Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಹಿಂದೂಗಳ ದೇವಾಲಯಗಳು ಹಾಗೂ ಚರ್ಚುಗಳ ನಡುವಿನ ವ್ಯತ್ಯಾಸ

ಹಿಂದೂಗಳ ದೇವಾಲಯಗಳು ಹಾಗೂ ಚರ್ಚುಗಳ ನಡುವಿನ ವ್ಯತ್ಯಾಸ

by Rajaram Hegde
43 views

ಹಿಂದೂಯಿಸಂ ಒಂದು ರಿಲಿಜನ್ನು ಎಂದುಕೊಂಡ ಭಾರತೀಯರು ತಮ್ಮ ದೇವಾಲಯಗಳು ಕೂಡ ಚರ್ಚುಗಳಂತೇ ಇರುವ ಸಂಸ್ಥೆಗಳು ಎಂದುಕೊಂಡರು. ಆದರೆ ಕೆಲವು ದೇವಾಲಯಗಳಿಗೆ ಕೆಲವರಿಗೆ ಪ್ರವೇಶ ನೀಡದಿರುವುದು ಸಮಾನತೆಯ ನಿರಾಕರಣೆ ಎಂದುಕೊಂಡರು. ಆದರೆ ದೇವಾಲಯಗಳು ಚರ್ಚುಗಳೆ?

ಭಾರತದಲ್ಲಿ ಕಳೆದ ಒಂದು ಶತಮಾನದಿಂದ ಸವರ್ಣೀಯರ ದೇವಾಲಯಗಳೊಳಗೆ ಅಸ್ಪೃಶ್ಯರ  ಪ್ರವೇಶದ  ಕುರಿತು ಅನೇಕ ಚಳವಳಿಗಳು ಆಗಿವೆ. ಹೊಡೆದಾಟಗಳಾಗಿ ಹತ್ಯಾಕಾಂಡಗಳೂ ಆಗಿವೆ. ಹರಿಜನರನ್ನು ಅಥವಾ ಅಸ್ಪೃಶ್ಯರನ್ನು ದೇವಾಲಯಗಳ ಒಳಗೆ ಬಿಟ್ಟುಕೊಳ್ಳದಿರುವುದು ಹಿಂದೂ ಸಾಮಾಜಿಕ ಅಸಮಾನತೆಗೆ ಹಾಗೂ ಶೋಷಣೆಗೆ ಒಂದು ದೃಷ್ಟಾಂತವೆಂಬುದಾಗಿ ಮಹಾತ್ಮಾ ಗಾಂಧಿಯವರು ಹಾಗೂ ಅಂಬೇಡ್ಕರರಂಥ ಮುಂದಾಳುಗಳು ಭಾವಿಸಿದರು.  ಈ ಆಚರಣೆಗೆ ಸಂಬಂಧಿಸಿದಂತೆ ಎರಡು ಮುಖ್ಯ ಆಕ್ಷೇಪಣೆಗಳಿವೆ: ೧) ದೇವಾಲಯಗಳು ಹಿಂದೂಗಳ ಪೂಜಾಸ್ಥಳಗಳಾಗಿರುವಾಗ ಅದರೊಳಗೆ ಹಿಂದೂ ಧರ್ಮದ ಕೆಲವು ಜಾತಿಗಳಿಗೇ ಪ್ರವೇಶವನ್ನು ನಿರಾಕರಿಸುವುದು ಎಷ್ಟರಮಟ್ಟಿಗೆ ನ್ಯಾಯ? ೨) ಈ ಮೂಲಕ ಕೆಲವು ಜಾತಿಗಳ ಧಾರ್ಮಿಕ ಸ್ಥಾನಮಾನವನ್ನು ನಿರಾಕರಿಸಲಾಗುತ್ತದೆ. ಅದು ಸಾಮಾಜಿಕ ಮೇಲು ಕೀಳು ಭಾವನೆಯನ್ನು ಪೋಷಿಸುತ್ತದೆ. ಹಾಗಾಗಿ  ಕೆಲವು ಜಾತಿಗಳನ್ನು ಅಸ್ಪೃಶ್ಯರನ್ನಾಗೇ ಇಟ್ಟು ಅವರನ್ನು ಶೋಷಿಸುವ ದುರುದ್ದೇಶದಿಂದ ಮಾಡಿಕೊಂಡ ವ್ಯವಸ್ಥೆ ಇದಾಗಿದೆ ಎಂಬ ಆರೋಪವೂ ಇದೆ. ದೇವಾಲಯ ಪ್ರವೇಶ ನಿರಾಕರಣೆಯು ಹಿಂದೂ ಪುರೋಹಿತಶಾಹಿಗಳ ಒಂದು ಪಿತೂರಿ ಎಂಬುದಾಗಿ ಕೂಡ ವರ್ಣಿಸಲಾಗುತ್ತದೆ.

          ಈ ಮೇಲಿನ ಎರಡನೆಯ ಆರೋಪವು ಜಾತಿ ವ್ಯವಸ್ಥೆಯ ಕಥೆಯನ್ನಾಧರಿಸಿ ಹುಟ್ಟಿಕೊಂಡದ್ದು ಎಂಬುದು ಸ್ಪಷ್ಟ. ಯಾವುದೋ ಒಂದು ಜಾತಿ ಅಥವಾ ಕೆಲವು ಜಾತಿಗಳು ಇನ್ನೂ ಕೆಲವು ಜಾತಿಗಳನ್ನು ಕೆಳಗಿಟ್ಟು ಶೋಷಿಸುವ ಸಲುವಾಗಿ ಈ ಪದ್ಧತಿಯನ್ನು ಹುಟ್ಟುಹಾಕಿ ನಿಯಂತ್ರಿಸುತ್ತಿವೆ ಎಂದು ವಾದಿಸಲಿಕ್ಕೆ ಜಾತಿ ವ್ಯವಸ್ಥೆಯ ಕುರಿತು ಇಂದು ಪ್ರಚಲಿತದಲ್ಲಿರುವ ಕಥೆಯೇ ಆಧಾರ. ಆದರೆ ಈ ಕಥೆಯನ್ನು ಸತ್ಯ ಎನ್ನಲಿಕ್ಕೇ ನಮಗೆ ಆಧಾರಗಳು ಇಲ್ಲ ಎಂಬುದನ್ನು ಮುಂದೆ ಚರ್ಚೆಗೆತ್ತಿಕೊಳ್ಳಲಾಗುವದು. ಹಾಗಾಗಿ ಯಾವ ಉದ್ದೇಶದಿಂದ ಇಂಥ ಆಚರಣೆಗಳನ್ನು ಹುಟ್ಟುಹಾಕಲಾಗಿದೆ ಎಂಬ ಪ್ರಚಲಿತ ವಿವರಣೆಯನ್ನು ಇಲ್ಲಿ ಕೈಬಿಡೋಣ. ಆದರೆ ದೇವಾಲಯಗಳ ಒಳಗೆ ಕೆಲವು ಜಾತಿಯವರಿಗೆ ಪ್ರವೇಶವನ್ನು ನಿರಾಕರಿಸುತ್ತಿದ್ದಾರೆ ಎನ್ನುವುದಕ್ಕೆ ಯಾವ ನೆಲೆಯಿಂದ ಆಕ್ಷೇಪಣೆಗಳು ಹುಟ್ಟುತ್ತಿವೆ ಎಂಬುದನ್ನು ಸ್ವಲ್ಪ ಪರಿಶೀಲಿಸೋಣ. 

          ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನು ಇದೆ ಹಾಗೂ ಇಲ್ಲಿರುವ ಸಮಸ್ತ ದೇವಾಲಯಗಳೂ ಈ ರಿಲಿಜನ್ನಿನ ಪೂಜಾಸ್ಥಳಗಳು ಎಂಬ ಹೇಳಿಕೆಯು ಇಂದು ನಮ್ಮ ಸಾಮಾನ್ಯ ಜ್ಞಾನವಾಗಿದೆ. ಏಕೆಂದರೆ ಈ ದೇವಾಲಯಗಳೆಲ್ಲ ಒಂದಿಲ್ಲೊಂದು ಹಿಂದೂ ದೇವತೆಗಳಿಗೆ ಸಂಬಂಧಿಸಿವೆ: ಶಿವ, ವಿಷ್ಣು, ಗಣಪತಿ, ಮಾರಿ, ಕಾಳಿ, ಇತ್ಯಾದಿ. ಈ ದೇವತೆಗಳೆಲ್ಲವೂ ಹಿಂದೂಯಿಸಂನ ದೇವತೆಗಳು, ಆ ಕಾರಣಕ್ಕಾಗಿ ಅವುಗಳನ್ನು ಪೂಜಿಸುವವರೆಲ್ಲ ಅವರು ಯಾವ ಜಾತಿಗೇ ಸೇರಿರಲಿ, ಹಿಂದೂಮತಕ್ಕೇ ಸೇರಿದವರು ಎನ್ನಲಾಗುತ್ತಿದೆ.  ಆದರೆ ಒಂದು ಕ್ಷಣ ಯೋಚಿಸಿ. ಈ ಮಾರಿ, ಶಿವ, ಕಾಳಿ ಇತ್ಯಾದಿ ಗುಡಿಗಳು ಹಿಂದೂ ಗುಡಿಗಳು ಎನ್ನುವುದನ್ನು ನಾವು ಎಲ್ಲಿಂದ ಕಲಿತುಕೊಂಡೆವು? ಅವುಗಳ ಪೂಜಕರಲ್ಲಿಯಂತೂ ಈ ಅಭಿಪ್ರಾಯ ಕಂಡುಬರುವುದಿಲ್ಲ. ಅಂದರೆ ಇವುಗಳಿಗೆಲ್ಲ ಹಿಂದೂ ಎಂಬ ವಿಶೇಷಣವನ್ನು ನಾವು  ಆಧುನಿಕರು ಆರೋಪಿಸುತ್ತಿದ್ದೇವೆ.   ಹಾಗೆ ಆರೋಪಿಸಿದಾಗ ಈ ಹಿಂದೂ ಎಂಬ ಪರಿಕಲ್ಪನೆಯ ಜೊತೆಗೇ ಪೂಜಾಚರಣೆಯ ಕುರಿತ ನಮ್ಮ ನಿರೀಕ್ಷೆಗಳು ಕೂಡ ಬದಲಾಗುತ್ತವೆ ಎಂಬುದು ಸ್ಪಷ್ಟ. ಆದರೆ ಪೂಜಾಚರಣೆಯಲ್ಲಿ ತೊಡಗಿಸಿಕೊಂಡ ಜನರ ವಾಸ್ತವವೇ ಬೇರೆಯಾಗಿರುವುದರಿಂದ ನಮ್ಮ ನಿರೀಕ್ಷೆಗಳು ಅವರ ಆಚರಣೆಗಳೊಂದಿಗೆ ಸಂಘರ್ಷಿಸುತ್ತವೆ. ದೇವಾಲಯ ಪ್ರವೇಶಕ್ಕೆ  ಸಂಬಂಧಿಸಿದಂತೆ ಈ ಸಮಸ್ಯೆಯ ಸ್ವರೂಪ ಹೇಗಿದೆ ಎಂಬುದನ್ನು ಇನ್ನು ಮುಂದೆ ಪರಿಶೀಲಿಸೋಣ.

          ಈ ಗುಡಿಗಳೆಲ್ಲ ಹಿಂದೂ ಎಂಬ ರಿಲಿಜನ್ನಿಗೆ ಸೇರಿವೆ ಎಂಬುದಾಗಿ ಭಾವಿಸಿದಾಗ ಹಿಂದೂಗಳೆಲ್ಲರಿಗೂ ಅವುಗಳಲ್ಲಿ ಸಮಾನ ಪ್ರವೇಶಾಧಿಕಾರವಿರಬೇಕು ಎಂಬ ನಿರೀಕ್ಷೆ ಏಕೆ ಹುಟ್ಟಿಕೊಳ್ಳಬೇಕು? ಈ ನಿರೀಕ್ಷೆಯ ಹಿಂದೆ ಕ್ರೈಸ್ತ ಚರ್ಚುಗಳ ಕಲ್ಪನೆ ಹಾಗೂ ಅವುಗಳಿಗೆ ಸಂಬಂಧಿಸಿದಂತೆ ಪ್ರೊಟೆಸ್ಟಾಂಟ್ ಕಾಲದ ನಂತರದ ಚರ್ಚೆಗಳು  ಕೆಲಸಮಾಡುತ್ತಿವೆ. ಪ್ರೊಟೆಸ್ಟಾಂಟ್ ಚಳವಳಿಯ ಕಾಲದಲ್ಲಿ ರಿಲಿಜನ್ನಿನಲ್ಲಿ ಸುಧಾರಣೆಗಳಾದವು. ಆಗ ಕ್ಯಾಥೋಲಿಕ್ ಚರ್ಚುಗಳ ಮೇಲೆ ಟೀಕೆಗಳ ಸುರಿಮಳೆಯೇ ನಡೆಯಿತು.  ಎಲ್ಲರಿಗೂ ಗಾಡ್‌ನ ಜೊತೆಗೆ ಸಂಬಂಧವಿಟ್ಟುಕೊಳ್ಳಲು ಸಮಾನ ಹಕ್ಕಿದೆ, ಆದರೆ ಪುರೋಹಿತಶಾಹಿಯ ಮಧ್ಯವರ್ತಿಗಳು ಕ್ಯಾಥೋಲಿಕ್ ಚರ್ಚುಗಳನ್ನು ಒಂದು ಶ್ರೇಣೀಕೃತ ವ್ಯವಸ್ಥೆಯನ್ನಾಗಿ ಮಾರ್ಪಡಿಸಿ ಸಾಮಾನ್ಯರನ್ನು ಶೋಷಿಸುತ್ತಿದ್ದಾರೆ ಎಂಬುದೇ ಈ ಟೀಕೆಗಳಿಗೆ ಕಾರಣ. ಇಲ್ಲಿ ’ಎಲ್ಲರಿಗೂ’ ಅಂದರೆ ನಿರ್ದಿಷ್ಟಾರ್ಥದಲ್ಲಿ ’ಕ್ರೈಸ್ತರಿಗೆ’ ಅಂತ ಅರ್ಥ. ಸ್ಥೂಲಾರ್ಥದಲ್ಲಿ ’ಕ್ರೈಸ್ತ ಮತಕ್ಕೆ ಮತಾಂತರವಾಗಬಲ್ಲ ಯಾರಿಗಾದರೂ’ ಎಂಬ ಅರ್ಥವಿದೆ. ಅದು ಬಿಟ್ಟರೆ ಉಳಿದವರನ್ನು ಯಾರನ್ನೂ ಈ ’ಎಲ್ಲರಿಗೂ’ ಒಳಗೊಳ್ಳುವುದಿಲ್ಲ ಎಂಬುದನ್ನು ಗಮನಿಸಿದರೆ ಕ್ರೈಸ್ತ ಸಮುದಾಯದ ಸಂದರ್ಭದಲ್ಲಿ ಮಾತ್ರವೇ ಈ ರಿಲಿಜನ್ನಿನ ಸಮಾನತೆಯ ಪ್ರಶ್ನೆ ಎದ್ದಿದೆ ಎಂಬುದು ಅರಿವಾಗುತ್ತದೆ. ಅಂದರೆ ಕ್ರೈಸ್ತನಾದವನೊಬ್ಬನಿಗೆ ಚರ್ಚುಗಳ ಆಚರಣೆಯಲ್ಲಿ ಸಮಾನಾವಕಾಶ ಇಲ್ಲದಿದ್ದರೆ ಅದು ಗಾಡ್‌ನ ಇಚ್ಛೆಗೆ ವಿರುದ್ಧವಾದುದು, ಹಾಗಾಗಿ ಅದು ಅನ್ಯಾಯ ಹಾಗೂ ಪಾಪ.

          ಈ ಕ್ರೈಸ್ತ ಚರ್ಚೆಯನ್ನು ಭಾರತಕ್ಕೆ ಅನ್ವಯಿಸುವಾಗ ಏಳತಕ್ಕ ಒಂದು ಪ್ರಶ್ನೆ ಎಂದರೆ ’ಹಿಂದೂ’ ಎನ್ನುವುದು ಒಂದು ರಿಲಿಜಿಯಸ್ ಸಮುದಾಯವೇ?’ ಹಾಗೂ ಈ ಅಸಂಖ್ಯಾತ ಗುಡಿಗಳೆಲ್ಲ ಅದರ ’ಚರ್ಚುಗಳೆ?’ ಎಂಬುದು. ಪಾಶ್ಚಾತ್ಯರು ಭಾರತಕ್ಕೆ ಬಂದಾಗ ಇಲ್ಲಿರುವ ದೇವತೆಗಳು ಹಾಗೂ ಪೂಜಾಚರಣೆಗಳೆಲ್ಲವನ್ನೂ ಹಿಂದೂಯಿಸಂ ಎಂಬುದಾಗಿ ಗುರುತಿಸಿದರು. ಇವರು ತಮ್ಮ ದೇವತೆಗಳ ಪೂಜಾಚರಣೆಗಾಗಿ ಕಟ್ಟಿಕೊಂಡ ದೇವಾಲಯಗಳನ್ನು ನೋಡಿದ ಅವರು ತಮ್ಮ ಚರ್ಚುಗಳಂತೇ ಹಿಂದೂಗಳಿಗೆ ಈ ಗುಡಿಗಳಿವೆ ಎಂಬುದಾಗಿ ಭಾವಿಸಿದರು.  ಈ ದೇವಾಲಯಗಳು ಚರ್ಚುಗಳಂತಿಲ್ಲ ಎಂಬುದು ಕಣ್ಣಿಗೆಸೆದು ಕಾಣುತ್ತಿತ್ತು ಎಂಬುದನ್ನೂ ಅವರು ದಾಖಲಿಸಿದ್ದಾರೆ. ಆದರೆ ಹಿಂದೂಗಳ ಪೂಜಾಸ್ಥಳಗಳೂ ಹಿಂದೂಯಿಸಂನಷ್ಟೇ ವಿಚಿತ್ರವಾಗಿ ಇರುವುದು ಸಹಜ ಎಂಬುದಾಗಿ ಅವರು ಸಮಜಾಯಿಷಿ ಕೊಟ್ಟುಕೊಂಡರು. ಈ ಸಾಮಾನ್ಯಜ್ಞಾನವನ್ನು ನಾವು ಇಂದು ಒಪ್ಪಿಕೊಂಡಿದ್ದೇವೆ. ಹಾಗೂ ನಮ್ಮ ನ್ಯಾಯಾನ್ಯಾಯ ಜಿಜ್ಞಾಸೆಗಳು ಈ ನೆಲೆಯಿಂದಲೇ ಹುಟ್ಟಿಕೊಳ್ಳುತ್ತವೆ. ಒಂದೊಮ್ಮೆ ಹಿಂದೂ ಎನ್ನುವುದು ಕ್ರೈಸ್ತ, ಮುಸ್ಲಿಂ ಇತ್ಯಾದಿಗಳಂತೆ ಒಂದು ರಿಲಿಜಿಯಸ್ ಸಮುದಾಯವಲ್ಲದಿದ್ದರೆ ಈ ಸಮಸ್ಯೆ ಹೇಗೆ ಕಾಣಿಸುತ್ತದೆ?

          ಒಂದು ರಿಲಿಜನ್ನು ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕಾದರೆ ಕೆಲವು ನಿಬಂಧನೆಗಳನ್ನು ಪಾಲಿಸಲೇಬೇಕು. ಅವುಗಳಲ್ಲಿ ಅದು ತನ್ನ ಡಾಕ್ಟ್ರಿನ್ನುಗಳನ್ನು ಹಾಗೂ ಅದರ ಮೇಲಿನ ವಿಶ್ವಾಸವನ್ನು  ತಲೆಯಿಂದ ತಲೆಗೆ ದಾಟಿಸುವ ಕೆಲಸ ಬಹಳ ನಿರ್ಣಾಯಕವಾದುದು. ಈ ಕೆಲಸಕ್ಕಾಗಿ ಸದಸ್ಯರನ್ನೆಲ್ಲ ಒಂದೆಡೆ ಸೇರಿಸಿ ಕೆಲವು ಆಚರಣೆಗಳಲ್ಲಿ ಹಾಗೂ ಪ್ರವಚನಗಳಲ್ಲಿ ಅವರನ್ನು ತೊಡಗಿಸಬೇಕು ಹಾಗೂ ಅವರ ರಿಲಿಜನ್ನಿನ ಆಚರಣೆಗಳನ್ನೆಲ್ಲ ಕೇಂದ್ರೀಕರಿಸಿ ನಿಯಂತ್ರಿಸಬೇಕು. ಈ ಸಂಬಂಧಿಸಿಯೇ ಕ್ರೈಸ್ತರು ಚರ್ಚುಗಳೆಂಬ ಸಂಸ್ಥೆಯನ್ನು ಕಟ್ಟಿಕೊಂಡರು. ಕ್ರಿಶ್ಚಿಯಾನಿಟಿಯ ಪ್ರಸಾರಕ್ಕೂ ಈ ಚರ್ಚುಗಳೆಂಬ ಸಂಸ್ಥೆಗಳ ಪ್ರಸಾರಕ್ಕೂ ಒಂದು ವ್ಯವಸ್ಥಿತ ಸಂಬಂಧವಿದೆ. ಅಂದರೆ ಚರ್ಚು ಎಂಬ ಸಂಸ್ಥೆಯ ಸದಸ್ಯತ್ವವನ್ನು ಪಡೆಯುವುದು ಕ್ರೈಸ್ತ ಅನುಯಾಯಿಯಾಗುವುದಕ್ಕೆ ಒಂದು ಪೂರ್ವನಿಬಂಧನೆಯಾಗಿದೆ, ಅದರಿಂದಲೇ ರಿಲಿಜನ್ನಿಗೆ ಆತನ ಪ್ರವೇಶ ಹಾಗೂ ಆತನು ಗಾಡ್‌ನನ್ನು ಸೇರುವುದೂ ಕೂಡ ನಿರ್ಣಯವಾಗುತ್ತವೆ. ಚರ್ಚನ್ನು ಬಿಟ್ಟರೆ ಅದರ ಅನುಯಾಯಿಗಳಿಗೆ ರಿಲಿಜನ್ನಿನ ಆಚರಣೆಗಳನ್ನು ನಡೆಸುವ ಯಾವುದೇ ಇತರ ಮಾರ್ಗಗಳಿಲ್ಲ. ಈ ರೀತಿಯಲ್ಲಿ ಗಾಡ್‌ನನ್ನು ಸೇರುವ ಮಾರ್ಗವನ್ನು ತನ್ನ ವ್ಯವಸ್ಥೆಯಲ್ಲಿ ಕೇಂದ್ರೀಕರಿಸಿಕೊಂಡಿರುವ ಕಾರಣದಿಂದಲೇ ಚರ್ಚು ಕ್ರೈಸ್ತ ಸಮುದಾಯದ ಸದಸ್ಯರಿಗೆ ರಿಲಿಜನ್ನಿನ ಸ್ಥಾನಮಾನದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಂದರೆ ಚರ್ಚಿನ ಪ್ರವೇಶವನ್ನು ನಿರಾಕರಿಸಿದರೆ ಅದು ಅನುಯಾಯಿಗೆ ರಿಲಿಜನ್ನನ್ನೇ ಹಾಗೂ ಆ ಮೂಲಕ ಉದ್ಧಾರವನ್ನೇ ನಿರಾಕರಿಸಿದಂತೇ.

         ನಮ್ಮ ಗುಡಿಗಳ ಸಂದರ್ಭದಲ್ಲಿ ನಾವು ಇಂಥ ಯಾವುದೇ ಕಾರ್ಯಕ್ರಮವನ್ನು ಕಾಣಲು ಸಾಧ್ಯವಿಲ್ಲ.  ಹಿಂದೂಗಳೆಂದು ಕರೆಸಿಕೊಂಡ ಸಮಸ್ತ ಜನರಿಗೂ ಸೇರಿದ ಸಾರ್ವಜನಿಕ ಸ್ಥಳಗಳೊ ಎಂಬಂತೆ ನಾವು ಈ ದೇವಾಲಯಗಳನ್ನು ಭಾವಿಸುವುದೇ ಸರಿಯಲ್ಲ. ನಾವು ಚರ್ಚುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಕಲ್ಪನೆಯನ್ನು ಬೆಳೆಸಿಕೊಂಡಿದ್ದೇವೆ. ವಾಸ್ತವ ಹೇಗಿದೆ? ಹಿಂದೂಗಳು ತಮ್ಮ ದೇವರುಗಳನ್ನು ತಂತಮ್ಮ ಮನೆಗಳಲ್ಲೇ ಇಟ್ಟು ಪೂಜಿಸುವ ಪದ್ದತಿ ರೂಢಿಯಲ್ಲಿದೆ. ಮನೆಯಲ್ಲಿಯೇ ಅನೇಕ ಆಚರಣೆಗಳನ್ನು ಮಾಡುತ್ತಾರೆ. ಇವರಿಗೆ ದೇವಪೂಜೆಯನ್ನು, ಪ್ರಾರ್ಥನೆಯನ್ನು ಮಾಡಬೇಕೆಂದಿದ್ದರೆ ದೇವಾಲಯಗಳಿಗೆ ಹೋಗಬೇಕೆಂಬ ಕಡ್ಡಾಯವೂ ಇಲ್ಲ. ನಮ್ಮ ಊರು ಹಾಗೂ ಪೇಟೆಗಳಲ್ಲಿ ಬ್ರಾಹ್ಮಣರಾದಿಯಾಗಿ ಅಸ್ಪೃಶ್ಯರ ವರೆಗೆ ಆಯಾ ಜಾತಿಗೂ ಪ್ರತ್ಯೇಕ ಗುಡಿಗಳಿರುತ್ತವೆ ಹಾಗೂ ಸಾಧಾರಣವಾಗಿ ಆಯಾ ಜಾತಿಯವರೇ ಅದರ ಪೂಜೆಯನ್ನು ನಡೆಸಿಕೊಂಡು ಬರುತ್ತಾರೆ. ಮತ್ತೊಂದು ಜಾತಿಯ ಸದಸ್ಯರಿಗೆ ಆ ದೇವಾಲಯಕ್ಕೆ ಹೋಗಬೇಕಾದ ಪ್ರಮೇಯ ಇರುವುದಿಲ್ಲ, ಆಸಕ್ತಿಯೂ ಇರುವುದಿಲ್ಲ. ಇವುಗಳಿಗೆಲ್ಲ ಸೇರಿ ಒಂದು ನಿರ್ದಿಷ್ಟ ಆಚರಣೆಯನ್ನು ಪ್ರತಿಪಾದಿಸುವ ಪುರೋಹಿತ ವರ್ಗವಾಗಲೀ, ಗ್ರಂಥಗಳಾಗಲೀ ಇಲ್ಲ. ಆಚರಣೆಗಳು ವೈವಿಧ್ಯಪೂರ್ಣವಾಗಿವೆ. ಅವುಗಳಲ್ಲಿ ಶ್ರೇಷ್ಠ ಕನಿಷ್ಠ ಎಂಬ ಶ್ರೇಣೀಕರಣವೂ ಕೂಡ ಅಸಾಧ್ಯ.

          ಗ್ರಾಮ ಪ್ರದೇಶದಲ್ಲಿ ಸಾಧಾರಣವಾಗಿ ಸವರ್ಣೀಯರ ದೇವಾಲಯಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇರುವುದಿಲ್ಲ. ನಗರ, ಪಟ್ಟಣ ಪ್ರದೇಶಗಳ ಅನೇಕ ದೇವಾಲಯಗಳಲ್ಲಿ ಜನಜಂಗುಳಿಯಲ್ಲಿ ಇಂಥ ಆಚರಣೆಗಳನ್ನು ಮಾಡಲಿಕ್ಕೂ ಸಾಧ್ಯವಿಲ್ಲ. ಇನ್ನು ಕೆಲವು ಸುಪ್ರಸಿದ್ಧ ದೇವಾಲಯಗಳು ತಮ್ಮದೇ ಆದ ವಿಶಿಷ್ಟ ಆಚರಣೆಗಳನ್ನು ವಿಧಿಸುತ್ತವೆ. ಕೆಲವು ದೇವಾಲಯಗಳಲ್ಲಿ ಅಸ್ಪೃಶ್ಯರಾದಿಯಾಗಿ ಎಲ್ಲ ಜಾತಿಯ ಜನರೂ ಗರ್ಭಗುಡಿಯ ಒಳಗೆ ಹೋಗಿ ದೇವರನ್ನು ಮುಟ್ಟಿ ಪೂಜೆಮಾಡಬಹುದು. ಉತ್ತರಭಾರತದಲ್ಲಿ ಈ ಪದ್ಧತಿಯು ಸಾರ್ವತ್ರಿಕವಾಗಿ ರೂಢಿಯಲ್ಲಿದೆ. ದಕ್ಷಿಣ ಭಾರತದಲ್ಲೂ ಅಲ್ಲಲ್ಲಿ ಇದೆ. ದಕ್ಷಿಣ ಭಾರತದ ದೇವಾಲಯಗಳಲ್ಲಿ ಸಾಮಾನ್ಯವಾಗಿ ಅರ್ಚಕರನ್ನೊಂದು ಬಿಟ್ಟರೆ ಉಳಿದ ಯಾರಿಗೂ ಗರ್ಭಗುಡಿಯ ಪ್ರವೇಶ ಇರುವುದಿಲ್ಲ. ಕೆಲವು ದೇವಾಲಯಗಳಲ್ಲಿ ಅಂಗಿ ಕಳಚಿ ಹೋಗದ ಯಾರಿಗೂ ಪ್ರವೇಶವಿಲ್ಲ, ಕಾರ್ತಿಕೇಯ ದೇವಾಲಯಗಳಲ್ಲಿ ಸ್ತ್ರೀಯರಿಗೆ ಪ್ರವೇಶ ನಿಷೇಧ, ಕೆಲವು ಗುಡಿಗಳಲ್ಲಿ ಕೆಲವು ಜಾತಿಯವರಿಗೆ ಪ್ರವೇಶ ನಿಷೇಧ, ಹೀಗೆ ಈ ಆಚರಣೆಗಳಲ್ಲಿ ಒಂದು ಏಕರೂಪೀ ನಿಯಮವೇನೂ ಕಂಡುಬರುವುದಿಲ್ಲ. ಭಾರತೀಯ ದೇವಾಲಯಗಳಲ್ಲೆಲ್ಲ ಒಂದು ಏಕರೂಪೀ ಆಚರಣೆ ಎಂದರೆ ಚಪ್ಪಲಿಯನ್ನು ಹೊರಗೆ ಕಳಚಿಟ್ಟು ಹೋಗಬೇಕು. ಆ ನಿಯಮವು ಎಲ್ಲರಿಗೂ ಅನ್ವಯವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕೆಲವು ದೇವಾಲಯಗಳ ಪ್ರವೇಶವನ್ನು ನಿರಾಕರಿಸಿದರೆ ಯಾವೊಬ್ಬನಿಗಾದರೂ ದೇವಪೂಜೆಯನ್ನೇ ನಿರಾಕರಿಸಿದಂತಾಗಲೀ, ದೇವಾಲಯ ಪ್ರವೇಶವನ್ನೇ ನಿರಾಕರಿಸಿದಂತಾಗಲೀ ಅಲ್ಲ.   

          ಇದರ ಜೊತೆಗೇ ಒಟ್ಟಾರೆಯಾಗಿ ಹಿಂದೂಗಳ ಮೂರ್ತಿಪೂಜಾ ಸಂಪ್ರದಾಯವು ಪೂಜೆಯ ಆಚರಣೆಯಷ್ಟೇ ಭಗವಂತನ ಸಾಕ್ಷಾತ್ಕಾರಕ್ಕೆ ಅಂತಿಮ ಮಾರ್ಗ ಎಂದು ಹೇಳುವುದಿಲ್ಲ. ಈ ದೇವಾಲಯ ಹಾಗೂ ಮೂರ್ತಿಪೂಜೆಯ ಅವಸ್ಥೆಯನ್ನು ಮೀರಿದ ಹೊರತೂ ಒಬ್ಬನಿಗೆ ಮೋಕ್ಷವಿಲ್ಲ ಎಂದೇ ಮಹಾತ್ಮರುಗಳೆಲ್ಲ ಸಾರಿ ಹೇಳಿದ್ದಾರೆ. ಇವರೆಲ್ಲರ ಉಪದೇಶಗಳೂ ಹಿಂದೂ ಸಂಸ್ಕೃತಿಯ ಒಂದು ಭಾಗವೇ ಆಗಿದ್ದಲ್ಲಿ ಭಗವಂತನ ಸಾಕ್ಷಾತ್ಕಾರಕ್ಕೆ ಚರ್ಚುಗಳಂತೆ ಈ ಗುಡಿಗಳು ಏಕೈಕ ಮಾರ್ಗಗಳಂತೂ ಅಲ್ಲ ಅಥವಾ ಮಾರ್ಗಗಳೇ ಆಗಬೇಕಿಲ್ಲ. ಪ್ರಾಚೀನ ಕಾಲದಲ್ಲಿ ಅಸ್ಪೃಶ್ಯರಾದಿಯಾಗಿ ವಿಭಿನ್ನ ಜಾತಿಗಳ ಸಂತರುಗಳು ಇಂಥ ದೇವಾಲಯಗಳಿಗೂ ಹೊರತಾಗಿ ಸಾಕ್ಷಾತ್ಕಾರವನ್ನು ಪಡೆದಿದ್ದಾರೆಂಬುದಾಗಿ ನಮ್ಮ ಸಂಪ್ರದಾಯಗಳು ತಿಳಿಸುತ್ತವೆ.

          ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಭಾರತೀಯರಿಗೆ ಸಂಬಂಧಿಸಿದ ಕಾನೂನುಗಳನ್ನು ರಚಿಸಿಕೊಂಡೇ ಇವರ ಆಚರಣೆಗಳ ಕುರಿತ ವಿವಾದಗಳನ್ನು ಬಗೆಹರಿಸಿಕೊಳ್ಳುವ ಕ್ರಮ ಪ್ರಾರಂಭವಾಯಿತು. ಭಾರತೀಯರ ಆಚರಣೆಗಳನ್ನು  ಸಾರ್ವತ್ರಿಕ ನಿಯಮಗಳೆಂಬಂತೆ ಗ್ರಹಿಸುವ ಪೃವೃತ್ತಿಗೆ ಇದು ಎಡೆಮಾಡಿಕೊಟ್ಟಿತು. ಯಾವುದೋ ಒಂದು ದೇವಾಲಯದಲ್ಲಿ ಈ ಕುರಿತು ನಡೆದ ವಿವಾದವನ್ನು ಹಾಗೂ ಅದಕ್ಕೆ ಸಂಬಂಧಿಸಿದ ನಿರ್ಣಯವನ್ನು ಸಾರ್ವತ್ರೀಕರಿಸಲಾಯಿತು. ಅದರ ಭಾಗವಾಗಿ   ದೇವಾಲಯಗಳನ್ನು ಅಸ್ಪೃಶ್ಯರು ಪ್ರವೇಶಿಸುವಂತಿಲ್ಲ ಎಂಬ ನಿಯಮವು ಹಿಂದೂ ರಿಲಿಜನ್ನಿನಲ್ಲಿ ಇದೆ ಎಂಬ ಸಾಮಾನ್ಯೀಕರಣವು ಪ್ರಚಲಿತದಲ್ಲಿ ಬಂದಿತು. ಹಾಗೂ ಹಿಂದೂಗಳಿಗೆ ಇದೊಂದು ಕಾನೂನು ಎಂಬುದಾಗಿ ಕಲ್ಪಿಸಿಕೊಂಡು ನ್ಯಾಯಾಲಯಗಳ ತೀರ್ಪುಗಳು ಕೂಡ ಬಂದವು.  ಅದರ ಜೊತೆಗೇ ಹಿಂದೂ ರಿಲಿಜನ್ನಿನ ಸದಸ್ಯರಿಗೇ ಅದರ ಪೂಜಾ ಸ್ಥಳಗಳಲ್ಲಿ ಅವಕಾಶ ನೀಡದಿರುವುದು ಅನ್ಯಾಯ ಎಂಬ ವಾದಗಳೂ ಪ್ರಚಲಿತದಲ್ಲಿ ಬಂದವು. ಕೆಲವೇ ದೇವಾಲಯಗಳಲ್ಲಿ ಇದ್ದ ಈ ಪದ್ಧತಿಗೂ, ಜಾತಿ ವ್ಯವಸ್ಥೆಗೂ, ಅಸ್ಪೃಶ್ಯರ ಧಾರ್ಮಿಕ ಸ್ಥಾನಮಾನಕ್ಕೂ ತಳಕು ಹಾಕಲಾಯಿತು. ಆ ಕಾರಣದಿಂದ ಇದು ಹಿಂದೂಯಿಸಂನ ಲಕ್ಷಣ ಎಂಬ ಸಾಮಾನ್ಯ ಜ್ಞಾನ ಬೆಳೆಯಿತು.

          ದೇವಾಲಯ ಪ್ರವೇಶವು ದಕ್ಷಿಣ ಭಾರತದಲ್ಲಿಯೇ ಸಮಸ್ಯೆಯಾಗಿದೆ. ಕಾರಣವೆಂದರೆ ಅಸ್ಪೃಶ್ಯರನ್ನು ಒಳಗೆ ಬಿಟ್ಟುಕೊಳ್ಳದಿರುವ ಪದ್ಧತಿ ಇಲ್ಲೇ ಜಾಸ್ತಿ. ಅದರಲ್ಲೂ ಎಲ್ಲಾ ದೇವಾಲಯಗಳಲ್ಲೂ ಅಲ್ಲ. ಕೆಲವು ಪುಣ್ಯಕ್ಷೇತ್ರಗಳು ಹಾಗೂ ಸವರ್ಣೀಯರ ದೇವಾಲಯಗಳು ಹಾಗೂ ಊರೊಟ್ಟಿಗಿನ ದೇವಾಲಯಗಳಲ್ಲಿ ಈ ಸಮಸ್ಯೆ ಬರುತ್ತದೆ. ಅಸ್ಪೃಶ್ಯರನ್ನು ಒಳಗೆ ಬಿಡದಿರುವ ಅನೇಕ ಸವರ್ಣೀಯ ದೇವಾಲಯಗಳಲ್ಲಿ ಕೂಡ ಅಸ್ಪೃಶ್ಯ ಜಾತಿಗಳನ್ನು ದೇವಾಲಯದ ಕೆಲವು ವಿಧಿ ಆಚರಣೆಗಳಲ್ಲಿ, ಹಾಗೂ ನಿರ್ವಹಣೆಯಲ್ಲಿ ಒಳಗೊಂಡಿರಲಾಗುತ್ತದೆ. ಆದರೆ ಅದೇ ಅಸ್ಪೃಶ್ಯರನ್ನು ಗುಡಿಯ ಒಳಗೆ ಬಿಟ್ಟುಕೊಳ್ಳುವುದಕ್ಕೆ ತಕರಾರುಗಳು ಕೂಡ ಇಂಥ ದೇವಾಲಯಗಳಲ್ಲಿಯೇ ಹುಟ್ಟುವುದು ಸಾಮಾನ್ಯ ಎಂಬುದೂ ಕಂಡುಬರುತ್ತದೆ. ಇದನ್ನು ಗಮನಿಸಿದಾಗ  ಅಸ್ಪೃಶ್ಯರಿಗೆ ಪ್ರವೇಶವನ್ನು ನಿರಾಕರಿಸುವ ಉದಾಹರಣೆಗಳಲ್ಲಿ ಅಸ್ಪೃಶ್ಯತೆಯ ಆಚರಣೆಯು ದೇವಾಲಯದ ಪ್ರವೇಶಕ್ಕೆ ಸಂಬಂಧಪಟ್ಟಿರುತ್ತದೆಯೇ ಹೊರತೂ  ಇತರ ವ್ಯವಹಾರಗಳಲ್ಲಲ್ಲ. ಇಂಥ ಉದಾಹರಣೆಗಳಲ್ಲಿ ಸವರ್ಣೀಯರು ತಮ್ಮ ಸಾಮಾಜಿಕ ಆಚರಣೆಯನ್ನು ತಮ್ಮ ದೇವಾಲಯಕ್ಕೂ ತರುತ್ತಿದ್ದಾರೆ ಎನ್ನಬಹುದೇ ಹೊರತೂ ಅದು ಹಿಂದೂ ದೇವಾಲಯಗಳ ನೀತಿ ಎನ್ನುವುದಕ್ಕೆ ಆಧಾರವಿಲ್ಲ. ಅಂದರೆ ಪ್ರವೇಶವಿರದ ದೇವಾಲಯಗಳಲ್ಲಿ ಪ್ರವೇಶ ಮಾಡಿಬಿಟ್ಟರೆ ಹಿಂದುಗಳ ಮನೋಭಾವನೆಯಲ್ಲಿ ಏನೋ ಬದಲಾವಣೆ ಆಗಿಬಿಡುತ್ತದೆ ಎಂಬುದು ಅರ್ಥಾರ್ಥ ಸಂಬಂಧವಿಲ್ಲದ ವಿಚಾರ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp