Home ವಸಾಹತು ಪ್ರಜ್ಞೆಬುದ್ಧಿಜೀವಿಗಳ ಮೂಢನಂಬಿಕೆಗಳು ಭಯೋತ್ಪಾದನೆ: ಅಪರಾಧದ ಹೊಸ ಅವತಾರ

ಭಯೋತ್ಪಾದನೆ: ಅಪರಾಧದ ಹೊಸ ಅವತಾರ

by Rajaram Hegde
22 views

ಭಯೋತ್ಪಾದನೆಯು ಇಂದು ವಿಶ್ವಶಾಂತಿಗೆ ದೊಡ್ಡ ಸವಾಲಾಗಿದೆ. ಇತ್ತೀಚೆಗೆ ಬೇರೆ ಬೇರೆ ಬೇಡಿಕೆಗಳನ್ನು ಇಟ್ಟು ಸರ್ಕಾರಗಳನ್ನು ಬಗ್ಗಿಸಲಿಕ್ಕಾಗಿ ಬೇರೆ ಬೇರೆ ಹೋರಾಟದ ಗುಂಪುಗಳು ಭಯೋತ್ಪಾದನೆಗೆ ಇಳಿದಿವೆ. ಇಂಥ ಕೃತ್ಯಗಳನ್ನು ಹೇಗೆ ಅರ್ಥೈಸಿದರೆ ಅವುಗಳನ್ನು ನಿಯಂತ್ರಿಸಬಹುದು? ಚಾಲ್ತಿಯಲ್ಲಿರುವ ಅಭಿಪ್ರಾಯಗಳು ಇಂಥವರನ್ನು ಮಾನಸಿಕ ರೋಗಿಗಳು ಅಂತಲೋ, ಅವರಿಗೆ ನೈತಿಕ ಸಮರ್ಥನೆಗಳಿವೆ ಅಂತಲೋ ವಿವರಿಸುತ್ತಾರೆ. ಆದರೆ ಭಯೋತ್ಪಾದನೆ ಎಂಬುದು ಅಪರಾಧದ ಐಡಿಯಾಲಜಿಯಾಗಿದೆ ಅಂದರೆ ಅಪರಾಧವನ್ನು ಮಾಡುವುದು ನೈತಿಕವಾಗಿ ಸರಿ ಎಂಬ ಧೋರಣೆಯಿಂದ ಹುಟ್ಟುತ್ತದೆ ಎಂಬುದಾಗಿ ಈ ಲೇಖನವು ವಾದಿಸುತ್ತದೆ.

ಇಂದು ಪ್ರಪಂಚವನ್ನು ಅತ್ಯಂತ ತೀಕ್ಷ್ಣವಾಗಿ ಕಾಡುವ ಸಮಸ್ಯೆಗಳಲ್ಲಿ ಭಯೋತ್ಪಾದನೆಯೂ ಒಂದು. ಅದರಲ್ಲೂ ನಮ್ಮ ಮಾಧ್ಯಮಗಳಿಗಂತೂ ಕಳೆದ ಹಲವಾರು ವರ್ಷಗಳಿಂದ ಈ ಸುದ್ದಿಗಳು ಮೃಷ್ಟಾನ್ನ ಭೋಜನಗಳಾಗಿವೆ. ಮನುಷ್ಯರನ್ನು ಕೊಲ್ಲುವುದು, ವಿಧ್ವಂಸಕಾರೀ ಕೃತ್ಯಗಳನ್ನು ನಡೆಸುವುದು, ಇತ್ಯಾದಿಗಳ ಮೂಲಕ ಭಯವನ್ನು ಉಂಟುಮಾಡಿ ತಮ್ಮ ಗುರಿಯನ್ನು ಸಾಧಿಸುವುದನ್ನು ಭಯೋತ್ಪಾದನೆ ಎಂಬುದಾಗಿ ಗುರುತಿಸುತ್ತೇವೆ. ಈ ಮಾರ್ಗವನ್ನು ಮಾನವರು ತುಳಿಯಲಿಕ್ಕೆ ಪ್ರಾರಂಭಿಸಿ ೨೦೦ಕ್ಕೂ ಹೆಚ್ಚು ವರ್ಷಗಳಾಗಿವೆ ಎನ್ನಲಾಗುತ್ತಿದೆ. ಮೊಟ್ಟಮೊದಲು ಇದು ಐರೋಪ್ಯ ದೇಶಗಳಲ್ಲಿ ಪ್ರಾರಂಭವಾಯಿತು. ಇಂದು ಕಾಣುವ ರೀತಿಯ ಭಯೋತ್ಪಾದನೆಯು ಕಾಣಿಸಿಕೊಂಡು ೫೦ ವರ್ಷಗಳೂ ಆಗಿಲ್ಲ. ಇದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಾಮತ್ತಾಗಿ ಬಾಂಬು ಸಿಡಿಸುವುದು, ಮುಗ್ಧರ ನರಮೇಧವನ್ನು ಮಾಡುವುದು ಪ್ರಧಾನವಾಗಿದೆ. ಮಧ್ಯ ಪ್ರಾಚ್ಯದಲ್ಲಿ ಮೊದಲು ಈ ತಂತ್ರವನ್ನು ಬಳಸಿದರು. ಭಾರತದಲ್ಲೂ ಕೂಡ ಎಲ್‌ಟಿಟಿಇ, ಬೋಡೋ, ನಕ್ಸಲ್, ಇತ್ಯಾದಿ ಯೋಧರಿಂದ ಇಂಥ ಕಾರ್ಯಗಳು ನಡೆದಿವೆ.

               ಇವುಗಳಲ್ಲಿ ಹೆಚ್ಚಿನವುಗಳು ಒಂದು ಸಮುದಾಯಕ್ಕೆ ಒಂದು ಭೂಭಾಗದ ಮೇಲೆ ಸ್ವಾಮ್ಯವನ್ನು ಸ್ಥಾಪಿಸಲಿಕ್ಕಾಗಿ ನಡೆದಿವೆ. ಇವರು ತಾವು ಯಾರ ಬಿಡುಗಡೆಗಾಗಿ ಅಥವಾ ಏಳ್ಗೆಗಾಗಿ ಹೋರಾಡುತ್ತಿದ್ದೇವೆ ಎನ್ನುತ್ತಾರೋ ಆ ಸಮುದಾಯದ ಯುವಕರ ಸೈನ್ಯವನ್ನು ಕಟ್ಟುತ್ತಾರೆ. ಇಂಥ ಹೋರಾಟಗಾರರು ತಮ್ಮ ಉದ್ದೇಶಕ್ಕಾಗಿ ಪ್ರಾಣವನ್ನೂ ತೆರಲು ತಯಾರಿರುತ್ತಾರೆ. ಮೈಗೇ ಬಾಂಬನ್ನು ಕಟ್ಟಿಕೊಂಡು ಅಥವಾ ಕಾರು, ವಿಮಾನುಗಳನ್ನು ಬಳಸಿಕೊಂಡು ಸಾಯಲು ತಯಾರಾಗಿಯೇ ಇಂಥ ಕೆಲಸವನ್ನು ಮಾಡುತ್ತಾರೆ. ಅಂದರೆ ಅವರು ಸಂಪೂರ್ಣವಾಗಿ ತಮ್ಮ ಜೀವನವನ್ನೇ ಈ ಹೋರಾಟದ ಉದ್ದೇಶಗಳಿಗಾಗಿ ಮುಡುಪಾಗಿಟ್ಟಿರುತ್ತಾರೆ.

               ಇಂಥ ಭಯೋತ್ಪಾದನೆಗಳ ಕುರಿತು ವಿಶ್ಲೇಷಿಸುವ ಬರವಣಿಗೆಗಳಲ್ಲಿ ಈ ಭಯೋತ್ಪಾದಕರಿಗೆ ಒಂದು ಸಕಾರಣ ಇರುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಅದು ಸಮಕಾಲೀನ ವ್ಯವಸ್ಥೆಯಲ್ಲಿ ಅಡಗಿರುವ ಅನ್ಯಾಯದಿಂದ ಹುಟ್ಟುತ್ತದೆ. ಅಥವಾ ಒಂದು ಸಮುದಾಯಕ್ಕೆ ಆದ ಅನ್ಯಾಯಕ್ಕೆ ಪ್ರತೀಕಾರವಾಗಿ ಅಥವಾ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಇರುತ್ತದೆ ಎನ್ನುತ್ತಾರೆ. ಉದಾಹರಣೆಗೆ ಎಲ್‌ಟಿಟಿಇಯ ಕುರಿತು ನಡೆಯುವ ಚರ್ಚೆಗಳಲ್ಲಿ ಸಿಂಹಳೀಯರಿಂದ ಅಲ್ಲಿನ ತಮಿಳರಿಗೆ ಆದ ಅನ್ಯಾಯದ ಕುರಿತ ವಿಷಯವೂ ಸೇರಿರುತ್ತದೆ. ಇಲ್ಲದಿದ್ದರೆ ಏಕೆ ಪ್ರಭಾಕರನ್ ಎಂಬವನು ಅದರ ಮುಂದಾಳುವಾಗಿ ಬೆಳೆದ? ಅವನು ಹೇಳಿದಂತೇ ಕೇಳುವ ಪಡೆಯೊಂದು ಏಕೆ ಹುಟ್ಟಿಕೊಳ್ಳಬೇಕು? ಅಂದರೆ ಸಮುದಾಯವೊಂದು ತನಗಾದ ಅನ್ಯಾಯವನ್ನು ಪ್ರತಿಭಟಿಸುವ ಕಾರಣವಿಲ್ಲದಿದ್ದರೆ ಇಂಥ ಸಂಘಟನೆಗಳು ಹೇಗೆ ಅಸ್ತಿತ್ವಕ್ಕೆ ಬರಲು ಸಾಧ್ಯ? ಎಂಬುದಾಗಿ ತರ್ಕಿಸಿ ಇಂಥ ಅನ್ಯಾಯವನ್ನು ಗುರುತಿಸಿ ಅದರ ಹುಟ್ಟಿಗೆ ಹಾಗೂ ಬೆಳವಣಿಗೆಗೆ ಕಾರಣವನ್ನು ಹುಡುಕುತ್ತೇವೆ. ಆದರೆ ವಿಚಿತ್ರವೆಂದರೆ ಇಷ್ಟೆಲ್ಲ ಕಾರಣಗಳನ್ನು ಒಪ್ಪಿಕೊಳ್ಳುವ ನಮಗೆ ಅವರು ಅಪರಾಧಿಗಳೇ ಎಂಬುದರಲ್ಲಿ ಸಂಶಯವಿರುವುದಿಲ್ಲ.

               ನಮ್ಮ ಈ ಗೊಂದಲವು ನಕ್ಸಲರ ಕುರಿತ ಚರ್ಚೆಗಳಲ್ಲಿ ಇನ್ನೂ ಸ್ಪಷ್ಟವಾಗಿದೆ. ನಮ್ಮ ಕೇಂದ್ರ ಸರ್ಕಾರದಿಂದ ಹಿಡಿದು ಎಲ್ಲರೂ ಈ ನಕ್ಸಲರ ಹೋರಾಟಕ್ಕೆ ಸಾಮಾಜಿಕ ಹಾಗೂ ರಾಜಕೀಯ ಅನ್ಯಾಯಗಳೇ ಕಾರಣ ಎನ್ನುತ್ತಾರೆ. ಅಂದರೆ ಅವರು ಯಾವುದಾದರೂ ಮುಗ್ಧರನ್ನು ಕೊಂದರೆ ಅದಕ್ಕೊಂದು ಗಹನವಾದ ಕಾರಣವಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಹಾಗಂತ ಮುಗ್ಧರನ್ನು ಕೊಲ್ಲುವುದು ಕಾನೂನಿನ ಪ್ರಕಾರ ಅಪರಾಧ ಎಂದೂ ಅವರೇ ಹೇಳುತ್ತಾರೆ. ಮುಸ್ಲಿಂ ಭಯೋತ್ಪಾದನೆಯ ಸಂಬಂಧಿಸಿ ಕೂಡ ಇಂಥ ವಿಶ್ಲೇಷಣೆಗಳು ನಡೆಯುತ್ತಿವೆ. ಲಾಡೆನ್ ಇರಬಹುದು, ಇಲ್ಲ ಇಸ್ಲಾಂ ಹೆಸರಿನಲ್ಲಿ ಬಂದ ಅಂಥ ಅನೇಕ ಸಂಘಟನೆಗಳಿರಬಹುದು ಅವಕ್ಕೂ ಮಧ್ಯ ಪ್ರಾಚ್ಯದ ರಾಜಕೀಯದಲ್ಲಿ ಶತಮಾನಗಳ ಕಾಲ ನಡೆದ ಪಶ್ಚಿಮದ ಹಸ್ತಕ್ಷೇಪಕ್ಕೂ ನೇರ ಸಂಬಂಧವನ್ನು ಕಲ್ಪಿಸುವುದು ಸಕಾರಣವಾಗಿಯೇ ಕಾಣಿಸುತ್ತದೆ. ಇಸ್ಲಾಂ ಭಯೋತ್ಪಾದನೆಗೂ ಇಸ್ರೇಲಿನ ರಚನೆಗೂ ಸಂಬಂಧವಿದ್ದಂತೆ ಕಾಣುತ್ತದೆ. ಅದರಲ್ಲೂ ಅಮೇರಿಕಾದ ರಾಜಕೀಯವು ಪ್ರಧಾನವಾಗಿದೆ. ಹಾಗಾಗಿ ತಾಲಿಬಾನ್, ಅಲ್ ಖೈದಾದಂಥ ಭಯೋತ್ಪಾದನೆಯು ಈ ಪಶ್ಚಿಮದ ಸಾಮ್ರಾಜ್ಯಶಾಹಿಗೆ ಪ್ರತಿಕ್ರಿಯೆ ಎಂಬುದಾಗಿಯೂ ಅರ್ಥೈಸುವವರಿದ್ದಾರೆ. ಇಂದಿನ ಐಎಸ್‌ಐಎಸ್ ಭಯೋತ್ಪಾದನೆಗೂ ಸದ್ದಾಂ ಹುಸೇನನ ಹುಟ್ಟಡಗಿಸಿದ್ದಕ್ಕೂ ಸಂಬಂಧವಿದ್ದಂತೆ ಕಾಣುತ್ತದೆ. ಆದರೂ ಕೂಡ ಇಂದು ಐಎಸ್‌ಐಎಸ್ ನಡೆಸುವ ಕರಾಳ ಕೃತ್ಯಗಳನ್ನು ಯಾರೂ ಸರಿ ಎನ್ನಲಾರರು.

               ಇಲ್ಲೆಲ್ಲ ಗೊಂದಲಗಳಿವೆ. ಏಕೆಂದರೆ ನಮ್ಮ ಪ್ರಕಾರ ಅವರು ಶಾಂತಿಯುತವಾಗಿ, ಹಿಂಸೆಯಿಲ್ಲದೇ ತಮ್ಮ ಹೋರಾಟವನ್ನು ನಡೆಸಿದರೆ ನಮ್ಮ ಬೆಂಬಲವಿದೆ ಅಂದುಕೊಳ್ಳುತ್ತೇವೆ. ಆದರೆ ಪ್ರಶ್ನೆ ಇರುವುದು ಅವರೇಕೆ ಶಾಂತಿಯುತವಾದ ಹೋರಾಟವನ್ನು ಆಯ್ದುಕೊಳ್ಳಲಿಲ್ಲ? ಅಂದರೆ ತಾವು ಮಾಡುವುದು ಅಪರಾಧ ಎಂದೇಕೆ ಅವರಿಗೆ ಅನಿಸುವುದಿಲ್ಲ? ಯಾವ ಕೃತ್ಯವು ಉಳಿದವರಿಗೆ ಬರ್ಬರವಾಗಿ ಕಾಣಿಸುತ್ತದೆಯೋ ಅದು ಅವರಿಗೇಕೆ ಬರ್ಬರ ಅನ್ನಿಸುವುದಿಲ್ಲ? ಇದಕ್ಕೆ ಉತ್ತರಿಸುತ್ತ ನಾವು ಮತೊಂದು ದಿಕ್ಕಿಗೆ ತಿರುಗಿಕೊಳ್ಳುತ್ತೇವೆ. ಅವರು ಮನುಷ್ಯರೇ ಅಲ್ಲ, ಮನುಷ್ಯ ಸಹಜವಾದ ಸಂವೇದನೆಯೇ ಅವರಲ್ಲಿಲ್ಲ. ಅವರು ಪಶುಗಳು. ಹಾಗಾಗಿಯೇ ಅವರಿಗೆ ಇಂಥ ಕ್ರೌರ್ಯ ಸಾಧ್ಯ. ಆದರೆ ಅವರಲ್ಲಿ ಮನುಷ್ಯತ್ವವೇ ಇಲ್ಲ ಎಂದು ತೀರ್ಮಾನಿಸಿದ ಮೇಲೆ ಅವರು ಶಾಂತಿಯುತವಾಗಿ ಹೋರಾಡಬಹುದಿತ್ತು ಎಂದು ಏಕೆ ನಿರೀಕ್ಷಿಸುತ್ತೇವೆ? ಈ ಪ್ರಶ್ನೆಗೆ ಉತ್ತರವಾಗಿ ಅವರು ಮೊದಲು ಮನುಷ್ಯರೇ ಆಗಿದ್ದರು, ಅವರ ಮೇಲಾದ ಅನ್ಯಾಯದಿಂದಾಗಿ ಅವರು ಮನುಷ್ಯತ್ವವನ್ನು ಕಳೆದುಕೊಂಡಿದ್ದಾರೆ ಎಂದು ಹೇಳುವವರೂ ಇದ್ದಾರೆ. ಆದರೆ ಈ ಉತ್ತರದಿಂದ ಉಪಯೋಗವಿಲ್ಲ. ಏಕೆಂದರೆ ಆಗಲೂ ಅವರು ಮನುಷ್ಯತ್ವವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಒಪ್ಪಿಕೊಂಡಂತೇ ಆಯಿತು. ಅಂದರೆ ಭಯೋತ್ಪಾದಕನೊಬ್ಬನಿಗೆ ಮನುಷ್ಯಸಹಜವಾದ ನೈತಿಕ ಪ್ರಜ್ಞೆ ಇರುವುದಿಲ್ಲ ಅಂದಂತಾಯಿತು. ಆದರೆ ಇಂಥ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡವರ ಕೃತ್ಯಕ್ಕೆ ನೈತಿಕ ಕಾರಣಗಳನ್ನು ಆರೋಪಿಸುವುದು ಸಮಂಜಸವೇ? ಈ ಪೇಚಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

               ನನ್ನ ಪ್ರಕಾರ ಭಯೋತ್ಪಾದಕನಿಗೆ ನಮ್ಮೆಲ್ಲರಷ್ಟೇ ನೈತಿಕ ಪ್ರಜ್ಞೆ ಇರುತ್ತದೆ. ಅವನು ಒಂದು ನೈತಿಕ ಸಮಾಜದ ಸದಸ್ಯನೇ ಆಗಿರುತ್ತಾನೆ. ಅವನು ತನ್ನ ಸಂಬಂಧಿಗಳು, ಹಾಗೂ ಹಿತೈಷಿಗಳ ಕುರಿತು ನೀತಿ ಅನೀತಿಯ ಮಾನದಂಡಗಳನ್ನು ಉಪಯೋಗಿಸಿಯೇ ವ್ಯವಹರಿಸುತ್ತಿರುತ್ತಾನೆ. ಹಾಗೂ ಇಂಥ ಸಮಾಜದಲ್ಲಿ ತಾನು ಮಾಡುತ್ತಿರುವ ಕೆಲಸವು ಅಪರಾಧದ ಪಟ್ಟಿಯಲ್ಲಿ ಬರುತ್ತದೆ ಎಂಬುದೂ ಅವನಿಗೆ ಗೊತ್ತಿರುತ್ತದೆ. ಅದರಲ್ಲೂ ಅನೇಕರು ತಮ್ಮವರ ಮೇಲಾದ ನೈತಿಕ ಹಲ್ಲೆಗಳನ್ನೇ ಕಾರಣವಾಗಿ ಕೊಟ್ಟುಕೊಂಡು ತಮ್ಮ ಭಯೋತ್ಪಾದನೆಯನ್ನು ಸಮರ್ಥಿಸುತ್ತಾರೆ. ಅಂಥವರಿಗೆ ನೈತಿಕ-ಅನೈತಿಕ ಭೇದಗಳು ತಿಳಿದಿಲ್ಲ ಎನ್ನುವುದು ಸಾಧ್ಯವಿಲ್ಲ. ಹಾಗಾಗಿ ಅವನು ಬದುಕುವ ಸಮಾಜದಲ್ಲಿ ಯಾವುದನ್ನು ತಪ್ಪು ಎನ್ನುತ್ತಾರೋ ಅದನ್ನು ಅವನೂ ತಪ್ಪು ಎಂದೇ ಭಾವಿಸದಿರಲು ಕಾರಣವಿಲ್ಲ. ಅಂದರೆ ತಾನು ಮಾಡುತ್ತಿರುವ ಭಯೋತ್ಪಾದನೆಯು ನೈತಿಕ ಕೆಲಸ ಎಂದು ಅವನು ಅಂದುಕೊಂಡಿರುವುದಿಲ್ಲ. ಆದರೆ, ವಿಚಿತ್ರವೆಂದರೆ ಅದು ಅಪರಾಧ ಎಂಬ ನಂಬಿಕೆಯಿಂದಲೂ ಆ ಕೆಲಸವನ್ನು ಮಾಡುವುದಿಲ್ಲ! ಹಾಗಿದ್ದ ಪಕ್ಷದಲ್ಲಿ ಅವನಿಗೆ ಅಪರಾಧ ಪ್ರಜ್ಞೆ ಕಾಡಬೇಕಿತ್ತು. ಅಥವಾ ಒಂದು ದೌರ್ಬಲ್ಯದ ಕ್ಷಣದಲ್ಲಿ ಮನಸ್ಸಿನ ಹತೋಟಿಯನ್ನು ಕಳೆದುಕೊಂಡು ಅವನು ಈ ಕೃತ್ಯವನ್ನು ಎಸಗುವುದೂ ಅಲ್ಲ. ಭಯೋತ್ಪಾದನೆಯು ವ್ಯವಸ್ಥಿತವಾಗಿ ಯೋಜಿಸಿ ರೂಪಿಸಿಕೊಂಡ ಒಂದು ತಂತ್ರವಾಗಿರುತ್ತದೆ. ಅಂದರೆ ಯಾವುದನ್ನು ಅವನು ನೈತಿಕ ಅಪರಾಧ ಎಂದು ಪರಿಗಣಿಸುತ್ತಾನೋ ಅದನ್ನೇ ಕಾರ್ಯತಂತ್ರವನ್ನಾಗಿ ಬಳಸಿಕೊಳ್ಳುತ್ತಾನೆ. ಹಾಗೂ ಅದರಿಂದ ಅವನಿಗೆ ಅಪರಾಧೀ ಪ್ರಜ್ಞೆ ಹುಟ್ಟುವುದಿಲ್ಲ.

               ಅಪರಾಧವನ್ನು ಮಾಡಿದ್ದೇನೆ ಎಂಬುದು ಗೊತ್ತಿದ್ದೂ ತಾನು ಅಪರಾಧಿ ಎಂಬ ಭಾವನೆ ಮೂಡದಿರುವ ಕಾರಣವೇನು? ಅದಕ್ಕೆ ಕಾರಣವೆಂದರೆ ಭಯೋತ್ಪಾದನೆ ಎಂಬುದು ಒಂದು ಐಡಿಯಾಲಜಿಯಾಗಿರುವುದು. ಅದು ಅಪರಾಧದ ಐಡಿಯಾಲಜಿಯಾಗಿದೆ. ಅಂದರೆ ಅಪರಾಧವನ್ನು ಮಾಡುವುದು ಸರಿ ಎಂಬ ಸಮರ್ಥನೆಯನ್ನು ಈ ಅಪರಾಧದ ಐಡಿಯಾಲಜಿಯು ಒದಗಿಸುತ್ತದೆ. ಸಾಧಾರಣವಾಗಿ ಇಂದು ನಮ್ಮ ಚಿಂತಕರು ಭಯೋತ್ಪಾದನೆಯನ್ನು ಮಾಡಲು ರಿಲಿಜನ್ನು, ಜನಾಂಗೀಯತೆ, ಸಾಮಾಜಿಕ ಸಿದ್ಧಾಂತಗಳು ಇತ್ಯಾದಿಗಳು ಕಾರಣವೆಂಬುದಾಗಿ ಅರ್ಥೈಸುತ್ತಾರೆ. ಇಸ್ಲಾಂ ಮೂಲಭೂತವಾದಕ್ಕಾಗಿ, ಮಾರ್ಕ್ಸ್‌ವಾದಕ್ಕಾಗಿ, ಯಾವುದೋ ರಾಜಕೀಯ ಉದ್ದೇಶಕ್ಕಾಗಿ, ಜನಾಂಗೀಯ ಕಾರಣಗಳಿಗಾಗಿ ಜನರು ಭಯೋತ್ಪಾದನೆಯನ್ನು ನಡೆಸುತ್ತಿದ್ದಾರೆ ಎಂದು ಅರ್ಥೈಸುತ್ತಾರೆ. ಆದರೆ ನನ್ನ ಪ್ರಕಾರ ಇವು ಯಾವವೂ ಭಯೋತ್ಪಾದನೆಯ ಕಾರಣಗಳಾಗಲು ಶಕ್ಯವಿಲ್ಲ. ಇಸ್ಲಾಂ ಮೂಲಭೂತವಾದವಾಗಲೀ, ಮಾರ್ಕ್ಸ್‌ವಾದವಾಗಲೀ, ಭಯೋತ್ಪಾದನೆಗೆ ಕಾರಣಗಳಲ್ಲ. ಅವುಗಳ ಹೆಸರನ್ನು ಹೇಳಿಕೊಂಡು ಇಲ್ಲಿ ಭಯೋತ್ಪಾದನೆಯನ್ನು ಮಾಡಲಾಗುತ್ತಿದೆ ಅಷ್ಟೆ. ಅಂದರೆ ಭಯೋತ್ಪಾದನೆ ಮಾಡುವವರು ಆ ಕಾರಣಗಳನ್ನು ನೀಡುತ್ತಿದ್ದಾರೆ ಅಷ್ಟೆ. ಆದರೆ ನಿಜವಾಗಿ ನಡೆಯುತ್ತಿರುವುದು ಕೇವಲ ಅಪರಾಧ, ಮತ್ತೇನಲ್ಲ. ಅಪರಾಧದ ಐಡಿಯಾಲಜಿಯು ಅಪರಾಧ ಮಾಡುವುದು ಸಮರ್ಥನೀಯ ಎನ್ನುತ್ತದೆ. ಆದರೆ ಅಪರಾಧಕ್ಕೆ ಸಮರ್ಥನೆಯನ್ನು ನೀಡುವ ಪ್ರಸಂಗ ಬಂದಾಗ ಅನ್ಯ ಕಾರಣಗಳು ಬೇಕಾಗುತ್ತವೆ. ಹಾಗಾಗಿ ಈ ಇಸ್ಲಾಂ, ಮಾರ್ಕ್ಸಿಸಂ ಎಲ್ಲಾ ಉಪಯೋಗಕ್ಕೆ ಬರುತ್ತವೆ. ಅಂದರೆ ಭಯೋತ್ಪಾದನೆ ಎನ್ನುವುದು ಈ ಎಲ್ಲಾ ಉದಾಹರಣೆಗಳಲ್ಲೂ ಬೇರೆ ಬೇರೆ ಅಲ್ಲ, ಅದು ಒಂದೇ, ಅದೆಂದರೆ, ಅಪರಾಧವನ್ನು ಮಾಡಿ ಸಮರ್ಥಿಸಿಕೊಳ್ಳುವ ಕೆಲಸ.

               ಭಯೋತ್ಪಾದನೆಯ ಕೃತ್ಯವು ಅಪರಾಧಧ ಒಂದು ಹೊಸ ಅವತಾರವಾಗಿದೆ. ಈ ಅವತಾರದಲ್ಲಿ ಅಪರಾಧವನ್ನು ಮಾಡುತ್ತಿರುವವನು ಕೇವಲ ತಾನು ಅಪರಾಧವನ್ನು ಮಾಡಬೇಕೆಂದು ಮಾಡುತ್ತಿರುವುದಿಲ್ಲ. ಅಂಥ ಅಪರಾಧದ ಹಿಂದೆ ಒಂದು ಘನೋದ್ದೇಶವಿದೆ ಎಂದು ಭಾವಿಸುತ್ತಾನೆ. ಅಂದರೆ ಅಪರಾಧವು ಇಲ್ಲಿ ತನ್ನ ಚಹರೆಯನ್ನು ಬದಲಾಯಿಸುತ್ತದೆ. ಒಂದು ಸಾಮಾನ್ಯ ಕೊಲೆಗೂ, ಭಯೋತ್ಪಾದಕರು ನಡೆಸುವ ನರಮೇಧಕ್ಕೂ ವ್ಯತ್ಯಾಸವಿದೆ. ಅದು ಸಂಖ್ಯೆಯದಲ್ಲ, ಹಾಗೂ ಉದ್ದೇಶದ್ದೂ ಅಲ್ಲ. ಅದು ಅವರಿಗೆ ಕೊಲೆಯಾಗಿಯೇ ಕಾಣಿಸಿದರೂ ಕೂಡ ಅದು ನೈತಿಕವಾಗಿ ಸ್ತುತ್ಯಾರ್ಹವಾದದ್ದು ಎಂಬ ಭಾವನೆ ಇರುತ್ತದೆ. ಅಂದರೆ ಅಪರಾಧವೇ ಇಲ್ಲಿ ಸ್ತುತ್ಯಾರ್ಹವಾಗುತ್ತದೆ. ಅದಕ್ಕೆ ಉದ್ದೇಶಗಳು, ಸಮರ್ಥನೆಗಳು ಜೋಡಣೆಗೊಳ್ಳುತ್ತವೆ. ಈ ರೂಪಾಂತರಕ್ಕೆ ಕಾರಣವೆಂದರೆ ಅಪರಾಧದ ಐಡಿಯಾಲಜಿ. ಈ ಐಡಿಯಾಲಜಿಯು ಅಪರಾಧವನ್ನು ಭಯೋತಾದನೆಯನ್ನಾಗಿ ಬದಲಾಯಿಸಿ ಅದರ ಸಮರ್ಥನೆಗೆ ನೆಲೆಯನ್ನು ಒದಗಿಸುತ್ತದೆ.

               ಈ ರೂಪಾಂತರದಲ್ಲಿ ಭಯೋತ್ಪಾದಕನಿಗೆ ಪಾತಕವೊಂದು ಸದಾ ಪುಣ್ಯ ಕಾರ್ಯವಾಗಿ ಬದಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಅಂದರೆ ಕೊಲೆ ಮಾಡುವುದು, ಅತ್ಯಾಚಾರ ಮಾಡುವುದು ಭಯೋತ್ಪಾದನೆಯಲ್ಲಿ ನೈತಿಕವಾಗಿ ಸ್ತುತ್ಯಾರ್ಹ ಅಂದಾಕ್ಷಣ ಅವನು ಎಲ್ಲಾ ಕೊಲೆಗಳನ್ನೂ ಹಾಗೆ ಭಾವಿಸುವುದಿಲ್ಲ. ಉದಾಹರಣೆಗೆ ಅವನ ಹೆಂಡತಿಯ ಅತ್ಯಾಚಾರ, ಮಗನ ಕೊಲೆಗಳನ್ನು ಅವನು ಅಪರಾಧ ಎಂದೇ ಭಾವಿಸುತ್ತಾನೆ. ಅಂದರೆ ಕೊಲೆ ಮಾಡುವುದು ಅಪರಾಧವಾಗೇ ಉಳಿದುಕೊಳ್ಳಬೇಕಾಗುತ್ತದೆ. ಅವುಗಳಲ್ಲಿ ಕೆಲವೊಂದು ಕೊಲೆಗಳನ್ನು ಮಾತ್ರವೇ ನೈತಿಕವಾಗಿ ಸ್ತುತ್ಯಾರ್ಹ ಎಂದು ಪರಿಗಣಿಸುವ ಸಾಧ್ಯತೆ ಇರಬೇಕಾಗುತ್ತದೆ. ಅಂದರೆ ಭಯೋತ್ಪಾದನೆಯ ನಿರ್ದಿಷ್ಟ ಉದಾಹರಣೆಯಲ್ಲಿ ಅದೊಂದು ಅಪರಾಧವಾಗುವುದಿಲ್ಲ. ಆ ಕೃತ್ಯವನ್ನು ಯಾವಾಗ, ಎಲ್ಲಿ ಎಸಗಿದರೂ ನೀತಿ ಎಂಬ ಸಂದೇಶ ಅದರಲ್ಲಿರುವುದಿಲ್ಲ. ಅರ್ಥಾತ್ ತಾವು ಪ್ರತಿಪಾದಿಸುತ್ತಿರುವ ಸಮಾಜದಲ್ಲಿ ಕೊಲೆ ಮಾಡುವುದು ಕಡ್ಡಾಯವಾದ ನೈತಿಕ ಕ್ರಿಯೆಯಾಗಿರಬೇಕು ಎಂದು ಅವರು ಭಾವಿಸುವುದಿಲ್ಲ, ಬದಲಾಗಿ ಅದು ಅನೈತಿಕ ಎಂದೇ ಭಾವಿಸುತ್ತಾರೆ. ಆದರೆ ತಾವು ಭಯೋತ್ಪಾದನೆಯಲ್ಲಿ ನಡೆಸುವ ಕೊಲೆಯು ತೀರಾ ವಿಶಿಷ್ಟ ಸಂದರ್ಭವೊಂದಕ್ಕೆ ಮಾಡಿದ ನೈತಿಕ ಕ್ರಿಯೆ ಎಂದು ಭಾವಿಸುತ್ತಾರೆ.

               ಇದಕ್ಕೆ ಹೋಲಿಕೆಯೊಂದನ್ನು ನೀಡುವುದಾದರೆ: ನಮ್ಮ ಸಾಮಾಜಿಕ ವ್ಯವಹಾರಗಳನ್ನು ನಡೆಸುವಾಗ ಕೆಲವು ರೀತಿ ನೀತಿಗಳನ್ನು ಪಾಲಿಸುವ ವಾಡಿಕೆ ಇರುತ್ತದೆ. ಆದರೆ ಕೆಲವೊಂದು ವ್ಯಕ್ತಿಗಳು ಅದನ್ನು ಮೀರಿ ಅತಿ ಎನ್ನಿಸಬಹುದಾದ ಕ್ರಿಯೆಗಳನ್ನು ಮಾಡಿ ತೋರಿಸುತ್ತಾರೆ. ಹಾಗಂತ ಅಂಥ ಕ್ರಿಯೆಗಳನ್ನು ನಾವು ವಾಡಿಕೆಯಲ್ಲಿ ನೈತಿಕ ಮಾನದಂಡವಾಗಿ ಇಟ್ಟುಕೊಳ್ಳುವುದಿಲ್ಲ. ದೇಶಕ್ಕಾಗಿ ಹುತಾತ್ಮನಾಗುವ ವೀರನ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಹುತಾತ್ಮನಾಗುವುದು ದೇಶ ಪ್ರೇಮಕ್ಕೆ ಕಡ್ಡಾಯವಲ್ಲ. ಅದರಲ್ಲೂ ಆತ್ಮಹತ್ಯೆಯು ಪಾಪ ಎಂದೇ ನಮ್ಮ ಸಮಾಜ ತಿಳಿಯುತ್ತದೆ. ಆದರೂ ಹುತಾತ್ಮನಾಗುವುದು ನೈತಿಕವಾಗಿ ಸ್ತುತ್ಯಾರ್ಹ ಕಾರ್ಯವಾಗುತ್ತದೆ. ಅಂದರೆ ವಾಡಿಕೆಯ ನೈತಿಕ ಮಾನದಂಡದೊಳಗೆ ಆ ಕ್ರಿಯೆ ಸೇರುವುದಿಲ್ಲ. ಹಾಗೆ ಸೇರದೇ ನೈತಿಕ ಕ್ರಿಯೆಯಾಗುತ್ತದೆ. ಭಯೋತ್ಪಾದಕರ ಕೃತ್ಯಗಳಲ್ಲೂ ಇಂಥದ್ದೇ ಪ್ರಕ್ರಿಯೆ ಇರುತ್ತದೆ. ತಮ್ಮ ಅಪರಾಧಗಳನ್ನು ವಾಡಿಕೆಯ ನೀತಿ ನಿಯಮಗಳ ಮಾನದಂಡದಿಂದ ಅವರು ಪ್ರತ್ಯೇಕಿಸಿ ನೋಡುತ್ತಾರೆ.

               ಅಪರಾಧದ ಐಡಿಯಾಲಜಿಯು ಕೂಡ ಒಂದು ನೈತಿಕ ನಿಯಮದಂತೇ ಕೆಲಸ ಮಾಡುತ್ತದೆ. ಹಾಗೂ ಯಾವುದೇ ರಿಲಿಜನ್ನಿನ, ಸಂಸ್ಕೃತಿಯ, ರಾಜಕೀಯಬಣದ ವ್ಯಕ್ತಿಗೂ ಕೂಡ ಹೊಂದಿಕೊಳ್ಳಬಹುದಾದ ಒಂದು ಸಾರ್ವತ್ರಿಕ ನೈತಿಕ ನಿಯಮದ ಸ್ವರೂಪ ಅದಕ್ಕಿದೆ. ಆ ಕಾರಣದಿಂದಲೇ ಅದು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಬೇರೆ ಬೇರೆ ರಿಲಿಜನ್ನು, ಜನಾಂಗ,  ರಾಜಕೀಯ ಪಕ್ಷವೇ ಮುಂತಾದ ನಿರ್ದಿಷ್ಟ ಸಮುದಾಯಗಳ ನೈತಿಕ ಪ್ರಜ್ಞೆಯನ್ನು ರೂಢಿಸಿಕೊಂಡ ಸದಸ್ಯರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಹಾಗೂ ಭಯೋತ್ಪಾದನೆಯಲ್ಲಿ ತರಬೇತುಗೊಂಡ ಸದಸ್ಯರು ತಮ್ಮ ತಮ್ಮ ಸಮಾಜದ ನೈತಿಕ ಮಾನದಂಡಗಳನ್ನು ಒಪ್ಪಿಕೊಳ್ಳುವುದು ಹಾಗೂ ಮುಂದುವರಿಸುವುದು ಅಗತ್ಯ ಕೂಡಾ ಆಗುತ್ತದೆ. ಏಕೆಂದರೆ ಆ ಸದಸ್ಯರಿಗೆ ನೀತಿ-ಅನೀತಿ, ಒಳ್ಳೆಯದು-ಕೆಟ್ಟದ್ದು, ಕಾನೂನು-ಅಪರಾಧ ಎಂಬ ಪ್ರಜ್ಞೆ ಇರುವುದು ಅತ್ಯಗತ್ಯ. ಅಂಥ ಪ್ರಜ್ಞೆ ಇದ್ದರೆ ಮಾತ್ರ ಅಪರಾಧದ ಐಡಿಯಾಲಜಿಯನ್ನು ಅವರು ಪುನರುತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದುತ್ತಾರೆ. ಹಾಗೂ ಅದರ ಹೊಸ ಹೊಸ ವಿಧಾನಗಳನ್ನು ಆವಿಷ್ಕಾರ ಮಾಡುವ ಸಾಮರ್ಥ್ಯವನ್ನು ಹೊಂದುತ್ತಾರೆ. ಭಯೋತ್ಪಾದನೆಯು ಜನಾಂಗ, ರಿಲಿಜನ್ನು, ಪ್ರಭುತ್ವಗಳ ಗಡಿಗಳನ್ನು ದಾಟಿ ಪ್ರಪಂಚದಾದ್ಯಂತ ಹರಡಿಕೊಳ್ಳುವುದು ಸಾಧ್ಯವಾಗುತ್ತದೆ. ಉದಾಹರಣೆಗೆ, ಎಲ್‌ಟಿಟಿಇ, ನಕ್ಸಲ್ ಚಳವಳಿ, ಬೋಡೋ ಚಳವಳಿ, ಅಲ್ ಖೈದಾ, ಐಎಸ್‌ಐಎಸ್, ಇತ್ಯಾದಿಗಳೆಲ್ಲ ಅಪರಾಧದ ಐಡಿಯಾಲಜಿಯನ್ನು ಒಪ್ಪಿಕೊಳ್ಳುವುದರಿಂದಾಗಿ ಒಂದೇ ಪ್ರಭೇದಕ್ಕೆ ಸೇರಿದರೂ ಕೂಡ, ಅವುಗಳ ಸದಸ್ಯರು ಬೆಳೆದು ಬಂದ ನೈತಿಕ ಪರರಿಸರವು ಬೇರೆ ಬೇರೆ ಯಾಗಿದೆ. ಇಸ್ಲಾಂ ಹಾಗೂ ಮಾರ್ಕ್ಸ್‌ವಾದಗಳಲ್ಲಿನ ನೈತಿಕ ಸಮುದಾಯಗಳು ಪರಸ್ಪರ ವಿರೋಧವಾಗಿ ಕಾಣುತ್ತವೆ. ಆದರೆ ಇಂಥ ವಿರೋಧೀ ಸಮುದಾಯಗಳಲ್ಲಿ ಭಯೋತ್ಪಾದನೆಯು ಪ್ರಸ್ತುತತೆಯನ್ನು ಪಡೆದುಕೊಳ್ಳಬೇಕಾದರೆ ಆಯಾ ಸಮುದಾಯದ ನೈತಿಕತೆಯ ಪರಿಕಲ್ಪನೆಗನುಗುಣವಾಗಿ ಅದರ ಪುನರುತ್ಪಾದನೆ ನಡೆಯುವ ಜರೂರಿರುತ್ತದೆ. ಅಂದರೆ ನಕ್ಸಲೈಟನೊಬ್ಬನು ಯಾವ ಕಾರಣಕ್ಕಾಗಿ ಭಯೋತ್ಪಾದನೆಯನ್ನು ನೈತಿಕವಾಗಿ ಸ್ತುತ್ಯಾರ್ಹವಾದ ಅಪರಾಧ ಎಂದು ನಂಬುತ್ತಾನೋ ಒಬ್ಬ ಮುಸ್ಲಿಂ ಭಯೋತ್ಪಾದಕನೊಬ್ಬನ ಕಾರಣ ಅದಕ್ಕೆ ವಿರುದ್ಧವಾಗಿರಬಹುದು.   ಈ ಅಪರಾಧದ ಐಡಿಯಾಲಜಿಯ ತರ್ಕವು ಕೇವಲ ಭಯೋತ್ಪಾದಕರ ದೃಷ್ಟಿಯನ್ನು ಪ್ರಭಾವಿಸಿರುವುದಿಲ್ಲ. ನಾವು ಕೂಡ ಭಯೋತ್ಪಾದನೆಯನ್ನು ಅವರದೇ ಪರಿಭಾಷೆಯಿಂದ ಅರ್ಥೈಸುತ್ತಿದ್ದೇವೆ. ಅಂದರೆ ನಾವು ಕೊಲೆಗಡುಕನೊಬ್ಬನನ್ನು ನೋಡುವ ದೃಷ್ಟಿಗೂ, ಭಯೋತ್ಪಾದಕನೊಬ್ಬನು ಕೊಲೆ ಮಾಡಿದಾಗ ಅವನನ್ನು ನೋಡುವ ದೃಷ್ಟಿಗೂ ವ್ಯತ್ಯಾಸವಿದೆ. ಕೊಲೆಗಡುಕನೊಬ್ಬನು ಕೇವಲ ಪಾತಕಿ ಎಂದು ಗ್ರಹಿಸಿದರೆ, ಭಯೋತ್ಪಾದಕನನ್ನು ಯಾವುದೋ ಮಹೋದ್ದೇಶಕ್ಕೆ ತನ್ನನ್ನು ಅರ್ಪಿಸಿಕೊಂಡ ಹೋರಾಟಗಾರ ಎಂದು ಗ್ರಹಿಸುತ್ತೇವೆ. ಹಾಗಾಗಿ ಭಯೋತ್ಪಾದನೆಯನ್ನು ಕೇವಲ ಅಪರಾಧ ಎಂದು ನೋಡದೇ ಅದರ ಹಿಂದೆ ಸಾಮಾಜಿಕ, ರಾಜಕೀಯ, ಆರ್ಥಿಕ ಕಾರಣಗಳನ್ನೆಲ್ಲ ಆರೋಪಿಸಿಕೊಂಡು ಭಯೋತ್ಪಾದಕರ ಭಾಷೆಗೆ ನಾವೂ ಬಲಿಯಾಗುತ್ತೇವೆ. ಅದೊಂದು ಅಪರಾಧದ ಹೊಸ ಅವತಾರ ಎಂಬುದನ್ನು ಗುರುತಿಸುವ ಅವಶ್ಯಕತೆ ಇದೆ. ಆಗ ಮಾತ್ರ ಅದರ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳಲು ಹಾಗೂ ಈಗ ಚಾಲ್ತಿಯಲಿರುವ ಕಾನೂನುಗಳಿಂದ ಅದನ್ನು ನಿಯಂತ್ರಿಸಲು ಸಾಧ್ಯ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp