Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ದೇವರು ಮೃತರ ಆತ್ಮಕ್ಕೆ ಶಾಂತಿಯನ್ನು ಕರುಣಿಸಬಹುದೆ?

ದೇವರು ಮೃತರ ಆತ್ಮಕ್ಕೆ ಶಾಂತಿಯನ್ನು ಕರುಣಿಸಬಹುದೆ?

by indalt
94 views

ಕ್ರೈಸ್ತರ ’ಸೋಲ್’ ಎಂಬ ಶಬ್ದವನ್ನು ಭಾರತೀಯ ಅಧ್ಯಾತ್ಮದ ’ಆತ್ಮ’ ಎಂಬ ಶಬ್ದದಿಂದ ಗುರುತಿಸಲಾಗಿದೆ. ಹಿಂದೂಯಿಸಂ ಕೂಡ ರಿಲಿಜನ್ನಾಗಿದೆ ಎಂಬ ನಂಬಿಕೆಯಿಂದ ಈ ತರ್ಜುಮೆ ನಡೆದಿದೆ. ಆದರೆ ಇಂಥ ತರ್ಜುಮೆಗಳಿಂದ ಆಗುವ ಆಭಾಸಗಳೇನು? ನೋಡಿ.

ಯಾರಾದರೂ ತೀರಿಕೊಂಡಾಗ ಸಂತಾಪ ಸೂಚನೆಯನ್ನು ಮಾಡುವುದು ಇಂದು ಸಾಮಾನ್ಯವಾಗಿ ಕಂಡುಬರುವ ವಿಷಯ. ತೀರಿಕೊಂಡವರು ವಿಧಿವಶರಾಗುತ್ತಾರೆ ಇಲ್ಲವೆ ಅವರವರ ಮತಗಳಿಗನುಸಾರವಾಗಿ ಕೈಲಾಸವಾಸಿಗಳೋ, ವೈಕುಂಠವಾಸಿಗಳೋ ಆಗುತ್ತಾರೆ. ಇಂಥ ವಿಧಿವಶರಾದವರು ಗಣ್ಯ ವ್ಯಕ್ತಿಗಳಾಗಿದ್ದರೆ ಇತರ ಗಣ್ಯ ವ್ಯಕ್ತಿಗಳು, ಅದರಲ್ಲೂ ರಾಜಕಾರಣಿಗಳು ಪೈಪೋಟಿಯ ಮೇಲೆ ಪತ್ರಿಕೆಗಳಲ್ಲಿ ಸಂತಾಪವನ್ನು ಸೂಚಿಸುತ್ತಾರೆ. ಸಂತಾಪ ಸೂಚಕ ಸಭೆಗಳೂ ನಡೆಯುತ್ತವೆ. ಸಂತಾಪ ಸೂಚನೆ ಕೂಡ ಅವರವರ ಮಟ್ಟಕ್ಕನುಗುಣವಾಗಿ ಸಂಸ್ಥೆಯ ಮಟ್ಟದಿಂದ ಹಿಡಿದು ರಾಜ್ಯ, ರಾಷ್ಟ್ರ ಮಟ್ಟದ ವರೆಗೆ ನಡೆಯುತ್ತದೆ. ಆಗ ಎಲ್ಲರೂ ಮಾಡುವ ಒಂದು ಕೆಲಸವೆಂದರೆ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುವುದು. ಅದರಲ್ಲೂ ದೈವಶ್ರದ್ಧೆಯುಳ್ಳವರು ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂಬುದಾಗಿ ಕೋರುತ್ತಾರೆ. ಸಾಧಾರಣವಾಗಿ ಮೌನವಾಗಿ ನಿಲ್ಲುತ್ತಾರೆ. ಈ ಮೌನಾಚರಣೆಯು ನಮ್ಮ ಸರ್ಕಾರೀ ಸಂಸ್ಥೆಗಳಲ್ಲಿ ಒಂದು ನಿಮಿಷ ಸ್ತಬ್ಧವಾಗಿ, ನಿಃಶ್ಯಬ್ದವಾಗಿ ನಿಂತುಕೊಳ್ಳುವುದರ ರೂಪದಲ್ಲಿ ನಡೆಯುತ್ತದೆ. ಬಹುಶಃ ಇದು ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುವ ಸೆಕ್ಯುಲರ್ ರೂಪವಿರಬಹುದು. ಇಲ್ಲಿ ದೇವರು ಅದನ್ನು ಕರುಣಿಸುವುದರ ಬದಲಾಗಿ ಮನುಷ್ಯರೇ ಅದಕ್ಕಾಗಿ ಕೋರುತ್ತಾರೆ. ಯಾರನ್ನು ಎಂದು ಕೇಳಬೇಡಿ, ಅದು ಅವರಿಗೂ ಹೇಳಲಾಗದ ವಿಷಯ.

          ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅಲ್ಪ ಸ್ವಲ್ಪ ಜ್ಞಾನವಿರುವವರಿಗೆ ಈ ಮೇಲಿನ ಕ್ರಿಯೆಯು ಅಸಂಬದ್ಧವಾಗಿ ಕಾಣಿಸುವುದರಲ್ಲಿ ಸಂದೇಹವಿಲ್ಲ. ಮೃತರ ಆತ್ಮಕ್ಕೆ ಶಾಂತಿಯನ್ನು ದೇವರು ಕರುಣಿಸುವುದೆಂದರೆ, ಮನುಷ್ಯರು ಕೋರುವುದೆಂದರೆ ಏನು? ಮೃತರ ಆತ್ಮವು ಅಶಾಂತವಾಗಿರುತ್ತದೆ ಎಂಬುದಾಗಿ ನಮ್ಮ ಯಾವ ಸಂಪ್ರದಾಯಗಳೂ ಹೇಳಿಲ್ಲ. ಸುಖ-ದುಃಖ, ಶಾಂತಿ-ಅಶಾಂತಿ, ಇವೆಲ್ಲವೂ ಜೀವನಿಗೆ ಅಂಟಿಕೊಂಡ ಸ್ಥಿತಿಗಳು. ಈ ಸ್ಥಿತಿಗಳಿಂದ ಮುಕ್ತನಾಗುವುದೇ ಆತ್ಮವನ್ನು ಕಂಡುಕೊಳ್ಳುವ ಮಾರ್ಗ. ಹಾಗಾಗಿ ನಮ್ಮಲ್ಲಿ ಆತ್ಮಗಳು ಚಿರಶಾಂತಿಯಲ್ಲಿ ನಿದ್ರಿಸುವುದು ಕೂಡ ಅಸಾಧ್ಯ. ಆತ್ಮಕ್ಕೆ ಇಂಥ ಯಾವ ಮನುಷ್ಯ ವ್ಯಾಪಾರಗಳನ್ನು ಆರೋಪಿಸುವುದೂ ಕೂಡ ಸಾಧ್ಯವಿಲ್ಲದ ಮಾತು. ಹಾಗಾದರೆ ನಾವೇಕೆ ಇಂಥ  ಅರ್ಥವಾಗದ ವಾಕ್ಯಗಳನ್ನು, ವ್ಯವಹಾರಗಳನ್ನು ರೂಢಿಸಿಕೊಂಡಿದ್ದೇವೆ?

          ಶಿಷ್ಟಾಚಾರಕ್ಕಾಗಿ ಇಂಥ ಅನೇಕ ಆಚರಣೆಗಳನ್ನು ಹಾಗೂ ಮಾತುಗಳನ್ನು ಬಳಸುವ ಪ್ರಸಂಗಗಳು ಆಗಾಗ ಬರುತ್ತವೆ. ಅವಕ್ಕೆಲ್ಲ ಬಹಳ ಅರ್ಥವನ್ನು ಹಚ್ಚಲು ಹೋಗಬಾರದು ಎಂಬುದಾಗಿ ನೀವು ಅಭಿಪ್ರಾಯ ಪಡಬಹುದು. ನಾನಿಲ್ಲಿ ಆ ಕುರಿತು ಆಕ್ಷೇಪಣೆಯನ್ನು ಎತ್ತುತ್ತಿಲ್ಲ. ಇದು ಕೇವಲ ಈ ಆಚರಣೆಗೆ ಮಾತ್ರವೇ ಸೀಮಿತವಾದ ಸಂಗತಿಯಾಗಿದ್ದಲ್ಲಿ ಏನೂ ತೊಂದರೆಯಿಲ್ಲ. ಈ ವಾಕ್ಯದಲ್ಲಿ ಬರುವ ಆತ್ಮ ಎಂಬುದು ಇಂಗ್ಲೀಷಿನ ಸೋಲ್ ಎಂಬ ಶಬ್ದದ ತರ್ಜುಮೆಯಾಗಿದೆ. ಈ ವಾಕ್ಯವು may his/her soul rest in peace ಎಂಬ ವಾಕ್ಯದ ಅನುವಾದವಾಗಿದೆ. ಸೋಲ್ ಎಂಬುದನ್ನು ಆತ್ಮ ಎಂಬುದಾಗಿ ಪರಿಭಾವಿಸಿರುವುದರಿಂದ ಈ ಮೇಲೆ ಉಲ್ಲೇಖಿಸಿದ ಕನ್ನಡದ ವಾಕ್ಯಗಳು ಸೃಷ್ಟಿಯಾಗಿವೆ. ಈ ಭಾಷಾಂತರವನ್ನು ನಮ್ಮ ಅಧ್ಯಾತ್ಮದ ಸಂದರ್ಭದಲ್ಲಿ ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಅದು ಭಾರತೀಯ ಸಂಸ್ಕೃತಿಯ ಕುರಿತ ಅಜ್ಞಾನವನ್ನು ಹೆಚ್ಚಿಸುವ ಕೆಲಸವನ್ನೂ ಕೂಡ ಮಾಡುತ್ತದೆಯಾದ್ದರಿಂದ ಅದರ ಅರ್ಥವನ್ನು ಕೆದಕುವುದು ಅಗತ್ಯ.

          ಕ್ಯಾಥೋಲಿಕ್ ಕ್ರೈಸ್ತರ ಕಾಲದಿಂದಲೂ ಸತ್ತವರನ್ನು ಹೂಳುವಾಗ ಮಾಡುತ್ತಿದ್ದ ಪ್ರಾರ್ಥನೆ ಇದು. ಅವರ ಸಮಾಧಿಯ ಕಲ್ಲುಗಳ ಮೇಲೆ ಈ ಸಾಲನ್ನು ಕೆತ್ತಿಸುವುದು ಕ್ರೈಸ್ತರಲ್ಲಿ ಪ್ರಚಲಿತದಲ್ಲಿ ಬಂದಿತು. ಸೋಲ್ ಎಂದರೆ ಮನುಷ್ಯನ ಆಂತರಿಕ ಜಗತ್ತು, ಅಥವಾ ವ್ಯಕ್ತಿತ್ವ. ಅದು ಅವನ ಮನಸ್ಸು, ಭಾವನೆ, ಸಂಕಲ್ಪ, ಗುರಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬನಿಗೂ ಅದನ್ನು ಭ್ರೂಣಾವಸ್ಥೆಯಲ್ಲೇ ಗಾಡ್ ಸೃಷ್ಟಿಸುತ್ತಾನೆ. ದೇಹ ಹಾಗೂ ಸೋಲ್‌ಗಳೆರಡೂ ಒಟ್ಟಾಗಿ ಒಬ್ಬನು ಮನುಷ್ಯನೆಂದೆನಿಸಿಕೊಳ್ಳುತ್ತಾನೆ. ಆ ವ್ಯಕ್ತಿ ಸತ್ತ ನಂತರ ಅವನ ದೇಹ ಹಾಗೂ ಸೋಲ್‌ಗಳು ಪ್ರತ್ಯೇಕವಾಗುತ್ತವೆ. ಸಮಾಧಿಯಲ್ಲಿ ದೇಹವು ನಾಶವಾದರೂ ಸೋಲ್ ಹಾಗೇ ಅಂತಿಮ ನಿರ್ಣಯಕ್ಕಾಗಿ ಕಾದಿರುತ್ತದೆ. ಅಂತಿಮ ನಿರ್ಣಯವೆಂಬುದು ಸೆಮೆಟಿಕ್ ರಿಲಿಜನ್ನುಗಳಿಗೇ ವಿಶಿಷ್ಟವಾದ ಪರಿಕಲ್ಪನೆಯಾಗಿದೆ. ಅದನ್ನು ಮಾಡುವವನು ಸೃಷ್ಟಿಕರ್ತ. ಸಮಾಧಿಯಲ್ಲಿರುವ ಸೋಲ್‌ಗಳಿಗೆಲ್ಲಾ ಮರುಜೀವವನ್ನು ಕೊಟ್ಟು ಅವು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸಿನ್ (ಗಾಡ್‌ನ ಆಜ್ಞೆಯನ್ನು ಉಲ್ಲಂಘಿಸುವುದು)ಗಳನ್ನು ಲೆಕ್ಕಹಾಕಿ ಅವು ಸ್ವರ್ಗ(ಪ್ಯಾರಡೈಸ್) ಲೋಕಕ್ಕೆ ಹೋಗಬೇಕೋ ನರಕಕ್ಕೆ (ಹೆಲ್) ಹೋಗಬೇಕೋ ಎನ್ನುವುದನ್ನು  ಗಾಡ್ ಅಂತಿಮವಾಗಿ ನಿರ್ಣಯಿಸುತ್ತಾನೆ.

          ಸೋಲ್ ಎನ್ನುವುದರ ಸ್ವರೂಪವೇನು, ಸಮಾಧಿಯಲ್ಲಿ ಅದು ಹೇಗೆ ಇರುತ್ತದೆ, ಅಂತಿಮ ನಿರ್ಣಯವು ಯಾವಾಗ ನಡೆಯುತ್ತದೆ, ಹೇಗೆ ನಡೆಯುತ್ತದೆ ಎಂಬುದರ ಕುರಿತು ಕ್ರೈಸ್ತರಲ್ಲಿ ವಿವಿಧ ಮತಗಳಿವೆ. ಆದರೆ ಸಮಾಧಿಯಲ್ಲಿ ಸೋಲ್ ಅಂತಿಮ ನಿರ್ಣಯಕ್ಕೆ ಕಾದುಕೊಂಡಿರುತ್ತದೆ ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ಅದು ಎಚ್ಚರಾಗಿರುತ್ತದೆ ಎಂದು ಕೆಲವರು ಹೇಳಿದರೆ ಕೆಲವರು ನಿದ್ರಿಸುತ್ತದೆ ಎನ್ನುತ್ತಾರೆ. ಸತ್ತವನ ದೇಹವನ್ನು ಹೂಳುವಾಗ ಸಮಾಧಿಯೊಳಗೆ ಅಂತಿಮ ನಿರ್ಣಯದ ಕ್ಷಣಗಳನ್ನು ಎಣಿಸುತ್ತಾ ಅದು ಶಾಂತಿಯಿಂದ ನಿದ್ರಿಸಲಿ ಅಥವಾ ವಿಶ್ರಮಿಸಲಿ ಎಂಬುದಾಗಿ ಹಾರೈಸುವ ಸಲುವಾಗಿ may his/her soul rest in peace ಎಂಬ ಹೇಳಿಕೆ ಹುಟ್ಟಿಕೊಂಡಿದೆ.

          ಮೃತರಿಗೆ ಸಂತಾಪ ಸೂಚನೆಯನ್ನು ಮಾಡುವ ಆಚರಣೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿತ್ತು. ಇದನ್ನು ಕಂಡೋಲೆನ್ಸ್ ಎನ್ನುತ್ತಾರೆ.  ಈ ಆಚರಣೆಯನ್ನು ಪಾಶ್ಚಾತ್ಯರು ಅದರಲ್ಲೂ ವಸಾಹತು ದೊರೆಗಳು ಭಾರತಕ್ಕೆ ತಂದಾಗ ಈ ಹೇಳಿಕೆಯೂ ಸಂತಾಪ ಸೂಚನೆಯ ಭಾಗವಾಗಿ ಇಲ್ಲಿಗೆ ಬಂದಿದೆ. ಭಾರತೀಯ ಪ್ರಜೆಗಳು ತಮ್ಮ ಸಂದರ್ಭಕ್ಕೆ ತಕ್ಕಂತೆ ಈ ಆಚರಣೆ ಹಾಗೂ ಹೇಳಿಕೆಯನ್ನು ಅಳವಡಿಸಿಕೊಂಡಿದ್ದಾರೆ. ಅದರಲ್ಲೂ ಸರ್ಕಾರೀ ಸಂದರ್ಭದಲ್ಲಿ ಈ ಸಂಗತಿಗಳು ಪ್ರಸ್ತುತವಾಗಿವೆ ಎಂಬುದು ಮುಖ್ಯ. ಸೋಲ್ ಎಂಬುದನ್ನು ಆತ್ಮ ಎಂಬುದಾಗಿ ಭಾಷಾಂತರಿಸಿಕೊಳ್ಳಲಾಯಿತು. ಇಲ್ಲಿ ಮೃತದೇಹವನ್ನು ಸುಡುವ ಆಚರಣೆ ಕೂಡ ಪ್ರಧಾನವಾಗಿದೆ. ಹಾಗಾಗಿ ವಿಶ್ರಮಿಸಲಿ, ಮಲಗಲಿ ಇತ್ಯಾದಿ ಶಬ್ದಗಳು ಅಪ್ರಸ್ತುತವಾಗಿರಬಹುದು.  

          ಆದರೆ ಭಾರತೀಯ ಸಂಸ್ಕೃತಿಯಲ್ಲಿ ಈ ವಾಕ್ಯದ ಅನುವಾದವು ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುವಂತಹ ಅರ್ಥವಿಲ್ಲದ ವಾಕ್ಯಗಳನ್ನು ಸೃಷ್ಟಿಸುತ್ತದೆ. ಸೋಲ್ ಎಂಬುದನ್ನು ಆತ್ಮ ಎಂಬುದಾಗಿ ತರ್ಜುಮೆ ಮಾಡಲು ಸಾಧ್ಯವಿಲ್ಲ. ಆತ್ಮ ಎಂಬುದು ಮನಸ್ಸು, ಬುದ್ಧಿ, ಅಹಂಕಾರ, ಇತ್ಯಾದಿಗಳಿಗೆ ಅತೀತವಾದುದು ಎಂಬುದಾಗಿ ಕೆಲವು ಸಂಪ್ರದಾಯಗಳು ಹೇಳುತ್ತವೆ. ಆತ್ಮವೆಂದರೆ ಈ ಎಲ್ಲಾ ಮನೋವ್ಯಾಪಾರಗಳಿಗೆ ಸಾಕ್ಷಿಯಾಗಿರುವ ಒಂದು ನಿರ್ವಿಕಾರ ತತ್ವ. ನಮ್ಮಲ್ಲಿ ಜೀವಾತ್ಮ ಹಾಗೂ ಪರಮಾತ್ಮ ಎಂಬ ಕಲ್ಪನೆಗಳಿವೆ. ಭಾಷಾಂತರಕಾರರು ಅವನ್ನು ಇಂಡಿವಿಜುವಲ್ ಸೋಲ್ ಹಾಗೂ ಯುನಿವರ್ಸಲ್ ಸೋಲ್ ಎಂಬುದಾಗಿ ತರ್ಜುಮೆಮಾಡಿ ಕೈತೊಳೆದುಕೊಂಡಿದ್ದಾರೆ. ಆದರೆ ಪಾಶ್ಚಾತ್ಯರ ಸೋಲ್ ಕಲ್ಪನೆಯಲ್ಲಿ ಸಾರ್ವತ್ರಿಕ ಅಥವಾ ವಿಶ್ವವ್ಯಾಪಿ ಎಂಬುದಕ್ಕೆ ಏನರ್ಥ ಇರಲಿಕ್ಕೆ ಸಾಧ್ಯ? ಅದು ಮನುಷ್ಯನೊಬ್ಬನ ವ್ಯಕ್ತಿ ವಿಶಿಷ್ಟತೆಯಾಗಿದೆ.

          ಈ ಸಮಸ್ಯೆ ಏಕೆ ಏಳುತ್ತದೆಯೆಂದರೆ ಸೋಲ್ ಎಂಬುದು ಥಿಯಾಲಜಿಗೇ ವಿಶಿಷ್ಟವಾದ ಪರಿಭಾಷೆಯಾಗಿದೆ. ಅದನ್ನು ನಮ್ಮ ಆತ್ಮ ಎಂಬ ಪರಿಕಲ್ಪನೆಗೆ ಸಮೀಕರಿಸುವಂತಿಲ್ಲ. ಹಾಗಾದರೆ ಈ ಅನುವಾದವನ್ನು ಮಾಡಿದವರಿಗೆ ಇಷ್ಟು ಸಾಮಾನ್ಯ ವಿಷಯ ಗೊತ್ತಾಗಲಿಲ್ಲವೆ ಎಂಬ ಪ್ರಶ್ನೆ ಏಳುವುದು ಸಹಜ. ಈ ಅನುವಾದವನ್ನು ಹುಡುಕಿದ ಪಂಡಿತರಿಗೆ ಆತ್ಮದ ಕುರಿತು ಬರುವ ವರ್ಣನೆಗಳು ಗೊತ್ತಿರಲಿಲ್ಲವೆ? ಅದು ಹೋಗಲಿ ಈಗಲೂ ಈ ಶಬ್ದವನ್ನೇ ಉಪಯೋಗಿಸಿ ನಮ್ಮ ಅಧ್ಯಾತ್ಮವನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡುತ್ತಿರುವ ತತ್ವಶಾಸ್ತ್ರಜ್ಞರು, ಸನ್ಯಾಸಿಗಳು, ಮುಂತಾದವರಿಗೆ ತಾವು ಪಾಶ್ಚಾತ್ಯರಿಗೆ ಹೇಳಬೇಕಾದ್ದನ್ನು ಹೇಳುತ್ತಿದ್ದೇವೆ ಎಂಬ ವಿಶ್ವಾಸ ಎಲ್ಲಿಂದ ಬರುತ್ತದೆ? 

          ಅದು ಥಿಯಾಲಜಿಯ ಪರಿಭಾಷೆಯೆಂಬುದು ನಮಗೆ ಗೊತ್ತಿದ್ದರೆ ಅದು ಕ್ರೈಸ್ತರಿಗೇ ವಿಶಿಷ್ಟವಾದುದು ಎಂಬುದು ಕೂಡ ಸ್ಪಷ್ಟವಾಗಿಯೇ ಗೊತ್ತಿರುತ್ತಿತ್ತೇನೋ. ಆದರೆ ನಮಗೆ ಈ ಪರಿಭಾಷೆಯು ನೇರವಾಗಿ ಥಿಯಾಲಜಿಯಿಂದ ಬರಲಿಲ್ಲ. ರಿಲಿಜನ್ನಿನ ಕುರಿತ ಸೆಕ್ಯುಲರ್ ಸಿದ್ಧಾಂತಗಳಿಂದ ಬಂದಿದೆ. ಹಾಗಾಗಿ ಅದು ಪ್ರಪಂಚದ ಯಾವುದೇ ಸಂಸ್ಕೃತಿಯ ಕುರಿತೂ ವೈಜ್ಞಾನಿಕವಾಗಿ ಮಾತನಾಡಲು ಸಮರ್ಪಕವಾದ ಪರಿಭಾಷೆ ಎಂಬ ಧೋರಣೆ ಹುಟ್ಟುತ್ತದೆ. ಪಾಶ್ಚಾತ್ಯ ರಿಲಿಜನ್ನಿನ ಅಧ್ಯಯನಗಳು ಥಿಯಾಲಜಿಯದೇ ಪರಿಭಾಷೆಗಳನ್ನು ತಮ್ಮ ಪ್ರಪಂಚ ವರ್ಣನೆಯ ಭಾಷೆಯನ್ನಾಗಿ ಸ್ವೀಕರಿಸಿದವು. ಅದರ ಪರಿಣಾಮವೆಂದರೆ ಥಿಯಾಲಜಿಯೇ ತನ್ನ ರೂಪವನ್ನು ಮರೆಮಾಚಿಕೊಂಡು ರಿಲಿಜನ್ನಿನ ವಿಜ್ಞಾನವಾಗಿ ಬದಲಾಗಿದೆ.

          ಈ ಪ್ರಕ್ರಿಯೆ ಹೇಗಾಗಿದೆಯೆಂದರೆ ಥಿಯಾಲಜಿಯ ಶಬ್ದಗಳು ಪಾಶ್ಚಾತ್ಯರ ದಿನನಿತ್ಯದ ಭಾಷೆಯ ಒಂದು ಭಾಗವಾಗಿ ಸೆಕ್ಯುಲರ್ ಜಗತ್ತಿನಲ್ಲಿ ಸೇರಿಕೊಂಡವು. ನಂತರ ಸೆಕ್ಯುಲರ್ ವಿಜ್ಞಾನಗಳು ಬೆಳೆದು ಬರುವ ಕಾಲದಲ್ಲಿ ಇವೇ ಅನ್ಯ ಸಂಸ್ಕೃತಿಗಳ ಚಿತ್ರಣದ ಪರಿಭಾಷೆಗಳಾಗಿ ಅವತಾರ ತಳೆದವು. ಅಂಥ ಚಿತ್ರಣಗಳು ಥಿಯಾಲಜಿಯಾಗಿ ಪಾಶ್ಚಾತ್ಯ ಸಮಾಜ ಶಾಸ್ತ್ರಜ್ಞರಿಗೆ ಕಾಣಿಸಲಿಲ್ಲ. ಹಾಗಾಗಿ ಪ್ರಪಂಚದ ಇತರ ಸಂಸ್ಕೃತಿಗಳೂ ಕೂಡ ಗೊತ್ತಿಲ್ಲದಂತೇ ರಿಲಿಜನ್ನಿನ ಪರಿಭಾಷೆಯಲ್ಲಿ ಚಿತ್ರಣಗೊಂಡವು. ಇಂಥ ಚಿತ್ರಣಗಳು ಪಾಶ್ಚಾತ್ಯರಿಗೆ ತಮ್ಮ ರಿಲಿಜನ್ನು ಎಲ್ಲೆಡೆಯಲ್ಲೂ ಇದೆ ಎಂಬ ಭ್ರಮೆಯನ್ನು ಹುಟ್ಟಿಸುತ್ತವೆ. ತೀರಾ ಅಪರಿಚಿತವಾದ ಸಂಸ್ಕೃತಿಯೂ ಅವರಿಗೆ ಅರ್ಥವಾದಂತೇ, ಪರಿಚಿತವಾಗಿರುವಂತೇ ಕಾಣಿಸತೊಡಗುತ್ತವೆ. ಸಂಸ್ಕೃತಿಗಳ ನಿಜವಾದ ವ್ಯತ್ಯಾಸವು ಬುದ್ಧಿಗೆ ನಿಲುಕುವುದಿಲ್ಲ.

          ಸೋಲ್ ಎಂಬ ಪರಿಕಲ್ಪನೆಯ ವಿಶಿಷ್ಟತೆಯಿಂದಾಗಿಯೇ ಮನುಷ್ಯರ ಕುರಿತು ಪಾಶ್ಚಾತ್ಯರ ಚಿಂತನಾಕ್ರಮ ಹಾಗೂ ತಿಳುವಳಿಕೆಗಳಿಗೆ ವಿಶಿಷ್ಟತೆಯೊಂದು ಪ್ರಾಪ್ತವಾಗಿದೆ. ಅವರ ಪ್ರಕಾರ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಣಯಿಸುವಲ್ಲಿ ಸೋಲ್ ಅತ್ಯಂತ ನಿರ್ಣಾಯಕವಾದ ಪಾತ್ರವನ್ನು ಹೊಂದಿದೆ. ಅಷ್ಟೇ ಅಲ್ಲ, ಪಾಶ್ಚಾತ್ಯ ಸಾಮಾಜಿಕ ಚಿಂತನೆಗಳಲ್ಲಿ ವ್ಯಕ್ತಿಗೆ ಸಮುದಾಯಕ್ಕಿಂತಲೂ ನಿರ್ಣಾಯಕವಾದ ಸ್ಥಾನವು ಕಲ್ಪಿತವಾಗಿದೆ. ವ್ಯಕ್ತಿವಾದವೂ (ಇಂಡಿವಿಜ್ಯುವಲಿಸಂ) ಅಲ್ಲಿಂದಲೇ ಹುಟ್ಟುತ್ತದೆ. ಒಬ್ಬ ವ್ಯಕ್ತಿಯ ವೈಶಿಷ್ಟ್ಯತೆಯ ಹಿಂದೆ ಕಾರಣವಿದೆ. ಏಕೆಂದರೆ ಅದು ಗಾಡ್‌ನ ಸೃಷ್ಟಿಯಾಗಿರುವುದರಿಂದ ಅವನ ಉದ್ದೇಶ ಹಾಗೂ ಇಚ್ಛೆ ಅದರ ಹಿಂದಿದೆ. ಈ ಲೋಕದಲ್ಲಿ ವ್ಯಕ್ತಿಯೊಬ್ಬನು ಗಾಡ್‌ನ ಇಚ್ಛೆಗೆ ಹಾಗೂ ಉದ್ದೇಶಕ್ಕೆ ಅನುಗುಣವಾಗಿ ಕರ್ತೃತ್ವವನ್ನು ನಿರ್ವಹಿಸಲು ಅದು ಸಾಧನವಾಗಿದೆ. ಅದಕ್ಕೆ ಆತ್ಯಂತಿಕ ಬೆಲೆಯನ್ನು ನೀಡಬೇಕು, ಅದನ್ನು ಕಡೆಗಣಿಸುವುದು ಅಥವಾ ಹತ್ತಿಕ್ಕುವುದು ಅಪರಾಧವಾಗುತ್ತದೆ.

          ಅದರದೇ ಸೆಕ್ಯುಲರ್ ರೂಪವಾಗಿ ’ಸೆಲ್ಫ್’ (ನನ್ನತನ) ಎಂಬುದು ಪಾಶ್ಚಾತ್ಯ ಮನೋವಿಜ್ಞಾನ, ರಾಜನೀತಿ, ಸಮಾಜಶಾಸ್ತ್ರಗಳಲ್ಲೆಲ್ಲ ನಿರ್ಣಾಯಕ ಸ್ಥಾನವನ್ನು ವಹಿಸಿತು. ವ್ಯಕ್ತಿ ಸ್ವಾತಂತ್ರ್ಯದ ಕಲ್ಪನೆ, ವ್ಯಕ್ತಿ ನೈತಿಕತೆ (ಮೊರಾಲಿಟಿ), ವ್ಯಕ್ತಿ ಮತ್ತು ಸಮಾಜಗಳ ನಡುವಿನ ಸಂಬಂಧದ ಜಿಜ್ಞಾಸೆಗಳು ಇವೆಲ್ಲವೂ ಪಾಶ್ಚಾತ್ಯ ಚಿಂತನೆಯಲ್ಲಿ ಕೇಂದ್ರ ಸ್ಥಾನವನ್ನು ಗಳಿಸಲು ಅವರಿಗೆ ಸೋಲ್ ಹಾಗೂ ಸೆಲ್ಫ್‌ಗಳ ಕುರಿತು ಇರುವ ವಿಶೇಷ ಕಲ್ಪನೆಗಳೇ ಕಾರಣವಾಗಿವೆ. ನಮ್ಮ ಆತ್ಮ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಇಂಥ ಯಾವ ಚಿಂತನೆಯನ್ನೂ ಬೆಳೆಸಲು ಸಾಧ್ಯವಿಲ್ಲ.

          ಒಂದು ಪರಿಭಾಷೆಯ ತರ್ಜುಮೆಯೇ ಇಷ್ಟೊಂದು ಗೊಂದಲಗಳನ್ನು ಸೃಷ್ಟಿಸುತ್ತದೆಯೆಂದಾಗ ನಮ್ಮ ಅಧ್ಯಾತ್ಮವನ್ನು ಇಂತಹ ಅನೇಕ ಶಬ್ದಗಳಿಂದ ಭಾಷಾಂತರಿಸಿಕೊಂಡ ಪಾಶ್ಚಾತ್ಯರಿಗೆ ಅದು ಏನು ಎಂಬುದು ಅರ್ಥವಾಗಲು ಎಂದಾದರೂ ಸಾಧ್ಯವೆ? ಇಂಥ ಶಬ್ದಗಳನ್ನು ಉಪಯೋಗಿಸಿಯೇ ಭಾರತೀಯರು ಕೂಡ ಪಾಶ್ಚಾತ್ಯರಿಗೆ ಅಧ್ಯಾತ್ಮದ ಮಹತ್ವವನ್ನು ತಿಳಿಸುತ್ತೇವೆ ಎಂದು ನಂಬಿಕೊಂಡಿದ್ದಾರೆ. ಇಂದು ಹಿಂದೂಯಿಸಂ ಎಂಬ ಹೆಸರಿನಲ್ಲಿ ಇಂಗ್ಲೀಷಿನಲ್ಲಿ ಇರುವ ಸಮಸ್ತ ಗ್ರಂಥರಾಶಿಯೂ ಥಿಯಾಲಜಿಯ ಪರಿಭಾಷೆಗಳನ್ನು ಉಪಯೋಗಿಸಿಯೇ ಅದನ್ನು ವರ್ಣಿಸುತ್ತದೆ. ಉದಾಹರಣೆಗೆ ಧರ್ಮ (ರಿಲಿಜನ್), ವೇದ ( ಸೇಕ್ರಡ್ ಸ್ಕ್ರಿಪ್ಚರ್), ತತ್ವ (ಡಾಕ್ಟ್ರಿನ್), ದೇವರು (ಗಾಡ್), ದೆವ್ವ (ಡೆವಿಲ್), ಪೂಜೆ (ವರ್ಶಿಪ್), ಪಾಪ (ಸಿನ್), ನರಕ (ಹೆಲ್), ಶಾಸ್ತ್ರ (ಲಾ), ಮುಕ್ತಿ (ಸಾಲ್ವೇಶನ್), ಮೂರ್ತಿಪೂಜೆ (ಐಡೋಲೇಟ್ರಿ), ಇತ್ಯಾದಿ.

          ಈ ಭಾಷಾಂತರಗಳಲ್ಲಿ ಎರಡು ಪ್ರಕ್ರಿಯೆಗಳನ್ನು ಕಾಣುತ್ತೇವೆ: ೧. ಥಿಯಾಲಜಿಯ ಪರಿಭಾಷೆಗಳಿಂದ ಭಾರತೀಯ ಸಂಸ್ಕೃತಿಯಲ್ಲಿರುವ ಸಂಗತಿಗಳನ್ನು ಗುರುತಿಸುವ ಕೆಲಸ. ಆ ಪರಿಭಾಷೆಗಳಿಂದಾಗಿಯೇ ಇಲ್ಲಿ ಕ್ರಿಶ್ಚಿಯಾನಿಟಿಯಂಥದ್ದೇ ಒಂದು ರಿಲಿಜನ್ನು ಇದೆ ಎಂಬುದಕ್ಕೆ ಪ್ರಮಾಣಗಳು ಪಾಶ್ಚಾತ್ಯರ ಪಾಲಿಗೆ ಸೃಷ್ಟಿಯಾಗುತ್ತವೆ. ೨. ಭಾರತೀಯರ ಪಾಲಿಗೆ ಆ ಹೊಸ ಶಬ್ದಗಳಿಗೆ ಥಿಯಾಲಜಿಯ ಹಿನ್ನೆಲೆಯಲ್ಲಿ ನೀಡಬಹುದಾದ ಅರ್ಥವೇ ದಕ್ಕುವುದಿಲ್ಲ, ಜೊತೆಗೆ ಅವುಗಳಿಗೆ ತರ್ಜುಮೆಯಾಗಿ ಬಂದ ದೇಸೀ ಶಬ್ದಗಳ ಬಳಕೆಯ ಸಂದರ್ಭವು ಪಲ್ಲಟವಾಗುವುದರಿಂದ ಈ ದೇಸೀ ಶಬ್ದಗಳ ಮೂಲ ಅರ್ಥದ ಸ್ಮೃತಿಯೂ ನಷ್ಟವಾಗುತ್ತವೆ. ಅಂದರೆ ಈ ಭಾಷಾಂತರದ ಪ್ರಕ್ರಿಯೆಯಲ್ಲಿ ಭಾರತೀಯ ಸಂಸ್ಕೃತಿಗೆ ಸೇರಿದ ಪರಿಭಾಷೆಗಳ ಅರ್ಥವು ವಿಕೃತವಾಗುತ್ತದೆ.

          ಈ ಮೇಲಿನ ಥಿಯಾಲಜಿಯ ಪರಿಕಲ್ಪನೆಗಳನ್ನು ಹಿಂದೂಯಿಸಂಗೆ ಅನ್ವಯಿಸಬಹುದಾದರೆ ಅದೂ ಕ್ರಿಶ್ಚಿಯಾನಿಟಿಯಂಥದ್ದೇ ರಿಲಿಜನ್ನಾಗಿ ತೋರುವುದು ಸಹಜ. ಅಂದರೆ ಹಿಂದೂಯಿಸಂ ಕೂಡ ಕಿಶ್ಚಿಯಾನಿಟಿಯಂಥದ್ದೇ ರಿಲಿಜನ್ನೆಂದು ಭಾವಿಸಿದ ಪಾಶ್ಚಾತ್ಯರು ನಮ್ಮ ಸಂಪ್ರದಾಯದಲ್ಲೂ ಥಿಯಾಲಜಿಯ ಪರಿಕಲ್ಪನೆಗಳನ್ನು ಕಂಡರು. ಹೀಗೆ ಕಾಣುವ ಪ್ರಕ್ರಿಯೆಯಲ್ಲಿ ಅವರು ಆಧಾರವಾಗಿ ಇಟ್ಟುಕೊಂಡದ್ದು ದೇಶೀ ಪರಿಭಾಷೆಗಳು. ಆದರೆ ನಿಜವಾಗಿ ನೋಡಿದರೆ ಅವರಿಗೆ ಈ ದೇಶೀ ಪರಿಭಾಷೆಗಳು ಥಿಯಾಲಜಿಯ ಚೌಕಟ್ಟಿನಲ್ಲಿಯೇ ಅರ್ಥಪಡೆದುಕೊಂಡವೇ ಹೊರತೂ ತಮ್ಮ ಮೂಲ ಅರ್ಥದಲ್ಲಲ್ಲ. ಅದರ ಫಲವಾಗಿ ಇಂಗ್ಲೀಷ್ ಭಾಷೆಯಲ್ಲಿ ಕ್ರಿಶ್ಚಿಯಾನಿಟಿಯದೇ ಪಡಿಯಚ್ಚಿನಲ್ಲಿ ಹಿಂದೂಯಿಸಂ ಹುಟ್ಟಿಕೊಂಡಿತು.           ಹಿಂದೂಯಿಸಂ ಕುರಿತು ಐರೋಪ್ಯ ಭಾಷೆಗಳಲ್ಲಿ ಬಂದ ವರ್ಣನೆಗಳು ಅವರಿಗೆ ಏಕೆ ಅರ್ಥವಾಗುತ್ತವೆಂದರೆ ಅವುಗಳಲ್ಲಿ ಅವರದೇ ಪರಿಭಾಷೆಗಳು ಇವೆ. ಆದರೆ ಈ ವರ್ಣನೆಯನ್ನು ದೇಶೀ ಭಾಷೆಗೆ ಭಾಷಾಂತರಿಸಿದಾಗ ಥಿಯಾಲಜಿಯ ಪರಿಚಯವೇ ಇಲ್ಲದವರ ಭಾಷೆಯಲ್ಲಿ ಪಾಶ್ಚಾತ್ಯ ವರ್ಣನೆಗೆ ಅರ್ಥವೇ ಇರುವುದಿಲ್ಲ. ಹಾಗಂತ ಈ ದೇಶೀ ಪರಿಭಾಷೆಗಳ ಸಾಂಪ್ರದಾಯಿಕ ಅರ್ಥವನ್ನು ಕಲಿಯುವ ಪ್ರಕ್ರಿಯೆ ಕೂಡ ವಿದ್ಯಾವಂತ ವರ್ಗದಲ್ಲಿ ನಿಂತು ಹೋಗಿರುತ್ತದೆ. ಹಾಗಾಗಿ ಇಂಥ ವಾಕ್ಯಗಳು ಅಸಂಬದ್ಧವೆಂಬುದೂ ಕೂಡ ಅವರ  ಗಮನಕ್ಕೆ ಬರುವುದಿಲ್ಲ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

indalt

You may also like

Leave a Comment

Message Us on WhatsApp