಮೆಟಿಕ್ ರಿಲಿಜನ್ನುಗಳಲ್ಲಿ ಹೀಗೇಕೆ ಆಗುವುದಿಲ್ಲ? ಡೆವಿಲ್ ಎಂಬವನೇ ರೂಪಾಂತರ ಹೊಂದಿ ಗಾಡ್ ಆಗಿದ್ದಾನೆ ಎಂಬ ಸಿದ್ಧಾಂತವು ಎಂದಿಗಾದರೂ ಹುಟ್ಟಲು ಸಾಧ್ಯವೆ?   

ಇನ್ನು ಸೆಮೆಟಿಕ್ ರಿಲಿಜನ್ನುಗಳಲ್ಲಿ ಡೆವಿಲ್ ಎಂಬವನು ನರಕದ (ಹೆಲ್) ಅಧಿಪತಿ. ಏಕೆಂದರೆ ಅವನನ್ನು ಅನುಸರಿಸಿದ್ದರಿಂದಲೇ ಮಾನವರು ಪಾಪ ಮಾಡಿ ಹೆಲ್‌ಗೆ ಹೋಗುತ್ತಾರೆ. ಅಂದರೆ ಅವನು ಮೂಲತಃ ಪಾಪಿ. ಆದರೆ ಭಾರತೀಯ ನರಕದ ಕಲ್ಪನೆಯಲ್ಲಿ ಅದರ ಅಧಿಪತಿಯು ಯಮಧರ್ಮರಾಜ. ಅವನು ಧರ್ಮಾಧಿಪತಿ. ಪಾಪಿಗಳನ್ನು ಶಿಕ್ಷಿಸುವ ಮೂಲಕ ಧರ್ಮವನ್ನು ಕಾಯುವವನು.

ಈ ಕಾರಣದಿಂದ ಭಾರತದಲ್ಲಿ ಡೆವಿಲ್ ಹಾಗೂ ಈವಿಲ್ ಎಂಬ ಕಲ್ಪನೆಯು ಇದೆ ಎನ್ನುವುದಕ್ಕೆ ಆಧಾರವಿಲ್ಲ. ಅಂದರೆ ಭಾರತೀಯ ಸಂಪ್ರದಾಯಗಳಲ್ಲಿ ಬೆಳೆದು ಬಂದವರಿಗೆ ಪರಿಪೂರ್ಣ ಕೆಟ್ಟದಾದ ಅಥವಾ ಪರಿಪೂರ್ಣ ಒಳ್ಳೆಯದಾದ ಹಾಗೂ ಆ ಅವಸ್ಥೆಯಿಂದ ಬದಲಾಗಲು ಸಾಧ್ಯವೇ ಇಲ್ಲದ ಮಾದರಿಗಳ ಪರಿಚಯವೇ ಇಲ್ಲ.  ಏಕೆಂದರೆ ನಮ್ಮ ಪರಂಪರೆಯಲ್ಲಿ ಗಾಡ್‌ನಂಥ ವ್ಯಕ್ತಿಗಳ ಮಾದರಿಯೂ ಇಲ್ಲ, ಡೆವಿಲ್‌ನಂಥ ವ್ಯಕ್ತಿಗಳ ಮಾದರಿಯೂ ಇಲ್ಲ. ಇದು ಯಾವ ವಾಸ್ತವವನ್ನು ಸೂಚಿಸುತ್ತದೆ? ಹಾಗೂ ಇಂಥ ವಾಸ್ತವದಲ್ಲಿ ಬೆಳೆದು ಬಂದವರ ವಿವೇಕವು ಯಾವ ರೀತಿ ಕೆಲಸಮಾಡುತ್ತದೆ? ಎಂಬುದು ನಾವೀಗ ಕೇಳಿಕೊಳ್ಳಬೇಕಾದ ಪ್ರಶ್ನೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಯುಕ್ತಿಕ ನೆಲೆಯಲ್ಲಾಗಲೀ ಸಾಮುದಾಯಿಕ ನೆಲೆಯಲ್ಲಾಗಲೀ ಭಾರತೀಯರ ಗ್ರಹಿಕೆಯು ಖಂಡಿತವಾಗಿಯೂ ಪಾಶ್ಚಾತ್ಯರಿಗಿಂತ ಬೇರೆ ರೀತಿಯಲ್ಲಿರಲೇಬೇಕು.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp